ಮಾನವ ಮೂಲತಃ ಅಲೆಮಾರಿ. ಹಸಿಮಾಂಸ, ಗೆಡ್ಡೆ-ಗೆಣಸುಗಳನ್ನು ತಿಂದು ಪ್ರಕೃತಿಯೊಂದಿಗೆ ಸೆಣೆಸಾಡುತ್ತ, ಸಂವಾದಿಸುತ್ತ, ನಿಗೂಢತೆಯನ್ನು ಭೇದಿಸುತ್ತ, ಕರ್ಕಶ ದಾಳಿಗಳನ್ನು ಎದುರಿಸುತ್ತ, ಹರಿವ ನೀರಿನೊಂದಿಗೆ ವೇಗವಾಗಿ, ಸುಳಿವ ಗಾಳಿಯೊಂದಿಗೆ ಸರಳವಾಗಿ ಬೆರೆತು ಬದುಕಿ ಬಾಳಿದ್ದಾನೆ. ಎಷ್ಟೋ ಸಾರಿ ಪ್ರಕೃತಿಯ ಆಟಾಟೋಪಕ್ಕೆ ಬೆದರುತ, ಕ್ರಮೇಣ ಪ್ರಕೃತಿಯನ್ನೆ ಹೆಗಲಿಗೇರಿಸಿಕೊಂಡು ಪಯಣಿಸಿದ ಮಾನವ ಚರಿತ್ರೆ ಬೆರಗಿನಿಂದ ಕೂಡಿದೆ.

ಕ್ರಮೇಣ ನೆಲ, ಜಲ ಇವೆರಡೂ ಹಸಿವು ಮತ್ತು ಹೆಸರಿನ ಸಂಪನ್ಮೂಲಗಳು ಎಂಬುದು ಮಾನವನ ಮೆದುಳಿಗೆ ಗ್ರಹಿತವಾಯಿತು. ಅಲೆದಾಡುವ ಅಲೆಮಾರಿ ಮಾನವರ ಗುಂಪುಗಳು “ಜಲ”ದ ಅಕ್ಕಪಕ್ಕ “ನೆಲ”ವನ್ನು ಉತ್ತು-ಬಿತ್ತು ಒಂದೆಡೆ ನೆಲೆಯೂರತೊಡಗಿದವು. ಹೀಗೆ ಅಲೆಯುತ್ತ ಬಂದ ಗುಂಪುಗಳು ಈ ಮೊದಲೇ ನೆಲೆನಿಂತ ಸಮುದಾಯದ ಮೇಲೆ ದಾಳಿ ಮಾಡಿ ತಾವು ಆ ನೆಲ-ಜಲವನ್ನು ಆಕ್ರಮಿಸಿಕೊಂಡ ಚರಿತ್ರೆಯೇ ಒಟ್ಟು ಚರಿತ್ರೆಯ ಬಹುಭಾಗವನ್ನು ತುಂಬಿಕೊಂಡಿದೆ. ಆರ್ಯರು ಭಾರತ ಪ್ರವೇಶಿಸಿದ್ದು ಹೀಗೆಯೇ ಎಂಬುದು ಚರಿತ್ರೆಗಳಲ್ಲಿ ಓದ ಸಿಗುತ್ತದೆ.

ನೆಲ-ಜಲ-ನೆಲೆಯನ್ನು ಕಂಡುಕೊಂಡ ಮಾನವರ ಗುಂಪು ಸ್ಥಿರ ಸಮುದಾಯ ಎನಿಸಿಕೊಂಡಿತು. ಪ್ರಕೃತಿ ಸಂಪತ್ತಿನ ಮೇಲೆ ಹಿಡಿತ, ಒಡೆತನ, ಎಷ್ಟೋ ಸಲ ಬರ್ಬರ ಕಪಿಮುಷ್ಟಿ ಪ್ರಾರಂಭವಾಯಿತು. ಖಾಸಗಿ ಆಸ್ತಿಗಳು, ಕುಟುಂಬಗಳು ಬೆಳೆಯತೊಡಗಿದವು. ಈ ಸ್ಥಿರ ಸಮುದಾಯದ ನಡುವೆಯೂ ಕಡಿಮೆ ಆಸ್ತಿ ಹೊಂದಿದ ಅಥವಾ ಆಸ್ತಿಯೇ ಇಲ್ಲದ ಮನುಷ್ಯ ಇದ್ದವನ ಗುಲಾಮನಾಗಿ ಬದುಕು ನಡೆಸಬೇಕಾಯ್ತು, ಇದ್ದವರು- ಇಲ್ಲದವರು ಎಂದು ಎರಡು ವರ್ಗಗಳು ಹುಟ್ಟಿಕೊಂಡವು. ನಾಗರಿಕತೆಯತ್ತ ದಾಪುಗಾಲಿಡುತ್ತ ಈ ಸ್ಥಿರ ಸಮುದಾಯವು ತನ್ನ ಒಳಿತಿಗಾಗಿ ನೀತಿ-ನಿಯಮಗಳನ್ನು ರೂಪಿಸಿಕೊಂಡು ಅನೇಕ ಸವಲತ್ತುಗಳನ್ನು ಸೃಷ್ಟಿಸಿಕೊಂಡಿತು. ಆದರೆ ಇದೇ ಸಂದರ್ಭದಲ್ಲಿ ಕಾಡು-ಬೆಟ್ಟ-ಗಡ್ಡ, ಗಿರಿ ಗಂವ್ಹರಗಳ ನಡುವೆ ಈಗಲೂ ಅಲೆದಾಡುವ, ತುತ್ತಿನ ಚೀಲ ತುಂಬಿಸಿಕೊಳ್ಳಲು ಕಾಡು ತೊರೆದು ಊರಿಂದೂರಿಗೆ ತಿರುಗಾಡುವ ಅಲೆಮಾರಿ ಜನಾಂಗವು ನಮ್ಮ ಎದುರಿಗೆ ಇವೆ. ಊರಲ್ಲಿ ಒಂದು ಸೂರು ಇಲ್ಲದ, ತುಂಡು ಭೂಮಿ ಇಲ್ಲದ ಈ ಸಮುದಾಯವು ಕಟ್ಟೆಯ ಕಸುವು ಮಾತ್ರ ಬಂಡವಾಳ ಮಾಡಿಕೊಂಡು ಅಥವಾ ತಮ್ಮಲ್ಲಿರುವ ದೇಶಿಯ ಕಲಾ ನೈಪುಣ್ಯವನ್ನೆ ಪ್ರದರ್ಶನಕಿಟ್ಟು ಹೊಟ್ಟೆ ಹೊರೆಯಲೆಂದು ಭೂಮಿಯ ಉದ್ದಗಲಕ್ಕೂ ಹರಿದಾಡುತ್ತಿವೆ. ಕಲೆಯನ್ನು ಪ್ರದರ್ಶಿಸಿ ಹೊಟ್ಟೆ ತುಂಬಿಸಿಕೊಳ್ಳುವ, ಆಯಾ ಪ್ರಾದೇಶಿಕ ಸಮುದಾಯ ಲಕ್ಷಣಗಳನ್ನು ಹೊಂದಿರುವ ಜನಾಂಗಗಳಲ್ಲಿ ಬುಡಬುಡಕಿಯವರು, ಬಾಳ ಸಂತೋಷಿಗಳು, ವೇಷಗಾರರು, ಡೊಂಬರು, ಕೊರವಂಜಿಯವರು, ಭೂತೇರು, ಸಿದ್ಧಿಕಿಯವರು, ಕವಲೆತ್ತಿನವರು, ಕರಡಿ ಕುಣಿತದವರು, ಪೋತರಾಜರು, ದುರಗಿ ಮುರಗಿಯವರು, ಸುಡಗಾಡಸಿದ್ದರು, ಮುಂತಾದವರು ಬರುತ್ತಾರೆ. ಇನ್ನು ಈ ಪಟ್ಟಿ ಬೆಳೆಸಬಹುದು. ಇನ್ನೊಂದು ಸಮುದಾಯ ಅದು ವೃತ್ತಿಯನ್ನು ಅವಲಂಬಿಸಿ, ದೇಹದಂಡಿಸಿ ದುಡಿಯುವ ಮೂಲಕ ಜೀವನೋಪಾಯ ಕಂಡುಕೊಳ್ಳುತ್ತವೆ. ಉದಾಹರಣೆಗೆ ಕಲಾಯಿಗಾರರು, ಕಂಚುಗಾರರು, ಕುರುಬರು, ಕುಂಚಿಕೊರವರು, ಇಳೀಗರು, (ಈಡಿಗರು), ಇತ್ಯಾದಿಯವರನ್ನು ಹೆಸರಿಸಬಹುದು. ಇವರುಗಳಲ್ಲದೆ ಉಚಲ್ಯಾ, ಫಾಶಿಫರದೇರು, ಲಂಬಾಣಿ, ಬುರುಬುರು ಪೋಛೇರು, ಕರಕರ ಮುಂಡೇರು ಮುಂತಾದ ತೀರ ಭಿನ್ನ ಗುಣ-ಲಕ್ಷಣಗಳನ್ನು ಹೊಂದಿರುವ ಸ್ಥಿರ ಸಮುದಾಯದ ಅವಹೇಳನಕ್ಕೆ ಒಳಗಾದ ಸಮುದಾಯಗಳು ನಮ್ಮ ನಡುವೆ ಇವೆ. ಅವೆಲ್ಲ ಆರ್ಥಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಅವಕಾಶಗಳಿಂದ ವಂಚಿತವಾಗಿ ತಮ್ಮದೆ ಪಾರಂಪಾರಿಕ ಹಿಂಜರಿತವನ್ನು ಮೈಗೂಡಿಸಿಕೊಂಡು, ಎಗ್ಗಿಲ್ಲದ ತಲ್ಲಣಗಳ ನಡುವೆ ಬದುಕುತ್ತಿವೆ. ಭಾರತದ ಗುಡ್ಡಗಾಡು, ಒಳಡಾಳಿತ ಪ್ರದೇಶಗಳಲ್ಲಿ ಇಂದಿಗೂ ಅನಾಮಧೇಯರಾಗಿ ಬಾಳುತ್ತಿರುವ ಹತ್ತಾರು ಸಮುದಾಯಗಳು ಅಲೆಮಾರಿ ಬದುಕಿನ ಎಲ್ಲ ಕಷ್ಟ ಪರಂಪರೆಗಳನ್ನು