ಕಾಳೆಗದ ಕಥೆಯಲ್ಲ, ವಿಷಯಗ
ಳೇಳಿಗೆಯ ವಿಧಿಯಲ್ಲ, ಹೊಟ್ಟೆಯ
ಹೂಳಲಿಕೆ ಹಿಂಸೆಯನು ಮಾಡುವ ಹೊಲಗು ತಾನಲ್ಲ!

ಕಾಳೆಗವು ಕರಣದಲಿ, ಸುರತದ
ಕೀಳು ಕುಂಡಲಿಯಲ್ಲಿ, ತೃಪ್ತಿಯ
ದಾಳಿ ಗಗನದೊಳೆಂದು ಪೇಳುವುದೀ ಸುಬೋಧೆಯಲಿ!
(ಪ್ರಭುಲಿಂಗಲೀಲೆ)

ಅಲ್ಲಮಪ್ರಭುವಿನ ಕಥೆಯು ಹಣ, ಸುಖ ಇವನ್ನು ಗಳಿಸಲಿಕ್ಕಾಗಿ ಅಥವಾ ಉಳಿಸಲಿಕ್ಕಾಗಿ ಹೋರಾಟ ಮಾಡಿದ ಕಥೆಯಲ್ಲ. ಸುಖಭೋಗಕ್ಕಾಗಿ ಹಂಬಲಿಸಿ ಜೀವಮಾನವನ್ನು ಸವೆಯಿಸಿದಂತಹ ವ್ಯಕ್ತಿಯ ಕಥೆಯೂ ಅಲ್ಲ. ತಾನೊಬ್ಬನು ಶರೀರವನ್ನು ಹಿಡಿದು ಬದುಕಲಿಕ್ಕಾಗಿ ಸಮಾಜದ ಇತರ ಬಂಧುಗಳನ್ನು ಹಿಂಸಿಸಿ, ಶೋಷಿಸಿ ಬದುಕಿದಂತಹ ವ್ಯಕ್ತಿಯ ಚರಿತ್ರೆಯೂ ಅಲ್ಲ ಎಂದು ತನ್ನ ’ಪ್ರಭುಲಿಂಗ ಲೀಲೆ’ಯಲ್ಲಿ ಪೀಠಿಕೆ ಹಾಕುವ ಚಾಮರಸ ಕವಿಯು ಮುಂದಿನ ಮೂರು ವಾಕ್ಯಗಳಲ್ಲಿ ಅಲ್ಲಮಪ್ರಭುವಿನ ಚರಿತ್ರೆಯನ್ನು ಅರ್ಥವತ್ತಾಗಿ ಹೇಳುತ್ತಾನೆ. (ಚಾಮರಸ ೫೦೦-೫೫೦ ವರ್ಷಗಳ ಹಿಂದೆ ಇದ್ದ ಕನ್ನಡ ಕವಿ.) ಪ್ರಭುವಿನ ವ್ಯಕ್ತಿತ್ವವನ್ನು ಮತ್ತೊಂದು ಬಗೆಯಲ್ಲಿ ದೃಷ್ಟಿಸಿ ’ಇದೂ ಒಂದು ಕಾಳಗದ ಕಥೆಯೇ’ ಎನ್ನುತ್ತಾನೆ. ಆದರೆ ಈ ಹೋರಾಟ ಬೇರೆ ರೀತಿಯದು. ಸುಖದ ಆಸೆ ಎಂಬ ಶತ್ರುವಿನ ವಿರುದ್ಧ ಅಂತರಾತ್ಮನು ನಡೆಸುವ ಹೋರಾಟ. ಪ್ರತಿ ಮಾನವನಲ್ಲಿ ಅಡಗಿಕೊಂಡಿರುವ ’ಕುಂಡಲಿನಿ’ ಎಂಬ ಯೋಗಶಕ್ತಿಯನ್ನು ಭೇದಿಸಿ ಪರಮಾತ್ಮನ ಸಾಮರಸ್ಯದ ಸುಖದಲ್ಲಿ ತನ್ಮಯನಾಗುವುದು ಹೇಗೆ ಎಂಬುದನ್ನು ವಿವರಿಸುವ ಕಥೆಯಿದು. ದೇವರು ನಮಗೆ ವರವಾಗಿ ಕೊಟ್ಟಿರುವ ಮನುಷ್ಯಜೀವನವನ್ನು ಉತ್ತಮ ಆದರ್ಶಗಳ ಸಾಧನೆಗಾಗಿ ಬಳಸಿಕೊಂಡು ಮಾನವು ಅತಿ ಹೆಚ್ಚಿನ ವ್ಯಕ್ತಿತ್ವವನ್ನು ಹೇಗೆ ಪಡೆದುಕೊಳ್ಳಬಲ್ಲ ಎಂಬುದನ್ನು ತೋರಿಸಿಕೊಡುವ ಕಥೆ ಈ ಅಲ್ಲಮಪ್ರಭುವಿನದು.

ತಾಯಿ ಭಾರತಿ ಸಕಲ ಸಂಪತ್ತುಗಳಿಂದ ಕೂಡಿದವಳು. ಪ್ರಕೃತಿ ಸಂಪತ್ತು, ಜನ ಸಂಪತ್ತು, ಸಂಸ್ಕೃತಿ ಸಂಪತ್ತುಗಳಿಂದ ಮಾತ್ರವಲ್ಲ, ತತ್ವಜ್ಞಾನ – ಆಧ್ಯಾತ್ಮಿಕ ಶ್ರೀಮಂತಿಕೆಯಲ್ಲಿ ಭವ್ಯವಾಗಿ ಮೆರೆಯುವವಳು. ಈ ತಾಯಿಯು ತನ್ನ ಗರ್ಭದಿಂದ ಅನೇಕ ತತ್ವಜ್ಞಾನಿಗಳಿಗೆ, ದರ್ಶನಕಾರರಿಗೆ, ಪ್ರವಾದಿಗಳಿಗೆ, ರಾಷ್ಟ್ರವೀರರಿಗೆ, ಕವಿಗಳಿಗೆ, ಧರ್ಮಸಂಸ್ಥಾಪಕರಿಗೆ ಜನ್ಮ ಕೊಟ್ಟಿದ್ದಾಳೆ.

ಅನುಭವಮಂಟಪದ ನಾಯಕ

ಭಾರತಮಾತೆಯ ತನುಜಾತೆಯಾದ ಕರ್ನಾಟಕ ಮಾತೆಯೂ ಉದಾರಚರಿತ್ರಳು. ಈಕೆಯ ಕೊಡುಗೆ ಧರ್ಮ, ಸಾಹಿತ್ಯ, ಸಂಸ್ಕೃತಿ ಈ ಎಲ್ಲ ರಂಗಗಳನ್ನು ವ್ಯಾಪಿಸಿದೆ. ಈ ಬಗೆಯ ಸರ್ವಮುಖ ಕೊಡುಗೆಗಳಲ್ಲಿ ಹನ್ನೆರಡನೆಯ ಶತಮಾನದ ಕ್ರಾಂತಿಯೂ ಜಗತ್ತಿಗೊಂದು ಮಹಾ ಕಾಣಿಕೆ. ಈ ಕ್ರಾಂತಿ ನಡೆದುದು ಮೂಢನಂಬಿಕೆ, ಜಾತೀಯತೆಗಳ ವಿರುದ್ಧ. ಇವನು ಮೇಲು ಅವನು ಕೀಳು ಮೊದಲಾದ ತಪ್ಪು ಭಾವನೆಗಳು ಮನುಷ್ಯರಲ್ಲಿ ಮೂಡುತ್ತಿರುತ್ತವೆ; ಇವುಗಳಲ್ಲಿ ತೊಡೆದು ಹಾಕಲು ಹಲವಾರು ತ್ಯಾಗಜೀವಿಗಳು ಒಂದುಗೂಡಿ ಮಾಡಿದ ಈ ಕ್ರಾಂತಿಯ ಘೋಷಣೆಯೆಂದರೆ, “ದೇವನು ಒಬ್ಬನು; ಎಲ್ಲರೂ ಅವನ ಮಕ್ಕಳು, ಜಾತಿಭೇದಗಳು ಮನುಷ್ಯ ಕಲ್ಪಿಸಿದ ಅಡ್ಡಗೋಡೆಗಳು. ಪರಮಾತ್ಮನ ಕೃಪಾಛತ್ರದ ಅಡಿಯಲ್ಲಿ ಜಾತಿ ಮತ ವರ್ಣ ವರ್ಗಗಳ ಹಂಗಿಲ್ಲದೆ ಎಲ್ಲರೂ ಮಾನವೀಯ ಪ್ರೇಮದಿಂದ ಬಂಧಿಸಲ್ಪಟ್ಟು, ವಿಶ್ವಬಂಧುಗಳಾಗಿ ಇರಬಹುದು” ಎಂಬುದು. ಈ ಸಿದ್ಧಾಂತವನ್ನು ಕಾರ್ಯರೂಪಕ್ಕೆ ಇಳಿಸಲಿಕ್ಕಾಗಿ ಹನ್ನೆರಡನೆಯ ಶತಮಾನದಲ್ಲಿ ಚಾಳುಕ್ಯ ಸಾಮ್ರಾಜ್ಯದ ಪ್ರಧಾನಮಂತ್ರಿಗಳಾದ ಬಸವಣ್ಣನವರು ಅನುಭವ ಮಂಟಪ ಎಂಬ ಧಾರ್ಮಿಕ ವಿಶ್ವವಿದ್ಯಾಲಯವನ್ನು ಕಟ್ಟಿದರು. ಈ ಅನುಭವಮಂಟಪದಲ್ಲಿ ಈ ಜಾತಿಯವರು, ಆ ಜಾತಿಯವರು ಎಂಬ ವ್ಯತ್ಯಾಸವಿಲ್ಲ. ಗಂಡಸರು, ಹೆಂಗಸರು ಎಂಬ ತಾರತಮ್ಯವಿಲ್ಲ. ಎಲ್ಲರೂ ಸರಿಸಮಾನರು. ಪರಿಣಾಮವಾಗಿ ದೇಶವಿದೇಶಗಳಿಂದ ೭೭೦ ಮಂದಿ ಮಹಾ ಶರಣರು ಸಮಾವೇಶಗೊಂಡರಲ್ಲದೆ, ಅವರೆಲ್ಲರೂ ಸತ್ಯಶುದ್ಧ ಕಾಯಕವನ್ನು ಕೈಗೊಂಡು ಸಮಾಜದ ಸೇವೆಗಾಗಿ ಬಾಳನ್ನು ಶ್ರೀಗಂಧದಂತೆ ಸವೆಸಿದರು. ಇಂತಹ ಅನುಭವಮಂಟಪವನ್ನು ಅಧ್ಯಕ್ಷನಾಗಿ, ಸೂತ್ರಧಾರನಾಗಿ ನಿಂತು ನಡೆಯಿಸಿದವನು ಅಸಾಮಾನ್ಯನಾದ ಅಲ್ಲಮಪ್ರಭು. ಹುಟ್ಟಿದ ಜಾತಿ ಯಾವುದೇ ಇರಲಿ, ಅದು ಮನುಷ್ಯ ಸಾಧನೆಗೆ ಅಡ್ಡಿಬರದು; ಅವನ ಘನತೆ ಇರುವುದು ವ್ಯಕ್ತಿಯು ಸಾಧಿಸಿಕೊಳ್ಳುವ ಗುರಿಯಲ್ಲಿ ಎಂದು ಸಾಧಿಸಿ ತೋರಿಸಿದನು ಮಹಾಮಹಿಮ ಅಲ್ಲಮಪ್ರಭು.

ಬಯಲು ಕಾಯ

ಅಲ್ಲಮಪ್ರಭು ಎಂದ ತಕ್ಷಣ ನಮಗೆ ನೆನಪಾಗುವುದು ಅವನು ಸಾಧಿಸಿದ ’ಬಯಲು ಕಾಯ’ದ ಸಿದ್ಧಿ. ಯೋಗದ ಅತಿ ಉಚ್ಚ ಸಿದ್ಧಿಯೆಂದು ಪ್ರತೀತವಾಗುವ ಈ ’ಬಯಲು ಕಾಯಸಿದ್ಧಿ’ ಪ್ರಭುವಿಗೆ ಕರಗತವಾಗಿದ್ದಿತು. ಬಯಲು ಕಾಯವೆಂದರೆ ಆಕಾಶದ ಗುಣಗಳು ಅಳವಟ್ಟ ಶರೀರ. ಅವನು ನಿಂತರೆ ನೆರಳು ಮೂಡದಷ್ಟು ಶರೀರ ಪಾರದರ್ಶಕವಾಗಿತ್ತು. ನಡೆದಾಡಿದರೆ ಹೆಜ್ಜೆಯ ಗುರುತು  ಮೂಡದಷ್ಟು ಹಗುರವಾಗಿತ್ತು. ಕತ್ತಿ ಬೀಸಿದರೆ ಆ ಏಟು ಅವನಿಗೆ ಬೀಳದೆ ಕತ್ತಿಯೇ ತಡೆ ಇಲ್ಲದೆ ಶರೀರದಲ್ಲಿ ಹಾಯ್ದು ಪಾರಾಗುತ್ತಿತ್ತು., ಕಣ್ಣಿಗೆ ಕಾಣುತ್ತಿದ್ದರೂ ಮುಟ್ಟಿದರೆ ಕೈಗೆ ಸಿಕ್ಕುತ್ತಿರಲಿಲ್ಲ ಆ ಬಯಲುಕಾಯ ಎಂದು ಭಕ್ತರು ವರ್ಣಿಸಿದ್ದಾರೆ. ತಾನಷ್ಟೇ ಸಿದ್ಧಪುರುಷನಾಗುವುದು ಬೇಕಾಗಿರಲಿಲ್ಲ ಅಲ್ಲಮನಿಗೆ. ಆದುದರಿಂದ ಎಲ್ಲರನ್ನೂ ಎತ್ತರಕ್ಕೆ ಏರಿಸಲು ಸಹಾಯಕವಾಗುವಂತಹ ವಚನಗಳನ್ನು ರಚಿಸಿ ಮಾರ್ಗ ತೋರಿದನು. ಅಲ್ಲಮನ ವಚನಗಳೆಂಬ ಹೂವುಗಳಲ್ಲಿ ಕಾವ್ಯದ ಸೌಂದರ್ಯ, ಆಧ್ಯಾತ್ಮದ ಮಕರಂದ, ಸ್ವಾನುಭಾದ ಸುವಾಸನೆ ಮೂರು ಬೆರೆತಿವೆ. ಇವು ಎಲ್ಲ ಜಾತಿ, ಗೋತ್ರಗಳ ವಲಯವನ್ನು ದಾಟಿ ನಿಂತು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ.

