. : ಅದೇನಿರುವುದು ಹೇಳು.

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ

ಮಾ. : ಸುಮ್ಮನ್ಯಾತಕೆ ಹಿಡಿವಿ ನೀ ಪಂಥ
ಕರವ ಮುಗಿವೆ ಬಾ ಸುರತಕೆ ಗುಣವಂತಾ॥

ಏರು : ಮಾಡದೆ ವಿಘ್ನ ನನ್ನನ್ನು ಲಗ್ನ
ಆಗಲು ಈ ಭೂಮಿಗೆ ರಮಣಾ
ಆಗುವಿ ಜಾಣಾ ಸೌಖ್ಯದ ಸದನಾ
ಏರುವಿ ಬಾ ಚಂದ್ರ ಸಮವದನಾ                1

ಸರ್ವಸುಖಕೆ ನೀ ಎರವಾಗಿ ಪ್ರಿಯಾ
ಮಂದಿ ಮಕ್ಕಳನೆಲ್ಲ ನೀ ನೀಗಿ
ಒಂಟಿಗನಾಗಿ ಹಾಳೂರ ಗೂಗಿ
ತರ ಇರುವುದು ಚಂದೆ ಬಾ ಯೋಗಿ            2

ಅಲ್ಲಮಾ, ಹಟವನ್ನು ಹಿಡಿಯಬೇಡ ಕೈಮುಗಿದು ಸೆರಗೊಡ್ಡಿ ಬೇಡುವೆ ನನ್ನ ಮಾತು ಕೇಳು ನನ್ನ ತಂದೆಯಾದ ಮಮಕಾರ ರಾಜನಿಗೆ ನಾನೊಬ್ಬಳೇ ಮಗಳು. ನನ್ನನ್ನು ನೀನು ಲಗ್ನವಾದರೆ ಈ ಬನವಾಸಿ ಪಟ್ಟಣಕ್ಕೆ ನೀನೇ ಅರಸನಾಗುವಿ. ಸಂಪತ್ತಿನ ಸುಪ್ಪತ್ತಿಗೆ ನಿನ್ನದಾಗುವುದು. ಮಾಂಡಲೀಕ ದೊರೆಗಳು ಬಂದು ನಿನಗೆ ನಮಸ್ಕಾರ ಮಾಡುವರು. ಭಟ್ಟಂಗಿಗಳು ನಿನ್ನನ್ನೇ ಹೊಗಳುವರು. ಸರದಾರ ಸುಭೇದಾರರು ಜೀಯಾ, ಏನಪ್ಪಣೆ ಎಂದು ನಿನ್ನೆದುರಿಗೆ ಕೈಕಟ್ಟಿಕೊಂಡು ನಿಲ್ಲುವರು. ನಗಾರಿ ನೌಬತ್ತು ಜಯಭೇರಿ ಯಾವಾಗಲೂ ಮೊಳಗುವವು. ನಾನು ಪಟ್ಟದರಸಿಯಾಗಿ ನಿನ್ನ ವಾಮ ಭಾಗವನ್ನು ಅಲಂಕರಿಸುವೆನು. ಅಂತಹ ರಾಜವೈಭವದಲ್ಲಿ ಮೆರೆಯುವುದು ನಿನಗೆ ಚಂದವೋ? ಅಥವಾ ಹಾಳೂರು ಸೇರಿದ ಗೂಗೆಯಂತೆ ಏಕಾಕಿಯಾಗಿ ಅರಣ್ಯವನ್ನು ಸೇರುವುದು ಚಂದವೋ? ವಿಚಾರ ಮಾಡಿ ವಿಚಾರವಂತ ಎನಿಸಿಕೊ.

. : ಬಲೇ ಬುದ್ಧಿವಂತ ಹೆಣ್ಣೇ, ಸೆಗಣಿಯ ಬೆನಕನಿಗೆ ಎಷ್ಟು ನೀರೆರೆದರೂ ದುರ್ಗಂಧ ಹೋಗದು ಇದ್ದಲಿಯನ್ನು ಇಪ್ಪತ್ತು ಸಾರೆ ತೊಳದರೂ ಅದರ ಕಪ್ಪು ಹೋಗದು ದುರ್ಗುಣದ ಮುದ್ದಿಯಂತೆ ಇದ್ದ ನಿನಗೆ ಎಷ್ಟು ಹೇಳಿದರೂ ಬುದ್ದಿಬಾರದು. ನಿನ್ನ ಕೊಬ್ಬೇರಿದ ಕಾಮಕಡಿಮೆಯಾಗಲೊಲ್ಲದು. ದುಷ್ಟ ಕಾಮವು ನಷ್ಟವಾಗಿ ಶುದ್ಧ ಪ್ರೇಮವು ಮೂಡದವರ ಕೂಡ ಮಾತಾಡಿ ಫಲವಿಲ್ಲ. ನಾನೀಗ ಹೊರಟೆ.

ಮಾ. : ಅಲ್ಲಮಾ ಎಲ್ಲಿಗೆ ಹೋಗುವಿ? ನಿನ್ನನ್ನು ಬಿಡುವವರಾರು?

ಪದ : ತಾಳ ಕೇರಾವ; ರಾಗ ಮಿಶ್ರಕಾಪಿ

. : ಛೀ ದುಷ್ಟೇ ಭ್ರಷ್ಟೇ ಸರಿ ಮುಟ್ಟದಿರೆನ್ನನು ನಿಲ್ಲುವುದಿಲ್ಲ ಇಲ್ಲೆ ನಾನು
ಸರಿ ಪೋಗುವೆ ಬಿಡು ಮಾರ್ಗವನು॥

ಅಲ್ಲಮ : ಛೀ ನೀಚೇ ಬರುವರೆ ಮೈಮೇಲೆ

ಮಾ. : ಬಿಡು ಒಲ್ಲೆನೆಂಬುದೀ ಸೊಲ್ಲಾ

. : ನಿನ್ನ ಬಲೆಯೊಳು ಬೀಳುವನಲ್ಲಾ

ಮಾ. : ಪ್ರಿಯ ಮಾಯೆಗೆ ಮಲೆತವರಿಲ್ಲಾ

. : ತೊಲಗಾಚೆ, ಮರುಳ ಮಾಯೆ ನಿನ್ನ ಬಲೆಗೆ ಬೀಳುವವ ನಾನಲ್ಲ.

