ಅಲ್ಲಮಪ್ರಭು ನಾಯಕನಾಗಿರುವ ಈ ಸಣ್ಣಾಟ ಚಾಮರಸನ ಪ್ರಭುಲಿಂಗ ಲೀಲೆಯನ್ನಾಧರಿಸಿ ರಚನೆಗೊಂಡಿದ್ದರೂ ತನ್ನ ಜಾನಪದೀಯ ಗುಣದಿಂದ ವಿಶಿಷ್ಟ ಸ್ವರೂಪ ಪಡೆದುಕೊಂಡಿದೆ.

ಕೈಲಾಸದಲ್ಲಿ ಶಿವನು ಸುಖಸಂಕಥಾ ವಿನೋದದಲ್ಲಿ ಕುಳಿತಿರುವಾಗ ನಾರದನು ಭೂಲೋಕದ ಸುದ್ದಿಯನ್ನು ಶಿವನಿಗೆ ಅರಹುತ್ತಾನೆ. ಭೂಲೋಕದಲ್ಲಿ ಎಲ್ಲರೂ ಸುಖದಿಂದಿದ್ದಾರೆ. ಈದಕ್ಕೆ ಮೂಲಕಾರಣನು ಮಾಯಾರಹಿತನಾದ ಅಲ್ಲಮಪ್ರಭು. ಅವನು ಮಾಯೆಯನ್ನು ಮೆಟ್ಟಿನಿಂತ ಮಹಾತ್ಮನು…. ಎಂದು ಹೇಳುವಷ್ಟರಲ್ಲಿ ಪಾರ್ವತಿ ಒಮ್ಮೆಲೇ ಕೋಪಗೊಂಡು ಮಾಯೆಗೆ ಸಿಗದವರಾರು? ಯಕಶ್ಚಿತ ಅಲ್ಲಮನ ಪಾಡೇನು? ಎಂದು ಹೀಯಾಳಿಸಿ ಮಾತಾಡುವಳು. ಶಿವನು ಅಲ್ಲಮನ ಅರ್ಹತೆಯ ಬಗ್ಗೆ ಎಷ್ಟು ಹೇಳಿದರೂ ಕೇಳದೆ ನನ್ನ ತಾಮಸ ಕಳೆಯಾದ ಮಾಯೆಯನ್ನು ಕಳಿಸಿ ಅವನನ್ನು ಹೆಡೆಮುರಿ ತರಿಸುವೆನೆಂದು ಪ್ರತಿಜ್ಞೆಮಾಡಿದಳು. ಮಯೆಯು ಬನವಾಸಿಯ ರಾಜದಂಪತಿಗಳಾದ ಮಮಕಾರ ಮೋಹಿನಿಯರ ಮಗಳಾಗಿ ಹುಟ್ಟಿ ಬೆಳೆದು ಯೌವನಕ್ಕೆ ಬಂದಳು. ಮಧುಕೇಶ್ವರ ದೇವಸ್ಥಾನದಲ್ಲಿ ಒಬ್ಬನು (ಅಲ್ಲಮ) ಸುಮಧುರವಾಗಿ ಮದ್ದಳೆ ಬಾರಿಸುತ್ತಿದ್ದಾನೆಂಬ ಸುದ್ದಿ ತಿಳಿದು ದೂತಿಯ ಮೂಲಕ ಅವನನ್ನು ಅರಮನೆಗೆ ಕರೆಕಳಿಸುವಳು. ಅವನು ದೂತಿಯನ್ನು ಹಂಗಿಸಿ ಅಪಮಾನಿಸಿ ಹಿಂದಕ್ಕೆ ಕಳಿಸುವನು. ಮಾಯೆ ತಾನೆ ಹೋಗಿ ಅಲ್ಲಮನನ್ನು ಆಹ್ವಾನಿಸುವಳು. ಹೆಣ್ಣಿನೊಂದಿಗೆ ಭೋಗಜೀವನ ಮತ್ತು ಸಂಸಾರಸುಖ ಶ್ರೇಷ್ಠವೆಂದು ಅವಳು ವಾದಿಸಿದರೆ ಸಂಸಾರ ಮತ್ತು ಹೆಣ್ಣು ತುಚ್ಛವೆಂದು ಅಲ್ಲಮನು ನಿರಾಕರಿಸುತ್ತಾನೆ. ಮಾಯೆಸೋತು ಕೈಲಾಸಕ್ಕೆ ಹೋಗಿ ಪಾರ್ವತಿಗೆ ಎಲ್ಲ ವಿವರ ತಿಳಿಸಿದಳು.

ಪಾರ್ವತಿ ಈ ಸಲ ತನ್ನ ಸಾತ್ವಿಕ ಶಕ್ತಿಯನ್ನು ಭೂಲೋಕಕ್ಕೆ ಕಳಿಸುವಳು. ಸಾತ್ವಿಕೆ ಹೆಸರಿನ ಅವಳು ಬೆಳೆದು ಯೌವ್ವನಕ್ಕೆ ಬಂದಾಗ ಕೌಶಿಕರಾಜನ ಕಣ್ಣು ಅವಳ ಮೇಲೆ ಬಿತ್ತು. ಅವಳನ್ನು ಪಡೆಯಲು ಏನೆಲ್ಲ ಉಪಾಯಮಾಡಿದರೂ ಸಾತ್ವಿಕಿ ಒಲಿಯಲಿಲ್ಲ. ಕೌಶಿಕನು ಅವಳ ತಂದೆ ತಾಯಿಗಳ ಮೇಲೆ ತಪ್ಪು ಹೊರಿಸಿ ಅವರನ್ನು ಹಿಂಸಿಸಲು ಮುಂದಾದಾಗ ಸಾತ್ವಿಕಿ ತಾನೇ ಸ್ವತಃ ಕೌಶಿಕನ ಅರಮನೆಗೆ ಹೋಗುವಳು. ತನ್ನ ಭಕ್ತಿ ವೈರಾಗ್ಯಗಳ ಬಗ್ಗೆ ಸಾತ್ವಿಕಿ ಮಾತಾಡಿದರೆ ಕೌಶಿಕನು ಕಾಮುಕ ವಿಕಾರಗಳನ್ನು ಮಂಡಿಸುತ್ತಾನೆ. ಒತ್ತಾಯದಿಂದ ಅವಳ ಸೆರಗು ಹಿಡಿಯಲು ಹೋದಾಗ ಒಮ್ಮೆಲೇ ಮೂರ್ಛೆ ಬಂದು ಬಿದ್ದುಬಿಟ್ಟನು. ಆಗ ಅವನಿಗೆ ಜ್ಞಾನೋದಯವಾಯಿತು. ತನ್ನ ಗುರುವನ್ನು ಹುಡುಕುತ್ತ ಹೊರಟ ಸಾತ್ವಿಕಿಯನ್ನು ಅಲ್ಲಮನು ಪರೀಕ್ಷಿಸಬೇಕೆನ್ನುತ್ತಾನೆ. ಚಾರ್ವಾಕ ವೇಷದಿಂದ ಬಂದು ಸಾತ್ವಿಯೊಡನೆ ಚರ್ಚೆಗೆ ತೊಡಗುತ್ತಾನೆ. ಅವನ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರಹೇಳಿ ಅಲ್ಲಮನ ಮನಸ್ಸನ್ನು ಗೆದ್ದಳು. ಅಲ್ಲಮನು ತನ್ನ ನಿಜರೂಪವನ್ನು ತೋರಿ ಸ್ವಾತ್ವಿಗೆ ಆಶೀರ್ವಾದ ಮಾಡುವನು.