ಜನನ-ಬಾಲ್ಯ

ಬಳ್ಳಿಗಾವಿ ಎಂಬುದೊಂದು ದೊಡ್ಡ ಊರು. (ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಹಳ್ಳಿ.) ಹನ್ನೆರಡನೆಯ ಶತಮಾನದಲ್ಲಿ ತನ್ನದೇ ಆದ ಐತಿಹಾಸಿಕ ವೈಶಿಷ್ಟ್ಯ, ಸಾಂಸ್ಕೃತಿಕ ಶೋಭೆಯಿಂದ ಮೆರೆಯುತ್ತಿದ್ದ ಊರು. ಹಿಂದು ಸಂಸ್ಕೃತಿಯಲ್ಲಿ ಅಂತರ್ಗತವಾಗಿ ಹರಿದುಬಂದಿರುವಂತಹ ಪೂಜೆ-ಪುರಸ್ಕಾರ, ಅಂದು ಆ ಊರನ್ನು ತುಂಬಿಕೊಂಡು ಆ ಊರಿಗೆ ಒಂದು ಬಗೆಯ ಸಾತ್ವಿಕ ಕಳೆಯನ್ನು ಮೈಗೂಡಿಸಿತ್ತು. ಅಲ್ಲಮಪ್ರಭುವಿನ ತಂದೆಯಾದ ನಿರಹಂಕಾರನೂ ತಾಯಿ ಸುಜ್ಞಾನಿಯೂ ಬಳ್ಳಿಗಾವಿಗೆ ಸಮೀಪದ ಕರವೂರಿನವರು. ನಿರಹಂಕಾರನು ಪರಂಪರಾಗತವಾಗಿ ಬಂದಿದ್ದ ಮೃದಂಗ-ಮದ್ದಳೆಗಳನ್ನು ನುಡಿಸುವುದರಲ್ಲಿ ಪಾರಂಗತನು. ತನ್ನ ಸಮರ್ಥ ಸಂಗೀತ-ಕಲಾಜ್ಞಾನದಿಂದಾಗಿ ಅವನು ಬಳ್ಳಿಗಾವಿಗೆ ಬಂದು ನಾಗವಾಸದ ಅಧಿಪತಿಯಾಗಿದ್ದನು. ಅವನದು ನಟ್ಟುವ ಜಾತಿ. ಅಂದಿನ ಕಾಲದಲ್ಲಿ ಸಾಮಾನ್ಯವಾಗಿ ನಟ್ಟುವ ಜಾತಿಯವರನ್ನು ನಾಗವಾಸಾಧಿಪತಿಗಳನ್ನಾಗಿ ನಿಯಮಿಸಿಕೊಳ್ಳುತ್ತಿದ್ದರು. ಅವರ ಕೆಲಸ ನಾಗವಾಸದವರಿಗೆ ಅಂದರೆ ನೃತ್ಯಶಾಲೆ – ಗಾಯನಶಾಲೆಗಳಿಂದ ಕೂಡಿದ ಅಂತಃಪುರವಾಸಿಗಳಿಗೆ ಭರತನಾಟ್ಯ ಇತ್ಯಾದಿ ನೃತ್ಯವಿದ್ಯೆಗಳನ್ನು ಕಲಿಸುವುದು. ನಿರಹಂಕಾರನು ರಾಜಮನೆತನದವರ ನೃತ್ಯಗಳಿಗೆ ಮದ್ದಳೆಯನ್ನು ನುಡಿಸುತ್ತಿದ್ದುದಲ್ಲದೆ, ಅಂತಹ ಕಲೆಗಾರ್ತಿಯರ ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಾಗುತ್ತಿತ್ತು.

ನಿರಂಹಕಾರ ಸತ್ಯವಂತ, ಕಷ್ಟಪಟ್ಟು ಕೆಲಸಮಾಡುವವನು, ಸುಸಂಸ್ಕೃತನು. ಹಾಲಿಗೆ ಜೇನುರಸ ಬೆರೆತಂತೆ ಸುಜ್ಞಾನಿ ಪತ್ನಿಯಾಗಿ ದೊರೆತಾಗ ಅವನ ವ್ರತ-ಭಕ್ತಿಗಳಿಗೆ ರೆಕ್ಕೆ ಬಲಿತಂತೆ ಆಯಿತು. ಸುಜ್ಞಾನಿ ಸಾತ್ವಿಕಳಾದ, ಪತಿಯ ಮಾತನ್ನು ಮೀರದ, ವಿನಯಶೀಲಳಾದ ಗೃಹಿಣಿ. ಮದುವೆಯಾಗಿ ಹಲವಾರು ವರ್ಷಗಳು ಕಳೆದುಹೋದರೂ ಅವರಿಗೆ ಮಕ್ಕಳಾಗಲಿಲ್ಲ. ಸುಜ್ಞಾನಿಗೆ ಮೂವತ್ತು ವರ್ಷಗಳು ಸಮೀಪಿಸಿದಾಗ ಮಗುವಿನ ಹಂಬಲ ಮಿತಿ ಮೀರಿತು. ತನ್ನ ಪ್ರೀತಿಯನ್ನು ಅರ್ಪಿಸಲು ಮಗುವಿಲ್ಲ ಎಂದು ದುಃಖವಾಯಿತು. ಮಗುವನ್ನು ಅನುಗ್ರಹಿಸು ಎಂದು ದೇವರನ್ನು ಬೇಡಬೇಕು ಎಂದು ಆಕೆಗೆ ತೋರಿತು. ಗಂಡನಿಗೂ ಈ ಮಾತನ್ನು ಹೇಳಿದಳು. ದೇವರನ್ನು ಭಕ್ತಿಯಿಂದ ಪ್ರಾರ್ಥಿಸೋಣ ಎಂದು ಒತ್ತಾಯ ಮಾಡಿದಳು. ಇಬ್ಬರೂ ಸ್ವಂತ ಸ್ಥಳವಾದ ಕರುವೂರ ಪೆರ್ಮಲೆಗೆ ಅಂದರೆ ಕರಿಮಲೆ ಎಂಬ ಬೆಟ್ಟಕ್ಕೆ ಮಗುವಿನ ಹಂಬಲದಿಂದ ಬಂದು ಅಲ್ಲಿ ಸಂಕಲ್ಪ ಮಾಡಿ ವ್ರತ ಕೈಗೊಂಡರು. ತಡವಾಗಿಯಾದರೂ ದೇವರ ಅನುಗ್ರಹವಾಯಿತು. ಅದನ್ನು ಅರಿತ ಅವರು ದೇವರ ಪ್ರಸಾದವನ್ನು ಪಡೆದು ಆನಂದದಿಂದ ಬಳ್ಳಿಗಾವಿಗೆ ಹಿಂತಿರುಗಿದರು. ಸುಜ್ಞಾನಿಯು ಗರ್ಭವತಿಯಾದಳು. ಹೊಟ್ಟೆಯಲ್ಲಿ ಶಿಶುವು ಬೆಳೆದಂತೆ ಆಕೆಯ ಸ್ವಭಾವ ಇನ್ನೂ ಸಾತ್ವಿಕವಾಯಿತು. ಮುಖವು ದೈವೀ ತೇಜಸ್ಸಿನಿಂದ ಕೂಡಿತು.

ಅಂದು ಯುಗಾದಿಯ ಪಾಡ್ಯ. ಜಗತ್ತು ಹೊಸ ವರ್ಷದ ಸ್ವಾಗತಕ್ಕೆ ಸಿದ್ಧವಾಗುವಾಗ ಅಲ್ಲಮಚಂದ್ರನು ಧರೆಗೆ ಇಳಿದು ಬಂದ. ನೊಂದು ಬೆಂದು ಸಂಸಾರದ ಕಷ್ಟಗಳಲ್ಲಿ ಸೋತ ಜಗತ್ತಿಗೆ ಹೊಸ ಭರವಸೆಯನ್ನೇ ಹುಟ್ಟಿಸುವಂತೆ ಅಲ್ಲಮನು ಯುಗಾದಿಯಂದು ಹುಟ್ಟಿಬಂದ. ತಾಯಿತಂದೆಗಳು ಮುದ್ದು ಕಂದನ ಆಗಮನದಿಂದ ಸಂತೋಷಪಟ್ಟರು.

ಅಸಾಮಾನ್ಯ ಹುಡುಗ

ಅಲ್ಲಮನದು ಚುರುಕು ಬುದ್ಧಿ. ಬಾಲಸೂರ್ಯನಂತೆ ತೇಜಸ್ವಿಯಾದ ಮುಖಮಂಡಲ, ನಕ್ಷತ್ರಗಳಂತೆ ಮಿನುಗುವ ಕಣ್ಣುಗಳು; ಗುಲಾಬಿಯಂತಹ ಮೈಬಣ್ಣ, ಕಂಡವರ ಕಣ್ಸೆಳೆದು, ಅವರ ತೋಳೇರಿ ಕುಳಿತುಕೊಳ್ಳುವ ಪ್ರೇಮಮಯ ನಿಲುವು. ಇದರ ಜೊತೆಗೆ ವಿದ್ಯೆಯನ್ನು ಬಲು ಬೇಗನೆ ಗ್ರಹಿಸುವ ಜಾಣ್ಮೆ. ತನ್ನ ಮನೆಯ ಪರಂಪರಾಗತವಾದ ಮದ್ದಳೆ ನುಡಿಸುವ ವಿದ್ಯೆಯನ್ನು ಆಡುತ್ತಾಡುತ್ತ ಕಲಿತುಬಿಟ್ಟ. ತಂದೆ ನಿರಹಂಕಾರನಿಗೆ ತನ್ನ ಮಗ ಒಳ್ಳೆಯ ಪಂಡಿತನೂ ಆಗಬೇಕೆಂಬ ಇಚ್ಛೆ. ಅವನ ಅಪೇಕ್ಷೆಯಂತೆ ಅಲ್ಲಮನು ಅಷ್ಟೇ ಸಹಜವಾಗಿ ವೇದಪುರಾಣ ಶಾಸ್ತ್ರಗಳನ್ನು ಅಭ್ಯಾಸ ಮಾಡಿದ. ತಾಯಿ ಸುಜ್ಞಾನಿಯು ಪ್ರತಿನಿತ್ಯ ಮಠಗಳಿಗೆ ಹೋಗಿ ಪುರಾಣ ಪ್ರವಚನ ಕೇಳುವ ಪರಿಪಾಠವಳು. ಮಗನನ್ನೂ ಜೊತೆಗೆ ಕರೆದೊಯ್ಯುತ್ತಿದ್ದಳು. ಗುರುಗಳಿಗೂ ಅಲ್ಲಮ ಬರುತ್ತಾನೆ ಎಂದರೆ ಬಹು ಸಂತೋಷ. ಅಲ್ಲಮನು ಗಂಭೀರವಾಗಿ ಅವರೆದುರು ಕುಳಿತು ಪ್ರವಚನ ಕೇಳುತ್ತಾ ಬುದ್ಧಿವಂತ ಪ್ರಶ್ನೆ ಕೇಳುವನು. ಅನು ಕೇಳುವ ಗಂಭೀರ ಸಮಸ್ಯೆಗಳಿಗೆ ಉತ್ತರಿಸಲು ಒಮ್ಮೊಮ್ಮೆ ಗುರುಗಳೇ ಅಸಮರ್ಥರಾಗುತ್ತಿದ್ದರು. ಆದರೂ ಅವನ ದೈವೀಶಕ್ತಿಯ ಪ್ರಭೆಗೆ ಮಾರುಹೋಗುತ್ತಿದ್ದರು. ಇವನು ಸಾಮಾನ್ಯನಲ್ಲ ಎಂದು ಬಾಲಯೋಗಿಯ ಪ್ರತಿಭೆಯನ್ನು ಗ್ರಹಿಸಿದರು.

