ಮಾ. : ಪದ : ತಾಳಕೇರವಾ : ರಾಗಮಿಶ್ರಕಾಪಿ,

ಸ್ವಯಂ ಜ್ಯೋತಿ ನಾ ಮಾನಿನಿಯೆ॥
ನನಗಿಲ್ಲ ತಂದೆ ತಾಯಿ, ಜಗಕೆಲ್ಲ ನಾನೇ ತಾಯಿ
ಸರ್ವ ಜಗಕೆ ಸುಖದಾಯಿ, (ಚಲತಿ) ಮಾನಿನಿಯೆ …. 1

ತೋರುವಂಥ ಈ ಜಗವೆಲ್ಲಾ, ಇರುವದು ಮಾಯೆಯ ಲೀಲಾ
ಸರ್ವಕ್ಕೂ ನಾನೇ ಮೂಲ, (ಚಲತಿ) ಮಾನಿನಿಯೇ …. 2

ಕಾರಣೊಂದು ಇರಲದ ಕಳಿಸಿ, ಭೂಮಿಯೊಳು ನಾವತರಿಸಿ
ಬಂದೆ ಮೋಹದಲ್ಲಿ ಜನಿಸಿ (ಚಲತಿ) ಮಾನಿನಿಯೇ …. 3

ದೂತೆ ನನಗೆ ತಂದೆ ತಾಯಿಗಳಿಲ್ಲ. ಇಂಥವರಿಗೆ ಹುಟ್ಟಿದವಳೆಂದು ಯಾರೂ ಹೇಳುವವರಿಲ್ಲ. ತೋರುವಂಥ ಈ ಪ್ರಪಂಚವೆಲ್ಲ ನಾನೇ ಅಗಿರುವೆನು. ಮಾಯಾ ರೂಪವೆಂದರೆ ನನ್ನ ರೂಪವೇ ಆಗಿದೆ. ನನ್ನ ಪುಣ್ಯಶಕ್ತಿಯಾದ ಪಾರ್ವತಿ ಇರುವದು ಕೈಲಾಸದಲ್ಲಿ, ನಾನೀಗ ಒಂದು ಉದ್ದೇಶಕ್ಕಗಿ ಈ ಬನವಾಸಿ ಪಟ್ಟಣದ ಮಮಕಾರ ರಾಜನ ಹೊಟ್ಟೆಯಲ್ಲಿ ಹುಟ್ಟಿರುವೆನು. ಆದ್ದರಿಂದ ನನಗೆ ಮಮಕಾರ ಮಹಾರಾಜನೇ ತಂದೆ. ಅವನ ಪಟ್ಟದ ರಾಣಿಯಾದ ಮೋಹಿನಿದೇವಿಯೇ ನನ್ನ ತಾಯಿ. ತಿಳಿಯಿತೇ ದೂತೆ?

ದೂ. : ಈ ಬನವಾಸಿ ಪಟ್ಟಣದ ಮಮಕಾರ ಮಹಾರಾಜನ ಮಗಳು ಮಾಯಾದೇವಿ ಎಂಬುದು ಗೊತ್ತಾಯಿತು. ಆದರೆ ತಾವು ಸಿಂಗಾರ ಮಾಡಿಕೊಂಡು ಈ ಸಭಾಸ್ಥಾನಕ್ಕೆ ಬಂದ ಕಾರಣವೇನು?

ಮಾ. : ದೂತೆ, ನನ್ನ ತಂದೆ – ತಾಯಿಗಳು ನನ್ನ ಹುಟ್ಟಿನ ಉದ್ದೇಶವನ್ನು ಅರಿಯದೆ ಪ್ರಾಯಕ್ಕೆ ಬಂದ ನನಗೆ ಲಗ್ನ ಮಾಡಬೇಕೆಂದು ಯೋಗ್ಯ ವರನನ್ನು ಹುಡುಕುತ್ತಿದ್ದರು. ಆಗ ನಾನು ಅವರಿಗೆ ಹೇಳಿದ್ದೇನೆಂದರೆ – ತಾವು ನನಗಾಗಿ ಪತಿಯನ್ನುಹುಡುಕುವ ಪ್ರಯಾಸಕ್ಕೆ ಬೀಳಬೇಡಿರಿ. ನನ್ನ ಪತಿಯನ್ನು ನಾನೇ ಹುಡುಕುಕೊಳ್ಳುತ್ತೇನೆ – ಎಂದು ಗಟ್ಟಿಯಾಗಿ ಹೇಳಿದೆ. ಅದರಂತೆ ನಾನು ಪತಿಯ ಶೋಧದಲ್ಲಿಯೇ ಇದ್ದೇನೆ. ಅವನಿಂದು ಇದೇ ಊರಿಗೆ ಬಂದಿರುವನೆಂದು ದಾಸಿಯೊಬ್ಬಳು ಹೇಳಿದಳು. ಅವನನ್ನು ಹ್ಯಾಗಾದರೂ ಮಾಡಿ ಅರಮನೆಗೆ ಕರೆದು ತರಬೇಕೆಂದು ಬಂದಿದ್ದೇನೆ.

ದೂ. : ಅವನು ಇದೇ ಊರಿಗೆ ಬಂದಿದ್ದರೆ, ಎಲ್ಲಿ ಇರುವನಂತೆ?

ಮಾ. : ಮಧುಕೇಶ್ವರನ ಗುಡಿಯಲ್ಲಿ ಇಳಿದಿರುವನಂತೆ!

ದೂ. : ಬಿಡೆ, ಗುಡಿಯಲ್ಲಿ ಯಾರೂ ಇಲ್ಲ. ಯಾವನೋ ಒಬ್ಬ ಮದ್ದಳೆಯ ಸಂನ್ಯಾಸಿ ಬಂದಿರುವನಂತೆ!

ಮಾ. : ದೂತೆ, ನಾನು ಆ ಸಂನ್ಯಾಸಿಯನ್ನೇ ಲಗ್ನವಾಗತಕ್ಕವಳು.

ದೂ. : ತಾವು ಸಂನ್ಯಾಸಿಯನ್ನು ಲಗ್ನವಾಗುವಿರಾ? ತಮಗೆ ಹುಚ್ಚು ಹಿಡಿದಂತೆ ಕಾಣುತ್ತದೆ. ಸಂನ್ಯಾಸಿಯನ್ನು ಲಗ್ನವಾಗಿ ಯವ ಸೌಭಾಗ್ಯವನ್ನು ಗಳಿಸುವಿರಿ?

