ಮಾ. : ಅವಳು ಮಾತಾಡಿದಾಕ್ಷಣವೇ ಹಣವನ್ನು ಹೇಗೆ ಸೆಳೆಯಬಲ್ಲಳು? ನೀನಾಡುವ ಮಾತು ವಿಚಿತ್ರ!

. : ವಿಚಿತ್ರದ ಮಾತಲ್ಲ ಬಣ್ಣದ ಬೆಡಗಿನ ನುಸುನಗೆ ಬೀರಿ ನಾಲ್ಕು ಮಾತನ್ನು ಆಡಿದರೆ ಸಾಕು ತನ್ನ ಮೇಲೆ ಅವಳ ಪ್ರೀತಿ ಇದೆಯೆಂದು ಬಗೆದು ಕಾಮಿಗಳಾದವರು ಅವಳು ಬೇಡಿದಷ್ಟು ಹಣ ಕೊಡಲಿಕ್ಕೆ ಸಿದ್ಧರಾಗುತ್ತಾರೆ. ಕೂಡಿದರಂತೂ ಮುಗಿದೇ ಹೋಯಿತು. ಆಕೆಯ ಸಲುವಾಗಿ ಪ್ರಾಣ ಕೊಡಲಿಕ್ಕೂ ಸಿದ್ಧರಾಗುತ್ತಾರೆ. ಇದಕ್ಕೆಲ್ಲಾ ಆ ಬೇಟಗಾರ್ತಿಯ ಬೆಡಗಿನ ನೋಟವೇ ಕಾರಣವಲ್ಲವೆ? ಹೀಗೆ ಮನುಷ್ಯರ ಪ್ರಾಣವನ್ನೇ ಹೀರಿ, ಕೈಗೆ ಸಿಕ್ಕವರನ್ನು ಅನರ್ಥದ ಕಂದಕಕ್ಕೆ ಚೆಲ್ಲುವ ಹೆಣ್ಣು ಪ್ರತ್ಯಕ್ಷ ರಾಕ್ಷಸಿಯಲ್ಲದೆ ಮತ್ತೇನು?

ಮಾ. : ಬಿಡು ಬಿಡು ಒಣತರ್ಕದ ಮಾತುಗಳನ್ನು ಏಕೆ ಹೇಳುತ್ತೀ? ಹೆಣ್ಣಿನಿಂದ ವ್ಯರ‌್ಥ ಅನರ್ಥವೇ ಆಗುತ್ತಿದ್ದರೆ, ಜನರೇಕೆ ತಮ್ಮ ತನುಮನಧನಗಳನ್ನು ಆಕೆಗೆ ಅರ್ಪಿಸುತ್ತಿದ್ದರು?

. : ಎಲೆ ಮಾಯೆ, ಹೆಣ್ಣು ಮನುಷ್ಯರನ್ನು ಹಿಡಿಯುವ ಮಾಯದ ಬಲೆಯಾಗದೆ. ಹೊರನೋಟಕ್ಕೆ ಸುಂದರವಾಗಿ ಕಾಣುವ ಬಲೆಯಲ್ಲಿ ಕರುಳ ಕತ್ತರಿ ಇದೆ : ಎಂಬುದು ಸಾಮಾನ್ಯ ಜನರಿಗೆ ಹೇಗೆ ಹೊಳೆಯಬೇಕು? ಆದ್ದರಿಂದಲೇ ಅವರು ಮೋಸ ಹೋಗುವರು. ಅದನ್ನು ಬಲ್ಲವರು ತಮ್ಮ ತನು : ಮನ : ಧನಗಳನ್ನೇಕೆ ಅವಳಿಗೆ ಅರ್ಪಿಸಬಲ್ಲರು? ಹೆಣ್ಣಿನಿಂದ ಆನಂದ ಉಂಟೋ? ಅನರ್ಥ ಉಂಟೋ? : ಎಂಬುದನ್ನು ಬಿಚ್ಚಿಹೇಳುತ್ತೇನೆ ಕೇಳು.

ಮಾ. : ಅದೇನಿರುವುದು ಹೆಳುವಂಥವರಾಗಿರಿ.

ಪದ : ತಾಳ ದೀಪಚಂದಿ; ರಾಗಕಾಪಿ
. :

ಕಷ್ಟದ ನೆಲೆಯು ನೀನಲ್ಲ
ಬಾಲೆಯು ನರರಿಗೆ ಬೀಸಿದ ಮಾಯದ ಬಲೆಯು ॥

ಏರು :

ದುರ್ಗಂಧ ಹೊಲೆಯು ತುಂಬಿದ ನೆಲೆಯು
ಹಲ್ಲಿಲ್ಲದ ಹುಲಿಯು ಮಾಡ್ವುದು ಕೊಲೆಯ
ಶಿವ ಶಿವಾ ಬಲೆಯುಕಷ್ಟದ ನೆಲೆಯು ….1

ಏನಿಲ್ಲ ಹುರುಳ ತೊಗಲಿಗೆ ಮರುಳ
ಆಗುತ ನರರು ಬಲೆಯೊಳು ಬೀಳ್ವರು
ದುಃಖ ಹೊಂದುವರುಕಷ್ಟದ ನೆಲೆಯು …2

ಹೆಣ್ಣಿನ ಸೆಳವು ಕಣ್ಣಿಗೆ ಹೊಳಪು
ಮಾಯಾದ ಹುಳವು ಮುಕ್ತಿಗೆ ಮುಳುವು
ಸರ್ವೆಲ್ಲ ಪ್ರಳಯವುಕಷ್ಟದ ನೆಲೆಯು ….3

ಎಲೆ ನಾರಿ, ಹೆಣ್ಣಿನಿಂದ ಆನಂದವಾಗುವುದರ ಬದಲು ಅನರ್ಥವೇ ಆಗುತ್ತದೆ. ಈ ಮಾತಿನ ಅರ್ಥವನ್ನು ಬಿಚ್ಚಿ ಹೇಳುತ್ತೇನೆ ಕೇಳು : ಪಕ್ಷಿಗಳನ್ನು ಹಿಡಿಯುವ ಬೇಡನು ಮೊದಲು ಏನು ಒಡ್ಡಿರುತ್ತಾನೆ?

ಮಾ. : ಬಲೆಯನ್ನು ಒಡ್ಡಿರುತ್ತಾನೆ.

. : ಆ ಬಲೆಯೊಳಗೆ ಏನು ಇಟ್ಟಿರುತ್ತಾನೆ?

ಮಾ. : ಹಣ್ಣು ಹಂಪಲ ಮೊದಲಾದ ತಿನಸನ್ನು ಇಟ್ಟಿರುತ್ತಾನೆ.

. : ಅವುಗಳನ್ನು ಏತಕ್ಕೆ ಇಟ್ಟಿರುತ್ತಾನೆ?

ಮಾ. : ಅವುಗಳನ್ನು ಕಂಡಕೂಡಲೆ ಪಕ್ಷಿಗಳೆಲ್ಲ ಬಂದು ಬಲೆಗೆ ಬೀಳಲೆಂದು ಇಟ್ಟಿರುತ್ತಾನೆ.

