ದೇವಿ, ಇದಾವ ಘನ ಕಾರ್ಯ? ದೇವಾನುದೇವತೆಗಳನ್ನು ಸಾಲು ಡಾವಣಿ ದನಗಳ ಹಿಂಡಿನಂತೆ ನನ್ನ ಮಾಯಾಪಾಶವೆಂಬ ಕಣ್ಣಿಯಿಂದ ಹೊಡೆದುಕಟ್ಟಿದವಳು ನಾನು. ಅಂಥ ನನಗೆ ಯವನೋ ಒಬ್ಬ ಕ್ಷುಲ್ಲಕ ಅಲ್ಲಮನನ್ನು ವಶಪಡಿಸಿಕೊಂಡು ಬರುವುದು ಸಾಹಸದ ಕಾರ್ಯವಲ್ಲ. ಬೆಕ್ಕಿನ ಸುಳಿವಿಲ್ಲದ ಸ್ಥಳದಲ್ಲಿ ಇಲಿಗಳು ಚೆಲ್ಲಾಟವಾಡುವುದು ಸಹಜ. ಅವು ಬೆಕ್ಕನ್ನು ಕಾಣುತ್ತಲೇ ತಮ್ಮ ಚಲ್ಲಾಟವನ್ನು ನಿಲ್ಲಿಸಿ ಚೆಲ್ಲಾಪಿಲ್ಲಿಯಾಗಿ ಸದ್ದಿಲ್ಲದೆ ಗುದ್ದು ಸೇರುತ್ತವೆ. ಹಾಗೆಯೇ ಹೆಣ್ಣಿನ ಸಂಚಾರವಿಲ್ಲದ ಸ್ಥಳದಲ್ಲಿ ಉದ್ದ ಗಡ್ಡದ ಸಾಧುಗಳ ಚೆಲ್ಲಾಟ ನಡೆಯುತ್ತದೆ. ಹೆಣ್ಣಿನ ಸಂಚಾರವಾದೊಡನೆ ಅವರು ತಮ್ಮ ಕಡಾಸವನ್ನು ಬಗಲಲ್ಲಿ ಇಟ್ಟುಕೊಂಡು ಓಡಹತ್ತುವರು. ಅವರ ನೀತಿಶಾಸ್ತ್ರದ ಸುದ್ದಿಗಳೆಲ್ಲ ಸದ್ದಿಲ್ಲದೆ ಗುದ್ದು ಸೇರುವವು. ಈ ಬ್ರಹ್ಮಾಂಡವೆಲ್ಲ ನನ್ನ ಕಣ್ಣ ಸನ್ನೆಯಲ್ಲಿಯೇ ಕುಣಿಯುತ್ತಿರಲು ಯಕಶ್ಚಿತ್ ಅಲ್ಲಮನೊಬ್ಬನನ್ನು ನನ್ನ ಆಧೀನದಲ್ಲಿ ತರುವುದು ಅದಾವ ಘನ ಕಾರ್ಯ? ಈಗಲೇ ಹೋಗಿ ಪಿಶಾಚಿರೂಪದ ಅಲ್ಲಮನನ್ನು ಪಿಚಂಡಿ ಕಟ್ಟಿ ತರುತ್ತೇನೆ. ಇದೇ ನನ್ನ ವೀರ ಪಂಥ!

.

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ (ಚಕ್ಕಡ)
ಬಿಡುಬಿಡು ಎನ್ನೊಳು ನುಡಿಯದಿರಿಂಥ ನುಡಿ
ನಡೆಯದು ಅವನಲ್ಲಿ ನಿನ್ನ ಆಟ
ಮಾನಗೇಡಾಗುವಿ ಗಟ್ಟಿಮುಟ್ಟ
ಬಾಗಿಸಿ ನಿನ್ನನ್ನು ಮೂಗ ಕೊಯ್ಯುವನು
ಯೋಗಿಯ ತಡೆವುದು ಅಲ್ಲ ಚಂದ, ಮತಿಮಂದ               1

ನುಚ್ಚನು ತಿನ್ನಲು ನಾಯಿ ಹೆಚ್ಚಳದಿ
ಉರಿವ ಕಿಚ್ಚನು ತಿನ್ನಲು ತಾ ಪೋಗಿ
ನಾಶಾಗುವಂತೆ, ಅಲ್ಲಮ ಶಿವಯೋಗಿ
ಸುಂದರಿ ತಡವಿ ನಿಜವಾಗಿ ಕೆಡುವಿ
ಮಾಡುವದದೇ ಬಿಗಿ, ನುಡಿದಂತೆ, ನಡೆದಂತೆ                      2

