ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಜಾನಪದ ಅಧ್ಯಯನ ವಿಭಾಗ ಮತ್ತು ಬೀದರಿನ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ನಾತಕೋತ್ತರ ಕೇಂದ್ರ ಮತ್ತು ಬೀದರಿನ ಜಿಲ್ಲಾ ಆಡಳಿತಗಳು ನಡೆಯಿಸುತ್ತಿರುವ ದೇಸಿ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷರೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರೂ ನನ್ನ ವಿದ್ಯಾ ಗುರುಗಳೂ ಆಗಿರುವ ಪ್ರೊ. ಎಚ್. ಜೆ. ಲಕ್ಕಪ್ಪಗೌಡರವರೇ, ಈಗ ತಾನೇ ಸಮ್ಮೇಳನವನ್ನು ಉದ್ಘಾಟನೆ ಮಾಡಿರುವ ಶ್ರೀಮತಿ ರತ್ನಾಕುಸನೂರುರವರೇ, ಆಶಯ ಭಾಷಣ ಮಾಡಿದ ಗೆಳೆಯ ಡಾ. ಹಿ.ಶಿ. ರಾಮಚಂದ್ರಗೌಡರವರೇ, ನೆರೆದಿರುವಂತಹ ಎಲ್ಲಾ ಜನಪ್ರತಿನಿಧಿಗಳೇ, ಜಿಲ್ಲಾಧಿಕಾರಿಗಳಾದ ಶ್ರಿ ಶ್ಯಾಮಭಟ್ಟರೇ ಮತ್ತು ದೇಸಿ ಜ್ಞಾನದ ಪ್ರಸಾರಕರಾದ ಗೆಳೆಯರೇ, ಕಲಾವಿದರೇ,

ಮೊಟ್ಟಮೊದಲಾಗಿ ಬಸವಣ್ಣನವರು ಹೇಳುವ ಮಾತನ್ನು ನಾನು ಸ್ವಲ್ಪ ಮಾರ್ಪಡಿಸಿ ಹೇಳುವುದಾದರೆ “ಎನಗಿಂತ ಕಿರಿಯರಿಲ್ಲ, ಜಪದರಿಗಿಂತ ಹಿರಿಯರಿಲ್ಲ” ಎನ್ನುವಂತಹ ಮಾತಿನ ಧಾಟಿಯಲ್ಲಿ ನಾನು ಆರಂಬ ಮಾಡುತ್ತಾ ಇದ್ದೇನೆ. ಕನ್ನಡ ವಿಶ್ವವಿದ್ಯಾಲಯ, ಹಂಪಿ ಅದು ಕಳೆದ ಸುಮಾರು ಹನ್ನೆರಡು ವರ್ಷಗಳಿಂದ ದೇಸಿ ಎನ್ನುವಂತಹ ತತ್ವವನ್ನು ಮತ್ತು ಪರಿಕಲ್ಪನೆಯನ್ನು ತನ್ನ ಎಲ್ಲಾ ಚಟುವಟಿಕೆಗಳಲ್ಲಿ ಮುಖ್ಯ ಧಾರೆಯನ್ನಾಗಿಸಿಕೊಂಡು ಬಂದಿದೆ. ಕರ್ನಾಟಕದ ದೇಸಿಯ ಜ್ಞಾನವನ್ನು ಶೋಧಿಸುವುದು, ಅದನ್ನು ಆಧುನಿಕ ಕಾಲಕ್ಕೆ ಅನ್ವಯ ಮಾಡುವುದು ಮತ್ತು ಪ್ರಸರಣ ಮಾಡುವುದು ಅದರ ಒಂದು ಮುಂದುವರಿಕೆಯ ಕೊಂಡಿಯಾಗಿ ಈ ಸಮ್ಮೇಳನ ನಡೆಯುತ್ತಿದೆ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗ ಮತ್ತು ಇತರ ವಿಭಾಗಗಳ ಸ್ನೇಹಿತರನ್ನು ನಾನಿಲ್ಲಿ ನೆನೆಯುತ್ತಿದ್ದೇನೆ. ಈ ಸಮ್ಮೇಳನವನ್ನು ಇಲ್ಲಿ ನಡೆಸುವುದಕ್ಕೆ ಅನುವು ಮಾಡಿಕೊಟ್ಟಿರುವ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ನಾತಕೋತ್ತರ ಕೇಂದ್ರ, ಅದರ ಅಧ್ಯಕ್ಷರಾಗಿರುವಂತಹ ಚನ್ನಬಸಪ್ಪ ಹಾಲಹಳ್ಳಿಯವರು ಮತ್ತು ಅವರ ಒಟ್ಟು ತಂಡ, ಆಮೇಲೆ ಗೆಳೆಯ ಜಗನ್ನಾಥ ಹೆಬ್ಬಾಳೆ, ಜಿಲ್ಲಾಧಿಕಾರಿ ಶ್ಯಾಮಭಟ್, ಇವರೆಲ್ಲರೂ ಬೀದರಿನಲ್ಲಿ ಅಡಗಿಹೋಗಿರುವ ಚೆಲ್ಲಿ ಹೋಗಿರುವ ಸಂಗತಿಗಳನ್ನು ಮತ್ತೆ ಒಂದು ಕಡೆ ಮುಖಾಮುಖಿ ಮಾಡಿ ಅದರಿಂದ ಏನನ್ನು ಪಡೆಯಲಿಕ್ಕೆ ಸಾಧ್ಯ ಎನ್ನುವುದನ್ನು ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ತೋರಿಸಿಕೊಡಲು ಮಾಡಿದ ಪ್ರಯತ್ನಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತಿದ್ದೇನೆ.

ವೃತ್ತಿಯಿಂದ ನಾನು ಅಲೆಮಾರಿಯಲ್ಲ. ಆದರೆ ಪ್ರವೃತ್ತಿಯಿಂದ ನಾವೆಲ್ಲ ಅಲೆಮಾರಿಗಳು ಮತ್ತು ಜಂಗಮರು. ಏಕೆಂದರೆ ಜಾನಪದ ಅನ್ನುವಂತಹ ಕ್ಷೇತ್ರದಲ್ಲಿ ಕೆಲಸ ಮಾಡುವ ‘ಯಾರೇ ಆದರೂ ಕೂಡ ಅವರು ಜಂಗಮರಾಗಬೇಕು’. ಸ್ಥಾವರವಾಗಿದ್ದವರು ಜಾನಪದ ದಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಸ್ಥೂಲವಾಗಿ ನಮ್ಮೆಲ್ಲರ ಮನಸ್ಸಿನಲ್ಲೂ ಎರಡು ಭಾವನೆಗಳು ಇವೆ. ಒಂದು ಜಂಗಮದ ಭಾವನೆ ಮತ್ತೊಂದು ಸ್ಥಾವರದ ಭಾವನೆ. ಚಲನೆ ಅನ್ನುವುದನ್ನು ಮನುಷ್ಯರೆಲ್ಲರೂ ಬಯಸುತ್ತಾರೆ. ಆದರೆ ಒಂದು ಕಡೆ ನೆಲೆಯಿರಬೇಕು ಅನ್ನುವುದಿದೆ. ಇದು ಒಂದು ರೀತಿ ದ್ವಂದ್ವಾತ್ಮಕವಾಗಿರುವ ಚಿಂತನಾಕ್ರಮ. ಆದರೆ ಈ ಚಲನೆ ಮತ್ತು ನೆಲೆಯೂರುವಿಕೆಗಳು ಬದಲಾಗುತ್ತ ಹೋಗುತ್ತವೆ. ಬೇರೆ ಬೇರೆ ಕಾಲಕ್ಕೆ ಒಂದು ಗ್ರಾಮದ ಒಳಗಡೆ ಚಲನೆ ಮಾಡಿ ಗ್ರಾಮದಲ್ಲಿ ನೆಲೆಯೂರಬಹುದು. ಗ್ರಾಮದಿಂದಾಚೆ ಕಡೆ ಒಂದು ಪ್ರಾಂತದಲ್ಲಿ ಚಲನೆ ಮಾಡಬಹುದು. ಆದ್ದರಿಂದಲೇ ಇಡೀ ನಮ್ಮ ವಚನಗಳ ಕಲ್ಪನೆಯೆ ಜಂಗಮ ಮತ್ತು ಸ್ಥಾವರ. ಇದು ನನಗೆ ಬಹಳ ಇಷ್ಟವಾದದ್ದು. ಅವರು ಕೇವಲ ಭಿಕ್ಷೆ ಎತ್ತಿಕೊಂಡು ಹೋಗುವುದಕ್ಕಾಗಿ ಮಾತ್ರ ಜಂಗಮರಾಗಿರುವುದಲ್ಲ. ಅದು ಒಂದು ಅನುಭವದ ಸಾಕ್ಷಾತ್ಕಾರ. ಹಾಗಾಗಿ ನನಗೆ ಇಬ್ಬರೂ ಬಹಳ ಇಷ್ಟ ಅಲ್ಲಮ ಮತ್ತು ಬಸವಣ್ಣ.

