ಕೌ. : ನನಗೆ ಬೇಕಾದುದು ನಿನ್ನ ಅಂಗಸಂಗ.

ಸಾ. : ಮೂಢಾ, ಹೆಣ್ಣಿನ ಅಂಗಸಂಗದಿಂದ ನಿಜವಾದ ಸುಖ ದೊರೆಯುವುದೇ?

ಕೌ. : ಹಾಗಾದರೆ, ಆ ಸುಖ ಮತ್ತೇತರಿಂದ ದೊರೆಯುತ್ತದೆ ?

ಸಾ. : ನೀನು ಪರಮಾತ್ಮನ ಸಂಗಸುಖವನ್ನು ಹೊಂದು. ಅಂದರೆ ಸಂಪೂರ್ಣ ಸುಖಿಯಾಗುವಿ.

ಕೌ. : ಥೂ, ನೀನು ಮೊದಲಿನ ಮೆಟ್ಟಿಗೇ ಬಂದೆ ತಿರುಗಿ ಶಾಸ್ತ್ರದ ಸಂತೆಯನ್ನೇ ಬಿಚ್ಚಿದೆ.ನಿನ್ನ ಅಂಗಸುಖವನ್ನು ಬಯಸಿದ ನನಗೆ ದೈವೀಸುಖವನ್ನು ಪಡೆಯೆಂದು ಬೋಧ ಮಾಡುತ್ತಿರುವಿಯಲ್ಲ !

ಸಾ. : ಕೌಶಿಕಾ, ನೀನು ಬಯಸುವದು ಸುಖವೇ ಅಲ್ಲವೆ ? ಈ ಲೋಕದ ಮಾನವರೆಲ್ಲಾ ಸುಖವನ್ನೇ ಬಯಸುತ್ತಾರೆ.ಆದರೆ ಆ ಸುಖವು ಇರತಕ್ಕ ಸ್ಥಾನವು ಗೊತ್ತಿಲ್ಲದೆ, ಬೇವಿನ ಗಿಡದಲ್ಲಿ ಮಾವಿನ ಹಣ್ಣನ್ನು ಹುಡುಕಿದಂತೆ ದುಃಖಮಯವಾದ ಈ ಸಂಸಾರದಲ್ಲಿ ಸುಖವನ್ನು ಹುಡುಕಿದರೆ ಅದು ಸಿಗುವ ಬಗೆ ಹೇಗೆ ?

ಕೌ. : ಏನು ?ಈ ಸಂಸಾರದಲ್ಲಿ ಸುಖವಿಲ್ಲವೆ ? ತಂದೆ : ತಾಯಿಗಳ ಸುಖ, ಮಡದಿ : ಮಕ್ಕಳ ಸುಖ, ಬಂಧು : ಬಾಂಧವರ ಸುಖ ಹೀಗೆ ಸುಖದ ಬುಗ್ಗೆಯಾಗಿರುವ ಈ ಪ್ರಪಂಚ ದುಃಖದ ಮಡುವೆಂದು ಹೇಳುವ ಈ ನಿನ್ನ ಮಾತು ಸೋಜಿಗವಲ್ಲವೆ?

ಸಾ. : ಕೌಶಿಕಾ, ಹಾದಿಯಲ್ಲಿ ಹೋಗುವವನಿಗೆ ಅಪ್ಪಾ ಎಂದು ಕರೆದರೆ ಅವನು ಅಪ್ಪನಾಗಬಲ್ಲನೆ? ಅದರಂತೆ ಹಾದಿ ಸೋಬತಿಯಾದ ಈ ಮಡದಿ – ಮಕ್ಕಳು ನಿಜವಾದ ಬಂಧುಗಳು ಆಗಬಲ್ಲರೆ?ಅವರಿಂದ ದೊರೆಯುವ ಸುಖ ಶಾಶ್ವತವೆಂದು ನಂಬಬಹುದೆ ? ಬಿಸಿಲಿನಿಂದ ಬಾಯಾರಿ ಬಳಲಿ ಬೆಂಡಾಗಿ ವಿಶ್ರಾಂತಿಯನ್ನು ಹುಡುಕುವ ಮನುಷ್ಯನು ನಿಶ್ಚಿತ ನೆರಳುಳ್ಳ ಮರವನ್ನು ಬಿಟ್ಟು ಚಲಿಸುವ ಮೋಡದ ನೆರಳಿಗೆ ನಿಂತು ವಿಶ್ರಾಂತಿಯನ್ನು ಹೊಂದಬೇಕೆಂಬುದು ತಿಳಿಗೇಡಿತನವಲ್ಲವೆ ? ಅದರಂತೆ ನಿಶ್ಚಿತ ಸುಖವೆಲ್ಲಿದೆ ಎಂಬುದನ್ನು ತಿಳಿಯದೆ ಗಾಳಿ ಮೋಡದಂತೆ ಓಡಿ ಹೋಗುವ ಮಡದಿ : ಮಕ್ಕಳಲ್ಲಿ ಸುಖವನ್ನು ಪಡೆಯಲು ಯತ್ನಿಸುವದು ಎಂಥ ಮರುಳತನವು ?

