ಮೂರನೇ ದೇಸಿ ಸಮ್ಮೇಳನದ ಸರ್ವಾಧ್ಯಕ್ಷರೂ ಹಿರಿಯ ಜಾನಪದ ತಜ್ಞರೂ ಆಗಿರುವಂತಹ ಪ್ರೊ. ಬಿ.ಎ. ವಿವೇಕ ರೈ ಅವರೇ, ಈ ಸಂವಾದ ಗೋಷ್ಠಿಯ ಒಂದು ಉತ್ತಮವಾದಂತಹ ಪ್ರವೇಶವನ್ನು ತಮ್ಮ ಉಪನ್ಯಾಸದ ಮೂಲಕ ನೀಡಿದಂತಹ ಡಾ. ಚಕ್ಕೆರೆ ಶಿವಶಂಕರವರೆ, ಹಾಗೂ ಸಂವಾದದಲ್ಲಿ ಭಾಗವಹಿಸಿದ ಎಲ್ಲ ವಿದ್ವಾಂಸರೆ, ಬಹುಸಂಸ್ಕೃತಿ ಪ್ರಿಯರೆ, ನಿಜಕ್ಕೂ ಈ ಸಂವಾದ ಗೋಷ್ಠಿ ಎರಡು ದಿನಗಳಿಂದ ನಡೆದಂತಹ ಅಲೆಮಾರಿಯನ್ನು ಕುರಿತಂತಹ ಎಲ್ಲ ಚರ್ಚೆಗಳಿಗೆ ಒಂದು ಶಿಖರ ಪ್ರಾಯವಾಗಿ ಮೂಡಿಬಂದಿದೆ ಎನಿಸುತ್ತದೆ. ಸಾಕಷ್ಟು ಚರ್ಚೆಗಳಾಗಿವೆ. ಆರಂಭದಲ್ಲಿಯೇ ಉತ್ತಮವಾದ ಪ್ರವೇಶ ಹೇಗೆ ಸ್ಥಿರ ಸಮುದಾಯ ಅಲೆಮಾರಿ ಸಮುದಾಯವನ್ನು ಶೋಷಣೆಯನ್ನು ಮಾಡ್ತಾ ಇರೋದು ಮತ್ತು ಅವರನ್ನು ಬಳಸಿ ಬಿಸಾಡುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ವಾದಂತಹ ಪ್ರವೇಶವನ್ನು ಅವರು ನೀಡಿದ್ದಾರೆ. ಅದರಂತೆ ಗೋಷ್ಠಿಯ ಅಧ್ಯಕ್ಷರಾದಂತಹ ಹಿ.ಚಿ. ಬೋರಲಿಂಗಯ್ಯ ಅವರು ಕೂಡಾ ಮುಂದಿನ ಯೋಜನೆಗಳನ್ನು ಕುರಿತು ಸಾಕಷ್ಟು ಒಂದು ವ್ಯವಹಾರಿಕವಾದ ಸಲಹೆಗಳನ್ನು ಕೂಡಾ ನೀಡಿದ್ದಾರೆ. ನಾನು ಕೂಡಾ ಎರಡು ದಿನದಿಂದ ಕುಳಿತು ಎಲ್ಲಾ ಗೋಷ್ಠಿಗಳನ್ನೆಲ್ಲಾ ಕೇಳುತ್ತಾ ಬಂದಿದ್ದೇನೆ. ಆ ದೃಷ್ಟಿಯಿಂದ ಬಹಳ ಉತ್ತಮವಾದಂತಹ ರೀತಿಯಲ್ಲಿ ಈ ಗೋಷ್ಠಿ ನಡೆದಿದೆ ಅಂತ ಅನಿಸುತ್ತಿದೆ.

ಕಾ.ಉ.ಜಾ ನಿನ್ನೆ ಇದರ ಬಗ್ಗೆ ಸಾಕಷ್ಟು ಚರ್ಚೆ ಆಯಿತು. ಖಾಸಗೀಕರಣ, ಉದಾರೀ ಕರಣ, ಜಾಗತೀಕರಣ ಹಿನ್ನೆಲೆಯಲ್ಲಿ ನಾವು ಈಗ ಅನೇಕ ಆತಂಕಗಳನ್ನು ಎದುರಿಸುತ್ತಿರುವಂತಹ ಸಂದರ್ಭದಲ್ಲಿ ಹಂಪಿಯ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎಚ್.ಜೆ.ಲಕ್ಕಪ್ಪಗೌಡರು ಇಂತಹ ಒಂದು ವಿಷಯವನ್ನು ಚರ್ಚೆಗೆ ಒಳಪಡಿಸಿರುವುದರಿಂದ ನಿಜವಾಗಿ ಒಂದು ಆತಂಕವನ್ನು ಎದುರಿಸಲಿಕ್ಕ ಸರಿಯಾದಂತಹ ಸಜ್ಜನ್ನು ಮಾಡುವಂತಹ ಹಿನ್ನಲೆಯಲ್ಲಿ ಆರಂಭವನ್ನು ಮಾಡಿದ್ದಾರೆಂದು ಅನಿಸುತ್ತಿದೆ. ಈ ದೃಷ್ಟಿಯಿಂದ ನಾವು ಜಾಗತೀಕರಣಕ್ಕೆ ಭಯಗೊಳ್ಳುವಂತಹ ಕಾರಣವಿಲ್ಲ ಅಂತ ಹೇಳಿದರೆ ಬಹುತೇಕ ಆ ಒಂದು ಹಿನ್ನೆಲೆಯಲ್ಲಿ ಅಂತಹ ಒಂದು ಆತ್ಮ ಸ್ಥೈರ್ಯವನ್ನು ಇಟ್ಟುಕೊಂಡೇ ಎಂದೆನಿಸುತ್ತದೆ ಅಂತಹ ಒಂದು ಮಾತನ್ನು ಅವರು ಆಡಿದ್ದಾರೆ. ಜಾಗತೀಕರಣವಾಗಲಿ, ಉದಾರೀಕರಣವಾಗಲಿ, ಗ್ಯಾಟ್‌ಒಪ್ಪಂದ ಇದರ ಬಗೆಗೆಲ್ಲಾ ಪ್ರಶ್ನೆ ಬಂತು. ಅವುಗಳನ್ನೆಲ್ಲ ನಾವೀಗ ತಡೆಯಲಿಕ್ಕೆ ಸಾಧ್ಯವಿಲ್ಲ ಎನ್ನುವುದು ಗೊತ್ತಾಗಿದೆ. ಸಾಧ್ಯವಿಲ್ಲ ಎನ್ನುವಾಗ ಮುಂದೆ ನಮ್ಮ ಎದುರಿಗಿರುವುದು ಅವುಗಳನ್ನು ಹೇಗೆ ಎದುರಿಸಬೇಕು ಎನ್ನುವಂತಹದ್ದು. ಎದುರಿಸುವಾಗ ಈಗ ನಮ್ಮ ವಸಾಹತುಶಾಹಿಯ ಹಿನ್ನೆಲೆಯಲ್ಲಿ ನಮ್ಮೆಲ್ಲಾ ವಿದ್ಯಾಭ್ಯಾಸ ಪದ್ಧತಿಯಲ್ಲಿ ಆದಂತಹ ಅನಾಹುತಗಳು ಒಂದು ಸಮಗ್ರ ಅಧ್ಯಯನ ಸ್ವರೂಪ ಇರುವಂತಹದ್ದು ಒಡೆದು ಒಡೆದು ವಿಭಾಗಗಳಾಗಿ ಬಿಟ್ಟು ನಾವೀಗ ಎಲ್ಲಾ ಆ ರೀತಿ ಅಧ್ಯಯನ ಮಾಡುತ್ತಿರುವುದನ್ನು ಮತ್ತೆ ಈಗ ನಮ್ಮ ದೇಸೀ ಹಿನ್ನೆಲೆಯಲ್ಲಿ ದೇಸೀ ಜ್ಞಾನ ಪರಂಪರೆಯ ಹಿನ್ನೆಲೆಯಲ್ಲಿ ಬೇರೆ ರೀತಿಯಲ್ಲಿ ನಾವು ಅಧ್ಯಯನ ಮಾಡಿ ನಮ್ಮ ಸಮಗ್ರ ಜೀವನವನ್ನು ಮತ್ತೆ ರೂಪಿಸಿಕೊಳ್ಳುವಂತೆ ನಾವು ಆಲೋಚನೆ ಮಾಡಬೇಕಿದೆ. ಆ ಹಿನ್ನೆಲೆಯಲ್ಲಿ ಎಲ್ಲ ನಮ್ಮ ಅಧ್ಯಯನ ಶಿಸ್ತುಗಳಲ್ಲಿ ಕೂಡಾ ಪಾಶ್ಚಾತ್ಯ ಮಾದರಿಯ ಸಿದ್ಧಾಂತಗಳನ್ನು ತಿರಸ್ಕರಿಸಿ ಮತ್ತೆ ದೇಸೀಯ ಸಿದ್ಧಾಂತಗಳನ್ನು ಕಂಡುಕೊಳ್ಳುವಂತಹ ನೆಲೆಯಲ್ಲಿಯೂ ಕೂಡಾ ಎಲ್ಲ ಅಧ್ಯಯನ ಶಾಖೆಗಳು ಒಂದು ಅರ್ಥದಲ್ಲಿ ಪ್ರವೃತ್ತವಾಗಿವೆ. ಈ ಹಿನ್ನೆಲೆಯಲ್ಲಿ ನಮಗೆ ಬೇಕಾಗಿರುವುದು ಏನೆಂದರೆ ನಿಜವಾಗಿಯೂ ನಮ್ಮ ಮೂಲ ಸಂಸ್ಕೃತಿಗಳೇನು? ನಮ್ಮ ಸಿದ್ಧಾಂತಗಳು ಎಲ್ಲಿಂದ ಹೊರಡಬೇಕು ಅಂದಾಗ ಬುಡಕಟ್ಟು ಸಂಸ್ಕೃತಿಗಳ ಮೂಲಕ ಈ ಅಲೆಮಾರಿ ಸಂಸ್ಕೃತಿಗಳ ಅಧ್ಯಯನ ಈ ಎಲ್ಲವುಗಳ ಮೂಲಕವಾಗಿ ನಾವು ಅವನ್ನು ಕಂಡುಕೊಳ್ಳಬೇಕಿದೆ. ಹಾಗೆ ಕಂಡುಕೊಂಡು ನಮ್ಮ ಸಿದ್ಧಾಂತಗಳನ್ನು ನಾವು ಮಾಡಿಕೊಂಡು ನಮ್ಮ ಜೀವನವನ್ನು, ಭವಿಷ್ಯವನ್ನು ಒಟ್ಟು ಸಮುದಾಯದ ಭವಿಷ್ಯವನ್ನು ನಾವು ನಿರೂಪಿಸಿಕೊಂಡಾಗ ಸರಿಯಾಗಿ ಈ ಎಲ್ಲಾ ಕರಣಗಳಿಗೂ ಕೂಡಾ ಸಡ್ಡು ಹೊಡೆದು ನಿಲ್ಲಲಿಕ್ಕೆ ಸಾಧ್ಯವಾಗುತ್ತದೆಯೇನೋ ಅನಿಸುವುದು. ಆ ದೃಷ್ಟಿಯಲ್ಲಿ ಕೆಲವು ವರ್ಷಗಳಿಂದ ಬುಡಕಟ್ಟು ಸಂಸ್ಕೃತಿ ಅಧ್ಯಯನವನ್ನು ಈಗಾಗಲೇ ಕನ್ನಡ ವಿಶ್ವವಿದ್ಯಾಲಯವು ಕೈಗೊಂಡಿದೆ. ಆ ಒಂದು ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿರುವಂತಹ ಅಷ್ಟೇ ಮಹತ್ವದ್ದು ಮತ್ತು ಅದಕ್ಕಿಂತಲೂ ಮಹತ್ವವನ್ನು ಪಡೆಯುವಂತಹ ಈ ಅಲೆಮಾರಿ ಸಂಸ್ಕೃತಿಗಳ ಅಧ್ಯಯನ ಏನಿದೆ. ಅದು ಬಹಳ ಮಹತ್ವವನ್ನು ಪಡೆದು ಕೊಳ್ಳುತ್ತಿದೆ. ಈಗ ಅಧ್ಯಯನ ಆಗಿದೆ ಅಂತಾ ನಾನು ಹೇಳುತ್ತಿಲ್ಲ. ಅಧ್ಯಯನ ಪ್ರಾರಂಭವಾಗಲಿಕ್ಕೆ ಈ ಒಂದು ಸಮ್ಮೇಳನ ಉತ್ತಮವಾದಂತಹ ನಾಂದಿಯನ್ನು ಹಾಡಿದೆ ಅಂತಾ ನಾನು ಹೇಳ್ತಾ ಇದ್ದೇನೆ.