ಸಂಜೆಯಾಗುತ್ತಿದ್ದಂತೆಯೇ ಸುಜ್ಞಾನಿ ಮುಖ ತೊಳೆದು ವಿಭೂತಿ ಧರಿಸಿ, ಸಂಜೆಯ ದೀಪವನ್ನು ಹಚ್ಚಿ ಪ್ರಾರ್ಥನೆ ಭಜನೆ ಮಾಡಿಸುತ್ತಿದ್ದಳು. ಅನಂತರ ಅತ್ಯುತ್ತಮ ಕಥೆಗಳನ್ನು ಹೇಳುತ್ತಿದ್ದಳು. ಬೆಳಗಿನ ವೇಳೆ ತಂದೆಯ ತರಬೇತಿ. ಹೀಗಾಗಿ ಅಲ್ಲಮನು ಬೆಳೆದಂತೆ ಅವನ ವಿದ್ಯೆ ಎರಡರಷ್ಟು ಬೇಗ ಬೆಳೆಯಿತು. ಲೋಕದ ವಿದ್ಯೆಗಳಲ್ಲಿ ಅವನು ಬಹಳ ಆಸಕ್ತಿವಹಿಸಿ ಕಲಿಯುತ್ತಿದ್ದ. ಆದರೂ ಅವನ ಒಳಮನಸ್ಸು ಮಾತ್ರ ಸದಾ ಪರಮಾತ್ಮನನ್ನು ಸ್ಮರಿಸುವುದರಲ್ಲಿ ಮಗ್ನವಾಗುತ್ತಿತ್ತು. ಬಸವಣ್ಣನವರು ಅಲ್ಲಮನನ್ನು ಕಂಡಾಗ ಹೇಳುವಂತೆ, ಆತನ ಜೀವನ ಮರುಗದ ಗಿಡದಂತೆ ಹುಟ್ಟುತ್ತಲೇ ಪರಿಮಳ ಬೀರತೊಡಗಿತು. ಹುಡುಗರು ಊಟಕ್ಕೆ ಇದು ಬೇಕು, ಈ ಬಟ್ಟೆ ಬೇಕು, ಆ ಆಟದ ಸಾಮಾನು ಬೇಕು ಎಂದು ಕಾಡುವುದು ಸಹಜ. ಆದರೆ ಅಲ್ಲಮನು ’ಪೂಜೆ ಮಾಡುವುದನ್ನು ಹೇಳಿಕೊಡು’ ಎಂದೋ ’ಭಜನೆ ಮಾಡಿಸು’ ಎಂದೋ ತಾಯಿಯನ್ನು ಒತ್ತಾಯಪಡಿಸತೊಡಗಿದ. ತಾನು ಕಲಿತುದನ್ನು ತನ್ನ ಜೊತೆಯ ಮಕ್ಕಳಿಗೆ ಹೇಳಿ, ಅವರನ್ನೂ ಭಜನೆ ಮಾಡಲು ಕರೆಯುತ್ತಿದ್ದನು. ಆಗ ತಾನೆ ಮಾತನಾಡಲು ಕಲಿತ ಚಿಕ್ಕ ಹುಡುಗನಿಂದ ಅಕ್ಕಪಕ್ಕದ ಮನೆಯವರು ಎಷ್ಟೋ ವಿಷಯ ಕಲಿಯುವಂತಾಯಿತು. ಚಾಮರಸ ಹೇಳುವಂತೆ, ಅವನು ನುಡಿ ಕಲಿತು ತನ್ನ ಮನಸ್ಸಿನ ಭಾವನೆಗಳನ್ನು ಇತರರಿಗೆ ಹೇಳಲು ಆರಂಭಿಸಿದಾಗ ಜ್ಞಾನದ ಬಳ್ಳಿ ಸುತ್ತಮುತ್ತಲ ಮನೆಗೆ ಹರಿಯತೊಡಗಿತಂತೆ!

ಇನ್ನೂ ಹೆಚ್ಚು ಹೆಚ್ಚು ಆಧ್ಯಾತ್ಮದಲ್ಲಿ ಪರಿಣತಿ ಹೊಂದಬೇಕೆಂಬ ಅವನ ಹಂಬಲ ಮಿತಿಮೀರಿದಾಗ, ಯೋಗಸಾಧನೆಯ ಅಪೇಕ್ಷೆಯಿಂದ ಸಾಧುಸಂತರನ್ನು ಸಂದರ್ಶಿಸತೊಡಗಿದ. ತಾಯಿ-ತಂದೆಗಳ ಗಮನ ತಪ್ಪಿಸಿ ಬಳ್ಳಿಗಾವಿಯ ಹೊರವಲಯಕ್ಕೆ ಹೋಗಿ ಗಂಟೆಗಟ್ಟಳೆ ಯೋಗಸಾಧನೆಯಲ್ಲಿ ಮೈಮರೆಯುತ್ತಿದ್ದ. ಪ್ರಕೃತಿ ಮಾತೆಯ ಪ್ರಶಾಂತ ಮಡಿಲಿನಲ್ಲಿ ಕುಳಿತಾಗ ಅವನಿಗೆ ಅಪಾರ ಆನಂದ. ಮೊಗ್ಗು ವಿಕಾಸವಾಗುವಂತೆ ಅವನ ಸಾಧನೆ ಅರಳತೊಡಗಿತ್ತು.

ವೈಭವ, ಸುಖಗಳ ಮಧ್ಯೆ

ಯೋಗಿಗಳ ಜೀವನದಲ್ಲಿ ಬರುವ ಅತಿ ಮುಕ್ಯ ಘಟ್ಟ ಪೂರ್ವಾಶ್ರಮದಿಂದ ನಿರ್ಗಮನ. ಎರಡು ಬೆಟ್ಟಗಳ ಮಧ್ಯದಲ್ಲಿ ಹುಟ್ಟಿದ ನದಿ ಅವುಗಳ ಸೀಮೆ ದಾಟಿ ಹೊರನುಗ್ಗಿ ಜಗತ್ತನ್ನು ತಣಿಸುವಂತೆ, ತ್ಯಾಗಿಗಳು ಸೀಮಿತ ವಲಯವನ್ನು ದಾಟಿ ತಾಯಿ ತಂದೆಗಳ ಪ್ರೇಮಸಂಕೋಲೆ ಕಡಿದು ಹೊರನುಗ್ಗುವುದು ಅಪೂರ್ವ ಘಟನೆ. ಅಲ್ಲಮನ ಜೀವನದಲ್ಲಿಯೂ ಇದು ಸಂಭವಿಸಿತು.

ಅಲ್ಲಮನು ಬಾಲ್ಯವನ್ನು ದಾಟಿ ಯೌವನಕ್ಕೆ ಕಾಲಿರಿಸಿದ. ಅವನ ಮನಸ್ಸು ಹೊರಗಿನ ಸುಖ ಸಂತೋಷಗಳ ಕಡೆಗೆ ಓಡಲಿಲ್ಲ. ಒಳಮುಖವಾಗಿ ಹರಿಯತೊಡಗಿತು. ತಾನೇನೋ ಒಂದು ಉದ್ದೇಶವನ್ನು ಸಾಧಿಸಬೇಕಾಗಿದೆ ಎಂಬ ಅರಿವು ಜಾಗೃತವಾಗತೊಡಗಿತು. ಉಳಿದವರಂತೆ ಉಂಡು ಉಟ್ಟು ಕಾಲಕಳೆದು ಬದುಕಲಿಕ್ಕೆ ಬಂದವನು ತಾನಲ್ಲ ಎಂದು ಗ್ರಹಿಸಿದ. ಅವನ ಮನಸ್ಸಿನಲ್ಲಿ ಸುಳಿದಾಡುವ ವಿಚಾರಗಳೇ ಬೇರೆ. ತಾಯಿಯಿಂದ ಪಡೆದ ಸಂಸ್ಕಾರವೂ ತೀವ್ರವಾಗಿತ್ತು. ಶ್ರೀಮಂತರಾದ ಹೆಂಗಸರಿಗೆ ನೃತ್ಯ ಹೇಳಿಕೊಡುವುದು ಅಲ್ಲಮನ ತಂದೆಯ ವೃತ್ತಿಯಾಗಿತ್ತು, ಅಲ್ಲವೆ? ಮಗನನ್ನು ಕುಲಕಸುಬಿನಲ್ಲಿ ಪಳಗಿಬೇಕೆಂದು ನಿರಹಂಕಾರ ನೃತ್ಯಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದ. ಅಲ್ಲಿನ ಅಂತಃಪುರದಲ್ಲಿ ಸಂಪತ್ತು ತುಂಬಿ ತುಳುಕಾಡುತ್ತಿತ್ತು. ಅಲ್ಲಿ ಸ್ತ್ರೀಯರು ವೈಭವದಿಂದ, ಸುಖದಿಂದ ಬಾಳುತ್ತಿದ್ದರು. ಕಣ್ಣಿಗೆ ಹಬ್ಬವಾಗುವಂತಹ ಬಟ್ಟೆಬರೆ, ಥಳಥಳಿಸುವ ಒಡವೆಗಳು ಅವರಿಗೆ ಬಹು ಪ್ರಿಯ. ಆದರೆ ಈ ಎಲ್ಲ ಸಂಪತ್ತು ಮತ್ತು ಶೃಂಗಾರಗಳನ್ನು ಕಂಡು ಅಲ್ಲಮಪ್ರಭುವಿಗೆ ಬೇಸರ. ಹನ, ಒಡವೆ, ಆಕರ್ಷಕ ಉಡುಪು ಇವುಗಳು ಬೇಕೆಂದು ಹಂಬಲಿಸುವವರನ್ನು ಕಂಡು ಅವನು ಒಳಗೊಳಗೆ ನಗುತ್ತಿದ್ದ. “ಅಂತರಂಗದಲ್ಲಿ ಹುಟ್ಟಿದ ಈ ಸುಖದ ಆಸೆ ವ್ಯಕ್ತಿತ್ವವನ್ನೇ ಕೊಂದುಹಾಕುತ್ತಿದೆ. ಒಳಗೆ ಸತ್ತು ಹೊರಗೆ ಮಾತ್ರ ಆಡುವ ಈ ನಟರ ಜೀವನವೂ ಒಂದು ನಟನೆಯೇ” ಎಂದು ಒಬ್ಬನೇ ಆಲೋಚಿಸುತ್ತಿದ್ದ. “ದೇವಾ… ಆಸೆಯೆಂಬ ಕುಟುಕ ನಿಕ್ಕಿ, ಆಕರ್ಷಿಸಿ ನಿರ್ದಾಕ್ಷಿಣ್ಯವಾಗಿ ಮನುಷ್ಯರನ್ನು ಕೊಲ್ಲುವೆಯಲ್ಲ. ಈ ಆಜ್ಞಾನಿಗಳಿಗೆ ಇದು ತಿಳಿಯದೆ ಹೋಗಿದೆಯಲ್ಲ” ಎಂದು ತನ್ನಲ್ಲಿ ತಾನೇ ವಿಚಾರಕ್ಕೆ ಒಳಗಾಗುತ್ತಿದ್ದ. ಇಂತಹ ಕಲೆಗಾರ್ತಿಯರ ಮಧ್ಯೆ ಇದ್ದೂ ಅತ್ಯಂತ ಪವಿತ್ರ ಜೀವನ ನಡೆಯಿಸುವ ತಂದೆಯ ಬಗ್ಗೆ ತುಂಬ ಅಭಿಮಾನ. ಸ್ತ್ರೀಯ ಸಾತ್ವಿಕತೆಯ ಸಾಕಾರವಾದ ತಾಯಿಯನ್ನು ಕಂಡಾಗ ಎಲ್ಲಿಲ್ಲದ ಗೌರವ. ಅವರಿಬ್ಬರ ಶುಭ್ರಜೀವನ ಅವನ ವೈರಾಗ್ಯವನ್ನು ಗಟ್ಟಿಗೊಳಿಸಿತು.

ವಿಶ್ವಕುಟುಂಬಕ್ಕೆ

ಅದೊಂದು ದಿನ… ಅವನ ಜೀವನವಾಗಲೇ ತುಂಬು ತಾರುಣ್ಯದಲ್ಲಿ ಇದ್ದಿತು. ಕಂಡವರ ಕಣ್ಸೆಳೆವ ರೂಪ ಅವನಿಗಿದ್ದರೂ ಅದರ ಅರಿವಾಗಲೀ, ಅಭಿಮಾನವಾಗಲೀ ಇರಲಿಲ್ಲ. ವೈರಾಗ್ಯದ ಬೆಂಕಿಯನ್ನು ಸುಖದ ಆಸೆಯ ನೊಣಗಳು ಮುತ್ತಲು ಸಾಧ್ಯವೆ? ಅಲ್ಲಮನ ಮನಸ್ಸಿಗೆ ಹೊರಜಗತ್ತಿನಲ್ಲಿ ಏನಾಗುತ್ತಿದೆ ಎಂಬುದೇ ಬೇಕಾಗಿರಲಿಲ್ಲ. ತನ್ನ ಆತ್ಮವನ್ನೇ ಕುರಿತು ಅವನು ಯೋಚಿಸುತ್ತಿದ್ದ. ಒಂದು ದಿನ ರಾತ್ರಿಯಿಡೀ ಆತ್ಮಚಿಂತನೆ ಮಾಡಿದ. ಉನ್ನತವಾದುದು ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಗಟ್ಟಿಗೊಂಡು ನಿಂತಿತು. ನನ್ನ ದೇಹ, ದೇಹಕ್ಕೆ ಕಷ್ಟ ಬೇಡ, ಸುಖ ಬೇಕು ಮೊದಲಾದ ಭಾವನೆಗಳೂ, ಬದುಕಬೇಕು – ಸಾಯಬಾರದು ಮೊದಲಾದ ಭಾವನೆಗಳೂ ಪೂರ್ಣ ಅಳಿದು ಕಷ್ಟಗಳ ಕುಲುಮೆಯಲ್ಲಿ ಮನಸ್ಸು ದೃಢವಾಗಬೇಕಾಗಿದ್ದಿತು. ವಿವಿಧ ಯೋಗಿಗಳನ್ನು, ಶರಣರನ್ನು ಕಂಡು ಮಾರ್ಗದರ್ಶನ ಪಡೆದು ಯೋಗದ ಅತಿ ಎತ್ತರದ ಸ್ಥಿತಿಯನ್ನು ಗಳಿಸುವ ಹಂಬಲ. ಹೀಗಾಗಿ ಅಂದು ಅವನ ಆತ್ಮಜಾಗೃತಿಯಾಯಿತು. ಕತ್ತಲೆಯನ್ನು ಕಳೆದು ಜಗತ್ತನ್ನು ಬೆಳಗಲು ಹೊರಡುವ ಸೂರ್ಯನಂತೆ, ತನ್ನ ಮನೆಯ ಮೋಡಗಳನ್ನು ಛೇದಿಸಿಕೊಂಡು, ಪ್ರೇಮವಾಯಿಗಳಾದ ತಾಯಿತಂದೆಯರ ವಾತ್ಸಲ್ಯವನ್ನು ಹರಿದು ಬಿಸುಟು, ಕಣ್ಣೆದುರಿಗೆ ಹಬ್ಬಿನಿಂತಿದ್ದ ಸುಖ ಸಂಪತ್ತುಗಳನ್ನು ನಿರ್ಲಕ್ಷಿಸಿ ಹೊರಜಗತ್ತಿಗೆ ನಡೆದ. ಇದು ಮನೆಯಿಂದ ನಿರ್ಗಮನ; ಮಿತವಾದ ಸಂಬಂಧವನ್ನು ಹರಿದು ವಿಶ್ವಕುಟುಂಬತ್ವಕ್ಕೆ ಅಲ್ಲಮನು ಇರಿಸಿದ ದಿಟ್ಟ ಹೆಜ್ಜೆ.