ಸಹಿಸಿಕೊಂಡು ನಾಗರಿಕ ಸಮುದಾಯ ತಲೆತಗ್ಗಿಸುವಂತೆ ಬಾಳುತ್ತಿವೆ. ಇಂಥ ಅಪರಿಚಿತ ಸಮುದಾಯಗಳು ಭಿನ್ನ ಭಿನ್ನ ಪ್ರದೇಶಗಳಲ್ಲಿ ತರಹೇವಾರಿ ಹೆಸರಿನಿಂದ ಗುರುತಿಸಿಕೊಂಡಿವೆ. ಇವುಗಳ ಒಟ್ಟು ಸ್ವರೂಪ, ವ್ಯಾಪ್ತಿ, ಜೀವ ವೈವಿಧ್ಯ ಕುರಿತು ವ್ಯಾಪಕ ಮತ್ತು ವೈಜ್ಞಾನಿಕ ಅಧ್ಯಯನವಾಗಬೇಕಿದೆ. ಅಧ್ಯಯನ ಮಾತ್ರವಲ್ಲ ತನ್ಮೂಲಕ ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತಂದು ಉತ್ತಮ ಬದುಕು ಒದಗಿಸಿ ಕೊಡಬೇಕಿದೆ.

ನಾಗರೀಕ ಬದುಕಿನ ಅತಿ ಸಣ್ಣ ಸೌಲ್ಯಗಳು ಈ ಸಮುದಾಯಕ್ಕಿಲ್ಲ. ರೇಷನ್ ಕಾರ್ಡ್, ವಸತಿ, ಶಿಕ್ಷಣ, ಉದ್ಯೋಗ, ಮೀಸಲಾತಿಯ ಸವಲತ್ತುಗಳು, ಆರೋಗ್ಯ, ರಾಜಕೀಯ ಭಾಗಿದಾರತ್ವ, ಈ ಯಾವ ಸೌಲಭ್ಯಗಳಿಲ್ಲದ ಹಲವು ಅಲೆಮಾರಿ ಸಮುದಾಯದವರ ಹೆಸರುಗಳು ಮತದಾರರ ಪಟ್ಟಿಯಲ್ಲಿರುವುದು ಮಾತ್ರ ಅಚ್ಚರಿ ಹುಟ್ಟಿಸುತ್ತದೆ! ಪ್ರಭುತ್ವವು ಇವರನ್ನು ಓಟಾಗಿ ಪರಿವರ್ತಿಸಿರುವ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಂಭೀರದ ಸಂಗತಿ. ನಾಗರೀಕ ಸಮುದಾಯಗಳು ಹಲವು ಸಂದರ್ಭಗಳಲ್ಲಿ ತಮ್ಮ ಸ್ವಾರ್ಥ ಪ್ರೇರಿತ ಯೋಜನೆಗಳ ಮೂಲಕ. ಅಭಿವೃದ್ಧಿ ನೆಪದಲ್ಲಿ ಅನೇಕ ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳನ್ನು ಒಕ್ಕಲೆಬ್ಬಿಸಿದ ಉದಾಹರಣೆಗಳು ಹೇರಳವಾಗಿ ದೊರೆಯುತ್ತವೆ. ಉದಾಹರಣೆಗಾಗಿ ಹೇಳುವುದಾದರೆ ರಾಜಸ್ಥಾನ ಮೂಲದವರೆಂದು ಹೇಳಲಾಗುತ್ತಿರುವ ಲಂಬಾಣಿಗಳು ಈಗ್ಗೆ ನುರಾರು ವರ್ಷಗಳ ಹಿಂದೆ ಅಲೆಮಾರಿಗಳಾಗಿದ್ದವರೇ. ಗುಡ್ಡಗಾಡುವಾಸಿಗಳಾದ ಇವರು ಕರ್ನಾಟಕದ ಉದ್ದಕ್ಕೂ ಅರಣ್ಯ ಪ್ರದೇಶಗಳಲ್ಲಿ ತಾಣಗಳನ್ನು ಅರಸಿಕೊಂಡು ಬಾಳಲು ಉಪಕ್ರಮಿಸಿರಲು ಸಾಕು. ಗುಲಬರ್ಗಾ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗೊಟ್ಟಂಗೊಟ್ಟಿ ಪರ್ವತಶ್ರೇಣಿಯ ಕುಂಚಾವರಂ ಭಾಗಗಳಲ್ಲಿ ನೂರಾರು ಲಂಬಾಣಿ-ಕುಟುಂಬಗಳು ಅದಾವುದೋ ಕಾಲದಿಂದ ವಾಸವಾಗಿದ್ದು