೧೩
ಸಾತ್ವಿಕಿ : ಕೌಶಿಕ ಪ್ರವೇಶ
ಕೌಶಿಕ : ಇನ್ನೂ ಏಕೆ ಬರಲಿಲ್ಲ ಈ ಸಾತ್ವಿಕಿ? ಕ್ಷಣವೊಂದು ಯುಗವಾಗತೊಡಗಿದೆ. ಅವಳನ್ನೇ ಹಾರೈಸಿ ನಿಂತ ಮನಸ್ಸು ತಲ್ಲಣಿಸುತ್ತಿದೆ. ಎಲೆ ಮನವೆ ತಾಳು ತಾಳು. ಬೇಡಿದ್ದು ಬಯಸಿದ್ದು ಬಯಲಾಗಲಾರದು.ಓಹೋ ಬಂದೇಬಿಟ್ಟಳಲ್ಲ ನನ್ನ ಹೃದಯ ಸಾಮ್ರಜ್ಞೆ !
ಸಾತ್ವಿಕಿ : (ಪ್ರವೇಶಿಸಿ) ಮಹಾರಾಜರಿಗೆ ಕುಶಲವಷ್ಟೇ ?
ಕೌ. : ಕುಶಲ ಅಷ್ಟೇ ಏಕೆ, ನಿನ್ನ ಬರುವಿಕೆಯೇ ಎನಗೆ ಸ್ವರ್ಗಸುಖ ! ಬಾ ಸಾತ್ವಿಕಿ ಸಮೀಪಕ್ಕೆ ಬಾ ನನ್ನವಳಾಗಿ ನನ್ನ ಮನದ ಬಯಕೆಯನ್ನು ಈಡೇರಿಸು ನಿನಗಾಗಿ ಸಾರ ಸರ್ವಸ್ವವನ್ನೂ ತ್ಯಾಗ ಮಾಡಲು ಈ ಕೌಶಿಕ ಸಿದ್ಧನಿದ್ದಾನೆ.
ಸಾ. : ಸುಡು ನಿನ್ನ ಸಾರ ಸರ್ವಸ್ವ ! ನಿನ್ನ ಕಣ್ಣು ಕಾಮದ ಕಣ್ಣು ಅರಿವಿನ ಕಣ್ಣಲ್ಲ.ಕಾಮನ ಬಲೆಯಲ್ಲಿ ಬಿದ್ದು ಒದ್ದಾಡುವ ಬದ್ಧ ಪಶುವೆ, ಕಾಮವೊಂದು ಹೊಲೆ. ಚಿತ್ತವಿಟ್ಟು ಕೇಳು :
ಪದ : ತಾಳ ತ್ರಿತಾಳ;ರಾಗ ಮಿಶ್ರಕಾಪಿ
ಕ್ಷೇಮ ಎಂಬುವದುಂಟೆ ಜಗದೊಳಗೆ
ಕಾಮನನ್ನು ನಂಬಿದ ಮರುಳ ಮನುಜರಿಗೆ ॥ಪಲ್ಲವಿ ॥
ಹೊಲೆಯಲ್ಲಿ ಜನಿಸಿ ಹೊಲೆಯನ್ನು ನೆನಿಸಿ
ಹೊಲೆಯನು ಕಾಣುತ ಮಮಕರಿಸಿ
ಈ ಜಗ ಹೊಲೆಯ ನಿಜದಲಿ ಹೊಲೆಯ
ಆತನ ನಂಬಿಗಿಲ್ಲದ ನೆಲೆಯ ॥
ಮುಕ್ತಿರಾಜ್ಯಕ್ಕೆ ಮುಳ್ಳಿನ ಬೇಲಿ ಅವನ
ಪ್ರೀತಿ ಇರುವದು ಮೂತ್ರದ ಕುಣಿಯಲಿ
ನಿನ್ನನು ಕೂಡಿ ಇರುವೆನು ಖೋಡಿ
ಕಾಮನ ಕಡಿ ಶಿವಮಂತ್ರವ ನುಡಿ ॥
ಮರುಳಮತಿಯೇ, ಹುರುಳಿಲ್ಲದ ಕಾಮನ ಕೈಯಲ್ಲಿ ಸಿಕ್ಕು ವಿಲಿವಿಲಿ ಒದ್ದಾಡುವ ನಿನ್ನನ್ನು ಕಂಡು ನನಗೆ ಮರುಕವೆನಿಸುತ್ತದೆ.ಕಾಮನನ್ನು ನಂಬಿದವರಿಗೆ ಕ್ಷೇಮವಿಲ್ಲ. ಆ ಕಾಮವೇ ನಿಜವಾದ ಹೊಲೆ. ಹೊಲೆಯಲ್ಲಿ ಹುಟ್ಟಿ ಹೊಲೆಯಲ್ಲಿ ಬೆಳೆದು ಹೊಲೆಯಲ್ಲಿ ಮುಳುಗಿ ಹೊಲೆಯಲ್ಲಿ ಏಳುವ ಭ್ರಷ್ಟ ಕಾಮನಿಗೆ ಬೆಂಕಿ ಹಚ್ಚಲಿ ! ಕೌಶಿಕಾ, ಕಾಮನು ಮುಕ್ತಿಮಂದಿರದ ಬಾಗಿಲಿಗೆ ಇಕ್ಕಿದ ಮುಳ್ಳುಬೇಲಿ ಭ್ರಮೆಯನ್ನು ಆಳಿ, ಚೆನ್ನಾಗಿ ತಿಳಿ ಅವನಿಂದ ದೂರ ಉಳಿ.ಕಾಮವನ್ನು ಕಡಿ ಶಿವಪಾದವನ್ನು ಹಿಡಿ ಶಿವ ಮಂತ್ರವನ್ನು ನುಡಿ ಅದರಿಂದಲೇ ನಿನಗೆ ಅಕ್ಷಯ ಸುಖ ನಾನು ಹೇಳಿದಂತೆ ಕೇಳು ಅಂದರೆ ಮಾತ್ರ ನಿನಗೆ ಒಳಿತು.
ಕೌ. : ಕೋಮಲಾಂಗಿ ಇದೇನು ವಿಚಿತ್ರ ! ಮದ್ದುಗುಣಿಕೆ ಮೆದ್ದವರ ಹಾಗೆ ಎಂಥ ಮರುಳತನದ ಮಾತು ಆಡುತ್ತಿರುವಿ !
ಸಾ. : ಅವಿವೇಕಿ ಅರಸಾ, ನಾನು ಆಡಿದುದು ಮರುಳುತನದ ಮಾತೆ ?
ಕೌ. : ಅಂತಿಂಥ ಮರುಳ ಮಾತಲ್ಲ ! ಮರುಳರಿಗೆ ಸಹ ಮರುಳುತನ ಹುಟ್ಟಿಸುವ ಮಾತು.
ಸಾ. : ಅದು ಹೇಗೆ ?
ಕೌ. : ಸಾತ್ವಿಕಿ, ಕಾಮನೇ ಮುಕ್ತಿಗೆ ಮೂಲ ಮುಕ್ತಿಗೆ ಮಕ್ಕಳು ಬೇಕು, ಮಕ್ಕಳಾಗಲು ಕಾಮ ಬೇಕೇಬೇಕು.ಹೀಗಿದ್ದರೂ ಕಾಮನು ಮುಕ್ತಿಮಂದಿರದ ಹೊರಬಾಗಿಲಿಗೆ ಇಕ್ಕಿದ ಮುಳ್ಳುಬೇಲಿಯೆಂದು ವಾದಿಸುತ್ತಿರುವಿ.ಇದು ಮರುಳ ಮಾತಲ್ಲವೆ ?
