ದೂ. : ರಾಜೇಂದ್ರಾ, ನೀನು ಆ ಸುಶೀಲೆಯಾದ ಸಾತ್ವಿಕಿಯನ್ನು ಬಯಸುವೆಯಾ? ಹೇಳುತ್ತೇನೆ ಕೇಳು.

ಕೌ. : ಅದೇನಿರುವುದು ಹೇಳು;

ಪದ : ತಾಳ ಕೇರವಾ; ರಾಗ ಭೈರವಿ
ದೂ. :

ಬಿಡು ಬಿಡು ನಿನ್ನ ಈ ಮಾಯಾ ಕೇಳೋ ರಾಯಾ
ನಿನ್ನ ಮಾಯಾ ಕೇಳೋ ರಾಯಾ (ದುಗುಣ)॥

ಏರು :

ಅವಳಲ್ಲೊ ಭೋಗಿನಿ ಶುದ್ಧ ಶಿವಯೋಗಿನಿ
ಶಿವಲಿಂಗ ಪ್ರಾಣಿನಿನ್ನ …..1

ವಿಷಯದ ಸುಖದಾಶಾ ಆಕಿಗಿಲ್ಲೊ ಲವಲೇಶಾ
ಬಿಡು ಅವಳ ಆಶಾನಿನ್ನ …..2

ಶರಣರ ಲೀಲಾ ಸರ್ವೇಶ ಬಲ್ಲಾ
ಹಟೆಯಿದು ಸಲ್ಲಾನಿನ್ನ …..3

ರಾಜೇಂದ್ರಾ, ನೀನು ಆ ಸುಶೀಲೆಯಾದ ಸಾತ್ವಿಕಿಯನ್ನು ಬಯಸುವೆಯಾ? ಅವಳು ಭೋಗವನ್ನು ಬದಿಗಿಟ್ಟ ಮಹಾಯೋಗಿನಿ! ಅವಳ ಸತ್ವಗುಣದ ಸಾಧುವರ್ತನದ ಕೀರ್ತಿ ಈಗಾಗಲೇ ದಶದಿಕ್ಕುಗಳಲ್ಲಿ ಹಬ್ಬಕೊಂಡಿದೆ. ಸಾಕ್ಷಾತ್ ಧರ್ಮಸ್ವರೂಪಿಯಾದ ಆ ಸಾತ್ವಿಕಿಯನ್ನು ಬಯಸುವುದು ಕುಂಟದಾಸನು ವೈಕುಂಠಕ್ಕೆ ಆಸೆ ಮಾಡಿದಂತೆ! ಹೆಳವನು ಹೆಮ್ಮರದ ತುದಿಯಲ್ಲಿರುವ ಹಣ್ಣಿಗೆ ಕೈ ಮಾಡಿದಂತೆ!! ಅಂಥವಳಿಗಾಗಿ ಆಸೆ ಮಾಡುವುದು ತರವಲ್ಲ. ತಿಳಿದು ನೋಡು.

ಕೌ. : ಏನೇ ದಾಸಿ, ಈ ಭೂಮಿಯಲ್ಲಿ ಅರಸನ ಆಸೆಗೆ ಆತಂಕವುಂಟೆ? ಸಾಮಾನ್ಯವಾಗಿ ವೈರಾಗ್ಯ ಬರುವುದು ಇಲ್ಲದ್ದಕ್ಕಾಗಿ. ನೀನು ಅವಳಲ್ಲಿಗೆ ಹೋಗಿ ನಾನು ಹೇಳಿದ ವಾರ್ತೆಯನ್ನು ಆಕೆಗೆ ತಿಳಿಸು; ಆಗ ಆಕೆಗೆ ಆಗುವ ಆನಂದವನ್ನು ನೀನೇ ನೋಡುವಿಯಂತೆ! ಬಡವನನ್ನು ಭಾಗ್ಯದ ರಾಶಿಯ ಮೇಲೆ ಕೂಡ್ರಿಸಿದಂತೆ ಆಗುತ್ತದೆ ಅವಳ ಸ್ಥಿತಿ! ಮಲಗಲಿಕ್ಕೆ ಹುಲ್ಲಿನ ಚಾಪೆ, ತಿನ್ನಲಿಕ್ಕೆ ಕಮ್ಮನ್ನ ಕಜ್ಜಾಯ ಕಾಣದ ಆ ಸಾತ್ವಿಕಿ ಏಕಛತ್ರಾಧಿಪತಿಯಾದ ನನ್ನ ಕೈ ಹಿಡಿಯದೇ ಬಿಟ್ಟಾಳ? ನನ್ನ ಅರಮನೆಯ ವಾಸ ಅವಳಿಗೆ ಸ್ವರ್ಗದ ಕಲ್ಪನೆ ತಂದುಕೊಡುವನು. ಅವಳು ಇಂಥ ಸೌಖ್ಯವನ್ನು ಹೊಂದಲು ಹಿಂಜರಿಯುವಳೇನೆ ಹುಚ್ಚಿ? ಹೆಚ್ಚಿನ ಮಾತು ನಿನಗೇಕೆ? ಸುಮ್ಮನೇ ಹೋಗಿ ಅವಳನ್ನು ಒಡಂಬಡಿಸಿಕೊಂಡು ಬಾ.

ದೂ. : ಪ್ರಭುಗಳೆ. ನಾನು ಹುಚ್ಚಿಯಲ್ಲ; ನಿನಗೆ ಮಾತ್ರ ಹಿಡಿದಿದೆ ಹೆಣ್ಣಿನ ಹುಚ್ಚು! ಆ ಹುಚ್ಚು ನೆತ್ತಿಗೇರಿ ಹೀಗೆ ಮಾತಾಡುತ್ತಿರುವಿರಿ. ಅವಳು ನಾಡಾಡಿ ಹೆಂಗಸಲ್ಲ. ಶಿವಪೂಜೆ ಶಿವಧ್ಯಾನ ಶಿವಭಜನೆಯಲ್ಲಿ ತೊಡಗಿರುವ ಶಿವಯೋಗಿನಿ ಆಗಿದ್ದಾಳೆ. ಅವಳನ್ನು ಕೇಳಿದರೆ ತಕ್ಕ ಉತ್ತರ ಕೊಡದೆ ಇರಲಾರಳು.

ಕೌ. : ಏನೆಂದು ಉತ್ತರ ಕೊಡುವಳು?

ದೂ. : ಅವಳು ಕೊಡುವ ಉತ್ತರ ಇಷ್ಟೆ : ನನಗೊಬ್ಬ ಪತಿ ಇದ್ದಾನೆ ನನಗೆ ಮದುವೆ ಆಗಿದೆ : ಎಂದು.