ಶಾಶ್ವತದ ನೆಲೆ ಕಂಡುಕೊಳ್ಳಲು ಹವಣಿಸುತ್ತಿವೆ. ಅರಣ್ಯರಾಶಿ ನಿಬಿಡವಾಗಿದ್ದು ಶಾಶ್ವತ ನೆಲೆ ಕಂಡುಕೊಳ್ಳಲು ಹವಣಿಸುತ್ತಿವೆ. ಅರಣ್ಯರಾಶಿ ನಿಬಿಡವಾಗಿದ್ದ ಹಂತದಲ್ಲಿ ಅರಣ್ಯ ಉತ್ಪಾದನೆ ಮೇಲೆ ನಿರ್ಭರವಾಗಿದ್ದ ಈ ಸಮುದಾಯ ಅದ್ಹೇಗೊ ಬದುಕು ಬಚಾಯಿಸಿ ಕೊಂಡು ಬರುತ್ತಿತ್ತು. ಇತ್ತೀಚೆಗೆ ನಾಗರೀಕ ಬಾರ್ಬರಿಕ ಅರಣ್ಯನಾಶದ ಸಂಗತಿಗಳು ಹೆಚ್ಚಾದಂತೆ, ಅರಣ್ಯ ಉತ್ಪಾದನೆಗಳು ಕಡಿಮೆಯಾಗಿ ಈ ಸಮುದಾಯಗಳ ಬದುಕು ದುರ್ಭರವಾಗಿ ಸಹಜವೆಂಬಂತೆ ಇದ್ದಬಿದ್ದ ಅರಣ್ಯ ಸವರಿ ಒತ್ತುವರಿ ಮೂಲಕ ಸಾಗುವಳಿ ಮಾಡುವ ಕ್ರಿಯೆಗೆ ಇಳಿದರು. ಈ ಪ್ರದೇಶಗಳಲ್ಲಿ ಕಳೆದ ಇಪ್ಪತ್ತು-ಮೂವತ್ತು ವರ್ಷದಿಂದ ಇವರೆಲ್ಲ ಅರಣ್ಯ ಒತ್ತುವರಿ ಮಾಡಿಕೊಂಡು ಒಕ್ಕಲುತನ ನಡೆಸುತ್ತಿವೆಯಾದರೂ, ಅರಣ್ಯಾಧಿಕಾರಿಗಳ ದಬ್ಬಾಳಿಕೆ, ಕಾಟ, ಹೆದರಿಕೆಗಳು ಮಾತ್ರ ನಿರಂತರ ಮುಂದುವರೆದುಕೊಂಡು ಬರುತ್ತಿವೆ. ಹೀಗಾಗಿ ಇಲ್ಲಿನ ಗಂಡಾಳುಗಳು ಜೀವನ ನಿರ್ವಹಣೆಗಾಗಿ, ದೂರದ ಬಾಂಬೆ, ಕೊಲ್ಲಾಪೂರ, ಸಾಂಗ್ಲಿ, ಮಿರಜ ಗೋವಾದಂಥ ನಗರಗಳಿಗೆ ದುಡಿಯಲೆಂದು ಗುಳೆ ಹೋಗುತ್ತಿವೆ. ಗಂಡು ಸಂತಾನದ ಪರಿಸ್ಥಿತಿ ಹೀಗಿದ್ದರೆ, ಹೆಣ್ಣು ಸಂತಾನಕ್ಕೆ ಅತ್ತ ದೂರದೂರುಗಳಿಗೆ ಹೋಗಲು ಆಗದೇ, ಇತ್ತ ಇದ್ದ ಸ್ಥಳದಲ್ಲಿ ಜೀವನ ಸಾಗಿಸಲು ಸಾಧ್ಯವಾಗದೆ, ಮೇಲಾಗಿ ಇತ್ತೀಚೆಗೆ ಲಂಬಾಣಿಗಳಲ್ಲಿ ಅತಿಯಾಗಿ ಕಾಡುತ್ತಿರುವ ವರದಕ್ಷಿಣೆ ಹಾವಳಿಯೂ ಕಾರಣವಾಗಿ ಹೆಣ್ಣು ಶಿಶುಗಳ ಮಾರಾಟದಂಥ ಅಮಾನವೀಯ ಜಾಲಗಳು ಸೃಷ್ಟಿಯಾಗಿವೆ. ಈ ಘಟನೆ ಇಡೀ ದೇಶದ ಸ್ತ್ರೀ ಸಮುದಾಯವನ್ನು ಆಲೋಚಿಸುವಂತೆ ಮಾಡಿದ್ದಲ್ಲದೆ, ಪಾರಂಪರಿಕ ಲಿಂಗಭೇದನೀತಿ ಇನ್ನು ಜೀವಂತವಾಗಿರುವ ಕಾರಣವಾಗಿಯೂ ನಿದ್ದೆಗೆಡುವಂತಾಯ್ತು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆ ಪ್ರದೇಶದಲ್ಲಿ ವ್ಯಾಪಕ ಸಮೀಕ್ಷೆ ಕೈಕೊಂಡು ಕಾರಣಗಳನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿದೆ.