ಎಲೆ ಜೊಳ್ಳು ಮಾಯೆ, ವ್ಯರ್ಥವಾಗಿ ಪಂಥವನ್ನು ತೊಡಬೇಡ. ನುಚ್ಚು ತಿನ್ನುವ ನಾಯಿ ಕಿಚ್ಚು ತಿಂದು ಬದುಕಬಲ್ಲದೆ? ಶಿವಭಕ್ತಿಶೂನ್ಯರಾಗಿ ಶಿವಧ್ಯಾನ ಹೀನರಾಗಿ ಬಾಹ್ಯಭ್ರಮೆಯಿಂದ ಬಳಲುವ ಮರುಳು ಮಾನವರ ಮೇಲೆ ನಡೆಸುವ ನಿನ್ನ ದರ್ಪವನ್ನು ಆ ಶಿವಶರಣ ಅಲ್ಲಮನ ಮೇಲೆ ನಡೆಸ ಹೋದರೆ ನಿನಗೆ ಅಪಮಾನವಾಗುವುದು ನಿಶ್ಚಯ. ಅವನು ನಿನ್ನನ್ನು ಹಿಡಿದು ಬಗ್ಗಿಸಿ ಮೂಗು ಕೊಯ್ದು ಮಾನಭಂಗ ಮಾಡದೆ ಬಿಡನು. ಬೇಡ, ವ್ಯರ್ಥ ಪಂಥ ತೊಡಬೇಡ. ಗೂಗಿಗಳ ಚೆಲ್ಲಾಟ ಕತ್ತಲೆಯಲ್ಲಿ ನಡೆವಂತೆ ಸೂರ್ಯನ ಬೆಳಕಿನಲ್ಲಿ ನಡೆಯದು. ಹಾಗೆ ಅಜ್ಞಾನವೆಂಬ ಕತ್ತಲೆಯಲ್ಲಿ ಕಾಲಾಡಿಸುವ ಮಂದಮತಿಗಳ ಮಧ್ಯದಲ್ಲಿ ನಿನ್ನ ಡೌಲು ನಡೆಯಬಹುದೇ ಹೊರತು, ಶತಕೋಟಿ ಸೂರ್ಯ ಪ್ರಕಾಶವನ್ನು ಮೀರಿದ ಶಿವಭಕ್ತರ ಮುಂದೆ ನಿನ್ನ ಕಣ್ಣುಮುಚ್ಚಾಟ ಸಾಗಲಾರದು. ನನ್ನ ಶರಣರ ಮುಂದೆ ನಿನ್ನ ಬೇಳೆ ಬೇಯಲಾರದು. ಬಾಯಿಂದ ಆಡಿದಂತೆ ಕೈಯಿಂದ ಮಾಡಿ ತೋರಿಸುವುದು ಕಠಿಣಕಾರ್ಯ. ರಣಹೇಡಿಯಂತೆ ಮೊದಲು ಬಹಳ ಮಾತಾಡಿ ಹಿಂದಿನಿಂದ ಮರ್ಯಾದೆಗೇಡಾಗುವುದು ಚಂದವಲ್ಲ. ನೀನು ಪಾರ್ವತಿಯ ಮುಂದೆ ನಾನು ಅಂಥಾ ಬಂಟಳು. ಇಂಥಾ ಬಂಟಳು, ಹರನನ್ನು ಕಟ್ಟಿ ತಂದವಳು, ಹರಿಯನ್ನು ಕುಟ್ಟಿ ನಿಂದವಳು, ಬ್ರಹ್ಮನನ್ನು ಮೆಟ್ಟಿ ಬಂದವಳು. ಆ ಅಲ್ಲಮನೆಂದರೆ ಎಷ್ಟರವನು? ಈಗಲೇ ಎಳೆದು ತರುವೆನೆಂದು ಬಿಂಕದಿಂದ ಉಬ್ಬುಬ್ಬಿ ಮಾತನಾಡಿದಿ. ಈ ಅಬ್ಬರದ ಮಾತು ಆ ಅಲ್ಲಮನನ್ನು ಕಾಣುವವರೆಗೆ ಮಾತ್ರ! ನೀನು ಅವನನ್ನು ಕಂಡೊಡನೆ ಹುಲಿಯನ್ನು ಕಂಡ ಮೊಲದಂತೆ ದಿಕ್ಕೆಟ್ಟು ಓಡು ಹೋಗುತ್ತಿ. ಬೇಡ, ಅಲ್ಲಮನನ್ನು ಗೆಲ್ಲುವ ಹವ್ಯಾಸ ನಿನಗೆ ಬೇಡ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು! ಅಲ್ಲಮನನ್ನು ತಡವಿ ಮಾನಗೇಡಿ ಆಗಬೇಡ.

ಪಾ. : ಎಲೈ ಶಿವನೆ, ನಿನ್ನಂಥ ನಾಚಿಕೆಗೇಡಿಯನ್ನು ನಾನೆಲ್ಲಿಯೂ ಕಾಣಲಿಲ್ಲ. ಮಾಯೆಯ ಕೈಯಲ್ಲಿ ಸಿಕ್ಕು ಅನೇಕ ಸಲ ಮಗ್ಗಲ ಮುರಿಸಿಕೊಂಡರೂನಿನಗೆ ಬುದ್ಧಿ ಬರಲಿಲ್ಲ. ಮೀಸೆಗೆ ಮಣ್ಣು ಹತ್ತಿದರೂ ಒರಸಿಕೊಂಡು, ಮೀಸೆಗೆ ಏನಾಗಿಲ್ಲವೆಂದು ಮೀಸೆ ತಿರುವುತ್ತಿರುವ ನಿನ್ನಂಥ ಮೀಸೆಹರಕನ ಕೂಡ ಮಾತಾಡುವುದೇ ಕಷ್ಟ.

. : ಎಲೆ ಬಾಯ ಬಡಕಿ, ಮಾಯೆಗೆ ಮರುಳಾಗಿ ಮಗ್ಗಲು ಹಾಗೆ ನಾನೆಂದು ಬಿದ್ದು ಒದ್ದಾಡಿದೆ?

ಪಾ. : ಅದನ್ನು ಮಾಯೆಯ ಬಾಯಿಯಿಂದಲೇ ಕೇಳು.

. : ಅವಳೇನು ಹೇಳಬಲ್ಲಳು?

ಮಾ. : ಈಗ ಆ ಮಾಯೆಯೇ ಹೇಳುತ್ತಾಳೆ; ಎಲೆ ಪಾಪಿ, ಹಿಂದೊಮ್ಮೆ ನನ್ನ ಸೌಂದರ್ಯಕ್ಕೆ ಮರುಳಾಗಿ ಭ್ರಮಿಷ್ಟನಂತೆ ಬೆನ್ನು ಹತ್ತಿ ತಿರುಗಿದ್ದನ್ನು ಮರೆತೆಯಾ? ಮೂಗು ಹೋದರೇನಾಯಿತು; ಹೊರಳಿ ಇಲ್ಲವೇನು? ಎಂದು, ಕೊಯ್ದ ಮೂಗನ್ನೇ ಮೇಲೆ ಮಾಡಿಕೊಂಡು ತಿರುಗುತ್ತಿಯಲ್ಲ!

. : ಎಲೆ ಮಾಯೆ, ನಿನ್ನ ಬೆನ್ನು ಹತ್ತಿ ನಾನೆಂದು ತಿರುಗಿದೆನು?

ಮಾ. : ಎಂದೂ ತಿರುಗಿಲ್ಲವೆ?

. : ಎಂದೂ ತಿರುಗಿಲ್ಲ?

ಮಾ. : ನೋಡು.

. : ಉಹೂಂ, ನಾನೆಂದೂ ತಿರುಗಿಲ್ಲ.

ಮಾ.

ಪದ : ತಾಳ ದೀಪಚಂದಿ : ರಾಗ ಕಾಪಿ

ಸುಡು ಸುಡು ನಿನ್ನs ದೊಡ್ಡಿಸ್ತನsss
ತ್ರಿಪುರದಹನ ಕಾಲದಿ ನೀನಾ
ಮಾಯೆಯ ಸುತ್ತಲೆ ತಿರುಗಿದೆ ಬತ್ತಲೆ
ಮಾಯೆಯ ಸತ್ವ ತಿಳಿಯದೆ ಹ್ಯಾಂವಾ
ತೊಡುವಿಯೊ ಶಿವಾ
ಮೋಹಿಸ ನೀನು ಋಷಿಪತ್ನಿಯರನು
ಹತ್ತಿದೆ ಬೆನ್ನ ಬತ್ತಲೆ ನೀನಾ ನಾಚಿಕೆ ಹೀನಾ

ಮರುಳು ಮಹಾದೇವ, ಇತ್ತ ಹೊರಳು. ಸುಳಿಗೂದಲ ಸುಗುಣಿಯರನ್ನು ಕಂಡು. ಬುದ್ಧಿಭ್ರಮೆಯಾದವರಂತೆ ಲಜ್ಜೆಗೆಟ್ಟು ಬತ್ತಲೆ ತಿರುಗಲಿಲ್ಲವೆ?

