ಪಾರ್ವತಿ : ನಾನು ಈ ಕ್ಷಣವೆ, ನನ್ನ ತಾಮಸ ಕಳೆಯಾದ ಮಾಯೆಯನ್ನು ಭೂಲೋಕಕ್ಕೆ ಕಳಿಸಿ, ಅಲ್ಲಮನನ್ನು ಬಂಧಿಸಿತರುವಂತೆ ಆಜ್ಞೆ ಮಾಡುತ್ತೇನೆ. ಈ ಮಾತನ್ನು ಅಂದವರಾರು? ಮೊದಲು ಹೇಳು.

ನಾರದ : ಜಗದೀಶ್ವರೀ ಆ ಅಲ್ಲಮಪ್ರಭು ಮಾಯೆಯನ್ನು ಗೆದ್ದವನೆಂದು ಅಂದವರು ಒಬ್ಬಿಬ್ಬರಲ್ಲ. ಜಗತ್ತೇ ಅವನನ್ನು ಕೊಂಡಾಡುತ್ತಿರುವುದು.

ಪಾರ್ವತಿ : ಜಗತ್ತೆಲ್ಲಾ ಕೊಂಡಾಡುತ್ತಿರುವುದೋ? ಹಾಗಿದ್ದರೆ ಈ ಜಗತ್ತೆನ್ನೆಲ್ಲಾ ಅರೆಕ್ಷಣದಲ್ಲಿ ಕುಣಿದಾಡಿಸಿ ಆ ಅಲ್ಲಮನ್ನು ಪಿಚಂಡಿ ಕಟ್ಟಿ ತರಿಸುತ್ತೇನೆ.

ನಾರದ : ತಾಯಿ, ಹಾಗೆ ಮಾಡಬಲ್ಲಿರಾ?

ಪರಮಾತ್ಮ : ಪಟ್ಟದರಸಿ ಪಾರ್ವತಿ, ಇತ್ತ ಹೊರಳು.

ಪಾ. : ಅದೇಕೆ ಹೊರಳಬೇಕು?

. : ಹೆಣ್ಣಿನ ಮಾಯೆಗೆ ಒಳಗಾದವರು ಯಾರು ಇಲ್ಲವೆಂದು ನಿನಗೆ ನೀನೆ ಜಂಭ ಕೊಚ್ಚಿಕೊಳ್ಳುತ್ತಿರುವಿ. ಮಾಯೆಗೆ ಸೋತವರು ಲೋಕದಲ್ಲಿ ಯಾರು ಇಲ್ಲ.

ಪಾ. : ಯರೂ ಇಲ್ಲವೆ?

. : ಕೇಳು.

ಪಾ. : ಅದೇನಿರುವುದು ಹೇಳು.

ಪಾ. : ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ (ಚಕ್ಕಡ)

ಬಿಡು ಬಿಡು ನಿನ್ನ ಒಣ ಭ್ರಾಂತಿ ಮಮಕಾಂತೆ
ರಮುನಿ ವಾರ್ತೆ ಸಟೆಯಲ್ಲ ಸುಮತಿ
ಸಾಕು ಸಂಸೃತಿ ಒಣಭ್ರಾಂತಿ ಮಮಕಾಂತೆ

. : ಪದ : ತಾಳ ಕೇರವಾ ; ರಾಗ ಮಿಶ್ರಕಾಪಿ (ಚಕ್ಕಡ)

ಶರಣರ ಲೀಲಾ, ಸರ್ವೇಶ ಬಲ್ಲಾ
ಹಟವಿದು ಸಲ್ಲಾ ಒಣಭ್ರಾಂತಿ, ಮಮಕಾಂತೆ

ಪಾ. : ಪದ : ತಾಳ ಕೇರವಾ ; ರಾಗ ಮಿಶ್ರಕಾಪಿ (ಚಕ್ಕಡ)

ಬಿಡು ಬಿಡೊ ರಮಣಾ, ನಾ ಬಲ್ಲೆ ನಿನ್ನ
ನಿರ್ಮಾಯತನ, ಪೌರುಷ ಪ್ರಾಣೇಶಾಶ

. : ಎಲೇ ಪಾರ್ವತಿ, ಸತ್ವಶೀಲನಾದ ದೇವರ್ಷಿನಾರದನ ಕೂಡ ಪಂಥವನ್ನು ತೊಡಬೇಡ. ಅವನು ಆಡುವುದು ಸುಳ್ಳಲ್ಲ. ಮಾಯೆಗೆ ಒಳಗಾಗದವರು ಯಾರಿಲ್ಲೆಂಬ ಅಹಂಕಾರವನ್ನು ಮಾಡಬೇಡ. ಜಗತ್ತೆಲ್ಲ ನಿನ್ನ ಅಧೀನವಾದರೂ ಸತ್ಯ ಶಿವಶರಣರುನಿನ್ನ ಅಧೀನರಲ್ಲ. ನಿನ್ನಷ್ಟಕ್ಕೆ ನೀನೇ ಹೆಚ್ಚಿನವಳೆಂದು ತಿಳಿಯಬೇಡ. ಅಲ್ಲಮನ ಸುದ್ದಿಯನ್ನು ಕನಸು : ಮನಸಿನಲ್ಲಿಯೂ ತೆಗೆಯಬೇಡ. ಆತನು ಸಾಮಾನ್ಯ ವ್ಯಕ್ತಿಯಲ್ಲ. ಲೋಕೋದ್ಧಾರಕ್ಕಾಗಿ ನನ್ನ ಶುದ್ಧ ಚೇತನಾಂಶವೇ ಅಲ್ಲಮನ ಹೆಸರಿನಲ್ಲಿ ಅವತರಿಸಿರುವುದು. ಆತನೇ ನಾನು. ನಾನೇ ಆತನು. ಆತನನ್ನು ಗೆಲ್ಲುವ ಹವ್ಯಾಸಕ್ಕೆ ಹೋದರೆ ನೀನು ನಿಶ್ಚಯವಾಗಿ ಅಪಮಾನಕ್ಕೆ ಗುರಿಯಾಗುವಿ.

