ಒಂದು ಮನೆ, ರಾತ್ರಿ ಸಮಯ. ಕೋಣೆಯಲ್ಲಿ ಹರಳೆಣ್ಣೆ ದೀಪದ ಬೆಳಕು. ಅಲ್ಲಿ ಏಳೆಂಟು ವರ್ಷ ವಯಸ್ಸಿನ ಒಬ್ಬ ಚಿಕ್ಕ ಹುಡುಗ ಕುಳಿತಿದ್ದಾನೆ. ಅದು ಮನೆಪಾಠದ ಸಮಯ. ಬಳಿಯಲ್ಲಿ ಕುಳಿತಿದ್ದ ಅವನ ತಾಯಿ ಒಂದು ಪ್ರಶ್ನೆ ಕೇಳುತ್ತಾಳೆ:

“ಒಬ್ಬ ವ್ಯಾಪಾರಿ ಒಂದು ರೂಪಾಯಿಗೆ ಒಂದು ಔಷಧಿ ಸೀಸೆಯಂತೆ ಹನ್ನೆರಡು ಔಷಧಿ ಸೀಸೆಗಳನ್ನು ಖರೀದಿ ಮಾಡಿದ. ಮೂರು ರೂಪಾಯಿಗಳಿಗೆ ಒಂದು ಸೀಸೆಯಂತೆ ಅವನು ಆ ಎಲ್ಲ ಹನ್ನೆರಡು ಸೀಸೆಗಳನ್ನು ಮಾರಿದರೆ ಅವನಿಗೆ ಸಿಕ್ಕಬೇಕಾದ ಲಾಭವೆಷ್ಟು?”

ವಿಚಿತ್ರ ಉತ್ತರ

ಒಂದು ಕ್ಷಣ ಯೋಚಿಸಿದ ಹುಡುಗ ತಟ್ಟನೆ ಒಂದು ಪ್ರಶ್ನೆ ಕೇಳಿದ್ದಾನೆ: “ಅದೆಂಥ ಔಷಧಿಯಮ್ಮಾ?”

“ಅಂದೆಂಥ ಔಷಧಿಯಾದರೆ ನಿನಗೇನಾಗ್ಬೇಕು? ಸುಮ್ಮನೆ ಉತ್ತರ ಹೇಳೋ ಸಾಕು.”

“ಯಾವುದೋ ಪ್ರಾಣ ಉಳಿಸೋ ಔಷಧಿ ಎಂದುಕೋ…”

ಹುಡುಗ ತಟಕ್ಕನೆದ್ದು ಪ್ರಶ್ನಿಸಿದ್ದಾನೆ: “ಉತ್ತರ ಹೇಳಲೇ?”

“ಊಂ ಹೇಳು!”

“ಅವನಿಗೆ ಹನ್ನೆರಡು ಛಡಿ ಏಟು!” ಚಟ್ಟೆಂದು ಬಾಯಿಯಿಂದ ಉತ್ತರ ಸಿಡಿದಿದೆ! ತಾಯಿ ನಿಬ್ಬೆರಗಾಗಿದ್ದಾಳೆ. “ಇದೆಂಥ ಉತ್ತರಾನೋ? ಶುದ್ಧ ತಲೆಹರಟೆ!”

“ಅಲ್ಲಮ್ಮಾ, ಪ್ರಾಣವನ್ನು ಉಳಿಸುವಂಥ ಔಷಧಿಯನ್ನು ಅಷ್ಟು ಹೆಚ್ಚಿನ ಲಾಭಕ್ಕೆ ಮಾರಿದರೆ ಕೈಯಲ್ಲಿ ಚಿಕ್ಕಾಸಿಲ್ಲದ ಬಡವರ ಗತಿ ಏನಾಗ್ಬೇಕು? ಅತಿ ದುರಾಸೆಯ ಆ ವ್ಯಾಪಾರಿಗೆ ನ್ಯಾಯವಾಗಿ ಸಿಕ್ಕಬೇಕಾದ್ದು ಹನ್ನೆರಡು ಛಡಿ ಏಟುಗಳಷ್ಟೆ.”