. : ನಾನೆಂದು ತಿರುಗಿದೆ?

ಮಾ. : ಹಿಂದಕ್ಕೆ ತ್ರಿಪುರಸಂಹಾರ ಕಾಲದಲ್ಲಿ, ತ್ರಿಪುರಗಳ ಮರ್ಮವನ್ನು ಅರಿಯಲು ನೀನು ಯಾವ ವನದಲ್ಲಿ ಹೋದೆ?

. : ದ್ವಾರಕಾ ವನದಲ್ಲಿ ಹೋದೆನು.

ಮಾ. : ಆ ದ್ವಾರಕಾ ವನದಲ್ಲಿ ಯಾರು ಇದ್ದರು?

. : ವಾನಪ್ರಸ್ಥಾಶ್ರಮಿಗಳಾದ ಋಷಿಗಳು ಇದ್ದರು.

ಮಾ. : ಆ ಋಷಿಗಳ ಹೆಂಡಿರ ಚಲ್ವಿಕೆಯನ್ನು ಕಂಡು ಚಕಿತನಾಗಿ, ಮಾಯಾರೂಪ ತೊಟ್ಟು, ಮರ್ಯಾದೆಗೆಟ್ಟು, ಮೈಮೇಲಿನ ಅರಿವೆ ಕಳಚಿ, ಬಾಲೆಯರ ಬೆನ್ನು ಹತ್ತಿ ನೀನು ತಿರುಗಾಡಿದಿ. ಹೀಗಿದ್ದು ಈಗ ನಾನಾಗಲಿ, ನನ್ನ ಭಕ್ತರಾಗಲಿ ಮಾಯೆಗೆ ವಶವಾಗುವವರಲ್ಲವೆಂದು ಹೇಳುವುದಕ್ಕೆ ನಿನ್ನ ಮೋರೆಯ ಮೇಲೆ ಮೂಗು ಇದೆಯೆ? ನಂದಿಯನ್ನೇರಿದಂಥ ಅನಂತಕೋಟಿ ರುದ್ರರು, ಗರುಡನನ್ನೇರಿದಂಥ ಅನಂತಕೋಟಿ ವಿಷ್ಣುಗಳು, ಹಂಸನನ್ನೇರಿದಂಥ ಅನಂತಕೋಟಿ ಬ್ರಹ್ಮರು, ಅಂಗಾಲಲ್ಲಿ ಕಣ್ಣುಳ್ಳವರು, ಮೈಯೆಲ್ಲಾ ಕಣ್ಣಾದವರು : ಎಲ್ಲರೂ ನನ್ನ ಎಡಗಾಲಲ್ಲಿ ಹಾಕಕೊಂಡಿರುವ ಹುಲ್ಲುಸರವಿಯಲ್ಲಿ ಗೆಜ್ಜೆಗಳಾಗಿ ಕೂತು ನರ್ತನಕ್ಕೆ ಗಿಲಿಗಿಲಿ ಸಪ್ಪಳ ನೀಡುತ್ತಿದ್ದಾರೆ. ಹೀಗಿರಲು, ಆ ನಿನ್ನ ಅಲ್ಲಮ ಅಂದರೆ ಎಷ್ಟರವನು? ಅವನು ಮೈಗೆ ಬೂದಿಯನ್ನೊರಸಿಕೊಂಡು ಅಲ್ಲಲ್ಲಿ ಗೀರಗಂಧವನಿಟ್ಟುಕೊಂಡು, ನನ್ನ ಮೋರೆಯನ್ನೇ ನೋಡುತ್ತ, ನನ್ನ ಬೆನ್ನು ಹತ್ತಿ ಬರುವಂತೆ ಮಾಡದಿದ್ದರೆ ನಾನು ಮಾಯೆಯೇ ಅಲ್ಲ.

. : ಹೇ ತುಚ್ಛ ಮಾಯೆ, ಅಲ್ಲಮನ ಹೆಚ್ಚಳಿಕೆಯನ್ನು ತಿಳಿಯದೆ, ನಾನೇ ಹೆಚ್ಚಿನವಳೆಂದು ಮನಬಂದಂತೆ ನಿನ್ನ ಪೌರುಷನ್ನು ಕೊಚ್ಚಬೇಡ. ಶಿವಶರಣರು ಮಾಯೆಯನ್ನು ಹುಳುಬಿದ್ದ ಹುಚ್ಚುನಾಯಿಗಿಂತಲೂ ಕಡಿಮೆಯೆಂದು ಭಾವಿಸುವರು.

ಪಾ. : ಪ್ರಾಣನಾಥಾ, ನನ್ನ ತಾಮಸಕಳೆಯಾದ ಮಾಯೆಯನ್ನು ಇಚ್ಛೆಗೆ ಬಂದಂತೆ ತುಚ್ಛೀಕರಿಸಿ ಮಾತನಾಡಬೇಡ. ಮಾಯೆಯ ಘನತೆ ಯಾರಿಗೂ ತಿಳಿಯದು. ಈ ಜಗತ್ತೆಲ್ಲ ಮಾಯೆಯಿಂದಲೇ ಹುಟ್ಟಿ ಮಾಯೆಯಿಂದಲೇ ಬೆಳೆಯುತ್ತದೆ. ಜಗತ್ತು ಮಾಯಾದೇವಿಯ ನರ್ತನಶಾಲೆಯಾಗಿದೆ. ಈ ಮಾಯೆ ಯಕಃಶ್ಚಿತಳಲ್ಲ, ಹರಿಹರಬ್ರಹ್ಮಾದಿಗಳನ್ನು ನುಂಗಿ ನೀರುಕುಡಿದವಳು ಮಾಯೆ. ಅಂಥ ಆಗಮ್ಯ ಮಾಯೆಯ ಪ್ರತಾಪವನ್ನು ತಿಳಿಯದೆ ವ್ಯರ್ಥವಾಗಿ ಪ್ರಸಂಗಿಸಬೇಡ. ಈ ಕ್ಷಣವೇ ಅವಳನ್ನು ಕಳಿಸಿ, ಅಲ್ಲಮನನ್ನು ಹೆಡಮುರಿಗೆ ಬಿಗಿಸಿ ತರಿಸದಿದ್ದರೆ ನಾನು ಪಾರ್ವತಿಯಲ್ಲ.