ಪದ : ತಾಳತ್ರಿತಾಳ; ರಾಗಮಿಶ್ರಕಾಪಿ

ಹಿಡಿಯೊ ಶಾಶ್ವತಾ ಸುಖಪಥಾ ಭೂನಾಥಾ
ಭೂನಾಥಾ ಭೂನಾಥಾ ಸುಖಪಥಾ ॥ಪಲ್ಲವಿ ॥

ಅಸ್ಥಿರ ಕಾಯಾ ಬಿಡು ಇದರ ಮಾಯಾ
ಕೌಶಿಕರಾಯಾಸುಖಪಥಾ….. ॥

ಹರನಲ್ಲಿ ಭಕ್ತಿ ಇರಿಸಿ ಸದ್ಗತಿ
ಪೆಡೆಯೋ ಭೂಪತಿಸುಖಪಥಾ… ॥

ಈಶನ ದಾಸಾ ನೀನಾಗೋ ಅರಸಾ
ಪಡೆಯುವಿ ಮೋಕ್ಷಾಸುಖಪಥಾ… ॥

ಸುಖದ ಸುಳಿವೇ ಇಲ್ಲದ ಈ ಪ್ರಪಂಚದಲ್ಲಿ ಸುಖವುಂಟೆಂಬ ಸುಳ್ಳಿನ ಶೂಲಕ್ಕೆ ಬೀಳಬೇಡ.ಗೊತ್ತುಗುರಿಯಿಲ್ಲದೆ ಸತ್ತ ಹುಳಗಳನ್ನು ಕುಕ್ಕಿ ತಿನ್ನುವ ಸಮಯದಲ್ಲಿ, ಹದ್ದು ಬಂದು ಎರಗೀತೆಂಬ ಎಚ್ಚರವಿಲ್ಲದ ಪಾರಿವಾಳದಂತೆ ಹೊನ್ನು ಹೆಣ್ಣು ಮಣ್ಣು : ಎಂಬ ಹುಳಗಳನ್ನು ತಿನ್ನುವ ಮಾನವನಿಗೆ ಮೃತ್ಯು ಎಂಬ ಮುದಿಹದ್ದು ಯಾವಾಗ ಬಂದು ಮುತ್ತೀತೆಂಬ ಅರಿವು ಇರಲಾರದು. ಆದ್ದರಿಂದ ಮೃತ್ಯು ಒಯ್ಯದ ಮುನ್ನ ನಿತ್ಯ ಶಿವಧ್ಯಾನದಲ್ಲಿದ್ದು ಶಾಶ್ವತ ಸುಖವನ್ನು ಪಡೆಯುವುದು ಒಳ್ಳೆಯದು.ಇದನ್ನು ಸರಿಯಾಗಿ ತಿಳಿದುಕೊಂಡು ಸಂಸಾರ ಸುಖಕ್ಕೆ ಬಲಿಬೀಳದೆ ಪಾರಮಾರ್ಥ ಚಿಂತನೆಯಲ್ಲಿ ಉಳಿ. ಅದು ನಿಜವಾದ ಸುಖವನ್ನು ನೀಡಬಲ್ಲುದು.

ಕೌ. : ಎಲೆ ನಾರಿ, ಇನ್ನು ಮೇಲೆ ನಿನ್ನ ಶಾಸ್ತ್ರದ ಗಂಟನ್ನು ನನ್ನ ಮುಂದೆ ಬಿಚ್ಚಬೇಡ.ಮುಂದೆ ಸಿಗಬಹುದಾದ ಶಾಶ್ವತ ಸುಖವನ್ನು ನೆನೆದು, ಇಂದಿನ ಸುಖಕ್ಕೆ ನೀರು ಬಿಡುವದು ಮೂಢತನವಲ್ಲವೆ ?ಬಾಲೆಯರ ಮೇಲೆ ಬಲತ್ಕಾರ ಮಾಡುವದು ಬಲಶಾಲಿಗಳಿಗೆ ಒಪ್ಪುವ ಮಾತಲ್ಲವೆಂದು ನಾನು ಇಲ್ಲಿಯವರೆಗೆ ತಾಳುತ್ತ ಬಂದರೆ, ನೀನು ನನ್ನ ಮೋರೆಯ ಮೇಲೆ ಕೈಯೆಳೆದು ಇಲ್ಲಿಂದ ಜಾರಿ ಹೋಗಲಿಕ್ಕೆ ಪ್ರಯತ್ನ ಮಾಡುತ್ತಿರುವಿ.ಈ ನಿನ್ನ ಸಾಹಸವು ಎನ್ನ ಮುಂದೆ ನಡೆಯದು.ನೀನು ನನಗೆ ಅನುಕೂಲಳಾಗಿ ನಡೆದರೆ ಉತ್ತಮ. ಇಲ್ಲದಿದ್ದರೆ ನಿನ್ನ ಸೀರೆಯನ್ನು ಕಳಚಿ ಮಾನಭಂಗ ಮಾಡದೆ ಇರಲಾರೆ.

ಸಾ. : ಛೀ ಭ್ರಷ್ಟಾ, ದೂರ ಸರಿ, ನನ್ನನ್ನು ಮುಟ್ಟಿದರೆ ನಿನಗೆ ಸೃಷ್ಟೀಶನ ಆಣೆ ! ಈ ಮೊದಲು ನನ್ನ ಹೇಳಿಕೆಯಂತೆ ನಡೆಯುವೆನೆಂದು ವಚನ ಕೊಟ್ಟು ಅದನ್ನೀಗ ಲಕ್ಷ್ಯಕ್ಕೆ ತಾರದೆ ನನ್ನ ಮೈಮೇಲೆ ಏರಿ ಬರುತ್ತಿರುವಿ.ಮಾನಭಂಗದ ಭಯವನ್ನು ತೋರಿಸುತ್ತಿರುವಿ.ಏರಿಬರುವ ಪತಂಗದಂತಿರುವ ನಿನಗೆ ನಾನೊಂದು ಅಗ್ನಿಯ ಜ್ವಾಲೆಯೆಂದು ತಿಳಿ. ಮೂರ್ಖಾ, ನಿನ್ನೊಡನೆ ವಾದವಾಡಿ ಫಲವೇನು ? ನಾನೀಗಲೇ ಹೊರಟೆ.

ಕೌ. : ಎಲ್ಲಿಗೆ ಹೋಗುವಿ ? ನಿನ್ನನ್ನು ಬಿಡುವವರಾರು ? ನಿನ್ನ ಅಧರಾಮೃತವನ್ನು ಸವಿಯದೆ ಬಿಡಲಾರೆ.ಈಗಲೇ ನಿನ್ನ ಅಂದವಾದ ಅಂಗವನ್ನು ಅಪ್ಪಿಕೊಂಡು ಅಲಿಂಗನ ಸುಖವನ್ನು ಹೊಂದುತ್ತೇನೆ.

