ಕರ್ನಾಟಕದ ಸಾಂಸ್ಕೃತಿಕ ಪರಂಪರೆ ವೈಭವಪೂರ್ಣ. ಜಗತ್ತಿನ ಯಾವುದೇ ಪ್ರದೇಶದಲ್ಲಿರುವಂತೆ ಇಲ್ಲಿಯ ಜನಾಂಗ, ಸಂಸ್ಕೃತಿಗೂ ಜಾನಪದವೇ ತಾಯಿಬೇರು. ನಮ್ಮ ನಾಡಿನ ಜಾನಪದ ಸಾಕಷ್ಟು ವೈವಿಧ್ಯಪೂರ್ಣವಾದುದು ವೈಶಿಷ್ಟ್ಯವಾದುದು ಆಗಿದೆ.

ಭಾರತ ಆದಿವಾಸಿ ಜನಾಂಗಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪಡೆದ ದೇಶವಾಗಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ ಏಳರಷ್ಟು ಆದಿವಾಸಿಗಳಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಪ್ರೋಟೊ ಆಸ್ಟ್ರಾಯಿಡ್ ಮಂಗೋಲಿಡ್ ನೆಗ್ರಿಟೊ ಮತ್ತು ನೊರ್ಡಿಕ್ ವರ್ಗಗಳಿಗೆ ಸೇರಿದ ಆದಿವಾಸಿ ಗುಂಪುಗಳನ್ನು ಇಲ್ಲಿ ಗುರುತಿಸಲಾಗಿದೆ. ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಆದಿವಾಸಿ ಜನಾಂಗಗಳು ತಮ್ಮ ವೈವಿಧ್ಯಮಯ ಸಂಸ್ಕೃತಿಯಿಂದ ವಿದ್ವಾಂಸರ ಆಸಕ್ತಿಯನ್ನು ಕೆರಳಿಸಿದ್ದರೂ ಸರಿಯಾದ ಅಧ್ಯಯನಗಳು ಇನ್ನೂ ನಡೆಯಬೇಕಿದೆ.

ಕರ್ನಾಟಕದಲ್ಲಿ ಸುಮಾರು ೭೪೨೯೩ ಚ.ಮೈಲಿಗಳಷ್ಟು ಅರಣ್ಯಪ್ರದೇಶ ಇದ್ದು ಇಲ್ಲೆಲ್ಲ ೨೬ ಬಗೆಯ ಆದಿವಾಸಿ ಜನಾಂಗಗಳು ಹಂಚಿಹೋಗಿವೆ. ಇವುಗಳಲ್ಲಿ ಆದಿವಾಸಿ ಸ್ಥಿತಿಯಿಂದ ಸುಧಾರಣೆಗೊಳ್ಳುತ್ತಿರುವ ಲಂಬಾಣಿಗಳು, ಕಾಡುಗೊಲ್ಲರು, ಹಾಲಕ್ಕಿ ಗೌಡರು ಮುಂತಾದ ಜನಾಂಗಗಳನ್ನು ಕಾಣಬಹುದು. ಇನ್ನು ಶುದ್ಧ ಆದಿವಾಸಿ ಸ್ಥಿತಿಯಲ್ಲೇ ಉಳಿದ ಜನಾಂಗಗಳನ್ನು ಪಟ್ಟಿ ಮಾಡಬಹುದು. ಬೆಟ್ಟ ಕುರುಬರು, ಜೇನುಕುರುಬರು, ಮುಳ್ಳು ಕುರುಬರು, ಸೋಲಿಗರು, ಎರವರು, ಹಸಲರು, ಇರುಳರು, ಕೊರಗರು, ಮಲೆಕುಡಿಯರು, ಸಿದ್ದಿಯರು, ಗೊಂಡರು, ಮುಂಡರು ಮುಖ್ಯ ಆದಿವಾಸಿಗಳು.

