ಸಂಸ್ಕೃತಿ ಎಂದರೆ ಅಗ್ರಹಾರಗಳಲ್ಲಿ ವಾಸಿಸುವ ಜನರ ಉತ್ಪತ್ತಿ ಮಾತ್ರ ಎಂಬ ಕಾಲವೊಂದಿತ್ತು. ಬಹಳ ಕಾಲದವರೆಗೆ ಹಳ್ಳಿಗಳಲ್ಲಿ ಸ್ಥಿರವಾಗಿ ನೆಲೆನಿಂತ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಕೆಳವರ್ಗ, ಉಪವರ್ಗಗಳೆನಿಸಿಕೊಂಡವರ ಸಾಂಸ್ಕೃತಿಕ ಉತ್ಪತ್ತಿಯನ್ನು ಕಡೆಗಣಿಸಲಾಗಿತ್ತು. ಜಾತಿಯಲ್ಲಿ ಶ್ರೇಷ್ಠರೆನಿಸಿಕೊಂಡವರು ಮಾತ್ರ ಸುಸಂಸ್ಕೃತರೆನಿಸಿಕೊಳ್ಳುತ್ತಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಇತ್ತೀಚಿನ ದಿನಗಳ ವರೆಗೂ ದುಡಿಯುವ ವರ್ಗದ ಬಾಳು-ಬದುಕು-ಬವಣೆಗಳೂ ಸಂಸ್ಕೃತಿ ಅನ್ನಿಸಿಕೊಳ್ಳಲೇ ಇಲ್ಲ. ಬಹಳ ನಿಧಾನವಾಗಿಯಾದರೂ ನಗರಗಳಲ್ಲಷ್ಟೇ ಅಲ್ಲ, ಹಳ್ಳಿಗಳಲ್ಲಿ ಸಹ ವಾಸ ಮಾಡುತ್ತಿರುವ ಜನವರ್ಗಗಳ ಸಂಸ್ಕೃತಿಯ ಮುಕ್ಕಾಲು ಪಾಲು ತಮ್ಮ ಮೂಲ ಸಂಸ್ಕೃತಿಯ ಬಳುವಳಿಯಲ್ಲ; ಅದೆಲ್ಲ ಅನ್ಯಸಂಸ್ಕೃತಿಗಳಿಂದ ಸ್ವೀಕರಿಸಿದ್ದು / ಪ್ರಭಾವಕ್ಕೊಳಗಾದದ್ದು / ಹೇರಿದ್ದು ಎಂದು ಕೆಲವರಿಗಾದರೂ ಅರ್ಥವಾದಾಗ ತಮ್ಮ ತಮ್ಮ ಪ್ರದೇಶದ ಮೂಲ ಸಂಸ್ಕೃತಿಯ ಹುಡುಕಾಟ ಆರಂಭವಾಯಿತು. ಪ್ರಪಂಚದ ಬಹಳಷ್ಟು ಕಡೆ ಇತ್ತ ಗಮನಹರಿಸಲಾಯಿತು. ಈ ಬಗೆಯ ಹುಡುಕಾಟದ ಫಲವೇ ಬುಡಕಟ್ಟು ವರ್ಗಗಳ ಅಧ್ಯಯನ. ಶೋಧಗಳು ನಡೆದಂತೆ ಬುಡಕಟ್ಟು ಸಂಸ್ಕೃತಿ ಸಹಜ-ಸ್ವಾಭಾವಿಕದ್ದಾದರೆ, ಗ್ರಾಮ ಸಂಸ್ಕೃತಿ ಅನ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾದದ್ದು; ನಗರ ಸಂಸ್ಕೃತಿ ಬಹುಮಟ್ಟಿಗೆ ಎರವಲು ಪಡೆದದ್ದು, ಅಸಹಜವಾದದ್ದು, ಕೃತಿಮತೆಯದ್ದು ಎಂದು ಅರ್ಥಮಾಡಿಕೊಳ್ಳಲಾಯಿತು. ಒಂದೇ ಮಾತಿನಲ್ಲಿ ಹೇಳುವುದಾದರೆ ಬುಡಕಟ್ಟು ಸಂಸ್ಕೃತಿ ಕಾಡಿನಲ್ಲಿ ಬೆಳೆದ ಸ್ವಾಭಾವಿಕ ಮರ, ಗ್ರಾಮೀಣ ಸಂಸ್ಕೃತಿ ಸ್ವಾಭಾವಿಕ ಗಿಡ-ಮರಗಳ ಜೊತೆಗೆ ಕೊಂಬೆ ನೆಟ್ಟು ನೀರುಣಿಸಿ ಗೊಬ್ಬರ ಹಾಕಿ ಬೆಳೆಸಿದ ಮರಗಿಡಗಳೆರಡೂ ಇರುವಂಥದ್ದು; ನಗರ ಸಂಸ್ಕೃತಿ ಪಾರ್ಕಿನ ಗಿಡಗಳಿದ್ದಂತೆ ಎಂಬ ಅಭಿಪ್ರಾಯ ಮೂಡಲಾರಂಭಿಸಿತು.