ಮಾ. : ದೂತೆ, ನೀನು ಆ ಸಂನ್ಯಾಸಿಯನ್ನು ಸರಿಯಾಗಿ ನೋಡಿಲ್ಲ. ಅವನಂಥ ಸುಂದರನು ಎಲ್ಲಿಯೂ ಇಲ್ಲ. ಆ ಸಂನ್ಯಾಸಿಯನ್ನು ನನಗೆ ಅನುಕೂಲ ಮಾಡಿಕೊಟ್ಟರೆ ನಿನಗೆ ಯೋಗ್ಯ ಬಹುಮಾನ ಕೊಡುವೆನು.

ದೂ. : ಬಿಡೆ, ಬಾವಾನ್ನ ಆಗಿ ಏನ ಬಳಕೊಂತಿ?

ಮಾ. : ದೂತೆ, ಅವನು ಬಾವಾ ಅಲ್ಲ; ಅವನೊಬ್ಬ ಮಹಾಶರಣ. ಅವನಿಗೆ ಸರಿ ಸಮಾನರಾದ ಸುಂದರ ಪುರುಷರು ಜಗತ್ತಿನಲ್ಲಿ ಯಾರೂ ಇಲ್ಲ. ಕಾಮನನ್ನು ಅವನ ಮುಂದೆ ನಿವಾಳಿಸಿ ಚೆಲ್ಲಬೇಕು.

ದೂ. : ಅಷ್ಟು ಸುಂದರನೇ ಅವನು! ನಾನು ಹೇಳುವಷ್ಟು ಹೇಳಿದೆ. ನಂದೇನು ಹೋಗುವುದು. ನನಗೆ ಬಹುಮಾನ …..

ಮಾ. : ದೂತೆ, ನಿನಗೆ ಬಹುಮಾನ ಮುಕ್ಕಟ್ಟs ಕೊಡಬೇಕೇನೇ?

ದೂ. : ಈ ಮುಕ್ಕಟ್ಟ ಕೊಡದಿದ್ರ, ಕೆಲಸ ಪುಕ್ಕಟ್ಟ ಮಾಡಬೇಕೇನು?

ಮಾ. : ದೂತೆ, ಹಿಡಿ ಈ ಬಹುಮಾನ! ಇದಲ್ಲದೆ ಈ ಭರ್ಜರಿ ಪಟಕಾ, ಬನಾತಿನ ಅಂಗಿ, ಈ ಕರವತ್ತಕಾಟ ಧೋತರ : ಇವನ್ನು ತೆಗೆದುಕೊಂಡು ಮಧುಕೇಶ್ವರ ದೇವಾಲಯಕ್ಕೆ ಹೋಗಿ, ಈ ಪಟ್ಟಣದ ದೊರೆಯಾದ ಮಮಕಾರ ಮಹಾರಾಜನ ಮಗಳು, ಮಾಯಾದೇವಿಯು ತಮಗೆ ಕಾಣಿಕೆಯಾಗಿ ಕೊಟ್ಟಿರುವಳೆಂದು ಹೇಳು. ಕಾವಿಯ ಡಗಲಿಗಳನ್ನು ಕಳೆದೊಗೆದು, ಇವುಗಳನ್ನು ಧರಿಸಿಕೊಂಡು ರಾಜ ಮಂದಿರಕ್ಕೆ ಬರಬೇಕೆಂದು ತಿಳಿಸು, ಅವನನ್ನು ಒಡಂಬಡಿಸಿ ಕರೆದುಕೊಂಡು ಬಾ. ಮಾಯಾದೇವಿಯು ತಮ್ಮ ಬರುವಿಕೆಗಾಗಿ ಹಾತೊರೆಯುವಳೆಂದು ಹೇಳು, ತಿಳಿಯಿತೇ?

ದೂ : ಯಾಕಾಗಬಾರದು. ಹೋಗುತ್ತೇನೆ.

* * *

ದೇವಾಲಯ ಪ್ರವೇಶ

ಪದ : ತಾಳ : ಕೇರಾವ; ರಾಗ : ಜಯಜಯವಂಶಿ

ಅಲ್ಲಮ : ಭ್ರಮೆಯಿಂದ ತೋರ್ವಸಂಸಾರಾ
ಕಾಣುವುದು ಎಂಥ ಮನೋಹರಾ, ಹರಾಹರಾs ಶಂಕರಾ ॥

ಏರು : ಜ್ಞಾನಹೀನರು ಕಾಣದಾದರು ಹೀನ ಸಂಸ್ಕೃತಿಯ ನೆಲೆಯಾ
ಘೋರ ಬಲೆಯಾ ಪ್ರಾಬಲ್ಯವೆನಿತು ಈ ಕಲಿಯಾ                    1

ಆರು ಹಿತರು ಈ ಮೂರು ಮಂದಿಯೊಳು
ಭೂರಿ ನಂಬಿಹರು ನರರು ಪಾಮರರು ತ್ರಿತಾಪದಲ್ಲಿ ಬೇಯುವರು …. 2

ವಿಚಿತ್ರ ಜಾಲದ ಈ ಮಾಯಾ ಪ್ರಪಂಚವು ಆಜ್ಞಾನಿಗಳ ಕಣ್ಣಿಗೆ ಎಷ್ಟು ಮನೋಹರವಾಗಿ ಕಾಣುತ್ತಿದೆ! ಎಳ್ಳಷ್ಟಾದರೂ ಸುಖವಿಲ್ಲದ ಈ ಕಷ್ಟಮೂಲ ಸಂಸಾರವು ಅಜ್ಞಾನವಶದಿಂದ ಎಷ್ಟು ಮಹತ್ವದ್ದಾಗಿ ಕಾಣುತ್ತದೆ! ತನ್ನ ಹಿಂದಿನ ಹಿಂಗಾಲನ್ನು ಹಿಡಿದು ನುಂಗುತ್ತಿರುವ ಹಾವಿನ ಎಚ್ಚರವಿಲ್ಲದೆ ತನ್ನ ಮುಂದಿರುವ ನೊಣಗಳಿಗಾಗಿ ಜಪ್ಪಿಸಿಕೊಂಡು ಕೂತಿರುವ ಕಪ್ಪೆಯಂತೆ, ಮತಿಹೀನರಾದ ಮನುಷ್ಯರು ತಮ್ಮ ಹಿಂದೆ ಆಯುಷ್ಯವೆಂಬ ಸರ್ಪವು ಸಾವಕಾಶವಾಗಿ ತಮ್ಮನ್ನೇ ನುಂಗುತ್ತಿರುವುದೆಂಬ ಎಚ್ಚರವಿಲ್ಲದೆ ಶಿವಶಿವಾ! ಹೊನ್ನು : ಹೆಣ್ಣು : ಮಣ್ಣೆಂಬ ನೊಣಗಳಿಗೆ ಜಪ್ಪಿಸಿಕೊಂಡು ಕೂತು ಎಂಥ ಅನರ್ಥಕ್ಕೆ ಗುರಿಯಾಗುತ್ತಿರುವರು!

