ಮಾನವ ಜನಾಂಗದ ಸಂಸ್ಕೃತಿ ವಿಕಾಸದ ಕುರಿತು ಮಾತನಾಡುವಾಗ ನಾವು ಅಲೆಮಾರಿ ಸಂಸ್ಕೃತಿಯೇ ಆದಿಮ ಸ್ಥಿತಿಯೆನ್ನುತ್ತೇವೆ. ಅದು ಮಾನವನ ಆಹಾರಾನ್ವೇಷಣೆಯ ಸ್ಥಿತಿ; ಅಥವಾ ಹಂತ. ಊರಿನ ಕಲ್ಪನೆಗಿಂತಲೂ ಕಾಡಿನ ಕಲ್ಪನೆ ಆ ಸ್ಥಿತಿಗೆ ಹೆಚ್ಚು ಅನ್ವಯವಾಗುತ್ತದೆ. ಕಾಡಿನಿಂದ ಕಾಡಿಗೆ ಅಲೆಯುತ್ತಾ ಪ್ರಾಣಿಗಳನ್ನು ಬೇಟೆಮಾಡಿ, ಗಡ್ಡೆ-ಗೆಣಸುಗಳನ್ನು ಆಯ್ದು, ಹೊಟ್ಟೆ ಹೊರೆಯುತ್ತಿದ್ದ ಅಲೆಮಾರಿ ಬದುಕು ಅದು. ಇಂತಹ ಅಲೆಮಾರಿ ಬದುಕಿನಿಂದ ಉದರಾಭರಣ ಕಷ್ಟವೆನಿಸಿದಾಗ, ಅಂದರೆ ಸಾಕಷ್ಟು ಬೇಟೆ ಆಹಾರ ಸಾಮಗ್ರಿಗಳು ಲಭಿಸದೆ ಹೋದಾಗ ಮನುಷ್ಯ ಅನಿವಾರ್ಯವಾಗಿ ಕೃಷಿ ಜೀವನವನ್ನು, ಪಶುಪಾಲನೆಯನ್ನು ಪ್ರಾರಂಭಿಸಿದನೆನ್ನಬಹುದು. ಆಹಾರದ ಅನ್ವೇಷಣೆಯ ಹಂತದಿಂದ ಆಹಾರದ ಉತ್ಪಾದನೆಯ ಹಂತಕ್ಕೆ ಮನುಷ್ಯ ತಲುಪಿದ ಸಂದರ್ಭದಲ್ಲಿ ಆತನ ಜೀವನದಲ್ಲಿ ಮಹಾ ಸಾಮಾಜಿಕ ಕ್ರಾಂತಿಯೊಂದು ಸಂಭವಿಸಿತೆನ್ನಬಹುದು. ಮನುಷ್ಯನ ಸ್ಥಿರ ಬದುಕಿಗೂ ಇದುವೇ ನಾಂದಿಯಾಯಿತೆನ್ನಬಹುದು. ಅಂದರೆ ಕೃಷಿ ಮತ್ತು ಪಶುಪಾಲನೆಗೆ ಮಾನವ ಎಂದು ತೊಡಗಿದನೋ ಅಂದಿನಿಂದಲೇ ಸ್ಥಿರ ಜೀವನದ ಪ್ರಾರಂಭವನ್ನು ನಾವು ಗುರುತಿಸಬೇಕಾಗುತ್ತದೆ. ಪ್ರಾರಂಭದಲ್ಲಿ ಪಶುಪಾಲನೆಯೂ ಒಂದು ರೀತಿಯ ಅಲೆಮಾರಿ ಸಂಸ್ಕೃತಿಯಾಗಿದ್ದು. ನಂತರದಲ್ಲಿ ಅದು ಕೃಷಿ ಸಂಸ್ಕೃತಿಯೊಂದಿಗೇ ಅಸ್ತಿತ್ವವನ್ನು ಪಡೆದುಕೊಂಡುವೆನ್ನಬಹುದು. ಆಹಾರ ಉತ್ಪಾದನೆಯ ಮುಂದುವರಿಕೆಯಾಗಿ ಆಹಾರ ಸಾಮಗ್ರಿಗಳನ್ನು ನಾಳೆಗಾಗಿ ಕೂಡಿಡುವ ಪ್ರವೃತ್ತಿ ಕೂಡಾ ಬೆಳೆಯಿತೆನ್ನಬಹುದು. ಇದರ ಜತೆ ಜತೆಗೇ ಬಂಧುತ್ವದ ಪರಿಕಲ್ಪನೆ ಕೂಡಾ ಹುಟ್ಟಿಕೊಂಡಿರಬೇಕು. ಹಾಗಾಗಿ ಕೃಷಿ ಸಂಸ್ಕೃತಿ-ಆಹಾರ ಉತ್ಪಾದನೆ – ಆಹಾರ ಸಾಮಗ್ರಿಗಳ ಶೇಖರಣೆ ಇತ್ಯಾದಿಗಳೊಂದಿಗೆ ಬಂಧುತ್ವದ ಪರಿಕಲ್ಪನೆಗೂ ಅವಿನಾಭಾವ ಸಂಬಂಧವಿದ್ದಂತಿದೆ.

