ಕಾಲದ ದೃಷ್ಟಿಯಿಂದ ೧೯೦೦ಕ್ಕೂ ಹಿಂದಿನ ಅಲ್ಲಮನ ಕುರಿತ ಸಾಹಿತ್ಯಕ ಸಂಕಥನಗಳನ್ನು ಇಲ್ಲಿ ಅಧುನಿಕಪೂರ್ವ ಅನುಸಂಧಾನಗಳೆಂದು ಗ್ರಹಿಸಲಾಗಿದೆ. ವಚನಗಳನ್ನು ಸಂಕಲಿಸಿ, ಸಂಗ್ರಹಿಸಿ, ಟೀಕು ರಚಿಸಿ ಸಂಪಾದಿಸುವುದು ಅಲ್ಲಮನ ನುಡಿಯ ಅನುಸಂಧಾನವಾದರೆ ಅವನ ಜೀವನ ಕಥನವನ್ನು ಕಥಿಸಿ – ಸ್ತುತಿಸುವುದು ಅಲ್ಲಮನ ನಡೆಯ ಅನುಸಂಧಾನವಾಗಿದೆ. ವಚನಗಳು, ದಂತಕಥೆ – ಪವಾಡಾದಿಗಳನ್ನೆಲ್ಲ ಬಳಸಿ ಅವನ ಜೀವನವನ್ನು ಕಥಿಸುವ ಶೂನ್ಯ ಸಂಪಾದನೆಗಳು ಅಲ್ಲಮನ ನಡೆ ನುಡಿಗಳನ್ನು ಅಖಂಡವಾಗಿ ಅನುಸಂಧಾನಕ್ಕೆ ಗುರಿಪಡಿಸಿವೆ. ಈ ಆಧುನಿಕಪೂರ್ವದ ಸುಮಾರು ೮೦೦ ವರ್ಷಗಳ ಕಾಲ ಪ್ರವಾಹದಲ್ಲಿ ನಾಲ್ಕಾರು ಪಂಥಗಳೇ ರೂಪುಗೊಂಡಿವೆ. ಹತ್ತಾರು ತಾತ್ವಿಕತೆಗಳೇ ಪ್ರಕಟಗೊಂಡಿವೆ. ಇವುಗಳನ್ನೆಲ್ಲ ಸಮಗ್ರವಾಗಿ ಒಂದು ಲೇಖನದ ವ್ಯಾಪ್ತಿಯಲ್ಲಿ ಹಿಡಿಯಲಾಗುವುದಿಲ್ಲ. ಹಾಗಾಗಿ ಇಲ್ಲಿ ಎರಡು ನೆಲೆಗಳಲ್ಲಿ ಸಂಕ್ಷಿಪ್ತವಾಗಿ ವಿಚಾರ ಮಂಡನೆಗೆ ಯತ್ನಿಸಲಾಗುವುದು. ಮೊದಲಿಗೆ ರೂಪಗೊಂಡಿರುವ ಪಂಥಗಳನ್ನು ಪರಿಚಯಾತ್ಮಕವಾಗಿ ವಿವರಿಸಿ, ನಂತರದಲ್ಲಿ ಈ ಪಂಥ ಗಳಲ್ಲಿನ ತಾತ್ವಿಕತೆ ಮತ್ತು ವಿನ್ಯಾಸಗಳನ್ನು ಪರಿಕಲ್ಪಿಸಿ ಹೇಳಲು ಯತ್ನಿಸಲಾಗುವುದು.

ಭಾಗ

. ಜೀವನ ಕಥನ ಮಾರ್ಗ : ಹರಿಹರನ – ಪ್ರಭುದೇವರ ರಗಳೆ, ಚಾಮರಸನ – ಪ್ರಭುಲಿಂಗಲೀಲೆ, ಎಳಂದೂರು ಹರೀಶ್ವರನ ಪುರಾಣ, ಮಗ್ಗೆಯ ಮಾಯಿದೇವನ – ಮಹದೈಪುರೀಶ್ವರ ಶತಕ, ಮುರಿಗೆ ಶಾಂತವೀರನ – ಪ್ರಭುಲಿಂಗ ಕಂದ, ಮರಿರಾಜ ಭಟ್ಟದೇವನ – ಪ್ರಭುನಟನ ತಾರಾವಳಿ, ರುದ್ರಕವಿಯ – ಪ್ರಭುವಚನ ತಾರಾವಳಿ, ಪರ್ವತೇಶ ಕವಿಯ – ಪ್ರಭುದೇವರ ಸಾಂಗತ್ಯ, ಕೊಡೇಕಲ್ಲು ರಾಚಪ್ಪಯ್ಯನ – ಮಾಯಾಸಾಂಗತ್ಯ ಮತ್ತು ಪ್ರಭುಚರಿತೆ ಮೊದಲಾದ ಕೃತಿಗಳು ಅಲ್ಲಮನ ಕುರಿತ ಕಾವ್ಯರೂಪಿ ಜೀವನ ಕಥನಗಳಾಗಿವೆ. ಇಲ್ಲೆಲ್ಲ ಅಲ್ಲಮನದೆ ಪ್ರಧಾನ ಪಾತ್ರ. ಇವಲ್ಲದೆ ಸಿಂಗಿರಾಜನ – ಅಮಲಬಸವ ಚಾರಿತ್ರ್ಯ, ರಾಘವಾಂಕನ-ಸಿದ್ಧರಾಮ ಚಾರಿತ್ರ್ಯ, ಗುಬ್ಬಿ ಮಲ್ಲಣಾರ್ಯನ – ವೀರಶೈವಾಮೃತ ಪುರಾಣ, ಪಾಲ್ಕುರಿಕೆ ಸೋಮನಾಥನ ಬಸವಪುರಾಣ, ಭೀಮಕವಿಯ – ಬಸವಪುರಾಣ, ಸಿದ್ಧನಂಜೇಶನ – ಗುರುರಾಜ ಚರಿತ್ರ, ಮಹದ್ದೇವ ಯೋಗಿಯ – ವೀರಶೈವ ಚಿಂತಾಮಣಿ, ಉತ್ತರದೇಶದ ಬಸವಲಿಂಗನ – ಬಸವೇಶ್ವರ ಪುರಾಣ, ಕಥಾಸಾಗರ, ಚೆನ್ನಪ್ಪ ಕವಿಯ – ಶರಣಲೀಲಾಮೃತ ಮೊದಲಾದ ಕೃತಿಗಳು ಅಲ್ಲಮನನ್ನಷ್ಟೆ ಕುರಿತ ಕಥನಗಳಲ್ಲ. ಇವುಗಳಲ್ಲ. ಇವುಗಳಲ್ಲಿ ಇತರ ಶರಣರ ಜೊತೆ ಅಲ್ಲಮನ ಕಥನವೂ ಬರುತ್ತದೆ. ಇವುಗಳೂ ಕೂಡ ಜೀವನ ಕಥನಗಳೇ ಆಗಿವೆ. ಹಾಗಾಗಿ ಇಲ್ಲಿ ಪ್ರಧಾನವಾಗಿ ಅಲ್ಲಮನನ್ನು ಕುರಿತ ಕಥನಗಳದ್ದು ಒಂದು ಮಾರ್ಗವಾದರೆ ಅನ್ಯ ಶರಣರ ಜೀವನ ಕಥನದ ಭಾಗವಾಗಿ ಬರುವ ಅಲ್ಲಮನ ಕಥನದ್ದು ಇನ್ನೊಂದು ಮಾರ್ಗ. ಈ ರೀತಿಯ ಕೃತಿಗಲನ್ನೆಲ್ಲ ಒಟ್ಟಾರೆಯಾಗಿ ಜೀವನ ಕಥನಗಳ ಧಾರೆ ಎಂದು ಕರೆಯಬಹುದು.

. ವಚನಮಾರ್ಗ: ವಚನ ಸಂದರ್ಭದಲ್ಲಿ ಮತ್ತು ವಚನೋತ್ತರ ಸಂದರ್ಭದುದ್ದಕ್ಕೂ ಭಿನ್ನ ಸಂಪಾದನಾಕಾರರು – ಟೀಕಾಕಾರರು – ಕವಿಗಳು – ಶರಣರು ತಮ್ಮ ವಚನ – ಸ್ವರವಚನಗಳ ಮೂಲಕ ಅಲ್ಲಮನ ಜೀವನ – ವ್ಯಕ್ತಿತ್ವಗಳನ್ನು ಕಂಡರಿಸಲು ಯತ್ನಿಸಿದ್ದಾರೆ. ಆಧುನಿಕ ಕಾಲದಲ್ಲೂ ಈವತ್ತಿನವರೆಗೂ ಈ ರೀತಿಯ ವಚನರೂಪಿ ಅಲ್ಲಮ ಅನುಸಂಧಾನ ನಡೆಯುತ್ತಲೇ ಬರುತ್ತಿದೆ. ವಚನಗಳ ಮೂಲಕ ಚಿತ್ರಿಸಿದ, ವ್ಯಾಖ್ಯಾನಿಸಿದ ಅಲ್ಲಮನನ್ನು ಪ್ರತ್ಯೇಕವಾಗಿಯೇ ಪ್ರಾಚೀನ ಸಂಪಾದನೆಗಳಲ್ಲೂ ಕಂಡರಿಸುತ್ತ ಬರಲಾಗಿದೆ. ಪ್ರಭುದೇವರ ಸ್ತೋತ್ರದ ವಚನಗಳೆಂದೇ ಹಲವು ಸಂಪಾದನೆಗಳು ಬಂದಿವೆ. ಸಂಪಾದಿತವಾಗದ ಬಿಡಿ ವಚನ – ಸ್ವರವಚನಗಳೂ ಇವೆ. ಇವನ್ನೆಲ್ಲ ವಚನಮಾರ್ಗ ಎನ್ನಬಹುದು. ಹಾಗೆ ನೋಡಿದರೆ ಶೂನ್ಯ ಸಂಪಾದನೆಗಳಲ್ಲಿ ಮತ್ತು ಟೀಕುಗಳಲ್ಲಿ ಇರುವುದು ವಚನಗಳ ಮತ್ತು ಅನ್ಯರ ವಚನಗಳ ಮೂಲಕ ಕಟ್ಟಿಕೊಂಡ ಅಲ್ಲಮನ ಕಥನವೇ ಆದರೂ ಇವನ್ನೆಲ್ಲ ವಚನಮಾರ್ಗ ಎನ್ನಲಾಗದು. ಇವುಗಳನ್ನು ಬೇರೆಯಾಗಿಯೇ ಕಾಣಬೇಕಾಗುವುದು.