ಅಲ್ಲಮ ಒಬ್ಬ ಗುಹೇಶ್ವರನಾಗಿ ಒಳಗಡೆ ಇದ್ದುಕೊಂಡೇ ತನ್ನ ಅಂತರ್‌ತಿಳಿವಳಿಕೆ ಗಳಿಂದ ಸಾಕ್ಷಾತ್ಕಾರ ಮಾಡಿಕೊಂಡರೆ ಬಸವಣ್ಣ ಸಮಾಜದ ನಡುವೆ ಸುತ್ತಾಡುತ್ತಾ, ಸಾಮಾಜಿಕವಾದ ಅಸಮತೋಲನಗಳನ್ನು ಕಂಡು ಅವುಗಳ ಕುರಿತು ಸುಧಾರಣೆ ಮಾಡಿದ. ಆದರೆ ಮೂಲತಃ ಈ ಅಲೆಮಾರಿತನ ಪ್ರವೃತ್ತಿ ಅನ್ನುವುದು ನಮ್ಮಲ್ಲೇ ಇದೆ. ಆದರೆ ಅಲೆಮಾರಿತನ ಎನ್ನುವುದು ಆರ್ಥಿಕತೆ ಜೊತೆಗೆ ನಮ್ಮ ಜೀವನದ ನಿರ್ವಹಣೆಗೆ ಸಂಬಂಧಪಟ್ಟಾಗ ಅದಕ್ಕೆ ಅನೇಕ ಆಯಾಮಗಳು, ಅನೇಕ ವೈರುಧ್ಯಗಳು ಪ್ರಾಪ್ತವಾಗುತ್ತವೆ.

ವಲಸೆ ಹೋಗುವುದು ಹಾಗೂ ಸಾಮಾನ್ಯ ಅಲೆಮಾರಿತನಗಳಲ್ಲಿ ಕೆಲವು ಸಮಾನ ಅಂಶ ಇದ್ದರೂ ಕೂಡ ಅವುಗಳು ಒಂದೇ ಅಲ್ಲ. ಏಕೆಂದರೆ ಒಂದು ಉದ್ಯೋಗದ ಕಾರಣಕ್ಕಾಗಿ ಒಂದು ಊರಿನಿಂದ ಇನ್ನೊಂದೂರಿಗೆ ವಲಸೆ ಹೋಗುತ್ತಾರೆ, ಇನ್ನೊಂದು ರಾಜ್ಯಕ್ಕೆ ವಲಸೆ ಹೋಗುತ್ತಾರೆ, ದೇಶಕ್ಕೆ ವಲಸೆ ಹೋಗುತ್ತಾರೆ. ಅಲ್ಲೇ ನೆಲೆಯೂರುತ್ತಾರೆ. ಅಮೇರಿಕ ಎನ್ನುವ ದೇಶವೇ ಅದು ಅಲೆಮಾರಿಗಳ ದೇಶ. ಅಲ್ಲಿ ಎಲ್ಲರೂ ಕೂಡ ವಲಸೆ ಹೋದವರೆ. ನಮ್ಮ ಕನ್ನಡಿಗರನ್ನೂ ಸೇರಿಸಿಕೊಂಡು ಮೈಗ್ರೇಶನ್ ಮತ್ತು ನೊಮಾಡಿಸಮ್ ಅನ್ನುವುಗಳು ಎರಡೂ ಒಂದೇ ಅಲ್ಲ. ಅವರೆಡರಲ್ಲೂ ಚಲನಶೀಲತೆ ಇದೆ. ಈ ವಲಸೆ ಅಂತ ಹೇಳಿದಾಗ ಕೊನೆಗೂ ಒಂದು ಕಡೆ ನಮಗೆ ಗಂತವ್ಯ ಇದೆ. ಒಂದು ಕಡೆ ನೆಲೆ ಇದೆ ಮತ್ತು ಅಲ್ಲಿ ನಾವು ಭದ್ರವಾಗಿರುತ್ತೇವೆ. ಅಲ್ಲಿ ಅಲೆಮಾರಿತನ ಇದ್ದರೂ ಕೂಡ ಅದು ತಾತ್ಕಾಲಿಕವಾದದ್ದು. ಆದರೆ ವಲಸೆ ಅನ್ನುವುದಕ್ಕೆ ಒಂದು ಕಡೆ ನೆಲೆಯಿಲ್ಲ. ಅದೊಂದು ತರಹಾ ನಕ್ಷತ್ರ ಕಾಣುತ್ತಲೆ ದಿಕ್ಕನ್ನು ಗುರುತಿಸುತ್ತಲೆ ಹೋಗುತ್ತಿದ್ದ ನಮ್ಮ ಜನಪದರ ಹಾಗೆ. ಎಲ್ಲೊ….. ಒಂದು ಕಡೆ ಸಮುದ್ರ ಪಯಣ ಮಾಡುವ ಹಾಗೆ. ಎಲ್ಲೋ ಒಂದು ಕಡೆ ಪರ್ವತ ಬೆಟ್ಟ ಝರಿಗ ಮೂಲಕ ಪಯಣ ಮಾಡುವ ಹಾಗೆ. ಈ ಚಲನಶೀಲತೆ ಮತ್ತು ನೆಲೆಯೂರುವಿಕೆಗಳ ಆಧಾರದಲ್ಲಿ ನಮ್ಮಲ್ಲಿ ಕೃಷಿ ಮತ್ತು ಇತರ ಕಸುಬುಗಳು ಕಾಣಿಸಿಕೊಂಡವು. ವ್ಯಾಪಾರ ಅಂತ ಒಂದನ್ನು ಇಟ್ಟುಕೊಂಡರೆ ಪಶುಪಾಲನೆ ಅಂತ ಇಟ್ಟುಕೊಂಡರೆ, ಬೇಟೆ ಅಂತ ಇಟ್ಟುಕೊಂಡರೆ, ಮನೋರಂಜನೆ ಅಂತ ಇಟ್ಟುಕೊಂಡರೆ ಅಥವಾ ಡೊಂಬರಾಜ ಅಂತ ಇಟ್ಟುಕೊಂಡರೆ ಅಥವಾ ವೈದ್ಯ ನಾರು ಬೇರುಗಳನ್ನು ಮಾರುವುದಂತ ಇಟ್ಟುಕೊಂಡರೂ ಕೂಡ ಕೃಷಿಗೆ ಯಾಕೆ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಶ್ರೇಣೀಕೃತವಾದ ಔನ್ನತ್ಯ ಪ್ರಾಪ್ತವಾಯಿತು ಅಂತ ಹೇಳಿದರೆ, ನಾವು ಒಂದು ಭೂಮಿಯನ್ನು ತೋರಿಸಬಹುದು. ನಿಮಗೇನು ಆಸ್ತಿ ಇದೆ ಅಂತ ಕೇಳಿದರೆ ಇಷ್ಟು ಕುಂಟೆ, ಇಷ್ಟು ಹೆಕ್ಟೇರ್, ಇಷ್ಟು ಎಕರೆ ಎಂದು ನಾವು ತೋರಿಸಬಹುದು. ಆದರೆ ಆ ರೀತಿ ತೋರಿಸಲಿಕ್ಕೆ ಆಗದವರು ಚರರಾಗುತ್ತಾರೆ. ಚರ ಸ್ವತ್ತು ಉಳ್ಳಂತಹ ಕೃಷಿಗೆ ನಮ್ಮ ಒಟ್ಟು ಭಾರತೀಯವಾದ ಪ್ರಾಚೀನ ಸಮಾಜದಲ್ಲಿ ಒಂದು ಉನ್ನತ ಸ್ಥಾನ ಇತ್ತು. ಒಂದು ಬಂಡವಾಳ ಅಂತ ಹೇಳಿ ತೋರಿಸಲಿಕ್ಕೆ ಸಾಧ್ಯವಾಗದಂತಹ ಯಾವುದೇ ಕಸುಬು ಕೂಡ ಅದಕ್ಕಿಂತ ಕೆಳಗಿನ ಹಂತಗಳದ್ದು, ಸ್ತರಗಳದ್ದು ಅಂತ ಹೇಳಿ ನಮ್ಮಲ್ಲಿ ಒಂದು ಆರ್ಥಿಕತೆಯ ಶ್ರೇಣೀಕರಣ ಹಿಂದಿನಿಂದ ನಡೆದುಕೊಂಡು ಬಂದಿದೆ. ಅದಕ್ಕಾಗಿ ಹಿಂದೆಲ್ಲ ಒಂದು ಹೆಣ್ಣು ಕೊಡಬೇಕಾದರೂ ಅದು ಆಸ್ತಿ ಭೂಮಿ ಇದ್ದವನಿಗೆ ಕೊಡುತ್ತಿದ್ದರು. ಆದರೆ ಚರ ಅಂತ ಹೇಳುವಾಗ ವ್ಯಾಪಾರ ಮೂಲತಃ ಚರ. ಇದು ಚರ ಆದದ್ದು ಬಹಳ ತಡವಾಗಿ. ಯಾವುದೇ ಒಂದು ವಸ್ತುವನ್ನು ಲಂಬಾಣಿಗಳು, ಲವಣವನ್ನು ಕೊಂಡು ಹೋಗುತ್ತಾ ಇದ್ದರು ಅನ್ನುವುದರಿಂದ ಹಿಡಿದು ಹಕ್ಕಿಪಿಕ್ಕಿ ಅಥವಾ ಇತರ ಅನೇಕರು ತಮ್ಮ ಕಾಡು ಉತ್ಪನ್ನಗಳನ್ನು, ನಾರು ಬೇರುಗಳನ್ನು ಮಾರುತ್ತಾ ಇದ್ದರು ಅನ್ನುವುದರಿಂದ ಮುಂದುವರೆಸಿ ಅಥವಾ ನಮ್ಮ ಅನೇಕ ಅಲೆಮಾರಿ ಜನಾಂಗದವರೆಲ್ಲೂ ಕೂಡ ತಮ್ಮ ಅರಣ್ಯದಲ್ಲಿ ಕೆಲಸ ಮಾಡುವ ಅರಣ್ಯೋತ್ಪನ್ನಗಳನ್ನು ಹಿಡಿದುಕೊಂಡು ಮಾರಾಟ ಮಾಡುತ್ತಾ ಇದ್ದರು. ಹಾಗಾಗಿ ಈ ತರದ ಒಂದು ಬೇಹಾರದ ಕಾಯಕ ಅದು ಒಂದು ಅರ್ಥದಲ್ಲಿ ನಿರ್ಗತಿಕರ ಕಾಯಕ ಅನ್ನುವ ಭಾವನೆ ಬಂತು. ಇವತ್ತು ಆಧುನಿಕ ಕಾಲದಲ್ಲಿ ವ್ಯಾಪಾರ ಎನ್ನುವುದು ಬಂಡವಾಳವನ್ನು ಹಾಕಿ ಹಣವನ್ನು ಹಿಂದ್ಕೆ ಪಡೆಯುವಂತಹದ್ದಾದ ಕಾರಣ ಒಂದು ಶ್ರೇಣೀಕೃತವಾಗಿ ಆರ್ಥಿಕತೆಯಲ್ಲಿ ಅವನತಿ ಪ್ರಾಪ್ತವಾಗಿದೆ. ಆದರೆ ಮೂಲತಃ ನಮ್ಮಲ್ಲಿ ವ್ಯಾಪಾರ ಅನ್ನುವಂತದ್ದು ಅಲೆಮಾರಿತನದ ಒಂದು ಭಾಗವಾಗಿದ್ದ ಕಾರಣವೇ ನಮ್ಮಲ್ಲಿ ಯಾವುದೇ ಕಸುಬನ್ನು ಕೂಡ ನಾವು ಅದನ್ನ ವ್ಯಾಪಾರ ಅನ್ನುವಂತಹ ಮಾತಿನಿಂದ ಗುರುತಿಸುವುದಿಲ್ಲ. ಏಕೆಂದರೆ ತಿರುಗಾಡಿಕೊಂಡು ವಸ್ತುಗಳನ್ನು ಮಾರುತ್ತಾ ಹೋಗಬಹುದು. ಅದು ಉಪ್ಪು ಇರಬಹುದು. ಔಷಧ ವಸ್ತುಗಳಾಗಿರಬಹುದು, ಚರ್ಮವಿರಬಹುದು, ಜಿಂಕೆಯ ಕೋಡು ಇರಬಹುದು ಅಥವಾ ಸಾಂಬಾರ್ ದಿನಿಸಿನಂತಹ ವಸ್ತುಗಳಿರಬಹುದು.

ಆದ್ದರಿಂದ ಈ ಅಲೆಮಾರಿತನ ಎನ್ನುವುದು ಅನೇಕ ಬಾರಿ, ರೀತಿಯಲ್ಲಿ ಒಂದು ಸ್ಥಿರ ಅಲ್ಲದಿರುವಂತಹ ಬದುಕನ್ನ ಕೊಡುತ್ತಾ ಇತ್ತು. ಆರ್ಥಿಕತೆಯ ಕೃಷಿಯಿಂದ, ಆದರೆ ಆ ತರಹ ಕೊಡುವುದಕ್ಕೆ ನಾವು ಮುಂದಿನ ಮೂರು ದಿನಗಳಲ್ಲಿ ಅದರ ಬಗ್ಗೆ ಚರ್ಚೆ ಮಾಡ್ತಿರಿ. ನಾನು ಅದಕ್ಕೆ ಇನ್ನೊಂದು ನೆಲೆಯ ಚರ್ಚೆಗೆ ದಾರಿ ಒದಗಿಸಿಕೊಡುತ್ತೇನೆ. ಅಲೆಮಾರಿಗಳು ಒದಗಿಸುವಂತಹ ಒಂದು ರೋಮಾಂಚನದ ಬಗ್ಗೆ ವ್ಯಕ್ತಿಗತವಾಗಿ ಒಂದು ಕಡೆ ಸ್ಥಾವರ ವಾಗಿದ್ದಾಗ ನಮ್ಮ ಮನಸ್ಸು ಎಷ್ಟೋ ಬಾರಿ ಕಲಸ ಮಾಡುವುದಿಲ್ಲ. ಅದಕ್ಕಾಗಿ ನಾವು ನಮ್ಮಲ್ಲಿ ಗ್ರಂಥದ ವಿದ್ವಾಂಸರು ಮತ್ತು ಕ್ಷೇತ್ರದ ವಿದ್ವಾಂಸರು ಅಂತ ಕರೆಯುತ್ತೇವೆ. ಗ್ರಂಥದ ವಿದ್ವಾಂಸರು ಅವರೆಷ್ಟೆ ಹಸ್ತಪ್ರತಿಶಾಸ್ತ್ರದ ಕೆಲಸ ಮಾಡಿದರೂ ಕೂಡ ಅವರ ಮನಸ್ಸು ಅದರಾಚೆ ಯೋಚನೆ ಮಾಡಲಿಕ್ಕೆ ಹೋಗುವುದಿಲ್ಲ. ಆದರೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಏನಾಗುತ್ತದೆ ಎಂದರೆ ಹೊಸ ಅನುಭವಗಳು ಬರುತ್ತವೆ. ದಿನ ದಿನವೂ ಒಬ್ಬೊಬ್ಬರ ಜೊತೆಗೆ ಮಾತನಾಡುವ ಸಂವಾದ ಮಾಡುವಂತದ್ದು. ನಾವು ಯಾವುದನ್ನು ತತ್ವದರ್ಶನ ಅಂತ ಕರೆಯುತ್ತೇವೆ, ಯಾವುದನ್ನು ಒಂದು ಚಿಂತನ ಕ್ರಮ ಅಂತ ಕರೆಯುತ್ತೇವೆಯೋ ಆ ಚಿಂತನ ಕ್ರಮ ಅನ್ನುವುದು ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ.

