೨೭. ಮೌಖಿಕ ಸಂಪ್ರದಾಯ ಮತ್ತು ಅಲ್ಲಮ

ಮೌಖಿಕ ಸಂಪ್ರದಾಯದಲ್ಲಿ ಅಲ್ಲಮನನ್ನು ಉಲ್ಲೇಖಿಸುವ ಡೊಳ್ಳಿನ ಪದಗಳಿವೆ, ಗೊರವರ ಪದಗಳಿವೆ, ಕೋಲಾಟದ ಪದಗಳಿವೆ. ಮೌಖಿಕ ಮಹಾಕವ್ಯವೂ ಉಂಟು. ಬಸವೇಸ ಚೆನ್ನಬಸವೇಶರ ಕಥೆ ಎಂಬ ಗೊಂದಲಿಗರ ಕಥನಕಾವ್ಯವೊಂದು ಇದ್ದು ಇಲ್ಲಿ ಅಲ್ಲಮ ಪ್ರಸ್ತಾಪವೂ ಇದೆ.[1] ದುಂದುಮೆ ಮೊದಲಾದ ಪದಗಳಿದ್ದು ಅಲ್ಲಮನ ಕುರಿತಾದ ದಂದುಮೆ ಪದವೂ ಇರಬಹುದು.[2] ಬಯಲಾಟಗಳನ್ನು ಅನುಸರಿಸಿಯೆ ಶರಣರನ್ನು ಕುರಿತಂತೆ ಪೌರಾಣಿಕ ನಾಟಕಗಳು ಪ್ರಚಲಿತದಲ್ಲಿವೆ. ಶರಣರ ಕುರಿತು ಸಣ್ಣಾಟ ದೊಡ್ಡಾಟಗಳನ್ನು ಶರಣರಾಟ ಎಂದೇ ಗುರ್ತಿಸುತ್ತ ಬರಲಗಿದೆ. ಅಲ್ಲಮನ ಕುರಿತಂತೆಯೂ ಸಣ್ಣಾಟವಿದೆ.[3] ನೂರೊಂದು ಶರಣರ ಹಂತಿಯ ಹಾಡುಗಳು ಇದ್ದು ಅವನ್ನು ಜಾನಪದ ಕವಿ ಸಾವಳಿಗೇಶ್ವರ ಹಾಡಿದ್ದಾನೆ. ಆದರೆ ಅಲ್ಲಿ ಅಲ್ಲಮನ ಕುರಿತು ಹಾಡು ಇಲ್ಲ.[4] ಬಸವನಿಗೆ ಇದ್ದಷ್ಟು ಜಾನಪದ ಕೃತಿಗಳು ಅಲ್ಲಮನಿಗೆ ಇಲ್ಲದಿರುವುದು ಎದ್ದು ಕಾಣುತ್ತದೆ. ಅಲ್ಲಮನ ಕುರಿತಾಗಿ ಆಧುನಿಕ ಸಂಶೋಧಕರು ಹೆಚ್ಚು ಕೆಲಸ ಮಾಡಿಲ್ಲದೆ ಇರುವ ಕಾರಣಕ್ಕೆ ಅಲ್ಲಮನ ಕುರಿತಾದ ಮೌಖಿಕ ಅನುಸಂಧಾನಗಳು ನಮ್ಮ ಕಣ್ಣಿಗೆ ಎದ್ದು ಕಾಣದೆ ಇದ್ದಾವು.