ಮಾ. : ಹೇಳುತ್ತೇನೆ ಕೇಳು :

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಎನ್ನ ಹೊಂದಲು ಯಾಕೆ ಇಂಥ ಭಯವು

. : ವೀರರಾಗಿಹರು ನಿನ್ನಿಂದ ಲಯವು

ಮಾ. : ನನ್ನಿಂದ ಲೋಕದ ಹಿತವು

. :  ನಿನ್ನಿಂದ ಲೋಕದನಹಂತವು

ಮಾ. : ಪ್ರಿಯ ಅಲ್ಲಮಾ, ಮಾಯೆಗೆ ಮಲೆತು ನಿಂತು ಪಾರಾದವರು ಯಾರೂ ಇಲ್ಲ. ನಾನು ನಿನ್ನನ್ನು ವಶಮಾಡಿಕೊಳ್ಳದೆ ಬಿಡುವವಳಲ್ಲ. ನನ್ನ ಕೂಡ ಹಟ ಹಿಡಿದು ಮಹಾದೇವನು ಸಹ ಜಯ ಹೊಂದಿಲ್ಲ. ನನ್ನ ಮಾಯೆಯಿಂದಲೇ ಶಿವನು ಬಾಲೆಯರ ಸುತ್ತ ಬಾಲ ಗುಂಡಾಡಿಸುತ್ತಿರುವನು. ಜಡವಾಗಿರುವ ಗಂಗೆಯನ್ನು ಜಡೆಯಲ್ಲಿ ಕೂಡ್ರಿಸಿಕೊಂಡಿರುವನು. ಮಾಯಾಮೋಹಕ್ಕೆ ವಶನಾದ ಶಿವನು ನಿನ್ನನ್ನಗಲಿ ಅರಗಳಿಗೆಯಾದರೂ ಇರಲಾರೆನೆಂದು ತನ್ನ ಅರ್ಧ ಶರೀರವನ್ನೇ ಗೌರಿಗೆ ಕೊಟ್ಟು ಅರ್ಧನಾರೀಶ್ವರನಾದನು. ವಿಷ್ಣುವುಲಕ್ಷ್ಮಿಯನ್ನು ಬಿಟ್ಟಿರಲಾರದೆ ಅವಳನ್ನು ತನ್ನ ಎದೆಯ ಮೇಲೆ ಇರಿಸಿಕೊಂಡನು. ನಾನು ನಿನ್ನ ಪ್ರೀತಿಯ ಮಗಳು ಮುಟ್ಟಬೇಡೆವೆಂದು ಹೇಳಿದರೂ ಕೇಳದೆ, ಬ್ರಹ್ಮನು ಮರ್ಯಾದೆಯನ್ನು ಬಿಟ್ಟು ಮಗಳಾದ ಸರಸ್ವತಿಯನ್ನು ಲಗ್ನವಾಗಿ ನಾಲಗೆಯ ಮೇಲೆ ಕೂಡ್ರಿಸಿಕೊಂಡನು. ವಿಶ್ವಾಮಿತ್ರನು ಮೇನಕೆಯನ್ನು ಕಂಡು ಮೋಹಗೊಂಡು ಸಾವಿರ ವರ್ಷ ಮಾಡಿದ ತಪಸ್ಸನ್ನು ಹಾಳುಮಾಡಿಕೊಂಡು ಆಕೆಯೊಡನೆ ಚಕ್ಕಂದವಾಡಿದನು. ಸೀತೆಯನ್ನು ರಾವಣನು ಕದ್ದೊಯ್ಯಲು, ಹಾ! ಸೀತೆ ಎಂದು ಹಲುಬುತ್ತ ಶ್ರೀರಾಮನು ಆಕಾಶಕ್ಕೆ ಬಾಯಿ ತೆರೆದು ಅತ್ತನು. ಹನುಮಂತನು ಹಗ್ಗಾ : ತಿನ್ನುವಾಗ ಪೂಜಾರಿಯು ಹುಗ್ಗಿ ಬೇಡಿದನಂತೆ! ಎಂಥೆಂಥವರೆ ನಾಯಿಯಾಗಿ ಮಾಯೆಯ ಬೆನ್ನು ಹತ್ತಿರಲು, ಚಂಚಲ ಮನಸ್ಸಿನ ನಿಮ್ಮಂಥ ಮರುಳು ಸಾಧುಗಳು ಮಾಯೆಯನ್ನು ಮೂಲಿ ಗೊತ್ತಬಲ್ಲರೆ? ಸುಮ್ಮನೆ ಸಮ್ಮತಿಸಿದರೆ ಒಳಿತಾಯಿತು ಇಲ್ಲವಾದರೆ ನೀನು ಯೋಗಿ ಹೋಗಿ ಎಲ್ಲಮ್ಮನ ಜೋಗಿಯಾಗುವಿ ತಿಳಿದುನೋಡು.

. : ಎಲೆ ಹುಚ್ಚಳೇ, ಇಚ್ಛೆಗೆ ಬಂದಂತೆ ಒದರಬೇಡ ನಿನ್ನಿಂದ ಯಾರು ಸದ್ಗತಿಯನ್ನು ಹೊಂದಿರುವರು? ರೇಣುಕೆಯಾಗಿ ಜನಿಸಿ ಜಮದಗ್ನಿಯ ಗೋಣು ಕೊರಿಸಿ, ಕಾರ್ತವೀರ್ಯಾರ್ಜುನನ ಸಾವಿರ ತೋಳುಗಳನ್ನು ಕತ್ತರಿಸಿ, ಕ್ಷತ್ರಿಯ ವಂಶವನ್ನು ನಿರ್ಮೂಲ ಮಾಡಿದೆ. ಸೀತಯಾಗಿ ಬಂದು ಶ್ರೀರಾಮನನ್ನು ಅಡವಿಗೇಡು ಮಾಡಿ, ರಾವಣನ ಕುಲಕೋಟೆಯನ್ನು ನಿರ್ಮೂಲಗೊಳಿಸಿದೆ. ದ್ರೌಪದಿ ಎಂಬ ಹೆಸರಿನಿಂದ ಹುಟ್ಟಿ ಕೌರವ : ಪಾಂಡವರಲ್ಲಿ ಜಗಳ ಹಚ್ಚಿ ಕುಲಕೋಟಿಯನ್ನು ನಾಶಮಾಡಿದೆ. ಹೆಣ್ಣಿನಿಂದ ಹೆಚ್ಚಳವನ್ನು ಕಂಡವರಾರು? ಪರಮಾತ್ಮನಲ್ಲಿ ಭಕ್ತಿ ಇಟ್ಟ ಸಾಧು ಸಜ್ಜನರನ್ನು ಅಂಜಿಸಿ ಅಧೋಗತಿಗೆ ಇಳಿಸುತ್ತಿರುವೆ. ಎಲೆ ಮಾಯೆ, ನಿನ್ನ ಮಾರನಾಟ ನನ್ನ ಮುಂದೆ ನಡೆಯದು. ಮಾರ್ಗವನ್ನು ಬಿಡು, ಹೊರಟು ಹೋಗುತ್ತೇನೆ.