ಪದ : ತಾಳ ತ್ರಿತಾಳ ; ರಾಗ ಮಿಶ್ರಕಾಪಿ

ಹರದಿಮಣಿ ನೀ ಎನ್ನ ಜರೆದು ಹೋಗುವದೆಲ್ಲಿ ! ॥ಪಲ್ಲವಿ ॥

ಭರದಿ ಕಳೆಯುವೆ ನೀನುಟ್ಟ ಶಾಲಿ
ಮಾನಹಾನಿಯ ಗೈವೆ ಜನದಲ್ಲಿ
ನಿನ್ನ ಚಿತ್ರದ ನೆಲಿ ಸರ್ವರು ನೋಡಲಿ
ಪಂಥವೆನಿತು ನಿನ್ನ ಮನದಲ್ಲಿ ಭೂಪನಲ್ಲಿ

ಸಾ. : ಕ್ಷಿತಿಯೊಳು ಫಲಪುರ ಮೃತಜಿತ ಸಿದ್ಧೇಶ
ಗತಿಯೆಂದು ನಿಲ್ಲುವೆ ನಾ ಇನ್ನು
ಕಾಯ್ವನೊ ನನ್ನ ಅಭಿಮಾನ

ಕೌ. : ಅವ ಯಾವ ದೇವಾ ನಿನ್ನನು ಕಾಯ್ವನು
ಸುಂದರಿ ತೀರಿತೆ ನಿನ್ನ ಹ್ಯಾವಾ ॥

(ಸೀರೆಯನ್ನು ಸೆಳೆಯುತ್ತ) ಎಲಾ ಇದೇನು! ನಾನು ಎಷ್ಟು ಸೆಳೆದರೂ ಉಟ್ಟ ಸೀರೆ ಮುಗಿಯಲೊಲ್ಲದು ನನ್ನ ಕಣ್ಣಿಗೇಕೋ ಕತ್ತಲೆ ಕವಿಯತೊಡಗಿದೆ…. ಇವಳಾರು? ಇವಳು ಸಾತ್ವಿಕಿಯೇ?ಅಲ್ಲಲ್ಲ ; ಶುದ್ಧ ಶಿವಯೋಗಿನಿ ! ಇಂಥವಳನ್ನು ಮುಟ್ಟಿದರೆ ನನ್ನ ಗತಿ ಏನಾದೀತು?

ಪದ : ತಾಳ ಕೇರವಾ ; ರಾಗ ಜಯಜಯವಂತಿ

ಶಿಶುವಾಗಿ ಮುನ್ನ ಬಳಲಿದರು
ಅನಸೂಯೆಯಾಗಿ ಹರಿಹರರು ಜಗದಿ ನಿಜದಿ ॥ಪಲ್ಲವಿ ॥

ಮಾನಿನಿಯ ವ್ರತಹಾನಿಗೈಯಲು,
ಜ್ಞಾನಮೂರ್ತಿಗಳು ಪೋಗಿ
ದ್ವಿಜರಾಗಿ ಬಳಲಿದರೊ ತಾವು ಕೂಸಾಗಿಜಗದಿ… ॥

ಜಾಣಿ ಮುದ್ದು ಶಿವಪ್ರಾಣಿ ಮುನಿಪಾ
ನನಗೆಂದಿಗಾಗದೊ ಕ್ಷೇಮ ಶರಣರ ಮಹಿಮಾ
ತಿಳಿಯದೆ ಹೋದೆ ಸುಡು ಜನ್ಮಜಗದಿ…. ॥

ಶರಣೆ ಪೊಂದಿಹೆನು ಕರುಣಿಸೆನ್ನನು
ಮರಣರಹಿತ ಮಾದೇವಿ ಭಕ್ತಾನುಭಾವಿ
ಉದ್ಧರಿಸಿ ಸಲಹು ದುರ್ದೈವಿ ಜಗದಿ….. ॥

ಶಿವಶಿವಾ, ಸತ್ಯಶರಣರ ಅಗಾಧ ಮಹಿಮೆಯನ್ನು ಎಷ್ಟೆಂದು ಬಣ್ಣಿಸಲಿ ?ನಾನು ಕಳೆಯ ಹೋದ ಸೀರೆ ಅಕ್ಷಯವಾದುದಲ್ಲದೆ ಶುದ್ಧ ಶಿವಯೋಗಿನಿಯ ರೂಪ ಅವಳಲ್ಲಿ ಪ್ರಕಟವಾಯಿತು.ಹಿಂದಕ್ಕೆ ಅತ್ರಿ ಮಹರ್ಷಿಯ ಹೆಂಡತಿಯಾದ ಅನಸೂಯಾದೇವಿಯ ಪಾತಿವ್ರತ್ಯದ ಪರೀಕ್ಷೆಗಾಗಿ ತ್ರಿಮೂರ್ತಿಗಳು ಅವಳಲ್ಲಿಗೆ ಹೋಗಿ, ದಿಗಂಬರೆಯಾಗಿ ತಮಗೆ ಉಣಬಡಿಸಬೇಕೆಂದು ಕೇಳಿಕೊಂಡರು.ಆಗ ಅವಳು ತನ್ನ ಪತಿವ್ರತಾ ಸಾಮರ್ಥ್ಯದಿಂದ ಅವರನ್ನು ಶಿಶುಗಳನ್ನಾಗಿ ಮಾಡಿದ್ದು ಸರ್ವರಿಗೂ ತಿಳಿದ ಮಾತಾಗಿದೆ.ಅವರು ಕೊನೆಗೆ, ಅವಳಿಂದಲೇ ತಮ್ಮ ನಿಜ ಸ್ವರೂಪವನ್ನು ಧರಿಸಿದರು. ಅದರಂತೆ ನಾನಾದರೂ ಈ ಶಿವಯೋಗಿನಿ ಸಾತ್ವಿಕಿಯಿಂದಲೇ ಉದ್ಧಾರ ಹೊಂದಿ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುತ್ತೇನೆ.

ಸಾ. : ಮಹಾರಾಜನೇ, ಹೀಗೇಕೆ ಯೋಚಿಸುತ್ತ ನಿಂತಿರುವಿರಿ ?

