೧೮. ಶೂನ್ಯ ಸಂಪಾದನೆ ಅಷ್ಟಾದಶ ಸಂಪಾದನೆ

ಶೂನ್ಯ ಸಂಪಾದನೆಯಲ್ಲಿ ವೀರಶೈವ ಧರ್ಮ ಮತ್ತು ಅಲ್ಲಮ ಹಾಗೂ ಇವನ ಸುತ್ತಣ ಶೂನ್ಯ ಸಿಂಹಾಸನ ಕಥನವಿದ್ದರೆ, ಅಷ್ಟಾದಶ ಸಂಪಾದನೆಗಳಲ್ಲಿ ಇದಕ್ಕಿಂತ ಭಿನ್ನವಾದ ಲೋಕವಿದೆ. ಈ ಲೋಕದಲ್ಲಿ ಧರ್ಮವಾಗಲೀ, ಪಂಥವಾಗಲೀ, ನಿರ್ದಿಷ್ಟ ಚಿಂತನಾ ಪರಂಪರೆಯಾಗಲೀ ಯಾವುದೂ ಮುಖ್ಯವಲ್ಲ. ಇಲ್ಲಿ ಅಷ್ಟಾದಶ ವರ್ಣನೆ ಮಾತ್ರ ಮುಖ್ಯ. ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವ, ಮಲ್ಲಕವಿಯ ಕಾವ್ಯಸಾರಂ, ಅಭಿನವಾದಿ ವಿದ್ಯಾನಂದನ ಕಾವ್ಯಸಾರ ಹೀಗೆ ಹಲವು ಸಂಪಾದನೆಗಳು ಈ ಧಾರೆಯಲ್ಲಿ ಬರುತ್ತವೆ. ಇಲ್ಲಿ ಕಾವ್ಯ ಭಾಗಗಳನ್ನು ಆರಿಸಿ ಸಂಪಾದಿಸಲು ಇರುವ ಒಂದೇ ಮಾನದಂಡವೆಂದರೆ ಅದು ಅಷ್ಟಾದಶವರ್ಣನೆ. ಪಂಪ, ರನ್ನ, ಜನ್ನ, ಪೊನ್ನ, ನಾಗವರ್ಮ, ನಾಗಚಂದ್ರ, ರುದ್ರಭಟ್ಟ, ಚಂದ್ರಕವಿ, ನೇಮಿಚಂದ್ರ, ಸಾಳ್ವ ಕವಿ, ಗುಣವರ್ಮ, ಉದಯಾದಿತ್ಯ ಹೀಗೆ ಸುಮಾರು ೩೨ ಕವಿಗಳಿಂದ ಆರಿಸಿದ ಕಾವ್ಯ ಭಾಗಗಳ ಸಂಪಾದನಾ ಧಾರೆ ಇದು. ಇಲ್ಲಿ ಹರಿಹರನ ಗಿರಿಜಾ ಕಲ್ಯಾಣದಿಂದ ಲೂ ೨೭ ಪದ್ಯಗಳನ್ನು ಆರಿಸಿಕೊಳ್ಳಲಾಗಿದೆ. ಆದರೆ ರಗಳೆಯಿಂದ ಒಂದೂ ಪದ್ಯಗಳನ್ನು ಆರಿಸಿಕೊಂಡಿಲ್ಲ. ವಚನ, ಕೀರ್ತನಕಾರರಂತೂ ಇಲ್ಲವೇ ಇಲ್ಲ. ಯಾಕೆಂದರೆ ಇಲ್ಲಿ ಅಷ್ಟಾದಶವರ್ಣನೆ ಮಾತ್ರವೇ ಮಾನದಂಡ. ಅಷ್ಟಾದಶ ವರ್ಣನಾ ಮಾರ್ಗದ ಕಾವ್ಯವಿನ್ಯಾಸವನ್ನು ನಿರಾಕರಿಸಿದ ವಚನ ಧಾರೆಗೆ ಪ್ರತಿಕ್ರಿಯೆಯಾಗಿ ಈ ಸಂಪಾದನಾ ಕಾರ್ಯ ಹುಟ್ಟಿ ಬೆಳೆದಿದೆ ಎಂದು ನಾವು ಗ್ರಹಿಸಬಹುದು. ಹೀಗಾಗಿ ಕಾವ್ಯದ ಅನುಸಂಧಾನದಲ್ಲಿ ಭಿನ್ನ ಅಭಿರುಚಿಯ ಧಾರೆಗಳು ಇದ್ದುವೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಶೂನ್ಯ ಸಂಪಾದನೆಗಳು ಹುಟ್ಟುವ ಮುನ್ನವೇ ಈ ಅಷ್ಟಾದಶ ಸಂಪಾದನೆಗಳು ಹುಟ್ಟಿವೆ. ಈ ಅಷ್ಟಾದಸ ಸಂಪಾದನೆಗಳಲ್ಲಿ ವಚನಗಳು ಇಲ್ಲದಿರುವುದನ್ನು ನೋಡಿಯೇ ಶೂನ್ಯ ಸಂಪಾದನೆಗಳು ಹುಟ್ಟಿರಬಹುದೇ? ಅಷ್ಟಾದಶ ಸಂಪಾದನೆಗಳಿಗಿಂತ ಭಿನ್ನವಾದ ವಚನ ಸಂಪಾದನೆಯ ಅವಶ್ಯಕತೆಯನ್ನು ಶಿವಗಣಪ್ರಸಾದಿಯು ಇವುಗಳನ್ನು ನೋಡಿಯೇ ಮನಗಂಡಿರಬಹುದೇ? ಶೂನ್ಯಸಂಪಾದನೆಗಳಿಗೆ ಅಷ್ಟಾದಶ ಸಂಪಾದನೆಗಳೇ ಮೂಲ ಪ್ರೇರಣೆ ಅಥವಾ ಪ್ರಚೋದನೆ ಎಂದು ಸದ್ಯಕ್ಕೆ ಪ್ರಮೇಯ ಮಾಡದೆ ಇದನ್ನೊಂದು ಕಲ್ಪಿತವನ್ನಾಗಿ(ಹೈಪಾಥಿಸ್) ಮಾತ್ರ ಇಟ್ಟುಕೊಳ್ಳಬಹುದು. ಆದರೆ ಈ ರೀತಿಯ ಕಾವ್ಯ ಸಂಪಾದನೆಗಳು ವೀರಶೈವರಲ್ಲಿ ಹುಟ್ಟಿಲ್ಲವೆಂದಲ್ಲ. ತೋಂಟದ ಸಿದ್ಧಲಿಂಗನ ಶಿಷ್ಯ ಪರಂಪರೆಗೆ ಸೇರಿದ ಚೆನ್ನಂಜೆದೇವನ ಶಂಕರದೇವರ ಕಂದ, ಬಸವಸ್ತೋತ್ರದ ಷಟ್ಪದಿ, ಎಳಮಲೆಯ ಗುರುಶಾಂತದೇವನು ಸಂಪಾದಿಸಿದ ಮಂತ್ರಮಹತ್ವದ ಕಂದ, ಸಿದ್ದೇಶ್ವರ ಪುರಾಣದ ನಾಂದ್ಯ, ಸಂಪಾದನೆಯ ಸಿದ್ಧವೀಎಣ್ಣೊಡೆಯ ಸಂಪಾದಿಸಿದ ಮಿಶ್ರಸ್ತೋತ್ರದ ಷಟ್ಪದಿ, ಲಿಂಗ ಸ್ತೋತ್ರದ ಷಟ್ಪದಿ, ಶಂಕರದೇವ ಕಂದ, ಸರ್ವಜ್ಞಮೂರ್ತಿಯ ತ್ರಿವಿಧಿ ಮೊದಲಾದ ಗ್ರಂಥಗಳು ಕಾವ್ಯಸಂಪಾದನೆಗಳೇ ಆಗಿವೆ. ಇವೆಲ್ಲವೂ ವೀರಶೈವ ಧಾರ್ಮಿಕ ಹಿನ್ನೆಲೆಯಲ್ಲಿ ಕಾವ್ಯ ಭಾಗಗಳನ್ನು ಆರಿಸಿ ಕಟ್ಟಿದ ಸಂಪಾದನಾ ಕೃತಿಗಳಾಗಿವೆ.[1]

