ಉಡುಗಣ ವೇಷ್ಟಿತ
ಚಂದ್ರ ಸುಶೋಭಿತ
ದಿವ್ಯಾಂಬರ ಸಂಚಾರಿ
ಕಣ್ಣ ನೀರಿನಲಿ
ಮಣ್ಣ ಧೂಳಿನಲಿ
ಹೊರಳುತ್ತಿರುವರ ಸಹಚಾರಿ !

ಕೋಟಿ ಸೂರ್ಯಕರ
ತೇಜಃಪುಂಜತರ
ವಿದ್ಯುದ್ರಾಜಿತ ರಥಗಾಮಿ
ಉಳುತಿಹ ರೈತನ
ನೇಗಿಲ ಸಾಲಿನ
ಮಣ್ಣಿನ ರೇಖಾಪಥಗಾಮಿ !

ಬಾಂದಳ ಚುಂಬಿತ
ಶುಭ್ರಹಿಮಾವೃತ
ತುಂಗಶೃಂಗದಲಿ ಗೃಹವಾಸಿ
ದೀನ ಅನಾಥರ
ದುಃಖಿ ದರಿದ್ರರ
ಮುರುಕು ಗುಡಿಸಿಲಲಿ ಉಪವಾಸಿ !