. ಅನುವಾದ ಮಾರ್ಗ: ಅಲ್ಲಮನ ವಚನಗಳನ್ನು ಮತ್ತು ಅಲ್ಲಮನಕುರಿತ ಕಾವ್ಯಗಳನ್ನು ಅನ್ಯಭಾಷೆಗೆ ಸಾಕಷ್ಟು ಅನುವಾದ ಮಾಡಲಾಗಿದೆ. ಮಗ್ಗೆಯ ಮಾಯಿದೇವ ಸಂಸ್ಕೃತ ಭಾಷೆಗೆ ಅಲ್ಲಮನ ವಚನಗಳನ್ನು ‘ಪ್ರಭುವಚನ’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾನೆ. ರೇವಣಸಿದ್ಧ ಕವಿ ‘ಪ್ರಭುದೇವ ವಾಕ್ಯಮು’ ಎಂಬ ಹೆಸರಿನಲ್ಲಿ ತೆಲುಗಿಗೆ ಅನುವಾದ ಮಾಡಿದ್ದಾನೆ. ೧೯ ನೇ ಶತಮಾನದಲ್ಲಿ ಇಂಗ್ಲೀಷಿಗೂ ಕೂಡ ಅಲ್ಲಮನ ವಚನಗಳು ಅನುವಾದವಾಗಿವೆ. ಅವುಗಳ ವ್ಯಾಖ್ಯಾನವನ್ನು ಮಾಡಲಾಗಿದೆ. ಪಿ.ಸಿ. ಬ್ರೌನ್ ಅವರು ಪ್ರಭುಲಿಂಗಲೀಲೆ ಮತ್ತು ಬಸವಪುರಾಣದ ಸಂಗ್ರಹನುವಾದವನ್ನು ೧೮೪೦ರಲ್ಲಿ ಮಾಡಿದ್ದಾರೆ. ಚಾಮರಸನ ಪ್ರಭಿಲಿಂಗಲೀಲೆಯು ಭಿನ್ನ ಕಾಲಗಳಲ್ಲಿ ಕುಮಾರಶಾಸ್ತ್ರಿಯಿಂದ ಸಂಸ್ಕೃತಕ್ಕೆ, ತುರೈಯ್ಯಾರ್ ಶಿವಪ್ರಕಾಶ ಸ್ವಾಮಿಯಿಂದ ತಮಿಳಿಗೆ, ಪಿಡುಪರ್ತಿಬಸವ ಮತ್ತು ಸೋಮನಾರಾಧ್ಯರಿಂದ ತೆಲುಗಿಗೆ, ಬ್ರಹ್ಮದಾಸನಿಂದ ವಿಶ್ವಂಭರಾ ಎಂಬ ಹೆಸರಿನಲ್ಲಿ ಮರಾಠಿಗೆ ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ. ಇದನ್ನೇ ಒಂದು ಪಂಥವಾಗಿ ಪರಿಗಣಿಸಿ ಅಧ್ಯಯನ ಮಾಡಲು ಸಾಧ್ಯವಿದೆ. ಆಧುನಿಕ ಸಂದರ್ಭದಲ್ಲೂ ಅಲ್ಲಮ ಹಲವುಅನುವಾದದ ಅನುಸಂಧಾನಗಳಿಗೆ ಗುರಿಯಾಗುತ್ತ ಬಂದಿದ್ದಾನೆ. ವಿಶೇಷವಾಗಿ ಅಲ್ಲಮ ಅನ್ಯ ಭಾಷೆಗಳಿಗೆ ಅನುವಾದವಾಗುವ ಜೊತೆಗೆ ಕನ್ನಡದ್ದೇ ಹಲವು ಅವಸ್ಥಾಂತರಗಳಿಗೆ ಅನುವಾದವಾಗುತ್ತಲೂ ಬಂದಿದ್ದಾನೆ. ಅವರ ಟೀಕು ವ್ಯಾಖ್ಯಾನಗಳನ್ನು ಒಂದು ರೀತಿಯಲ್ಲಿ ಧಾರ್ಮಿಕ – ಅಷ್ಠಾವರಣ, ಪಂಚಾಚಾರ, ಷಟ್ ಸ್ಥಲಾನುಸಾರಿ ಅನುವಾದವೆಂದೂ, ಅವನ ಬೆಡಗಿನ ಟೀಕುಗಳನ್ನು ವಿರಶೈವೀಕೃತ ರೂಪಾಂತರಗಳೆಂದೂ ಕರೆಯಬಹುದು.

. ಪಾಂಥಿಕ ಮತ್ತು ಜಾನಪದ ಮಾರ್ಗ : ಲಾವಣಿ, ಡೊಳ್ಳಿನ ಪದ, ಸಣ್ಣಾಟ, ಯಕ್ಷಗಾನ, ಹರಿಕತೆ, ಮೌಖಿಕ ಕಥನಗಳಲ್ಲು ಕೂಡ ಅಲ್ಲಮನ ಅನುಸಂಧಾನಗಳಿವೆ. ಹಾಗೆಯೇ ನಾಥ, ಸಿದ್ಧ, ಸೂಫಿ, ಶಾಕ್ತ, ಕೌಳ, ಅವಧೂತ (ತತ್ವಪದಕಾರ), ತಾಂತ್ರಿಕಾದಿ ಪಂಥಗಳಲ್ಲೂ ಅಲ್ಲಮನ ಅನುಸಂಧಾನಗಳಿರಬಹುದು. ಚೆನ್ನಪ್ಪ ಕವಿಯ ಯಕ್ಷಗಾನ ಬಸವಪುರಾಣ, ಶಿವಾನಂದ ಕವಿಯ ಅಲ್ಲಮಪ್ರಭುದೇವರ ಬಯಲಾಟ, ಸಕ್ಕರಿ ಶಾಂತಕವಿಯ ಪ್ರಭುನಾಟಕ, ಜಾನಪದ ಮೌಖಿಕ ಕಥನವಾದ ಮಂಟೇಸ್ವಾಮಿ ಕತನ ಮೊದಲಾದವು ಈ ಧಾರೆಯಲ್ಲಿ ಬರುತ್ತವೆ. ಅಲ್ಲಮನ ಕುರಿತ ನಾಟಕ – ಹರಿಕತೆ – ಯಕ್ಷಗಾನಗಳದ್ದು ಒಂದುಬಗೆಯಾದರೆ ಮಂಟೇದಲ್ಲಯ್ಯನ ಕಥೆಯದ್ದೇ ಇನ್ನೊಂದು ಬಗೆ. ಸ್ಥಳೀಯ ಸಾಂಸ್ಕೃತಿಕ ನಾಯಕ, ಕೆಲವರ್ಗದ – ನಿಮ್ನಜಾತಿಯ ನಾಯಕ, ಮಂಟೆಯನ್ನು ಅಲ್ಲಮಪ್ರಭುವಾಗಿಯೇ ಕಂಡಿರುವ ಮೌಖಿಕ ಕಥನವು ನಮ್ಮ ಹಳಗನ್ನಡ ಸಮೀಕರಣ ಮಾದರಿಯನ್ನು ದಾಟಿದ ಅಖಂಡ ಕಲ್ಪನೆಯದ್ದಾಗಿದೆ. ಅಲ್ಲದೆ ಅಲ್ಲಮನನ್ನು ಜಾನಪದೀಯ ಕಥನಗಲಲ್ಲಿ, ವಿವಿಧ ಪಂಥಗಳಲ್ಲಿ ಯಾವ ರೀತಿ ಅನುಸಂಧಾನಕ್ಕೆ ಗುರಿ ಪಡಿಸಲಾಗಿದೆ ಎಂಬುದನ್ನು ನಾವಿನ್ನೂ ಕಂಡುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ತಲಸ್ಪರ್ಶಿ ಅಧ್ಯಯನ ನಡೆಯಬೇಕಾಗಿದೆ.