ಕೌ. : ದೂತೆ, ಆಕೆಯ ಮನೋಗತವೇ ನಿನಗೆ ತಿಳಿದಿಲ್ಲ. ನನಗೊಬ್ಬ ಪತಿ ಇರುವನೆಂದು ಅವಳು ಹೇಳುವಳಲ್ಲವೆ? ಆ ಪತಿ ಯಾರೆಂದು ತಿಳಿದಿರುವಿ?

ದೂ. : ದೊರೆಗಳೇ ಅವನಾರು?

ಕೌ. : ಅವನೇ ನಾನು.

ದೂ. : ಯಾತರ ಮೇಲಿಂದ?

ಪದ : ತಾಳ : ತ್ರಿತಾಳ; ರಾಗ : ಮಿಶ್ರಕಾಪಿ

ಧನ್ಯ ಭೂಪತಿಯಾದ ನನ್ನನ್ನೆ
ಲಗ್ನವಾಗಬೇಕೆನ್ನುವ ಆಕೆಯ ಮನಃಪ್ರೀತಿ
ಅರಿತಿರುವೆ ಅಂತರಂಗದ ರೀತಿ, ಎನ್ನಯ ಅರಸಿ ಅಗಲು ಬಯಸಿ
ನುಡಿವಳೊ ಸರ್ವರನು ಧಿಃಕ್ಕರಿಸಿ                 1

ಏರಿ ಕುದರಿ ನಾ ಸ್ವಾರಿಗೈಯುವಾಗ ನಾರಿ ನಿಂತು ತನ್ನ ಮೇಲ್ಮಾಲಿನಲಿ
ನನ್ನನ್ನು ನೋಡಿ ನೋಡಿ ನಲಿಯತಲಿ, ನನ್ನಲ್ಲಿ ಪ್ರೀತಿ ಇರುವಂಥ ರೀತಿ
ತೋರಿಸಿದಳೋ ಜಾಣಿ ನಸುನಗುತಾ ಪ್ರೀತಿಗುರ್ತಾ                   2

ದೂತೆ, ಆಕೆಯ ಮನಸ್ಸಿನಲ್ಲಿ ನನ್ನನ್ನೇ ಲಗ್ನವಾಗಬೇಕೆಂಬುದು ಇದ್ದುದರಿಂದಲೇ ಎಲ್ಲರನ್ನು ಧಿಕ್ಕರಿಸಿ ಹಾಗೆ ನುಡಿದಿರುವಳು.

ದೂ. : ಹಾಗೆ ಅನ್ನುವುದು ಯಾತರ ಮೇಲಿಂದ?

ಕೌ. : ದೂತೆ, ಇಂದು ನಾನು ಬೇಟೆಯನ್ನಾಡಿ ಅರಮನೆಗೆ ಕುದುರೆಯನ್ನೇರಿ ಬರುವಾಗ, ಆಕೆ ಮೇಲುಮಾಳಿಗೆಯ ಮೇಲೆ ನಿಂತು ನನ್ನನ್ನೇ ಎವೆಯಿಕ್ಕದೆ ನೋಡುತ್ತಿದ್ದಳು.

ದೂ. : ನೋಡಿದರೇನಾಯಿತು? ನೋಡಿದರೆ ನಿನ್ನನ್ನು ಪ್ರೀತಿಸಿದಂತಾಯಿತೇ?

ಕೌ. : ಏನೇ, ಅದು ಬರಿಯ ನೋಟವಲ್ಲ. ಕಾಮನ ಬೇಟ! ಆಗ ಅವಳ ಮುಖದಲ್ಲಿ ಮುಗುಳುನಗೆ ಮೂಡಿತ್ತು. ಅದರ ಅರ್ಥ ನಿನಗೇನು ಗೊತ್ತು? ಆದರೆ ಈ ಪಟ್ಟಣದ ಅರಸನನ್ನೇ ಲಗವಾಗಬೇಕು, ಇಲ್ಲದಿದ್ದರೆ ವೀರ : ವಿರಕ್ತಳಾಗಬೇಕು : ಎನ್ನುವುದೇ ಅವಳ ಮನದ ನಿಶ್ಚಯವೇ ಹೊರತು ಮತ್ತೇನೂ ಇಲ್ಲ. ನೀನು ಈಗಿಂದೀಗಲೇ ಹೋಗಿ ಅವಳನ್ನು ವಿಚಾರಿಸಿನೋಡು. ಆಗ ನಿನಗೆ ಗೊತ್ತಾಗುತ್ತದೆ ನನ್ನ ಹೇಳಿಕೆಯ ಇಂಗಿತ.

ದೂ. : ಆಯಿತು ತಾವು ಹೇಳಿದಂತೆ ವಿಚಾರಿಸಿ ನೋಡುತ್ತೇನೆ. ಮಹಾರಾಜರೇ, ತಾವು ನನ್ನನ್ನೇ ಅವಳ ಬಳಿಗೆ ಕಳಿಸಿರುವಿರೆಂದು ಹೇಗೆ ಗೊತ್ತಾಗಬೇಕು? ಏನಾದರೊಂದು ಗುರುತು ಕೊಟ್ಟರೆ ಒಳ್ಳೇದು.

ಕೌ. : ಹಾಗೆ ಆಗಲಿ, ತೆಗೆದುಕೊ ಈ ಮುತ್ತಿನ ಹಾರವನ್ನು. ಹೋದ ಕಾರ್ಯ ಪೂರೈಸಿಕೊಂಡು ಬಂದೆಯಾದರೆ ನಿನಗೆ ಬೇಡಿದ್ದನ್ನು ಕೊಡುತ್ತೇನೆ.

* * *

೧೧
ಸಾತ್ವಿಕೀ ಮಂದಿರ ಪ್ರವೇಶ

ದೂತೆ. : ಅಮ್ಮಾ ಧರ್ಮದೇವಿಯವರೇ,

ಸಾತ್ವಿಕಿ. : ತಾಯಿ ನೀನಾರು?

ದೂ. : ಅಮ್ಮಾ, ನಾನು ರಾಜದೂತಿ.

ಸಾ. : ನೀನೆಕೆ ಬಂದೆ?

ದೂ. : ಅಮ್ಮಾ, ಕೆಲಸವಿರುವುದು.

ಸಾ. : ಅದೇನಿರುವುದು?

ದೂ. : ಅಮೃತಕ್ಕಿಂತಲೂ ರುಚಿಕರವಾದ ಒಂದು ವಾರ್ತೆಯನ್ನು ತಂದಿರುವೆನು. ಅದನ್ನು ಹೇಳಿದರೆ ಬಹುಮಾನ ಏನು ಕೊಡುವಿರಿ?

ಸಾ. : ಅದು ಶುಭವಾರ್ತೆ ಇದ್ದರೆ, ಬೇಡಿದ ಬಹುಮಾನ ಕೊಡುವೆ, ಅದೇನು ಹೇಳು?