ಹಾಗೆ ನೋಡಿದರೆ ಆಧುನಿಕ ಗ್ರಂಥಸಂಪಾದನೆ ೧೬ ನೇ ಶತಮಾನದಲ್ಲೇ ಆರಂಭವಾಗಿದೆ. ಅದರ ಬೇರುಗಳನ್ನು ಶರಣ ಸಂಪಾದನಾ ಪರಂಪರೆಯಲ್ಲೇ ಗುರುತಿಸಿಕೊಳ್ಳಬಹುದು. ಆದರೆ ಆ ಸಂಪಾದನೆಯು ನಮ್ಮ ಓರಿಯೆಂಟಲ್ ಶಿಸ್ತಿನ ಧಾಟಿಯಲ್ಲಿ ನಡೆದಿಲ್ಲ. ವೀರಶೈವ ಸಮುದಾಯದ ಹಿತಾಸಕ್ತಿಯಿಂದ ನಡೆದಿದೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ ಸಂಪಾದನೆಯ ಸಿದ್ಧವೀರನು (೧೬೦೦) ಹದಿನಾರು ಕೃತಿಗಳನ್ನು ಸಂಪಾದಿಸಿದ್ದಾನೆ. ಅವುಗಳಲ್ಲಿ ಸಿದ್ಧರಾಮನ ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಬಸವಸ್ತೋತ್ರದ ತ್ರಿವಿಧಿ, ಮಿಶ್ರಸ್ತೋತ್ರದ ತ್ರಿವಿಧಿ, ಕಿಕ್ಕೇರಿ ನಂಜುಂಡಾರಾಧ್ಯನ ಮಿಶ್ರಸ್ತೋತ್ರ, ಕೊಂಡಗುಳಿ ಕೇಶಿರಾಜನ ಲಿಂಗ ಸ್ತೋತ್ರದ ಕಂದ, ಶಂಕರದೇವನ ಕಂದ ಮೊದಲಾದ ಕೃತಿಗಳನ್ನು ಜತನದಿಂದ ಸಂಪಾದಿಸಿದ್ದಾನೆ. ಹಾಗಾಗಿಯೆ ಇವನಿಗೆ ಸಂಪಾದನೆಯ ಸಿದ್ಧವೀರನೆಂಬ ಹೆಸರು ಬಂದಿದೆ. ಸಂಪಾದನೆಯನ್ನು ಒಂದು ಉದ್ಯೋಗವನ್ನಾಗಿ ಹಿಡಿದು ಸಾಹಿತ್ಯದ ಅನುಸಂಧಾನವನ್ನು ಅನ್ನದ ಮಾರ್ಗವನ್ನಾಗಿ ಮಡಿಕೊಂಡು ಸಾಹಿತ್ಯದಾಸೋಹ ನಡೆಸಿದವರೂ ನಮ್ಮಲ್ಲಿದ್ದಾರೆ. ಡೀಕಿನ ಮಠಗಳೂ ಸಂಪಾದನೆಯ ಮಠಗಳೂ ನಮ್ಮಲ್ಲಿ ಇವೆ. ಹಾಗೆ ನೋಡಿದರೆ ಗ್ರಂಥಸಂಪಾದನೆ ಚೆನ್ನಬಸವಣ್ಣನಿಂದಲೆ ಆರಂಭವಾಗಿರುವುದಾದರೆ ಅದು ೧೧ ನೇ ಶತಮಾನದಷ್ಟು ಹಳೆ ಚಟುವಟಿಕೆಯಾಗಿದೆ. ಆಧುನಿಕವಾದುದೆಲ್ಲವನ್ನು ನಾವು ಇಂಗ್ಲೀಷರನ್ನೇ ನೋಡಿ ಕಲಿತೆವು ಎಂಬುದೊಂದು ಶುದ್ಧ ಆಧುನಿಕ ಅಪಕಲ್ಪನೆ.

೧೯. ಪ್ರಾಥಮಿಕ ಆಕರ ಮತ್ತು ಆನುಷಂಗಿಕ ಆಕರಗಳ ಕಲಸುಮೇಲೋಗರ

ಹರಿಹರನಿಗೆ ಮತ್ತು ರಾಘವಾಂಕನಿಗೆ ಅಲ್ಲಮನ ಜೀವನ ಕಥನವನ್ನು ಕಟ್ಟಲು ಅಲ್ಲಮನ ವಚನಗಳು ಪ್ರಾಥಮಿಕ ಆಕರವಾದರೆ ಅವನ ಕುರಿತಂತೆ ಸಮಾಜದಲ್ಲಿ ಪ್ರಸಾರದಲ್ಲಿದ್ದ ಭಿನ್ನ ವಕ್ತೃಪಾಠಗಳು – ದಂತಕತೆಗಳು ಆಕರಗಳಾಗಿದ್ದವು. ಆದರೆ ಆನಂತರದಲ್ಲಿ ಶಿವಗಣಪ್ರಸಾದಿ ಮಹದೇವಯ್ಯ, ಚಾಮರಸ, ಹಲಗೆಯಾರ್ಯ ಮೊದಲಾದವರಿಗೆ ಅಲ್ಲಮನ ಜೀವನ ಕಥನಕ್ಕೆ ಅಲ್ಲಮನ ವಚನಗಳ ಜೊತೆಗೆ ಹರಿಹರ, ರಾಘವಾಂಕಾದಿಗಳ ಪಠ್ಯಗಳೂ ಪ್ರಾಥಮಿಕ ಆಕರಗಳಾಗಿ ಒದಗಿವೆ. ಸಮಾಜದಲ್ಲಿ ಚಾಮರಸನ ಹೊತ್ತಿಗೆ ಅಲ್ಲಮಾದಿ ಶರಣರು ಸಂಪೂರ್ಣ ದಂತಕತೆಗಳೇ ಆಗಿಹೋಗಿರಬಹುದು. ಚರಿತ್ರೆಯು ದಂತಕತೆಯಾದಾಗ ಅದು ಪುರಾಣವಾಗಲು ಎಲ್ಲ ಅರ್ಹತೆಗಳನ್ನು ಪಡೆದುಕೊಳ್ಳುತ್ತದೆ. ಆಗ ಚರಿತ್ರೆ ಎಂದರೆ ಪುರಾಣವೇ. ಅಲ್ಲಿ ಪುರಾಣ ಮತ್ತು ಚರಿತ್ರೆಗಳ ನಡುವಿನ ಗೆರೆಗಳು ಅಳಿಸಿಹೋಗುತ್ತವೆ. ಹಾಗೆಯೇ ಜೀವನಕಥನಕ್ಕೆ ಒದಗುವ ಪ್ರಾಥಮಿಕ ಆಕರಗಳು ಮತ್ತು ಆನುಷಂಗಿಕ (primary Source and Secondary Source) ನಡುವಿನ ಗೆರೆಗಳೂ ಅಳಿಸಿಹೋಗುತ್ತವೆ. ಆಕರಗಳನ್ನು ಹೀಗೆ ವಿಭಜಿಸಲು ಆಗುವುದೇ ಇಲ್ಲ. ಆಕರಗಳನ್ನು ಹೀಗೆ ವಿಭಜಿಸಲು ಆಗದೇ ಇರುವುದು ಭಾರತೀಯ ಚರಿತ್ರೆಯ ಬಹುಮುಖ್ಯ ಲಕ್ಷಣವೂ ಆಗಿದೆ.

ಅಲ್ಲಮನ ಜೀವನ ಕಥನಕ್ಕೆ ಹರಿಹರನಿಗಿಂತ ಚಾಮರಸನೇ ಅಧಿಕೃತ ಆಕರವಾಗಿ ಆನಂತರದ ಹಲವು ಕವಿಗಳಿಗೆ ಒದಗಿಬಂದಿದ್ದಾನೆ. ಸೋಜಿಗವೆಂದರೆ ಅಲ್ಲಮನನ್ನು ತಿಳಿಯಲು ಹರಿಹರನಿಗಿರಲಿ, ಅಲ್ಲಮನ ವಚನಗಳಿಗೆ ಕೂಡ ಹೋಗುವ ಅಗತ್ಯವಿಲ್ಲ. ಚಾಮರಸನ ಲೀಲೆಗೆ ಹೋದರೆ ಸಾಕು ಎಂಬ ಆಚಾರ ಆನಂತರದ ಎಳಂದೂರು ಹರೀಶ್ವರ, ಪರ್ವತೇಶ್ವರ, ಕೊಡೇಕಲ್ಲ ರಾಚಪ್ಪಯ್ಯ, ದುರುದುಂಡೀಶ ಮೊದಲಾದವರಿಗೂ ಅನ್ನಿಸಿದೆ. ಅಷ್ಟೇ ಅಲ್ಲ ಹಲವಾರು ಅನುವಾದ ಕವಿಗಳೂ ಇದನ್ನೆ ಪಾಲಿಸಿದ್ದಾರೆ. ಕೊಡೇಕಲ್ಲು ರಾಜಪ್ಪಯ್ಯನು ತನ್ನ ಮಾಯಾಸಾಂಗತ್ಯ ಮತ್ತು ಪ್ರಭುಚರಿತೆ ಎರಡೂ ಕೃತಿಗಳನ್ನು ಚಾಮರಸನ ಲೀಲೆಯ ಎರಡು ಭಾಗಗಳನ್ನು ಆಧರಿಸಿಯೇ ರಚಿಸಿದ್ದಾನೆ. ಯಕ್ಷಗಾನ ಕವಿ ಶಿವಾನಂದನೂ ಕೂಡ ಚಾಮರಸನ ಪ್ರಭುಲಿಂಗಲೀಲೆಯನ್ನೇ ಆಧರಿಸಿದ್ದಾನೆ. ಆದರೆ ಚಾಮರಸನಿಗೆ ಶಿವಗಣಪ್ರಸಾದಿ ಮೂಲ ಆಕರ. ಚಾಮರಸ ಹರಿಹರನನ್ನು ಅನುಸರಿಸದೆ ಶಿವಗಣಪ್ರಸಾದಿಯನ್ನು ಅನುವಾದಿಸಿದ್ದಾನೆ.