ಹೀಗೆ ಸಂಸ್ಕೃತಿ ವಿಕಾಸದಲ್ಲಿ ನಾವು ವಿವಿಧ ಹಂತಗಳನ್ನು ಗುರುತಿಸಿದರೂ ಹೊಸ ಜೀವನ ಕ್ರಮಕ್ಕೆ ಕಾಲಿರಿಸಿದಾಕ್ಷಣ ಹಳೆಯ ಜೀವನ ಕ್ರಮವು ಸಂಪೂರ್ಣ ಮುಗಿದು ಹೋಗುತ್ತದೆ ಎಂದು ಹೇಳುವ ಹಾಗಿಲ್ಲ. ಅದರಂತೆ ಮನುಷ್ಯ ಸ್ಥಿರ ಬದುಕಿಗೆ ಕಾಲಿರಿಸಿದ ತಕ್ಷಣ ಹಿಂದಿನ ಅಲೆಮಾರಿ ಸ್ಥಿತಿ ಪೂರ್ತಿಯಾಗಿ ಮುಗಿದು ಹೋಯಿತು ಎಂದರ್ಥವಲ್ಲ. ಅದು ಹೊಸ ರೂಪದಲ್ಲಿ ಇವತ್ತಿಗೂ ಮುಂದುವರಿದುಕೊಂಡು ಬಂದಿದೆ. ಇದು ವಾಸ್ತವವೋ? ವೈರುಧ್ಯವೋ? ಎಂಬ ಗೊಂದಲವುಂಟಾಗುವುದು ಸಹಜ. ಆದರೆ ಪ್ರಾಚೀನ ತಮಿಳು ಸಂಸ್ಕೃತಿಯಲ್ಲಿನ ಜನ ವಸತಿಯ ಐದು ನೆಲೆಗಳ ಬಗೆಗೆ ಗಮನಿಸಿದರೆ ಪ್ರಸ್ತುತ ಸ್ಥಿತಿ ವಾಸ್ತವವೆಂದೇ ಹೇಳಬೇಕಾಗುತ್ತದೆ. ತಮಿಳು ನಾಡಿನ ವಿವಿಧ ಭೂ ಪ್ರದೇಶಗಳಲ್ಲಿ ಮಾನವ ಸಂಸ್ಕೃತಿ ವಿಕಾಸದ ಪ್ರಾರಂಭಿಕ ಹಂತದಲ್ಲಿ ಬಗೆಯ ಸಂಸ್ಕೃತಿಗಳು ಏಕಕಾಲಕ್ಕೆ ಅಸ್ತಿತ್ವದಲ್ಲಿದ್ದುವೆಂಬುದನ್ನು ನಾವು ಗಮನಿಸಬಹುದಾಗಿದೆ. ಅಂದರೆ ಸಂಸ್ಕೃತಿ ವಿಕಾಸದಲ್ಲಿ ಕಾಲ ಮಾತ್ರವಲ್ಲದೆ ಭೌಗೋಳಿಕ ಪರಿಸರವೂ ಪ್ರಮುಖ ಪಾತ್ರವಹಿಸುತ್ತದೆಂಬುದನ್ನು ತಿಳಿದಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಇಂದಿನ ಅಲೆಮಾರಿ ಸ್ಥಿತಿಯನ್ನು ವೈರುಧ್ಯವೆಂದು ಪರಿಗಣಿಸಬೇಕಾಗಿಲ್ಲ. ಆದರೆ ಮಾನವ ಸ್ಥಿರ ಬದುಕನ್ನು ಪ್ರಾರಂಭಿಸಿ ಅನೇಕ ಶತಮಾನಗಳು