ದೂ. : ತಾಯಿ, ಹೇಳುವುದೇನು ನಿನ್ನ ಪೂರ್ವಜನ್ಮದ ಪುಣ್ಯ ದೊಡ್ಡದಿರಬೇಕು! ಈ ಊರ ದೊರೆಯಾದ ಕೌಶಿಕ ಮಹಾರಾಜನು ಇರುವನಲ್ಲವೆ?

ಸಾ. : ಹೌದು ಇದ್ದಾನೆ; ಇದ್ದರೇss….

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ತೆರೆಯಿತು ನಿನ್ನ ದೈವ ಕೌಶಿಕ ಮಾನುಭಾವss
ಇಟ್ಟಾನು ತಾನು ಮೋಹ॥

ಅವನ ಪಟ್ಟದ ರಾಣಿ ಆಗುವಿ ನೀ ಜಾಣೆ
ಅವನಂಥ ಭೂಪತಿವಲ್ಲಭ ನಿನಗಾಗಬೇಕಾದ್ರ ನಶೀಬ
ಉಡುತೊಡುವಿ ಮುತ್ತಿನ ದಿವ್ಯ ಡಾಬ
ಸುಂದರಿ ತಿಳಿಸೆ ಮನಸಿನ ಹದನ
ತಿಳಿಸಲು ಕಳಿಸಿಹ ಅವನ ತಾನ                1

ಅರಸನ ಕರಹಿಡಿ ಹರುಷದಿಂದಿರು ನಡಿ
ಚಿನ್ನದ ಅರಮನೆ ಮಾಲಿನಲ್ಲಿ
ಸ್ವರ್ಗ ಲೋಕದ ರಂಭೆ ತೆರದಲ್ಲಿ
ನೀನಿರುವೆ                                                             2

ಕೌಶಿಕ ಮಹಾರಾಜನ ಸೌಭಾಗ್ಯದ ಸಂಗತಿಯನ್ನು ನೀನು ತಿಳಿದು ಬಲ್ಲೆ. ಈ ಭರತ ಖಂಡಕ್ಕೆ ಅವನೇ ಬಲಿಷ್ಠ ಅವನೇ ಭಾಗ್ಯಶಾಲಿ. ಅವನ ದೌಲತ್ತನ್ನು ಹೊಗಳುವುದು ಕಾಳಿದಾಸನಂಥ ಮಹಾ ಕವಿಗೂ ಅಸಾಧ್ಯ. ಹೀಗಿದ್ದಾಗ ನನ್ನಂಥವಳ ಪಾಡೇನು? ಅವನಂತಹ ರಾಜನು ಹಿಂದೆಂದೂ ಹುಟ್ಟಿಲ್ಲ. ಮುಂದೆಂದೂ ಹುಟ್ಟಲಾರ. ಅವನಸೌಂದರ್ಯದ ಮುಂದೆ ಕಾಮವನ ಸೌಂದರ್ಯವನ್ನು ನಿವಾಳಿಸಿ ಚೆಲ್ಲಬೇಕು.

ಸಾ. : ಸಾಕುಮಾಡು ನಿನ್ನ ಬಣ್ಣನೆಯನ್ನು. ಇದೇ ಏನು ನಿನ್ನ ಶುಭವಾರ್ತೆ? ಅವನು ಮೆರೆದು ಉಣ್ಣುವ ಅರಸನಿದ್ದರೇನು? ತಿರಿದು ಉಣ್ಣುವ ತಿರುಕನಿದ್ದರೇನು? ಪರರ ಸುದ್ದಿ ನಮಗ್ಯಾಕೆ ಬೇಕು?

ದೂ. : ಪರರ ಸುದ್ದಿ ಆಗದಿದ್ದರೆ ನಿನ್ನ ಮುಂದೆ ಹೇಳುತ್ತಿದ್ದಿಲ್ಲ.

ಸಾ. : ಪರರ ಸುದ್ದಿ ಆಗದಿದ್ದರೆ ಅದೇನು ನಿನ್ನ ಸುದ್ದಿಯೆ?

ದೂ. : ನನ್ನ ಸುದ್ದಿಯಂತೂ ಅಲ್ಲ.

ಸಾ. : ಹಾಗಾದರೆ ಯಾರದು?

ದೂ. : ಅದು ನಿನ್ನ ಸುದ್ದಿ.

ಸಾ. : ನನ್ನ ಸುದ್ದಿ ಹೇಗೆ? ಅರಸರ ಸುದ್ದಿ ನನ್ನ ಸುದ್ದಿ ಆಗದು.

ದೂ. : ಅರಸನದಲ್ಲ ನೀನು ಅರಸನ ಅರಸಿಯಾಗತಕ್ಕವಳು. (ಮುತ್ತಿನ ಹಾರವನ್ನು ಕೊಡಲು ಹೋಗುವಳು.)

ಸಾ. : ನಾನಾವ ಅರಸನ ಹೆಂಡತಿ? ಯಾರ ಹಾರವೆಂದು ನಾನಿದನ್ನು ಹಿಡಿಯಬೇಕು?

ದೂ. : (ನಗುತ್ತ) ಇದು ಕೌಶಿಕ ಮಹಾರಾಜನದು.

ಸಾ. : ಇದನ್ನೇಕೆ ತಂದೆ? ನೀ ಇಲ್ಲಿಗೇತಕ್ಕೆ ಬಂದೆ?

ದೂ. : ಇದನ್ನು ತಮಗೆ ತೋರಿಸಲಿಕ್ಕೆ ತಂದೆ, ತಾಯಿ ಮತ್ತು ಅವನ ಮಡದಿಯಾದರೆ ಒಳಿತೆಂದು ತಮಗೆ ಹೇಳಲಿಕ್ಕೆ ಬಂದೆ.