ಕವಿಯು ಮೂಲ ಕಥೆಯನ್ನು ಜನಪದ ಮನೋಧರ್ಮಕ್ಕೆ ಒಗ್ಗುವಂತೆ ಅಲ್ಲಲ್ಲಿ ಬದಲಾಯಿಸಿಕೊಂಡಿದ್ದಾನೆ. ಅಕ್ಕಮಹಾದೇವಿ ಇಲ್ಲಿ ಸಾತ್ವಿಕಿ. ಈ ಸಣ್ಣಾಟದ ಕರ್ತೃ ಬೆಳಗಾಂವಿ ಜಿಲ್ಲೆಯ ಹಣ್ಣಿಕೇರಿ ಗ್ರಾಮದ ಶಿವಾನಂದಕವಿ. ಇದು ಕಾವ್ಯನಾಮ. ಮೂಲ ಹೆಸರು ಎಲ್ಲಪ್ಪ ಫಕೀರಪ್ಪ ಮುನೆಣ್ಣವರ. ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಶಿವಾನಂದ ಕವಿ ಹಲವಾರು ಮಹತ್ವದ ಸಣ್ಣಾಟಗಳನ್ನು ರಚಿಸಿದ್ದಾನೆ. ಇವುಗಳ ರಚನೆ ನಡೆದದ್ದು 1940 ರಿಂದ 1960ರ ನಡುವಿನ ಅವಧಿಯಲ್ಲಿ ಅಲ್ಲಮಪ್ರಭು ಸಣ್ಣಾಟದಲ್ಲಿ ಗಂಡು : ಹೆಣ್ಣಿನ ಹೆಚ್ಚುಗಾರಿಕೆಯ ಬಗ್ಗೆ ಸುದೀರ್ಘ ಚರ್ಚೆಯಿದೆ. ಮಾಯೆ : ಅಲ್ಲಮರ ವಾಗ್ವಾದ ಇಡೀ ಆಟದ ಬಹಳಷ್ಟು ಸಮಯವನ್ನು ನುಂಗಿಹಾಕಿದೆ. ಇದು ಈ ಪ್ರದೇಶದಲ್ಲಿ ಜನಪ್ರಿಯವಾಗಿ ಹರದೇಸಿ -ನಾಗೇಸಿ ಲಾವಣಿ ಸಂಪ್ರದಾಯದ ಪ್ರಭಾವದಿಂದ ಹುಟ್ಟಿರುವಂಥದು. ಈ ಸಣ್ಣಾಟವು ಹಳ್ಳಿಗಳಲ್ಲಿ ಮಾಯಿ ಆಟ ಎಂಬ ಹೆಸರಿನಿಂದ ಜನಪ್ರಿಯವಾಗಿದೆ.

ಗಣಸ್ತುತಿ

ಶ್ಲೋಕ :
ಭಜಿಸುವೆ ಶ್ರೀಗಜವದನ ಗಿರಿಜಾತನಯ
ಆದಿ ಮೂರುತಿ ಸದಾ ಮಂಗಲ
ಹೂಬೇ ಹೂಬಾ ನೀ ಬಾ ಶಿವನಲ್ಲೆ
ಮೊದಲಿಗೆ ಸ್ತುತಿಪೆವು ನಿಮ್ಮನ್ನು
* * *
ಪದ : ತಾಳ ಕೇರವಾ : ರಾಗ ಅಸ್ಸಾ

ಬಾ ಗಜವದನ ಬಾ ಗಜವದನ ಬಾ ಗಜವದನ ॥ಪಲ್ಲವಿ ॥
ಮೋಕ್ಷಕೆ ಧೀರಾ ವಾಸುಕಿ ಹಾರಾ
ಪಾಶಾಂಕುಶಧರ ಈಶಗಣೇಶ್ವರಬಾ ಗಜ ……. ॥
ದುರಿತ ಸಂಹರಣ ಸುರನುತ ಚರಣ
ವರಗುಣಭರಣ ತರಳರೊಳನುದಿನಬಾ ಗಜ …….. ॥
ನುತಜನಪಾಲಾ ಯತಿಜನಲೋಲಾ
ದಶಕರಬಾಲಾ ಸದ್ಗುಣ ಶೀಲಾಬಾ ಗಜ ……. ॥

ನಾರದ ಪ್ರವೇಶ
ನಾರದ : ಪದ : ತಾಳ ಕೇರವಾ : ರಾಗ ಮಿಶ್ರಕಾಪಿ
ಶಿವಶಂಕರಾss ಪಾಲಿಸೋ (ದುಗುಣ)॥

ಭವಬಾಧೆಯನ್ನು ದೂಡಿ ಧ್ರುವಪದವಿಯನ್ನು ನೀಡಿ
ಬಹು ಪ್ರೀತಿಯಿಂದ ಎನ್ನಶಿವಶಂಕರಾs ಪಾಲಿಸೋ
(ದುಗುಣ)1

