. : ಛೀ ಅಗ್ಗದ ಹೆಂಗಸೇ, ದೂರ ಸರಿದು ನಿಲ್ಲು; ಈಗ ಇನ್ನೊಮ್ಮೆ ಸ್ಪಷ್ಟ ಹೇಳು : ಮಾಯೆ ಸುಳ್ಳಲ್ಲವೆ?

ಮಾ. : ಸುಳ್ಳಲ್ಲ, ಸತ್ಯ! ಸುಳ್ಳಾಗಿದ್ದರೆ ತೋರಿಕೆ ಎಲ್ಲಿ ಇರುತ್ತಿತ್ತು?

. : ನೀನು ಸತ್ಯವಂತಳಾದರೆ ತೋರಿ ಅಡಗುವಿಯೇಕೆ? ಕಡು ದುರಾತ್ಮಳೇ, ನಿನ್ನ ಬಂಗಾಲಿ ಆಟದ ರಚನೆಗೆ ಮರುಳಾಗತಕ್ಕವನು ನಾನಲ್ಲ. ನೀನು ಕೆಲಕಾಲ ಸತ್ಯದಂತೆ ತೋರಿದರೂ ಕೊನೆಗೆ ಸುಳ್ಳೇ ಆಗುವಿ. ನೀನೊಂದು ಬರೀ ಭ್ರಮೆ! ಮೋಡಿಕಾರ ಆಟದಲ್ಲಿ ಅಸಂಖ್ಯ ನಗನಾಣ್ಯ ತೋರುವುದಿಲ್ಲವೆ?

ಮಾ. : ಹೌದು, ತೋರುವವು.

. : ಅವುಗಳನ್ನು ಕಂಡಾಕ್ಷಣವೇ ಜನರು ಆವನ್ನು ತೆಗೆದುಕೊಳ್ಳಲು ಏಕೆ ಹಾತೊರೆಯುವುದಿಲ್ಲ.

ಮಾ. : ಅವು ಕಣ್ಣಿಗೆ ನಿಜ ನಾಣ್ಯದಂತೆ ತೋರಿದರೂ ಅವು ನಿಶ್ಚಯವಾಗಿ ಮೋಸದ ನಾಣ್ಯಗಳು. ಆದ್ದರಿಂದಲೇ ಅವಕ್ಕೆ ಜನರು ಆಸೆಪಡುವುದಿಲ್ಲ.

. : ಮಾಯೆಯೂ ಅದರಂತೆಯೇ ಇದೆ. ಹೇಳುತ್ತೇನೆ ಕೇಳು;

ಮಾ. : ಅದೇನಿರುವುದು ಹೇಳು :

ಪದ : ತಾಳ ಕೇರವಾ; ರಾಗ ಭೈರವಿ

. : ಗಾರುಡಿ ಆಟ ತೋರುವಂಥ ಸರ್ವನೋಟ
ತೋರುವಂಥ ಸರ್ವನೋಟ. (ದುಗುಣ)
ಪ್ರಪಂಚ ಮಾಯೆ ಇದು ಒಣ ಮಾಯೆ
ಸುದತಿಮಣಿಯೆತೋರುವಂಥ ಸರ್ವನೋಟ    1

ಏರು : ಮಾಯೆಯ ಲೀಲಾ ಮಹೇಂದ್ರ ಜಾಲಾ
ಸುದತಿ ರನ್ನೆಯೆತೋರುವಂಥ ಸರ್ವನೋಟ    2

ಮಾಯೆಯ ಪೇಟೆ ಈ ಜಗಸೃಷ್ಟಿ
ಸುದತಿ ಮಣಿಯೆತೋರುವಂಥ ಸರ್ವನೋಟ   3

. : ಎಲೆ ಮಾಯೆ, ಮೋಡಿಕಾರ ಆಟದಲ್ಲಿ ತೋರುವ ಸುಳ್ಳು ನಾಣ್ಯದಂತೆ ಹೆಣ್ಣು : ಹೊನ್ನು : ಮಣ್ಣುಗಳಿಂದ ಕೂಡಿಕೊಂಡ ಈ ಮಾಯಾಪ್ರಪಂಚವು ಕೆಲಕಾಲ ನಿಜವೆಂದು ತೋರಿಬಂದರೂ ಕೊನೆಗೆ ಏನೂ ಉಳಿಯದಂತೆ ಮಾಯವಾಗುತ್ತದೆ. ಮಾಯವಾಗುವುದೇ ಮಾಯೆಯ ಸ್ವಭಾವ! ಈ ಸಂಸಾರವೊಂದು ಮಾಯೆಯ ಸಂತೆ! ಅಲ್ಲಿ ಹೆಂಡಿರು : ಮಕ್ಕಳು ಧನ : ಧಾನ್ಯ ಮುಂತಾದ ಸಕಲ ಸಾಮಾನುಗಳು ಕಣ್ಣಿಗೆ ಬಲು ಚೆಂದವಾಗಿ ಕಂಡರೂ ಕಟ್ಟಕಡೆಯಲ್ಲಿ ಕೈಬಿಟ್ಟು ಮಾಯವಾಗುವವು. ಈ ಸಂಸಾರವೆಂಬ ಮಾಯದ ಸಂತೆಯಲ್ಲಿ ತೋರುವ ಸುಳ್ಳು ರಚನೆಗೆ ಹುಚ್ಚರು ಮಾತ್ರ ಮನಸೋಲುವರು. ಬಲ್ಲವರು ಈ ಬಂಗಾಲೀ ಆಟದ ರಂಜನೆಗೆ ಎಂದೂ ಮರಳಾಗುವುದಿಲ್ಲ. ಭಕ್ತಿಯಿಂದ ಅಪ್ಪಿಕೊಂಡರೆ ಅಖಂಡ ಸುಖವನ್ನು ಕೊಡುವಂಥ ಶಿವಲಿಂಗವನ್ನು ಬಿಟ್ಟು ನಿನ್ನ ಹೇಸಿ ಅಂಗವನ್ನು ಅಪ್ಪಿಕೊಂಡರೆ ಆಗುವ ಲಾಭವೇನು? ಕ್ಷಣಿಕ ಸುಖ ಮಹಾಸುಖವೆನಿಸಲಾರದು. ಆಜ್ಞಾನಿಗಳಿಗೆ ಮೊದಲು ಸುಖವೆನಿಸಿದರೂ ಕೊನೆಗೆ ಅದು ದುಃಖದಾಯಕವಗಿಯೇ ಪರಿಣಮಿಸುವುದು. ಒಂದು ಗಳಿಗೆಯ ಸುಖಕ್ಕಾಗಿ ಮಳಿಗೆಯನ್ನು ಸುಟ್ಟಂತೆ ಈ ಸಂಸಾರ ಸುಖ! ಇಂಥ ಸುಖವನ್ನು ನೆಚ್ಚಿ ಮುಕ್ತಿ ಸಾಮ್ರಾಜ್ಯದ ಅಖಂಡ ಸುಖವನ್ನು ಬಿಡುವುದು ಒಳ್ಳೆಯದಲ್ಲ. ಸಂಸಾರವೊಂದು ಪಾಪದ ಕೂಪ! ಅದರಲ್ಲಿ ಬೀಳುವುದು ಒಳ್ಳೆಯದಲ್ಲ. ಸಂಸಾರವೊಂದು ಪಾಪದ ಕೂಪ! ಅದರಲ್ಲಿ ಬೀಳುವುದು ಚಂದವಲ್ಲ.
 ಮಾ. : ಅಲ್ಲಮಾ, ಯಾವುದರಲ್ಲಿ ಬೀಳುವುದು ಚಂದವಲ್ಲ?

. : ಪಾಪಕೂಪದಲ್ಲಿ ಬೀಳುವುದು ಚಂದವಲ್ಲ.

ಮಾ. : ಎಂಥಾ ವಿಚಿತ್ರ ಮಾತಿದು! ಪ್ರಪಂಚ ಮಾಡದವರಿಗೆ ಪಾಪ ಬರುವುದೆಂದು ಸಿದ್ಧಾಂತವಿರುವಾಗ, ಪ್ರಪಂಚ ಮಾಡಿದರೆ ಪಾಪ ಬರುತ್ತದೆಂದು ಹೇಳುವಿಯಲ್ಲ? ಈ ನಿನ್ನ ಹುಚ್ಚು ಮಾತಿಗೆ ಹುಚ್ಚರು ಸಹ ನಗಲಿಕ್ಕಿಲ್ಲವೆ?

. : ಎಂಥ ವಿಲಕ್ಷಣದ ಮಾತಿದು? ಪ್ರಪಂಚ ಮಾಡದವರಿಗೆ ಪಾಪ ಬರುವುದುಂಟೆ?

ಮಾ. : ಬರುವುದುಂಟು. ಆದ್ದರಿಂದಲೇ ನಾನು ಹಾಗೆ ಹೇಳುವುದು.

. : ಹೇಗೆ ಬರುವುದು?

ಮಾ. : ಚೆನ್ನಿಗರಾಯಾ, ಹೇಳುತ್ತೇನೆ ಚಿತ್ತಿವಿಟ್ಟು ಕೇಳು ಪರಮಾತ್ಮನು ಪ್ರಾಣಿಗಳಿಗೆ ಇಂದ್ರಿಯಗಳನ್ನು ಕೊಟ್ಟಿರುವುದು ಸುಖವನ್ನು ಪಡೆಯುವುದಕ್ಕಾಗಿ. ಅವುಗಳ ಉಪಯೋಗ ಮಾಡಿಕೊಳ್ಳದಿದ್ದರೆ ದೇವರ ಕಟ್ಟಳೆಯನ್ನು ಮುರಿದಂತಾಗುವುದಿಲ್ಲವೆ? ದೇವರ ಇಚ್ಛೆಯ ವಿರುದ್ಧ ವರ್ತಿಸುವುದು ಪಾಪಕಾರ್ಯವಲ್ಲವೆ? ಏಕೆ, ಸುಮ್ಮನೆ ನಿಂತೆ ದೆವ್ವ ಬಡಿದಂತೆ?

. : ಎಲೆ ತುಚ್ಛ ಮಾಯೆ, ಇಚ್ಚೆಗೆ ಬಂದಂತೆ ಮಾತಾಡಬೇಡ. ಇಂದ್ರಿಯಗಳೆಂದರೆ ಯಾವುವು?

ಮಾ. : ಕಣ್ಣು, ಕಿವಿ, ಮೂಗು, ನಾಲಿಗೆ, ತ್ವಚ : ಇವು ಐದು ಜ್ಞಾನೇಂದ್ರಿಯಗಳು, ವಾಕ್, ಪಾಣಿ, ಪಾದ, ಪಾಯು, ಉಪಸ್ಥ : ಇವು ಕರ್ಮೇಂದ್ರಿಯಗಳು. ಒಟ್ಟಿನಲ್ಲಿ ಇಂದ್ರಿಯಗಳು ಹತ್ತಾಗಿರುತ್ತವೆ.

. : ಇವುಗಳನ್ನು ಯಾವ ಕಾರ್ಯಕ್ಕಾಗಿ ಉಪಯೋಗಿಸಿಕೊಂಡು ಸುಖಪಡೆಯಲೆಂದು ಸ್ವಾಮಿ ಕೊಟ್ಟಿರುವನು?

ಮಾ. : ಹೇಳುತ್ತೇನೆ ಕೇಳು.

. : ಅದೇನಿರುವುದು ಹೇಳು.

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ

ಮಾ. : ಬಿಡು ಬಿಡು ನಿನ್ನನ್ಯಾಯಾ ಹೇ ಪ್ರಿಯಾ
ಅಪ್ಪಿಕೊಂಡು ಮುದ್ದಾಡೆನ್ನ ವರಕಾಯಾಬಿಡು ….. ॥

ಏರು : ಪಾಲಿಸಿರುವನೊ ಪಾರ್ವತಿ ವರನು
ಹತ್ತು ಇಂದ್ರಿಯಗಳನು ನವಸುಧೆಯ
ಇಂದ್ರಿಯ ಮುಖದಿ ಸಂಸಾರ ಸುಖದಿ
ಅನುಭವಿಸಲೆಂದು ಆ ಹರನುಬಿಡು ….                                 .1

ನೋಡಲು ನಯನಾ ಆಡಲು ರಸನಾ
ಕೂಡಿ ಸುಖಿಸಲು ಗುಹ್ಯವನಾ
ಸತ್ಸುಖ ಭೋಗಿಸುತ ಸುಖಿಯಾಗಿ
ಸಂಸಾರ ಸಾಗಿಸಲೆಂದು ತಾ ದಯದಿಬಿಡು ….. 2

ಸುಂದರಾಂಗಾ, ಕಣ್ಣು ಮೊದಲಾದ ಈ ಹತ್ತು ಇಂದ್ರಿಯಗಳನ್ನು ದೇವರು ಯಾವ ಉಪಯೋಗಕ್ಕೆ ಕೊಟ್ಟಿರುವೆನೆಂದರೆ ಸ್ಪಷ್ಟವಾಗಿ ಹೇಳುತ್ತೇನೆ ಕೇಳು; ಕೈಗಳನ್ನು ದುಡಿಯಲಿಕ್ಕೆ, ಕಾಲುಗಳನ್ನು ನಡೆಯಲಿಕ್ಕೆ, ಕಿವಿಗಳನ್ನು ಕೇಳಲಿಕ್ಕೆ, ನಾಲಿಗೆಯನ್ನು ರುಚಿ ನೋಡಲಿಕ್ಕೆ, ವಾಯುವನ್ನು ಮಲವನ್ನು ಹೊರಹಾಕಲಿಕ್ಕೆ, ಉಪಸ್ಥವನ್ನು ಮೂತ್ರ ವಿಸರ್ಜನೆ ಮತ್ತು ಸೃಷ್ಟಿ ನಿರ್ಮಾಣಕ್ಕೆಂದು – ಈ ಇಂದ್ರಿಯಗಳನ್ನು ದೇವರು ಕೊಟ್ಟಿರುವನು.ದೇವರು ಕೊಟ್ಟಿದನ್ನು ಮಾನವರು ಉಪಯೋಗಿಸದಿದ್ದರೆ ಅದು ಕೊಟ್ಟ ದೇವನಿಗೇ ಅಪಮಾನವಲ್ಲವೆ? ದೇವರ ಅಪ್ಪಣೆಯನ್ನು ಮೀರಿದವರು ಪಾಪಕ್ಕೆ ಗುರಿಯಗುವುದಿಲ್ಲವೆ?
. : ಛೀ ಮೂರ್ಖಳೆ, ಬಾಯಿ ಇರುವುದೆಂದು ಬಲ್ಲವರಂತೆ ಮಾತನಾಡಿದರೆ ತೀರಿತೇನು? ಪರಮಾತ್ಮನು ನೋಡಲಿಕ್ಕೆ ಕಣ್ಣು ಕೇಳಲಿಕ್ಕೆ ಕಿವಿ ಆಡಲಿಕ್ಕೆ ನಾಲಿಗೆ ನಡೆಯಲಿ ಕಾಲು ದುಡಿಯಲಿಕ್ಕೆ ಕೈ ಈ ರೀತಿ ಕೊಟ್ಟಿರುವನೆಂದು ಹೇಳಿದೆಯಲ್ಲ! ಇದೇನು ಸುಳ್ಳಲ್ಲ. ಆದರೆ ಸೃಷ್ಟಿ ನಿರ್ಮಾಣಕ್ಕಾಗಿ ಇಂದ್ರಿಯ ಕೊಟ್ಟಿರುವನೆಂದು ಹೇಳಿದೆಯಲ್ಲ, ಅದು ಮಾತ್ರ ಸುಳ್ಳು.