ದೂತೆ : (ಬಂದು) ಸಾಧುಗಳಾದ ತಾವು ದಾರು? ತಮ್ಮ ದೇಶವಾವುದು?

. : ನಾವು ಯಾರಿದ್ದರೇನು? ಆ ಭಾಗ್ಯ ನಿನಗೇಕೆ ಬೇಕು?

ದೂ. : ಆ ಭಾಗ್ಯ ಬೇಕಾದ್ದರಿಂದಲೇ ಬಂದಿರುವೆನು.

. : ಅದೇಕೆ ಬೇಕಾಗಿದೆ? ನಿನಗೆ ನನ್ನ ಹೆಸರು ಬೇಕೆ? ನನ್ನ ಹೆಸರು ಅಲ್ಲಮ ಶಿವಯೋಗಿ.

ದೂ. : ತಮ್ಮಾ, ನಿನಗೆ ಎಂಥಾ ಚಲೋ ಹೆಸರು ಇರುವುದೊ? ನಿನಗೆ ತಾಯಿ : ತಂದೆಗಳು ಇರಬೇಕಲ್ಲವೆ?

. : ದೂತೆ ನನಗೆ ತಂದೆಯೂ ಇಲ್ಲ, ತಾಯಿಯೂ ಇಲ್ಲ.

ದೂ. : ತಾಯಿ : ತಂದೆಗಳಿಲ್ಲದೆ ನೀ ಹ್ಯಾಗೆ ಹುಟ್ಟಿದಿ? ಆಕಾಶದಿಂದ ಕಪ್ಪೆ ಬಿದ್ದ ಹಾಗೆ ಧೊಪ್ಪನೆ ಬಿದ್ದೇನು? ಇರಲಿ, ನಿನಗೆ ಹೆಂಡತಿಯಾದರೂ ಇರುವಳೋ ಇಲ್ಲವೋ?

. : ದೂತೆ, ನನಗೆ ಹೆಂಡತಿ ಇಲ್ಲ. ಸಾಧುಗಳಿಗೆ ಹೆಂಡಿರ ಅವಶ್ಯಕತೆ ಇರುವುದಿಲ್ಲ. ಇರಲಿ, ಈಗ ನನ್ನಲ್ಲಿ ನಿನ್ನ ಕೆಲಸವೇನು?

ದೂ. : ತಮ್ಮಾ, ನಿನಗೊಂದು ಉತ್ತಮ ಸುದ್ದಿ ತಂದಿದ್ದೇನೆ.

. : ಉತ್ತಮ ಸುದ್ದಿ ಅಂದರೆ ಎಂಥಾದ್ದು?

ದೂ. : ಮೈನೆರೆದದ್ದು, ಗಂಡು ಹುಟ್ಟಿದ್ದು ಇಂಥ ಉತ್ತಮ ಸುದ್ದಿ ತಂದವರಿಗೆ ಏನು ಕೊಡುತ್ತಾರೆ?

. : ಯೋಗ್ಯ ಬಹುಮಾನ ಕೊಡುತ್ತಾರೆ. ಸುದ್ದಿ ತಂದವ ಗಂಡಸು ಇದ್ದರೆ ದೋತರ ಪಾವಡ ಕೊಡುತ್ತಾರೆ. ಹೆಂಗಸು ಇದ್ದರೆ ಸೀರ ಕುಪ್ಪಸಗಳನ್ನು ಕೊಡುತ್ತಾರೆ.

ದೂ. : ಅದರಂತೆ ನೀನಾದರೂ ನನಗೆ ಒಳ್ಳೆಯ ಸಂಭಾವನೆಯನ್ನು ಕೊಡಬೇಕು; ಅಂಥಿಂಥ ಬಹುಮಾನ ಕೊಟ್ಟರೆ ನಡೆಯದು. ನಾನು ತಂದ ಸುದ್ದಿ ಬಹಳ ಒಳ್ಳೆಯದಿದೆ.

. : ಅಂಥ ಸುದ್ದಿ ಏನಿರುವುದು?

ದೂ. : ತಮ್ಮಾ, ಆ ಸುದ್ದಿ ….

. : ಏನಿರುವುದು ಬೇಗನೆ ಹೇಳು.

ದೂ. : ಈ ಪಟ್ಟಣದ ಮಮಕಾರ ಮಹಾರಾಜನ ಮಗಳು ತಮಗೆ ಕಾಣಿಕೆಯಾಗಿ ಈ ವಸ್ತ್ರಾಭರಣಗಳನ್ನು ಕೊಟ್ಟಿರುವಳು. ತಾವು ಇವುಗಳನ್ನು ಧರಿಸಿಕೊಂಡು ರಾಜ ಮಂದಿರಕ್ಕೆ ಬರಬೇಕೆಂದು ಹೇಳಿಕಳಿಸಿರುವಳು.

. : ಛೀ, ಇದೇ ಏನು ನಿನ್ನ ಶುಭ ಸುದ್ದಿ? ಹೇಳುತ್ತೇನೆ ಕೇಳು :

ದೂ. : ಅದೇನಿರುವುದು ಹೇಳಿರಿ

ಪದ : ತಾಳ ಕೇರವಾ; ರಾಗ ಅಸ್ಸಾ

. : ಛೀ ಛೀ ಭ್ರಷ್ಟಳೆ ಅತಿ ಪಾಪಿಷ್ಟಳೆ
ಎಂಥಾ ಅಪದ್ದ ನುಡಿ ಆಡಿದಿಯೇ॥

ಜಾರನ ಸರಿಯೆನ್ನ ಮಾಡಿದಿಯೇ
ಛೀ ಹೊಯಿಮಾಲಿ ವಿಷಯದ ಮಾಲಿ
ಹಾಕಬೇಕೆನ್ನುವಿ ನನ್ನ ಮ್ಯಾಲಿ ಬಲ್ಲೆ ಬಲಿ        1

ಮಾಯೆಯ ಕರಹಿಡಿ ಮಾರನ ಸುಖಪಡಿ
ಎಂಬುವ ಈ ನುಡಿ ಬೋಧಿಸುವಿ
ಯೋಗಿಯ ಕೋಪಕೆ ಈಡಾಗಿ ನೀ ಕೆಡವಿ      2

ಎಲೆ ಮೂಢ ಸ್ತ್ರೀಯಳೇ. ಇದೇ ಹೌದಲ್ಲೋ ನಿನ್ನ ಶುಭವಾರ್ತೆ? ನಿನ್ನ ಅರಸನೆಂದರೆ ಯಾರು? ಅವನ ಮಗಳಾದ ಮಾಯೆ ಎಂದರೆ ಯಾರು? ಆಕೆ ನನ್ನನ್ನು ಕರೆಸಲಿಕ್ಕೆ ಕಾರಣವೇನು? ನಾರಿ ಎಂದರೆ ಹೊಲಸೆದ್ದು ನಾರುವ ಬಚ್ಚಲ ಮೋರಿ! ಹೀಗಿರಲು, ನೀನು ನನ್ನ ಮುಂದೆ ಈ ರೀತಿ ಮಾತಾಡಲು ನಾಚಿಕೆ ಬರುವುದಿಲ್ಲವೆ? (ಹೊಡೆಯುವನು)

ದೂ. : ಸ್ವಾಮೀ, ಸಂಭಾವನೆ ಸಾಕು! ಹೋಗುತ್ತೇನೆ.