ಮಾ. : ಅಲ್ಲಮಾ, ಎಲ್ಲಿಗೆ ಹೋಗುವಿ? ನಿನ್ನನ್ನು ಬಿಡಲಾರೆ.

. : ಏನು ಮಾಡುವೆ?

ಮಾ. : ನಿನ್ನನ್ನು ಬಂಧಿಸುತ್ತೇನೆ.

. : ನಾನು ನಿನ್ನ ಕೈಯಲ್ಲಿ ಸಿಕ್ಕರಲ್ಲವೆ ಬಂಧಿಸುವುದು?

ಮಾ. : ನಿನ್ನನ್ನು ಬಂಧಿಸದೆ ಇದ್ದರೆ ನಾನು ಮಾಯೆಯಲ್ಲ.

. : ನೀನು ದೇಹಿಯನ್ನು ಹಿಡಯಬಹುದು ನಾನು ನಿರ್ದೇಹಿ!

(ಹಿಡಿದು ಹೋಗುವಳು; ಅಲ್ಲಮನು ಕಂಡರೂ ಕೈಗೆ ಸಿಗದಂತಾಗುತ್ತಾನೆ.)
ಮಾ. : ಇದೇನು? ನಾನು ಬರಿಯ ಬಯಲಿಗೆ ತೆಕ್ಕೆ ಹಾಕುತ್ತಿರುವೆನಲ್ಲ! ಇದೆಂತಹ ಮಂಗಮಾಯೆ!! ಅಲ್ಲಮ ಕಾಣುತ್ತಾನೆ ಅಪ್ಪಲು ಹೋದರೆ ಅವನ ಶರೀರವೇ ಕೈಗೆ ಹತ್ತಲೊಲ್ಲದು. ಬಯಲಿಗೆ ತಕ್ಕೆ ಹಾಕಿದಂತೆ ಅನಿಸುತ್ತದೆ. ಎಂಥ ಸೋಜಿಗವಿದು! ಇವನನ್ನು ವಶಮಾಡಿಕೊಳ್ಳುವ ಬಗೆ ಹೇಗೆ? ಕಣ್ಣಿಗೆ ಕಂಡದ್ದು ಕೈಗೆ ಸಿಗದಿದ್ದರೆ ನಾನು ಮಾಡುವುದೇನು? ಇದೆಂತಹ ಅಪಮಾನ.

ಪದ : ತಾಳ ಕೇರಾವ; ರಾಗ ಮಿಶ್ರಕಾಪಿ

ಮಾ. : ಮಾಡಲೇನು ಗತಿಯ ಮಾನವು ಹೋಯಿತೆ
ಅಪಹಾಸ್ಯವಾಯಿತೆ॥

ಏರು : ಶರಣರ ಮಹಿಮಾ, ನಾ ತಿಳಿಯದೆ ಹಮ್ಮಾ
ತಾಳಿ ಹೊಂದಿದೆ ಜಗದೊಳು ಗೋಮಾ

ಸುಡು ನನ್ನ ಜಲ್ಮಾ, ಪ್ರಭು ಅಲ್ಲಮಾ ವಶನಾಗಲಿಲ್ಲಮ್ಮಾಅಪ…. 1

ಆಯಿತನರ್ಥ ಗೌರಿಯ ನಾಥ ನಗುವನು ಕೇಳುತ ಈ ಅಪವಾರ್ತಾ
ಯಾತಕೆ ಪಂಥ ಗೈದೆನೊ ವ್ಯರ್ಥ ದೊರೆಯನು ಗುರುನಾಥಾಅಪ… 2

ಶಿವಶಿವಾ, ನಾನು ಎಂಥ ಅಪಮಾನಕ್ಕೆ ಗುರಿಯಾದೆನಲ್ಲಾ! ಅಲ್ಲಮನನ್ನು ಗುಲಾಮನನ್ನಾಗಿ ಮಾಡಿತಂದರೆ ನನಗೆ ಹೌದು ಮಾಯೆ. ಎಂದು ಕರೆ. ಇಲ್ಲದಿದ್ದರೆ ಶಿವ ಶರಣರ ಮನೆಯ ಮುಂದಿನ ನಾಯಿ ಎಂದು ಕರೆ : ಎಂದು ಪರಮೇಶ್ವರ ಪಾರ್ವತಿಯರ ಮುಂದೆ ಪಂಥ ಮಾಡಿ ಇಲ್ಲಿಗೆ ಬಂದೆ. ನನ್ನ ಪಂಥವೀಗ ಸುಳ್ಳಾಯಿತು. ನಗುವವರ ಮುಂದೆ ನಗೆಪಾಟಲು ಆಯಿತು ನನ್ನ ಸ್ಥಿತಿ! ನನ್ನ ತಾಯಿಯಾದ ಪಾರ್ವತೀದೇವಿ ನನ್ನ ಆಗಮನವನ್ನೇ ನೋಡುತ್ತಿರಬಹುದಲ್ಲವೇ? ಆಕೆಯ ಬಳಿಗೆ ಹೇಗೆ ಹೋಗಲಿ? ಮಾನವನ್ನು ಕಳೆದುಕೊಂಡು ಮರ್ತ್ಯಲೋಕದಲ್ಲಿ ಇರುವುದಕ್ಕಿಂತಲೂ ಕೈಲಾಸಕ್ಕೆ ತೆರಳುವುದೇ ಲೇಸು. ನಾನೀಗಲೇ ಹೋಗಿ ನಡೆದ ಸಂಗತಿಯನ್ನು ಅವಳಿಗೆ ತಿಳಿಸುತ್ತೇನೆ.