ಮಾ. : ಹಾಗಾದರೆ, ಅದನ್ನು ಯಾತಕ್ಕೆ ಕೊಟ್ಟಿರುವನು?

. : ಕೇವಲ ಮೂತ್ರ ವಿಸರ್ಜನೆಗೆ ಮಾತ್ರ ಕೊಟ್ಟಿರುವನು.

ಮಾ. : ನೀನು ಹೇಳುವದು ಶುದ್ಧಸುಳ್ಳು. ಸೃಷ್ಟಿ ನಿರ್ಮಾಣ ಕಾರ್ಯಕ್ಕಾಗಿ ಕೊಟ್ಟಿರುವದೇ ಸತ್ಯ.

. : ನಿನ್ನ ಹೇಳಿಕೆಯನ್ನು ಆಧಾರಕೊಟ್ಟು ಸಿದ್ಧಮಾಡಬಲ್ಲೆಯಾ?

ಮಾ. : ಸಿದ್ಧ ಮಾಡಿಕೊಟ್ಟರೆ ನನ್ನನ್ನು ಲಗ್ನವಾಗಬಲ್ಲೆಯಾ?

. : ನಿನ್ನ ಹೇಳಿಕೆಯನ್ನು ಆಧಾರಕೊಟ್ಟು ಸಿದ್ಧಮಾಡು ಮೊದಲು. ನಂತರ ಮುಂದಿನ ಮಾತು.

ಮಾ. : ಸಿದ್ಧಮಾಡಿಕೊಟ್ಟರೆ ನನ್ನನ್ನು ಲಗ್ನವಾಗಲು ನೀ ಸಿದ್ಧನಿರಬೇಕು.

. :  ಮೊದಲು ಸಿದ್ಧಮಾಡಿ ತೋರಿಸು.

ಮಾ. : ಇದು ಸರ್ವಸಾಮಾನ್ಯ ವಿಷಯವಲ್ಲ; ಮಹತ್ವಪೂರ್ಣ ವಿಷಯವಾಗಿದೆ. ಅಲ್ಲಮಾ, ಇತ್ತ ಹೊರಳು; ಚಿತ್ತವಿಟ್ಟು ಕೇಳು; ಈ ಇಂದ್ರಿಯಗಳನ್ನು ಹೆಣ್ಣಿಗೂ ಗಂಡಿಗೂ ಒಂದೇ ತರಹ ಕೊಟ್ಟಿರುವನೋ ಅಥವಾ ಹೆಣ್ಣಿಗೊಂದು ತರಹ ಗಂಡಿಗೊಂದು ತರಹ ಕೊಟ್ಟಿರುವನೋ?

. : ಇಬ್ಬರಿಗೂ ಒಂದೇ ತರಹ ಕೊಟ್ಟಿರುವನು.

ಮಾ. : ಅದೇ ನಿನ್ನ ತಪ್ಪು ತಿಳಿವಳಿಕೆ. ಹತ್ತರಲ್ಲಿ ಒಂಬತ್ತು ಅಧಿಕ, ಒಂದು ಅಧಮ ಎನ್ನಬಹುದೇ? ಹಾಗಿದ್ದಲ್ಲಿ ಮೂತ್ರದ್ವಾರ ಹೆಣ್ಣು ಗಂಡಿಗೆ ಬೇರೆ ಬೇರೆ ತರಹ ಇರಲು ಕಾರಣವೇನು? ಕೇವಲ ಮೂತ್ರವಿಸರ್ಜನೆಯೇ ಮುಖ್ಯವಾಗಿದ್ದರೆ ಉಳಿದ ಇಂದ್ರಿಯಗಳಂತೆ ಹೆಣ್ಣಗೂ ಗಂಡಿಗೂ ಹತ್ತನೆಯ ಇಂದ್ರಿಯ ಒಂದೇ ತೆರನಾಗಿ ಇರಬಹುದಾಗಿತ್ತಲ್ಲ? ಅದುಹಾಗಿಲ್ಲ ಅಲ್ಲಮಾ ಈ ಜಗತ್ತಿನ ಜನರೆಲ್ಲ ಸಂಸಾರ ಹೂಡಿ ಮಕ್ಕಳನ್ನು ಪಡೆದು ಮುಕ್ತರಾಗಲೆಂದು ಬ್ರಹ್ಮನು ಹೆಣ್ಣು : ಗಂಡಿನ ಇಂದ್ರಿಯ ರಚನೆಯಲ್ಲಿ ವ್ಯತ್ಯಾಸ ಮಾಡಿದ್ದಾನೆ. ಹೆಣ್ಣಿನ ಸಂಸಾರವನ್ನು ಭೂಮಿಯ ರೂಪವಾಗಿಯೂ, ಗಂಡಿನ ಸಂಸಾರವನ್ನು ಬೀಜದ ರೂಪವಾಗಿಯೂ ಹುಟ್ಟಿಸಿರುವನು. ಇದನ್ನೆಲ್ಲ ಸೋಸಿ ನೋಡದೆ ಯೋಗಿಯ ವೇಷವನ್ನು ಹೊತ್ತು ಗೂಗೆಯಂತೆ ಒಂಟಿಗನಾಗಿ ಏಕೆ ತಿರುಗುತ್ತಿರುವಿ? ಒಂದೇ ಮನಸ್ಸಿನಿಂದ ಬಂದು, ನನ್ನೊಡನೆ ಒಂದಾಗಿ ಚೆಂದಾಗಿ ಬಾಳು. ಸಂಸಾರದ ಸುಧೆಯುಂಡು ಆನಂದ ಸಾಗರದಲ್ಲಿ ಲೋಲಾಡು. ಆಗ ಗೊತ್ತಾಗುತ್ತದೆ. ಸಂಸಾರದ ಸವಿಯೂಟ! ಬ್ರಹ್ಮ ಸುಖಕ್ಕಿಂತಲೂ ಈ ಲೌಕಿಕ ಸುಖವು ನಿನಗೆ ಅಧಿಕವೆನಿಸಿದ್ದರೆ ಹುಚ್ಚ ಮುಂಡೆ ಎಂದು ನನ್ನನ್ನು ಕರೆ. ನೋಡದೆ ಯಾವುದಕ್ಕೂ ಹೆಸರಿಡಬಾರದು ಸುಂದರಾ ಇದಕ್ಕೆ ಏನನ್ನುವಿ?

. : ಮಾಯೆ, ನೀನಿಂಥ ಹೊಯಮಾಲಿ ಇದ್ದುದರಿಂದಲೇ ಈ ಜಗತ್ತು ನಿನ್ನ ಕಣ್ಸನ್ನೆಯಲ್ಲಿಯೇ ಕುಣಿಯತೊಡಗಿದೆ. ಅಜ್ಞಾನಿಗೆ ಜ್ಞಾನ ಬಾರದು ಹೇಳುತ್ತೇನೆ ಕೇಳು.

ಮಾ. : ಅದೇನಿರುವುದು ಹೇಳು.