ಅಲೆಮಾರಿಗಳು ಯಾರು ಎಂಬುದರ ಬಗ್ಗೆ ನಿನ್ನೆ ಮೊನ್ನೆಯಿಂದಲೂ ಚರ್ಚೆ ನಡೀತು. ಮೊದಲು ಅದನ್ನು ಅವರು ನೊಮಾಡ್ಸ್ ಮತ್ತೆ ಪಶುಪಾಲಕರು ಇಂತಹದ್ದೆಲ್ಲಾ ಚರ್ಚೆ ನಡೀತು. ನಿನ್ನೆ ಮಾತಾಡುತ್ತಾ ಆಕ್ರಮಣಶೀಲರು ಅದರ ಮೇಲೆ ಕಲಾವಿದರು ಇತರರು ಅನ್ನುವಂತಹ ಚರ್ಚೆಯನ್ನೆಲ್ಲಾ ಮಾಡಿದರು. ಬಹುತೇಕ ನಾವೀಗ ಅಲೆಮಾರಿಗಳು ಏಕೆ ನಾನೀಗ ಮತ್ತೆ ಈ ಪ್ರಶ್ನೆಗಳನ್ನು ಎತ್ತುತ್ತಿದ್ದೇನೆಂದರೆ, ನಿಜವಾಗಿಯೂ ಅವರ ಅಧ್ಯಯನವನ್ನು ಮಾಡಿ ಅಲೆಮಾರಿಗಳಲ್ಲಿರುವಂತಹ ಜ್ಞಾನ ಪರಂಪರೆ ಯಾವ ರೀತಿಯದ್ದು? ಅವರಲ್ಲಿರುವಂತಹ ಉತ್ತಮ ಗುಣಗಳು ಏನು? ಯಾವುದನ್ನು ನಾವು ಸ್ಥಿರ ಸಮುದಾಯ ಕಳಕೊಂಡಿದೆ. ಮತ್ತೆ ಅದನ್ನು ನಾವು ಪಡೆಯಲಿಕ್ಕೆ ಆಗತ್ತಾ ಇದೆಯೇ? ಇದನ್ನು ಕೂಡಾ ನಾವು ಆಲೋಚನೆ ಮಾಡಬೇಕಿದೆ.

ಅಲೆಮಾರಿಗಳ ಶೋಷಣೆ ಮಾಡುತ್ತಾ ಇರೋದನ್ನು ಕೂಡಾ ಚಕ್ಕೆರೆ ಶಿವಶಂಕರ್ ಅವರು ಅದನ್ನು ಎತ್ತಿ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ನೋಡಬೇಕಾದರೆ, ಅಲೆಮಾರಿಗಳಲ್ಲಿರುವಂತಹ ಉತ್ತಮ ಗುಣಗಳು ಏನೇನು? ಅವುಗಳ ಅಧ್ಯಯನದ ಸ್ವರೂಫ ಯಾವ ರೀತಿ ಇರಬೇಕು ಅಂತಾ ನಾವು ಹೇಳಬಹುದೇ ಹೊರತಾಗಿ ಆಳವಾದಂತಹ ಅಧ್ಯಯನ ಇನ್ನು ಮೇಲೆ ಪ್ರಾರಂಭವಾಗುತ್ತದೆ. ಆದ್ದರಿಂದ ನೆಲೆ ನಿಲ್ಲದೆ ಕಾಡಿನಿಂದ ಕಾಡಿಗೆ ಆಹಾರವನ್ನೇ ಮುಖ್ಯವಾಗಿ ಹುಡುಕಿಕೊಂಡು ಹೋಗುವಂತ ಬೇಟೆ ವೃತ್ತಿಯನ್ನು ನಾವು ನೋಡ್ತಾ ಇದ್ದೇವೆ. ಆಮೇಲೆ ಪಶುಪಾಲನೆಯನ್ನು ಮಾಡ್ತಾ ಒಂದು ಬಯಲಿನಿಂದ ಮತ್ತೊಂದು ಬಯಲಿಗೆ ಹೋಗುತ್ತಾ ಮಧ್ಯ ನೀರಿನ ತೊಂದರೆಯಾದಾಗ ಊರಿನ ಕಡೆಗೆ ಬರುವಂತಹ ಅಲೆಮಾರಿಗಳನ್ನು ನಾವು ನೋಡಿದ್ದೇವೆ. ಆಮೇಲೆ ಬೇಟೆಯನ್ನು, ಪಶುಪಾಲನೆ ಯನ್ನು ಮಾಡುತ್ತಲೇ ಮತ್ತೆ ಇತರ ಕಲೆಗಳನ್ನು ಕೂಡಾ ರೂಢಿಸಿಕೊಂಡು ಊರಿನ ಹೊರಗೆ ಟೆಂಟ್‌ಗಳನ್ನು ಹಾಕಿಕೊಂಡು ಮತ್ತೆ ಕೆಲವು ಕಾಲ ತಮ್ಮ ಕಲೆಯ ಪ್ರದರ್ಶನದಿಂದ ಹೊಟ್ಟೆ ತುಂಬಿಕೊಳ್ಳುವುದನ್ನು ನಾವು ನೋಡ್ತಾ ಇದ್ದೀವಿ. ಅದಲ್ಲದೆ ಸ್ಥಿರ ಸಮುದಾಯ ವಾಗಿದ್ದು ಕೆಲವು ವರ್ಷಗಳಲ್ಲಿ ಒಂದೆರಡು ತಿಂಗಳು ಮಾತ್ರ ಬೇರೆ ಬೇರೆ ರೀತಿಯ ಕಾರಣಗಳಿಂದ ಸುತ್ತುತ್ತಿರುವ ಅಲೆಮಾರಿಗಳನ್ನು ನಾವು ನೋಡ್ತಾ ಇದ್ದೇವೆ. ಇಂತಹ ಪ್ರತಿಯೊಂದು ಅಲೆಮಾರಿಗಳ ಜೀವನ ಸ್ವರೂಪ ಏನಿದೆ ಅವುಗಳನ್ನೆಲ್ಲಾ ನಾವು ಸರಿಯಾಗಿ ಅಧ್ಯಯನ ಮಾಡಿದಾಗ ಮಾತ್ರ ನಾವು ಅವರಿಗೆ ಮುಂದೆ ಮಾಡುವಂತಹ ಯೋಜನೆಗಳು ಯಾವ ರೀತಿಯಲ್ಲಿ ಸಾಧ್ಯ ಅಂತಾ ಯೋಚನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಎರಡು ಅಂಶಗಳನ್ನಿಲ್ಲಿ ಗುರುತಿಸಬಹುದು. ಒಂದು ಈಗಾಗಲೇ ಕೊಡ ಮಾಡಿದ ಸರ್ಕಾದರ ಯೋಜನೆಗಳು ಏಕೆ ಫಲಪ್ರದವಾಗಲಿಲ್ಲ? ಇನ್ನೊಂದು ಫಲಪ್ರದವಾಗಬೇಕಾದರೆ ಅಲೆಮಾರಿಗಳನ್ನು ಸರಿಯಾಗಿ ಅಧ್ಯಯನ ಮಾಡಿ ಎಂತಹ ಯೋಜನೆಗಳನ್ನು ರೂಪಿಸಿದರೆ ಒಳ್ಳೆಯದು ಎಂದು. ಆ ದೃಷ್ಟಿಯಿಂದ ನೋಡಿದಾಗ ಅಲೆಮಾರಿಗಳ ಸ್ವರೂಪ ಯಾವ ರೀತಿ ಅಂತಾ ನಾವು ನೋಡಬೇಕಾಗುತ್ತದೆ.