* * *


ಪಾರ್ವತೀ ಮಂದಿರ ಪ್ರವೇಶ

ಪಾರ್ವತಿ : (ತನ್ನಷ್ಟಕ್ಕೆ) ಭೂಲೋಕಕ್ಕೆ ಹೋದ ನನ್ನ ಮಗಳು, ಮಾಯೆ ಇನ್ನೂ ಏಕೆ ಬಂದಿರಲಿಕ್ಕಿಲ್ಲ! ಅಲ್ಲಮನು ಆಕೆಗೆ ವಶವಾದನೋ ಇಲ್ಲವೋ ತಿಳಿಯಲಿಲ್ಲ. ಆಕೆ ಹಾಗೇ ತಿರುಗಿ ಬರುವವಳಲ್ಲ! ಮಾಯೆಗೆ ಮೀರಿದ್ದು ಜಗದಲ್ಲಿ ಯಾವುದಿದೆ? ಇದೇನು, ಆಕೆಯೇ ಬಂದಳಲ್ಲ!…. ಯಾಕೆ ಮಾಯೆ? ಅಲ್ಲಮನನ್ನು ಗೆದ್ದು ತಂದೆಯಾ?

ಮಾಯೆ : ತಾಯಿ, ನಾನು ಗೆದ್ದು ತರಲಿಲ್ಲ.

ಪಾ. : ಅಂದರೆ ಸೋತು ಬಂದೆಯಾ?

ಮಾ. : ಹೋದ ಕಾರ್ಯ ಸಫಲವಾಗಲಿಲ್ಲ. (ಅಳುವಳು)

ಪಾ. : ಅಳಬೇಡ ನನ್ನ ಕಂದ, ಅಳಬೇಡ. ಆ ಅಲ್ಲಸಲ್ಲದ ಅಲ್ಲಮನು ನನ್ನ ಮಾಯೆಗೆ ಅಪಮಾನ ಮಾಡಿದನೆ! ಇರಲಿ ಈಗೇನು ಮಾಡಲಿ? ಘಾತವಾಯಿತು! ಪತಿಯ ಮುಂದೆ ಮಾಡಿದ ಪಂಥ ಮಣ್ಣು ಪಾಲಾಯಿತು. ನಾನು ಅವನಿಗೆ ಹೇಗೆ ಮೋರೆಯನ್ನು ತೋರಿಸಲಿ? ಅಪಮಾನದ ದಳ್ಳುರಿ ನನ್ನ ದೇಹವನ್ನೇ ದಹಿಸತೊಡಗಿದೆ. ನನ್ನ ಪತಿದೇವನಿಗೆ ಏನೆಂದು ಹೇಳಲಿ?

ಪರಮಾತ್ಮ : (ಪ್ರವೇಶಿಸಿ) ಇಂದಿಗೆ ಮೂರು ದಿನಗಳಾದವು. ಪಾರ್ವತಿಯು ನನಗೆ ಮುಖವನ್ನೇ ತೋರಿಸಿಲ್ಲ; ತಿಳಿಯಿತು. ಆ ಮಾಯೆ ಅಲ್ಲಮನಿಗೆ ಸೋತು ಬಂದಿರಬೇಕು. ಏನೇ ಆಗಲಿ; ಒಳಗೆ ಹೋಗಿ ಅವಳನ್ನು ಮಾತಾಡಿಸುತ್ತೇನೆ. ಪ್ರಾಣವಲ್ಲಭೆ, ಪಾರ್ವತಿ! ಏನು ಮಾಡುತ್ತಿರುವೆ? ಏಕೆ? ಮಾತಾಡಿಸಿದರೂ ಸುಮ್ಮನೆ ಇರುವೆಯಲ್ಲ? ಹೇಳುತ್ತೇನೆ ಕೇಳು :

ಪದ : ತಾಳ ಕೇರವಾ ; ರಾಗ ಮಿಶ್ರಕಾಪಿ

ಎಲ್ಲಿಹೆ ಕಾಂತೆ ಗೌರಿ ಮೂರು ದಿನ ನಿನ್ನ ಮಾರಿss
ಇಲ್ಯ್‌ಕ ಹೇಳೆ ನಾರಿ॥

ಚಿಂತೆಯು ಮನಸಿಗೆ ಭ್ರಾಂತಿಯು ಏತಕೆ
ಬಾಡಿದ ಕಮಲದಂತೆ ನಿನ್ನ (ಚಲತಿ)
ಮುಖವ್ಯಾಕೆ ಆಗಿರುವುದು ಸಣ್ಣ
ದೇಹದ ಸ್ಥಿತಿಯೇಕೆ ಆಗಿರುವುದು ಸುಣ್ಣ
ಪೇಳೆ ನಿನ್ನ ಮನಸ್ಸಿನ ಹದನಾ                  1

ಅರಗಳಿಗೆನ್ನನು ಅಗಲಿರದ ನೀನು
ನನ್ನನ್ನು ನೋಡದೆ ಮಮಕರಿಸೆ (ಚಲತಿ)
ಯಾತಕ್ಕೆ ಕುಳಿತೆ ಪಟ್ಟದರಸಿ
ಫಲಪುರದೀಶನ ಮರೆಯುವದುಚಿತೆ
ಪೇಳೆ ನಿನ್ನ ಮನಸ್ಸಿನ ಹದನಾ                  2

ಎಲೆ ಪಾರ್ವತಿ, ಇಂದಿಗೆ ಮೂರು ದಿನಗಳಾದರೂ ನೀನು ನನ್ನ ದರ್ಶನಕ್ಕೆ ಬಂದಿಲ್ಲವೇಕೆ? ಈಕೆ ಯಾರು? ಮಾಯೆಯೇನು? ಭೂಲೋಕದಿಂದ ಯಾವಾಗ ಬಂದಳು? ಅವಳು ಅಲ್ಲಮನನ್ನು ಗೆದ್ದು ತಂದಿರಲೇಬೇಕು!! ಮಾಯೆ, ಹೀಗೇಕೆ ಮುಖ ಹೊರಳಿಸುತ್ತಿ? ತಿರುಗಿ ನೋಡು. ಅಲ್ಲಮನನ್ನು ಎಲ್ಲಿ ಮುಚ್ಚಿಟ್ಟಿರುವೆ? ಅವನನ್ನು ನನಗೆ ತೋರಿಸಬಾರದೆ? ಈಕೆ ಅಲ್ಲಮನನ್ನು ಗೆಲ್ಲದೆ ಹಿಂದಿರುಗಿ ಬರುವವಳೇ ಅಲ್ಲ! ಎಂಥೆಂಥವರೋ ಈಕೆಯ ನಿರಿಗೆಯಲ್ಲಿ ಜೋತಾಡುತ್ತಿರುವರು! ಆ ಅಲ್ಲಮನು ಇವಳ ಮುಂದೆ ಎಷ್ಟರವನು?