ಮದ್ದಳೆಯ ತಾಳಕ್ಕೆ ಕುಣಿಯಲಾರದೆ ಮಾಯಿ ಸೋತಳು

 ಮಾಯಾ ಕೋಲಾಹಲ

ಅಲ್ಲಮನು ಮನೆಯಿಂದ ನಿರ್ಗಮಿಸಿದುದು ಒಂದು ಬಗೆಯ ಸಿದ್ಧಿಯಾದರೆ, ಮಾಯೆಯನ್ನು ಮೆಟ್ಟಿನಿಂತುದು ಮತ್ತೊಂದು ಬಗೆಯ ಸಿದ್ಧಿ. ಬಳ್ಳಿಗಾವೆಯನ್ನು ಬಿಟ್ಟ ಅಲ್ಲಮ ಬೆಳಕು ಹರಿದು ವಾಸ್ತವಿಕತೆಯ ಅರಿವು ಜಗತ್ತಿಗೆ ಆಗುವ ಮೊದಲೇ ಬೇಗಬೇಗನೆ ಹೆಜ್ಜೆ ಹಾಕಿದ. ಒಂದು ಧೀರವಾದ ಆನೆ ಕಾಡಿನಲ್ಲಿ ಸ್ವತಂತ್ರವಾಗಿ ಸಂಚರಿಸುತ್ತ ತಾನು ಹೋದಲ್ಲಿ ಹೊಸ ದಾರಿಯನ್ನೇ ನಿರ್ಮಾಣ ಮಾಡುತ್ತ ಮುಂದೆ ಸಾಗುವಂತೆ ಅಲ್ಲಮನ ಸಂಚಾರ ಆರಂಭವಾಯಿತು. ಮುಂದೆ ಅವನು ಬನವಾಸಿಗೆ ಆಗಮಿಸಿದನು. ಬನವಾಸಿಯ ರಾಜ ಮಮಕಾರ ಭೂಪಾಲ, ಮಹಾರಾಣಿ ಮೋಹಿನೀದೇವಿ. ಇವರಿಬ್ಬರಿಗೆ ಒಬ್ಬಳೇ ಮಗಳು.

ಮಾಯಾದೇವಿ

ಇವಳು ಅಪಾರ ಸುಂದರಿ. ಅಷ್ಟೇ ಚಂಚಲೆ. ಚಪಲೆ. ಈ ಲೋಕದ ಗಂಡರಾರು ತನಗೆ ಸರಿಸಮಾನರಾಗರೆಂದು ಅವಳ ಗುರು ಅಹಂಕಾರನು ಹೇಳಿದ ಕಾರಣ, ಕುಲದೇವತೆ ಮಧುಕೇಶ್ವರನನ್ನೇ ಗಂಡನೆಂದು ಆಕೆ ಪೂಜಿಸುತ್ತಿದ್ದಳು. ’ದೇವರೇ ನನ್ನ ಗಂಡ’ ಎಂದು ನಂಬಿ ಹಲವರು ಭಕ್ತೆಯರು ದೊಡ್ಡ ಬಾಳು ಬಾಳಿದ್ದಾರೆ. ಆದರೆ ಅವರು ದೇವರಲ್ಲಿ ಆಳವಾದ ಭಕ್ತಿಯಿಂದ ಹಾಗೆ ಮಾಡಿದವರು. ಮಾಯಾದೇವಿ ಈ ರೀತಿಯ ಭಕ್ತಿಭಾವನೆಯಿಂದ ನಡೆದುಕೊಂಡವಳಲ್ಲ. ತಾನು ಬಹು ಸುಂದರಿ, ಆದುದರಿಂದ ಯಾವ ಮನುಷ್ಯನಿಗೂ ತನ್ನ ಗಂಡನಾಗುವ ಯೋಗ್ಯತೆ ಇಲ್ಲ ಎಂದು ಅಹಂಕಾರದಿಂದ ನಡೆದುಕೊಂಡವಳು. ಈಕೆ ಒಂದು ದಿನ ಮದುಕೇಶ್ವರ ದೇವಾಲಯದಲ್ಲಿ ನೃತ್ಯಸೇವೆಯನ್ನು ಸಲ್ಲಿಸುತ್ತಿದ್ದಳು.

ಅಲ್ಲಮನು ಅದೇ ವೇಳೆಗೆ ಸಂಚರಿಸುತ್ತ ಅಲ್ಲಿಗೆ ಬಂದ. ಬಹು ದೊಡ್ಡ ಜನಸಂದಣಿಯನ್ನು ಕಂಡ, ಏನಿರಬಹುದು ಎಂದು ಕುತೂಹಲದಿಂದ ವಿಚಾರಿಸಿದ. ಮಾಯಾದೇವಿಯ ವ್ರತದ ವಿವರ ಕೇಳಿ ಮನದಲ್ಲಿ ನಸುನಕ್ಕ. ಪರಮಾತ್ಮ ಪರಿಶುದ್ಧನಾದವನು; ಅವನನ್ನು ನಿರ್ಮಲ ಮನಸ್ಸಿಲ್ಲದೆ ಬಹಿರಂಗದ ಶೃಂಗಾರ, ನೃತ್ಯಗಳಿಂದ ಗೆಲ್ಲುವ ಪ್ರಯತ್ನವೆ? ಎಂದಿಗಾದರೂ ಶೃಂಗಾರಕ್ಕೆ ದೇವನು ಒಲಿವನೆ? ಹೀಗೆ ಚಿಂತಿಸಿ ಮಾಯಾದೇವಿಗೆ ಬುದ್ಧಿ ಕಲಿಸಲು ಯೋಚಿಸಿದ. ಮುಳ್ಳಿಯಿಂದಲೇ ಮುಳ್ಳು ತೆಗೆಯಬೇಕು ಎಂದು ನಿರ್ಧರಿಸಿ ಆವೇಶ ಬಂದಂತಾಗಿ ಗುಡಿಯ ಹೊರಭಾಗದಲ್ಲಿದ್ದ ಮದ್ದಳೆಯನ್ನು ಕೈಗೆತ್ತಿಕೊಂಡ. ಬಾಲ್ಯದಿಂದಲೂ ರಕ್ತಗತವಾಗಿ ಬಂದಿದ್ದ ಮದ್ದಳೆಯ ವಿದ್ಯೆಯನ್ನು ಪ್ರದರ್ಶಿಸಿದ. ಆ ಮದ್ದಳೆಯ ತಾಳಕ್ಕ ಕುಣಿಯಲಾರದೆ ಮಾಯೆ ಸೋತಳು. ತಾನೆಂದೂ ಕಂಡರಿಯದ ಈ ಬಗೆಯ ಮದ್ದಳೆಯವರ ನುಡಿಸಿದವರು ಯಾರು ಎಂದು ಅವಳಿಗೆ ಕುತೂಹಲವಾಯಿತು. ವಿಚಾರಿಸಿದಳು. ತನ್ನ ಹೆಜ್ಜೆಯ ತಾಳಕ್ಕೆ ಬ್ರಹ್ಮಾಂಡವನ್ನೇ ಕುಣಿಸುವ ನಟರಾಜನ ಅವತಾರವೇನೋ ಎಂಬಂತೆ ಅಲ್ಲಮನು ನಿಂತಿದ್ದ. ನೋಡಿದರೆ ಮದ್ದಳೆಯವರ ವೇಷ: ಕಾಲಿಗೆ ಝಣಝಣವೆನ್ನುವ ಹೊನ್ನಿನ ಒಡವೆಗಳು, ಸೊಂಟಕ್ಕೆ ಕೇಸರಿ ಬಣ್ಣದ ನಡುಕಟ್ಟು, ನೀಲವರ್ಣದ ಒಂದು ಮಣಿಯ ಸರ, ಕೊರಳಲ್ಲಿ ಹೊಳೆಯುವ ರತ್ನಖಚಿತ ಚಿನ್ನದ ಪದಕ, ಕಿವಿಗಳಲ್ಲಿ ನೀಲಿಬಣ್ಣದ ಮುತ್ತಿನ ಕಟಕುಗಳು, ಎಲ್ಲಕ್ಕಿಂತ ಮಿಗಿಲಾಗಿ ಕಣ್ಣು ಕುಕ್ಕುವ ರೂಪ. ಮಾಯಾದೇವಿಯ ಮನಸ್ಸು ಸೆಳೆಯಿತು. ತನ್ನ ಅರಮನೆಗೆ ಬಂದು ನೃತ್ಯಕಲೆಯನ್ನು ಕಲಿಸುವ ಗುರುವಾಗು ಎಂದು ಅವನನ್ನು ಪ್ರಾರ್ಥಿಸಿದಳು. ಆಗ ಅಲ್ಲಮನು ಚಿಂತೆಗೊಳಗಾದ. ’ಹಗ್ಗದ ಕಟ್ಟನ್ನು ಬಿಚ್ಚಿಕೊಂಡು ಕಬ್ಬಿಣದ ಸರಪಳಿಯಿಂದ ಬಂಧಿಸಿಕೊಂಡಂತೆ ಆದೀತು’ಎಂದುಕೊಂಡ. ರಾಜರ ಅಂತಃಪುರ ಎಂದರೆ ಸುಃಖದ ತವರು. ಅಲ್ಲಿಗೆ ಹೋಗಿ ತನ್ನ ವೈರಾಗ್ಯವನ್ನು ಉಳಿಸಿಕೊಳ್ಳಬಲ್ಲೆನೆ? ಎಂಬ ಸಂಶಯ ಕಾಡಿತು. ಅದರೊಂದಿಗೇ ಒಂದು ಛಲ ಮೂಡಿತು.

ಅಲ್ಲಮಪ್ರಭು ಅನುಭವಮಂಟಪದಲ್ಲಿ

“ಅಹುದು, ಅವು ವಿಲಾಸದ ಬೀಡುಗಳೆಂದು ಎಲ್ಲರೂ ಹಿಂಜರಿದರೆ ಅವುಗಳನ್ನು ಸುಧಾರಣೆ ಮಾಡುವವರು ಯಾರು? ಅಲ್ಲಿಗೆ ಹೋಗಿತಾನೇ ಸುಧಾರಣೆ ಮಾಡಬೇಕು? ನನ್ನ ಸತ್ವಪರೀಕ್ಷೆಯೂ ಆಗಿಬಿಡುವುದು. ಇಂತಹ ವಿಲಾಸದ ವಾತಾವರಣವನ್ನು ಗೆದ್ದು ಬದುಕಿದರೆ ನಾನು ನಿಜವಾದ ವಿರಕ್ತ; ಇಲ್ಲವಾದರೆ ಎಲ್ಲರಂತೆ ಬದುಕುವುದು ಬಹು ಲೇಸು” ಎಂದು ಗಟ್ಟಿಗೊಂಡ ಮನಸ್ಸಿನಿಂದ ಅಲ್ಲಮ ಒಪ್ಪಿ ಮಾಯೆಯ ನಾಟ್ಯಾಚಾರ್ಯನಾದ.

ಆದರೆ ಮಾಯೆಗೆ ಅದಾವ ಪ್ರಾರಬ್ಧ ಕಾಡುತ್ತಿತ್ತೊ: ಮುಕ್ತಿಮಾರ್ಗ ತೋರುವ ಗುರು ಬಂದಾಗ ಅದನ್ನು ಹೇಳಿಸಿಕೊಂಡು ಪುನೀತಳಾಗಲಿಲ್ಲ. ಅವನು ತನ್ನನ್ನು ಪ್ರೀತಿಸುವಂತೆ ಮಾಡಲು ಬಯಸಿದಳು. ಅರಮನೆಯ ಅಂತಃಪುರದಲ್ಲಿಯೂ ತನ್ನ ಯೋಗಸಾಧನೆಯನ್ನೆ ಮುಂದುವರಿಸುತ್ತಿದ್ದ ಅಲ್ಲಮ; ಅವನ ಮನಸ್ಸು ಗಟ್ಟಿಗೊಳ್ಳತೊಡಗಿತ್ತು. ಮಾಯೆಯ ಪ್ರಯತ್ನ ನೋಡಿ ಅವನಿಗೆ ಯಾವ ಆಕರ್ಷಣೆಯೂ ಆಗಲಿಲ್ಲ. ನಗುನಗುತ್ತಲೇ ಎಲ್ಲ ಆಸೆಯನ್ನೂ ಗೆದ್ದುಬಿಟ್ಟ.

