ನಾವು ಇವತ್ತು ಅತ್ಯಂತ ಸಂಕೀರ್ಣವಾದ ಸ್ಥಿತ್ಯಂತರ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ನಮ್ಮ ಮೇಲಿನ ಒತ್ತಡಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಒತ್ತಡಗಳು ಅವನೇ ಕೇವಲ ಜಾಗತೀಕರಣದ ಹೆಸರಿನಲ್ಲಿ ಹೊರಗಿನಿಂದ ಬಂದ ಒತ್ತಡಗಳಷ್ಟೇ ಅಲ್ಲ. ನಮ್ಮನ್ನು ಆಳುವ ರಾಜಕಾರಣದ ಅನೇಕ ವಿಪರೀತ ನೀತಿಯ ಒತ್ತಡಗಳೂ ಸಹ ನಮ್ಮನ್ನು, ನಮ್ಮ ಸಂಸ್ಕೃತಿಯನ್ನು, ನಮ್ಮ ಬದುಕನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿವೆ. ಈ ಇಕ್ಕಟ್ಟಿಗೆ ಸಿಕ್ಕಿಸುವ ಸಂದರ್ಭದಲ್ಲಿ, ಆಧುನಿಕ ಸಂದರ್ಭದಲ್ಲಿ ನಾವು ನಮ್ಮ ಸಮುದಾಯಗಳ ಬದುಕನ್ನು ವರ್ತಮಾನ ಕಾಲದಲ್ಲಿ ಹೇಗೆ ಸಹ್ಯವಾಗಿಸಿಕೊಳ್ಳಬೇಕು ಎನ್ನುವ ನೆಲೆಯಲ್ಲಿ ನಾವಿವತ್ತು ಆಲೋಚನೆ ಮಾಡಬೇಕಾಗಿದೆ. ಹೀಗೆ ಆಲೋಚನೆ ಮಾಡುವಾಗ ನಾವು ಕೇವಲ ವರ್ತಮಾನವನ್ನು ಅಷ್ಟೇ ಗಮನದಲ್ಲಿ ಇಟ್ಟುಕೊಳ್ಳುವುದಲ್ಲ, ನಮ್ಮ ಚರಿತ್ರೆಯನ್ನು, ನಮ್ಮ ಸಂಸ್ಕೃತಿ ಬೆಳೆದು ಬಂದ ಬಗೆಯನ್ನು ಗಮನಿಸಬೇಕು. ಇದರ ಹಿನ್ನೆಲೆಯಲ್ಲಿ ನನ್ನ ಪ್ರಬಂಧವನ್ನು ಮಂಡಿಸಲು ಇಚ್ಛಿಸುತ್ತೇನೆ.

ಚಾಂದೋಗ್ಯ ಉಪನಿಷತ್ತಿನಲ್ಲಿ ಒಂದು ಕತೆ ಇದೆ. ಅಲ್ಲಿ ಒಬ್ಬ ಹುಡುಗ ವಿದ್ಯೆಯನ್ನು ಕಲಿಯುವ ಸಲುವಾಗಿ ಒಬ್ಬ ಗುರುವನ್ನು ಹುಡುಕಿಕೊಂಡು ಹೋಗುತ್ತಾನೆ. ಗುರು ಭೇಟಿಯಾದಾಗ, ಆಯಿತಪ್ಪ ನಿನಗೆ ವಿದ್ಯೆಯನ್ನು ಕಲಿಸುತ್ತೇನೆ ಎಂದು ಹೇಳಿ, ನಿನ್ನ ತಂದೆ ಯಾರು, ನಿನ್ನ ಕುಲಗೋತ್ರಗಳೇನು ಎಂದು ಅವನನ್ನು ಕೇಳುತ್ತಾನೆ. ಹುಡುಗ ನನಗೆ ಗೊತ್ತಿಲ್ಲ ಸ್ವಾಮಿ, ಎಲ್ಲ ಹುಟ್ಟಿದೆ, ಎಲ್ಲಿ ಬೆಳೆದೆ, ನನ್ನ ತಂದೆ ಯಾರು, ನನ್ನ ಕುಲಗೋತ್ರಗಳೇನು ಗೊತ್ತಿಲ್ಲ ಅಂತ ನೇರವಾಗಿ ಹೇಳುತ್ತಾನೆ. ನಿನ್ನನ್ನ ಈಗ ಯಾರು ನೋಡಿಕೊಳ್ಳುತ್ತಾರೆ? ನನ್ನ ತಾಯಿ ನೋಡಿಕೊಳ್ಳುತ್ತಾ ಇದ್ದಾಳೆ. ಹಾಗಾದರೆ ನಿನ್ನ ತಾಯಿಯ ಬಳಿ ಹೋಗಿ ನಿನ್ನ ತಂದೆ ಯಾರು? ಕುಲ ಯಾವುದು ಎಂದು ತಿಳಿದುಕೊಂಡು ಬಾ ಎಂದು ಗುರು ಅವನನ್ನು ವಾಪಸ್ಸು ಕಳುಹಿಸುತ್ತಾನೆ – ಆ ಹುಡುಗ ತಾಯಿ ಹತ್ತಿರ ಬಂದು ಕೇಳುತ್ತಾನೆ – ಅಮ್ಮ ಈ ರೀತಿ ನಾನು ವಿದ್ಯೆ ಕಲಿಯಬೇಕೆಂದು ಗುರುವಿನ ಹತ್ತಿರ ಹೋಗಿದ್ದೆ, ಗುರು ಈ ಮಾತನ್ನು ಕೇಳಿದರು – ನನ್ನ ತಂದೆ ಯಾರು? ನನ್ನ ಕುಲ ಯಾವುದು? ಅಂತ. ಅವಳು ಒಂದು ಮಾತನ್ನು ಹೇಳುತ್ತಾಳೆ, ನೋಡಪ್ಪಾ ಈ ಭೂಮಂಡಲದಲ್ಲಿ ಹಕ್ಕಿ ಪಕ್ಷಿಗಳಿಗೆ ತಾವಿದೆ ಆದರೆ ನಮಗೆ ತಾವಿಲ್ಲ, ಈಗ ಇಲ್ಲಿದ್ದರೆ ನಾಳೆ ಇನ್ನೆಲ್ಲೋ ಇರ್ತ್ತೀವಿ. ಹಾಗಾಗಿ ನಾನು ನಿನ್ನನ್ನು ನನ್ನ ಗರ್ಭದಲ್ಲಿ ಧರಿಸುವ ಸಂದರ್ಭದಲ್ಲಿ ನಾಲ್ಕಾರು ಅತಿಥಿಗಳನ್ನು ಸೇವೆ ಮಾಡುತ್ತಿದ್ದೆ. ಹಾಗಾಗಿ ನೀನು ಯಾವ ಅತಿಥಿಯ ಫಲ ಎಂದು ನನಗೆ ಗೊತ್ತಿಲ್ಲ. ಆದರೆ ಇಷ್ಟು ನಿಜ – ನಾನು ನಿನ್ನ ತಾಯಿ, ನೀನು ನನ್ನ ಮಗ. ನನ್ನ ಹೆಸರು ಜಾಬಾಲ, ನಿನ್ನ ಹೆಸರು ಸತ್ಯಕಾಮ. ಇದನ್ನೇ ಹೋಗಿ ನಿಮ್ಮ ಗುರುವಿಗೆ ಹೇಳು ಎಂದು ಹೇಳುತ್ತಾಳೆ. ಇದನ್ನು ಕೇಳಿ ಗುರುವಿಗೆ ಖುಷಿಯಾಗುತ್ತದೆ. ಇಂತಹ ಮಾರ್ಮಿಕವಾದ ವಿಚಾರದಲ್ಲಿ ಇಷ್ಟು ನೇರವಾಗಿ ಸತ್ಯವನ್ನು ಹೇಳುತ್ತಿದ್ದಾನಲ್ಲ. ಆದ್ದರಿಂದ ಇವನು ಬ್ರಾಹ್ಮಣನಿಗೆ ಹುಟ್ಟಿದವನಿರಬೇಕು. ಇವನು ಬ್ರಾಹ್ಮಣನಾದ್ದರಿಂದ ಇವನಿಗೆ ವಿದ್ಯೆಯನ್ನು ಕಲಿಸುವುದೇ ಸರಿ ಎಂದು ಹೇಳಿ ವಿದ್ಯೆಯನ್ನು ಹೇಳಿಕೊಡುತ್ತಾನೆ. ಮುಂದೆ ಅವನು ಮಹಾನ್ ವಿಚಾರವಾದಿಯಾಗುತ್ತಾನೆ. ಸತ್ಯಕಾಮ.

ಈ ಕಥೆಯನ್ನು ಇಲ್ಲಿ ಯಾಕೆ ಉಲ್ಲೇಖಿಸಲು ಇಷ್ಟ ಪಟ್ಟೆ ಅಂದರೆ ಈ ಗುರು ಮತ್ತು ತಾಯಿ ನಮಗೆ ಇಲ್ಲಿ ಎರಡು ಸಮುದಾಯಗಳ ಪ್ರತಿನಿಧಿಗಳಾಗಿ ಕಂಡು ಬರುತ್ತಾರೆ. ಈಗ ನಾವು ಸ್ಥಿರ, ಅಲೆಮಾರಿ ಸಮುದಾಯ ಎಂದು ಏನು ಮಾತಾಡ್ತಾ ಇದೀವಿ, ಈ ಗುರು ಸ್ಥಿರ ಸಮುದಾಯದ ಪ್ರತಿನಿಧಿ, ವೈದಿಕತ್ವದ ಪರಂಪೆಯಲ್ಲಿ ಹರಿದು ಬಂದಿರುವ ಪ್ರತಿನಿಧಿಯಾಗಿ ನಿಲ್ಲುತ್ತಾನೆ. ಆ ಗುರು ಯಾವಾಗಲೂ ತಂದೆಯನ್ನು ಗಮನದಲ್ಲಿಟ್ಟು ಕೊಂಡಿರುತ್ತಾನೆ. ವ್ಯಕ್ತಿತ್ವದ ಸ್ಥಾನಮಾನಗಳು ಮತ್ತು ಸಾಮಾಜಿಕ ಸ್ಥಾನಮಾನಗಳು ತಂದೆಯಿಂದ ನಿರ್ಮಾಣವಾಗುವ ಸಂದರ್ಭದಲ್ಲಿ ಈ ಕಥೆಗಳು ಹುಟ್ಟಿಕೊಳ್ಳುತ್ತವೆ. ತಾಯಿಯಾದವಳು ಒಂದು ಅಲೆಮಾರಿ ಸಮುದಾಯದ ಪ್ರತಿನಿಧಿಯಾಗಿದ್ದಾಳೆ. ಅವಳು ಮಾತೃತ್ವದ ಪ್ರತಿನಿಧಿಯಾಗಿದ್ದಾಳೆ. ಅಂತಃಕರಣ, ಕರುಣೆ ತಾಯ್ತನದ ಪ್ರತಿನಿಧಿಯಾಗಿದ್ದಾಳೆ. ಅವಳಿಗೆ ಮಗುವನ್ನು ಪಾಲಿಸುವ, ಪೋಷಿಸುವ ಜವಾಬ್ದಾರಿ ಇದೆ. ಆದರೆ ತಂದೆಯಾದವನಿಗೆ ಆ ಜವಾಬ್ದಾರಿ ಇಲ್ಲ. ಅವನು ಹೊಣೆಗೇಡಿಯಾದವನು, ಕರ್ತವ್ಯ ಪಂಡಿತನಾದವನು, ಜವಾಬ್ದಾರಿಯಿಂದ ಕಡಿದುಕೊಂಡು ಪಲಾಯನ ಮಾಡಿದಂತಹವನು. ಹಾಗಾಗಿ ಜಾಬಾಲ ಇಲ್ಲಿ ನಮಗೆ ಮುಖ್ಯವಾಗುತ್ತಾಳೆ. ಜಾಬಾಲಳ ಮಗನೇ ವಿಚಾರವಾದಿಯಾಗಿ ಬೆಳೆಯುತ್ತಾ ಹೋಗುತ್ತಾನೆ. ಈ ಎರಡು ಸಮುದಾಯಗಳ ಸಂಘರ್ಷವನ್ನು ನಾವು ಆ ಉಪನಿಷತ್ತಿನಲ್ಲಿ ಗಮನಿಸಬಹುದು.