ಕಾಡು ನಾಡು ಎರಡು ಸಂಬಂಧವನ್ನು ಇಟ್ಟುಕೊಂಡ ಬೇರೆ ಬೇರೆ ರೀತಿಯ ಅಲೆಮಾರಿ ಜನಾಂಗದವರಿದ್ದಾರೆ. ಕೆಲವರು ಊರ ಹೊರಗೆ ಇರುವಂತಹವರು. ಬೇಟೆಯನ್ನು ಪಶುಪಾಲನೆಯನ್ನು ಮಾಡುವವರಿದ್ದಾರೆ. ಭಿನ್ನ ರೀತಿಯ ಕಲಾ ಕೌಶಲ್ಯವನ್ನು ತೋರಿಸುವವರು ಇದ್ದಾರೆ. ಬೇಟೆಯ ಜೊತೆಗೆ ವ್ಯಾಪಾರವನ್ನು ಮಾಡುತ್ತಿರುವ ಜನಾಂಗದವರಿದ್ದಾರೆ. ಲಂಬಾಣಿಗಳು ವ್ಯಾಪಾರ ಪರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ. ಬಹುತೇಕ ಇವರನ್ನು ಅಲೆಮಾರಿ ಎಂದು ಕರೆಯಬೇಕು ಎನ್ನುವುದರಲ್ಲಿ ನನಗನ್ನೂ ಸಂಶಯವಿದೆ.

ಅವರ ಜೊತೆಗೆನೇ ಅಲೆಮಾರಿಗಳು, ಅರೆ ಅಲೆಮಾರಿಗಳಾಗಿ ಸ್ಥಿರ ಸಮುದಾಯವನ್ನು ಹೊಂದಿರುವಂತವರು ಆಮೇಲೆ ಸ್ಥಿರ ಸಮುದಾಯದವರು ಅಲೆಮಾರಿಗಳಾಗಿ ಮತ್ತೆ ಅರೆ ಅಲೆಮಾರಿಗಳಾಗುವಂತಹ ಸಂದರ್ಭ ಬರುತ್ತಿವೆ. ಈ ಎರಡೂ ಹಿನ್ನೆಲೆಯಲ್ಲಿ ವಾಸ್ತವ ಮತ್ತು ವೈರುಧ್ಯ ಈ ಹಿನ್ನೆಲಯಲ್ಲಿ ಇವತ್ತಿನ ಚರ್ಚೆ ಸಾಕಷ್ಟು ಚರ್ಚೆಯಾಗಿದೆ ಅಂತಾ ನನಗೆ ಅನಿಸುತ್ತಿದೆ.

ಅಲೆಮಾರಿಗಳ ಜೀವನದಿಂದ ಸ್ಥಿರ ಸಮುದಾಯ ಅದು ಕೂಡಾ ಈ ಒಂದು ಜಾಗತೀಕರಣದ ವಿಶ್ವಗ್ರಾಮದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ತಿಳಿಯಬೇಕಾದಂತಹ ವಿಷಯದಲ್ಲಿ ಈ ಸರಕು ಸಂಸ್ಕೃತಿಯ ವಿರುದ್ಧದಲ್ಲಿ ಅವರ ನಿಲುವನ್ನು ನೋಡಬೇಕಾಗುತ್ತದೆ. ಕಡಿಮೆ ಸಾಮಾನು, ಕಡಿಮೆ ಬೆಲೆ, ಕಡಿಮೆ ತೂಕದ ತೀರಾ ಅನಿವಾರ್ಯವಾದ ವಸ್ತುಗಳನ್ನು ಮಾತ್ರ ಅವರು ಬಳಸುತ್ತಿರುವುದನ್ನು ನೋಡಿದರೆ ಬಹುತೇಕ ಆ ಒಂದು ಸ್ಥಿರ ಸಮುದಾಯದ ಸಂಸ್ಕೃತಿಯನ್ನು ಕೊಳ್ಳೆಬಾಕ ಸಂಸ್ಕೃತಿಯನ್ನು ಸರಕು ಸಂಸ್ಕೃತಿ ಎಂದು ನಾವು ಕರೆಯುತ್ತೇವೆ. ಬಹುತೇಕ ಅಂತಹ ದುರಾಶೆ ಸ್ವಾರ್ಥ ಅಥವಾ ಹೇಳಿದ್ದೆಲ್ಲಾ ಸ್ವಿಸ್ ಬ್ಯಾಂಕಲ್ಲಿ ಎರಡು ಮೂರು ತಲೆಮಾರಿಗೆ ಆಗುವಷ್ಟು ಹಣವನ್ನು ಸಂಗ್ರಹ ಮಾಡುವಂತಹದ್ದನ್ನು ಬಿಟ್ಟು ಅವರಲ್ಲಿರುವಂತಹ ಅತೀ ಅನಿವಾರ್ಯವಾದುದನ್ನು ಮಾತ್ರ ಬಳಸುವ ಅವರ ಪ್ರವೃತ್ತಿ ಸ್ಥಿರ ಸಮುದಾಯದವರಿಗೂ ಆದರ್ಶವಾಗಬೇಕೆಂದು ನನಗನಿಸುತ್ತಿದೆ. ಆದ್ದರಿಂದ ಅವರಲ್ಲಿ ಯಾರೋ ಬೇಟೆ ಆಡಿರಲಿ ಅವರು ಅದನ್ನು ತಂದ ಮೇಲೆ ಹಂಚಿ ತಿನ್ನುವಂತಹ ಸ್ವಭಾವವೇನಿದೆಯಲ್ಲಾ ಈ ಹಂಚಿ ತಿನ್ನುವಂತಹ ಸ್ವಭಾವ ಮತ್ತು ನಾಯಕತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವಂತಹ ಆ ಒಂದು