ಮೇಲಿನ ಸಂಗತಿ ಅಲೆಮಾರಿ ಸಮುದಾಯಗಳು ನೆಲೆ ನಿಲ್ಲಲು ಪ್ರಯತ್ನಿಸುವಾಗ ಎದುರಾಗುವ ಸಮಸ್ಯೆ-ಸವಾಲುಗಳ ಸಂಕೀರ್ಣತೆಯ ಪರಿಚಯ ಮಾಡಿಸುತ್ತದೆ. ಇದು ಒಂದು ಚಿಕ್ಕ ಆನುಷಂಗಿಕ ಉದಾಹರಣೆ ಮಾತ್ರ. ದೇಶದಾದ್ಯಂತ ಇಂಥ ಅನೇಕ ಅವಘಡಗಳು ಸಂಭವಿಸುತ್ತಿದ್ದು ಅವೆಲ್ಲ ನಾಗರೀಕ ಪ್ರಪಂಚದ ಅರಿವಿಗೆ ಬರಲು ಕೂಡಾ ಸಾಧ್ಯವಾಗುವುದಿಲ್ಲ. ಒಟ್ಟಾರೆ ಹೇಳುವುದಾದರೆ ಬದಲಾಗುತ್ತಿರುವ ಸಂಕೀರ್ಣ ಸಂದರ್ಭಗಳಲ್ಲಿ ಜೀವನಾವಶ್ಯಕ ವಸ್ತುಗಳನ್ನು ದೊರಕಿಸಿಕೊಳ್ಳಲು ಗೇಣುದ್ದ ಹೊಟ್ಟೆ ಹೊರೆಯಲು ನೆಲದುದ್ದ ಸುತ್ತುವ ಪರಿಸ್ಥಿತಿ ಅಲೆಮಾರಿಗಳದ್ದು, ಸದಾ ತಿರುಗಾಟದಲ್ಲಿರುವುದರಿಂದ ಇವರ ಬದುಕಿನ ಬೇರುಗಳು ಆಳಕ್ಕಿಳಿಯುವುದು ಸಾಧ್ಯವಾಗುವುದೇ ಇಲ್ಲ. ಸ್ಥಿರವಲ್ಲದ ಬದುಕನ್ನು ನಂಬಿ ಅಂಗೈಯಲ್ಲಿ ಹೊಟ್ಟೆ ಹಿಡಿದು ಅಲೆದಾಡುವ ಈ ಸಮುದಾಯಗಳ ಸಾಂಸ್ಕೃತಿಕ ಚಟುವಟಿಕೆಗಳೂ ಸ್ಥಗಿತವಾಗುತ್ತಿವೆ. ಜಾಗತೀಕರಣದ ಆಧುನಿಕ ಜಗತ್ತಿನ ಕಮರ್ಷಿಯಲ್ ತಂತ್ರ ಕಾರಣವಾಗಿ ಟಿವಿ, ಸಿನಿಮಾ, ಕಂಪ್ಯೂಟರ್, ಇಂಟರ್‌ನೆಟ್ ಜಾಲಗಳಡಿಯಲ್ಲಿ ಇವರ ಕಲೆಗಳು, ವೃತ್ತಿಕೌಶಲ್ಯಗಳು ಸಂಪೂರ್ಣ ನೆಲಕಚ್ಚಿವೆ. ನಾಗರೀಕ ಶಿಕ್ಷಣ, ಹೊಸ ಲೋಕದ ಇನ್ನಿತರ ಕಲಾ-ಕಾರ್ಯ, ವ್ಯಾಪಾರಿ ಕೌಶಲ್ಯದ ಪರಿಣತಿಯಿಲ್ಲದ ಕಾರಣವಾಗಿ ಅಲೆಮಾರಿಗಳಿಗೆ ಹೊಟ್ಟೆ ಹೊರೆಯುವುದು ಸಮಸ್ಯೆಯಾಗುತ್ತಿದೆ. ತುತ್ತಿನ ಚೀಲದ ಒಡಲಾಗ್ನಿ ಅವರನ್ನು ನಾಗರೀಕ ರೀತಿ ನೀತಿಗಳನ್ನು ಉಲ್ಲಂಘಿಸುವ ಒತ್ತಾಯಕ್ಕೆ ನೂಕುತ್ತಿದೆ. ಈ ಕಾರಣವಾಗಿಯೇ ನಾಗರೀಕ ಸಮುದಾಯದ ನಡುವಿನ ವ್ಯವಸ್ಥೆಯಾದ ಪೊಲೀಸ್ ಇಲಾಖೆಯ ಕಳ್ಳತನ ಆರೋಪಗಳ ಖಾಯಂ ಪಟ್ಟಿಯಲ್ಲಿ ಅಲೆಮಾರಿಗಳ ಹೆಸರುಗಳು ರಾರಾಜಿಸುತ್ತಿವೆ. ಉಚಲ್ಯದಂಥ ಅನೇಕ ಸಮುದಾಯಗಳು ಕಳ್ಳತನದ ಆರೋಪಕ್ಕೆ ತಮ್ಮ ಬೆನ್ನುಗಳನ್ನು