. ಸಂಪಾದನಾ ಮಾರ್ಗ: ಜೀವನ ಕಥಗಳನ್ನು ಬಿಟ್ಟರೆ ಅಲ್ಲಮನ ಅನುಸಂಧಾನದಲ್ಲಿ ಉಂಟಾಗಿರುವ ಇನ್ನೊಂದು ಮುಖ್ಯ ಮಾರ್ಗವೆಂದರೆ ಅದು ಸಂಪಾದನಾ ಮಾರ್ಗ. ಇಲ್ಲಿ ಎಲ್ಲ ರೀತಿಯ ಸಂಪಾದನೆಗಳೂ ಬರುತ್ತವೆ. ಈ ಮಾರ್ಗವನ್ನು ಆರು ಒಳ ಪಂಥಗಳಾಗಿ ವರ್ಗೀಕರಿಸಿಕೊಳ್ಳಬಹುದು. ೫.೧. ಶೂನ್ಯ ಸಂಪಾದನಾ ಮಾರ್ಗ, ೫. ೨. ಸ್ಥಲಕಟ್ಟು ಸಂಪಾದನಾ ಮಾರ್ಗ, ೫.೩. ಟಿಕಾಮಾರ್ಗ, ೫. ೪. ಸ್ತ್ರೋತ್ರ ಸಂಪಾದನೆಯ ಮಾರ್ಗ, ೫.೫. ಸಕಲಪುರಾತನರ ಸಂಪಾದನೆ ಮತ್ತು೫.೬. ಸಂಕೀರ್ಣ ಸಂಪಾದನಾ ಮಾರ್ಗ.

.. ಶೂನ್ಯ ಸಂಪಾದನಾ ಮಾರ್ಗ : ಸಂಪಾದನಾ ಕಾರ್ಯ ಚೆನ್ನಬಸವಣ್ಣನಿಂದಲೇ ಆರಂಭವಾಗಿದೆ. ಶರಣರು ಬಾಳಿಹೋದ ಸುಮಾರು ಇನ್ನೂರು ವರ್ಷಗಳ ನಂತರದಲ್ಲಿ ಈ ಕಾರ್ಯ ವೇಗಯುತವಾಗಿ ಆರಂಭವಾದಂತೆ ಕಾಣುತ್ತದೆ. ಸಿಂಗಿರಾಜನ ಅಮಲಬಸವ ಚಾರಿತ್ರದಲ್ಲಿ ಉಲ್ಲೇಖವಾಗಿರುವ (೨ – ೧೬ಗ. ೨ – ೪೦ಗ) ಪ್ರಭುಸಂಪಾದನೆ, ಕ್ರಿಯಾಸಂಪಾದನೆಗಳಿಂದ ಶೂನ್ಯಸಂಪಾದನೆಯ ಮಾರ್ಗ ಆರಂಭವಾಗಿರಬಹುದು. “ಮಹ ದೇವಯ್ಯನಿಗೆ ಪೂರ್ವದಲ್ಲಿ ಪ್ರಭುಸಂಪಾದನೆ, ಕ್ರಿಯಾಸಂಪಾದನೆ ಮುಂತಾಗಿ ಸಂಪಾದನೆಯ ಖಂಡಕೃತಿಗಳು ಮಾತ್ರ ಇದ್ದಿಬಹುದು”[1] ಇದಕ್ಕೊಂದು ಸಮಗ್ರ ಮಹಾಕಾವ್ಯ ರೂಪವನ್ನು ಶಿಗಣಪ್ರಸಾದಿ ಮಹದೇವಯ್ಯ ನೀಡಿದ್ದಾನೆ. ಶಿವಗಣಪ್ರಸಾದಿ ಮಹದೇವಯ್ಯ. ಹಲಗೆ ಯಾರ್ಯ, ಗೂಳೂರು ಸಿದ್ಧ ವೀರಣ್ಣ, ಗುಮ್ಮಳಾಪುರದ ಸಿದ್ಧಲಿಂಗಯಿತಿ ಹೀಗೆ ಕ್ರಮವಾಗಿ ನಾಲ್ಕು ಶೂನ್ಯ ಸಂಪಾದನೆಗಳು ನಮ್ಮಲ್ಲಿ ರಚಿತವಾಗಿವೆ. ಚೆನ್ನವೀರಣ್ಣೊಡೆಯ ಮತ್ತಿತರರು ಸಂಪಾದಿಸಿರುವ ಐದನೆ ಶೂನ್ಯ ಸಂಪಾದನೆಯೊಂದು ಇರುವ ಉಲ್ಲೇಖ ಸಿದ್ಧವೀರಣ್ಣನಲ್ಲಿ ಬರುತ್ತದೆಯಾದರೂ ಆ ಕೃತಿ ಸಿಕ್ಕಿಲ್ಲ. ಅದು ಹಲಗೆ ದೇವರದೋ ಅಥವಾ ಶಿವಗಣ ಪ್ರಸಾದಿಯದೋ ಕೃತಿಯ ಪ್ರತಿ ಆಗಿರಬಹುದು. ಶೂನ್ಯ ಸಂಪಾದನೆಗಳು ಅಲ್ಲಮನನ್ನೆ ನಾಯಕನನ್ನಾಗಿ ಗಣಿಸಿದ ಪ್ರಭುದೇವರ ಶೂನ್ಯ ಸಂಪಾದನೆಗಳೆ ಆದಾಗ್ಯೂ ಇಲ್ಲಿ ಬಹುನಾಯಕ – ಸಾಮುದಾಯಿಕ ಕಥನವೇ ಮೈದಾಳಿದೆ.

.. ಸ್ಥಲಕಟ್ಟು ಸಂಪಾದನಾ ಮಾರ್ಗ: ಷಟ್ಸ್ಥಲಗಳಿಗೆ, ನೂರೊಂದು ಸ್ಥಲಗಳಿಗೆ, ಅಷ್ಟಾವರಣಗಳಿಗೆ, ಪಂಚಾಚಾರಗಳಿಗೆ, ಆಚಾರ ದೀಕ್ಷೆಗಳಿಗೆ ಅನುಗುಣವಾಗಿ ವಚನಗಳನ್ನು ಸಂಪಾದಿಸಿ ಕೊಡುವ ಮತ್ತು ಕೆಲವೊಮ್ಮೆ ಸ್ಥಲಾನುಸಾರಿಯಾಗಿ ವಚಗಳಿಗೆ ವ್ಯಾಖ್ಯಾನವನ್ನು ಮಾಡುವ ಕೆಲಸವನ್ನು ಹಲವಾರು ಜನ ಮಾಡುತ್ತ ಬಂದಿದ್ದಾರೆ. ಇದೂ ಕೂಡ ಒಂದು ಮೂಖ್ಯ ಪಂಥವಾಗಿಯೇ ನಮ್ಮಲ್ಲಿ ಬೆಳೆದಿದೆ. ಈ ಸ್ಥಲಕಟ್ಟು ಸಂಪಾದನೆಯಲ್ಲಿ ಮುಖ್ಯವಾಗಿ ಮಹಲಿಂಗನ – ಏಕೋತ್ತರ ಶತಸ್ಥಲ, ಸಿದ್ಧಲಿಂಗನ – ಏಕೋತ್ತರ ಶತಸ್ಥಲ, ಜಕ್ಕಣಾರ್ಯನ – ಏಕೋತ್ತರ ಶತಸ್ಥಲಗಳು ಬರುತ್ತವೆ. ಇವಲ್ಲದೆ ವ್ಯಾಖ್ಯಾನ ಮತ್ತು ಸ್ಥಲನಿರ್ದೇಶನ ಎರಡೂ ಎರುವ ಸಂಪಾದನೆಗಳೂ ಇವೆ. ಸಂಪಾದನೆಗಳು ಪ್ರಭುದೇವರ ಷಟ್ಸ್ಥಲ ವಚನ, ಪ್ರಭುದೇವರ ಷಟ್ ಸ್ಥಲ ಜ್ಞಾನ ಚಾರಿತ್ರದ ವಚನ, ಹೀಗೆ ಅಲ್ಲಮನ ವಚನಗಳನ್ನು ಮಾತ್ರ ಗಮನಿಸಿದರೆ ಮಿಕ್ಕಂಥವು ಎಲ್ಲ ಶರಣರ ಜೊತೆಗೆ ಅಲ್ಲಮನನ್ನೂ ಪರಿಗಣಿಸಿವೆ.