ಮಾ. : ಎಲೈ ಮರುಳ ಶಂಕರಾ, ನನ್ನ ಮಹಿಮೆಯನ್ನು ತಿಳಿಯದೆ, ಹುಳುಬಿದ್ದ ಹುಚ್ಚ ನಾಯಿಯೆಂದು ನನ್ನನ್ನು ಜರೆದು ಮಾತಾಡಿದೆಯಲ್ಲ! ಇಗೋ, ಈಗಲೇ ಹೋಗಿ ಮಾಯಾವರಣದಲ್ಲಿ ಅವನನ್ನು ಮುಚ್ಚಿ ನನ್ನ ಬೆನ್ನ ಹಿಂದೆಯೇ ಕರೆದುಕೊಂಡು ಬಂದರೆ, ನನಗೆ ಹೌದು ಮಾಯಿ : ಎಂದು ಕರೆ. ಇಲ್ಲದಿದ್ದರೆ ನನ್ನನ್ನು ಶಿವಶರಣ ಮನೆಯ ಬಾಗಿಲ ಕಾಯುವ ನಾಯಿ : ಎಂದು ಕರೆ. ಇದೋ ಈಗಲೇ ಹೊರಟೆ.

. : ಅರಗಿನ ಕುದುರೆಯ ಮೇಲೆ ಉರಿಯ ಸವಾರಿ! ನಡೆಯಲಿ ನಿಮ್ಮ ಹುಚ್ಚಾಟ!!

 

ಅಲ್ಲಮನ ಪ್ರವೇಶ

ಪರಮಾತ್ಮ : ಪದ : ತಾಳಕೇರವಾ, ರಾಗ ಭೀಮಪಲಾಸ

ನಮೋ ಶಂಕರಾss ಗುರುವರಾಪಲ್ಲ
ಪಾಲಿಸೋ ಹರನೆ ಪಾರ್ವತೀ ಹರನೆ
ಫಾಲಾಕ್ಷಧರನೆ ನಮೋ ಶಂಕರಾs ಗುರುವರಾ 1

ತ್ರಿಶೂಲಧರನೆ ತ್ರಿನೇತ್ರಹರನೆ
ತ್ರಿಪುರದಹನೆ ನಮೋ ಶಂಕರಾs ಗುರುವರಾ   2

ಫಲಪುರವಾಸ ಶ್ರೀ ಸಿದ್ಧೇಶ
ಕೈಲಾಸವಾಸ ನಮೋ ಶಂಕರಾs ಗುರುವರಾ  3

ವಿಚಿತ್ರ! ಈ ಮಾಯಾಪ್ರಪಂಚದ ಕಾರ್ಯ ವಿಚಿತ್ರ!! ಈ ಮಾಯೆ ಜನರ ಮನಸ್ಸನ್ನು ಬಲವತ್ತರವಾಗಿ ಸೆಳೆದುಕೊಂಡು, ಅವರನ್ನು ಮಹಾಕಷ್ಟಕ್ಕೆ ಗುರಿ ಮಾಡುತ್ತಲಿದೆ! ಮನುಷ್ಯರು ಭೂತ ಬಡಿದವರಂತೆ ತಮ್ಮನ್ನು ತಾವು ಮರೆತು ಮನಬಂದ ಹಾಗೆ ಬಡಬಡಿಸುತ್ತಾರೆ. ಶಿವ ಶಿವಾ, ಈ ನರರು ಎಷ್ಟೊಂದು ಕಷ್ಟಪಡುತ್ತಿರುವರು! ಮೋಸಗಾರನ ಸುಲಿಗೆಗೆ ತುತ್ತಾಗಿ ಗೋಳಿಸುವ ನಿರಪರಾದಿಗಳಂತೆ ಮಾನವರು ಆಸೆಯೆಂಬ ಪಾಶಕ್ಕೆ ಸಿಕ್ಕು, ಇಹ : ಪರಗಳ ಪರವೆಯಿಲ್ಲದೆ ನೆಲೆಗೆಟ್ಟು ತೊಳಲಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿಯೂ ಈ ಮಾಯಾಪಿಶಾಚಿಯ ಬೆನ್ನು ಬಿಡರು. ಇಂತಹ ಮರುಳ ಮಾನವರ ಗತಿಯೇನು? ಈ ಪಿಶಾಚಿಯ ಬೆನ್ನು ಹತ್ತಿ ಮನೆಮಾರು ಮೂಲೆ : ಗುಂಪಾದವು. ಜನರು ತೊಳಲಿ ಬಳಲಿ ಬೆಂಡಾದರು. ಯಮದೂತರ ಕಾಟ ಮಿತಿ ಮೀರಿತು. ಆ ಭ್ರಷ್ಟ ಆಸೆಯ ಬೆನ್ನು ಹತ್ತಿರುವ ಜನಕ್ಕೆ ಏನೆನ್ನಬೇಕು? ದೀಪ ಬಡಿಯುವ ಹುಳವು ಹಣ್ಣೆಂಬ ಭ್ರಮೆಯಿಂದ ದೀಪಕ್ಕೆರಗಿ ಹುರಪಳಿಸಿ ಬಿದ್ದು ಒದ್ದಾಡುತ್ತದೆ. ಆದರೂ ಆ ಹಣ್ಣಿನ ಭ್ರಮೆ ಹೋಗದೆ ಪುನಃ ಎರಗಿ ಅನರ್ಥಕ್ಕೆ ಗುರಿಯಾಗುವುದು. ಅದರಂತೆ ಈ ಮಾಯಾ ಪ್ರಪಂಚವು ಜೀವಿಗಳನ್ನು ಹುರಪಳಿಸಿ ಬಿಡುವ ದೀಪವಾಗಿದೆ. ಅದನ್ನು ತಿಳಿದರೂ ಮಾನವರು ಮಾಯಾ ಭ್ರಮೆಯಿಂದ ದೀಪವೆಂಬ ಸಂಸಾರಕ್ಕೆ ಸಿಲುಕಿ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿ, ಗತಿಗಾಣದೆ ಹೋಗುವರು. ಇಂತಹ ಜೀವಿಗಳ ಕಷ್ಟ ಪರಂಪರೆಯನ್ನು ಕಂಡು ಕನಿಕರಗೊಂಡು, ಅವರ ಉದ್ದಾರಕ್ಕಾಗಿ ವಚನ ಶಾಸ್ತ್ರವನ್ನು ನಿರ್ಮಿಸಿದ್ದೇವೆ. ಆದರೆ ಕುರುಡರ ಮುಂದೆ ಕಂದೀಲು ಇಟ್ಟಂತೆ ಆ ಶಾಸ್ತ್ರದ ಗತಿಯಾಗಿದೆ. ಅಂತೆಯೇ ನಾನು ಶಿವಾಜ್ಞೆಯಿಂದ ಜಂಗಮರೂಪ ಧರಿಸಿ, ಮುಂದುಗಾಣದ ಭಕ್ತರನ್ನು ಕಂಡು ಗುರೂಪದೇಶ ಮಾಡಿ, ಪ್ರಸಾದ ಕೊಟ್ಟು ಪವಿತ್ರ ಮಾಡಲಿಕ್ಕೆ ಸಂಚಾರ ಕೈಕೊಂಡಿದ್ದೇನೆ. ಮಾನವರನ್ನು ಮುಸುಕಿದ ಈ ಮಾಯಾಜಾಲವನ್ನು ಕಿತ್ತೊಗೆದು, ಅವರನ್ನು ಸಂಸಾರದಿಂದ ಮುಕ್ತಗೊಳಿಸುವುದೇ ನನ್ನ ಅವತಾರದ ಉದ್ದೇಶವಾಗಿದೆ. ಹೀಗಿರಲು ಆ ಮಾಯೆಯು ಪರಮೇಶ್ವರನ ಸಭೆಯಲ್ಲಿ ನನ್ನನ್ನು ಗೆಲ್ಲುವೆನೆಂದು ಪಂಥ ಹೂಡಿ ಭೂಮಿಗೆ ಬಂದು ಜನಿಸಿ, ಬನವಾಸಿ ಪಟ್ಟಣದಲ್ಲಿ ಬೆಳೆಯುತ್ತಿರುವಳಂತೆ. ಒಳ್ಳೆಯದು. ಈ ಕ್ಷಣವೇ ನಾನು ಅಲ್ಲಿಗೆ ಹೋಗಿ, ನನ್ನನ್ನು ತಿರಸ್ಕರಿಸಿ ಮಾತಾಡಿದ ಆ ಮಾಯೆಯ ಮುಂದಲೆಯನ್ನು ಹಿಡಿದು ಬಗ್ಗಿಸಿ, ಮೂಗು ಕೊಯ್ದು ಮಾನಭಂಗ ಮಾಡದಿದ್ದರೆ ಅಲ್ಲಮನಲ್ಲ.