ಪಾ. : ಪ್ರಾಣೇಶ್ವರಾ. ಅಹಂಭಾವಕ್ಕೆ ಬಲಿಬಿದ್ದು ನನ್ನ ತಾಮಸ ಕಳೆಯಾದ ಮಾಯೆಯನ್ನು ತುಚ್ಛೀಕರಿಸಿ ಮಾತಾಡಬೇಡ. ನೀನಾಗಲಿ, ನಿನ್ನ ಶುದ್ಧ ಅಂಶನಾದ ಅಲ್ಲಮನಾಗಲಿ ನನಗೆ ಮೀರಿದವರೆ?

. : ಹೌದು. ನಾನಾಗಲಿ ನನ್ನ ಶರಣರಾಗಲಿ ನಿನ್ನ ತಾಮಸ ಕಳೆಯಾದ ಮಾಯೆಗೆ ಎಂದೂ ವಶರಲ್ಲ.

ಪಾ. : ಮಾಯೆಗೆ ನೀನೆಂದೂ ಒಳಗಾಗಿಲ್ಲವೆ?

. : ಎಂದು ಆಗಿರುವೆನು ಹೇಳು?

ಪಾ. : ಪದ : ತಾಳ ತ್ರಿತಾಳ; ರಾಗ ಕಾಪಿ (ಚಕ್ಕಡ)

ಬಲ್ಲೆ ಬಿಡು ನಲ್ಲ ನಿನ್ನ ಬಾಯ ನಿರ್ಮಾಯ
ಭಸ್ಮಾಸುರ ದೈತ್ಯಗಂಜಿ ನೀ ಮೊದಲಾ
ಓಡಿಹೋಗಿ ಆದಿ ಅಡವಿ ಪಾಲಾ
ಘೋರ ರಕ್ಕಸರಿಂದ ಪಾರಾದಿ ಯಾರಿಂದ
ಮಾರಹರನೇ ಹೇಳೊ ನನ್ಮುಂದ ನನ್ಮುಂದ             1

ವಿಷ್ಣು ಮಾಯಾ ಮೋಹಿನೀ ರೂಪ ಧರಿಸಿ
ಭಸ್ಮನ ಹತ್ತಿರ ಬಂದು ಚರಿಸುತ
ಅವನಿಗೆ ಬಹುಮಾಯಾ ಸುರಿಸುತ
ಕುಟಿಲತನದಿ ಅವನ ಕುಣಿಯ ಹಚ್ಚುತ ಸುಟ್ಟು
ಭಸ್ಮ ಮಾಡಿದಳೊ ಮಾಯಾದೇವಿ ನಿನ್ನ ಸಲಹಿ               2

ಮೋಹಿನಿ ಧರಿಸಿದ ಮಾಯಾರೂಪಕೆ ನೀನು
ಮೋಹಿಸಿ ನಿಂತೆಲ್ಲೊ ಬೆರಗಾಗಿ
ಬೆನ್ನ ಹತ್ತಿ ತಿರುಗಿದ್ಯೊ ಮರುಳಾಗಿ
ಮಾಯೆಗೆ ವಶವಾಗಿ ಮಾರನ ಉರುಪಿಗೆ
ತಿರುಗಿದಿ ನೀ ಎಂಥ ನಿರ್ಮಾಯ ನಿರ್ಮಾಯ            3

ನಾನಾಗಲಿ ನನ್ನ ಶರಣರಾಗಲಿ ಮಾಯೆಗೆ ಒಳಗಾಗತಕ್ಕವರಲ್ಲ ಎಂದು ಬಿಂಕವನ್ನು ಕೊಚ್ಚುತ್ತಿರುವ ಮರುಳ ಶಂಕರಾ, ಹಿಂದಕ್ಕೆ ನೀನು ಭಸ್ಮಾಸುರನಿಗೆ ಏನೆಂದು ವರವನ್ನು ಕೊಟ್ಟಿದ್ದಿ?
. : ನೀನು ಯಾರ ತಲೆಯ ಮೇಲೆ ಹಸ್ತವನ್ನಿಡುವೆಯೋ ಅವರು ಸುಟ್ಟು ಭಸ್ಮವಾಗುವರೆಂದು ವರವನ್ನು ಕೊಟ್ಟಿದೆ.

ಪಾ. : ಅಂಥ ವರವನ್ನು ಪಡೆದುಕೊಂಡು ಅವನು ಏನು ಮಾಡಿದನು?

. : ಪಾರ್ವತಿ, ನಿನ್ನ ರೂಪಕ್ಕೆ ಮನಸೋತ ಭಸ್ಮಾಸುರನು ನನ್ನನ್ನು ಸುಟ್ಟು, ನಿನಗೆ ಮೋಸಮಾಡಲು ಯತ್ನಿಸಿದ.

ಪಾ. : ಆಗ ನೀನೇನು ಮಾಡಿದೆ?

. : ಆಗ ನಾನು ಭಯಪಟ್ಟು ಕಂಡ ಕಡೆಗೆ ಓಡಿ ಹೋದೆನು.

ಪಾ. : ನೀನು ಓಡಿದರೆ ಅವನು ನಿನ್ನನ್ನು ಬಿಟ್ಟನೆ?

. : ಇಲ್ಲ, ಬಿಡಲಿಲ್ಲ; ನನ್ನನ್ನು ಬೆನ್ನಟ್ಟಿ ಗುಡ್ಡಗಹ್ವರಗಳಲ್ಲಿ ಅರಸುತ್ತ, ತನ್ನ ಉರಿಯ ಹಸ್ತವನ್ನೆತ್ತಿಕೊಂಡು ಬೆನ್ನು ಹತ್ತಿದ.

ಪಾ. : ಆಗ ನೀನೇನು ಮಾಡಿದೆ? ಮತ್ತು ಅವನ ಕೈಯೊಳಗಿಂದ ಹೇಗೆ ಪಾರಾದೆ?