ಮಾಯೆಯ ಸೌಂದರ್ಯ, ಪ್ರೇಮ ಯಾವುದರಿಂದಲೂ ಅವನ ಮನಸ್ಸು ಚಲಿಸಲಿಲ್ಲ, ದೇವರಲ್ಲಿಯೇ ನೆಲೆಸಿತ್ತು. ಇದರಿಂದ ಅವನಿಗೆ ಸಂತೋಷವಾಯಿತು. ಆದರೆ ಮಾಯೆಗೆ ಮಾತ್ರ ಅವನಲ್ಲಿ ಪ್ರೀತಿ. ಅವನಿಗೆ ತಾನು ಬೇಡವಲ್ಲ ಎಂದು ದುಃಖವಾಯಿತು. ಅವಳ ಮೂರ್ಖತೆಗೆ ಅವನಿಗೆ ಖೇದವೆನಿಸಿತು. “ಇವಳ ಮನಸ್ಸನ್ನು ಬದಲಾಯಿಸಿ ದೈವೀ ಮಾರ್ಗಕ್ಕೆ ಹಚ್ಚಬೇಕೆಂಬ ನನ್ನ ಪ್ರಯತ್ನ ಸಫಲವಾಗಲಿಲ್ಲ. ಅವಳ ಪುಣ್ಯದ ಪಾತ್ರೆ ಇನ್ನೂ ತುಂಬಿಲ್ಲ. ಆದರೆ ನಾನು ಮಾತ್ರ ಇಲ್ಲಿ ಇರಬಾರದು. ನಿರಾಯಾಸವಾಗಿ ಹರಿದು ಬಂದ ನದಿ ಜಲಪಾತವಾಗಿ ಧುಮುಕಿ ತಗ್ಗಿನಲ್ಲಿ ತುಸು ನಿಂತು ಮುಂದೆ ಸಾಗುವಂತೆ, ಸ್ವಲ್ಪ ಕಾಲ ಗತಿ ಬದಲಾದ ನನ್ನ ಜೀವನದ ನದಿ ಮುಂದಿ ಹರಿಯಲೇಬೇಕು” ಎಂದು ಸಂಕಲ್ಪ ಮಾಡಿದ. ಅವಳಿಗೆ ಬುದ್ಧಿ ಹೇಳಿದ, “ನಾನಿನ್ನು ಹೊರಡುತ್ತೇನೆ” ಎಂದ. ಮಾಯೆಗೆ ತುಂಬ ದುಃಖವಾಯಿತು. ಆದರೆ ಅದನ್ನು ಅಲ್ಲಮನು ಲಕ್ಷ್ಯ ಮಾಡಲಿಲ್ಲ. ತನ್ನ ದಾರಿ ಹಿಡಿದು ನಡೆದೇಬಿಟ್ಟ.

ಆಧ್ಯಾತ್ಮ ಕೃಷಿಕ

ಅಲ್ಲಮ ಹಲವಾರು ಯೋಗಿಗಳನ್ನು ಸಂದರ್ಶಿಸಿ ಯೋಗಾಭ್ಯಾಸ ಮಾಡಿದ. ಬೇರೆ ಬೇರೆ ಯೋಗಗಳ ಆಳವಾದ ಪರಿಚಯ ಪಡೆದ. ಆದರೂ ಮನಸ್ಸಿಗೆ ಶಾಂತಿ ದೊರೆಯಲಿಲ್ಲ. ಅವನಿಗೆ ಇನ್ನೂ ತನ್ನ ತಪಸ್ಸನ್ನು, ಅನುಗ್ರಹವನ್ನು ಧಾರೆ ಎರೆಯಬಲ್ಲ ಗುರುವು ಸಿಕ್ಕಿರಲಿಲ್ಲ. ಅದಕ್ಕಾಗಿ ಸಂಚಾರವನ್ನು ಆರಂಭಿಸಿದ. ಅನಿಮಿಷಯ್ಯನ ಕೊಪ್ಪಳು ಎಂದು ಈಗ ಕರೆಯಲ್ಪಡುವ ಒಂದು ಸ್ಥಳಕ್ಕೆ ಬಂದ. ಹಾಗೆ ಬರುವಾಗ ಸಮೃದ್ಧವಾದ ಒಂದು ತೋಟ ಕಣ್ಣಿಗೆ ಕಾಣಿಸಿತು. ಆ ತೋಟದ ಮಾಲೀಕ ಗೊಗ್ಗಯ್ಯ ಎಂಬುವವನು ಅಲ್ಲಿ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಗೊಗ್ಗಯ್ಯ ಒಂದು ಬಗೆಯ ಭೌತಿಕವಾದಿ; ಎಂದರೆ ಇನ್ನೊಬ್ಬರಿಗೆ ಹಿಂಸೆ ಮಾಡದೆ ತಾನು ದುಡಿಯುತ್ತ ತನ್ನ ಹೆಂಡತಿ ಮಕ್ಕಳೊಡನೆ ನೀತಿಯಿಂದ ಬದುಕು ಬದುಕಿದರೆ ಸಾಕು; ದೇವರೇಕೆ, ಯೋಗವೇಕೆ, ಸಮಾಜಸೇವೆಯೇಕೆ ಎಂಬ ವಿಚಾರಧಾರೆಯವನು. ತಾನು ಕಷ್ಟಪಟ್ಟು ಸಂಪಾದಿಸಿದುದರ ಬಗ್ಗೆ ವಿಪರೀತ ಅಭಿಮಾನ ಅವನಿಗೆ.

ಇಂತಹವರ ಪ್ರಪಂಚವೆಲ್ಲ ಕೇವಲ ತಾನು – ತನ್ನದು ಎಂಬ ಮಿತವಲಯದಲ್ಲಿ ಸುತ್ತುತ್ತಿರುತ್ತದೆ. ಅದನ್ನು ಕಂಡಾಗ ಮರುಕಗೊಂಡ ಅಲ್ಲಮನು ಬೋಧೆ ಮಾಡಿದ; “ತನಗಾಗಿ, ತನ್ನವರಿಗಾಗಿ ಮಾತ್ರ ಬದುಕಿದರೆ ಸಾಲದು. ಪ್ರತಿ ಮನುಷ್ಯನೂ ಸಮಾಜದ ಒಂದಂಗ; ದೇವರಿತ್ತ ದಾನಗಳನ್ನು ಪ್ರತಿ ನಿಮಿಷದಲ್ಲೂ ಭೋಗಿಸುವವನು, ಅದಕ್ಕಾಗಿ ದೇವರ ಸ್ಮರಣೆ ಮಾಡಬೇಕು. ಆಧ್ಯಾತ್ಮಿಕ ಬಗೆಯ ಬದುಕು ಕಲಿಯಬೇಕು”.

ಹೊಟ್ಟೆಗೆ ತೃಪ್ತಿ ಕೊಡುವಂತಹ ಬೆಳೆಗಳನ್ನು ಬೆಳೆದರೆ ಸಾಲದು; ಮನುಷ್ಯನಿಗೆ ಹೊಟ್ಟೆ ತುಂಬಿದರೆ ಸಾಕೆ? ಜೀವನದಲ್ಲಿ ಎಷ್ಟೋ ಕಷ್ಟನಷ್ಟಗಳು ಬರುತ್ತವೆ. ಪ್ರತಿಯೊಬ್ಬನೂ ಒಂದಲ್ಲ ಒಂದು ದಿನ ಸಾಯಬೇಕಲ್ಲ? ಆದುದರಿಂದ ಮನುಷ್ಯನಿಗೆ ಶಾಂತಿಯೂ ಬೇಕು. ಇದಕ್ಕೆ ಆಧ್ಯಾತ್ಮ ಅಗತ್ಯ. ಆತ್ಮಕ್ಕೆ ಶಾಂತಿಯನ್ನು ಕೊಡುವ ಈ ಜ್ಞಾನವನ್ನು ಪಡೆಯುವುದೂ ಶಾಂತಿಯನ್ನು ಕೊಡುವ ಈ ಜ್ಞಾನವನ್ನು ಪಡೆಯುವುದೂ ಒಂದು ಬಗೆಯ ಕೃಷಿ- ಬಹುದೊಡ್ಡ ಕೃಷಿ. ಅಂತಹ ಬೆಳೆಸು ಬೆಳೆಯಬೇಕಾದರೆ ಶರೀರವನ್ನೇ ಹೊಲವನ್ನಾಗಿ ಮಾಡಬೇಕು. ಮನಸ್ಸನ್ನೇ ಸಾಧನವನ್ನಾಗಿ ಮಾಡಿ ಅಜ್ಞಾನದ, ಮರೆವಿನ ಬೇರುಗಳನ್ನೆಲ್ಲಾ ಬುಡಸಮೇತ ಕಿತ್ತುಹಾಕಬೇಕು. ನಾನು-ನನ್ನದು ಎನ್ನುವ ಸ್ವಾರ್ಥದ ಮಣ್ಣಿನ ಗಂಟುಗಳನ್ನು ಒಡೆದು, ಬ್ರಹ್ಮ ತತ್ವದ ಬೀಜ ಬಿತ್ತಬೇಕು. ಆಗ ಬರುವ ದಿವ್ಯಾನುಭಾವದ ಬೆಳೆಯೆ ಆತ್ಮದ ಹಸಿವೆಯನ್ನು ಹಿಂಗಿಸುವ ಆಧ್ಯಾತ್ಮಿಕ ಬೆಳೆ. ಇದನ್ನು ಬೆಳೆಯುವುದೇ ಜೀವನದ ಸಾರ್ಥಕ್ಯ ಎಂದು ಅಲ್ಲಮನು ವಿವರಿಸಿ ಹೇಳಿದ. ಗೊಗ್ಗಯ್ಯನಿಗೆ ಈ ಮಾತುಗಳ ಉಪದೇಶ ಹಿಡಿಸಿತು. ಅವನು ಅಲ್ಲಮನ ಪಾದಕ್ಕೆ ಶರಣಾದನು.

ಅನುಗ್ರಹ

ಅಲ್ಲಮನು ಗೊಗ್ಗಯ್ಯನ ತೋಟದಲ್ಲಿ ಕೆಲ ದಿನವಿದ್ದು ಸಾಧನೆ ಮುಂದುವರಿಸಿದ. ಅಲ್ಲಿ ಅವನಿಗೆ ದಿವ್ಯವಾದ ಒಂದು ಅನುಭವವಾಯಿತು. ಇದೊಂದು ಮನಸೆಳೆಯುವ ಕಥೆ.ಒಂದು ದಿನ ಆ ತೋಟದಲ್ಲಿ ಸಂಚರಿಸುತ್ತಿರುವಾಗ ಮಣ್ಣಿನ ಮರೆಯಲ್ಲಿ ಹುದುಗಿದ್ದ ಒಂದು ಗವಿಯನ್ನು ಕಂಡನು. ಒಳಹೊಕ್ಕಾಗ ಇಡೀ ಗವಿಯ ಒಳಗೆಲ್ಲಾ ಬೆಳಕೇ ಬೇಕು. ಇದು ಎಲ್ಲಿಂದ ಬರುತ್ತಿದೆ ಎಂಬ ಕುತೂಹಲದಿಂದ ದೃಷ್ಟಿಸಿದಾಗ ಗವಿಯ ಒಳಭಾಗದಲ್ಲಿ ಕುಳಿತ ಯೋಗಿಯೊಬ್ಬನ ದರ್ಶನವಾಯಿತು. ಪಟ್ಟದಕಲ್ಲಿನ ಅರಸನಾದ ವಸುಧೀಶ ಭೂಪಾಲನು ಸಣ್ಣ ವಯಸ್ಸಿನಲ್ಲಿಯೇ ವೈರಾಗ್ಯ ಬಂದು ರಾಜ್ಯಕೋಶಗಳನ್ನು ತ್ಯಾಗ ಮಾಡಿ ಈ ಗವಿಯ ಒಳಗೆ ಕುಳಿತು  ತಪಸ್ಸು ಮಾಡಲಾರಂಭಿಸಿದ್ದನು. ಅವನೇ ಅನಿಮಿಷಯ್ಯ. ಆತನ ಅರ್ಧ ತೆರೆದ ಕಣ್ಣುಗಳು ಧ್ಯಾನಕ್ಕೆ ಹಿಡಿದ ಎಡಗೈಯೊಳಗಿನ ಇಷ್ಟಲಿಂಗದಲ್ಲಿ ತನ್ಮಯವಾಗಿವೆ. ಶರೀರವೆಲ್ಲ ಗೂಡಿನಂತಾಗಿದ್ದರೂ ಅಪೂರ್ವ ತೇಜಸ್ಸಿನಿಂದ ಕಣ್ಣುಗಳೆರಡೂ ಬೆಳಕಿನ ಕುಂಡಗಳಾಗಿವೆ. ಅಲ್ಲಮನಿಗೆ ಸಂತೋಷ ಮೇರೆ ಮೀರಿತು. ಪದ್ಮಾಸನದಲ್ಲಿ ಕುಳಿತಿದ್ದ  ಆ ಮಹಾಯೋಗಿಯನ್ನು ಸಮೀಪಿಸಿ ಎದುರಿನಲ್ಲಿ ಕುಳಿತ. ಅನಿಮಿಷಯ್ಯನ ಶರೀರ “ಮುಟ್ಟಿದರೆ ಕೈಗೆ ಸಿಗುತ್ತಲಿಲ್ಲ; ಕಣ್ಣಿಗೆ ನೋಡಲು ಮಾತ್ರ ಸಮೀಪ ಕಾಣುತ್ತಿದೆ” ದೈವೀಶಕ್ತಿಯ ಆಜ್ಞೆಯಿಂದ ಪ್ರೇರಿತನಾದನಂತೆ ಅಲ್ಲಮನು ಹೃದಯ ತುಂಬಿ ದೇವರ ಸ್ಮರಣೆ ಮಾಡುತ್ತಾ ಅನಿಮಿಷಯ್ಯನ ಇಷ್ಟಲಿಂಗವನ್ನು ಕೈಯಿಂದ ಬೇರ್ಪಡಿಸಿ ತನ್ನ ಎಡಗೈಯಲ್ಲಿ ಇರಿಸಿಕೊಂಡು ದೃಷ್ಟಿಸಿದ. ಬಹಳ ಆನಂದವಾಯಿತು. ಇಷ್ಟಲಿಂಗದ ಮೇಲೆ ದೃಷ್ಟಿಯಿರಿಸುತ್ತಿದ್ದಂತೆಯೇ ಮೈ ರೋಮಾಂಚನಗೊಂಡಿತು. ಅನಿಮಿಷಯ್ಯನು ತಾನು ಶರೀರದ ಮೇಲೆ ಧರಿಸಿಕೊಂಡು ಪೂಜಿಸುವ ಇಷ್ಟಲಿಂಗದಲ್ಲಿಯೇ ತನ್ನ ಪ್ರಾಣವನ್ನು ಹುದುಗಿಸಿ ’ಪ್ರಾಣಲಿಂಗಿ’ ಎನಿಸಿಕೊಂಡಿದ್ದ. ಆ ಲಿಂಗವು ಶರೀರದಿಂದ ಬೇರ್ಪಟ್ಟ ಕೂಡಲೇ ಅವನ ಪ್ರಾಣವು ಹಾರಿಹೋಯಿತು. ಅಲ್ಲಮನ ಮನಸ್ಸಿಗೆ ತೀವ್ರ ವ್ಯಥೆಯಾಯಿತು. ತಾನು ಧ್ಯಾನಸ್ಥನಾದಾಗ ಅವನು ಅರ್ಥ ಮಾಡಿಕೊಂಡ. “ಇದೆಲ್ಲವೂ ದೈವೀಸಂಕಲ್ಪ. ಗುರುವಿನ ಪ್ರಾಣ ದೇವನ ಸಾಕಾರವಾದ ಈ ಲಿಂಗದಲ್ಲಿ ಅಡಗಿದೆ. ಇದನ್ನೇ ನಾನು ಪೂಜಿಸುವ ಕಾರಣ ಗುರುವು ಸದಾ ನನ್ನೊಡನೆ ಇದ್ದಂತೆಯೇ” ಎಂದು ಸಮಾಧಾನ ತಳೆದ. ಶಿಷ್ಯನ ಭಕ್ತಿ, ಗುರು ಅನಿಮಿಷಯ್ಯನ ಅನುಗ್ರಹ ಶಕ್ತಿ ಎರಡೂ ಕೂಡಿದಾಗ ಅಲ್ಲಮನು ಸಿದ್ಧಪುರುಷನಾದ, ಅಲ್ಲಮಪ್ರಭುವಾದ. ಲಿಂಗದೀಕ್ಷೆಯನ್ನು ಪಡೆದುಕೊಂಡ ಅಲ್ಲಮನು ಆಗ ಸಂತೋಷ ತುಂಬಿ ಹಾಡಿದ.