ಕಾಮಕ್ರೋಧಗಳನು ತ್ಯಜಿಸಿ ಪ್ರೇಮದಿಂದ ನಿನ್ನನ್ನು ಭಜಿಸಿ

ಕ್ಷೇಮ ಪೊಂದುವೆನಾಂ ಭವದಿಶಿವಶಂಕರಾs ಪಾಲಿಸೋ
(ದುಗುಣ)2
ಕರದಲ್ಲಿ ಶೂಲವ ಧರಿಸಿ ಶಿರದಲ್ಲಿ ಚಂದ್ರನ ಇರಿಸಿ
ಮೆರೆವ ಮನ್ಮಥ ಧ್ವಂಸಿಶಿವಶಂಕರಾs ಪಾಲಿಸೋ
(ದುಗುಣ)3

ನಾರದ : ಶಿವಶಂಕರ! ಶಿವಶಂಕರ!!

ದೂತೆ : ಏನಿದು? ಮನುಷ್ಯನೋ, ಹೋತೋ? ಕೆಳಗೆ ನೋಡಿದರೆ ಎರಡು ಕಾಲು ಇವೆ. ಮೇಲೆ ಹೋತಿನಂತೆ ಗಡ್ಡs ಅವೆ. ಗಡ್ಡs ನೋಡಿ ಹೋತು ಅಂದೇನ, ಕೆಳಗೆ ಎರಡು ಕಾಲು ಇವೆ. (ಸಮೀಪಕ್ಕೆ ಬರುವಳು)

ನಾರದ : ಭ್ರಷ್ಟಮುಂಡೆ, ಮುಟ್ಟಿಗಿಟ್ಟಿ; ದೂರ ಸರಿದು ನಿಲ್ಲು.

ದೂತೆ : ಹೋತು ಮಾತಾಡತೈತಿ. ಮಾತಾಡುವ ಹೋತು ಇದು! ಸ್ವಾಮಿ, ತಾವು ದಾರು? ತಮ್ಮ ಪೂರ್ವಾಪರವೇನು? ವಿಸ್ತಾರವಾಗಿ ಹೇಳಿರಿ.

ನಾರದ : ದೂತೆ, ಹೇಳುತ್ತೇನೆ ಕೇಳು;

ದೂತೆ : ಅದೇನಿರುವುದು ಹೇಳುವಂಥವರಾಗಿರಿ.

ನಾರದ :

ಪದ : ತಾಳ ಕೇರವಾ : ರಾಗ ಭೂಪ

ಬ್ರಹ್ಮಪುತ್ರ ನಾರದ ಕಲಹ ವಿಶಾರದ :
ಎಂದು ಇರುವದೋ ಕೀರ್ತಿ ಜಗದಲ್ಲಿ
ಯಾರಿಗೂ ತಿಳಿಯದೇ ಅದರ ನೆಲಿ
ಕರ್ಮವ ಲಯಮಾಡಿ ಧರ್ಮವ ಸ್ಥಿರಮಾಡಿ
ಜಗದಿ ಕಲಹ ಹೂಡಿ ಲೋಕ ಉದ್ಧಾರ ಮಾಡ್ವ ರೂಢಿ 1

ನಿತ್ಯ ಉದಯದಿ ಎದ್ದು ಶಿವಸ್ತುತಿಯನ್ನು ಗೈದು
ಮೂರು ಲೋಕವನ್ನೆಲ್ಲಾ ಸಂಚರಿಸಿ
ಶಿವಶರಣರ ಕಂಡು ಮಮಕರಿಸಿ
ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸಿ
ಲೋಕ ಉದ್ಧರಿಪುದು ನನ್ನ ನೇಮ ನನ್ನ ನೇಮ 2

ಧರೆಯೊಳು ಫಲಪುರದೊರೆ ಸಿದ್ಧಲಿಂಗನ
ಚರಣವ ಸ್ಮರಿಸುವೆ ನಿಜದಿಂದss
ನರ ಜನ್ಮಕ್ಕೆ ಇದು ಆನಂದ
ಹರಿವುದು ಭವಬಂಧ ಈಶನ ದಯದಿಂದ (ದುಗುಣ)
ಕವಿಕುಲರತ್ನ ಶಿವಾನಂದ ಆನಂದ3

ದೂತೆ, ನಮಗೆ ಬ್ರಹ್ಮಪುತ್ರ ಅಂತಾರ,

ದೂತೆ : ನನಗೂ ಅಂತಾರ!

ನಾರದ : ನಿನಗೇನು ಅಂತಾರ?

ದೂತೆ : ನಿಮಗೆ ಬಾರಮ್ಮನ ಪುತ್ರ ಅಂದ್ರ, ನನಗೆ ಬಿರಿಬಿರಿ ಹೋಗಮ್ಮನ ಪುತ್ರಿ ಅಂತಾರ.

ನಾರದ : ಛೀ ಮೂರ್ಖಳೆ, ಬಾರಮ್ಮನ ಪುತ್ರ ಅಲ್ಲ; ಬ್ರಹ್ಮಪುತ್ರ ಅಂತಾರ.

ದೂತೆ : ಯಾರು, ತಾವು ಸಕಲ ಸೃಷ್ಟಿಗೆ ಅಧಿಪತಿಯಾದ ಬ್ರಹ್ಮದೇವರ ಪುತ್ರರೆ? ಹಾಗಾದರೆ ತಮ್ಮ ನಾಮವೇನು?

ನಾರದ : ದೂತೆ, ನನಗೆ ನಾಮವೇ? ಹೀಗೆ ಹಚ್ಚಿದರೆ ಅಡ್ಡನಾಮ! ಹೀಗೆ ಹಚ್ಚಿದರೆ ನೀಟನಾಮ!! ಹೀಗೆ ಹಚ್ಚಿದರೆ ಚಂದ್ರನಾಮ!!!

ದೂತೆ : ಸ್ವಾಮಿಗಳೇ, ನಾಮವೆಂದರೆ ಹಚ್ಚುವ ನಾಮವಲ್ಲ. ನಾನು ಕೇಳಿದ್ದು ತಮ್ಮ ನಾಮ. ತಮ್ಮ ನಾಮಾಂಕಿತವನ್ನು ಕೇಳಿದೆ.