ಈ ವಿಚಿತ್ರವಾದ ಉತ್ತರ ಹೇಳಿದ ಹುಡುಗನನ್ನು ಎಲ್ಲರೂ “ರಾಜೂ” ಎಂದು ಕರೆಯುತ್ತಿದ್ದರು. ಅವನ ಅಪ್ಪ ಅಮ್ಮ ನಾಮಕರಣ ಮಾಡಿ ಇಟ್ಟ ಹೆಸರು ರಾಮರಾಜು ಅಂತ. ದೊಡ್ಡವನಾದ ಮೇಲೆ ದೇಶವಿಖ್ಯಾತನಾದದ್ದು “ಅಲ್ಲೂರಿ ಸೀತಾರಾಮರಾಜು” ಎಂದು. ಅವನ ತಾಯಿಯ ಹೆಸರು ನಾರಾಯಣಮ್ಮ. ತಂದೆಯ ಹೆಸರು ವೆಂಕಟರಾಮರಾಜು.

ಆಂಧ್ರಪ್ರದೇಶದ ಗೋದಾವರಿ ನದಿಯ ಪಶ್ಚಿಮಕ್ಕಿರುವ ಮೋಗಲ್ಲು ಗ್ರಾಮದಲ್ಲಿ (ನರಸಾಪುರ ಜಿಲ್ಲೆ) ೧೮೯೭ನೇ ಇಸವಿ ಜುಲೈ ತಿಂಗಳು ೪ನೇ ದಿನಾಂಕದಂದು ರಾಮರಾಜು ಹುಟ್ಟಿದ.

ವೆಂಕಟರಾಮರಾಜು ಮಹಾ ದೇಶಭಕ್ತ. ದೇಶದ ದೊಡ್ಡ ದೊಡ್ಡ ನಾಯಕರ ಸುಂದರ ವರ್ಣಚಿತ್ರಗಳನ್ನು ರಚಿಸಿ ಮನೆಯಲ್ಲಿ ತೂಗುಹಾಕಿದ್ದರು. ಶ್ರೀರಾಮ, ಶ್ರೀಕೃಷ್ಣ, ಹನುಮಂತ, ಪ್ರಹ್ಲಾದ, ಧ್ರುವ, ರಾಣಾ ಪ್ರತಾಪ, ಶಿವಾಜಿ ಮತ್ತು ಆಂಧ್ರಪ್ರದೇಶದ ಕಲಿಗಳಾದ ಬಾಲಚಂದ್ರ, ರಾಣೀ ರುದ್ರಮ್ಮ, ಖಡ್ಗ ತಿಕ್ಕನ ಮುಂತಾದವರ ಚಿತ್ರಗಳು ಅವನ ಮನೆಯ ಗೋಡೆಗಳನ್ನು ಅಲಂಕರಿಸಿದ್ದವು. ಕುಳಿತರೆ, ಎದ್ದರೆ, ಮಲಗಿದರೆ ಈ ಚಿತ್ರಗಳೇ ಸದಾ ಕಣ್ಣಿಗೆ ಕುಟ್ಟುತ್ತಿದ್ದವು. ರಾಜು ಬೆಳೆದಿದ್ದು ಅಂಥ ವಾತಾವರಣದಲ್ಲಿ!

ರಾಜು ಮೋಗಲ್ಲುವಿನಲ್ಲಿ ಬಾಲ್ಯದ ಕೆಲವು ವರ್ಷಗಳನ್ನು ಕಳೆದ ಮೇಲೆ ಅವರ ಸಂಸಾರ ರಾಜಮಹೇಂದ್ರಿಗೆ ಹೋಯಿತು.