ಪುಣ್ಯವುಳ್ಳ ಕಾಲಕ್ಕೆ ಪಾಷಾಣ ಪರುಷವಪ್ಪುದು ನೋಡಯ್ಯ;
ಮಣ್ಣು ಹೊನ್ನಪ್ಪುದು ನೋಡಯ್ಯಾ;
ಮುನ್ನಮುನ್ನವೆ ಅಚ್ಚೊತ್ತಿದ ಭಾಗ್ಯವೆನ್ನ
ಕಣ್ಣಮುಂದೆ ಕಾಣಬಂದಿತ್ತು ನೋಡಾ!
ಮಣ್ಣಮರೆಯ ದೇಗುಲದೊಳಗೊಂದು
ಮಾಣಿಕ್ಯವ ಕಂಡ ಬಳಿಕ
ಇನ್ನು ಮುನ್ನಿನಂತಪ್ಪುದೆ ಗುಹೇಶ್ವರಾ?

ಸತ್ಕರ್ಮದ ಫಲರೂಪಿಯಾದ ಪುಣ್ಯವಿದ್ದರೆ ಕಲ್ಲು ಕೂಡ ಸ್ಪರ್ಶಮಣಿ(ಮುಟ್ಟಿದನ್ನು ಚಿನ್ನ ಮಾಡುವ ಮಣಿ) ಆಗುತ್ತದೆ, ಮಣ್ಣು ಸಹ ಬಂಗಾರವಾಗುತ್ತದೆ. ಹಿಂದಿನ ಜನ್ಮದ ಭಾಗ್ಯದಿಂದಾಗಿ, ಮಣ್ಣಿನ ಮರೆಯಲ್ಲಿ ಹುದುಗಿದ್ದ ದೇವಾಲಯದೊಳಗೆ ಗುಹೇಶ್ವರನೆಂಬ ಲಿಂಗವ ಪಡೆದು ಧನ್ಯವಾದ ಪ್ರಭುವು ಜಗಕ್ಕೆ ಮಾರ್ಗ ತೋರಲು ಸಂಚರಿಸಲಾರಂಭಿಸಿದನು.

ಅಲ್ಲಮಪ್ರಭುವಿನ ಸಂದೇಶ

ಅಲ್ಲಮಪ್ರಭುವು ದೊಡ್ಡ ದೈವೀಶಕ್ತಿಯಾಗಿ ಸಂಚರಿಸುತ್ತ ಎಲ್ಲೆಲ್ಲಿ ಮಾರ್ಗದರ್ಶನಕ್ಕಾಗಿ ಹಂಬಲಿಸುವ ಸಾಧಕರು ಇರುವರೋ ಅಲ್ಲಿಗೆ ತಾನೇ ಧಾವಿಸುತ್ತಿದ್ದ. ಅನುಗ್ರಹ ಪಡೆಯಲು ಸಂಚರಿಸಿ ಮಾತನಾಡುವ ಅಲ್ಲಮನ ಸ್ಥಿತಿ ತುಂಬುತ್ತಿರುವ ಕೊಡದಂತೆ ಇದ್ದಿತು. ಗುರುವಿನ ಅನುಗ್ರಹ ಆದ ಬಳಿಕ ಅವನು ಇತರರಿಗೆ ದಾರಿ ತೋರಿಸಿದ. ಇದು ತುಂಬಿದ ಕೊಡವನ್ನು ಸಾಧಕ ಹೃದಯಗಳಿಗೆ ಸುರಿಯುವಂತೆ ಕಾಣುತ್ತದೆ. ಅವನಿಗೆ ಮೊದಲು ಭೇಟಿಯಾದವಳು ಶರಣೆ ಮುಕ್ತಾಯಕ್ಕ. ಮುಕ್ತಾಯಕ್ಕನು ಲಕ್ಕುಂಡಿಯಲ್ಲಿ ಅಜಗಣ್ಣನೆಂಬ ಶರಣನ ಸೋದರಿ. ಮಸಳಿಕಲ್ಲಿಗೆ ಸೊಸೆಯಾಗಿ ಹೋಗಿ ಸಂಸಾರದಲ್ಲೇ ಪರಮಾರ್ಥವನ್ನು ಕಂಡ ಶರಣೆ. ಅಜಗಣ್ಣ ಮಹಾಯೋಗಿ, ತನ್ನ ಭಕ್ತಿಯ ವಿಷಯ ಇತರರಿಗೆ ತಿಳಿಯಬಾರದು ಎನ್ನುವಷ್ಟು ವಿನಯದಿಂದಿದ್ದ. ಒಂದು ದಿನ ಅಕಸ್ಮಾತ್ತಾಗಿ ಅವನ ಯೋಗಸಾಧನೆಯ ವಿಷಯ ಇತರರಿಗೆ ತಿಳಿಯಿತು. ತನ್ನದು ಆಡಂಬರದ ಭಕ್ತಿಯಾಯಿತೆಂದು ಅಜಗಣ್ಣ ನೊಂದ. ಅದೇ ನೋವಿನಲ್ಲಿರುವಾಗಲೇ ಒಂದು ದಿನ ಜೀವ ತೊರೆದ. ಕೇವಲ ಅಣ್ಣನಾಗಿ ಪ್ರೇಮವಷ್ಟೇ ತೋರದೆ, ಸದ್ಗುರುವಾಗಿ ಮಾರ್ಗದರ್ಶನ ಸಹ ನೀಡುತ್ತಿದ್ದ ಅಜಗಣ್ಣ ಅಗಲಿದಾಗ ಮುಕ್ತಾಯಕ್ಕ ಬಹು ದುಃಖಪಟ್ಟಳು. ಅಂತಹ ಸನ್ನಿವೇಶದಲ್ಲಿ ಪ್ರಭುವು ಆಕೆಯನ್ನು ಕಂಡ. ಅವಳಿಗೆ ತಾನೇ ಸಮಾಧಾನ ಹೇಳಿ ನೋಡಿದ: “ದೇವರನ್ನು ಬೆರೆತ ಒಬ್ಬ ಮಹಾಯೋಗಿಗಾಗಿ ಅಳುವುದು ಸಲ್ಲದು. ಪ್ರೇಮವಿರಬೇಕು, ವ್ಯಾಮೋಹವಿರಬಾರದು. ಅಜ್ಞಾನವಿದ್ದಲ್ಲಿ ಮಾತ್ರ ವ್ಯಾಮೋಹವಿರುತ್ತದೆ. ನೀನು ಧರಿಸಿರುವ ಬ್ರಹ್ಮಾಂಡಾಕಾರದ ಇಷ್ಟಲಿಂಗದಲ್ಲೇ ಅಜಗಣ್ಣ ಅಡಗಿರುವಾಗ ಅವನನ್ನು ಅಗಲಿದೆ ಎಂಬ ಭಾವವೇಕೆ? ನಿನ್ನ ಅರಿವೇ ನಿನಗೆ ಗುರುವಾಗಲಿ” ಎಂದು ಹೇಳಿದ. ಆಧ್ಯಾತ್ಮವೆಂದರೆ ಜೀವನದಿಂದ, ಸಮಸ್ಯೆಗಳಿಂದ ದೂರವಾಗಿ ಏಕಾಂತಜೀವಿಯಾಗಿರುವುದು ಎಂದು ಆಕೆಯ ಅಭಿಪ್ರಾಯ. ಇದನ್ನು ಒಪ್ಪದೆ ಪ್ರಭು, “ಮಾತು ಜ್ಯೋತಿರ್ಲಿಂಗ. ಇದು ಜನರ ದುಃಖ-ಅಜ್ಞಾನಗಳನ್ನು ಕಳೆಯುವ ಸಾಧನ. ಜಗತ್ತಿನ ಕಲ್ಯಾಣಕ್ಕೆ ದಾರಿಯಾಗದ ಆಧ್ಯಾತ್ಮದಿಂದ ಪ್ರಯೋಜನವೇನು?” ಎಂದು ಹೇಳಿ “ನೀನೂ ಶರಣರ ಸಂಗವನ್ನು ಸೇರು” ಎಂದೆನ್ನುತ್ತಾ ಕಲ್ಯಾಣದ ಕಡೆಗೆ ಸಾಗಿದ.