ನಾರದ : ದೂತೆ, ನಮಗೆ ನಾರದರು ಅಂತಾರ; ಮತ್ತು ದೇವರ್ಷಿ ನಾರದರು ಅಂತಾರ.

ದೂತೆ : ದೇವತೆಗಳಲ್ಲಿ ಶ್ರೇಷ್ಠಋಷಿಗಳಾದ ನಾರದರೆಂಬುವದು ಗೊತ್ತಾಯಿತು. ಮತ್ತೆ ತಮ್ಮ ಉದ್ಯೋಗವೇನು?

ನಾರದ : ದೂತೆ, ನನ್ನ ಉದ್ಯೋಗವೆಂದರೆ ಹರಿಹರರಲ್ಲಿ ಭೇದವನ್ನು ಮಾಡದೆ ಸರ್ವರೂ ಶಿವರೂಪವೆಂದೇ ಭಾವಿಸಿ, ಶಿವಾಗಮ ಪದ್ಧತಿಯನ್ನು ಅನುಸರಿಸಿ, ನಿತ್ಯ ಶಿವಕೀರ್ತನೆ ಪ್ರಾರ್ಥನೆಗಳನ್ನು ಈಶನಪ್ಪಣೆಯಿಂದ ಮಾಡುತ್ತ, ಮೂರೂ ಲೋಕಗಳಲ್ಲಿ, ಎಲ್ಲೆಲ್ಲಿ ಶಿವಭಕ್ತಿ ಚೆನ್ನಾಗಿ ನಡೆದಿರುವುದೋ ಅಲ್ಲಲ್ಲಿ ಸಂಚಾರ ಮಾಡಿ ಆನಂದ ಪಡೆಯುತ್ತ, ಎಲ್ಲೆಲ್ಲಿ ಧರ್ಮವು ಲಯಹೊಂದಿ, ಕರ್ಮವು ಜಯಹೊಂದಿ ಮೆರೆಯುತ್ತಿರುವುದೋ ಅಲ್ಲಲ್ಲಿ ಸಂಚರಿಸುತ್ತ, ಧರ್ಮವು ಲಯಹೊಂದಲಿಕ್ಕೆ ಏನು ಕಾರಣ? ಅದಕ್ಕೆ ಯಾರು ಕಾರಣರು? : ಮುಂತಾದುದನ್ನು ತಿಳಿದು ಹರಿಹರರಿಗೆ ತಿಳಿಸಿ, ಅವರಿಂದ ಕರ್ಮವನ್ನು ಲಯಗೊಳಿಸಿ, ಧರ್ಮವನ್ನು ನೆಲೆಗೊಳಿಸುವ ಉದ್ದೇಶಕ್ಕಾಗಿ ಕಲಹವನ್ನು ಬೆಳೆಸುವುದರಿಂದ ನನಗೆ ಕಲಹಪ್ರಿಯ ನಾರದಾ ಎಂದು ಕರೆಯುತ್ತಿರುವರು.

ದೂತೆ : ಸ್ವಾಮಿ, ತಮ್ಮ ಉದ್ಯೋಗ ಗೊತ್ತಾಯಿತು. ಆದರೆ ತಮ್ಮ ಪಯಣ ಎಲ್ಲಿಗೆ?