ಛಿ! ಶತ್ರುವಿಗೆ ತಲೆಬಾಗುತ್ತೀಯಾ!

ಒಂದು ದಿನ ರಾಜು ಮತ್ತು ಅವನ ತಂದೆ ವಾಯು ವಿಹಾರಕ್ಕೆಂದು ಗೋದಾವರಿ ನದಿಯ ತೀರಕ್ಕೆ ಹೊರಟರು. ಅಂದು ಸಂಜೆ ಅಲ್ಲಿ ಬಹಳ ಜನರು ಸೇರಿದ್ದರು.

ಆ ನಡುವೆ ಇದ್ದಕ್ಕಿದ್ದಂತೆ ಅಲ್ಲಿಗೊಂದು ಕುದುರೆ ಧಾವಿಸಿ ಬರುತ್ತಿರುವ ಶಬ್ದ ಕೇಳಿಬಂತು. ಅಲ್ಲಿದ್ದ ಜನರು ಹೆದರಿ ದಿಕ್ಕಾಪಾಲಾಗಿ ಚದುರಿ ಕುದುರೆ ಸವಾರನಿಗೆ ದಾರಿ ತೆರವು ಮಾಡಿದರು. ಕುದುರೆಯ ಮೇಲಿದ್ದವನೊಬ್ಬ ಕೆಂಪು ಮೂತಿಯ ಆಂಗ್ಲ ಸೈನ್ಯಾಧಿಕಾರಿ. ಅವನ ಮಿರಿಮಿರಿಗುಟ್ಟುತ್ತಿದ್ದ ಕೆಂಪು ಸಮವಸ್ತ್ರ, ಥಳಥಳಿಸುತ್ತಿದ್ದ ಬೆಲ್ಟು, ತಲೆಯ ಮೇಲಿದ್ದ ಹ್ಯಾಟು ನೋಡಿ ರಾಜುವಿಗೆ ಅದೇನೋ ಒಂದು ರೀತಿಯ ಖುಷಿ. ಆ ಸಂಭ್ರಮದಲ್ಲಿ ಸಿಪಾಯಿಯಂತೆ ಚಟಮ್ಮನೆ ನಿಂತು ಗಟ್ಟಿಯಾಗಿ “ಸಲಾಮ್‌” ಎಂದು ಕೂಗಿ ಸಲಾಮ್‌ಹೊಡೆದುಬಿಟ್ಟ.

ಇದನ್ನು ನೋಡಿದ ತಂದೆಯ ಮುಖದಲ್ಲಿ ಇದ್ದಕ್ಕಿದ್ದಂತೆ ಪರಿವರ್ತನೆಯಾಯಿತು. ನಗು ಮಾಯವಾಯಿತು. ಮುಖ ಕೋಪದಿಂದ ಕೆಂಪು ಬಣ್ಣಕ್ಕೆ ತಿರುಗಿತು. ಕಣ್ಣು ಕೆಂಡಕಾರುತ್ತಿತ್ತು. ಅವರ ಕೈ ರಾಜುವಿನ ಎಳೆಗೆನ್ನೆಗಳ ಮೇಲೆ ಪಟೀರ್ ಪಟೀರನೆ ಬಲವಾಗಿ ಏಟುಗಳನ್ನು ಹೊಡೆಯಿತು! ರಾಜು ಅರೆಕ್ಷಣ ತಂದೆಯನ್ನು ಬೆರಗು ಕಣ್ಣುಗಳಿಂದ ನೋಡಿ ಒಡನೆಯೇ ಗಟ್ಟಿಯಾಗಿ ಅಳುತ್ತಾ ನಿಂತುಬಿಟ್ಟ. ತಂದೆ ಗರ್ಜಿಸಿದರು: “ಛಿ, ಮೂರ್ಖ! ಆ ಪರಕೀಯ ಶತ್ರುವಿಗೆ ತಲೆಬಾಗುತ್ತೀಯಾ? ನಿನ್ನ ಕುಲವೆಲ್ಲಿ, ಸಂಸ್ಕೃತಿ ಎಲ್ಲಿ? ಅವನದೆಲ್ಲಿ? ಇನ್ನೊಮ್ಮೆ ಅಪ್ಪಿತಪ್ಪಿಯಾದರೂ ಹಾಗೆ ಮಾಡೀಯೇ, ಜೋಕೆ, ಸೀಳಿಬಿಟ್ಟೇನು!”

