. ವರ್ಗೀಕರಣದ ರಾಜಕಾರಣ : ರೂಪಕ, ವ್ಯಂಗ್ಯವಿಡಂಬನೆಗಳಿಂದ ಸ್ಥಲಕಟ್ಟುಸೋತ್ರಗಳ ಕಡೆಗೆ ಚಲನೆ

ಯಾವುದೇ ಪರಂಪರೆಯನ್ನು ಅದರ ವಾರಸುದಾರ ಸಮುದಾಯವು ಅಧ್ಯಯನ ಮಾಡ ಹೊರಟಾಗ ತನ್ನ ಅಧ್ಯಯನದ ಅನುಕೂಲಕ್ಕೆ ತಕ್ಕಂತೆ ಅದನ್ನು ವರ್ಗೀಕರಿಸಿಕೊಳ್ಳುತ್ತ ಹೋಗುತ್ತದೆ. ಹೀಗೆ ಅಲ್ಲಮನ ವಚನಗಳನ್ನೂ ಭಿನ್ನ ಕಾಲಘಟ್ಟ ಮತ್ತು ಭಿನ್ನ ಅನುಸಂಧಾನಕಾರರು ವರ್ಗೀಕರಿಸುತ್ತ ಹೋಗಿದ್ದಾರೆ. ಇವರು ತಮ್ಮ ಭಿನ್ನ ಸಾಮುದಾಯಿಕ ಅಭಿರುಚಿಗಳಿಗೆ ತಕ್ಕಂತೆ ವಚನಗಳನ್ನು ವರ್ಗೀಕರಿಸುತ್ತ ಹೋಗಿದ್ದಾರೆ. ಈ ವರ್ಗೀಕರಣದ ಅನುಸಂಧಾನವನ್ನು ವರ್ಗೀಕರಣದ ರಾಜಕಾರಣ ಎಂದೇ ಕರೆಯಬೇಕು. ಶರಣರ ಅದರಲ್ಲೂ ಅಲ್ಲಮನ ಸಾಮಾಜಿಕ ವಿಡಂಬನೆ, ವ್ಯಂಗ್ಯ, ದಂಗೆಕೋರತನ, ರೂಪಕ – ಪ್ರತಿಮಾರ್ಗದ ವಚನಗಳನ್ನೆಲ್ಲ ಒಂದೊಂದು ಸ್ಥಲಕಟ್ಟುಗಳಿಗೆ, ಸ್ತೋತ್ರಗಳಿಗೆ ತಕ್ಕಂತೆ ವಿಂಗಡಿಸಿ ವರ್ಗೀಕರಿಸಿದ್ದಾರೆ. ಆರಂಭದ ಮಹಲಿಂದೇವ, ಜಕ್ಕಣಾರ್ಯರು ಏಕೋತ್ತರ ಶತಸ್ಥಲ, ಪ್ರಭುದೇವರ ಷಟ್ಸಸ್ಥಲ, ಸೂಕ್ಷ್ಮಮಿಶ್ರ ಷಟ್ ಸ್ಥಲ, ಮುಂತಾದ ತಮ್ಮ ಕೃತಿಗಳಲ್ಲಿ ವಚನಗಳನ್ನು ಆರು, ಹನ್ನೊಂದು, ನೂರೊಂದು, ೨೧೬ ಸ್ಥಲಗಳಿಗೆ ಹೊಂದುವಂತೆ (ಆಯಾಯಾ ಚೀಲಗಳಿಗೆ ಆಯಾಯಾ ವಚನಗಳನ್ನು) ವಿಂಗಡಿಸಿ ಹಾಕಿದ್ದಾರೆ. ಸಂಪಾದನೆಯು ಚನ್ನಜೆದೇವ (ಬಸವಸ್ತೋರದ ವಚನಗಳು), ಎಳಮಲೆಯ ಗುರುಶಾಂತದೇವ (ಮಿಶ್ರ ಸ್ತೋತ್ರದ ವಚನಗಳು), ಸಂಪಾದನೆಯ ಸಿದ್ಧವೀರಣ್ಣ (ಲಿಂಗಸ್ತೋತ್ರದ ವಚನಗಳು) ಮೊದಲಾದ ಅನುಸಂಧಾನಕಾರರು ಅಲ್ಲಮನ ವಚನಗಳನ್ನು ಆಯಾಯ ಸ್ತೋತ್ರಗಳಿಗೆ ತಕ್ಕಂತೆ ವಿಂಗಡಿಸಿ ಸಂಪಾದಿಸಿದ್ದಾರೆ. ಇಂತಹ ಅನುಸಂಧಾನಗಳಲ್ಲಿ ಅಲ್ಲಮನ ವಚನಗಳು ಅನುಸಂಧಾನಕಾರರ ವರ್ಗೀಕರಣದ ರಾಜಕಾರಣಕ್ಕೆ ಗುರಿಯಾಗಿವೆ.

. ಆಯಾಯ ಶಿಸ್ತುವಲಯಗಳ ವ್ಯಾಕರಣಕ್ಕೆ ಅಲ್ಲಮನ ಕಥನವನ್ನು ಹೊಂದಿಸುವುದು

ಬೆಳಗಾವಿಯ ಶಿವಾನಂದಕವಿ ಅಲ್ಲಮ ಪ್ರಭುದೇವರ ಬಯಲಾಟವೊಂದನ್ನು ಬರೆದಿದ್ದಾನೆ. ಇದೊಂದು ಸಣ್ಣಾಟ. ಇಲ್ಲಿ ಕೈಲಾಸದಲ್ಲಿ ಶಿವಪಾರ್ವತಿಯರ ಸಲ್ಲಾಪ ಸಂದರ್ಭಕ್ಕೆ ನಾರದ ಬಂದು ಮಾಯೆಯನ್ನು ಗೆದ್ದಿರುವ ಅಲ್ಲಮನ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ಅನಂತರ ನಾಟಕವು ಗಂಡು ಹೆಣ್ಣುಗಳಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬಂತೆ ಬೆಲೆಯುತ್ತ ಹೋಗುತ್ತದೆ. ಚಾರ್ವಾಕನ ರೂಪದಲ್ಲಿ (ಚಾರ್ವಾಕನೆಂದರೆ ದೈವದಲ್ಲಿ ನಂಬಿಕೆ ಇರದ ನಾಸ್ತಿಕ ಎಂಬ ಅರ್ಥದಲ್ಲಿ) ಅಲ್ಲಮನ ಅಕ್ಕನನ್ನು ಸಂಧಿಸಿ ಪರೀಕ್ಷಿಸುವ ಪ್ರಸಂಗ ಇಲ್ಲಿ ಬರುತ್ತದೆ. ಅಕ್ಕನನ್ನು ಅನುಭಾವಿ ಎಂದು ಒಪ್ಪಲು ನಮ್ಮ ಸಮಾಜಕ್ಕೆ ಆಕೆ ಅಲ್ಲಮನ ಪರೀಕ್ಷೆಯಲ್ಲಿ ಗೆದ್ದು ಬರಬೇಕಾದ ಅಗತ್ಯ ಉಂಟೆಂದು ಈ ಸಣ್ಣಾಟ ಹೇಳುತ್ತದೆ. ಇಲ್ಲಿ ನಾರದನ ಪ್ರವೇಶ ಆಗುವುದಾಗಲೀ, ದೂತಿಯ ಪಾತ್ರದ ಪ್ರವೇಶ ಅಗುವುದಾಗಲೀ ಎಲ್ಲವೂ ಸಣ್ಣಾಟದ ವ್ಯಾಕರಣಕ್ಕೆ ತಕ್ಕಂತೆ ಆಗುತ್ತದೆಯೇ ವಿನಾ ಅಲ್ಲಮನಿಗೂ ನಾರದನಿಗೂ ಯಾವ ಸಂಬಂಧವೂ ಇಲ್ಲ. ಹಾಗೆಯೇ ದುರುದುಂಡೀಶ ಕವಿಯ ಪ್ರಭುನಾಟಕವೆಂಬ ಯಕ್ಷಗಾನದಲ್ಲಿ ಕೂಡ ಯಕ್ಷಗಾನದ ವ್ಯಾಕರಣಕ್ಕೆ ತಕ್ಕಂತೆ ಅಲ್ಲಮ ಕಥನ ನಿರೂಪಿತವಾಗಿದೆ. ಅದೇ ರೀತಿ ಪ್ರಭುದೇವರ ಕಂದದಲ್ಲಿ, ಎಳಂದೂರ ಹರೀಶ್ವರನ ಪ್ರಭುದೇವರ ಪುರಾಣದಲ್ಲಿ ವೀರಶೈವ ಪುರಾಣಗಳ ವ್ಯಾಕರಣಕ್ಕೆ ತಕ್ಕಂತೆ ಅಲ್ಲಮನ ಕಥನ ಒಗ್ಗಿಸಲ್ಪಟ್ಟದೆ. ಹೀಗೆ ಕಾಲಾನುಕ್ರಮದಲ್ಲಿ ಅಲ್ಲಮ ಕಥನವು ಆಯಾಯ ವಲಯಗಳ ವ್ಯಾಕರಣಕ್ಕೆ ತಕ್ಕಂತೆ ತನ್ನದೇ ರೂಪಾಂತರಗಳಿಗೆ ಗುರಿಯಾಗುತ್ತ ಬಂದಿದೆ. ಆಧುನಿಕ ಸಂದರ್ಭದಲ್ಲಿ ಬಿ.ಪುಟ್ಟಸ್ವಾಮಯ್ಯ, ಡಿ. ಆರ್. ನಾಗರಾಜ, ನಾಗನೂರು ಶಿವಬಸವಸ್ವಾಮಿ, ಎಲ್ . ಬಸವರಾಜು, ಚಂದ್ರಶೇಖರ ತಾಳ್ಯ, ಲಕ್ಷ್ಮೀಪತಿ ಕೋಲಾರ, ನಟರಾಜ ಬೂದಾಳು ಮುಂತಾದ ಇವರಲ್ಲೂ ಅಲ್ಲಮ ಕಥಾನಕ ಭಿನ್ನ ಅವತಾರಗಳನ್ನು ಎತ್ತುತ್ತ ಬಂದಿದೆ.