ಕಳೆದರೂ ಇಂದಿಗೂ ಅಲೆಮಾರಿ ಬದುಕನ್ನು ಬದುಕುವ ಜನ ಸಮುದಾಯವಿದೆಯೆಂಬ ವಾಸ್ತವವಕ್ಕೆ ಒಂದರ್ಥದಲ್ಲಿ ವೈರುಧ್ಯವಾಗಿಯೂ ಕಾಣಬಹುದು. ಹಿಂದೆ ಕಾಡಿನಿಂದ ಕಾಡಿಗೆ ಅಲೆಯುವ ಸ್ಥಿತಿಯಿದ್ದರೆ, ಇಂದು ಊರಿಂದೂರಿಗೆ, ನಗರದಿಂದ ನಗರಕ್ಕೆ ಅಲೆಯುವ ಜನವರ್ಗವನ್ನು ನಾವು ಕಾಣುತ್ತಿದ್ದೇವೆ. ಇದು ಆಧುನಿಕ ನಗರೀಕರಣ ಸೃಷ್ಟಿಸಿದ ಕೃತಕ ಅಲೆಮಾರಿ ಸ್ಥಿತಿಯಾಗಿರಬಹುದೇ? ಎಂಬುದರ ಬಗೆಗೂ ನಾವು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ.

ಭೂ ಪ್ರದೇಶವೊಂದರ ಭೌಗೋಳಿಕ ಗುಣ-ಲಕ್ಷಣಗಳು ಅಲೆಮಾರಿ ಬದುಕು ಮತ್ತು ಸ್ಥಿರ ಬದುಕನ್ನು ನಿರ್ದೇಶಿಸಬಹುದೆಂಬುದನ್ನು ಈಗಾಗಲೇ ಗಮನಿಸಲಾಗಿದೆ. ಅಂದರೆ ಅಲೆದಾಡಿ ಬದುಕಲು ಯೋಗ್ಯವಾದ ಭೂ ಪ್ರದೇಶ, ನೆಲೆ ನಿಂತು ಬದುಕಲು ಯೋಗ್ಯವಾದ ಭೂ ಪ್ರದೇಶ ಎಂಬ ಭಿನ್ನ ನೆಲೆಗಳನ್ನು ಗುರುತಿಸಲು ಸಾಧ್ಯವೇ? ಯಾಕೆಂದರೆ ದಕ್ಷಿಣ ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಇಲ್ಲಿನ ದಕ್ಷಿಣ ಕನ್ನಡ ಮತ್ತು ಕೇರಳಗಳಲ್ಲಿ ಅಲೆಮಾರಿ ಸಮುದಾಯ ಇಂದು ಅಷ್ಟಾಗಿ ಕಂಡು ಬರುತ್ತಿಲ್ಲ. ಇದಕ್ಕೆ ಅಲ್ಲಿನ ಭೌಗೋಳಿಕ ಸ್ಥಿತಿಗತಿಗಳೇ ಕಾರಣವಾಗಿರಬಹುದೇ? ಕರಾವಳೀ ಹಾಗೂ ಮಲೆನಾಡು ಪ್ರದೇಶಗಳು ಅಲೆಮಾರಿ ಬದುಕಿಗೆ ಬಯಲು ಸೀಮೆಯಷ್ಟು ಪ್ರಶಸ್ತವೆನಿಸದೆಂದು ತೋರುತ್ತದೆ.