.. ಟೀಕಾಮಾರ್ಗ: ಟೀಕಾಮಾರ್ಗದಲ್ಲಿ ಸ್ಥಲಗಳಿಗೆ ಅನುಗುಣವಾಗಿ, ಅರ್ಥ – ಭಾವಗಳಿಗೆ ಅನುಗುಣವಾಗಿ, ತತ್ವ – ಆಚಾರ ಅನುಸಾರಿಯಾಗಿ, ವರ್ತಮಾನದ ವಿದ್ಯಮಾನಗಳಿಗೆ ಅನುಗುಣವಾಗಿ, ಬೆಡಗನ್ನು ಬಿಡಿಸುವ ಸಲುವಾಗಿ ಟೀಕು – ವ್ಯಾಖ್ಯಾನಗಳನ್ನು ಬರೆಯುತ್ತ ಬರಲಾಗಿದೆ. ಟೀಕಿನ ಮಾರ್ಗದಲ್ಲಿ ಸ್ಥಲಕಟ್ಟುಗಳಿಗೆ ಅನುಸಾರವಾಗಿ ವಚನಗಳನ್ನು ಸಂಪಾದಿಸುವ ಮತ್ತು ವ್ಯಾಖ್ಯಾನ ಮಾಡುವ ಎರಡೂ ಕೆಲಸಗಳು ನಡೆದಿವೆ. ಕಲ್ಲುಮಠದ ಪ್ರಭುದೇವನ ಲಿಂಗಲೀಲಾವಿಲಾಸ ಚಾರಿತ್ರವಚನದ ಟೀಕೆ, ಬೆಡಗಿನ ವಚನಟೀಕು, ಮಹಲಿಂಗನ ಏಕೋತ್ತರ ಶತಸ್ಥಲ ಮುಂತಾದವು ಈ ಮಾರ್ಗದಲ್ಲಿ ಬರುತ್ತವೆ. ಸ್ತೋತ್ರ ರೂಪಿ ಸಂಪಾದನೆಯಾಗಲೀ, ಟೀಕುರೂಪಿ ಸಂಪಾದನೆಯಾಗಲೀ ಕೆಲವೊಮ್ಮೆ ಅವೆಲ್ಲವೂ ಸ್ಥಲಕಟ್ಟು ಸಂಪಾದನೆಗಳೇ ಆಗಿರುವುದೂ ಉಂಟು.

.. ಸ್ತೋತ್ರ ಸಂಪಾದನೆಯ ಮಾರ್ಗ : ಶರಣರು ಪರಸ್ಪರ ತಮ್ಮ ಸಮಕಾಲೀನ ಶರಣರ ಬಗೆಗೆ ಬರೆದಿರುವ ಮೆಚ್ಚಿಗೆಯ ಧಾಟಿಯ ವಚನಗಳನ್ನು ಒಂದಡೆ ಸೇರಿಸಿ, ಶಿವಸ್ತುತಿ, ಶರಣಸ್ತುತಿಗಳನ್ನು ಪ್ರತ್ಯೇಕವಾಗಿ ಮತ್ತು ಒಟ್ಟಾರೆಯಾಗಿಯೂ ಸೇರಿಸಿ ಸಂಪಾದನೆಗಳನ್ನು ನಮ್ಮವರು ಮಾಡುತ್ತ ಬಂದಿದ್ದಾರೆ. ಬೋಳಬಸವ ದೇವರ ಬಸವಸ್ತೋತ್ರದ ವಚನಗಳು, ಸಂಪಾದನೆಯ ಬನ್ನಂಜೆದೇವರ ಮಿಶ್ರಸ್ತೋತ್ರದ ವಚನಗಳು, ಎಳಮಲೆಯ ಗುರುಶಾಂತದೇವರ ಶರಣಸ್ತೋತ್ರದ ವಚನಗಳು, ಸಂಪಾದನೆಯ ಸಿದ್ಧ ವೀರಣ್ಣದೇವನ ಲಿಂಗಸ್ತೋತ್ರದ ವಚನಗಳು ಮೊದಲಾದ ಸಂಪಾದನೆಗಳು ಇಲ್ಲಿ ಬರುತ್ತವೆ. ಪ್ರಭುದೇವನನ್ನು ಸ್ತುತಿಸುವ ವಚನಗಳ ಪ್ರತ್ಯೇಕ ಸಂಪಾದನೆಯೂ ಇಲ್ಲಿ ಇದೆ. ಆದರೆ ಭಿನ್ನ ಶರಣಗಣ ಸ್ತೋತ್ರ; ಶಿವ – ಲಿಂಗ ಸ್ತೋತ್ರಗಳಲ್ಲಿ ಅಲ್ಲಮನ ಕೆಲವು ವಚನಗಳನ್ನು ಇಲ್ಲಿ ಸೇರಿಸಿಕೊಳ್ಳಲಾಗಿದೆ.

.. ಸಕಲಪುರಾತನರ ಸಂಪಾದನೆ: ಹಾಗೆ ನೋಡಿದರೆ ಕೆಲವೊಂದು ನಿರ್ದಿಷ್ಟ ವ್ಯಕ್ತಿ ಸಂಪಾದನೆಗಳು ಮತ್ತು ಸಕಲಪುರಾತನರ ಸಂಪಾದನೆಗಳು ಎಂದು ಸಂಪಾದನೆಗಳನ್ನೆಲ್ಲ ಎರಡೇ ವರ್ಗಗಳಾಗಿ ವಿಂಗಡಿಸಬಹುದಾದರೂ ಸಂಪಾದನೆಯ ಒಳಸುಳಿಗಳನ್ನು ಈ ವಿಂಗಡಣೆಯಿಂದ ಗ್ರಹಿಸಲಾಗುವುದಿಲ್ಲ. ಆದ್ದರಿಂದ ಸಕಲಪುರಾತರ ಸಂಪಾದನೆಗಳನ್ನು ಈ ಮುಂಚಿನ ಸಂಪಾದನೆಗಳಿಗಿಂತ ಭಿನ್ನವಾಗಿಯೆ ನೋಡಬೇಕು. ಇವುಗಳಲ್ಲಿ ಶರಣರ ವಚನಗಳನ್ನು ಸಂಪಾದಿಸುವಾಗ ಅಲ್ಲಿ ಅಲ್ಲಮನೂ ತಪ್ಪದೆ ಬರುತ್ತಾನೆ. ಗುಬ್ಬಿಮಲ್ಲಣಾರ್ಯನ – ಗಣಭಾಷಿಕ ರತ್ನಮಾಲೆ, ಕಂಬಾಳ ಶಾಂತಮಲ್ಲೇಶನ – ಗಣವಚನ ರತ್ನಾವಳಿ,ಸಿಂಗಳ ಸಿದ್ಧಬಸವನ – ಸಕಲ ಪುರಾತನರ ಬೆಡಗಿನ ವಚನಗಳು, ಕಂತೂರ ಮಹಂತದೇವನ ಎಲ್ಲ ಪುರಾತನರ ವಚನ, ಮೂರು ಸಾವಿರ ವಚನಗಳ ಕಟ್ಟು, ವಚನಸಾರ ಇತ್ಯಾದಿ ಸಂಪಾದನೆಗಳು ಈ ಮಾರ್ಗದಲ್ಲಿ ಬರುತ್ತವೆ. ಹಾಗೇ ವ್ಯಕ್ತಿನಿಷ್ಠ ಸಂಪಾದನೆಗಳೂ ಇಲ್ಲಿ ಬರುತ್ತವೆ. ಇಲ್ಲಿ ಕೆಲವೊಮ್ಮೆ ಸ್ಥಲಗಳನ್ನು ಮಹಾದೇವಿಯಕ್ಕನ ವಚನಗಳು ಮೊದಲಾದ ರೀತಿಯ ಸಂಪಾದನೆಗಳೂ ಇಲ್ಲಿ ಬರುತ್ತವೆ. ಇಲ್ಲಿ ಕೆಲವೊಮ್ಮೆ ಸ್ಥಲಗಳನ್ನು ನಿರ್ದೇಶಿಸುವುದೂ ಉಂಟು. ಕೆಲವೊಮ್ಮೆ ಟೀಕು ವ್ಯಾಖ್ಯಾನಗಳನ್ನು ಬರೆದಿರುವುದೂ ಉಂಟು.

.. ಸಂಕೀರ್ಣ ಸಂಪಾದನಾ ಮಾರ್ಗ: ಈ ರೀತಿಯ ಸಕಲ ಪುರಾತನರ ಸಂಪಾದನೆಗಳಲ್ಲದೆ, ಆಚರಣೆಯ ವಚನಗಳೂ, ಸಂಬಂಧದ ವಚನಗಳು, ಲಿಂಗವಿಕಳಾವಸ್ಥೆಯ ವಚನಗಳು, ಹೀಗೆ ಹಲವು ರೀತಿಯ ಸಂಪಾದನೆಗಳೂ ಇವೆ. ಇವನ್ನೆಲ್ಲ ಅಂದರೆ ಇದುವರೆಗಿನ ವರ್ಗಿಕರಣಗಳಿಗೆ ಸಿಕ್ಕದ ಮತ್ತು ಯಾವುದೇ ಪಂಥವಾಗಬಲ್ಲ ಲಕ್ಷಣಗಳು ಇಲ್ಲದ ಮಿಕ್ಕೆಲ್ಲ ಸಂಪಾದನೆಗಳನ್ನು ಸಂಕೀರ್ಣ ಸಂಪಾದನೆಗಳು ಎನ್ನಬಹುದು. ಟೀಕು – ವ್ಯಾಖ್ಯಾನ ಇಲ್ಲದ ಸಂಕೀರ್ಣ ಸಂಪಾದನೆಗಳನ್ನು ಮತ್ತು ವ್ಯಕ್ತಿನಿಷ್ಠ ಸಂಪಾದನೆಗಳನ್ನು (ಅವು ಓದುಗನನ್ನು ಒಂದು ನಿರ್ದಿಷ್ಟ ಅರ್ಥಕ್ಕೆ ಬಂಧಿಸುವುದಿಲ್ಲವಾದ್ದರಿಂದ) ತೆರೆದ ಸಂಪಾದನೆಗಳು ಎಂದೇ ಕರೆಯಬಹುದು.[2] ಆದರೆ ಸ್ಥಲ ನಿರ್ದೇಶನ ಇರುವ ಮತ್ತು ಕೆಲವೊಮ್ಮೆ ಟೀಕು ಇರುವ ಸಂಕೀರ್ಣ ಸಂಪಾದನೆಗಳನ್ನು ಮುಚ್ಚದ ಸಂಪಾದನೆಗಳು ಎನ್ನಬಹುದು. ಹೀಗಾಗಿ ಈ ಸಕಲ ಪುರಾತನರ ಸಂಪಾದನೆಗಳು ಮತ್ತು ಸಂಕೀರ್ಣ ವಚನ ಸಂಪಾದನೆಗಳನ್ನೆಲ್ಲ ತೆರೆದ ಸಂಪಾದನೆಗಳು ಮತ್ತು ಸಂಕೀರ್ಣ ವಚನ ಸಂಪಾದನೆಗಳನ್ನೆಲ್ಲ ತೆರೆದ ಸಂಪಾದನೆಗಳು ಮತ್ತು ಮುಚ್ಚಿದ ಸಂಪಾದನೆಗಳು ಎಂದು ಎರಡಾಗಿ ವಿಂಗಡಿಸುವ ಸಾಧ್ಯತೆಯೂ ಇಲ್ಲಿ ಉಂಟು.