. ಹೆಣ್ಣು ಮತ್ತು ಮಾಯೆಯು ಸಮೀಕರಣಲಿಂಗರಾಜಕಾರಣದ ಸಾಧನವಾಗಿ ಪ್ರಭುಕಥನ

ಹೆಣ್ಣಿನ ಬಗ್ಗೆ ವಚನಕಾರರು ಹೊಂದಿದ್ದ ದೃಷ್ಟಿಗೂ ಆನಂತರದ ಅನುಸಂಧಾನಕಾರರು ಹೊಂದಿದ್ದ ದೃಷ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ಹೆಣ್ಣನ್ನು ಮಾಯೆಯೆಂದು ವಚನಕಾರರು ಯಾರೂ ಕರೆದಿರಲಿಲ್ಲ. ಆದರೆ ಆನಂತರದಲ್ಲಿ ಹೆಣ್ಣು ಮತ್ತು ಮಾಯೆಗಳ ಸಮೀಕರಣವೆ ನಡೆದು ಹೋಗಿದೆ. “ಬಸವಾದಿ ಪ್ರಮಥರು ಹೆಣ್ಣಿನ ಬಗ್ಗೆ ತಾಳಿದ್ದ ಉದಾರ ದೃಷ್ಟಿ ನೂರೊಂದು ವಿರಕ್ತರ ಕಾಲಕ್ಕೆ ಮಾಯವಾಗಿ ಹೆಣ್ಣು ಮಾಯೆಯೆಂಬ ದೃಷ್ಟಿ ಮತ್ತೆ ಮರುಕಳಿಸಿದೆ. ಪ್ರಭುದೇವರೇ ‘ಹೆಣ್ಣು ಮಾಯೆಯಲ್ಲ’ ಎಂದು ಹೇಳಿದ್ದರೂ ಅವರ ಚರಿತ್ರೆಯಲ್ಲಿಯೇ ಹೆಣ್ಣು ಮಾಯೆಯೆಂಬ ಪ್ರತಿಪಾದನೆ ನಡೆದಿರುವುದು ವಿರೋಧಾಭಾಸವೇ ಸರಿ. ‘ಮನದ ಮುಂದಣ ಆಶೆಯೇ ಮಾಯೆ’ ಎಂಬ ಪ್ರಭುವಿನ ವಾಣಿಯನ್ನು ಚಾಮರಸನೂ ಒಪ್ಪಿಕೊಂಡಂತೆ[1] ಕಾಣುತ್ತದೆ” ಈ ಪದ್ಯ ನೋಡಿ:

ಆಸೆಯೆಂಬುದು ತಾನೆ ಮಾಯಾ/ ಪಾಸವದು ಮುಸುಕಿದಡೆ ತಾನೇ / ಕ್ಲೇಶ…….

(ಪ್ರ. ಲಿಂ. ಲೀ. ಗತಿ ೨೪) ಆದರೆ ಅಲ್ಲಮನ ಘನತೆಗೆ ಕುಂದುಂಟಾಗುವುದೆಂಬ ಕಾರಣಕ್ಕೆ ಕಾಮಲತೆಯ ಕತೆಯನ್ನು ಚಾಮರಸ ಮುಚ್ಚಿ ಹಾಕಲು ಯತ್ನಿಸಿದ್ದಾನೆ. ಆದರೂ ಈ ಕತೆ ಹರಿಹರನಿಂದ ಸಾಗಿ ಶಿವಗಣಪ್ರಸಾದಿಯಲ್ಲಿ ಪೀಠಿಕಾ ಗದ್ಯದ ಕೊನೆಯಲ್ಲಿ ಬಂದಿದೆ. ಪ್ರಭುದೇವರ ಟೀಕಿನ ವಚನಗಳ ಅಂತ್ಯದಲ್ಲಿಯೂ ಇದು ಕಾಣಿಸಿಕೊಂಡಿದೆ. ಆದರೆ ಅನಂತರದ ಬಹುತೇಕ ಎಲ್ಲ ಕವಿಗಳೂ ಈ ಕಾಮಲತೆಯ ಪ್ರಸಂಗವನ್ನು ಅಲಕ್ಷಿಸಿದ್ದಾರೆ. ಹೆಣ್ಣು ಮತ್ತು ಮಾಯೆ ಎರಡನ್ನು ಒಂದೇ ಎಂದು ಭಾವಿಸಿ ಅದನ್ನು ಅಲ್ಲಮನ ಮತ್ತು ಅಕ್ಕನ ಪಾತ್ರಗಳ ಮೂಲಕ ಚಿತ್ರಿಸಿದ ಕೆಲಸವನ್ನು ಆನಂತರದಲ್ಲಿ ಬಯಲಾಟ – ಯಕ್ಷಗಾನ ಗಳು ಮಾಡಿವೆ. ಶಿವಾನಂದಕವಿ, ದುರುದಂಡೀಶ ಕವಿಗಳು ತಮ್ಮ ಸಣ್ಣಾಟ – ಯಕ್ಷಗಾನಗಳಲ್ಲಿ ಅಲ್ಲಮನನ್ನು ಗಂಡು ಸಮುದಾಯದ ಪ್ರತಿನಿಧಿಯೆಂಬಂತೆ ನೋಡಿದ್ದಾರೆ. ಮಾಯಾ ಪ್ರಸಂಗವನ್ನು ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂಬ ಸ್ತ್ರೀ ಪುರುಷ ಸಂಘರ್ಷವಾಗಿಯೆ ಕಂಡಿದ್ದಾರೆ. ಅನುಭಾವಕ್ಕೆ ಅಕ್ಕನ ಉದಾಹರಣೆಯೇ ಕಣ್ಣ ಮುಂದೆ ಇದ್ದರೂ ಹೆಣ್ಣಿಗೆ ಮುಕ್ತಿಯಿಲ್ಲವೆಂಬ ಮತ್ತು ಸಾಧಕನಿಗೆ ಹೆಣ್ಣು ಅಡ್ಡಿಯೆಂಬ ಪುರುಷ ಚಿಂತನೆಯೆ ಇವರಲ್ಲಿ ಪ್ರಧಾನವಾಗಿ ಬಿಂಬಿತವಾಗಿದೆ. ಲಿಂಗರಾಜಕಾರಣದ ಸಾಧನವಾಗಿ ಪ್ರಭುದೇವರ ಕಥನವೂ ಸಾಹಿತ್ಯ ಚರಿತ್ರೆಯಲ್ಲಿ ರೂಪಾಂತರಗೊಂಡಿರುವುದು ನಮ್ಮ ಪುರುಷ ನಿರ್ಮಿತ ಮೌಲ್ಯ ವ್ಯವಸ್ಥೆಯ ಪ್ರತೀಕವೇ ಆಗಿದೆ. ಹೆಣ್ಣು – ಗಂಡೆಂಬ ಅವಳಿ ವೈರುಧ್ಯವನ್ನು ದಾಟಿದವನು ಅಲ್ಲಮ.ನಮ್ಮ ವಚನಕಾರ ಅಲ್ಲಮ ಶಿವಾನಂದ – ಗುರುದುಂಡೀಶರ ಅಲ್ಲಮನಲ್ಲ. ಆ ಅಲ್ಲಮ ಬೇರೆ, ಈ ಅಲ್ಲಮ ಬೇರೆ. ನಮ್ಮಲ್ಲಿ ನಿತ್ಯವೂ ಹೀಗೇ ಯಾವುದಾದರೂ ಒಂದುವರ್ಗರಾಜಕಾರಣಕ್ಕೋ ಲಿಂಗರಾಜಕಾರಣಕ್ಕೂ ಸಾಹಿತ್ಯ ಪಠ್ಯಗಳು ದುಡಿಯುತ್ತಾ ಇರುತ್ತವೆ. ಅಲ್ಲದೆ ಯಾವುದೇ ಕಾಲದಲ್ಲೇ ಆಗಲೀ ನಮ್ಮ ಸಂಸ್ಕೃತಿಯ ದೌರ್ಬಲ್ಯಗಳೇ ಸಾಹಿತ್ಯ ಪಠ್ಯದಲ್ಲಿ ಪ್ರತಿಬಿಂಬಿತವಾಗುತ್ತಿರುತ್ತವೆ ಅಲ್ಲವೇ?[2]