. : ಆಗ ಪಕ್ಷಿಗಳು ಏನು ಮಾಡುತ್ತವೆ?

ಮಾ. : ತಮ್ಮನ್ನು ಹಿಡಿದು ಗೋಣು ಮುರಿಯಲಿಕ್ಕೆ ಮಾಡಿದ ಮೋಸವೆಂದು ತಿಳಿಯದೆ, ಅಲ್ಲಿ ತೋರಿಕೆಗೆ ಇಟ್ಟಿರುವ ಹಣ್ಣಿನ ಛಾಯೆಗೆ ಮರುಳಾಗಿ ಅವು ಒಂದೊಂದೇ ಒಳಗೆ ಹೋಗಿ, ಹಿಂದು ಮುಂದಿನ ವಿಚಾರವಿಲ್ಲದೆ ನಲಿದಾಡಿ ತಿನ್ನುಹತ್ತುತ್ತವೆ.

. : ಮುಂದೆ ಆ ಪಕ್ಷಿಗಳ ಗತಿ ಏನು?

ಮಾ. : ಮುಂದೆ ಕೇಳುವುದೇನು? ಅವು ಹಿಗ್ಗಿ ಹಿಗ್ಗಿ ತಿನ್ನುತ್ತ ಕೂತಿರುವುದನ್ನು ಕಂಡು, ಬಲೆಗಾರನು ಬಲೆಯನ್ನು ಭರ‌್ರನೆ ಎಳೆದು ಅವುಗಳನ್ನು ಬಂಧಿಸಿಬಿಡುತ್ತಾನೆ.

. : ಮುಂದೆ ಆ ಪಕ್ಷಿಗಳ ಗತಿ ಏನು?

ಮಾ. : ಅವುಗಳ ಗತಿ ದುರ್ಗತಿ! ಪಾಪ!! ಅ ಬಡಪಕ್ಷಿಗಳು ಭ್ರಾಂತವಾಗಿ, ಆದ ಆನಂದವೆಲ್ಲ ಮಣ್ಣುಗೂಡಿ ಬಂಧನಕ್ಕೊಳಗಾಗಿ ಮರಮರನೆ ಮರುಗಿ, ಪಾರಾಗಿ ಹೋಗಲು ದಾರಿ ಸಿಗದೆ ವಿಲಿವಿಲಿ ಒದ್ದಾಡುತ್ತ ಕಟುಕನ ಕೈಯಲ್ಲಿ ಸಿಕ್ಕು ಕಳ : ಕಳ ಗೋಣು ಮುರಿಸಿಕೊಳ್ಳುತ್ತವೆ.

. : ಎಲೆ ಮೂಢಳೇ, ಅದರಂತೆ ಹೆಣ್ಣಿನ ಮೋಹಜಾಲದಲ್ಲಿ ಸಿಕ್ಕ ಅಜ್ಞಾನಿಗಳು ಚರ್ಮದ ಚಲುವಿಕೆಗೆ ಚಕಿತರಾಗಿ, ನೀನು ಈಗಾಗಲೇ ಹೇಳಿದಂತೆ ನೋಡಿದ ಕೂಡಲೇ ಕಣ್ಣಿಗೆ ಆನಂದ ಮುಟ್ಟಿದ ಕೂಡಲೇ ಮೈಗೆ ಆನಂದ ಕೂಡಿದ ಕೂಡಲೆ ಮನಸ್ಸಿಗೆ ಆನಂದ ಒಟ್ಟಿನಲ್ಲಿ ಆನಂದವೇ ಆನಂದವೆಂದು ಹಿಂದು ಮುಂದನ್ನರಿಯದೆ ಉರುಳಾಡುತ್ತಿರಲು, ಯಮಧರ್ಮನು ಅವಸಾನ ಸೂತ್ರವನ್ನು ಸರ‌್ರನೆ ಎಳೆದು ಪ್ರಾಣವನ್ನು ಹಿರಿ ಘೋರ ನರಕದಲ್ಲಿ ಚೆಲ್ಲುವನು. ಆಗ ಆ ಪ್ರಾಣಿಯ ಆನಂದ ಮಾಯವಾಗುತ್ತದೆ. ಇಂತಹ ಅನಾಹುತಕ್ಕೆ ಕಾರಣಳಾದ ಸ್ತ್ರೀ ಪ್ರತ್ಯಕ್ಷ ರಾಕ್ಷಸಿಯಲ್ಲದೆ ಮತ್ತೇನು? ಅವಳನ್ನು ಕಂಡರೆ ನನಗೆ ಭಯಬರುತ್ತದೆ. ಸಾಕು ಸಾಕು ಅವಳ ನೆರಳು.

ಮಾ. : ಅಲ್ಲಮಾ, ನಿನ್ನ ಪೊಳ್ಳು ಬೆದರಿಕೆಗೆ ಮರಳು ಹೋಗುವ ಸಾಮಾನ್ಯ ಹೆಣ್ಣು ನಾನಲ್ಲ! ನಾನು ಮೂಲೋಕದ ಮಹಾಮಾಯೆ!! ಎಚ್ಚರದಿಂದ ಮಾತಾಡು. ನೀನು ಹೆಣ್ಣಿಗೆ ಏನೆಂದು ನುಡಿದೆ?

. :  ಹೆಣ್ಣು ಸಂಸಾರಿಕರನ್ನು ಯಮಶೂಲಕ್ಕೆ ಇಕ್ಕುವ ಮಾಯದ ಬಲೆಯೆಂದು ನುಡಿದೆ.

ಮಾ. : ಡಾಂಭಿಕ ಅಲ್ಲಮಾ, ಹೆಣ್ಣು ಮಾಯದ ಬಲೆಯಲ್ಲ ಸೌಖ್ಯದ ನೆಲೆ. ಅವಳ ಇಂಗಿತವನ್ನು ಬೈರಾಗಿಯಾದ ನೀನೇನು ಬಲ್ಲೆ? ಶಾಸ್ತ್ರ ಸಂತೆಯ ಸುದ್ದಿ! ಪುರಾಣ ಪುಂಡರ ಗೋಷ್ಠಿ!! ಅವುಗಳನ್ನು ನಂಬಿ ಬೋಧಿಸುವವರು ಶುದ್ಧ ಮೋಸಗಾರರು!!!

. : ಅವರೆಂತು ಮೋಸಗಾರರು?

ಮಾ. : ಅವರು ನುಡಿದಂತೆ ನಡೆಯದ ಎಬಡರು. ಹೇಳುವದೊಂದು ಮಾಡುವುದು ಮತ್ತೊಂದು. ಇಂಥವರು ಮಾಡುವುದು ಮೋಸವಲ್ಲವೆ?

. : ಅವರೇನು ಮೋಸ ಮಾಡಿದ್ದಾರೆ? ಸುಮ್ಮನೆ ಸುಳ್ಳು ಸುರಿಸಬೇಡ.

ಮಾ. : ಸುಳ್ಳುಸುರಿಸುವವಳು ನಾನಲ್ಲ. ಸತ್ಯಪುರುಷಾ, ಆ ಆರು ಶಾಸ್ತ್ರಗಳನ್ನು ರಚಿಸಿದ ಪುಣ್ಯಾತ್ಮರು ಯಾರು?