ಪದ : ತಾಳ ದಾದರ; ರಾಗ ಭೀಮಪಲಾಸ

ಸಾ. : ಛೀ ಛೀ ಪಾಪಿ, ಅಸುರ ರೂಪೀ
ತಂದಿ ಎಂಥ ವಾರ್ತೆಯ ನಿನಗೆ ಕಲಿಪೆ ನೀತಿಯ॥

ಛೀ ಛೀ ಘನ್ನಘಾತಿಕಿ ನಿಜದಿ ಪರಮಪಾತಕಿ
ಸತ್ಯ ಶೀಲೆ ನನ್ನ ಮೆಲೆ (ದುಗುಣ)
ಹಾಕಲಿಂಥ ಹಂಚಿಕಿ ಬರದೆ ನಿನಗೆ ನಾಚಿಕೆ      1

ನಾನು ಅಲ್ಲ ಭೋಗಿನಿ ಶುದ್ಧ ಶಿವಯೋಗಿನಿ
ನಿನ್ನ ಭೂಪ ಮದನ ರೂಪ
ಎನಗೆ ಕೊಟ್ಟ ತಾಪವಾ ಯಾಕೆ ಹೊಂದುವಿ ಶಾಪವಾ                          2

ಏನೇ ನೀಚ ಸ್ತ್ರೀಯಳೆ, ಈ ಸಂಸಾರಸುಖವೆಲ್ಲ ಸುಳ್ಳೆಂದು ತಿಳಿದು, ಅದರೆ ಆಸೆಯನ್ನು ಸಮೂಲವಗಿ ಅಳಿದು, ಸತ್ಯ ಶಿವನೆ ಗತಿಯೆಂದು ಶಿವನಿಗೆ ಶರಣು ಹೋದ ಶಿವಶರಣರೆಲ್ಲಾ ಇಂಥ ಮಿಥ್ಯಾವೈಭವಗಳಿಗೆ ಮನಸ್ಸು ಮಾಡುವರೇ? ಶರಣಪಥದಲ್ಲಿ ಮುನ್ನಡೆವ ನನಗೆ ಯಕಶ್ಚಿತ್ ರಾಜನೊಬ್ಬನೊಡನೆ ಮದುವೆಯಾಗೆಂದು ಬೋಧಿಸಲು ನಿನಗೆ ನಾಚಿಕೆ ಬರುವುದಿಲ್ಲವೆ? ಏಳು, ಇಲ್ಲಿಂದ ಏಳು. ನಾನು ನರಕಾಯಕದ ಪತಿಯನ್ನು ಮದುವೆಯಾಗತಕ್ಕವಳಲ್ಲ; ಸ್ಥಿರಕಾಯದ ಪತಿಯನ್ನ ಹೊಂದತಕ್ಕವಳು. ಹುಟ್ಟಿಸಾಯುವ ಗಂಡನನ್ನೊಯ್ದು ಬೆಂಕಿಯಲ್ಲಿ ಚೆಲ್ಲಿ ಸುಡಬೇಕು. ಆ ಪರಮಾತ್ಮನನ್ನೇ ನಂಬಿ, ಅವನನ್ನೇ ಮದುವೆಯಾಗಬೇಕೆಂದಿದ್ದೇನೆ. ರಾಜನೊಡನೆ ಮದುವೆಯಾಗುವುದು ನನ್ನಿಂದ ಸಾಧ್ಯವಿಲ್ಲವೆಂದು ನಿಮ್ಮ ರಾಜನಿಗೆ ತಿಳಿಸು, ನಡೆ ಇಲ್ಲಿಂದ. (ದೂತೆಯ ಕಿವಿ ಹಿಂಡುವಳು.)

ದೂ. : ಅಯ್ಯಯ್ಯ! ತುಸಾನ ಜಗ್ಗ ನಮ್ಮವ್ವಾ! ಎಲ್ಯ್‌ರ ಕಿವಿ ಕಿತ್ತಾವು.

ಸಾ. : ತುಸು ಆದರೆ ಬುದ್ಧಿ ಬರುವುದಿಲ್ಲ. ಅದಕ್ಕೆಂದೇ ಸರಿಯಾಗಿ ಜಗ್ಗಿದೆ. ಹೋಗು.

ದೂ. : ಹೋಗತೀನಿ ಬಿಡು ನಮ್ಮವ್ವಾ. ಚಲೋ ಇನಾಮ ಸಿಕ್ಕಿತು. (ಹೋಗುವಳು)

* * *

೧೨
ಅರಮನೆಯ ಪ್ರವೇಶ

ಕೌಶಿಕ : (ತನ್ನಷ್ಟಕ್ಕೆ) ದೂತಿ ಇನ್ನೂ ಏಕೆ ಬಂದಿರಲಿಕ್ಕಿಲ್ಲ? ಹೀಗಿರಬೇಕು; ಸುವಾರ್ತೆಯನ್ನು ಒಯ್ದ ದೂತಿಗೆ ಸತ್ಕಾರ ಮಾಡದೆ ಬಿಟ್ಟಿರಲಿಕ್ಕಿಲ್ಲ. ಆ ಸಾತ್ವಿಕಿಯು ನನ್ನ ಪಟ್ಟದರಸಿಯಾಗುವೆನೆಂಬ ಉತ್ಸಾಹದಲ್ಲಿ ಆನಂದ ಭರಿತಳಾಗಿ ದೂತಿಯನ್ನು ಸ್ವಲ್ಪ ಹೊತ್ತು ನಿಲ್ಲಿಸಿಕೊಂಡಿರಬೇಕು … ಇದೇನು! ದೂತಿ ಇಲ್ಲಿಯೆ ಬಂದಳಲ್ಲ!!

ದೂತಿ. : (ಪ್ರವೇಶಿಸಿ) ರಾಜೇಂದ್ರಾ, ತಮ್ಮ ಪಾದಕಮಲಕ್ಕೆ ನಮಸ್ಕಾರ.

ಕೌ. : ದೂತೆ, ಬಂದೆಯಾ?

ದೂ. : ನನ್ನ ಗಂಡನ ಹೊಟ್ಟೆ ತಣ್ಣಗಿರಬೇಕು : ಅದಕ್ಕs ಉಳಿದು ಬಂದೆ.

ಕೌ. : ಏಕೆ ಏನಾಯಿತು? ನೀನು ಹೋದ ಕೆಲಸ ಆಯಿತೆ?

ದೂ. : ನೆಟ್ಟಗs ಪಸಂದ ಆತು. ಕಸುರು ಏನೇನೂ ಉಳಿಯಲಿಲ್ಲ. ನಾ ಹೋಗಿ ಸಾವಕಾಶ ಮಾತು ತೆಗೆದೆ, ತಮ್ಮ ಹೆಸರನ್ನು ಹೇಳಿದ ಕೂಡಲೇ ಆಕೆಗೆ ಎಷ್ಟು ಅಕ್ಕರತಿ ಆತು ಅಂದ್ರ, ಬಂದಾಕೀನ ಕಿವಿಗೇ ಗಂಟ ಬಿದ್ಲು.

ಕೌ. : ಕಿವಿಗೆ ಯಾಕೆ?

ದೂ. : ಸವಿಸವಿ ಮಾತು ಕಿವ್ಯಾಗ ಹೇಳಾಕ ಹತ್ತಿದಳು. ತಿಳಿತು ತಿಳಿತು : ಅಂತ ನಾ ಎಷ್ಟು ಹೇಳಿದರೂ ಬಿಡಲಿಲ್ಲ. ನಾ ಏನ ಹೇಳಲಿ! ಅವಳು ತಮ್ಮ ಘನತೆಯನ್ನು ಕೊಂಡಾಡುತ್ತ ನನ್ನನ್ನು ತಿರವ್ಯಾಡಿಬಿಟ್ಟಳು.