. ಆಯ್ಕೆ ಮತ್ತು ಅಲಕ್ಷ್ಯಗಳ ವ್ಯಾಪಾರ

ಚಾಮರಸವನಾಗಲೀ, ಶೂನ್ಯಸಂಪಾದನಕಾರರಾಗಲೀ, ಇತರ ಸಂಪಾದನಾಕಾರರಾಗಲೀ ಅಲ್ಲಮನ ಎಲ್ಲ ವಚನಗಳನ್ನು ತಮ್ಮ ಅನುಸಂಧಾನಕ್ಕೆ ಎತ್ತಿಕೊಳ್ಳುವುದಿಲ್ಲ. ತಮಗೆ ಬೇಕಾದ ಅರ್ಥಗಳಿಗೆ ದುಡಿಸಿಕೊಳ್ಳಬಹುದಾದ ವಚನಗಳನ್ನು ಮಾತ್ರ ಎತ್ತಿಕೊಳ್ಳುತ್ತಾರೆ. ಮಿಕ್ಕಂತವನ್ನೆಲ್ಲ ಅಲಕ್ಷಿಸುತ್ತಾರೆ. ಈ ಆಯ್ಕೆ ಮತ್ತು ಅಲಕ್ಷ್ಯಗಳ ವ್ಯಾಪಾರದಲ್ಲಿ ಒಂದು ದೊಡ್ಡ ಧಾರ್ಮಿಕ ರಾಜಕಾರಣವೇ ಆಡಗಿದೆ. “ಘನತರ ಚಿತ್ರದ ರೂಹು ಬರೆಯಬಹುದಲ್ಲದೆ ಪ್ರಾಣವ ಬರೆಯಬಹುದೇ ಅಯ್ಯ? ದಿವ್ಯಾಗಮಂಗಳು ಹೇಳಿದ ಕ್ರಿಯೆಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ ಭಕ್ತಿಯ ಮಾಡಬಹುದೇ ಅಯ್ಯ? ಎಂದು ಮುಂತಾಗಿ ಅಲ್ಲಮ ಹೇಳುವ ಮಾತುಗಳು ಇವರ ಕಿವಿಗೆ ಬೀಳುವುದೇ ಇಲ್ಲ. ದೀಕ್ಷಾ ವಿಧಾನಗಳ ಕುರಿತು ತಮ್ಮದೇ ಆಚಾರಗಳನ್ನಿವರು ಕಟ್ಟಿಯೇ ಕಟ್ಟುತ್ತಾರೆ. ಅದಕ್ಕೆ ಅಲ್ಲಮನನ್ನೂ ಬಳಸುತ್ತಾರೆ. ಇವರಿಗೆ ಅಲ್ಲಮನನ್ನು ವೀರಶೈವ ತತ್ವಜ್ಞಾನಿಯಂತೆ ಕಟ್ಟಿಕೊಳ್ಳಬೇಕಾದ ಅಗತ್ಯವಿದೆ. ಹಾಗಾಗಿ ಅಲ್ಲಮ ಇವರಿಗೆ ವೀರಶೈವ ಆಗಿಯೇ ಕಾಣುತ್ತಾನೆ. ಇತಿಹಾಸವು ಯಾವತ್ತೂ ಪುನಾರಚನೆಗೊಳ್ಳುವುದು ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಅಲ್ಲವೇ? ಹಾಗೆಯೇ ಅಲ್ಲಮ ಆಯಾಯಾ ವರ್ತಮಾನಗಳ ಅಗತ್ಯಕ್ಕೆ ಅನುಗುಣವಾಗಿ ಅನುಸಂಧಾನಗಳಿಗೆ ಗುರಿಯಾಗುತ್ತ ಬಂದಿದ್ದಾನೆ.

೧೦. ನೆನಹು ಮಾತ್ರವೆ ಭಾಗ್ಯ; ಅಲಕ್ಷ್ಯ ದೌರ್ಭಾಗ್ಯ

ಒಂದೊಂದು ಸಂಕಲನಗಳಲ್ಲಿ ಅಲ್ಲಮನ ಇಪ್ಪತ್ತೊ ಮುವ್ವತ್ತೊ ವಚನಗಳನ್ನು ಇತರ ಶರಣರ ವಚನಗಳೊಂದಿಗೆ ಸಂಕಲಿಸಲಾಗಿದೆ. ಕೆಲವು ಕಡೆ ಐದೋ, ಹತ್ತೋ ತಮಗೆ ಹೊಂದಿಕೆಯಾಗುವ ವಚನಗಳನ್ನು ಮಾತ್ರ ಸಂಕಲಿಸಿದ್ದಾರೆ. ಒಂದೆರಡು ಕಡೆ ಅಲ್ಲಮನ ೨೦೦ – ೩೦೦ ವಚನಗಳನ್ನು ಟೀಕೆಗೆ ಎತ್ತಿಕೊಳ್ಳಲಾಗಿದೆ. ಅವನ ಹಲವು ಸ್ವರಪದಗಳೂ ಅನುಸಂಧಾನಕ್ಕೆ ಗುರಿಯಾಗಿವೆ. ಬಸವಸ್ತೋತ್ರ, ಆಚರಣೆಯ ವಚನ,ಸಂಬಂಧದ ವಚನ, ಶರಣ ಸ್ತೋತ್ರ, ಷಟ್ಸ್ಥಲ ಸ್ತೋತ್ರ, ಸೂಕ್ಷ್ಮ ಮಿಶ್ರ ಷಟ್ ಸ್ಥಲ ಇತ್ಯಾದಿ ಎಷ್ಟೆಷ್ಟು ವರ್ಗೀಕರಣಗಳನ್ನು ಮಾಡಿದರೂ ಈ ಎಲ್ಲ ವರ್ಗೀಕರಣಗಳಲ್ಲಿ ಹೊಂದಿಕೆಯಾಗುವ ಅಲ್ಲಮನ ವಚನಗಳು ಕೆಲವೇ ಕೆಲವು. ಇವುಗಳಿಗೆ ಆಚೆಗೆ ಅಲ್ಲಮನ ನೂರಾರು ವಚನಗಳು ಉಳಿದುಕೊಳ್ಳುತ್ತವೆ. ಆ ವಚನಗಳನ್ನು ಸ್ಥಲಕಟ್ಟುಗಳಿಗೆ ಅನುಗುಣವಾಗಿ ಸಂಕಲಿಸುವ ಮತ್ತು ಕೆಲವೊಮ್ಮೆ ಸಕಲಪುರಾತನರ ವಚನಗಳೆಂದು, ಎಲ್ಲ ಪುರಾತನರ ವಚನವೆಂದು ಸಂಕಲಿಸುವ ಕೆಲಸವೂ ನಡೆದಿದೆ. ಈ ವರ್ಗೀಕರಣಗಳಿಗೆ ಹೋಗದೆ ವಚನಗಳಲ್ಲಿ ಹಲವು ವಚನಗಳನ್ನು ತೆಗೆದುಕೊಂಡು ಶೂನ್ಯಸಂಪಾದನೆಗಳು ಸಂಕಲಿಸಿವೆ. ಇವೂ ಕೂಡ ಸಂಕಲಿಸಿವೆ. ಸ್ಥಲ, ಆಚಾರ, ಸ್ತೋತ್ರಗಳಿಗೆ, ಆತ್ಮಚರಿತ್ರಾತ್ಮಕ – ಸಂವಾದರೂಪಿ ವರ್ಗೀಕರಣಗಳಿಗೂ ಸಿಗದ ಅನೇಕ ವಚನಗಳನ್ನು ಅಲ್ಲಮ ಬರೆದೇ ಬರೆದಿದ್ದಾನೆ. ವಚನದ ಅನುಸಂಧಾನ ಪರಂಪರೆಯಲ್ಲಿ ತಮ್ಮ ವರ್ಗೀಕರಣ – ದೃಷ್ಟಿಕೋನಗಳಿಗೆ ಒಗ್ಗದಿರುವ ಅನೇಕ ವಚನಗಳನ್ನು ಈ ಜನ ಅವಜ್ಞೆ ಮಾಡಿದ್ದಾರೆ. ನಾಶ ಮಾಡಿರಬಹುದಾದ ಸಾಧ್ಯತೆಯೂ ಇದೆ. ಕಾಲಪ್ರವಾಹದಲ್ಲಿ ಅವಜ್ಞೆಯೇ ನಾಶದ ಹಾದಿ.

ಆವುದೇ ವರ್ಗೀಕರಣ ಮಾಡಿದರೂ ವರ್ಗೀಕರಣದ ಬಿಕ್ಕಟ್ಟು ಬರುವುದೇ ಆಯ್ಕೆ ಮತ್ತು ಅಲಕ್ಷ್ಯದಲ್ಲಿ. ಯಾವ ವರ್ಗೀಕರಣವೂ ಅಂತಿಮ ಅಥವಾ ಸ್ವಯಂಪೂರ್ಣ ಅಲ್ಲ. ಯಾವುದೇ ಸಾಮಗ್ರಿಯನ್ನು ಅಖಂಡವಾಗಿ ಸ್ವೀಕರಿಸದೇ ಅದನ್ನು ವರ್ಗೀಕರಿಸಿ ಸ್ವೀಕರಿಸಿದಾಗ ವರ್ಗೀಕರಣಕ್ಕೆ ಒಗ್ಗುವ ಸಾಮಗ್ರಿ ಆಯ್ಕೆಯಾಗುತ್ತದೆ ಮತ್ತು ಮಿಕ್ಕದ್ದು ಅಲಕ್ಷ್ಯಕ್ಕೆ ಸಲ್ಲುತ್ತದೆ. ಹೀಗಾಗಿ ವಚನಾನುಸಂಧಾನ ಚರಿತ್ರೆಯಲ್ಲಿ ಈ ಸ್ತೋತ್ರ – ಸ್ಥಲಗಳ ವರ್ಗೀಕರಣಗಳು ಅಲ್ಲಮನ ಅನೇಕ ವಚನಗಳನ್ನು ಅಲಕ್ಷಿಸಿ ಇಲ್ಲವಾಗಿಸಿರಬಹುದು. ಇದೊಂದು(ಹೈಪಾತೀಸಿಸ್) ಕಲ್ಪಿತವಷ್ಟೆ. ಅವನ ವಚನಗಳ ಬಳಕೆ – ಅನುಸಂಧಾನ ಧಾರ್ಮಿಕವೊ ಮತ್ತೊಂದೊ, ಹೇಗೊ ಉಳಿದಷ್ಟೇ ಭಾಗ್ಯ.ಖಂಡಿತಾ ಅಲ್ಲಮನ ಚಿಂತನೆ ನಮಗೆ ಸಮಗ್ರವಾಗಿ ಸಂಪಾದನೆ ಆಗಿಲ್ಲ. ಅಲ್ಲಮನ ವಚನಗಳ ಕಟ್ಟಿನ ದೃಷ್ಟಿಯಿಂದ ಹೇಳುವುದಾದರೆ ನೆನಹು ಮಾತ್ರವೇ ಭಾಗ್ಯ, ಅಲಕ್ಷ್ಯ ದೌರ್ಭಾಗ್ಯ.

