ಸಾ. : ದೂತೆ, ಸತ್ವಗುಣದ ಕರ್ತವ್ಯ ಏನೆಂಬುದು ನಿನಗೆ ಗೊತ್ತಿಲ್ಲವೆ? ನನ್ನನ್ನು ನಂಬಿ ಸದ್ಗುಣ ಸಂಪನ್ನರಾಗಿ ಸನ್ಮಾರ್ಗದಲ್ಲಿ ನಡೆಯುವವರಿಗೆ ಅನಂತ ಸುಖವನ್ನು ನೀಡುವುದೇ ನನ್ನ ಕರ್ತವ್ಯ. ನನ್ನನ್ನು ಭಕ್ತಿಯಿಂದ ಪೂಜಿಸಿದವರು ಉದ್ದಾರ ಹೊಂದದೆ ಇರರು.

ದೂ. : ತಮ್ಮನ್ನು ನಂಬಿದವರೆಲ್ಲರೂ ಉದ್ಧಾರವಾಗುವರೇ?

ಸಾ. : ಹೌದು. ತಪ್ಪದೆ ಉದ್ಧಾರ ಆಗುವರು. ಸತ್ವಗುಣವುಳ್ಳವರಿಗೆ ಸಂಕಟವೆಲ್ಲಿಂದ ಬರಬೇಕು? ಎಲ್ಲರೂ ಉದ್ಧಾರರಾಗುವರು.

ದೂ. : ಈಗ ತಮ್ಮಿಂದ ಯಾರ‌್ಯಾರು ಉದ್ಧಾರ ಆಗಿದ್ದಾರೆ?

ಸಾ. : ಅಮ್ಮಾ, ಸತ್ವಗುಣ ಸಂಪನ್ನೆಯಾದ ನನ್ನಿಂದ ಉದ್ಧಾರ ಪಡೆದವರ ಹೆಸರನ್ನು ಹೇಳುತ್ತೇನೆ ಕೇಳು.

ದೂ. : ಅದೇನಿರುವುದು ಹೇಳಬೇಕು :

ಪದ : ತಾಳ ದೀಪಚಂದಿ; ರಾಗ ಕಾಪಿ

ಸಾ. : ಸತ್ವದ ಗುಣವು, ಸೌಖ್ಯದ ಘನವು
ಹೇಳುವೆ ಕೇಳಿರಿ ಲಾಲಿಸಿ ಜನರು॥

ಏರು : ಜಗದಾದಿ ಹಿಡಿದು ಭಕ್ತಿಯ ಪಿಡಿದು
ಶರಣರೆಲ್ಲರು ಮುಕ್ತಿಯ ಹೊಂದಿದರು ನನ್ನಿಂದಲವರು.                          1

ಸುಸ್ಥಿರ ಕೀರ್ತಿ ಚಿನ್ಮಯ ಮೂರ್ತಿ
ಸತ್ವದ ಪಡೆದ ಹರಿಶ್ಚಂದ್ರ ಭೂಚಕ್ರವರ್ತಿ        2

ತಾಯಿ, ನನ್ನಿಂದ ಯಾರು ಯಾರು ಉದ್ಧಾರ ಆಗಿರುವರೆಂದು ಕೇಳಿದೆಯಲ್ಲ! ಚಿತ್ತವಿಟ್ಟು ಲಾಲಿಸು. ಅಮ್ಮಾ ಉದ್ದಾರ ಹೊಂದಿದವರನ್ನು ಲೆಕ್ಕ ಮಾಡಿ ಹೇಳುವುದುಯಾರಿಂದಲೂ ಸಾಧ್ಯವಿಲ್ಲ. ಈ ಜಗತ್ತು ಹುಟ್ಟಿದಂದಿನಿಂದ ಇಲ್ಲಿಯವರೆಗೆ ಅಗಣಿತ ಸಾಧುಸಂತರು ಸತ್ವಗುಣದಿಂದಲೇ ಶಿವಸಾಯುಜ್ಯ ಪಡೆದರು. ಶಿವಶರಣರು ನನ್ನನ್ನೇ ನಂಬಿ ಲಿಂಗದೊಳಗಾದರು. ಭೂಚಕ್ರವರ್ತಿ ಹರಿಶ್ಚಂದ್ರನು ಸತ್ಯ ಪರಿಪಾಲನೆ ಮಾಡಿ ಅಮರನಾದನು. ಹಾಗೆ ಹೇಳುತ್ತ ಹೋದರೆ ಅಂಥವರ ಸಂಖ್ಯೆ ಎಂದೆಂದಿಗೂ ಮುಗಿಯದು.

ದೂ. : ಈಗ ತಾವು ಇಲ್ಲಿಗೆ ಬರಲು ಕಾರಣ?
ಸಾ. : ದೂತೆ, ಅಲ್ಲಮಪ್ರಭುವೆಂಬ ಸದ್ಗುರೋಮತ್ತನನ್ನು ಒಲಿಸಿಕೊಳ್ಳಲು ನನ್ನ ತಾಯಿಯಾದ ಪಾರ್ವತಿದೇವಿಯ ಅಪ್ಪನೆಯ ಪ್ರಕಾರ ಭೂಲೋಕಕ್ಕೆ ಬಂದಿದ್ದೇನೆ. ಉಡುತಡಿ ಗ್ರಾಮದ ಶಿವಭಕ್ತರಾದ ನಿರ್ಮಳ : ಸುಮತಿಯರ ಉದರದಲ್ಲಿ ಹುಟ್ಟಿ ಬೆಳೆದು ದೊಡ್ಡವಳಾಗಿದ್ದೇನೆ. ಇನ್ನು ಮೇಲೆ ಆ ಸದ್ಗುರುವಿನ ಸೇವೆಮಾಡಿ ಅವನ ಅಂತಃಕರಣವನ್ನು ಪಡೆದು, ಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಯತ್ನಿಸುವೆ.

ದೂ. : ಅಡ್ಡಿಯಿಲ್ಲ; ಜಗದ್ವ್ಯಾಪಕನಾದ ಆ ಗುರುಮೂರ್ತಿಯನ್ನು ಹುಡುಕಿ ನೋಡಬಹುದು.

ಸಾ. : ದೂತೆ, ನೀ ಎಂಥಾ ಹುಚ್ಚಿ! ಪರಶಿವನಾದ ಅಲ್ಲಮನು ಜಗದ್ವ್ಯಾಪಕನೆಂದು ನೀನೇ ಹೇಳುತ್ತೀ. ಅವನನ್ನು ಹುಡುಕಿ ಕಾಣಲು ನೀನೇ ತಿಳಿಸುತ್ತಿ! ಇದೆಂತಹ ವಿಪರೀತ ಮಾತು? ಜಗತ್ತನ್ನೇ ವ್ಯಾಪಿಸಿದವನು ಎಲ್ಲದರಲ್ಲಿಯೂ ಇರುವನು.