ಕೌ. : ಆ ಬಡಿವಾರಿ ನನ್ನನ್ನು ಧಿಕ್ಕರಿಸಿ ನುಡಿದಳೆ? ಅರಸನಿಗೆ ಬಿರುಸಾಗಿ ನುಡಿದ ಆ ಸೆಡವಿನ ಹೆಣ್ಣನ್ನು ಮುಡಿಹಿಡಿದು ಎಳೆದು ತರಿಸುತ್ತೇನೆ ಬಡವಿಯ ಸಿಟ್ಟುದವಡೆಗೆ ಮೂಲ! ಅವಳು ಮಾಡಿದ್ದು ಮಹಾ ಅಪಮಾನ! ಯಕಶ್ಚಿತ್ ಹೆಣ್ಣೊಂದು ಮಹಾರಾಜನ ಅಪ್ಪಣೆ ಮೀರುವುದೆಂದರೆ, ಎಂತಹ ಸೊಕ್ಕು ಅವಳಲ್ಲಿ ಇರಬೇಕು!! ದೂತೆ, ನೀನೀಗ ಹೋಗು ಮಂತ್ರಿಗಳು ಬರಲಿ.

ಮಂತ್ರಿ. : (ಪ್ರವೇಶಿಸಿ) ರಾಜೇಂದ್ರಾ, ನಮಸ್ಕರಿಸುತ್ತೇನೆ.

ಕೌ. : ಮಂತ್ರಿವರ್ಯಾ, ಉಪಚಾರಕ್ಕೆ ಈಗ ಸಮಯವಿಲ್ಲ. ಅಪಮಾನದ ಬೆಂಕಿ ಹತ್ತಿ ಉರಿಯುತ್ತಿದೆ. ಈಗ ನಿನ್ನಿಂದ ಮಹತ್ವದ ಕಾರ್ಯವೊಂದು ಆಗಬೇಕಾಗಿದೆ.

ಮಂ. : ಜೀಯಾ, ಅಂಥ ಮಹತ್ವದ ಕಾರ್ಯ ಯಾವುದಿರುವುದು?

ಕೌ. : ಹೇಳುತ್ತೇನೆ ಕೇಳು :

ಪದ : ತಾಳ : ದಾದರಾ; ರಾಗ : ಭೀಮಪಲಾಸ

ಶೆಟ್ಟ ನಿರ್ಮಳ ನೀಚನ, ಕಟ್ಟಿ ತರುವದೀಕ್ಷಣ॥

ಎನ್ನ ಆಜ್ಞೆ ಪಾಲನ ಮಾಡದ ಮದಾಂಧನ
ತಹುದು ಶೀಘ್ರ ತಡೆಯೆ ಉಗ್ರ
ಕೋಪಜ್ವಾಲೆ ಎನ್ನನಾ ಕಟ್ಟಿ ತರುವದೀಕ್ಷಣ     1

ಆಜ್ಞೆ ಭಂಗದಾ ಫಲ ಭೋಗಿಸಲು ಆ ಕಲಾ
ಇಳೆಯಪಾಲನೆನ್ನ ಹಳಿವ (ದುಗುಣ)
ನೋಡುದೀಗ ಅವನ ಚಲಕಟ್ಟಿ ತರುವದೀಕ್ಷಣ   2

ಹೊನ್ನಿಕೇರಿವಾಸನ ಪನ್ನಗೇಂದ್ರಭೂಷನ
ಸನ್ನುತಾಂಘ್ರಿಯನ್ನು ಭಜಿಸಿ (ದುಗುಣ)
ಪಯಣ ತಾಳೊ ಪ್ರಧಾನಿಕಟ್ಟಿ ತರುವದೀಕ್ಷಣ   3

ಮಂತ್ರಿವರ್ಯಾ, ಆಜ್ಞಾಭಂಗವು ಅರಸನಿಗೆ ಮರಣಪ್ರಾಯವೆಂಬುದು ನಿನಗೆ ಗೊತ್ತಿದ್ದ ಮಾತು. ರಾಜಾಧಿರಾಜನೆನಿಸಿಕೊಂಡ ನನ್ನ ಅಪ್ಪಣೆಯನ್ನು ಮೀರಲು ಮಾಂಡಳಿಕ ದೊರೆಗಳು ಸಾಮಂತರು ಸುಭೇದಾರರು ಗಡಗಡನೆ ನಡುಗುತ್ತಿದ್ದಾರೆ. ನನ್ನ ಸಾಹಸಕಾರ್ಯಕ್ಕೆ ಮೆಚ್ಚಿದ ಛಪ್ಪನ್ನ ದೇಶ ದೊರೆಗಳು ನಮ್ಮೊಡನೆ ಶರೀರಸಂಬಂಧ ಬೆಳೆಸಲು ಹಾತೊರೆಯುವಾಗ ಆ ಬಡಿವಾರದ ಬಾಲಿ ಸಾತ್ವಿಕಿ, ನನ್ನನ್ನು ಧಿಕ್ಕರಿಸಿ ನುಡಿದಳಂತೆ. ಅವಳ ಸೊಕ್ಕು ನೆತ್ತಿಗೇರಿರಬೇಕು! ನೀನು ಈ ಕ್ಷಣವೆ ಹೋಗಿ ಅವಳನ್ನು ಬಂಧಿಸಿಕೊಂಡು ಬಾ. ಮುಂದಿನ ವ್ಯವಸ್ಥೆಯನ್ನು ನಾನು ನೋಡಿಕೊಳ್ಳುತ್ತೇನೆ. (ಹೋಗುವನು)

ಮಂ. : (ತನ್ನಷ್ಟಕ್ಕೆ ತಾನೇ) ಆಗಲಿ ರಾಜನ ಅಪ್ಪಣೆಯಂತೆ ನಾನೀಗ ನಿರ್ಮಳನ ಮನೆಗೆ ಹೋಗಲೇಬೇಕು. ಬಿಟ್ಟರೆ ನಡೆಯುವಂತಿಲ್ಲ. ನ್ಯಾಯದ ಮುಂದೆ ಅನ್ಯಾಯ ಎಂದೆಂದೂ ನಡೆಯದು. ಕಾಮಿಯಾದ ಕೌಶಿಕನು ಅನ್ಯಾಯಕ್ಕೆ ಕೈ ಹಾಕಿದ್ದಾನೆ. ಇರಲಿ ಆಹಾ! ಇಲ್ಲಿಯೇ ಬಂದಿತಲ್ಲ ನಿರ್ಮಳನ ಮನೆ! ನಿರ್ಮಳಾ, ನಿರ್ಮಳಾ…

ನಿರ್ಮಳ : (ಹೊರಗೆ ಬಂದು) ಯಾರವರು?