. : ಕಪಿಲ, ಪತಂಜಲಿ, ಗೌತಮ, ಕಣಾದ, ಜೈಮಿನಿ, ಬಾದರಾಯಣ : ಇವರು ಆ ಆರು ಶಾಸ್ತ್ರಗಳನ್ನು ರಚಿಸಿದ ರಸಋಷಿಗಳು.

ಮಾ. : ಆ ಆರು ಋಷಿಗಳು ಬರೆದ ಆ ಆರು ಶಾಸ್ತ್ರಗಳು ಯಾವುವು?

. : ಕಪಿಲ ಋಷಿಯಿಂದ ಸಾಂಖ್ಯ ಶಾಸ್ತ್ರ, ಪತಂಜಲಿಯಿಂದ ಯೋಗಶಾಸ್ತ್ರ, ಗೌತಮನಿಂದ ನ್ಯಾಯಶಾಸ್ತ್ರ, ಕಣಾದನಿಂದ ವೈಶೇಷಿಕಶಾಸ್ತ್ರ, ಜೈಮಿನಿಯಿಂದ ಪೂರ್ವಮೀಮಾಂಸೆಯೆಂಬ ಕರ್ಮಕಾಂಡ, ಬಾದರಾಯಣನಿಂದ ಉತ್ತರ ಮೀಮಾಂಸೆಯೆಂಬ ಜ್ಞಾನಕಾಂಡ ರಚಿಸಲ್ಪಟ್ಟವು.

ಮಾ. : ಛೀ. ಆ ಆರು ಶಾಸ್ತ್ರಗಳನ್ನು ಬರೆದ ಛೀಮಾರಿಗಳ ಜನ್ಮಕ್ಕೆ ಧಿಕ್ಕಾರವಿರಲಿ!

. : ಅವರನ್ನೇಕೆ ಧಿಕ್ಕರಿಸುವಿ?

ಮಾ. : ಹೇಳುತ್ತೇನೆ ಕೇಳು.

. : ಅದೇನಿರುವುದು ಹೇಳು.

ಪದ : ತಾಳ ದೀಪಚಂದಿ; ರಾಗ ಕಾಪಿ

ಮಾ. : ಸುಳ್ಳಿನ ಶಾಸ್ತ್ರಾ ಕಪಟ ತಂತ್ರಾ
ಹೆಣ್ಣಿನ ಗಾತ್ರಾ ಸುಖದ ಸೂತ್ರಾ॥

ನಾರಿಯ ಶರೀರಾ ನರಕದ ದ್ವಾರಾ
ಅಂಬುವ ಶಾಸ್ತ್ರಿಕರು ತಾವ್ಯಾಕೆ ಹೆಂಡರ ಆಗಿಹರೊ ಧೀರಾ                 1

ಹರಿಹರ ನಿತ್ಯರು ವರಮಾಯೆ ಭೃತ್ಯರು
ತಾವ್ಯಾಕೆ ಆಗಿಹರೊ ನರಕದ ದ್ವಾರಾ ಆಗಿಹರೊ ಸ್ತ್ರೀಯರ                 2

ಹೆಣ್ಣಲ್ಲೊ ರಾಕ್ಷಸಿ ನೋಡಿಕೊ ಸೋಸಿ
ಸೌಖ್ಯದ ರಾಶಿ ಎನ್ನನು ಅರಸಿ ಮಾಡಿಕೊ ಅರ್ಪಿತ                               3

ಅಲ್ಲಮಾ, ನೀನು ಹೇಳಿದಂತೆ ಆ ಶಾಸ್ತ್ರಕಾರರು ಹೆಣ್ಣು ಪ್ರತ್ಯಕ್ಷ ರಾಕ್ಷಸಿ, ಅದನ್ನು ಕೈಯಿಂದ ಮುಟ್ಟಬೇಡಿರಿ ಕಣ್ಣಿಂದ ಕಾಣಬೇಡಿರಿ ಅದು ನಿಮಗೆ ಕಷ್ಟಕೊಟ್ಟು ಯಮಶೂಲಕ್ಕೆ ಹಾಕಿಸುವ ಮಾಯದ ಬಲೆಯೆಂದು ಶಾಸ್ತ್ರಗಳಲ್ಲಿ ಬರೆದು, ಜನರನ್ನು ಕರೆದು, ಮುಂದಿನ ಹದಿನಾರು ಹಲ್ಲು ತೆರೆದು ಉಪದೇಶ ಮಾಡುವರಲ್ಲವೆ? ಹೀಗೆ ಹೇಳಿದ ಆ ಶಾಸ್ತ್ರಕಾರರು ತಾವೇಕೆ ಹೆಂಡಿರನ್ನು ಮಾಡಿಕೊಂಡು ಅವರ ಮಂಡೆಗೆ ಹೂ ಮುಡಿಸಿದರು? ಹೆಂಡಿರ ದಾಸಾನುದಾಸರಾಗಿ ಮೆರೆದ ಈ ಗೊಡ್ಡು ಶಾಸ್ತ್ರಜ್ಞರು ಮಂದಿಯನ್ನು ಕರೆದು ಹೆಣ್ಣಿನ ಬಲೆಯಲ್ಲಿ ಬೀಳಬೇಡಿರೆಂದು ಉಪದೇಶ ಕೊಡುವರೆ? ಮೂಢರು ರೂಢಿಯೊಳಗೆ ಉತ್ತಮರೆ? ನೀನೇ ಹೇಳು. ಇದು ಅಲ್ಲದೆ ಇನ್ನೊಂದು ಮಾತು ಅಂದೆಯಲ್ಲ?

. : ಅದಾವ ಮಾತು?

ಮಾ. : ಹೆಣ್ಣಿನ ಬಲೆಗೆ ಬಿದ್ದವರನ್ನು ಯಮನು ರೌರವ ನರಕದಲ್ಲಿ ನೂಕುವನೆಂದು ಹೇಳಿದಿಯಲ್ಲವೆ?

. : ಹೌದು, ಹೇಳಿದೆ.

ಮಾ. : ನಿಶ್ಚಯವಾಗಿ ನರಕಕ್ಕೆ ನೂಕುವನೆ?

. : ಹೌದು, ನಿಶ್ಚಯವಾಗಿ ನೂಕುವನು.

ಮಾ. : ಮೂಢಮತಿಯಾದ ಅಲ್ಲಮಾ, ಇನ್ನೊಮ್ಮೆ ವಿಚಾರಮಾಡಿ ಹೇಳು. ಹೆಣ್ಣಿನ ಬಲೆಯಲ್ಲಿ ಬಿದ್ದವರಿಗೆ ಶಿಕ್ಷೆ ಕೊಡುವವನು ಯಾವನು?

. : ಯಮನು!

ಮಾ. : ಮೋಕ್ಷ ನೀಡುವವನು ಯಾವನು?

. : ಶಿವನು!