* * *

ಮಾಯಾ ಮಂದಿರ ಪ್ರವೇಶ

ಮಾಯೆ : ದೂತಿಯು ಇನ್ನೂ ಯಾಕೆ ಬಂದಿರಲಿಕ್ಕಿಲ್ಲ? ಅವಳು ಅಲ್ಲಮನನ್ನು ಕರೆದು ತರುವಳೋ ಇಲ್ಲವೋ ನೋಡಬೇಕು ….. ಇದೇನು ಆಕೆಯೇ ಬಂದಳಲ್ಲ! ದೂತೆ, ಬಂದೆಯಾ? ಅವರೆಲ್ಲಿ?

ದೂತೆ : ಬಂದೆ ನಮ್ಮವ್ವಾ ನಾನೊಬ್ಬಾಕೆ;

ಮಾಯೆ : ಬಾರs, ನಿನ್ನ ದಾರೀನ ನೋಡುತ್ತಿದ್ದೆ. ಹೋದ ಕೆಲಸ ನೆಟ್ಟಗ…?

ದೂತೆ : ನೆಟ್ಟಗs, ಪಸಂದ ಆತು! ಕಸರೇನೂ ಉಳಿಯಲಿಲ್ಲ.

ಮಾಯೆ : ಹೇಳ, ಆದದ್ದಾದರೂ ಏನು?

ದೂತೆ : ಹೋದ ಕೂಡಲೇ ಉಪಚಾರ ಆತು! ಹಾಂಗs ಎಳಿ ತಗದು ತಮ್ಮ ಹೆಸರು ಹೇಳಿದೆ ಎಂಥಾ ಒಳ್ಳೇ ಸುದ್ದಿ ತಂದೀದಿ ನಿನಗೆ ಏನಾದರೂ ಇನಾಮ ಕೊಡುತ್ತೇನೆ : ನಿಲ್ಲು : ಅಂದ. ಬಿಡಲೇ ಇಲ್ಲ.

ಮಾಯೆ : ದೂತೆ, ಏನ ಇನಾಮ ಕೊಟ್ಟ?

ದೂತೆ : ಅದೇನೋ ಕೈಯಾಗೊಂದು ಸುಳ್ಳಿ ಇತ್ತು. ಕೊಟ್ಟ ನನಗೊಂದು ಸುಳ್ಳಿ ಹೋಳಿಗಿ! ಸುಳ್ಳಿ ಹೋಳಿಗಿ ತಿಂದು ಸುಳ್ಳ್ಯಾಗಿಬಿದ್ದೆ.

ಮಾಯೆ : ದೂತೆ, ಅಷ್ಟಪ್ರೀತಿ ಆದನೇನು ನಿನ್ನ ಮ್ಯಾಲ!

ದೂತೆ : ಆ ಪ್ರೀತಿ ಎಷ್ಟಂತ ಹೇಳ್ಲೆ ನಮ್ಮವ್ವಾ! ನೀನಲ್ಲಿಗೆ ಹೋದ ಮೇಲೆ ಎಲ್ಲಾ ಗೊತ್ತಾಗತೈತಿ.

ಮಾಯೆ : ಯಾಕೆ, ಅವ ನನ್ನನ್ನೇ ಅಲ್ಲಿಗೆ ಕರೆದನೇ? ನನ್ನ ಮೇಲೆ ಅವನ ಪ್ರೀತಿ …?

ದೂತೆ : ನಿನ್ನ ಸುದ್ದಿ ಅವನ ಮುಂದೆ ತೆಗೆದರೆ ಸಾಕು ಹಿರಿಹಿರಿ ಹಿಗ್ಗಿ ಬರ‌್ರಿ ಕೂಡ್ರಿ : ಅಂತ ಇಲ್ಲದ ಉಪಚಾರ ಮಾಡತಾನ.

ಮಾಯೆ : ದೂತೆ, ಹಾಗಾದರೆ ಅಲ್ಲಿಗೆ ಹೋಗಿ ಅವನನ್ನು ಕರೆದುಕೊಂಡು ಬರೋಣ ನಡೆ.

ದೂತೆ : ನಾ ಒಲ್ಲೆ ನಮ್ಮವ್ವಾss

ಮಾಯೆ : ಯಾಕೆ?

ದೂತೆ : ಯಾಕಂದ್ರ, ಏನ ಹೇಳಲಿ? ಹೋದ ಗಳಿಗ್ಗೆ ಸುಳ್ಳಿಹೋಳಿಗಿ ನೀಡಾಕs ಸುರುವು ಮಾಡತಾನ. ಯಾರು ಉಂಡಾರು ಸುಮ್ಮಕ? ಎಷ್ಟ ಹಸ ಅಷ್ಟ ಹಸ! ಉಣ್ಣೂದಿಲ್ಲ ಅಂದ್ರ ಕಣ್ಣ ಕಿಸಿತಾನ ನೋಡೆವ್ವಾ.

ಮಾಯೆ : ಹ್ಯಾಗಾದರೂ ಮಾಡಿ ಅವನು ನನ್ನೆಡೆಗೆ ಸಾಗಿ ಬರುವಂತೆ ಮಾಡಲಿಕ್ಕೇ ಬೇಕು. ಇದಕ್ಕೆ ನಿನ್ನ ಸಹಾಯ ಬೇಕೇಬೇಕು.

ದೂತೆ : ಯಾಕಾಗಬಾರದು ಹೋಗೋಣ ನಡೀರೆವ್ವಾ.