ಇದಿಷ್ಟೂ ಆಧುನಿಕ ಪೂರ್ವ ಅನುಸಂಧಾನಗಳ ಒಂದು ಸ್ಥೂಲನೋಟ. ಈ ವರ್ಗೀಕರಣ ಪರಿಪೂರ್ಣವೂ ಅಲ್ಲ, ಪ್ರಶ್ನಾತೀತವೂ ಅಲ್ಲ, ಸಮಗ್ರವೂ ಅಲ್ಲ. ಇವು ಖಂಡ ದೃಷ್ಟಿಕೋನದ ಬಿಂಬಗಳಷ್ಟೆ, ಈ ಎಲ್ಲ ಆಧುನಿಕಪೂರ್ವ ಮಾರ್ಗಗಳೂ ಆಧುನಿಕ ಸಂದರ್ಭದಲ್ಲಿ ಸಮರ್ಥವಾಗಿ ಮುಂದುವರಿದುಕೊಂಡು ಬಂದಿವೆ ಕೂಡ. ಅಷ್ಟೆ ಅಲ್ಲ ಆಧುನಿಕ ಸಂದರ್ಭದಲ್ಲಿ ಹೊಸ ಅನುಸಂಧಾನಗಳೂ ಹುಟ್ಟಿವೆ. ಈ ಮಾರ್ಗಗಳಲ್ಲಿ ಒಂದೊಂದನ್ನು ಕುರಿತು ಇಲ್ಲಿ ಪ್ರತ್ಯೇಕವಾಗಿ ಅವುಗಳ ತಾತ್ವಿಕತೆಯ ದೃಷ್ಟಿಯಿಂದ ಚರ್ಚಿಸುತ್ತ ಹೋಗದೆ, ಈ ಪಂಥಗಳನ್ನೆಲ್ಲ ಅಖಂಡವಾಗಿ ಗ್ರಹಿಸಿ – ಭಾವಿಸಿ ಇವುಗಳಲ್ಲಿ ಇರುವ ವಿನ್ಯಾಸಗಳನ್ನು ಮತ್ತು ತಾತ್ವಕತೆಗಳನ್ನು ಪರಿಕಲ್ಪಿಸಲು ಮುಂದೆ ಯತ್ನಿಸಲಾಗುವುದು.

ಭಾಗ

ಅಜಮಾಸು ೧೨೦೦ – ೧೯೦೦ ವರೆಗಿನ ಕಾಲದಲ್ಲಿ ಅನೇಕ ಜನ ತಮ್ಮದೇ ರೀತಿಯಲ್ಲಿ ಅಲ್ಲಮನನ್ನು ಕಂಡಿದ್ದಾರೆ. ಬಾಲಲೀಲಾಮಹಾಂತ ಶಿವಯೋಗಿಯ ಮಾತಿನಲ್ಲಿ ಹೇಳುವುದಾದರೆ, ‘ಇರುವೊಂದು ಕನ್ನಡಿಯ ನೂರಾರು ಜನ ಪಿಡಿಯೆ ಅವರವರ ರೂಪನು ಅವರವರು ಕಾಂಬಂತೆ’ ಎಂಬಂತೆ ಎಲ್ಲರೂ ಅಲ್ಲಮನೆಂಬ ಕನ್ನಡಿಯಲ್ಲಿ ಅವರವರನ್ನೆ ಕಂಡಿದ್ದಾರೆ. ಅವರವರ ಕಾಲಘಟ್ಟದ ವರ್ತಮಾನಗಳನ್ನು ಕಂಡಿದ್ದಾರೆ ಎಷ್ಷಡಷ್ಷು ಅಲ್ಲಮನ ಅನುಸಂಧಾನಗಳು ಹುಟ್ಟಿವಯೋ ಅಷ್ಷಷ್ಷು ಅಲ್ಲಮರೂ ಹುಟ್ಟಿದ್ದಾರೆ. ಇಂದು ಅಲ್ಲಮನೆಂದರೆ ನೂರಾರು ಪಠ್ಯಗಳಲ್ಲಿ ಇರುವ ನೂರಾರು ಅಲ್ಲಮರೆಂದೇ ನಾವು ತಿಳಿಯಬೇಕಾಗಿದೆ. ಆಧುನಿಕ ಪೂರ್ವದ ಅಕಮಾಸು ೮೦೦ ವರ್ಷಗಳ ಮಹಾಕಾಲಪ್ರವಾಹದಲ್ಲಿ ಒಟ್ಟಾರೆಯಾಗಿ ಎಲ್ಲ ಅಲ್ಲಮರ ಅನುಸಂಧಾನಗಳಲ್ಲಿ ಹಲವು ನಡುಗಡ್ಡೆಗಳು ನಿರ್ಮಾಣವಾಗಿವೆ. ಹಲವು ಹತ್ತು ರೀತಿಯ ನೀರುಗಳು ಅಲ್ಲಿ ಹರಿದುಹೋಗಿವೆ. ಆಯಾ ನಡುಗಡ್ಡೆಗಳಲ್ಲಿ ಸಂಪರ್ಕ – ಸಾಂಗತ್ಯ – ಸಾತತ್ಯ ಉಂಟೆಂದರೆ ಉಂಟು, ಇಲ್ಲವೆಂದರೆ ಇಲ್ಲ ಇವುಗಳೊಳಗೆ ಹಲವು ರೀತಿಯ ವಿನ್ಯಾಸಗಳು, ಚಲನೆಗಳು ಉಂಟಾಗಿವೆ. ಅವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಪರಿಕಲ್ಪಿಸಿ ನೋಡಬಹುದು.