ಯಾವುದೇ ಒಬ್ಬ ವ್ಯಕ್ತಿ ಅವನು ಯಾವ ಸಮುದಾಯದಲ್ಲಿ ಹುಟ್ಟಿದ್ದಾನೆ ಎಂಬುವುದರ ಮೇಲೆ ಅವನ ಸಾಮಾಜಿಕ ಸ್ಥಾನಮಾನಗಳು ನಿರ್ಣಾಯಕವಾಗುತ್ತಿದ್ದ ಕಾಲದಲ್ಲಿ ಒಬ್ಬ ಸಾಮಾನ್ಯ ಬಾಲಕ ಹಾಗೂ ಆತನ ಹೆತ್ತ ತಾಯಿಯ ಜಾತಿ ಹೀನತೆಯನ್ನು ಹಾಗೂ ಶೀಲ ಪರಿಕಲ್ಪನೆಯನ್ನು ನಿಸ್ಸಂಕೋಚವಾಗಿ ಬತ್ತಲುಗೊಳಿಸುವುದು ಹಾಗೂ ಅದರ ಮೂಲಕ ತಮ್ಮ ನೈತಿಕ ಧೈರ್ಯವನ್ನು ಪ್ರದರ್ಶಿಸುವುದು ಮುಖ್ಯವಾಗುತ್ತದೆ. ಆದರೆ ಬಾಲಕ ಸತ್ಯ ಹೇಳುತ್ತಿದ್ದಾನೆ. ಸತ್ಯ ಹೇಳುವ ಗುಣವು ಬ್ರಾಹ್ಮಣರಿಗೆ ಮಾತ್ರ ಇದೆ. ಆದ್ದರಿಂದ ಸತ್ಯಕಾಮ ಬ್ರಾಹ್ಮಣನ ಮಗನೆಂದು ತೀರ್ಮಾನಿಸಿ ಅವನನ್ನು ಶಿಷ್ಯನನ್ನಾಗಿ ಅಂಗೀಕರಿಸುವ ಗುರುವಿನ ತರ್ಕ ಇದೆಯಲ್ಲಾ ಅದು ಸ್ಥಿರ ಸಮುದಾಯಗಳು ಅಲೆಮಾರಿ ಸಮುದಾಯಗಳಿಗೆ ಶತಶತಮಾನಗಳಿಂದ ಮಾಡಿಕೊಂಡು ಬಂದಿರುವಂತಹ ವಂಚನೆಯಾಗಿದೆ. ವಾಸ್ತವವಾಗಿ ನಾನು ಮೇಲೆ ಉಲ್ಲೇಖಿಸಿದ ಕತೆಯು ಎರಡು ವಿಭಿನ್ನ ಸಮುದಾಯಗಳ ಮೌಲ್ಯಗಳ ಸಂಘರ್ಷದ ಕತೆ. ಬ್ರಾಹ್ಮಣ ಗುರು ವೈದಿಕ ಧರ್ಮದ ಪುರುಷ ಪ್ರಧಾನದಿಂದ ಪ್ರಭಾವಿತನಾದವನು. ಮೇಲು ಜಾತಿಗೆ ಮಾತ್ರ ವಿದ್ಯೆ ಕೊಡಬೇಕೆಂದು ನಂಬಿಕೆ ಉಳ್ಳವನು. ಬ್ರಾಹ್ಮಣನಲ್ಲದವನು ಸತ್ಯ ಹೇಳಲಾರ ಎಂಬ ಪೂರ್ವಾಗ್ರಹ ಪೀಡಿತನು. ಅವನ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿಗೆ ಹುಟ್ಟಿದ ಮಗ ಸತ್ಯವಂತನಾಗಿದ್ದರೆ ಅವನ ತಂದೆ ವಿಷಯ ಲಂಪಟನಾಗಿದ್ದರೂ, ಹೊಣೆಗೇಡಿಯಾಗಿದ್ದರೂ, ಪಲಾಯನವಾಗಿದ್ದರೂ ಬ್ರಾಹ್ಮಣನೆನೆಸಿಕೊಳ್ಳುತ್ತಾನೆ. ಆದರೆ ಒಬ್ಬ ಅಲೆಮಾರಿ ಹೆಣ್ಣು ಮಗಳು ಮಮತೆ, ಅಂತಃಕರಣ, ಕರುಣೆಯ ಮೂರ್ತಿಯಾಗ ಜವಾಬ್ದಾರಿಯನ್ನು ಅರಿತವಳಾಗಿದ್ದರೂ, ಅವಳ ಸದ್ಗುಣಗಳಿಗೆ ಕುರುಡಾಗಿದೆ ಗುರುವಿನ ಒಳಗಣ್ಣು. ಗುರು ಇಂತಹ ಸ್ಥಿರ ಸಮುದಾಯಗಳು ಎತ್ತಿ ಹಿಡಿಯುವ ಮೌಲ್ಯಗಳ ಪ್ರತಿನಿಧಿಯಾಗಿ ಕಂಡು ಬಂದರೆ, ಜಾಬಾಲಳದು ಅಲೆಮಾರಿ ಸಮುದಾಯಗಳು ಎತ್ತಿ ಹಿಡಿಯುವ ಮೌಲ್ಯಗಳಾಗಿದ್ದವು. ಈಗ ನೀವೇ ಹೇಳಿ ಯಾರ ನಡತೆ ಸರಿಯಾದುದು? ನಿಮಗೆ ಮಹಾಭಾರತದ ಏಕಲವ್ಯ, ದ್ರೋಣ, ಅರ್ಜುನರ ಕತೆ ತಿಳಿದಿದೆ. ದ್ರೋಣ, ಏಕಲವ್ಯರ ಸಂಬಂಧ ಅತ್ಯಂತ ಆದರ್ಶವೆಂದು ವೈದಿಕ ಪುರಾಣಗಳು ಹೊಗಳುತ್ತಿವೆ. ಆದರೆ ಏಕಲವ್ಯ ಸ್ವಪ್ರಯತ್ನದಿಂದ ಕಲಿತ ವಿದ್ಯೆಯನ್ನು ರೋಣ ಅರ್ಜುನರು ಅಪಹರಿಸಿದ್ದ ರೀತಿ ಎಂತಹುದು? ನಯವಂಚನೆಯಿಂದ ಕೂಡಿದ, ಕೊಡಲಿಯಿಂದ ಕತ್ತು ಕೊಯ್ಯುವಂತಹ ಕೆಲಸ. ಕೆಳಜಾತಿಯವರಿಗೆ ವಿದ್ಯೆ ಕಲಿಯುವ ಹಕ್ಕಿಲ್ಲ, ಅವರು ಕಲಿತರೂ ಅದನ್ನು ನಾಶಗೊಳಿಸುವ ಹಕ್ಕು ವೈದಿಕತ್ವಕ್ಕೆ ಇದೆ ಎಂಬುದು ವೈದಿಕ ಸಮುದಾಯದ ಆದರ್ಶ. ಮತ್ಸ್ಯಾವತಾರದ ಕತೆಯೂ ಕೂಡ ಇದಕ್ಕೆ ಹೊರತಾದುದಲ್ಲ. ವಿದ್ಯಾಕಾಂಕ್ಷಿಯಾಗಿ ಬಂದ ಕಾಡಿನ ಸಂಸ್ಕೃತಿಯ ತರುಣನೊಬ್ಬ ಅಪಹರಿಸಿದ ವೇದಗಳು, ತಾಳೆಗರಿಗಳ ಕಟ್ಟುಗಳನ್ನು ಪಡೆಯುವುದಕಕಾಗಿ ಅವನನ್ನೇ ಅಮಾನವೀಯವಾಗಿ ಕೊಲೆ ಮಾಡಿದ ವೈದಿಕತ್ವದ ಕಟ್ಟುಕತೆಯೇ ಮುಂದೆ ಮತ್ಸ್ಯಾವತಾರದ ಪುರಾಣವಾಗಿ ರೂಪಗೊಂಡಿದೆ.

ಅಲೆಮಾರಿ ಸಮುದಾಯ ವಾಸ್ತವ ಮತ್ತು ವೈರುಧ್ಯಗಳನ್ನು ನಾವು ಇವತ್ತು ಈ ನಮ್ಮ ಭಾರತೀಯ ಏಕಾಕಾರೀ ಸಂಸ್ಕೃತಿಯ ಹಿನ್ನೆಲೆಯಲ್ಲಿ ಪರಿಭಾವಿಸುವ ಜರೂರು ಇದೆ. ಸಮುದಾಯ ಎಂಬುದು ಒಂದು ಸಾಮಾಜಿಕ ಘಟಕ, ಸದಾ ಚಲನಶೀಲವಾದುದು. ಹೊರ ನೋಟಕ್ಕೆ ಗೋಚರಿಸದಿದ್ದರೂ ಅಂತರ್ ಚಲನಶೀಲತೆ ಎಂಬುವುದು ಇದ್ದೇ ಇರುತ್ತವೆ. ಈ ಚಲನದಲ್ಲಿ ನೇರವಾದ ಚಲನೆ ಸಮಮಟ್ಟದ ಚಲನೆಗಳು ನಡೆಯುತ್ತಲೇ ಇರುತ್ತವೆ. ಕೆಳ ಸಮುದಾಯಗಳು ಸಂಸ್ಕೃತೀಕರಣದ ಮೂಲಕ ಮೇಲೇಳುವುದು ನೇರ ಚಲನೆಯಾದರೆ, ಒಂದೇ ಸಮುದಾಯದೊಳಗಿನ ಬಳ್ಳಿ ಬೆಡಗುಗಳನ್ನು ಮರೆತು ಒಂದಾಗುವುದು, ಸಮಮಟ್ಟದ ಚಲನೆ. ಈ ಚಲನಶೀಲತೆಯಲ್ಲಿ ಸ್ಥಿರ, ಸಂಚಾರಿ ಎಂಬುವುದು ಇಲ್ಲವೇ ಇಲ್ಲ. ಸಮುದಾಯವು ವ್ಯವಸ್ಥೆಯನ್ನು ತನ್ನಲ್ಲಿ ತನೇ ನಿರ್ಮಿಸಿಕೊಳ್ಳುತ್ತಾ ಹೋಗುತ್ತದೆ. ಹಾಗೆಯೇ ವ್ಯವಸ್ಥೆಯನ್ನು ಒಡೆದು ಕಟ್ಟುವ ಕೆಲಸವನ್ನು ಸಮುದಾಯಗಳು ನಿರಂತರವಾಗಿ ಮಾಡುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಸ್ಥಿರ ಸಮುದಾಯ ಇದ್ದರೆ ಅದು ಮೃತ ಸಮುದಾಯ ಎಂದು ಅರ್ಥ. ಆದರೆ ಆಯಾ ಕಾಲಕ್ಕೆ ಸ್ಥಿರವಾದ ಮೌಲ್ಯಗಳು ಇದ್ದೇ ಇರುತ್ತವೆ. ಅವು Constant ಆದಂತಹವು ಮತ್ತು ಈ ಮೌಲ್ಯಗಳು ಕೂಡ ಸಾಮಾಜಿಕ ಮೌಲ್ಯಗಳಲ್ಲಿ ನಿರಂತರವಾಗಿ Checks and Balance ಗಳಿಗೆ ಒಳಗಾಗುತ್ತಲೇ ಹೋಗುತ್ತವೆ. ಸ್ಥಿರ ಸಮುದಾಯದ ಕಲ್ಪನೆಯನ್ನು ನಾವು ಅಖಿಲ ಭಾರತೀಯ ಕಲ್ಪನೆಯಲ್ಲಿ ಹೇಳುತ್ತಿರುವುದು. ಈ ಪರಿಕಲ್ಪನೆಯಲ್ಲಿ ನಮ್ಮ ಭಾರತೀಯ ಸಂದರ್ಭದಲ್ಲಿ ವೈದಿಕ ಸಮುದಾಯವೇ ಸ್ಥಿರವಾದುದು. ದೇಶವನ್ನು ನುಂಗಲು ಬಳಸುವಂತಹುದು, ಆದರೆ ಭಾರತೀಯ ಪರಿಕಲ್ಪನೆ ಎನ್ನುವಂತಹುದು ದೇಶವನ್ನು ಬೆಳೆಸುವಂತಹುದು ಮತ್ತು ಬಹು ಸಂಸ್ಕೃತಿ ಹಿನ್ನೆಲೆಯಲ್ಲಿ ಪ್ರತಿಪಾದಿಸುವಂತಹುದು. ಬಹುಸಂಸ್ಕೃತಿಯ ಹಿನ್ನೆಲೆಯಲ್ಲಿ ಚಿಂತನೆ ಮಾಡುವಾಗ ವೈದಿಕ ಸಂಸ್ಕೃತಿ ಯಾವತ್ತಿಗೂ ವಾಸ್ತವವಾಗಿ ಸಂಸ್ಕೃತಿ ಅಲ್ಲ. ಭಾರತೀಯ ಎಂದರೆ ಬಹುಜನಾಂಗೀಯ, ಬಹುಭಾಷೆಯ, ಬಹುಸಂಸ್ಕೃತಿಯ ಒಂದು ಸ್ಥಿತಿ. ಭಾರತೀಯತೆಗೆ ಧಕ್ಕೆ ತರುವಂತಹುದು. Pan Indian Concept, ಈ ಆಡಳಿತಾತ್ಮಕ ಅಖಿಲ ಭಾರತೀಯ ಕಲ್ಪನೆ ಎನ್ನುವುದು ಹೊಸದೊಂದು ಇಂಡಿಯಾದ ಡಿಸ್ಕವರಿಗೆ ಸಜ್ಜಾಗಿರುವ ಕೆಲ ಶಕ್ತಿಗಳ ಪಂಥ ಎನ್ನುವುದಾದರೆ ಅಖಿಲ ಭಾರತೀಯ ಎನ್ನುವುದ, ಅನಾರೋಗ್ಯಕರವಾದುದು