ಮಂಟೇಸ್ವಾಮಿ ಪರಂಪರೆಯಲ್ಲಿ ಮಂಟೆಯನ್ನು ಮಂಟೇದಲ್ಲಯ್ಯ, ಅಲ್ಲಮಪ್ರಭು ಎಂದೇ ಕರೆಯಲಾಗುತ್ತದೆ. ೧೨ ನೇಶತಮಾನದ ಅಲ್ಲಮನೆಲ್ಲಿ – ವಸಾಹತು ಕಾಲದ ಮಂಟೇಸ್ವಾಮಿಯೆಲ್ಲಿ! ಎಲ್ಲಿಯ ನೆಲ್ಲಿಕಾಯಿ ಎಲ್ಲಿಯ ಸಮುದ್ರದೊಳಗಣ ಉಪ್ಪು! ಆದರೆ ಮಂಟೆಯ ಕತೆಯಲ್ಲಿ ಅಲ್ಲಮನು ಕಲ್ಯಾಣಪ್ರವೇಶ ಮಾಡುವ ಕತೆ ಇದ್ದೇ ಇದೆ. ಅದನ್ನು ಕಲ್ಯಾಣ ಪಟ್ಟಣದ ಸಾಲು ಎಂದೇ ಕರೆಯಲಾಗುತ್ತದೆ. ಈ ಪಟ್ಟಣದ ಸಾಲಿನಲ್ಲಿ ಮಂಟೆ ಮತ್ತು ಅಲ್ಲಮನ ಬೇರೆ ಬೇರೆ ಅಲ್ಲವೇ ಅಲ್ಲ. ಕಲ್ಯಾಣದ ಬಗ್ಗೆ ಅಲ್ಲಮ ನುಡಿದ ಕಾಲಜ್ಞಾನ ಇಲ್ಲಿ ನಿಜವಾಗಿದೆ. ಕುರುಹು ಹಿಡಿದು ಶರಣರೆಲ್ಲ ಕೆಟ್ಟ ಕಲ್ಯಾಣದ ಚಿತ್ರ ಮಂಟೇಸ್ವಾಮಿ ಕಥನದಲ್ಲಿ ಬಹು ಚೆನ್ನಾಗಿ ಮೂಡಿ ಬಂದಿದೆ. ಅಲ್ಲಮನು ಜನ – ಜಾನಪದವನ್ನು ಸೇರಿ ಬೆರೆತು ಹೋಗಿರುವುದರ ಪ್ರತೀಕವಾಗಿ ಮಂಟೇಸ್ವಾಮಿ ಕಥನದಲ್ಲಿ ಚಿತ್ರಿತವಾಗಿದ್ದಾನೆ.

ಕೊಡೇಕಲ್ಲು ಪರಂಪರೆಯಲ್ಲಿ ಕೊಡೇಕಲ್ಲು ಬಸವನನ್ನು ಬಸವಣ್ಣ ಪುನರವತಾರವೆಂದೇ ಭಾವಿಸಲಾಗುತ್ತದೆ. ಅದರೆ ಮಂಟೇಸ್ವಾಮಿ ಪರಂಪರೆಯಲ್ಲಿ ಮಂಟೆಯನ್ನು ಅಲ್ಲಮನ ಪ್ರತಿರೂಪವೆಂದೇ ಭಾವಿಸಲಾಗುತ್ತದೆ. ಕುಂಬಾರ ಗುಂಡಯ್ಯ, ಕಟುಗರ ಸಂಗಯ್ಯ, ಅಲ್ಲಮ, ಮಂಟೇಸ್ವಾಮಿಯರೆಲ್ಲ ಇಲ್ಲಿ ಕಾಲವಳಿದು ಒಂದಾಗಿ ಹೋಗುತ್ತಾರೆ. ಮಂಟೇಕಾವ್ಯದ ಕಲ್ಯಾಣಪಟ್ಟದಲ್ಲಿ ಸಾಲಿನಲ್ಲಿ ಲಕ್ಷದ ತೊಂಬತ್ತಾರು ಸಾವಿರ ಜನ ಜಂಗಮರು ಮುನಿಸಿಕೊಂಡು ಹೋಗುವುದು ಬಸವ ಮಾಂಸದ ಪಟ್ನವನ್ನೂ, ನೀಲಮ್ಮ ಸಾರಾಯಿ ಬುಂಡೆಯನ್ನು ಹೊತ್ತು ತಂದರೆಂಬ ಕಾರಣಕ್ಕೆ ಅಲ್ಲಮನ ಮೈಯೇ ಮಾಂಸವಾಗಿ, ತಲೆಯೆ ಸಾರಾಯಿ ಬುಂಡೆಯಾಗಿ ಇಲ್ಲಿ ಜಂಗಮರಿಗೆ ಕಂಡಿದೆ.