***


ದೇವಾಲಯ ಪ್ರವೇಶ

ಪದ : ತಾಳಕೇರವಾ; ರಾಗಮಿಶ್ರಪೀಲು
ಮಾಯೆ. :

ಚಾರು ವದನ ಮಾರಮದನ
ಆರು ನೀನು ಪೇಳನಗೆ॥

ರತಿವರನ ಕಾಮಾ ಹುಣ್ಣಿವೆ ಸೋಮಾ
ಸದ್ಗುಣ ಧಾಮಾ ನಿನ್ನಯ ನಾಮಾ
ತ್ವರದಿ ಭರದಿ ಹರದಿಗೆ ಪೇಳೊ
ಕ್ಷೇಮವನು ಪ್ರೇಮವನು ಪೊಂದುವೆನು         1

ರತಿಸಮ ಸತಿಯಾ ಅತಿಗುಣವತಿಯಾ
ಹಿಂತದಿಂದಲಿ ಕೂಡುವದನು ನೀ ತೊರೆದು
ದೊರೆಯೇ ಸರಿಯೇ ಹರೆಯದ ಜೀವ
ಮರುಗಿಸುವಾ ಸೊರಗಿಸುವಾ ಈ ಪರಿಯಾ    2

ಸತಿಯಳನಾಗಿ ಅತಿಸುಖಭೋಗಿ :
ಸುವಂಥ ಕಾಲದಿ ಈ ಶಿವಯೋಗಿ
ರೂಪಾ ಭೂಪಾ ಏತಕೆ ಧರಿಸಿದಿ
ಕಾರಣವ, ಪೇಳೆನಗೆ ಪ್ರೇಮದೊಳು             3

ಸುಂದರಾಂಗ ನೀನು ಯಾರು? ನಿನ್ನ ಹೆಸರೇನು? ನಿನ್ನ ದೇಶವಾವುದು? ಮೊಗ ಮೀಸೆ ಒತ್ತಿಬರುತ್ತಿರುವ ಈ ಹೊಸ ಪ್ರಾಯದಲ್ಲಿ ಕುಸುಮ ಗಂಧಿಯರ ಕೂಡ ವಿಲಾಸುಖವನ್ನು ಭೋಗಿಸದೆ, ಈ ಸನ್ಯಾಸಿ ವೇಷವನ್ನು ಏಕೆ ಧರಿಸಿರುವಿ? ಮದುವೆಯಾಗೆಂದು ಒತ್ತಾಯಪಡಿಸುವ ತಂದೆ : ತಾಯಿಗಳು ನಿನಗಿಲ್ಲವೆ? ಈ ಹರೆಯದ ಜೀವವನ್ನು ಏನು ಕಾರಣ ಸೊರಗಿಸುತ್ತಿರುವಿ? ಎನ್ನ ಮುಂದೆ ಹೇಳಬಾರದೆ?

. : ವಿಚಿತ್ರಪ್ರಾಣಿ! ವಿಲಾಸಪತಿ!! ನೀನು ಯಾರು? ನಿನ್ನ ಹೆಸರೇನು?

ಮಾ. : ನನ್ನ ಹೆಸರು ಮಾಯೆ. ತಮ್ಮ ಹೆಸರು?

. : ನನಗೆ ಅಲ್ಲಮಶಿವಯೋಗಿ ಅನ್ನುವರು. ಲೋಕವೇ ನನ್ನ ಮನೆ. ಲೋಕ ಸಂಚಾರವೇ ನನ್ನ ಕಾರ್ಯ. ನನ್ನ ವಾಸಸ್ಥಾನವು ಇಲ್ಲಿಯೇ ಎಂದು ಹೇಳಲಿಕ್ಕೆ ಬಾರದು. ನಾನೊಬ್ಬ ಶಿವಯೋಗಿ! ಮದುವೆಯ ವಿಷಯಕ್ಕೂ ನನಗೂ ಬಹು ದೂರ. ಸತಿಯೇ ಸರ್ವ ದುಃಖಕ್ಕೆ ಮೂಲಕಾರಣ! ಅಂತೆಯೇ ನಾನು ಮದುವೆಯ ವಿಚಾರವನ್ನೇ ಬಿಟ್ಟುಕೊಟ್ಟಿದ್ದೇನೆ.

ಮಾ. : ಸುಂದರಾಂಗಾ, ಈ ಮರಳುತನ ನಿನಗೆ ಹೇಗೆ ಬಂತು? ಚೆನ್ನಯರ ಕೂಡ ಚೆನ್ನಾಟವಾಡಲಿರುವ ಈ ಚಿನ್ನದಂಥ ಪ್ರಾಯವನ್ನು ಮಣ್ಣುಗೂಡಿಸುವ ದುರ್ಬುದ್ಧಿಯನ್ನು ನಿನಗೆ ಯಾರು ಕಲಿಸಿದರು, ಹೇಳು? ಎಳೆಯ ಬಾಳೆಯ ಸುಳಿಯಂತಿರುವ ಸುಕುಮಾರಾ, ದೇಹಕ್ಕೆ ಸುಗಂಧ ದ್ರವ್ಯವನ್ನು ಲೇಪಿಸಿಕೊಂಡು ಸುಖಬಡುವದನ್ನು ಬಿಟ್ಟು, ಈ ಅಮಂಗಲ ಬೂದಿಯನ್ನು ಬಡಿದುಕೊಳ್ಳುವ ಬುದ್ದಿಯನ್ನು ನಿನಗಾರು ಬೋಧಿಸಿದರು? ಎಣ್ಣೆ ಹಚ್ಚಿ ನುಣ್ಣಗೆ ತೀಡಿದರೆ ಜಂಬು ನೇರಿಲ ಹಣ್ಣಿಗಿಂತಲೂ ನುಣುಪಾಗಿ ಕಾಣುವ ನಿನ್ನ ಕೂದಲು ಜಡೆಗಟ್ಟಿ ಅಂದಗೆಟ್ಟಿರುವವು! ಅದಲ್ಲದೆ ನೀ ತೊಟ್ಟ ಈ ಕಾವಿಯ ಬಟ್ಟೆ ಚಂದ್ರನಿಗೆ ಮೋಡ ಮುಸುಕಿದಂತಾಗಿ ನಿನ್ನ ಸುಂದರ ರೂಪವನ್ನೇ ಮರೆಮಾಡಿದೆ. ತೊಟ್ಟ ಬಟ್ಟೆ ಬರೆಗಳನ್ನು ಆ ಕಡೆಗೆ ಚೆಲ್ಲು. ಹಿಡಿ, ಈ ಭನಾತಿನ ಅಂಗಿ ಜರತಾರೀ ಪಟಕಾ. ಇವನ್ನು ತೊಟ್ಟುಕೊಂಡು ಅಂಚಿನ ದೋತರವನ್ನುಟ್ಟುಕೊಂಡು ರಾಜಮಂದಿರಕ್ಕೆ ನಡೆ ಅಲ್ಲಿ ನಿನಗೆ ರಾಜ ಮರ್ಯಾದೆ ಕಾದು ನಿಂತಿದೆ. ಸ್ವರ್ಗಸುಖವೇ ನಿನ್ನ ಬಳಿಗೆ ಸುಳಿಯಲಿದೆ! ಬಾ, ರಮಣಾ.

