ಅಲೆಮಾರಿತನ ಮಾನವನ ಮೂಲ ಪ್ರವೃತ್ತಿ. ಮನುಷ್ಯನಲ್ಲಿ ನಾಗರಿಕತೆ ಬೆಳೆದಂತೆ ಅಲೆಮಾರತಿನ ಕಡಿಮೆಯಾಯಿತು. ಆದರೆ ಇದಕ್ಕೆ ನಿಲುಗಡೆ ಎಂಬುದಿಲ್ಲ. ಅದರ ಪ್ರಮಾಣ ಮತ್ತು ತೀವ್ರತೆಯಲ್ಲಿ ಏರುಪೇರುಗಳಾಗಬಹುದು. ಅಲೆಮಾರಿತನವನ್ನು ಕೇವಲ ಮನುಷ್ಯರಲ್ಲಲ್ಲದೆ ಇತರ ಸಹ ಜೀವಿಗಳಲ್ಲೂ ಕಾಣಬಹುದು. ಅಲೆಮಾರಿತನದ ಆಧುನಿಕ ಶಿಷ್ಟ- ರೂಪವೇ ವಲಸೆ. ವಲಸೆ ಹಲವು ವರ್ಷಗಳಿಗೊಮ್ಮೆ ವ್ಯವಸ್ಥಿತವಾಗಿ ಜರುಗುತ್ತದೆ. ಆದರೆ ಅಲೆಮಾರಿತನ ನಿತ್ಯನಿರಂತರವಾದ ಮಾನವನ ಚಲನೆಯೇ ಆಗಿದೆ.

ಆದಿಕಾಲದಲ್ಲಿ ಮನುಷ್ಯ ಅಲೆಮಾರಿ. ತನ್ನ ಆಹಾರ ಅನ್ವೇಷಣೆಗಾಗಿ ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಿದ್ದ. ಇಂತಹ ಅಲೆಯುವಿಕೆಯು ಒಂದು ನಿರ್ದಿಷ್ಟವಾದ ಪರಿಸರದಲ್ಲೆ ನಡೆಯುತ್ತಿತ್ತು. ಆರಂಭದಲ್ಲಿ ಅವನ ಅಲೆಮಾರಿತನ ಹೆಚ್ಚಾಗಿ ನದಿಬಯಲುಗಳ ಪರಿಸರದಲ್ಲಿ ಸಾಗುತ್ತಿತ್ತು. ನಂತರ ಬೆಟ್ಟಗುಡ್ಡಗಳ ಪರಿಸರವನ್ನು ಆಯ್ದುಕೊಂಡನು. ಕ್ರಿ.ಪೂ. ೩೦೦೦ ದಿಂದೀಚೆಗೆ ಭಾರತದಂತಹ ದೇಶದಲ್ಲಿ ಮಾನವನ ಅಲೆಮಾರಿತನದಲ್ಲಿ ನಿಧಾನಗತಿಯನ್ನು ಗುರುತಿಸಬಹುದು. ಈ ಕಾಲದ ಜೀವನ ವಿಧಾನವನ್ನು ನವಶಿಲಾಯುಗ ಸಂಸ್ಕೃತಿ ಎಂದು ಪ್ರಾಗಿತಿಹಾಸದಲ್ಲಿ ಗುರುತಿಸುತ್ತೇವೆ. ನವಶಿಲಾಯುಗ ಕಾಲದಲ್ಲಿ ಮೊದಲಬಾರಿಗೆ ಮನುಷ್ಯ ಒಂದೆಡೆ ನೆಲೆಸುವುದನ್ನು ರೂಢಿಸಿಕೊಳ್ಳುತ್ತಾನೆ. ಮುಂದೆ ಇದು ಗ್ರಾಮ ಜೀವನಕ್ಕೆ ನಾಂದಿಯಾಯಿತು. ವಿಶೇಷವಾಗಿ ಬೆಟ್ಟಗುಡ್ಡಗಳ ಕಲ್ಲಾಸರೆ ಮತ್ತು ಗುಹೆಗಳಲ್ಲಿ ವಸತಿ ವ್ಯವಸ್ಥೆಯನ್ನು ಕಂಡುಕೊಂಡನು. ಅಲ್ಲಿ ತನ್ನ ನಿತ್ಯದ ಬದುಕಿನ ಚಿತ್ರಗಳನ್ನು ವರ್ಣದಲ್ಲಿ ಮೂಡಿಸಿದ. ಬೆಟ್ಟದ ತಪ್ಪಲಿನ ಬಯಲಿನಲ್ಲಿ ಕೃಷಿಯನ್ನು ಆರಂಭಿಸಿದನು ಹಾಗೂ ಪಶುಪಾಲನೆಯನ್ನು ಮೈಗೂಡಿಸಿಕೊಂಡನು. ಚಕ್ರದ ಉಪಯೋಗವನ್ನು ಅರಿತು, ತನ್ನ ಬಳಕೆಗೆ ಬೇಕಾದ ಮಣ್ಪಾತ್ರೆ ತಯಾರಿಸಿದನು. ಹೀಗೆ ತನ್ನ ಬದುಕಿನ ಉನ್ನತೀಕರಣಕ್ಕೆ ಅಗತ್ಯವಾದ ತಂತ್ರಗಳನ್ನು ಕಂಡುಕೊಂಡಂತೆ ಒಂದೆಡೆ ಸ್ಥಿರವಾಗಿ ನೆಲೆಸುವಲ್ಲಿ ಮಗ್ನನಾದನೆಂದು ಗ್ರಹಿಸಬಹುದು. ಕಾಲಾನಂತರ ಲೋಹದ ಬಳಕೆಯಲ್ಲಿ ಕಂಡುಕೊಂಡು ಸ್ಥಿರ ಜೀವನವನ್ನು ವ್ಯವಸ್ಥೆಗೊಳಿಸಲು ಮುಂದಾದನು. ತಾನಿರುವಲ್ಲೆ ಎಲ್ಲವನ್ನು ಪಡೆದುಕೊಳ್ಳುವತ್ತ ಕ್ರಿಯಾಶೀಲನಾದನು. ಇಷ್ಟಾದರೂ ಮನುಷ್ಯ ಊರಿಂದ ಊರಿಗೆ, ದೇಶದಿಂದ ದೇಶಕ್ಕೆ ತನ್ನ ಅಲೆಯುವ ಬದುಕನ್ನು ಇಂದಿಗೂ ಚಾಲ್ತಿಯಲ್ಲಿರಿಸಿ ಕೊಂಡಿದ್ದಾನೆ. ಹಾಗಾಗಿ ಅಲೆಮಾರಿತನ ಎಂಬುದು ಮನುಷ್ಯನ ಮೂಲ ಪ್ರವೃತ್ತಿ ಎಂದೇ ಗುರುತಿಸಬೇಕಾಗಿದೆ.

ಹೀಗೆ ಶತಮಾನಗಳು ಕಳೆದರೂ, ನೂರಾರು ಆಡಳಿತ ವ್ಯವಸ್ಥೆಗಳು ಬಂದು ಹೋದರೂ ಅಲೆಮಾರಿತನ ಅನೇಕ ಸಮುದಾಯಗಳಲ್ಲಿ ಇಂದಿಗೂ ಜೀವಂತವಾಗಿದೆ. ಇದೊಂದು ಜೈವಿಕ ಭಾಗವಾಗಿರುವುದೆ? ಎಂಬುದನ್ನು ಚಿಂತಿಸಬೇಕಾಗಿದೆ. ಮೂಲತಃ ಅಲೆಮಾರಿತನ ಯಾವುದೇ ಸಮಾಜದ ಅನಿಷ್ಠ ಕೊಡುಗೆಯಲ್ಲ ಅಥವಾ ಶೋಷಣೆಯ ಫಲವಲ್ಲ. ಅಂದರೆ ನಮ್ಮ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳು ಅಲೆಮಾರಿ ಸಮುದಾಯಗಳನ್ನು ಸೃಷ್ಟಿಸಿಲ್ಲ ಎಂದರ್ಥವಲ್ಲ, ಸೃಷ್ಟಿಸಿವೆ. ಈ ಸಮುದಾಯಗಳ ಅಲೆಮಾರಿತನದ ಸ್ವರೂಪ, ಮೂಲ ಅಲೆಮಾರಿ ಸಮುದಾಯಗಳ ಸ್ವರೂಪಕ್ಕೆ ಭಿನ್ನವಾಗಿದೆ ಎಂಬುದನ್ನು ಗಮನಿಸಬೇಕು. ಇಂದು ನಾವು ಚಿಂತಿಸಬೇಕಾಗಿರುವುದು ಮೂಲ ಅಲೆಮಾರಿ ಸಮುದಾಯಗಳ ಬಗ್ಗೆ ಎಂಬುದು ನನ್ನ ನಂಬಿಕೆ. ಅಲೆಮಾರಿತನದ ಮೂಲ ಉದ್ದೇಶ ಆಹಾರ ಅನ್ವೇಷಣೆ. ಇದು ಬದುಕಿನ ಪ್ರಜ್ಞೆಯ ಅಂಗವಾಗಿಯೇ ನಡೆಯುವ ಒಂದು ಚಟುವಟಿಕೆ ಆದರೂ ದೈನಂದಿನ ಬದುಕಿನ ಅಗತ್ಯಗಳ ಪೂರೈಕೆಗಾಗಿ ಸ್ಥಳದಿಂದ ಸ್ಥಳಕ್ಕೆ ಅಲೆಯುವುದಷ್ಟೆ ಅಲೆಮಾರಿ ಸಮುದಾಯಗಳ ಉದ್ದೇಶವಲ್ಲ. ಅದು ಪರಂಪರಾಗತವಾಗಿ ನಡೆದು ಬಂದಿರುವುದು ಸಹ ಅಲೆಮಾರಿ ಬದುಕು ಜೀವಂತವಾಗಿರಲು ಕಾರಣವಿರಬಹುದು.