ಸಾ. : ಅದು ಮರುಳ ಮಾತಲ್ಲ ಹುರುಳು ತುಂಬಿದ ಮಾತು.ತಿಳಿದು ನೋಡಿದರೆ ನಿನ್ನ ಮಾತೇ ಕೌತುಕ ಹುಟ್ಟಿಸುವಂತಿದೆ.ಅಪುತ್ರಸ್ಯ ಗತಿರ್ನಾಸ್ತಿ ! ಮಕ್ಕಳಿಲ್ಲದದವರಿಗೆ ಮುಕ್ತಿಯಿಲ್ಲವೆಂಬುದನ್ನು ಕೇಳಿಲ್ಲವೇ ನೀನು ?ನಿನ್ನ ಮಾತಿನಂತೆ ಮೋಕ್ಷಕ್ಕೆ ಸತಿಪತಿಗಳು ಒಂದಾಗಬೇಕು.ಹೀಗಿರಲು ಆ ಕಳ್ಳಕಾಮನು ಯಾತಕ್ಕೆಬೇಕು?
ಕೌ. : ಸುಂದರೀ, ನಿನ್ನ ಮಾತು ತಿಳಿಯದಾಗಿದೆ.ಕಾಮನ ಸಹಾಯ ಪಡೆಯದ ಸತಿ : ಪತಿಗಳು ಸಂಯೋಗ ಪಡೆಯುವದು ಹೇಗೆ ? ಕಾಮವಿಲ್ಲದ ಸತಿ : ಪತಿಗಳು ಮಕ್ಕಳನ್ನು ಹೇಗೆ ಹಡೆಯಬಲ್ಲರು ?ನೀನು ಮಾತ್ರ ಅವನೇಕೆ ಬೇಕೆಂದು ಕೇಳುತ್ತಿರುವಿ.ಮೊದಲಿದ್ದ ಕಾಮ ಕೊನೆಯಲ್ಲಿ ಪ್ರೇಮವಾಗಿ ನಿಲ್ಲುವದು ಸಹಜ.ಆದರೆ ಸತಿಪತಿ ಕಾಮದಾಸೆಯಿಂದಲೇ ಕೂಡಿದಾಗ ಪ್ರೀತಿಯ ಸೆಲೆ ಒಡೆಯುತ್ತದೆ.ಅದಕ್ಕಾಗಿ ಪತಿಯನ್ನು ಪಡೆಯುವದು ಸತಿಯ ಕಾರ್ಯ.ನೀನು ಒಣ ವಾದಕ್ಕೆ ಇಳಿಯಬೇಡ.ಸುಮ್ಮನೆ ನನ್ನನ್ನು ಪತಿಯೆಂದು ಒಪ್ಪಿಕೊ, ಪ್ರೀತಿಯಿಂದ ಅಪ್ಪಿಕೊ. ಅದರಿಂದಲೇ ನೀನು ಸದ್ಗತಿಯನ್ನು ಕಾಣುವಿ.
ಸಾ. : ಛೀ, ನೀಚಾ ಇಚ್ಛೆಗೆ ಬಂದಂತೆ ಏಕೆ ಒದರುವಿ ? ಪತಿಯಿಲ್ಲದವಳು ಪತಿಯನ್ನು ಪಡೆಯಬೇಕು.ಆದರೆ ಈಗಾಗಲೇ ಮದುವೆಯದವಳಿಗೆ ಮತ್ತೇಕೆ ಪತಿ ಬೇಕ?ನನ್ನ ಮದುವೆಯಾಗಿದೆ. ನನಗೆ ಪತಿ ಇದ್ದಾನೆ.ಅಂತಿಂತಹ ಪತಿಯಲ್ಲ ಅವನು! ಪತಿತರನ್ನು ಪಾವನ ಮಾಡುವ ಪತಿಯಾಗಿದ್ದಾನೆ.
ಕೌ. : ಎಲೆ ಮೂಢ ಹೆಂಗಸೆ, ನಿನ್ನ ಆ ಪೌರುಷದ ಪುರುಷ ಎಲ್ಲಿದ್ದಾನೆ ತೋರಿಸು ? ಹುಚ್ಚೆದ್ದು ಇಚ್ಛೆಗೆ ಬಂದಂತೆ ಒದರಿದರೆ ನುಚ್ಚುನೂರಾಗುವಿ.ನಿನ್ನ ಮದುವೆಯಾಗಿಲ್ಲ ನಿನಗೆ ಮಂಗಳಸೂತ್ರ ಕಟ್ಟಿಲ್ಲ.ಆದರೂ ಪತಿ ಇರುವನೆಂದು ಸುಳ್ಳು ಹೇಳುತ್ತೀ. ಹೇಳು : ಅವನಾರು ?ಅವನ ಯೋಗ್ಯತೆಯೇನು ?
ಸಾ. : ಮೂಢಾ, ನೀನು ಹತ್ತು ವರುಷ ತಲೆಕೆಳಗೆ ಮಾಡಿ ತಪಸ್ಸನ್ನಾಚರಿಸಿದರೂ ಪಾಪಿಯಾದ ನಿನಗೆ ನನ್ನ ಪತಿಯ ಇರವು ತಿಳಿಯಲಾರದು.ಆತನು ಕೇವಲ ನನಗೊಬ್ಬಳಿಗೇ ಪತಿಯಲ್ಲ.ನಿನಗೂ ಪತಿ ನಿನ್ನ ಹೆಂಡತಿಗೂ ಪತಿ ಈ ಲೋಕಕ್ಕೂ ಪತಿ ಅವನೇ ನಿಜವಾದ ಜಗತ್ಪತಿ ! ಇಂಥ ಪತಿಯನ್ನು ಪಡೆಯದವರಿಗೆ ಮಾತ್ರ ಗತಿಯಿಲ್ಲ.ನನ್ನ ಪತಿ ನಿನ್ನಂತೆ ಮೂರುದಿನ ಮೆರೆದಾಡಿ ಮಣ್ಣುಪಾಲಾಗುವ ಪತಿಯಲ್ಲ.ಆತನು ಮಾಯೆಗೆ ಒಳಗಾದವನಲ್ಲ ಮದವನ್ನು ಮೆಟ್ಟಿನಿಂತವನು. ನೀನೇ ಪತಿಯೆಂದು ನಂಬಿದ ಭಕ್ತರಿಗೆ ಮಾತ್ರ ಅಮರ ಸುಖವನ್ನು ಕೊಡತಕ್ಕವನು.
ಕೌ. : ಎಲೆ ನಾರಿ, ಈ ನಿನ್ನ ಬಿಂಕದ ಪತಿಯಾರು ?ಅವನ ಹೆಸರೇನು ?
ಸಾ. : ಮೂಢ ದೊರೆಯೇ, ನನ್ನ ಮುದ್ದು ಪತಿಯ ಹೆಸರನ್ನು ಹೇಳಬೇಕೆ ?ಸಿಟ್ಟಿನಿಂದಾಗಲಿ, ಪ್ರೇಮದಿಂದಾಗಲಿ ಅವನ ಹೆಸರನ್ನು ನೀನೊಮ್ಮೆ ಕಿವಿಗೊಟ್ಟು ಕೇಳಬೇಕೆಂದು ಬಯಸುತ್ತಿರುವಿ.ಅದೇ ನಿನ್ನ ಭಾಗ್ಯ !
ಕೌ. : ಎಲೆ ಮೂಢ ಸ್ತ್ರಿಯೇ, ಅವನ ಹೆಸರನ್ನು ಕೇಳುವದರಿಂದ ನನಗೆ ಬಂದ ಭಾಗ್ಯವೇನು?