. : ಪಾರ್ವತಿ, ಆಗ ವಿಷ್ಣುವಿನ ಮಾಯಾಶಕ್ತಿಯು ಸುಂದರವಾದ ಮೋಹಿನೀ ರೂಪವನ್ನು ಧರಿಸಿ ಅವನ ಹತ್ತಿರ ಬಂದಳು. ಅವಳ ಅಪ್ರತಿಮ ರೂಪಕ್ಕೆ ಭಸ್ಮಾಸುರನು ಭ್ರಾಂತನಾಗಿ ಆಕೆಯನ್ನು ವಶಮಾಡಿಕೊಳ್ಳುವ ಉಲ್ಹಾಸದಲ್ಲಿ ನನ್ನನ್ನು ಮರೆತುಬಿಟ್ಟನು. ಆಕೆಯ ಕಪಟತಂತ್ರಕ್ಕೆ ಬಲಿಯಾಗಿ ತಾನೇ ಸುಟ್ಟು ಭಸ್ಮವಾದನು.

ಪಾ. : ಅಂದ ಮೇಲೆ ಯಾರಿಂದ ಉಳಿದೆ?

. : ವಿಷ್ಣುವಿನ ಮಾಯೆಯಿಂದ ಉಳಿದೆನು.

ಪಾ. : ಮಾಯೆಯಿಂದ ಉಳಿದೆಯಾ?

. : ಹೌದು, ಮಾಯೆಯಿಂದ ಉಳಿದೆನು.

ಪಾ. : ಆಕೆಯ ಮುಂದೆ ನಿಂತು ಮತ್ತೇನೋ ಅಂಗಲಾಚಿ ಬೇಡಿಕೊಳ್ಳುತ್ತಿದ್ದೆಯಲ್ಲ?

. : ಆಕೆಗೆ ಅಂಗಲಾಚಿ ನಾನೇನು ಬೇಡಿಕೊಂಡೆ?

ಪಾ. : ಬೇಡಿಕೊಂಡೇ ಇಲ್ಲೇನ್ರಿ?

. : ಬೇಡಿಕೊಂಡೇ ಇಲ್ಲ.

ಪಾ. : ಹೀಗೋ; ಕೇಳು;

ಪಾ. : ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ (ಚಕ್ಕಡ)

ಜಾಣಿ ಮೋಹಿನಿ ಫಣಿವೇಣಿಗೆ ಮನಸೋತು
ಬೆನ್ನು ಹತ್ತಿ ತಿರುಗಿದ ಬೆರಗಾಗಿ
ಮೋಹಿನಿ ರೂಪಕೆ ಮರುಳಾಗಿ
ಕೂಡು ಎನ್ನನು, ದಯಮಾಡು : ಎಂದೆನುತ ನೀ
ಬೇಡಿಕೊಂಡೆಲ್ಲೋ ವಿಷ್ಣುಮಾಯೆಗೆವಶವಾಗಿ 1

ನಾರಿಯ ರೂಪಕೆ ಮಾರನ ತಾಪಕೆ
ಗುರಿಯಾಗದ ಪುರುಷನು ಯಾವ
ನಲ್ಲ ಬಿಡೋ, ನಿನ್ನ ಈ ಒಣ ಹ್ಯಾಂವಾ
ಹೆಂಗಸು ಮಾಯಿ ಗಂಡಸು ನಾಯಿ
ಇರುವದು ಲೋಕದ ನಿರ್ಣಯಾನಿರ್ಣಯಾ

ಪಾ. : ಮಾಯೆಗೆ ಒಳಗಾಗತಕ್ಕವನಲ್ಲವೆಂದು ಬಿಂಕವನ್ನು ಕೊಚ್ಚುತ್ತಿರುವ ಶಂಕರಾ, ಇತ್ತ ಹೊರಳು. ಇದ್ದ ಮಾತು ಇದ್ದಂತೆ ಹೇಳುವುದಕ್ಕೆ ನಾಚಿಕೆ ಯಾತಕೆ? ನಿನ್ನನ್ನು ಉಳಿಸಿದಮೋಹಿನಿಯ ಚರ್ಮದ ಛಾಯೆಗೆ, ಹೆಣ್ಣಿನ ಮಾಯೆಗೆ ಸುಂದರಿ, ನಿನ್ನ ಚನ್ನಿಗ ರೂಪಕ್ಕೆ ನಾನು ಮನಸೋತಿರುವೆನು. ನಿನ್ನ ಕಲಕೀರ ವಾಣಿಗೆ ಕಿವಿಜೋತಿರುವೆನು. ನನ್ನನ್ನು ಲಗ್ನವಾಗಲು ಒಪ್ಪಿಕೋ. ಕೋಮಲ ಕೈಗಳಿಮದ ಅಪ್ಪಿಕೋ. ನೀನು ಹೇಳಿದಂತೆ ಕೇಳುವೆನು. ನಿನ್ನ ಆಜ್ಞೆಯಂತೆ ನಡೆವೆನು. : ಎಂದು ನೀನು ಬೇಡಿಕೊಳ್ಳುತ್ತ ಅವಳ ಬೆನ್ನುಹತ್ತಿ ತಿರುಗಲಿಲ್ಲವೇ? ಈಗ ನಾನು ಮಾಯೆಗೆ ಸೋಲುವವನಲ್ಲ, ಕಿವಿ ಜೋಲುವವನಲ್ಲ : ಎಂದು ಹೇಳಲಿಕ್ಕೆ ನಿನ್ನ ನಾಲಿಗೆಗೆ ನಾಚಿಕೆ ಬರುವುದಿಲ್ಲವೆ? ಛೀ ಏನು ಮಾತಾಡುತ್ತೀ?

. : ಎಲೆ ಬಡಿವಾರದ ಬಾಲೆ, ಸುಮ್ಮನೆ ಎನ್ನ ಎದುರಿಗೆ ಹೆಮ್ಮೆಯನ್ನು ಕೊಚ್ಚಬೇಡ. ಭಸ್ಮಾಸುರನಿಗೆ ಅಂಜಿದಂತೆ ನಟಿಸಿ, ನಾನು ಓಡಿ ಹೋದದ್ದು ನಿಶ್ಚಯ. ಆದರೆ ಸಾವಿಗಂಜಿ ಓಡೆದೆನೆಂದು ಭಾವಿಸಬೇಡ. ಮೃತ್ಯುಂಜಯನಾದ ನನಗೆ ಮರಣವೆಂಬುದು ಇಲ್ಲವೇ ಇಲ್ಲ.