ದಲಿತರ ಹರಳಯ್ಯನ ಅಟ್ಟೆ ಉನಿಯಕುವ ತಿಪ್ಪೆನೀರಿಗೆ ಬಿದ್ದು ಬಸವನ ಲಿಂಗ ಸೂಚಿಸುವುದು ಬಸವನ ಪಥ ಚಲಿಸಬೇಕಗಿರುವ ಹದಿಯನ್ನೆ. ಸಾರಾಯಿ ಬುಂಡೆ ಮಾಂಸದ ಪಟ್ನಗಳು ನಿಜವಗಿಯೂ ಬಸವ ಸಮುದಾಯವು ಮಾಡುತ್ತ ಬಂದಿರುವ ಸಸ್ಯಾಹಾರದ ರಾಜಕಾರಣಕ್ಕೆ ನೀಡುತ್ತಿರುವ ಹೊಡೆತವೇ ಆಗಿವೆ. ಇನ್ನು ಕೀವು – ಕಷ್ಠರೋಗಿಗಳಂತೂ ಭಿಕ್ಷುಕ – ಬಡವರನ್ನು ಬಸವ ಸಮುದಾಯ ದೂರವಿಟ್ಟಿರುವ ಸಂಗತಿಯನ್ನೇ ಹೇಳುತ್ತಿವೆ. ಕಲ್ಯಾಣ ಕ್ರಾಂತಿಯು ಮಠಸಂಸ್ಕೃತಿಯಾಗಿ ಬೆಳೆದ ನಂತರದಲ್ಲಿ ಅದಕ್ಕೊಂದು ಪ್ರಬಲವಾದ ಪ್ರತಿಭಟನೆಯನ್ನು ಮಂಟೆಕಥನ ತೋರುತ್ತಿದೆ. ಮಂಟೇಸ್ವಾಮಿ ಕಾವ್ಯವು ಬಸವಕಾಲದ ನಡೆ ಮತ್ತು ನುಡಿಗಳ ಸಮರಸವನ್ನು ಮತ್ತು ಆನಂತರದ ನಡೆ ಮತ್ತು ನುಡಿಗಳ ಒಡಕುಗಳನ್ನು ಚೆನ್ನಾಗಿ ಅಭಿನಯಿಸುತ್ತಿದೆ. ಮಂಟೇಸ್ವಾಮಿಯನ್ನು ಈ ಮಂಟೆ ಕುಲದ ಮಾದಿಗರು ಬಸವನೊಂದಿಗೆ ಇಟ್ಟು ನೋಡುತ್ತಿಲ್ಲ. ಅಲ್ಲಮನೊಂದಿಗೆ ನೋಡುತ್ತಿದ್ದಾರೆ ಅಂಬುದೇ ಕಲ್ಯಾಣ ಕ್ರಾಂತಿಗೆ ಕೆಲವರ್ಗವು ಬರೆಯುತ್ತಿರುವ ಭಾಷ್ಯವಾಗಿದೆ. ವಚನೋತ್ತರಕಾಲೀನ ವೀರಶೈವ ಸಮುದಾಯದ ನಡಾವಳಿಯ ಕೆಳವರ್ಗದ ಟೀಕು ಮಂಟೇ ಕಾವ್ಯವೇ ಆಗಿದೆ. ಇಲ್ಲಿ ಕಲ್ಯಾಣ ಪಟ್ಟಣದ ಸಾಲಿನಲ್ಲಿ ಮಂಟೇದಲ್ಲಮ ಕಲ್ಯಾಣ ವೆಂಬ ಕಲ್ಯಾಣ ಸುದ್ದಿಯ ರೂಪಕ. ಕಲ್ಯಾಣದ ನಿಜದ ಲಿಂಗಗಳೆಲ್ಲ ಕೊಕ್ಕೋರು (ತಲಕಾಡು) ಕಣಿವೆಗೆ ಬರುವುದು ಕೂಡ ಶರಣರ ಚಲನೆಯ ದ್ಯೋತಕವಾಗಿದೆ.