ಪ್ರಾಚೀನ ಕಾಲದಲ್ಲಿ ಭಾರತಕ್ಕೆ ಗಂಗಾ ನದಿ ಮೂಲಕ ಹೊಸದಾಗಿ ಬಂದ ಜನರು ದಕ್ಷಿಣದ ಕಡೆಗೆ ಸಾಗುತ್ತ ಅಲ್ಲಿದ್ದ ಮೂಲ ನಿವಾಸಿಗಳನ್ನು ಸದೆಬಡೆದು, ಅನೇಕ ತಂಡಗಳನ್ನು ಹೇಳ ಹೆಸರಿಲ್ಲದಂತೆ ನಾಶಪಡಿಸುತ್ತಾ ಬಂದರು. ಇಂಥ ಪರಿಸ್ಥಿತಿಯಲ್ಲಿ ಅಳಿದುಳಿದ ಆದಿವಾಸಿಗಳು ದಟ್ಟಡವಿಗಳಲ್ಲಿ ತಲೆಮರೆಸಿಕೊಂಡು ಉಳಿದು-ಬೆಳೆದು ಬಂದವು. ಇಂತಹ ಮೂಲ ನಿವಾಸಿಗಳನ್ನು, ಆದಿವಾಸಿಗಳನ್ನು ಆದಿವಾಸಿಗಳು, ಬುಡಕಟ್ಟು ಜನರು, ಗಿರಿಜನರು, ಅರಣ್ಯವಾಸಿಗಳು, ಗುಡ್ಡಗಾಡು ಜನರು, ಕಾಡು ಜನರು ಎಂದೆಲ್ಲ ಕರೆಯಲಾಗಿದೆ. ಆದಿವಾಸಿಗಳು ತಮಗೆ ಮತ್ತು ತಮ್ಮ ಮಂದೆಗಳಿಗೆ ಬೇಕಾಗುವ ಆಹಾರ ಪದಾರ್ಥಗಳಿಗಾಗಿ ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಿರುತ್ತಾರೆ. ಮನುಕುಲದ ಲಿಖಿತ ಇತಿಹಾಸ ಕಾಲದ ಅರುಣೋದಯಕ್ಕೂ ಹಿಂದಿನ ಕಾಲದಿಂದ ಬದುಕು ಸಾಗಿಸುತ್ತಾ ಬಂದಿರುವ ಇವರು ಸಾಮಾನ್ಯವಾಗಿ ಅಲೆಮಾರಿಗಳು. ನಗರ ಹಾಗೂ ಗ್ರಾಮೀಣ ಸಂಸ್ಕೃತಿಯ ಪ್ರಭಾವಕ್ಕೆ ಸಿಗದೆ, ತಮ್ಮದೇ ಸಂಸ್ಕೃತಿಯನ್ನು ಪ್ರತ್ಯೇಕವಾಗಿಯೇ ಉಳಿಸಿಕೊಂಡು ಬಂದಿರುವ ಈ ಸಾಮಾಜಿಕ ವರ್ಗಗಳು ರಕ್ತ ಸಂಬಂಧಕ್ಕೆ ಹೆಚ್ಚಿನ ಮಹತ್ವಕೊಟ್ಟಿವೆ.