ಪಾ. : ಹಾಗಾದರೆ ಯಾಕೆ ಓಡಹತ್ತಿದ್ದಿ?

. : ಎಲೆ ಬಿನ್ನಾಣದ ಹೆಣ್ಣೆ, ಅರೆ ಕ್ಷಣದಲ್ಲಿ ಈ ಸೃಷ್ಟಿಯನ್ನೇ ಸುಟ್ಟುಬಿಡುವ ಶಕ್ತಿಯುಳ್ಳ ನನಗೆ ಆ ಭ್ರಷ್ಟ ಭಸ್ಮಾಸುರನನ್ನು ನಷ್ಟ ಮಾಡುವುದು ಎಷ್ಟರ ಕೆಲಸ?

ಪಾ. : ಹಾಗಾದರೆ, ಯಾಕೆ ಬಿಟ್ಟೆ?

. : ಎಲೆ ಪಾರ್ವತಿ, ಅವನನ್ನು ನಷ್ಟ ಮಾಡಿದ್ದರೆ, ಕೊಟ್ಟ ವರವನ್ನು ತಪ್ಪಿಸಲು ಶಿವನು ಹೀಗೆ ಮಾಡಿದನೆಂದು ನನ್ನ ಶ್ರೇಷ್ಠ ಭಕ್ತರು ಚೇಷ್ಟೆಯನ್ನು ಮಾಡಬಹುದಾಗಿತ್ತು. ಅದಕ್ಕಾಗಿ ಆ ವಿನೋದದ ಆಟವನ್ನು ಹೂಡಿದೆ. ಅಂಜಿ ಹಾಗೆ ಮಾಡಿದೆನೆಂದು ನುಡಿವ ನಿನ್ನ ಬಡಿವಾರದ ಮಾತುಗಳನ್ನು ನನ್ನ ಮುಂದೆ ಬಡಬಡಿಸಬೇಡ. ಮಾಯೆ ನನ್ನಾಧೀನವೇ ಹೊರತು ಮಾಯಾಧೀನ ನಾನಲ್ಲ. ದೀಪವನ್ನು ಆಶ್ರಯಿಸಿಕೊಂಡು ಕತ್ತಲೆಯ ಇರುವುದೇ ಹೊರತು ಕತ್ತಲೆಯನ್ನು ಆಶ್ರಯಿಸಿಕೊಂಡು ದೀಪ ಇರುವುದಿಲ್ಲ. ಸಚ್ಚಿದಾನಂದ ಮೂರ್ತಿಯಾದ ನನ್ನನ್ನು ಆಶ್ರಯಿಸಿಕೊಂಡು ನೀನು ಇರುವಿಯೇ ಹೊರತು ನಿನ್ನನ್ನು ಆಶ್ರಯಿಸಿಕೊಂಡು ನಾನು ಇರುವುದಿಲ್ಲ. ಪ್ರಯುಕ್ತ ನಾನಾಗಲಿ. ನನ್ನ ಸ್ವರೂಪನಾದ ಅಲ್ಲಮನಾಗಲಿ, ನಿನಗೆ ಎಂದೆಂದೂ ವಶವಾಗಲಾರೆವು.

ಪಾ. : ನೀನು ಹೆಣ್ಣುನ ಮಾಯಾರೂಪಕ್ಕೆ ಎಂದೂ ಸಿಕ್ಕಿಲ್ಲವೆ?

. : ಎಂದು ಸಿಕ್ಕಿಲ್ಲ.

ಪಾ. : ಹಾಗಾದರೆ ನಾನು ಯಾರು? ಹೆಣ್ಣೋ ಅಥವಾ ಗಂಡೋ?

. : ನೀನು ಹೆಣ್ಣು!

ಪಾ. : ನನಗೆ ನೀನು ವಶವಾಗಿಲ್ಲವೆ?

. : ಎಂದು ವಶವಾಗಿದ್ದೇನೆ?

ಪಾ. : ಪದ : ತಾಳ ದಾದರಾ ; ರಾಗ ಭೀಮಪಲಾಸ

ಜಡೆಯೊಳಿರುವ ಅಂಗನಾ, ಮಣಿಯು ಯಾರೋ ಮೋಹನಾ ಪಲ್ಲ
ಜಡೆಯನೀಗ ಗಂಗೆಗೆ, ತೊಡೆಯನೀಗ ಗೌರಿಗೆ
ನೀಡಿಕೊಟ್ಟು ನಲಿಯಲಿರುವಿ, ನೋಡೋ ಪ್ರಿಯನೆ ಹಾಸಿಗೆ
ಜಡೆಯೊಳಿರುವ ಅಂಗನಾ, ಮಣಿಯು ಯಾರೋ ಮೋಹನಾ

. : ಪದ : ತಾಳ ದಾದರಾ; ರಾಗ ಭೀಮಪಲಾಸ

ಮೂಢತನ ಸುಂದರಿ, ಆಡುದುಚಿತೆ ಮನೋಹರಿ ಪಲ್ಲ

ಏರು :

ನೀನು ಚದುರೆ ಎನ್ನಲಿ, ಕಂಡರೇನು ತೊಡೆಯಲಿ
ಮಾಯಾ ಲೇಪವೆನಗೆ ಇಲ್ಲ, ತೋಯಜಾಕ್ಷಿ ನಿಜದಲಿ
ಮೂಢತನವ ಸುಂದರಿ, ಆಡುದುಚಿತೆ ಮನೋಹರಿ

ಪಾ. : ಲೋಕದ ಕಣ್ಣು ಕಂಡದ್ದನ್ನು ಕದ್ದಿಡಲು ಹವಣಿಸುತ್ತಿರುವ ಹಗಲುಗಳ್ಳ ಶಂಕರಾ ಹೊರಳಿ ನಿಲ್ಲು.

. : ಎಲೆ ಗೌರಿ, ಲೋಕದ ಕಣ್ಣು ಕಂಡುದನ್ನು ಕದ್ದಿಡಲು ನಾನೆಲ್ಲಿ ವಣಿಸುತ್ತಿರುವೆ.