೨೮. ಬಾಳಾಟ, ಕ್ರಿಯಾಶೀಲತೆ ಮತ್ತು ಪಾಂಡಿತ್ಯಗಳ ನಡುವಿನ ಮುಖಾಮುಖಿ

ಇಂದು ವಚನಾನುಸಂಧಾನ ಚರಿತ್ರೆಯನ್ನು ಗಮನಿಸಿದರೆ ಅಲ್ಲಿ ನಮ್ಮ ಕನ್ನಡ ವಿಮರ್ಶೆಯ ಪ್ರಾಗ್ರೂಪಗಳನ್ನು ಕಾಣಬಹುದು. ಸಾಹಿತ್ಯದ ಅನುಸಂಧಾನವು ಮೀಮಾಂಸೆಯ ಹಿನ್ನೆಲೆಯಿಂದಲೇ ನಡೆಯಬೇಕು ಎಂದೇನಿಲ್ಲ. ಬಾಳಿನ ನೆಲೆಯಿಂದಲೂ ನಡೆಯಬಹುದು. ಆನಂದಾನುಭವ ಮಾತ್ರವೇ ಓದಿನ ಗುರಿಯಲ್ಲ. ಸಾಹಿತ್ಯವನ್ನು ಬಾಳುವ ಸಾಧ್ಯತೆಗಳನ್ನು ಶೋಧಿಸುವುದೂ ಕೂಡ ಅದರ ಗುರಿಯೇ. ಇದು ಆಚರಣೆಯ ವಚನಗಳು – ಸಂಬಂಧದ ವಚನಗಳು – ಶೂನ್ಯಸಂಪಾದನೆಗಳು ಮೊದಲಾದ ಅನುಸಂಧಾನಗಳಿಂದ ತಿಳಿಯುತ್ತದೆ. ಈ ಅನುಸಂಧಾನಗಳು ಬಾಳಿಗಾಗಿ ಸಾಹಿತ್ಯದ ಓದನ್ನು ಮತ್ತು ಬಳಕೆಯನ್ನು ಹೇಗೆ ಮಾಡಬಹುದೆಂಬ ಮಾದರಿಗಳಾಗಿವೆ. ನಮ್ಮ ಸ್ಥಾಪಿತ ಮೀಮಾಂಸೆಯ ಎಲ್ಲ ಹಲ್ಲು ಉಗುರುಗಳನ್ನು ಈ ಅನುಸಂಧಾನಗಳು ಕತ್ತರಿಸಿ ಹಾಕಿವೆ. ಸಾಹಿತ್ಯ ವಿಮರ್ಶೆಯ ಸ್ವರೂಪದ ಕುರಿತು ತಮ್ಮದೇ ಮಾದರಿಗಳನ್ನು ಇವು ನಿರ್ಮಿಸಿವೆ. ಯಾವುದೇ ಒಂದು ಜನಸಮುದಾಯ ತನ್ನದೇ ಸಂಪಾದನೆಯ ಮಠಗಳನ್ನು ಸ್ಥಾಪಿಸಿಕೊಂಡು, ಟೀಕಿನ ಮಟಗಳನ್ನು ಸ್ಥಾಪಿಸಿಕೊಂಡು ಸಾಂಸ್ಥಿಕವಾಗಿ ಸಾಹಿತ್ಯವನ್ನು ಪವಿತ್ರೀಕರಿಸುವ – ಧಾರ್ಮೀಕರಿಸುವ ಕೆಲಸ ಮಾಡುವಾಗಲೂ ಸಾಹಿತ್ಯವು ಬಾಳಿಗೆ ಗುರಿಯಾಗುವುದಾದರೆನಮಗೆ ಬೇಕು ಇಲ್ಲವಾದರೆ ಅದು ಅಲಕ್ಷ್ಯಾರ್ಹ ಎಂದೇ ಹೇಳುತ್ತ ಬಂದಿದೆ. ಹೀಗೆ ಮಡುವಾಗ ಕಟ್ಟಾಣಿಕೆಯ ದೃಷ್ಟಿಯಿಂದ – ರಾಚನಿಕ ಸೌಂದರ್ಯ, ಕಾವ್ಯಸೌಂದರ್ಯಗಳು ಹಿನ್ನೆಲೆಗೆ ಸರಿಯುತ್ತದೆ. ಸಾಹಿತ್ಯವು ನಿಜವಾಗಿಯೂ ಚೆನ್ನಾಗಿ ಬರೆಯಲ್ಪಟ್ಟದೆಯೋ ಎಂಬುವುದಕ್ಕಿಂತ ಅದು ಸಾಮಾಜಿಕವಾಗಿ ಉಪಯಯತ್ತವೂ ಎಂಬ ಪ್ರಶ್ನೆಯೇ ಮುಖ್ಯವಾಗುತ್ತದೆ. ಸಾಹಿತ್ಯದ ಶ್ರೇಷ್ಠತೆ ಉತ್ತಮಿಕೆಗಳು ನಿಜಕ್ಕೂ ನಿರ್ಧರಿತವಾಗುವುದು ಇಲ್ಲೆಲ್ಲ. ಅದರ ಸಾಮಾಜಿಕ ಬಳಕೆಯ ಸಾಧ್ಯತೆ – ಪ್ರಸ್ತುತತೆ – ಉಪಯುಕ್ತತತೆ – ಉಪಯುಕ್ತತೆಗಳ ಮೂಲಕವೇ ವಿನಾ ರಾಚನಿಕ ಸೌಂದರ್ಯದಿಂದ ಅಲ್ಲ.