ಕೌ. : ತಾಯೀ, ನನ್ನಿಂದ ಮಹಾ ಅಪರಾಧವಾಯಿತು.ಧರ್ಮದೇವತೆಯಂತಿರುವ ನೀನು ನನ್ನ ಅಪರಾಧವನ್ನು ಕ್ಷಮಿಸಿ ಉದ್ಧರಿಸಬೇಕೆಂದು, ನಿನ್ನ ಪವಿತ್ರ ಪಾದವನ್ನು ಹಿಡಿದು ಬೇಡಿಕೊಳ್ಳುತ್ತೇನೆ.ತಾಯಿ, ಮಹಾದೇವಿ, ಕಾಪಾಡು. (ಪಾದವನ್ನು ಮುಟ್ಟಿ ನಮಸ್ಕರಿಸುವನು)

ಪದ : ತಾಳ ಕೇರವಾ ; ರಾಗ ಮಿಶ್ರಪೀಲು
ಸಾ. :

ಏಳು ಮಗನೆ ತಾಳೊ ಸುಗುಣ
ಬಾಳುವಿಯೊ ನೀ ಸೌಖ್ಯದಲಿ ॥ಪಲ್ಲವಿ ॥

ದುರ್ಗುಣ ದಹಿಸೊ ಸದ್ಗುಣ ವಹಿಸೊ
ಉರಿವ ಸಂಸಾರದ ಬಾಧೆಯ ಸಹಿಸೊ

ಸ್ಮರಿಸೊ ಇರಿಸೊ ಹರನಲ್ಲಿ ಪ್ರೇಮವ
ಸದ್ಗತಿಯ ನೀ ತನಯಾ, ಹೊಂದುವಿಯೊ ॥

ದುರ್ಗಣಕನುವ ಕೊಡದಿರು ಮನವ
ಶಿವಸೇವೆಯಲಿ ನಿನ್ನಯ ತನುವ
ಸವೆಸು ಸ್ಥವಿಸು ಶಿವನನ್ನು ಅನುದಿನ
ಭವನೀಗೊ ಸುಖಿಯಾಗೊ ಮುಕ್ತನಾಗೊ ॥

ಮಗನೇ ಕೌಶಿಕಾ, ಭಯಪಡಬೇಡ. ಪಶ್ಚಾತ್ತಾಪದಿಂದ ನೀನೀಗ ಶುದ್ಧನಾಗಿರುವಿ, ದುರ್ಗುಣಗಳು ನನ್ನನ್ನು ಬಿಟ್ಟೋಡಿದವು.ಇದು ನಿನ್ನ ಭಾಗ್ಯ.ನಾನೀಗ ನೀನು ಬಿಟ್ಟು ಹೋಗೆಂದರೂ ಹೋಗದೆ ನಿನ್ನಲ್ಲಿಯೇ ಗುಪ್ತಳಾಗಿದ್ದು ತಾಯಿಯು ಮಗನನ್ನು ಸಲುಹುವಂತೆ ಸಲುಹುತ್ತೇನೆ.ನೀನು ಆಶೆಯೆಂಬ ಪಿಶಾಚಿಯನ್ನು ಬಿಟ್ಟು ಕಾಮ ಕ್ರೋಧಾದಿಗಳನು ಸುಟ್ಟು ಸದ್ಗುರುವಿನಲ್ಲಿ ನಂಬಿಗೆಯನ್ನಿಟ್ಟು ನೀನಾರೆಂಬುದನ್ನು ತಿಳಿದುಕೊ.

ಕೌ. : ತಾಯಿ, ನಾನು ಯಾರೆಂಬುದು ನನಗೆ ಗೊತ್ತಿಲ್ಲವೆ ?ಎಂಥ ವಿಚಿತ್ರ ಮಾತಿದು !

ಸಾ. : ಮಗು ನೀನು ಯಾರು ಹೇಳು ?

ಕೌ. : ನಾನು ಕೌಶಿಕ

ಸಾ. : ನೀನು ಎಂದಿನಿಂದ ಕೌಶಿಕನಾದೆ ?

ಕೌ. : ನಾನು ಹುಟ್ಟಿದ ಹನ್ನೆರಡನೆಯ ದಿನದಲ್ಲಿ ನನ್ನನ್ನು ತೊಟ್ಟಿಲದಲ್ಲಿರಿಸಿ ಹೆಸರಿಟ್ಟಾಗಿನಿಂದ ಕೌಶಿಕನೆನಿಸಿದೆ.

ಸಾ. : ಅದಕ್ಕಿಂತ ಮೊದಲು ನೀನೆಲ್ಲಿದ್ದೆ ?

ಕೌ. : ಪ್ರತಿನಿತ್ಯ ಹುಟ್ಟುವವರನ್ನು ನೋಡಿ, ನಾನಾದರೂ ತಾಯಿಯ ಹೊಟ್ಟೆಯಲ್ಲಿಒಂಬತ್ತು ತಿಂಗಳವರೆಗೆ ಇದ್ದೆನೆಂದು ಹೇಳಬಲ್ಲೆ.

ಸಾ. : ತಾಯಿಯ ಹೊಟ್ಟೆಯೊಳಗೆ ಮೂಡುವ ಮೊದಲು ನೀನು ಏನಾಗಿದ್ದಿ ಗೊತ್ತಿದೆಯೆ?

ಕೌ. : ತಾಯಿ ಅದು ನನಗೆ ತಿಳಿಯದು.

ಸಾ. : ಈಗ ನೀನು ಎಂತು ಇರುವೆ ?

ಕೌ. : ಸ್ನಾಯು ಮಾಂಸದಿಂದ ಮೆತ್ತಿದ ಎಲುವಿನ ಹಂದರವಾಗಿದ್ದೇನೆ.

ಸಾ. : ಒಳ್ಳೆಯದು.ಈಗ ನೀನಿರುವ ಈ ಎಲುವಿನ ಹಂದರ ಸ್ಥಿರವಾದುದೆ ?

ಕೌ. : ಇಲ್ಲ, ಪ್ರತಿನಿತ್ಯ ಸಾಯುವವರನ್ನು ನೋಡಿ ಈ ನನ್ನ ದೇಹ ಹಂದರ ಒಂದಿಲ್ಲೊಂದು ದಿನ ಮುರಿದು ಬಿದ್ದು ಮಣ್ಣು ಪಾಲಾಗುವದೆಂದು ಹೇಳಬಲ್ಲೆ.

ಸಾ. : ಈ ನಿನ್ನ ದೇಹ ಸುಟ್ಟು ತಟ್ಟಾದ ಮೇಲೆ ನೀನೆಲ್ಲಿಗೆ ಹೋಗುವಿ ?ಯಾವ ಗಿಡದ ತಪ್ಪಲಾಗುವಿ? ನಿನಗೆ ಗೊತ್ತಿದೆಯೆ?

ಕೌ. : ತಾಯಿ, ಅದು ನನಗೆ ತಿಳಿದಿಲ್ಲ.

ಸಾ. : ಶಿವ ಶಿವಾ, ತಮ್ಮ ಗುರುತು ತಮಗೆ ತಿಳಿಯದ ಈ ನರರಿಗೆ ಮಾಯೆಯ ಮುಸುಕು ಬಿದ್ದಿರುವದು.