. : ನಾರೀಮಣಿಯೇ ಹೇಳುತ್ತೇನೆ ಕೇಳು.

ಮಾ. : ಅದೇನಿರುವದು ಹೇಳು.

ಪದ : ತಾಳ ಕೇರವಾ; ರಾಗ ಅಸ್ಸಾ
. :  ಸರಿ ಸರಿಯಲೆ ನಾರಿ ವಯ್ಯರಿ ಬರುವರೆ
ಶಿವಯೋಗಿ ಮ್ಯಾಲೇರಿ॥

ಏರು :

ಸಂಸಾರದ ಸುಖವಿದು ಸುಳ್ಳೆಂದು
ವಿಷಯದ ವಾಸನೆಯನೆಲ್ಲ ಆತಿಗಳೆದು
ನಡೆವಂಥ ಸಾಧು ವೈರಾಗ್ಯ ಬಂಧು
ಛಂದವೇ ಸುರತಕೆ ಕರೆವುದು (ಚಲತಿ) ವಯ್ಯರಿ …. 1

ಆರು ನೀ ಪೇಳಲೆ ಹೊಯಿಮಾಲಿ
ತಲೆಗೇರಿ ದಹಿಸುವೆ ಕಾಮನ ಜ್ವಾಲಿ
ಎಲೆ ನೀನಿಂದು ಕಾಡುವಿ ಬಂದು
ಮೂಢಳೆ ಪೋಗಿನ್ನು ನೀ ತೊರೆದು (ಚಲತಿ) ವಯ್ಯರಿ …. 2

ಛೀ ಮೂಢಳೆ, ದೂರ ಸರಿದು ನಿಲ್ಲು! ಸತ್ಯ ಶರಣರ ಮೇಲೆ ಇಂಥ ಹುಡುಗಾಟಿಕೆಯನ್ನು ನಡೆಸಲು ನಿನಗೆ ನಾಚಿಕೆ ಬರುವುದಿಲ್ಲವೆ? ಈ ಸಂಸಾರ ಸುಖ ಹೇಯವೆಂದು ತಿಳಿದು, ಅದನ್ನು ಸಮೂಲವಾಗಿ ಅಳಿದು, ಸಹಜಾನಂದ ಸುಖದಲ್ಲಿ ಲೋಲಾಡುವ ಶಿವಯೋಗಗಳಿಗೆ ಇಂಥ ಪೊಳ್ಳು ವೈಭವಗಳು ಸರಿದೋರಬಲ್ಲವೇ? ಹೆಣ್ಣಿಗೆ ಒಪ್ಪುವ ಮರ್ಯಾದೆಯನ್ನು ಮೂಲೆಗೊತ್ತಿ, ಉಟ್ಟಿರುವದನ್ನು ಕಳಚಿಟ್ಟು ಉಧೋ ಎಂದು ಕೂಗುತ್ತಿರುವ ಹೊಯಮಾಲಗಿತ್ತಿ ನೀನ್ಯಾರು? ಸರಿದು ನಿಂತು ಮಾತನಾಡು.

ದೂ. : ಅಯ್ಯಯ್ಯ! ಇದೆಂಥ ಗಂಡಸು!! ದುಂಡು ಲಿಂಬೀ ಹಣ್ಣಿನಂಥ, ತುಂಬುಹರೆಯದ ಹೆಣ್ಣು ದುಂಬಾಲ ಬಿದ್ದರೆ ಹೆಣವೆದ್ದು ಕ್ಯಾಕರಿಸಬಲ್ಲದು. ಇದು ಹುಟ್ಟಾ ಹೆಂಗಸರ ಮಾರಿ ನೋಡಿದ್ಹಾಂಗ ಕಾಣುವುದಿಲ್ಲ ಕಸೂತಿ ಸಾಲ್ಯಾಗ ಮಲಗಂದ್ರ ಮಸೂತಿ ಮೂಲ್ಯಾಗ ಬೀಳೋದು!

. : ಛೀ ಛೀ ಮೂರ್ಖಳೆ, ಎಂಥ ಅಸಹ್ಯ ಮಾತುಗಳನ್ನಾಡುತ್ತಿ? ನಿನ್ನ ನಾಲಿಗೆಯೇ ನಿನ್ನ ಕುಲವನ್ನು ನಿರ್ಧರಿಸುತ್ತದೆ.

ಮಾ. : ಕೋಮಲಾಂಗ, ತಿಳಿಯದೆ ಪರರ ಮೇಲೆ ಯಾಕೆ ಸಿಟ್ಟೆಗೇಳುವಿ? ನಾನು ಯಾರೆಂಬುದು ಗೊತ್ತಿಲ್ಲವೇ? ಸಾಮಾನ್ಯ ಹೆಂಗಸು ನಾನಲ್ಲ! ಕಣ್ಣಿಗೆ ತೋರುವ ಪ್ರಪಂಚವೆಲ್ಲ ನಾನೇ ಆಗಿರುವೆನು ನನ್ನ ಹೆಸರು ಮಾಯಾದೇವಿ. ನಿನ್ನನ್ನೇ ಬಯಸಿ ಈ ಪೆಟ್ಟಣದ ಮಮಕಾರ ಮಹಾರಾಜರ ಹೊಟ್ಟೆಯಲ್ಲಿ ಹುಟ್ಟಿ ಬಂದಿರುವೆನು. ಈ ನಿನ್ನ ಸುಂದರ ಶರೀರವನ್ನು ಏಕೆ ಬಳಲಿಸುವಿ? ಮೃಷ್ಟಾನ್ನವನ್ನುಂಡು ಪುಷ್ಟವಾಗಿ ಬೆಳೆದು ಅಷ್ಟ ಭೋಗದಲ್ಲಿರುವುದನ್ನು ಬಿಟ್ಟು, ಗಡ್ಡೆ ಗೆಣಸುಗಳನ್ನು ತಿನ್ನುತ್ತ ಶರೀರವನ್ನು ಕಂದಿಸಿ ವೃಥಾ ನೊಂದುಕೊಳ್ಳುವಿಯೇಕೆ? ಕಟೆದ ಗೊಂಬೆಯಂತಿರುವ ಹೆಣ್ಣಿನೊಡನೆ ಸರಸ ಸಲ್ಲಾಪದಲ್ಲಿರುವುದನ್ನು ಬಿಟ್ಟು ಬೂದಿಯನ್ನು ಬಡೆದುಕೊಂಡು ಏಕಾಕಿಯಾಗ ತಿರುಗುವುದು ಮರುಳತನವಲ್ಲವೇ? ನನ್ನ ಮಾತು ನಡೆಸಿಕೊಡು ಮದುವೆಯಾಗುವೆ ನೆಂದು ವಚನನೀಡು. ಆಗ ನಮ್ಮ ಜೀವನ ಸುಖದ ಸುಪ್ಪತ್ತಿಗೆಯಾಗುವುದು.