ಪದ : ತಾಳ ಕೇರವಾ; ರಾಗ ಜಯಜಯವಂತಿ

. :  ಬಿಡು ಬಲ್ಲೆ ನಿನ್ನ ಈ ಕವನಾ (ದುಗುಣ)
ಜ್ಞಾನಿಗಿಲ್ಲ ದೇಹದಭಿಮಾನಾ ಮೂಡೇ॥

ಖಂಡಿಸದೆ ತ್ರಿಕರಣ ಇಂದ್ರಿಯ ನಿಗ್ರಹ ಮಾಡದೆ ಮುಕ್ತಿ
ಸಹಜ ಮುಕ್ತಿ ದೊರಕುವುದೇ ಭಕ್ತಿಯ ರೀತಿ     1

ಸಾಕು ದೇವ ಈ ಜನ್ಮವೆಂಬುದು ಧರ್ಮ ಶರಣರ ನೇಮ
ತಿಳಿ ಮರ್ಮ ಅವರಿಗಿಲ್ಲೋ ಕಾಯದ ಹಮ್ಮ    2

ಎಲೆ ಮಾಯೆ, ಅಜ್ಞಾನಿಗಳ ಕಣ್ಣಿಗೆ ನಿಜವೆಂದು ತೋರುವಂತೆಕವನಕಟ್ಟಿ ಬಣ್ಣಿಸುತ್ತಿರುವ ನೀನು ಲೋಕವನ್ನೆಲ್ಲ ಬಂಧಿಸಿಬಿಟ್ಟಿರುವಿ.

ಮಾ. : ಏನು? ನಾನು ಹೇಳುವರು ಕವನವೇ?

. : ಅಂತಿಂತಹ ಕವನವಲ್ಲ. ಕಾಳಿದಾಸನಂಥ ಮಹಾಕವಿಗೂ ಬಣ್ಣಿಸಲಿಕ್ಕೆ ಬಾರದಂತಹ ಕವನ ನಿನ್ನ ಕವನ! ಇಂದ್ರಿಯಗಳೆಂದರೇನು? ಅವುಗಳ ವ್ಯಾಪಾರ ಎಂತಹದು? ಅವುಗಳನ್ನು ಯಾವ ಕಾರ್ಯಕ್ಕಾಗಿ ಹೇಗೆ ಬಳಸಬೇಕೆಂಬುದೇ ಮುಖ್ಯ ವಿಚಾರ. ನಾನು ಇಂದ್ರಿಯಗಳನ್ನು ಖಂಡಿಸಿ ಮಾತನಾಡುವುದಿಲ್ಲ. ಅವುಗಳ ವ್ಯಾಪಾರವನ್ನು ಖಂಡಿಸಿ ಹೇಳುತ್ತಿದ್ದೇನೆ. ಇಂದ್ರಿಯ ವ್ಯಾಪಾರ ಬಹಿರಂಗದ ವಾಸನೆಯ ಕಡೆಗೆ ಹರಿಯದೆ, ಅಂತರಂಗದ ಲಿಂಗತೃಪ್ತಿಗಾಗಿ ಉಪಯೋಗವಾಗಬೇಕೆಂದು ಹೇಳುತ್ತಿದ್ದೇನೆ. ದಶೇಂದ್ರಿಯ ವ್ಯಾಪರವನ್ನೇಲ್ಲ ಲಿಂಗಪೂಜೆಗಾಗಿ ಉಪಯೋಗಿಸುತ್ತ, ಇಂದ್ರಿಯಗಳನ್ನು ಅರಿವು ಎಂಬ ಹುರಿಯಾದ ಹಗ್ಗದಿಂದ ಕಟ್ಟದೆ ಹೋದರೆ ಮುಕ್ತಿ ಹೇಗೆ ದೊರೆಯಬಲ್ಲದು ಮಾಯೆ?

ಮಾ. : ಅಲ್ಲಮಾ, ನಿಲ್ಲು ನಿಲ್ಲು ಮುಕ್ತಿ ಮುಕ್ತಿ ಎಂದು ನೀನು ಬಡಿಬಡಿಸಹತ್ತಿ ಬಹಳ ಹೊತ್ತಾಯಿತು. ಮುಕ್ತಿಯೆಂಬ ಶಬ್ದದ ಅರ್ಥವೇನು?

. : ನಾರಿ, ಮುಕ್ತಿ ಎಂದರೆ ಬಿಡುಗಡೆ.

ಮಾ. : ಯಾತರಿಂದ ಬಿಡುಗಡೆಯಾಗಬೇಕು?

. : ಈ ಶರೀರ ಬಂಧನದಿಂದ ಬಿಡುಗಡೆಯಾಗಬೇಕು.

ಮಾ. : ಪ್ರಾಣಪಕ್ಷಿ ಹಾರಿದೊಡನೆ, ಅತ್ಮನನ್ನು ಬಂಧಿಸಿದ ಈ ಶರೀರ ತಾನೇಬಿಡುವುದಲ್ಲ?

. : ಛೇ, ಎಲ್ಲಿ ಬಿಡುವದು? ಅದು ಮತ್ತೊಂದು ಶರೀರವನ್ನು ತೊಟ್ಟು ಹುಟ್ಟಿಬರುವುದು. ಹೀಗೆ ಹುಟ್ಟಿಗೊಮ್ಮೆ ಹೊಸ ಶರೀರವನ್ನು ತೊಟ್ಟು ಅದೆಷ್ಟು ದೇಹಗಳನ್ನು ಧರಿಸಿ ಬಂದಿರುವುದೋ ಎಣಿಸಿ ಹೇಳುವವರಾರು? ಆತ್ಮನಿಗೆ ಶರೀರದಿಂದ ಬಿಡುಗಡೆಯೆಂಬುದು ಇಲ್ಲವೇ ಇಲ್ಲ. ಹುಟ್ಟು ಸಾವುಗಳಿಲ್ಲದ ಸ್ಥಿತಿಗೆ ಮೋಕ್ಷವೆನ್ನುವರು. ಅಂದೇ ಆತ್ಮಕ್ಕೆ ಈ ಶರೀರದಿಂದ ಬಿಡುಗಡೆ!

ಮಾ. : ಚಿನ್ನದಂತಹ ಈ ಶರೀರವನ್ನು ಆತ್ಮನು ಏಕೆ ಬಿಟ್ಟು ಕೊಡಬೇಕು?

. : ಈ ಶರೀರವೆಂಬುದು ಆತ್ಮನನ್ನು ಬಂಧಿಸಿಟ್ಟ ಸೆರೆಮನೆಯಾಗಿದೆ.

ಮಾ. : ಅಲ್ಲಮಾ, ಹಾಗೆನ್ನಬೇಡ ಮುತ್ತಿನಂತಹ ಶರೀರಕ್ಕೆ ಸೆರೆಮನೆ ಅನ್ನಬೇಡ. ಇದು ಆತ್ಮನಿಗೆ ಅನಂತ ಸುಖವನ್ನು ನೀಡುವ ಅರಮನೆ! ಸುಖಸದನವೆನಿಸಿದ ಈ ಶರೀರವನ್ನು ಬಿಡಬೇಕೆನ್ನುವವರು ಮರುಳರೇ ಸರಿ.

. : ಮರುಳ ಮಾಯೆ. ಇದು ನಿಶ್ಚಯವಾಗಿ ಅರಮನೆಯಲ್ಲ, ಸೆರೆಮನೆ!

ಮಾ. : ನೀನು ಶರೀರಕ್ಕೆ ಸೆರೆಮನೆಯೆಂದು ಕರೆದರೆ ಈ ಸೆರೆಮನೆಯಲ್ಲಿ ದುರ್ಗುಣಗಳು ಇರಬೇಕಾಯಿತಲ್ಲ?

. : ಇವೆ ಶರೀರ ದುರ್ಗುಣಗಳ ಅಗರವಾಗಿದೆ. ಆ ದುರ್ಗುಣಗಳ ಮಧ್ಯದಲ್ಲಿ ಇರುವ ಆತ್ಮನಿಗೆ ಬರುವ ಕಷ್ಟನಷ್ಟಗಳನ್ನು ನೆನೆದರೆ ಮೈಗೆ ಮುಳ್ಳುಬರುತ್ತದೆ. ಮಾಯೆ, ಹೇಳುತ್ತೇನೆ ಚಿತ್ತಗೊಟ್ಟು ಕೇಳು.