ಈ ಇಡೀ ಅನುಸಂಧಾನದ ಚಿರಿತ್ರೆಯನ್ನು ಗಮನಿಸಿದರೆ ಕ್ರೀಯಾಶೀಲ ಮಧ್ಯಪ್ರವೇಶವನ್ನು ಕಾಲಕಾಲಕ್ಕೆ ಕ್ರೀಯಾಶೀಲ ಮಧ್ಯೆಪ್ರವೇಶದ ಮೂಲಕ ಮತ್ತು ಪಾಂಡಿತ್ಯದ ಮೂಲಕ ಮುಖಾಮುಖಿ ಮಾಡುವ ಕೆಲಸಗಳು ನಡೆದಿವೆ ಎನ್ನಿಸುತ್ತದೆ. ಹರಿಹರ, ಚಾಮರಸ, ಎಳಂದೂರು ಹರೀಶ್ವರ, ಪರ್ವತೇಶ, ಕಡೇಕಲ್ಲು ರಾಚಪ್ಪಯ್ಯ, ಶಿವಾನಂದ, ದುರು ದುಂಡೀಶ, ಶಿವಗಣಪ್ರಸಾದಿ, ಹಲಗೆದೇವ, ಗುಮ್ಮಳಾಪುರ, ಗೂಳೂರು ಮೊದಲಾದವೆರಲ್ಲಾ ಅಲ್ಲಮನನ್ನು ತಮ್ಮ ಕ್ರೀಯಾಶೀಲ ಮಧ್ಯಪ್ರವೇಶದ ಮೂಲಕ ಮುಖಾಮುಖಿ ಆಗಿದ್ದರೆ; ಕಲ್ಲುಮಠದ ಪ್ರಭುದೇವ, ಮಹಲಿಂಗ, ಜಕ್ಕಣ, ಎಳಮಲೆಯ ಗುರುಶಾಂತ, ಶಾಂತದೇವ ಮೊದಲಾದವರೆಲ್ಲ ಅಲ್ಲಮನನ್ನು ಪಾಂಡಿತ್ಯದ ಮಧ್ಯೆಪ್ರದೇಶದ ಮೂಲಕ ಮುಖಾಮುಖಿಯಾಗಿದ್ದಾರೆ. ಹಾಗಾಗಿ ಈ ಅನುಸಂಧಾನದ ಪರಂಪರೆಯನ್ನು ಕ್ರೀಯಾಶೀಲತೆ ಮತ್ತು ಪಾಂಡಿತ್ಯಗಳ ಮುಖಾಮುಖಿ ಎಂದು ತಾತ್ವೀಕರಿಸಬಹುದು.