ದೂತಿ : ಈತ ಯಾರು? ಹೇಳವರಿಲ್ಲ, ಕೇಳವರಿಲ್ಲ; ತನ್ನಷ್ಟಕ್ಕೆ ತಾನೇ ವಟ ವಟ, ಪಿಟಿಪಿಟಿ ಹಚ್ಚ್ಯಾನ! ಸ್ವಾಮೀ, ತಾವು ದಾರು?

ಅಲ್ಲಮ : ಸತ್ಪುರುಷರ ನಿಲುಮೆಯನ್ನು ತಿಳಿಯದೆ, ಇಚ್ಛೆಗೆ ಬಂದಂತೆ, ಬಡಿಬಡಿಸುವ ತುಚ್ಛ ಸ್ತ್ರೀ ನೀ ಯಾರು?

ದೂತಿ : ನಾನು ಯಾರಿss!

ಅಲ್ಲಮ : ನೀನು ಯಾರಿಯೇ?

ದೂತಿ : ನಾನು ಯಾರಿ, ಕೇಳಿದರೆ ಕಾರಿ; ಸತ್ತ ಗಳಿಗ್ಗೆ ಒಯ್ಯದಿದ್ದರೆ ಹೊಲಸ ನಾರಿss.

ಅಲ್ಲಮ : ನೀನು ಯಾರಿಯೇ?

ದೂತಿ : ಹೌದು ನಾನು ಯಾರಿ! ಕರೆದಲ್ಲೇ ವಯ್ಯರಿ!! ಒಲ್ಲೆನೆಂದರೂ ಬಿಡದ ಛೀಮಾರಿ!!!

ಅಲ್ಲಮ : ನೀನೇನು ಹೆಸರು ಹೇಳಿವಿಯೋ? ಇಲ್ಲದ ಕುಚೇಷ್ಟೆ ಮಾಡುವಿಯೋ?

(ಕೃಷ್ಣಾಜಿನದಿಂದ ಹೊಡೆಯ ಹೋಗುವನು.)

ದೂತಿ : ಬಡಿಬ್ಯಾಡ್ರಿಯಪ್ಪ ಹೇಳತೀನಿ; ಅಯ್ಯಯ್ಯ ಮೈಮೇಲೆ ಬಾಸಾಳs ಎದ್ದವು. ನನ್ನಂಥ ಕತ್ತೆಗುಣದವರು ಲತ್ತೆಗೆ ಮೆತ್ತಗಾಗತಾರ. ಸ್ವಾಮಿ, ನನಗೆ ದೂತಿ ಅಂತಾರ. ತಮ್ಮ ಹೆಸರೇನು ಹೇಳಿರಿ?

ಅಲ್ಲಮ : ದೂತೆ, ನಾನು ಸತ್‌ಪುರುಷನಿದ್ದೇನೆ.

ದೂತಿ : ಸತ್ತ ಪುರುಷ! ಸತ್ತವರು ಮಾತಾಡತಾರೇನ್ರೀss……..?

ಅಲ್ಲಮ : ನಾನು ಅವತಾರಿಕ ಪುರುಷನಿದ್ದೇನೆ.

ದೂತಿ : ತಾರಕ ಪುರುಷ! ಹಳ್ಳೀ ತಾರಕವೋ? ದಿಳ್ಳೀ ತಾರಕವೋ?

ಅಲ್ಲಮ : ಛೀ ಮೂರ್ಖಳೇ, ನಿನಗೆ ಇಷ್ಟೂ ತಿಳಿಯದೆ? ಅವತಾರಿಕನೆಂದರೆ : ಭೂಲೋಕವನ್ನು ಉದ್ಧಾರ ಮಾಡಲು ಶಿವಲೋಕದಿಂದ ಇಳಿದು ಬಂದ ಸಚ್ಚಿದಾನಂದ ಸ್ವರೂಪನಾದ ಶಿವಯೋಗಿ ಇದ್ದೇನೆ.

ದೂತಿ : ಶಿವಲೋಕದಿಂದ ಇಳಿದು ಬಂದ್ರ್ಯಾ? ಅಲ್ಲಿಂದ ಇಲ್ಲಿಗೆ ಇಳಿದು ಬರಬೇಕಾದ್ರ ಅಷ್ಟುದ್ದ ನಿಚ್ಣಣಿಕೆ ಎಲ್ಲಿಂದ ಬಂತ್ರಿ?