ಮಾ. : ಅದೇನಿರುವದು ಹೇಳು.

ಪದ : ತಾಳ ಕೇರವಾ; ರಾಗ ಮಿಶ್ರಪೀಲು

. : ಶರೀರ ಎಂಬುವದಿದು ಸೆರೆಮನೆಯ
ಆತ್ಮ ಕೈದಿ ಇರುವನು ಅದರೊಳು ಧನಿಯು॥

ಏರು : ದುಃಖದ ನೆಲೆಯು ದುರ್ಗಂಧ ಹೊಲೆಯು
ತುಂಬಿದ ದೇಹದಲಿ ಕೊಳೆಯು :
ತ್ತಿರುವಂಥ ಕೂಸ ಬಳಲುವ ನಾಶ
ಬಲ್ಲನು ಶಿವಶಿವಾ ಸರ್ವೇಶಾ                  1

ತನ್ನ ಮಲಮೂತ್ರದಿ ಹೊರಳುತ
ಪರತಂತ್ರ ಸ್ಥಿತಿಯಲಿ ಒರಲುತ
ಬಾಲ್ಯವ ನೀಗಿ ಬಳಲುವ ಭೋಗಿ
ಆರುಗುಣಕೆ ಪ್ರಾಯವಶನಾಗಿ                   2

ರೋಗದ ಮೂಲಾ ಮುಪ್ಪಿನ ಕಾಲಾ
ಸಾಯುವದಂತೂ ಸಂಕಟ ಮೂಲಾ
ಸಂಕಟಜಲಾ ನರಜನ್ಮಕೆಲ್ಲಾ
ಸರ್ವೇಶ ಬಲ್ಲಾ ಸಂಸ್ಕೃತಿ ಲೀಲಾ              3

ಎಲೆ ಮಾಯೆ, ಶರೀರವೆಂಬುವ ಸೆರೆಮನೆಯಲ್ಲಿ ಆತ್ಮನು ಅನುಭಿಸುತ್ತಿರುವ ಕಷ್ಟಗಳನ್ನು ಹೇಳುತ್ತೇನೆ ಕೇಳು. ಆತ್ಮನು ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳವರೆಗೆ ಮಲಮೂತ್ರದ ಸುಳಿಯಲ್ಲಿ ಸಿಕ್ಕಿ ಘಾಸಿವೀಸಿಯಾಗಿ ಬಳಲುವುದು ಮೊದಲನೆಯ ಕಷ್ಟ. ನಂತರ ತಾಯಿಯ ಹೊಟ್ಟೆಯಿಂದ ಅಯ್ಯೋ ಎಂದು ಕಿರುಚುತ್ತಾ ಭೂಮಿಗೆ ಬೀಳುವುದು ಹೆಚ್ಚಿನ ಕಷ್ಟ. ಬಾಲ್ಯಾವಸ್ಥೆಯಲ್ಲಿ ತನ್ನ ಮಲಮೂತ್ರದಲ್ಲಿ ತಾನೇ ಉರುಳಾಡುವುದು ಕಣ್ಣಿನಿಂದ ನೋಡಲಾಗದ ಕಷ್ಟ. ಪ್ರಾಯಕ್ಕೆ ಬಂದ ಮೇಲೆ ಈ ಮಾಯಾಪ್ರಪಂಚಕ್ಕೆ ಮರುಳಾಗ ಕಾಮಕ್ರೋಧಾದಿಗಳ ಸೆಳವಿಗೆ ಸಿಕ್ಕು ತೊಳಲಾಡುವುದು ಬಲು ಕಷ್ಟ. ಮುಂದೆ ಮುಪ್ಪಿನ ಕಾಲದಲ್ಲಿ ನಾನಾರೋಗಗಳಿಗೆ ತುತ್ತಾಗಿ ನರಳುವುದು ಕಾಣಬಾರದ ಕಷ್ಟ. ಅವಸಾನ ಕಾಲದಲ್ಲಿ ಇದ್ದುದನ್ನೆಲ್ಲ ಬಿಟ್ಟು ಅಗಲಿ ಹೋಗುವುದು ಬಂತೆಂದು ಕೊರಗುವುದು ಕರಕಷ್ಟ. ಸತ್ತ ಮೆಲೆ ಯಮಲೋಕದಲ್ಲಿ ಶಿಕ್ಷೆಗೆ ಗುರಿಯಾಗಿ ಗೋಳಾಡುವುದು ಘೋರರತರ ಕಷ್ಟ. ಹೀಗೆ ಅಂತರಾತ್ಮನಿಗೆ ನಿರಂತರ ಕಷ್ಟಕೊಡುವ ಈ ಶರೀರವು ನಿಜವಾದ ಸೆರೆಮನೆಯಲ್ಲದೆ ಮತ್ತೇನು? ಒಂದು ಸೆರೆಮನೆಯಿಂದ ಇನ್ನೊಂದು ಸೆರೆಮನೆಗೆ ಕೈದಿಯನ್ನು ಒಯ್ಯುವಾಗ ಆ ಕೈದಿಗೆ ಅಲ್ಪ ಬಿಡುಗಡೆಯೇ ಮಹಾ ದುಃಖವಾಗಿ ಪರಿಣಮಿಸುವಂತೆ. ಒಂದು ಶರೀರದಿಂದ ಇನ್ನೊಂದು ಶರೀರಕ್ಕೆ ಹೊರಟಿರುವ ಆತ್ಮನಿಗೆ ಅತ್ಯಂತ ದುಃಖವಾಗದಿರದು. ಇಂತಹ ಶರೀರಬಂಧನದಿಂದ ಚಿರಂತನ ಬಿಡುಗಡೆ ಹೊಂದಬೇಕೆಂಬುದೇ ಶಿವಶರಣರ ಧರ್ಮ.

ಮಾ. : ಬಿಡು ಬಿಡು ಅಲ್ಲಮಾ, ಇವೆಲ್ಲ ಅಜ್ಜಿಯ ಕಥೆಗಳು. ಗೊತ್ತುಗೇಡಿಗಳು ಬರೆದ ಹೊತ್ತಿಗೆಗಳನ್ನು ನನ್ನ ಮುಂದೆ ಬಿತ್ತರಿಸಬೇಡ. ಸುಖ ಜನ್ಮವನ್ನು ಕಷ್ಟದ ಹೊರೆಯೆಂದು ಕಲ್ಪಿಸಿಕೊಂಡು, ಕಾಲಿಗೆ ಸುತ್ತಿರುವ ಸಂಜೀವಿನಿ ಲತೆಯನ್ನು ಕಿತ್ತೊಗೆದು ನಸುಗುನ್ನಿ ಗಿಡಕ್ಕೆ ತೆಕ್ಕೆ ಹಾಕಬೇಕೆಂದು ಬೋಧಿಸುವ ನಿನ್ನಂಥ ತೊನಸಿಬಡಕನ ಕೂಡ ಮಾತಾಡುವುದೇ ಕಷ್ಟ.

. : ಏನು, ಕಷ್ಟಮೂಲವಾದ ಈ ಶರೀರವನ್ನು ನೀನು ಸುಖದ ಸೆಲೆಯೆಂದು ಹೇಳುವಿಯಾ? ನಿನ್ನಂಥ ಬಲಭದ್ರಿಯನ್ನು ಕಾಣುವುದು ಅಪರೂಪ.

ಮಾ. : ನಿನ್ನಂಥ ಬಲಭದ್ರನನ್ನು ಕಾಣುವುದೂ ಅಪರೂಪ.

. : ನಾನು ಹೇಗೆ ಬಲಭದ್ರನು?

ಮಾ. : ನಾನು ಹೇಗೆ ಬಲಭದ್ರಿಯಾ?