ಈ ದೃಷ್ಟಿಯಿಂದ ಈಅನುಸಂಧಾನ ಚರಿತ್ರೆ ಗಮನಿಸಿದರೆ ನಮ್ಮ ವಿಮರ್ಶೆಯ ವ್ಯಾಖ್ಯಾನವೊಂದನ್ನು ಕಟ್ಟಿಕೊಳ್ಳಬಹುದು ಎನ್ನಿಸುತ್ತದೆ. ವಿಮರ್ಶೆಯೆಂದರೆ ಕ್ರಿಯಾಶೀಲತೆ ಮತ್ತು ಪಾಂಡಿತ್ಯಗಳ ಮುಖಾಮುಖಿ. ನಮಗೆ ಬೇಕಾಗಿರುವ ತತ್ವಗಳನ್ನು ಆಚಾರದಿಂದಲೇ ಕಟ್ಟಿಕೊಳ್ಳಬೇಕಲ್ಲದೆ, ತತ್ವವನ್ನು ಆಚರಿಸುವುದರಿಂದ ಅಲ್ಲ ಅಲ್ಲವೇ? ವಿಮರ್ಶೆ ಎಂದರೆ ಮೀಮಾಂಸೆಯ ಆಚರಣೆಯೇ ವಿಮರ್ಶೆ ಎಂಬ ನಂಬಿಕೆಯೊಂದು ನಮ್ಮಲ್ಲಿ ಚಾಲ್ತಿಯಲ್ಲಿದೆ. ಹಾಗೆ ನೋಡಿದರೆ ನಾವು ಈ ನೂರು ನೂರೈವತ್ತು ವರ್ಷಗಳಲ್ಲಿ ಭಾರತೀಯ ಕಾವ್ಯ ಮೀಮಾಂಸೆಯ ಹೆಸರಿನಲ್ಲಿ ನಡೆಯುತ್ತ ಬಂದಿರುವ ಸಂಸ್ಕೃತ ಕಾವ್ಯಮೀಮಾಂಸೆಯಿಂದ ಆಗಿರುವ ಬಹುದೊಡ್ಡ ಪರಿಣಾಮವೆಂದರೆ ಇದೇ. ವಮರ್ಶೆ ಎಂದರೆ ಮೀಮಾಂಸೆಯ ಆಚರಣೆ ಎಂಬುದು. ಇದೊಂದು ಬಿಕ್ಕಟ್ಟು ಎಂದರೂ ನಡೆಯುತ್ತದೆ ಈ ಬಿಕ್ಕಟ್ಟಿನಿಂದ ನಿಜಕ್ಕೂ ಪಾರಾಗಬೇಕಿದೆ. ಆಚಾರವು ನಿಜಕ್ಕೂ ಸದಾ ಜಡ ತತ್ವದ ಪಾಲನೆಗಾಗಿ ಮಾತ್ರವೆ ಜರಿಯಾದಾಗ ಸಮಾಜ ಜಡ್ಡುಗಟ್ಟಿ ಹೋಗುತ್ತದೆ. ಆಚಾರವು ತತ್ವವಾಗುವ ಮತ್ತು ತಾತ್ವೀಕರಿಸಿದ ತತ್ವಗಳನ್ನು ಸ್ಥಾಪಿತಗೊಳಿಸುವ ಹಾಗೂ ಆಸ್ಥಾಪಿತ ತತ್ವಗಳನ್ನು ಆಚಾರಗಳನ್ನಾಗಿ ಹೆರಲು ಬಲವಂತಿಸುವ – ಹುನ್ನಾರ ಪ್ರಕ್ರಿಯೆಯೇ ನಮ್ಮಲ್ಲಿ ಉದ್ದಕ್ಕೂ ನಡೆಯುತ್ತ ಬಂದಿದೆ. ಕನ್ನಡ ವಿಮರ್ಶೆಯ ಗತಿಮತಿಗಳನ್ನು ತಿಳಿಯಲು ನಿಜವಾಗಿಯೂ ನಾವಿಂದು ಇಂಗ್ಲೀಷ್ ಅಥವಾ ಸಂಸ್ಕೃತದ ಕಡತಂದ ತತ್ವಗಳನ್ನು ಕಲಿತು ಪ್ರಯೋಗಿಸಿ ಬಸವಳಿಯುವುದಕ್ಕಿಂತ ನಮ್ಮ ಆಚರಣೆಯನ್ನು ತಾತ್ವೀಕರಿಸಿಕೊಳ್ಳಬೇಕಾದ ಅಗತ್ಯವಿದೆ. ನಿತ್ಯ ಆಚರಣೆಯ ತಾತ್ವೀಕರಣವೇ ನಮ್ಮ ನಿಜದ ಹಾದಿಯಾಗಬೇಕು. ಆ ಮೂಲಕ ನಮ್ಮದೇ ನವೀನ ನಡಾವಳಿಗಳ ಕಡೆಗೆ ಸಾಗುವುದೇ ನಮ್ಮ ನಿಜದ ಹಾದಿಯಾಗಬೇಕು ಹರಿಹರ, ಚಾಮರಸರ ಕೃತಿಗಳನ್ನು ವಚನಗಳ ವಿಮರ್ಶೆ ಎಂದು ಕರೆದರೆ ಖಂಡಿತಾ ತಪ್ಪಿಲ್ಲ. ವಿಮರ್ಶೆಯು ಗದ್ಯರೂಪಿ ಜಿಜ್ಞಾಸೆಯಾಗಿದ್ದರೆ ಮಾತ್ರ ಅದು ವಿಮರ್ಶೆ ಎನಿಸಿಕೊಳ್ಳುತ್ತದೆ; ಕಾವ್ಯರೂಪದಲ್ಲಿದ್ದರೆ ಅದು ವಿಮರ್ಶೆಯಲ್ಲ ಎಂದೇನೂ ಅಲ್ಲವಲ್ಲ. ಅಧ್ಯಯನ, ಪಾರಾಯಣ, ಪಠಣ, ಕೇಳಿಕೆ, ಶಿವಕಥಾಪ್ರಸಂಗ, ಶೂನ್ಯಸಂಪಾದನೆ,ಟೀಕು ರಚನೆ ಎಲ್ಲವೂ ನಮ್ಮ ವಿಮರ್ಶೆಯ ಪ್ರಾಗ್ರೂಪಗಳೇ ಆಗಿವೆ ಎಂದು ನಾವಿಂದು ತಿಳಿಯಬೇಕಾಗಿದೆ.[5]