. ಪ್ರಭುತ್ವದೊಂದಿಗೆ ಸೆಣೆಸುವ ಕಡೆಯಿಂದ ಅದನ್ನು ಆಶ್ರಯಿಸುವ ಕಡೆಗಿನ ಚಲನೆ

ಹರಿಹರನ ರಗಳೆಗಳಲ್ಲಿ ಪರ್ಯಾಯ ಪ್ರಭುತ್ವವೊಂದನ್ನು ಸ್ಥಾಪಿಸುವ ಗುಣ ಇದೆ. ರಾಜಪ್ರಭುತ್ವಕ್ಕಿಂತ ಭಕ್ತಿ – ದೈವಪ್ರಭುತ್ವ ದೊಡ್ಡದು ಎಂಬ ತತ್ವವಿದೆ. ಆದರೆ ಚಾಮರಸನಲ್ಲಿಗೆ ಬಂದರೆ ಅಲ್ಲಿ ದೈವ – ಭಕ್ತಿಗಳು ಧರ್ಮಪ್ರಭುತ್ವದ ಸಾಧನಗಳಾಗಿ ದುಡಿಯುತ್ತವೆ. ಭಕ್ತಿಯ ಒಂದು ಸಮುದಾಯದ ಧರ್ಮವಾಗುವ ರೂಪಾಂತರ ಇಲ್ಲಿದೆ. ದೈವ – ಧರ್ಮ ಪ್ರಭುತ್ವ ಪ್ರತಿಪಾದಿಸುವ ಸಾಹಿತ್ಯವು ರಾಜಪ್ರಭುತ್ವವನ್ನು ಒಪ್ಪುವ ಕಡೆಗೆ ಚಲಿಸುವುದನ್ನೂ ಚಾಮರಸನಲ್ಲಿ ಕಾಣಬಹುದು. ಹರಿಹರ ಬಸವಣ್ಣ ಕುರಿತು ಬರೆಯುವಾಗ ‘ಬಸವರಾಜ ದೇವರ ರಗಳೆ’ ಎಂದು ಬರೆಯುತ್ತಾನೆ. ನಿಜವಾಗಿಯೂ ಬಸವನೇ ಹರಿಹರನಿಗೆ ದೇವರೂ – ರಾಜನೂ ಆಗಿದ್ದಾನೆ. ಹಾಗೆಯೇ ಅಲ್ಲಮ ಕೂಡ ಪ್ರಭುವೂ ಹೌದು: ದೇವರೂ ಹೌದು. ಅವನು ಪ್ರಭುದೇವ. ಚಾಮರಸನಲ್ಲಿ ಅಲ್ಲಮ ಲಿಂಗಲೀಲೆಯ ಸಾಧನ. ಅಂದರೆ ಅಲ್ಲಮ ಒಬ್ಬ ಧರ್ಮಪ್ರವರ್ತಕ. ಎಲ್ಲ ಪ್ರಭುತ್ವಗಳನ್ನು ಛಿದ್ರಿಸುವ ಅಲ್ಲಮ ಚಾಮರಸನಲ್ಲಿ ಧಾರ್ಮಿಕ ನಾಯಕನಾಗಿ ಚಿತ್ರಿತಗೊಳ್ಳುತ್ತಾನೆ. ಪ್ರೌಢದೇವರಾಯನ ಕಾಲದಲ್ಲಿದ್ದ ಚಾಮರಸ ರಾಜನ ಆಶ್ರಯ – ಕೃಪಾಶೀರ್ವಾದಗಳಲ್ಲಿ ನಡೆಯುವ ಸಾಹಿತ್ಯದ ಅನುಸಂಧಾನಗಳು ತಾನೂ ಬೆರೆಯುತ್ತಾನೆ. ರಾಜಮನ್ನಣೆಯನ್ನು ಸ್ವೀಕರಿಸುತ್ತಾನೆ.ಹೀಗೆ ವೀರಶೈವ ಸಾಹಿತ್ಯಕ ಅನುಸಂಧಾನಗಳು ಪ್ರಭುತ್ವದೊಂದಿಗೆ ಸೆಣೆಸುವ ಕಡೆಯಿಂದ ಪ್ರಭುತ್ವವನ್ನು ಆಶ್ರಯಿಸುವ ಕಡೆಗೆ ಹರಿಹರನ ನಂತರದಲ್ಲಿ ನಡೆದು ಬಂದಿವೆ. ಅನಂತರದಲ್ಲಿ ನೂರೊಂದು ವಿರಕ್ತರಾಗಲೀ ಏಳುನೂರು ಒಂದು ವಿರಕ್ತರಾಗಲೀ ತಮ್ಮದೇ ಮಠ ಸಂಸ್ಕೃತಿಯನ್ನು ಬೆಳೆಸಿಕೊಂಡು ವಚನಾನುಸಂಧಾನಗಳನ್ನು ನಡೆಸುತ್ತ ಬಂದಿದ್ದಾರೆ. ಮಠೀಯತೆಯ ಅನುಸಂಧಾನಗಳೆಂದೇ ಇದನ್ನು ಕರೆಯಬಹುದು. ಇದು ಪ್ರಭುತ್ವಕ್ಕೆ ಸರಿಸಾಟಿಯಾದ ಮಠ ಪ್ರಭುತ್ವದ ಕಡೆಗಿನ ಚಲನೆಯೂ ಹೌದು.

. ಜಾತ್ಯಾತೀತತೆಯಿಂದ ಧರ್ಮವಿಸ್ತರಣೆಯ ಕಡೆಗಿನ ಚಲನೆ

ಮಡಿವಾಳ ಮಾಚಿತಂದೆ, ಸೊಡ್ಡಳ ಬಾಚರಸ, ಹಡಪದ ಅಪ್ಪಣ್ಣ, ಬಸವಣ್ಣ, ಮರುಳಶಂಕರದೇವ, ಮುಕ್ತಾಯಕ್ಕ, ಅಕ್ಕಮಹಾದೇವಿ ಹೀಗೆ ಒಬ್ಬೊಬ್ಬರೂ ಭಿನ್ನ ಜಾತಿಯ ಜನ ಶರಣ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. ಇವರೆಲ್ಲರೂ ಜಾತ್ಯತೀತವಾಗಿ ಒಂದಾಗಿ ಬಾಳುವ ಆಶಯದಿಂದ ಶರಣಧಾರೆಗೆ ಬಂದವರು. ಇವರಲ್ಲಿ ತಾವೊಂದು ವೀರಶೈವ ಧರ್ಮವನ್ನು ಸ್ಥಾಪಿಸಬೇಕೆಂಬ ಇರಾದೆಯಾಗಲೀ ತಮ್ಮ ಧರ್ಮವನ್ನು ವಿಸ್ತರಿಸಿಕೊಳ್ಳುವ ಇರಾದೆಯಾಗಲೀ ಒಡೆದು ಕಣುವುದಿಲ್ಲ. ಆದರೆ ಏಕೋತ್ತರ ಶತಸ್ಥಲಗಳ ಕಾಲಕ್ಕೆ ೧೫ – ೧೬ ನೇ ಶತಮಾನದ ಕಾಲಕ್ಕೆ ವೀರಶೈವರ ಮತ ಸ್ಥಾಪನೆ ಆಗಿಬಿಟ್ಟಿತ್ತು. ಜಾತ್ಯತೀತ ಆಚಾರಗಳು ಧರ್ಮವಿಸ್ತರಣೆಯರ ಆಚಾರಗಳಾಗಿ ಬದಲುಗೊಂಡಿದ್ದವು. ತಮ್ಮದೇ ವೀರಶೈವ ಪರಿವಾರ ನಿರ್ಮಾಣ ಕ್ರಿಯೆ ಹರೊಹರನಲ್ಲಿಯೇ ಮೊದಲುಗೊಂಡಿರುವುದನ್ನು ಕಾಣಬಹುದು. ಭಕ್ತಿಯ ನೆಲೆಯಲ್ಲಿ ಮೊದಲುಗೊಂಡ ಈ ಕ್ರಿಯೆ ವೀರಶೈವ ಆಚಾರ ಸಂಹಿತೆಗಳ ರಚನೆ, ಲಿಂಗದೀಕ್ಷೆ, ವಚನಗಳ ಮಠೀಕರಣ – ಟೀಕು – ಸ್ಥಳೀಕರಣ – ಧರ್ಮಬದ್ಧ ವ್ಯಾಖ್ಯಾನ, ಸಂಕಲನನುಸಂಶಧಾನಗಳ ಮೂಲಕ ಧರ್ಮ ವಿಸ್ತರಣೆಯ ಚಟುವಟಿಕೆಯಾಗಿ ಹೊರಳಿಕೊಂಡಿತು. ಸಾಹಿತ್ಯಕವಾಗಿ ಧಾರ್ಮಿಕ ಪಠ್ಯಗಳನ್ನು ನಿರ್ಮಿಸುವ, ಪಠ್ಯಗಳ ಪವಿತ್ರೀಕರಣ ಪುರಾಣೀಕರಣಗೊಳಿಸುವ ಕೆಲಸವಾಗಿ ಅನುಸಂಧಾನಗಳು ಹೊರಳಿಕೊಂಡವು.

ಧರ್ಮವಿಸ್ತರಣೆಯ – ಸಾಂಸ್ಥೀಕರಣದ ಬಹುಮುಖ್ಯ ಚಹರೆ ಎಂದರೆ ವಿಚಾರಪಠ್ಯಗಳನ್ನು ಪವಿತ್ರೀಕರಿಸುವ ಮತ್ತು ಪುರಾಣೀಕರಿಸುವ ಕಾರ್ಯ ವಚನೋತ್ತರ ಕಾಲದಲ್ಲಿ ನಿರಂತರ ನಡೆಯುತ್ತಲೇ ಬಂದಿದೆ. ವಿವಿಧ ಜಾತಿಯ ಜನರನ್ನು ವೀರಶೈವ ದೀಕಗ್ಷೆ ನೀಡಿ ಪರಿವಾರವನ್ನು ವಿಸ್ತರಿಸುವ ಕಾರ್ಯ ಕೂಡ ನಿರಂತರವಾಗಿ ನಡೆಯುತ್ತ ಬಂದಿರುವುದನ್ನು ಕಾಣಬಹುದು. ಹರಿಹರನಲ್ಲಿ ಇಲ್ಲದ, ಹಲಗೆಯಾರ್ಯನಲ್ಲಿ ಇಲ್ಲದ ಸಿದ್ಧರಾಮನ ಲಿಂಗದೀಕ್ಷೆ ಪ್ರಸಂಗ ಅನಂತರದ ಶೂನ್ಯಸಂಪಾದನೆಗಳಲ್ಲಿ ಸೇರ್ಪಡೆಯಾಗುತ್ತದೆ. ನಿಮ್ನ ಜನಾಂಗದ ಶರನರು ೧೨ ನೇ ಶತಮಾನದಲ್ಲಿ ಲಿಂಗದೀಕ್ಷೆ ಕೊಟ್ಟಂತೆ ಚರಿತ್ರೆಯನ್ನು ಕಟ್ಟಿಕೊಳ್ಳಲಾಗಿದೆ. ಧರ್ಮ ಮತ್ತು ಧಾರ್ಮಿಕಪರಿವಾರದ ಅಗತ್ಯಕ್ಕೆ ತಕ್ಕಂತೆ ಚರಿತ್ರೆಯನ್ನು ಕಟ್ಟಿಕೊಳ್ಳುವ – ಪುರಾಣೀಕರಿಸುವ ಕಾರ್ಯ ಸಾಹಿತ್ಯ ಸಂಸ್ಕೃತಿಯಲ್ಲಿ ನಿರಂತರ ನಡೆಯುತ್ತ ಬಂದಿರುವುದಕ್ಕೆ ಆಧುನಿಕ ಪೂರ್ವ ಅಲ್ಲಮನ ಅನುಸಂಧಾನ ಸಾಕ್ಷಿಯಾಗಿದೆ.