ಅಲ್ಲಮ : ಮೂಡಳೇ, ಇಚ್ಛಾ ಮಾತ್ರದಿಂದ ಬ್ರಹ್ಮಾಂಡವನ್ನೆಲ್ಲ ಸಂಚರಿಸುವ ನನಗೆ ಇಳಿದು ಬರಲು ನಿಚ್ಚಣಿಕೆ ಯಾಕೆ ಬೇಕು? ನಾನೇ ಸಾಕ್ಷಾತ್ ಶಿವನಿದ್ದೇನೆ.

ದೂತಿ : ಹೈ, ನೀನೇ ಸಾಕ್ಷಾತ್ ಶಿವಾ?

ಅಲ್ಲಮ : ಹೌದು, ನಾನೇ ಸಾಕ್ಷಾತ್ ಶಿವ.

ದೂತಿ : ತಾವು ಸಾಕ್ಷಾತ್ ಶಿವನಾದರೆ, ಕೈಲಾಸವನ್ನು ಬಿಟ್ಟು ಇಲ್ಲಿಗೆ ಬಂದ ಕಾರಣವೇನು?

ಅಲ್ಲಮ : ದೂತೆ, ಹೇಳುತ್ತೇನೆ ಕೇಳು :

ಪದ : ತಾಳಕೇರವಾ ; ರಾಗ ಮಿಶ್ರಕಾಪಿ

ಹೇಳುವೆ ಕೇಳ ದೂತೆ ಸಗುಣವಿಖ್ಯಾತೆ
ಅವತರಿಸಿ ಬಂದ ರೀತಿ (ದುಗುಣ)

ಏರು :

ಗಾರುಡಿ ಆಟದ, ಕಣ್ಣಿಗೆ ಮಾಟದ
ಮಾಯೆ ಎಂಬುವ ನಾರಿ ನನಗೆ ಇರುವಳೊ ವೈರಿ                   1

ಜಗವು ಎಂಬುವ ಬಲಿ ರಚಿಸಿ ತಾನದರಲಿ
ಇರಿಸಿ ಬಿಟ್ಟಿಹಳೊ ಚಂದ ರೂಪವು ರಸಗಂಧ   2

ಆಸೆಪಾಶವನಿಕ್ಕಿ ಮನುಷ್ಯರೆಂಬುವ ಹಕ್ಕಿ
ಘಾಸಿಗೈವಳೊ ಈಕಿ ಅದಕೆ ಬಂದೆನೆ ಸಖಿ      3

ದೂತೆ, ಸಾಕ್ಷಾತ್ ಶಿವನಾದ ನಾನು ಕೈಲಾಸವನ್ನು ಬಿಟ್ಟು ಈ ಭೂಲೋಕಕ್ಕೆ ಅವತರಿಸಿ ಬಂದ ಕಾರಣವನ್ನು ನಿನಗೆ ಹೇಳಬಲ್ಲವೆ? ಕತ್ತಲ ತತ್ತಿಯಂತಿರುವ ಬಂಗಾಲಿ ಆಟದ ಹೆಂಗಸೊಬ್ಬಳು ನನಗೆ ವಿರೋಧಿಯಾಗಿದ್ದಾಳೆ; ಅವಳ ಹೆಸರು ಮಾಯೆ. ಅವಳಿಗೆ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಎಂಬ ಆರು ಜನ ಮಕ್ಕಳಿದ್ದಾರೆ. ಆಕೆಯು ಅವರನ್ನು ಕೂಡಿಕೊಂಡು ಜಗತ್ತಿಗೆ ಗಾರುಡಿ ಬಲೆ ಬೀಸಿ ಶಬ್ದ ಸ್ಪರ್ಶ ರೂಪ ರಸ ಗಂಧ ಎಂಬ ಚಿತ್ರವಿಚಿತ್ರವಾದನೋಟಗಳನ್ನು ಇರಿಸಿ ಅಸೆಯೆಂಬ ಪಾಶವನ್ನು ಧರಿಸಿ ಮನುಷ್ಯರೆಂಬ ಹಕ್ಕಿಗಳನ್ನು ಹಿಡಿದು ಕನಿಕರವಿಲ್ಲದೆ ಕಷ್ಟಪಡಿಸುತ್ತಿದ್ದಾಳೆ. ಅದನ್ನು ಕಂಡು ಕನಿಕರಗೊಂಡು ಮಾನವರನ್ನು ಮಾಯಾಜಾಲದಿಂದ ಬಿಡುಗಡೆ ಮಾಡಿ ಸತ್ಯ ಸುಖವನ್ನು ನೀಡಿ ಉದ್ಧರಿಸುವುದಕ್ಕಾಗಿ ನಾನು ನಿರ್ಗುಣನಾದರೂ ಲೋಕೋದ್ಧಾರಕ್ಕಾಗಿ ಸಗುಣರೂಪವನ್ನು ಧರಿಸಿ ಮೇಲಿಂದ ಮೇಲೆ ಅವತಾರ ಮಾಡುವುದು ನನ್ನ ಗುರಿಯಾಗಿದೆ.

ದೂತಿ : ತಾವು ಮೇಲಿಂದ ಮೇಲೆ ಅವತಾರ ಮಾಡುತ್ತಿದ್ದರೆ ಇದಕ್ಕೂ ಮೊದಲು ತಾವು ಅವತಾರ ಮಡಿರಬೇಕಲ್ಲವೆ?

ಅಲ್ಲಮ : ಹೌದು, ಮಾಡಿದ್ದೇನೆ.

ದೂತಿ : ಯಾವ ಯಾವ ಯುಗದಲ್ಲಿ, ಯಾವ ಯಾವ ಅವತಾರವನ್ನು ಮಾಡಿದಿರಿ?

ಅಲ್ಲಮ : ದೂತೆ, ನಾನು ಈ ಮೊದಲು ಕೃತಯುಗದಲ್ಲಿ ಸ್ಥೂಲ ಕಾಯನೆಂಬ ಗಣೇಶ್ವರನಾಗಿ, ತ್ರೇತಾಯುಗದಲ್ಲಿ ಶೂನ್ಯಕಾಯನೆಂಬ ಗಣೇಶ್ವರನಾಗಿ, ದ್ವಾಪರದಲ್ಲಿ ಅನಿಮಿಷನೆಂಬ ಗಣೇಶ್ವರನಾಗಿ ಅವತರಿಸಿ, ಲೋಕವನ್ನು ಉದ್ಧರಿಸುತ್ತ ಬಂದಿದ್ದೇನೆ. ಕಲಿಯುಗದಲ್ಲಿ ಅಲ್ಲಮಪ್ರಭುವೆಂಬ ಹೆಸರಿನ ಗಣೇಶ್ವರನಾಗಿ ಅವತರಿಸಿ ಬಂದಿರುವೆನು.