ಕೊನೆಯ ಮೊದಲು ಒಂದು ಮಾತು : ಲೋಕವೆಲ್ಲವೂ ಹಲ್ಲಣವ ಹೊತ್ತು ಬಳಲುತ್ತೈದಾರೆ ಎಂದು ಅಲ್ಲಮ ಹೇಳಿದಂತೆ ಅಲ್ಲಮೋತ್ತರ ಲೋಕವು ಹಲ್ಲಣವ ಹೊತ್ತು ಬಳಲುತ್ತ ಬಂದಿವೆ. ಅರಿವೇ ಗುರುವೆಂದು ಗುರುವನ್ನೇ ನಿರಾಕರಿಸಿದ ಅಲ್ಲಮ ಅನಂತರದಲ್ಲಿತಾನೊಬ್ಬ ಗುರುವಾಗಿ ಕೆತ್ತಲ್ಪಟ್ಟಿದ್ದಾನೆ. ಪ್ರಶ್ನಾತೀತವಾಗಿ ಯಾವ ಪೂರ್ವ ಪರಂಪರಯನ್ನು ಒಪ್ಪದಿರುವ ಅಲ್ಲಮನ ವಿಚಾರವನ್ನು ತಮ್ಮದೇ ಆಚಾರಕ್ಕೆ ಒಗ್ಗಿಸಿ ವೀರಶೈವರು ಅವನನ್ನು ವೀರಶೈವೀಕರಣ ಮಾಡಿದ್ದಾರೆ. ಒಂದು ನಿರ್ದಿಷ್ಟ ಸಮುದಾಯಕ್ಕೆ ಅಧಿಕಾರವನ್ನು ನೀಡುವ ಅಧಿಕಾರ ರಾಜಕಾರಣಕ್ಕೆ ಅಲ್ಲಮನನ್ನು ಬಳಸಿದ್ದಾರೆ. ಅಲ್ಲಮನ ಕುರಿತ ಸಂಕಥನಗಳೆಲ್ಲವೂ ಅಲ್ಲಮನನ್ನು ಅಯಾ ಕಾಲದ ವೀರಶೈವ ಸಮುದಾಯ ಅಧಿಕಾರ ರಾಜಕಾರಣಕ್ಕೆ ಬಳಸಿದ ಸಂಕಥನಗಳೇ ಆಗಿವೆ. ಅಲ್ಲಮ ಯಾಕೆ ಹೀಗಾದರಲ್ಲ ? ಕಾದಲ್ಲಿಯೂ ಪರಂಪರೆಯನ್ನು – ಚರಿತ್ರೆಯನ್ನು ಗುರುತರವಾಗಿ ಹೊತ್ತುಕೊಳ್ಳುವವರು ತಮ್ಮ ಅಧಿಕಾರಕ್ಕಾಗಿಯೆ ಅಥವಾ ತಮ್ಮ ಯಾಜಮಾನ್ಯಕ್ಕಾಗಿಯೇ, ಅಥವಾ ಯಾಜಮಾನ್ಯದ ಕಡೆಗಿನ ನಿತ್ಯ ಚಲನೆಗಾಗಿಯೇ ಸದಾ ಹೊತ್ತು ಸಾಗುತ್ತಿರುತ್ತಾರೆ. ಅಲ್ಲಮನ ಪ್ರಸಂಗದಲ್ಲಿಯೂ ಹೀಗೇ ಆಗಿದೆ.