ಷಾ. : ಪ್ರಾಣನಾಥಾ, ನಿನ್ನ ಮಾತು ಗೆದ್ದಿತೆಂದು ಬಿದ್ದವರನ್ನು ತಿರಬೋಕಿ ಮಾಡಿ ಮಾತನಾಡುವುದು ಸರಿಯಲ್ಲ. ಸೋಲು ಗೆಲುವುಗಳು ಎಲ್ಲರಿಗೂ ಉಂಟು ನನ್ನ ಮಾಯೆಯಂತೂ ಅಲ್ಲಮನಿಗೆ ಸೋತು ಬಂದದ್ದು ನಿಜ. ನನ್ನ ಪಂಥ ವ್ಯರ್ಥವಾಯಿತು. ನಾನು ಮುಖವೆತ್ತಿ ನೋಡದಂತಾಯಿತು. ಅದಕ್ಕೆ ಗತಿಯೇನು ಕಾಂತಾ? ಹೇಳುತ್ತೇನೆ ಕೇಳು :

ಪದ : ತಾಳ ದೀಪಚಂದಿ; ರಾಗ ಕಾಪಿ

ಮುಂದಿನ ಗತಿಯಾ ಪೇಳೈ ರಾಯಾ
ಎನ್ನಯ ಮಾಯಾ ಹೊಂದಿತೊ ಅಪಜಯಾ
ಎನ್ನಯ ಮಾತು ಹೋಯಿತೊ ನಾಥಾ
ಕೇಳುತ ಈ ವಾರ್ತಾ ಸರ್ವದೇವತಾ
ನಗುವರೋ ಕಾಂತಾ
ಸಕಲ ಪ್ರಮಥರು ಹಾಸ್ಯಗೈವರೋ ಕಾಂತಾ
ಅಲ್ಲಮ ಕೈವಶ ಆಗುವಂಥ ಸಾಹಸ ಪೇಳೈ ಅರಸಾ

ಪ್ರಾಣನಾಥಾ, ಅಲ್ಲಮಪ್ರಭುವನ್ನು ಗೆಲ್ಲಲು ಹೋದ ಮಾಯೆಯು ಸೋತು ಬಂದಳು. ಜಗದ ಜನರೆದುರು ನನಗೆ ಅಪಮಾನವಾಯಿತು. ಇಂದಿನವರೆಗೆ ನನಗೆ ಮೀರಿ ನಿಂತವರು ಯಾರೂ ಇದ್ದಿಲ್ಲ. ನಿನ್ನ ಮಾತು ಮೀರಿ ಮಾಯೆಯನ್ನು ಕಳಿಸಿ ಅಪಹಾಸ್ಯಕ್ಕೆ ಗುರಿಯಾದೆ. ಅಲ್ಲಮನನ್ನು ಗೆಲ್ಲದೆ ನನ್ನ ಮನಸ್ಸಿಗೆ ಸಮಾಧಾನವಿಲ್ಲ. ಇದಕ್ಕೆ ಗತಿಯೇನು ದೇವಾ?

. : ಪಾರ್ವತೀ, ನೀನೆಂಥ ಹುಚ್ಚಿ! ಸತ್ಯ ಶಿವಶರಣರು ಮಾಯೆಗೆ ಮರುಳಾಗುವವರಲ್ಲ. ಅಂಥ ಶಿವಶರಣರನ್ನು ನಿಂದಿಸುವುದು ಒಳಿತಲ್ಲ. ಬತ್ತಿ : ಎಣ್ಣೆಗಳ ಸಂಗಮದಿಂದಲೇ ಬೆಳಕುಬೀಳುತ್ತದೆ. ಅದರಂತೆಯೇ ಸತಿ : ಪತಿಗಳಾದ ನಾವಿಬ್ಬರೂ ಒಂದಾಗಿದ್ದರೆ ಈ ಜಗತ್ತು ಬೆಳಗುವುದು; ಇದನ್ನರಿತು ಆಚರಿಸುವುದು ಒಳಿತು. ನೀನು ಇನ್ನು ಮುಂದೆ ಶಿವಶರಣರ ಗೋಡವೆಗೆ ಹೋಗಬೇಡ. ಹಿಂದೊಮ್ಮೆ ಹೀಗೆಯೇ ಮಾಡಿ ಮೋರೆಯನ್ನು ಒಣಗಿಸಿಕೊಂಡು ಕುಳಿತಿದ್ದೆ.

ಪಾ. : ಪ್ರಾಣಕಾಂತಾ, ನಾನು ಯಾವಾಗ ಮೋರೆಯನ್ನು ಒಣಗಿಸಿಕೊಂಡು ಕೂತಿದ್ದೆ?

. : ಯಾಕೆ ಪಾರ್ವತಿ ನಿನಗೆ ನೆನಪಿಲ್ಲವೆ? ತೊಂಬತ್ತಾರು ನೂರು ಗಣಾಧೀಶ್ವರರಿಗೆ ಉಣಬಡಿಸುವೆನೆಂದು ಉಬ್ಬುಬ್ಬಿ ಮಾತನಾಡಿ ಸರ್ವರಿಗೂ ಆಮಂತ್ರಣ ನೀಡಿದೆ. ಅಡಿಗೆ ಮಾಡಲು ದೇವತೆಗಳನ್ನು ಕೂಡಿಸಿ ಪರ್ವತಪ್ರಾಯದ ಅನ್ನದ ರಾಶಿಯನ್ನೇ ಸಿದ್ಧಪಡಿಸಿದಿ. ಆ ಅಡಿಗೆ ಒಬ್ಬ ಗಣೇಶ್ವರನಿಗೇ ಸಾಲದಾಯಿತು. ಆಗ ಮಿಕ್ಕ ಗಣಾಧೀಶ್ವರರು ಬರಲು ದಿಕ್ಕು ತೋರದೆ ನೀನು ಅಡಕಲ ಗಡಿಗೆಯಲ್ಲಿ ಅಡಗಿಕೊಂಡು ಕೂತುದು ನೆನಪಿಲ್ಲವೇ? ಪಾರ್ವತೀ, ಇಂಥ ಶಿವಭಕ್ತರೊಡನೆ ಸರಸ ಮಾಡುವುದು ತರವಲ್ಲ. ಶಿವನಿಗಿಂತಲೂ ಶಿವಶರಣರು ದೊಡ್ಡವರು! ನಿನ್ನ ದೊಡ್ಡಿಸ್ತನ ನಡೆದರೆ ನನ್ನ ಮುಂದೆ ನಡೆದೀತು. ಶಿವಶರಣರ ಮುಂದೆ ಅದೆಂದೂ ನಡೆಯಲಾರದು. ಭಕ್ತರ ಕಾಯವೇ ನನ್ನ ಕಾಯ! ಅವರ ಭಕ್ತಿಗೆ ನಾನೇ ತತ್ತರಿಸುತ್ತೇನೆ. ಅವರ ಬಯಕೆಯನ್ನು ಈಡೇರಿಸುವುದೇ ನನ್ನ ಕರ್ತವ್ಯ. ನಿಜವಾಗಿಯೂ ನಾನು ಭಕ್ತಿ ಕಂಪಿತ.