ಸಂಪಾದನೆ – ಸ್ಥಲಕಟ್ಟು ಸಾಹಿತ್ಯ – ಟೀಕಾಸಾಹಿತ್ಯಗಳಲ್ಲಿ ಕಲ್ಲುಮಠದ ಪ್ರಭುದೇವ, ಜಕ್ಕಣ, ಸಿದ್ಧಲಿಂಗ ಸಿದ್ಧಬಸವ ಸಿದ್ಧವೀರ ಮೊದಲಾದವರಲ್ಲಿ ಅಲ್ಲಮನ ವಚನಗಳನ್ನೇ ಅನುಸಂಧಾನಕ್ಕೆ ಎತ್ತಿಕೊಳ್ಳುವುದರಿಂದ ಈ ಧಾರೆಗಳಲ್ಲಿ ಆಕರಗಳ ಬಗೆಗೆ ಆಯ್ಕೆಯ ಪ್ರಶ್ನೆಯಿಲ್ಲ. ಇಲ್ಲಿನ ಆಯ್ಕೆ ಮತ್ತು ಅಲಕ್ಷ್ಯ ಏನಿದ್ದರೂ ವಚನಗಳ ಒಳಗೇ ಇರುವ ತಾತ್ವಕ ಲೋಕದ್ದು ಆದರೆ ಜೀವನಕಥನಗಳ ಲೋಕದಲ್ಲಂತು ಪ್ರಾಥಮಿಕ ಆಕರ ಮತ್ತು ಆನುಷಂಗಿಕ ಆಕರಗಳ ಕಲಸುಮೇಲೋಗರವೇ ಸಂಭವಿಸಿದೆ. ಇಲ್ಲೆ ಇನ್ನೊಂದು ಅಂಶವನ್ನು ಗಮನಿಸಬೇಕು. ಪ್ರಭುಸ್ತೋತ್ರ,ಬಸವಸ್ತೋತ್ರ, ಲಿಂಗಸ್ತೋತ್ರ, ಮಿಶ್ರಸ್ತೋತ್ರ ಇಂತಹ ತಾಳೆಗರಿಯೆ ಅಲ್ಲಮನ ಆಕರವಾಗಬೇಕು ಎಂದೇನೂ ಇಲ್ಲವಲ್ಲ. ಹಾಗೆ ಆಗಲು ತಾಳೆ ಗರಿಗಳಿಗೆ ಸಾವಿರಾರು ವರ್ಷ ಆಯುಷ್ಯ ಇರುತ್ತದೆಯೇ? ಅದಕ್ಕೆ ನಮ್ಮವರು ತಮ್ಮ ನಂಬಿಕೆಯ ಗುರುಪರಂಪರೆಯವರು ಸಂಪದಿಸಿದ ಸಂಪಾದನೆಗಳನ್ನೇ ಆಕರಗಳನ್ನಾಗಿ ಹಿಡಿದು ತಮ್ಮ ಆಶಯಗಳಿಗೆ ಅನುಗುಣವಾದ ಸಂಕಲನಗಳನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಸಂಪಾದನೆಗಳೇ ಪ್ರಾಥಮಿಕ ಆಕರಗಳಾಗಿ ಒದಗುತ್ತ ಬಂದಿವೆ. ಇದಕ್ಕೊಂದು ಉದಾಹರಣೆ ನೋಡುವುದಾದರೆ, ಸಂಪಾದನೆಯ ಸಿದ್ದವೀರಣ್ಣನು ತನ್ನ ಪ್ರಭುಸ್ತೋತ್ರದ ವಚನಗಳು ಸಂಕಲನವನ್ನು ತನಗೂ ಮುಂಚಿನ ಶೂನ್ಯಸಂಪಾದನೆಗಳನ್ನೇ ಆಧರಿಸಿ ಕಟ್ಟಿ ಕೊಂಡಿದ್ದಾನೆ. ಇಲ್ಲಿನ ೧೦೮ ವಚನಗಳಲ್ಲಿ ಕ್ರಮಾಂಕ ೯೦ ಹಾಗೂ ೯೨ ನೇ ವಚನಗಳು ಹಲಗದೇವ ಮತ್ತು ಕೆಂಚವೀರಣ್ಣೊಡೆಯರ ಶೂನ್ಯ ಸಂಪಾದನೆಯಲ್ಲಿವೆ. ಕ್ರಮಾಂಕ ೧೮ ಮತ್ತು ೨೦ ನೇ ಗುಮ್ಮಳಾಪುರದ ಸಿದ್ಧಲಿಂಗಯತಿಯ ಶೂನ್ಯ ಸಂಪಾದನೆಯಲ್ಲಿವೆ. ಇನ್ನುಮಿಕ್ಕ ೯೮ ವಚನಗಳು ಗೂಳೂರು ಸಿದ್ಧವೀರಣ್ಣನ ಶೂನ್ಯಸಂಪಾದನೆಯಲ್ಲಿವೆ.

೨೦. ಚರಿತ್ರೆಯಿಂದ ಪ್ರತೀಕಳೆಡೆಗೆ ಚಲನೆ

ಅಲ್ಲಮನ ಕುರಿತು ಸಾಹಿತ್ಯಕ ಅನುಸಂಧಾನಗಳಲ್ಲಿ ಹರಿಹರನಿಂದ ಹಿಡಿದು ಶಿವಾನಂದ ಕವಿಯವರೆಗೆ ಯಾರಿಗೂ ಚರಿತ್ರೆಯನ್ನು ಬರೆಯುವ ಇರಾದೆಯಿಲ್ಲ ಅಥವಾ ಸಾಹಿತ್ಯವನ್ನು ಸೃಷ್ಟಿಸುವ ಇರಾದೆಯಿಲ್ಲ. ಸಾಹಿತ್ಯಕ್ಕಾಗಿ ಸೃಷ್ಟಿಯಾದ ಸಾಹಿತ್ಯ ಇದಲ್ಲ. ಈ ಎಲ್ಲವೂ ಭಕ್ತಿ, ಅನುಭಾವಗಳನ್ನು ಬಿತ್ತುವ ಮತ್ತು ಆ ಮೂಲಕ ವರ್ತಮಾನದ ಆಚಾರಗಳನ್ನು ರೂಪಿಸುವ ಉದ್ದೇಶದಿಂದ ನಡೆದಿರುವ ಪುಣ್ಯ ಪುರುಷರ ಕಥನಾನುಭಾವ ಅಥವಾ ಕಥಾಪ್ರಸಂಗಗಳು ಹಿಂದಿಣ ಹೆಜ್ಜೆಯನರಿದು ಇಂದಣ ಹೆಜ್ಜೆಯನಿಡುವ ವ್ಯಾಪಾರಗಳು ಹೀಗಾಗಿ ಚರಿತ್ರಕಥನವು ಇಲ್ಲೆಲ್ಲ ಪ್ರತೀಕಗಳಾಗುವ ಮತ್ತು ಕಾಲಾತೀತ ಆರ್ಕಿಟೈಪಾಗುವ ಕಡೆಗೆ ಚಲಿಸಿದಂತೆ ಕಾಣುತ್ತದೆ. ಒಬ್ಬೊಬ್ಬ ಶರಣನೂ ಒಂದೊಂದು ಸಂಗತಿಗಳಿಗೆ ಮೆಟಫರ್ ಆಗುವ ಕ್ರಿಯೆ ಈ ಸಾಹಿತ್ಯ ಕಥನಗಳಲ್ಲಿ ನಡೆದಿದೆ. “ಗಹನವಾದೆಲ್ಲ ತತ್ವಕ್ಕೆ ಪ್ರಭುದೇವರು, ಆತ್ಮಾನ್ವೇಷಣೆಗೆ ಮುಕ್ತಾಯಕ್ಕ, ನಿರ್ಮಮ ಗೂಢ ಭಕ್ತಿಗೆ ಮರಳಶಂಕರದೇವ, ಅತೀತಜ್ಞಾನಕ್ಕೆ ಚೆನ್ನಬಸವಣ್ಣ.” [2] ಹೀಗೆ ಒಬ್ಬೊಬ್ಬರೂ ಒಂದೊಂದು ಸಂಗತಿಗೆ ಪ್ರತೀಕಗಳಾಗಿ ಬೆಳೆದು ಬಿಟ್ಟಿದ್ದಾರೆ.