. : ಈ ಶರೀರವು ಕಷ್ಟದ ಸೆರೆಮನೆಯೆಂದು ನಾನು ಹೇಳಿದರೆ, ನೀನು ಸುಖದ ಅರಮನೆಯೆಂದು ಬಣ್ಣಿಸುತ್ತಿರುವಿ. ಅಂದ ಮೇಲೆ ಬಲಭದ್ರಿಯಲ್ಲವೆ?

ಮಾ. : ಮರುಳು ಅಲ್ಲಮಾ, ನಾನು ಬಣ್ಣಿಸುವುದು ಬಲಭದ್ರಿತನವೆ? ಆತ್ಮನು ಪರಿಪರಿಯಿಂದ ಭೋಗಿಸುವ ಸುಖದ ಸುಗ್ಗಿಯನ್ನು ನೋಡಬೇಕೆಂದರೆ ಈ ಶರೀರವನ್ನು ಅವಲೋಕಿಸಬೇಕು. ಈ ಶರೀರದಂಥ ಸುಖದ ಅರಮನೆ ಈ ಸತ್ಯವುಳ್ಳ ಲೋಕದಲ್ಲಿ ಇದೆಯೇ ಹೊರತು ಮತ್ತೆಲ್ಲಿಯೂ ಇಲ್ಲ. ತಾಯಿಯ ಹೊಟ್ಟೆಯಲ್ಲಿ ಮೂಡುವುದೊಂದೇ ತಡ; ಸುಖದ ಮಳೆ ಸುರಿಯಲು ಆರಂಭವಾಗುವುದು.

. : ಅದು ಹೇಗೆ? ಆಧಾರ ಕೊಟ್ಟು ಹೇಳು :

ಮಾ. : ಕೇಳುವಂಥವನಾಗು.

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಈ ಶರೀರಾ ಸುಖದ ಸಾರಾss
ಕೇಳೋ ಧೀರಾ ಪೇಳುವೆ ವಿವರಾ॥

ತಾಯಿಯ ಉದರ ಸೌಖ್ಯದ ಸದರ
ಮೂಡಿದ ಕೂಡಲೆ ಎಲ್ಲರ ನೆದರಾ
ಬಾಲಾ ಕಾಲಾ ಲೀಲೆಯನಾಡುತ
ನಲಿಯುತಲಿ ಬೆಳೆಯುತಲಿ ಕಳೆಯುತಲಿ        1

ಪ್ರಾಯದ ಕಾಲಾ ಸೌಖ್ಯದ ಮೂಲಾ
ಸವಿಗಾರನೆ ಬಲ್ಲಾ ಇದರದು ಕೀಲಾ
ಸುತರು ಹಿತರು ಸತಿಯರು ಸಂಭ್ರಮ
ಮನವೊಲಿದು ನಲಿನಲಿದು ಸುಖಿಸುವರು       2

ಮುಪ್ಪಿನ ಹಿರಿಯ ಶಿವನಿಗೆ ಸರಿಯೊ
ಎಂದೆನುತೆಲ್ಲರು ಮಾಡುವ ಮನ್ನಣೆಯ
ಪಡೆದು ಮಡಿದು ಕಡುಸೌಖ್ಯದಿ ತಾ
ಶರೀರೆನಿಪಾ ಅರಮನೆಯೊಳು ಸುಖಿಸುವರು 3

ಅಲ್ಲಮಾ, ಆತ್ಮನು ಈ ಶರೀರವೆಂಬ ಅರಮನೆಯಲ್ಲಿ ಭೋಗಿಸುವ ಸುಖದ ಸುಗ್ಗಿಯನ್ನು ಹೇಳುತ್ತೇನೆ ಕೇಳು ಆತ್ಮನು ತಾಯಿಯ ಹೊಟ್ಟೆಯಲ್ಲಿ ಮೂಡುವುದೊಂದೆ ತಡ ಬಂಧು ಬಳಗದವರು ಮೃಷ್ಟಾನ್ನವನ್ನು ತಂದು ಉಣಿಸತೊಡಗುವರು. ಆಗಲೇ ಬಯಕೆಯ ಊಟಕ್ಕೆ ಆರಂಭವಾಗುವುದು.

. : ವಾಹವ್ವಾ ವೈಯಾರಿ ಮುಂದೆ ಹೇಳು.

ಮಾ. : ತಾಯಿಯ ಗರ್ಭದಿಂದ ಹುಟ್ಟಿದ ಕೂಡಲೇ ಎಣ್ಣೆ : ಬೆಣ್ಣೆ ಹಚ್ಚಿ ಎರೆದು ಅಮೃತಕ್ಕಿಂತಲೂ ಹೆಚ್ಚು ರುಚಿಕರವಾದ ಮೊಲೆ ಹಾಲನ್ನು ಕೊಟ್ಟು ಪೋಷಿಸುವರು. ಕೂಸು ಕುಲುಕುಲು ನಗುತ್ತ ಕುಣಿದಾಡುವಾಗ ನನ್ನ ಕೈಯೊಳಗೆ ತಾ, ನನ್ನ ಕೈಯೊಳಗೆ ತಾ ಎಂದು ಚೆಲುವೆಯರು ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಬರಮಾಡಿಕೊಂಡು ಮುದ್ದಿಡುವರು. ಸುಖದ ಮೇಲೆ ಸುಖ! ಮುಂದೆ ಆ ಬಾಲಕನು ಶಾಲೆಗೆ ಹೋಗಿ ಅಕ್ಕರೆಯಿಂದ ಅಭ್ಯಾಸಮಾಡಿ ಓರಗೆಯ ಗೆಳೆಯರೊಡನೆ ಚೆಂಡು : ಚಿಣಿ : ಕೋಲು ಆಡುವಾಗಿನ ಸುಖವು ಸ್ವರ್ಗಕ್ಕಿಂತಲೂ ಮೇಲು. ಪ್ರಾಯಕ್ಕೆ ಬಂದ ಮೆಲೆ ಕೇಳುವುದೇನು? ಚೆನ್ನೆಯರ ಕೂಡ ಚಿನ್ನಾಟ! ಆ ಮೇಲೆ ಮಕ್ಕಳೊಡನೆ ಮುದ್ದಾಟ!! ಅಲ್ಲಮಾ, ಏನು ಹೇಳಲಿ? ಈ ಸುಖದ ಸುಗ್ಗಿಯನ್ನು ಸವಿಗಾರನೇ ಬಲ್ಲ. ಮುಂದೆ ಮುಪ್ಪಿನಲ್ಲಿ ಹಿರಿಯರಿಗೆ ಹಿರಿಯನೆಂದು ಸರ್ವರಿಂದಲೂ ಸನ್ಮಾನ!

. : ಏಕೆ ಅಲ್ಲಿಗೆ ನಿಂತೆ? ಮುಂದೆ ಸಾಯುವ ಆಟದ ಸುಖವನ್ನು ಹೇಳಲಿಲ್ಲವೇಕೆ?

ಮಾ. : ಏಕೆ ಅದರಲ್ಲಿ ಸುಖವಿಲ್ಲೆಂದು ಹೇಳುತ್ತೀಯಾ? ಮರಣವೇ ಮಹಾನವಮಿ! ತೊಟ್ಟಿರುವ ಅಂಗಿಯನ್ನು ಹಳೆಯದಾದ ಕೂಡಲೆ ಆ ಕಡೆಗೆ ಬೀಸಾಡಿ ಮತ್ತೊಂದನ್ನು ತೊಟ್ಟು ನೀಟಾಗಿ ನಿಲ್ಲುವಂತೆ, ಹಳೆಯ ಶರೀರವನ್ನು ಬಿಟ್ಟು ಹೊಸ ಶರೀರವನ್ನು ಧರಿಸುವುದು ಹೆಚ್ಚಿನ ಸುಖವಲ್ಲವೆ?