ದೂ. : ಹಾಗಾದರೆ, ಆ ಪರಮಾತ್ಮನು ಇಲ್ಲಿಯೇ ಇರಬೇಕಾಯಿತಲ್ಲ!

ಸಾ. : ಇದ್ದಾನೆ! ಆ ಪರಮಾತ್ಮ ಸ್ವರೂಪಿಯಾದ ಅಲ್ಲಮನು ಇಲ್ಲಿಯೂ ಇದ್ದಾನೆ.

ದೂ. : ಇದ್ದರೆ, ಅವನೇಕೆ ನಮಗೆ ಕಾಣಿಸಲೊಲ್ಲ?

ಸಾ. : ದೂತೆ. ಹಾಲಿನಲ್ಲಿ ತುಪ್ಪ ಇದೆಯೋ ಇಲ್ಲವೋ!

ದೂ. : ಇದೆ.

ಸಾ. : ಇದ್ದರೆ ಕಣ್ಣಿಗೆ ಯಾಕೆ ಕಾಣಿಸುವುದಿಲ್ಲ.

ದೂ. : ಯವ್ವಾ, ತಮಗೆ ಇಷ್ಟೂ ತಿಳಿಯುವುದಿಲ್ಲ? ಹಾಲಿನಿಂದ ತುಪ್ಪ ದೊರೆಯಬೇಕಾದರೆ, ಕಾಸಿದ ಹಾಲಿಗೆ ಹೆಪ್ಪು ಹಾಕಿ ಮೊಸರು ಮಾಡಬೇಕು. ಆ ಮೇಲೆ ಅದನ್ನು ಸರಿಯಾಗಿ ಕಡೆದರೆ ಬೆಣ್ಣೆ ಬರುವುದು. ಅದನ್ನು ಕಾಸಿದರೆ ತುಪ್ಪ ಕಾಣಿಸುವುದು. ಇಷ್ಟೆಲ್ಲ ಮಾಡಿದಾಗಲೇ ಹಾಲಿನಲ್ಲಿ ತುಪ್ಪ ತೋರುವುದು.

ಸಾ. : ಅದಂತೆಯೇ ಸಾಧನೆ ಮಾಡಿ ಪರಮಾತ್ಮನನ್ನು ಕಾಣಬೇಕು. ಹೇಳುತ್ತೇನೆ ಕೇಳು :

ದೂ. : ಅದೇನಿರುವುದು ಹೇಳು.

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಸಾ. : ತೋರುವುದೆ ಶಿವನ ರೂಪಾs, ಪಡೆಯದೆ ಗುರುಕೃಪಾs
ಆಗದು ಕರ್ಮಲೋಪಾs॥

ಏರು : ಶ್ರವಣವೆಂಬುವ ಕ್ಷೀರಾ ಪಡೆದು ಅದಕೆ ತ್ವರಾ
ಮನನವೆಂಬ ಹೆಪ್ಪನ್ನು ಹಾಕದೆ ಸರ್ವ ಆಸೆಯೆಂಬುದನೂಕದೆ            1

ಸದಾಶಿವನೆಂಬ ಸಾಕ್ಷಾತ್ಕಾರ (ಚಲತಿ)
ಸದಾಶಿವನೆಂಬುವ ಸಾಕ್ಷಾತ್ಕಾರ ತುಪ್ಪ ತೋರುವುದೇ
ದೂತೆ ತೋರುವದೇ                                              2

ಭವಗುಣ ಅಳಿದು ಶಿವಗುಣ ಸುಳಿದು
ಅಷ್ಟಮದಗಳನೆಲ್ಲ ತುಳಿಯದೆ ಮೂರು ತಾಪಗಳನ್ನು ಕಳೆಯದೆ          3

ಶಿವರೂಪವೆಂಬುದು ಬಯಲ ಭ್ರಮೆ (ಚಲತಿ)
ಶಿರೂಪವೆಂಬುದು ಬಯಲಭ್ರಮೆಯಲ್ಲಿ ನಿಂತು
ಹೊಳೆಯುವುದು ಮುಂದೆ ಇಳಿಯುವುದು            4

ಅಮ್ಮಾ, ಮಾಡಬೇಕಾದ ಕ್ರಿಯೆಗಳನ್ನೆಲ್ಲಾ ಮಾಡದೆ ಹಾಲಿನಲ್ಲಿ ತುಪ್ಪ ಹೇಗೆ ತೋರುವುದಿಲ್ಲವೋ ಹಾಗೆ ಈ ಶರೀರವೆಂಬ ಗಡಿಗೆಯನ್ನು ತೊಳೆಯದೆ, ಅದರಲ್ಲಿ ಗುರುಬೋಧೆಯೆಂಬ ಪವಿತ್ರವಾದ ಹಾಲನ್ನು ತುಂಬದೆ, ಮನೆವೆಂಬ ಹೆಪ್ಪನ್ನು ಹಚ್ಚದೆ, ಅರಿವೆಂಬ ಕಡಗೋಲಿನಿಂದ ಕಡೆಯದೆ, ಚಿನ್ಮಯವೆಂಬ ಬೆಣ್ಣೆಯನ್ನು ಪಡೆಯದೆ, ಅದನ್ನು ಶಿವಯೋಗವೆಂಬ ಅಗ್ನಿಯಿಂದ ಕಾಸದೆ, ಸದಾಶಿವನೆಂಬ ಸಾಕ್ಷಾತ್ ತುಪ್ಪವು ಹೇಗೆ ದೊರಕೀತು? ದೂತೆ, ನಾನೀಗ ಶಿವಯೋಗ ಸಾಧನೆಯಲ್ಲಿ ಮಗ್ನಳಾಗುವೆನು.

ದೂ. : ಶಿವಯೋಗ ಸಾಧನೆ ಮಾಡಿದರೆ ಶಿವನು ಒಲಿಯುವನೆ?