ಪದ : ತಾಳ ಕೇರವಾ ; ರಾಗ ಜಯಜಯವಂತಿ

ಶಿವ ಶಿವಾ ಎಂಥ ಅಜ್ಞಾನಾ (ದುಗುಣ)
ಮುಸುಕಿಹುದು ಲೋಕಕ್ಕೆ ತಾ ಘೋರ ತಿಮಿರಾ ॥ಪಲ್ಲವಿ ॥

ಆರು ತಾವು ಎಂಬ ಮರ್ಮವರಿಯದೆ
ಭೂರಿ ಬಳಲುವರು ನರರು ಪಾಮರರು
ತ್ರಿತಾಪದಲ್ಲಿ ಬೇಯುವರು ಘೋರ ತಿಮಿರಾ ॥

ಮರವು ಎಂಬುವ ಪರಿಯು ಮುಚ್ಚಿತು
ನೆರವು ತೋರದೆ ನರರು ಬಳಲುವರು
ಭ್ರಮಿಷ್ಠರಂತೆ ಈ ನರರುಘೋರ ತಿಮಿರಾ ॥

ಶಿವ ಶಿವಾ, ಮದುಗುಣಿಕೆಯನ್ನು ತಿಂದು ನಾನಾರೆಂಬ ಅರಿವುದಪ್ಪಿ, ಮೈಮೇಲಿನ ಅರಿವೆಗಳನ್ನು ಹರಿಯುತ್ತ ಮನಬಂದಂತೆ ಕೂಗಾಡಿ ಕುಣಿದಾಡಿ ಬೇಲಿ : ಕೋಲಿಗಳೆಂಬುದು ಗೊತ್ತಾಗದೆ, ಕಂಡಲ್ಲಿ ಬಿದ್ದು ಕಾಲು ಮುರಿದುಕೊಂಡು ಕಷ್ಟಪಡುವ ಮನುಷ್ಯನ ಹಾಗೆ ದುರ್ದೈವಿಗಳು ಹೊನ್ನು : ಹೆಣ್ಣು ಮಣ್ಣೆಂಬ ಮದುಗುಣಿಕೆಯ ಮಬ್ಬು ತಲೆಗೇರಿ, ತಾವು ಯಾರೆಂಬ ಅರಿವುದಪ್ಪಿ ಕಂಡಂತೆ ಕುಣಿದಾಡಿ ಎಷ್ಟು ಕಷ್ಟ ಪಡುತ್ತಿರುವರು ! ಅವರಿಗೆ ಬರುವ ಕಷ್ಟಗಳಿಗೆ ಲೆಕ್ಕವೇ ಇಲ್ಲ.ಕೌಶಿಕಾ, ಜನನ : ಮರಣ ಚಕ್ರದಲ್ಲಿ ಸಿಕ್ಕ ನಿನಗೆ ಕೊನೆಗೊಮ್ಮೆ ಈ ಅರಿವಿನ ಮಾನವ ಜನ್ಮ ಬಂದಿದೆ.ಇದನ್ನು ಅನರ್ಥಗೊಳಿಸಬೇಡ.ನಿತ್ಯದಲ್ಲಿ ಬರುವ ಕಷ್ಟನಷ್ಟಗಳನ್ನು ಕಳೆದುಕೊಳ್ಳಲು ಶಿವಮಂತ್ರವೊಂದೇ ಸಾಕು.ನೀನು ಯಾವಾಗಲೂ ಪಂಚಾಕ್ಷರಿಮಂತ್ರವನ್ನು ಜಪಿಸುತ್ತ ಸತ್ವಗುಣ ಪಡೆದು ನಿತ್ಯನಾಗು. ಸದ್ಗುರುವಿನ ಸನ್ನಿಧಿ ಪಡೆದು ಮುಕ್ತನಾಗು.

ಕೌ. : ತಾಯಿ, ಧರ್ಮದೇವಿಯಾದ ನಿನ್ನನ್ನು ಬಿಟ್ಟು ಇನ್ನೆಲ್ಲಿ ಸದ್ಗುರುವನ್ನು ಹುಡುಕಲಿ ?

ಪದ : ತಾಳ ಕೇರವಾ ; ರಾಗ ಜಯಜಯವಂತಿ

ಪರಿಪಾಲಿಸೆನ್ನನು ಜನನಿ
ಗುರು ಎನಗೆ ನೀನು ಸಂಪನ್ನೆ ಕರುಣಿ ಕರುಣಿ (ದುಗುಣ) ಪಲ್ಲ
ಪಾಲಿಸೆನ್ನ ಗುಣಶೀಲೆ ನಿನ್ನಯ
ಬಾಲನಂದದಿ ನಿನ್ನ ಪೊಂದಿ ಶರಣೇ ನೀ ಉಪದೇಶ ಮಾಡಿ
ಪೊಂದಿ ಶರಣ ಉಪದೇಶವಿತ್ತು ಉದ್ಧರಣಕರುಣಿ ಕರುಣಿ ॥

ಇರಿಸಿ ದಯ ಉದ್ಧರಿಸಿ ಎನ್ನ ಭವ
ಹರಿಸಿ ರಕ್ಷಿಸೆ ಮಾತೆ ಗುರುಮೂರ್ತೆ
ಫಲಪುರದೀಶನ ಸ್ಮರಿಸುತೆಕರುಣಿ ಕರುಣಿ ॥

ಮಾತೆ, ಧರ್ಮಾತ್ಮಳೂ ದಯಾಭರಿತಳೂ ಆದ ನಿನ್ನಂಥ ಶಿವಶರಣೆಯನ್ನು ಬಿಟ್ಟು ಇನ್ನೆಲ್ಲಿ ಸದ್ಗುರುವನ್ನು ಹುಡುಕಲಿ ? ನಿಜವಾಗಿ ನೀನೇ ತಾಯಿ ನೀನೆ ಗುರು.ನನಗೆ ನೀನಲ್ಲದೆ ಮತ್ತಾವ ಗುರುವೂ ಇಲ್ಲ.ಈ ಸಂಸಾರಬಾಧೆಯನ್ನು ತೊಲಗಿಸಿ ಸತ್ಯ ಸುಖವನ್ನು ಅನುಗ್ರಹಿಸಿ ಉದ್ಧಾರ ಮಾಡಬೇಕೆಂದು ಬೇಡಿಕೊಳ್ಳುತ್ತೇನೆ.