ಮತ್ತು ಮಾರಕವಾದುದು. ಚೈನು, ಚೂರಿ, ದೊಣ್ಣೆ ಇಂತಹವುಗಳಲ್ಲಿ ಹುದುಗಿರುವಂತಹುದು. ಸಮುದಾಯವು ನಾವು ಚರಿತ್ರೆಯನ್ನು ಗಮನಿಸಿದಂತೆ ಗಂಗಾನದಿಯ ಬಯಲಿನಲ್ಲಿ ತನ್ನ ಉಗಮವನ್ನು ಕಂಡಿತು. ವೈದಿಕ ಸಮುದಾಯಗಳ ಲೈಂಗಿಕ ನೆಲೆ, ಆರ್ಥಿಕ ನೆಲೆ, ಸಾಂಸ್ಕೃತಿಕ ನೆಲೆಗಳು ಸಹ ತಮ್ಮ ಅಸ್ತಿತ್ವವನ್ನು ಕಂಡು ಕೊಂಡಿದ್ದು ಈ ಗಂಗಾನದಿಯ ಬಯಲು ಪ್ರದೇಶದಲ್ಲಿ. ಕೃತಕ ಮೌಲ್ಯಗಳನ್ನು ಹುಟ್ಟು ಹಾಕಿದ್ದು ಇಲ್ಲೇ. ಹಾಗೆಯೇ ಸಮುದಾಯದ ಚರಿತ್ರೆ ಎಂದರೆ ಇವತ್ತಿನ ದಿನಗಳಲ್ಲಿ ಅಗ್ರಹಾರದ ವೈದಿಕ, ಬಸದಿಯ ಜೈನ, ದೇಗುಲದ ಬೌದ್ಧ ಮತ್ತು ಮಠಗಳ ಶೈವ ಇವುಗಳ ಏಳುಬೀಳಿನ ಚರಿತ್ರೆಯೇ ಸಮುದಾಯಗಳ ಚರಿತ್ರೆಯಾಗಿದೆ. ಇವುಗಳ ಒಳಗೊಳಗೆ ನಡೆಯುತ್ತಿರುವ ವೈವಿಧ್ಯಮಯ ಸಂಘರ್ಷಗಳನ್ನು ಗಮನಿಸಿದಾಗ ಅದೇ ಒಂದು ರೋಚಕ ಇತಿಹಾಸವಾಗಿ ಕಂಡು ಬರುತ್ತದೆ. ಭಾರತದ ಸಂದರ್ಭದಲ್ಲಿ ಬಹಳ ಪ್ರಮುಖವಾದುದೆಂಬುದರೆ ಜಾತಿ ಸಮಾಜ. ಈ ಜಾತಿ ಸಮಾಜ ಇತರ ಸಮುದಾಯಗಳ ಜೊತೆ ನಿರಂತರ ಮುಖಾಮುಖಿ ಹೊಂದುತ್ತಿರುವುದನ್ನು ಚರಿತ್ರೆಯಲ್ಲಿ ನೋಡಬಹುದು. ಚಾರ್ವಾಕ ಬೌದ್ಧ, ಜೈನ, ವೀರಶೈವ ಸಮುದಾಯಗಳಲ್ಲೂ. ಹೀಗೆ ಇವೆಲ್ಲವೂ ಮುಖಾಮುಖಿಯಾದ ನೆಲೆಗಳು. ಸ್ಥಳೀಯ ಮಟ್ಟದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಸಮುದಾಯಗಳು ಮುಖಾಮುಖಿಯಾಗುತ್ತಲೇ ಬಂದಿವೆ. ತನ್ನೊಂದಿಗೆ ಸಂಘರ್ಷಿಸುವ ಎಲ್ಲವನ್ನು ವಿಲೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ವೈದಿಕ ಸಮುದಾಯಗಳು ನಿರಂತರವಾಗಿ ಇತಿಹಾಸದುದ್ದಕ್ಕೂ ನಡೆಸುತ್ತಲೇ ಬಂದಿವೆ. ಜೈನ ಧರ್ಮವನ್ನು ಆ ಪೋಷಣೆ ತೆಗೆದುಕೊಂಡ ಈ ಸಮುದಾಯದ ಹಿಡಿತದಿಂದ ತಪ್ಪಿಸಿಕೊಂಡು ಬೌದ್ಧ ಧರ್ಮ ಬೇರೆ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದೆ. ಚಾರ್ವಕವಂತೂ ಪ್ರತಿಸಂಸ್ಕೃತಿಯಾಗಿ ಬೆಳೆದು ನಿಂತು ಸದಾ ಸೆಡ್ಡು ಹೊಡೆಯುತ್ತಲೇ ಇದೆ. ವೈದಿಕತ್ವದ ಪ್ರಭಾವಳಿ ಮತ್ತು ಪ್ರಭುತ್ವದ ಬೆಂಬಲವನ್ನು ಕಿತ್ತು ಹಾಕುವ ಸಲುವಾಗಿ ನಿರಂತರ ಹೋರಾಟ ನಡೆಸಿದ ವಿಲೀನ ಸಮುದಾಯಗಳನ್ನೆಲ್ಲಾ ತುಳಿದು ಸುಲಿಯುವ ಘೋರ ಆರ್ಥಿಕ ರಾಜಕೀಯ ಕ್ರಮದ ಮೇಲೆ ಸ್ಥಿರವಾಗಿ ಬೆಳೆದು ಬಂದದ್ದು ಈ ನಾಡಿನ ಏಕಾಕಾರಿ ಸಂಸ್ಕೃತಿ. ಈ ಸಂಸ್ಕೃತಿ ಬೌದ್ಧ ಮತ್ತು ಜೈನ ಧರ್ಮಗಳನ್ನು ಈ ನಾಡಿನಲ್ಲಿ ಬೆಳೆಯಲು ಬಿಡಲಿಲ್ಲ. ಬೌದ್ಧ ಧರ್ಮ ಹೊರ ನಾಡಿನಲ್ಲಿ ನೆಲೆ ಕಂಡುಕೊಂಡರೆ, ಜೈನಧರ್ಮಕ್ಕೆ ಕೊನೆಗೆ ಎಲ್ಲಿಯೂ ತಾವಿಲ್ಲದೆ ಕಡೆಗೆ ಜಾತಿಯಾಗಿ ಪರಿಣಮಿಸಿ ಹೇಳಿಕೆಯ ಮಟ್ಟದಲ್ಲಷ್ಟೇ ಉಳಿದುಕೊಂಡಿತು.

ಹನ್ನೆರಡನೇ ಶತಮಾನದ ಚಳವಳಿಯಲ್ಲೂ ಸಹ ನೆಲಕ್ಕೆ ನಾಲಿಗೆ ಮೂಡಿ ಬಂದಂತೆ ಭೋರ್ಗರೆದು ಬಂದಂತಹ ವೀರಶೈವ ಸಂಸ್ಕೃತಿಯು ತನ್ನ ಆಂತರ್ಯದಲ್ಲಿ ಹುದುಗಿದ್ದ ವೈರುಧ್ಯಗಳಿಂದಾಗಿ ಕಾಲಾಂತರದಲ್ಲಿ ಪ್ರತಿಗಾಮಿ ತತ್ವವಾಗಿ ಬೆಳೆಯಿತು. ಆದರೆ ಈ ಎಲ್ಲವುಗಳು ಬದುಕಿದ್ಧ ಕಾಲದಲ್ಲಿ ಶ್ರಮಿಕ ಜನಸಮೂಹ ಅನ್ನುವುದೊಂದು ಇತ್ತಲ್ಲ ಅದರ ಅಸ್ತಿತ್ವದ ಬಗ್ಗೆ ಯಾರು ಮಾತನಾಡಿದ್ದಾರೆ? ಯಾವುದೇ ಆರಕ್ಕೇರದ ಮೂರಕ್ಕಿಳಿಯದ ಈ ಶ್ರಮಿಕ ಸಮೂಹ ಪಕ್ಕ ಜಾನಪದ ಸಮುದಾಯ. ವಾಸ್ತವ ಸಮುದಾಯ ಎನ್ನುವುದಿದ್ದರೆ ಇದು. ಈ ಬಹುಸಂಸ್ಕೃತಿಯ ಸಂದರ್ಭದಲ್ಲಿ ಜಾನಪದ ಸಂಸ್ಕೃತಿಯೇ ನೇರವಾದ ವಾಸ್ತವ ಸಮುದಾಯ. ಈ ಸಮುದಾಯವು ವೈದಿಕ ಸಮುದಾಯಗಳೊಂದಿಗೆ ನಿರಂತರವಾಗಿ ಚರ್ಚೆ, ಪ್ರಶ್ನೆ, ಸಂವಾದಗಳನ್ನು ಎತ್ತುತ್ತಲೇ ಬಂದಿದೆ. ಅದೇ ರೀತಿಯಲ್ಲಿ ದಿವ್ಯ ನಿರ್ಲಕ್ಷೆಯನ್ನು ಪ್ರದರ್ಶಿಸುತ್ತಲೂ ಬಂದಿದೆ. ಬೇಕಾದಾಗ ಪಡೆದು ಬೇಡವಾದಾಗ ತಿರಸ್ಕರಿಸಿದೆ. ಈ ಸಮುದಾಯದಲ್ಲಿ ಅವಶ್ಯಕವಾದ ಹಾಗೂ ಅನಾವಶ್ಯಕವಾದ Protective laws ಗಳಿಲ್ಲ. ಆದರೆ ಸ್ಥಿರ ಸಮುದಾಯಗಳಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕಾನೂನು ದ್ದೇ ಇರುತ್ತದೆ. ಬಹು ಸಂಸ್ಕೃತಿಗಳು ಇವತ್ತಿಗೂ ವೈದಿಕ ಸಂಸ್ಕೃತಿಯ ವಿರುದ್ಧ ನೆಲೆಯಲ್ಲಿ ಕೆಲಸ ಮಾಡುತ್ತಲೇ ಬಂದಿವೆ. ವೈದಿಕ ಸಮುದಾಯವು ಸಸ್ಯಾಹಾರದ ಬಗ್ಗೆ ಪ್ರತಿಪಾದಿಸಿದರೆ ಜನಪದರ ಸಮುದಾಯ ಯಾವಾಗಲೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಂಸಾಹಾರ ಮತ್ತು ಸಸ್ಯಹಾರಗಳೆರಡನ್ನೂ ತನ್ನಪಾಡಿಗೆ ತಾನು ಅನುಭೋಗಿಸುತ್ತಲೇ ಬಂದಿದೆ. ಮೋಕ್ಷ ಎನ್ನುವುದು ವ್ಯವಸ್ಥಿತ ಸಮುದಾಯಕ್ಕೆ ಕೊನೆಯ ಹಾಗೂ ಜೀವನದ ಪರಮ ಗುರಿಯಾದರೆ, ಜನಪದರ ಸಂಸ್ಕೃತಿ ಯಾವತ್ತಿಗೂ ಮೋಕ್ಷದ ಬಗ್ಗೆ ತಲೆಕೆಡಿಸಿಕೊಂಡದ್ದಿಲ್ಲ. ಕರುಣ ಬಂದರೆ ಕಾಯೋ, ವರುಣ ಬಂದರೆ ಹೊಯ್ಯೋ ಕಲ್ಯಾಣದ ಕರುಣೆ ಬಸವಣ್ಣ ಎನ್ನುವ ಸಮಚಿತ್ತ ಅವರದು. ಇವು ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದೇ ದೂರಕ್ಕೂ ಬಿಡದೆ ಬೇಕಾದಾಗ ಬಳಸಿಕೊಂಡು ಬೇಡವಾದಾಗ ಬಿಟ್ಟು ಉದಾಸೀನವಾಗಿ ಬೆಳೆದುಕೊಂಡು ಬಂದ ಸಮುದಾಯಗಳು. ಸ್ಥಿರ ಸಮುದಾಯದಂತಹ ಮೌಲ್ಯಗಳು ಇವುಗಳಿಗೆ ಪರಮ ಆದರ್ಶಗಳೇನೂ ಆಗಿರಲಿಲ್ಲ. ಆದರೆ ಇಂತಹ ದೇಸಿ ಸಮುದಾಯಗಳ ಅವೈದಿಕ ಪರಂಪರೆಗಳ ಜ್ಞಾನಧಾರೆಗೆ ಶತಶತಮಾನಗಳ ಅನುಭವ ಇತ್ತು. ವೃತ್ತಿ ಕೌಶಲ್ಯವಿತ್ತು. ಜ್ಞಾನದ ಹೊಳೆ ಇತ್ತು. ಇದನ್ನು ಕಂಡ ಸ್ಥಿರ ಸಮುದಾಯ ಇವುಗಳಲ್ಲಿ ಅನುಕೂಲವಾದವುಗಳನ್ನು ತನ್ನ ಪರಂಪರೆಗೆ ಸೇರಿಸಿಕೊಂಡು ಪ್ರಯೋಜನ ಪಡೆದಿರುವ ಹುನ್ನಾರಗಳನ್ನು ಇತಿಹಾಸದುದ್ದಕ್ಕೂ ನಡೆಸಿರುವುದನ್ನು ಕಾಣುತ್ತೇವೆ.