ಸಾ. : ಅಮ್ಮಾ, ಅಗತ್ಯವಾಗಿ ಒಲಿಯುವನು. ಅಂಬಾ ಎಂದು ಕರೆಯುವ ಕರುವಿನ ಧ್ವನಿಯನ್ನು ಕೇಳಿದ ಆಕಳು ಇದ್ದಲ್ಲಿಗೆ ಓಡು ಬರುವಂತೆ, ಸಾಂಬಾ ಎಂದು ಕರೆಯುವ ಧ್ವನಿ ಕಿವಿಗೆ ಬಿದ್ದಾಕ್ಷಣವೇ ಅಂತಃಕರುಣಿಯಾದ ಸಾಂಬನು ಭಕ್ತನ ಬಾಗಿಲಿಗೆ ಬಂದು, ಅವನ ಮನದ ಬಯಕೆಯನ್ನು ಪೂರೈಸುವನು. ಅವನಿಗೆ ಬಂದ ವಿಪತ್ತನ್ನು ಬಯಲು ಮಾಡುವನು. ಆದ್ದರಿಂದ ಮಾಯಾ ಪ್ರಪಂಚಕ್ಕೆ ಮರುಳಾದ ಮಾನವರು ಮಾಯೆಯನ್ನು ತೊರೆದು ಸತ್ವಗುಣಯುತರಾಗಿ ಬಾಳಿದರೆ ಮುಕ್ತಿಯನ್ನು ಹೊಂದಬಲ್ಲರು. ಸತ್ವಗುಣವೇ ಸೌಖ್ಯದ ಬೀಜ! ಸತ್ವಗುಣದಲ್ಲಿಯೆ ಸದಾಶಿವನಿರುವನು!! ಸದಾಶಿವ ಎನ್ನುವವರಿಗೆ ಸದಾಸುಖ ಇದ್ದೇ ಇದೆ. ಕೂತಲ್ಲಿ ನಿಂತಲ್ಲಿ ಸದಾ ಶಿವಾ ಶಿವಾ ಅಂದವರಿಗೆ ಮುಕ್ತಿ ಸಿಕ್ಕೆ ಸಿಗುತ್ತದೆ. ದೂತೆ, ನೀನಿನ್ನು ಹೊರಡಬಹುದು. ನಾನು ಶಿವಯೋಗದಲ್ಲಿ ಮಗ್ನಳಾಗುವೆನು. (ಸಾತ್ವಿಕಿ ಶಿವಯೋಗದಲ್ಲಿ ಮೈಮರೆತು ಕೂಡ್ರುತ್ತಾಳೆ. ಅಲ್ಲಮನು ಪ್ರವೇಶಿಸುವನು.)

ಪದ : ತಾಳ ತೀವ್ರ ಆದಿತಾಳ; ರಾಗ ಮಿಶ್ರಕಾಪಿ (ಚಕ್ಕಡ)
ಅಲ್ಲಮ. :

ಏನು ಧನ್ಯಳೇsss ಮಾನಿನಿss॥

ನಿತ್ಯ ಭವವಿದನು ಹಳಿದು ಚಿತ್ತವೆಂಬುದೆನ್ನಲಿ ಬಲಿದು
ನಿತ್ಯ ನಲಿಯುವs ನಾರಿಏನು …..1

ಸದಮಲಾಂಗಿಯು ತನ್ನ ಹೃದಯಪೀಠದಿ ಎನ್ನ
ಕದಲದಂತಿರಿಸಿಹಳೊಏನು …..2

ಭಕ್ತಪ್ರಾಣಿ ಮಹೇಶ್ವರಾ ಭಕ್ತಾಹೀನನಾ ಶಂಕರಾ
ಭಕ್ತ ಹೃದಯ ಶಿವಮಂದಿರಾಏನು …..3

ಆಹಾ, ಸತ್ವಗುಣವೇ ಮೂರ್ತಿಮತ್ತಾಗಿ ನಿಂತ ಈ ಸಾತ್ವಿಕಿಯ ಧರ್ಮಕೀರ್ತಿಯನ್ನು ನಾನೆಂತು ಬಣ್ಣಿಸಲಿ? ಭಕ್ತರ ಇಷ್ಟಾರ್ಥವನ್ನು ಪೂರೈಸಲು ಅತ್ತಿತ್ತ ಸಂಚಾರ ಮಾಡಬೇಕೆಂದರೆ, ಈ ಸಾಧ್ವಿಯು ನನ್ನನ್ನು ತನ್ನ ಹೃದಯಪೀಠದಲ್ಲಿ ನಿಷ್ಠೆಯಿಂದ ಕಟ್ಟಿಬಿಟ್ಟಿರುವಳು. ಮಾಡುವುದೇನು? ನಾನು ಶಿವಶರಣರ ಆಳು! ಯಾರು ನನ್ನನ್ನು ಭಕ್ತಿಯಿಂದ ಸೇವಿಸುವರೋ ಅವರ ಸೇವೆಯನ್ನು ಮಾಡುವುದು ನನ್ನ ಧರ್ಮ. ಸಂಸಾರ ವ್ಯಾಮೋಹವನ್ನು ತೊರೆದು ಬಂಧು : ಬಾಂಧವರ ಸಹವಾಸದಿಂದ ಸರಿದು, ಆಶಾಪಾಶವನ್ನು ಹರಿದು, ನನ್ನನ್ನೇ ಮೊರೆಹೊಕ್ಕ ಭಕ್ತರನ್ನು ಬಿಡಲಿಕ್ಕೆ ಹ್ಯಾಗೆ ಬಂದೀತು? ಭಕ್ತರ ಕಷ್ಟವೇ ನನ್ನ ಕಷ್ಟ ಭಕ್ತರ ಸುಖವೇ ನನ್ನ ಸುಖ ಭಕ್ತರ ಚಿಂತೆಯೇ ನನ್ನ ಚಿಂತೆ. ನನ್ನ ಪ್ರಾಣದಂತಿರುವ ಸದ್ಭಕ್ತರನ್ನು ಅಗಲಿ ಅರೆಕ್ಷಣವಾದರೂ ನಾನಿರಲಾರೆ ಅವರು ಕೂತಲ್ಲಿ ಕೂಡ್ರುತ್ತೇನೆ ನಿಂತಲ್ಲಿ ನಿಲ್ಲುತ್ತೇನೆ ನಾನು ಚಿಂತಿಸಿದವರ ಚಿಂತಾಮಣಿ ಕಲ್ಪಿಸಿದವರ ಕಲ್ಪತರು ಕಾಮಿಸಿದವರ ಕಾಮಧೇನು!