ಆದಿವಾಸಿ ಜನಾಂಗಗಳನ್ನು ಶುದ್ಧ ಬುಡಕಟ್ಟುಗಳು, ಸುಧಾರಿತ ಬುಡಕಟ್ಟುಗಳು, ಅಲೆಮಾರಿ ಬುಡಕಟ್ಟುಗಳು ಎಂದು ವಿಭಾಗಿಸಿಕೊಂಡರೂ ಅಲೆದಾಡುವುದು ಆದಿವಾಸಿಗಳ ಒಂದು ಪ್ರಮುಖ ಲಕ್ಷಣವೇ ಆಗಿರುವುದನ್ನು ಗಮನಿಸಬಹುದು. ಈ ಆದಿವಾಸಿ ವರ್ಗಗಳಿಗಿಂತ ಭಿನ್ನವಾದ ಒಂದು ವರ್ಗವಿದೆ. ಈ ಜನ ವಿಶೇಷವಾಗಿ ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿ ಸಂಚರಿಸುತ್ತ ಜೀವನೋಪಾಯಕ್ಕಾಗಿ ಹಾಡು-ಹಚ್ಚೆ ಮೊದಲಾದ ಕಲೆಗಳನ್ನು, ಕಣಿ ಶಾಸ್ತ್ರಗಳನ್ನು ಹೇಳುವುದನ್ನು, ಕಾಡಿನ ಉತ್ಪನ್ನಗಳನ್ನು ತಂದು ಮಾರುವುದು ಮತ್ತಿತರ ಕಸಬುಗಳನ್ನು ಅವಲಂಬಿಸಿರುತ್ತಾರೆ. ಹಳ್ಳಿಗಳಿಂದ ಸ್ವಲ್ಪ ದೂರದಲ್ಲಿ, ನೀರಿನ ಆಶ್ರಯವಿರುವಲ್ಲಿ, ಸಾಧ್ಯವಾದಲ್ಲೆಲ್ಲ ಎತ್ತರದ ಪ್ರದೇಶಗಳಲ್ಲಿ ಗುಡಾರಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಾರೆ. ಅಂಥವರಲ್ಲಿ ಡವರಿಗಳು / ಹಕ್ಕಿ-ಪಿಕ್ಕಿಗಳು, ಮೇಲು ಶಿಕಾರಿಯವರು, ಕೊರಮರು, ಕಿನ್ನರಿ ಜೋಗಿಗಳು, ಗೊಲ್ಲರು, ಮೇದರು ಮುಂತಾದವರನ್ನು ಉದಾಹರಿಸಬಹುದು. ಮತ್ತೆ ಕೆಲವು ಜನ ವರ್ಗಗಳು ಹಳ್ಳಿಗಳಲ್ಲಿಯ ಪಾಳುಮನೆ, ಜಗಲಿ ಮುಂತಾದೆಡೆ ತಾತ್ಕಾಲಿಕವಾಗಿ ಬೀಡು ಬಿಡುತ್ತಾರೆ. ಅಂಥವರಲ್ಲಿ ಗೊಂಬೆರಾಮರು, ಕೋತಿ-ಕರಡಿ ಕುಣಿಸುವವರು, ದೊಂಬರು, ದೊಂಬಿದಾಸರು, ಬುಡಬುಡಿಕೆಯವರು, ಸುಡುಗಾಡು ಸಿದ್ಧರು, ಹಗಲು ವೇಷದವರು ಮೊದಲಾದವರನ್ನು ಹೆಸರಿಸಬಹುದು. ಒಟ್ಟಾರೆ ನಿರ್ದಿಷ್ಟ ಕಾಡು ಪ್ರದೇಶದಲ್ಲಿ ಅಲೆದಾಡುತ್ತ, ಸಮೀಪದ ಹಳ್ಳಿ-ಪಟ್ಟಣಗಳಿಗೆ ಬಂದು ಹೋದರೂ ಕಾಡುಗಳಲ್ಲೇ ವಾಸಿಸುವ ಬುಡಕಟ್ಟುಗಳಿರುವಂತೆ, ಕಾಡಿನಿಂದ ಹೊರಗೆ ಮತ್ತು ನಾಡಿನಿಂದ ದೂರದಲ್ಲಿ ನೆಲೆನಿಂತ ಸುಧಾರಿತ ಬುಡಕಟ್ಟುಗಳಿವೆ. ಈ ಎರಡೂ ಜನವರ್ಗಗಳಿಗಿಂತ ಭಿನ್ನವಾಗಿ ಅಂದರೆ, ಕಾಡು ಮತ್ತು ನಾಡು ಪ್ರದೇಶಗಳೆರಡರಲ್ಲೂ ಸಂಚರಿಸುತ್ತ ನಾಡಿಗೆ ಸ್ವಲ್ಪವೇ ದೂರದಲ್ಲಿ ಕೆಲವು ದಿನಗಳು ಇದ್ದು ಮುಂದೆ ಸಾಗುವ ಹಾಗೆಯೇ ಕಾಡಿನ ಸಂಪರ್ಕವೇ ಇಲ್ಲದೆ ಹಳ್ಳಿಯಿಂದ ಹಳ್ಳಿಗೆ ಅಥವಾ ಪಟ್ಟಣಗಳ ಬಡಾವಣೆಯಿಂದ ಬಡಾವಣೆಗೆ ಸಂಚರಿಸುವ ಜನಸಮುದಾಯಗಳಿವೆ. ಈ ಹಿನ್ನೆಲೆಯಲ್ಲಿ ತಮ್ಮದೇ ಆದ ನಿರ್ದಿಷ್ಟ ಹಾಡಿ-ಹಟ್ಟಿ-ಕೇರಿ-ಹಳ್ಳಿಗಳಲ್ಲಿ ವಾಸಿಸದ, ವಾಸಿಸಿದರೂ ಅಲ್ಲಿಯೇ ಶಾಶ್ವತವಾಗಿ ನೆಲೆನಿಲ್ಲದೆ ಬಹುಕಾಲ ಹಳ್ಳಿ-ಪಟ್ಟಣಗಳಲ್ಲಿ ಜೀವನೋಪಾಯಕ್ಕಾಗಿ ಸಂಚರಿಸುವ, ತಮ್ಮದೇ ಭಾಷೆ, ಕಲೆ, ಸಾಹಿತ್ಯ, ಜೀವನ ಕ್ರಮಗಳಿಂದಾಗಿ ನಾಡಿನ ಸಂಸ್ಕೃತಿಗಿಂತ ಭಿನ್ನ ಸಂಸ್ಕೃತಿಯನ್ನು ಹೊಂದಿರುವ ಜನಸಮುದಾಯಗಳನ್ನು ‘ಅಲೆಮಾರಿ ಸಮುದಾಯ’ ಎಂಬರ್ಥದಲ್ಲಿ ಪರಿಭಾವಿಸಬೇಕಾಗುತ್ತದೆ.