(ಸಮೀಪಕ್ಕೆ ಹೋಗುವಳು)

. : ಎಲೆ ಹೆಣ್ಣೆ, ತೊಲಗಾಚೆಗೆ ನಿನ್ನ ಮುಖದರ್ಶನವೇ ನನಗೆ ಬೇಡವೆಂದು ಪದೇ ಪದೇ ಹೇಳಿದರೂ ಬಣ್ಣದ ಮಾತುಗಳನ್ನು ಸುರಿಸುತ್ತ ಮೈಮೆಲೆ ಬರುತ್ತಿರುವಿ. ಶಿವ ಶಿವಾ. ಇದೆಂಥ ಮಾಯಾಮೋಹ!! ಮಯಾಪಾಶದಲ್ಲಿ ಸಿಕ್ಕು ಘಾಸಿಯಗುತ್ತಿರುವ ಮರುಳು ಮಾನವರನ್ನು ಎಚ್ಚರಿಸಿ ಶಿವರಹಸ್ಯವನ್ನು ಬಿತ್ತರಿಸಿ ಮುಕ್ತಗೊಳಿಸಬೇಕೆಂದು ಅವತರಿಸಿ ಬಂದಿರುವ ನನ್ನನ್ನು ಈಕೆ ತನ್ನ ಮಾಯಾಜಾಲದಲ್ಲಿ ಎಳೆಯಲಿಕ್ಕೆ ಹವಣಿಸುತ್ತಿರುವಳು. ಎಲೆ ಮಾಯೆ, ನಾನು ನಿನ್ನ ಮಾಯಾಜಾಲಕ್ಕೆ ಬೀಳತಕ್ಕವನಲ್ಲ. ಸುಜ್ಞಾನಿಗಳು ಹೆಣ್ಣನ್ನು ಹೇಸಿಗೆಗಿಂತಲೂ ಕಡಿಮೆಯೆಂದು ತಿಳಿಯುವರು.

ಮಾ. : ಹೇ ಮರುಳು ಅಲ್ಲಮಾ, ಏನೆಂದು ನುಡಿದೆ?

. : ಹೆಣ್ಣು ಹೇಸಿಗೆಗಿಂತಲೂ ಕಡಿಮೆ ಅಂದೆ.

ಮಾ. : ಸುಳ್ಳು! ಹೆಣ್ಣು ಹೆಜ್ಜೇನಿಗಿಂತಲೂ ಸಿಹಿ!! ಅದರ ಸಿಹಿಯನ್ನು ನೀನೇನು ಬಲ್ಲೆ?

. : ಏನು, ಹೆಣ್ಣಿನಲ್ಲಿ ಅಷ್ಟೊಂದು ಸವಿ ಇದೆಯೇ?

ಮಾ. : ಆ ಸವಿ ಅಷ್ಟು ಇಷ್ಟು ಎನ್ನಲಾರೆ ಅದು ತುಂಬಿ ತುಳುಕುವ ಹೆಜ್ಜೇನಿಗಿಂತಲೂ ಹೆಚ್ಚು ಸವಿ ಇರುವುದು. ಸೂಕ್ಷ್ಮ ವಿಚಾರ ಮಾಡಿ ನೋಡಿದರೆ ಹೆಣ್ಣು ಬರಿ ಹೆಣ್ಣಲ್ಲ. ಕಲ್ಪವೃಕ್ಷದ ಹಣ್ಣು! ಸಕ್ಕರೆಯನ್ನು ಬಿಟ್ಟು ಸವಿಯನ್ನು ಹುಡುಕುವ ಮರುಳರಂತೆ, ಸುಖದ ಸುಗ್ಗಿಯಂತಿರುವ ಹೆಣ್ಣನು ಬಿಟ್ಟು ಮತ್ತೇತರಲ್ಲಿ ಹೆಚ್ಚಿನ ಸುಖವನ್ನು ಹುಡುಕುವಿ? ತಿಳಿದು ನೋಡಿದರೆ ಈ ಜಗತ್ತಿನಲ್ಲಿ ಹೆಣ್ಣೊಂದೇ ಆನಂದಾಯಕ ವಸ್ತು. ಇಂಥ ಪವಿತ್ರತಮವಾದ ಹೆಣ್ಣನ್ನು ಹೇಸಿಗೆಗಿಂತಲೂ ಕಡಿಮೆಯೆಂದು ನುಡಿಯುವ ನಿನ್ನ ಮೂರ್ಖತನಕ್ಕೆ ಮೇರೆಯೇ ಇಲ್ಲ.

. : ಎಲೆ ನೀಚಳೆ, ದುಃಖದಾಯಕ ಹೆಣ್ಣನ್ನು ಆನಂದ ಸ್ವರೂಪವೆಂದು ಬಣ್ಣಿಸುವ ನಿನ್ನ ಬಾಯ್ಬಡಕ ಮಾತಿಗೆ ಬೆಲೆಯೇ ಇಲ್ಲ.

ಮಾ. : ಅಲ್ಲೋ ಅಲ್ಲಮಾ, ಬರಿ ಬಾಯಿಂದ ಬಣ್ಣಿಸುವಳು ನಾನಲ್ಲ. ಹೆಣ್ಣಿನಿಂದ ದೊರೆಯುವ ಆನಂದವೇ ಮಿಗಿಲೆಂದು ಸಿದ್ಧಮಾಡಿ ಹೇಳಬಲ್ಲೆ. ಆ ಹೇಳಿಕೆ ಸರ್ವಜನ ಸಮ್ಮತವಾದರೆ ನನ್ನನ್ನು ಲಗ್ನವಾಗಲು ಒಪ್ಪಿಕೊ; ಇಲ್ಲವಾದರೆ ಬಿಡು. ಹೇಳುತ್ತೇನೆ ಕೇಳು.

. : ಅದೇನಿರುವುದು ಹೇಳಬೇಕು.