—-
ಪೂರಕ ಟಿಪ್ಪಣಿ

೧. ಸರಣರು ಆಚರಿಸಿಬೇಕಾದ ಸದಾಚಾರಗಳನ್ನು, ಆಚರಿಸಬಾರದಾದ ದುರಾಚಾರಗಳನ್ನು ಹೇಳುವ, ನಡಾವಳಿ ನಿರ್ಮಾಣದ ವಚನಗಳೇ ಆಚರಣೆಯ ವಚನಗಳು. ಇಲ್ಲಿಗುರು, ಲಿಂಗ, ಜಂಗಮ, ಪಾದೋದಕಗಳಾದ (ಲಿಂಗಾಚಾರ, ಸದಾಚಾರ, ಶೈವಾಚಾರ, ಭೃತ್ಯಾಚಾರ,ಗಣಾಚಾರ) ಪಂಚಾಚಾರಗಳೂ ವ್ಯಕ್ತವಾಗುತ್ತವೆ. ವೀರಶೈವ ಷಡಂಗಗಳಾದ ವಿಶ್ವಾಸ, ನಿಷ್ಟೆ, ಸಾವಧಾನ, ಸ್ವಾನುಭಾವ, ಜ್ಞಾನ, ಸಮರಸಗಳೂ ಇವೆ. ಶರಣನಾದವನು ತಾನು ಸಂಬಂಧ ಹೊಂದಬೇಕಾದ ಷಟ್ ಸ್ಥಲ, ಅಷ್ಟಾವರಣ,ಪಂಚಾಚಾರಗಳನ್ನು ನಿರೂಪಿಸುವ ವಚನಗಳೇ ಸಂಬಂಧದ ವಚನಗಳು. ಶಿವ ಮತ್ತು ಶರಣನ, ಲಿಂಗಾಂಗ ಸಾಮರಸ್ಯದ ಕಡೆಗಿನಯನವನ್ನು ಹೇಳುವ ವಚನಗಳೇ ಸಂಬಂಧದ ವಚನಗಳು. ಇವೆರಡನ್ನು ಒಟ್ಟಿಗೇ ಹೇಳುವ ವಚನಗಳೇ ಸಂಬಂಧಾಚರಣೆಯ ವಚನಗಳು. ಶರಣರನ್ನು ಗುಣಗಾನ ಮಾಡುವ – ಅವರ ವ್ಯಕ್ತಿತ್ವ ನಿರ್ವಚನವನ್ನು ಮಾಡುವ ವಚನಗಳೇ ಶರಣಸ್ತೋತ್ರದ ವಚನಗಳು. ಲಿಂಗ ಮಹಿಮೆಯನ್ನು ಹೆಳುವ ಮತ್ತು ಶಿವನನ್ನು ಸ್ತುತಿಸುವ ವಚನಗಳೇ ಲಿಂಸ್ತೋತ್ರದ ವಚನಗಳು. ಶರಣಸತಿ ಲಿಂಗಪತಿ ಭಾವದಿಂದ ತಾವು ಅನುಭವಿಸುವ ಅಗಲುವಿಕೆ – ಕೂಡುವಿಕೆ – ಹಂಬಲಿಕೆ – ಕನಸು – ವಾಸ್ತವಾದಿಗಳನ್ನು ಹೇಳುವ ವಚನಗಳೇ ಲಿಂಗವಿಕಳಾವಸ್ಥೆಯ ವಚನಗಳು. ನೂರೊಂದು ಸ್ಥಲಗಳನ್ನು ಕುರಿತ ವಚನಗಳೇ ಏಕೋತ್ತರ ಶತಸ್ಥಲಗಳು. ಎಂಟು ಆವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಕ್ಷಿ, ಮಂತ್ರಗಳನ್ನು (ನಮಃ ಶಿವಾಯ ಎಂಬ ಪಂಚಾಕ್ಷಿರಿ ಮಂತ್ರ) ಕುರಿತ ವಚನಗಳು ಅಷ್ಟಾಚರಣದ ವಚನಗಳಾದರೆ ೧. ಭಕ್ತ ೨. ಮಹೇಶ್ವರ ೩. ಪ್ರಸಾದಿ ೪. ಪ್ರಾಣಲಿಂಗ ೫. ಶರಣ ೬. ಐಕ್ಯ ಹೀಗೆ ಆರು ಸ್ಥಲಗಳ ಕುರಿತ ವಚನಗಳೇ ಷಡ್ ಸ್ಥಲ ವಚನಗಳಾಗಿವೆ.

[1] ಜನಪದ ಸಾಹಿತ್ಯ ದರ್ಶನ ಭಾಗ ೧ – ಸಂ. ಆರ್. ಸಿ. ಹಿರೇಮಠ, ಕರ್ನಾಟಕ ವಿ. ವಿ. ಧಾರವಾಡ, ೧೯೭೪, ಪುಟ:೨೭೧.

[2] ಅದೇ ಭಾಗ ೪ – ಪುಟ:೪೯.

[3] ಶರಣರಾಟಗಳಿಗೆ ನೋಡಿ ಅದೇ ಭಾಗ ೩ – ಪುಟ :೧೦೩.

[4] ಕನ್ನಡ ಜನಪದ ಗೀತೆಗಳು – ಡಾ. ಬಿಎಸ್. ಗದ್ದಗಿಮಠ ಕರ್ನಾಟಕ ವಿ.ವಿ. ಧಾರವಾಡ ೧೯೬೯, ಪುಟ ೨೩೧ ರಿಂದ ೩೧೯. (ಡಾಕ್ಟರೇಟ್ ಪ್ರಂಬಂಧ).

[5] ಹೆಚ್ಚಿನ ವಿವರಗಳಿಗೆ ನೋಡಿ: ಕನ್ನಡ ವಿಮರ್ಶಾ ಸಂಸ್ಕೃತಿ ವಿನ್ಯಾಸ ಮತ್ತು ತಾತ್ವಿಕತೆ: ಡಾ. ರಾಮಲಿಂಗಪ್ಪ. ಟಿ. ಬೇಗೂರು: ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿಎಚ್.ಡಿ ನಿಬಂಧ :ಅಪ್ರಜಟಿತ. ೨೦೦೮.