೨೧. ಧಾರ್ಮಿಕ ವ್ಯಕ್ತಿತ್ವ ವಿಕಾಸಕ್ರಮದ ಚಿತ್ರಣ : ಅಂತಸ್ತು ನಿರ್ಮಾಣ

ಮಹಲಿಂಗನ ಏಕೋತ್ತರ ಶತಸ್ಥಲದಲ್ಲಿ ಭಿನ್ನ ಸ್ಥಲಗಳಲ್ಲಿ ವಚನಗಳನ್ನು ಹೀಗೆ ಜೋಡಿಸಲಾಗಿದೆ;

೧. ಪಿಂಡಸ್ಥಲ – > ಪಿಂಡಜ್ಞಾನಸ್ಥಲ – > ಸಂಸಾರಹೇಯಸ್ಥಲ – > ಗುರುಕರುಣಸ್ಥಲ – > ಲಿಂಗಧರಣ ಸ್ಥಲ – > ವಿಭೂತಿಸ್ಥಲ – > ರುದ್ರಾಕ್ಷಿಸ್ಥಲ – > ಪಂಚಾಕ್ಷರಿ ಸ್ಥಲ – > ಭಕ್ತಿಸ್ಥಲ…(೧೫) ಭಕ್ತ ಸ್ಥಲ

೨.ಮಹೇಶ್ವರರ ಸ್ಥಲ – > ಪೂರ್ವಾಶ್ರಯ ನಿರಶನ ಸ್ಥಲ – > ವಾಗದ್ವೈತ ನಿರಸನ ಸ್ಥಲ – > ಆಹ್ವಾನ ನಿರಸನ ಸ್ಥಲ – > ಅಷ್ಟಮೂರ್ತಿನಿರಸನ ಸ್ಥಲ…. (೯) ಮಾಹೇಶ್ವರ ಸ್ಥಲ

೩. ಪ್ರಾಣಲಿಂಗ ಸ್ಥಲ – > ಪ್ರಾಣಲಿಂಗಾರ್ಚನೆಯ ಸ್ಥಲ – > ಶಿವಯೋಗಸಮಾಧಿ ಸ್ಥಲ – >…. ಹೀಗೆ ಆರೂ ಸ್ಥಲಗಳನ್ನು ನಲವತ್ನಾಲ್ಕು ಸ್ಥಲಗಳನ್ನಾಗಿ ವಿಂಗಡಿಸಲಾಗಿದೆ. ಒಂದೊಂದು ಸ್ಥಲದಲ್ಲೂ ಹಲವು ವಚನಗಳನ್ನು ಹೆಣೆಯಲಾಗಿದೆ. ಒಂದೇ ವಸ್ತುವಿನ ಕುರಿತಂತೆ ಹಲವು ದೃಷ್ಟಿಗಳ ನಡುವೆ ಸಾಮ್ಯತೆ – ಸಹಬಾಳ್ವೆಯನ್ನು ಏರ್ಪಡಿಸಲು ಯತ್ನಿಸಲಾಗಿದೆ. ಇಲ್ಲೆಲ್ಲ ವ್ಯಕ್ತಿತ್ವದ ವಿಕಾಸದ ಕಥನವು ವಚನಗಳ ಮೂಲಕ ಕಟ್ಟಲ್ಪಟ್ಟಿದೆ. ಅಂದರೆ ವೀರಶೈವ ಧಾರ್ಮಿಕ ವ್ಯಕ್ತಿತ್ವದ ವಿಕಾಸ ಕ್ರಮವನ್ನು ಕಟ್ಟಿಕೊಡಲು ಯತ್ನಿಸಲಾಗಿದೆ. ಸಾಧಾರಣ ವ್ಯಕ್ತಿಯೊಬ್ಬನು ಶಿವಭಕ್ತನಾಗುವ ಮತ್ತು ಅಲ್ಲಿಂದ ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿಯಾಗುವ ಅಲ್ಲಿಂದ ಆತ ಶರಣನಾಗುವ ಶಿವೈಕ್ಯನಾಗುವ ವಿಕಾಸಕ್ರಮವಿದು.ದ್ವಯನು – ಅದ್ವಯನಾಗುವ ಅನುಭಾವಿಯಾಗುವ ವಿಕಾಸಕ್ರಮದ ಚಿತ್ರಣ ಇದು.ಈ ಚಿತ್ರಣಗಳಲ್ಲಿ ನಾವು ಅಗತ್ಯವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ, (ಮಹಲಿಂಗನ ಏಕೋತ್ತರ ಶತಸ್ಥಲ ಪರಂಪರೆಯನ್ನು ನೋಡಿದರೆ) ಎಲ್ಲಸಂಯೋಜಿಸಿ ರಚಿಸಿದ ಮಹಾ ಕಾವ್ಯಗಳಂತೆ ಕಾಣುತ್ತವೆ. ಬಿಡಿ ಬಿಡಿಯಾದ ವಚನಗಳಿಗೆ ಮಹಾಕಾವ್ಯದ ಅಂತಸ್ತನ್ನು ಕಟ್ಟಿಕೊಡುವ ಕೆಲಸವನ್ನು ಈ ಸಂಯೋಜನೆಗಳು ಬಹು ಯಶಸ್ವಿಯಾಗಿ ನಿರ್ವಹಿಸಿವೆ. ವ್ಯಕ್ತಿಯೊಬ್ಬನ ವ್ಯಕ್ತಿತ್ವವು ಸಾಗಿ ವಿಕಾಸವಾಗಬೇಕಾದ ಹಾದಿಯನ್ನು ಹರಿಹರನು ಬಹುಚೆನ್ನಾಗಿ ಜೀವನ ಕಥನಗಳ ಮೂಲಕ ಚಿತ್ರಿಸಿದರೆ ಈ ಶತಸ್ಥಲದ ಆಚಾರ್ಯರು ಅದೇ ವಿಕಾಸ ಮಾರ್ಗವನ್ನು ವಚನಗಳ ಸಂಯೋಜನೆಯ ಮೂಲಕ ಚಿತ್ರಿಸಿದ್ದಾನೆ. ಹೀಗಾಗಿ ಆಶಯದ ದೃಷ್ಟಿಯಿಂದ ಕಾವ್ಯಾನುಸಂಧಾನದ ಪರಂಪರೆ ಮತ್ತು ಸ್ಥಲಕಟ್ಟು ಸಂಪಾದನಾ ಪರಂಪರೆಗಳು ಒಂದೇ ಆಗಿದ್ದು ; ಛಂಧೋರೂಪದ ದೃಷ್ಟಿಯಿಂದ ಮತ್ತು ಮಧ್ಯೆ ಸಂಸಕೃತ ಶ್ಲೋಕಗಳನ್ನು ಉದಾಹರಿಸುತ್ತಾ ವಚನಗಳನ್ನು ಸಂಸ್ಕೃತ ಶ್ಲೋಕಗಳಿಗಿಂತ ಅಥವಾ ಅಷ್ಟೇ ಉನ್ನತ ರಚನೆಗಳೆಂದು ಸಾಬೀತುಪಡಿಸಲು ಯತ್ನಿಸಿದ್ದಾರೆ. ಇಲ್ಲೆಲ್ಲ ವಚನಗಳಿಗೆ ಸಾಹಿತ್ಯಕವಾಗಿ – ಸಾಮಾಜಿಕವಾಗಿ ಉನ್ನತ ಅಂತಸ್ತೊಂದನ್ನು ಕಟ್ಟಿಕೊಡುವ ಯತ್ನವಂತೂ ಎದ್ದು ಕಾಣುತ್ತದೆ.