ಆಧುನಿಕ ಸಂದರ್ಭವನ್ನು ಅಲೆಮಾರಿ ಸಮುದಾಯ ಮತ್ತು ಸ್ಥಿರ ಸಮುದಾಯ ಎರಡೂ ಏಕಕಾಲಕ್ಕೆ ಅಸ್ತಿತ್ವದಲ್ಲಿರುವುದರಿಂದ ವೈರುಧ್ಯಗಳು ಸಹಜವೇನೋ ಎಂದೆನಿಸುತ್ತದೆ. ಹಿಂದೆ ಅಲೆಮಾರಿ ಬದುಕಿಗೆ ಆಹಾರಾನ್ವೇಷಣೆಯೊಂದಿಗೆ ಅವಿನಾಭಾವ ಸಂಬಂಧವಿತ್ತು. ಆದರೆ ಇಂದು ಸ್ಥಿರ ಜೀವನದ ಜತೆಗೆ ಸಾಗುತ್ತಿರುವ ಆಧುನಿಕ ಅಲೆಮಾರಿ ಬದುಕು ಆ ಸಮುದಾಯವನ್ನು ಭಿಕ್ಷಾಟನೆಗೂ ಪ್ರೇರೇಪಿಸುತ್ತಿದೆಯೇನೋ! ಎಂಬ ಆತಂಕವೂ ಸಹಜವಾಗಿಯೇ ಮೂಡುತ್ತದೆ.

ಅಲೆಮಾರಿ ಸಂಸ್ಕೃತಿ ಮತ್ತು ವಲಸೆ ಸಂಸ್ಕೃತಿಗಳ ಪರಸ್ಪರ ಸಂಬಂಧದ ಬಗೆಗೂ ನಾವು ವಿಚಾರ ಮಾಡಬೇಕಾಗುತ್ತದೆ. ಸಂಚಾರ ಅಥವಾ ಪ್ರಯಾಣ ಎರಡೂ ಸಂಸ್ಕೃತಿಗಳಲ್ಲೂ ಸರ್ವೆ ಸಾಮಾನ್ಯ. ಆದರೆ ಸಂಚಾರಗಳ ಉದ್ದೇಶ ಮಾತ್ರ ಬೇರೆ ಬೇರೆ. ಅಲೆಮಾರಿ ಜೀವನ ಆಹಾರಾನ್ವೇಷಣೆಗೆ ಸಂಬಂಧಪಟ್ಟದ್ದು. ಅದು ಒಂದೆಡೆ ನೆಲೆ ನಿಲ್ಲದ ಸಲುವಾಗಿ ಹೊರಡುವ ಸಂಚಾರವಲ್ಲ. ಆದರೆ ವಲಸೆ ಸಂಸ್ಕೃತಿಯ ಸ್ವರೂಪ ಬೇರೆ. ವಲಸೆ ಸಂಸ್ಕೃತಿಯು ಸ್ಥಿರ ಸಂಸ್ಕೃತಿಯ ಒಂದು ಭಾಗ. ತಾವು ಈಗಾಗಲೇ ನೆಲೆ ನಿಂತಲ್ಲಿ ಆಹಾರೋತ್ಪಾದನೆ ಕಷ್ಟವಾದಾಗ, ಆಹಾರ ಸಾಮಗ್ರಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದೇ ಹೋದಾಗ ಅಥವಾ ಬೇರೇನಾದರೂ ಬಾಹ್ಯ ತೊಂದರೆಗಳೇನಾದರಾದಾಗ ಮನುಷ್ಯ ಒಂದೂರಿಂದ ಇನ್ನೊಂದೂರಿಗೆ ವಲಸೆ ಹೋಗುತ್ತಾನೆ. ಪ್ರಾಶಸ್ತವೆನಿಸಿದ ಇನ್ನೊಂದೂರಲ್ಲಿ ನೆಲೆ ನಿಲ್ಲುತ್ತಾನೆ.