ಕರ್ನಾಟಕದಲ್ಲಿ ಆದಿವಾಸಿಗಳ ಜೊತೆಗೆ ಅನೇಕ ಬಗೆಯ ಅಲೆಮಾರಿ ಜನಾಂಗಗಳು ಕಂಡು ಬರುತ್ತವೆ. ಅವುಗಳಲ್ಲಿ ಹಕ್ಕಿಪಿಕಕಿಯರು, ಕಿಳ್ಳೇಕ್ಯಾತರು, ಬುಡುಬುಡಕಿಯರು, ದೊಂಬಿದಾಸರು, ಕಿನ್ನರಿ ಜೋಗಿಗಳು ಮುಂತಾದವರನ್ನು ಕಾಣಬಹುದು. ಗ್ರಾಮೀಣ ಪ್ರದೇಶದ ಅರೆ ನಾಗರೀಕ ಜನಾಂಗಗಳ ಸಂಪರ್ಕವನ್ನು ಹೊಂದಿದ ಈ ಬುಡಕಟ್ಟುಗಳು ಒಂದು ಸ್ಥಿರವಾದ ಪ್ರದೇಶದಲ್ಲಿ ಉಳಿಯದಿದ್ದರೂ ತಮ್ಮದೇ ಕಸುಬುಗಳಿಂದ ರೈತವರ್ಗವನ್ನು ಅವಲಂಬಿಸಿ ಜೀವಿಸುತ್ತಾರೆ. ಬಯಲ ನಾಡಿನಲ್ಲಿ ಹೆಚ್ಚಾಗಿ ಸಂಚರಿಸುವುದು ಕಂಡುಬರುತ್ತದೆ.

ನಮ್ಮ ನಾಡಿನಲ್ಲಿ ನೂರಾರು ಜನಾಂಗಗಳಿವೆ. ಅವುಗಳಲ್ಲಿ ಕೆಲವು ಊರಲ್ಲಿದ್ದರೆ ಮತ್ತೆ ಕೆಲವು ಕಾಡಿನಲ್ಲಿವೆ. ಇಲ್ಲಿ ಮುಖ್ಯವಾಗಿ ಅವರು ಊರಲ್ಲಿ ಇರಲಿ, ಕಾಡಲ್ಲಿರಲಿ ಅವರು ತಮ್ಮದೇ ಆದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕಾಲದ ಮೇಲಾಟದಲ್ಲಿ ಈ ಎಲ್ಲಾ ಜನಾಂಗಗಳಲ್ಲಿಯೂ ಬದಲಾವಣೆಯ ಬಣ್ಣ ಕಾಣಿಸಿಕೊಂಡಿದ್ದರೂ ಮೂಲ ರೂಪ ರೇಖೆಗಳನ್ನು ಗುರುತಿಸಲು ಇನ್ನೂ ಸಾಧ್ಯವಿದೆ. ಈ ದೃಷ್ಟಿಯಿಂದ ಈ ಒಂದೊಂದು ಜನಾಂಗದ ಬಗೆಗೂ ವಿಶೇಷ ಅಧ್ಯಯನ ನಡೆಸಬೇಕಾಗಿದೆ ಎಂಬುದು ನನ್ನ ಅಭಿಪ್ರಾಯ. ಇಂತಹ ಅಧ್ಯಯನದಿಂದ ಆಗುವ ಪ್ರಯೋಜನವಾದರೂ ಏನು ಎಂದು ಕೆಲವರು ಕೇಳಬಹುದು. ಇಲ್ಲಿ ವಾಸ್ತವವಾಗಿ ನಮ್ಮ ನಾಗರೀಕತೆ ಬೆಳೆದ ಬಗೆಯನ್ನು ಗುರುತಿಸಲು, ಹೊಸದಕ್ಕೆ ಹಳೆಯದು ಎಲ್ಲೆಲ್ಲಿ ಯಾವ ಯಾವ ರೀತಿ ದಾರಿಮಾಡಿಕೊಟ್ಟಿದೆ ಎಂಬುದನ್ನು ಕಂಡುಕೊಳ್ಳಲು, ಒಂದು ವೃಷ್ಟಿ ಮತ್ತು ಸಮಷ್ಟಿಯ ವಭಾವಗಳನ್ನು ಅರಿತುಕೊಳ್ಳಲು ಮತ್ತು ಅವರಲ್ಲಿ ಉಳಿದುಕೊಂಡು ಬಂದಿರುವ ನಂಬಿಕೆ ಮತ್ತು ಆಚರಣೆಗಳು ಇವತ್ತಿನ ಆಧುನಿಕತೆಯೆನ್ನುವ ಬದುಕಿಗೆ ಎಷ್ಟರ ಮಟ್ಟಿಗೆ ಸಂಬಂಧಿಸುತ್ತದೆ ಎಂಬುದನ್ನು ವಿಚಾರ ಮಾಡಲು ಈ ಜನಾಂಗಿಕ ಅಧ್ಯಯನಗಳು ನೆರವಾಗುತ್ತವೆ. ತಲೆ ತಲೆಮಾರುಗಳ ನಂಬಿಕೆ ಮತ್ತು ಅನುಭವಗಳ ಬದಿಯಲ್ಲೇ ಹರಿಯುವ ಜಾನಪದ ವಾಹಿನಿಯನ್ನು ಕುರಿತು ಅಭ್ಯಾಸ ಮಾಡುವುದೇ ಒಂದು ಹೊಸ ಅನುಭವವನ್ನು ತಂದು ಕೊಡುತ್ತದೆ ಎನ್ನಬಹುದು.

ಭಾರತೀಯ ಸಮಾಜ ಹಲವು ಜಾತಿಗಳ ಶ್ರೇಣೀಕೃತ ವ್ಯವಸ್ಥೆಯನ್ನು ಹೊಂದಿದೆ. ವೇದಗಳ ಕಾಲದಲ್ಲಿ ಕೇವಲ ವರ್ಣವ್ಯವಸ್ಥೆ ಇದ್ದು ಜಾತಿಗಳು ಸ್ಮೃತಿಗಳ ನಂತರದಲ್ಲಿ ರೂಪುಗೊಂಡಿರಬೇಕೆಂದು ಇತಿಹಾಸ ಹೇಳುತ್ತದೆ. ಇಲ್ಲಿ ಬಹುಮುಖ್ಯವಾಗಿ ಜಾತಿ ಎಂಬ ಪದ ವೃತ್ತಿಸೂಚಕವಾಗಿಯೂ, ಧರ್ಮ ಸೂಚಕವಾಗಿಯೂ ಮತ್ತು ರಾಷ್ಟ್ರಸೂಚಕವಾಗಿಯೂ ಬಳಕೆಯಾಗಿದೆ. ಇಲ್ಲಿ ಪ್ರತಿಯೊಂದು ಜಾತಿಯೂ ತನ್ನನ್ನು ತಾನು ಇತರ ಗುಂಪಿನಿಂದ ಬೇರ್ಪಡಿಸಿಕೊಂಡು ತನ್ನದೇ ಆದ ಇತಿಹಾಸ, ಜೀವನ ವಿಧಾನ, ನಂಬಿಕೆ, ಆಚರಣೆಗಳನ್ನು ಹೊಂದಿದೆ.