೨೨. ಸಂಪಾದನೆಸಂಯೋಜನೆಸ್ವತಂತ್ರಪ್ರಕ್ಷಿಪ್ತ

ಮಹಲಿಂಗ ಏಕೋತ್ತರ ಶತಸ್ಥಲದಲ್ಲಿ ಹೆಸರು ತಿಳಿಯದ ಆದರೆ ಅಂಕಿತವುಳ್ಳ ೬೦ ವಚನಗಳಿವೆ. ೨೦ ಪದಗಳಿವೆ. ಹಾಗೆಯೇ ಅಂಕಿತಗಳು ಇಲ್ಲದ ೯೩೨ ವಚನಗಳಿವೆ. – ಎರಡನೆಯ ಪ್ರತಿಯಲ್ಲಿ ೧೮೩ ಅಧಿಕ ವಚನಗಳಿವೆ. ಇಷ್ಟೊಂದು ಪ್ರಮಾಣದ ಅಂಕಿತಗಳಿಲ್ಲದ ವಚನಗಳಲ್ಲಿ ಕೆಲವನ್ನು ಸ್ವತಃ ಸಂಯೋಜಕನಾದ ಮಹಲಿಂಗನೇ ಬರೆದಿರಬಾರದೇಕೆ? ನೂರೊಂದು ಸ್ಥಲಗಳಿಗೆ ಎಲ್ಲಕ್ಕೂ ಹೊಂದಿಕೆಯಾಗುವಂತೆ ವಚನಗಳನ್ನು ಶರಣರೇನೂ ಬರೆದಿಲ್ಲವಲ್ಲ. ಆನಂತರದಲ್ಲಿ ಅವುಗಳನ್ನು ಆಯಾ ಚೀಲಗಳಿಗೆ ಹಾಕಲು ಸಂಯೋಜಕರು ಯತ್ನಸಿದ್ದಾರಷ್ಟೆ. ಈ ಯತ್ನದಲ್ಲಿ ತಮ್ಮ ಸ್ಥಲಗಳಿಗೆ ಅನುಗುಣವಾದ ವಚನಗಳು ಸಿಗದಿದ್ದಾಗ ತಾವೇ ಹೊಸದಾಗಿ ವಚನಗಳನ್ನು ಸಂಯೋಜಕರು ರಚಿಸಿ ಸೇರಿಸಿರಬಹುದಲ್ಲವೆ? ಅಲ್ಲದೆ ವಚನಕಾರರ ಅಂಕಿತಗಳನ್ನು ಬಳಸಿ ಅವರ ಹೆಸರಿನಲ್ಲಿ ವಚನಗಳನ್ನುಸಂಕಲನಕಾರರೂ ಬರೆದಿರಬಹುದೆಂದು ಊಹಿಸಬಹುದಲ್ಲವೆ? ಹಾಗಾಗಿ ಇಲ್ಲಿ ಅಲ್ಲಮನ ೧೬೭ ವಚನಗಳೂ ೬೭ ಸ್ವರಪದಗಳೂ ಬಳಕೆಯಾಗಿವೆಯಾದರೂ ಇವೆಲ್ಲವನ್ನು ಅಲ್ಲಮನೇ ರಚಿಸಿದನೆಂದು ಖಚಿತವಾಗಿ ಹೇಳಲು ಬರುವುದಿಲ್ಲ. ನಿಜವಚನಗಳು ಮತ್ತು ಪ್ರಕ್ಷಿಪ್ತ ವಚನಗಳನ್ನು ಹಾಗೆ ಬೇರೆ ಮಾಡುವುದೂ ಕೂಡ ಸಾಧ್ಯವಿಲ್ಲ.[3]

ಇಲ್ಲಿ ಇನ್ನೊಂದು ಉದಾಹರಣೆಯನ್ನು ಗಮನಿಸಬಹುದು. ಎಳೆಮಲೆಯ ಗುರುಶಾಂತ ದೇವನ ಷಟ್ ಸ್ಥಲಸ್ತೋತ್ರದ ವಚನಗಳಲ್ಲಿ ಬರುವ ಭಕ್ತಸ್ಥಲದ ೭ನೇ ವಚನ ಅಲ್ಲಮನದು. ಆದರೆ ಇದು ಮಹಾಲಿಂಗನಲ್ಲೂ ಇಲ್ಲ. ಕಲ್ಲುಮಠದ ಪ್ರಭುದೇವನಲ್ಲೂ ಇಲ್ಲ. (ಈಗಿನ ಸಂಸ್ಕೃತಿ ಇಲಾಖೆಯ ಡಾ. ಬಿ. ವಿ. ಮಲ್ಲಾಪುರ ಸಂಕಲನದಲ್ಲೂ ಇಲ್ಲ) ಅಂದರೆ ಈ ವಚನವನ್ನು ಶಾಂತದೇವ ತಾನೇ ಅಲ್ಲಮನ ಅಂಕಿತದಲ್ಲಿ ರಚಿಸಿರಬಹದಲ್ಲವೇ ? ಆ ವಚನದ ವಸ್ತು ಸಾಮಗ್ರಿ ನೋಡಿದರೆ ಅಲ್ಲಮ ಹಾಗೆ ಹೇಳಲಾರ ಎನಿಸುತ್ತದೆ. (ನೋಡಿ: ಎಲಮಲೆಯ ಗುರುಶಾಂತದೇವರ ವಚನಸಂಕಲನಗಳು – ಸಂ. ವೀರಣ್ಣ ರಾಜೂರ, ವೀರಶೈವ ಅಧ್ಯಯನ ಮಠ, ತೋಂಟದಾರ್ಯ ಸಂಸ್ಥಾನ ಮಠ, ಗದಗ, ೧೯೮೩ ಪು – ೫ ವಚನ – ೭)

೨೩. ಸರಳೀಕರಣನಿಗೂಢಿಕರಣಸಂಸ್ಕೃತೀಕರಣಗಳ ಕಲಬೆರಕೆ; ಟೀಕು;

ಟೀಕುಗಳನ್ನು ಬರೆಯುವ ವಿದ್ವಾಂಸರು ಬೆಡಗಿನ ವಚನಗಳಾಗಿದ್ದರೆ ಅವನ್ನು ಸರಳೀಕರಸುವ ಕೆಲಸವನ್ನು, ನಿಗೂಡ ವಚನಗಳಾಗಿದ್ದರೆ ಅವನ್ನು ಮೂರ್ತಗೊಳಿಸುವ ಕೆಲಸವನ್ನು ಮಾಡಿದ್ದಾರೆ. ಬೆಡಗಿನ ಕನ್ನಡವನ್ನು ಸರಳಕನ್ನಡ (ಶೈವ ಕನ್ನಡ) ವಾಗಿ ಅನುವಾದಿಸುವ, ಛಂದಸ್ಸನ್ನು ಬಿಡಿಸಿ ಸರಳೀಕರಿಸುವ ಕೆಲಸವನ್ನು ಮಾಡಿದ್ದಾರೆ. ಉದಾ: ನೋಡಿ.

`ಆದಿಯಾಧಾರವಿಲ್ಲದಂದು’ ಎಂಬ ಅಲ್ಲಮನ ವಚನಕ್ಕೆ ಲಿಂಗಲೀಲಾ ವಿಲಾಸ ಚಾರಿತ್ರದಲ್ಲಿ ಕಲ್ಲುಮಠದ ಪ್ರಭುದೇವನು ಹೀಗೆ ಟೀಕೆ ಬರೆದಿದ್ದಾನೆ. “ನಾದ ಬಂದುಗಳಿಲ್ಲದಂದು ಎಂಬ ಶದ್ಬಕ್ಕರ್ಥ. ಅಹಂ ಮಮತೆಗಳಿಲ್ಲದಂದು ಕರಣಂಗಳಿಲ್ಲದ ಪರಮಾತ್ಮನೇ ನಿಶ್ಯೂನ್ಯನು. ಅಂತಪ್ಪ ಜೀವ ಪರಮರಿಲ್ಲದಂದು ಎಂಬುದೀಗ ‘ಶೂನ್ಯ ನಿಶ್ಯೂನ್ಯವಿಲ್ಲದಂದು’ ಎಂಬ ಶಬ್ದಕ್ಕರ್ಥ. ಅಂತು ಸಚರಾಚರಂಗಳು ಸಕಲತತ್ವಂಗಳು ತೋರುವ ತೋರಿಕೆಯೇನು ಇಲ್ಲದೆ ಇದ್ದಂದು ಪರಶಿವನು ತಾನೊಬ್ಬನೇ ನಿಷ್ಕಲವಾಗಿರ್ದನೆಂಬುದೀಗ ‘ಸಚರಾಚರವೆಲ್ಲಾ ರಚನೆಗೆ ಬಾರದಂದು ಗೂಹೇಶ್ವರಾ ನಿನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ’ಎಂಬ ಶಬ್ದಕ್ಕರ್ಥ”[4] ಇಂಥ ಕಡೆ ವಚನವನ್ನು ವೀರಶೈವೀಕರಿಸುವ ಜೊತೆಗೆ ಅದನ್ನು ಸರಳೀಕರಿಸುವುದಕ್ಕಿಂತ ಇನ್ನಷ್ಟು ಜಟಿಲಗೊಳಿಸುವ ಕೆಲಸವೇ ನಡೆದಿದೆ. ತುಂಬಾ ಸರಳವಾದ – ನೇರವಾದ ಸಂವಹನಸಾಧ್ಯ ವಚನಗಳಿಗೆ ಕಲ್ಲು ಮಠದ ಪ್ರಭುದೇವ ಟೀಕನ್ನು ಬರೆಯದೆ ಕಾಣಬಂದರ್ಥ ಎಂದು ಹೇಳಿದ್ದಾನೆ. ಅಷ್ಟರ ಮಟ್ಟಿಗೆ ಸದು ಉಪಕಾರವೇ ಸರಿ.

೨೪. ಅರ್ಥದ ಸಂಕೋಚೀಕರಣಟೀಕು

ಶಬ್ದಗಳಿಗೆ ಅರ್ಥವನ್ನು ನೀಡುವಾಗ ವೀರಶೈವ ಧಾರ್ಮಿಕ ಅರ್ಥಗಳನ್ನೇ ಟೀಕುಗಳಲ್ಲಿ ನೀಡುವ ಪರಿಪಾಠವಿದೆ. ಹೀಗಾದಾಗ ಕೆಲವೊಮ್ಮೆ ಟೀಕಿನ ಕೃತಿಗಳಲ್ಲಿ ವೀರಶೈವ ತತ್ವಬೋಧನೆಯೇ ಪ್ರಧಾನವಾಗಿ ವಚನಗಳು ಕಾವ್ಯಗಳೆಂಬುದೇ ಮರೆತುಹೋಗುತ್ತದೆ. ವಚನಗಳೆಲ್ಲವೂ ತತ್ವಶಾಸ್ತ್ರದ ತುಂಡುಗಳಾಗಿ ಕಾಣತೊಡಗುತ್ತವೆ. ಉದಾಹರಣೆ ನೋಡಿ.