ಪಾ. : ಶರಣರಿಗೆ ಇಂಥ ಮಹಿಮೆ ಬಂದಿರುವುದು ಯಾರಿಂದ?

. : ನಮ್ಮಿಂದ.

ಪಾ. : ಆ ಶರಣರಿಗೆ ಇಂಥ ಮಹಿಮೆ ನಮ್ಮಿಂದ ಬರುವುದಾದರೆ, ನಾವೇಕೆ ಅವರಿಗೆ ಅಂಜಿ ನಡೆಯಬೇಕು.

. : ಪಾರ್ವತಿ, ಅವರಿಗೆ ಅಂಜಲು ಕಾರಣವೊಂದಿದೆ. ಭಕ್ತರು ತಪಸ್ಸು ಮಾಡಿ ನನ್ನನ್ನುಭಕ್ತಿಯಿಂದ ಬಂಧಿಸುತ್ತಾರೆ. ಅವರು ಬೇಡಿದುದನ್ನು ಕೊಡುವುದು ನನ್ನ ಧರ್ಮ! ನೀನು ಮಾತ್ರ ಅಂಥ ಶರಣರ ಗೊಡವೆಗೆ ಹೋಗಬೇಡ.

ಪಾ. : ಪ್ರಾಣನಾಥಾ, ನೀನು ಹೇಳುವುದೆಲ್ಲ ಸರಿ. ಆದರೆ ಅಲ್ಲಮನನ್ನು ಗೆಲ್ಲದೆ ನನ್ನ ಮನಸ್ಸಿಗೆ ಸೊಗಸಿಲ್ಲ. ಅವನನ್ನು ಗೆಲ್ಲುವ ಉತ್ತಮ ಉಪಾಯವನ್ನಾದರೂ ಹೇಳಬಲ್ಲೆಯಾ?

. : ಚಿಂತಿಸಬೇಡ; ಹೇಳುತ್ತೇನೆ ಕೇಳು :

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಮಾ. : ಚಿಂತೆ ಯಾತಕೆsss ಕಾಂತೆಯೆ (ದುಗುಣ)॥
ಚಿಂತೆ ಯಾಕೆ ಕಾಂತೆಯೆ ನೀನಿರು
ವಂಥ ಸತ್ವಕಳೆಯನು ಕಳಿಸು
ಅಂಥ ಕಾರ್ಯ ಗುರುವರವೊಲಿವಾ             1

ಸತ್ವ ಗುಣಕೆ ಸದಾಶಿವನುs
ನಿತ್ಯ ತಾನು ವಶವಾಗಿಹನು
ಸತ್ಯವೇದ ನುಡಿವನು ತಾನು                   2

ಕಳಿಸು ಕಾಂತೆ ನಿನ್ನಯ ಸತ್ವ
ಕಳೆಯ ನೀಗಿ ಚಿಂತೆಯ ಸರ್ವ
ಪ್ರಳಯ ರುದ್ರರೂಪನು ಒಲಿವ (ಚಲತಿ)
ಕಾಂತಯೇ ……                                                                                            3

ಎಲೆ ಪಾರ್ವತಿ, ಅಲ್ಲಮಪ್ರಭುವನ್ನು ಗೆಲ್ಲಲಿಲ್ಲವೆಂದು ಚಿಂತೆಮಾಡಬೇಡ. ನೀನು ಕೇವಲ ಮಾಯಾ ಗುಣದವಳಲ್ಲ, ತ್ರಿಗುಣಾತ್ಮಕಳಿರುವಿ. ಸತ್ವ ಗುಣ ರಜೋಗುಣ ಮತ್ತು ತಾಮಸ ಗುಣಗಳು ನಿನ್ನಲ್ಲಿಯೆ ಅಡಕವಾಗಿವೆ. ಸತ್ಯ ಶರಣರು ತ್ರಯೋಗುಣಗಳನ್ನು ಮೀರಿನಿಂತವರು. ಆದರೂ ಅವರು ಸತ್ವಗುಣಕ್ಕೆ ವಶರಾಗಬಲ್ಲರು. ಈಗಲೇ ನೀನು ನಿನ್ನ ಸಾತ್ವಿಕ ಕಳೆಯನ್ನು ಭೂಲೋಕಕ್ಕೆ ಕಳಿಸು. ಅಂದರೆ ಆ ಗುರುನಾಥನು ನಿನ್ನ ವಶನಾಗುವನು. ಹೀಗೆ ಮಾಡಿನೋಡುವುದು ಒಳಿತು.

ಪಾ. : ಪ್ರಾಣಕಾಂತಾ, ಹಾಗೆಯೇ ಮಾಡುತ್ತೇನೆ. ದೂತೆ, ನನ್ನ ಮಗಳಾದ ಸಾತ್ವಿಕೆಯನ್ನು ಕರೆದುಕೊಂಡು ಬಾ.

ದೂತೆ : ಯಾಕಾಗಬಾರದು. (ಸಾತ್ವಿಕಿ ಪ್ರವೇಶಿಸುತ್ತಾಳೆ.)

ದೂ. : ತಾಯಿ ಸಾತ್ವಿಕಿಯವರೇ, ತಮ್ಮ ತಾಯಿಯಾದ ಪಾರ್ವತಿದೇವಿಯು ತಮ್ಮನ್ನು ಕರೆದುಕೊಂಡು ಬರಲು ಅಪ್ಪಣೆ ಮಾಡಿರುವರು.

ಸಾತ್ವಿಕಿ : ಹಾಗಾದರೆ ನಡೆ, ಬರುತ್ತೇನೆ. (ಮುಂದೆಬಂದು) ತಾಯಿಯ ಪಾದಾರವಿಂದಗಳಲ್ಲಿ ಈ ಸಾತ್ವಿಕಿಯ ನಮಸ್ಕಾರ. (ನಮಸ್ಕರಿಸುವಳು).

ಪಾ. : ಏಳು ಮಗಳೇ, ಇತ್ತ ಕಡೆ ಬಾ.