ಸ್ಥಿರ ಸಮುದಾಯಗಳು ಅಲೆಮಾರಿ ಸಮುದಾಯಗಳ ಬಗ್ಗೆ ಉಪೇಕ್ಷೆಯನ್ನು ಮತ್ತು ವಿಸ್ಮೃತಿಯನ್ನು ಹೊಂದಿವೆ. ಸ್ಥಿರ ಸಮುದಾಯ, ಒಂದೆಡೆ ನೆಲೆನಿಂತು ಸ್ಥಿರಾಸ್ತಿಗಳ ಗಳಿಕೆಯಲ್ಲಿ ಮಗ್ನವಾಗಿದೆ. ಆದರೆ ಅಲೆಮಾರಿ ಸಮುದಾಯಗಳು ಇದ್ಯಾವುದರ ಪರಿವೇ ಇಲ್ಲದೆ ದೇಶದ ಉದ್ದಗಲಕ್ಕೂ ಸಂಚರಿಸುತ್ತ ತನ್ನ ಪಾರಂಪರಿಕ ಜ್ಞಾನದ ಸೇವೆಯನ್ನು ಸ್ಥಿರ ಸಮುದಾಯಗಳಿಗೆ ಒದಗಿಸುತ್ತ ಬಂದಿರುವುದು ಶ್ಲಾಘನೀಯ. ನಾಗರಿಕ ಸರ್ಕಾರದ ಯಾವ ಸವಲತ್ತುಗಳನ್ನು ಅಲೆಮಾರಿ ಸಮುದಾಯಗಳು ಪಡೆದಿವೆ ಎಂಬುದು ಒಂದು ದೊಡ್ಡ ಪ್ರಶ್ನೆ ಹಾಗೂ ಸ್ಥಿರ ಸಮುದಾಯಗಳ ಕೊಡುಗೆ ಏನು ಎಂಬುದು ಮತ್ತೊಂದು ಪ್ರಶ್ನೆ. ಇಂದಿಗೂ ಅಲೆಮಾರಿ ಸಮುದಾಯಗಳು ಬೇಟೆ, ಅಲಂಕಾರಿಕ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ ಮತ್ತು ಮಾರಾಟ, ಗಿಡಮೂಲಿಕೆಗಳ ಔಷಧಿ ಮಾರಾಟ, ಪಶುಪಾಲನೆ ಮತ್ತು ಮಾರಾಟ, ಮನರಂಜನಾ ಕ್ರೀಡೆ ಮೊದಲಾದವುಗಳನ್ನು ಮೈಗೂಡಿಸಿಕೊಂಡು ಊರೂರು ಅಲೆಯುತ್ತ ಗ್ರಾಮದ ಹೊರವಲಯದಲ್ಲಿ ತಂಗುತ್ತವೆ. ಇಂತಹ ಸಂದರ್ಭದಲ್ಲಿ ಊರಿನಲ್ಲಿ ಯಾವುದೇ ಕಳ್ಳತನಗಳಾದರೆ ಅಲೆಮಾರಿ ಸಮುದಾಯಗಳನ್ನೆ ಹೊಣೆಮಾಡುತ್ತಾರೆ. ಹೀಗಾಗಿ ಪೊಲೀಸ್ ಮತ್ತು ಸ್ಥಳೀಯ ಸ್ಥಿರ ಸಮುದಾಯಗಳ ಕ್ರೂರದೃಷ್ಟಿಗೆ ಒಳಗಾಗುತ್ತವೆ. ಅಲೆಮಾರಿಗಳು ತಮ್ಮನ್ನು ನಿರಪರಾಧಿಗಳೆಂದು ಸಮರ್ಥಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯನ್ನು ತಲುಪಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಲೆಮಾರಿ ಸಮುದಾಯದ ಸ್ತ್ರೀಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಆದರೆ ಇವರ ಕೂಗಿಗೆ ಯಾರೂ ಕಿವಿ ಕೊಡುವುದಿಲ್ಲ. ಅಲೆಮಾರಿ ಸಮುದಾಯಗಳು ಎಲ್ಲೆ ಇರಲಿ ಅವರಿಗೆ ಸೂಕ್ತ ರಕ್ಷಣೆ ದೊರೆಯುವಂತಾಗಬೇಕು.