ವಚನ:

ಸತ್ತ ಕೊಳಿಯೆದ್ದು ಕೂಗುತ್ತ ಕಂಡೆ!
ಮೊತ್ತದ ಮಾಮರ ಉಲಿಯುತ್ತ ಕಂಡೆ ! ಕತ್ತಲೆ ಬೆಳಗಾಯಿತ್ತ ಕಂಡೆ!
ಹೊತ್ತಾರೆಯೆದ್ದು ಹೊಲಬುದಪ್ಪಿತ್ತ ಕಂಡೆ! ಇದೇನು ಹತ್ತಿತ್ತೆಂದರಿಯೆ ಗೊಹೇಶ್ವರಾ?

ಟೀಕು: ಪರಬ್ರಹ್ಮವೆಂಬುದೀಗ ಸತ್ತುವೆಂಬ ಶಬ್ದಕ್ಕರ್ಥ. ಅಂತಪ್ಪ ಪರಬ್ರಹ್ಮವೆ ತಾನೆಂಬ ನಿಜವನರುಹಿದ ಸಮ್ಯಕ್ ಜ್ಞಾನೋದಯವೇ ಕುಕ್ಕುಟನ ಗುಣಧರ್ಮ ಕರ್ಮದಪ್ಪ ಪಾತ್ರಜ್ಞಾನ ಧ್ವನಿಯೆಂಬುದೀಗ ‘ಸತ್ತ ಕೋಳಿಯೆದ್ದು ಕೂಗಿತ್ತ ಕಂಡೆ’ ನೆಂಬ ಶಬ್ದಕ್ಕರ್ಥ ಅಂತು ಸಮ್ಯಗ್ ಜ್ಞಾನೋದಯದವಾದ ಶರಣನಂಗನ ಷಡುಚಕ್ರದ ಐವತ್ತೆರಡು ಅಕ್ಷರಂಗಳೆಲ್ಲಾ ಸದ್ವಿವೇಕ ದೃಷ್ಟಿಸ್ವರೂಪವನೈದಿ ಶಿವೋಹಂ ಎಂದು ಧ್ವನಿಗೆಯ್ದವೆಂಬುದೀಗ ‘ಮೊತ್ತದ ಮಾಮರನುರಿಯಿತ್ತ ಕಂಡೆ’ ನೆಂಬ ಶಬ್ದಕ್ಕರ್ಥ. ಅಂತಾದ ಕಾರಣ ಅಜ್ಞಾನ ತಿಮಿರವಳಿದು ಸುಜ್ಞಾನ ಪ್ರಕಾಶವಾಯಿತ್ತೆಂಬುದೀಗ ‘ಕತ್ತಲೆ ಬೆಳಗಾಯಿತ್ತೆಂಬ’ ಶಬ್ದಕ್ಕರ್ಥ. ಆ ಸುಜ್ಞಾನೋದಯವೇ ‘ಹೊತ್ತಾರೆ’ ಯೆಂಬ ಶಬ್ದಕ್ಕರ್ಥ. ಅಂತಪ್ಪ ಸುಜ್ಞಾನ ಪ್ರಕಾಶದಿಂದ ಸರ್ವತೋಧಿಕವೂ ತಾನೆಯಾಗಿ ಖಂಡಿತದ ಹೊಲಬುದಪ್ಪಿತ್ತೆಂಬುದೀಗ ‘ಏನು ಹತ್ತಿತ್ತೆಂದರಿಯೆನು’ ಎಂಬ ಶಬ್ದಕ್ಕರ್ಥ.”[5] ಇಲ್ಲಿ ವಚನಗಳನ್ನು ಕೆಲವು ಶಬ್ದ ಘಟಕಗಳನ್ನಾಗಿ ಬಿಡಿಸಿಕೊಂಡು ಅವುಗಳಿಗೆ ವೀರಶೈವ ಧಾರ್ಮಿಕ ಅರ್ಥಗಳನ್ನು ಹೇಳಲಾಗಿದೆ. ಹೀಗೆ ಹೇಳುವಾಗ ಕಾವ್ಯಕ್ಕೆ ಸಹಜವಾಗಿ ಇರುವ ಹಲವು ಓದಿನ ಸಾಧ್ಯತೆಗಳನ್ನು, ಅನುಭವದ ಸಾಧ್ಯತೆಗಳನ್ನು ಈ ಟೀಕು ಮುಚ್ಚಿ ಹಾಕುತ್ತದೆ. ಅರ್ಥದ ವಿವರಣೆಗಿಂತ ಇದು ಅರ್ಥದ ಸಂಕೋಚೀಕರಣದ ಕೆಲಸವೇ ಆಗಿದೆ. ಹಾಗಾಗಿ ಒಂದು ನಿರ್ದಿಷ್ಟ ಅರ್ಥಕ್ಕೆ ಕಾವ್ಯವನ್ನು ಕಟ್ಟಿ ಹಾಕುವ ಕೆಲಸವನ್ನು ಈ ಟೀಕು ಮಾಡಿದೆ. ಇವು ಕೇವಲ ಒಂದೊ – ಎರಡೊ ಸ್ಯಾಂಪಲ್ಲುಗಳಷ್ಟೆ. ಇಂತಹ ಹಲವಾರು ವಿನ್ಯಾಸಗಳು ಈ ಟೀಕು ಸಂಪ್ರದಾಯದಲ್ಲಿವೆ. ಶಬ್ದಾರ್ಥ, ತಾತ್ಪರ್ಯಾರ್ಥ, ಸಾರಾಂಶೀಕರಣಗಳೇ ಇಲ್ಲೆಲ್ಲ ಸಂಭವಿಸಿವೆ.

೨೫. ಸಂಸ್ಕೃತಭೂತವನ್ನು ಹೆಗಲಿಗೆ ಹೇರಿಕೊಳ್ಳುವ ಪ್ರಕ್ರಿಯೆ

ಶಾಂತದೇವರು ಸೇರುವೆ ಮಾಡಿರುವ ಷಟ್ ಪ್ರಕಾರ ಸಂಗ್ರಹದಲ್ಲಿ ಅಲ್ಲಮನ ೩೩೫ವಚನಗಳಿವೆ. ವಿಶೇಷವೆಂದರೆ ಈ ಸಂಪಾದನೆಯ ಆಕೃತಿ ಭಿನ್ನವಾಗಿದೆ. ಇಲ್ಲಿ ಮೊದಲಿಗೆ ಸಂಸ್ಕೃತ ಆಗಮಗ್ರಂಥಗಳಿಂದ ಆಯ್ದ ಶ್ಲೋಕ – ವೃತ್ತಗಳಿಗೆ ಪದಶಃ ಟೀಕು ಅರ್ಥ ನೀಡಲಾಗಿದ್ದು ಆಯಾಯಾ ಸ್ಥಲಗಳಿಗೆ ಹೋಂದುವ ವಚನಗಳನ್ನು ಅಲ್ಲಲ್ಲಿ ಸೇರಿಸುತ್ತ ಬರಲಾಗಿದೆ. ಆದರೆ ವಚನಗಳಿಗೆ ಟೀಕು ಬರೆದಿಲ್ಲ. ಸಂಸ್ಕೃತದ ಹುಚ್ಚು, ಪಾಂಡಿತ್ಯ ಪ್ರದರ್ಶನದ ಹುಚ್ಚು ಇಂತಹ ಕಡೆ ಕೆರಳಿಕೊಂಡಿದೆ. ಶಾಂತದೇವ ತನ್ನ ಷಟ್ ಪ್ರಕಾರ ಸಂಗ್ರದಲ್ಲಿ ೧೦೯೨ ವಚನಗಳೊಂದಿಗೆ ೧೦೫೫ ಸಂಸ್ಕೃತ ಶ್ಲೋಕ – ವೃತ್ತಗಳನ್ನು ಸಂಕಲಿಸಿದ್ದಾನೆ. ಸಂಸ್ಕೃತ ಉದ್ಧರಣೆಗಳನ್ನು ೮೯ ವಿವಿಧ ಆಕರ ಗ್ರಂಥಗಳಿಂದ ಸಂಗ್ರಹಿಸಿದ್ದಾನೆ.[6]

