ವಿವಾಹವಾಗಿ ಮೂರು ವರ್ಷ, ಒಂದು ಮಗುವಿನ ತಂದೆ. ಆದರೂ ಸಹ, ನನ್ನ ಹೆಂಡತಿ ಮದುವೆಗೆ ಮುಂಚೆಯೇ ಬೇರೆಯವನ ಜೊತೆಯಲ್ಲಿ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ನನೆ ಮೊದಲನೆಯ ರಾತ್ರಿಯೇ ಅನ್ನಿಸಿತು. ಹೇಗೆಂದರೆ ಕನ್ಯಾಪೊರೆ ಬಗ್ಗೆ ನನ್ನ ಮಿತ್ರ ವೈದ್ಯರು ಹೇಳಿದ್ದರು. ಆದರೆ ಅಂದು ಯಾವ ತೊಂದರೆಯೂ ಆಗದೆ ಕ್ರಿಯೆ ನಡೆಯಿತು. ಇದು ಮನಸ್ಸಿಗೆ ಬಂದು ಬಹಳ ನೋವು ಉಂಟಾಗುತ್ತಾ ಇದೆ. ಸಾಲದ್ದಕ್ಕೆ ಸುಮಾರು ಒಂದು ವರ್ಷದಿಂದ ಹತ್ತಿರ ಹೋದರೆ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ ಹಾಗೂ ತುರಿಕೆ ಬರುತ್ತದೆ. ಒಂದೊಂದು ಸಲ ಚರ್ಮದ ತುದಿಯಲ್ಲಿ ಸೀಳು ಸೀಳಾಗಿ ರಕ್ತ ಬಂದು ಬಹಳ ನೋವಾಗುತ್ತದೆ. ಅದನ್ನು ನೋಡಿ ಅವಳು ಮುಖ ಮರೆಸಿಕೊಂಡು ಹೊರಟು ಹೋಗುತ್ತಾಳೆ. ಇದರಿಂದ ಬಹಳ ಕ್ಷೀಣಿಸುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳೋಣವೆನಿಸುತ್ತದೆ. ಕೆಲಸವನ್ನೂ ಸಹ ಬಿಟ್ಟುಬಿಟ್ಟಿದ್ದೇನೆ. ಯಾವುದರಲ್ಲಿಯೂ ಆಸಕ್ತಿ ಇರುವುದಿಲ್ಲ.

ನಿಮ್ಮ ಸಮಸ್ಯೆ ಪ್ರೌಢಾವಸ್ಥೆಯಲ್ಲಿ ಲೈಂಗಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎನ್ನುವ ಸತ್ಯವನ್ನು ದೃಡಪಡಿಸುವ ನಿದರ್ಶನ. ಪ್ರಾಯಶಃ ಭಾರತೀಯ ಮನೋಗತಿ ಅಥವಾ ಆಲೋಚನಾ ಕ್ರಮದಲ್ಲಿಯೇ ಆಳವಾಗಿ ಬೇರೂರಿರುವ ಲೈಂಗಿಕ ಚಾರಿತ್ರ‍್ಯಗಳ ಬಗ್ಗೆ ಇರುವ ಕಲ್ಪನೆ ಅಥವಾ ಅವಕಲ್ಪನೆ ಈ ಪರಿಸ್ಥಿತಿಗೆ ಬಹುಮಟ್ಟಿಗೆ ಕಾರಣ. ಸದಾಚಾರ ಮತ್ತು ವ್ಯಭಿಚಾರಗಳ ಬಗ್ಗೆ ನಿರ್ದಿಷ್ಟ ಮನೋಚಿಂತನೆ ಸಹ ಇಂತಹ ಸಮಸ್ಯೆಗಳ ಹುಟ್ಟಿಗೆ ಪೂರಕ.