ನಾರದ : ನನ್ನ ಕೈಯಲ್ಲಿರುವ ವೀಣೆಯನ್ನು ಬಾರಿಸುತ್ತಲೇ ಅದರ ತಂತಿಯಿಂದ ಹೊರಡುವ ಹುಂ ಎಂಬ ನಾದಕ್ಕೆ ತಲೆದೂಗಿ ಆನಂದಪಡುವ ವೀಣಾಪಾಣಿಯೇ ಧನ್ಯಳು! ಪವಿತ್ರಪಾವನವಾದ ಈ ವೀಣೆಯ ಪುಣ್ಯಕ್ಕೆ ಪಾರವೇ ಇಲ್ಲ. ದೂತೆ, ಈ ತಂಬೂರಿಯ ತಂತಿಯಲ್ಲಿ ಯಾವ ನಾದ ಹುಟ್ಟುತ್ತದೆಂಬುದನ್ನು ಸರಿಯಾಗಿ ತಿಳಿದವರು ಕಡಮೆ. ಇದೊಂದು ನಿರ್ಜೀವ ವಸ್ತವಾದರೂ ಸರ್ವಕ್ಕೂ ಆಧಾರವಾದ, ಮೂಲ ಮಂತ್ರವಾದ, ಮಂತ್ರ ರಾಜನಾದ. ಓಂ ನಮಃ ಶಿವಾಯಃ ಪದದ ಸುನಾದದಿಂದ ಶುಚಿರ್ಭೂತರಾಗಿ ಶಿವಧ್ಯಾನದಲ್ಲಿ ಮಗ್ನರಾಗಿರುವವರು ತೀರ ವಿರಳ. ಅಂದ ಮೇಲೆ, ಜೀವಭಾವವಿದ್ದು ಸರ್ವವನ್ನೂ ಪರೀಕ್ಷಿಸಿ ನೋಡತಕ್ಕಂಥ ಮನಸ್ಸು ಮಾನವರದಾಗಬೇಕು. ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಲ್ಲಿ ಯಾವ ಪ್ರಾಣಿಗೂ ಇಲ್ಲದಂಥ ಬುದ್ಧಿಶಕ್ತಿ ಮಾನವನಿಗಿದೆ. ತೋರುವಂಥ ಈ ಪ್ರಪಂಚವು ಸತ್ಯವೋ? ಮಿಥ್ಯವೋ? ಇದರಲ್ಲಿ ಸುಖವುಂಟೋ? ದುಃಖವುಂಟೋ? ಎಂಬುದು ತಿಳಿಯದು. ಇಂದು ಇದ್ದುದು ನಾಳೆ ಇರುವುದಿಲ್ಲ; ನಾಳೆ ಇದ್ದದ್ದು ನಾಡದು ಇರುವುದಿಲ್ಲ. ಹೀಗೆ ವಿಚಿತ್ರತರವಾದ ಗಾರುಡಿ ಆಟದಂತೆ ಕ್ಷಣ ಕ್ಷಣಕ್ಕೆ ಬದಲಾಗುತ್ತಿದೆ. ಈ ಪ್ರಪಂಚ. ಎಲ್ಲಿಂದ ಬಂದೆನು? ಎಲ್ಲಿಗೆ ಹೋಗುವೆನು? ಎಂಬುದನ್ನು ಅರಿಯರು ಸಾಮಾನ್ಯ ಜನರು. ತಾನು ಯಾರೆಂದು ಗುರುಮುಖದಿಂದ ತಿಳಿದುನೋಡದೆ, ಈ ಪ್ರಪಂಚವೇನೆಂಬುದನ್ನು ಗೊತ್ತುಹಚ್ಚದೆ, ಇದರಲ್ಲಿ ಸುಖವುಂಟೋ ದುಃಖವುಂಟೋ ಎಂಬುದನ್ನು ಪರೀಕ್ಷೆಮಾಡಿ ನೋಡದೆ, ಶಿವಧ್ಯಾನ ಮಾಡದೆ, ಶಿವಮಂತ್ರ ನುಡಿಯದೆ ಇದ್ದವರು ಹುಟ್ಟಿನ ಮೂಲವನ್ನು ತಿಳಿಯರು. ಸುಮ್ಮನೆ ಹುಟ್ಟಿಬಂದು, ಸುಮ್ಮನೆ ಸತ್ತು ಹೋಗುವುದು ಸುಜ್ಞಾನವೆ? ಇದು ಸರಿಯಾಗಿ ಕಾಣುವುದೆ? ಮೇಲಾಗಿ ಈ ಅಮೂಲ್ಯವಾದ ಮನುಷ್ಯ ಜನ್ಮವು ಸುಲಭವಾಗಿ ಬಂದಿಲ್ಲ. ಜಾತಿಗೊಂದರಂತೆ ಎಲ್ಲಾ ಜಾತಿಯ ಗಿಡ : ಬಳ್ಳಿಗಳಾಗಿ ಹುಟ್ಟಿಬೆಳೆದು, ಜನ್ಮನೀಗಿ, ಹೇಸಿಗೆಯಲ್ಲಿರುವ ಹುಳು ಮೊದಲಾಗಿ ಎಲ್ಲ ಜಾತಿಯ ಜೀವಿಗಳಾಗಿ ಸತ್ತು ಕೊನೆಗೆ ಮಾನವನಾಗಿ ತನ್ನ ತಾನು ಅರಿತು, ದುಃಖಮಯವದ ಈ ಸಂಸಾರದೊಳಗಿನಿಂದ ಪಾರಾಗಿ, ತನ್ನ ಪಾದಾರವಿಂದವನ್ನು ಕಂಡು ಸುಖಿಯಾಗಿರಲೆಂದು ಕರುಣಾಕರನಾದ ಶಿವನು ಮಾನವನಿಗೆ ಅರಿವಿನ ಜನ್ಮವನ್ನು ದಯಪಾಲಿಸಿರುವನು. ಇಂಥ ಜನ್ಮವನ್ನು ವೃಥಾ ಕಳೆದುಕೊಂಡರೆ, ನಾನಾಯೋನಿಗಳಲ್ಲಿ ಹುಟ್ಟಿ ದುಃಖವನ್ನು ಅನುಭವಿಸಬೇಕಾಗುವುದು. ಆದ ಕಾರಣ, ತಿಳಿದವರು ಈ ಮಾಯಾ ಪ್ರಪಂಚಕ್ಕೆ ಒಳಗಾಗದೆ, ಶಿವಪೂಜೆ, ಶಿವಭಜನೆ, ಶಿವಧ್ಯಾನವನ್ನು ಮಾಡಿ ಸದ್ಗತಿಯನ್ನು ಹೊಂದುವರು. ದೊತೆ, ನಾನು ಈಗಿಂದೀಗಲೇ ಈ ನನ್ನ ವೀಣೆಯಿಂದ ಶಿವನಾಮವನ್ನು ನುಡಿಸುತ್ತ ಶಿವನ ದರ್ಶನಕ್ಕಾಗಿ ತೆರಳುವೆನು.

ದೂತೆ : ಯಾಕಾಗಬಾರದು; ಹೋಗುವಂಥವರಾಗಿರಿ.

ನಾರದ :

ಪದ : ತಾಳ ತ್ರಿತಾಳ : ರಾಗ ಮಿಶ್ರಕಾಪಿ

ನಮಿಸುವೆ ಶಂಕರಾssss (ದುಗುಣ)

ಏರು : ನಮಿಸುವೆ ಈಶ, ಹಿಮಗಿರಿವಾಸ

ಮನ್ಮಥ ಮದವಿನಾಶ ನಾಶ
ಪಾಲಿಸೊ ಎನ್ನ ಪಾರ್ವತೀರಮಣ
ಪಾವನತರ ತ್ರಿನಯನ ನಯನ
ಪಾವನಗಾತ್ರss ಪಾವಕನೇತ್ರss
ಪಾಲಿಸೊ ಎನ್ನನು ಗುರುನಾಥಾ, ನಿರುತ ನಮಿಸುವೆ.

ಕೈಲಾಸ ಪ್ರವೇಶ

(ಪಾರ್ವತೀ ಪರಮೇಶ್ವರರು ಮಂಡಿಸಿದ್ದಾರೆ. ನಾರದನ ಆಗಮನ)

ನಾರದ : ಪತಿತ ಪಾವನ ಶಂಕರಾ, ತಮ್ಮ ಪವಿತ್ರ ಪಾದಕ್ಕೆ ಈ ದೀನ ನಾರದನು ಅಭಿನಂದಿಸುತ್ತಾನೆ.

ಪರಮಾತ್ಮ : ಏಳು ನಾರದಾ, ಎನ್ನ ಪಾದದಲ್ಲಿಟ್ಟ ಉನ್ನತ ಭಕ್ತಿಯಿಂದ ನೀನು ಧನ್ಯನೇ ಸರಿ. ನಿನ್ನ ಸದ್ಭಕ್ತಿಗೆ ಸಂತುಷ್ಟನಾಗಿರುವೆನು. ಈ ಆಸನದಲ್ಲಿ ಕೂಡ್ರುವಂಥವನಾಗು.

ನಾರದ : ಯಾಕಾಗಬಾರದು; ಜಗತ್ತಿಗೆ ಮೂಲ ಕಾರಣಳಾದ ಪಾರ್ವತಿದೇವಿಯವೇ, ತಮ್ಮ ಪಾದಕ್ಕೆ ನಮಸ್ಕಾರ ಮಾಡುತ್ತೇನೆ.

ಪಾರ್ವತಿ ದೇವಿ : ಮಗನೇ ನಾರದಾ. ನಿನಗೆ ಸದಾ ಶುಭವಾಗಲಿ! ಏಳು, ಈ ಆಸನದಲ್ಲಿ ವಿಶ್ರಮಿಸು.

ನಾರದ : ಯಾಕಾಗಬಾರದು.

ಪರಮಾತ್ಮ : ನಾರದಾ, ಸರ್ವವೂ ಕ್ಷೇಮವಷ್ಟೇ?

ನಾರದ : ಸ್ವಾಮೀ, ಕರುಣಾಸಾಗರಾ. ತಮ್ಮ ಚರಣಾಶ್ರಿತರಿಗೆ ಕಷ್ಟದ ಕಲ್ಪನೆ ಕನಸಿನಲ್ಲಿಯೂ ಆಗಲಾರದು. ಎಲ್ಲ ರೀತಿಯಿಂದಲೂ ಕ್ಷೇಮವಿದೆ.

ಪರಮಾತ್ಮ :

ಪದ. ತಾಳ ತ್ರಿತಾಳ : ರಾಗ ಮಿಶ್ರಕಾಪಿ
ಎತ್ತಲಿಂದ ಬಂದಿ ನೀ ಮುನಿನಾಥಾ
ಏನು ತಂದಿ ಲೋಕದ ವಿಶೇಷವಾರ್ತಾ
ಮುನಿಕುಲಸ್ತೋಮಾ ಲೋಕವು ಕ್ಷೇಮಾ
ಇರುವರೆ ನುಡಿಯುತ ಶಿವನಾಮಾ
ಸರ್ವರು ಧರ್ಮಾಚರಣೆಯ ನೇಮಾ
ಪಾಲಿಸುತಲೀ ಅಂದಿನ ಪ್ರೇಮಾ
ಕರ್ಮವು ಅಳಿದು ಧರ್ಮವು ಬೆಳೆದು
ಸರ್ವಜನರು ಭಕ್ತಿಯ ತಳೆದು
ಇರುವರೇ ಸರಸಾ ಫಲಪುರದರಸಾ
ನುಡಿಗಳೇ ಸ್ಮರಿಸುತಾ ಸುಖವಾಸಾ

ನಾರದಾ, ಇಂದು ಎತ್ತಲಿಂದ ಬಂದೆ? ಯಾವ ಲೋಕದಲ್ಲಿ ಸಂಚರಿಸಿದೆ? ಯಾವವಿಶೇಷ ವರ್ತಮಾನವನ್ನು ತಂದೆ? ಭೂಲೋಕ, ಭುವರ್ಲೋಕ, ಸ್ವರ್ಲೋಕಾದಿ ಮೇಲಿನ ಏಳು ಲೋಕಗಳಲ್ಲಿ ಮತ್ತು ಅತಳ : ವಿತಳ : ಸುತಳಾದಿ ಕೆಳಗಿನ ಏಳು ಲೋಕಗಳಲ್ಲಿ ಸದ್ಧರ್ಮವು ಸರಿಯಾಗಿ ಸಾಗಿರುವುದೋ ಹೇಗೆ? ಅಧಮರು ಯಾವ ಲೋಕದಲ್ಲಿಯಾದರೂ ಹುಟ್ಟಿ ಧರ್ಮಕ್ಕೆ ಬಾಧೆಯನ್ನು ತರುತ್ತಿರುವರೋ ಹೇಗೆ? ಬಿತ್ತರಿಸುವಂಥವನಾಗು.

ನಾರದ : ಸಚ್ಚಿದಾನಂದ ಮೂರ್ತಿಯೇ, ಸರ್ವಾಂತರ್ಯಾಮಿಯೇ, ಸರ್ವವ್ಯಾಪಕನೂ ಸರ್ವಜ್ಞನೂ ಆದ ನೀನು ಅರಿಯದ ವಿಷಯ ಯಾವುದು? ನೀನು ಇಲ್ಲದ ಸ್ಥಾನ ಯಾವುದು? ನಿನ್ನಿಂದ ಆಗದ ಕಾರ್ಯ ಯಾವುದು? ಎಳ್ಳುಗೊನೆ, ಮುಳ್ಳುಮೊನೆ ಮೊದಲು ಮಾಡಿಕೊಂಡು ಎಲ್ಲದರಲ್ಲಿಯೂ ತುಂಬಿಕೊಂಡಿರುವ ಸ್ವಾಮಿಯೇ, ತಾವೇ ಕೂತು ಎಲ್ಲೆಲ್ಲಿ, ಏನೇನು ನಡೆದಿದೆಯೆಂದು ಕೇಳುವುದು ವಿಚಿತ್ರವಲ್ಲವೆ? ಒಡೆಯರ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಕೊಡುವುದು ಪಾದಸೇವಕನ ಕರ್ತವ್ಯ. ನಾನು ಸಂಚರಿಸಿದ ಲೋಕಗಳಲ್ಲಿ ಕಂಡ ಕೌತುಕವನ್ನು ಸನ್ನಿಧಿಗೆ ಬಿನ್ನವಿಸುತ್ತೇನೆ ಕೇಳುವಂಥವರಾಗಿರಿ.

ಪರಮಾತ್ಮ : ನಾರದಾ, ಅದೇನಿರುವುದು ಹೇಳುವಂಥವನಾಗು.