ಟೀಕು ಪರಂಪರೆಯಲ್ಲಿ ಭಿನ್ನ ಸಂದರ್ಭಗಳಲ್ಲಿ ಭಿನ್ನ ಓದುಗಳ ನಾಟ್ಯೀಕರಣ ಸಂಭವಿಸುವ ಸಾಧ್ಯತೆಗಳು ಗೋಚರಿಸುತ್ತವೆ. ಆದರೆ ಅವೆಲ್ಲವೂ ಧಾರ್ಮಿಕ ಓದಿನ ಆಲದ ನೆರಳಿನಲ್ಲಿ ಬೆಳೆಯದೆ ಕಮರುತ್ತವೆ. ತೌಲನಿಕ ಓದು, ತಾತ್ವಕ ಜಿಜ್ಞಾಸೆಯ ಓದು, ವರ್ತಮಾನದ ವ್ಯಾಖ್ಯಾನದ ಓದು, ಚರಿತ್ರೆಯ ವ್ಯಾಖ್ಯಾನದ ಓದುಗಳೆಲ್ಲ ಗೋಚರಿಸುತ್ತವೆಯಾದರೂ ಇವೆಲ್ಲ ಬೆಳೆಯುವುದಿಲ್ಲ. ಅಲ್ಲಮನು ಎತ್ತುವ ಬಹುದೊಡ್ಡ ದಾರ್ಶನಿಕ ಪ್ರಶ್ನೆಗಳು, ಸಾಮಾಜಿಕ ವಿಡಂಬನೆಗಳು, ಮೀಮಾಂಸೆಯ ಪ್ರಶ್ನೆಗಳು, ಗ್ರಹಿಕೆ ಮತ್ತು ಅಭಿವ್ಯಕ್ತಿಯ ಸಂಬಂಧದ ಪ್ರಶ್ನೆಗಳು ಚರ್ಚೆಗೇ ಬರುವುದಿಲ್ಲ. ವೀರಶೈವ ಆಚಾರ, ಅಷ್ಟಾವರಣ, ಷಟ್ ಸ್ಥಲ ಇವುಗಳ ಚರ್ಚೆಯಲ್ಲಿ ಮಿಕ್ಕದಲ್ಲ ಅವಜ್ಞೆಗೆ ಗುರಿಯಾಗಿದೆ. ಎಲ್ಲ ಭಿನ್ನ ಓದುಗಳನ್ನು ನಿಯಂತ್ರಿಸುತ್ತ ಒಂದು ನಿರ್ದಿಷ್ಟ ಧಾರ್ಮಿಕ ಓದನ್ನು ಸ್ಥಾಪಿಸುವ ಕೆಲಸವನ್ನು ಬಹುಪಾಲು ಟೀಕುಗಳು ನಿರ್ವಹಿಸಿವೆ. ವೀರಶೈವ ಧರ್ಮದ ಪ್ರಚಾರ, ಆಚಾರದ ಸ್ಥರೀಕರಣ, ಶಿವಾಧಿಕ್ಯ ಸ್ಥಾಪನೆ, ಗುರುಪರಂಪರೆ ಗುರುವಚನಗಳ ಪವಿತ್ರೀಕರಣ, ಶೈವ ಪರಿವಾರದ ನಿರ್ಮಾಣ, ಅನ್ಯಮತಾಚಾರ ಖಂಡನ, ಮಠಶಾಹಿಯ ಸ್ಥಿರೀಕರಣ ಇತ್ಯಾದಿಗಳಿಗೆ ವಚನಾನು ಸಂಧಾನಗಳೆಲ್ಲ ದುಡಿದಿವೆ. ಒಂದು ನಿರ್ದಿಷ್ಟ ಜಾತಿ – ಸಮುದಾಯದ ಆಚಾರ ಸಂಹಿತೆಯನ್ನು ರೂಢಿಸುವ ಪವಿತ್ರ ಪಠ್ಯಗಳನ್ನಾಗಿ ವಚನಕೋಶವನ್ನು ಬಳಸಲಾಗಿದೆ.ಇಲ್ಲೂ ತಾವು ಅಪೇಕ್ಷಿಸುವ ಆಚಾರ ಸಂಹಿತೆಯನ್ನು ಸಮರ್ಥಿಸಲು ಬಲಕೆ ಮಡಬಹುದಾದ ವಚನಗಳನ್ನು ಎತ್ತಿಕೊಳ್ಳಲಾಗಿದೆ ಮತ್ತು ಮಿಕ್ಕವನ್ನು ಅಲಕ್ಷಿಸಲಾಗಿದೆ. ಕಾಲಾನಂತರದಲ್ಲಿ ಸಾಮಾನ್ಯ ವ್ಯವಹಾರ ಆಗಬಹುದಾಗಿದ್ದ ಜನಭಾಷೆಯನ್ನು ದೇವಭಾಷೆಯನ್ನಾಗಿ ಮಾಡುವ ಯತ್ನದಲ್ಲಿ ಬಹುತೇಕ ಕಡೆ ಸಂಸ್ಕೃತ ಪಾಂಡಿತ್ಯ ಉಳ್ಳವರು ಶ್ರೇಷ್ಠರು ಎಂಬ ನಂಬಿಕೆಯನ್ನು ಬಿತ್ತುವಂತಹ ಕೆಲಸಗಳು ನಡೆದಿವೆ. ಕಲ್ಲುಮಠದ ಪ್ರಭುದೇವ, ಶಾಂತದೇವರು ಮೊದಲಾದ ಟೀಕಾಚಾರ್ಯರು ತಮ್ಮ ಸಂಸ್ಕೃತ ಪಾಂಡಿತ್ಯ ಪ್ರದರ್ಶನದಿಂದ ವಚನಾನುಸಂಧಾನವು ಸಾಮಾನ್ಯರಿಂದ ಆಗುವ ಕೆಲಸವಲ್ಲ ಎಂಬ ನಂಬುಗೆಯನ್ನೇ ಬಿತ್ತಿದ್ದಾರೆ.

೨೬. ಸಂಪಾದನೆಯಿಂದಾಗಿರುವ ತೊಡಕುಗಳು

ಅಂಕಿತ ಪಲ್ಲಟ ಸಂಪಾದನಾ ಪರಂಪರೆಯಲ್ಲಿ ಸಂಭವಿಸಿರುವ ಹಲವು ತೊಡುಕುಗಳಲ್ಲಿ ಒಂದು ಸಹಜವಾದ ತೊಡಕು. ಉರಿಲಿಂಗಪೆದ್ದಿಯ ಅಂಕಿತದ ವಚನವೊಂದು ಒಬ್ಬನಲ್ಲಿ ಬಸವಣ್ಣನ ಅಂಕಿತದಲ್ಲಿ ಪ್ರಕಟವಾದರೆ ಇನ್ನೊಬ್ಬನಲ್ಲಿ ಅಲ್ಲಮನ ಅಂಕಿತದಲ್ಲಿ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ನಿಜವಾಗಿಯೂ ಅದು ಯಾರ ವಚನ ಎಂದು ನಿರ್ಧರಿಸುವುದು ಕಷ್ಟಸಾಧ್ಯವೇ ಸರಿ. ಸಂಪಾದನೆಯ ಪ್ರಕ್ರಿಯೆಯಲ್ಲಿ ಸಹಜವಾಗಿ ಉಂಟಾಗಿರುವ ಹಲವು ತೊಡುಕುಗಳಲ್ಲಿ ಇನ್ನೊಂದು ತೊಡಕೆಂದರೆ ಪಾಠಾಂತರಗಳ ತೊಡಕು. ಒಂದೊಂದು ಪದ, ವರ್ಣ, ಪದಗುಚ್ಚ, ಸಾಲು, ಸಂಬೋಧನೆ, ಹೆಸರುಗಳನ್ನು ತಮ್ಮ ಆಶಯ ಮತ್ತು ಪಠ್ಯ ಸನ್ನಿವೇಶದ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿ ಬಳಸುವಾಗ ಅನೇಕ ಪಾಠಾಂತರಗಳು ಉಂಟಾಗಿವೆ. ಇವುಗಳನ್ನೆಲ್ಲ ಪರಿಹರಿಸುವುದಕ್ಕಿಂತ ಅವು ಇರುವ ಹಾಗೆ ಅವನ್ನು ಒಪ್ಪಿಕೊಳ್ಳುವುದು ಲೇಸೇನೋ. ಇದಕ್ಕೊಂದು ಉದಾ:

ಆಚಾರ ತನುಸಂಬಂಧವಾದಲ್ಲಿ ಶ್ರೀ ಗುರು ಸನ್ನಿಹಿತನು
ಅರಿವು ಮನಸಂಬಂಧವಾದಲ್ಲಿ ಶಿವಲಿಂಗ ಸನ್ನಿಹಿತನು
ಉಭಯವೂ ಸಂಬಂಧವಾದಲ್ಲಿ ಜಂಗಮ ಲಿಂಗ ಸನ್ನಿಹಿತನು
ಇದು ಕಾರಣ ಕೊಡಲ ಚೆನ್ನಸಂಗಯ್ಯನಲ್ಲಿ ತ್ರಿವಿಧಸಂಪನ್ನ ಶರಣನು