ಇನ್ನೊಂದು ಕೆರೆಯನ್ನು ಕಟ್ಟಬೇಕು

ಅಲ್ಲಮನ ಯೋಗಶಕ್ತಿಯು ನಿತ್ಯಲಿಂಗಾರ್ಚನೆ, ಅನುಸಂಧಾನದಿಂದ ಬೆಳೆಯುತ್ತ ಹೋಯಿತು. ಅದನ್ನು ಧಾರೆಯೆರೆಯಲಿಕ್ಕೇ ಹೊರಟಂತೆ ಕಾಣುತ್ತಿದ್ದ ಅಲ್ಲಮನ ಮುಂದೆ ಸೊನ್ನಲಾಪುರಕ್ಕೆ ಧಾವಿಸಿದ. ಸೊನ್ನಲಾಪುರದ ಸುಗ್ಗವ್ವೆ-ಮುದ್ದುಗೌಡರ ಮಗನಾದ ಶ್ರೀ ಸಿದ್ಧರಾಮೇಶ್ವರರು ಅಲ್ಲಿದ್ದರು. ಅವರು ಶ್ರೀಶೈಲ ಮಲ್ಲಿಕಾರ್ಜುನನ ಕರುಣೆಯ ಕಂದ. ಸ್ಥಾವರಲಿಂಗ ಪೂಜೆಯಲ್ಲಿ ಮೈಮರೆತು, ಬಹಳ ಕೀರ್ತಿಶಾಲೆಯಾಗಿ ಕರ್ಮಯೋಗಿಯಾಗಿದ್ದರು. ಜನಹಿತಕ್ಕಾಗಿ ಕೆರೆ, ಬಾವಿ, ದೇವಾಲಯ ಕಟ್ಟಿಸುತ್ತ ಅದರಲ್ಲೇ ತನ್ಮಯರಾಗಿದ್ದರು. ಅವರಿನ್ನೂ ಕೀರ್ತಿಯ ಆಸೆಗೆ ಸಿಕ್ಕಿಬಿದ್ದಿದ್ದರು. ಏನನ್ನೂ ಬಯಸೆ ಕೆಲಸ ಮಾಡುವ ಭಾವವನ್ನು ಬೆಳೆಸಿಕೊಂಡಿರಲಿಲ್ಲ. ಅವರನ್ನು ಕಂಡ ಅಲ್ಲಮ ಮನದಲ್ಲಿ ನಕ್ಕ. ಮಾತ್ರವಲ್ಲ, ಗಹಗಹಿಸಿ ನಗುತ್ತ ವ್ಯಂಗ್ಯ ಧ್ವನಿಯಲ್ಲಿ, “ಒಡ್ಡರ ಗುರುವನ್ನು ಕರೆಯಿರಿ” ಎಂದು ಸಿದ್ಧರಾಮೇಶ್ವರರ ಶಿಷ್ಯರಿಗೆ ಹೇಳಿದ. ಚಾಮರಸ ಕವಿ ಹೇಳುವಂತೆ, “ಹಗ್ಗದ ಸಂಕೋಲೆ ಕಡಿದು ಬಂಗಾರದ ಸಂಕೋಲೆಯನ್ನು ಹಾಕಿಕೊಂಡ ದಡ್ಡನಂತೆ, ಹೆಂಡತಿ ಮಕ್ಕಳು ಸಂಸರಕ್ಕೆ ಭಯಗೊಂಡು ತ್ಯಜಿಸಿ ಈ ಬೋಳುಮಂಡೆಯ (ಸನ್ಯಾಸಿಯ) ಸಂಸಾರವನ್ನು ಎಷ್ಟು ಜೋರಾಗಿ ಹಾಕಿಕೊಂಡಿದ್ದಾನೆ” ಎಂದು ಅಲ್ಲಮನು ಅನುಕಂಪ-ಆಶ್ಚರ್ಯಗಳಿಂದ ಸಿದ್ಧರಾಮನಿಗೆ ಬುದ್ಧಿ ಹೇಳಿದ. “ಅನ್ನವನು ಇಡುವುದು, ಅರವಂಟಿಗೆ ಇಡುವುದು ಸ್ವರ್ಗಕ್ಕೆ ಸಾಧನೆಗಳೇ ಹೊರತು ಮುಕ್ತಿಗೆ ಸಾಧನೆಗಳಲ್ಲ. ನಮ್ಮ ಆಧ್ಯಾತ್ಮ ಸಾಧನೆಯ ಗುರಿ ಮುಕ್ತಿಯೇ ಹೊರತು ಸ್ವರ್ಗವಲ್ಲ” ಎಂಬ ಅಲ್ಲಮನ ಮಾತಿಗೆ ಬೆರಗಾದ ಸಿದ್ಧರಾಮಯ್ಯ. ಆಗ ಅಲ್ಲಮನು ಬಹಿರಂಗದ ಕೆರೆಯನ್ನು ಕಟ್ಟುತ್ತೀಯೆ, ಅಷ್ಟೇ ಸಾಲದು, ಇನ್ನೊಂದು ಕೆರೆಯನ್ನು ಕಟ್ಟು ಎಂದು. ಯಾವ ಕೆರೆ? ಹೇಗೆ ಕಟ್ಟಬೇಕು? ಈ ಶರೀರವನ್ನೇ ಏರಿಯನ್ನಾಗಿ ಮಾಡಿ, ಮನವನ್ನೇ ಕಟ್ಟೆ ಮಾಡಿ, ಆಚಾರವೆಂಬ ಮೆಟ್ಟಿಲು ಕಟ್ಟಿ, ಪರಮಾನಂದವೆಂಬ ಜಲವನ್ನು ತುಂಬಿ, ಆಧ್ಯಾತ್ಮಿಕ ಕೆರೆಯನ್ನು ಸ್ಥಿರವಾಗಿ ಕಟ್ಟಲು ಕಲಿಸಿದ. “ಜೀವಾತ್ಮ-ಪರಮಾತ್ಮರನ್ನೊಂದು ಮಾಡುವ ಶಕ್ತಿ-ಭಕ್ತಿಯ ಬೆಸುಗೆಯ ರಹಸ್ಯವನ್ನರಿಯಬೇಕು. ಯೋಗಿಯಾದವನು ಕೀರ್ತಿ, ಬಂಗಾರ ಇವುಗಳ ಹುಚ್ಚಿಗೆ ಬೀಳಬಾರದು, ಬಿದ್ದರೆ ಕೆಟ್ಟ. ಅವನು ಮಾಂಸದ ಸವಿಗೆ ಗಾಳವನ್ನು ಕಚ್ಚಿ ಸಿಕ್ಕಿಬಿದ್ದ ಮೀನಿನಂತೆ, ನಾಶದ ಬಾಯಿಗೆ ಬೀಳುವನು” ಎಂದು ಸಿದ್ಧರಾಮನಿಗೆ ಬೋಧಿಸಿದ.

ಸಿದ್ಧರಾಮಯ್ಯನಿಗೆ ಪಶ್ಚಾತ್ತಾಪವಾಯಿತು. ಅವನು ಅಲ್ಲಮಪ್ರಭುವಿನ ಕ್ಷಮೆ ಕೇಳಿ, “ಹೀಗೆ ಬಡ ಜಂಗಮ ವೇಷದಲ್ಲಿ ನೀವು ಬಂದರೆ, ನಾವು ನಿಮ್ಮ ವ್ಯಕ್ತಿತ್ವ ತಿಳಿಯುವುದು ಹೇಗೆ?” ಎಂದನು. ಆಗ ಅಲ್ಲಮ ಮಹಾತತ್ವವನ್ನು ಉಪದೇಶಿಸಿದ – “ಜನರ ಅಂತಸ್ತು ನೋಡಿ ಗೌರವಿಸಬೇಕಾದ್ದಿಲ್ಲ. ಹಿರಿಯರು-ಕಿರಿಯರು ಬಡವರು-ಬಲ್ಲಿದರು ಎಂಬ ಭೇದವಿಲ್ಲದೆ ಎಲ್ಲರಲ್ಲಿಯೂ ಸಮತಾಭಾವವೂ ಇರತಕ್ಕದ್ದು. ಸಮದೃಷ್ಟಿಯೇ ಶ್ರೇಷ್ಠವಾದ ಸಿದ್ಧಿ” ಎಂದು. ಒಳ್ಳೆಯ ಗುರಿಯಿಂದಲೇ ಹೊರಟು ಸ್ವಲ್ಪ ಕವಲುದಾರಿ ಹಿಡಿದಿದ್ದ ಸಿದ್ಧರಾಮಯ್ಯನನ್ನು ಸರಿದಾರಿಗೆ ಹಚ್ಚಲಿಕ್ಕಾಗೆ ಅಲ್ಲಮಪ್ರಭು ಅವನನ್ನು ಕಲ್ಯಾಣಕ್ಕೆ ಕರೆತಂದ.

ಶೂನ್ಯ ಸಿಂಹಾಸನದ ಅಧ್ಯಕ್ಷ

ಇಷ್ಟು ಹೊತ್ತಿಗಾಗಲೆ ಕಲ್ಯಾಣದ ಕೀರ್ತಿ, ಬಸವಣ್ಣನ ಸುಧಾರನೆಯ ವೈಶಿಷ್ಟ್ಯ ನಾಡಜನರ ಬಾಯಲ್ಲಿ ತುಂಬಿ ತುಳುಕುತ್ತಿತ್ತು. ಬಸವಣ್ಣನ ಭವ್ಯ ವ್ಯಕ್ತಿತ್ವದ ಆಕರ್ಷಣೆಗೆ ಒಳಗಾದ ಅಲ್ಲಮನು, ಜಿಜ್ಞಾಸು ಸಿದ್ಧರಾಮಯ್ಯನನ್ನು ಕೂಡಿಕೊಂಡು ಅನುಭವಮಂಟಪಕ್ಕೆ ಬಂದಾಗ ಹಿಮಾಲಯ, ವಿಂಧ್ಯಪರ್ವತಗಳು ಕೂಡಿಬಂದಂತೆ ಆಗಿರಬೇಕು. ಇಲ್ಲಿ ಅಲ್ಲಮಪ್ರಭುವಿನ ಪ್ರಭೆ ಉಜ್ವಲವಾಗಿ ಬೆಳಗಿತು. ಅನುಭವಮಂಟಪದಲ್ಲಿ ಸಾಂಕೇತಿಕವಾದ ಒಂದು ಪೀಠವನ್ನು ಬಸವಣ್ಣನವರು ಸ್ಥಾಪಿಸಿದ್ದರು. ’ಶೂನ್ಯ’ ಎಂದರೆ ಪರಿಪೂರ್ಣವಾದ ಪರಮಾತ್ಮ. ಅವನ ಗಳಿಕೆಯೇ ಶೂನ್ಯದ ಸಂಪಾದನೆ. ಈ ದೈವೀ ಸಾಕ್ಷಾತ್ಕಾರ ಸಾಧಿಸಿದ ಹೃದಯವೇ ಶೂನ್ಯ ಸಿಂಹಾಸನ. ಇದನ್ನು ಏರಲಿಕ್ಕೆ ಜಾತಿ, ಸಿರಿವಂತಿಕೆಗಳು ಅರ್ಹತೆಗಳಲ್ಲ. ಆಧ್ಯಾತ್ಮ ಶಕ್ತಿಯೇ ಅರ್ಹತೆ. ಇಂತಹ ತತ್ವದ ಸಂಕೇತವಾದ ಶೂನ್ಯ ಸಿಂಹಾಸನದ ಅಧ್ಯಕ್ಷತೆಯನ್ನು ಪ್ರಭುವಿಗೆ ಬಸವಣ್ಣನವರು ವಹಿಸಿಕೊಟ್ಟರು. ಇಲ್ಲಿಯತನಕ ಅನೇಕ ಯೋಗಗಳನ್ನು ಆಳವಾಗಿ ಅಳವಡಿಸಿಕೊಂಡು ಇನ್ನೂ ಅತೃಪ್ತನಾಗಿದ್ದ ಪ್ರಭುವಿಗೆ ಶಿವಯೋಗದ ಆಚರಣೆಯಲ್ಲಿ ಅಪಾರ ತೃಪ್ತಿ ಸಿಕ್ಕಿತು. ಗುಹೇರ್ಶವರಾ, ನಿಮ್ಮ ಸಂಗನಬಸವಣ್ಣನ ಸಾನಿಧ್ಯದಿಂದ ಆನು ’ಸದ್ಭಕ್ತನಾದನಯ್ಯ’ ಎಂದು ಕೃತಜ್ಞತೆಯಿಂದ ಹಾಡಿದನು. ಅಲ್ಲಮನ ಭಕ್ತಿಯಲ್ಲಿದ್ದ ತುಸು ಕೊರತೆ ಬಸವಣ್ಣನಿಂದ ತುಂಬಿತು. ಅತಿ ಸಮರ್ಥವಾಗಿ ಅನುಭವಮಂಟಪದ ಅಧ್ಯಕ್ಷನಾಗಿದ್ದ ಅಲ್ಲಮನ ಜ್ಞಾನ ವಿರಕ್ತಿಗಳು ಬಹು ತೀಕ್ಷ್ಣವಾಗಿದ್ದವು; ಅವನ ಮುಕ್ತಿ ಬಯಸಿ ಬಂದವರನ್ನು ಮುನ್ನಡೆಸಿದ.

ಅಕ್ಕಮಹಾದೇವಿ ಒಬ್ಬ ಬಹು ಹಿರಿಯ ಶಿವಶರಣೆ. ಉಡುತಡಿಯಲ್ಲಿ ಜನ್ಮಿಸಿ, ದೇವನೇ ಗಂಡನೆಂದು ಭಾವಿಸಿ, ಕೈಹಿಡಿದು ಬಯಸಿ ಬಂದ ರಾಜ ಕೌಶಿಕನನ್ನು ತಿರಸ್ಕರಿಸಿ ಅನುಭವಮಂಟಪದ ಶರಣರ ಸತ್ಸಂಗಕ್ಕೆ ಹಾತೊರೆದು ಧಾವಿಸಿದ ಅಕ್ಕಮಹಾದೇವಿಯನ್ನು ಬಗೆಬಗೆಯ ಪ್ರಶ್ನೆಗಳಿಂದ ಅಲ್ಲಮನು ತೀಕ್ಷ್ಣವಾಗಿ ಪರೀಕ್ಷಿಸಿದ. ಶಿವಯೋಗ ಚಕ್ರವರ್ತಿಯಾದ ಅಲ್ಲಮನ ದೊಡ್ಡ ಗುಣವೆಂದರೆ ಅಕ್ಕಮಹಾದೇವಿಯ ಘನ ವ್ಯಕ್ತಿತ್ವ ಪ್ರಕಾಶಕ್ಕೆ ಬರುತ್ತಲೇ ಯಾವ ಅಭಿಮಾನ, ಹಮ್ಮುಗಳಿಲ್ಲದೆ ತಾನೇ ಮುಂದಾಗಿ ಪೀಠವನ್ನು ಬಿಟ್ಟು ಎದ್ದು “ಎನ್ನ ಹೆತ್ತತಾಯಿ ಮಹದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮಓ ಎಂಬೆ” ಎಂದು ಗೌರವಿಸಿದುದು. ಮಹಾದೇವಿಯಾದ ಆಕೆ ಜಗದಕ್ಕನಾಗಿ ’ಅಕ್ಕಾ’ ಎಂಬ ಬಿರುದು ತಳೆದದ್ದೂ ಇವನಿಂದಲೇ. ಆಕೆಯ ಮುಕ್ತಿಮಾರ್ಗಕ್ಕೆ ಮಾರ್ಗದರ್ಶನ ನೀಡಿದವನೂ ಪ್ರಭುವೇ!

ಗೋರಕ್ಷ

ಪ್ರಭುವು ಮತ್ತೊಮ್ಮೆ ಸಂಚಾರ ಕೈಗೊಂಡಾಗ ಗೋರಕ್ಷ ಎಂಬಾತನನ್ನು ಸಂಧಿಸಿದ ಕಥೆ ಪ್ರಭುವಿನ ಹಿರಿಮೆಯನ್ನು ತೋರುತ್ತದೆ. ಈ ಪ್ರಸಂಗ ಉಜ್ವಲ ತತ್ವವನ್ನು ಬಿಂಬಿಸುತ್ತದೆ. ಗೋರಕ್ಷನು ಪವಾಡಗಳನ್ನು ಮಾಡುವ ಶಕ್ತಿ ಪಡೆದಿದ್ದ. ಇತರರು ಬೆರಗಾಗುವ ಅದ್ಭುತಗಳನ್ನು ಮಾಡುವುದೇ ಶ್ರೇಷ್ಠ ಎಂದು ತಿಳಿದಿದ್ದ. ಅದರಲ್ಲಿಯೇ ಮೈಮರೆತು, ತನ್ನ ಸಮಾನರು ಯಾರೂ ಇಲ್ಲವೆಂದು ಭಾವಿಸಿ ಆತ್ಮಸಾಕ್ಷಾತ್ಕಾರವನ್ನು ಕಡೆಗಣಿಸಿದ್ದ. ಅವನ ಮೂರ್ಖತೆಗೆ ಮರುಕಗೊಂಡು ಅಲ್ಲಮನು ಅವನಿಗೆ ಬುದ್ಧಿ ಕಲಿಸಲು ಬಯಸಿದ.