ನಾರದ : ದಯಾಪರ ಮೂರ್ತಿಯೇ, ತ್ರಿಲೋಕ ಸಂಚಾರಿಯಾದ ನಾನು ತಿರುಗುತ್ತಾ ತಿರುಗುತ್ತಾ, ಮುಕ್ತಿಲೋಕಕ್ಕೂ ನಾಗಲೋಕಕ್ಕೂ ಮಧ್ಯಸ್ಥವಾದ ಭೂಲೋಕಕ್ಕೆ ಹೋಗಿದ್ದೆನು. ಕೃತಯುಗದಲ್ಲಿ ಧರ್ಮವು ಒಂದು ಕಾಲೂ ಕುಂಟಿಲ್ಲದೆ ನಾಲ್ಕು ಕಾಲುಗಳನ್ನೂರಿ ಚೆನ್ನಾಗಿ ನಡೆಯುತ್ತಿತ್ತು. ಮುಂದೆ ತ್ರೇತಾಯುಗದಲ್ಲಿ ಒಂದು ಕಾಲಿಗೆ ಮೂರ್ಖರ ಸುಳವು ಎಂಬ ಮುಳುವು ಸರಿದು ಒಂದು ಕಾಲು ಕುಂಟುಬಿದ್ದು ಮೂರೇ ಕಾಲನ್ನೂರಿ ಮುಗ್ಗರಿಸುತ್ತ ನಡೆಯಹತ್ತಿತ್ತು. ಮುಂದೆ ದ್ವಾಪರಯುಗದಲ್ಲಿ ಅಧರ್ಮದ ಆರ್ಭಟವೆಂಬ ಅರ್ಧಾಂಗವಾಯು ಹತ್ತಲು ಆ ಧರ್ಮ ದೇವತೆಯ ಅರ್ಧ ಶರೀರವೇ ಒಣಗಿ ಹೋಗಿ, ಏಳುತ್ತ ಬೀಳುತ್ತ ನಡೆಯಹತ್ತಿತು. ಮುಂದೆ ಕಲಿಯುಗದಲ್ಲಿ, ಕರ್ಮವೆಂಬ ಕ್ಷಯರೋಗ ಹತ್ತಿ, ಪಾಪ! ಆ ಧರ್ಮ ದೇವತೆ ಎಳೆದೆಳೆದು ಹಾಕುವ ಈ ಎರಡು ಕಾಲುಗಳಲ್ಲಿ ಒಂದು ಕಾಲು ಕುಂಟುಬಿದ್ದು, ಒಂದೇ ಕಾಲನ್ನೂರಿ ನಡೆಯಹತ್ತಿದಳು. ಮುಂದೆ ಕಲಿಯ ಪ್ರಾಬಲ್ಯ ಹೆಚ್ಚಾಗಲು ಇದ್ದದ್ದೊಂದು ಕಾಲು ಸಹ ಮುರಿದು ಮೂಲಿಗುಂಪಾಗಿ ಬಿದ್ದು, ತುಚ್ಛ ಜನರ ತುಳಿದಾಟದಲ್ಲಿ ಸಿಕ್ಕು ಶಿವನೇ ನೀನೇ ಗತಿ ಎಂದು ಶಿವನಿಗೆ ಮೊರೆಯಿಡಲು ಆಗಅಲ್ಲಮಪ್ರಭುವೆಂಬ ಅವತಾರಿ ಪುರುಷನು ಜನಿಸಿ ಆ ಮುಪ್ಪಿನ ಧರ್ಮದೇವತೆಯನ್ನು ಉದ್ಧಾರ ಮಾಡಲು ಸಿದ್ಧನಾಗಿದ್ದಾನೆ. ಮಹಾಪ್ರಭೋ, ಆ ಮಹಾತ್ಮನ ಮಹಿಮೆಯನ್ನು ಎಷ್ಟೆಂದು ಬಣ್ಣಿಸಲಿ!

ಪರಮಾತ್ಮ : ನಾರದಾ, ಮತ್ತೇನು ವಿಶೇಷ?

ನಾರದ : ಸ್ವಾಮಿ, ಹೇಳುತ್ತೇನೆ, ಕೇಳಿರಿ :

ಪದ : ತಾಳ ಕೇರವಾ : ರಾಗ ಮಿಶ್ರಕಾಪಿ

ಅಲ್ಲಮಪ್ರಭು ಎಂಬ ಸದ್ಗುರುನಾಥ
ಮೂರು ಲೋಕದಲ್ಲಿ ಪ್ರಖ್ಯಾತಾ
ಅವತರಿಸಿರುವನು ಜಗದ್ಭರಿತಾ
ಅವನಿಂದ ಪಾಪ ಆದಿತೊ ಲೋಪಾ
ದೇವಾ ಪಾಲಿಸೊ ಗುರುಕುಲದೀಪಾ, ನಿರ್ಲೇಪಾ 1

ಪಾವನಾದಿತು ಗುರು ಶಿವನಿಂದಲಿ
ಜಗನ್ಮಾಯಾರಹಿತ ಗುರುವಿನ ಲೀಲಾ
ಹೊಗಳಲು ಯಾರಿಗೂ ವಶವಲ್ಲಾ
ಫಲಪುರನೆಲ್ಲಾ, ಸಿದ್ಧೇಶ ಬಲ್ಲಾ
ಕಂಡ ಕೌತುಕವಿದು ನತಪಾಲಾ, ಸಟಿಯಲ್ಲಾ2