ಇಲ್ಲಿ ಮುಖ್ಯವಾಗಿ ಬದುಕು ಚಲನೆಯನ್ನು ಪಡೆದಿರುವಂಥದ್ದು. ಆದಿಮಾನವನಿಂದ ಹಿಡಿದು ಇವತ್ತಿನ ಆಧುನಿಕ ಮಾನವನವರೆಗೆ ಬರಬೇಕಾದರೆ ಬದುಕು ಪರಿವರ್ತನೆಗೊಳ್ಳುತ್ತಾ ಹಾಗೆಯೇ ಪರಿಷ್ಕಾರಗೊಳ್ಳುತ್ತಾ ಬಂದಿದೆ. ಪರಿಸರದ ಪರಿಮಿತಿಗೆ ಅನುಗುಣವಾಗಿ ಭಾಷೆ ಸಂಸ್ಕೃತಿ ವಿಕಾಸ ಹೊಂದುತ್ತಾ ಬಂದಿದೆ. ಕಾಡಲ್ಲಿ ಗೆಡ್ಡೆ ಗೆಣಸು ತಿಂದು ಬೇಟೆಯಾಡಿ ಗುಹೆಗಳಲ್ಲಿ ಜೀವಿಸುತ್ತಿದ್ದ ಮಾನವ ಇಂದು ಆಕಾಶಕಾಯಗಳತ್ತ ಮುಖ ಮಾಡುವ ಚಾತುರ್ಯವನ್ನು ಪಡೆದುಕೊಂಡಿದ್ದಾನೆ ಎಂದಾಕ್ಷಣ ಇಲ್ಲಿ ಎಲ್ಲವೂ ಎಲ್ಲಾ ದೃಷ್ಟಿಯಿಂದಲೂ ಪ್ರತಿಯೊಬ್ಬರ ಬದುಕು ಬದಲಾಗಿದೆ ಎಂದಲ್ಲ. ಹಳೆಯ ಬದುಕಿನ ಪಳೆಯುಳಿಕೆಗಳಂತೆ ಅಲ್ಲಲ್ಲಿಯೇ ಕಾಣ ಸಿಗುವ ಆದಿವಾಸಿ ಬುಡಕಟ್ಟು ಜನರ ರೀತಿ, ನೀತಿ, ಸಂಸ್ಕೃತಿ ಸಂಪ್ರದಾಯಗಳನ್ನು ಕಂಡರೆ ಅರ್ಥಪೂರ್ಣವಾಗಲಾರದು. ಅಲೆಮಾರಿಗಳಾಗಿ ಹೋದಲ್ಲಿಯೇ ವಸತಿ ಮಾಡಿಕೊಳ್ಳುತ್ತಾ ಬದುಕುವುದೇ ಒಂದು ಸಾಹಸ ವೃತ್ತಿಯಾಗಿ ಭಾವಿಸಿದ ಕೆಲವು ಜನ ಇಂದು ಅಲ್ಲಲ್ಲಿಯೇ ನೆಲೆಯೂರಿ ಬದುಕು ಸಾಗಿಸುತ್ತಿರುವುದು ಸರ್ವವಿಧಿತವಾದರೂ ಕೂಡ ಯಾವುದೇ ರೀತಿಯ ಬದಲಾವಣೆ ಬಯಸದಿರುವುದು ಅಥವಾ ಅಂಥ ಪ್ರೇರಣೆ ಪ್ರಭಾವಕ್ಕೆ ಮೈಬಗ್ಗಿಸಿಕೊಳ್ಳದಿರುವುದು ಆಶ್ಚರ್ಯಕರ ಸಂಗತಿ. ಹಾಗಾಗಿ ಈ ಅಲೆಮಾರಿ ಜನರು ಅವರ ಹಿಂದಿನ ಪಾರಂಪರಿಕ ವೃತ್ತಿಗಳನ್ನೇ ಇಂದಿಗೂ ಅವಲಂಬಿಸಿದ್ದಾರೆ. ಹಾಗಾಗಿ ಈ ಅಲೆಮಾರಿಗಳಲ್ಲಿ ಆರ್ಥಿಕಾಭಿವೃದ್ಧಿ ಅತ್ಯಲ್ಪವಾಗಿದೆ.

ವಾಸಸ್ಥಾನ ಮತ್ತು ಸಾಮಾಜಿಕ ಅನನ್ಯತೆ

ಅಲೆಮಾರಿಗೆ ಜನರಿಗೆ ಇಂಥದ್ದೇ ಎಂಬ ವಾಸಸ್ಥಾನವಿಲ್ಲ. ಇವರಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಹರೆ ಕಡಿಮೆ. ಹಾಗಾಗಿ ಈ ಶ್ರೇಣೀಕೃತ ಸಮಾಜದ ವ್ಯವಸ್ಥೆಯಲ್ಲಿ ಯಾವುದೇ ತರಹದ ಗುರುತಿಸಿಕೊಳ್ಳುವಿಕೆ ಇಲ್ಲ ಹಾಗೂ ಸಮಾಜದ ಮನ್ನಣೆ ಇಲ್ಲ. ಅವರಿಗೆ ನಿರ್ದಿಷ್ಟವಾದ ಸ್ಥಳದ ಪರಿಕಲ್ಪನೆ ಇರುವುದಿಲ್ಲ. ಅವರು ನಿಂತದ್ದೇ ನೆಲ. ಇಲ್ಲಿ ಬಹುಮುಖ್ಯವಾಗಿ ಎಲ್ಲಿ ನೀರಿನ ಆಶ್ರಯ ಸಿಗುವುದೋ ಎಲ್ಲಿ ತಮ್ಮ ಕೆಲಸಕ್ಕೆ ಪೊರಕೆ ಹುಲ್ಲು ಬಳ್ಳಿಗಳು ದೊರೆಯುತ್ತವೆಯೋ ಹಾಗೆಯೇ ಎಲ್ಲಿ ತಮ್ಮ ಸಾಕುಪ್ರಾಣಿಗಳಾದ ಕತ್ತೆ ಹಂದಿಗಳಿಗೆ ಪುಕ್ಕಟೆಯಾಗಿ ಆಹಾರ ನೀರು ಸಿಕ್ಕುತ್ತವೆಯೋ ಅಲ್ಲಿ ಹೋಗಿ ಈ ಜನರು ಡೇರೆ ಹಾಕಿಕೊಂಡು ಬಿಡಾರ ಹೂಡುತ್ತಾರೆ. ಆದರೆ ಸ್ಥಿರ ಸಮುದಾಯಗಳಲ್ಲಿ ಈ ಎಲ್ಲಾ ಅಂಶಗಳು ವಾಸ್ತವ ಬದುಕಿನಲ್ಲಿ ಇರುತ್ತವೆ.