ನಮ್ಮ ಪುರಾಣ ಕತೆಗಳನ್ನೇ ತೆಗೆದುಕೊಳ್ಳಿ. ತನ್ನ ಪತ್ನಿ ತನ್ನ ಸಚ್ಚಾರಿತ್ರ‍್ಯವನ್ನು ಸಾಬೀತುಗೊಳಿಸಬೇಕೆಂದು ಶ್ರೀರಾಮ ಸೀತಾಮಾತೆಯನ್ನು ಅಗ್ನಿಪರೀಕ್ಷೆಗೆ ತೊಡಗಿಸಿದ. ಅದೇ ರೀತಿಯಲ್ಲಿ ಪಾಂಚಾಲಿಯಾಗಿಯೂ ಪತಿವ್ರತಾ ಶಿರೋಮಣಿಯೆಂದು ಗೌರವಿಸಲ್ಪಡುವ ದ್ರೌಪದಿಯ ಅಂತಸ್ತು ಸಹ ಒಂದು ರೀತಿಯ ಲೈಂಗಿಕ ಉದಾರೀಕರಣದ ಮನೋಭಾವವನ್ನು ಪ್ರಕಟಿಸುತ್ತದೆ. ಆದರೆ ಇದೊಂದು ಪುರುಷ ಪ್ರಧಾನ ಚಿಂತನೆ ಮಾತ್ರ. ವಿವಾಹದ ಪೂರ್ವದ ಲೈಂಗಿಕ ಸಂಪರ್ಕ, ವಿವಾಹೇತರ ಲೈಂಗಿಕ ಚಟುವಟಿಕೆಗಳು ಸಹ ನಮ್ಮ ಪುರಾಣ, ಭಾಗವತ, ಜಾನಪದಗಳಲ್ಲಿ ಕಂಡುಬರುವ ಮೂಲಭೂತ ಅಂಶಗಳು. ನಾನು ಇಲ್ಲಿ ಯಾವುದೇ ವಸ್ತುಗತ ಹಾಗೂ ವ್ಯಕ್ತಿಗತ ಹಿನ್ನೆಲೆಯಲ್ಲಿ ಈ ಉದಾಹರಣೆಗಳನ್ನು ಆರಿಸಿಕೊಂಡು ಯಾವುದೇ ವಿವಾದ ಸೃಷ್ಟಿಸುವುದಕ್ಕೆ ಇಷ್ಟಪಡುವುದಿಲ್ಲ. ಬದಲಾಗಿ ನಾವುಗಳೇ ಕಾಲಕ್ರಮಕ್ಕನುಗುಣವಾಗಿ ಪರಿಸರಕ್ಕನುಗುಣವಾಗಿ ಸೃಷ್ಟಿಸಿದ ಲೈಂಗಿಕತೆಯ ಚಾರಿತ್ರ‍್ಯಕ್ಕೆ ಸಂಬಂಧಿಸಿ, ಮೌಲ್ಯಗಳು ಎಷ್ಟೊಂದು ಹುಸಿಯಾಗಿವೆ. ಅದನ್ನು ಸಮರ್ಥಿಸಲು ನಮ್ಮ ಮನೋಗತಿ ಎಷ್ಟೊಂದು ಒತ್ತಡಕ್ಕೆ ಒಳಗಾಗಿ ಲೈಂಗಿಕ ಚಿತ್ತಚಾಂಚಲ್ಯ ತಲೆದೋರುತ್ತದೆ ಎಂಬುದನ್ನು ಮಾತ್ರ ವಿವರಿಸಲು ಬಯಸುತ್ತೇನೆ.