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ (ಚಕ್ಕಡ)

ಧನ್ಯ ಧನ್ನಳೀಸತಿ ರನ್ನೆ ಎನ್ನೊಳು ತಾ
ಭಿನ್ನವಿಲ್ಲದ ಮನವೇಕಾಗಿ
ಶಿವಯೋಗದಲ್ಲಿ ಮನ ಲಯವಾಗಿ
ಕರ್ಪೂರ ಜ್ಯೋತಿ ಏಕಾಗುವ ರೀತಿ
ಶಿವನೆ ತಾನಾಗಿಹಳೋ ಗುಣವಂತಿ ಸತ್ಯವತೀ 1

ಸತ್ವಗುಣದಲ್ಲಿ ಸದಾಶಿವನಿರುವನು
ಸತ್ವಗುಣದಲ್ಲಿಯೇ ಸದ್ಭಕ್ತಿ
ಸದ್ಭಕ್ತಿ ಎಂಬುದೆ ತಾ ಸನ್ಮುಕ್ತಿ
ಎಂಬ ಶಾಸ್ತ್ರದ ರೀತಿ ತಿಳಿದ ಈ ಗುಣವಂತಿ
ಲೇಪವೇನಿಲ್ಲದೆ ಸಂಸೃತಿ ಶಿವರತಿ              2

ಧನ್ಯಳು! ಈ ಸಾತ್ವಿಕೆಯೇ ಧನ್ಯಳು!! ಇವಳ ಅಂತರಂಗ ಪೂಜೆ ಅಗಾಧವಾದುದು. ತದೇಕ ಚಿತ್ತದಿಂದ ನನ್ನನ್ನೇ ಧ್ಯಾನಿಸುತ್ತ ತಾನೇ ತಾನಾಗಿರುವ ಇವಳ ಇಷ್ಟಲಿಂಗದಲ್ಲಿ ನಾನೇ ಪರಂಜ್ಯೋತಿಯಗಿ ತೊಳಗಿ ಬೆಳಗುತ್ತೇನೆ.

(ಸಾತ್ವಿಕಿಯ ಸಮೀಪಕ್ಕೆ ಸುಳಿಯುವನು)

ಸಾ. : ಆಹಾ, ಇದೇನು ನನ್ನ ಸದ್ಗುರುವಿನ ಸುಳಿವು ಇಷ್ಟಲಿಂಗದಲ್ಲಿ ತೋರಿ, ತೋರಿದಲ್ಲಿಯೇ ಮಾಯವಾಯಿತು!

ಪದ : ತಾಳ ಕೇರವಾ; ರಾಗ ಭೈರವಿ

ತೋರಿ ಅಡಗಿದ ಗುರುವರ ಭವದೂರ
ಗುರುವರ ಭವದೂರ …..॥

ಇಷ್ಟಲಿಂಗದಲಿ ಸಂಚಾರ ತಾ ಗೈದ ಸದ್ಗುರುವರ
ಮಾಯವಾದನೊ ಗುರುವರ ಭವದೂರ
ಗುರುವರ ಭವದೂರ …..1

ಮನೋವಾಸಿ ಅಲ್ಲಮರಾಯ, ಕಂಡನೆನ್ನೊಳು ನ್ಯಾಯ
ಅಗಲಿಂತು ಮಾಯಾ ಗುರುವರ ಭವದೂರ
ಗುರುವರ ಭವದೂರ …..2

ದೇಶದೊಳು ಫಲಪುರವಾಸ ದೋಷರಹಿತ ಶ್ರೀಸಿದ್ಧೇಶ
ಗೈವದುಚಿತೆ ಮೊಸ ಗುರುವರ ಭವದೂರ
ಗುರುವರ ಭವದೂರ …..3

ಆಹಾ! ಆ ನನ್ನ ಸದ್ಗುರುವಿನ ಪಾದರ್ಶನವು ಮೇಲಿಂದ ಮೇಲೆ, ನನ್ನ ಇಷ್ಟಲಿಂಗದಲ್ಲಿ ಹೊಳೆದರೂ ಪ್ರತ್ಯಕ್ಷವಾಗಿ ನನ್ನೆದುರಿಗೆ ನಿಲ್ಲದಾಯಿತು. ಸತ್ವಗುಣದವಳೆಂದು ನನ್ನನ್ನು ಹೊಗಳುತ್ತಿರುವ ಪರಂಜ್ಯೋತಿ ಸ್ವರೂಪನಾದ ಸದ್ಗುರುವು ತಾನು ಕೊಟ್ಟು ವಚನವನ್ನು ಮರೆತನೆ? ಇಲ್ಲವೆ ನನ್ನಲ್ಲಿ ಏನಾದರೂ ಕೊರತೆಯನ್ನು ಕಂಡನೇ? ಸದ್ಗುರುವೇ ಗತಿ ಮತಿ ಎಂದು ನಂಬಿದ ನನ್ನನ್ನು ಬೇಕಾದರೆ ಪೊರೆಯಲಿ! ಸಾಕಾದರೆ ಇರಿಯಲಿ! ಸಾಕು : ಬೇಕು ಎನ್ನುವ ಚಿಂತೆ ನನಗೇಕೆ? ಅವನ ಚಿಂತೆಯಲ್ಲಿರುವುದು ಮಾತ್ರ ನನ್ನ ಧರ್ಮ. ಪರಮಾತ್ಮನು ಒಲಿವನೋ, ಒಲಿಯನೋ ಎನ್ನುವ ಚಿಂತೆ ನನಗೇಕೆ? ನಾನಂತೂ ಸರ್ವ ಕಾಲದಲ್ಲಿಯೂ ಸರ್ವಾಂಶದಿಂದಲೂ ಸದ್ಗುರುವೆ ಸದ್ಗತಿ ಎಂದು ಶಿವಧ್ಯಾನ ಮಾಡುತ್ತ ಇದ್ದು ಬಿಡುವೆನು.

. : ಆಹಾ! ಲೋಕದಲ್ಲಿ ಸತ್ವಗುಣದ ಕೀರ್ತಿ ಪ್ರಕಟವಾಗಲೆಂದು ಸಾತ್ವಿಕರನ್ನೇ ಪರೀಕ್ಷೆ ಮಾಡುವರುದು ನನಗೆ ರೂಢಿಯಾಗಿದೆ. ಈ ಊರ ದೊರೆಯಾದ ಕೌಶಿಕ ರಾಜನ ಮುಖಾಂತರ ಈಕೆಯ ಸತ್ವವನ್ನು ಪರೀಕ್ಷಿಸಿ ನೋಡುತ್ತೇನೆ. ಇವಳು ಈ ಸತ್ವ ಪರೀಕ್ಷೆಯಲ್ಲಿ ಗೆದ್ದುದಾದರೆ, ಇವಳನ್ನು ಕಲ್ಯಾಣಕ್ಕೆ ಬರಮಾಡಿಕೊಂಡು ಬಸವಾದಿ ಪ್ರಮಥರ ಸಮ್ಮುಖದಲ್ಲಿಯೇ ಸನ್ಮಾನಿಸುತ್ತೇನೆ. ಇರಲಿ, ನಾನೀಗ ಲೋಕೋದ್ಧಾರ ಮಾಡುತ್ತ ಕಲ್ಯಾಣದ ಕಡೆಗೆ ಸಾಗುವೆನು. (ಹೋಗುವನು.)