ಹಾಗೆಯೇ ಕೆಲವು ಅಲೆಮಾರಿಗಳು (ಕಿಳ್ಳೇಕ್ಯಾತರು) ಊರ ಹೊರವಲಯದ ಬಯಲು ಜಾಗದಲ್ಲಿ ಈಚಲು ಗಿಡಗಳಿರುವ ಹಳ್ಳದ ಸಮೀಪದಲ್ಲಿ ಹೆಚ್ಚಾಗಿ ಈ ಅಲೆಮಾರಿಗಳು ಬೀಡು ಬಿಡುವುದುಂಟು. ಇವರ ವಸತಿ ತೀರ ಸರಳವಾದದು. ಬಿದಿರುಗಳನ್ನು ನಿಲ್ಲಿಸಿ ಮೇಲೆ ಈಚಲು ಚಾಪೆ ಹೊದಿಸಿ ಹಗ್ಗ ಬಿಗಿದರೆ ತೀರಿತು, ಮನೆ ಸಿದ್ಧ. ಚಿಕ್ಕವಾದ ಈ ಗುಡಿಸಲಿನಲ್ಲಿಯೇ ತಮ್ಮ ಪಾತ್ರೆ-ಪಗಡ, ಹಾಸಿಗೆ-ಹೊದಿಕೆ, ಬಟ್ಟೆ-ಬರೆ ಹಾಗೆಯೇ ವೃತ್ತಿ ಸಾಮಗ್ರಿಗಳಾದ ಬಲೆ, ಚೂರಿ, ಕುಡುಗೋಲು, ಹಗ್ಗ, ಮಕ್ಕಳು-ಮರಿ ಹಾಗೂ ಸಾಕು ಪ್ರಾಣಿಗಳಾದ ನಾಯಿ, ಕೋಳಿ, ಪಕ್ಷಿಗಳನ್ನು ಸೇರಿಸಿಕೊಂಡು ವಾಸಿಸುತ್ತಿದ್ದರು.

ಅಲೆಮಾರಿಗಳ ಬದುಕಿನ ಹೊಸ ಸಂಸ್ಕೃತಿಯನ್ನು ಮುಖಾಮುಖಿಯಾಗಿಸುವುದು ಆ ಮೂಲಕ ಒಂದು ಪ್ರತಿಸಂಸ್ಕೃತಿಯನ್ನು ಹುಟ್ಟು ಹಾಕುವುದನ್ನು ಕಾಣುತ್ತೇವೆ. ಕೆಲವು ಅಲೆಮಾರಿಗಳಲ್ಲಿ (ಕಿಳ್ಳೇಕ್ಯಾತರು) ಗಂಡಸರು ಅಡವಿಗೆ ಹೋಗಿ ಹುಲ್ಲು ಪೊರಕೆಯನ್ನು ಕೊಯ್ದು ತಂದು ಹಾಕಿ ಕಾಡಿನ ಪ್ರಾಣಿ ಪಕ್ಷಿಗಳನ್ನು ಬೇಟೆ ಆಡಲು ಹೋದರೆ, ಹೆಂಗಸರು ಊರಲ್ಲಿ ಕಸಬರಿಗೆ, ತಲೆಪಿನ್ನು, ಪ್ಲಾಸ್ಟಿಕ್ ಕೊಡಪಾನ ಸಾಮಾನು ಮಾರಾಟ ಮತ್ತು ರಿಪೇರಿ ಮಾಡಿ ಕೊಂಡು ಇದರ ಜೊತೆಗೆ ಕಾಡಿಬೇಡಿ ನೀಡಿಸಿಕೊಂಡು ಬಂದು ಉಂಡು ಕಾಲ ನೂಕುತ್ತಾರೆ. ಆ ಊರು ಸಾಕಾಯಿತೆಂದರೆ ಚಾಪೆ, ಪಾತ್ರೆ-ಪಡಗ ಕಟ್ಟಿ ಕತ್ತೆಗಳ ಮೇಲೆ ಹೇರಿಕೊಂಡು ಮುಂದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ.