ಮಾ. : ಅಂದಮೇಲೆ, ಶಿಕ್ಷೆ ಕೊಡತಕ್ಕಂಥ ಯಮನಿಗೆ ಮಾಲಿನಿ : ಶಾಮಲಾವತಿ ಎಂಬ ಇಬ್ಬರು ಹೆಂಡರುಂಟು. ಮೋಕ್ಷ ನೀಡತಕ್ಕ ಶಿವನಿಗೆ ಗೌರಿ – ಗಂಗಿ ಎಂಬ ಇಬ್ಬರು ಹೆಂಡರುಂಟು. ಮೋಕ್ಷ ನೀಡತಕ್ಕ ಶಿವನಿಗೂ, ಶಿಕ್ಷಕೊಡತಕ್ಕ ಯಮನಿಗೂ ಜೋಡು ಜೋಡು ಹೆಂಡಿರು ಇರುವರೆಂಬುದನ್ನು ಮರೆಯಬೇಡ. ಹೀಗೆ ಇಬ್ಬಿಬ್ಬರು ಹೆಂಡರೊಡನೆ ಸಂಸಾರ ಮಾಡುತ್ತಿರುವ ಇವರು ಅನ್ಯರಿಗೆ ಶಿಕ್ಷೆ ಮೋಕ್ಷ ನೀಡುತ್ತಿದ್ದರೆ ಇವರಿಗೆ ಶಿಕ್ಷೆ ಮೋಕ್ಷ ನೀಡುವವರಾರು? ವಿಚಾರ ಮಾಡಿ ಮಾತಾಡು. ಅಲ್ಲಮಾ, ಇವೆಲ್ಲ ಅಜ್ಜೀ ಕಥೆಗಳು ಹೆಣ್ಣು ಪ್ರತ್ಯಕ್ಷ ಮಹಾದೇವಿ! ನಾರಿ ಸ್ವರ್ಗದ ದಾರಿ!! ಇದನ್ನು ತಿಳಿದು ನನ್ನನ್ನು ಮದುವೆಯಾಗಲು ಒಪ್ಪಿಕೋ.

. : ಎಲೆ ನಾರಿ, ನಿನ್ನನು ಲಗ್ನವಾಗುವುದು ಸಾಧ್ಯವಿಲ್ಲ.

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ (ಚಕ್ಕಡ)

ಮಾ. : ಯಾರು ಕಾಣುವರೇನು ಹಾರಿ ಹೋಗಲು ಪ್ರಾಣ
ಮೂರು ದಿನದ ಸಂಸ್ಕೃತಿ ತೀರಿಸಬೇಕೊ ಮನದಕ್ಕರತಿ
ಬಾ ನನ್ನ ಸಂಗತಿ ಮಣಿಮಂಚಕೆ ಹತ್ತಿ
ರತಿಸುಖ – ಪಡೆಯುವ ಅತಿ ಪ್ರೀತಿ ಹೊಂದುತ 1

ಹರದಿಮಣಿ ಬಂದು ತೆರೆದು ಕೇಳಿದರೆ
ಜರೆದು ಪೋಗುವದಿದು ತರವಲ್ಲಾ, ಪುರುಷಧರ್ಮಕಿದು ಸರಿಯಲ್ಲಾ
ಕಳೆಯುವ ಕಾಲಾ ಕಾಮನ ಲೀಲಾ
ಆಡುತ ಇಬ್ಬರು ಕುಶಿಯಾಲಾ ಗುಣಶೀಲಾ      2

ಪ್ರಭುವರಾ, ನಿನ್ನ ಮರುಳತನವನ್ನು ಬಿಟ್ಟುಬಿಡು. ಸತ್ತ ಮೇಲೆ ಕಾಣುವದೇನು? ಇರುವವರೆಗೆ ಮೂರು ದಿನ ಸುಖಪಟ್ಟದ್ದೇ ಬಂತು! ಇನ್ನೂ ನಿನಗೆ ಹೆಣ್ಣಿನ ಸುಖ ತಿಳಿದಂತಿಲ್ಲ.

. : ಹೆಣ್ಣಿನಲ್ಲಿ ಅಷ್ಟು ಸುಖ ಇರುವದಲ್ಲವೆ?

ಮಾ. : ಅಷ್ಟು ಸುಖ ಇದೆಯೆಂಬುದು ನಿನಗೆ ಗೊತ್ತಿದ್ದರೆ ಪುಂಡಾ, ನೀನೆಂದೂ ಬಿಡುತ್ತಿದ್ದಿಲ್ಲ.

. : ಅಷ್ಟೊಂದು ಮೋಹಕಾರಕವೇ?

ಮಾ. : ಮೋಹಕಾರಕವೇ : ಎಂದು ಕೇಳುವಿಯಾ? ಅದರ ಮರ್ಮವನ್ನು ತಿಳಿಯಲು ಈಗ ನನ್ನೊಡನೆ ರಾಜಮಂದಿರಕ್ಕೆ ನಡೆ ಅಲ್ಲಿರುವ ಮಣಿ ಮಂಚದ ಮೇಲೆ ರೇಶಿಮೆಯ. ಸುಪ್ಪತ್ತಿಗೆ ಸಿದ್ಧವಿದೆ. ನಾವಿಬ್ಬರೂ ಹಾಲು : ಸಕ್ಕರೆಯಂತೆ ಒಂದಾಗಿ ಬೆರೆತು ಅಪ್ಪಿಕೊಂಡು ಸ್ವರ್ಗ ಸುಖದಲ್ಲಿ ಇರೋಣ. ಆಗ ನೀನು ಮೂರು ಲೋಕದಲ್ಲಿ ಕಾಣಬಾರದ ಸುಖವನ್ನು ಕಾಣುತ್ತೀ. ನಾನು ಹೇಳುವದು ಸುಳ್ಳಾದರೆ ಹೊಯ್ಮಲಿಯೆಂದು ನನ್ನನ್ನು ಜರೆ. ಬಾ ಹೋಗೋಣ. ನಿನ್ನದು ಲಿಂಗಪೂಜಾ ಸುಖ! ನನ್ನದು ಅಂಗರತಿ ಸುಖ! ಅವೆರಡರಲ್ಲಿ ಎಷ್ಟು ಅಂತರವಿದೆ : ಎಂಬುದನ್ನು ಒರೆಗೆ ಹಚ್ಚಿ ನೊಡುವಿಯಂತೆ.

. : ಏನೇ ಲಿಂಗ ಸುಖಕ್ಕಿಂತಲೂ ನಿನ್ನ ಅಂಗಸುಖ ಶ್ರೇಷ್ಠವೆಂದು ಹೇಳುವೆಯಾ? ಕೇಳು.

ಮಾ. : ಅದೇನಿರುವದು ಹೇಳು.