ಸಾ. : ಅವನ ಹೆಸರನ್ನು ಕೇಳಿದರೆ ನನಗೇನು ಭಾಗ್ಯ ಬರುವದೆಂದು ಕೇಳುವಿಯಾ ? ಅವನ ಹೆಸರಿನ ಭಾಗ್ಯವನ್ನು ಏನೆಂದು ಬಣ್ಣಿಸಲಿ? ಆ ಮಹಾರಾಯನ ಹೆಸರು ಯಾವನ ಕಿವಿಗೆ ಬೀಳುವದೋ ಅವನೇ ಲೋಕದಲ್ಲಿ ಧನ್ಯ. ಹೆಸರು ಹೇಳಿದಾಕ್ಷಣವೇ ಕೇಳಿದವನ ಪಾಪವೆಲ್ಲ ಪರಿಹಾರವಾಗುವದು.ಬಡತನವೆಲ್ಲ ಬಯಲಾಗುವದು.ಅವನ ನಾಮಸ್ಮರಣೆ ಬೇಡಿದ್ದನ್ನು ನೀಡುತ್ತದೆ.ಅಂತಹ ನನ್ನ ಪೂಜ್ಯ ಪತಿಯ ಹೆಸರನ್ನು ಹೇಳುತ್ತೇನೆ : ನಿನ್ನ ಪಾಪವೆಲ್ಲ ಪರಿಹಾರವಾಗುವಂತೆ! ಶುದ್ಧ ಮನಸ್ಸಿನಿಂದ ಕಿವಿಗೊಟ್ಟು ಕೇಳು.ಲೋಕಕ್ಕೆಲ್ಲ ಮೃತ್ಯುಂಜಯನಾಗಿ ಮೆರೆಯುವ ಚೆನ್ನಮಲ್ಲಿಕಾರ್ಜುನನೇ ನನ್ನ ಪತಿ. ಶಿವ ಶಿವಾ ಎಂದು ಸ್ಮರಿಸಿ ಪುನೀತನಾಗು.
ಕೌ. : ಸುಲಿಪಲ್ಲ ಸುಂದರಿ, ನಿನ್ನ ಕಟ್ಟು ಕಥೆಗೆ ನಾನು ಮರುಳಾಗಲಾರೆ, ಶಿವ ಶಿವಾ ಅನ್ನಲಾರೆ ಬೇಕಾದರೆ ನೀನೇ ಶಿವಾ ಎನ್ನುತ್ತೇನೆ.ನನಗೊಲಿದು ತೃಪ್ತಿ ನೀಡು. ತಡವೇಕೆ ? ಬಾ, ಎನ್ನ ತೋಳ ತೆಕ್ಕೆಯಲ್ಲಿ !
(ಅವಳ ಮೇಲೇರಿ ಮುಟ್ಟ ಹೋಗುವನು)
ಸಾ. : ಪದ : ತಾಳ ದಾದರಾ ; ರಾಗ ಭೀಮಪಲಾಸ
ಛೀ ಛೀ ಭ್ರಷ್ಟ, ಸರಿ ಪಾಪಿಷ್ಟ, ಏತಕೆನ್ನನು ಮುಟ್ಟುವಿ
ಸುಟ್ಟು ಭಸ್ಮನಾಗುವಿ ॥ಪಲ್ಲವಿ ॥
ಕೌ. : ಪದ : ತಾಳ ದಾದರಾ ; ರಾಗ ಭೀಮಪಲಾಸ
ಯಾಕೆ ಚದುರಿ ನಿಂತೆ ಬೆದರಿ
ನಾನು ಪದರ ಪಿಡಿಯಲು
ಜಾಣಿ ಉರಗವೇಣಿ ಸ್ಮರನ
ರಾಣಿ ಯಾಕೆ ಕೋಪವು
ತಾಳೆ ಕಾಮತಾಪವ
ಸಾತ್ವಿಕಿ : ಪದ : ತಾಳ ದಾದರಾ ; ರಾಗ ಭೀಮಪಲಾಸ
ಕೆಡುವೆ ಭೂಪ ಕೊಡುವೆ ಶಾಪ
ಕೊಡಲು ನೀನು ನನಗೆ ತಾಪ
ಬ್ಯಾಡೊ ರಾಯಾ ನನ್ನ ಕೈಯ
ಪಿಡಿಯಲಿಕ್ಕೆ ಬರುವದು
ಮುಂದಕನ್ನೆ ಕರೆವುದು
ಕಾಮಿಯಾರಸಾ, ದೂರ ಸರಿದು ನಿಲ್ಲು ; ಮೈಮೇಲೆ ಬಂದರೆ ನಿನ್ನ ಗತಿ ನೆಟ್ಟಾಗಾಗಲಿಕ್ಕಿಲ್ಲ.ಎಚ್ಚರದಿಂದ ನಡೆದುಕೋ,ನನ್ನ ಹೇಳಿಕೆಯಂತೆ ನಡೆಯುವೆನೆಂದು ಮೊದಲು ವಚನ ಕೊಟ್ಟು ಈಗ ವಿಚಾರಹೀನನಾಗಿ ನನ್ನನ್ನು ಮುಟ್ಟಲು ಬರುತ್ತಿರುವಿಯಾ ? ನೀಚಾ, ತೊಲಗಾಚೆ !ದುಷ್ಟ ಬುದ್ಧಿಯಿಂದ ನನ್ನನ್ನು ಮುಟ್ಟಿದರೆ ನೀನು ಸುಟ್ಟು ಭಸ್ಮನಾಗುವಿ!
ಕೌ. : ಎಲೆ ನಾರೀಮಣಿಯೆ, ಹಿಂದಕ್ಕೇಕೆ ಸರಿಯುತ್ತಿರುವಿ?ಸಿಟ್ಟಿನಿಂದ ನನ್ನನ್ನನೇಕೆ ಜರಿಯುತ್ತಿರುವಿ?ಹೇಳು, ನಾನು ಕೊಟ್ಟ ವಚನವಾವುದು ?ಅದನ್ನು ಬೇಗನೆ ಪೂರೈಸಿ ನಿನ್ನ ಅಂಗಸುಖವನ್ನು ಪಡೆಯುವೆನು ವಯ್ಯರೀ, ನೀ ಎನಗೆ ಒಲಿದರೆ ನಿನ್ನನ್ನು ಬಂಗಾರದ ರಾಶಿಯ ಮೇಲೆ ಕುಳ್ಳಿರಿಸುವೆ.ಸಿಂಗಾರದ ಸಿರಿಯಲ್ಲಿ ಉಳ್ಳಾಡಿಸುವೆ ಮುತ್ತು ರತ್ನಗಳಲ್ಲಿ ಮುಚ್ಚುವೆ ನಾನು ಪಾಲಿಸತಕ್ಕ ವಚನವಾವುದು? ಬೇಗನೆ ಹೇಳು.ಅದನ್ನು ಪೂರೈಸಿ, ನೀನು ಸಂತೋಷಚಿತ್ತಳಾಗುವಂತೆ ಮಾಡುತ್ತೇನೆ.
ಸಾ. : ನನಗೆ ನಿನ್ನ ಬಂಗಾರವೂ ಬೇಕಾಗಿಲ್ಲ ನಿನ್ನ ಸಿಂಗಾರವೂ ಬೇಕಾಗಿಲ್ಲ.ನಾನು ಭೋಗಿನಿಯಲ್ಲ, ಶಿವಯೋಗಿನಿ ! ನನ್ನನ್ನು ಪಡೆಯುವ ಶಕ್ತಿ ನಿನಗೆಲ್ಲಿದೆ ?