ಜೀವನೋಪಾಯಕ್ಕಾಗಿ ಹಳ್ಳಿ-ನಗರಗಳಲ್ಲಿ ಸಂಚರಿಸುವ ಇಂಥ ಜನಸಮುದಾಯಗಳ ವಿಶಿಷ್ಟ ಲಕ್ಷಣ ಒಂದು ನಿರ್ದಿಷ್ಟ ಕಲೆ, ಕಸೂತಿಗಳು ಕಸುಬಾಗಿರುವುದು. ಕರ್ನಾಟಕದಲ್ಲಿಯ ಇಂಥ ಜನ ವರ್ಗಗಳ ಭಾಷೆ ಸಾಮಾನ್ಯವಾಗಿ ಮರಾಠಿ ಕನ್ನಡ, ತೆಲುಗು ಕನ್ನಡ, ತಮಿಳು ಕನ್ನಡವಾಗಿರುವುದನ್ನು ಗಮನಿಸಬಹುದು. ಈ ಜನವರ್ಗಗಳು ಸಾಮಾನ್ಯವಾಗಿ ಅನ್ಯಭಾಷಾ ಪ್ರದೇಶಗಳಿಂದ ಕರ್ನಾಟಕಕ್ಕೆ ವಲಸೆ ಬಂದಿರುವುದು ತಿಳಿದುಬರುತ್ತದೆ. ಹೀಗಾಗಿ ಈ ಅಲೆಮಾರಿಗಳಲ್ಲಿ ಕನ್ನಡ ಪ್ರದೇಶದ ಜನಾಂಗಗಳು ಯಾವುದಾದರೂ ಇದ್ದಾವೆಯೇ ಎಂದು ಗುರುತಿಸಿಕೊಳ್ಳಬೇಕಾಗಿದೆ.

ಮೂಲತಃ ಅಲೆಮಾರಿಯಾಗಿದ್ದ ಮಾನವ ಪಶುಪಾಲನೆ ಹಾಗೂ ಬೇಸಾಯದ ಹಂತದಲ್ಲಿ ನೆಲೆನಿಂತ ತಾಣವೇ ಗ್ರಾಮಗಳಾಗಿ ಬೆಳೆದವು. ಇಂಥ ಸ್ಥಿರ ಸಮುದಾಯಗಳಲ್ಲಿ ವೃತ್ತಿ ಆಧಾರಿತ ಜಾತಿ ವರ್ಗಗಳು ಹುಟ್ಟಿಕೊಂಡವು. ಮುಂದೆ ಅವೇ ವರ್ಣಗಳಾಗಿ ರೂಪುಗೊಂಡವು. ಇವೆಲ್ಲವುಗಳಿಂದ ದೂರವೇ ಉಳಿದ ವರ್ಗಗಳೆಂದರೆ, ಬುಡಕಟ್ಟುಗಳು ಮತ್ತು ಗ್ರಾಮ-ನಗರಗಳ ಸಮೀಪ ಅಥವಾ ಅವುಗಳೊಳಗೇ ಸಂಚರಿಸುತ್ತ ಜೀವನ ಸಾಗಿಸುತ್ತಾ ಬಂದ ಅಲೆಮಾರಿ ಜನಸಮುದಾಯಗಳು. ಬಹುಪಾಲು ಇದುವರೆಗೂ ಅಕ್ಷರ ವಿದ್ಯೆಯಿಂದ ವಂಚಿತವಾಗಿರುವ, ಎಲ್ಲ ನಾಗರಿಕ ಸೌಲಭ್ಯಗಳಿಂದ ದೂರವೇ ಉಳಿದ ಈ ವರ್ಗ ತಾನು ಬೆಳೆಸಿಕೊಂಡು ಬಂದಿರುವ ಉದಾತ್ತ ನೀತಿ-ನಿಯಮಗಳ ಜೊತೆಗೇ ತಮ್ಮ ಮೂಢ ನಂಬಿಕೆಗಳಿಂದಾಗಿ, ನಾಗರಿಕ ಪ್ರಪಂಚದ ಅಜ್ಞಾನದಿಂದಾಗಿ ಹಲವು ಕ್ರೂರ ಆಚರಣೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ, ಡವರಿ ಅಥವಾ ಹಕ್ಕಿ-ಪಿಕ್ಕಿ ಜನರು ಬೆಂಗಳೂರಿನ ಹೊರವಲಯಗಳ ಬಡಾವಣೆಗಳಲ್ಲಿ ವಾಸಿಸುತ್ತಿದ್ದರೂ ಹತ್ತಾರು ನರಿಗಳನ್ನು ಜೀವಂತವಾಗಿ ಹಿಡಿದು ತಂದು ಅವುಗಳ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಕುಡಿಯುವಂಥ ಕ್ರೂರ ಆಚರಣೆಯನ್ನು ಇಂದಿಗೂ ನಡೆಸಿಕೊಂಡು ಬಂದಿರುವುದನ್ನು ಹೆಸರಿಸಬಹುದು.