ಸಮುದಾಯದ, ರಾಜಕೀಯ, ಸಾಮಾಜಿಕ, ಆರ್ಥಿಕ, ವೈದಿಕಶಾಹಿಯ ವಿಚಾರಗಳನ್ನು ವೈದಿಕಶಾಹಿ ಸೂತ್ರಗಳಿಗೆ ಅನುಗುಣವಾಗಿಯೇ ಹೆಣೆಯಲಾಗಿದೆ. ವ್ಯಾತ್ಸಾಯನ, ಮನು ಕೌಟಿಲ್ಯನಂತಹವರು ಇದಕ್ಕೆ ತಮ್ಮ ಶಕ್ತಿಯನ್ನೆಲ್ಲ ಧಾರೆ ಎರೆಯಲು ಸಿದ್ಧರಾಗಿದ್ದರು. ಮನುಷ್ಯ ಮನುಷ್ಯರ ನಡುವೆ ಅಂತರವನ್ನು ಸೃಷ್ಟಿಸಿ ಬಹು ಜನರನ್ನು, ಬಹು ಜನ ಸಂಸ್ಕೃತಿಯನ್ನು ತುಳಿದು ಸುಲಿಗೆ ಮಾಡುವ ಸಲುವಾಗಿ ಮೇಲ್ವರ್ಗ ವೇದಾಂತವನ್ನು ಸೃಷ್ಟಿಸಿತು. ಪುರೋಹಿತಶಾಹಿಯನ್ನು ಓಲೈಸುವ ಪ್ರಭುತ್ವದ ನೀತಿಗೆ ಆಧಾರವನ್ನು ಕಲ್ಪಿಸುವ ಸಲುವಾಗಿ ಕೌಟಿಲ್ಯನ ಅರ್ಥಶಾಸ್ತ್ರ ಹುಟ್ಟಿಕೊಂಡಿತು. ಸ್ತ್ರೀಯರಿಗಿದ್ದ ಪ್ರಾಧಾನ್ಯತೆಯನ್ನು ಮಸುಕುಗೊಳಿಸುವ ಸಲುವಾಗಿ ಮನುಸ್ಮೃತಿ ಹುಟ್ಟಿಕೊಂಡಿತು. ಸ್ಮೃತಿಕಾರರು ಕಸುಬುಗಳನ್ನು ಜಾತಿಗಳನ್ನಾಗಿ ವಿಂಗಡಿಸಿ, ಒಂದಕ್ಕಿಂತ ಇನ್ನೊಂದು ಕಡೆಯೆಂದು ಶ್ರೇಣೀಕೃತ ಸಮಾಜವನ್ನು ಹುಟ್ಟು ಹಾಕಿದರು. ತಮ್ಮ ಬಯಕೆಗಳನ್ನು ಈಡೇರಿಸುವ ಸಲುವಾಗಿ ವೇದ-ಮಂತ್ರಗಳನ್ನು ಸೃಷ್ಟಿಸಿದರು. ಈ ವೇದ-ಮಂತ್ರಗಳನ್ನು ನಾವು ಸ್ಥಿರ ಸಮುದಾಯ ಎಂದು ಕರೆಯುವ ವೈದಿಕ ಸಮುದಾಯ ‘ತಾಮವರ್ಸಿ’ ಎಂದೇ ಕರೆಯುತ್ತದೆ. ಅಂದರೆ ಬಯಕೆಗಳ ಸುರಿಮಳೆ ಎಂದರ್ಥ. ಈ ಬಯಕೆಗಳ ಸುರಿಮಳೆಯಾದರೂ ಎಂತಹದ್ದು? ಆಹಾರ, ಹಸುಗಳು, ಗಂಡು ಮಕ್ಕಳು, ಜಲ, ಜಯ, ಸಂಪತ್ತು ಇತ್ಯಾದಿ, ಆದರೆ ನಮಗೆ ಬಿಟ್ಟದ್ದು ಪಾಪ-ಪುಣ್ಯ, ಸ್ವರ್ಗ-ನರಕ, ಮೋಕ್ಷ-ಸದ್ಗತಿ-ಇಂತಹ ಅಂಧಶ್ರದ್ಧೆಯ ಕುರುಡು ಮೌಲ್ಯಗಳನ್ನು. ಇಂತಹ ವೈದಿಕ ಸಮುದಾಯಗಳ ಜಾಣ್ಮೆಯನ್ನು ಅರಿಯದ ನಾವು ಶತಶತಮಾನಗಳಿಂದಲೂ ಇದನ್ನೇ ನಿಜವೆಂದು ಭ್ರಮಿಸಿದ್ದೇವೆ. ಈಗ ಈ ಸಂಚನ್ನು ಸ್ಫೋಟಿಸುವ ಕಾಲ ಹತ್ತಿರ ಬಂದಿದೆ. ಮನು ವಿಧವಾ ವಿವಾಹದ ವಿರೋಧಿ, ನಿಯೋಗದ ವಿರೋಧಿ. ನಿಯೋಗವು ಕ್ಷೇತ್ರದ ಪ್ರಾಧಾನ್ಯತೆಯನ್ನು ಎತ್ತಿ ಹಿಡಿಯುವ ಪದ್ಧತಿಯಾಗಿತ್ತು. ಆದರೆ ಸ್ತ್ರೀ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಹೊರಟ ಮನು ನಿಯೋಗವನ್ನು ತಿರಸ್ಕರಿಸಿದನು. ವಿಧವಾ ವಿವಾಹವು ಬುದ್ಧಿವಂತರಿಗೆ ಸಮ್ಮತವಲ್ಲ ಎಂದು ಮನು ಹೇಳುವುದನ್ನು ಗಮನಿಸಿದಾಗ ಅವೈದಿಕ ಸಮುದಾಯಗಳಲ್ಲಿ ಅದು ರೂಢಿಯಲ್ಲಿತ್ತು, ಅದು ಪಾಪಕೃತ್ಯ ಎಂದು ಅವರು ಪರಿಗಣಿಸಿರಲಿಲ್ಲ ಎಂಬುವುದು ತಿಳಿದು ಬರುತ್ತದೆ. ವಿಧವೆಯರು ಬ್ರಹ್ಮಸ್ಮೃತಿಯನ್ನು ಪಾಲಿಸಬೇಕು ಎಂಬ ಉಗ್ರ ಪ್ರತಿಪಾದನೆಯ ವಿರುದ್ಧ ನಮ್ಮ ಅವಧಿ ಪರಂಪರೆಗಳು ಕೊಡಿಕೆ ಪದ್ಧತಿಯನ್ನು ಕಂಡುಕೊಂಡಿದ್ದವು. ಧರ್ಮ, ಅರ್ಥ, ಕಾಮಗಳು ಮನುಕುಲದ ಕಲ್ಯಾಣವೆಂದು ಭಾವಿಸಿದ್ದು ಸ್ಥಿರ ಸಮುದಾಯ. ಈ ಸಮುದಾಯಗಳ ಪ್ರತಿನಿಧಿಯಾಗಿ ಹುಟ್ಟಿಕೊಂಡವರು ವಾತ್ಸಾಯನ, ಮನು, ಕೌಟಿಲ್ಯ. ಇವರ ಒತ್ತಡಗಳಿಗೆ ಒಳಗಾದವರು ಮತ್ತು ಹೊರಹಾಕಲ್ಪಟ್ಟವರು ಅಲೆಮಾರಿ ಸಮುದಾಯ. ಆದರೆ ಇವೆಲ್ಲವನ್ನು ಸಾರಾಸಗಟಾಗಿ ಕಿತ್ತೆಸೆದು ಬೆಳೆದು ನಿಂತಿರುವುದು ಅಲೆಮಾರಿ ಸಮುದಾಯ. ಕೌಟಿಲ್ಯನ ಅರ್ಥಶಾಸ್ತ್ರವು ಪುರೋಹಿತ ಸಾಮ್ರಾಜ್ಯಶಾಹಿಯಾದುದು, ವೈದಿಕ ಸಮುದಾಯಗಳನ್ನು ಬಲಪಡಿಸುವುದಕ್ಕೆ ಹುಟ್ಟಿಕೊಂಡಿದ್ದು ಹಾಗೂ ಪ್ರಾಪಂಚಿಕ ಅಭ್ಯುದಯಗಳನ್ನು ಪಡೆಯುವಂತಹ ಸಾಧನಗಳಾದ ಸಂಪತ್ತು, ಅಧಿಕಾರಗಳನ್ನು ಪ್ರತಿಪಾದಿಸುವಂತಹದ್ದು. ಬದುಕು ಅತ್ಯಂತ ಮುಖ್ಯ ಎಂದು ಭಾವಿಸಿದ್ದು ಅಲೆಮಾರಿ ಸಮುದಾಯ. ವಾತ್ಸಾಯನನ ಅನುಸಾರ ಜೀವನ ಅನಿಶ್ಚಿತವಾದುದು. ವ್ಯಕ್ತಿಯು ತನ್ನ ಜೀವನದಲ್ಲಿ ತನ್ನ ಅನುಕೂಲಕ್ಕೆ ತಕ್ಕಂತೆ ತನ್ನ ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಬಹುದಾಗಿತ್ತು. ಆದರೆ ಅಲೆಮಾರಿ ಸಮುದಾಯವು ಜೀವನಕ್ಕೆ ಪರಮ ಪ್ರಾಧಾನ್ಯತೆ ನೀಡಿದ್ದರಿಂದ ಯಾವತ್ತಿಗೂ ಜೀವನವನ್ನು ಅನಿಶ್ಚಿತ ಎಂದು ಭಾವಿಸಿದ್ದಿಲ್ಲ. ವರ್ಣವ್ಯವಸ್ಥೆಯನ್ನು ಮೇಲು ಕೀಳು ಎಂದು ಪ್ರತಿನಿಧಿಸದೇ ಸಮಾಜಕ್ಕೆ ಅಗತ್ಯವಿದ್ದ ಶ್ರಮವಿಭಜನೆಯನ್ನು ಪ್ರತಿಪಾದಿಸಿದ್ದು ವೈದಿಕ ಸಮಾಜವಾದರೆ, ಇವೆಲ್ಲವನ್ನು ಮೀರಿ ತನ್ನ ವೃತ್ತಿಕೌಶಲ್ಯವನ್ನು ಪ್ರತಿಕ್ಷಣಕ್ಕೆ ಬೆಳೆಸುತ್ತಾ ಹೋದದ್ದು ಅಲೆಮಾರಿ ಸಮುದಾಯ. ಸಾಂಪ್ರದಾಯಿಕ ಸಮಾಜ ಜ್ಞಾನದ ಅಧಿಕಾರವನ್ನು, ಶಸ್ತ್ರಾಸ್ತ್ರಗಳ ಅಧಿಕಾರವನ್ನು, ಸಂಪತ್ತಿನ ಅಧಿಕಾರವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿತು. ಮನು, ಬೌದ್ಧಾಯನ, ವಿಷ್ಣು, ವಶಿಷ್ಟ ಮುಂತಾದವರ ಅಭಿಪ್ರಾಯದಲ್ಲಿ ಹೆಣ್ಣು ತನ್ನ ಶೀಲವನ್ನು ಕಾಪಾಡಿಕೊಳ್ಳಬೇಕಾಗಿದೆ. ‘ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂದು ಸಾರಿದ ಮನು ಬಾಲ್ಯ ವಿವಾಹವನ್ನು ಪೋಷಿಸಿದನು. ಸ್ತ್ರೀ ಧನ ಪದ್ಧತಿಯನ್ನು ಎತ್ತಿ ಹಿಡಿದನು. ವಿಧವಾ ವಿವಾಹ ಪದ್ಧತಿಯನ್ನು ನಿರಾಕರಿಸಿ ಸತಿ ಪದ್ಧತಿಯನ್ನು ಪ್ರೋತ್ಸಾಹಿಸಿದನು. ವೈದಿಕ ಸಮುದಾಯಗಳು ಸಾಮಾಜಿಕ ಸಂಸರ್ಗ, ತಿನ್ನು, ಉಣ್ಣುವುದರ ಮೇಲೆ, ವೃತ್ತಿಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದವು. ಕೆಳ ವರ್ಗಗಳಿಗೆ ಗುಡಿ-ಗೋಪುರಗಳನ್ನು, ನಿಷೇಧಿಸಿದರು. ನೀರು, ಕೆರೆ-ಬಾವಿ ನಿಷೇಧ ಏರಿದರು. ಆಯಾ ಜಾತಿಗೆ ಸೇರಿದ ಜನ ಅವರದೇ ಕಸುಬು ಕೈಗೊಳ್ಳಬೇಕೆ ಯಾವ, ವೈವಾಹಿಕ ನಿರ್ಬಂಧಗಳು, ವೈದಿಕ, ಧಾರ್ಮಿಕ ದೌರ್ಬಲ್ಯ ಬಳಕೆ, ಗ್ರಾಹ್ಮಣ ಭಾಸುರ ಎಂಬ ವಿಷಯವನ್ನು ಎಣಿಸಿದ್ದು ವೈದಿಕ ಸಮುದಾಯ. ಆದರೆ ಇವೆಲ್ಲವನ್ನು ಮೀರಿ ನಿಂತಿದ್ದು ಅಲೆಮಾರಿ ಸಮುದಾಯ. ಅಲೆಮಾರಿ ಸಮುದಾಯಗಳಲ್ಲಿ ಇವತ್ತಿಗೂ ಸ್ತ್ರೀಧನವನ್ನು ನಿಷೇಧಿಸಿದೆ. ಸ್ತ್ರೀ ಧನ ತೆಗೆದುಕೊಂಡೆರೆ ಸ್ತ್ರೀ ಸಂಪತ್ತು ಸಾರಲಾಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದೆ. ವಿಧವಾ ವಿವಾಹವನ್ನು ನಿರಾಕರಿಸಿದ್ದರಿಂದ ಕೊಡಿಕೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಹಾಗೂ ಹೆಣ್ಣಲ್ಲಿ ಅತ್ಯಂತ ಗೌರವ ಪ್ರೀತಿಯನ್ನು, ಹೆಣ್ಣು ಹುಟ್ಟಿದರೆ ಪುಣ್ಯ ಎಂಬ ನಂಬಿಕೆಯನ್ನು ನಾವು ಅಲೆಮಾರಿ ಸಮುದಾಯಗಳಲ್ಲಿ ಗುರುತಿಸಬಹುದು.