ಸಾ. : ಮಗನೆ, ನೀನು ಮಹಾಸುಖವನ್ನು ಬಯಸುತ್ತಿರುವಿಯಾದರೆ ಸದ್ಗುಣಿಯಾಗಿ ಶಿವಮಂತ್ರವನ್ನು ನುಡಿ. ನುಡಿದಂತೆ ನಡಿ. ಶಿವಪೂಜೆ ಶಿವಭಜನೆ ಶಿವಧ್ಯಾನ ನಿನ್ನ ಅಂತರಂಗದಲ್ಲಿ ಸದಾ ನಡೆಯುತ್ತಿರಲಿ ! ಅಂದರೆ ಆ ಕರುಣಾಸಾಗರನಾದ ಪರಶಿವನು ನಿನಗೆ ಸದ್ಗತಿಯನ್ನು ಕೊಟ್ಟು ಉದ್ಧರಿಸುವನು.ಇನ್ನು ನಾನು ನನ್ನ ಗುರುವಿನ ಬಳಿಗೆ ಹೋಗುತ್ತೇನೆ.ನಿನಗೆ ಮಂಗಳವಾಗಲಿ !

ದೂತೆ : ಅಲ್ಲಮ ಪ್ರವೇಶ

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಅಲ್ಲಮ :

ಗತಿಯೆ ಶಿವಾs ನರರಿಗೆ (ದುಗುಣ)॥ಪಲ್ಲ ॥

ಆರು ತಾವೆಂಬುವಂಥ ಸಾರವರಿಯದೆ ನರರು
ಗಾರುಗೊಳ್ವರು ಭವದಿಗತಿಯೇಂ ….॥

ಮರುಳತನದಿ ಬಹು ದುರುಳ ಮಾಯೆಗೆ ತಮ್ಮ
ಕೊರಳವಿತ್ತಿಹರಕಟಾಗತಿಯೇಂ …..॥

ಭೂತಪಂಚಕವಿಡಿದು ಪ್ರೇತನಂದದಿ ನಡೆದು
ಯಾತನೆಗೊಳ್ವರಕಟಾಗತಿಯೇಂ ….॥

ಶಿವ ಶಿವಾ, ಮಂಗನಾಡಿಸುವವನ ಕೈಯಲ್ಲಿ ತಮ್ಮ ಕೊರಳ ಹಗ್ಗವನ್ನು ಕೊಟ್ಟು ಅವನ ಹೇಳಿಕೆಯಂತೆ ಕುಣಿಯುತ್ತಿರುವ ಮಂಗಗಳಂತೆ ಈ ಮರುಳ ಮನುಷ್ಯರು ತಾವು ಯಾರೆಂಬುದನ್ನು ಅರಿಯದೆ ಮಾಯೆಯ ಕೈಗೆ ಸಿಕ್ಕು ಅವಳು ಕುಣಿಸಿದಂತೆ ಕುಣಿದಾಡಿ ಎಷ್ಟೊಂದು ಕಷ್ಟಪಡುತ್ತಿರುವರು? ಕೇವಲ ಒಂದು ಭೂತ ಬಡಿದರೆ ಮೈಮೇಲೆ ಎಚ್ಚರವಿಲ್ಲದೆ ಇಚ್ಛೆಗೆ ಬಂದಂತೆ ಕುಣಿಯುತ್ತಾನೆ ಮಾನವ. ಅಂದ ಮೇಲೆ ಒಂದಲ್ಲ, ಎರಡಲ್ಲ : ಐದು ಭೂತಗಳು ಹಿಡಿದು ಹಿಂಡಿ ಹಿಪ್ಪಿಮಾಡುತ್ತಿರುವಾಗ ಅವನ ಗತಿಯೇನಾಗಬೇಕು? ಅವುಗಳ ಹಿಡಿತದಿಂದ ಪಾರಾಗುವುದೇ ಮಾನವನ ಚರಮ ಧರ್ಮ ಸುಮ್ಮನೆ ಬಿಟ್ಟರೆ ಅವುಗಳಿಂದಲೇ ನರನ ನಾಶ ಖಂಡಿತ.

ದೂತಿ. : ಹೆಚ್ಚಿನ ಸಾಧುಗಳು! ಸಾಧುಗಳೆಂದರೆ ಸಾಕು ಕಂಡದ್ದಕ್ಕೆಲ್ಲ ಶಾಸ್ತ್ರ ಹೇಳಿಕೋತ ನಿಲ್ಲತಾವು!! ಸ್ವಾಮಿ, ಏನೇನೋ ಶಾಸ್ತ್ರ ಉಗಳಲು ಹೊರಟಿರುವಿರಲ್ಲ?

. : ಏನೇ ಮೂಢಳೆ, ಈಗ ನಾನು ಯಾವ ಶಾಸ್ತ್ರ ಹೇಳಿದೆನು?

ದೂ. : ಈ ಜಗತ್ತಿನ ಜನರಿಗೆ ಐದು ಭೂತಗಳು ಹಿಡಿದಿರುವವೆಂದು ಏನೇನೋ ಒಟಗುಟ್ಟಿದಿರಲ್ಲ? ಅದು ಯವ ಕುಂಟಶಾಸ್ತ್ರ?

. : ಹುಚ್ಚಿ, ಅದು ಕುಂಟ ಶಾಸ್ತ್ರವಲ್ಲ! ಕೈಯೆತ್ತಿ ಕೂಗಿ ಹೇಳುವ ಆಗಮಶಾಸ್ತ್ರ!! ಮಾನವರನ್ನು ಹಿಡಿದು ಹಿಪ್ಪೆ ಮಾಡುತ್ತಿವೆ ಪಂಚಭೂತಗಳು.

ದೂ. : ಹಾಗಾದರೆ, ಆ ಭೂತಗಳು ಯಾವ್ಯಾವು? ಅವುಗಳ ಹೆಸರೇನು?

. : ದೂತೇ, ಪೃಥ್ವಿ ಅಪ್ ತೇಜ ವಾಯು ಆಕಾಶ : ಅಂದರೆ ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ : ಇವೇ ಆ ಐದು ಮಹಾಭೂತಗಳು. ಇವು ಸರ್ವರನ್ನೂ ಹಿಡಿದು ಹಿಪ್ಪೆ ಮಾಡುತ್ತಿವೆ. ಈ ಪ್ರಪಂಚವು ಈ ಪಂಚಭೂತಗಳ ಚೇಷ್ಟೆಯಾಗಿರುವದು.

ದೂ. : ಸ್ವಾಮಿ, ಭೂತಚೇಷ್ಟೆ ಅಂದರೇನು ?

. : ದೂತೆ, ಭೂತ ಚೇಷ್ಟೆಯನ್ನು ವಿವರಿಸಿ ಹೇಳುತ್ತೇನೆ; ಚಿತ್ತವಿಟ್ಟು ಕೇಳು : ಕಗ್ಗತ್ತಲೆಯಲ್ಲಿ ಹಾಯ್ದುಹೋಗುವ ಮನುಷ್ಯನಿಗೆ ಒಂದು ಭೂತ ಕಾಣಿಸುವದು. ಅದು ಒಮ್ಮೆ ಎಮ್ಮೆಯಾಗಿ ಮತ್ತೊಮ್ಮೆ ನಾಯಿಯಾಗಿ ಇನ್ನೊಮ್ಮೆ ಬೆಕ್ಕಾಗಿ : ಹೀಗೆ ಬಗೆ ಬಗೆಯ ರೂಪ ಧರಿಸಿ ಅವನಿಗೆ ತೋರಿ, ತೋರಿದಲ್ಲಿಯೇ ಮಾಯವಾಗುವದು. ಭೂಮಿಗೂ ಆಕಾಶಕ್ಕೂ ಏಕಾಕಾರವಾಗಿ ನಿಂತು ಹೆದರಿಕೆಯನ್ನು ಹುಟ್ಟಿಸುವದು ಅದರಂತೆ ಈ ಪಂಚಭೂತಗಳು ನಾನಾ ನಾಮರೂಪಗಳನ್ನು ಧರಿಸಿ ಜೀವಾತ್ಮನನ್ನು ಪೀಡಿಸುತ್ತವೆ.

ದೂ. : ಪಂಚಭೂತಗಳಿಂದ ಜೀವಾತ್ಮನು ಬಿಡುಗಡೆಯಾಗುವ ಬಗೆ ಹೇಗೆ ?

. : ದೂತೆ, ಭೂತ ಪೀಡಿಸುವ ರೀತಿ ನಿನಗೆ ಗೊತ್ತಿರಬೇಕಲ್ಲವೆ ?

ದೂ. : ಭೂತ ಬಡೆದರೆ ಮಂತ್ರಹಾಕಿ ಬಿಡಿಸುತ್ತಾರೆ.

. : ಅದರಂತೆಯೇ, ಪಂಚಭೂತಗಳು ಮಾನವನ ಸ್ವಾಧೀನವಾಗಬೇಕಾದರೆ ಪಂಚಾಕ್ಷರ ಮಂತ್ರವನ್ನು ನಿತ್ಯದಲ್ಲಿ ಪಠಿಸಬೇಕು. ಈ ಶಿವಮಂತ್ರವನ್ನು ಪಠಿಸಿದವರಿಗೆ ಶಿವನು ಸದಾಸುಖವನ್ನು ಕೊಡುತ್ತಾನೆ. ಮುಕ್ತಿಯನ್ನು ಅಪೇಕ್ಷಿಸುವ ಮಾನವನು ಸದಾಚಾರ ಸಂಪನ್ನನಾಗಿ ಅಷ್ಟಾವರಣ, ಪಂಚಾಚಾರಗಳನ್ನು ಪಾಲಿಸುತ್ತ, ಶಿವಯೋಗ ಮಾರ್ಗವನ್ನು ಹಿಡಿದು ನಡೆಯಬೇಕು. ಅದೇ ಸದ್ಗತಿಯ ಸಾರ !

ದೂ. : ಮಹಾಸ್ವಾಮಿ, ಇದೆಲ್ಲ ನಮಗೆ ಹೇಗೆ ತಿಳಿಯಬೇಕು ? ಭಕ್ತಿಯೇ ನಮಗೆ ಮುಕ್ತಿ. ನಿಮ್ಮಂಥ ಮಹಾತ್ಮರನ್ನು ನೆನೆದು ನಾವು ಪುನೀರತಾಗುತ್ತೇವೆ.

. : ದೂತೆ, ಭೂಮಿಯಲ್ಲಿ ಕರ್ಮಮಾರ್ಗವು ಪ್ರಬಲವಾಗಿ ಭಕ್ತಿಮಾರ್ಗವು ಲೋಪವಾಗತೊಡಗಿದೆ. ಅದನ್ನು ಕಂಡು ನಂದೀಶ್ವರನು ಬಸವಣ್ಣನಾಗಿ ಅವತರಿಸಿ, ಕಲ್ಯಾಣ ಪಟ್ಟಣದಲ್ಲಿ ಸರ್ವರ ಕಲ್ಯಾಣಕ್ಕಾಗಿ ಅನುಭವ ಮಂಟಪವನ್ನು ಸ್ಥಾಪಿಸಿ, ಶಿವಶರಣರ ಬರುವಿಕೆಗೆ ಹಾತೊರೆದು ಕೂತಿದ್ದಾನೆ. ನಾನು ಈಗಲೇ ಅಲ್ಲಿಗೆ ಹೋಗಿ ದರ್ಶನ ಕೊಟ್ಟು, ಅಲ್ಲಿ ನೆರೆದ ಸಾತ್ವಿಕ ಶರಣರಿಗೆ ಮುಂದಿನ ಮಾರ್ಗ ತೋರಿಸಬೇಕಾಗಿದೆ ನಾನಿನ್ನು ಬರುವೆ.