ಪದ : ತಾಳ ಕೇರವಾ; ರಾಗ ಭೈರವಿ

ಮಾ. : ಜಗದಿ ಆನಂದs ನಿಜದಿಂದss ನಾರಿವೃಂದ
ನಿಜದಿಂದ ನಾರಿವೃಂದ॥

ಸುದತಿ ಸಹವಾಸ ಅದು ಬಲು ಸೊಗಸ
ನಿಜದಿ ಕೈಲಾಸನಿಜದಿಂದ ನಾರಿವೃಂದ         1

ಕಂಡರೆ ಹರುಷ ಕಣ್ಣಿಗೆ ಸರಸ
ಕಂಡರೆ ಹರುಷ ಕಣ್ಣಿಗೆ ಸರಸ                    2

ಸುಲಿದಿಟ್ಟ ಹಣ್ಣಾ ನಲವಿನ ಹೆಣ್ಣಾ
ತಿಳಿಯೊ ಸುಗುಣಾನಿಜದಿಂದ ನಾರಿವೃಂದ     3

ಹೇ ಅಲ್ಲಮಾ, ಹೆಣ್ಣಿನಿಂದಾಗುವ ಆನಂದವನ್ನು ಬಣ್ಣಿಸಲು ಯಾರಿಗೂ ಸಾಧ್ಯವಿಲ್ಲ. ಸುಂದರಿಯಾದ ಹೆಣ್ಣನ್ನು ನೋಡಿದ ಕೂಡಲೇ ಕಣ್ಣಿಗೆ ಆನಂದ ಅವಳನ್ನು ಮುಟ್ಟಿದ ಕೂಡಲೇ ಮೈಗೆ ಆನಂದ. ಕೂಡಿದ ಕೂಡಲೇ ಮನಸ್ಸಿಗೆ ಆನಂದ. ಹೀಗೆ, ಯಾವ ರೀತಿಯಿಂದ ನೋಡಿದರೂ ಆನಂದವೇ ಆನಂದ! ಸೊಗಸಾದ ಹೆಣ್ಣು ನಿಜದ ಕೈಲಾಸ! ಇಂಥ ರಸಿಕ ಹೆಣ್ಣನ್ನು ಹೇಸಿಗೆಗಿಂತ ಕಡಿಮೆಯೆಂದು ನಿನ್ನಂಥ ಬುದ್ಧಿಯಿಲ್ಲದ ಬೂದಿಬಡಕ ದಾಸಯ್ಯಗಳು ಹೇಳುವರೇ ಹೊರತು, ಸಂಸಾರ ಸಾರವನ್ನರಿತ ಸವಿಗಾರರು ಹೇಳಲಾರರು. ಸುಂದರಾ, ನಿನ್ನ ಮರುಳತನವನ್ನು ಬಿಟ್ಟು ನನ್ನ ಸುಂದರಾಂಗವನ್ನು ಸ್ಪರ್ಶ ಮಾಡಿ ನೋಡು. ನಿನಗೆ ಆನಂದವಾಗದಿದ್ದರೆ ನನ್ನ ಮಾತು ಸುಳ್ಳೆಂದು ತಿಳಿ.

. : ಎಲೆ ಬಲಿಗಾರತಿ, ಎಂತಹ ಬಣ್ಣದ ಮಾತುಗಳನ್ನು ಸುರಿಸುತ್ತಿರುವಿ. ಈ ಪ್ರಪಂಚದಲ್ಲಿ ಹೆಣ್ಣು ಪ್ರತ್ಯಕ್ಷ ರಾಕ್ಷಸಿ! ಹೀಗಿದ್ದೂ ಅದನ್ನು ಸಕ್ಕರೆಗಿಂತಲೂ ಸವಿಯೆಂದು, ಅಮೃತಕ್ಕಿಂತಲೂ ಮಿಗಿಲೆಂದು ಹೇಳುವ ನಿನ ಹೊಯ್ಮಲಿತನ ನಾ ಬಲ್ಲೆ.

ಮಾ. : ಏನು? ಹೆಣ್ಣು ಪ್ರತ್ಯಕ್ಷ ರಾಕ್ಷಸಿಯೆ?

. : ಹೌದು ಪ್ರತ್ಯಕ್ಷ ರಾಕ್ಷಸಿ. ರಾಕ್ಷಸರಲ್ಲಿರುವ ದುರ್ಗುಣಗಳೆಲ್ಲ ಕೆಟ್ಟ ಹೆಣ್ಣಿನಲ್ಲಿ ಮನೆಮಾಡಿಕೊಂಡಿರುತ್ತವೆ ತಿಳಿಯಿತೇ?

ಮಾ. : ಅಲ್ಲಮಾ, ತಿಳಿಯುವುದು ಅದರಲ್ಲೇನಿ? ರಾಕ್ಷಸರು ಕೈಗೆ ಸಿಕ್ಕ ಪ್ರಾಣಿಗಳನ್ನು ಹಿಡಿದೆಳೆದು ನುಂಗಿ ನೀರು ಕುಡಿಯುವರು. ಅಂಥ ಅನರ್ಥ ಹೆಣ್ಣಿನಿಂದ ಆಗಬಲ್ಲದೆ?

. : ಅದಕ್ಕಿಂತಲೂ ಮಿಗಿಲಾದ ಅನರ್ಥ ಹೆಣ್ಣಿನಿಂದ ಆಗುತ್ತದೆ. ರಾಕ್ಷಸಿಯು ಕೈಗೆ ಸಿಕ್ಕ ಪ್ರಾಣಿಗಳನ್ನಷ್ಟೇ ಎಳೆದು ನುಂಗುತ್ತದೆ. ಆದರೆ ಹೆಣ್ಣು ಕೈಗೆ ಸಿಕ್ಕದ್ದನ್ನೂ ಕಣ್ಣಿಗೆ ಕಂಡದ್ದನ್ನೂ ಬಿಡದೆ ಎಳೆದುಕೊಂಡು ನುಚ್ಚುನುರಿ ಮಾಡುತ್ತದೆ.

ಮಾ. : ಎಂಥ ಸೋಜಿಗದ ಮಾತಿದು? ಅವಳು ಕಣ್ಣಿಗೆ ಕಂಡದ್ದನ್ನು ಹೇಗೆ ಎಳೆಯಬಲ್ಲಳು?

. : ಅವಳು ತನ್ನನ್ನು ನೋಡಿದ ಪುರುಷರ ಮನಸ್ಸನ್ನೇ ಅಪಹರಿಸುತ್ತಾಳೆ. ಅಂಥ ಅದ್ಭುತವಾದ ಶಕ್ತಿ ಹೆಣ್ಣಿನಲ್ಲಿ ಮನೆ ಮಾಡಿಕೊಂಡಿದೆ.

ಮಾ. : ಒಳ್ಳೇದು, ಮುಂದೇನು!

. : ಮಾತಾಡಿದರೆ ಹಣವನ್ನೇ ಸೆಳೆದುಕೊಳ್ಳುತ್ತಾಳೆ.