ನಿಷ್ಠೆ, ಸರಳತೆ, ಪ್ರಾಮಾಣಿಕತೆ, ಮುಗ್ಧತೆ ಮತ್ತು ಮಾನವ ಮಾನವರ ನಡುವಿರುವ ಸಂಬಂಧ ಈ ಎಲ್ಲಾ ಗುಣಗಳಾಗಿವೆ. ಈಗ ಅವರು ಊರಿಗೆ ಬಂದಾಗ ಊರ ಹೊರಗೆ ಇರುತ್ತಾರೆ. ಊರಿನ ಜನರು ಅವರನ್ನು ನಂಬೋದಿಲ್ಲ ವಿಶ್ವಾಸ ಇಟ್ಟುಕೊಳ್ಳೊದೆಲ್ಲಿ ಎಂಬ ಮಾತು ಕೇಳಿಬರುತ್ತಿದೆ. ಅದು ಬೇರೆ ವಿಚಾರವಾಗುತ್ತದೆ. ಆದರೆ ಗುಂಪಿನ ಒಳಗೆ ನೋಡಿದಾಗ ಅವರಲ್ಲಿರುವಂತಹ ನಿಷ್ಟೆ ಎನ್ನುವಂತಹದ್ದು ಬಹುತೇಕ ನಾಯಕ ನಿಷ್ಟೆ. ನಾಳೆ ಏನಾದರೂ ನಾವು ಯೋಜನೆಗಳನ್ನು ಹಮ್ಮಿಕೊಂಡಾಗ ಅದರ ಒಳಗಿನ ನಾಯಕ ಹುಟ್ಟಿರಬೇಕು ಎನ್ನುವ ಮಾತು ಬಂತು. ಅವರಲ್ಲಿರುವ ನಾಯಕ ಗುಣ ಅವರಲ್ಲಿ ಯೋಜನೆಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸಲಿಕ್ಕೆ ಹೆಚ್ಚು ಸಾಧ್ಯವಾಗಬಹುದು. ಗುಂಪಿನ ನಿಷ್ಟೆ ಎನ್ನುವಂತಹದ್ದು ಆದರ್ಶವಾಗಿರುವುದನ್ನು ನಾವು ಕಾಣುತ್ತಾ ಇದ್ದೀವಿ. ಜೊತೆಗೆ ಕೌಟುಂಬಿಕ ಬಿಗಿ ಸ್ವರೂಪ ನಾವೀಗ ಆಧುನಿಕ ಸಂದರ್ಭದಲ್ಲಿ ಸ್ಥಿರ ಸಮೂಹದಲ್ಲಿ ಯಾವ ರೀತಿ ಆಗುತ್ತಿದೆ. ನಮ್ಮಲ್ಲಿ ಅಲೆಮಾರಿಗಳು ಸ್ಥಿರ ಸಮುದಾಯದ ಸಂದರ್ಭದಲ್ಲಿ ಅಲೆಮಾರಿಗಳಾಗಿದ್ದಾರೆ. ಅವರು ಹೆಂಡತಿ ಮಕ್ಕಳನ್ನು ಎಲ್ಲೊ ಬಿಟ್ಟು ಹೋಗಿ ಅವರು ಎಲ್ಲೋ ಇರೋದನ್ನು ನಾವು ನೋಡ್ತಾ ಇದ್ದೀವಿ. ಆದರೆ ಅಲೆಮಾರಿಗಳ ಜೀವನ ಹೇಗಿದೆ, ಎಂಥಾ ಕಷ್ಟ ಎದುರಾಗಲಿ ಹೆಣ್ಣು ಇವರ ಜೊತೆ ಸೇರಿಕೊಳ್ಳುತ್ತಾರೆ. ಅಲೆಮಾರಿಗಳಲ್ಲಿ ಗಂಡ, ಹೆಂಡತಿ ಮಕ್ಕಳು ಒಟ್ಟಿಗೆ ಇರೋದನ್ನು ನೋಡ್ತಾ ಇದ್ದೀವಿ. ಈ ಕೌಟುಂಬಿಕ ಅಂತ ಹೇಳೋದು ಬಹುತೇಕ ಅಲೆಮಾರಿಗಳಲ್ಲಿ ಧೈರ್ಯವನ್ನು ಆತ್ಮವಿಶ್ವಾಸವನ್ನು ತುಂಬಲಿಕ್ಕೆ ಕಾರಣವಾಗಿದೆ. ಇಲ್ಲಿ ಎಲ್ಲ ವಿಷಯದ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ನನಗೆ ಮಾತನಾಡಲಿಕ್ಕೆ ಉಳಿದಿರುವ ವಿಷಯವೆಂದರೆ, ಹೆಣ್ಣಿನ ಬಗ್ಗೆ, ಸ್ತ್ರೀವಾದದ ಬಗ್ಗೆ ಮಾತನಾಡುವ ಅವಕಾಶ ಉಳಿದಿದೆ ಎಂದು ನಾನು ತಿಳಿದಿದ್ದೆ. ಕಾರಣ ಏನು ಅಂದರೆ ಇಂತಹ ಒಂದು ಕೌಟುಂಬಿಕ ಬಿಗಿಯಲ್ಲಿ ಮನೆಯ ಶುದ್ಧತೆಯ ಬಗ್ಗೆ ಇದ್ದಿರಬಹುದಾದ ಗೋತ್ರದ ಕಲ್ಪನೆಯಲ್ಲಿರಬಹುದು. ಏನೆ ಇದ್ದಿದ್ದರೂ ಕೂಡಾ ಇಲ್ಲಿ ಕೊಡುವಂತಹ ಹೆಣ್ಣಿಗಿರುವಂತಹ ಸ್ವಾತಂತ್ರ್ಯ ಒಳಗೆಯೇ ಹೊರತು ಹೆಣ್ಣಿಗೆ ಸಮಾಜದ ಬಿಗಿ ಇದೆಲ್ಲ ಹೆಣ್ಣಿನ ಬಗ್ಗೆ ಇರುವ ಪೂಜ್ಯಭಾವನೆಯನ್ನು ನಾವು ನೋಡಿದಾಗ, ಬಹುತೇಕ ಅವರಲ್ಲಿರುವಂತಹ ಆತ್ಮವಿಶ್ವಾಸಕ್ಕೆ ಧೈರ್ಯಕ್ಕೆ ಇವತ್ತಿಗೆ ನಾಳೆ ಏನು ಅಂತಾ ನೋಡಿಕೊಳ್ಳೋದಕ್ಕೆ ಬಹುತೇಕ ಅವಳು ಗಂಡಸಿಗೆ ಹೆಗಲಿಗೆ ಹೆಗಲು ಕೊಟ್ಟು ಮುಂದೆ ನಡೆಸಿಕೊಂಡು ಹೋಗಿರುವುದು ಕಾರಣ ಅಂತ ನನಗೆ ಅನಿಸುತ್ತಿದೆ. ಈ ದೃಷ್ಟಿಯಿಂದ ನೋಡಿದಾಗ, ಸ್ತ್ರೀವಾದದ ಈ ಹತ್ತು-ಇಪ್ಪತ್ತು ವರ್ಷಗಳಿಂದ ನೋಡಿದಾಗ ನಮ್ಮ ಭಾರತೀಯ ಕರ್ನಾಟಕದ ಹಿನ್ನೆಲೆಯಲ್ಲಿ ನಾವೆಲ್ಲಾ ವಿಚಾರ ಮಾಡುತ್ತಿರುವುದೆಂದರೆ ಪಾಶ್ಚಾತ್ಯ ಸ್ತ್ರೀವಾದವನ್ನು ಇಟ್ಟುಕೊಂಡು ನಮ್ಮಲ್ಲಿ ಕೂಡಾ ಮಾದರಿಗಳನ್ನು ಹುಡುಕುವಂತಹದ್ದು. ಅವರಲ್ಲಿ ಅನಾವಶ್ಯಕವಿದ್ದಲ್ಲಿ ಕೂಡಾ ಸ್ತ್ರೀ ಸಮಾನತೆ, ಸ್ತ್ರೀ ಶೋಷಣೆ ವಿರುದ್ಧ ಮಾಡುವಂತಹದ್ದು ಎಂದುಕೊಂಡಿದ್ದೇವೆ. ಬಹುತೇಕ ಅದು ಎಷ್ಟರಮಟ್ಟಿಗೆ ಆಯ್ದು ಎಂದರೆ ಸ್ತ್ರೀವಾದಿಗಳು ಎಂದರೆ ಪುರುಷ ಎನ್ನುವಷ್ಟರಮಟ್ಟಿಗೆ ಅದು ಮುಂದುವರೆದು ಹೋಯಿತು. ಆದರೆ ನಿಜವಾಗಿ ಹೇಳೋದಾದರೆ ಇದನ್ನು ಚಕ್ಕೆರೆ ಶಿವಶಂಕರ್ ಅವರು ಪ್ರಸ್ತಾಪ ಮಾಡಿದರು. ಮನುಸ್ಮೃತಿ ಯಾವ ರೀತಿಯಲ್ಲಿ ಹೆಣ್ಣನ್ನು ಕೀಳಾಗಿ ಕಾಣುವಂತಹದ್ದನ್ನು. ಆಗಲಿ, ಶಿಷ್ಟ ಸಾಹಿತ್ಯದ ಕೃತಿಗಳನ್ನು ನಾವು ನೋಡಿದಾಗಲೂ ಕೂಡಾ ಹೆಣ್ಣಿನ ಅಂಗಾಂಗ ಸೌಂದರ್ಯದ ವರ್ಣನೆಯ ಹೊರತಾಗಿ ಅವಳ ವ್ಯಕ್ತಿತ್ವ ಮತ್ತು ಅಸ್ಥಿತ್ವದ ಶಕ್ತಿಯನ್ನು ಗುರುತಿಸುವ ಕಾರ್ಯ ಕಂಡುಬರೋಲ್ಲ. ಹಾಗಿರಬೇಕಾದರೆ ಇಲ್ಲಿ ನಿಜವಾದ ಸ್ತ್ರೀಯ ಶಕ್ತಿಯನ್ನು ನಾವೇನಾದ್ರು ಪಾಶ್ಚಾತ್ಯ ಜಗತ್ತಿಗೂ ಕೂಡಾ ಮಾದರಿಯನ್ನು ಕೊಡುವುದಾದರೆ ಬುಡಕಟ್ಟು ಅದಕ್ಕಿಂತ ಹೆಚ್ಚಾಗ ಅಲೆಮಾರಿ ಜನಾಂಗದಿಂದ ನಾವು ಕೊಡುವದಕ್ಕೆ ಸಾಧ್ಯವಿದೆ. ಅಲ್ಲಿ ಅವಳು ಎಷ್ಟರ ಮಟ್ಟಿಗೆ ಶಕ್ತಿಶಾಲಿ ಅಂತಂದ್ರೆ ಅವಳು ಹೆರಿಗೆ ಆಗಿ ಆಮೇಲೆ ತನ್ನ ಬಾಣಂತನವನ್ನು ತಾನೇ ಮಾಡಿಕೊಂಡು ಮತ್ತೆ ಮರುದಿನ ಮತ್ತೊಂದು ಕಡೆಗೆ ಹೋಗಲಿಕ್ಕೆ ತಯಾರಾಗಿರುತ್ತಾಳೆ. ಅಷ್ಟರಮಟ್ಟಿಗಿನ ಶಕ್ತಿಯನ್ನು ಆತ್ಮಸ್ಥೈರ್ಯವನ್ನು ಪಡೆದುಕೊಂಡಿರುವಂತಹ ಹೆಣ್ಣನ್ನು ಅಲೆಮಾರಿಗಳಲ್ಲಿ ನಾವು ಕಾಣುತ್ತೇವೆ. ಇನ್ನು ಕೆಲವು ಸಮುದಾಯಗಳಲ್ಲಿ ಒಬ್ಬಳು ಬಿಜೋಕ್ತಿ ಇದ್ದುಕೊಂಡು ಅವಳು ಆ ಸಮುದಾಯದ ಪಂಗಡದಲ್ಲಿರುವ ಹೆರಿಗೆಯನ್ನು ಮಾಡಿಸುವುದನ್ನು ನಾವು ನೋಡುತ್ತೇವೆ. ಅವಳು ಆರ್ಥಿಕ ವಾದಂತಹ ಸ್ವಾವಲಂಬನೆ ಇರುವುದು ಕಂಡು ಬರುತ್ತದೆ. ಈ ಗಂಡು ಬೇಟೆಗೆ ಹೋದರೆ ಹೆಣ್ಣು ವ್ಯಾಪಾರಕ್ಕಾಗಿ ಬೇರೆ ಬೇರೆ ಹಳ್ಳಿ ಹಳ್ಳಿ ತಿರುಗುತ್ತಿದ್ದಾಳೆ ಅಥವಾ ಕೊರವಂಜಿಯ ರೀತಿಯಲ್ಲಿ ಹಾಡನ್ನು ಹೇಳುವುದಾಗಲೀ ಅಥವಾ ಹಚ್ಚೆಯನ್ನು ಹಾಕೋದಾಗಲಿ, ಆ ರೀತಿಯಲ್ಲಿ ತನ್ನ ಆರ್ಥಿಕ ಉತ್ಪಾದನೆಯನ್ನು ಮಾಡ್ತಿರೋದನ್ನು ನಾವು ನೋಡ್ತಾ ಇದ್ದೇವೆ. ಈ ರೀತಿಯಾಗಿ ಮಾಡುತ್ತಿರುವುದನ್ನು ನೋಡಿದಾಗ ಆರ್ಥಿಕವಾಗಿ ಸ್ವಾವಲಂಬನೆ ಎನ್ನುವುದು ತನ್ನಿಂದ ತಾನೆ ಸಹಜವಾಗಿ ಬರುತ್ತಿದೆ. ನಾನು ಏಕೆ ಅಲೆಮಾರಿ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಿರುವೆನೆಂದರೆ, ಸಹಜವಾಗಿಯೇ ಜೀವನದಲ್ಲಿ ಗಂಡು ಹೆಣ್ಣಿನ ಜೊತೆಗಿನ ಸಂಬಂಧ ಬೆಳೆದು ನಂತರ ಒಂದು ಸಹಜವಾಗಿರುವಂತಹ ಸ್ವಾತಂತ್ರ್ಯದ ಕಲ್ಪನೆಯನ್ನು ತಂದುಕೊಂಡಿರುವುದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಸಮಾನತೆ ಎನ್ನುವುದನ್ನು ನಾವೀಗ ಕೃತಕವಾಗಿ ಪಡೆಯುವಂತಹದರಲ್ಲಿ ಸಹಜವಾಗಿ ಹೇಗೆ ಬೆಳೆದಿದೆ ಎನುವಂತಹದ್ದನ್ನು ಬಹುತೇಕ ಈ ಅಲೆಮಾರಿ ಜನಾಂಗಗಳಲ್ಲಿ ಗುರುತಿಸಲಿಕ್ಕೆ ಸಾಧ್ಯವಾಗುತ್ತದೆ. ಶೋಷಣೆ ಆಗಿದ್ದಿದ್ರೆ ಶ್ರೀಮತಿ ಲೀಲಾ ಅವರು ಕೆಲವು ಶೋಷಣೆಯ ಬಗ್ಗೆ ಹೇಳಿದರು. ಅದು ಬೇರೆ, ಸಮಾಜದಲ್ಲಿ ಅದು ಸ್ಥಿರ ಸಮುದಾಯದವರಿಂದ ಆಗುತ್ತಿರುವ ಶೋಷಣೆಯೇ ಹೊರತು ಆ ಜನಾಂಗದಲ್ಲಿ ಆಗುತ್ತಿರುವ ಶೋಷಣೆ ಅಲ್ಲ. ಸಾಮಾಜಿಕ ಬಿಗಿಯನ್ನು ಅವರು ಇಟ್ಟುಕೊಂಡಿರುವುದನ್ನು ನೋಡುತ್ತೇವೆ. ಅವರಲ್ಲಿರುವಂತಹ ನ್ಯಾಯ ವ್ಯವಸ್ಥೆ ಇವತ್ತಿಗೂ ಕೂಡಾ ನಮಗೆ ಆದರ್ಶವಾಗಬೇಕು ಅನ್ನುವಂತಹದ್ದು. ಈ ಬುಡಕಟ್ಟಿನ ನ್ಯಾಯ ವ್ಯವಸ್ಥೆಯಾಗಲಿ, ಸಾಮಾಜಿಕ ಬಿಗಿ ಬಂಧನಗಳಾಗಲಿ ಅಲೆಮಾರಿಗಳ ಆರೋಗ್ಯ, ದೇಹದಾಡ್ಯತೆ ಇವೆಲ್ಲ ಉಳಿದು ಬರಲಿಕ್ಕೆ ಅವರಿಗೊಂದು ಆತ್ಮವಿಶ್ವಾಸವನ್ನು ಕೊಡಲಿಕ್ಕೆ ಸಾಧ್ಯವಾಗಿದೆ ಅಂತಾ ನನಗೆ ಅನಿಸುತ್ತಿದೆ. ಅವರ ಜೊತೆಗೆ ಈ ಕಾಯಕ ನಿಷ್ಠೆ ಕಾಯಕ ತತ್ವಸಂಗ್ರಹ ತತ್ವ ಇವೆಲ್ಲವನ್ನೂ ಸಹ ಸ್ಥಿರ ಸಮುದಾಯದವರು ಕಲಿತು ಕೊಳ್ಳುವಂತದ್ದು. ಸರ್ಕಾರದಿಂದ ಸಾಕಷ್ಟು ಯೋಜೆನಗಳು ಬಂದರೂ ಅವರಿಗೆ ತಲುಪದೇ ಇರೋದಕ್ಕೆ ಈ ಮಧ್ಯವರ್ತಿಗಳೇ ಕಾರಣ. ಅದರ ಜೊತೆಗೆ ಸರಕಾರದ ಸೌಲಭ್ಯಗಳನ್ನು ದೊರಕುವಂತೆ ಮಾಡಬೇಕಾದರೆ ಮೊಟ್ಟಮೊದಲು ಅವರಲ್ಲಿ ತಿಳುವಳಿಕೆಯನ್ನು ಮೂಡಿಸುವಂತಹ ಕಾರ್ಯ ಆಗುವಂತಾಗಬೇಕು. ತಿಳುವಳಿಕೆಯನ್ನು ಮೂಡಿಸಬೇಕಾದರೆ ಇವರಲ್ಲಿರುವಂತಹ ಜ್ಞಾನ ಸಂಪತ್ತು ಜ್ಞಾನ ಪರಂಪರೆ, ಅದು