ಸ್ವಾಮೀ, ಭೂಮಿಯನ್ನು ಉದ್ಧಾರ ಮಾಡಲಿಕ್ಕೆ ಅವತರಿಸಿದ ಸದ್ಗುರು ಅಲ್ಲಮನ ಅಗಾಧ ಮಹಿಮೆಯನ್ನು ಬಣ್ಣಿಸುವುದು ಸಾವಿರಾರು ಮುಖವುಳ್ಳ ಆದಿಶೇಷನಿಗೂ ಅಸಾಧ್ಯ. ಹೀಗಿರುವಾಗ, ಒಂದು ಮುಖವುಳ್ಳ ನಾನು ಆತನನ್ನು ಬಣ್ಣಿಸಲಿಕ್ಕೆ ಹೇಗೆ ಸಮರ್ಥನಾದೇನು? ಸೂರ್ಯನು ಉದಯವಾದ ಕೂಡಲೇ ಕಗ್ಗತ್ತಲೆಯು ಸದ್ದಿಲ್ಲದೆ ಅಡಗುವಂತೆ, ಆ ಮಹಾತ್ಮನು ಭೂಲೋಕದಲ್ಲಿ ಅವತರಿಸಿದ ಕೂಡಲೆ ಲೋಕದಲ್ಲಿ ಹಬ್ಬಿದ ಅಜ್ಞಾನವೆಂಬ ಕತ್ತಲೆ ಅಡಗಿತು. ಕಳ್ಳಸುಳ್ಳರ ಸುಳಿದಾಟವೇ ಇಲ್ಲದಂತಾಗಿ ಎಲ್ಲಿ ನೋಡಿದರೂ ಶಿವಭಜನೆ, ಶಿವಪೂಜೆ, ಶಿವಧ್ಯಾನ, ಶಿವಪುರಾಣಶ್ರವಣವೇ ನಡೆದಿರುವುವು. ಕಾಲು ಮುರಿದು ಮೂಲಿಗುಂಪಾಗಿ ಬಿದ್ದ ಧರ್ಮದೇವತೆಯು ಈಗ ತನ್ನ ನಾಲ್ಕೂ ಪಾದಗಳಲ್ಲಿ ಚೈತನ್ಯ ಪಡೆದು ಮತ್ತೆ ಸಂಚಾರ ಮಡುತ್ತಿರುವಳು. ಪ್ರಭೋ, ಮಾಯಾರಹಿತನಾದ ಅಲ್ಲಮಪ್ರಭು …..

ಪಾರ್ವತಿ : ನಾರದಾ, ಏನೆಂದು ನುಡಿವೆ?

ನಾರದ : ತಾಯಿ, ಈಗ ಭೂಮಿಯಲ್ಲಿ ಅವತಾರ ಮಾಡಿದ ಅಲ್ಲಮಪ್ರಭು ಮಾಯೆಯನ್ನು ಮೆಟ್ಟಿನಿಂದ ಮಹಾತ್ಮನೆಂದು ನುಡಿವೆನು.

ಪಾರ್ವತಿ : ಛೀ ಪಾಪಾತ್ಮ, ಹೇಳುತ್ತೇನೆ ಕೇಳು.

ನಾರದ : ತಾಯಿ, ಅದೇನಿರುವುದು ಹೇಳುವಂಥವರಾಗಿರಿ.

ಪದ : ತಾಳ ಕೇರವಾ : ರಾಗ ಮಿಶ್ರಕಾಪಿ (ಚಕ್ಕಡ)

ಛೀ ಛೀ ಪಾಪಿ ನಾರದಾ ಏನಂದಿ
ಮಾಯೆಗೆಲಿದ ವೀರನಾದ ಈ ಜಗದಿ॥

ಕಾಯವ ಅಳಿದು ಮೋಹದ ತುಳಿದು
ನಡೆವ ವೀರರು, ಜಗದೊಳಗಿಂದು
ಇರುವರೆ ಅಧಮ, ಛೀ ಪಾಪಾತ್ಮ
ನುಡಿಯದಿರೆನ್ನೊಳು ಒಣಹಮ್ಮಾ1

ಅವ ಯಾವ ಚದುರ, ಮಾಯೆಗೆ ಇದಿರ
ನಿಲ್ಲುವ ಅಲ್ಲಮ ಗಂಭೀರ
ಬಿಡು ಬಡಿವಾರಾ, ಎನ್ನುವೆ ಇದಿರಾ
ನುಡಿಯಲು ನಾಚಿಕಿಲ್ಲವೆ ಕ್ಷುದ್ರಾ2

ಎಲೋ ಬಡಿವಾರದ ನಾರದಾ, ಇದೆ ಈಗ ಮಾಯೆಗೆ ವಶನಾಗದೆ, ಮಾಯೆಗೆ ಮೀರಿ ನಿಂತವನೆಂದು ಬಡಿವಾರ ಕೊಚ್ಚುತ್ತಿದ್ದೆಯಲ್ಲ! ಅವರಾರು? ಅವನ ಹೆಸರನ್ನು ಹೇಳು, ನೋಡೋಣ.

ನಾರದ : ತಾಯಿ ಮಾಯೆಗೆ ಒಳಗಾಗದೆ, ಮಯೆಯ ಎದೆಯನ್ನು ಮೆಟ್ಟತಕ್ಕವನೆಂದು ಆಗಲೇ ನಾನು ಹೇಳಿದ ಆ ಮಹಾಪುರಷನ ಹೆಸರು ಅಲ್ಲಮಪ್ರಭುರಾಯ.

ಪಾರ್ವತಿ : ಛೀ ನೀಚಾ ಏನು ಮಾತಾಡಿದಿ? ಹೊನ್ನು ಹೆಣ್ಣು ಮಣ್ಣುಗಳ ಮೇಲೆ ಆಸೆ ಇಡದೆ, ಮಾಯೆಗೆ ಒಳಗಾಗದೆ ಮೀರಿ ನಿಂತವರು ಎಲ್ಲಾದರೂ ಇದ್ದುದುಂಟೆ? ಹರಿ ಹರ ಬ್ರಹ್ಮರು ಸಹ ಹೆಣ್ಣಿನ ಮೋಹದಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಹೀಗಿರಲು ಆವನಾವನೋ ಅಲ್ಲಮಪ್ರಭು ಮಾಯೆಗೆ ಮೀರಿ ನಿಂತವನು! ಅವನ ಹೆಸರನ್ನು ನನ್ನೆದುರಿಗೆ ಹೇಳಲು ನಿನಗೆ ನಾಚಿಕೆ ಬರುವುದಿಲ್ಲವೆ? ಮಾಯೆಗೆ ಮೀರಿ ನಿಂತವನೆಂದು ನೂಡಿದರಾರು? ಈ ಮಾತನ್ನು ಆಡಿದವನು ಆ ಅಲ್ಲಮನೋ ಅಥವಾ ನೀನೋ? ನಿಜವಾಗಿ ಅಂದವರಾರು?

ನಾರದ : ತಾಯಿ, ಅಂದವರ ಹೆಸರು ಹೇಳಿದರೆ ನೀನೇನು ಮಾಡಬಲ್ಲೆ?