ಕಾಡಿನ ಉತ್ಪತ್ತಿಗಳನ್ನು, ಕಲೆ-ಸಾಹಿತ್ಯ-ಸಂಗೀತವನ್ನು, ಕಸೂತಿ-ಕುಶಲತೆಯನ್ನು ಹೊತ್ತು ಜೀವನೋಪಾಯಕ್ಕಾಗಿ ನಾಡಿನಲ್ಲಿ ಅಲೆದಾಡುತ್ತಿದ್ದ ಜನಸಮುದಾಯ ಒಂದೆಡೆ ನೆಲೆನಿಲ್ಲಲು ಆರಂಭಿಸುತ್ತಿರುವಂತೆ, ಸ್ಥಿರವಾಗಿ ನೆಲೆ ನಿಂತಿದ್ದ ಜನವರ್ಗ ಉದ್ಯೋಗದ ಬೆನ್ನುಹತ್ತಿ ಅಲೆದಾಡಲು ಆರಂಭಿಸಿದೆ. ಸ್ಥಿರ ಜನಸಮುದಾಯಕ್ಕಾದರೆ ನಿರ್ದಿಷ್ಟ ಪ್ರದೇಶ, ಇಂತಿಷ್ಟೇ ಎಂದು ಹಳ್ಳಿಗಳಿದ್ದವು. ಆದರೆ ಅಲೆಮಾರಿ ಸಮುದಾಯದ ಜನ ಪ್ರದೇಶ, ಭಾಷೆಗಳ ಎಲ್ಲೆಯನ್ನು ಮೀರಿ ಅಲೆಯುವಂತಾಗಿದೆ. ಹಕ್ಕಿ-ಪಿಕ್ಕಿಗಳು, ಕಿಳ್ಳೇಕ್ಯಾತರು ತಮ್ಮ ಸಾಮಾನು-ಸರಂಜಾಮುಗಳನ್ನು ಕತ್ತೆ-ಕುದುರೆಗಳ ಮೇಲೆ ಹೇರಿಕೊಂಡು ಸಂಚರಿಸಿದರೆ, ಸ್ಥಿರ ಸಮುದಾಯದವರು ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಸ್ಥಿರ ಸಮುದಾಯಗಳಾಗಿ ನೆಲೆನಿಂತ ಜನವರ್ಗ (ಜಾಗತೀಕರಣದ ಕಾರಣದಿಂದಾಗಿ) ಮುಂದೊಂದು ದಿನ ಮನೆ-ಮಠ, ಆಸ್ತಿ-ಪಾಸ್ತಿಗಳನ್ನೆಲ್ಲ ಕಳೆದುಕೊಂಡು ಜೀವನೋಪಾಯಕ್ಕಾಗಿ ಪ್ರಪಂಚವನ್ನೆಲ್ಲ ಅಲೆಯಬೇಕಾದ ಪರಿಸ್ಥಿತಿ ಬಂದರೂ ಬರಬಹುದು. ಹೀಗಾಗಿ ಮುಂದೊಂದು ಕಾಲಕ್ಕೆ ಸ್ಥಿರ ಸಮುದಾಯಗಳೇ ಇಲ್ಲವಾಗಲೂಬಹುದು; ಉಳಿದರೂ ಹೆಚ್ಚಾಗಲೂಬಹುದು – ಇಂದಿನ ಅಲೆಮಾರಿ ಸಮುದಾಯಗಳಂತೆ. ಹಾಗಾದಾಗ ಮುಖ್ಯವಾಹಿನಿಯತ್ತ ಇದೀಗಷ್ಟೇ ಕುತೂಹಲದ ಕಣ್ಣರಳಿಸಿ ನೋಡುತ್ತಿರುವ ಅಲೆಮಾರಿ ಸಮುದಾಯಗಳ ಗತಿ ಏನಾದೀತು?

* * *