ದೂತಿ : ಈಗ ತಮಗಿರುವ ಹೆಸರು ಏನ್ರಿ?

ಅಲ್ಲಮ : ಈಗಿನ ಹೆಸರು ಅಲ್ಲಮ!

ದೂತಿ : ಎಲ್ಲಮ್ಮ! ತಾವು ಎಲ್ಲಮ್ಮ ಆಗಿದ್ದರೆ ಕೊರಳಿನಲ್ಲಿ ಕವಡಿಯ ಸರ ತಲೆಯ ಮೇಲೆ ಜಗ ಇಲ್ಲವಲ್ಲ?

ಅಲ್ಲಮ : ಛೀ ಮೂರ್ಖಳೇ, ಎಲ್ಲಮ್ಮ ಅಲ್ಲ ಅಲ್ಲಮ.

ದೂತಿ : ಗೊತ್ತಾತು ಬಿಡ್ರಿ ತಮ್ಮ ಹೆಸರು ಅಲ್ಲಮ ಎಂಬುದು. ತಮಗೆ ಅಲ್ಲಮ ಎಂದು ಕರೆಯಲು ಕಾರಣವೇನ್ರಿ?

ಅಲ್ಲಮ : ದೂತೆ, ಹೇಳುತ್ತೇನೆ ಕೇಳು.

ದೂತಿ : ಅದೇನಿರುವುದು ಹೇಳಿರಿ.

ಅಲ್ಲಮ :

ಪದ : ತಾಳಕೇರವಾ ; ರಾಗಮಿಶ್ರಕಾಪಿ

ವನಜಾ ಮುಖಿಯೇ ಕೇಳೆ ಎನಗಲ್ಲಮ ಅನ್ನು
ರೀತಿ ಪೇಳುವೆ ಶಿವನಾಮ॥ಪಲ್ಲವಿ॥

ಆರು ಗುಣಕೆ ವಶ, ನಾನಲ್ಲಾ
ನಾಲ್ಕು ವೇದಶಾಸ್ತ್ರಕೆ ನಿಲುಕುವನಲ್ಲಾ

ಏರು : ಸದ್ಗುಣನಲ್ಲಾ ದುರ್ಗುಣನಲ್ಲಾ
ಮೋಹಪಾಶಕೆ ಬೀಳುವನಲ್ಲಾ                  1
ಆಕಾರ ಉಳ್ಳವ ನಾನಲ್ಲ ದೂತೆ
ವಿಕಾರ ಉಳ್ಳವ ನಾನಲ್ಲಾ

ಏರು : ಮಾರನ ಮಂಚಕೆ ಮಾಯಾಪ್ರಪಂಚಕೆ
ಸಂಬಂಧ ಉಳ್ಳವ ನಾನಲ್ಲಾ                    2
ಯಾವದೂ ನಾನಲ್ಲ ನಾನಲ್ಲಾ ಇರಲು
ಅಲ್ಲಮನೆಂಬುದು ಜಗವೆಲ್ಲಾ

ಏರು : ಕೇಳೆನ್ನ ಸೊಲ್ಲಾ ಅನ್ನಿರಿ ಅಲ್ಲಾ
ತಿಳಿಯಿರಿ ಇದರ ನಿಜಮೂಲಾ                   3
ಆಕಾರ ಉಳ್ಳವ ನಾನಲ್ಲ ದೂತೆ
ವಿಕಾರ ಉಳ್ಳವ ನಾನಲ್ಲಾ

ದೂತೆ, ನನಗೆ ಅಲ್ಲಮನೆಂದು ಕರೆಯಲಿಕ್ಕೆ ಕಾರಣವೇನೆಂದರೆ ನಾನು ಮಾಯೆಗೆ ಒಳಗಾದವನಲ್ಲ, ಕಾಮ : ಕ್ರೋಧಾದಿಗಳಿಗೆ ಬಲಿಯಾದವನಲ್ಲ, ವೇದಶಾಸ್ತ್ರ ವಿಚಾರಕ್ಕೆ ಹೊಳೆದವನಲ್ಲ. ಆಕಾರ ಉಳ್ಳವನೂ ಅಲ್ಲ. ವಿಕಾರ ಉಳ್ಳವನೂ ಅಲ್ಲ. ಮಾಯಾ ಪ್ರಪಂಚಕ್ಕೆ ಯಾವ ರೀತಿಯಿಂದಲೂ ಸಂಬಂಧಪಟ್ಟವನಲ್ಲ. ಆದ್ದರಿಂದ ತಿಳಿದವರು ನನ್ನನ್ನು ಅಲ್ಲಮನೆಂದು ಕರೆಯುವರು.

ದೂತಿ : ತಮ್ಮನ್ನು ಅಲ್ಲಮನೆಂದು ಕರೆಯುವುದರ ಇಂಗಿತಾರ್ಥ ಸ್ಪಷ್ಟವಾಯಿತು. ಆದರೆ, ತಾವೀಗ ಎಲ್ಲಿಗೆ ಹೊರಟಿರುವಿರಿ?

ಅಲ್ಲಮ : ದೂತೆ, ನಾನೀಗ ಹೊರಟಿರುವುದು ಮಾಯಾದೇವಿ ಹುಟ್ಟಿ ಬೆಳೆಯುತ್ತಿರುವ ಬನವಾಸಿ ಪಟ್ಟಣಕ್ಕೆ. ನಾನು ಈಗಲೇ ಅಲ್ಲಿಗೆ ಹೋಗುತ್ತೇನೆ.

ದೂತೆ : ಯಾಕಾಗಲೊಲ್ಲದು ಹೋಗುವಂಥವರಾಗಿರಿ.