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ

ಸಾ. : ಸದ್ಗರುದೇವ ತನ್ನನ್ನು ತಾ ತೋರಿದ
ಲಿಂಗದಲ್ಲಿ ಗೋಚರವಾಗಿ ತಾ ಸರಿದ           ॥

ಎನ್ನೊಳು ದೋಷ ಇಲ್ಲವೋ ಲೇಶ
ಶ್ರೀ ಸರ್ವೇಶ ತಾ ಮೋಸ
ಯಾತಕೆ ಗೈದ ತನ್ನಯ ಪಾದ
ತೋರದಾದನು ಯಾಕೆ ತಾ ಇಂದ             1

ಭಕ್ತರ ಪ್ರಾಣ ಭಕ್ತಾಧೀನ
ಅಂಬು ನಿನ್ನ ಸುರಚಿರ ವಚನ
ಮರೆಯಲಿ ನನ್ನ ತೊರೆಯಲಿ ಅವನ
ಚರಣವೆ ಗತಿ ಎನಗನುದಿನ                     2

ಸದ್ಗುರೋತ್ತಮ ಪಾದದರ್ಶನವು ಮೇಲಿಂದ ಮೇಲೆ ನನ್ನ ಇಷ್ಟಲಿಂಗದಲ್ಲಿ ಹೊಳೆದರೂ ಪ್ರತ್ಯಕ್ಷವಾಗಿ ನನ್ನ ಮುಂದೆ ನಿಲ್ಲದಾಯಿತು. ನಾನು ಸತ್ವಗುಣಕ್ಕೆ ಅಧೀನನೆಂದು ಸಾರಿ ಹೇಳುತ್ತಿರುವ ಪರಂಜ್ಯೋತಿ ಸ್ವರೂಪದ ಆ ಸದ್ಗುರುವು ತನ್ನ ವಚನವನ್ನು ಮರೆತನೋ ಇಲ್ಲವೆ ನನ್ನ ಸತ್ವದಲ್ಲಿ ಏನಾದರೂ ಕೊರತೆಯನ್ನು ಕಂಡನೋ? ಇರಲಿ ಸರ್ವ ಆಸೆಯನ್ನು ಹರಿದು, ಸದ್ಗುರುವೇ ಗತಿಯೆಂದು ನಂಬಿರುವ ನನ್ನನ್ನು ಮರೆಯಲಿ ಇಲ್ಲವೆ ಅರಿಯಲಿ. ಆದರ ಚಿಂತೆ ನನಗೇಕೆ? ಅವನ ಚಿಂತನೆಯನ್ನು ಮಾಡುವುದೇ ನನ್ನ ಕೆಲಸವಲ್ಲದೆ, ಪರಚಿಂತೆಯನ್ನು ಅವನು ಮಾಡುವುದಿಲ್ಲವೇಕೆಂಬುದು ನನ್ನ ಕೆಲಸವಲ್ಲ. ಸರ್ವಕಾಲವೂ ಸರ್ವಾಂಶದಿಂದಲೂ ಸದ್ಗುರುವೇ, ನೀನೇ ಗತಿಯೆಂದು ಅವನ ಧ್ಯಾನವನ್ನು ಮಾಡುತ್ತ ಕೂಡ್ರುವೆನು.

* * *

೧೦
ಕೌಶಿಕರಾಜನ ಪ್ರವೇಶ

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ
ಕೌಶಿಕ :

ಇಂದ್ರಲೋಕಕ್ಕೊಪ್ಪುವಂಥ ಚಂದ್ರಮುಖಿಯಾದ ಒಬ್ಬ
ಸುಂದರಿಯನ್ನು ನಾ ಕಂಡೆ ಈ ದಿನಾ
ಬಣ್ಣಿಸಲೇನವಳ ಚೆಲ್ಲಿಕಿನಾ
ದೇಹದ ವರ್ಣಾ ಚಂದ್ರನ ಕಿರಣಾ
ಕಂಡು ಹಾರಿತೊ ಮಂತ್ರಿ ನನ್ನ ಸ್ಮರಣಾ ದಿವ್ಯ ರತ್ನಾ                           1

ಸುದ್ದ ಕಮಲಪತ್ರನೇತ್ರ ಮುದ್ದು ನಾರಿಯ ಗಾತ್ರ
ತಿದ್ದಿ ಮಾಡಿದ ಚಿನ್ನದ ಗೊಂಬೆ
ಭೂಮಿಗಿಳಿದು ಬಂದ ಭಾಸುರ ರಂಭೆ
ಮೋಹದ ಕಾಂತೆ ಕಾಣುವ ಭ್ರಾಂತೆ
ಪೊಂದಿ ನಿಂತಿಹೆ ಮನಕಿಲ್ಲ ಶಾಂತಿ ತಿಳಿ ಮಂತ್ರಿ                     2