೧೧. ಮುಖಾಮುಖಿ ಮತ್ತು ಕೈ ಬದಲಾವಣೆಗಳ ಕಥನ

ಅಲ್ಲಮನ ಕಥನಗಳು ಕಾಲಕಾಲಕ್ಕೆ ಅನುಸಂಧಾನಕ್ಕೆ ಗುರಿಯಾಗುತ್ತ ಬಂದಿರುವ ಹಾದಿಯನ್ನು ನೋಡಿದರೆ ಸರಿಸುಮಾರು ಎಲ್ಲರೂ ಭಿನ್ನ ದಾರ್ಶನಿಕರನ್ನು ಮುಖಾಮುಖಿಯಾಗುವ ಚರಿತ್ರೆಯನ್ನಾಗಿಯೇ ಅವನ ಜೀವನವನ್ನು ಚಿತ್ರಿಸಿದ್ದಾರೆ. ಶೂನ್ಯಸಂಪಾದನೆಗಳಲ್ಲಿ, ಪ್ರಭುಲಿಂಗಲೀಲೆಯಲ್ಲಿ ಗೋರಕ್ಷಕನ ಜೊತೆಗೆ, ಮುಕ್ತಾಯಕ್ಕಳ ಜೊತೆಗೆ, ಅಕ್ಕ, ಸಿದ್ಧರಾಮರ ಜೊತೆಗೆ ಸಮಕಾಲೀನ ಮತ್ತು ಕಾಲಾತೀತ ಭಕ್ತ – ಭಕ್ತೆಯರು, ದಾರ್ಶನಿಕರ ಜೊತೆ ಅಲ್ಲಮ ಮುಖಾಮುಖಿಯಾಗುವಂತೆಯೆ ಅವನನ್ನು ಚಿತ್ರಿಸಲಾಗಿದೆ. ಇದು ಆಧುನಿಕ ಕಾಲಕ್ಕೂ ಹರಿದು ಬಂದಿದೆ. ಡಿ. ಅರ್. ನಾಗರಾಜರ ಅಲ್ಲಮ ಮತ್ತು ಶೈವ ಪ್ರತಿಭೆಯಲ್ಲಾದರೋ ಆತ ನಾಗಾರ್ಜುನ, ಶಂಕರ, ಮಧ್ವ ಸರಹಪಾದ ಕುಮಾರೀಭಟ್ಟ, ಅಭಿನವಗುಪ್ತ ಎಲ್ಲರ ಜೊತೆ ದಾರ್ಶನಿಕ ಕಲಹ ಹೂಡಿದಂತೆ ಕಥಿಸಲಾಗಿದೆ. ಆದರೆ ಅಲ್ಲಮನ ಜೀವನ ಕಥಾನಕದಲ್ಲೇ ಒಂದು ವಿಶಿಷ್ಟ ಪ್ರಸಂಗವಿದೆ. ಅದು ಅನಿಮಿಷಯ್ಯನ ಪ್ರಸಂಗ. ಅದು ಅಲ್ಲಮನಿಗೆ ಆತನ ಪರಂಪರೆಯು ಕೈಬದಲಾಗಿ ದಾಟಿಕೊಂಡ ಸೂಚನೆಯಾಗಿ ಬಂದಿದೆ. ಜ್ಯೋತಿ ಆರುವ ಮುನ್ನ ಇನ್ನೊಬ್ಬರಿಗೆ ಕೈ ಬದಲಾಗಬೇಕು, ಜ್ಯೋತಿಯನ್ನು ಪಡೆದವರು ಅದನ್ನು ಹೊತ್ತು ಸಾಗಬೇಕು. ಹೀಗೆ ಪರಂಪರೆಯಲ್ಲಿ ಭಿನ್ನತೆಗಳು ನಿರಂತರತೆಗಳು ಒಟ್ಟೊಟ್ಟಿಗೆ ಸಾಗುತ್ತಿರುತ್ತವೆ. ಪಾತ್ರಗಳು ಬದಲಾದಾಗ ಭಿನ್ನತೆಗಳು ಉಂಟಾಗುವುದು ಸಹಜ. ಆದರೆ ಜ್ಯೋತಿ ಆರುವುದಿಲ್ಲ. ಹೀಗೆ ಅನಿಮಿಷಯ್ಯನಿಂದ ದತ್ತವಾದ ಜ್ಯೋತಿಯನ್ನು ಅಲ್ಲಮ ಆನಂತರ ಹಲವರಿಗೆ ದಾಟಿಸಿದ್ದಾನೆ. ಅದು ಹಲವಾಗಿ ಬೆಳಗುತ್ತವೆ. ಈ ಹಲವು ಹತ್ತು ಬೆಳಕುಗಳು ಕೆಲವೊಮ್ಮೆ ಪರಸ್ಪರ ಮುಖಾಮುಖಿ ಆದಂತೆಯೂ ಕಾಣುತ್ತಿರುತ್ತವೆ. ಆದರೆ ನಿಜದಲ್ಲಿ ಅವೆಲ್ಲ ಎಲ್ಲೆಲ್ಲೋ ಕೈಬದಲಾಗುತ್ತಿರುತ್ತವೆ. ಸಾಗುತ್ತಿರುತ್ತವೆ. ಆದರೆ ಅಲ್ಲಮನ ಅನುಸಂಧಾನಗಳಲ್ಲಿ ಈ ಕೈ ಬದಲಾವಣೆಯ ಕಡೆಗೆ ಪೋಕಸ್ಸು ಕಡಿಮೆಯಾಗಿ ಮುಖಾಮುಖಿಯ ಕಡೆಗೆ ಪೋಕಸ್ಸು ಹೆಚ್ಚಾದಂತೆ ಕಾಣುತ್ತದೆ. ( ಆದರೆ ಇತ್ತೀಚಿನ ಲಕ್ಷ್ಮೀಪತಿ ಕೋಲಾರ ಅವರ ಬಯಲಾಟದಲ್ಲಿ ಈ ಕೈಬದಲಾವಣೆಯ ಕಡೆಗೆ ಸ್ವಲ್ಪ ಗಮನ ಹರಿದಿದೆ ಎನ್ನಿಸುತ್ತದೆ.)

ಗೋರಕ್ಷನ ಹೊತೆಗಿನ ಅಲ್ಲಮನ ಮುಖಾಮುಖಿಯನ್ನು ನಾವು ವಾಸ್ತವ ಚರಿತ್ರೆ ಎಂದೇನೂ ತಿಳಿಯಬೇಕಾಗಿಲ್ಲ. ೯ನೇ ಶತಮಾನದಲ್ಲಿದ್ದ ಗೋರಕ್ಷ ತನಗಿಂತ ಇನ್ನೂರಕ್ಕೂ ಹೆಚ್ಚು ವರ್ಷಗಳ ನಂತರದಲ್ಲಿದ್ದ ಅಲ್ಲಮನನ್ನು ಭೇಟಿಯಾಗಿರುವ ಸಾಧ್ಯತೆ ಚಾರಿತ್ರಿಕವಾಗಿ ಸಾಧ್ಯವಿಲ್ಲ. ಆದರೆ ಗೋರಕ್ಷನಂತಹ ಹಠಯೋಗಿಯನ್ನು ಅಲ್ಲಮ ಜಯಿಸಿದಂತೆ ಆನಂತರದವರಿಗೆ ಕಟ್ಟಿಕೊಳ್ಳಬೇಕಾಗಿದೆ. ಎರಡು ಪಂಥಗಳು – ಆಲೋಚನಾಕ್ರಮಗಳ ನಡುವಿನ ಘರ್ಷಣೆಯಿದು. ಅಲ್ಲಮನನ್ನು ಗೆಲ್ಲಿಸುವುದು ಮತ್ತು ಗೋರಕ್ಷನನ್ನು ಸೋಲಿಸುವುದು ಒಂದು ರೀತಿಯಲ್ಲಿ ಜ್ಞಾನ ಮಾರ್ಗದ ಶೂನ್ಯಮಾರ್ಗದ ವೀರಶೈವೀಕರಣವೂ ಹೌದು. ಅಲ್ಲದೆ ಅದು ನಾಥಪಂಥದ ಮೇಲಿನ ವೀರಶೈವದ ವಿಜಯವೂ ಹೌದು.