ನಾವು ಒಂದೊಂದು ಕ್ಷಣದಲ್ಲಿ ಕೂಡ ನಮ್ಮ ಮುಂದೆ ಬರುವ ಅಗ್ನಿದಿವ್ಯಗಳಿಗೆ ಒಡ್ಡಿಕೊಳ್ಳುವುದರ ಮೂಲಕ ಮತ್ತು ಅನುಭವಗಳನ್ನು ನಮ್ಮವನ್ನಾಗಿ ಮಾಡಿಕೊಳ್ಳುವುದರ ಮೂಲಕ ಆ ಅರ್ಥದಲ್ಲಿ ಕೂಡ ಒಂದು ಬಗೆಯ ಈ ಅಲೆಮಾರಿತನ ಎನ್ನುವುದು ಒಂದು ಗೋಳಿನಯಾತ್ರೆ ಮಾತ್ರವಾಗಿರದೆ, ಒಂದು ಉಲ್ಲಾಸದ ತಿರುಗಾಟ ಆಗಿರುತ್ತದೆ ಅನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಅದಕ್ಕಾಗಿ ಒಂದು ದೇಶಿ ಚಿಂತನೆ ಮಾಡುವಾಗ, ದೇಶೀ ಜ್ಞಾನದ ಬಗ್ಗೆ ಚರ್ಚೆಗಳು ಮುಂದೆ ನಡೆಯುತ್ತವೆ. ನಾವು ನೋಡ್ತಾ ಇರುವುದು ತಿರುಗಾಟಕ್ಕೆ ಕೊಡುವಂತಹ ಒಂದು ಚಿಂತನೆ. ಅದು ಒಂದು ಕಡೆ ಕುಳಿತುಒಂಡು ಇರುವಂತಹ ಕೃಷಿಕರ ಚಿಂತನೆಗಿಂತ ಅಥವಾ ಒಂದು ಗ್ರಂಥ ಓದಿ ಗಳಿಸಿದ ತಿಳುವಳಿಕೆಗಿಂತ, ಸನಾತನ ತಿಳುವಳಿಕೆಗಿಂತ ಭಿನ್ನ ಮಾತ್ರವಲ್ಲ ವೈವಿಧ್ಯಮಯ ಮತ್ತು ಬಹುರೂಪದ್ದು. ನಾವು ಬಹುಸಂಸ್ಕೃತಿಗಳ ಬಗ್ಗೆ ಇವತ್ತು ಮಾತನಾಡುತ್ತಾ ಇರುವಾಗಲೆಲ್ಲ ನಾವು ಎಷ್ಟೋಬಾರಿ ಅದನ್ನ ಕ್ಲಿಷೆಯಾಗಿ ಜಾರ್ಗನ್ ಆಗಿ ಒಂದು ಪರಿಕಲ್ಪನೆಯಾಗಿ ಮಾತ್ರ ಬಳಸುತ್ತೇವೆ. ಅದನ್ನ ವಿವರಿಸಬೇಕು ಅಂತ ಹೇಳಿದರೆ ಅನೇಕ ಬಾರಿ ಕಷ್ಟ ಆಗುತ್ತದೆ. ಒಂದು ಹೇಳಿಕೆಯಾಗಿ ಮಾತ್ರ ಬಳಸುತ್ತೇವೆ. ಬಹುಸಂಸ್ಕೃತಿ ಅನ್ನುವಂತಹದ್ದು ಬಹು ಬದುಕಿನ ರೀತಿಗಳನ್ನು, ಬಹು ಬದುಕಿನ ಸಾಧ್ಯತೆಗಳನ್ನು, ಬದುಕಿನ ಹೊಸ ಅನುಭವಗಳನ್ನು ಮುಖಾಮುಖಿ ಮಾಡುವಂತದ್ದು. ಹಾಗಾಗಿಯೇ ಒಂದು ಅಲೆಮಾರಿ ಸಂಸ್ಕೃತಿಯಲ್ಲಿ ನಾವು ಬಹುಸಂಸ್ಕೃತಿಯನ್ನು ಕಾಣುತ್ತೇವೆ. ಉದಾಹರಣೆ ಕೊಡುತ್ತಿಲ್ಲ ನಮ್ಮ ಗೆಳೆಯರೆಲ್ಲ ಅದನ್ನ ಮುಂದೆ ಹೇಳುತ್ತಾರೆ.

ಅನೇಕ ಕಸುಬುಗಳನ್ನು ನೀವು ನೋಡಿದ್ದೀರಿ. ಕಸುಬುಗಳ ಪಲ್ಲಟ ಕೇವಲ ಆರ್ಥಿಕತೆಯ ಪಲ್ಲಟ ಮಾತ್ರವಲ್ಲ ಅದು ಒಂದು ಚಿಂತನೆಯ ಪಲ್ಲಟವಾಗಿದೆ ಎಂಬುದನ್ನು ನಾವು ಇವತ್ತು ಗಮನಿಸಬೇಕು. ಅನೇಕರು ಬೇಟೆಯಿಂದ ಕೃಷಿ ಕೂಲಿಗೆ ಬಂದಾಗ ಪಶುಪಾಲನೆಯಿಂದ ಕೂಲಿಗೆ ಬಂದಾಗ ಉದಾಹರಣೆಗೆ ರಾಜಗೊಂಡರು ಬೀದರಿನಲ್ಲಿ ಆಯುರ್ವೇದ ವ್ಯಾಪಾರಕ್ಕೆ, ಗಿಡಮೂಲಿಕೆಗಳನ್ನು ಹಿಡಿದು ಬಂದಾಗ, ಇವೆಲ್ಲವುಗಳನ್ನು ನಾವು ಕೇವಲ ವೃತ್ತಿಯ ಬದಲಾವಣೆ ಎಂದು ಅಷ್ಟೇ ತಿಳಿದುಕೊಳ್ಳದೆ ಇಡೀ ಸಂಸ್ಕೃತಿಯ ಚಿಂತನೆಯ ಬದಲಾವಣೆ ಅಂತ ತಿಳಿದುಕೊಳ್ಳಬೇಕು. ಈ ಬಹುಸಂಸ್ಕೃತಿ ಅನ್ನುವಂತದ್ದು ಅಲೆಮಾರಿ ಜನಾಂಗದಲ್ಲಿ ಬಹಳ ಮುಖ್ಯವಾಗಿರುವಂತಹದ್ದು ಈ ಕುರಿತು ನಾವು ಅದನ್ನು ಒಂದು ಪ್ಯಾಕೇಜ್ ಆಗಿ ಮಾತ್ರ ನೋಡುತ್ತೇವೆ. ಬಹುಸಂಸ್ಕೃತಿಯ ರೂಪಗಳ ಬಗ್ಗೆ ಯೋಚನೆ ಮಾಡುವಂತಹ ಅಗತ್ಯ ಇದೆ. ನಾನು ಮುಂದೆ ನಗರೀಕರಣ ಮತ್ತು ಆಧುನಿಕತೆಯತ್ತ ಬರುವುದಕ್ಕೆ ಮೊದಲು ಇನ್ನೊಂದು ಅಂಶವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಅಲೆಮಾರಿ ಜನಾಂಗಗಳಾಗಲಿ, ಅರೆ ಅಲೆಮಾರಿ ಜನಾಂಗಗಳಾಗಲಿ ಮೂರು ನೆಲೆಗಳಲ್ಲಿ ರೂಪ ಬದಲಾವಣೆ ಆಗುತ್ತ ಹೋಗುತ್ತವೆ. ಒಂದು ಪರಿಸರದಿಂದ ಇನ್ನೊಂದು ಆರ್ಥಿಕತೆಯಿಂದ ಮತ್ತೊಂದು ಜನಸಂಖ್ಯಾ ಆಧಾರದಿಂದ ಕರ್ನಾಟಕದ ಅನೇಕ ಬುಡಕಟ್ಟುಗಳನ್ನು ನೋಡಿದರೆ ಅವರ ಜನಸಂಖ್ಯೆ ಒಂದು ಸಾವಿರವನ್ನು ಮೀರುವುದಿಲ್ಲ. ಇನ್ನು ಕೆಲವು ಐದು ನೂರು, ಆರು ನೂರು, ಇನ್ನೂ ಕೆಲವು ನೂರುಗಳ ಸಂಖ್ಯೆ ಎನ್ನುವುದು ನಮ್ಮ ಅನೇಕ ಗೆಳೆಯರು ಬರೆದ ಪುಸ್ತಕಗಳನ್ನು ನೋಡಿದರೆ ಗೊತ್ತಾಗುತ್ತದೆ. ಈ ಜನಸಂಖ್ಯೆಗಳು ಹೆಚ್ಚು ಕಡಿಮೆ ಆಗುವುದಕ್ಕೂ…. ಅವರ ವೃತ್ತಿಗಳ ಬದಲಾವಣೆಯಾಗುವುದಕ್ಕೂ ಅವರ ದೃಷ್ಟಿಕೋನ ಬದಲಾವಣೆಯಾಗುವುದಕ್ಕೂ ಸಂಬಂಧ ಇದೆ. ಇಕೋಲಜಿ, ಎಕೋನಮಿ, ಡೆಮೋಗ್ರಫಿ ಅನ್ನುವ ಮೂರು ಅಂಶಗಳನ್ನು ನಾವು ಗಮನಿಸಬೇಕು. ವಡ್ಡರ ಜನಾಂಗ ಕರ್ನಾಟಕದಲ್ಲಿ ಬಹಳ ಮುಖ್ಯವಾದ ಅಲೆಮಾರಿ ಜನಾಂಗ. ಅವರಲ್ಲಿ ಕಲ್ಲು ವಡ್ಡರು ಮತ್ತು ಮಣ್ಣು ವಡ್ಡರು ಅಂತ ಇದ್ದಾರೆ. ಅವರ ಪರಿಸರ ಎಲ್ಲಿ ಕಲ್ಲುಗಳು ಸಿಗುತ್ತವೆಯೋ ಅಲ್ಲಿ. ಕೇವಲ ಕಲ್ಲು ಇದ್ದರೆ ಮಾತ್ರ ಅಲ್ಲ, ಕಲ್ಲನ್ನು ಕೆಲಸ ಮಾಡಿಸುವಂತಹ ಅಂದರೆ ದೇವಾಲಯವನ್ನು ಕಟ್ಟಿಸುವಂತವರು, ಅಣೆಕಟ್ಟು, ಮನೆ ಕಟ್ಟಿಸುವಂತವರು ಇರಬೇಕು. ವಡ್ಡರ ಸಂಖ್ಯೆ ಬಹಳ ಹೆಚ್ಚಿದಾಗ ಕೆಲಸ ಬೇಗ ಮುಗಿದರೆ ನಿರುದ್ಯೋಗಿಗಳಾಗುತ್ತಾರೆ. ಹಾಗಾಗಿ ಸಂಖ್ಯೆ ಕಡಿಮೆ ಇದ್ದಷ್ಟು ಉದ್ಯೋಗವಕಾಶ ಜಾಸ್ತಿ. ಇದು ಮನೆ ಕಟ್ಟುವುದಕ್ಕೆ ಸಂಬಂಧಿಸಿರಬಹುದು. ಮರದ ಕೆಲಸಕ್ಕೆ ಸಂಬಂಧಿಸಿರಬಹುದು. ಆದ್ದರಿಂದಲೇ ಸಾಮಾನ್ಯವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಕಾಣಿಸುವಂತ ಕಲ್ಲು ವಡ್ಡರನ್ನು ನೋಡಿದರೆ ಅಂತಹ ವಡ್ಡರು ಅನೇಕ ಜಿಲ್ಲೆಗಳಲ್ಲಿ ಕಾಣಿಸುವುದಿಲ್ಲ. ಅವರು ಮಗ್ಗುನನ್ನು ದಂಡಿಸುತ್ತಾರೆ. ಅಂದ್ರೆ ಕಟ್ಟಿದ ರಚನೆ ಮಾಡುವಲ್ಲಿ ಅಣೆಕಟ್ಟು ರಚನೆ ಮಾಡುವಲ್ಲಿ ಮಗ್ಗುವಡ್ಡರು ಸಿಗುತ್ತಾರೆ. ಅದು ಆಣೆಕಟ್ಟು ಮುಗಿತು ಅಂದ ಕೂಡಲೆ ಅವರು ಸ್ಥಳಾಂತರ ಗೊಳ್ಳುತ್ತಾರೆ. ಆಗ ಕೊನೆಗೆ ಎಲ್ಲೂ ಕೂಡ ಈ ತರದ ಒಂದು ಪರಿಸರ ಇಲ್ಲದೆ ಹೋದರೆ ಆರ್ಥಿಕತೆ ಇಲ್ಲದೆ ಹೋದರೆ ಅವರು ಸೋಲುತ್ತಾರೆ.

ನಮ್ಮ ಅನೇಕ ಅಲೆಮಾರಿ ಬುಡಕಟ್ಟುಗಳ ಬಗ್ಗೆ ಅಧ್ಯಯನಗಳು ನಡೆಯಬೇಕಾಗಿದೆ. ಸ್ಥಳಾಂತರಗೊಂಡಾಗ ಅವರು ನಗರಗಳಿಗೆ ಬರುತ್ತಾರೆ. ನಗರೀಕರಣಕ್ಕೂ ಮತ್ತು ಅಲೆಮಾರಿಗಳ ಈ ಸ್ಥಳಾಂತರಕ್ಕೂ ಸಂಬಂಧವಿದೆ. ಅನೇಕ ದಲಿತ ಬುಡಕಟ್ಟುಗಳು ಅಲೆಮಾರಿ ಜನಾಂಗಗಳು ಇವತ್ತು ನಗರಪಾಲಿಕೆಗಳಲ್ಲಿ ಅದು ನಗರ ಇರಬಹುದು, ಮಹಾನಗರ ಇರಬಹುದು. ಅವುಗಳಲ್ಲಿ ಅವರು ಕಸ ಗುಡಿಸುವವರಾಗಿ ಶುಚಿ ಮಾಡುವವರಾಗಿ ಯಾಕೆ ಇದ್ದಾರೆ…? ಅಂಥ ಪ್ರಶ್ನೆ ಕೇಳಿಕೊಳ್ಳಬೇಕು. ಅವರ ಕಸುಬಿನ ವೈಶಿಷ್ಟ್ಯಕ್ಕೂ, ಅವರ ಕಸ ಗುಡಿಸುವ ವೈಶಿಷ್ಟ್ಯಕ್ಕೂ ಏನು ಸಂಬಂಧ ಇಲ್ಲ. ಆದರೆ ಕರ್ನಾಟಕದಲ್ಲಿ ಬಹುತೇಕ ನಗರ ಪಾಲಿಕೆಗಳಲ್ಲಿರುವ ಈ ವರ್ಗವನ್ನು ನೋಡಿದರೆ ಅವರು ಮೂಲತಃ ಯಾವ ಕಡೆಯಿಂದಲೋ ಬಂದವರು. ಅವರು ಮುಖ್ಯವಾಗಿ ದಲಿತ ವರ್ಗಗಳ ಮಂದಿ. ಅವರ ವೃತ್ತಿಯಲ್ಲಿ ಯಾವುದೇ ಒಂದು ಕಲಾ ವೈಶಿಷ್ಟ್ಯಗಳಿಲ್ಲ. ಒಂದು ಕಡೆ ಶಿಕ್ಷಣವಿಲ್ಲ ಇನ್ನೊಂದು ಕಡೆ ಯಾವುದೇ ತರದ ಉದ್ಯೋಗಗಳಿಗೆ ಅವಕಾಶ ಇಲ್ಲ. ಬದುಕಿನ ಎಲ್ಲಾ ಬಾಗಿಲುಗಳು ಕೂಡ ಮುಚ್ಚಿ ಹೋದಂತೆ ಅನೇಕ ಅಲೆಮಾರಿಗಳು ಕಸ ಮುಸುರೆ ಕೆಲಸಗಳಿಗೆ ಲಾಯಕ್ಕು ಅನ್ನುವ ತರಹ ಆಗಿದೆ.