ಕೌ. : ಪದ : ತಾಳ : ಕೇರವಾ ; ರಾಗ : ಅಸ್ಸಾ
ಬಾರ ಬಾರೇ ನೀರೆ ಮನೋಹರೆ
ಬಾ ನಿನ್ನನ್ನು ಹೊಂದುವದ್ಯಾವ ಘನ ಕಾರ್ಯ
ಬೇಕಾಗಿಹುದ್ಯಾತಕೆ ಶೌರ್ಯ ॥ಪಲ್ಲವಿ ॥
ಕೌ. : ನಾನಿರುವೆ ಪುರುಷ ಪ್ರಬಲಾ
ಸಾ. : ನನ್ನ ಹೊಂದುವದು ಸುಲಭದ ಮಾತಲ್ಲ
ಕೌ. : ಕೂಡಿ ನೋಡೆನ್ನ ಕಾಮದ ಲೀಲಾ
ಸಾ. : ಕಾಮವೆಂಬುವದೆನ್ನೊಳಗಿಲ್ಲಾ (ಚಲತಿ) ॥
ಕೌ. : ಕೂಡೆನ್ನ ಸುಂದರಿ ದಯವಿಟ್ಟು
ಸಾ. : ಕಾಮನ್ನ ಸುಟ್ಟು ನನ್ನ ಮುಟ್ಟು
ಕೌ. : ಯಾತಕ್ಕೆ ನಿಂತೆ ಪಂಥ ತೊಟ್ಟು
ಸಾ. : ಹುರಿ ನಿನ್ನ ದುರ್ಗುಣದ ಹುಟ್ಟು (ಚಲತಿ) ॥
ಎಲೆ ನಾರಿ, ಗುಡ್ಡವನ್ನು ಹೊರುವ ಬಂಟನಿಗೆ ಗುದ್ದಲಿಯನ್ನು ಹೊರುವದಾಗುವದಿಲ್ಲವೆ ?ನಿನ್ನಂತಹ ನೂರಾರು ಮಂದಿ ಜಾಣೆಯರು ನನ್ನ ಮಂದಿರದಲ್ಲಿ ಜೋಕು ಹೊಡೆಯುತ್ತಿರಲು, ನಿನ್ನನ್ನು ಹೊಂದಲು ಮತ್ತಾವ ಧೈರ್ಯ ಬೇಕು?ಗಂಡನ ಗಂಡನೆನಿಸಿದ ಕಡುಗಲಿಗೆ ಷಂಡನನ್ನು ಒಗೆಯುವದೇನು ಮಹಾಕಾರ್ಯ? ತಿಳಿದು ನೋಡು ನನ್ನನ್ನು ಕೂಡು.ಆಗ ಸ್ವರ್ಗವೇ ಇಳಿದು ಬಂದು ನಿನ್ನೆದುರಿಗೆ ನಿಲ್ಲುತ್ತದೆ.ಹುಚ್ಚಿ, ನಾನು ಸಾಮಾನ್ಯವೆಂದು ಬಗೆದು ಹೀಗೆ ಮಾತಾಡುವಿಯಾ ? ರೂಪದಲ್ಲಿ ಕಾಮನನ್ನು ಬಲದಲ್ಲಿ ಭೀಮನನ್ನು ಕಾರ್ಯದಲ್ಲಿ ಷಣ್ಮುಖನನ್ನು ಸೋಲಿಸುವ ಸಾಮರ್ಥ್ಯನನ್ನಲ್ಲಿದೆ.ಇಂಥವನನ್ನು ಬಿಟ್ಟು ಮತ್ತೇನು ಮಾಡುತ್ತಿ? ಕೈಗೆ ಬಂದ ಅಮೃತವನ್ನು ಚೆಲ್ಲಿ ಹಳಹಳಿಸಬೇಡ.
ಸಾ. : ಎಲೈ ಅರಸಾ, ನಾನು ನಾಡಾಡಿ ಹೆಂಗಸಲ್ಲ.ನನ್ನನ್ನು ಹೊಂದುವದು ಸಾಮಾನ್ಯರಿಗೆ ಸಾಧ್ಯವಿಲ್ಲ.ನಾನು ಸಾತ್ವಿಕಿ, ಅಂದರೆ ಸತ್ವಗುಣ ಉಳ್ಳವಳು. ಸತ್ತರೂ ಸತ್ವಗುಣವನ್ನು ಬಿಡದ ಅಚಲ ಮೂರ್ತಿ ನಾನು ! ನೀನೋ ಕಾಮುಕ ! ತಾಮಸಿ!! ತಾಮಸಗುಣಗಳು ನಿನ್ನಲ್ಲಿ ತುಂಬಿವೆ.ನಿನ್ನನ್ನು ಸುಟ್ಟರೂ ಆತಾಮಸಗುಣ ಹೋಗುವದಿಲ್ಲ.ನನ್ನಲ್ಲಿ ಕಾಮವಿಲ್ಲ ಕ್ರೋಧವಿಲ್ಲ ಲೋಭವಿಲ್ಲ ಮೋಹವಿಲ್ಲ ಮದವಿಲ್ಲ ಮತ್ಸರವಿಲ್ಲ ನಿನ್ನಲ್ಲಿ ಕಾಮವಿದೆ ಕ್ರೋಧವಿದೆ ಲೋಭವಿದೆ ಮೋಹವಿದೆ ಮದವಿದೆ ಮತ್ಸರವಿದೆ. ಆದ್ದರಿಂದಲೇ ನಾನು ಹೇಳುವದು : ನಾನು ಸಾತ್ವಿಕಿ ನೀನು ತಾಮಸಿ : ಎಂದು, ವಿರುದ್ಧಗುಣಗಳು ಎಂದೆಂದೂ ಒಂದಾಗುವದಿಲ್ಲ.ನಿನಗೆ ನಾನೇ ಬೇಕಿದ್ದರೆ, ಮೊದಲು ನಿನ್ನ ತಾಮಸೀ ಗುಣವನ್ನು ಬಿಟ್ಟು ಕಾಮಮೋಹಾದಿಗಳನ್ನು ಸುಟ್ಟು ನಂತರ ನನ್ನನ್ನು ಮುಟ್ಟು.ಅಂದರೆ ನಾನು ನಿನಗೆ ಪಟ್ಟದರಸಿಯಾಗಿ ನಿನ್ನೊಡನೇ ಇದು ಕೊನೆಗೆ, ನಿನ್ನನ್ನು ಕೈವಲ್ಯಪದದಲ್ಲಿ ಇರಿಸುವೆನು.
ಕೌ. : ಬಟ್ಟ, ಕುಚದ ಬಾಲೆ, ಎಂಥ ವಿಚಿತ್ರ ಮಾತುಗಳನ್ನು ಆಡುತ್ತಿರುವಿ ? ಕಾಮವನ್ನು ಸುಟ್ಟಮೇಲೆ ನಿನ್ನನ್ನೇಕೆ ಮುಟ್ಟಬೇಕು?ಆ ಕಾಮವನ್ನು ಶಾಂತ ಮಾಡುವದಕ್ಕಾಗಿಯೇ ನಿನ್ನನ್ನು ನಾನು ಬಯಸುತ್ತಿರುವುದು ಕಾಮನೇ ನಿನ್ನನ್ನು ಪ್ರೇಮಿಸುವಂತೆಹುರಿದುಂಬಿಸಿದ್ದಾನೆ. ಅವನು ಮಹಾತೇಜಸ್ವಿ.ಒಮ್ಮೆ ಅವನ ದರ್ಶನ ನಿನಗಾದರೆ ಅವನನ್ನು ಬಿಟ್ಟು ಅರಗಳಿಗೆಯಾದರೂ ನೀನಿರಲಾರೆ.ಅವನಿಂದಲೇ ಈ ಜಗತ್ತಿನ ಸೃಷ್ಟಿ.ಅವನು ಇರದಿದ್ದರೆ ಈ ಲೋಕವು ಹುಟ್ಟದೇ ಹುರಿದುಹೋಗಿ ನಿಶ್ಯಬ್ದವಾದ ಅರಣ್ಯದಂತೆ ಕಾಣುತ್ತಿತ್ತು. ಸುಮ್ಮನೆ ಸಮ್ಮತಿಸಿ ಒಮ್ಮೆ ಕಾಮನ ಕೌತುಕವನ್ನು ನೋಡು.