* * *


ಮಾಯೆಯ ಪ್ರವೇಶ

ಮಾಯೆ : ಪದ : ತಾಳ ದೀಪಚಂದಿ ; ರಾಗ ಕಾಪಿ

ರಂಜಕ ಸಂಸಾರಾ ಇದು ಏನು ಮನೋಹರಾ
ಇರುವುದು ಹಿತಕರಾ ಸುಖದ ಆಸರಾಪಲ್ಲ

ಏರು : ಭೂತಳ ಸ್ವರ್ಗ ಪಾತಾಳವೆನಿಪ
ಮೂರು ಮಾಟದ ಗೊಂಬೆಗಳಾಟದ
ಮಾಯೆಯ ಸೂತ್ರದರಂಜಕ ಸಂಸಾರ ….1

ಸಂಸಾರ ಮುಖವು ಇದು ಏನು ಸುಖವು
ಸ್ತ್ರೀ ಪುರುಷರಿವರು ಅಕ್ಕರತೆ ಪಡೆವರು
ಅಪ್ಪುತ ಸರ್ವರುರಂಜಕ ಸಂಸಾರಾ ….2

ಸಂಸಾರ ಸುಖಕೆ ಕಲ್ಪಿಸಿ ದುಃಖವ
ಎರವಾಗುತಿಹರು ಅಜ್ಞಾನಿ ನರರು
ಸುಖಕ್ಕೆ ಇರುವರುರಂಜಕ ಸಂಸಾರಾ ….3

ಈ ಮಾಯಾ ಪ್ರಪಂಚವು ಎಷ್ಟು ಮನೋಹರವಾಗಿ ಕಾಣುತ್ತಿರುವುದು! ಸ್ವರ್ಗ – ಮರ್ತ್ಯ – ಪಾತಾಳಗಳೆಂಬ ಮಾಟದ ಮೂರು ಗೊಂಬೆಗಳು ಮಾಯೆಯ ತಂತ್ರದಿಂದ ಹೇಗೆ ಕುಣಿಯುತ್ತಿರುವುವು!! ಹರಿಹರ ಬ್ರಹ್ಮಾದಿ ಮೊದಲ್ಗೊಂಡು ಪಶುಪಕ್ಷಿಗಳವರೆಗೂ ಸಕಲ ಜೀವಿಗಳ ಹಾಲು ಸಕ್ಕರೆ ಬೆರೆತಂತೆ ತಮ್ಮ ದಾಂಪತ್ಯ ಜೀವನವನ್ನು ಎಷ್ಟೊಂದು ಅಕ್ಕರೆಯಿಂದ ಸಾಗಿಸುತ್ತವೆ!! ಇಂಥ ಮನೋಹರವು ಸುಖದ ಸಾಗರವೂ ಆದ ಮಾಯಾಪ್ರಪಂಚವನ್ನು ಅಜ್ಞಾನಿಗಳ ಕಷ್ಟದಾಯಕವೆಂದು ಭಾವಿಸುವರು. ಮುನಿಗಳಂತೂ ಬುದ್ಧಿಯಿಲ್ಲದೆ ಬೂದಿ ಬಡಕೊಂಡು ಚಿನ್ನದಂಥ ಮಾನವ ಜನ್ಮವನ್ನು ಮಣ್ಣುಗೂಡಿಸುವರು. ಯಾವ ಸ್ವಾದವನ್ನು ಅರಿಯದ ಈ ಮರುಳು ಮುನಿಗಳು ಪೊಳ್ಳು ಭ್ರಮೆಯಿಂದ ಸುಖಕ್ಕೆ ಎರವಾಗುತ್ತಿರುವರು. ಯಾರೇನು ಮಾಡುವರು? ಅವರನ್ನು ದೈವ ಕಾಡುತ್ತಲಿದೆ. ಇರಲಿ; ನಾನಂತೂ ಪಾರ್ವತಿಯ ಅಪ್ಪಣೆಯ ಮೇರೆಗೆ ಅಲ್ಲಮಪ್ರಭುವೆಂಬ ವಿರಕ್ತನನ್ನು ಗೆಲ್ಲಲಿಕ್ಕೆ ಈ ಬನವಾಸಿ ಪಟ್ಟಣದ ಅರಸನಾದ ಮಮಕಾರ ಮಹಾರಾಜನ ಹೊಟ್ಟೆಯಲ್ಲಿ ಹುಟ್ಟಿ ಬೆಳೆದು ದೊಡ್ಡವಳಾದೆನು. ನನಗೀಗ ಚಿಗುರು ಪ್ರಾಯವು ಚಿಮ್ಮುತ್ತಿರುವುದು. ನನ್ನಸೌಹಾರ್ದದ ತೇಜಕ್ಕೆ ಭ್ರಾಂತರಾದ ಸಾಧುಸಂತರೆಲ್ಲ ಜಪಮಾಲೆಯನ್ನು ಜರೆದು ಶಿವನಾಮವನ್ನು ತೊರೆದು ನನ್ನನ್ನೇ ಕೊಂಡಾಡುತ್ತ, ನನಗಾಗಿ ಆಸೆಪಟ್ಟು ಹುಡುಕುತ್ತಿರುವರು. ಇಂತಹ ನನಗೆ ವಶವಾಗದ ಅಲ್ಲಮನು ಅದಾವನು? ಅವನನ್ನು ಶೋಧಿಸಿ ಮಾಯಾಜಾಲವನ್ನು ಬೀಸಿ ಅವನನ್ನು ವಶಮಾಡಿಕೊಂಡು ಕೈಲಾಸಕ್ಕೆ ಹೋಗುತ್ತೇನೆ.

ದೂ. : ಟೀಕಿ ಕಟ್ಟಿಕೊಂಡು ಠೀಕಾದ ಈಕಿ ಯಾವಾಕಿ ?

ಮಾ. : ಏನೆ, ಚಾಷ್ಟಿ ಚಾವನಗಿತ್ತಿ ನೀನು ಯಾರು ?

ದೂ. : ನನಗೆ ದೂತಿ ಅಂತಾರ ತಾಯಿ, ನನ್ನ ಹೆಸರು ಕೇಳಿದಿರಲ್ಲಾ? ತಮ್ಮ ಹೆಸರೊಂದೀಟು ಹೇಳಿದರೆ ಒಳ್ಳೆಯದಾಗುವುದು.

ಮಾ. : ದೂತೆ, ನನಗೆ ಮಾಯೆ ಅನ್ನುವುದು.

ದೂ. : ತಮಗೆ ನಾಯಿ ಅಂತಾರ! ಎಂಥ ನಾಯಿ? ಏನ ಜೂಲ ನಾಯೋ? ಏನ ಜಾಲ ನಾಯೋ?

ಮಾ.: ಅವೇನು ಕಿವಿಗಳೋ ತೂತಿನ ಪರಟಿಗಳೋ? ನಾಯಿಯಲ್ಲ ನಾನು ಈ ಜಗತ್ತಿಗೆ ಮೂಲ ಕಾರಣಳಾದ ಮಾಯೆ.

ದೂ. : ತಮ್ಮ ಹೆಸರು ಮಾಯಾದೇವಿಯಾದರೆ ತಮ್ಮನ್ನು ಹಡೆದ ತಂದೆತಾಯಿಗಳು ಯರು?

ಮಾ. : ದೂತೆ ಹೇಳುತ್ತೇನೆ ಕೇಳು.

ದೂ. : ಅದೇನಿರುವುದು ಹೇಳುವಂಥವರಾಗಿರಿ.