ನಿಮ್ಮ ಸಮಸ್ಯೆಯನ್ನೇ ತೆಗೆದುಕೊಳ್ಳಿ. ಪ್ರಥಮ ರಾತ್ರಿ ಸುಗಮವಾಗಿ ಸಾಗಿತು. ಅದಕ್ಕೆ ಪತ್ನಿಯಲ್ಲಿ ಕನ್ಯಾಪೊರೆ ಶಿಥಿಲವಾಗಿತ್ತು, ರಕ್ತಸ್ರಾವವಾಗಲಿಲ್ಲ, ಸಂಗಾತಿಗೆ ನೋವುಂಟಾಗಲಿಲ್ಲ ಎನ್ನುವುದರ ಬಗ್ಗೆ ಸಂತಸದ ಬದಲು ಅದು ನಿಮ್ಮನ್ನು ಭ್ರಮಾಧೀನ ಚಾಂಚಲ್ಯದ ಅಂಚಿಗೆ ತಂದಿದೆ. ಪ್ರಾಯಶಃ ನಿಮಗೆ ತಿಳಿದಿರಲಿಕ್ಕಿಲ್ಲ, ತನ್ನ ಕ್ರಿಯೆಯ ಬಗ್ಗೆ ಅನುಮಾನ, ಆತಂಕದಿಂದ, ಸ್ವಾಸ್ಥ್ಯ ಲೈಂಗಿಕ ಕಲ್ಪನೆಯಿಲ್ಲದ ವ್ಯಕ್ತಿ ಪ್ರಥಮ ರಾತ್ರಿ ಲೈಂಗಿಕ ಕ್ರಿಯೆಯಿಂದ ವಂಚಿತನಾಗಿ ಆತಂಕದ ಮುದ್ದೆಯಾಗುವುದುಂಟು. ಆದರೆ ನಿಮ್ಮ ಸುಲಭ ಯಶಸ್ಸೇ ನಿಮ್ಮ ಪಾಲಿಗೆ ಮುಳ್ಳಾಗಿದೆ. ನೆನಪಿನಲ್ಲಿಡಿ. ಕನ್ಯಾಪೊರೆ ಕನ್ಯೆಯ ಸಚ್ಚಾರಿತ್ರ‍್ಯಕ್ಕೆ ನಿಖರ ಪುರಾವೆಯಲ್ಲ. ಇಂದಿನ ಯುವತಿ ಹಲವಾರು ಕ್ರೀಡೆಯಲ್ಲಿ, ದಿನನಿತ್ಯದ ಚಟುವಟಿಕೆಯಲ್ಲಿ ಪುರುಷನಂತೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ. ಆಟದ ಮೈದಾನದಲ್ಲಿ, ತಾಲೀಮು ಮಾಡುವಾಗ, ಸೈಕಲ್ ಸ್ಕೂಟರ‍್ ಸವಾರಿಯ ಸಂದರ್ಭಗಳಲ್ಲಿ, ಈಜಾಡುವಾಗ ಮ್ತು ನೈಸರ್ಗಿಕವಾಗಿಯೇ ಹಸ್ತ ಮೈಥುನದ ಚಟದಿಂದ ಕನ್ಯಾಪೊರೆ ಛಿದ್ರವಾಗುವ ಸಾಧ್ಯತೆ ಹೆಚ್ಚು. ಅದೇ ರೀತಿ ಕನ್ಯಾಪೊರೆ ತೀರಾ ಸಡಿಲಗೊಂಡಾದ ಅದು ಜಗ್ಗುತ್ತದೆಯೇ ವಿನಾ, ಛಿದ್ರವಾಗಿ ರಕ್ತಸ್ರಾವವಾಗಬೇಕೆಂಬ ನಿಯಮವೇನೂ ಇಲ್ಲ. ದಯವಿಟ್ಟು ಈ ತಪ್ಪು ವಿಚಾರ ಅಥವಾ ಮೂಢನಂಬಿಕೆಯನ್ನು ತಲೆಯಿಂದ ತೆಗೆದುಹಾಕಿ ಸುಖದಾಂಪತ್ಯದ ಕಡೆ ಗಮನ ನೀಡಿ. ಕಳೆದೊಂದು ವರ್ಷದಲ್ಲಿ ನಿಮ್ಮೊಂದಿಗೆ ನಿಮ್ಮವರು ಲೈಂಗಿಕವಾಗಿ ಸಹಕರಿಸುತ್ತಿಲ್ಲವೆಂದು ತಿಳಿಸಿದ್ದೀರಿ. ನೀವು ಅಸಡ್ಡೆಯಿಂದ, ಅನುಮಾನದಿಂದ ಕಾಣುವ ಯಾವ ಮಹಿಳೆಯೂ ಸಹ ನಿಮ್ಮೊಂದಿಗೆ ರತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ರತಿಕ್ರಿಯೆ ಎರಡೂ ಮನಸ್ಸಿನ, ಎರಡೂ ದೇಹಗಳ ಮಿಲನದ ಪರಾಕಾಷ್ಠೆಯ ಹಂತ. ಅದು ನಿಮ್ಮಿಂದ ಸಾಧ್ಯವೇ? ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ. ಅವರನ್ನು ಸೇರಿದಾಗ ಗುಳ್ಳೆಗಳಾಗುವಿಕೆ, ತುರಿಕೆ ಸೀಳುವುದು – ನಿಜವೆಂದಾದರೆ, ಇಬ್ಬರೂ ಸೇರಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ, ಚರ್ಮರೋಗ ತಜ್ಞರನ್ನು ಕಂಡು ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಿ.