ಸಾ. : ಛೀ ಭ್ರಷ್ಟಾ, ಹಿಂದಕ್ಕೆ ಸರಿ.ನೀನು ಭ್ರಷ್ಟ ಕಾಮನನ್ನು ಕೊಂಡಾಡುವ, ಮುಂಡಾಡುವ, ಪರಮ ಚಾಂಡಾಲ ! ನಡೆ, ನನ್ನೆದುರಿಗೆ ನಿಲ್ಲಬೇಡ.
ಪದ : ತಾಳ ಕೇರವಾ ; ರಾಗ ಭೈರವಿ
ಜನಪ ಕೇಳೆನ್ನ ಪತಿದೇವ ಸದಾಶಿವ
ಪತಿದೇವ ಸದಾಶಿವ (ದುಗುಣ) ॥ಪಲ್ಲವಿ ॥
ಆ ಪತಿನಾಮ ಕೇಳಿದವಗೆ ಕ್ಷೇಮ
ಮುಂದಿಲ್ಲೊ ಜನ್ಮಪತಿದೇವ…… ॥
ಆ ನನ್ನ ಸ್ವಾಮಿ ಸರ್ವಾಂತರ್ಯಾಮಿ
ಭಕ್ತರ ಕ್ಷೇಮಿಪತಿವ್ರತೆ…. ॥
ಆ ಪತಿಯಿಂದ ಗತಿ ನಿಜವೆಂದ
ಕಲಿ ಶಿವಾನಂದಪತಿದೇವ…… ॥
ಮಹಾರಾಜನೆ, ನನ್ನ ಪೂಜ್ಯಪತಿಯ ಹೆಸರನ್ನು ಹೇಳುತ್ತೇನೆ ಕೇಳು. ಅವನ ಹೆಸರು ಒಮ್ಮೆಯಾದರೂನಿನ್ನ ಕಿವಿಯ ಮೇಲೆ ಬೀಳಲಿ. ಆ ಮಹಾಮಹಿಮನ ನಾಮವನ್ನು ಭಕ್ತಿಯಿಂದ ಕೇಳಿದವನು ಒಂದು ದಿವಸದ ಮಟ್ಟಿಗಾದರೂ ಸ್ವರ್ಗಭೋಗವನ್ನು ಹೊಂದದೆ ಇರನು.ಚಿತ್ತವಿಟ್ಟು ಲಾಲಿಸು.ನನ್ನ ಪುಣ್ಯ ಪತಿಯ ಹೆಸರು ಸದಾ ಅಂತಃಕರಣಿಯಾದ ಸದಾಶಿವನೆಂಬುದು. ಅವನೊಡನೆ ನನ್ನ ಮದುವೆಯಾಗಿದೆ.ನಾಮೋಚ್ಛಾರಣ ಮಾತ್ರದಿಂದಲೆ ಸದ್ಗತಿಯನ್ನುಂಟು ಮಾಡುವ ಆ ಕೈಲಾಸಪತಿಯು ನನಗೆ ಪತಿಯಾಗಿರಲು ದುರ್ಮತಿಯಾದ ನಿನ್ನನ್ನು ಪತಿಯನ್ನಾಗಿ ಸ್ವೀಕರಿಸುವ ಬಗೆ ಹೇಗೆ ?ಪರಮ ಪತಿವ್ರತೆಗೆ ಗಂಡನೊಬ್ಬನಲ್ಲದೆ ಇನ್ನೊಬ್ಬನಿರಬಹುದೆ ? ನಿನ್ನನ್ನು ಮಾಡಿಕೊಂಡರೆ ಗತಿಯೇನು ? ತನ್ನ ಹೊಟ್ಟೆಗೆ ಅನ್ನವಿಲ್ಲದೆ ಅನ್ಯರ ಹೊಟ್ಟೆಯನ್ನು ತುಂಬಿಸಲು ಹವಣಿಸುವವನಂತೆ ನಿನಗೇ ಗತಿಯಿಲ್ಲದ ನೀನು ಅನ್ಯರಿಗೆ ಯಾವ ಗತಿಯನ್ನು ಕೊಡಬಲ್ಲೆ ? ದೊರೆಯೆ, ತಿಳಿದು ನೋಡು ನಿನ್ನನ್ನು ದುರ್ಗತಿಗೆ ಎಳೆಯಲು ಡುಬ್ಬವನ್ನು ಚಪ್ಪರಿಸುತ್ತಿರುವ ಆ ದುಷ್ಟ ಕಾಮನ ಬೆನ್ನು ಬಿಡು.ದೀಕ್ಷೆ ಪಡೆದು ಶಿವಭಕ್ತನಾಗು, ದುರ್ಗುಣವನ್ನು ನೀಗು.ಆ ಮೇಲೆ ಮುಂದಿನ ವಿಚಾರ.
ಕೌ. : ಸುಂದರಿ, ಏನೂ ತಿಳಿಯದೆ ಸುಳಿಬಾಳೆಯಂಥ ನಿನ್ನ ಶರೀರವನ್ನು ಏಕೆ ನಂದಿಸುತ್ತಿರುವಿ ?ಜಗತ್ತಿಗೊಬ್ಬ ಮಹಾದೇವನಿರುವದು ಸತ್ಯ.ಅದೆಂದೂ ಸುಳ್ಳಲ್ಲ.ಈ ಲೋಕದಲ್ಲಿ ಕುಲೀನತೆಯಿಂದಲೂ ಚೆಲ್ವಿಕೆಯಿಂದಲೂ ಚಾತುರ್ಯದಿಂದಲೂ ತನಗೆ ಅನುರೂಪನಾದ ಪತಿಯನ್ನು ಮಾಡಿಕೊಳ್ಳದೆ ಕೇವಲ ಮಹಾದೇವನೇ ಪತಿ ಎಂದರೆ ಎಂದೆಂದೂ ಮುಕ್ತಿಯಾಗಲಾರದು.
ಸಾ. : ಎಂಥ ವಿಚಿತ್ರ ಮಾತಿದು ! ಕಾಮಾಂಗನಿಗೆ ತತ್ವ ಶಾಸ್ತ್ರವೂ ತಿಳಿಯದು !!