ಜನಪದ ವೈದ್ಯಕ್ಕೆ ಸಂಬಂಧ ಪಟ್ಟದ್ದಿರಬಹುದು ಅಥವಾ ಅದರ ಕೌಟುಂಬಿಕ ನ್ಯಾಯಪದ್ಧತಿಯ ಬಗ್ಗೆ ಇರಬಹುದು ಅಥವಾ ಸಾಮಾಜಿಕ ಇದಿರಬಹುದು. ಇಂತ ಅನೇಕ ವಿಷಯಗಳು ಆರ್ಥಿಕ ಸ್ವಾವಲಂಬನೆ ಜೀವನಕ್ಕೆ ಸಂಬಂಧ ಪಟ್ಟದ್ದಿರಬಹುದು. ಇವುಗಳನ್ನೆಲ್ಲಾ ನಾವು ಸರಿಯಾಗಿ ಅಧ್ಯಯನ ಮಾಡದಿದ್ದರೆ ಅವರ ಯೋಜನೆಗಳನ್ನು ಫಲಕಾರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಬೇಕಾದುದು ಯಾವುದೇ ಒಂದು ರೀತಿಯಲ್ಲಿ ಯಾವುದೋ ಸಾಹಿತ್ಯ ವಿದ್ಯಾರ್ಥಿ ಅಥವಾ ಯಾವುದೋ ಎಂಥ್ರೊಪೋಲಾಜಿಕಲ್ ವಿದ್ಯಾರ್ಥಿನೋ ಹೋಗಿ ಅಧ್ಯಯನ ಮಾಡುವಂತಹದಲ್ಲ. ಅವರ ಬಗೆಗೆ ಅಂತರ್‌ಶಿಸ್ತೀಯ ಅಧ್ಯಯನ, ಬಹುಶಿಸ್ತೀಯ ಅಧ್ಯಯನಗಳು ಆದಾಗ ಸಮಗ್ರ ಜ್ಞಾನ ಪರಂಪರೆಯನ್ನು ಅರ್ಥಮಾಡಿಕೊಂಡಾಗ ಅವುಗಳನ್ನು ಉಳಿಸಿಕೊಳ್ಳುವುದರ ಬಗ್ಗೆ, ಅವರ ಕಲಾ ಪರಂಪರೆಯನ್ನು ಕುರಿತು ನಾವು ಅವುಗಳನ್ನು ಯಾವ ರೀತಿಯಲ್ಲಿ ಈಗ ಆಧುನಿಕ ಸಂದರ್ಭದಲ್ಲಿ ಬಳಸಿಕೊಳ್ಳಬೇಕು, ಅವರನ್ನು ಉಳಿಸಿಕೊಳ್ಳಲಿಕ್ಕೆ ಅವರ ಎಲ್ಲಾ ಪರಂಪರೆಗಳು ಉಳಿದು ಅವರ ಇಡೀ ಒಂದು ಬದುಕು ಎಲ್ಲರಂತೆ ಆಗಬೇಕು ಅಂತ ಇಂದು ಚರ್ಚೆ ಮಾಡಲು ಸಾಧ್ಯ ಆಗ್ತಾ ಇದೆ. ಕಲಾ ಪರಂಪರೆಯ ಬಗ್ಗೆ ಬಂದಾಗಲೂ ಕೂಡಾ ಅನೇಕ ಸಲಹೆಗಳನ್ನು ಈಗಾಗಲೇ ಕೊಟ್ಟಿದ್ದಾರೆ. ಕಲಾ ಪರಂಪರೆಯಲ್ಲಿರುವ ಉತ್ತಮ ಅಂಶಗಳನ್ನು ಉಳಿಸಿಕೊಂಡು ಪರಿಷ್ಕರಿಸಿ ಅವರಿಗೆ ಮನೆ ಮನೆಗೆ ಬಂದು ಬೇಡೋಕೆ ಆಗದೇ ಇದ್ದಲ್ಲಿ, ಅವರಿಗೆ ಪ್ರತ್ಯೇಕವಾದ ರಂಗ ಪ್ರದೇಶವನ್ನು ನಿರ್ಮಾಣ ಮಾಡಿ ಕೊಡಬೇಕು. ಆ ಮೂಲಕ ಅವರಿಗೆ ಆರ್ಥಿಕವಾಗಿ ಸಬಲರಾಗಲಿಕ್ಕೆ ಸಾಧ್ಯವಾಗುತ್ತೆ ಅಂತ ಅನಿಸುತ್ತದೆ. ಅಲೆಮಾರಿಗಳ ಜ್ಞಾನ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಂತಹ ಕೆಲಸ ಆಗಬೇಕು. ಈ ಕೆಲಸವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ಕೂಡಿ ಮಾಡಬೇಕು. ಏಕೆಂದರೆ ಅಲೆಮಾರಿಗಳು ಯಾವುದೇ ಒಂದು ರಾಜ್ಯಕ್ಕೆ ಸಂಬಂಧ ಪಟ್ಟವರಲ್ಲ. ಅವರು ಅನೇಕ ರಾಜ್ಯಗಳಲ್ಲಿ ತಿರುಗುತ್ತಾ ಇರುತ್ತಾರೆ. ಅವರಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡಬೇಕಾಗುತ್ತದೆ. ಈ ದೇಸೀ ಸಮ್ಮೇಳನ ಮುಂದಿನ ಅಧ್ಯಯನಗಳಿಗೆ ಚಾಲನೆ ನೀಡುವ ರೀತಿಯಲ್ಲಿ ತುಂಬಾ ಅರ್ಥಪೂರ್ಣವಾಗಿ ನಡೆದಿದೆ.

ಲಿಪ್ಯಂತರ : ಸುಮಂಗಲ ಬಿ. ಅತ್ತಿಗೇರಿ

* * *