“ಬಿದ್ದು ಹೋಗುವ ಈ ಶರೀರದ ಸಿದ್ಧಿಗೆ ಏಕೆ ಇಷ್ಟು ಪ್ರಾಮುಖ್ಯತೆ ಕೊಡುತ್ತೀಯೆ? ದೇಹ ಒಂದು ಕೊಳಚೆ ಅಷ್ಟೆ” ಎಂದು ಅಲ್ಲಮನು ಪ್ರಶ್ನಿಸಿದಾಗ, ಗೋರಕ್ಷ ಅಷ್ಟೇ ಅಟ್ಟಹಾಸದಿಂದ ಉತ್ತರಿಸುತ್ತಾನೆ: “ಇದನ್ನು ಸರಿಯಾಗಿ ಮಾಡಲಾರದವರಿಗೆ ಇದೊಂದು ಕೊಳಚೆ, ಮಾಡಬಲ್ಲಡೆ ಇದೇ ಒಂದು ರತ್ನ” ಎಂದು ಹೇಳಿ, ಬೇಕಾದರೆ ಪರೀಕ್ಷಿಸೆಂದು ಒಂದು ಖಡ್ಗವನ್ನು ಕೊಟ್ಟು. ಅದನ್ನು ತೆಗೆದುಕೊಂಡು ಅಲ್ಲಮನು ಗೋರಕ್ಷನಿಗೆ ಹೊಡೆದಾಗ ಅದು ಕಲ್ಲಿಗೆ ಹೊಡೆದಂತಾಗಿ ಖಣಲ್ ಎಂದು ಶಬ್ದ ಮಾಡಿತು. ಅಲ್ಲಮಪ್ರಭುವು ತನಗೆ ಹೊಡೆಯಲು ಗೋರಕ್ಷನನ್ನು ಕೇಳಿದಾಗ, ಗೋರಕ್ಷ ಕತ್ತಿಯನ್ನು ಬೀಸಿದ. ಆ ಕತ್ತಿ ಅಲ್ಲಮನ ಶರೀರದಲ್ಲಿ ಹಾಯ್ದು ಪಾರಾಯಿತು. ಬಯಲಿನಲ್ಲಿ ಕತ್ತಿಯನ್ನು ಬೀಸಿದಂತಾಯಿತು. ಗೋರಕ್ಷನಿಗೆ ಪರಮಾಶ್ಚರ್ಯ. ಇದು ಹೇಗೆ ಸಾಧ್ಯವಾಯಿತು? ಎಂದಾಗ ತಾನು ಆಚರಿಸುತ್ತಿದ್ದ ಶಿವಯೋಗದ ರಹಸ್ಯವನ್ನು ಅಲ್ಲಮನು ಬಿಡಿಸಿ ಹೇಳಿದ. ಲಿಂಗಾಂಗ ಸಾಮರಸ್ಯ, ಅಂದರೆ ದೇವನೊಡನೆ ಸಾಮರಸ್ಯದ ಕೊನೆಯ ಗುರಿಗಾಗಿ ಯತ್ನಿಸುವಾಗ ಬರುವ ಈ ಸಿದ್ಧಿ ಒಂದು ಸಾಧನ; ಇದನ್ನೇ ಕೊನೆಯ ಸಿದ್ಧಿಯೆಂದು ತಿಳಿಯಲಾಗದು ಎಂದು ಬೋಧಿಸಿದ.

ಅಂತರಂಗ ಶುದ್ಧಿಯೇ ಮುಖ್ಯ

ಅಲ್ಲಮಪ್ರಭುವಿನ ವ್ಯಕ್ತಿತ್ವ ಶ್ರೇಷ್ಠವಾದದ್ದು. ಅವನ ವಚನಗಳು ಕಬ್ಬಿಣದ ಕಡಲೆಗಳಂತೆ ಹಲವಿದ್ದರೆ, ಇನ್ನು ಕೆಲವು ಮಾಗದ ಬಾಳೆಯಂತಿವೆ. ಸಾಸುವೆಯಲ್ಲಿ ಸಾಗರವನ್ನು ಅಡಗಿಸಿ ಸೂತ್ರರೂಪವಾಗಿ ತತ್ವ ಹೇಳುವ ಅವನ ಜಾಣ್ಮೆಗೆ ಯೋಗಿಗಳು, ಸಾಹಿತಿಗಳು, ಅನುಭಾವಿಗಳು, ತತ್ವಜ್ಞಾನಿಗಳು ಎಲ್ಲರೂ ತಲೆದೂಗಬೇಕು.

ಹೊನ್ನು ಮಾಯೆಯೆಂಬರು ಹೆಣ್ಣು
ಮಾಯೆಯೆಂಬರು
ಮಣ್ಣು ಮಾಯೆಯೆಂಬರು
ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವಾರಾ.

“ಹೊನ್ನು -ಹೆಣ್ಣು – ಮಣ್ಣುಗಳನ್ನು ತಿರಸ್ಕಾರದಿಂದ ಕೆಲವು ಕಾಣುತ್ತಾರೆ. ಒಂದಲ್ಲ ಒಂದು ರೂಪದಲ್ಲಿ ಅವು ಬೇಕು. ತಾಯಿ ಹೆಂಗಸಲ್ಲವೆ? ತಾಯಿ ಬೇಡವೆ? ಮಣ್ಣು ಆಸ್ತಿಯಾಗಿ ಬೇಡವಾದರೂ ಅನ್ನವಾಗಿ ಬೇಕು. ಅವುಗಳಲ್ಲಿ ಮಾಯೆಯಿಲ್ಲ. ನೀನು ಹೊಂದಿರುವ ದೃಷ್ಟಿಯಲ್ಲೇ ಮಾಯೆ ಇದೆ. ಈ ದೃಷ್ಟಿ ಬದಲಿಸಿ ನೋಡು, ನಿನಗೆ ಎಲ್ಲಿಯೂ ಪರಮಾತ್ಮನೇ ಕಾಣುವನು, ಮಾಯೆ ಕಾಣದು.” ಎಂತಹ ಘನವಾದ ವಿಚಾರ! ಸೃಷ್ಟಿಯನ್ನು ತಿದ್ದುಹೋಗುವ ಬದಲಿಗೆ ದೃಷ್ಟಿಯನ್ನೇ ತಿದ್ದಿಕೊಳ್ಳಬೇಕಂತೆ.

ಪ್ರಭುದೇವರು ದೇವರ ಸ್ವರೂಪವನ್ನು ಬಹು ಸರಳವಾಗಿ, ಸುಂದರವಾಗಿ ವರ್ಣಿಸಿದ್ದಾರೆ. ಸಾಮಾನ್ಯವಾಗಿ ನಾವು ಒಂದು ವಸ್ತುವನ್ನು ತಿಳಿದುಕೊಳ್ಳುವ ರೀತಿ ಹೇಗೆ? ಅದನ್ನು ಕಣ್ಣಿನಿಂದ ಕಾಣಬಹುದು, ಮುಟ್ಟಿ ನೋಡಬಹುದು, ಅದರ ವಾಸನೆ ನೋಡಬಹುದು, ಅದರ ಶಬ್ದ ಕೇಳಬಹುದು, ಅದರ ರುಚಿ ನೋಡಬಹುದು. ಪಂಚೇಂದ್ರಿಯಳಿಂದ ವಸ್ತುಗಳನ್ನು ತಿಳಿಯಬಹುದು, ಆದರೆ ಪರಮಾತ್ಮನನ್ನು ಇವುಗಳಿಂದ ತಿಳಿಯಲು ಸಾಧ್ಯವಿಲ್ಲ. ಅವನು ಕೇವಲ ಬಹಿರಂಗದ ಆಡಂಬಕ್ಕೆ ಒಲಿಯುವವನಲ್ಲ. ಅವನಿಗೆ ಯಾವ ಧೂಪ ದೀಪಗಳ ಹಂಗೂ ಇಲ್ಲ.

ಮಜ್ಜನಕ್ಕೆರೆವಡೆ, ನೀನು ಶುದ್ಧ ನಿರ್ಮಲದೇಹಿ
ಪೂಜೆ ಮಾಡುವಡೆ, ನಿನಗೆ ಗನನ ಕುಸುಮದ
ಅಖಂಡಿತ ಪೂಜೆ
ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು
ಧೂಪ ದೀಪಾರತಿಗಳ ಬೆಳಗುವೊಡೆ, ನೀನು
ಸ್ವಯಂ ಜ್ಯೋತಿಪ್ರಕಾಶನು
ಅರ್ಚನೆಯ ಮಾಡುವಡೆ, ನೀನು ಮುಟ್ಟಬಾರದ
ಘನವೇದ್ಯನು
ನಿನಗೆ ಅನಂತ ನಾಮಂಗಳಾದವು ಗುಹೇಶ್ವರಾ

“ಓ ಗುಹೇಶ್ವರಾ! ನೀನೆಷ್ಟು ಮಹಿಮೆ, ನಾನೆಷ್ಟು ಅಲ್ಪ! ನಿನಗೆ ಸ್ನಾನ, ಅಭಿಷೇಕ ಮಾಡಬೇಕೆಂದರೆ ಕೊಳೆ ಇಲ್ಲದ ನಿರ್ಮಲದೇಹಿ ನೀನು. ಭಕ್ತಿಯ ಸಂಕೇತವಾಗಿ ಕುಸುಮಗಳಿಂದ ಪೂಜೆ ಮಾಡಬೇಕೆಂದರೆ ಗಗನದ ಗ್ರಹ. ತಾರೆಗಳು ನಿನ್ನನ್ನು ಯಾವಾಗಲೂ ಪೂಜಿಸುತ್ತಿವೆ. ನೈವೇದ್ಯ ಮಾಡಬೇಕೆಂದರೆ ನಿನಗೆ ಹಸಿವು ಬಾಯಾರಿಕೆಗಳೇ ಇಲ್ಲ. ನೀನು ನಿತ್ಯ ತೃಪ್ತ. ಧೂಪದೀಪಗಳಿಂದ ಆರತಿಯನ್ನು ಬೆಳಗಬೇಕೆಂದರೆ ನೀನೇ ಸ್ವಯಂಜ್ಯೋತಿ. ಮುಟ್ಟಿ ಪೂಜೆ ಮಾಡಬೇಕೆಂದರೆ ಸ್ಪಶಾತೀತನಾದ ಘನಮಹಿಮನು ನೀನು” ಎನ್ನುವ ಅಲ್ಲಮಪ್ರಬು, ದೇವನೊಬ್ಬ, ಅವನ ಅನುಭವವು ಬಹಿರಂಗದ ಆಚರಣೆಗಳಿಗೆ ಅತೀತವಾಗಿದ್ದ ಕಾರಣ ಅವನಿಗೆ ಹಲವು ಹೆಸರುಗಳಾದವು, ಅವನಿಗೆ ಬೇಕಾದುದು ಅಂತರಂಗ ಶುದ್ಧಿ ಎಂದು ಸಾರಿದ. ತಾನೇ ದೈವೀ ಗುಣಗಳ ಸಾಕಾರವಾಗಿ ಸಂಚರಿಸಿದ. ಬಡವ-ಬಲ್ಲಿದ, ಪತಿತ-ಪಾವನ, ಕುಲಜ-ಅಂತ್ಯಜರೆಂಬ ಭೇದವಿಲ್ಲದೆ ಎಲ್ಲರನ್ನು ವಾತ್ಸಲ್ಯದೃಷ್ಟಿಯಿಂದ ಕಂಡನು. ಬಹು ನಿರ್ಮಲವಾದ, ಹಿರಿದಾದ ಬಾಳನ್ನು ಬಾಳಿ, ತನ್ನ ಕಡೆಯ ದಿನಗಳನ್ನು ಶ್ರೀಶೈಲ ಪರ್ವತದಲ್ಲಿರುವ ಕದಳಿಯ ವನದಲ್ಲಿ ಕಳೆದ. ಬಸವಣ್ಣನವರು ಕೈಗೊಂಡ ಮಹಾಕಾರ್ಯದಲ್ಲಿ ದೊಡ್ಡ ಆಧಾರಶಕ್ತಿಯಾಗಿ ನಿಂತು, ಕಲ್ಯಾಣದಲ್ಲಿ ಕ್ರಾಂತಿಯಾದ ಕೆಲದಿನಗಳಲ್ಲಿಯೇ ಶರೀರವನ್ನು ತ್ಯಜಿಸಿ ಲಿಂಗೈಕ್ಯನಾದ. ತನ್ನ ತತ್ವಗಳೆಂಬ ಅಮೃತಬಿಂದುಗಳನ್ನು ನಮಗಾಗಿ ಉಳಿಸಿ, ಬಯಲು ಕಾಯದ ಈ ಸಿದ್ಧಪುರುಷ ಪರಮಾತ್ಮನೆಂಬ ಮಹಾಬಯಲನ್ನು ಬೆರೆತ.

ಯೋಗಿಯಾದವನು ಕೀರ್ತಿ ಮತ್ತು ಬಂಗಾರದ ಹುಚ್ಚಿಗೆ ಬಲಿಯಾಗಬಾರದು’