ಚೆನ್ನಬಸವಣ್ಣ ಈ ವಚನವನ್ನು ಸಂಪಾದನೆಯ ಬೋಳಬಸವರಾಜದೇವರು ತನ್ನ ಬಸವಸ್ತೋತ್ರದ ವಚನಗಳು ಎಂಬ ಸಂಪಾದಿತ ಕೃತಿಯಲ್ಲಿ ಸ್ವಲ್ಪ ತಿದ್ದುಪಡಿ ಮಾಡಿ ಕೊಂಡಿದ್ದಾನೆ. ಮೂಲತಃ ಈ ವಚನ ಶರಣನ ಗುಣವನ್ನು ಹೆಳುವ ವಚನ. ಆದರೆ ಇದನ್ನು ಬೋಳಬಸವ ಹೇಗೆ ತಿದ್ದಿ ಹೊಂದಿಸಿಕೊಂಡಿದ್ದಾನೆ ನೋಡಿ:

ಆಚಾರ ತನುಸಂಬಂಧವಾದಲ್ಲಿ ಗುರುಸನ್ನಿಹಿತ ಬಸವಣ್ಣನು
ಅರಿವು ಮನಸಂಬಂಧವಾದಲ್ಲಿ ಶಿವಲಿಂಗ ಸನ್ನಿಹಿತ ಬಸವಣ್ಣನು
ಉಭಯವೂ ಸಂಬಂಧವಾದಲ್ಲಿ ಜಂಗಮಲಿಂಗ ಸನ್ನಿಹಿತ ಬಸವಣ್ಣನು
ಇದು ಕಾರಣ ಕೂಡಲ ಚೆನ್ನಸಂಗಯ್ಯನಲ್ಲಿ ತ್ರಿವಿಧಸಂಪನ್ನ ಶರಣ ಬಸವಣ್ಣನು

ಇಲ್ಲಿ ಬೋಳಬಸವ ಶರಣಸ್ತೋತ್ರದ ವಚನವನ್ನು ಬಸವಸ್ತೋತ್ರದ ವಚನವನ್ನಾಗಿ ತಿದ್ದಿ ಮಾರ್ಪಡಿಸಿದ್ದಾನೆ.[7] ಹೀಗೆ ವಚನಗಳನ್ನು ತಮ್ಮ ವರ್ಗೀಕರಣಗಳಿಗೆ ಅನುಗುಣವಾಗಿ ಹೊಂದಾಣಿಕೆಯಾಗುವಂತೆ ಹಲವರು ತಿದ್ದಿಕೊಂಡಿದ್ದಾರೆ. ಇದರಿಂದ ಅಪಾರವಾದ ಪಾಠಾಂತರದ ಸಮಸ್ಯೆಗಳು ಉಂಟಾಗಿವೆ. ಅರ್ಥದ ತೊಡುಕು ಇಲ್ಲಿ ಸಂಭವಿಸಿರುವ ಇನ್ನೊಂದು ತೊಡುಕು ಟೀಕುಗಳಲ್ಲಿ ಬಹುತೇಕ ಕಡೆ ಎಷ್ಟೋ ಬೆಡಗಿನ ವಚನಗಳಿಗೆ ಸಮಾಧಾನಕರ ಅರ್ಥಗಳನ್ನು ನೀಡಲಾಗಿಲ್ಲ. ಒಮ್ಮೊಮ್ಮೆ ಒಬ್ಬೊಬ್ಬರು ಒಂದೊಂದು ಅರ್ಥವನ್ನು ನೀಡಿದ್ದಾರೆ. ಆಗ ಓದುಗರಿಗೆ ಭಿನ್ನ ವ್ಯಾಖ್ಯಾನಗಳಲ್ಲಿ ಯಾವುದನ್ನು ಸ್ವೀಕರಿಸಬೇಕೆಂಬ ತೊಡಕು ಉಂಟಾಗುತ್ತದೆ, ಕೆಲವೊಮ್ಮೆ ಟೀಕುಗಳು ಧಾರ್ಮಿಕ ಅರ್ಥದ ಬಂಧನಗಳಾಗಿಯೆ ಒದಗಿವೆ. ಕಣ್ಣನ್ನು ಕಟ್ಟುವ ಕೆಲಸವನ್ನೇ ಮಾಡಿವೆ.

“ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಟಿ ತರ್ಕವೆಂಬುದು ತಗರ ಹೋರಟೆ” ಮುಂತಾದ ಅಲ್ಲಮನ ಮಾತುಗಳು ಈ ಸಂಕಲನಕಾರರಿಗೆ, ಸ್ಥಲಕಟ್ಟುಕಾರರಿಗೆ ಕೇಳಿಸುವುದೇ ಇಲ್ಲ. ಯಾವುದು ಏನಾಗಬಾರದು ಎಂದು ಅಲ್ಲಮ ಹೇಳುತ್ತಾನೋ ಅದೇ ಅನಂತರ ಆಗಿದೆ. ಅಲ್ಲಮನ ಆಶಯಗಳನ್ನು ಈ ಜನ ತಿರುಚಿದ್ದಾರೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಮಗೆ ಇಂದು ಅಲ್ಲಮನ ವಚನಗಳಲ್ಲಿ ಕಾಣುತ್ತಿರುವ ಆಶಯಗಳು ಅವರಿಗೆ ಬೇಕಿರಲಿಲ್ಲವೇನೋ? ಅಥವಾ ಅವರು ಕಂಡುಕೊಂಡು ಆಶಯಗಳು ಬೇರೆಯೇ ಆಗಿದ್ದುವೇನೋ? ನಮ್ಮ ಪ್ರಕಾರ ಅವೆಲ್ಲ ಒಂದೊಂದು ತೆರನ ಅಓದುಗಳೇ ; ಮಿಸ್ ರೀಡಿಂಗುಗಳೇ ಅವರ ದೃಷ್ಟಿಯಲ್ಲಿ ಅವೆಲ್ಲ ಉಪಯುಕ್ತ ಮಿಸ್ ರೀಡಿಂಗುಗಳೇ ಇರಬಹುದು.

[1] ಹೆಚ್ಚಿನ ವಿವರಗಳಿಗೆ ನೋಡಿ; ಪ್ರಸ್ತಾವನೆ, ಪುಟ ೧೦ – ೧೧, ಎಳಮಲೆಯ ಗುರುಶಾಂತ ದೇವರ ವಚನಸಂಕಲನಗಳು – ಸಂ ವೀರಣ್ಣ ರಾಜೂರ, ಜದ್ಗುರು ತೋಂದಾಟದರ್ಯ ಮಠ ಗದಗ, ೧೯೮೩.

[2] ಹೆಚ್ಚಿನ ವಿವರಗಳಿಗೆ ನೋಡಿ. ಡಾ.ಎಲ್. ಬಸವರಾಜು: ಸರಳ ಶೂನ್ಯ ಸಂಪಾದನೆ: ಪೀಠಿಕೆ. ಪುಟ . ೭ – ೮, ಗೀತಾ ಬುಕ್ ಹೌಸ್, ಮೈಸೂರು.೧೯೯೭.

[3] ಮಹಲಿಂಗದೇವರು ನಿರೂಪಿಸಿದ ಏಕೋತ್ತರ ಶತಸ್ಥಲ – ಸಂ.ಸಂ.ಶಿ ಭೂಸನೂರುಮಠ, ರುದ್ರಾಕ್ಷಿಮಠ ನಾಗನೂರು, ಬೆಳಗಾವಿ.೧೯೭೪.

[4] ಕಲ್ಲುಮಠದ ಪ್ರಭುದೇವರು ವಿರಚಿಸಿದ ಲಿಂಗಲೀಲಾವಿಲಾಸ ಚಾರಿತ್ರ: ಸಂ.ಸಂ.ಶಿ. ಭೂಸನೂರುಮಠ ; ಮೃತ್ಯುಂಜಯ ಸ್ವಮಿಗಳು ಮುರುಗಾಮಠ,ಧಾರವಾಡ :೧೯೫೬ ಪುಟ:೦೮

[5] ಪೂರ್ವೋಕ್ತ ಪುಟ. ೯೧.

[6] ನೋಡಿ. ಶಾಂತದೇವರು ಸೇರುವೆಯ ಮಾಡಿದ ಷಟ್ ಪ್ರಕಾರ ಸಂಗ್ರಹ – ಸಂ ಜಿ.ಎ. ಶಿವಲಿಂಗಯ್ಯ: ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯ ಸಂಸ್ಥಾನ ಮಠ, ಗದಗ:೧೯೮೭.

[7] ಹೆಚ್ಚಿನ ವಿವರಗಳಿಗೆ ನೋಡಿ; ಬಸವಸ್ತೋತ್ರದ ವಚನಗಳು – ಸಂ. ಎಂ. ಎಂ. ಕಲಬುರ್ಗಿ, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿ.ವಿ. ಧಾರವಾಡ. ೧೯೭೬ ಪುಟ.೧೨.