ಇನ್ನೊಂದು ಚಲನಶೀಲತೆಯ ಬಗ್ಗೆ. ಚಲನಶೀಲತೆಯನ್ನುವುದು ಕೇವಲ ಅಲೆಮಾರಿ ಜನಾಂಗಕ್ಕೆ ಮಾತ್ರ ಅಲ್ಲ, ನಮ್ಮ ಎಲ್ಲಾ ಬುಡಕಟ್ಟು, ಕೆಳವರ್ಗಕ್ಕೆ ಸಂಬಂಧಿಸಿರುವಂತದ್ದು. ಅದು ಎರಡು ತರಹದ್ದು ಒಂದು ಆಚರಣ ಚಲನಶೀಲತೆ ಇನ್ನೊಂದು ಲೌಕಿಕ ಚಲನಶೀಲತೆ. ಇವರೆಡರ ನಡುವೆ ಒಂದು ರೀತಿಯ ದ್ವಂದ್ವವಿದೆ. ಹೆಚ್ಚಾಗಿ, ವ್ಯಕ್ತಿ ಬ್ರಾಹ್ಮಣೀಕರಣಕ್ಕೆ ಒಳಗಾಗಲಿಕ್ಕೆ ಬಯಸುತ್ತಾನೆ. ಇನ್ನೊಂದು ಕಡೆಯಲ್ಲಿ ಮೀಸಲಾತಿ ಕಾರಣಕ್ಕಾಗಿ ಕೆಳಮುಖವಾಗಲಿಕ್ಕೆ ಇಷ್ಟಪಡುತ್ತಾನೆ. ಮೀಸಲಾತಿಗೆ ಸಂಬಂಧಪಟ್ಟ ಸರಕಾರದ ಅನೇಕ ದಾಖಲೆಗಳನ್ನು ಗಮನಿಸಿದರೆ ಇಲ್ಲಿ ಕಾಣಿಸುವ ವೈಶಿಷ್ಟ್ಯತೆ ಏನು ಅಂದರೆ ಇವರೆಲ್ಲರನ್ನು ಸಂಗಿಗಳನ್ನಾಗಿ ಗಮನಿಸುತ್ತೇವೆ. ಹಾಗಾಗಿ ಈ ತರಹದ ಸಂಖ್ಯೆಗಳನ್ನು ಪಡೆಯುವುದಕ್ಕಾಗಿ ಮತ್ತು ಹೆಸರುಗಳ ರೂಪಾಂತರಗಳನ್ನು ಪಡೆಯುವುದಕ್ಕಾಗಿ, ಒಂದೇ ಜಾತಿಗೆ ಅನೇಕ ಹೆಸರುಗಳು ಪ್ರಾದೇಶಿಕವಾಗಿ ಇರುವಂತವು. ತೆಲುಗಿನಲ್ಲಿ, ಕನ್ನಡದಲ್ಲಿ, ಮರಾಠಿಯಲ್ಲಿ, ತಮಿಳಿನಲ್ಲಿ ಇದ್ದಹಾಗೆ ಅವೆಲ್ಲವುಗಳನ್ನು ಕೂಡ ಒಂದು ಮಾಡುವುದಕ್ಕೆ ಮಾಡುವಂತಹ ಪ್ರಯತ್ನ. ಇನ್ನೊಂದು ಆ ರೀತಿಯ ದಾಖಳಾತಿಯ ಜೊತೆಗೆ ತಮ್ಮ ಮೂಲವನ್ನು ಹೇಳಿಕೊಳ್ಳುವುದಕ್ಕಾಗಿ ಅವರು ಹುಡುಕುವಂಥಹ ಕುಲ ಕಥನಗಳು ಅಥವಾ ತಮ್ಮ ಕುಲದ ಮೂಲವನ್ನು ಹೇಳುವ ಐತಿಹ್ಯ ಮತ್ತು ಪುರಾಣಗಳು. ಬಹುತೇಕವಾಗಿ ಎಲ್ಲಾ ಜಾತಿಗಳು ಕೂಡ ತಮ್ಮ ಕುಲಕಥನವನ್ನು ದಾಖಲೆ ಮಾಡಲಿಕ್ಕೆ ಬಯಸುತ್ತಾರೆ. ನೀವು ಯಾವುದೋ ಜಾನಪದ ಕ್ಷೇತ್ರಕ್ಕೆ ಹೋದಾಗಲೂ ಕೂಡ ಅವರು ತಮ್ಮ ಕುಲವನ್ನು ಒಂದು ಗೋತ್ರದಿಂದ ಅಥವಾ ಯಾವುದೋ ಒಂದು ಐತಿಹ್ಯದಿಂದ ಕೆಲವು ಕಥೆಗಳಿಂದ ಕೊಡುತ್ತಾರೆ ಮತ್ತು ಅದನ್ನು ನೀವು ಪುಸ್ತಕ ಮಾಡುತ್ತೀರಿ. ಇದು ಒಂದು ತರದ ದಾಖಲೆ. ಯಾವುದಾದರೂ ಒಂದು ಆಯೋಗ ಬಂದರೆ ನಮ್ಮ ಕುಲಕ್ಕೆ ಒಂದು ದಾಖಲೆ ಬೇಕು ಅಂತ ಒಂದು ಪುಸ್ತಕವನ್ನು ತಮ್ಮ ಸಂಘದಿಂದ ಪ್ರಿಂಟ್ ಮಾಡುತ್ತಾರೆ. ಇದನ್ನು ನಾವು ನಿಜ ಅಥವಾ ಸುಳ್ಳು ಅಂತ ಹೇಳಲು ಬರುವುದಿಲ್ಲ. ಹೆಚ್ಚಾಗಿ ಈ ತರದ ನಿರ್ಮಾಣಗಳು ಅವು ಆಧುನಿಕತೆಯೆಡೆ ಒಂದು ಸಂವಾದ ಮತ್ತು ಅವರ ಎದುರು ಇರುವಂತಹ ವೈರುಧ್ಯಗಳು. ಇವು ಬ್ರಾಹ್ಮಣೀಕರಣದ ಕಡೆ ಮೇಲ್ಮುಖವಾಗುವಂತಹ ತವಕ. ಇನ್ನೊಂದು ಕಡೆ ಕೆಳಮುಖವಾಗಿ ಹೋಗುವಂತಹ ಅನಿವಾರ್ಯತೆಗಳು. ಇವು ಎರಡು ಏಕಕಾಲಕ್ಕೆ ನಡೆಯುತ್ತಿರುವಾಗ ನಾವು ಇವರನ್ನು ಆಧುನಿಕತೆಯ ಸಾಮಾಜೀಕರಣದಲ್ಲಿ ಹೇಗೆ ಕೊಂಡೊಯ್ಯಬೇಕು ಎನ್ನುವುದು ಯೋಚನೆ ಮಾಡುವಂತಹ ಸವಾಲು. ಸಮಸ್ಯೆ ಅಂತ ಹೇಳ್ತಾ ಇಲ್ಲ. ಏಕೆಂದರೆ ಡಾ. ರಾಮಚಂದ್ರಗೌಡರು ಅನೇಕ ಮಾತು ಎತ್ತಿದರು. ನಾವೆಲ್ಲ ಸಮಾನ ವಯಸ್ಕರು. ಸಮಾನ ವಯಸ್ಕರು ಆಗಿರುವುದರಿಂದ ಎಷ್ಟೋ ಬಾರಿ ಇದನ್ನು ಹಂಚಿಕೊಳ್ಳುತ್ತೇವೆ. ಆದರೆ ನಮಗೂ ಕೆಲವು ಗೊಂದಲಗಳಿವೆ. ಜಾಗತೀಕರಣ ಮತ್ತು ಆಧುನಿಕರಣ ಎಲ್ಲವುಗಳಿಗೂ ಕೂಡ ಈ ಬುಡಕಟ್ಟು ಅಥವಾ ಅಲೆಮಾರಿ ಸಂಸ್ಕೃತಿಗಳ ದೇಸಿ ಜ್ಞಾನವನ್ನು ಆಯುಧಗಳನ್ನಾಗಿ ಮಾಡಿಕೊಂಡು ಹೋರಾಡಬಹುದು ಎನ್ನುವುದರ ಬಗ್ಗೆ ಪ್ರಶ್ನೆಗಳು ಆಲೋಚನೆಗಳು ಅನುಮಾನಗಳು ಇವೆ. ಮತ್ತೊಂದು ಕಡೆ ಅದನ್ನ ವೈಭವೀಕರಿಸಿ ನೋಡಬಾರದು ಅಂತ ಹೇಳುವವರು ಇದ್ದಾರೆ. ಇನ್ನೊಂದು ಕಡೆ ಅಲೆಮಾರಿಗಳ ದೇಸಿ ಜ್ಞಾನದಿಂದ ಪ್ರಯೋಜನ ಪಡೆಯಬಹುದು ಅನ್ನುವುದು. ಒಂದು ಕಡೆ ಶಿಕ್ಷಣವನ್ನು, ಮತ್ತೊಂದು ಕಡೆ ದೇಸಿ ಜ್ಞಾನವನ್ನು, ಇನ್ನೊಂದು ಕಡೆ ಉದ್ಯೋಗವನ್ನು ಮತ್ತೊಂದು ಕಡೆ ಅನನ್ಯತೆಯನ್ನು ನಾವು ಹೇಗೆ ಹೊಂದಾಣಿಕೆ ಮಾಡಬೇಕು? ನಾವು ಇದಾವುದಕ್ಕೂ ಉತ್ತರ ಕೊಡಬಾರದು. ಏಕೆಂದರೆ ಅಧ್ಯಕ್ಷರು ಯಾವಾಗಲೂ ತೀರ್ಮಾನ ಕೊಡಬೇಕು ಅಂತ ಇಲ್ಲ. ಆದರೆ ನಾನು ಈ ಪ್ರಶ್ನೆಗಳನ್ನು ಯಾಕೆ ಎತ್ತುತ್ತೇನೆ ಎಂದಿಲ್ಲ. ಅಂದ್ರೆ ನಾವೆಲ್ಲ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ನಾವು ಗಮನಿಸುವಂತದ್ದು ಎಲ್ಲರಿಗೂ ಗೊತ್ತಿರುವಂತದ್ದು ಯಾವುದೇ ಸಂದರ್ಭದಲ್ಲಿ ಅದು ಪ್ರಾಚೀನ ಸಮಾಜವಾಗಲಿ, ಮಧ್ಯಯುಗದ ಸಮಾಜವಾಗಲಿ ಆಧುನಿಕ ಸಮಾಜವಾಗಲಿ.