ಇಂದಿನ ವೈಜ್ಞಾನಿಕ ಯುಗದಲ್ಲಿ ಸ್ಥಿರ ಸಮುದಾಯಗಳಿಗೆ ಅಲೆಮಾರಿ ಸಮುದಾಯಗಳ ಜ್ಞಾನದ ಅಗತ್ಯತೆ ಇಲ್ಲದಿರುವುದು ಸಹ ಅವರ ದುಸ್ಥಿತಿಗೆ ಕಾರಣ. ವಿದೇಶಿ ತಂತ್ರಜ್ಞಾನ ಮತ್ತು ವಿಜ್ಞಾನಗಳ ಪ್ರವೇಶದಿಂದ ಕೇವಲ ಸ್ಥಿರ ಸಮುದಾಯಗಳಲ್ಲದೆ ಅಲೆಮಾರಿ ಸಮುದಾಯಗಳ ಬದುಕು ಸಹ ಸಂಕಷ್ಟಕ್ಕೆ ಒಳಗಾಗಿದೆ. ಪಾರಂಪರಿಕ ವೃತ್ತಿಗಳನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ಆಶಯ. ಆದರೆ ಯಾವ ವೃತ್ತಿಗಳನ್ನು ಉಳಿಸಿಕೊಳ್ಳಬೇಕು ಮತ್ತು ಯಾವ ವೃತ್ತಿಗಳನ್ನು ಕೈಬಿಡಬೇಕು ಎಂಬುದರ ಬಗ್ಗೆಯು ಚರ್ಚಿಸಬೇಕಾಗಿದೆ. ಆಧುನಿಕ ಪ್ರಪಂಚದಲ್ಲಿ ವೃತ್ತಿಗಳು ಸಾಮಾಜಿಕ ಮತ್ತು ಆರ್ಥಿಕ ಲಾಭನಷ್ಟಗಳನ್ನು ಆಧರಿಸಿವೆ. ಅಲೆಮಾರಿ ಸಮುದಾಯಗಳಿಗೆ ಮೊದಲು ಶಿಕ್ಷಣ, ಉದ್ಯೋಗ, ಆರ್ಥಿಕ ಸವಲತ್ತುಗಳು ಮೊದಲಾದವು ದೊರೆಯುವಂತಾಗಬೇಕು. ಅವರಲ್ಲಿರುವ ಮೌಢ್ಯವನ್ನು ಹೋಗಲಾಡಿಸಬೇಕು. ಅವರ ಪಾರಂಪರಿಕ ವೃತ್ತಿಗಳನ್ನು ಉಳಿಸಿಕೊಳ್ಳುವುದರೊಂದಿಗೆ, ಅವರ ಜೀವನ ಮಟ್ಟ ಸುಧಾರಿಸಲು ಸರಕಾರ ಮುಂದಾಗಬೇಕು. ಆಧುನಿಕ ಸೌಲಭ್ಯಗಳಿಂದ ವಂಚಿತರಾದರೂ ಅವರ ಸ್ವಚ್ಛಂದ ಬದುಕು ಮತ್ತು ಪಡೆಯುವ ಅನುಭವ ಅನನ್ಯವಾದುದು. ವ್ಯವಸ್ಥೆ ಮತ್ತು ಸ್ಥಿರ ಸಮುದಾಯಗಳು ಹೊಂದಿರುವ ಕಾಳಜಿಗಳು ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿವೆ ಎಂಬುದರ ಮೇಲೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಅವಲಂಬಿಸಿದೆ.

* * *