೧೨. ದಾರ್ಶನಿಕ ಭಿನ್ನತೆಗಳ ಚಾರಿತ್ರಿಕ ಉಲ್ಲೇಖ, ಸ್ವಧರ್ಮ ವಿಜಯ ಚಿತ್ರಣ

ಅಲ್ಲಮನ ಚರಿತ್ರೆಯ ರಚನೆಯೆಂದರೆ ಅಲ್ಲಮನ ಶೂನ್ಯ ಸಂಪಾದನೆಯೆಂದರೆ ಅದು ಕೇವಲ ಅಲ್ಲಮನ ವೈಯಕ್ತಿಕ ವಿಚಾರಗಳ ಚಿತ್ರಣ ಅಲ್ಲ. ಈಗಾಗಲೇ ನಾವು ಗಮನಿಸಿರುವಂತೆ ಅದು ಒಂದು ಕಾಲಘಟ್ಟದ ಸಮುದಾಯದ ಆತ್ಮ ಚರಿತ್ರೆಯ ಕಥನ. ಇಲ್ಲೆಲ್ಲ ವೀರಶೈವ ಸಿದ್ಧಾಂತಗಳಿಗೆ ತಕ್ಕಂತೆ ಅಲ್ಲಮನ ಗೆಲುವನ್ನು ಧರ್ಮದ ಗೆಲುವಾಗಿ ಚಿತ್ರಿಸುವ ಕೆಲಸವೇ ನಡೆದಿದೆ. ಆದರೂ ಪಠ್ಯಗಳನ್ನು ನಿರಚನಗೊಳಿಸಿ ಓದಿದರೆ ಅಲ್ಲಿ ದಾರ್ಶನಿಕ ಭಿನ್ನತೆಗಳ ಚಾರಿತ್ರಿಕ ಉಲ್ಲೇಖಗಳು ಸಿಗುತ್ತವೆ. ತಾತ್ವಿಕ ಸಂಘರ್ಷಗಳನ್ನು ಇನ್ನಷ್ಟು ಪ್ರಖರವಾಗಿ ಎತ್ತಿ ತೋರಿಸುವುದು ಹರಿಹರನಿಂದ ಶಿವಾನಂದನವರೆಗೂ ಯಾರಿಗೂ ಬೇಕಿಲ್ಲ. ಅಲ್ಲಿ ಎಲ್ಲರಿಗೂ ಭಕ್ತಿ, ಧರ್ಮ, ತತ್ವಪ್ರಚಾರ ಎಂಬ ಉದ್ದೇಶವೇ ಇದೆ. ಆಧುನಿಕಪೂರ್ವ ಕಾಲದಲ್ಲಿ ಭಿನ್ನ ದರ್ಶನಗಳೊಂದಿಗಿನ ಅಲ್ಲಮನ ಮುಖಾಮುಖಿಗಳನ್ನು ಸ್ವಧರ್ಮವಿಜಯ ಸಾಮಗ್ರಿಯನ್ನಾಗಿಯೇ ಬಳಸಲಾಗಿದೆ. ಚರಿತ್ರೆಯ ದಂತಕತೆಯಾಗಿ ಬದಲಾದಾಗ ಆ ದಂತದತೆಯನ್ನು ಸಮುದಾಯದ ಹಿತರಕ್ಷಣೆಯ ಗುರಾಣಿಯಾಗಿ ಬಳಸಬಹುದಾದರೆ ಆಗ ಅದು ಒಬ್ಬೊಬ್ಬ ಅನುಸಂಧಾನಕಾರನಿಗೂ – ಒಂದೊಂದು ಕಾಲಘಟ್ಟಕ್ಕೂ ಸಂಪ್ರದಾಯವನ್ನು ತೊಟ್ಟುಕೊಳ್ಳುವ ಹೊಸ ಹೊಸ ಪೀಳಿಗೆಯನ್ನು ಅಣಿಗೊಳಿಸುವ ಸಾಧನವಾಗಿ ಬಳಕೆಯಾಗಿತ್ತ ಹೋಗುತ್ತದೆ. ಹೀಗೆ ಅಲ್ಲಮನ ದಾರ್ಶನಿಕ ಪ್ರಖರತೆ, ದಂಗೆಕೋರ ಗುಣ, ಕಾವ್ಯರಚನಾ ಕೌಶಲ್ಯಗಳೆಲ್ಲವೂ ವೀರಶೈವ ಆಚಾರ – ಸಂಪ್ರದಾಯವನ್ನು ರವಾನಿಸುವ ಮಾಧ್ಯಮಗಳಾಗಿ ಬಳಕೆಗೊಳ್ಳುತ್ತ ಬಂದಿವೆ. ಸಂಪ್ರದಾಯ ವಿರೋಧಿ ಗುಣವು ಸಂಪ್ರದಾಯ ಸ್ವೀಕಾರ ಸಾಧನದಂತೆ ಬಳಕೆಯಾಗುವುದು ಕಾಲಪ್ರವಾಹದ ವ್ಯಂಗ್ಯವೇ ಸರಿ.ಪರಿವಾರ ನಿರ್ಮಾಣ ಮತ್ತು ಪರಿವಾರ ಸ್ಥಿರೀಕರಣ, ಜಾತಿ ಚೌಕಟ್ಟುಗಳ ಸ್ಥಿರೀಕರಣಗಳಲ್ಲಿ ಇದೆಲ್ಲ ಪಟ್ಟಭದ್ರರಿಗೆ ಅನಿವಾರ್ಯ ಕೂಡ.

೧೩. ಪರಮತ ನಿಂದೆ ಮತ್ತು ಸ್ವಮತ ಸ್ಥಾಪನೆಗೆ ಅಲ್ಲಮನ ಬಳಕೆ

ವಚನಕಾರರಲ್ಲಿ ಮುಕ್ಕಾಲು ಮೂರು ವೀಸ ಪಾಲಿನ ಜನ ಶಿವಾಧಿಕ್ಯ ಸ್ಥಾಪನೆಗಾಗಿಯೂ ವಿಷ್ಣು ಮುಂತಾದ ಮಹಾದೇವತೆಗಳ ದೂಷಣೆಗಾಗಿಯೂ, ಮಾರಿ ಮಸಣಿ ಮುಂತಾದ ಜನಪದ ದೈವಗಳ ಅವಹೇಳನೆಗಾಗಿಯೂ, ಗುಡಿ ಗೋಪುರಗಳ ನಿಂದೆಗಾಗಿಯೂ ತಮ್ಮ ತಮ್ಮ ವಚನ ಖಡ್ಗವನ್ನು ಝಳಪಿಸುವುದು ವೀರದ ಮತ್ತು ಶೈವದ ಒಂದು ಸಲ್ಲಕ್ಷಣವೆಂದು ಭಾವಿಸಿದ್ದರು. ಮತ್ತು ಆ ನಿ(ವಿ?) ರೂಪಣೆಗಾಗಿ ತಮ್ಮ ವಚನಗಳಲ್ಲಿ ಬಹಳಷ್ಟು ಭಾಗವನ್ನು ಮೀಸಲಾಗಿಟ್ಟಿದ್ದರು. ಇದಿಷ್ಟೂ ವೀರಶೈವಧರ್ಮದ ಖಂಡನ ಭಾಗದಲ್ಲಿ ಒಂದಂಶ. ಇನ್ನು ಆ ಧರ್ಮದ ಮಂಡನ ಭಾಗದಲ್ಲಿ ದೀಕ್ಷೆಯೆಂದು ಜಂಗಮಾಧಿಕ್ಯವೆಂದೂ ಪಾದೋದಕವೆಂದೂ ಪ್ರಸಾದವೆಂದೂ ವಿಭೂತಿಯೆಂದೂ ಲಿಂಗಾರ್ಚನೆಯೆಂದೂ – ತಾವು ಬಿಟ್ಟು ಬಂದ ಧರ್ಮದ ಕರ್ಮಠ ಭಾಗವನ್ನೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿನಿಧಿಸುವ ಹಲವಾರು ಶುಷ್ಕಾಚಾರಗಳನ್ನು ಕುರಿತು ವಿಪುಲವಾಗಿ ವಚನಶಾಸ್ತ್ರ ಲಿಖಿತವಾಗಿದೆ.”[3] ಹೀಗೆ ಡಾ. ಎಲ್. ಬಸವರಾಜು ಹೇಳುವಂತೆ ವೀರಶೈವರು ವಚನೋತ್ತರ ಸಂದರ್ಭದಲ್ಲಿ ಪರಮತನಿಂದೆ ಮತ್ತು ಸ್ವಮತಾಚಾರ ಸ್ಥಾಪನೆಗೆ ಬೇಕಾದ ಕೆಲಸಗಳನ್ನು ವಚನಾನುಸಂಧಾನದ ಮೂಲಕ ಮಾಡಿದ್ದಾರೆ. ಈ ಕೆಲಸಕ್ಕೆ ಅಲ್ಲಮನನ್ನು ಸಾಧನವಾಗಿ ಬಳಸಿಕೊಂಡಿದ್ದಾರೆ.

