ಅಲ್ಬರ್ಟ್ ಸ್ಯಾಬಿನ್

 

 

(ಕ್ರಿ.ಶ. ೧೯೦೬) (ಪೋಲಿಯೊ ಬಾಯಿಲಸಿಕೆ)

 

ವೃತ್ತಿಯಿಂದ ನೇಕಾರರ ಕುಟುಂಬಕ್ಕೆ ಸೇರಿದ ಆಲ್ಬರ್ಟ್ ಸ್ಯಾಬಿನ್ ೧೯೦೬ರಲ್ಲಿ ರಶಿಯದಲ್ಲಿ ಜನಿಸಿದರು. ಆದರೆ ಅವರಿನ್ನೂ ಚಿಕ್ಕವರಿದ್ದಾಗ ಅವರ ಪರಿವಾರದವರು ಅಮೆರಿಕೆಗೆ ವಲಸೆ ಹೋದರು. ಸ್ಯಾಮಿನ್ ಕೂಡ ಅಮೆರಿಕಕ್ಕೆ ಹೋಗಬೇಕಾಯಿತು. ಆತನ ಚಿಕ್ಕಪ್ಪ ದಂತ ವೈದ್ಯರಾಗಿದ್ದರು. ನ್ಯೂಯಾರ್ಕಿನ ದಂತ ವೈದ್ಯ ವಿಜ್ಞಾನ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಆತನಿಗೆ ಚಿಕ್ಕಪ್ಪನೇ ಸಹಾಯ ಮಾಡಿದರು. ಆದರೆ ಸೂಕ್ಷ್ಮಜೀವಿಶಾಸ್ತ್ರ ಆತನ ಗಮನ ಸೆಳೆಯಿತು, ಅದರಲ್ಲಿ ವಿಶೇಷ ಆಸಕ್ತಿ ಬೆಳೆದ ನಂತರ ಸ್ಯಾಬಿನ್ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಯೋಗ ಶಾಲೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆಯುವುದರಲ್ಲಿ ಸಫಲರಾದರು. ಆದರೆ ಜೀವನ ವೆಚ್ಚ ನಿಭಾಯಿಸುವ ಸಲುವಾಗಿ ನಗರದ ಆಸ್ಪತ್ರೆಯೊಂದರಲ್ಲಿ ದುಡಿಯಬೇಕಾಯಿತು.

ಆಲ್ಬರ್ಟ್ ಸ್ಯಾಬಿನ್ ನ್ಯುಮೋನಿಯ (ಶ್ವಾಸಕೋಶ ಉರಿಯೂತ) ರೋಗಕ್ಕೆ ಕಾರಣವಾದ ಸೂಕ್ಷ್ಮಜೀವಿಯ ಪ್ರಭೇದವನ್ನು ಬೇಗ ಗುರುತಿಸುವ ವಿಧಾನವನ್ನು ಕಂಡುಹಿಡಿದರು. ಮುಂದೆ ಸ್ಯಾಬಿನ್ ಅವರು ಪೋಲಿಯೊ ರೋಗದ ಬಗ್ಗೆ ವಿಶೇಷ ಅಧ್ಯನ ಮಾಡಿದರು. ಸಿನ್‌ಸಿನಾಟಿ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಮಕ್ಕಳ ಆಸ್ಪತ್ರೆಯ ಸಂಶೋಧನಾ ಪ್ರತಿಷ್ಠಾನದಲ್ಲಿ ಕಾರ್ಯ ಮಾಡುತ್ತಿದ್ದಾಗ ಅವರಿಗೆ ಪೋಲಿಯೊ ರೋಗಬಾರದಂತೆ ತಡೆಗಟ್ಟಲು ಅಗತ್ಯವಾದ ಲಸಿಕೆಯೊಂದನ್ನು ಸಿದ್ಧಡಿಸಲು ಅವಕಾಶ ದೊರಕಿತು.

ತಮ್ಮ ನಿರತಂರ ಪರಿಶ್ರಮದ ಫಲವಾಗಿ ಸ್ಯಾಬಿನ್ನರು ಪೋಲಿಯೊ ರೋಗ ಬಾರದಂತೆ ತಡೆಗಟ್ಟಲು ಅಪಾಯರಹಿತವಾದ ಮತ್ತು ಪರಿಣಾಮಕಾರಿಯಾದ ಬಾಯಿಲಸಿಕೆಯೊಂದನ್ನು ತಯಾರು ಮಾಡುವಲ್ಲಿ ಸಫಲರಾದರು.

೧೯೫೭ರಲ್ಲಿ ಜಾಗತಿಕ ಆರೋಗ್ಯ ಸಂಸ್ಥೆ ಅದನ್ನು ವ್ಯಾಪಕವಾಗಿ ಬಳಸಲು ಶಿಫಾರಸು ಮಾಡಿತು. ಅದು ಎಲ್ಲ ರಾಷ್ಟ್ರಗಳಲ್ಲೂ ಪರಿಣಾಮಕಾರಿ ಪೋಲಿಯೊ ನಿರೋಧಕ ಲಸಿಕೆಯಾಗಿ ಬಳಕೆಗೆ ಬಂತು.

ಸೋಜಿಗದ ಸಂಗತಿಯೆಂದರೆ ೧೯೮೩ರಲ್ಲಿ ಸ್ವತಃ ಸ್ಯಾಬಿನರೇ ಪೋಲಿಯೊ ರೋಗಕ್ಕೆ ಒಳಗಾದರು. ಅದರ ವಿರುದ್ಧ ಹೋರಾಡಿ ಚೇತರಿಸಿಕೊಂಡರು.

 

ಪರಿಷ್ಕರಿಸಿದವರು: ಡಾ. ಎಸ್.ಕೆ. ನಟರಾಜು

 

This page was last modified on 05 December 2009 at 10:33.