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

. : ಛೀ ನೀಚೆ ಸುಡು ನಿನ್ನಂಗ ನಾರಿಸಂಗ
ನಿನ್ನಂಗ ನಾರಿಸಂಗ ನಿನ್ನಂಗ ನಾರಿಸಂಗ॥

ಏರು : ಹೆಣ್ಣೆಂಬ ಹೊಲದಿ ಪಾಪದ ಜಲಧಿ
ಜಗದಿ ನಿಜದಿ ನಿನ್ನಂಗ ನಾರಿಸಂಗ1

. : ಹಳಿದು ನುಡಿವರೆ ನನ್ನ ಅಂಗ ಕೋಮಲಾಂಗ
ನನ್ನ ಅಂಗ ಕೋಮಲಾಂಗ ನಿನ್ನಂಗ ನಾರಿಸಂಗ

ಹೊಲಸೆಂಬ ಸೊಲ್ಲು ಸಲ್ಲದು ನಲ್ಲ ಸುಖದ ಮೂಲೆಲ್ಲ

ನನ್ನ ಅಂಗ ಕೋಮಲಾಂಗ ನಿನ್ನಂಗ ನಾರಿಸಂಗ2

. : ಎಲೆ ಮೂಢ ಮಾಯೆ, ಛೀ ಅಂದವರಿಗೆ ಬಾ ಎನ್ನುವಿ. ನಿನ್ನಂಥ ಹೊಯ್ಮಲಿ ಯನ್ನು ನಾನೆಲ್ಲಿಯೂ ಕಾಣಲಿಲ್ಲ.

ಮಾ. : ಅದೇಕೆ?

. : ಲಿಂಗಸುಖಕ್ಕಿಂತಲೂ ನಿನ್ನ ದೇಹಸುಖವೇ ಹೆಚ್ಚಿನದೆಂದು ಹೇಳುತ್ತೀಯಲ್ಲ! ಮೂಢಳೇ, ನಿನ್ನ ಹೇಸಿ ಅಂಗವನ್ನು ಎಷ್ಟು ಬಣ್ಣಿಸುತ್ತಿರುವಿ?

ಮಾ. : ನಿನ್ನ ಲಿಂಗದೇವನಲ್ಲಿ ಯಾವ ಸುಖವುಂಟು? ಕೈಯಲ್ಲಿ ಹಿಡಿದು ನನ್ನ ಅಂಗವನ್ನು ಅಪ್ಪಿಕೊಂಡು ನೋಡು. ನಿನ್ನ ಲಿಂಗವನ್ನೂ ಅಪ್ಪಿಕೊಂಡು ನೋಡು.

. : ಎಲೆ ಬಲೆಗಾರತಿ, ಲಿಂಗವನ್ನು ಅಪ್ಪಿಕೊಳ್ಳುವುದರಿಂದ ಆಗುವ ಬ್ರಹ್ಮಾನಂದವು ನಿನ್ನ ಅಂಗವನ್ನು ಅಪ್ಪಿಕೊಂಡರೆ ಆಗುವುದೇ?

ಮಾ. : ಜೊಳ್ಳು ಮಾತಾಡುವವಳು ನಾನಲ್ಲ ಖಾತ್ರಿ ಮಾಡಿಕೊಂಡು ನೋಡು. ಅಂಗೈಯಲ್ಲಿ ಲಿಂಗವನ್ನು ಹಿಡಿದುಕೊಂಡು, ಅನಂತಕಾಲ ಪ್ರಯಾಸಪಟ್ಟು ತಿರುಗಿದರೂ ಬಾರದಂಥ ಬ್ರಹ್ಮಸುಖ ಇದೋ ನನ್ನ ಅಂಗವನ್ನು ಆಲಿಂಗಿಸಿದಾಗಲೇ ದೊರೆಯುವುದು. ಒಮ್ಮೆ ಅಪ್ಪಿಕೊಂಡು ನೋಡು. ನಿನ್ನ ಅಂಗುಷ್ಟದಿಂದ ನೆತ್ತಿಯವರೆಗೆ ಒಮ್ಮೆಲೇ ಜುಮ್ಮೆಂದು, ಬ್ರಹ್ಮಾನಂದದ ಅನುಭವ ನಿನಗೆ ಉಂಟಾಗದಿದ್ದರೆ ಪುನಃ ನನ್ನ ಮುಖ ನೋಡಬೇಡ. ಸೌಂದರ್ಯದ ಬೀಡಾಗಿ, ಅಮೃತದ ಮಡುವಾಗಿ ಕಂಗೊಳಿಸುತ್ತಿರುವ ನನ್ನ ದೇಹವನ್ನು ಮುಟ್ಟಿ ಮನದಟ್ಟುಮಾಡಿಕೊ.

. : ಎಲೆ ತುಚ್ಛ ಮಾಯೆ, ಗೊಮ್ಮೆಂದು ನಾರುವ ನಿನ್ನ ಮಲದ ಭಾಂಡವನ್ನು ಬ್ರಹ್ಮಾನಂದವೆಂದು ಬಣ್ಣಿಸುವೆಯಲ್ಲ! ತೊಗಲನ್ನು ಮುದ್ದಾಡುವುದು, ತೊಗಲಿನಲ್ಲಿ ಬಿದ್ದಾಡುವುದು ಅದೆಂಥ ಸುಖ? ಅದರಿಂದ ಒಂದೇ ಸವನೆ ಸುರಿಯುತ್ತಿದೆ ಹೊಲೆ! ಅದರ ಸ್ವರೂಪವನ್ನೆಲ್ಲ ನಾನು ಬಲ್ಲೆ!! ಸೀರೆಯುಟ್ಟು ಮರೆಮಾಡಿಕೊಂಡ ನಿನ್ನ ದೇಹ ಮೂತ್ರದ ಕುಡಿಕೆ ಮಾಂಸದ ಹಡಿಕೆ. ಕೀವು ಬಸಿಯುವ ಮಡಕೆ. ನಿನ್ನ ಹುರುಳನ್ನೆಲ್ಲ ಹೊರಗೆಡವಿ, ತೀರ ಹುಳಿಮಾಡುವದು ಸರಿಯಲ್ಲವೆಂದು ನಾನು ಸುಮ್ಮನಿದ್ದರೆ, ನೀನು ತುಳಿಯುತ್ತ ಮೈಮೇಲೆ ಬರುವಿ. ಮೊದಲೇ ನೀನು ಮಾಯೆ! ನಿನ್ನನ್ನು ಕಣ್ಣೆತ್ತಿ ಸಹ ನೋಡಬಾರದೆಂದು ಸತ್ಯ ಶರಣರು ಹೇಳುವರು. ನಿನ್ನನ್ನು ಶರಣರು ಕೊರವರ ಕತ್ತೆಗಿಂತಲೂ ಕಡೆ ಮಾಡಿ ನೋಡುವರು. ಲಿಂಗಪೂಜೆ ಮಾಡಿ ಲಿಂಗವೇ ಆಗುವ ಶರಣನ ದಿವ್ಯಾನಂದಕ್ಕಿಂತಲೂ ಭ್ರಷ್ಟ ಅಂಗದ ಸುಖ ಹೆಚ್ಚೆಂದು ಬಡಬಡಿಸುವೆಯಲ್ಲ! ನೀನಾಡುವ ಮಾತು ಕೇಳಿದರೆ, ಕತ್ತೆಗೆ ಜ್ವರ ಬರಬಹುದಾಗಿದೆ! ಶರಣರು ಕಾಳನ್ನು ಬಿಟ್ಟು ಜೊಳ್ಳಿಗೆ ಆಸೆ ಮಾಡುವರೆ? ಈ ಮಳ್ಳತನದ ಮಾತು ಆಡಬೇಡ. ನಿತ್ಯ ಸುಖ ನೀಡುವ ಶಿವಲಿಂಗವನ್ನು ಮರೆತು ಜೊಳ್ಳು ಮಾಯೆಯ ಮೋಹಕ್ಕೆ ಒಳಗಾದವರು ಈ ಸಂಸಾರವೆಂಬ ತಿರುಗಣಿಯ ಮಡುವಿನಲ್ಲಿ ಬಿದ್ದು ಘಾಸಿಯಾಗದೆ ಹೋಗರು!

ಮಾ. : ಅಲ್ಲಮಾ, ಅಂಗನೆಯರ ಬಂಗಾರದಂತಿರುವ ಅಂಗವನ್ನು ಮನಬಂದಂತೆ ಹೇಯಮಾಡಿ ನುಡಿಯುವುದು ಛಂದವಲ್ಲ. ನೀನು ರಕ್ತದಲ್ಲಿಯೇ ಹುಟ್ಟಿ ರಕ್ತದಲ್ಲಿಯೇ ಬೆಳೆದು ಮರಳಿ ಆ ರಕ್ತಕ್ಕೇ : ಸೋರುವ ರಕ್ತ, ನಾರುವ ರಕ್ತ : ಎಂದು ಬಾಯಿಗೆ ಬಂದಂತೆ ಧಿಕ್ಕರಿಸಿ ನುಡಿಯುವಿ. ಇದೆಂಥಾ ಲಜ್ಜೆಗೆಟ್ಟ ಮಾತು. ಈ ಲೋಕದಲ್ಲಿ ಪ್ರತಿಯೊಂದು ಪ್ರಾಣಿ ಹೆಣ್ಣಿನಲ್ಲಿಯೇ ಜನಿಸಿ, ಹೆಣ್ಣಿನಿಂದಲೇ ಬೆಳೆದು, ಸುಖಪಟ್ಟು ಮರಳಿ ಹೆಣ್ಣನ್ನೇ ತಿರಸ್ಕರಿಸುವುದೆಂದರೆ ಉಂಡ ಮನೆಯ ಗಳ ಎಣಿಸದಂತಲ್ಲವೆ? ಇಂಥ ಹೆಣ್ಣನ್ನು ಹೀಯಾಳಿಸುವ ಮೂಢರು ಉಪಕಾರಗೇಡಿಗಳಲ್ಲದೆ ಮತ್ತೇನು?

. : ಎಲೆ ಮೂಢಮಾಯೆ, ಈ ಲೋಕದ ಜೀವಿಗಳಿಗೆ ಸಿಗುವ ಸುಖವು ಹೆಣ್ಣನ್ನೇ ಅವಲಂಬಿಸಿದೆಯೆಂದು ಜಂಭಕೊಚ್ಚುವಿಯಲ್ಲ? ಇದೆಂಥ ಸೋಜಿಗದ ಮಾತು?

ಮಾ. : ಸೋಜಿಗದ ಮಾತು ಇದಲ್ಲ. ಮೂಜಗ ಮನಗಂಡ ಮಾತು! ಹೇಳುತ್ತೇನೆ ಕೇಳು.

. : ಅದೇನಿರುವುದು ಹೇಳು.

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಮಾ. :

ಹೆಣ್ಣಿನ ಸುಖವ ಬಣ್ಣಿಪನ್ಯಾವss
ಜಗದಿ ಜೀವ ಪೇಳುವೆ ಅನುಭಾವ॥

ಏರು :

ತಾಯಿಯು ಎನಿಸಿ ಹೊಲೆಯನು ಉಣಿಸಿ
ಸವಿ ಸವಿ ಕ್ಷೀರಾ ಅಮೃತದ ಸಾರಾ
ಕುಡಿಸಿದೆ ಪೂರಾ                                1

ಲಿಂಗ ನೀ ಎನಿಸಿ ಸಂಗದಿ ಜನಿಸಿ
ಸ್ವರ್ಗವ ಇಳಿಸಿ ಬಿಟ್ಟೆನೋ ಸನ್ಯಾಸಿ
ನೋಡಿಕೊ ಸೋಸಿ                              2

ಇರದಿರೆ ಹೆಣ್ಣು ಹುಟ್ಟದೊ ಜನ
ಲೋಕೆಲ್ಲಾ ಸ್ಮಶಾನ ನಿರ್ಜನ ವಿಪಿನ
ತಿಳಿಯೊ ಸುಗುಣಾ                             3

ಅಲ್ಲಮಾ, ಈ ಪ್ರಪಂಚದಲ್ಲಿ ಪ್ರತಿಯೊಂದು ಪ್ರಾಣಿ ಸುಖವನ್ನು ಕಾಣುವುದು ಹೆಣ್ಣಿನಿಂದ. ಅದನ್ನು ಪೂರ್ಣ ವಿಚಾರಮಾಡಿ ನೋಡದೆ, ಮನಬಂದಂತೆ ಹೇಯಮಾಡಿ ನುಡಿಯುವುದು ಎಂಥ ಮರುಳತನ?

. : ಹೆಣ್ಣಿನಿಂದಲೇ ಲೋಕದ ಜೀವಿಗಳಿಗೆ ಸುಖವೇ? ಎಂಥ ಸೋಜಿಗದ ಮಾತಿದು?

ಮಾ. : ಸುಂದರಿಯರ ಸುಖ ಗೊತ್ತಿರದ ಅಲ್ಲಮಾ, ನಾ ಹೇಳುವುದು ಸುಳ್ಳಲ್ಲ. ವಿಚಾರಮಾಡಿ ನೋಡಿದರೆ ಹೆಣ್ಣು ಕಲ್ಪವೃಕ್ಷದ ಹಣ್ಣು! ಸಕ್ಕರೆಯ ಕರಣಿಯನ್ನು ಯಾವ ಮಗ್ಗಲು ಕಡಿದರೂ ಸವಿಯೇ ಇರುವಂತೆ, ಹೆಣ್ಣನ್ನು ಹೇಗೆ ಸವಿದರೂ ರುಚಿಯೇ ಸುರಿಯುತ್ತಿರುವುದು. ಆ ಸುಖದ ಸುಗ್ಗಿಯನ್ನು ಏನೆಂದು ಬಣ್ಣಿಸಲಿ? ನೀನೀಗ ನನ್ನನ್ನು ತಿರಸ್ಕರಿಸುವುದು ಹೆಣ್ಣೆಂದು ಅಲ್ಲವೆ? ಆ ಹೆಣ್ಣಿನ ಮಹಿಮೆಯನ್ನೇ ಹೇಳುತ್ತೇನೆ ಕೇಳು; ಮೊದಲು ತಾಯಿಯಾಗಿ ಅಮೃತಕ್ಕಿಂತಲೂ ಹೆಚ್ಚು ರುಚಿಕರವಾದ ಮೊಲೆಹಾಲನ್ನು ಕುಡಿಸಿ, ದೊಡ್ಡವನನ್ನಾಗಿ ಮಾಡುವಳು ಹೆಣ್ಣಲ್ಲವೆ? ಹಿಂದಿನಿಂದ ಹೆಂಡತಿಯೆಂಬ ಹೆಸರಿನಿಂದ ಸಕ್ಕರೆಗಿಂತಲೂ ಸವಿಯಾದ ಸಂಗಸುಖವನ್ನು ನೀಡಿ ಸಂತೈಸುವವಳು ಹೆಣ್ಣಲ್ಲವೆ? ಆಮೇಲೆ ಮಗಳೆಂಬ ಹೆಸರಿನಿಂದ, ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಮಹಾಲಕ್ಷ್ಮಿಯಾಗಿ ಮೆರೆಯುವವಳು ಹೆಣ್ಣಲ್ಲವೆ? ಅಲ್ಲಮಾ, ಹೆಣ್ಣಿನ ಘನತೆಯನ್ನು ಎಷ್ಟೆಂದು ಬಣ್ಣಿಸಲಿ? ಹೆಣ್ಣಿನಿಂದಲೇ ಲೋಕದ ಕಲ್ಯಾಣ! ಹೆಣ್ಣೊಂದು ಇಲ್ಲದಿದ್ದರೆ ಈ ಲೋಕ ಎಂದೋ ಇಲ್ಲದಾಗುತ್ತಿತ್ತು. ಆಗ ನಾನು ಇಲ್ಲ, ನೀನು ಇಲ್ಲ, ಯಾವುದೂ ಇಲ್ಲ. ಹೆಣ್ಣೆಂಬುದು ಜಗದ ತಾಯಿ! ಅದು ಹೆರೆತ ತುಪ್ಪಕ್ಕಿಂತಲೂ ಸವಿ; ಇಲ್ಲದಿದ್ದರೆ ದೇವಾನುದೇವತೆಗಳು ಅದನ್ನೇ ನಂಬು ಅದರ ಹೇಳಿಕೆಯಂತೆ ಯಾಕೆ ನಡೆಯುತ್ತಿದ್ದರು. ಆದ್ದರಿಂದಲೇ ಹೆಣ್ಣು ಮಹಾದೇವಿಯೆಂದೂ ಸುಖದಾಯಿನಿಯೆಂದೂ ಸರ್ವಕ್ಕೂ ಕಾರಣೀಭೂತಳೆಂದೂ ಪೂರ್ವದ ಮಹಾಕವಿಗಳು ಕೊಂಡಾಡಿರುವರು. ಸವಿಯನ್ನು ಕುಡಿದವರು ಸತ್ತರು, ವಿಷವನ್ನು ಕುಡಿದವರು ಬದುಕಿದರು : ಎಂಬ ಗಾದೆಯ ಮಾತಿನಂತೆ ಹೆಣ್ಣನ್ನು ಕಂಡೊಡನೆ ಇದೊಂದು ಘಾತಕ ಭೂತವೆಂದು ಸುಳ್ಳೇ ಭೀತಿಗೊಂಡು ಸುಖಕ್ಕೆ ಎರವಾಗಿ ನಿಲ್ಲುವುದೇ ಸುಂದರಾ, ಬುದ್ಧಿಯನ್ನು ಎಲ್ಲಿ ಇಟ್ಟಿರುವಿ? ಮೊದಲು ನನ್ನನ್ನು ಲಗ್ನವಾಗು. ಹಿಂದುಗಡೆ ಸಿಗುವ ಸುಖವನ್ನು ನೋಡುವಿಯಂತೆ.

. : ಎಲೆ ಜೊಳ್ಳು ಮಾಯೆ. ಕಾರ್ಯಸಾಧನೆಗಾಗಿ ಸಿಕ್ಕದ್ದನ್ನು ಹೇಳಬೇಡ.

ಮಾ. : ನುಡಿಯದಿರು ಅಲ್ಲಮಾ, ನುಡಯದಿರು ಜೊಳ್ಳುಮಾಯೆ ಅನ್ನದಿರು, ನಾನು ಜೊಳ್ಳಲ್ಲ ನೀನು ಜೊಳ್ಳು! ನಿನ್ನಂತೆ ಅನೇಕ ಜೋಗಿಗಳು ಮಾಯೆಯ ಕೈಯಲ್ಲಿ ಕುಣಿದಾಡುವರು.

. : ಛೀ ಪಾಪಿಷ್ಠಳೇ, ವೃಥಾ ಸುಳ್ಳನ್ನೇಕೆ ನುಡಿಯುವಿ? ಮಾಯೆಗೆ ಶರಣು ಹೋದ ಯೋಗಿಗಳು ಒಬ್ಬರಾದರೂ ಉಂಟೆ?

ಮಾ. : ಒಬ್ಬರೇ ಇಬ್ಬರೇ : ಅನೇಕರುಂಟು.

. : ಅಂಥವರು ಯಾರು ಇಲ್ಲ.

ಮಾ. : ವಿಚಾರ ಮಾಡಿ ನೋಡು.

. : ಯಾರಿದ್ದಾರೆ ಹೇಳು?

ಮಾ. : ಅಯೋಧ್ಯಾಪಟ್ಟಣದ ದಶರಥರಾಜನ ಮಗನಾದ ರಾಮಚಂದ್ರನು ಈ ಜನತ್ತಿಗೆಲ್ಲಾ ಜಾಹೀರ ಆಗಿರುವನಲ್ಲ!

. : ಹೌದು ಆಗಿರುವನು.

ಮಾ. : ಅವನು ಸಾಮಾನ್ಯ ಪುರುಷನೇ ಹೇಗೆ?

. : ಅವನೇನೂ ಸಾಮಾನ್ಯ ಪುರುಷನಲ್ಲ. ಈ ಭೂಮಿಯನ್ನು ಉದ್ಧಾರ ಮಾಡಲು ಅವತಾರ ಮಾಡಿದ ಸಾಕ್ಷಾತ್ ಆದಿನಾರಾಯಣನು.

ಮಾ. : ಆ ರಾಮಚಂದ್ರನು ಒಂದು ದಿನ, ಸಭೆಯಲ್ಲಿ ಕುಳಿತಾಗ ತನ್ನ ಕುಲಗುರುಗಳಾದ ವಶಿಷ್ಠರನ್ನು : ಗುರುಗಳೇ, ಮಾಯೆ ಸುಳ್ಳೋ ಸತ್ಯವೋ? ಎಂದು ಕೇಳಿದನು. ಆಗ ಮಾಯೆಯ ಮಹಿಮೆಯನ್ನರಿತ ವಶಿಷ್ಠನು ಗರ್ವದಿಂದ ಶ್ರೀ ರಾಮಾ, ಮಾಯೆ ಸುಳ್ಳು : ಎಂದು ಸಭೆಯಲ್ಲಿ ಕೂಗಿ ಹೇಳಿದನು. ಅಲ್ಲಮಾ, ಆಗ ಅವನಿಗೆ ಆದ ಫಜೀತಿಯನ್ನು ಎಷ್ಟೆಂದು ವರ್ಣಿಸಲಿ?

. : ಏನಾಯಿತು ಹೇಳುವಂಥವಳಾಗು.