೧೪. ಜೀವನಕಥನದ ಸಾಂದರ್ಭೀಕರಣ: ಸಮುದಾಯದ ಆತ್ಮಕಥನ

ಶೂನ್ಯ ಸಂಪಾದನೆಯಲ್ಲಿ ಬಹುಮುಖ್ಯವಾಗಿ ಘಟಿಸಿರುವ ಸಂಗತಿಯಿದು. ವಚನಕಾರರ ವಚನಗಳನ್ನು ಸಂವಾದ ರೂಪದಲ್ಲಿ ಕಟ್ಟುತ್ತ ಇಡಿ ವಚನಕಾರರ ಜೀವನ ಕಥನಗಳನ್ನು ಕಟ್ಟಲು ಅವನ್ನು ಶೂನ್ಯಸಂಪಾದನೆಗಳಲ್ಲಿ ಬಳಸಿಕೊಳ್ಳಲಾಗಿದೆ. ವಚನಗಳನ್ನುಶರಣರ ಜೀವನದ ನಿರ್ದಿಷ್ಟ ಕಾಲಘಟ್ಟಗಳನ್ನು ಕಥಿಸಲು ಸಹಾಯಕ – ಆಕರ ಸಾಮಗ್ರಿಗಳಂತೆ ಶೂನ್ಯಸಂಪಾದನೆ ಬಳಸಿಕೊಳ್ಳುತ್ತದೆ. ಹಾಗೆ ಬಳಸಿಕೊಳ್ಳುವಾಗ ವಚನಗಳನ್ನು ಆಯಾ ಶರಣರ ಬದುಕಿನ ನಿರ್ದಿಷ್ಟ ಘಟನೆಗಳಿಗೆ ಸಾಂದರ್ಭೀಕರಿಸುವ ಕೆಲಸವನ್ನು ಮಾಡಿದೆ. ವಚನಗಳನ್ನು ಅವರವರ ಅನುಭವದ ಅಭಿವ್ಯಕ್ತಿ ಅಭಿಮತದ ನಿರೂಪಣೆ ಎಂದೂ, ವಚನಗಳು ಆಯಾ ಶರಣರ ಆತ್ಮಕಥನದ ತುಣುಕುಗಳು ಎಂದೂ ಶೂನ್ಯಸಂಪಾದನೆಗಳು ತಮ್ಮದೇ ಕೊಂಡಿಗಳನ್ನು ಹಾಕಿ ಜೋಡಿಸುವ ಮೂಲಕ ಸಮುದಾಯದ ಒಂದು ವಿರಾಟ್ ಕಥನವನ್ನು ಇವು ಕಟ್ಟಿಕೊಡುತ್ತವೆ. ವಚನ ಸಂಪಾದನೆಯೂ ಆಮೂಲಕ ಶರಣ ಸಮುದಾಯದ ಆತ್ಮಚರಿತ್ರೆಯಾಗಿ; ವೀರಶೈವ ಸಮಾಜದ ಆತ್ಮಚರಿತ್ರೆಯಾಗಿ ಇಲ್ಲಿ ಮೈತಳೆದಿದೆ. ಅಷ್ಟೇ ಅಲ್ಲ. ಈ ಆತ್ಮಚರಿತ್ರೆಯು ವೀರಶೈವ ದೃಷ್ಟಿಕೋನದಿಂದ ರಚಿತವಾಗಿರುವ ಆಯಾ ನಿರ್ದಿಷ್ಟ ಕಾಲಘಟ್ಟದ ಆತ್ಮ ಚರಿತ್ರೆಯೂ ಹೌದು. ಇದು ಶಾಸನವಲ್ಲ. ವ್ಯಾಖ್ಯಾನ ಸಾಧ್ಯತೆಯುಳ್ಳ ಸಾಹಿತ್ಯಕ ಆತ್ಮಕಥನ. ಹಾಗಾಗಿಯೇ ಇದು ಕಾಲ ಕಾಲಕ್ಕೆ ಚಿಕ್ಕಪುಟ್ಟ ರೂಪಾಂತರಗಳನ್ನು ಹೊಂದುತ್ತ ಬಂದಿದೆ. ಸಾಹಿತ್ಯವೂ, ಚರಿತ್ರೆಯೂ, ಪುರಾಣವೂ ಕಲ್ಪಿಸಿಕೊಂಡ ಕಥನ ಇದು. ಎಷ್ಟೋ ಇಂದಿಗೂ ರಚನೆಯಾಗುತ್ತಿವೆ. ಹೀಗಾಗಿ ಅಲ್ಲಿ ಚರಿತ್ರೆಯ ಮರು ನಿರೂಪಣೆಯ ವರ್ತಮಾನದ ಕಟ್ಟಾಣಿಕೆಯೂ ಆಗಿ ಆಕಾರ ಪಡೆಯುತ್ತಿರುತ್ತದೆ. ಎಲ್. ಬಸವರಾಜು ಅವರ ಟೀಕು, ಡಿ.ಆರ್. ಎನ್. ಅವರ ವ್ಯಾಖ್ಯಾನಗಳಲ್ಲಿ ಆಗುತ್ತಿರುವುದು ಇದೇ.

೧೫. ಪರಂಪರೆಯ ಮೀರುವಿಕೆ ಮತ್ತು ಮುಂದುವರಿಕೆ

ನಮ್ಮ ಹಳೆಯ ಅನುಸಂಧಾನಗಳು ಆಧುನಿಕ ಮತ್ತು ಆಧುನಿಕೋತ್ತರ ಸಂದರ್ಭದಲ್ಲೂ ಮುಂದುವರಿದಿವೆಯೇ? ಹೌದು ಮುಂದುವರಿದಿವೆ. ಭಿನ್ನ ದರ್ಶನಗಳ ಜೊತೆಗೆ ಅಲ್ಲಮನನ್ನು ಮುಖಾಮುಖಿ ಮಾಡುವ, ಭಿನ್ನ ಸಂದರ್ಭಗಳ ಮೂಲಕ ಅಲ್ಲಮನನ್ನು ತಾತ್ವೀಕರಿಸುವ, ವಚನಗಳನ್ನು ವ್ಯಾಖ್ಯಾನಿಸುವ ಕೆಲಸವನ್ನು ಡಿ.ಆರ್. ನಾಗರಾಜು, ಇಮ್ಮಡಿ ಶಿವಬಸವಸ್ವಾಮಿ, ಸಿದ್ಧೇಶ್ವರ ಸ್ವಾಮಿ, ಎಲ್. ಬಸವರಾಜು ಮೊದಲಾದವರು ಮಾಡುತ್ತ ಬಂದಿದ್ದಾರೆ. ಭಿನ್ನ ದರ್ಶನಗಳೊಂದಿಗೆ ತೂಗಿನೋಡುವ ಮತ್ತು ಆತನ ವಚನಗಳನ್ನು ಕಾವ್ಯಮೀಮಾಂಸೆ – ಸೌಂದರ್ಯ ಮೀಮಾಂಸೆಯ ಹಿನ್ನೆಲೆಯಿಂದ ಅಭ್ಯಾಸ ಮಾಡುವ ಹಾಗೂ ನಾಗಾರ್ಜುನನ ಶೂನ್ಯವಾದದ ಬೆಳಕಿನಲ್ಲಿ ಬೌದ್ದ ದರ್ಶನದ ಬೆಳಕಿನಲ್ಲಿ ಪರೀಕ್ಷಿಸಿ ನೋಡುವ ಕೆಲಸವನ್ನು ಎಸ್. ನಟರಾಜ ಬೂದಾಳು ಮಾಡುತ್ತಿದ್ದಾರೆ. ಹಳೆ ಗ್ರಂಥಗಳ ಸಂಪಾದನೆ – ಸ್ಥಲಾನುಸಾರಿಯಾದ ವಚನಗಳ ಸಂಪಾದನೆ, ಸಂಯೋಜನೆ ಕೆಲಸವನ್ನು ಹಳಕಟ್ಟಿ, ಶಿ. ಶಿ. ಬಸವನಾಳ, ಎಂ. ಆರ್. ಶ್ರೀ ಆರ್. ಸಿ ಹಿರೇಮಠ, ಎಂ. ಎಸ್.ಸುಂಕಾಪುರ, ಎಸ್.ವಿದ್ಯಾಶಂಕರ್, ಎಲ್. ಬಸವರಾಜು, ಜಿಎಸ್. ಸಿದ್ಧಲಿಂಗಯ್ಯ ಮೊದಲಾದವರು ಮಾಡುತ್ತ ಬಂದಿದ್ದಾರೆ. ಸಾಹಿತ್ಯ ರೂಪಿ ಅನುಸಂಧಾನಗಳೂ ಕೂಡ ನಡೆಯುತ್ತ ಬಂದಿವೆ. ಅಲ್ಲಮನ ಕುರಿತಾಗಿ ಹಲವಾರು ಬುಲಾಟ, ಯಕ್ಷಗಾನ, ಹರಿಕಥೆ, ಕಾದಂಬರಿ,ವರ್ಣಚಿತ್ರ, ಕಾವ್ಯ ಇತ್ಯಾದಿಗಳು ರಚನೆಯಾಗುತ್ತ ಬಂದಿವೆ. ಈ ವಲಯದಲ್ಲಿ ಎಚ್. ತಿಪ್ಪೇರುದ್ರಸ್ವಾಮಿ, ಬಿಪುಟ್ಟಸ್ವಾಮಯ್ಯ, ಪಿ. ಎಂ. ಸಿದ್ಧಲಿಂಗಯ್ಯ, ಶ್ರೀಮತಿ ಎಸ್ . ಎಂ. ಹೆಗಡೆ, ಎಸ್. ಎಂ.ವೃಷಭೇಂದ್ರಸ್ವಾಮಿ, ಎನ್. ಎಸ್. ರೂಪರಾಜ್ ಮೊದಲಾದವರು ಸಂಶೋಧನಾತ್ಮಕ ಅಧ್ಯಯನವನ್ನು ಅಲ್ಲಮನ ಮೇಲೆ ನಡೆಸಿದ್ದಾರೆ. ಭಿನ್ನ ದೃಷ್ಟಿಕೋನಗಳಿಂದ ವಿಚಾರಸಂಕಿರಣ ರೂಪದಲ್ಲಿ, ಲೇಖನ ರೂಪದಲ್ಲಿ ಕೂಡ ಸಾಕಷ್ಟು ಅಲ್ಲಮನ ಅನುಸಂಧಾನಗಳು ನಡೆದಿವೆ. ನಡೆಯುತ್ತಲಿವೆ. ಸಾ. ಶಿ. ಮರುಳಯ್ಯ, ಇಮ್ಮಡಿ ಶಿವಬಸವಸ್ವಾಮಿ, ಬಿ.ವಿ. ಮಲ್ಲಾಪುರ ಮುಂತಾದವರು ಇಂತಹ ಲೇಖನ ಸಂಕಲನಗಳನ್ನು ಸಂಪಾದಿಸಿದ್ದಾರೆ. ಇವುಗಳನ್ನೆಲ್ಲ ಗಮನಿಸಿದರೆ ಆಧುನಿಕ ಸಂದಭ್ದಲ್ಲಿ ಅಲ್ಲಮನ ಕುರಿತ ಅನುಸಂಧಾನಗಳಲ್ಲಿ ಪರಂಪರೆಯ ಸಮರ್ಥ ಮುಂದುವರಿಕೆ ಮತ್ತು ಮೀರುವಿಕೆಗಳೆರಡು ಸ್ಪಷ್ಟವಾಗಿ ಕಾಣಿಸಿಕೊಂಡಿವೆ.