. ವಿಚಾರದಿಂದ ಆಚಾರದ ಕಡೆಗಿನ ಚಲನೆ

ಅಲ್ಲಮನ ವಚನಗಳಿಗೆ ಚಾಮರಸ ಛಂದಸ್ಸನ್ನು ತೊಡಿಸುತ್ತಾನೆ. ಷಟ್ಪದಿಯ ಛಂದಸ್ಸು ತೊಡಿಸಿ ವಚನಗಳನ್ನು ಮಹಾಕಾವ್ಯವನ್ನಾಗಿ ಮಾಡುತ್ತಾನೆ. ಇವನ ಕಾವ್ಯವನ್ನು ಪ್ರೌಢದೇವರಾಯನ ಕಾಲದಲ್ಲಿ ರಾಜಬೀದಿಗಳಲ್ಲಿ ಆನೆಯ ಮೇಲೆ ಮೆರವಣಿಗೆ ಮಾಡಲಾಗುತ್ತದೆ. ವಚನವು ರಾಜಮನ್ನಣೆ ಪಡೆದು ಮೆರವಣಿಗೆ ಹೊರಡುವ ಷಟ್ಪದಿ ಕಾವ್ಯವಾಗಿ ರೂಪಾಂತರ ಹೊಂದುವುದೇ ಒಂದು ದೊಡ್ಡ ಬದಲಾವಣೆ. ವಿಚಾರಗಳು ಆಚಾರಸಂಹಿತೆಗಳಾಗಿ ರೂಪಾಂತರಗೊಳ್ಳುವ ಬದಲಾವಣೆಗೆ ರಾಜ ಮನ್ನಣೆ ಇಲ್ಲಿ ದೊರಕಿದೆ. ವಿಚಾರಗಳನ್ನು ಸಂಪ್ರದಾಯ, ಆಚರಣೆ, ಧರ್ಮತತ್ವಗಳನ್ನಾಗಿ ನೆಲೆಗೊಳಿಸುವ ಪ್ರಕ್ರಿಯೆಯಿದು. ವಿಚಾರಪಠ್ಯಕ್ಕೆ ಧರ್ಮ ಮತ್ತು ಪ್ರಭುತ್ವಗಳ ಮನ್ನಣೆ ಒದಗಿಸುವ ಪ್ರಕ್ರಿಯೆಯಿದು. ಅಲ್ಲಮನ ಆಯ್ದ ವಚನಗಳು ಚಾಮರಸನಲ್ಲಷ್ಟೆ ಅಲ್ಲ ಆನಂತರದ ಶೂನ್ಯಸಂಪಾದನೆಗಳು, ಸ್ಥಲಕಟ್ಟು ಸಾಹಿತ್ಯ, ಟೀಕಾ ಸಾಹಿತ್ಯ, ಸಂಕಲನಗಳಲ್ಲಿ ಕಾಲ ಕ್ರಮೇಣ ಆಚಾರ ಸಂಹಿತೆಗಳಂತೆ ವಿವಿಧ ಅಚ್ಚುಗಳಿಗೆ ಸುರಿಸ್ಪಟ್ಟಿವೆ. ಧ್ವನಿಸಾಧ್ಯತೆಗಳ ಕೈಕಾಲುಗಳನ್ನು ಮುರಿದು ನಿರ್ದಿಷ್ಟ ಅರ್ಥದ ಚೌಕಟ್ಟುಗಳಿಗೆ ಹೊಂದಿಸಲ್ಪಟ್ಟಿವೆ. ಬಂಧಿಸಲ್ಪಟ್ಟಿವೆ ಎಂದರೂ ಸರಿಯೆ. ( ಜೊತೆಗೆ ನೋಡಿ ಅರ್ಥದ ಸಂಕೋಚೀಕರಣಃ ನಿಗೂಡೀಕರಣ) ಅಲ್ಲಮನ ಬಹುತೇಕ ವಚನಗಳನ್ನು ಟೀಕುಗಳಲ್ಲಿ ವೀರಶೈವ ಆಚಾರಗಳ ಮಂಡನೆಗೆ ಬಳಸಿ ವ್ಯಾಖ್ಯಾನಿಸಲಾಗಿದೆ. ಅಲ್ಲದೆ ಅವನ ಜೀವನ ಕಥನವನ್ನೂ ಆಚಾರಗಳಿಗೆ ಬಳಸಿಕೊಳ್ಳಲಾಗಿದೆ. ಹರಿಹರನಲ್ಲಿ ಇಲ್ಲದ, ರಾಘವಾಂಕನಲ್ಲಿ, ಶಿವಗಣಪ್ರಸಾದಿಯಲ್ಲಿ ಇಲ್ಲದ ಸಿದ್ಧರಾಮನ ಲಿಂಗದೀಕ್ಷೆಯ ಪ್ರಸಂಗ ಚಾಮರಸನಲ್ಲಿ ಸೇರಿಕೊಂಡಿದೆ. ಅನಂತರದಲ್ಲಿ ಶೂನ್ಯಸಂಪಾದನಾಕಾರರಲ್ಲೂ ಸೇರಿಕೊಂಡಿದೆ. ೧೭೫೦ ರಲ್ಲಿ ರಚನೆಯಾಗಿರುವ ಚೆನ್ನಪ್ಪ ಕವಿಯ ಶರಣಲೀಲಾಮೃತದಲ್ಲಂತೂ ಸಿದ್ಧರಾಮನ ಲಿಂಗದೀಕ್ಷೆಯ ಬಗೆಗೆ ಸವಿಸ್ತಾರವಾದ ವರ್ಣನೆಯಿದೆ. ನಮ್ಮ ಮದುವೆಗಳ ರೀತಿಯಲ್ಲಿ ಅದನ್ನೊಂದು ವಿಶಿಷ್ಟ ಆಚರಣೆಯನ್ನಾಗಿ ವರ್ಣಿಸಲಾಗಿದೆ.[3]

. ಭಿನ್ನತೆಗಳ ಏಕರೂಪೀಕರಣಸ್ಥಲನಿರ್ದೇಶನವೀರಶೈವೀಕರಣ

ಒಬ್ಬನೇ ಕವಿಯಲ್ಲಿ ಇರಬಹುದಾದ ಭಿನ್ನತೆಗಳು ಮತ್ತು ಒಬ್ಬೊಬ್ಬರಲ್ಲೂ ಇರಬಹುದಾದ ಭಿನ್ನತೆಗಳನ್ನೆಲ್ಲ ವಚನೋತ್ತರ ಕಾಲವು ತೋಬಡಾ ಹೊಡೆದು ಏಕರೂಪೀಕರಣಕ್ಕೆ ಒಗ್ಗಿಸಲು ಯತ್ನಿಸುತ್ತ ಬಂದಿದೆ. ಇದು ವೀರಶೈವಿಕರಣ ಪ್ರಕ್ರಿಯೆ ಕೂಡ. ಅಲ್ಲಮ ವೀರಶೈವ ಸಿದ್ಧಾಂತಗಳನ್ನಾಗಲೀ, ನೂರೊಂದು ಸ್ಥಲಗಳನ್ನಾಗಲೀ ಮೂಲಮಾತೃಕೆಗಳನ್ನಾಗಿ ಇಟ್ಟುಕೊಂಡು ಅಥವಾ ಪ್ರಣಾಳಿಕೆಗಲನ್ನಾಗಿ ಇಟ್ಟುಕೊಂಡು ವಚನ ರಚನೆ ಮಾಡಿದವನಲ್ಲ. (ಧಾರ್ಮಿಕರು ಆಧುನಿಕ ಸಂದರ್ಭದಲ್ಲಿ ವೀರಶೈವ – ಲಿಂಗಾಯತ ಎರಡೂ ಬೇರೆ ಬೇರೆ ಎಂಬ ವಾದದಲ್ಲಿ ಸಾಕಷ್ಟು ಬಳಲಿದ್ದಾನೆ, ಬಳಲುತ್ತಿದ್ದಾರೆ. ಆದರೆ ಈ ಲೇಖನದಲ್ಲಿ ಇವುಗಳ ಭಿನ್ನತೆಯ ಗೊಡವೆಗೆ ಹೋಗಿಲ್ಲ) ಮಠ ಸಂಸ್ಕೃತಿಯ ವಕ್ತಾರರು ಹೇಳುವ ಗುರುಲಿಂಗ ಜಂಗಮಾದಿಗಳನ್ನು ಷಟ್ ಸ್ಥಲಗಳೆಂದು ಭಾವಿಸದೆ ತನ್ನದೇ ಹಲವು ವಿಚಾರಗಳ ಪ್ರದಿಪಾದನೆಯ ಹರವಿನಲ್ಲಿ ಇವನ್ನೂ ಕುರಿತು ಬರೆದಿದ್ದಾನೆ. ಆದರೆ ಸ್ಥಲಕಟ್ಟು ಸಾಹಿತ್ಯ ಸಂಕಲನಕಾರರು ಷಟ್ ಸ್ಥಲಗಳಿಗೆ ಅವನ ವಚನಗಳನ್ನು ಹೊಂದಿಸಿ ಅರ್ಥೈಸುತ್ತಾರೆ. ಅನಂತರ ಬಂದ ಮತೀಯರಂತು ಇವನ ವಚನಗಳನ್ನು ಷಟ್ ಸ್ಥಲಗಳೆಂಬ, ನೂರೊಂದು ಸ್ಥಲಗಳೆಂಬ ಚೀಲಗಳಿಗೆ ವಿಂಗಡಿಸಿ ಹಾಕಿದ್ದಾರೆ. ಅದೇ ರೀತಿಯಲ್ಲಿ ಅರ್ಥಾನ್ವಯ ಮಾಡಿದ್ದಾರೆ. ಅಲ್ಲದೆ ಅವನ ವಚನಗಳಲ್ಲಿನ ಭಿನ್ನ ಅರ್ಥಸಾಧ್ಯತೆಗಳನ್ನು ಕೂಡ ಧರ್ಮಬದ್ಧ ಏಕರೂಪೀಕೃತ ಅರ್ಥಕ್ಕೆ ಕಟ್ಟಿ ಹಾಕಿದ್ದಾರೆ.