ಮಂ. : ನಾನು ರಾಜಮಂತ್ರಿ!

ನಿ. : ಓಹೋ. ರಾಜಮಂತ್ರಿಗಳೆ! ತಾವು ಒಳಗೆ ಬರಬೇಕು. ಬಡವರ ಮನೆಗೆ ಒಡೆಯರ ಆಗಮನವೆಂದರೆ ಅದೊಂದು ಭಾಗ್ಯವೇ ಸರಿ! ಬಂದು ಈ ಆಸನವನ್ನು ಅಲಂಕರಿಸಬೇಕು; ಬಂದ ಕಾರಣವನ್ನು ನಿರೂಪಿಸಬೇಕು.

ಮಂ. : ನಿರ್ಮಳಾ, ಮೊದಲು ನನ್ನ ಮಾತನ್ನು ಕೇಳಿರಿ. ಭೂಮಂಡಲಕ್ಕೆ ಒಡೆಯರಾದ ನಮ್ಮ ಕೌಶಿಕ ಮಹಾರಾಜರು ನಿಮ್ಮ ಬಳಿಗೆ ಕಳಿಸಿದ್ದಾರೆ.

ನಿ. : ಕೌಶಿಕ ಮಹಾರಾಜರು ಕಳಿಸಿರವರೆ! ಏಕೆ ಕಳಿಸಿರುವರು? ಕಾರಣವೇನು?

ಮಂ. : ಶರಣರೇ, ತಮ್ಮ ಭಾಗ್ಯದ ಬಾಗಿಲು ತೆರೆದು ನಿಂತಂತೆ ಕಾಣುತ್ತದೆ. ನಮ್ಮ ದೊರೆಗಳು ನಿಮ್ಮ ಮಗಳ ಸದ್ಗುಣಕ್ಕೆ ಮೆಚ್ಚಿ ಅವಳನ್ನು ಮದುವೆಯಾಗಲು ಬಯಸಿದ್ದಾರೆ. ಅದಕ್ಕೆ ತಾವು ಒಪ್ಪಿಗೆ ಕೊಡಬೇಕೆಂದು ಹೇಳಿ ಕಳಿಸಿದ್ದಾರೆ.

ನಿ. : ಮಂತ್ರಿವರ್ಯ, ಹೇಳುತ್ತೇನೆ ಕೇಳು :

ಪದ : ತಾಳ ತ್ರಿತಾಳ ; ರಾಗ ಮಿಶ್ರಕಾಪಿ

ಭ್ರಾಂತಿಯುತ ಮಂತ್ರಿ ನೀ ಎಂಥ ಅಪದ್ಧ ನುಡಿ
ನಿಂತು ಎನ್ನಿದಿರೊಳು ಆಡಿದಿಯೋ
ಭವಿಗೆ ನೀನೆನ್ನ ಮಗಳ ಬೇಡಿದಿಯೋ
ಶಿವಭಕ್ತರಿಗೀ ಭವಿಯೆನಿಪರಿಗೀ
ಶರಿರ ಸಂಬಂಧ ಆಗು ಬಗೆಯಲ್ಲೋ ತೆಗೆ ॥

ಭವ ಭೋಗಿನಿಯಲ್ಲ ಶುದ್ಧ ಶಿವಯೋಗಿನಿ
ನನ್ನ ಮುದ್ದು ಮಗಳ ಲೀಲಾ ಶಿವ ಬಲ್ಲಾ
ಕಾಯದ ಸುಖದಾಸೆ ಆಕಿಗಿಲ್ಲಾ
ಕಾಮನ ಗೆಲಿದು ವೈರಾಗ್ಯ ಬಲಿದು
ನಲಿವ ಸಾತ್ವಿಕ ಕೇಳ್ವುದು ಸಲ್ಲಾ ಪೃಥ್ವೀಪಾಲಾ ॥

ಮಂತ್ರಿವರ್ಯರೆ, ನೀವೆಂಥ ಅಪದ್ಧ ಮಾತುಗಳನ್ನು ಆಡುವಿರಿ ?ನಿಮ್ಮ ರಾಜರು ಭವಿಗಳು, ನಾವು ಶಿವಭಕ್ತರು. ಅವರಿಗೂ ನಮಗೂ ಶರೀರ ಸಂಬಂಧ ಆಗುವ ಬಗೆ ಹೇಗೆ ?ಅನಿತ್ಯ ಭವ, ಸತ್ಯಶಿವ ಎಂಬ ವಚನಾಮೃತವನ್ನು ಉಂಡು ಸತ್ವಶಾಲಿಯಾದ ನನ್ನ ಮಗಳು ಭವಿಗಳ ಶರೀರ ಸಂಬಂಧಕ್ಕೆ ಸಮ್ಮತಿಸುವವಳಲ್ಲ. ಕಾಮಕ್ರೋಧಾದಿಗಳನ್ನು ಈಡಾಡಿ ಪರಶಿವನೇ ತನ್ನ ಪತಿಯೆಂದು ಭಾವಿಸಿರುವವಳು ರಾಜಭೋಗಕ್ಕೆ ಮರುಳಾಗಬಲ್ಲಳೆ ?ಸತ್ಯಶರಣೆಯಾದ ನನ್ನ ಮಗಳು ಹರಪೂಜೆಯನ್ನು ಬಿಟ್ಟು ನರಪೂಜೆಯನ್ನು ಮಾಡುವುದಿಲ್ಲ. ಹೀಗಿರಲು ನಿಮ್ಮ ರಾಜನೊಡನೆ ಮದುವೆಯಾಗಲು ಅವಳೆಂತು ಒಪ್ಪಿಗೆ ಕೊಡಬಲ್ಲಳು ?