ವೇದ ಪೂರ್ವ ಯುಗದಿಂದಲೂ ಈ ದೇಶದಲ್ಲಿ ಬಹು ಜನ ವರ್ಗಗಳು ಬಾಳಿಕೊಂಡು ಬಂದಿವೆ. ಹರಪ್ಪ ಮಹೆಂಜೋದಾರೋ ಸಂಸ್ಕೃತಿ ಮತ್ತು ನಾಗರಿಕತೆಗಳ ಬಗ್ಗೆ ಉದ್ದ ಉದ್ದ ಮಾತನಾಡುವ ನಮ್ಮ ಇತಿಹಾಸಕಾರರು ಅದೇ ಕಾಲದಲ್ಲಿ ಬಾಳಿ ಬದುಕಿದ್ದ ಬಹು ಜನರ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ. ಸ್ಥಳೀಯ ವರ್ಗಗಳು ಈ ಸಂಸ್ಕೃತಿಗೆ ಕೊಡುಗೆ ನೀಡಿಲ್ಲವೇ? ಅವರೇನು ಅವತ್ತು ಕಟ್ಟಿದ ಸ್ನಾನ ಗೃಹಗಳಿಗೆ ಮಣ್ಣು ಹೊತ್ತವರೇ, ಅಥವಾ ಮೋರಿಗಳಿಗೆ ಕಲ್ಲು ಹೊತ್ತವರೇ, ಅವರದೇ ಆದ ಸಾಮಾಜಿಕ ಸಾಂಸ್ಕೃತಿಕ ಕೊಡುಗೆ ಎಂಬುವುದಿಲ್ಲವೇ, ವೈದಿಕಪರ ಚರಿತ್ರಕಾರರು ಇತಿಹಾಸದುದ್ದಕ್ಕೂ ಕಟ್ಟಿರುವ ಈ ಕಣ್ಣು ಪಟ್ಟಿಯನ್ನು ಈ ದಿನ ಕಿತ್ತು ಹಾಕಬೇಕಾಗಿದೆ. ಅಲೆಮಾರಿ ಗೋವಳರಾಗಿ ಭಾರತಕ್ಕೆ ಕಾಲಿರಿಸಿದ ಆರ್ಯರಿಗೆ ನೇಗಿಲು ಎಂದರೆ ಏನೆಂಬುವುದೇ ಗೊತ್ತಿರಲಿಲ್ಲ. ವೈದ್ಯ ಮಂತ್ರ, ತಂತ್ರದ ಅರಿವಿರಲಿಲ್ಲ. ಯೋಗದ ತಿಳುವಳಿಕೆಯಂತೂ ಮೊದಲೇ ಇರಲಿಲ್ಲ. ಆದರೆ ಇವೆಲವನ್ನು ಕಲಿತದ್ದು ಎಲ್ಲಿಂದ ಯಾರಿಂದ? ವೈದಿಕರ ವೇದಗಳಲ್ಲಿ ಇವತ್ತಿಗೂ ಕಂಡು ಬರುವ ಬಹುತೇಕ ಪದಗಳು ದ್ರಾವಿಡ ಮತ್ತ ಮುಂಡಾ ಜನ ಸಮುದಾಯಗಳ ಭಾಷೆಗಳಿಂದ ಪಡೆದುಕೊಂಡಿರುವಂತಹವು. ಗೋವಳರಾಗಿದ್ದವರು ಕೃಷಿಗೆ ವಿಕಾಸಗೊಂಡ ನಂತರವೇ ಹರಪ್ಪ ಮಹೆಂಜೋದಾರೋ ನಗರದ ಬದುಕು ನಿರ್ಮಾಣಗೊಂಡಿದ್ದು ಅದುವರೆಗಿನ ಕಾಲಘಟ್ಟದಲ್ಲಿ ಅವರಿಗೆ ಜ್ಞಾನದ ವಿವಿಧ ನೆಲೆಗಳನ್ನು ಧಾರೆ ಎರೆದವರು ಈ ನಾಡಿನ ಸ್ಥಳೀಯ ಜನವರ್ಗಗಳು, ಈ ಸ್ಥಳೀಯ ವರ್ಗಗಳೇ ಅಲೆಮಾರಿ ಸಮುದಾಯಗಳು, ನಮ್ಮ ಕಿರು ವರ್ಗಗಳು, ಈ ಕಿರು ಸಮುದಾಯಗಳು ಆಕ್ರಮಣಕಾರರಿಗೆ ಎಲ್ಲವನ್ನು ಕಲಿಸಿಕೊಟ್ಟವು. ಆದರೆ ನಂತರ ನಡೆದದ್ದು ತಾವು ಸ್ಥಳೀಯರಿಂದ ಕಲಿತದ್ದೆಲ್ಲವನ್ನು ತಮ್ಮ ಅನುಕೂಲಕ್ಕೆ, ಸ್ವಹಿತಾಸಕ್ತಿಗೆ ತಕ್ಕಂತೆ ತಿರುಚಿದರು, ಪರಿವರ್ತಿಸಿದರು, ಪುನರ್‌ರಚಿಸಿದರು, ಇವೆಲ್ಲವೂ ತಮ್ಮದೇ ಜ್ಞಾನ ಎಂದು ಹೇಳಿ ತರಾಕರು ತೆಗೆದರು. ಅಲ್ಲ ಎಂದವರ ವಿರುದ್ಧ ಪ್ರಭುತ್ವವನ್ನು ಚೂ ಬಿಟ್ಟರು. ಅಲೆಮಾರಿ ಸಮುದಾಯಗಳು ವಾತ್ಸಾಯನ, ಮನು, ಕೌಟಿಲ್ಯನ ಒತ್ತಡಗಳಿಗೆ ಒಳಗಾಗಿ ಹೊರ ಬಂದ ಸಮುದಾಯಗಳು ಅಂದರೆ ಹೊರ ಹಾಕಲ್ಪಟ್ಟ ಬಳಸಿ ಬಿಸಾಡಲ್ಪಟ್ಟ ಜನ ವರ್ಗಗಳು. ನಾಗರಿಕ ಸಮುದಾಯಗಳಿಂದ ದೂರವಿದ್ದು ತನ್ನದೇ ಆದ ಅನನ್ಯತೆಯನ್ನು ರೂಢಿಸಿಕೊಂಡಿರುವ ಈ ಸಮುದಾಯಗಳು ಸ್ವತಂತ್ರ ಪ್ರಿಯರು ಸ್ವಚ್ಛಂದ ಜೀವಿಗಳು, ಕಟ್ಟುಪಾಡುಗಳಿಗೆ ಒಳಗಾಗದವರು ಮತ್ತು ಶ್ರಮಿಕರು ಮತ್ತು ಸ್ಥಿರ ಸಮುದಾಯಗಳಂತೆ ವ್ಯಾಪಕತೆಯ ರೂಪವುಳ್ಳದೇ ಇರುವವರು. ಆದರೆ ಸ್ಥಿರ ಸಮುದಾಯಗಳಿಗೆ ಗೋಚರಿಸದ ಸಾಮಾಜಿಕ ಐಕ್ಯತೆ ಬಹುಜನ ಸಮಾಜದಲ್ಲಿ ಇರುತ್ತದೆ.