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಬಾ ಬಾರೆ ಬಾಲೆ ಗುಣಶೀಲೆ ನನ್ನ
ಮೋಹದ ಕೂಸೆ ತ್ವರಿತದಿ॥

ಏರು :

ಸರಸಿಜನೇತ್ರ ನೀ ಬಾರೆ ನಿನ್ನ ಮುದ್ದು ಮೊಗವನೀಗಲೆ ತೋರೆ
ಸನ್ನುತವಾಣಿ ಸದ್ಗುಣಭರಣಿs ಸತ್ವರದಲಿ ನೀ ಬಾ ಸುಗುಣಿ                1

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಏರು :

ಯಾತಕ್ಕೆ ಸ್ಮರಿಸಿದೆ ಶಿವನರಸಿ ನೀ ಮನದೊಳತಿ ವ್ಯಾಕುಲವೆರಸಿ

ಪರ್ವತಜಾತೆ ಪಾರ್ವತಾಮಾತೆ ಆಜ್ಞೆಯ ಕೊಡುಯೆನಗೆ ಹರಸುತ   2
ತಾಯಿ, ನನ್ನನ್ನು ಕರಸಿದ ಕಾರಣವೇನು? ಹೆಳುವಂಥವರಾಗಿರಿ.

ಪಾ. : ಮಗಳೇ, ನಿನ್ನನ್ನು ಕರಸಿದ ಕಾರಣವೇನೆಂದರೆ : ಈಗ ಕೆಲವು ದಿವಸಗಳ ಹಿಮದೆ ನಾರದಮುನಿಗಳು ಶಿವಸಭೆಗೆ ಬಂದು, ಭೂಲೋಕದಲ್ಲಿ ಅವತರಿಸಿದ ಅಲ್ಲಮ ಪ್ರಭುದೇವನು ಮಾಯಾರಹಿತನೆಂದೂ ಸತ್ಯಶರಣನೆಂದೂ ಕೊಂಡಾಡಿದನು. ಅದು ನನಗೆ ಸಹನವಾಗಲಿಲ್ಲ. ಮಾಯೆಗೆ ವಶವಾಗದವರು ಈ ಜಗತ್ತಿನಲ್ಲಿ ಯಾರೂ ಇಲ್ಲವೆಂದು ಹೇಳಿ. ನಾನು ಪರಮೇಶ್ವರನೊಡನೆ ವಾದಹೂಡಿ ಪಂಥ ಮಾಡಿದೆ. ಮಾಯೆಯನ್ನು ಕಳಿಸಿ ಅಲ್ಲಮನನ್ನು ಪಿಚಂಡಿ ಕಟ್ಟಿ ತರಿಸುತ್ತೇನೆಂದು ಹಟ ತೊಟ್ಟೆನು. ಆಗ ಪರಿಶಿವನು ಎಷ್ಟು ಹೇಳಿದರೂ ಕೇಳದೆ ಮಾಯೆಯನ್ನು ಕಳಿಸಿ ಈಗ ಅಪಮಾನಕ್ಕೆ ಗುರಿಯಾಗಿರುವೆನು. ನೀನು ಈ ಕ್ಷಣವೇ ಭೂಲೋಕಕ್ಕೆ ಹೋಗಿ ಅಲ್ಲಮನನ್ನು ವಶಮಾಡಿಕೊಂಡು ಬಂದು ನನ್ನ ಪಂಥವನ್ನು ಗೆಲಿಸಬೇಕಮ್ಮಾ ಮಗಳೆ.

ಸಾ. : ತಾಯಿ, ನೀನೆಂಥಾ ಹುಚ್ಚಿ! ಶಿವಶರಣರು ಎಂದಾದರೂ ಮಾಯೆಗೆ ವಶವಾಗುವುದುಂಟೆ? ಅವರು ಒಲಿದರೆ ಸತ್ವಗುಣಕ್ಕೆ ಒಲಿಯಬಲ್ಲರು.

ಪಾ. : ಮಗಳೇ, ನೀನು ಹೇಳುವುದೆಲ್ಲಾ ಸರಿ. ಅದಕ್ಕೆಂದೇ ಸತ್ವಗುಣದ ಮೂರ‌್ತಿಯೆಂದೆನಿಸಿದ ನಿನ್ನನ್ನು ಕರೆಸಿದ್ದೇನೆ. ನೀನೀಗ ಹೋಗಿ ಆ ಅಲ್ಲಮನನ್ನು ಒಲಿಸಿಕೊಂಡು ಬಾ.

ಸಾ. : ತಾಯಿ, ಆ ಗುರುನಾಥನು ನನಗೆ ವಶವಾಗದೆ ಇರುವನೆ? ಜಪತಪಾದಿ ಸದ್ಭಕ್ತಿ ಸಾಧನೆ ಮಾಡಿ, ಅವನನನ್ನು ಒಲಿಸಿಕೊಂಡು ಬರುವೆನು ಅಪ್ಪಣೆಯಾಗಬೇಕು.

ಪಾ. : ಮಗಳೇ, ಹೋಗು ನಿನ್ನ ಸತ್ವಗುಣವೇ ನಿನಗೆ ಸತ್ಯದ ಮಾರ್ಗವನ್ನು ತೋರಿಸುವುದು. ಹೋಗಿ ಬರುವಂಥವಳಾಗು!

ಸಾ. : ತಾಯೀ, ನಾನಿನ್ನು ಬರುತ್ತೇನೆ.

* * *


ಭೂಲೋಕ ಪ್ರವೇಶ

ಪದ : ತಾಳ ಕೇರವಾ; ರಾಗ ಭೈರವಿ

ಸಾತ್ವಕಿ : ಜನ್ಮ ತಾಳಿದೆ ಭುವನದಿs, ಶಿವದಯದಿ
ಭುವನದಿ ಶಿವದಯದಿ॥

ಏರು : ತಾಯಿಯಾಜ್ಞೆಯ ಧರಿಸಿs ನಾ ಬಂದೆ ಜನಿಸಿ
ಶಿವನಾಮ ಭಜಿಸಿs ಭುವನದಿ ಶಿವದಯದಿ
ಭುವನದಿ ಶಿವದಯದಿ                           1

ನಾ ಪೊಂದಿ ಶರಣ ಸದ್ಗುರು ವರನ
ಪಡೆವೆ ಕರುಣ ಭುವನದಿ ಶಿವದಯದಿ
ಭುವನದಿ ಶಿವದಯದಿ                           2

ಫಲಪುರನಾಥಾ, ಗೌರಿಯ ಕಾಂತಾ
ಕಾಯೋ ಸತತಾ ಭುವನದಿ ಶಿವದಯದಿ
ಭುವನದಿ ಶಿವದಯದಿ                           3