ಮಂ. : ನಿರ್ಮಳಾ, ನಿನ್ನ ನೀತಿಶಾಸ್ತ್ರದ ಗಂಟನ್ನು ಕಟ್ಟಿಡು.ನಾನು ಹೇಳಿದಂತೆ ಕೇಳು.ರಾಜಾಜ್ಞೆಯನ್ನು ಮೀರುವುದು ಹಿತಕರವಲ್ಲ. ರಾಜಾಜ್ಞೆಯಂತೆ ನಡೆದರೆ ನೀನು ಸರ್ವರ ಮನ್ನಣೆಗೆ ಪಾತ್ರನಾಗುವಿ.ಇಲ್ಲದಿದ್ದರೆ ಬಂಧಿತನಾಗುವಿ. ಅವನ ಇಚ್ಛೆಯಂತೆ ವರ್ತಿಸಿದರೆ ನೀನು ಅರಮನೆಯಲ್ಲಿರುವಿ.ಮೀರಿ ನಡೆದರೆಸೆರೆಮನೆಯಲ್ಲಿರುವಿ.ತಿಳಿದು ನೋಡಿ ನನಗೆ ಉತ್ತರ ಕೊಡು.ಮಹಾರಾಜರನ್ನು ಎದುರು ಹಾಕಿಕೊಂಡು ನಡೆಯುವುದು ತರವಲ್ಲ.ಮಗಳನ್ನು ಮಹಾರಾಜರಿಗೆ ಕೊಟ್ಟು ಅವರ ಪ್ರೀತಿಗೆ ಪಾತ್ರನಾಗುವದು ಉತ್ತಮ. ಈ ಎರಡರಲ್ಲಿ ಒಂದನ್ನು ಆರಿಸಿಕೋ. ನೀನು ಮಹಾರಾಜರ ಇಚ್ಛೆಗೆ ಒಪ್ಪದಿದ್ದರೆ ನಿನ್ನ ಜೀವನವನ್ನೇ ಹಾಳು ಮಾಡಿಕೊಳ್ಳುವಿ.ವಿಚಾರಿಸಿ ನೋಡು, ಮಗಳನ್ನು ಮಹಾರಾಜರಿಗೆ ಒಪ್ಪಿಸಲು ಒಪ್ಪದಿದ್ದರೆ ನಿನ್ನನ್ನು ಹೆಡಮುರಿಗೆ ಕಟ್ಟಿ ಒಯ್ಯಬೇಕಾಗುವುದು. ಎಚ್ಚರವಿರಲಿ !

ನಿ : ಪದ : ತಾಳ ತ್ರಿತಾಳ ; ರಾಗ ಮಿಶ್ರಕಾಪಿ

ನೀಚ ಆಡದಿರಿಂಥ ಬಿರುನುಡಿ
ಕಟ್ಟೊ ಕಟ್ಟೊ ಎನ್ನನೀಗಲೇ ಹೆಡಮುರಿ ॥ಪಲ್ಲವಿ ॥

ಭೂಪರ ಭೀತಿ ಇನಿತಿಲ್ಲೊ ನೀತಿ
ವಂತ ಶಿವಶರಣರ ಜಾತಿ
ಪಾಪಕ್ಕೆ ಭೀತಿಗೊಳ್ವುದು ನೀತಿ
ಇರುವುದು ಜಗದೊಳು ಪ್ರಖ್ಯಾತಿ ॥

ಮಿಡುಕುವನಲ್ಲ ನಿನ್ನ ಬಂಧನಕ್ಕೆ
ನಾ ಹುಡುಕುವನಲ್ಲೊ ಹಂಚಿಕೆ ಇದಕೆ
ನುತ ಜನಪಾಲಾ, ಗೌರಿಯ ಲೋಲಾ
ಆತನೆ ಗತಿ ಎನಗನುಗಾಲಾ ॥

ಎಲೊ ಮಂತ್ರಿ, ವ್ಯರ್ಥವಾಗಿ ಬೊಗಳಬೇಡ.ಸತ್ಯ ಶಿವಶರಣರು ಪಾಪಕ್ಕೆ ಅಂಜುವರೇ ಹೊರತು, ಭೂಪರಿಗೆ ಅಂಜುವವರಲ್ಲ.ಅವರಿಗೆ ವಂದನೆ : ಬಂಧನೆ, ಅರಮನೆ : ಸೆರೆಮನೆ ಸರಿಸಮಾನ.ಅವರು ಸುಖಕ್ಕೆ ಹಿಗ್ಗುವದಿಲ್ಲ ; ದುಃಖಕ್ಕೆ ಕುಗ್ಗುವುದಿಲ್ಲ.ಸತ್ವಗುಣ ಸಂಪನ್ನರಿಗೆ ಸತ್ವಗುಣ ಕಾಯ್ದುಕೊಳ್ಳುವುದೇ ಧರ್ಮ. ಪ್ರಪಂಚದ ಸುಖ : ದುಃಖಗಳಿಗೆಅವರು ಮಿಡುಕುವದಿಲ್ಲ.ಸನ್ಮಾರ್ಗವನ್ನು ಬಿಟ್ಟು ನಡೆಯುವುದು ಅವರ ಗುರಿಯಲ್ಲ. ಇಂತಹ ಶಿವಶರಣರನ್ನು ವಂದಿಸುವಿಯೋ ಬಂಧಿಸುವಿಯೋ ಏನು ಮಾಡಿವಿಯೋ ನೋಡು.ನಿನ್ನದೊರೆ ನನ್ನ ಶಿರವನ್ನು ಕೊರೆಯಲು ಇಚ್ಛಿಸಿದರೆ ಕೊರೆಯಲಿ, ಸೆರೆಮನೆಯಲ್ಲಿ ಇರಿಸುವದಾದರೆ ಇರಿಸಲಿ. ಇದಕಾರು ಅಂಜುವರು ?ಇದಕಾರು ಅಳುಕುವರು ?ನಡೆ ಬರುತ್ತೇನೆ.

ಮಂ : ನಡೆ ನಡೆ, ನಿನ್ನ ಸೊಕ್ಕು ಮಿತಿಮೀರಿದೆ. ಹೆಡಮುರಿಗೆ ಬಿಗಿದು ಎಳೆದೊಯ್ಯುತ್ತೇನೆ. (ಬಂಧಿಸತೊಡಗುವನು)

ಸಾ : (ಪ್ರವೇಶಿಸಿ) ಮಂತ್ರಿವರ್ಯ, ನನ್ನ ಮುಪ್ಪಿನ ತಂದೆಯನ್ನು ಬಂಧಿಸಲು ಕಾರಣವೇನು?

ಮಂ : ರಾಜಾಜ್ಞೆಯನ್ನು ಮೀರಿ ನಡೆದ ಕಾರಣ.

ಸಾ : ರಾಜಾಜ್ಞೆಯನ್ನು ಮೀರಿದ್ದು ಹೇಗೆ ?

ಮಂ : ನಮ್ಮ ಮಹಾರಾಜರು ತಮ್ಮನ್ನು ಬಯಸಿ ದಾಸಿಯನ್ನು ಕಳಿಸಿದ್ದು ಗೊತ್ತಿಲ್ಲವೆ ?

ಸಾ : ಗೊತ್ತಿದೆ.

ಮಂ : ದಾಸಿಯ ಮುಂದೆ ಮಹಾರಾಜರನ್ನು ಧಿಕ್ಕರಿಸಿ ನುಡಿದುದು ಸುಳ್ಳೆ ?

ಸಾ : ನಿಜವೆಂದೇ ಇಟ್ಟುಕೊಳ್ಳಿ, ಮುಂದೆ ?