ಪಾ. : ನಾನಾಗಲಿ, ನನ್ನ ಶರಣರಾಗಲಿ ಹೆಣ್ಣಿನ ಮೋಹಪಾಶಕ್ಕೆ ಒಳಗಾಗತಕ್ಕವರಲ್ಲ : ಎಂದು ನುಡಿಯಲಿಲ್ಲವೆ?

. : ಹೌದು; ನುಡಿದದ್ದು ನಿಜ.

ಪಾ. : ನೀನೀಗ ಹೇಳು; ನಾನು ಗಂಡೋ ಅಥವಾ ಹೆಣ್ಣೋ?

. : ನೀನು ಹೆಣ್ಣು.

ಪಾ. : ಹಾಗಿದ್ದರೆ ನೀನು ನನಗೆ ವಶವಾಗಿಲ್ಲವೆ?

. : ಎಂದು ವಶವಾಗಿದ್ದೇನೆ ಹೇಳು?

ಪಾ. : ನನಗೆ ವಶವಾಗಿಲ್ಲವೆ? ನಿನ್ನ ತಲೆಯ ಮೇಲೆ ನೋಡಿಕೊ. ಅಲ್ಲಿ ನಾನು ಗಂಗೆಯಾಗಿ ನಿನ್ನ ಜಡೆಯನ್ನು ಮೆಟ್ಟಿ ಕೂತಿರುವೆನು; ಗೌರಿಯಾಗಿ ನಿನ್ನ ತೊಡೆಯನ್ನೇರಿ ಮುಡಿಸಿರುವೆನು. ಲಕ್ಷ್ಮಿಯಾಗಿ ವಿಷ್ಣುವಿನ ಎದೆಯನ್ನೂ ಮೆಟ್ಟಿ ನಿಂತಿರುವೆನು. ಇದು ಲೋಕಕ್ಕೆಲ್ಲ ಕಣಗಂಡ ಮಾತಲ್ಲವೆ? ತ್ರಿಮೂರ್ತಿಗಳಾದ ನೀವೇ ನನ್ನ ವಶವಾಗಿರುವಾಗ ಮಿಕ್ಕ ಸಾಧು ಸಂತರ ಪಾಡೇನು? ನಿರಾಕಾರನಾಗಿದ್ದ ಪರಶಿವನು ಚಿತ್ ಶಕ್ತಿಯಿಂದ ಸಾಕಾರಮೂರ್ತಿಯಾದನೆಂದು ಮಹಾತ್ಮರು ಹೇಳಿಲ್ಲವೆ? ಹೀಗಿರುವಲ್ಲಿ ನೀನು ಹುಟ್ಟಿದ್ದು ಯಾರಿಂದ? ಬೆಳೆದದ್ದು ಯಾರಿಂದ? ಐಶ್ವರ್ಯವನ್ನು ಕಂಡದ್ದು ಯಾರಿಂದ? ಹೊಟ್ಟೆ ಬಟ್ಟೆಗಿಲ್ಲದೆ ತಿರುಗುವ ತಿರುಕನಾದ ನಿನ್ನನ್ನು ತಂದು, ರಾಜಗದ್ದುಗೆಯ ಮೇಲೆ ಕೂಡ್ರಿಸಿದವರಾರು? ಅಲ್ಲದೆ ದಿಗಂಬರನಾಗಿ ದಿಕ್ಕಿಲ್ಲದೆ ತಿರುಗುವ ನಿನ್ನನ್ನು ಬಹಿರಂಗಕ್ಕೆ ತಂದು ಎಲ್ಲರಿಂದ ಪೂಜೆಗೊಳ್ಳುವಂತೆ ಮಾಡಿದವರಾರು? ಸುಮ್ಮ ಸುಮ್ಮನೆ ಇಲ್ಲದ ಹೆಮ್ಮೆಯಿಂದ ನಾನು ಮತ್ತು ನನ್ನ ಶರಣ ಅಲ್ಲಮನು ಮಾಯೆಗೆ ಒಳಗಾಗುವವರಲ್ಲವೆಂದು ಜಂಭಕೊಚ್ಚಬೇಡ. ಇದೋ ನೋಡು, ಈಗಲೇ ಮಾಯೆಯನ್ನು ಭೂಲೋಕಕ್ಕೆ ಕಳಿಸಿ ಹಾ, ಹಾ, ಅನ್ನುವಷ್ಟರಲ್ಲಿಯೇ ಆ ನಿನ್ನ ಶರಣ, ಅಲ್ಲಮನನ್ನು ಹೆಡಮುರಿಗೆ ಬಿಗಿಸಿ ತರುವೆನು.

. : ಪಾರ್ವತಿ, ಗರ್ವದಿಂದ ವ್ಯರ್ಥ ನುಡಿಯುವುದು ತರವಲ್ಲ. ಈ ಭೂಮಂಡಲದಲ್ಲಿ ಗರ್ವದಿಂದ ಮೆರೆದವರು ಯಾರು ಉಳಿದಿಲ್ಲ. ನನ್ನ ಜಡೆ ತೊಡೆಗಳನ್ನು ವಿಷ್ಣುವಿನ ಎದೆಯನ್ನು ಬ್ರಹ್ಮನ ನಾಲಿಗೆಯನ್ನು ಮೆಟ್ಟಿ ಕೂತಿರುವೆನೆಂದು ಒಣಹೆಮ್ಮೆಯಿಂದ ಅಂದೆಯಲ್ಲ!

ಪಾ. : ಹೌದು ಹೌದು ಹೌದೆಂದು ಹತ್ತು ಸಾರೆ ಕೂಗಿ ಹೇಳುವೆನು. ಇದೇನು ಸುಳ್ಳಲ್ಲ. ಲೋಕವೆಲ್ಲ ಕಣಗಂಡ ಮಾತಿದು. ಕಂಡದ್ದನ್ನಾಡಿದರೆ ಕೆಂಡದಂತಹ ಸಿಟ್ಟು!

. : ಮಡದಿಮಣಿಯೇ, ನಿನ್ನ ಮರುಳತನವನ್ನು ಬಿಟ್ಟುಬಿಡು. ಮಂಜು ಸೂರ್ಯನನ್ನು ಮುಸುಕಿದಂತೆ ಕಂಡರೂ ಅದಕ್ಕೂ ಸೂರ್ಯನಿಗೂ ಏನೂ ಸಂಬಂಧವಿಲ್ಲ. ಅದರಂತೆ, ನೀನು ನನ್ನ ಜಡೆತೊಡೆಗಳನ್ನು ವ್ಯಾಪಿಸಿದಂತೆ ಕಂಡರೂ ನನಗೂ ನಿನಗೂ ಯಾವ ಸಂಬಂಧವಿಲ್ಲ. ನೀನು ಇಲ್ಲದ ಅಹಂಕಾರದಿಂದ ಅಲ್ಲಮನನ್ನು ಗೆಲ್ಲಲು ನಿನ್ನ ಮಾಯೆಯನ್ನು ಕಳಿಸಿದರೆ, ನಿಶ್ಚಯವಾಗಿ ಅವಳ ಹಲ್ಲನ್ನು ಅಲ್ಲಮನು ಮುರಿಯದೆ ಬಿಡನು.

ಪಾ. : ವಾಹವ್ವಾ! ಮರುಳ ಶಂಕರ ಎನ್ನುವ ಬಿರುದು ನಿನಗೆ ಈಗ ಸರಿಯಾಯಿತು.

. : ಅದು ಹ್ಯಾಗೆ?

ಪಾ. : ಆ ಅಲ್ಲಮನು ನನ್ನ ಮಾಯೆಯ ಹಲ್ಲನ್ನು ಮುರಿದು ಕಳಿಸುವನೆಂದು ಅಂದೆಯಲ್ಲ!

. : ಹೌದು, ನಿಶ್ಚಯವಾಗಿ ಮುರಿದು ಕಳಿಸುವನು.

ಪಾ. : ಯಾತರ ಮೇಲಿಂದ ಹೇಳುತ್ತೀ?

. : ಅವನು ಸಾಮಾನ್ಯನಲ್ಲ, ನನ್ನ ಪರಮಾವತಾರನು.

ಪಾ. : ನಿನ್ನ ಪರಮಾವತಾರ ಅಂದ ಮೇಲೆ ಅವನು ಬಹಳ ಶಕ್ತಿವಂತನಿರಬೇಕು! ನೀನಂತೂ ಮಹಾ ಸಮರ್ಥ!! ವೈರಿಗಳು ನಿನ್ನನ್ನು ಕೊಲ್ಲಲು ಬೆನ್ನಟ್ಟಿ ಬಂದಾಗ ಹ್ಯಾಗದರೂ ಮಾಡಿ ನನ್ನನ್ನು ಉಳಿಸಿರಿ : ಎಂದು ಹೆಣ್ಣಿನ ಬೆನ್ನುಬಿದ್ದು ಬೇಡಿಕೊಂಡ ಧೀರ ನೀನು!!!

. : ಎಲೆ ಗೌರಿ, ಹೆಣ್ಣಿನ ಬೆನ್ನು ಬಿದ್ದು, ನಾನೆಂದು ಬೇಡಿಕೊಂಡೆನು?

ಪಾ. : ಹೇಳುತ್ತೇನೆ ಕೇಳು :

. : ಅದೇನಿರುವುದು ಹೇಳು :

ಪಾ.

ಪದ : ತಾಳ ದೀಪಚಂದಿ : ರಾಗ ಕಾಪಿ

ಹೆದರಿ ಶಂಕರಾ ಸೇರಿದೆ ಕಾಂತಾರ
ಅಡಗಿದೆ ಗಹ್ವರ ನೀ ಎಂಥ ಗಂಭೀರಾಪಲ್ಲ

ಏರು :

ಶುಂಭ ನಿಶ್ಶುಂಭ ರಕ್ತಬೀಜೆಂಬ
ದೈತ್ಯರಿಗ್ಹೆದರಿ ಓಡಿದ್ಯೋ ಬೆದರಿ
ನನ್ನ ಬೆನ್ನ ಬಿದ್ದಿರಿ                         1

ಹರಿ ಹರ ಬ್ರಹ್ಮ ಅಳಿದು ಹಮ್ಮ
ದೇವಿಗೆ ಶರಣ ಹಾಕಿದ್ರೊ ರಮಣ
ಸಾಮರ್ಥ್ಯಹೀನ                          2

ಕಾಂತಾ, ಹೆಣ್ಣಿಗೆ ನಾನೆಂದು ವಶವಾಗಿಲ್ಲವೆಂದು ಪಂಥ ತೊಡುತ್ತಿರುವಿಯಲ್ಲ! ಹಿಂದಕ್ಕೆ ಶುಂಭ ನಿಶ್ಶಂಭ ರಕ್ತಬೀಜ ಮಹಿಷಾಸುರಾದಿ ರಾಕ್ಷಸರು ಹರಿ ಹರ ಬ್ರಹ್ಮರೆನಿಸಿದ ನಿಮ್ಮನ್ನು ಹಿಡಿದು ದಂಡಿಸಲು ಹವಣಿಸುತ್ತಿರುವ ಸಮಯದಲ್ಲಿ ಅವರ ಆರ್ಭಟಕ್ಕೆ ಎದೆಯೊಡೆದು ಸತ್ತೆವೆಂದು ದಿಕ್ಕೆಟ್ಟು ಓಡಿ ಬಂದಿರಿ. ಕಣ್ಣೀರು ಉದುರಿಸುತ್ತ, ಆದಿಶಕ್ತಿಯೆನಿಸಿದ ನನ್ನ ಪಾದದ ಮೇಲೆ ಬಿದ್ದು ನಮ್ಮನ್ನು ಆದಷ್ಟು ರಕ್ಕಸರ ಕೈಯೊಳಗೆ ಕೊಡಬೇಡ, ಹ್ಯಾಗಾದರೂ ಮಾಡಿ ಉಳಿಸಿಕೊ : ಎಂದು ನೀವ್ಯಾಕೆ ನನ್ನ ಬೆನ್ನು ಬಿದ್ದಿರಿ? ನಾನೇ ಸರ್ವ ಶಕ್ತನು, ಮಾಯೆಗೆ ಮಣಿಯದವನು : ಎಂಬ ಈ ನಿನ್ನ ನುಡಿ ಆಗೆಲ್ಲಿ ಅಡಗಿತ್ತು?