೧೬. ಬಹುನಾಯಕ ಸಮುದಾಯ ಪ್ರಜ್ಞೆ

ಶೂನ್ಯ ಸಂಪಾದನೆಗಳಲ್ಲಿ ಬಹುಮುಖ್ಯವಾಗಿ ಗೋಚರವಾಗುವುದು ಬಹುನಾಯಕ ಸಾಮುದಾಯಿಕ ಪ್ರಜ್ಞೆ, ಹರಿಹರ, ರಾಘವಾಂಕರು ಬಸವ, ಅಕ್ಕ, ಪ್ರಭು, ಸಿದ್ಧರಾಮ ಮೊದಲಾದವರ ಬಗ್ಗೆ ಪ್ರತ್ಯೇಕವಾಗಿ ಕಾವ್ಯ ಬರೆದಿದ್ದಾರೆ. ಈ ಏಕನಾಯಕ ಧಾರೆ ಆನಂತರವೂ ಮುಂದುವರಿದಿದೆ. ಚಾಮರಸ, ಹರೀಶ್ವರ, ಪರ್ವತೇಶ, ಮರಿರಾಜ ಭಟ್ಟರೇ ಮೊದಲಾದವರು ಅಲ್ಲಮನನ್ನು ಪ್ರಧಾನವಾಗಿ ಗಣಿಸಿ ಕಾವ್ಯಗಳನ್ನು ಬರೆದಿದ್ದಾರೆ. ಆದರೆ ಶೂನ್ಯಸಂಪಾದನೆಗಳು ತಮ್ಮನ್ನು ಪ್ರಭುದೇವರ ಶೂನ್ಯಸಂಪಾದನೆಗಳು ಎಂದು ಕರೆದುಕೊಂಡಿದ್ದರೂ ಕೂಡ ಅವು ಶರಣಸಮುದಾಯದ ಶೂನ್ಯ ಸಂಪಾದನೆಗಳೇ ಆಗಿವೆ. ವಿಶೇಷವಾಗಿ ಶೂನ್ಯಸಂಪಾದನೆಗಳು ವಚನಗಳನ್ನು ಸಂವಾದರೂಪಿಯಾಗಿ ಸಂಯೋಜಿಸಿರುವ ವಿರಾಟ್ ದೃಶ್ಯ ಕಾವ್ಯಗಳಾದರೂ ಅವು ನಾಟಕದ ಪ್ರಕಾರದಲ್ಲಿರದೆ ಕಾವ್ಯದ ವಚನಗಳನ್ನು ಸಂವಾದರೂಪಿಯಾಗಿ ಸಂಯೋಜಿಸಿರುವ ವಿರಾಟ್ ದೃಶ್ಯ ಕಾವ್ಯಗಳಾದರೂ ಅವು ನಾಟಕದ ಪ್ರಕಾರದಲ್ಲಿದೆ ಕಾವ್ಯದ ಪ್ರಕಾರದಲ್ಲೇ ಹೆಚ್ಚು ಗುರ್ತಿಸಿಕೊಳ್ಳಲು ಯತ್ನಿಸಿವೆ. ಹೀಗೇಕೆ? ನಮ್ಮಲ್ಲಿ ಕಾವ್ಯ ರೂಪಕ್ಕೆ ವಚನಗಳನ್ನು ಕಟ್ಟಿಕೊಡುವ ಯತ್ನಗಳು ಆಗಿರಬಹುದು? ನಮ್ಮ ಪ್ರಾಚೀನದಲ್ಲಿ ಸಾಹಿತ್ಯದ ಶ್ರೇಷ್ಠವಾದ ಪ್ರಕಾರವೆಂದರೆ ಕಾವ್ಯ ಎಂಬ ನಂಬಿಕೆಯೊಂದು ಇದ್ದಂತೆ ಕಾಣುತ್ತದೆ. ಅದರಲ್ಲೂ ಕಾವ್ಯವೆಂದರೆ ಮಾತ್ರವೇ ಎಂಬ ಪ್ರಬಲ ನಂಬಿಕೆ ಬರವಣಿಗೆಯಲ್ಲಿ ನಮ್ಮವರಿಗೆ ಪ್ರಾಚೀನ ಕಾಲದಲ್ಲಿ ಇದ್ದಂತೆ ಕಾಣುತ್ತದೆ. ಯಾವುದೇ ಒಬ್ಬ ವ್ಯಕ್ತಿ ವೀರಶೈವ ಶರಣ ಆಗಬೇಕಾದರೆ ಅವನಿಗೆ ಹೇಗೆ ಲಿಂಗದೀಕ್ಷೆ ಆಗಲೇಬೇಕಾದ ಒಂದು ಸಂಸ್ಕಾರವೋ ಹಾಗೆ ವಚನಗಳಿಗೆ ಮಹಾಕವ್ಯ ರೂಪದ ದೀಕ್ಷೆಯನ್ನು ಕೊಡುವ ಯತ್ನಗಳನ್ನು ನಮ್ಮ ಅನುಸಂಧಾನಕಾರರು ಮಾಡಿದ್ದಾರೆ.[4]

ಅನುಸಂಧಾನಕಾರರ ಕಾವ್ಯಗಳು ಬಹುನಾಯಕ ಸಮುದಾಯ ಪ್ರಜ್ಞೆಯನ್ನು ಹೊಂದಲು ಈ ಪ್ರಕಾರ ಕೂಡ ಒಂದು ಕಾರಣವಾಗಿದೆ. ವಿರಾಟ್ ನಾಟಕವಾಗಿ (ಲೀಲೆ) ಒಂದು ಸಮುದಾಯದ ಕಥನವನ್ನು ಗ್ರಹಿಸಿದಾಗ ಪಾತ್ರಗಳು ಬರಲೇಬೇಕಿಲ್ಲ. ಅಲ್ಲಿ ಪಾತ್ರಗಳ ಲೀಲೆಗಳು ಪ್ರಕಟವಾಗಲೇಬೇಕಿಲ್ಲ. (ಲೀಲೆ ಎಂದರೆ ನಮ್ಮಲ್ಲಿ ನಾಟಕ ಎಂಬ ಬಳಕೆಯೂ ಇದೆ.) ಹೀಗಾಗಿ ಶೂನ್ಯಸಂಪದನೆಗಳಲ್ಲಿ ಸಮುದಾಯವೊಂದನ್ನು ಚಿತ್ರಿಸುವ ಯತ್ನವೇ ಪ್ರಮುಖವಾಗಿದೆ. ವ್ಯಕ್ತಿಚಿತ್ರಣ ಅಥವಾ ವ್ಯಕ್ತಿಯ ಜೀವನಚಿತ್ರಣವನ್ನು ಕೇಂದ್ರವಾಗಿ ಚಿತ್ರಿಸುವುದು ಅವುಗಳ ಉದ್ದೇಶವಲ್ಲ, (ಶಿವಗಣಪ್ರಸಾದಿ ತನ್ನ ಸಂಪಾದನೆಯನ್ನು ‘ವಚನಾನುಭಾವ ಪ್ರಸಂಗ’ ಎಂದೇ ಕರೆದುಕೊಂಡಿದ್ದಾನೆ. ಆದರೂ ಕೊನೆಯಲ್ಲಿ ಇದನ್ನು ‘ವೀರಶೈವ ಸಿದ್ಧಾಂತ ತತ್ವಜ್ಞಾನ’ ಎಂದೇ ಘೋಷಿಸಿದ್ದಾನೆ).