ವ್ಯಾಪಾರಕ್ಕಾಗಿ ಹೀಗೆ ಅಲೆಮಾರಿಗಳಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ತಿರುಗುವವರಾಗಿದ್ದರೂ ಕೂಡ ತಮ್ಮ ತಮ್ಮ ಹೆಂಡತಿ ಮಕ್ಕಳನ್ನು ಒಂದೆಡೆ ಗುಡಿಸಲುಗಳನ್ನು ಕಟ್ಟಿ ನೆಲೆಯಾಗಿರಿಸುತ್ತಿದ್ದರು. ವ್ಯಾಪಾರಕ್ಕಾಗಿ ಅವರಲ್ಲೇ ಇಂತಿಂಥ ಪ್ರದೇಶಗಳೆಂದು ಹಂಚಿಕೊಳ್ಳುತ್ತಿದ್ದರು. ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಸಂಸಾರದೊಡನೆ ಬಂದು ಸೇರುತ್ತಿದ್ದರಾದರೂ ಮಳೆಗಾಲದಲ್ಲಿ ಮಾತ್ರ ವ್ಯಾಪಾರಕ್ಕೆ ಹೋಗುತ್ತಿರಲಿಲ್ಲ. ಆಗ ಸಣ್ಣ ಪುಟ್ಟ ಕೈಕಸುಬುಗಳಲ್ಲಿ ಹೆಂಗಸರು ಗಂಡಸರು ನಿರತರಾಗುತ್ತಿದ್ದರೂ ಔಷಧಿಗಳಿಗೆ ಬೇಕಾದ ಸಾಮಗ್ರಿಗಳನ್ನೆಲ್ಲಾ ತಂದು ಶೇಖರಿಸಿಕೊಳ್ಳುವುದು ಹಾಗೆಯೇ ಕಾಡಿಗೆ ಹೋಗಿ ಬೇಟೆಯಾಡುವುದನ್ನು ಆ ಸಮಯದಲ್ಲಿ ಮಾಡುತ್ತಾರೆ.

ಹಾಗೆಯೇ ಕೆಲವು (ಗೋಸಾಯಿ) ಅಲೆಮಾರಿ ಜನಾಂಗಗಳು ಅಲೆಮಾರಿತನವನ್ನು ತೊರೆದು ನೆಲೆಯನ್ನು ಕಲ್ಪಿಸಿಕೊಂಡು ಒಂದೆಡೆ ವಾಸಿಸಲು ಆರಂಭಿಸಿದ್ದಾರೆ. ಕೆಲವರು ವಿದ್ಯೆ ಕಲಿತು ಹಿರಿಕಿರಿಯ ಹುದ್ದೆಗಳನ್ನು ಸಂಪಾದಿಸಿಕೊಂಡಿದ್ದಾರೆ. ತಮ್ಮ ಕುಲ ಕಸುಬನ್ನು ಕೆಲವರು ಮುಂದುವರಿಸಿಕೊಂಡು ನಡೆದಿದ್ದರೆ ಇನ್ನೂ ಕೆಲವರು ಅದನ್ನು ತೊರೆದು ವ್ಯಾಪಾರ, ವ್ಯವಸಾಯ, ಸಣ್ಣ ಪುಟ್ಟ ಬೇರೆ ಬೇರೆ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾಗರೀಕತೆಯ ಪ್ರಭಾವ, ಆಧುನಿಕತೆ ಜಾಗತೀಕರಣದ ಪ್ರಭಾವದ ಇವತ್ತಿನ ದಿನಗಳಲ್ಲಿ ಇತರ ಜನಾಂಗಗಳ ಸಂಪರ್ಕದಿಂದ ತಮ್ಮ ಆಚಾರ-ವಿಚಾರ, ಉಡುಗೆ-ತೊಡುಗೆ, ಆಹಾರ- ವಿಹಾರಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾ ನಡೆದಿದ್ದಾರೆ. ಕೆಲವು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಸಮಾಜದ ಸಂಘಟನೆಯನ್ನು ಮಾಡಿಕೊಳ್ಳತೊಡಗಿದ್ದಾರೆ. ಸರಕಾರ ಅವರಿಗಾಗಿ ವಸತಿ ಉದ್ಯೋಗಗಳನ್ನು ಒದಗಿಸುವುದರ ಮೂಲಕ ಅವರೂ ಎಲ್ಲರಂತೆ ಉತ್ತಮ ಬದುಕು ನಡೆಸಲು ಅನುವು ಮಾಡಿಕೊಟ್ಟಿದೆ.

ಹಾಗೆಯೇ ಇನ್ನೂ ಕೆಲವು ಅಲೆಮಾರಿಗಳು (ಪಾತ್ರೋಟಿಗಳು) ಅವರ ಪಾರಂಪರಿಕ ಉದ್ಯೋಗವನ್ನು ತೊರೆಯುತ್ತಿದ್ದಾರೆ. ಗಿರಣಿ ಮತ್ತು ಕಾರ್ಖಾನೆಗಳಲ್ಲಿ ಉದ್ಯೋಗ ದೊರಕಿಸಿಕೊಂಡು ತಮ್ಮ ಜೀವನದಲ್ಲಿ ತೀವ್ರತರ ಬದಲಾವಣೆಗಳನ್ನು ಮಾಡಿ ಕೊಳ್ಳುತ್ತಿದ್ದಾರೆ. ಹಾಗೆಯೇ ಕೆಲವು ಅಲೆಮಾರಿ ಜನರ (ಪಾತ್ರೋಟಿ) ಮೂಲದ ಜಾತಿ ಯಾವುದು ಎಂದು ನಾವು ನಿರ್ಧರಿಸಿ ಹೇಳಲಾಗದ ಸ್ಥಿತಿಯಲ್ಲಿ ಇದ್ದೇವೆ. ಇಂತಹ ಅನಿಶ್ಚಿತ ಸ್ಥಿತಿ ನಮ್ಮಲ್ಲಿರುವ ಕೆಲವಾದರೂ ಬುಡಕಟ್ಟುಗಳಲ್ಲಿ ಈಗಲೂ ಇದೆ ಎಂಬುದು ಜಾತಿ ವ್ಯವಸ್ಥೆಗೆ ಪ್ರಖ್ಯಾತವಾಗಿರುವ ಭಾರತದಲ್ಲಿ ತುಂಬಾ ಸೋಜಿಗದ ಸಂಗತಿ.

ಹಾಗಾಗಿ ಈ ಅಲೆಮಾರಿ ಜನಾಂಗಗಳು ಬಹುರೂಪಿಗಳು. ಇವರು ಪ್ರತಿ ಸಂಸ್ಕೃತಿಯನ್ನು ಹುಟ್ಟು ಹಾಕಿದವರು. ಬದುಕಿನ ಹೊಸ ಸಂಸ್ಕೃತಿಗೆ ಮುಖಾಮುಖಿಯಾಗ ಬಯಸಿದವರು.

ಪರಾಮರ್ಶನಗ್ರಂಥಗಳು

೧. ಕಾಡು ಕಾಂಕ್ರೀಟ್ ಮತ್ತು ಜಾನಪದ – ಹಿ.ಚಿ.ಬೋರಲಿಂಗಯ್ಯ

೨. ಜಾನಪದ ಸಾಹಿತ್ಯ ದರ್ಶನ – ಭಾಗ – ೧೭, ಜನಾಂಗಿಕ ಅಧ್ಯಯನ – ಸೋಮಶೇಖರ್ ಇಮ್ರಾಪುರ

೩. ಕಿಳ್ಳೇಕ್ಯಾತರು – ಬೆನಕನಹಳ್ಳಿ ಜಿ.ನಾಯಕ್

೪. ದೊಂಬಿದಾಸರು – ಜೀ.ಶಂ.ಪರಮಶಿವಯ್ಯ
೫. ಕರ್ನಾಟಕ ಜಾನಪದ – ಹಿ.ಚಿ. ಬೋರಲಿಂಗಯ್ಯ

* * *