ಬಸವ ವಿಚಾರಧಾರೆಗಳಿಗೂ ಅಲ್ಲಮ ವಿಚಾರಧಾರೆಗಳಿಗೂ ಭಿನ್ನತೆಯಿದೆ.ಅಕ್ಕ – ಬಸವ – ಚೆನ್ನಬಸವ – ಸಿದ್ಧರಾಮ – ಅಲ್ಲಮರ ಮಾರ್ಗಗಳು ಭಿನ್ನ. ಆ ಭಿನ್ನತೆಯು ಅವರ ವಚನಗಳ ತಾತ್ವಿಕತೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ( ಈ ಭಿನ್ನತೆಗಳು ವೈರುಧ್ಯಗಳಲ್ಲ, ಇವರ ಉದ್ದೇಶ – ಗುರಿಗಳಲ್ಲಿ ಭಿನ್ನಾಭಿಪ್ರಾಯವಿಲ್ಲ. ಆಲೋಚನಾಕ್ರಮ, ಅಭಿವ್ಯಕ್ತಿ ವಿಧಾನಗಳಲ್ಲಿ ಭಿನ್ನತೆಯಿದೆ). ಆದರೆ ವಚನೋತ್ತರಕಾಲೀನ ಸಾಹಿತ್ಯಕ ಅನುಸಂಧಾನಗಳು ಈ ಭಿನ್ನತೆಗಳನ್ನೆಲ್ಲ ವೀರಶೈವೀಕರಣದ ಅಚ್ಚಿಗೆ ಹೊಯ್ಯುವ ಕೆಲಸವನ್ನು ನಿರ್ವಹಿಸಿವೆ. ಏಕರೂಪೀಕೃತ ಧಾರ್ಮಿಕ ಆಕೃತಿಕೊಳಕ್ಕೆ ಅಲ್ಲಮನ ವಚನಗಳನ್ನು ಒಗ್ಗಿಸುವ ಬಿಕ್ಕಟ್ಟನ್ನೂ ಚೆನ್ನಾಗಿ ನಿಭಾಯಿಸುವಲ್ಲಿ ಕೆಲವಡೆ ಶೂನ್ಯಸಂಪಾದನೆ, ಟೀಕು ಸ್ಥಲಕಟ್ಟು ಅನುಸಂಧಾನಗಳು ಸೋತಿದ್ದರೂ ಬಹುಪಾಲು ಯಶಸ್ವಿಯಾಗಿವೆ ಎಂದೇ ಹೇಳಬೇಕು.

. ಪುರಾತನರ ನಿರಾಕರಣೆಯಿಂದ ಅವರ ಸ್ತುತಿಯ ಕಡೆಗಿನ ಚಲನೆ

ಶೈವಪುರಾತನರ ಸ್ತುತಿ ವಚನೋತ್ತರ ಕಾಲದ ಸಾಹಿತ್ಯಕ ಅನುಸಂಧಾನಗಳಲ್ಲಿ ಬಹುಮುಖ್ಯವಾಗಿ ಕಾಣುವ ಅಂಶ. ಆದರೆ ಅಲ್ಲಮ ವೇದ ಪುರಾಣಗಳನ್ನು ಒಳಗೊಂಡಂತೆ ಚರಿತ್ರೆಯನ್ನೇ ನಿರಾಕರಿಸುತ್ತಾನೆ. ಅಲ್ಲದೆ ಅಲ್ಲಮ ಎಲ್ಲಿಯೂ ತನ್ನ ಪೂರ್ವಕವಿಗಳನ್ನು ಸ್ತುತಿಸುವುದಿಲ್ಲ. ತನ್ನ ಸಮಕಾಲೀನರ ವಚನಗಳ ಬಗ್ಗೆ ಮಾತಾಡುತ್ತಾನೆಯಾದರೂ, ಸಮಕಾಲೀನರನ್ನು ಸ್ತುತಿಸುತ್ತಾನೆಯಾದರೂ ತನ್ನ ಹಿಂದಣ ಪುರಾತನ ಕವಿಗಳನ್ನು ಈತ ಸ್ಮರಿಸುವುದಿಲ್ಲ. ಸತ್ಕವಿ ಪ್ರಶಂಸೆ – ಕುಕವಿ ನಿಂದೆ – ಪೂರ್ವಾಚಾರ್ಯ ಸ್ಮರಣೆ ನಮ್ಮ ಸ್ಥಾಪಿತ ಸಾಹಿತ್ಯದ ಒಂದು ಅವಿಭಾಜ್ಯ ಆಚಾರ. ಆದರೆ ಅಲ್ಲಮ ಇವಾವುದಕ್ಕೂ ಸೊಪ್ಪು ಹಾಕಿಲ್ಲ. ಆದಾಗ್ಯೂ ವಚನೋತ್ತರ ಕಾಲೀನ ಅನುಸಂಧಾನಗಳು ಅಲ್ಲಮನನ್ನು ಒಳಗೊಂಡಂತೆ ತಮ್ಮದೇ ಶೈವ ಪರಂಪರೆಯನ್ನು ಸ್ತುತಿಸುತ್ತವೆ. ಸಾಹಿತ್ಯವು ಸಾಂಸ್ಥಿಕವಾದಾಗ ಆಗುವ ಬದಲಾವಣೆಯಿದು. ತನ್ನ ಸಮಕಾಲೀನ ಬಸವಾದಿ ಶರನರನ್ನು ಸ್ತುತಿಸಿರುವ ಅಲ್ಲಮನ ಹಲವಾರು ವಚನಗಳನ್ನು ಹಲವರು ಸಂಕಲಿಸಿದ್ದಾರೆ. ಆದರೆ ಅವುಗಳಲ್ಲಿ ಹಲವನ್ನು ಅಲ್ಲಮನ ಹೆಸರಿನಲ್ಲಿ ಇತರರೇ ಬರೆದು ಹಾಕಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಿದೆ.

[1] ಪೀಠಿಕೆ ಶಿವಗಣಪ್ರಸಾದಿ ಮಹದೇವಯ್ಯನ ಶೂನ್ಯ ಸಂಪಾದನೆ – ಎಲ್. ಬಸವರಾಜು,ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ, ಗುಲಬರ್ಗಾ, ೧೯೬೯, ಪುಟ.೪೦.

[2] ಟೀಕು – ವ್ಯಾಖ್ಯಾನ ಇಲ್ಲದ ಸಂಪಾದನೆಗಳನ್ನು ಆರದ.ಸಿ. ಹಿರಢಮಠ, ವೀರಣ್ಣ ರಾಜೂರ, ಎಸ್. ಎಂ. ವೃಷಭೇಂದ್ರಸ್ವಾಮಿ ಮೊದಲಾದವರು ‘ಕೇವಲ ಸಂಪಾದನೆಗಳು’ ಎನ್ನುತ್ತಾರೆ. ಆದರೆ ಇವುಗಳನ್ನು ಕೇವಲ ಸಂಪಾದನೆಗಳು ಎನ್ನದೆ ತೆರೆದ ಸಂಪಾದನೆಗಳು ಎನ್ನುವುದೇ ಸೂಕ್ತ. ಕರಸ್ಥಲ ವೀರಣ್ಣೊಡೆಯರ ವಚನ= ಕಂದಪದ್ಯ ಕಾವ್ಯ; ಸರ್ವಜ್ಞ.

[3] ಸಿದ್ಧಯ್ಯ ಪುರಾಣಿಕ – ಅಲ್ಲಮಪ್ರಭು, ಬಸವ ಸಮಿತಿ, ೧೯೮೯, ಪುಟ ೭೦ – ೭೧.