ಪ್ರಕೃತಿಯಲ್ಲಿ ಅವರು ಕಾಣುವ ದೈವತ್ವ ಸಮುದಾಯದಲ್ಲಿನ ರಚನಾತ್ಮಕ ಅಂಶಗಳಿಗೆ ಮೂಲ ಕಾರಣಗಳಾಗಿವೆ. ಅಲೆಮಾರಿ ಸಾಮುದಾಯಿಕ ದೇಸಿ ಆಹಾರ ಪದ್ಧತಿ, ವೈದ್ಯ ವಿಧಾನಗಳು ಗಮನಾರ್ಹವಾದುವು. ಕರ್ನಾಟಕ ಸಂದರ್ಭದಲ್ಲಿ ಅನೇಕ ಅಲೆಮಾರಿ ಅರೆಅಲೆಮಾರಿ ಸಮುದಾಯಗಳು ಕಂಡು ಬರುತ್ತವೆ. ಆದರೆ ಇವೆಲ್ಲವೂ ಸ್ವತಂತ್ರ್ಯ ಗುಂಪುಗಳಾಗಿ ಬದುಕುತ್ತಾ ತಮ್ಮ ಜೀವನ ಕ್ರಮ, ನಂಬಿಕೆ, ಸಂಪ್ರದಾಯ ಆಚರಣೆಗಳಲ್ಲಿ ಸ್ವಂತಿಕೆಯನ್ನು ಕಾಯ್ದುಕೊಂಡು ಬಂದಿವೆ. ಪ್ರತಿಯೊಂದು ಗುಂಪು ತನ್ನ ಸ್ವತಂತ್ರ್ಯ ಅಸ್ತಿತ್ವವನ್ನು ಕಾಯ್ದುಕೊಳ್ಳುವಲ್ಲಿ ಸದಾ ಕಾರ್ಯನಿರಂತರವಾಗಿರುತ್ತವೆ. ಸ್ಥಿರ ಸಮುದಾಯದೊಂದಿಗೆ ಮುಖಾಮುಖಿಯಾಗುತ್ತಲೇ ತನ್ನತನವನ್ನು ಉಳಿಸಿಕೊಳ್ಳಲು ಸಂಘರ್ಷ ನಿರತವಾಗಿರುತ್ತದೆ. ನಗರೀಕರಣದ ಪ್ರಕ್ರಿಯೆಯಲ್ಲಿ ಕಂಡು ಬರದ ಐಕ್ಯತೆಯಾಗಲಿ, ಸಮಷ್ಟೀ ಬದುಕಾಗಲಿ ಇಂತಹ ಸಮುದಾಯಗಳಲ್ಲಿ ಇನ್ನೂ ಜೀವಂತವಾಗಿದೆ. ಆ ಕಾರಣದಿಂದಾಗಿಯೇ ಭಾರತೀಯ ಸಮಾಜ ಮತ್ತು ಭಾರತೀಯ ಸಮುದಾಯ ಮತ್ತು ಭಾರತೀಯ ಸಂಸ್ಕೃತಿಯನ್ನು ಹಿಂದುತ್ವದ ಕನ್ನಡಕದಿಂದ ನೋಡುವುದನ್ನು ಕೈ ಬಿಟ್ಟು ಬಹುಮುಖಿ ನೆಲೆಯಲ್ಲಿ ನೋಡುವ ಕ್ರಮವನ್ನು ಮತ್ತು ಪ್ರತಿಯೊಂದು ಸಮುದಾಯದ ಪ್ರತ್ಯೇಕ ಅಸ್ತಿತ್ವವನ್ನು ಅದರ ಎಲ್ಲಾ ದೇಶೀ ಜ್ಞಾನ ಪರಂಪರೆಯೊಂದಿಗೆ, ದೇಶೀ ಸತ್ವದೊಂದಿಗೆ ಅರ್ಥಮಾಡಿಕೊಳ್ಳಬೇಕಾದುದು ಇವತ್ತಿನ ದಿನಗಳಲ್ಲಿ ಹೆಚ್ಚು ಮಹತ್ವದ್ದಾಗಿದೆ. ಅಲೆಮಾರಿ ಸಮುದಾಯದಲ್ಲಿ ಕಂಡು ಬರುವ ಒಳಾಡಳಿತ ವ್ಯವಸ್ಥೆ ತೀರಾ ವಿಶಿಷ್ಟವಾದುದು. ತಮ್ಮೊಳಗಿನ ನ್ಯಾಯ ವ್ಯವಸ್ಥೆ ಸರಳವಾಗಿದ್ದುಕೊಂಡು ತಮ್ಮ ತಮ್ಮ ಸಮುದಾಯಗಳ ಬೇಕು-ಬೇಡಗಳನ್ನು ಅರ್ಥಮಾಡಿಕೊಳ್ಳುವ ಸಾಮಾಜಿಕ ಕಾರ್ಯಗಳಿಗೆ ವಿಧಿ-ನಿಷೇಧ ಹೇರುವ, ಅಪರಾಧಿಗಳಿಗೆ ದಂಡ ವಿಧಿಸುವ ನ್ಯಾಯ ಪಂಚಾಯಿತಿಗಳು ಇಲ್ಲಿವೆ. ಇವರನ್ನು ದೈವದವರು, ಪಂಚರು, ಸರ ಪಂಚರು, ಕೋಲಕಾರರು ಎಂದೆಲ್ಲಾ ಕರೆಯುತ್ತಾರೆ. ಸಮುದಾಯದ ಶಾಂತಿಯುತ ಬದುಕಿನ ವ್ಯವಸ್ಥೆಗೆ ಇವರ ಒಳಾಡಳಿತ ಪೂರ್ವ ಹೊಣೆಯಾಗಿದೆ. ಧರ್ಮ, ವಿವಾಹ, ವ್ಯಭಿಚಾರ, ಅಪರಾಧಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಈ ಪಂಚಾಯಿತಿ ನಿಭಾಯಿಸುತ್ತದೆ. ಅವರದೇ ಆದ ಕಟ್ಟೆ ಮನೆಗಳಿರುತ್ತವೆ. ಈ ಕಟ್ಟೆ ಮನೆಗಳಲ್ಲಿ ಬರುವಂತ ಕೋಲುಕಾರ, ಗುರಿಕಾರ, ಪಟ್ಟೆಕಾರರಿರುತ್ತಾರೆ. ಅಲೆಮಾರಿ ಸಮುದಾಯಗಳ ನ್ಯಾಯಪದ್ಧತಿ ಮತ್ತು ಶಿಕ್ಷಣ ವಿಧಾನವೂ ಸಹ ರೋಚಕವಾದವುಗಳು, ಅಪರಾಧಿಯ ಮೀಸೆ, ತಲೆ ಬೋಳಿಸುವುದು, ಮುಖಕ್ಕೆ ಕಪ್ಪು ಮಸಿ ಬಳೀಯುವುದು, ಕತ್ತೆಯ ಮೇಲೆ ಮೆರವಣಿಗೆ, ಸಗಣಿ ರಾಡಿ ಎರಚುವುದು, ಕೊರಳಿಗೆ ಚಪ್ಪಲಿ ಹಾಕುವುದು ಗುಂಪಿನವರಿಂದ ಉಗಿಸುವುದು, ದನಕುರಿಗಳ ದಂಡ ಹಾಕುವುದು ಇತ್ಯಾದಿ ವಿಧಾನಗಳು ತಪ್ಪು ಮಾಡಿದವರು ತಿದ್ದಿಕೊಳ್ಳಲು ಸಹಕಾರಿಯಾಗುತ್ತವೆ. ಅಲೆಮಾರಿ ಸಮುದಾಯಗಳ ಜನವರ್ಗ ಶ್ರಮಿಕರು, ಕಷ್ಟ ಸಹಿಷ್ಣುಗಳು ಆರೋಗ್ಯವಂತರು, ಇತರರ ಬಗ್ಗೆ ಅನುಮಾನ ಪ್ರವೃತ್ತಿ ಉಳ್ಳವರಾದರೂ ಸಹ ನಂಬಿಕೆಗೆ ಅರ್ಹರು ಮತ್ತು ಕ್ರಿಯಾಶೀಲರು. ಇವರಂತೆಯೇ ಇವರ ಬುದ್ಧಿಬಲ ವೈವಿಧ್ಯಮಯವಾದುದು. ಇದುವರೆಗೂ ನಮಗೆ ಸಿಕ್ಕಿರುವಂತಹ ಮಾನವ ಕುಲಶಾಸ್ತ್ರೀಯ ಮಾಹಿತಿಗಳು ವಸಾಹತು ಕಾಲದ ಮಾಹಿತಿಗಳಿಗಿಂತಲೂ ಭಿನ್ನವಾದುವುಗಳಾಗಿವೆ. ಇವುಗಳಿಗೆ ತಮ್ಮದೇ ಆದ ಸಾಂಸ್ಕೃತಿಕ ಅನನ್ಯತೆ ಮತ್ತು ಸಂಕೀರ್ಣತೆ ಇದೆ. ಈ ಸ್ಥಿರ ಸಮುದಾಯ ಮತ್ತು ಅಲೆಮಾರಿ ಸಮುದಾಯಗಳ ನಡುವೆ ನಡೆಯುವ ಮುಖಾಮುಖಿಗಳು, ಜನಾಂಗ ಸಂಘರ್ಷವಾಗಿರಬಹುದು, ಶಿಷ್ಟ ಪರಿಶಿಷ್ಟ ಸಂಘರ್ಷವಾಗಿರಬಹುದು, ಇಲ್ಲವೇ ಜಾತಿಯ ಅಧಿಕಾರ ಸಂಘರ್ಷವಿರಬಹುದು, ಈ ಸಂಘರ್ಷಗಳ ನಡುವೆ ಯಾವಾಗಲೂ ಸ್ಥಿರ ಸಮುದಾಯಗಳು ಅಲೆಮಾರಿ ಸಮುದಾಯಗಳನ್ನು ತಮ್ಮ ಅಂತರಂಗಕ್ಕೆ, ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಸದಾ ಅಪನಂಬಿಕೆ, ಸಂಶಯದಿಂದಲೇ ನಡೆಸಿಕೊಂಡು ಬಂದಿವೆ. ಇದರ ಜೊತೆ ಒಡನಾಟದ ನಿಯಂತ್ರಣವನ್ನು ಹೇರಿಕೊಂಡಿವೆ. ನೈಸರ್ಗಿಕ ತೊಂದರೆಗಳು, ಸ್ಥಿರ ಸಮುದಾಯಗಳು ನಿರ್ಲಕ್ಷ್ಯ ತಿರಸ್ಕಾರ, ಪಟ್ಟ ಭದ್ರ ಹಿತಾಸಕ್ತಿಗಳ ಕಿರುಕುಳಗಳ ನಡುವೆಯೂ ತಮ್ಮ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಕಾಪಾಡಿಕೊಂಡು ಬಂದಿರುವ ಈ ಸಮುದಾಯಗಳಲ್ಲಿನ ಪ್ರತಿಯೊಂದು ಗುಂಪಿಗೂ ಪೌರಾಣಿಕ ಹಿನ್ನೆಲೆ ಎನ್ನುವುದು ಇದ್ದೇ ಇದೆ. ಆದಿಮ ಪುರಾಣ, ಶಿಷ್ಟ ಪುರಾಣಗಳಿವೆ. ಇವು ಆಯಾ ಸಮುದಾಯಗಳ ಹುಟ್ಟುಗಳಿಗೆ ಸಂಬಂಧಿಸಿದುವುಗಳೇ ಆಗಿದೆ. ಇವರ ಪ್ರಸರಣದ ನೆಲೆಗಳು ಭಾರತದಾದ್ಯಂತ ಗೋಚರಿಸುತ್ತವೆ. ಚರಿತ್ರೆಯ ಪೂರ್ವಕ್ಕೆ ಅಲೆಮಾರಿ ಸಮುದಾಯಗಳ ಪ್ರಾಚೀನತೆಗಳು ಚಲಿಸುತ್ತವೆ. ಇವರ ಕುಲಗೋತ್ರಗಳು ಹತ್ತು ಹಲವು ಪುರಾಣ ವ್ಯಕ್ತಿಗಳೊಂದಿಗೆ ತಳುಕು ಹಾಕಿಕೊಂಡಿವೆ. ಕುಲಚಿಹ್ನೆಗಳು, ದೇವತೆಗಳು, ಇವರದೇ ಆಚರಣೆಗೆ, ವಿಧಿನಿಷೇಧಗಳಿವೆ. ಇವರ ಸ್ಥಳಾವರಣ, ಭೌಗೋಳಿಕತೆ, ಬ್ರಹ್ಮಾಂಡ, ಎಲ್ಲವೂ ರೈಲು ನಿಲ್ದಾಣ, ಬಸ್ ನಿಲ್ದಾಣಗಳ ಆಜುಬಾಜು ಹಳೆಯ ಛತ್ರಗಳು ಊರಾಚೆಗಿನ ಪಾಳು ಮನೆಗಳು ಗುಡಿತೋಪುಗಳು, ಬಯಲುಗಳು, ಇವರ ವಸತಿ ವಿನ್ಯಾಸ, ಗುಡಿ, ಗೋಪುರ, ಟೆಂಟುಗಳು ಹೀಗೆ ಈ ನೆಲೆಯಲ್ಲಿ ಬದುಕುವ ಅಲೆಮಾರಿ ಸಮುದಾಯಗಳು ತಾವು ಇರುವ ಸ್ಥಳದಲ್ಲಿಯೇ ದೈವ, ಹುಟ್ಟು, ಬದುಕು, ಸಾವಿನ ಸೂತಕಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಆಧುನಿಕ ಕಾಲದಲ್ಲೂ ತಮ್ಮ ಕುಲ ಪದ್ಧತಿಗಳನ್ನು ಉಳಿಸಿಕೊಂಡು ಬಂದಿವೆ. ಜೀವನಾವರ್ತನ ಮತ್ತು ವಾರ್ಷಿಕಾವರ್ತನ ಘಟನೆಗಳ ಕ್ರಿಯಾ ವಿಧಿಗಳನ್ನು ನೆರವೇರಿಸುತ್ತಲೇ ಇದೆ. ವಂಶಾವಳಿಯ ಬೆಡಗುಗಳು, ಬಳಿಗಳು, ಗೋತ್ರಗಳನ್ನು ಅನುಸರಿಸುತ್ತಲೇ ಬಂದಿವೆ. ಸ್ಥಿರ ಸಮುದಾಯಗಳಲ್ಲಿರುವಂತೆ, ಅಲೆಮಾರಿ ಸಮುದಾಯಗಳಲ್ಲಿ ಕೌಟುಂಬಿಕ ಬೆಡಗುಗಳನ್ನು ಗುರುತಿಸಬಹುದು, ಕೊಡುಕೊಳ್ಳುವಿಕೆಯ ವಿಚಾರದಲ್ಲಿ ಈ ಬೆಡಗುಗಳು ಇಲ್ಲವೆ ಬಳಿಗಳು ಗಮನಾರ್ಹ ಪಾತ್ರ ವಹಿಸುತ್ತವೆ. ಮತೀಯ ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಅಲೆಮಾರಿ ಸಮುದಾಯಗಳಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಮತ್ತು ಅವಿಭಕ್ತ ಕುಟುಂಬ ಪದ್ಧತಿ ರೂಢಿಯಲ್ಲಿದೆ. ಹೆಣ್ಣಿನ ಬಗ್ಗೆ ಗೌರವವಿರಿಸಿಕೊಂಡಿರುವ ಸಮುದಾಯಗಳು, ಹೆಣ್ಣಿಗೆ ತೆರಕೊಟ್ಟು ಮದುವೆಯಾಗುವುದು, ಹೆಣ್ಣು ಹುಟ್ಟಿದ ಮನೆ ತಣ್ಣಗೆ ಇರುತ್ತದೆ ಎಂದು ಭಾವಿಸುವುದು. ಹೆಣ್ಣು ಹುಟ್ಟಿದಾಗ ಸಂಭ್ರಮಿಸುವುದು ವಿಶೇಷವಾಗಿದೆ. ಬಹುಪತಿತ್ವ ಮತ್ತು ಬಹುಪತ್ನಿತ್ವ, ವಿಧವಾ ವಿವಾಹಗಳೆಲ್ಲವೂ ನಮಗೆ ಅಲೆಮಾರಿ ಸಮುದಾಯಗಳಿಗೆ ಬಹಳ ವಿಶಿಷ್ಟವಾಗಿ ಕಂಡು ಬರುತವೆ. ಕೂಡಿಕೆ ಅಲೆಮಾರಿ ಸಮುದಾಯಗಳಲ್ಲಿ ಕಂಡು ಬರುವ ವಿಶಿಷ್ಟ ಅಂಶ. ಗಂಡ ಸತ್ತ ಮೇಲೆ ಹೆಣ್ಣಿಗೆ ಮುಕ್ತಿ ಇಲ್ಲ ಎಂಬ ಸ್ಥಿರ ಸಮುದಾಯಗಳ ಆಶಯಕ್ಕೆ ವ್ಯತಿರಿಕ್ತವಾದ ಮಾನವೀಯ ಅಂಶವಿದು, ಹೆಂಡತಿ ಸತ್ತವರು, ಬಿಟ್ಟವರು, ಗಂಡ ಸತ್ತವಳು, ಬಿಟ್ಟವಳು ಪರಸ್ಪರ ಕೂಡಿಕೆ ಮಾಡಿಕೊಳ್ಳುವುದನ್ನು ಅಲೆಮಾರಿ ಸಮುದಾಯಗಳು ಅಂಗೀಕರಿಸುತ್ತವೆ. ಆಯಾ ಕುಲದವರೇ ನಿಂತು ಕೂಡಿಕೆ ಮಾಡಿಸುವುದು ಇಲ್ಲಿ ಪ್ರಮುಖವಾಗಿ ಕಂಡು ಬರುತ್ತದೆ. ಇವರಲ್ಲಿ ಧಾಮಿಕ ಸಹಿಷ್ಣುತೆ ಇದೆ. ಈ ದೇವ ಆ ದೇವ ಎಂಬ ಭೇದವಿಲ್ಲ. ತಾವು ಎಲ್ಲಿ ಉಳಿದುಕೊಳ್ಳುತ್ತಾರೆ, ಅಲ್ಲಿಯೇ ತಮ್ಮ ಕುಲದೇವರಗಳ ಜೊತೆಗೆ ಸ್ಥಳೀಯ ದೇವರುಗಳನ್ನೂ ಸಹ ಪೂಜಿಸುವ ಪರಂಪರೆಯನ್ನು ಗುರುತಿಸುತ್ತೇವೆ. ಅಲೆಮಾರಿ ಸಮುದಾಯದ ಕುಟುಂಬ, ಮದುವೆ, ಬಂಧುತ್ವ, ಸಾಮಾಜಿಕ ಸಂಸ್ಥೆಗಳೆಲ್ಲವೂ ವೈಶಿಷ್ಟ್ಯಪೂರ್ಣವಾದುವು. ಇಲ್ಲಿ ಹೆಚ್ಚಿನ ಕನ್ಯಾತೆರ ತೆಗೆದುಕೊಂಡರೆ ಶ್ರೀಮಂತಿಕೆ ನಶಿಸಿ ಹೋಗುತ್ತದೆ ಎಂಬ ನಂಬಿಕೆಯೂ ರೂಢಿಯಲ್ಲಿರುವ ಅಂಶವನ್ನು ನಮ್ಮ ವರ್ತನಮಾನದಲ್ಲಿ ನಾವು ಪ್ರಮುಖವಾಗಿ ತಿಳಿಯಬಹುದಾಗಿದೆ. ಸಾಂಸ್ಕೃತಿಕ ನಾಯಕರುಗಳು ಆದರ್ಶಗಳು ಈ ಸಮುದಾಯಗಳ ಬೆನ್ನಿಗಿದೆ ಮತ್ತು ಇವರಲ್ಲಿಯೇ ಸಾಂಸ್ಕೃತಿಕ ನಾಯಕತ್ವವನ್ನು ರೂಪಿಸಿಕೊಳ್ಳುವ ವ್ಯವಸ್ಥೆಯಲ್ಲಿ ಶಿಥಿಲತೆ ನಮಗೆ ಗೋಚರಿಸಿದರೂ ಸಾಂಸ್ಕೃತಿಕ ನಾಯಕರುಗಳ ಆದರ್ಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಹಕ್ಕಿಪಕ್ಕಿಯರ ಕಾಂಚ ಆಗಲಿ, ರಾಜಗೊಂಡರ ಕೇಳಕನ್ಯ ಆಗಲಿ ಇವರೆಲ್ಲರೂ ಇವರ ಸಾಂಸ್ಕೃತಿಕ ಆದರ್ಶಗಳಾಗಿ ನಮಗೆ ಕಂಡು ಬರುತ್ತಾರೆ. ಇತರ ಸಮುದಾಯ ಮೇಲುನೋಟಕ್ಕೆ ಶಿಥಿಲತೆ ಹೊಂದುತ್ತಿದೆ ಎಂದು ಗೋಚರಿಸಿದರೂ ಆಳದಲ್ಲಿ ಹೆಚ್ಚು ಸಂಕೀರ್ಣತೆಯನ್ನು ಹೊಂದಿರುತ್ತದೆ. ಇವರ ವೃತ್ತಿ ಕಸುಬುಗಳನ್ನು ಗಮನಿಸಬಹುದು. ಹಚ್ಚೆ ಹೊಯ್ಯುವುದರಲ್ಲಿ ಕೊರಮರು, ರಾಜಗೊಂಡರು ನಿಷ್ಣಾತರಾದರೆ, ಕುಕ್ಕೆ ಮರ ಹೆಣೆಯುವುದರಲ್ಲಿ ಮೇದರು ಸಿದ್ಧಹಸ್ತರು. ಬೇಹುಗಾರಿಕೆ ಮಾಡುವುದರಲ್ಲಿ, ಬೇಟೆ ಆಡುವುದರಲ್ಲಿ ಹಗಲುವೇಷದವರು ನಿಷ್ಣಾತರಾದರೆ, ಲಂಬಾಣಿಗರು ಉದ್ಯಮ ಅಲೆಮಾರಿಗಳಾಗಿ ನಮಗೆ ಕಂಡು ಬರುತ್ತಾರೆ. ಆರಂಭದಿಂದಲೂ ಲಂಬಾಣಿಗರು ಪ್ರಾಚೀನ ಪೂರ್ವದಿಂದಲೂ ಹಿಂದೂ ಮತ್ತು ಮುಸಲ್ಮಾನ ಸೈನ್ಯಗಳಿಗೆ ದವಸಧಾನ್ಯಗಳನ್ನು ಸರಬರಾಜು ಮಾಡುತ್ತಿದ್ದಂತಹ ಉದ್ಯಮಿಗಳಾಗಿ ಗೋಚರಿಸುವುದನ್ನು ಇಲ್ಲಿ ಗುರುತಿಸಬಹುದು. ಅಕ್ಷರ ಸಮುದಾಯದಲ್ಲಿ ಎಂದೂ ದಾಖಲಾಗದೆ ಉಳಿದು ಹೋಗಿದ್ದ ನಿಗೂಢ ಮತ್ತು ನಿರ್ಲಕ್ಷ ಸಮುದಾಯಗಳು ಇವೆ. ಸ್ಥಿರವಾದ ನೆಲೆಗಳಿಲ್ಲದ ಅವುಗಳನ್ನು ಕಂಡುಕೊಳ್ಳಬೇಕು. ಆಸೆ ಆಕಾಂಕ್ಷೆಗಳಾಗಲಿ, ಜವಾಬ್ದಾರಿಯಾಗಲಿ ಇಲ್ಲದೆ ಒಟ್ಟು ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಧಾನ ನೆಲೆಯ ತಿರಸ್ಕಾರಕ್ಕೆ ಕಾರಣವಾಗಿದ್ದ ಈ ಸಮುದಾಯಗಳ ಅಧ್ಯಯನ ಎಂಬುವುದು ಅಕ್ಷರ ಪರಂಪರೆಗೆ ದಾಖಲು ಮಾಡುವುದರ ಮುಖಾಂತರ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವಂತಹುದಾಗಿದೆ. ಸಾಂಸ್ಕೃತಿಕ ವಿನಾಶದ ಕಡೆಗೆ ಸಾಗುತ್ತಿರುವ ವರ್ತಮಾನ ಜಗತ್ತು ನಮ್ಮ ನಡುವೆಯಲ್ಲಿಯೇ ಸಾಂಸ್ಕೃತಿಕ ಪ್ರೋಟೋ ಟೈಪ್‌ಗಳನ್ನು ಉಳಿಸಿಕೊಂಡು ಬಂದಿರುವ ಅಲೆಮಾರಿ ಸಮುದಾಯಗಳ ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ವಿವರಗಳನ್ನು ದಾಖಲಿಸುವುದು ಮತ್ತು ಅಧ್ಯಯನ ಮಾಡುವುದರ ಮುಖಾಂತರ ಅಲೆಮಾರಿ ಸಮುದಾಯಗಳ ಕೊಂಡಿಗಳನ್ನು ಉಳಿಸಿಕೊಳ್ಳುವುದು, ಅವರ ಸಾಮಾಜಿಕ ಬದುಕು ಸಹ್ಯವಾಗುವಂತೆ ನೋಡಿಕೊಳ್ಳಬೇಕಾದುದು ಇವತ್ತಿನ ಅಧ್ಯಯನಕಾರರ ಮತ್ತು ಸಮಾಜದ ಜವಾಬ್ದಾರಿಯಾಗಬೇಕಾಗಿದೆ. ಸ್ವಾತಂತ್ರ್ಯಾ ನಂತರ ಅರಣ್ಯ ಸಂರಕ್ಷಣಾ ಕಾಯಿದೆ, ನೂತನ ಕಂದಾಯ ನೀತಿ, ಹರಿಜನ, ಗಿರಿಜನ ಅಭಿವೃದ್ಧಿ, ಪುನರ್‌ವಸತಿ ಯೋಜನೆ ಮುಂತಾದುವುಗಳು ಅಲೆಮಾರಿ ಸಮುದಾಯಗಳ ಪಾಲಿಗೆ ಅನುಕೂಲ ಮತ್ತು ಅನಾನುಕೂಲಗಳೆರಡನ್ನೂ ತಂದೊಡ್ಡಿವೆ. ಸ್ಥಿರ ಸಮುದಾಯಗಳು ಸ್ವಹಿತಾಸಕ್ತಿಗಾಗಿ ರೂಪಿಸಿಕೊಂಡಂತಹ ಕಾನೂನುಗಳು ಅಲೆಮಾರಿ ಸಮುದಾಯಗಳ ಬದುಕಿಗೆ ಭಂಗ ತಂದಿವೆ. ಈ ದಿಸೆಯಲ್ಲಿ ಸಮಾಜದ ಮೂಲಸ್ತರಗಳಾದ ಸಮಾಜದ ಮೇಲ್ಮಟ್ಟದವರೆಗೆ ಯೋಜನೆಗಳನ್ನು ರೂಪಿಸುವವರು ಅಲೆಮಾರಿ ಸಮುದಾಯಗಳ ಸಮಸ್ಯೆಗಳ ಪರಿವರ್ತನೆಯನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಅವುಗಳಲ್ಲಿ ತೊಂದರೆಗಳನ್ನು ಹೊರಹಾಕುವ ಅವಕಾಶಕ್ಕಾಗಿ ವೇದಿಕೆಯೊಂದನ್ನು ರೂಪಿಸಲು ನಾವಿನ್ನೂ ಅಸಮರ್ಥರಾಗಿದ್ದೇವೆ. ಸಮುದಾಯದ ಮಿತಿಯಲ್ಲಿ ಬೆಳವಣಿಗೆ ಮತ್ತು ವಿರೋಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಸಮೂಹಗಳು ವಿಸ್ತೃತಜಾಲದ ಅಭಿವೃದ್ಧಿಯ ಸಂಬಂಧದಲ್ಲಿ ಅರ್ಹತೆಗಳನ್ನು ಗುರುತಿಸಿಕೊಳ್ಳಬೇಕಾಗಿದೆ. ಅಸಂಘಟಿತ ದುಡಿಮೆ, ಕಡಿಮೆ ವೇತನ ಕೆಲಸದ ಭದ್ರತೆ ಇಲ್ಲದಿರುವುದು, ಸರ್ಕಾರ ಒದಗಿಸುವ ಸವಲತ್ತುಗಳು ಮಧ್ಯವರ್ತಿಗಳ ಪಾಲಾಗುತ್ತಿರುವುದು, ಮೌಢ್ಯ, ಜಡತ್ವ, ಭಯ ಮತ್ತು ಅವಿಶ್ವಾಸಗಳು, ನೈರ್ಮಲ್ಯದ ಅಭಾವ, ಹಸಿವು, ಅಪೌಷ್ಠಿಕತೆ, ಸೋಮಾರಿತನ, ಅಸಮರ್ಪಕ ವಸತಿ ವ್ಯವಸ್ಥೆ ಇದೆಲ್ಲಕ್ಕಿಂತ ಹೆಚ್ಚಾಗಿ ನಿರಾಶೆ, ಅಸಹಾಯಕತೆಗಳು ಸಮುದಾಯಗಳ ಅನಾರೋಗ್ಯಕರ ಪರಿಸರಕ್ಕೆ ಕಾರಣವಾಗಿವೆ. ವ್ಯಕ್ತಿತ್ವದ ಗೌರವವನ್ನು ಗುರುತಿಸುವ ಕಾರ್ಯ ನಡೆಯುತ್ತಿಲ್ಲವಾದ್ದರಿಂದ ಅಲೆಮಾರಿ ಸಮುದಾಯಗಳಲ್ಲಿ ಬೌದ್ಧಿಕ ಕಲ್ಯಾಣ ಮತ್ತು ಮಾನಸಿಕ ತೃಪ್ತಿಯಂತಹ ಸಮುತ್ಪಾದಕ ಕಾರ್ಯಗಳ ಕೊರತೆ ಇದೆ. ಅಲೆಮಾರಿ ಸಮುದಾಯಗಳಲ್ಲಿ ಸ್ಥಿರ ಸಮುದಾಯಗಳಲ್ಲಿರುವಂತೆ ಸೂಕ್ತ ನಾಯಕತ್ವ ಇಲ್ಲ. ನಾಯಕತ್ವಕ್ಕಾಗಿ ಹೊರಗಿನ ಶಕ್ತಿಗಳನ್ನು ಅವಲಂಬಿಸುತ್ತವೆ. ಈ ಹೊರಗಿನ ಬಹುತೇಕ ನಾಯಕರು ಸ್ವಹಿತಾಸಕ್ತಿ ಮತ್ತು ಸ್ವಾರ್ಥಗಳಿಂದ ಕೂಡಿರುತ್ತಾರೆ. ರಾಜಕಾರಣದ ಶಕ್ತಿಗಾಗಿ, ಅಧಿಕಾರದ ಆಸೆಗಾಗಿ ಅಲೆಮಾರಿ ಸಮುದಾಯಗಳನ್ನು ತಮ್ಮ ಓಟ್ ಬ್ಯಾಂಕುಗಳಾಗಿ ಪರಿವರ್ತಿಸಿಕೊಳ್ಳಲು ಸದಾ ಆಶಿಸುತ್ತಿರುತ್ತಾರೆ. ಈ ದಿಸೆಯಲ್ಲಿ ಅಲೆಮಾರಿ ಸಮುದಾಯದ ಉನ್ನತಿಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕಾದುದು ಅಗತ್ಯವಿರುತ್ತದೆ. ಇಂಗ್ಲಿಷರು ಭಾರತಕ್ಕೆ ಬರದಿದ್ದರೆ ಶೂದ್ರಾತಿ ಶೂದ್ರ ಸಮುದಾಯಗಳಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ. ಪ್ರಜ್ಞೆಯು ಬೆಳೆಯುತ್ತಿರಲಿಲ್ಲ. ಅಂಬೇಡ್ಕರ್ ಮತ್ತು ದೇವರಾಜ ಅರಸು ಈ ನಾಡಿನಲ್ಲಿ ಅವತರಿಸದಿದ್ದರೆ ಅಲೆಮಾರಿ ಸಮುದಾಯಗಳಿಗೆ ಈ ನಾಡಿನಲ್ಲಿ ಸಾಮಾಜಿಕ ಸವಲತ್ತು ಮತ್ತು ನ್ಯಾಯ ದೊರೆಯುತ್ತಿರಲಿಲ್ಲ. ಸರ್ಕಾರ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ನಿಜ. ಆದರೆ ಸರ್ಕಾರ ಒದಗಿಸುವ ಸೂರು, ನೀರು, ನೆಲ ಅವರಿಗೆ ನೆಮ್ಮದ ಕೊಡಲಾರದು. ಅಭಿವೃದ್ಧಿ ಎಂದರೆ ಆರ್ಥಿಕ ಪರಿಕಲ್ಪನೆ ಎನ್ನುವ ಪಶ್ಚಿಮದ ಕಲ್ಪನೆಯನ್ನು ಕೈಬಿಟ್ಟು ಅವರ ಸಂಸ್ಕೃತಿಯ ಒಳಗಡೆಯೇ ಅವರ ಬದುಕಿನ ಶೈಲಿಯಲ್ಲಿಯೇ ಅಭಿವೃದ್ಧಿಯ ಕ್ರಿಯಾ ಯೋಜನೆಗಳನ್ನೇ ಬಹುಮುಖಿ ನೆಲೆಯಲ್ಲಿ ಹುಟ್ಟು ಹಾಕಬೇಕು. ಅಲೆಮಾರಿ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆಯು ನಾಶವಾಗದಂತೆ ಅಭಿವೃದ್ಧಿಯತ್ತ ಕೊಂಡೊಯ್ಯುವಂತಾಗಬೇಕು. ನಿರಂತರ ಯೋಜನೆಗಳ ಮೂಲಕ ಅವರ ಬದುಕಿಗೆ ಹೊಸ ಜೀವಶಕ್ತಿ ತುಂಬಲು ಮತ್ತು ಆತ್ಮವಿಶ್ವಾಸವನ್ನು ರೂಪಿಸಲು ನೆರವಾಗಬೇಕು. ಇವೆಲ್ಲವುದರಲ್ಲಿ ಆಯ್ಕೆಯ ಹಕ್ಕು ಸಹ ಸಮುದಾಯಗಳವೇ ಆಗಿರಬೇಕು. ಅಲೆಮಾರಿ ಸಮುದಾಯಗಳು ಇತ್ತೀಚಿನ ವರ್ಷಗಳಲ್ಲಿ ಸಾಂಸ್ಕೃತಿಕ ಆಧುನಿಕತೆಯ ಪ್ರಯುಕ್ತ ಪರಿವರ್ತನೆಯ ಹಾದಿಯಲ್ಲಿವೆ. ಬೌದ್ಧಿಕ ಸಾಧನಗಳು ಸವಲತ್ತುಗಳ ವಿಷಯದಲ್ಲಿ ಬದಲಾವಣೆ ಗೋಚರಿಸುತ್ತಿದೆಯಾದರೂ ಅವರ ಸಾಂಪ್ರದಾಯಿಕ ಘಟಕಗಳಾದ ವಿವಾಹ, ಬಂಧುತ್ವ, ಕೌಟುಂಬಿಕ ವ್ಯವಸ್ಥೆ ಹಬ್ಬ ಹರಿದಿನ, ಆಚರಣೆ, ವಿಧಿ-ನಿಷೇಧಗಳಲ್ಲಿ ತಮ್ಮ ಬೆಲೆಗಳನ್ನು ಉಳಿಸಿಕೊಂಡು ಬಂದಿವೆ. ತಮ್ಮ ಸಾಂಸ್ಕೃತಿಕ ಅಂತಃಶಕ್ತಿ ಇವರಲ್ಲಿ ಇನ್ನೂ ಪ್ರಬಲವಾಗಿಯೇ ಉಳಿದುಕೊಂಡು ಬಂದಿವೆ. ಭಾರತೀಯ ಸಮುದಾಯ ಜಗತ್ತಿನಲ್ಲಿ ಅಲಿಖಿತ ಪರಂಪರೆಯನ್ನಷ್ಟೇ ಆಧರಿಸಿ ಚರಿತ್ರೆಯನ್ನು ರೂಪಿಸಿದೆ. ವೇದ, ಉಪನಿಷತ್ತು, ಧರ್ಮ, ಕಾವ್ಯ, ಪುರಾಣಗಳನ್ನು ಸಂಸ್ಕೃತಿಯ ಆಕರಗಳೆಂದು ಪರಿಭಾವಿಸಲಾಗಿದ್ದು, ಸ್ಥಿರ ಸಮುದಾಯಗಳ ಮೌಲ್ಯಗಳೇ ನಮ್ಮ ಇವತ್ತಿನ ಸಂಸ್ಕೃತಿಯ ಮಾನದಂಡಗಳಾಗಿ ರೂಪುಗೊಂಡಿವೆ. ಇಂತಹ ಸಿದ್ಧ ಗ್ರಹಿಕೆಗಳು ನಮ್ಮ ಚರಿತ್ರೆಕಾರರ ಹಾಗೂ ನಮ್ಮ ಸಂಸ್ಕೃತಿ ತಜ್ಞರ ಬುರ್ಜ್ವಾತನವನ್ನು ಸಾಬೀತುಪಡಿಸುತ್ತವೆ. ನಿರ್ದಿಷ್ಟ ಸಮುದಾಯವನ್ನು ಪ್ರದರ್ಶಿಸುವ ಸಲುವಾಗಿ ಬಹು ಜನ ಸಂಸ್ಕೃತಿಯ ಸಮುದಾಯಗಳನ್ನು ಅಲಕ್ಷಿಸಿದ್ದು ಭಾರತೀಯ ಚರಿತ್ರಾಕಾರರು ಭಾರತೀಯ ಚರಿತ್ರೆಗೆ ಎಸಗಿದ ದೊಡ್ಡ ದ್ರೋಹ. ಭಾರತೀಯ ಸಂಸ್ಕೃತಿಯು ಯಾವತ್ತಿಗೂ ಏಕಾಕಾರಿಯಾದುದಲ್ಲ. ಬಹುರೂಪಿ ಸಂಸ್ಕೃತಿಯ ನೆಲೆಗಳನ್ನು ಉಳ್ಳದ್ದು. ಅಗ್ರಹಾರದ ಬಾಳೆ ಎಲೆ ದೇವಸ್ಥಾನದ ಮಂಗಳಾರತಿ ತಟ್ಟೆಗಳಿಂದ ಉದುರಿದ ಪೊಳ್ಳುತನವನ್ನು ನಿವಾರಿಸಿ ಉತ್ಪಾದನಾ ವ್ಯವಸ್ಥೆಯೊಂದಿಗೆ ಶ್ರಮದೊಂದಿಗೆ ನಿಕಟ ಸಂಬಂಧವನ್ನು ಇರಿಸಿಕೊಂಡು ಎಂತಹ ತೀವ್ರ ದಾಳಿಯ ನಡುವೆಯೂ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಕಾಯ್ದುಕೊಂಡು ಬಂದಿರುವ ಕ್ರಿಯಾಶೀಲ ಜನ ಸಮುದಾಯಗಳಾದ ಅಲೆಮಾರಿಗಳ ಸಮೃದ್ಧ ಬದುಕಿನ ಬಗ್ಗೆ ನಾವು ಈಗ ಮಾತನಾಡಬೇಕಾಗಿದೆ. ಯಾರ ಬದುಕನ್ನು ದಾಖಲು ಮಾಡಲು ನಿರಾಕರಿಸಿದ್ದರೂ ಆ ಬದುಕಿನ ಒಳಗಿನಿಂದಲೇ ಸಾಮಗ್ರಿ, ವಿಚಾರ ಎರಡನ್ನು ಎತ್ತಿಕೊಂಡು ಹೊಸದಾಗಿ ಚರಿತ್ರೆಯನ್ನು ಕಟ್ಟುವ ಅಗತ್ಯವಿದೆ. ಹಾಗೆಯೇ ಬಹುಮುಖಿ ಸಂಸ್ಕೃತಿಯನ್ನು ಕಟ್ಟುವ ಮೂಲಕ ಭಾರತೀಯ ಸಂಸ್ಕೃತಿಗೆ ಇಂತಹ ನಿರ್ಲಕ್ಷಿತರು ಇತಿಹಾಸದುದ್ದಕ್ಕೂ ನೀಡಿರುವ ಕೊಡುಗೆಯ ಗಟ್ಟಿತನ ಏನೆಂಬುದನ್ನು ಪರಿಚಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬುಡಕಟ್ಟುಗಳು ಮತ್ತು ಅಲೆಮಾರಿ ಅಧ್ಯಯನವನ್ನು ಕನ್ನಡ ವಿಶ್ವವಿದ್ಯಾಲಯ ಆರಂಭ ಮಾಡಿದೆ. ಇದು ಅತ್ಯಂತ ಸ್ವಾಗತಾರ್ಹ ಅಧ್ಯಯನ. ಇದು ಕೇವಲ ಲಿಖಿತ ದಾಖಲೆಗಳಾಗಿ ಉಳಿಯದೆ ಅಲೆಮಾರಿ ಸಮುದಾಯಗಳ ದೇಶೀ ಜ್ಞಾನ ಪರಂಪರೆ ಎಲ್ಲವನ್ನೂ ನಾವು ನಮ್ಮದನ್ನಾಗಿಸಿ ಕೊಂಡು ನಮ್ಮ ಅಧ್ಯಯನದ ಕ್ರಮಗಳನ್ನು ಬದಲಾಯಿಸಿಕೊಂಡು ನಮ್ಮ ನಮ್ಮೆಲ್ಲರ ವಿಸ್ಮೃತಿಯನ್ನು ಮತ್ತು ಸಾಂಸ್ಕೃತಿಕವಾದ ಹಿಂಜರಿಕೆಗಳನ್ನು ನಾವು ಇವತ್ತು ಮೀರಬೇಕಾಗಿದೆ.

ಲಿಪ್ಯಂತರ : ನೇತ್ರಾವತಿ ಕೆ.ವಿ. ಮತ್ತು ಸುಮಂಗಲ ಬಿ. ಅತ್ತಿಗೇರಿ

* * *