. : ಭಪ್ಪರೆ ಹೆಣ್ಣೆ, ನಿನ್ನ ಬಾಯಿಬಡಕ ಮಾತಿಗೆ ಬೆಲೆಯೇ ಇಲ್ಲ. ಇರಲಿ; ಸತ್ತ ಮೇಲೆ ಯಮದೂತರಿಂದ ಆಗುವ ಕಷ್ಟವನ್ನು ಹೇಳದೆ ಬಿಟ್ಟಿಯಲ್ಲ?

ಮಾ. : ಅಲ್ಲಮಾ, ಅದನ್ನೂ ಹೇಳುತ್ತೇನೆ ಕೇಳು : ತಮ್ಮ ಹೆಂಡಿರ ಕೂಡ ತಾವು ಬಾಳ್ವೆಮಾಡಿದರೆ ತಮ್ಮ ಮಕ್ಕಳನ್ನು ತಾವು ಮುದ್ದಾಡಿದರೆ ಯಮನ ಅಪ್ಪನದೇನು ಖರ್ಚಾಗುವುದು? ಯಮದೂತರಿಗೆ ಸಿಟ್ಟು ಬರಲಿಕ್ಕೆ ಕಾರಣವೇನು? ಸ್ವತಃ ಅವರೇ ತಮ್ಮ ಹೆಂಡಿರ ಕೂಡ ಬಾಳ್ವೆ ಮಾಡುವುದಿಲ್ಲವೇ? ಪ್ರಾಪಂಚಿಕರ ನೋವು ಪ್ರಾಪಂಚಿಕರಿಗೆ ತಿಳಿಯದೇ ಅಲ್ಲಮಾ? ಸುಳ್ಳು ಭ್ರಮೆಯಿಂದ ಏಕೆ ವಾದಿಸುತ್ತಿ? ಮುಂದಿದ್ದ ಎಡೆಯನ್ನು ಒದ್ದು ನಡೆಯುವುದು ಬುದ್ಧಿವಂತರ ನೀತಿಯಲ್ಲ. ಬಂಗಾರದಂಥ ಬಾಯಿ ತೆಗೆದು ಕೇಳಿಕೊಂಡರೆ ಒಲ್ಲೆನೆಂದು ಬಾಲ ತಿರುಗಿಸಿ ಓಡುವರು ಎಂತಹ ಹುಚ್ಚುತನ! ನಡೆ, ನನ್ನೊಡನೆ ನಡೆ ಕೇರೆಯ ಹಾವುಗಳು ಜೋರಿಟ್ಟು ಒಂದನ್ನೊಂದು ಸೆಳೆ ಸೆಳೆದು ತಳುಕುಬೀಳುವಂತೆ ಹಂಸ ತೂಲಿಕಾತಲ್ಪದ ಮೇಲೆ ನಾವಿಬ್ಬರೂ ಕಾಲ ಕಳೆಯೋಣ. ಆಗ ಆ ನಿನ್ನ ಮುಕ್ತಿಸುಖವೆಲ್ಲ ನಿನ್ನ ಕಣ್ಣಮುಂದೆ ಕುಣಿಯಹತ್ತುವುದೋ ಇಲ್ಲವೋ ನೋಡುವಿಯಂತೆ! ಇದಕ್ಕೆ ತಡವೇಕೆ? ಬೇಗ ನಡೆ.

. : ಛೀ ನೀಚಳೆ, ಬಾಯಿ ಬಿಗಿಹಿಡಿದು ಮಾತಾಡು. ಬಾಯಿ ನಿನ್ನದೆಂದು ಬಲ್ಲವರ ಹಾಗೆ ಮಾತಾಡಿದರೆ ಮುಗಿಯಿತೇನು? ಭೀತಿಯಿಲ್ಲದ ಭೂತ ನೀನು! ಜಗದ ಜನರನ್ನು ನೀನು ಹೀಗೆಯೇ ಅಂಜಿಸಿ ವಂಚಿಸಿ ಬಿಗಿದು ಚೆಲ್ಲುರುವಿ. ಮೋಹಪಾಶವೆಂಬ ಕಣ್ಣಿಯಿಂದ ಅವರನ್ನೆಲ್ಲ ಡಾವಣಿಗೆ ಕಟ್ಟಿಬಿಟ್ಟಿರುವಿ. ನಿನ್ನ ಕೈಯಲ್ಲಿ ಸಿಕ್ಕವರಿಗೆ ಸ್ವಾತಂತ್ರ್ಯವಿಲ್ಲ, ಪಾರತಂತ್ರವೇ ಸ್ವಾತಂತ್ರ್ಯವೆಂದು ಬಣ್ಣಿಸುವ ನಿನ್ನ ಬಣ್ಣನೆಗೆ ನಾನಂತೂ ಮರುಳಾಗಲಾರೆ. ಶಿವಶಿವಾ! ತಾವು ಹುಟ್ಟಿದ ತಾಣವನ್ನು ತಾವೇ ಮೋಹಿಸುವುದೇ? ಇದೆಂಥ ಕರ್ಮ! ಹೆಣ್ಣಿನ ಹೊಟ್ಟೆಯಲ್ಲಿ ಬಂದವರು ಕಾಮಾಂಧರಾಗಿ ಅದೇ ಹೆಣ್ಣನ್ನು ಭೋಗಿಸುವುದೇ? ಹಾಗೆ ಮಾಡಿದವರನ್ನು ತಾಯ್ಗಂಡರೆಂದು ಲೋಕ ಕರೆಯಲಾರದೇ? ಮಾಯೆ, ವಿಚಾರ ಮಾಡಿ ನೋಡು. ನಿನ್ನಾಟ ಹುಚ್ಚರಾಟ! ನೀನು ಹೇಳುವುದೇನು? ಮಾಡುವುದೇನು? ತಾಯಿಯಾಗಿ ಮೊಲೆಕುಡಿಸಿದ ಸ್ತ್ರೀಯಳ ಮೊಲೆಹಿಡಿಸುವಕಾರ್ಯ ನಿನ್ನದಾಗಿದೆ. ನಿನ್ನ ಸುಖ ಸುಟ್ಟಿತು. ಸಾಕು, ನಿನ್ನ ನೆರೆ ಸಾಕು. ನಿದ್ರೆಯ ಸೋಗು ಹಾಕಿ ಮಲಗಿದವರನ್ನು ಎಚ್ಚರಿಸುವುದು ಕಠಿಣ! ಸುಮ್ಮನೆ ಅಡ್ಡ ಹಾದಿ ಹಿಡಿದು ವಾದಿಸುವ ನಿನ್ನೊಡನೆ ವಾದಿಸುವುದೇ ತಪ್ಪು! ಹುಚ್ಚಿಗೆ ಎಚ್ಚರ ಕಡಿಮೆ. ಇದೋ ನಾನು ಹೊರಟೆ.
 ಮಾ. : ಅಲ್ಲಮಾ, ಎಲ್ಲಿಗೆ ಹೋಗುವಿ?

. : ಭಕ್ತರಿಗೆ ಉಪದೇಶನೀಡಿ ಉದ್ಧಾರಮಾಡಲು ತೀರ್ಥಕ್ಷೇತ್ರಗಳ ಸಂಚಾರ ಕೈಕೊಳ್ಳುತ್ತೇನೆ.