ಬಲಿಕೊಡುತ್ತಿದ್ದಾರೆ. ಆರ್ಥಿಕ ಅಸ್ಥಿರತೆಯಿಂದಾಗಿ ಹಸುಳೆ, ಬಸುರಿ, ಬಾಣಂತಿತನಗಳೆಲ್ಲಾ ಬಯಲು ಬೀದಿಯಲ್ಲಿ ಕಳೆಯುವ ಈ ಸಮುದಾಯವನ್ನು ಸ್ಥಿರವಾಸಿಗಳು ಎಷ್ಟೋ ಸಾರಿ ತುಂಬ ಅಗೌರವದಿಂದ ನಡೆಸಿಕೊಂಡಿದ್ದಾರೆ. ಅವರ ಮೇಲೆ ಯಾವತ್ತೂ ಅನುಮಾನದ ಕಣ್ಣಿಟ್ಟುಕೊಂಡೇ ಬಂದಿದೆ.

ಇಂದಿಗೂ ಬುಡಬುಡಿಕೆ, ಹಾವಾಡಿಗ, ಬಾಳಸಂತೋಷಿ, ವೇಷಗಾರ ಪೋತರಾಜ, ಸುಡಗಾಡಸಿದ್ದ, ದುರಗ-ಮುರಗಿ, ಬುರಬುರ ಪೋಚಮ್ಮರಂಥ ಅಲೆಮಾರಿ ಜನಾಂಗವನ್ನು ಅಕ್ಷರಶಃ ಭಿಕ್ಷುಕರನ್ನಾಗಿಯೇ ಕಾಣಬಯಸುತ್ತದೆ ಈ ಸಮಾಜ. ಈ ಎಲ್ಲ ಹಾಡುಗಾರಿಕೆ, ಕಲಾ ವೈವಿಧ್ಯಗಳಿಗೆ ಮಾನ-ಸಮ್ಮಾನಗಳು ಸಿಗಲೇ ಇಲ್ಲ. ಭಿಕ್ಷುಕ ಸಮುದಾಯದ ಎಲ್ಲ ದೇಶಿಯ ಕಲಾ ಪ್ರಕಾರಗಳನ್ನು ಎತ್ತಿ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಸಂಸ್ಕರಿಸಿಕೊಂಡು ವ್ಯಪಾರ ಮಾಡಿಕೊಂಡ ಬುದ್ಧಿವಂತರು ಹಲವು ಪ್ರಶಸ್ತಿ-ಫರಮಾನುಗಳಿಗೆ ಪಾತ್ರರಾದದ್ದು ನಾಗರೀಕತೆಯ ಕ್ರೂರ ವ್ಯಂಗ್ಯ. ಈ ಮಾತು ಕ್ಲೀಷೆ ಎನಿಸಬಹುದಾದರೂ ಈ ವಿದ್ಯಮಾನ ಎಗ್ಗಿಲ್ಲದೆ ಮುಂದುವರಿದುಕೊಂಡು ಬರುತ್ತಿದೆಯಾದ್ದರಿಂದ ಮತ್ತೆ ಮತ್ತೆ ಹೇಳಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಇದೇ ಸಂದರ್ಭದಲ್ಲಿ ಉತ್ಪ್ರೇಕ್ಷಿತ ದೇಶಿವಾದಗಳ ಇನ್ನೊಂದು ಅತಿರೇಕದತ್ತಲೂ ಗಮನಹರಿಸುವುದೊಳಿತು. ಅಲೆಮಾರಿ ಸಮುದಾಯಗಳ ಕಲೆಗಳನ್ನು ಉಳಿಸುವ ನೆಪದಲ್ಲಿ ಆ ಸಮುದಾಯವನ್ನು ಅದೇ ದುಸ್ಥಿತಿಯಲ್ಲಿರುವಂತೆ ಮಾಡುವುದು ಎಷ್ಟು ಸರಿ? ಆ ಕಲಾ ಪ್ರಕಾರಗಳನ್ನು, ಅವುಗಳ ಪಾರಂಪರಿಕ ಮೌಲ್ಯವನ್ನು ಸರ್ವಜನತೆಯ ಉಪಯುಕ್ತತೆಯ ಜ್ಞಾನಶಾಖೆಗಳಾಗಿ, ಜೀವನೋಪಾಯದ ಜರೂರತ್ತಾಗಿ ಮಾರ್ಪಡಿಸಬೇಕಲ್ಲದೆ ಅವರನ್ನು ಅದೇ ದಯನೀಯ ಸ್ಥಿತಿಯಲ್ಲಿಡುವುದು ತರವಲ್ಲ. ಅಷ್ಟೇ ಏಕೆ ಅನೇಕ ಸಂದರ್ಭಗಳಲ್ಲಿ ಸ್ಥಿರ ಸಮುದಾಯಗಳು ತನ್ನ ಸ್ವಾರ್ಥಪ್ರೇರಿತ ರಾಜಕಾರಣಕ್ಕೆ, ಲಾಭದಾಯಕ ದಂಧೆಗಳಿಗೆ, ತನ್ನ ಅಧ್ಯಯನಗಳ ಬುದ್ಧಿವಂತಿಕೆಗೆ ಅಲೆಮಾರಿ ಜನರನ್ನು ಆಹುತಿ ತೆಗೆದುಕೊಂಡಿದೆ. ಗುಜರಾತಿನ ಕೋಮುದಂಗೆಗಳಲ್ಲಿ ಬುಡಕಟ್ಟಿನ ಸಮುದಾಯವನ್ನು ಕೋಮುವಾದಿಗಳು ಯಶಸ್ವಿಯಾಗಿ ಬಳಸಿಕೊಂಡು ಹಿಂಸಾಚಾರಕ್ಕೆ ಇಳಿಸಿದ್ದು ಚರಿತ್ರೆಯ ವ್ಯಂಗ್ಯವಾಗಿದೆ. ಒಂದು ಕಡೆ ಸ್ಥಿರ ಸಮುದಾಯಗಳ ವಿಜ್ಞಾನ-ತಂತ್ರಜ್ಞಾನಗಳು ಅಗಾಧವಾಗಿ ಬೆಳೆಯುತ್ತಿರುವಾಗಲೇ ಇನ್ನೊಂದು ಕಡೆ ಕನಿಷ್ಟ ಅಕ್ಷರಜ್ಞಾನವು ಇಲ್ಲದ ಅಲೆಮಾರಿಗಳು ಇವರುಗಳ ರಾಜಕೀಯ ಯಾಗಗಳಿಗೆ ಹವಿಸ್ಸಾಗುತ್ತಿದ್ದಾರೆ.

ಇಂದು ಜಗತ್ತಿನಾದ್ಯಂತ ಖಾಸಗೀಕರಣ, ಉದಾರೀಕರಣ, ಜಾಗತೀಕರಣ (ಖಾಉಜಾ ಸಂಸ್ಕೃತಿ) ಗಳು ಬರ್ಬರ ದಾಳಿಯಿಟ್ಟಿವೆ. ಅಸಂಖ್ಯಾ ಕಾರ್ಖಾನೆಗಳು ಮುಚ್ಚಿ, ಒಕ್ಕಲುತನ ದಿವಾಳಿಯೆದ್ದು, ನಿರುದ್ಯೋಗ ಬೆಳೆಯುತ್ತಿದೆ. ಕೂಲಿ ಕಾರ್ಮಿಕರು ಒತ್ತಾಯದ ಅಪರಾಧೀಕರಣಕ್ಕೆ ತಳ್ಳಲ್ಪಡುತ್ತಿದ್ದಾರೆ. ಅರೆ ಸ್ಥಿರ ಕುಟುಂಬಗಳು ಕೆಲಸ ಅರಸಿ ಗುಳೇ ಹೊರಡುತ್ತಿವೆ. ಅಪಾರ ಯಾಂತ್ರೀಕರಣದಿಂದಾಗಿ ನಗರಗಳಲ್ಲಿಯೂ ದುಡಿಯುವ ಕೈಗೆ ಕೆಲಸ ಸಿಗುತ್ತಿಲ್ಲ. ಇದರ ನೇರ ಪರಿಣಾಮ ಮಹಿಳೆ ಮತ್ತು ಮಕ್ಕಳ ಮೇಲಾಗುತ್ತಿದೆ. ಮಕ್ಕಳು ಬಾಲಕಾರ್ಮಿಕರಾಗಿ ಹರೆಯದ ಹೆಣ್ಣು ಮಕ್ಕಳು ಮಯ ಮಾರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಮ್ಮ ಪಾರಂಪಾರಿಕ ಸಾಮಾಜಿಕ ವ್ಯವಸ್ಥೆ ಕಾರಣವಾಗಿ ಹುಟ್ಟಿಕೊಂಡಿರುವ ಹತ್ತಾರಿ ಅಲೆಮಾರಿ ಸಮುದಾಯಗಳೊಂದಿಗೆ ಇತ್ತೀಚೆಗೆ ಖಾಉಜಾ ಸಾಂಸ್ಕೃತಿಕ ಧಾಳಿಯಿಂದಾಗಿ ಹೊಸ ಅಲೆಮಾರಿ ಸಮುದಾಯ ನಿರ್ಮಾಣವಾಗುತ್ತಿರುವುದು ಇನ್ನೊಂದು ಚಿಂತೆಗೆ ಕಾರಣವಾಗುತ್ತಿದೆ. ಸ್ವತಂತ್ರ ಭಾರತದ ಸಾರ್ವಜನಿಕ ವಲಯಗಳು ಭರದಿಂದ ಖಾಸಗೀಕರಣ, ತನ್ಮೂಲಕ ಯಾಂತ್ರೀಕರಣಕ್ಕೆ ಬಲಿಯಾಗುತ್ತಿರುವುದರಿಂದ ಕೆಲಸದ ಅವಕಾಶಗಳಂತೂ ಕಡಿಮೆಯಾಗುತ್ತಿರುವುದು ಸರಿಯೇ ಸರಿ. ಮುಕ್ತ ಮಾರುಕಟ್ಟೆಯ ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ನಿರ್ದಿಷ್ಟ ರೂಪದ ಚಾಕಚಕ್ಯತೆಗಳು ಮಾತ್ರ ವ್ಯಾಪಾರೀ ಮೌಲ್ಯಗಳಿಸುತ್ತಿವೆ. ಹೀಗಾಗಿ ಕಂಪ್ಯೂಟರ್ ಇಂಜಿನಿಯರ್, ಮಾಹಿತಿ ತಂತ್ರಜ್ಞಾನಿಗಳು, ಡಾಕ್ಟರ್, ಮ್ಯನೆಜಮೆಂಟ್ ಪರಿಣತರು, ಜಾಹಿರಾತುದಾರರು, ಗ್ಲಾಮರಸ್ ಗಿರಾಕಿಗಳು ಮುಂತಾದವರು ಹೆಚ್ಚಿನ ಲಾಭ ಮತ್ತು ಪ್ರಸಿದ್ಧಿಯ ಹಪಾಹಪಿತನದಿಂದಾಗಿ ಮುಂದುವರಿದ ರಾಷ್ಟ್ರಗಳತ್ತ ಹರಿದು ಹೋಗುತ್ತಿದ್ದಾರೆ. ಅಲ್ಲಿಯೂ ಖಾಯಂ ಸೂರು ಕೆಲಸದ ರಕ್ಷಣೆಯ ಭರವಸೆ ಇಲ್ಲದೆ ಕಂಪನಿಗಳಿಂದ, ಕಂಪನಿಗಳಿಗೆ, ಮೆಟ್ರೊಸಿಟಿಗಳಿಂದ, ಹೈಟೆಕ್ ಸಿಟಿಗಳತ್ತ ಗುಳೇ ಹೊರಡುತ್ತಿದ್ದಾರೆ. ಹೀಗೆ ಜೀವೋಪಾಯಕ್ಕಾಗಿ, ಐಷಾರಾಮಿ ಬದುಕಿಗಾಗಿ ಬಡಿದಾಡುವ ಈ ನವ ಅಲೆಮಾರಿಗಳು ಕೂಡಾ ಗಂಭೀರ ಪ್ರಮಾಣದ ಮಾನಸಿಕ ಕ್ಷೋಭೆ, ಸಿನಿಕತನ, ಆಕ್ರಮಣಶೀಲ ಪ್ರವೃತ್ತಿಗಳಿಗೆ ಬಲಿಯಾಗುತ್ತಿದ್ದಾರೆ. ಪಾರಂಪಾರಿಕ ದೇಶೀಯ ಅಲೆಮಾರಿಗಳ ಹೊಟ್ಟೆಯ ಹಸಿವು, ಒಂದಿಷ್ಟು ಗೌರವ, ಸಾಮಾನ್ಯ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಸೂರು, ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ರಕ್ಷಣೆಯಂಥ ಸಮಸ್ಯೆಗಳು ಒಂದೆಡೆ ಇದ್ದರೆ, ನವ ಅಲೆಮಾರಿಗಳ ಐಷಾರಾಮಿ ಬಿಕ್ಕಟ್ಟು, ಅಸಹಾಯಕತೆ, ತಲ್ಲಣಗಳು ಇನ್ನೊಂದೆಡೆಗಿವೆ. ಒಟ್ಟಾರೆ ಈ ಎರಡು ವಿಧದ ಅಲೆಮಾರಿಗಳು ಉತ್ತಮ, ಸಂತೃಪ್ತ, ಸಮಾಧಾನದ ಬದುಕಿಗಾಗಿ ಒದ್ದಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

* * *