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ

ಮಾ. : ಹೋಯಿತೋ ಅವನ ಮನವು, ಸೇರಿತೋ ಒಂದು ವನವು
ಮಾಯೆಯ ಲೀಲಾ ಘನವು॥

ಏರು : ಕಾಡಿನಲ್ಲಿಯೆ ಹೋಗಿ, ಬೇಡಿತಿಯನ್ನು ಆಗಿ
ಹನ್ನೆರಡು ವರ್ಷ ಸುಖವಾಗಿ,
ಬಾಳ್ವೆ ಮಾಡಿದ ವಶಿಷ್ಠಯೋಗಿ,

ಮರಳಿ ಸ್ಮತಿಯು ಬಂದುನೋಡಲು
ಸರ್ವಲಯವಾಗಿ ಹೋಯಿತೋ ಬಯಲಾಗಿ    1

ಮರಳಿ ಮಾಯೆಯ ಸ್ಮಸೆ ಅನ್ನುತಿರಲು ಋಷಿ
ಪ್ರತ್ಯಕ್ಷ ಬರಲು ಹೌಹಾರಿ,
ಯೋಗಿ ವಶಿಷ್ಠ ಸಿರಬಾಗಿ
ಮಾಯೆಯ ಘನ ಕ್ಷಮಾ ಬೇಡಿದನೊ
ಹಾಡಿದನೊ ಕನಸಿನಲ್ಲಿ ಕಂಡಂಥ ಬೇಡನಾರಿ   2

ನಲುಮೆಯ ಅಲ್ಲಮಾ ಕೇಳು, ವಶಿಷ್ಠನು ಮಾಯೆ ಸುಳ್ಳೆಂದು ಹೇಳುವಷ್ಟರಲ್ಲಿಯೇ ಆತನಿಗೆ ಎಚ್ಚರತಪ್ಪಿ ಅಡವಿಗೆ ಹೋದಂತಾಯಿತು. ಅಲ್ಲಿ ಬೇಡತಿಯನ್ನು ಲಗ್ನವಾಗಿ ಹತ್ತೆಂಟು ಮಕ್ಕಳನ್ನು ಹಡೆದು ಹನ್ನೆರಡು ವರ್ಷ ಪ್ರಪಂಚ ಮಾಡಿದಂತೆ ಅನಿಸಿತು. ಪುನಃ ಎಚ್ಚರವಾದಾಗ ಗಾಬರಿಯಾಗಿ ಸುತ್ತೆಲ್ಲ ನೋಡುತ್ತಾನೆ ತಾನು ಮೊದಲಿನಂತೆ ರಾಮನಸಭೆಯಲ್ಲಿಯೇ ಕುಳಿತಿದ್ದಾನೆ. ಆಗ ಅವನು ಆಶ್ಚರ್ಯಚಕಿತನಾಗಿ ತಾನು ಕಂಡುದು ಕನಸೋ ಕೌತುಕವೋ ಎಂದು ಸೋಜಿಗಪಡುತ್ತಿರಲು, ಶ್ರೀರಾಮಚಂದ್ರನು ಗುರುಗಳೇ ಮಾಯೆ ಹೇಗಿದೆ? ಎಂದು ಕೇಳಿದನು. ಆಗ ವಶಿಷ್ಠನು ಮಾಯೆ ಸುಳ್ಳೆಂದು ಪುನಃ ಹೇಳಿದನು. ಅಲ್ಲಮಾ, ಆಗ ಆ ಬೇಡತಿಯ ಹನ್ನೆರಡು ಜನ ಮಕ್ಕಳು ಹೇಗೆ ಬಂದಿದ್ದರೋ ಎಲ್ಲಿ ಅಡಗಿದ್ದರೋ ಅವರೆಲ್ಲ ಒಮ್ಮೆಲೆ ಸಭೆಯೊಳಗೆ ನುಗ್ಗಿ ಹೆಂಡಿರು ಮಕ್ಕಳನ್ನು ಸಲಹಲಾರದೆ ಓಡಿಬಂದ ಆ ಕಳ್ಳ ವಶಿಷ್ಠ ಎಲ್ಲಿ ಅಡಗಿರುವನು? : ಎಂದು ಆರ್ಭಟಿಸಿದರು. ಆಗ ವಶಿಷ್ಠನು ಅಂಜಿ ಥರಥರನೆ ನಡುಗುತ್ತ ರಾಮನ ಹಿಂಬದಿಗೆ ಸರಿಯತೊಡಗಿದನು. ಆಗ ಶ್ರೀರಾಮನು, ವಶಿಷ್ಠರೇ, ಮಾಯೆ ಸುಳ್ಳೋ ಸತ್ಯವೋ ಎಂದು ಕೇಳಿದ. ಆಗ ವಶಿಷ್ಠನು ಮಾಯೆಯನ್ನು ನೆನೆದು, ಅಗಾಧ ಮಹಿಮೆಯುಳ್ಳ ಮಾಯೆಯೆ, ನಿನ್ನ ಮಹಿಮೆಯನ್ನು ತಿಳಿಯದೆ ನುಡಿದ ನನಗೆ ಯೋಗ್ಯ ಬುದ್ಧಿಯನ್ನು ಕಲಿಸಿದೆ : ತಾಯಿ ತಪ್ಪಾಯಿತು : ಎನಲು, ಬೇಡಿತಿಯ ಮಕ್ಕಳ ಆ ಕ್ಷಣವೇ ಮಾಯವಾದರು. ಬೇಡ ಅಲ್ಲಮಾ, ಮಾಯೆ ಸುಳ್ಳೆಂದು ತಿರಸ್ಕರಿಸಿ ನುಡಿಯಬೇಡ. ಹೆಣ್ಣು ಸುಖದ ಸುಗ್ಗಿ. ಅಂತಹ ಹೆಣ್ಣನ್ನು ತಿರಸ್ಕರಿಸಿ ನುಡಿಯುವುದೆಂದರೆ ಹೆಗ್ಗಣ ಮಣ್ಣು ತೋಡಿದಂತೆ! ಇದರಿಂದ ನೀನು ಯಾವ ಸುಖವನ್ನು ಹೊಂದುವಿ? ಜಾಣೆಯನ್ನು ಮದುವೆಯಾಗಿ ಬೆಚ್ಚಗೆ ಮಲಗುವುದನ್ನು ಬಿಟ್ಟು, ಶ್ವಾನನಂತೆ ಬೂದಿಯನ್ನು ಬಳಿದುಕೊಂಡು ಓಣಿಯಲ್ಲಿ ಹೊರಳಾಡುವುದು ಅದಾವ ಚೆಂದ! ಛೀ ನೀನೆಲ್ಲಿ ಇಟ್ಟಿರುವೆ ಬುದ್ಧಿ? ಬಾ ಮುಗುಳು ನಗೆ ಬೀರುತ್ತ ಮುಂದೆ ಬಾ ಕೈಯಲ್ಲಿ ಕೈಹಿಡಿದುಕೊಂಡು ರಾಜಮಂದಿರಕ್ಕೆ ಹೋಗೋಣ ಬಾ.