ಮಾ. : ಮರುಳ ಅಲ್ಲಮಾ, ಎಲ್ಲಾ ತೀರ್ಥಗಳು ಹೆಣ್ಣಿನಲ್ಲಿಯೇ ಇವೆ. ಹೆಣ್ಣನ್ನು ಬಿಟ್ಟು ನೀನೆಲ್ಲಿ ತೀರ್ಥಯಾತ್ರೆ ಮಾಡುತ್ತಿ? ನನ್ನೊಡನೆ ಹಿತದಿಂದ ಕೂಡಿದರೆ ಕಾಶಿ ರಾಮೇಶ್ವರ ಗೋಕರ್ಣ ಮುಂತಾದ ತೀರ್ಥಗಳಲ್ಲಿ ಸ್ನಾನಮಾಡಿದಷ್ಟು ಪುಣ್ಯ ನಿನಗೊದಗುವುದು.

. : ಏನು, ಎಲ್ಲಾ ತೀರ್ಥಗಳು ನಿನ್ನಲ್ಲಿಯೇ ಇರುವವೇ? ವಾಹವ್ವಾ ಕವನಗಿತ್ತಿ! ನೀನು ಇಂಥ ಮಾತಿನಲ್ಲಿಯೇ ಜಗತ್ತನ್ನು ಜೋಲಿ ಹೊಡಿಸುತ್ತಿರುವಿ!

ಮಾ. : ಸುಳ್ಳಲ್ಲ ಎಲ್ಲ ತೀರ್ಥಗಳು ಹೆಣ್ಣಿನಲ್ಲಿಯೇ ನೆಲೆಸಿವೆ.

. : ಎಲ್ಲಿವೆ ಹೇಳು, ನೋಡೋಣ

ಮಾ. : ಹೇಳುತ್ತೇನೆ ಕೇಳು.

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ನೋಡಿಕೋ ಪ್ರಭುರಾಯಾ ನಾರಿಯಾ ದಿವ್ಯಕಾಯಾ
ಇರುವುದೋ ತೀರ್ಥ ಮಾಯಾ॥

ತುಟಿಯು ತುಂಗಾನದಿ, ಮೊಲೆಯು ಗಂಗಾನದಿ
ತುರುಬಿನಲ್ಲಿ ಇರುವುದೊ ಕಾಳಿಂದಿ.
ಎನ್ನ ಹೊಂದುವುದರಿಂದ ಸರ್ವ ಸಿದ್ದಿ
ಪಡೆಯುವಿ ಸುಳ್ಳಲ್ಲೊ ಶಾಸ್ತ್ರ ಓದಿ
ಪಂಚ ತತ್ವದ ಗ್ರಂಥ, ಓದಿ ನೋಡಿಕೊ ಕಾಂತಾ
ಗುಣವಂತಾ ಯಾಕೆ ಪಂಥಾ
ಹೆಣ್ಣಿನ ಗಾತ್ರವು ಸೌಖ್ಯದ ಸೂತ್ರವು
ಯಾಕೆ ಪೊಂದಿ ನೀ ನಿಂತಿ ಭಯಭ್ರಾಂತಿ
ಕರೆಯುವೆ ನಾ ಬಂದು ದಿವ್ಯ ಕಾಂತಿ
ಪಡೆಯುವಿ ಸುಳ್ಳಲ್ಲೊ ಶಾಸ್ತ್ರ ಓದಿ.

ಪ್ರಭುದೇವಾ, ಹೆಣ್ಣಿನಲ್ಲಿರುವ ತೀರ್ಥಗಳನ್ನು ಎಣಿಸಿ ಹೇಳುತ್ತೇನೆ ಲೆಕ್ಕಮಾಡಿ ನೋಡಿಕೋ. ಹೆಣ್ಣಿನ ತುರುಬಿನಲ್ಲಿರುವುದೇ ಕಾಳಿಂದಿನದಿಯು ತುಟಿಯಲ್ಲಿರುವುದೇ ಗಂಡಕಾನದಿಯು ಎರಡು ಮೊಲೆಗಳಲ್ಲಿರುವುದೇ ತುಂಬಭದ್ರಾ ನದಿಯು, ಸವಿಮಾತೇ ಸರಸ್ವತೀ ನದಿಯು, ಮುಗುಳು ನಗೆಯೇ ಭಾಗೀರಥಿ ನದಿಯು, ಮನಸ್ಸಿನ ಗಾಂಭೀರ್ಯದಲ್ಲಿ ಇದ್ದವುಗಳೇ ಸಪ್ತ ಸಮುದ್ರಗಳು. ಈ ಪ್ರಕಾರ ಹೆಣ್ಣಿನ ಶರೀರವೆಲ್ಲ ಪುಣ್ಯತೀರ್ಥಗಳಿಂದ ತುಂಬಿ ತುಳುಕುವುದೆಂದು ಪಂಚತತ್ವ ಗ್ರಂಥಗಳಲ್ಲಿ ಹೇಳಲಾಗಿದೆ. ಒಂದು ಹೆಣ್ಣಿನ ಸಹವಾಸ ಮಾಡಿದಾಗಲೆ ಸರ್ವತೀರ್ಥಗಳಲ್ಲಿ ಸ್ನಾನ ಮಾಡಿದ ಪುಣ್ಯ ಬರುವದೆಂದು ಹಿರಿಯರು ಹೇಳುತ್ತಾರೆ. ಹೀಗಿರಲು ನೀನು ಹೆಣ್ಣನ್ನು ಹೇಯ ಮಾಡಿ ಇನ್ನೆಲ್ಲಿ ತೀರ್ಥಗಳನ್ನು ಕಾಣುವಿ? ನನ್ನೊಡನೆ ವಿಲಾಸಮಂದಿರಕ್ಕೆ ನಡೆ. ಹತ್ತು ವರ್ಷ ತೀರ್ಥಯಾತ್ರೆ ಮಾಡಿದ ಫಲವು ಹತ್ತು ನಿಮಿಷದಲ್ಲಿಯೇ ಸಿಗುವುದು; ಇದು ಶಾಸ್ತ್ರ ಸಮ್ಮತವಾದ ಮಾತು, ಅರಿತುಕೋ.

ಅ. : ಛೀ ಮೋಸಗಾರಳೆ, ಇಂತ ಹುಚ್ಚು ಶಾಸ್ತ್ರಗಳನ್ನು ನಿನಗಾರು ಕಲಿಸಿದರು? ಪಿಚ್ಚಿಡುವ ಕಣ್ಣು, ಸಂಬಳ ಸುರಿಯುವ ಮೂಗು, ಜೊಲ್ಲು ಸೋರುವ ತುಟಿ, ಮಾಂಸದ ಮುದ್ದೆಯಂತಿರುವ ಮೊಲೆ : ಮೊದಲಾದವುಗಳನ್ನು ಶ್ರೇಷ್ಠತೀರ್ಥಗಳೆಂದು ಬಣ್ಣಿಸಿದ ಆ ಶಾಸ್ತ್ರಕಾರರು ಹುಚ್ಚುನಾಯಿಯ ಹೊಟ್ಟೆಯಿಂದ ಹುಟ್ಟಿರಬೇಕು. ಹೆಣ್ಣಿನ ಸಹವಾಸ ನರಕವಾಸ! ಬಚ್ಚಲ ನೀರು ಎಷ್ಟು ತಿಳಿಯಾಗಿದ್ದರೂ ಸ್ನಾನಕ್ಕೆ ಯೋಗ್ಯವಲ್ಲ. ನಿನ್ನ ಸಹವಾಸಕ್ಕೆ ಬಲಿ ಬಿದ್ದವರು ಇದ್ದುದನ್ನೆಲ್ಲ ಹಾಳು ಮಾಡಿಕೊಂಡು ಬಿಕಾರಿಗಳಾಗುವುದು ನಿಶ್ಚಿತ.
ಮಾ.
: ಹಾಗೆ ಭಾವಿಸಬೇಡ ನನ್ನ ಸಂಗದಿಂದ ನಿನಗೆ ರಾಜವೈಭವ ದೊರಕದೆ ಇರದು. ಹೇಳುತ್ತೇನೆ ಕೇಳು.