ಕೌ. : ರಮಣೀ ಹೇಳುತ್ತೇನೆ ಕೇಳು :
ಪದ : ತಾಳ ತ್ರಿತಾಳ ; ರಾಗ ಮಿಶ್ರಕಾಪಿ
ವಿಚಿತ್ರದ ಮಾತಲ್ಲ ಸಾರ್ವುದು ಜಗವೆಲ್ಲ
ಮಕ್ಕಳಿಲ್ಲದವರಿಗೆ ಮುಕ್ತಿ ಮೊದಲಿಲ್ಲ
ಎಂಬ ಶಾಸ್ತ್ರದ ಮಾತು ಸುಳ್ಳಲ್ಲ
ಪತಿಯನ್ನು ಆಗದೆ ಸಂತತಿ ಆಗ್ವುದೆ
ಸಹಜ ಮುಕ್ತಿಯದು ದೊರಕುವದೆ ಬಾ ಮುಗ್ಧೆ, ॥
ಬಿತ್ತುವ ತಿಥಿಯು ತಾ ಒತ್ತಿ ಬಂದ ಕಾಲಕ್ಕೆ
ಕತ್ತೆಯಂತೆ ತಿರುಗಿ ಹೊಲವ ಪಡಗೆಡವಿ
ಕೂತಂತೆ ನಿನ್ನ ಪ್ರಾಯ ಪಡಗೆಡವಿ
ಮಕ್ಕಳ ಫಲಕಟ್ಟಿ ಪಾಪದ ಹೊರೆಕಟ್ಟಿ
ಕೊಳ್ಳುವದಲ್ಲ ಪಡೆಸಂತತಿ ಆಗಿ ಸತಿ ॥
ಮೋಹನಾಂಗಿ, ಅಪುತ್ರಸ್ಯ ಗತಿರ್ನಾಸ್ತಿ ! ಮಕ್ಕಳಿಲ್ಲದವರಿಗೆ ಮುಕ್ತಿಯೇ ಇಲ್ಲ !! ಹೀಗೆಂದು ಶಾಸ್ತ್ರ ಸಾರಿಹೇಳುತ್ತಿದೆ.ಜಗತ್ತಿನಲ್ಲಿ ಮದುವೆಯಾಗದೆ ಮೋಕ್ಷಕ್ಕೆ ಕಾರಣವಾದ ಮಕ್ಕಳು ಹುಟ್ಟಲಾರವು.ಲೋಕದ ಪದ್ಧತಿಗೆ ಅನುಸರಿಸಿ ಪತಿಯನ್ನು ಮಾಡಿಕೊಳ್ಳದೆ, ಆ ಶಿವನೇ ಪತಿಯೆಂದು ನಂಬಿ ಕೂತರೆ, ಆ ಶಿವನು ಕೂಸುಗಳನ್ನು ಹಡೆದು ತಂದು ಮುಂದೆ ಇಳಿಸಿ ಹೋಗುವನೇನು? ಸುಂದರಿ, ಬಿತ್ತುವ ತಿಥಿ ಒತ್ತಿ ಬಂದ ಕಾಲಕ್ಕೆ ಹೊಲವನ್ನು ಕಣ್ಣೆತ್ತಿ ನೋಡದೆ ಕತ್ತೆಯಂತೆ ತಿರುಗಿ ಹೊಲವನ್ನು ಪಡಗೆಡವಿ ಪರರಿಗೆ ಕೈಯೊಡ್ಡುವ ಹೆಡ್ಡರ ಹಾಗೆ, ಹರೆಯದ ಹಂಗಾಮ ಒತ್ತಿ ಬಂದು ನಿಂತಿರಲು ಪ್ರಾಯವನ್ನೇ ಪಡೆಗೆಡವಿ ಮುಕ್ತಿಯನ್ನು ಕೊಡುವ ಮಕ್ಕಳ ಫಲವನ್ನು ಕಟ್ಟಿದರೆ ಪಾಪಕ್ಕೆ ಗುರಿಯಾಗಿ, ಮುಕ್ತಿಗೆ ಮಕ್ಕಳನ್ನು ಹಡೆ ಅಂದಾಗಲೇ ಮುಕ್ತಿ ಸಾಧ್ಯ.
ಸಾ. : ಏನು ? ಮಕ್ಕಳಿಂದಲೇ ಮುಕ್ತಿ ಸಿಗುವದೇ ?ಹಾಗಾದರೆ ಮುಕ್ತಿ ಎಷ್ಟು ಸುಲಭವಾ ದಂತಾಯಿತು! ಪಾಪಿ ಇರಲಿ ಕೋಪಿ ಇರಲಿ ಪಾತಕಿ ಇರಲಿ ಶಿವದ್ರೋಹಿ ಇರಲಿ ಯಾರೇ ಇರಲಿ ಅವರಿಗೆ ಮನೆತುಂಬ ಮಕ್ಕಳು ಹುಟ್ಟಿದರೆ ಸಾಕು ಮುಕ್ತಿ ನಿಶ್ಚಿತ! ಹೀಗಿದ್ದರೆ ಸಾಧುಸಂತರು ಎಂಥ ಹುಚ್ಚರು !! ಮಕ್ಕಳಾದರೆ ಮುಕ್ತಿ ನಿಶ್ಚಿತವೆಂಬ ನಿನ್ನ ತತ್ವವನ್ನು ಮರೆತು ಜಪ ತಪ ವ್ರತೋಪವಾಸ ದಾನ ಧರ್ಮ ಕ್ಷೇತ್ರ ಯಾತ್ರೆ ತ್ಯಾಗ ಯೋಗ ಭಕ್ತಿ ಜ್ಞಾನ ಮೊದಲಾದ ಸಾಧನೆಗಳ ಬೆನ್ನು ಹತ್ತಿ ಸುಟ್ಟು ಸುಣ್ಣವಾಗುತ್ತಿರುವರಲ್ಲ! ನಿನ್ನ ತತ್ವವೇ ಸತ್ಯವಾದರೆ ಮಕ್ಕಳನ್ನು ಹಡೆಯುವ ಕಾಗೆ : ಗೂಗೆಗಳಿಗೂ ಮುಕ್ತಿಯಾಗಬೇಕಲ್ಲವೆ ?ಛೀ ಮದಾಂಧಾ, ಕರಿಕೆಯನ್ನು ನೆಕ್ಕುವ ಕತ್ತೆಯ ಮುಂದೆ ಕರಿಗಡಬನ್ನು ಇಟ್ಟಂತೆ ಆಯಿತು : ನಿನಗೆ ಹೇಳಿದ ತತ್ವಶಾಸ್ತ್ರ ! ನಿಮ್ಮಂಥವರಿಗೆ ತತ್ವಬೋಧೆ ಮಾಡುವುದೆಂದರೆ ಬೋರ್ಗಲ್ಲ ಮೇಲೆ ನೀರೆದಂತೆಯೇ ಸರಿ.
ಕೌ. : ಹಾಗಾದರೆ ಅಪುತ್ರಸ್ಯ ಗತಿರ್ನಾಸ್ತಿ : ಎಂಬ ವಾಕ್ಯ ಸುಳ್ಳಾಯಿತೆ ?
ಸಾ. : ಆ ವಾಕ್ಯ ಸುಳ್ಳಲ್ಲ.ನೀನು ಮಾಡಿಕೊಂಡ ಅರ್ಥ ಸುಳ್ಳು.
ಕೌ. : ಹಾಗಾದರೆ ಅದರ ನಿಜವಾದ ಅರ್ಥವಾವುದು ?
ಸಾ. : ಕೌಶಿಕಾಅಪುತ್ರಸ್ಯ ಗತಿರ್ನಾಸ್ತಿ ಎನ್ನುವ ಮಾತಿನ ಅರ್ಥವನ್ನೂ ತಿಳಿಯುವಂತೆ ಹೇಳುತ್ತೇನೆ ಕೇಳು ;
ಪದ : ತಾಳ ಕೇರವಾ; ರಾಗ ಭೂಪ
ಅಪುತ್ರಸ್ಯ ಗತಿರ್ನಾಸ್ತಿ ಎಂಬ ಶಾಸ್ತ್ರದ ರೀತಿ
ಅರ್ಥ ಹೇಳುವೆ ಕೇಳೋ ಭೂಪಾಲಾ ॥ಪಲ್ಲವಿ ॥
ಮುಕ್ತಿ ಮಕ್ಕಳಿಗೆ ಸಂಬಂಧವಿಲ್ಲ
ಗುರುವಿನ ಮಕ್ಕಳು ಅಲ್ಲವಾದವರ ಕೇಳು
ಮುಕ್ತಿಯೆಂಬುವದಿಲ್ಲೊ ಜನಪಾಲಾ ॥
ಗುರುವಿನ ಮಗನಾಗು ಹರನಿಗೆ ಶಿರಬಾಗು
ಇರುವೆನು ನಿನ್ನಲ್ಲಿ ತಾಯಿಯಾಗಿ
ಮುಕ್ತಿ ತೊಟ್ಟಿಲದಲ್ಲಿ ನಿನ್ನ ತೂಗಿ ॥
ಸತ್ವದ ಹಾಲಾ ಕುಡಿಸುತ ಬಾಲಾ
ನಂದದಿ ಪೊರೆವೆನು ಅನುಗಾಲಾ ಭೂಪಾಲಾ
ಜನಪಾಲಾ ಖರೇಮೂಲಾ ॥
ಅರಸಾ ಕೌಶಿಕಾ, ಅಪುತ್ರಸ್ಯ ಗತಿರ್ನಾಸ್ತಿ ಈ ವಾಕ್ಯದ ಅರ್ಥವನ್ನು ಆಗಲೇ ನೀ ಹೇಗೆ ಹೇಳಿದೆ ?
ಕೌ. : ಮಕ್ಕಳಿಲ್ಲದವರಿಗೆ ಮುಕ್ತಿಯಿಲ್ಲ : ಎಂದು ಹೇಳಿದೆ.
ಸಾ. : ಅದು ತಪ್ಪು ಮಕ್ಕಳಾಗದವರಿಗೆ ಮುಕ್ತಿಯಿಲ್ಲ : ಎಂಬುದು ಅದರ ಇಂಗಿತ ಅರ್ಥ.
ಕೌ. : ಮಕ್ಕಳಾಗದವರು ಯಾರು? ಹುಟ್ಟಿದವರೆಲ್ಲರೂ ತಂದೆಗೆ ಮಕ್ಕಳಲ್ಲವೇ ?
ಸಾ. : ತಂದೆಗೆ ಮಕ್ಕಳು ಹೌದಾದರೂ ಅವರು ಗುರುವಿನ ಮಕ್ಕಳಾಗದೆ ಮುಕ್ತಿ ಇಲ್ಲ ನೀನು ನನ್ನನ್ನು ಹೊಂದಲಿಚ್ಚಿಸಿದರೆ ಮೊದಲು ನೀನು ಗುರುವಿನ ಮಗನಾಗಬೇಕು.ಆದ್ದರಿಂದ ನೀನು ಗುರುವಿಗೆ ಶಿರಬಾಗಿ ಗುರುಪುತ್ರನಾಗು.ಅಂದರೆ ನಾನು ನಿನ್ನ ತಾಯಿಯಾಗಿ ನಿನ್ನಲ್ಲಿದ್ದು ನಿನ್ನನ್ನು ಮುಕ್ತಿಯೆಂಬ ಮುತ್ತಿನ ತೊಟ್ಟಿಲಲ್ಲಿ ಹಾಕಿ ತೂಗುತ್ತ ಕುಳಿತುಕೊಳ್ಳವೆನು.
ಕೌ. : ಬಡನಡುವಿನ ಬಾಲೆ, ನಿನ್ನ ಹಾಳು ಪುರಾಣವನ್ನು ಕೇಳಲಿಕ್ಕೆ ನಿನ್ನನ್ನು ಕರಿಸಿಲ್ಲ.ಸತ್ತಮೇಲೆ ಹೀಗಾಗುವುದು ಹೊತ್ತಮೇಲೆ ಹೀಗಾಗುವುದು : ಎಂಬ ಮೋಕ್ಷಶಾಸ್ತ್ರದ ಗಂಟು ನಿನ್ನಲ್ಲಿಯೇ ಇರಲಿ ! ಅದು ನನಗೆ ಬೇಕಾಗಿಲ್ಲ.ನೀನೀಗ ನನ್ನ ಮಾತುಕೇಳಿ ಮದುವೆ ಆಗುವಿಯೋ ಇಲ್ಲವೋ ಹೇಳು. ಇಲ್ಲದಿದ್ದರೆ ಈಗಲೇ ನಿನ್ನ ಮಾನಭಂಗ ಆದೀತು! (ಸೀರೆಯ ಸೆರಗು ಹಿಡಿಯ ಹೋಗುವನು).
ಸಾ. : ಛೀ ಭ್ರಷ್ಟಾ, ನನ್ನನ್ನು ಮುಟ್ಟಬೇಡ ನನ್ನನ್ನು ಮುಟ್ಟಿದರೆ ನೀನು ಸುಟ್ಟು ಭಸ್ಮವಾಗುವಿ.
ಕೌ. : ಮುಟ್ಟಿದರೆ ಸುಡಲಿಕ್ಕೆ ನೀನೇನು ಬೆಂಕಿಯೆ? ಇಲ್ಲದ ಬಿಂಕವನ್ನು ನನ್ನ ಮುಂದೆ ಬಿಚ್ಚಬೇಡ.
ಸಾ. : ಕೌಶಿಕಾ, ನಾನು ಅಂತಿಂತಹ ಬೆಂಕಿಯಲ್ಲ ! ಹರನ ಉರಿಗಣ್ಣಿನಲ್ಲಿರುವ ಪ್ರಳಯಾಗ್ನಿಗಿಂತಲೂ ಹೆಚ್ಚಿನ ಬೆಂಕಿಯಾಗಿರುವೆನು.ಸತ್ವಗುಣಕ್ಕೆ ಸದಾಶಿವನು ಸಹ ಹೆದರುತ್ತಾನೆ.ಪಾಪಿಷ್ಟರು ಸತ್ವಶಾಲಿಗಳು ಮೆಟ್ಟುವ ಜೋಡನ್ನು ಮುಟ್ಟಲಿಕ್ಕೂ ಅಯೋಗ್ಯರು.ಹೇಳಿದರೂ ಕೇಳದೆ ದುಷ್ಟತನದಿಂದ ನೀನು ನನ್ನನ್ನು ಮುಟ್ಟಿದರೆ ಮಧುವರಸನಂತೆ ಮಹಾದುಃಖಕ್ಕೆ ಗುರಿಯಾಗುವಿ!
ಕೌ. : ಎಲೆ ಬಾಯಬಡಕಿ, ಎಷ್ಟು ಬಾಯಿ ಬಿಡುತ್ತಿ ! ಸತ್ಪುರುಷರು ಮೆಟ್ಟುವ ಜೋಡನ್ನು ಮೆಟ್ಟಿ ಕಷ್ಟಕ್ಕೆ ಗುರಿಯಾದವನು ಯಾರು ?ಅವನು ಕಷ್ಟಕ್ಕೆ ಹೇಗೆ ಗುರಿಯಾದ ?
ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ
ಸಾ. :
ಮಧುವರಸನೆಂಬುವಂಥ ಬ್ರಾಹ್ಮಣ
ಅರಸ ಇದ್ದ ಬಿಜ್ಜಳನಲ್ಲಿ ಪ್ರಧಾನ ॥ಪಲ್ಲವಿ ॥
ಹರಳಯ್ಯನೆನಿಪ ವರಶಿವಯೋಗಿ
ಬಸವನಿಗಾಗಿ ಒಯ್ದ ಚಮ್ಮಾವುಗಿ
ಮೆಟ್ಟಲು ಬೇಡ ತಟ್ವುದು ಕೇಡು
ಎಂದರೂ ಕೇಳದೆ ಆ ಮೂಢ ! ಮಧುವರಸ….. ॥
ಮುಟ್ಟಿಸಲವ ಪಾದ ಚಮ್ಮಾವುಗಿ
ಅವನ ಸುತ್ತಿ ಸುಡಹತ್ತಿತೊ ಕಡುಬ್ಯಾಗಿ
ಶರಣರ ಮಹಿಮಾ ತಿಳಿಯದೆ ಹಮ್ಮಾ
ಸಲ್ಲದು ಬಿಡು ನಿರಿಗಿ ಅಧಮಾಮಧುವರಸ….. ॥
ಅರಸಾ ಶಿವಶರಣರು ಮೆಟ್ಟುವ ಜೋಡನ್ನು ಮುಟ್ಟಿ ಕಷ್ಟಕ್ಕೆ ಗುರಿಯಾದ ಕರ್ಮಿಯ ಸುದ್ದಿಯನ್ನು ಹೇಳುತ್ತೇನೆ ಕೇಳು ; ಕಲ್ಯಾಣ ಪಟ್ಟಣದಲ್ಲಿ ಹರಳಯ್ಯನೆಂಬ ಶಿವಶರಣನಿದ್ದ.
ಕೌ. : ಅವನು ಯಾವ ಜಾತಿಯವನು ?