ಮಂ : ಮಹಾರಾಜರು ಈಗ ನನ್ನನ್ನು ತಮ್ಮ ತಂದೆಯ ಬಳಿಗೆ ಕಳಿಸಿ.ಈ ರೀತಿ ಅಪ್ಪಣೆ ಮಾಡಿದ್ದಾರೆ.

ಸಾ : ಏನೆಂದು ?

ಮಂ : ನೀನು ಹೋಗಿ, ಸಾತ್ವಿಕಿಯನ್ನು ಲಗ್ನಮಾಡಿಕೊಡಬೇಕೆಂದು ಅವಳ ತಂದೆಯನ್ನು ಕೇಳು ಆತಒಪ್ಪಿದರೆ ಒಳ್ಳೆಯದು.ಇಲ್ಲದಿದ್ದರೆ ಹೆಡಮುರಿಗೆ ಕಟ್ಟಿ ಎಳೆದುಕೊಂಡು ಬಾ : ಎಂದು

ಸಾ : ಹೇಳುತ್ತೇನೆ ಕೇಳು.

ಪದ : ತಾಳ ಕೇರವಾ ; ರಾಗ ಮಿಶ್ರಕಾಪಿ
ಅಭವಾs ಗಿರಿಜಾಧವಾss, ಸುಡುಸುಡು ಎನ್ನ ಜನ್ಮವ ॥ಪಲ್ಲವಿ ॥

ತಂದೆತಾಯಿಗಳಿಗೆ ಕಷ್ಟಾ
ತಂದು ಇಡುವಂಥಾ ಭ್ರಷ್ಟಾ
ಕಂದಳುದಿಸಿದೆನೊ ಪಾಪಿಷ್ಟಾಸುಡು ಸುಡು…… ॥

ಬಿಡು ಎನ್ನ ತಂದೆಯ ಮೂಢ
ನಡೆ ಬರುವೆ ನಿನ್ನ ಕೂಡ
ಪರಪೀಡೆಯಲ್ಲೊ ಹಿತವುಸುಡು ಸುಡು ….. ॥

ಘೋರ ಕರ್ಮಕ್ಕೆ ಗುರಿ
ಆಗುವ ನಿಮ್ಮ ದೊರಿ
ಪರರ ಪೀಡಿಸಲೀ ಪರಿಸುಡು ಸುಡು…. ॥

ಶಿವಶಿವಾ, ಎನ್ನ ಮುದ್ದುತಂದೆಯ ಬಂಧನಕ್ಕೆ ನಾನೇ ಕಾರಣಳಾದೆ, ಮಂತ್ರಿಗಳೇ, ನನ್ನ ತಂದೆಯನ್ನು ಬಂಧಿಸಬೇಡಿರಿ.ನಿರಪರಾಧಿಯನ್ನು ಬಂಧಿಸುವದು ಸರಿಯಲ್ಲ.ಮದುವೆಯ ವಿಷಯ ನನಗೆ ಸಂಬಂಧಪಟ್ಟದ್ದು ; ಅದಕ್ಕೆ ಪರರು ಹೊಣೆಗಾರರಲ್ಲ.ನಿಮ್ಮ ಅರಸರು ಒಪ್ಪಿದರೆ, ನಾನು ಅವರಿಗೆ ಭೆಟ್ಟಿಯಾಗುತ್ತೇನೆ.ಈ ವಿಚಾರವನ್ನು ನಿಮ್ಮ ಅರಸರಿಗೆ ತಿಳಿಸಿರಿ.

ಮಂ : ಯಾಕಾಗಲೊಲ್ಲದು. (ತನ್ನಷ್ಟಕ್ಕೆ) ರಾಜರ ಸೇವೆ ಗೊಂದಲಮಯವಾದುದು ಮಾಡಿದರೂ ಕಷ್ಟ ! ಬಿಟ್ಟರೂ ಕಷ್ಟ ! ನಾನೀಗ ಹೋಗಿ ರಾಜಸನ್ನಿಧಿಯಲ್ಲಿ ಇದ್ದುದನ್ನು ಇದ್ದಂತೆ ಹೇಳಿದರಾಯಿತು ಮಹಾರಾಜರು ಇಲ್ಲಿಯೇ ವಿಶ್ರಮಿಸಿದ್ದಾರೆ. ರಾಜೇಂದ್ರಾ, ನಮಸ್ಕರಿಸುತ್ತೇನೆ.

ಕೌಶಿಕ : ಮಂತ್ರಿ, ಹೋದ ಕಾರ್ಯ ಏನಾಯಿತು ?

ಮಂ : ಹೋದ ಕಾರ್ಯ ಸರಿಯಾಯಿತು.

ಕೌ. : ಏನು, ನಿರ್ಮಳನು ತನ್ನ ಮಗಳನ್ನು ಕೊಡಲು ಒಪ್ಪಿದನೆ?ಅದಕ್ಕೆ ಸಾತ್ವಿಕಿ
ಸಮ್ಮತಿಸಿದಳೆ ?

ಮಂ. : ಅಹುದು ದೊರೆಯೆ, ಅವಳು ಸಮ್ಮತಿಸಿದ್ದರಿಂದಲೇ ಸಾತ್ವಿಕಿಯನ್ನೂ ಅವಳ ತಂದೆಯನ್ನೂ ಬಿಟ್ಟು ಬಂದೆನು.

ಕೌ. : ಬಿಟ್ಟೇಕೆ ಬಂದೆ ? ಸಮ್ಮತಿ ದೊರೆತ ಮೇಲೆ ಅವಳನ್ನು ಕರೆದುಕೊಂಡು ಬರಬಹುದಾಗಿತ್ತಲ್ಲ!

ಮಂ. : ರಾಜೇಂದ್ರಾ, ತಾವು ಅವಳ ಇಚ್ಛಾನುಸಾರವಾಗಿ ವರ್ತಿಸಲು ಒಪ್ಪಿದರೆ ಅವಳು ಸಂತೋಷ ದಿಂದ ನಿಮ್ಮೆಡೆಗೆ ಬರುವಳಂತೆ.ತಮ್ಮ ಅಭಿಪ್ರಾಯಕ್ಕೆ ಕಾಯುತ್ತಿದ್ದಾಳೆ.

ಕೌ. : ಮಂತ್ರೀ, ಆತ್ಮಸಾಕ್ಷಿಯಾಗಿ ಪ್ರತ್ಯುತ್ತರವನ್ನು ಕೊಡದೆ ಆಕೆಯ ಇಚ್ಛಾನುಸಾರವಾಗಿ ನಡೆಯುವೆನು.ನೀನು ಈ ರೀತಿಯಾಗಿ ಅವಳಿಗೆ ತಿಳಿಸುವಂಥವನಾಗು.

ಮಂ. : ಅಪ್ಪಣೆ (ಹೋಗುವನು)

* * *