. : ಹೇ ನನ್ನ ಮುದ್ದು ಮಡದಿ, ನಿನ್ನ ಹಾಳು ಪುರಾಣವನ್ನು ನನ್ನ ಮುಂದೆ ಬಿಚ್ಚಬೇಡ. ಶುಂಭ ನಿಶ್ಶುಂಭ ರಾಕ್ಷಸರಿಗೆ ಗಂಡಸರಿಂದ ಮರಣವಾಗಬಾರದೆಂದು ವರವು ಇದ್ದುದರಿಂದ ಸ್ತ್ರೀಯಳಾದ ನಿನ್ನಿಂದ ಅವರನ್ನು ಕೊಲ್ಲಿಸಬೇಕಾಯಿತೇ ಹೊರತು ನಿನ್ನ ಹೆಚ್ಚಳದಿಂದಲ್ಲ. ನನ್ನ ಮಾತು ಮೀರಿ ಆ ಅಲ್ಲಮನನ್ನು ಗೆಲ್ಲುವುದಕ್ಕೆ ನೀನು ಮಾಯೆಯನ್ನು ಕಳಿಸಿದರೆ ನಿಶ್ಚಯವಾಗಿ ಮೋರೆಯನ್ನು ಒಣಗಿಸಿಕೊಂಡು ಕೂಡ್ರಬೇಕಾಗುವುದು.

ಪಾ. : ಬಿಡು ಬಿಡು ನಿನ್ನ ಅಲ್ಲಮನ ಪೌರುಷನ್ನು ನನ್ನ ಮುಂದೆ ಹೇಳಬೇಡ.

. : ನಿನ್ನ ಮಾಯೆಯ ಪೌರುಷವನ್ನು ನನ್ನ ಮುಂದೆ ಹೇಳಬೇಡ.

ಪಾ. : ನೋಡು, ಈಗಲೇ ಮಾಯೆಯನ್ನು ಕಳಿಸಿ ಅಲ್ಲಮನನ್ನು ಘಾಸಿಗೊಳಿಸಿ ನಿನ್ನಲ್ಲಿಗೆ ಹಿಡಿದು ತರಿಸುತ್ತೇನೆ.

. : ನಿನ್ನಿಂದಾಗದು.

ಪಾ. : ನಾನು ಗೆದೆಯುವುದೇ ಗಟ್ಟಿ.

. : ನೀನು ಸೋಲುವುದೇ ಗಟ್ಟಿ.

ಪಾ. : ಮಾಯೆಯು ಅಲ್ಲಮನಿಗೆ ಸೋತರೆ, ನೀನೇ ಶ್ರೇಷ್ಠನು.

. : ನಿನ್ನ ಮಾಯೆಗೆ ನನ್ನ ಅಲ್ಲಮನು ಸೋತರೆ ನೀನೇ ಶ್ರೇಷ್ಠಳು.

ಪಾ.

ಪದ : ತಾಳ ಕೇರವಾ; ರಾಗ ಮಿಶ್ರಪೀಲು

ಬಾರೆ ಮಾಯಿ ಜಗದ ಮೋಹಿ ಸೌಖ್ಯದಾಯಿ ಬಾ ಸುಗುಣಿss ಪಲ್ಲ

ಏರು :

ಚಂದಿರವದನೆ ಕುಂದಸುರದನೆ ಮಂಜುಳವಾಣಿ ಕುಂಜರಗಮನೆ
ನೀನೇ ತೋರೆ ಬಾರೆ ಬೇಗನೆ ಸರಸದಲಿ ಹರುಷದಲಿ ಚರಿಸುತಲಿ

ಮಾಯೆ : (ಬರುತ್ತ)

ಪದ : ತಾಳ ಕೇರವಾ; ರಾಗ ಮಿಶ್ರಪೀಲು

ಯಾಕೆ ಮಾತೆ ಲೋಕನಾಥೆ ಈ ತನುಜಾತೆ ಸ್ಮರಿಸಿದಿಯೇ
ಕರಿವರ ಗಮನೇ ಸರಸಿಜ ನೀ ನಯನೇ
ತ್ವರದಿ ಭರದಿ ಹರದಿ ಪೇಳೆ ಪಣಿವೇಣಿ ಕೀರವಾಣಿ
ಮಾತ್ರೋಶ್ರೀ ತಮ್ಮ ಪಾದಾರವಿಂದಕ್ಕೆ ಈ ಬಾಲಕಿಯ ಅಭಿವಂದನೆ.

ಪಾ. :       ಮುದ್ದುಮಗಳೆ, ಇತ್ತ ಬಾ ವಿಶ್ರಮಿಸು

ಮಾ.

ಪದ : ತಾಳ ಕೇರವಾ; ರಾಗ ಮಿಶ್ರಪೀಲು

ಸರಸಿನೇತ್ರೆ ಪೇಳೆನಗೆಕರಸಿದ ಕಾರಣ ಹೇಳನಗೆ ಜನನೀ
ಇಂದು ಕೋಟಿ ಸಮ ಅಂದವಾದ ಮುಖ ಕಂದಿದ್ಯಾಕೆ ಇಂದು ಜನನೀ
ಚಂದ್ರವದನೇ ಸ್ಮರಿಸಿದ ಕಾರಣ ಹೇಳನಗೆ.

ಪಾ. : ಅಲ್ಲಮೆಂಬ ಒಬ್ಬ ಬಲ್ಲ ಶಿವಯೋಗಿ ಗೆಲ್ಲಲಿಕ್ಕೆ ಕರೆಸಿದಿನೆ

ಮಾ. : ಆರ ಕೂಡ ಇಂಥ ಘೋರ ಪಂಥವಿದು,
ಗೌರಿ ಪೇಳೆ ನೀಯೆನಗೆ ತನುಜಳಿಗೆ

ಪಾ. : ಮುದ್ದು ಕಾಂತನೊಳು ಜಿದ್ದು ಗೈದಿಹೆನು
ಗೆದ್ದು ತರುವೆನೆಂದು ಮಗಳೆ ಮುದ್ದು ಮಗಳೇ

ಮಾ. : ಸಾಕು ಶೋಕವಿದಕ್ಯಾಕೆ ಚಿಂತಿಸುವೆ
ನೀಗು ನಿನ್ನಯ ಚಿಂತೆ ಗುಣವಂತೆ

ತಾಯೆ, ನನ್ನನ್ನು ತ್ವರಿತದಿಂದ ಕರಿಸಿದ ಕಾರಣವೇನು? ಅಪ್ಪಣೆ ಏನಿರುವುದು?