೧೭. ಅನುವಾದದ ಅನುಸಂಧಾನಚರಿತ್ರೆ ಮತ್ತು ಪುರಾಣಗಳ ಅಭೇದ

ಅಲ್ಲಮನ ವಚನಗಳು ಸಂಸ್ಕೃತ, ತೆಲುಗು, ಇಂಗ್ಲೀಷ್ಗಳಿಗೆ ಅನುವಾದವಾಗಿವೆ. ಅಲ್ಲದೆ ಚಾಮರಸನ ಪ್ರಭುಲಿಂಗಲೀಲೆಯು ಸಂಸ್ಕೃತ, ತೆಲುಗು, ತಮಿಳು, ಮರಾಠಿಗಳಿಗೆ ಅನುವಾದವಾಗಿವೆ. ಚಾಮರಸನೇ ಯಾಕೆ ಅನುವಾದವಾಗಿದ್ದಾನೆ. ಹರಿಹರ ಯಾಕೆ ಅನುವಾದವಾಗಿಲ್ಲ? ಇದೊಂದು ಸರಳ ಪ್ರಶ್ನೆಯಾಗಿಯೇ ಕಾಣಬಹುದು. ಆದರೆ ನಮ್ಮಲ್ಲಿ ಕಾವ್ಯವೂ ಕಾವ್ಯವೆಂದು ಮಾನ್ಯತೆ ಪಡೆಯಲು ಅದು ಚರಿತ್ರೆ ಆಗಿರಬೇಕಿಲ್ಲ ಎನ್ನಿಸುತ್ತದೆ. ಅಂದರೆ ನಮ್ಮವರಿಗೆ ಭಾರತೀಯ ಸಂದರ್ಭದಲ್ಲಿ ಚರಿತ್ರೆಯು ಚರಿತ್ರೆಯಾಗಿ ಬೇಕಾಗಿಲ್ಲ. ಅದು ಪುರಾಣವಾಗಿ ಬೇಕಾಗಿದೆ. ಹರಿಹರ ಚರಿತ್ರೆಗೆ ಹೆಚ್ಚು ಹತ್ತಿರವಾದವನು. ಚಾಮರಸ ಅಲ್ಲಮನನ್ನು ಸಂಪೂರ್ಣ ಪುರಾಣೀಕರಿಸಿದ್ದಾನೆ (ಅಂದರೆ ಯಾವಾಗಲೂ ಶ್ರೇಷ್ಠವಾದ ಕಾವ್ಯವೇ ಅನುವಾದಕ್ಕೆ ಗುರಿಯಾಗುತ್ತದೆ ಎಂದೇನೂ ಅಲ್ಲ. ಪರಿವಾರದ ರಾಜಕಾರಣ. ದೃಷ್ಟಿಕೋನದ ರಾಜಕಾರಣ ಕೂಡ ಅನುವಾದದ ಹಿನ್ನೆಲೆಯಲ್ಲಿ ಕೆಲಸ ಮಡುತ್ತಿರುತ್ತದೆ) ಸಮುದಾಯದ ನಾಯಕ ಆದವನು ಧಾರ್ಮಿಕ ನಾಯಕ ಆದವನು ತನ್ನೆಲ್ಲ ಚಾರಿತ್ರಿಕ ವಾಸ್ತವಗಳೊಂದಿಗೆ ನಮಗೆ ಬೇಕಾಗಿಲ್ಲ. ದಂತಕತೆಗಳ ರೂಪದಲ್ಲಿ, ಪುರಾಣದ ರೂಪದಲ್ಲಿಅವನ ಚರಿತ್ರೆ ಪ್ರಸಾರವಾಗುವುದಾದರೆ ಅದು ಸ್ವೀಕಾರಾರ್ಹ ಇಲ್ಲವಾದರೆ, ಒರಟಾದ – ವಾಸ್ತವ ಇತಿಹಾಸ ನಮಗೆ ಇತಿಹಾಸವೇ ಅಲ್ಲ. ಪುರಾಣವೇ ನಮ್ಮ ಚಾರಿತ್ರೆ. ಲೀಲೆಯೇ ನಮ್ಮ ಚರಿತ್ರೆ. ಅದರಲ್ಲೂ ನಮ್ಮ ನಾಯಕ ಧಾರ್ಮಿಕವಾದರೆ ಅವನು ಸಾಕ್ಷಾತ್ ನಮ್ಮ ಕುಲದೈವದ ಅವತಾರವೇ ಆಗಿರಬೇಕು. ದೇವರಲ್ಲದವನಿಂದ ಲೋಕದಲ್ಲಿ ಅತಿಶಯವಾದುದನ್ನು ಸಾಧಿಸಲು ಆಗುವುದಿಲ್ಲ. ನಾವು ಗೌರವ ತೋರುವ ಬಹು ಉನ್ನವಾದ ಪ್ರತಿಮೆ ಎಂದರೆ ಅದು ದೈವ. ಹಾಗಾಗಿ ಚಾಮರಸ ನಿರಂತರ ಅನುವಾದಕ್ಕೆ ಗುರಿಯಾಗಿದ್ದಾನೆ, ಹರಿಹರ ಅವಜ್ಞೆಗೆ ಗುರಿಯಾಗಿದ್ದಾನೆ. ಚಿರಿತ್ರೆಯ ತಿರಸ್ಕಾರ ಪುರಾಣದ ಪುರಸ್ಕಾರವಾಗಿ ಈ ವಿದ್ಯಮಾನವನ್ನು ನಾವು ನೋಡಬೇಕಿಲ್ಲ. ಚರಿತ್ರೆಯು ಪುರಾಣವಾಗುವುದೇ ನಮ್ಮ ಚರಿತ್ರೆ ಎಂದು ನಾವು ತಿಳಿಯಬೇಕಾಗಿದೆ ಅಷ್ಟೆ.

[1] ನೋಡಿ: ಚೆನ್ನಪ್ಪಕವಿಯ ಶರಣಲೀಲಾಮೃತ – ಸಂ ಶಿವಬಸವಸ್ವಾಮಿ, ಶಿವಶರಣ ವಾಙ್ಞಯ ಪ್ರಕಾಶನ, ದೇವನೂರು, ೧೯೫೫, ಪುಟ ೩೧೧ – ೩೧೨.

[2] ಶಿವಾನಂದಕವಿ, ದುರುದುಂಡೀಶ ಇಬ್ಬರೂ ಬೆಳಗವಿಯ ಕವಿಗಳು; ಇಲ್ಲಿ ಕಲ್ಗತುರಾ,ಸವಾಲ್ ಜವಾಬ್ ನಂತಹ ಪ್ರಕಾರಗಳು ಗಂಡು ಹೆಣ್ಣಿನ ಸಂವಾದಗಳೇ ಅಗಿವೆ. ಇವುಗಳ ಪ್ರಭಾವ ಇಲ್ಲಿನ ಸಣ್ಣಾಟಗಳ ಮೆಲೂ ಆಗಿರಬಹುದು. ಗಂಡು ಹೆಣ್ಣುಗಳ ಮೇಲಾಟಕ್ಕೆ ಒಗ್ಗಬಹುದಾದ ಯಾವುದೇ ಕಥನವನ್ನು ಇಲ್ಲಿನ ಜಾನಪದ ಕವಿಗಳು ಹುಡುಕುತ್ತಿರುತ್ತಾರೆ. ಹಾಗಾಗಿ ಅಲ್ಲಮನ ಇವರಿಗೆ ನಿಮಿತ್ತ ಮಾತ್ರ.

[3] ಹೆಚ್ಚಿನ ವಿವರಗಳಿಗೆ ನೋಡಿ; ಡಾ.ಎಲ್. ಬಸವರಾಜು – ಪ್ರಭುದೇವರ ಷಟ್ಸ್ಥಲದ ವಚನಗಳು ಕೃತಿಯ ಪೀಠಿಕೆ – ಪು.೩೯ ಮತ್ತು ೪೦. ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಗ್ರಂಥಮಾಲೆ, ಮೈಸೂರು೨೦೦೫.

[4] ವಚನ ಎಂದರೆ ಕವ್ಯ ಎಂದೇ ತಿಳಿಯುವ ಪರಿಪಾಠ ಅದಾಗಲೇ ಚಾಲ್ತಿಗೆ ಬಂದಿರುವುದನ್ನು ಸರಣ ಪರಂಪರೆಯಲ್ಲೇ ಕಾಣಬಹುದು. ಕರಸ್ಥಲ ವೀರಣ್ಣೊಡೆಯರ ವಚನ=ಕಂದಪದ್ಯ ಕಾವ್ಯ; ಸರ್ವಜ್ಞ ವಚನ=ತ್ರಿಪದಿ ರೂಪ; ಕರಸ್ಥಲ ನಾಗಿದೇವನ ಲಿಂಗನಿಜಸ್ಥಲದ ಇಂತಹ ರಚನೆಗಳನ್ನು ನೋಡಿದರೆ ನಮ್ಮಲ್ಲಿ ವಚನವನ್ನು ಕಾವ್ಯ ಎಂಬಂತೆ ಪರಿಗಣಿಸುವ ಮತ್ತು ಪದವನ್ನು ಕಾವ್ಯ ಪದಕ್ಕೆ ಪರ್ಯಾಯವಾಗಿ ಬಳಸುವ ಪರಿಪಾಠ ಬೆಳೆದಿರುವುದು ಕಾಣುತ್ತದೆ. (ಹೆಚ್ಚಿನ ವಿವರಗಳಿಗೆ ನೋಡಿ – ವಿಜಯಕಲ್ಯಾಣ – ಸಂ.ಸಂ.ಶಿ. ಭೂಸನೂರಮಠ, ಹರಿಹರ ಸ್ಮಾರಕ ಸಂಶೋಧನಾ ಕೇಂದ್ರ, ಹಂಪೆ, ೧೯೯೮)