(ತನ್ನಷ್ಟಕ್ಕೆ ತಾನೇ) ಪಾರ್ವತೀದೇವಿಯ ಅಪ್ಪಣೆಯ ಪ್ರಕಾರ, ಈ ಉಡುತಡಿ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿಯರೆಂಬ ಶಿವಭಕ್ತಿ ಸಂಪನ್ನರಾದ ಸತಿ : ಪತಿಗಳ ಹೊಟ್ಟೆಯಲ್ಲಿ ಹುಟ್ಟಿ ಬೆಳೆದು ದೊಡ್ಡವಳಾದೆನು. ಈಗ ನಾನು ನನ್ನ ಕರ್ತವ್ಯದಲ್ಲಿ ತೊಡಗಬೇಕು. ಅಲ್ಲಮ ಸದ್ಗುರುವಿದ್ದ ಸ್ಥಾನಕ್ಕೆ ಹೋಗಿ ಭಕ್ತಿ : ಜ್ಞಾನ : ವೈರಾಗ್ಯಗಳಿಂದ ಕೂಡಿದ ಸನ್ಮಾರ್ಗದಲ್ಲಿ ನಡೆದು ಅವನನ್ನು ಒಲಿಸಿಕೊಳ್ಳಲು ಯತ್ನಿಸುವೆ.

ದೂತೆ. : ಈಕಿ ಯಾವಾಕಿ ಬಂದಾಕಿ! ಮೆತ್ತನ್ನ ಅತ್ತಿಹಣ್ಣಿನಂಥಾಕಿ!!

ಸಾ. : ಅಮ್ಮಾ, ನೀನಂದಂತೆ ನಾನು ಮೆತ್ತನ್ನ ಅತ್ತೀಹಣ್ಣಿನಂಥವಳೇ ಹೌದು. ಹೊರಗೆ ನಾನು ಕೋಮಲೆಯಾಗಿ ಕಂಡರೂ ಒಳಗೊಳಗೆ ಕಠೋರಳಾಗಿದ್ದೇನೆ. ತಾಯಿ, ನನ್ನನ್ನು ವಿಚಾರಿಸುವ ನೀನು ಯಾರು?

ದೂ. : ನನ್ನ ಹೆಸರು ಹೇಳಬೇಕೆ? ನನ್ನ ಹೆಸರಿಗೆ ಹೆಗ್ಗಣ ಹತ್ತಿ ಗುದ್ದು ಬಿದ್ದಾವು ನೋಡವ್ವಾ!

ಸಾ. : ಹಾಗಲ್ಲಾ ಚೇಷ್ಟೆ ಮಾಡಬೇಡ. ನಿನ್ನ ಹೆಸರೇನು ಹೇಳು?

ದೂ. : ಯೆವ್ವಾ, ನನಗೆ ದೂತಿ ಅಂತಾರ ಬಣ್ಣದ ಮಾತಿ ಅಂತಾರ ಪಿಂಜಾರ ಪಾತಿ ಅಂತಾರ ತಮ್ಮ ಹೆಸರೇನು? ಹೇಳಬೇಕು.

ಸಾ. : ಅಮ್ಮಾ, ನನ್ನ ಹೆಸರನ್ನು ಕೇಳುವಿಯಾ? ಸಕಲ ವೇದಾಂತ ಪುರಾಣ ಮೊದಲು ಮಾಡಿಕೊಂಡು ಈ ಜಗತ್ತಿನವರೆಲ್ಲ ನನಗೆ ಸಾತ್ವಿಕಿಯೆಂದು ಕರೆಯುವರು.

ದೂ. : ತಮಗೆ ಸಾತ್ವಿಕಿ ಅನ್ನುವರೆ! ಹಾಗೆಂದು ಕರೆಯಲು ಕಾರಣವೇನು?

ಸಾ. : ನನಗೆ ಸಾತ್ವಿಕಿಯೆಂದು ಕರೆಯಲು ಕಾರಣವೇನೆಂದರೆ, : ಈ ಜಗತ್ತಿನಲ್ಲಿ ಸತ್ವಗುಣದ ಮೂರ್ತಿಯಾಗಿ ನಾನಿರುವುದರಿಂದ ನನಗೆ ಸಾತ್ವಿಕಿ, ಸಾತ್ವಿಕಿ ಎನ್ನುತ್ತಾರೆ.

ದೂ. : ಈ ಲೋಕದಲ್ಲಿರುವ ಗುಣಗಳಿಗೆಲ್ಲ ನೀನೇ ಸಾತ್ವಿಕಿಯೇ?

ಸಾ. : ಹೌದು ನಾನೇ!

ದೂ. : ಒಳ್ಳೆಯದು; ತಾವು ಇರುವ ಸ್ಥಾನವಾವುದು?

ಸಾ. : ದೂತೆ, ಸತ್ವಗುಣ ಇರುವ ಸ್ಥಾನ ನಿನಗೆ ಗೊತ್ತಿಲ್ಲವೆ? ನಾನು ಸಾಧುಸತ್ಪುರಷರಲ್ಲಿ ಇರುತ್ತೇನೆ. ಪುರಾಣ ಪುಣ್ಯಕಥೆ ಕೇಳಿ ನಡೆವ ಸದ್ಭಕ್ತರಲ್ಲಿ ಇರುತ್ತೇನೆ. ಜಗತ್ತಿನ ಕಲ್ಯಾಣಕ್ಕಾಗಿ ನಡೆಯುವ ಸತ್ಕಾರ್ಯದಲ್ಲಿ ಇರುತ್ತೇನೆ. ಒಳ್ಳೆಯವರಲ್ಲಿಯೇ ನನ್ನ ವಾಸ. ಪಾಪಿಗಳ ಸಮೀಪಕ್ಕೂ ನಾನು ಸುಳಿಯಲಾರೆ. ನನ್ನನ್ನು ಕಂಡರೆ ದುಷ್ಟರಿಗೆ ಆಗುವುದಿಲ್ಲ.

ದೂ. : ಹೌದು, ಸತ್ವಗುಣವಿರುವ ಮೆಟ್ಟು ಸ್ಪಷ್ಟವಾಯಿತು. ತಂಗಿ ಸಾತ್ವಿಕಿ, ನೀನು ಇರತಕ್ಕ ಸ್ಥಾನವೂ ತಿಳಿಯಿತು. ಆದರೆ ತಮ್ಮ ಕರ್ತವ್ಯವೇನು?