ಆಧುನಿಕ ಅಲೆಮಾರಿ ಸಮುದಾಯಗಳ ಭಾಷಿಕ ಅಧ್ಯಯನ ಕೂಡಾ ತುಂಬಾ ಕುತೂಹಲಕರವಾದದ್ದು. ಊರಿಂದೂರಿಗೆ ಹೊಟ್ಟೆಪಾಡಿಗಾಗಿ ಅಲೆಯುವ ಜನ ವಿವಿಧ ಭಾಷಿಕ ಪ್ರದೇಶಗಳನ್ನು ಹಾದು ಹೋಗುತ್ತಾರೆ. ಆಯಾ ಪ್ರದೇಶಗಳ ಜನರ ಜತೆ ವ್ಯವಹರಿಸಲು ಅಲ್ಲಲ್ಲಿನ ಭಾಷೆಗಳನ್ನು ಅಷ್ಟಿಷ್ಟು ಕಲಿಯುತ್ತಾರೆ. ಕೊನೆಗೆ ಅವರಾಡುವ ಭಾಷೆಯೇ ಒಂದು ವಿಶಿಷ್ಟ ಬಗೆಯ ಮಿಶ್ರ ಭಾಷೆಯಾಗಿ ಮಾರ್ಪಡುತ್ತದೆ. ಅದನ್ನು ಇಂತಹುದೇ ಪರಿವಾರಕ್ಕೆ ಸೇರಿದ ಭಾಷೆಯೆಂದು ನಿಖರವಾಗಿ ಹೇಳುವುದು ಕೆಲವೊಮ್ಮೆ ಕಷ್ಟವಾಗಬಹುದು. ಆದರೆ ಅಲೆಮಾರಿ ಸಮುದಾಯಗಳ ಇದುವರೆಗಿನ ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಅಲೆಮಾರಿಗಳು ಆಯಾ ಪ್ರದೇಶಗಳ ಜನರೊಂದಿಗೆ ಅಲ್ಲಲ್ಲಿನ ಭಾಷೆಗಳಲ್ಲೇ ವ್ಯವಹರಿಸುತ್ತಾರೆ. ತಮ್ಮವರೊಂದಿಗೆ ಮಾತ್ರ ತಮ್ಮದೇ ಆದ ಭಾಷೆಯಲ್ಲಿ ಮಾತನಾಡುತ್ತಾರೆ. ಇವೆಲ್ಲವುಗಳ ಬಗೆಗೆ ವ್ಯಾಪಕ ಅಧ್ಯಯನ ನಡೆಯ ಬೇಕಾಗಿದೆ.

ಹೀಗೆ ಇಂದಿನ ವಾಸ್ತವವೇ ಅಲೆಮಾರಿಗಳ ಬದುಕಿನಲ್ಲಿ ಹತ್ತು ಹಲವು ವೈರುಧ್ಯಗಳನ್ನು ಸೃಷ್ಟಿಸಿವೆ. ಇಂದು ವಿವಿಧ ನೆಲೆಗಳಲ್ಲಾದ ಆಧುನೀಕರಣ ಪ್ರಕ್ರಿಯೆಯು ಅಲೆಮಾರಿಗಳ ಪಾರಂಪರಿಕ ಜೀವನ ಕ್ರಮಕ್ಕೆ ಒಂದರ್ಥದಲ್ಲಿ ಮಾರಕವೆನಿಸಿದ ಆಧುನೀಕರಣವನ್ನು ತಮ್ಮ ಬದುಕಿಗೆ ಪೂರಕವಾಗಿಸಿಕೊಳ್ಳುವಲ್ಲಿ ಇಂದು ಅಲೆಮಾರಿಗಳು ಸಾಕಷ್ಟು ಹೆಣಗಾಡಬೇಕಾಗಿದೆ. ಇಲ್ಲವೇ ಸ್ಥಿತಿ ಬದುಕಿಗೆ ಮೊರೆಹೋಗಬೇಕಾಗಿದೆ.

* * *