ಮುಕ್ತಿ ಪ್ರವೇಶ
* * *

(ಅಲ್ಲಮಪ್ರಭು ಚಾರ್ವಾಕ ವೇಷದಲ್ಲಿ)
ಅಲ್ಲಮ : ಲೋಕೋದ್ದಾರಕ್ಕಾಗಿ ಅಲ್ಲಲ್ಲಿ ಸಂಚರಿಸಿ, ಅನೇಕ ಸಾಧುಸಂತರಿಗೆ ಮುಕ್ತಿ ಮಾರ್ಗವನ್ನು ತೋರಿಸಿದಂತಾಯಿತು. ಇನ್ನೊಂದು ಕಾರ್ಯ ಶೀಘ್ರವಾಗಿ ನೆರವೇರಬೇಕಾಗಿದೆ. ನನ್ನ ದರ್ಶನಕ್ಕಾಗಿ ಹಗಲಿರುಳು ಹಂಬಲಿಸುತ್ತ ಸಾತ್ವಿಕಿ ಈ ಕಡೆಗೆ ಬರುವಂತಿದೆ. ಆಹಾ ! ಆ ಮುದ್ದು ಮಗಳ ಮಹಿಮೆಯನ್ನು ಎಷ್ಟೆಂದು ಕೊಂಡಾಡಲಿ ! ಅವಳನ್ನು ಪರೀಕ್ಷಿಸಿ ಮುಕ್ತಿ ಮಾರ್ಗ ತೋರಿಸಲೆಂದೇ ಈ ಚಾರ್ವಾಕ ವೇಷವನ್ನು ಧರಿಸಿದ್ದೇನೆ. ನಾನೀಗ ಅವಳು ಬರುತ್ತಿರುವ ದಾರಿಯಲ್ಲಿಯೇ ಸುಳಿದು, ದರ್ಶನ ಕೊಟ್ಟು ಆಕೆಯ ಸತ್ವವನ್ನು ಪ್ರಕಟಗೊಳಿಸಿ ಉದ್ಧರಿಸುತ್ತೇನೆ. (ಸಾತ್ವಿಕಿ ಪ್ರವೇಶಿಸುವಳು).

ಪದ : ತಾಳ ಕೇರವಾ; ರಾಗ ಜಯಜಯವಂತಿ

ಅಲ್ಲಮ :

ಜಲಜಾಯತಾಕ್ಷಿ ಸುಕುಮಾರಿ
ನೀನಾರು ಪೇಳೆ ಸುಂದರಿ ಚದುರಿ ಚದುರಿ॥ಪಲ್ಲ ॥

ಕುಸುಮಾಕ್ಷಿ ನಲ್ಲೆ ಹೊಸ ಪ್ರಾಯದಲ್ಲೆ
ಸನ್ಯಾಸಿವೇಷವ್ಯಾಕೆ ಬಾಲೆ ಗುಣಶೀಲೆ
ಹೆಸರೇನು ನಿನ್ನ ಪಯಣೆಲ್ಲೆ॥1 ॥

ಪದ : ತಾಳ ಕೇರವಾ; ರಾಗ ಜಯಜಯವಂತಿ

ಸಾತ್ವಿಕಿ :

ಧರ್ಮದೇವಿ ನಾ ಕರ್ಮಘಾಸಿ ಶಿ :
ವಾನುಭಾವಿ ತಿಳಿ ನಾನು ನಿಜದಿ ನಾನು
ಗುರುದರ್ಶನಾರ್ಥ ಪೋಗುವೆನು॥2

. : ವಿಚಿತ್ರ ವೇಷತೊಟ್ಟ, ನಾರೀಮಣೀ ನೀನಾರು ?

ಸಾ. : ಪರನಾರಿಯನ್ನು ಮಾತನಾಡಿಸುವ ನೀನು ಯಾರು ?

. : ನಾನು ಚಪಲನೆಂಬ ಚಾರ್ವಾಕನು. ಹೊಸ ಪ್ರಾಯದ ಕುಸುಮಾಕ್ಷಿ, ನೀನಾರು ? ಎಲ್ಲಿಗೆ ಹೋಗುತ್ತಿರುವಿ ?

ಸಾ. : ತಮ್ಮಾ, ನಾನು ಶಿವಶರಣರ ಸೇವಕಳು. ಪರಮ ಶಿವಭಕ್ತಳು. ನನ್ನ ಹೆಸರು ಸಾತ್ವಿಕಿ. ಸದ್ಗುರುವಿನ ದರ್ಶನಕ್ಕಾಗಿ ಹೋಗುತ್ತಿರುವೆನು.

. : ಹೀಗೊ? ಹಾಗಿದ್ದರೆ ಬಹು ವಿಚಿತ್ರ ! ನೀನು ಸಾತ್ವಿಕಿಯೇ ಆಗಿದ್ದರೆ ನಿನ್ನಂತಹ ಪರಮಭ್ರಷ್ಟಳು ಮತ್ತೊಬ್ಬಳಿಲ್ಲ. ನೀನು ನಂಬಿದ ಮನುಜರನ್ನು ಮಹಾ ಕಷ್ಟಕ್ಕೆ ಗುರಿ ಮಾಡುವಿ, ಗೋಳಾಡಿಸುವಿ ನಾನು ಈ ಮುಂಜಾವಿನಲ್ಲಿ ಏಕೆ ನಿನ್ನ ಮುಖವನ್ನು ನೋಡಿದೆನೊ ಏನೋ? ಅದರ ಫಲವಾಗಿ ನಾನು ಯಾವ್ಯಾವ ಕಷ್ಟಗಳನ್ನು ಅನುಭವಿಸುವೆನೋ ತಿಳಿಯದು.

ಸಾ. : ತಮ್ಮಾ, ಧರ್ಮದೇವತೆಯಂತಿರುವ ನನ್ನನ್ನು ಕಂಡು ಎಲ್ಲರೂ ಧನ್ಯರಾಗುತ್ತಿದ್ದಾರೆ. ಆದರೆ ನೀನು ಮಾತ್ರ ನನ್ನ ದರ್ಶನ ಮಾತ್ರದಲ್ಲಿಯೇ ಕಷ್ಟಕ್ಕೆ ಗುರಿಯಾದೆನೆಂದು ಹೇಳುತ್ತಿರುವಿಯಲ್ಲ? ಇದೆಂಥ ವಿಚಿತ್ರ ! ನಾನು ಯಾರಿಗೂ ಕಷ್ಟ ಕೊಡುವವಳಲ್ಲ. ಮೇಲಾಗಿ ಸತ್ವಗುಣಸಂಪನ್ನರ ಕಷ್ಟವನ್ನು ಕಳೆಯತಕ್ಕವಳು. ನನ್ನನ್ನು ನಂಬಿದವರು ಎಂದೂ ಕೆಟ್ಟಿಲ್ಲ ಯಾವ ಕಷ್ಟಕ್ಕೂ ಗುರಿಯಾಗಿಲ್ಲ.