ನೆನಪಿನಲ್ಲಿಡಿ. ಮಾನಸಿಕ ವ್ಯಭಿಚಾರ, ಗಂಡು ಹೆಣ್ಣು ಇಬ್ಬರಲ್ಲೂ ನಡೆಯುವ ನಿರಂತರ ಪ್ರಕ್ರಿಯೆ. ಪ್ರಾಯಶಃ ಪ್ರತಿಯೊಂದು ಗಂಡೂ, ಹೆಣ್ಣು ಮಾನಸಿಕವಾಗಿ ನೂರಾರು ಸಮಾನರನ್ನು ಮಾನಸಿಕವಾಗಿ ಪ್ರೀತಿಸಬಹುದು, ಮೋಹಿಸಬಹುದು, ಕ್ರೀಡಿಸಬಹುದು. ಇದು ಮನೋಲೈಂಗಿಕ ಬೆಳವಣಿಗೆಯಲ್ಲಿಅತ್ಯಂತ ಸಹಜ ಪ್ರತಿಕ್ರಿಯೆ. ಕೆಲವೊಮ್ಮೆ ದೈಹಿಕ ಸಂಪರ್ಕಗಳೂ ಆಗಬಹುದು. ಆದರೆ ಅದನ್ನೇ ಒಂದು ಮುಖ್ಯ ವಿಷಯವಾಗಿ ಪರಿಗಣಿಸಿ, ಭವಿಷ್ಯದ, ಸಮಾಧಾನ ಹಾಗೂ ಆನಂದವನ್ನು ಮುರುಟಿಹಾಕಬೇಡಿ. ಆಕಸ್ಮಿಕವಾಗಿ ಅಪಘಾತ ಮಾಡಿದ ವ್ಯಕ್ತಿ ಮುಂದೆ ವಾಹನವನ್ನು ಚೆನ್ನಾಗಿ ಚಲಾಯಿಸಲಾರ ಎಂಬುದು ಸುಳ್ಳು, ರೋಗಿ ಗತಿಸಿದರೆ, ವೈದ್ಯ ತನ್ನ ವೃತ್ತಿಯನ್ನೇ ತ್ಯಜಿಸಬೇಕೆಂದಿಲ್ಲ. ಅದೇ ರೀತಿ, ಪರೀಕ್ಷೆಯಲ್ಲಿ ನಪಾಸಾದ ವ್ಯಕ್ತಿ ಮುಂದೆ ಪರೀಕ್ಷೆಯನ್ನು ತೆಗೆದುಕೊಳ್ಳಬಾರದು, ತೆಗೆದುಕೊಂಡರೆ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವುದು ಅಸಾಧ್ಯ ಎನ್ನುವುದೂ ಮೂರ್ಖ ವಿಚಾರ. ನಿಮ್ಮ ಪತ್ನಿಯ ವರ್ತನೆ ಖಂಡಿತವಾಗಲೂ ಅನೈತಿಕವಾದದ್ದು ಎಂದೇ ಸಾಬೀತಾದರೆ ನ್ಯಾಯವಾದಿಗಳ ಸಲಹೆ ಪಡೆಯಿರಿ.