ಶತಕೋಟಿ ಚಂದ್ರಕಳೆಗಳನ್ನು ತಿರಸ್ಕರಿಸಿ ಹೊಳೆವ ನಿನ್ನ ಮುಖವು ಇಂದೇಕೆ ಬಾಡಿದ ಬಕುಳ ವೃಕ್ಷದಂತೆ ಕೆಳಗುಂದಿದೆ? ಚಿಚ್ಛಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಇಚ್ಛಾಶಕ್ತಿ ಮುಂತಾದ ಸರ್ವಶಕ್ತಿಗಳು ನೀನೇ ಆಗಿರುವಾಗ, ನಿನಗೆ ಇಂಥ ಚಿಂತೆ ಹ್ಯಾಗೆ ಬಂತು? ಯಾರಿಂದ ಬಂತು? ಯಾವ ಕಾರಣಕ್ಕಾಗಿ ಬಂತು? ಬೇಗನೆ ತಿಳಿಸಿ ಹೇಳಿ ನನಗೆ ಅಪ್ಪಣೆ ಕೊಡು. ನಾನೇನು ಮಾಡಲಿ ಹೇಳು? ಮುನಿಗಳು ಧರ್ಮಶಾಸ್ತ್ರವನ್ನು ಒಕ್ಕೊಟ್ಟು, ಕಾಮಶಾಸ್ತ್ರವನ್ನು ಕೊಂಡಾಡುವಂತೆ ಮಾಡಲೆ? ಇಲ್ಲವೆ, ತಮ್ಮ ಕೈಯೊಳಗಿನ ಜಪಮಾಲೆಯನ್ನು ಬಿಟ್ಟು ಬೆರಗುಬಟ್ಟು ತಿರುಗುವಂತೆ ಮಾಡಲೆ ? ಹರಿಹರಬ್ರಹ್ಮಾದಿಗಳೆಲ್ಲ ನನ್ನ ಮೋಹ ಜಾಲಕ್ಕೆ ಬಲಿಯಾಗಿರಲು, ಉಳಿದ ನರನಾಯಿಗಳ ಪಾಡೇನು? ನಿನ್ನ ಮನದ ಚಿಂತೆಯನ್ನು ಮರೆಮಾಚದೆ ನನ್ನ ಮುಂದೆ ಹೇಳು ತಾಯಿ.

ಪಾ. : ಮಗಳೇ ಮಮತೆಯ ಮಾಯೆ. ನಿನ್ನನ್ನು ಕರೆಸಿದ ಕಾರಣವೇನೆಂದರೆ : ಇಂದು, ಎನ್ನ ಪ್ರಾಣಕಾಂತನಾದ ಶಿವನು ಹರಿಹರಬ್ರಹ್ಮಾದಿಗಳಿಂದ ಕೂಡಿದ ಮಹಾಸಭೆಯಲ್ಲಿ ಅಲ್ಲಮನೆಂಬ ವಿರಕ್ತನು ಮಾಯೆಯ ಎದೆಯನ್ನು ಮೆಟ್ಟಿ ನಡೆಯತಕ್ಕವನೆಂದು ನುಡಿದನು. ಆಗ ನನಗೆ ಕಡುಕೋಪ ಬಂದು ಅಲ್ಲಮನ ಬಡಿವಾರವನ್ನು ನನ್ನ ಮುಂದೆ ಬಡಬಡಿಸಬೇಡ; ಈ ಕ್ಷಣವೇ ನನ್ನ ಮಾಯೆಯನ್ನು ಕಳಿಸಿ, ಹೆಡಮುರಿಗೆ ಕಟ್ಟಿ ಅವನನ್ನು ಎಳೆದು ತರಿಸುವೆನೆಂದು ಪಂಥ ಮಾಡಿದೆನು. ಪ್ರಯುಕ್ತಾ, ನೀನು ಈ ಕ್ಷಣವೇ ಭೂಲೋಕದಲ್ಲಿ ಅವತರಿಸಿ ಅಲ್ಲಮನನ್ನು ವಶಪಡಿಸಿಕೊಂಡು, ನನ್ನ ಪಂಥವನ್ನು ಗೆಲಿಸಬೇಕು.

ಮಾ. : ತಾಯೀ, ಇದೇನು ಮಹಾಕಾರ್ಯ! ಇದಕ್ಕೇಕೆ ಚಿಂತಿಸುವೆ? ಹೇಳುತ್ತೇನೆ ಕೇಳು;

ಪಾ. : ಅದೇನಿರುವುದು ಹೇಳು :

ಮಾ.

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ (ಚಕ್ಕಡ)

ಮಾಯೆಯ ಮೀರಿದ ಗಂಭೀರಾ
ಲೋಕದಲ್ಲಿ ಅವ ಯಾವ ಸೂರಾ
ಜಗವಿದು ಮಾಯೆಯ ಮಂದಿರಾ
ಒಂದೊಂದು ನಿರಿಗೆ ಹೊಂದಿ ಸಂಧಿಗೆ
ತೂಗಿ ಬಿದ್ದಿಹರಿಂತ ಯೋಗಿಗಳು ಜೋಗಿಗಳು 1

ಮೋಹವೆಂಬ ಮೇಟಿಯ ನಡಿಸಿಹೆನೊ
ಮಾಯಾಪಾಶವೆಂಬು ಕಣ್ಣಿ ಹಚ್ಚಿದೆನೊ
ಮೂವತ್ತು ಮೂರು ಕೋಟಿ ದೇವರನು
ಸಾಲಢಾವಣಿಯಾಗಿ ಕಟ್ಟಿ ಬಿಟ್ಟೇ ಬಿಗಿ
ಮಾಯೆಗೆ ಮೀರಿದ ಗಂಭೀರಾ ಅವ ಯಾರ        2