ಸಾ. : ಅವನು ಜಾತಿಯಿಂದ ಹೊಲೆಯನಾದರೂ ಶಿವದೀಕ್ಷೆಯಿಂದ ಶಿವಭಕ್ತನಾಗಿದ್ದ.ಅವನನ್ನು ಸರಿಗಟ್ಟುವವರು ಯಾರೂ ಇರಲಿಲ್ಲ.ಸಾತ್ವಿಕ ಶಿರೋಮಣಿಯಾದ ಹರಳಯ್ಯನು ಒಂದು ದಿವಸ, ಕಲ್ಯಾಣ ಪಟ್ಟಣದಲ್ಲಿ ಹಾಯ್ದುಹೋಗುವಾಗ ಬಸವಣ್ಣನವರ ದರ್ಶನವಾಯಿತು.ಕೂಡಲೇ ಹರಳಯ್ಯನು ಶಿರಬಾಗಿ ಕರಮುಗಿದು : ಶರಣಾರ್ಥಿ : ಎಂದನು ಅದಕ್ಕೆ ಪ್ರತಿಯಾಗಿ ಬಸವಣ್ಣನವರು ಆ ಶರಣನಿಗೆ ಶರಣು ಶರಣಾರ್ಥಿ : ಎಂದು ನುಡಿಯಲು, ಹರಳಯ್ಯನು : ಇದೇನು, ಬಸವಣ್ಣ ನನ್ನ ಶರಣು ಮುಟ್ಟಿಸಿದ್ದಲ್ಲದೆ, ಮೇಲೊಂದು ಹೆಚ್ಚಿನ ಶರಣಾರ್ಥಿಯ ಭಾರವನ್ನು ಹೊರಿಸಿದನು : ಎಂದು ಮರಮರನೆ ಮರುಗಿ, ಈ ಭಾರವನ್ನು ಹೇಗೆ ಇಳುಹಲೆಂದು ಚಿಂತಿಸಿ, ತನ್ನ ತೊಡೆಯ ಚರ್ಮವನ್ನು ಕತ್ತರಿಸಿ ಪವಿತ್ರವಾದ ಜೋಡನ್ನು ತಯಾರಿಸಿ ಬಸವಣ್ಣನಿದ್ದಲ್ಲಿಗೆ ನಡೆದನು.ಅವುಗಳನ್ನು ಕಂಡ ಬಸವಣ್ಣನವರು ಭಯ ಭಕ್ತಿಯಿಂದ : ಸತ್ಯಶರಣರಾದ ಹರಳಯ್ಯನವರೇ, ತಮ್ಮ ಪರುಷ ಹಸ್ತದಿಂದ ಹುಟ್ಟಿದ ಈ ಚಮ್ಮಾವುಗೆಗಳನ್ನು ಮೆಟ್ಟುವ ಯೋಗ್ಯತೆ ನನಗಿಲ್ಲ.ನಾನು ಶರಣರ ಮನೆಯ ಕಿಂಕರ : ಎಂದು ಹೇಳಿ ಹಿಂದಕ್ಕೆ ಕಳಿಸಿದರು. ಹರಳಯ್ಯನು ಜೋಡನ್ನು ಭಕ್ತಿಯಿಂದ ತಲೆಯ ಮೇಲಿಟ್ಟುಕೊಂಡು ಮರಳಿ ನಡೆದಾಗ ಮಾರ್ಗದಲ್ಲಿ ಬಿಜ್ಜಳನ ಮಂತ್ರಿ ಮಧುವರಸನೆಂಬ ಬ್ರಾಹ್ಮಣ ಭೆಟ್ಟಿಯಾದನು. ಸುಂದರವಾದ ಜೋಡನ್ನು ಕಂಡು ಮೆಟ್ಟಲು ಮನಸ್ಸು ಮಾಡಿದ.ಆಗ ಹರಳಯ್ಯನು, ಕೆಟ್ಟಗುಣದ ನಿಮ್ಮಂಥ ಭ್ರಷ್ಟರು ಇವುಗಳನ್ನು ಮೆಟ್ಟಲಾಗದು ; ಮೆಟ್ಟಿದರೆ ಸುಟ್ಟುಕೊಂಡು ಸಾಯುವಿ : ಎಂದು ಸ್ಪಷ್ಟವಾಗಿ ಹೇಳಿದರೂ ಕೇಳದೆ, ಅವುಗಳನ್ನು ಕಸಿದುಕೊಂಡು ಮೆಟ್ಟಲು ಯತ್ನಿಸಿದ. ಕೂಡಲೇ ಅಂಗಾಲಿನಿಂದ ನೆತ್ತಿಯವರೆಗೆ ಅವನ ದೇಹವೆಲ್ಲ ಉರಿಯತೊಡಗಿತು. ತಿಳಿಯಿತೇ ಕೌಶಿಕ? ಸತ್ಪುರುಷರೊಡನೆ ಸರಸವಾಡುವದು : ಸಂಕಟಕ್ಕೆ ಮೂಲ ! ಆದ್ದರಿಂದ ಎಚ್ಚತ್ತು ನೋಡು. ಅಷ್ಟೂ ಮೀರಿ ನನ್ನನ್ನು ಮುಟ್ಟ ಬಂದರೆ ಸುಣ್ಣ ಸುಟ್ಟಂತೆ ಸುಟ್ಟು ಹೋಗುವಿ !
ಕೌ. : ಎಲೆ ನಾರಿ, ಶಿವಶರಣರ ಶೀಲವನ್ನು ನಾ ಬಲ್ಲೆ, ನಿನ್ನ ಬಡಿವಾರದ ಮಾತು ನನಗೆ ಬೇಕಾಗಿಲ್ಲ.ನನ್ನ ಮಾತಿಗೆ ಸಮ್ಮತಿಸದೆ ಹೆಮ್ಮೆಯಿಂದ ನುಡಿದರೆ ನೆಟ್ಟಗಾಗಲಿಕ್ಕಿಲ್ಲ.
ಸಾ. : ಸಾತ್ವಿಕಿಗೆ ಹೆಮ್ಮೆಯ ಹೆಸರೂ ಸಹ ಗೊತ್ತಾಗದು.ಸತ್ವಗುಣದಲ್ಲಿ ಹೆಮ್ಮೆ ಇರುವದೇ ಇಲ್ಲ.
ಕೌ. : ಹೆಮ್ಮೆ ಇಲ್ಲದಿದ್ದರೆ ಸುಮ್ಮನೆ ಏಕೆ ಸಮ್ಮತಿಸಲೊಲ್ಲೆ ? ಬಡತನದಲ್ಲಿ ಹುಟ್ಟಿ ಬಳಲುವ ನಿನ್ನನ್ನು ಸುಖಸಾಗರದಲ್ಲಿ ತೇಲಿಸಬೇಕೆಂದು ಬಯಸಿ ನಿನ್ನನ್ನು ಬರಮಾಡಿಕೊಂಡರೆ, ನೀನು ನಿನ್ನ ಹಾಳ ಪುರಾಣವನ್ನೇಹೇಳುತ್ತಿರುವಿಯಲ್ಲ !
ಸಾ. : ಅರಸಾ, ನಾನು ಯಾವಾಗಲೂ ಸುಖಸಾಗರದಲ್ಲಿಯೇ ಇರುವೆನು. ನಿನಗೂ ಆ ಸುಖದ ಸವಿ ದೊರೆಯಲೆಂದೇ ಹೇಳುತ್ತಿರುವೆನು.
ಕೌ. : ನನಗೆ ಸುಖವಾಗಲೆಂದು ನಿನ್ನ ಇಚ್ಛೆ ಇದ್ದರೆ, ನನ್ನನ್ನು ಮದುವೆಯಾಗಿ ಸುಖನೀಡಲು ಏಕೆ ಹಿಂಜರಿಯುವಿ ?
ಸಾ. : ನೀನು ಬಯಸುವ ಸುಖವಾದರೂ ಯಾವದು ?
Leave A Comment