ಎಲೈ ಮಂತ್ರೀಶನೆ, ಇಂದು ನಾನು ಸೈನ್ಯಸಮೇತನಾಗಿ ಕುದುರೆಯನ್ನೇರಿಕೊಂಡು ಉಡುತಡಿಯ ರಾಜಬೀದಿಯಲ್ಲಿ ಅತಿ ವೈಭವದಿಂದ ಬರುವ ಸಮಯದಲ್ಲಿ, ನಾನೆಂದೂ ನೋಡದಂಥ ಅಪ್ರತಿಮ ಸ್ತ್ರೀ ರತ್ನವೊಂದು ನನ್ನ ಕಣ್ಣಿಗೆ ಬಿತ್ತು. ಆ ತೇಜೋವತಿಯ ಸೌಂದರ್ಯವನ್ನು ನೋಡಿದ ಪುರುಷನೇ ಜಗದಲ್ಲಿ ಧನ್ಯನು! ಮಂತ್ರಿಯೇ. ಏನು ಹೇಳಲಿ? ಇಂಥ ಸುಕುಮಾರ ರತ್ನವನ್ನು ಹೆತ್ತ ತಂದೆ ತಾಯಿಗಳು ಅದೆಂಥ ಪುಣ್ಯಾತ್ಮರೋ ನಾ ಕಾಣೆ!! ಮಂತ್ರಿವರ್ಯ, ಮೇಲು ಮಾಳಿಗೆಯ ಮೇಲೆ ನಿಂತು ನೋಡುತ್ತಿದ್ದ ಅ ತರುಣಿಯ ಕಡೆಗೆ ನಾನು ಮುಖ ತಿರುಗಿಸಿದೊಡನೆ ಅವಳ ಎರಳೆಗಂಗಳ ನೋಟ ನನ್ನತ್ತ ಹೊರಳಿತು. ತತ್‌ಕ್ಷಣವೇ ನೋಟಗಳೆರಡೂ ಒಂದಕ್ಕೊಂದು ಕೀಲಿಸಿದವು. ಕಾಮನ ಬಾಣ ನನ್ನ ಹೃದಯದಲ್ಲಿ ನಾಟಿತು. ಆ ಚೆನ್ನಿಗ ನಾರಿಯ ಚೆಲ್ವಿಕೆಗೆ ನಾನು ಚಿಕತನಾದೆ. ಆಕೆಯನ್ನು ಇನ್ನೊಮ್ಮೆ ನೋಡಬೇಕೆಂದರೆ ವಿಧಿ ಅದಕ್ಕೂ ಅಡ್ಡ ಬಂದಿತು. ಕಣ್ಣಿಗೆ ಕತ್ತಲು ಕವಿಯಿತು. ಬುದ್ಧಿಗೆ ಭ್ರಮೆಯಾಯಿತು. ನಾನೆಂತೋ ಸೈರಿಸಿಕೊಂಡು ಅರಮನೆಗೆ ಬಂದುಮುಟ್ಟಿದೆನು. ನಾನು ಈಗ ಇಲ್ಲಿದ್ದರೂ ನನ್ನ ಮನ ಅವಳ ಸೌಂದರ್ಯದ ಸುತ್ತಲು ಸುಳಿದಾಡುತ್ತಲಿದೆ. ಆ ಸುಂದರಿಯನ್ನು ತಿದ್ದಿತೀಡಿ ಸೃಷ್ಟಿಸಲಿಕ್ಕೆ ಬ್ರಹ್ಮನ ಬುದ್ದಿ ಎಷ್ಟು ವ್ಯವಯಾಯಿತೋ ಏನೋ! ಎಂತಹ ಸೊಬಗಿನ ಸುಂದರಿ ಅವಳು! ಬ್ರಹ್ಮಸೃಷ್ಟಿಯಲ್ಲಿ ಅಂಥವಳೇ ಇನ್ನೊಬ್ಬಳಿರುವುದು ಸಾಧ್ಯವೇ ಇಲ್ಲ.

ಮಂತ್ರಿ : ರಾಜೇಂದ್ರಾ, ತಾವು ಹಾಗೆ ಭಾವಿಸಿದ್ದು ತಪ್ಪು, ಬ್ರಹ್ಮನಿರ್ಮಿತವಾದ ಈ ಸೃಷ್ಟಿಯಲ್ಲಿ ಒಂದರಕ್ಕಿಂತ ಇನ್ನೊಂದು ಮಿಗಿಲಾಗಿದೆ. ಚೆಲುವೆಗಿಂತ ಚೆಲುವೆಯರು ಬೇಕಾದಷ್ಟು ಇದ್ದಾರೆ. ಒಬ್ಬರ ತಲೆಯ ಮೇಲೆ ಇನ್ನೊಬ್ಬರ ಕೈ ಎನ್ನುವುದು ಗಾದೆಯ ಮಾತಾಗಿಲ್ಲವೆ? ವಿಚಾರ ಮಾಡಿ ನೋಡಿರಿ. ತಮ್ಮ ಪಟ್ಟದರಸಿಯಾದ ಪದ್ಮಿನಿ ಸಾಮಾನ್ಯ ಸುಂದರಿಯೆ? ಆಕೆಯ ಚೆಲ್ವಿಕೆಯೇ ಮಿಗಿಲೆಂದು ಇಡೀ ಲೋಕವೇ ಡಂಗುರ ಸಾರುತ್ತಲಿದೆ.

ಕೌಶಿಕ : ಛೇ, ಎಲ್ಲಿ ನನ್ನ ಪಟ್ಟದರಸಿ! ಎಲ್ಲಿ ಆ ನನ್ನ ಸುದತಿ!! ನನ್ನವಳು ಅವಳ ಪಾದದ ತುದಿಬೆರಳಿಗೂ ಸರಿಯಾಗಲಾರಳು. ಎಷ್ಟು ಹೊಗಳಿದರೇನು? ನೀರಿಗೋಳಿ ರಾಜಹಂಸಕ್ಕೆ ಸಮವಾದಿತೇ? ದುಂಡುದೋಳಿನ ಲಿಂಬೀ ವರ್ಣದ ಆ ನಳಿನಮುಖಿ ಸ್ವರ್ಗದಿಂದಲೇ ಇಳಿದು ಬಂದಿರಬೇಕು. ಇಲ್ಲದಿದ್ದರೆ ಮಾನವರಿಗೆ ಅಂಥ ಮನೋಹರ ರೂಪ ಎಲ್ಲಿಂದ ಬರಬೇಕು?

ಮಂತ್ರಿ : ಪ್ರಭುಗಳೇ, ತಾವು ಕಂಡ ಸುಂದರಿ ಲೋಕ ವಿಖ್ಯಾತಳಿರಬಹುದು ನಾನೂ ಒಪ್ಪುತ್ತೇನೆ. ಆದರೆ ತಮ್ಮ ಮನದಲ್ಲಿ ಮೂಡಿದ ವಿಚಾರವನ್ನು ತಿಳಿಸಿದರೆ ಸರಿಯಲ್ಲವೆ?

ಕೌಶಿಕ : ಹೇಳುತ್ತೇನೆ ಕೇಳು.

ಮಂತ್ರಿ : ಅದೇನಿರುವುದು ಹೇಳಿರಿ.

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ
ಕೌಶಿಕ :

ಲಗ್ನವಾಗುವೆ ನಾನು ಆ ಹರದಿ
ಹೋಗಿ ಕೇಳಿ ಬಾರೊ ಮಂತ್ರಿ ನೀ ತ್ವರದಿ॥

ಏರು :

ಸುಂದರಿ ಸರಸ ರೂಪಕೆ ಮನಸ
ಆಗಿ ನಿಂತಿಹೆ ನನಗಿಲ್ಲೊ ಸೊಗಸ
ಮಾಡೋ ನೀ ಸಾಹಸ ಕೂಡಿಸೊ ಹಂಸ
ಗಮನೆಯ ಬೇಗನೆ ಮಂತ್ರೀಶಾ                1

ಮಂತ್ರಿಯೆ ಏಳೊ ಪಯಣವ ತಾಳೊ
ಆಕೆಯ ಅಭಿಮತವನು ಕೇಳೊ
ಎನ್ನಯ ಪಟ್ಟದ ರಾಣಿ ಸ್ಪಷ್ಟವಾಗಿ
ಮಾಡುವೆನೆಂದು ಆಕೆಗೆ ಹೇಳೊ                2

ಮಂತ್ರೀಶನೆ ಆ ಸೊಬಗಿನ ಸುಂದರಿಯನ್ನು ಹೊಂದುವರೆಗೆ ಎನ್ನ ಮನಸ್ಸಿಗೆ ಶಾಂತಿ ಇಲ್ಲ. ನನ್ನನ್ನು ಲಗ್ನವಾಗಲು ಒಪ್ಪಿದರೆ ಅವಳೇ ನನ್ನ ಪಟ್ಟದರಸಿ ಆಗುವಳೆಂದು ಸ್ಪಷ್ಟವಾಗಿ ತಿಳಿಸು. ನೀನೀಗಲೆ ಹೋಗಿ ಅ ರತ್ನವು ನನ್ನ ಕೈಸೇರುವಂತೆ ಯತ್ನ ಮಾಡಬೇಕು.

ಮಂ. : ದೊರೆಗಳೇ, ತಾವು ಸಿಟ್ಟಾಗುವುದಿಲ್ಲ ಎಂದರೆ ಒಂದು ಮಾತು ಹೇಳಬೇಕೆಂದಿದ್ದೇನೆ.

ಕೌ. : ಯಾವ ಮಾತು?

ಮಂ. : ಪ್ರಭುಗಳಾದ ತಾವು ಪರಸ್ತ್ರೀ ವ್ಯಾಮೋಹಕ್ಕೆ ಬೀಳುವುದು ಒಳಿತಲ್ಲ.

ಕೌ. : ಮಂತ್ರೀಶನೆ, ನಿನ್ನಿಂದ ನೀತಿಬೋಧೆ ಕೇಳುವುದಕ್ಕೆ ನಾನು ನಿನ್ನನ್ನು ಕರೆಸಿಲ್ಲ. ಅರಸನ ಅಪ್ಪಣೆ ಪಾಲಿಸಲು ನಿನ್ನನ್ನು ಬರಮಾಡಿಕೊಂಡಿದ್ದೇನೆ.

ಮಂ. : ಪ್ರಭುಗಳೇ, ಆಗಲಿ ಒಡೆಯನ ಹೇಳಿಕೆ ಬಡಿಗನ ಮಾಟ! ಈ ದೊಡ್ಡ ಪಟ್ಟಣದಲ್ಲಿ ಆ ಸ್ತ್ರೀಯಳ ಮನೆಯನ್ನು ಎಲ್ಲಿದೆಯೋ ಹುಡುಕಿ ನೋಡಬೇಕು.

ಕೌ. : ಮಂತ್ರಿವರ್ಯಾ, ನೀನು ಆಕೆಯ ಮಂದಿರವನ್ನು ಹುಡುಕಬೇಕಾಗಿಲ್ಲ. ನಾನು ಈ ಮೊದಲೆ ದಾಸಿಯರ ಮುಖಾಂತರ ಅವಳಿರುವ ಸ್ಥಳ ಕುಲ ಗೋತ್ರ ಮೊದಲಾದವನ್ನು ತಿಳಿದುಕೊಂಡಿದ್ದೇನೆ. ನಮ್ಮ ರಾಜವಾಡೆಯ ಹಿಂದಿರುವುದೇ ಅವಳ ಮನೆ! ನಿರ್ಮಳ : ಸುಮತಿಯರೆಂಬ ಶಿವಶರಣರು ಅವಳ ತಾಯಿ : ತಂದೆಗಳು. ಅವಳಿಗೆ ಹದಿನಾರು ವರ್ಷ ವಯಸ್ಸಾಗಿದ್ದರೂ ಇನ್ನೂ ಮದುವೆಯಾಗಿಲ್ಲವಂತೆ!

ಮಂ. : ಇರಬೇಕು ಪ್ರಭುಗಳೇ; ಆದರೆ ಆ ಶಿವಶರಣರು ಸಾಮಾನ್ಯರಲ್ಲ; ಪರಧರ್ಮದವರೊಡನೆ ಶರೀರ ಸಂಬಂಧ ಬೆಳೆಸಲು ಅವರು ಒಪ್ಪಲಿಕ್ಕಿಲ್ಲ.

ಕೌ. : ಅದೇಕೆ ಒಪ್ಪುವುದಿಲ್ಲ? ರಾಜನಾದವನು ಯಾವಧರ್ಮದ ಸ್ತ್ರೀಯನ್ನಾದರೂ ಮದುವೆಯಾಗಬಹುದೆಂದು ಧರ್ಮಶಾಸ್ತ್ರವೇ ಹೇಳುತ್ತದೆ.

ಮಂ. : ದೊರೆಗಳೇ, ತಮ್ಮ ಮನಸ್ಸಿಗೆ ಬಂದಂತೆ ಮಾಡಿರಿ. ಆದರೆ ಈ ಕೆಲಸಕ್ಕೆ ನನ್ನನ್ನು ಕಳಿಸುವುದಕ್ಕಿಂತಲೂ ಬೇರೆ ದೂತಿಯೊಬ್ಬಳನ್ನು ಕಳಿಸುವುದು ಒಳಿತು.

ಕೌ. : ಅಂಥವಳು ಯಾರಿದ್ದಾಳೆ?

ಮಂ. : ರಾಜರತ್ನ ಶಿಖಾಮಣಿ, ಮಾಳಿ ಎಂಬ ಒಬ್ಬ ಮಾಟಗಾರ್ತಿ : ದೂತಿ ಇದ್ದಾಳೆ. ಹೆಂಗಸರ ಮನಸ್ಸನ್ನು ಒಡೆಸುವುದರಲ್ಲಿ ಸರಿಯಾದವರು ಯಾರೂ ಇಲ್ಲ. ಅವಳು ಇಂಥ ವಿಷಯದಲ್ಲಿ ಬಹು ಕುಶಲಗಾರ್ತಿ. ಅವಳನ್ನು ಕರೆಸಿ ಕೇಳುವುದು ಬಹಳ ಹಿತಕರ.