ಆರ್ಥಿಕತೆ ಒಂದು ಶಕ್ತಿ ಅಂತ ನಾವು ಅಂದುಕೊಳ್ಳುವಾಗಲೂ ಆರ್ಥಿಕತೆ ಒಂದು ಶಕ್ತಿ ಅಲ್ಲ ಅನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇವತ್ತಿನ ದಿನ ಒಬ್ಬನಲ್ಲಿ ಎಷ್ಟೋ ಕೋಟಿ ಹಣ ಇದ್ದರೂ ಕೂಡ ಅವನು ಸಮಾಜದಲ್ಲಿ ಶಕ್ತಿಯಾಗುವುದಕ್ಕೆ ಆಗುವುದಿಲ್ಲ. ಅಧಿಕಾರ ಎಷ್ಟೋ ಬಾರಿ ಹಣಕ್ಕಿಂತ ದೊಡ್ಡ ಶಕ್ತಿಯಾಗಬಹುದು. ಒಬ್ಬ ಜಿಲ್ಲಾಧಿಕಾರಿ ಒಬ್ಬ ಬಂಡವಾಳಶಾಹಿಗಿಂತ ಹೆಚ್ಚು ಶಕ್ತಿವಂತನಾಗಬಹುದು. ಆದುದರಿಂದ ಒಂದು ಜನಾಂಗದ ಅಧಿಕಾರ ಮತ್ತು ಹಣವನ್ನು ಹೆಚ್ಚಿಸಿದಾಗ ಹೆಚ್ಚು ಭದ್ರತೆಯನ್ನು ಕೊಡಲಿಕ್ಕೆ ಸಾಧ್ಯ. ಅಧಿಕಾರ ಅನ್ನುವುದನ್ನು ಬಿಟ್ಟರೆ ಸಾಂಸ್ಕೃತಿಕ ಮತ್ತು ಸಾಮಾಜಿಕಗಳನ್ನು ಬೆಸೆಯುವುದರ ಮೂಲಕ ಕೊಡುವುದಕ್ಕೆ ಸಾಧ್ಯವಿಲ್ಲ. ಈ ಸಾಂಸ್ಕೃತಿಕ ಮತ್ತು ಸಾಮಾಜಿಕವನ್ನು ಬೆಸೆಯುವುದು ಒಂದು ಸವಾಲಿನ ಪ್ರಶ್ನೆ. ಏಕೆಂದರೆ ಅನೇಕ ಬಾರಿ ದೇಸಿ ಕೌಶಲ್ಯಗಳನ್ನು ಆಧುನಿಕ ಸಂದರ್ಭಕ್ಕೆ ನಾವು ಹೇಗೆ ರೂಪಾಂತರಿಸಬೇಕು ಅನ್ನುವ ಆಲೋಚನೆಯನ್ನು ನಾವು ಕೈಬಿಡುತಲಿದ್ದೇವೆ. ಉದಾಹರಣೆಗೆ ಅವರ ವೈದ್ಯಜ್ಞಾನ ಇರಬಹುದು ಅಥವಾ ಡೊಂಬರು ದೇಹವನ್ನು ಶಕ್ತಿಯನ್ನಾಗಿ, ವಸ್ತುವನ್ನಾಗಿ, ಕೌಶಲ್ಯವನ್ನಾಗಿ ಬಳಸುವುದ ಅವರ ಜ್ಞಾನವಾಗಿರಬಹುದು ಅಥವಾ ಬೇಟೆಯಲ್ಲಿ ಬಳಸುವ ತಂತ್ರಗಾರಿಕೆಯಿರಬಹುದು. ಬೇಟೆ ಇವತ್ತು ನಿಷೇಧಿಸಲಾಗಿದ್ದರೂ ಆಧುನಿಕ ಪತ್ತೆದಾರಿ ಅಥವಾ ಆಧುನಿಕ ಅಪರಾಧ ವಿಜ್ಞಾನ ಎನ್ನುವುದು ನಮ್ಮಲ್ಲಿ ಇವತ್ತು ಕೂಡ ಒಂದು ದೇಶಿ ಜ್ಞಾನದಿಂದಲೆ ನಿರ್ಮಾಣವಾಗಿರುವುದು. ಯಾವುದೇ ಕ್ರಿಮಿನಲಾಜಿ ಪಾಠ ಮಾಡುವರು ಕೂಡ ದೇಶಿ ಜ್ಞಾನ ಪಡೆದಿರಲೇಬೇಕು. ಇನ್ನೊಂದು, ನಮ್ಮ ಬ್ರಿಟಿಷರ ಕಾಲಕ್ಕೆ ನಿಮಗೆ ಗೊತ್ತಿರುವಂತದ್ದು ಅನೇಕ ಅಲೆಮಾರಿಗಳನ್ನು ಕ್ರಿಮಿನಲ್ ಟ್ರೈಬ್ಸ್ ಎಂತ ಕರೆದರು. ಹಿಂದೆ ಅನೇಕ ಮಂದಿ ಕಳ್ಳತನ ಮಾಡುತ್ತಾ ಇದ್ದರು. ಅನೇಕ ಮಂದಿ ವೇಶ್ಯಗಾರಿಕೆ ಮಾಡ್ತ ಇದ್ದರು. ಅನೇಕ ಮಂದಿ ದರೋಡೆ ಮಾಡುತ್ತಾ ಇದ್ದರು, ಅವನ್ನು ಮಾಡ್ತ ಇದ್ದವರು ಎಲ್ಲಾ ಅಲೆಮಾರಿ ಬುಡಕಟ್ಟುಗಳಾಗಿದ್ದವರು. ಕಳ್ಳತನವನ್ನು, ದರೋಡೆಯನ್ನು, ವೇಶ್ಯಗಾರಿಕೆಯನ್ನು ನಾವು ಒಂದು ಪ್ರತ್ಯೇಕವಾದ ಕಸುಬುಗಳು ಅಂತ ಯಾರೂ ನೋಡುವುದಿಲ್ಲ. ಅವು ನಮ್ಮ ಒಟ್ಟು ಸಾಮಾಜಿಕ ವ್ಯವಸ್ಥೆಯ ಒಂದು ಭಾಗ. ಪ್ರತ್ಯೇಕವಾಗಿ ಅವುಗಳನ್ನು ನಾವು ಕಸುಬುಗಳು ಎಂದು ಹೇಳಲಿಕ್ಕೆ ಆಗುವುದಿಲ್ಲ. ಆದಕಾರಣ ಇಡೀ ಸಮಾಜ ವ್ಯವಸ್ಥೆಯಲ್ಲಿ ಇವರನ್ನು Criminal Tribes ಅಂತ ಹೇಳುವಂತಹದ್ದು ಒಂದು Criminel ಮನಸ್ಸು. ಒಂದು ಅಪರಾಧಿ ಮನಸ್ಸು ಮಾತ್ರ ಅಂತಹ ಬುಡಕಟ್ಟುಗಳನ್ನ ಅಪರಾಧಿ ಬುಡಕಟ್ಟು ಅಂತ ಕರೆಯುವುದು. ಹಾಗೆ ಹೇಳಿದರೆ ನಗರದಲ್ಲಿರುವವರೆಲ್ಲರೂ Criminel Tribes. ನಗರದಲ್ಲಿ ಇರುವಷ್ಟು ಕ್ರಿಮಿನಲ್ಸ್‌ಗಳು ಎಲ್ಲೂ ಕೂಡ ಇಲ್ಲ. ಥ್ರರ್ಸ್ಟನ್ ಮುಂತಾದವರು ಪಟ್ಟಿ ಮಾಡುವಾಗ ಅನೇಕ ಬಾರಿ ತಮ್ಮ ದಾಖಲಾತಿಗಳಲ್ಲಿ ಈ ಕ್ರಿಮಿನಲ್ ಅನ್ನುವ ಪದ ಬರುತ್ತದೆ. ಒಟ್ಟು ನಾನು ಅದನ್ನು ಇನ್ನೊಂದು ರೀತಿ ಯೋಚನೆ ಮಾಡಲಿಕ್ಕೆ ಅವಕಾಶ ಕೊಡುತ್ತೇನೆ. Criminel ಅನ್ನುವಂತಹ ಒಂದು ಭಾವನೆ ಅದು ಅವರು ಮಾಡುವ ಕೆಲಸಗಳ ಬಗ್ಗೆ ಆದಕಾರಣ ಆ ಕೆಲಸಗಳನ್ನು ಯಾಕೆ ಮಾಡುತ್ತಾರೆ? ಆರ್ಥಿಕತೆ ಒಂದೇ ಅಲ್ಲ. ಅಲೆಮಾರಿತನ ಒಂದು ಇಡೀ ವೃತ್ತಿಯಾಗಿದ್ದಾಗ ನಾವಿಕರುಗಳು ಒಂದು ವೇಳೆ ವೇಶ್ಯಾವಾಟಿಕೆಗೆ ಹೋದರೆ ವೇಶ್ಯಾವಾಟಿಕೆ ನಿರ್ಮಾಣ ಮಾಡುವುದಕ್ಕೆ ಒಂದು ಸಮಾಜ ಇರುತ್ತದೆ. ಇವರೆಲ್ಲರನ್ನು ಪ್ರತ್ಯೇಕಿಸಿ ಅಪರಾಧಿಗಳು ಅಂತ ಹೇಳುವುದಿಲ್ಲ. Tribe ಕೊಡುವ ನಾಮಕರಣಗಳನ್ನು ಕುರಿತು ನಾವು ಚಿಂತನೆ ಮಾಡಬೇಕಿದೆ. ಆಮೇಲೆ ರಾಜಕೀಯವಾದ ಶಕ್ತಿ ಅನ್ನುವುದು ಕೂಡ ಅನಿವಾರ್ಯ. ರಾಜಕೀಯವನ್ನು Untouchable ಅಂತ ಮಾಮಿ ಭಾವಿಸಲಿಲ್ಲ. ಯಾವುದೇ ಕ್ಷೇತ್ರ ಶಿಕ್ಷಣವಾಗಲಿ, ಸಾಂಸ್ಕೃತಿಕವಾಗಲಿ ಯಾವುದೇ ಆಗಲಿ ರಾಜಕೀಯವಾಗಿ ನಮ್ಮ ಶಕ್ತಿಯನ್ನು ತೋರಿಸಿ ಕೊಳ್ಳುವುದು ಅಗತ್ಯ. ಹಾಗಾಗಿ ಈ ತರದ ಛಿದ್ರ ಛಿದ್ರವಾದ ಅಲೆಮಾರಿಗಳೆಲ್ಲರೂ ಕರ್ನಾಟಕದ ಅಲೆಮಾರಿ ಒಕ್ಕೂಟವಾಗಿ ಒಂದು ಶಕ್ತಿಯನ್ನು ಪ್ರದರ್ಶನ ಮಾಡಲಿಕ್ಕೆ ಸಾಧ್ಯವಾಗಬಹುದು. ಏಕೆಂದರೆ ನೂರು ಇನ್ನೂರು ಒಂದು ಸಾವಿರ ಜನಸಂಖ್ಯೆಯ ಬುಡಕಟ್ಟುಗಳು ದುರ್ಬಲವಾಗಿರುತ್ತವೆ. ಬಹುಶಃ ಕೆಲವು ಲಕ್ಷಣಗಳ ಅಲೆಮಾರಿ ಒಂದು ಒಕ್ಕೂಟ ಶಕ್ತಿಶಾಲಿಯಾಗಲಿಕ್ಕೆ ಸಾಧ್ಯವಿದೆ. ಆಗ ಯಾವುದು ಬಹುಸಂಸ್ಕೃತಿಗಳನ್ನು ಅಥವಾ ಬಹುರೂಪಗಳನ್ನು ಒಂದು ರೀತಿಯಲ್ಲಿ ತಮ್ಮ ಸಾಂಸ್ಕೃತಿಕವಾದಂತಹ ಒಂದು ಚೌಕಟ್ಟು ಆಗಿ ಈ ತರದ ಅಲೆಮಾರಿ ಬುಡಕಟ್ಟುಗಳು ರೂಪಿಸಿಕೊಳ್ಳಲಿಕ್ಕೆ ಸಾಧ್ಯವೇ ಅನ್ನುವುದು ಒಂದು ಪ್ರಶ್ನೆ. ಬಹುಶಃ ಈ ಮೂರು ದಿನಗಳ ಕಾಲ ಅನೆಕ ವಿಷಯಗಳ ಮೇಲೆ ಚರ್ಚೆ ನಡೆಯುತ್ತದೆ. ಕೊನೆಯದಾಗಿ ಒಂದು ಮಾತು ಭಾಷೆಯ ಬಗೆಗೆ.

ಭಾಷೆಯನ್ನು ಒಂದು ಮಾಪಕವಾಗಿ ಅಲೆಮಾರಿ ಬುಡಕಟ್ಟುಗಳ ಬಗ್ಗೆ ಭಾವಿಸಲು ಆಗುವುದಿಲ್ಲ. ಏಕೆಂದರೆ ಅದು ತೆಲುಗು ಆಗುತ್ತದೆ. ತೆಲುಗಿನಿಂದ ಕನ್ನಡಕ್ಕೆ ಬರುತ್ತದೆ. ತಮಿಳು ಕನ್ನಡಕ್ಕೆ ಬರುತ್ತದೆ. ಉರ್ದುನಿಂದ ಕನ್ನಡಕ್ಕೆ ಬರುತ್ತದೆ. ಕನ್ನಡದಿಂದ ಉರ್ದುವಿಗೆ ಬರುತ್ತದೆ. ಹಾಗಾಗಿ ತಮಿಳು ತೆಲುಗು ಅಥವಾ ಗುಜರಾತಿ ಭಾಷೆ ರಾಜಸ್ತಾನಿ ಭಾಷೆ. ಆದಕಾರಣವೆ ಒಂದು ಅರ್ಥದಲ್ಲಿ ನಗನೆ ಅನಿಸುವಂತದ್ದು ನಾವು ಈ ಪ್ರಾಂತ ಭಾಷೆಗಳ ಕಲ್ಪನೆಗೆ ವಿರುದ್ಧವಾದಂತದ್ದು ಅಲೆಮಾರಿ (ಸಂಸ್ಕೃತಿ) ಭಾಷೆ ನಮ್ಮ ಆಲೋಚನೆಗಳನ್ನು ಪ್ರಶ್ನಿಸುವಂತದ್ದು. ಹಾಗಾಗಿ ಬಹುಶಃ ಒಟ್ಟು ಈ ಅಲೆಮಾರಿ ಸಂಸ್ಕೃತಿ ಒಂದು ರೀತಿಯಲ್ಲಿ ಬಹುಸಂಸ್ಕೃತಿಯನ್ನು ಹೊಂದಿದ್ದು ಮತ್ತು ಬಹುಭಾಷೆಗಳಿದ್ದು ಅನ್ನುವುದನ್ನು ನಾವು ಗಮನಿಸಬೇಕು ಕೊನೆಯದಾಗಿ ಈ ಲೋಕದೃಷ್ಟಿಯ ಬಗೆಯಾಗಲಿ, ಆರ್ಥಿಕತೆಯ ಬಗೆಯಾಗಲಿ, ರಾಜಕೀಯದ ಬಗೆಯಾಗಲಿ ಮತ್ತು ಚರ ಹಾಗೂ ಚರದ ಬಗೆಯಾಗಲಿ, ಅನನ್ಯತೆ ಮತ್ತು ವೈರುಧ್ಯ ಬಗೆಯಾಗಲಿ ಅಥವಾ ಅಲೆಮಾರಿಗಳ ಜೊತೆಗೆ ಮಾಡುವಂತಹ ಸಂವಾದದ ಎಲ್ಲಾ ಚರ್ಚೆಗಳು ಈ ಮೂರು ದಿನಗಳ ಕಾಲ ನಡೆದು ಉಪಯುಕ್ತವಾಗಲಿ ಮತ್ತು ಕನ್ನಡ ವಿಶ್ವವಿದ್ಯಾಲಯ ಇವೆಲ್ಲವೂ ಗಾಳಿಯಲ್ಲಿ ತೂರಿ ಹೋಗದೆ ದಾಖಲೆಯಾಗಿ ಇವತ್ತಿನ ದಿನ ‘ಮಾಟ ಮಂತ್ರ ಮೋಡಿ’ ಗ್ರಂಥ ಬಂದ ಹಾಗೆ ಇಡೀ ದೇಶಿಜ್ಞಾನದ ಗ್ರಂಥ ರೂಪದಲ್ಲಿ ಬರಲಿ, ಗ್ರಂಥ ರೂಪದಲ್ಲಿ ಬರಲಿ ಎಂದು ಹಾರೈಸುತ್ತೇನೆ. ನಮಸ್ಕಾರ.

ಲಿಪ್ಯಂತರ : ಚಂದ್ರಪ್ಪ ಸೊಬಟಿ