ಕೌ. : ಹಾಗಾದರೆ, ನೀನೇ ಹೋಗಿ ಅವಳನ್ನು ಕರೆದುಕೊಂಡು ಬಾ.

ಮಂ. : ಯಾಕಾಗಬಾರದು. (ತನ್ನಷ್ಟಕ್ಕೆ ತಾನೇ) ರಾಜರ ಬಿಟ್ಟಿ ಕೆಲಸವೇ ಇಂಥಾದ್ದು. ಮಾಳವ್ವ ಮನೆಯಲ್ಲಿ ಇದ್ದಾಳೋ ಇಲ್ಲವೋ ಕೇಳಿನೋಡುತ್ತೇನೆ. (ಮುಂದೆ ಹೋಗಿ) ಮಾಳಮ್ಮಾ, ಏ ದೂತೆ?

ದೂ. : ಯಾರಲಾ ಅವ, ಕರೆಯಾಂವಾ! ನಾನು ನಿದ್ದಿ ಹತ್ತಿ ಒದ್ದಾಡಲಾಕ ಹತ್ತೀನಿ. ಮ್ಯಾಗ ಇವಂದೊಂದು ಉಪದ್ರ!

ಮಂ. : ಅಲ್ಲ ಬೇss!

ದೂ. : ಅಲ್ಲ ಬೇಕಾದರೆ ಅಂಗಡಿಗೆ ಹೋಗು.

ಮಂ. : ಹಾಂಗಲ್ಲಬೇss !

ದೂ. : ಹಾಂಗಾರ ಆಗಲಿ, ಹ್ಯಾಂಗರ ಆಗಲಿ; ನಾ ಏನ ಮಾಡ್ಲಿ?

ಮಂ. : ಕೋಪಿಸಬೇಡಮ್ಮಾ.

ದೂ. : ಏನಂದಿ? ನನಗೆ ಅಮ್ಮಾ ಅಂತಿಯಾ? ಯಾವೊಂದು ಬರತಾವು; ಅಮ್ಮಾ ಅಂತ ಕರೀತಾವು. ಲೋಕದಾಗ ನಾನೇ ಮುದುಕಿ ಆಗಿನೇನು?

ಮಂ. : ಬಾಯಿ ನಿಂದೋ, ಬಾಡಗೀದೋ? ಒಂದೇ ಸವನೆ ಬಡಿಬಡಿಸಲಿಕ್ಕೆ ಹತ್ತಿಯಲ್ಲ; ಸುಮ್ನ ಬರತೀಯೋ? ಆಳ ಹಚ್ಚಬೇಕೋss?

ದೂ. : ಯಾರಪ್ಪಾ, ಅವ ಆಳ ಹುಚ್ಚಾಂವಾ?

ಮಂ. : ನಾನು ಮಂತ್ರೀಶಾ.

ದೂ. : ಮಂತರಸವಾ? ಮಂತರಸವ ಅದರ ಬಾಳ ಚಲೋ ಆತು. ಬಾ. ನನ್ನ ಗಂಡಗ ಕುಂದು ಆಗಿ ಮೂರು ದಿನಾ ಆಗೇತಿ. ಮಂತರಸಪ್ಪಾ.

ಮಂ. : ಏನೇ ಹುಚ್ಚಿ, ನಾನು ಮಂತ್ರಿಸುವವನಲ್ಲ; ಮಂತ್ರಸುವವನಲ್ಲ; ಮಂತ್ರೀಶ್ವರ. ಅಂದರೆ ಈ ಪಟ್ಟಣದ ಅರಸನ ಮಂತ್ರಿ!

ದೂ. : ಹೀಂಗ! ನಾ ಯಾರೋ ಅಂತ ಮಾಡಿದ್ದೆ. ನಂದs ತಪ್ಪಾತು. ಇದೊಂದು ತುಪ್ಪs ತಪ್ಪದಾಗ ಹಾಕಿಕೊಂಡು ಗಪ್ಪನ ನುಂಗಿ ಬಿಡು ನಮಸ್ಕಾರ ಮಾಡತೀನಿ. ಬರ‌್ರಿ ಯಾಕ ಬಂದಿದ್ರಿ?

ಮಂ. : ನಿನ್ನನ್ನು ಕರೆದುಕೊಂಡು ಬಾ : ಎಂದು ಕೌಶಿಕ ಮಹಾರಾಜರ ಅಪ್ಪಣೆಯಾಗಿದೆ.

ದೂ. : ಆಗಲಿ ನಿಮ್ಮ ಬೆನ್ನ ಹಿಂದ ಬರತೀನಿ ನಡೀರಿ.

ಮಂ. : ಆದಷ್ಟು ತೀವ್ರ ಬಾ. ನಾ ಮುಂದ ಹೋಗತೀನಿ. (ಹೋಗುವನು)

ದೂ. : (ಪ್ರವೇಶಿಸಿ) ದೊರೆಗಳೇ, ನಮಸ್ಕಾರ! ತಾವು ನನ್ನನ್ನು ಯಾಕರೆ ಕರಿಸಿದ್ದಿರಿ?

ಕೌ. : ಮಾಳಮ್ಮಾ, ಇತ್ತ ಬಾ ಹೆರಬೇಡ, ಸಮೀಪಕ್ಕೆ ಬಾ. ನಿನ್ನಿಂದ ಒಂದು ಮಹತ್ವದ ಕೆಲಸ ಆಗಬೇಕಾಗಿದೆ. ಈ ಊರಲ್ಲಿ ನಿರ್ಮಳ : ಸುಮತಿಯರೆಂಬ ಶಿವಶರಣರಿದ್ದಾರೆ.

ದೂ. : ಹೌದು, ಇದ್ದಾರೆ.

ಕೌ. : ಸರಸಮತಿಯಾದ ಸಾತ್ವಿಕಿಯೆಂಬ ಒಬ್ಬ ಮಗಳು ಅವರಿಗಿದ್ದಾಳೆ.

ದೂ. : ನೀನು ಅವಳಲ್ಲಿಗೆ ಹೋಗಿ, ನನ್ನೊಡನೆ ಲಗ್ನವಾಗಲು ಅವಳನ್ನು ಒಡಂಬಡಿಸಿಕೊಂಡು ಬಾ ಹೋಗು ತೀವ್ರ ಹೋಗು. ಇಷ್ಟು ಕೆಲಸವನ್ನು ಮಾಡಿಕೊಂಡುಬಂದರೆ. ನಿನಗೆ ಬೇಡಿದ್ದನ್ನು ಕೊಡುತ್ತೇನೆ.