ರಾಜು ಅಳುತ್ತಲೇ ಬಿಕ್ಕುತ್ತಾ ಹೇಳಿದ: “ಇಲ್ಲಪ್ಪಾ… ಇನ್ನೊಂದು ಸಲ ಇಂಥ ಮಾಡಬಾರದ ಕೆಲಸ ಮಾಡೋದಿಲ್ಲ…”

ಮಗನನ್ನು ಅಷ್ಟು ಕಠಿಣವಾಗಿ ಶಿಕ್ಷಿಸಿದ್ದಕ್ಕೆ ವೆಂಕಟರಾಮರಾಜುವಿಗೂ ಮನಸ್ಸಿಗೆ ಬಹಳ ದುಃಖವಾಗಿತ್ತು. ಅವರು ರಾಜುವನ್ನು ಬಾಚಿ, ತಬ್ಬಿಕೊಂಡರು. ಪ್ರೀತಿಯಿಂದ ಅವನನ್ನು ಮುದ್ದಾಡುತ್ತಾ ಹೇಳಿದರು? “ಮಗು, ನಾವು ಎಂದಿಗೂ ಶತ್ರುಗಳಿಗೆ ತಲೆಬಾಗಬಾರದು. ಎದೆ ಎತ್ತಿ, ತಲೆ ಎತ್ತಿ, ಅವರನ್ನು ಮೀರಿಸುವ ಗತ್ತಿನಿಂದ ನಡೆಯಬೇಕು ಮರೀ…. ತಲೆಬಾಗಿಸಿದರೆ ನಮ್ಮ ತಾಯಿ ಭಾರತಮಾತೆಗೆ ಬಾಗಿಸಬೇಕಷ್ಟೆ.”

ರಾಜಮಹೇಂದ್ರಿಯಲ್ಲಿ ಇರುವಾಗಲೇ ವೆಂಕಟರಾಮರಾಜು ತೀರಿಕೊಂಡರು.

ಅಂದಿನಿಂದ ರಾಜುವಿನ ಬೆಳವಣಿಗೆ ನರಸಾಪುರದಲ್ಲಿ ಅವನ ಚಿಕ್ಕಪ್ಪನ ಮನೆಯಲ್ಲಿ. “ಟೈಲರ್ ಸ್ಕೂಲ್‌” ಎಂಬ ಶಾಲೆಯಲ್ಲಿ ಅವನ ಓದು ಮುಂದುವರಿಯಿತು. ಆದರೆ ಅವನ ಸ್ವತಂತ್ರ ಪ್ರವೃತ್ತಿಗೂ ಚಿಕ್ಕಪ್ಪನ ಸ್ವಭಾವಕ್ಕೂ ಸರಿಹೊಂದುತ್ತಲೇ ಇರಲಿಲ್ಲ. ಆಗಾಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಒಂದು ದಿನ ಚಿಕ್ಕಪ್ಪ ಬಾಯಿಗೆ ಬಂದಂತೆ ಬೈದಾಗ ರಾಜು ಅವನ ಮನೆಯನ್ನು ತೊರೆದು ಹೊರಟುಬಿಟ್ಟ. ಕಾಕಿನಾಡ ಎಂಬ ಊರಿಗೆ ಹೋಗಿ ಒಂದು ಶಾಲೆಗೆ ಸೇರಿಕೊಂಡ. ಊಟ, ವಸತಿ ಒಂದು ಛತ್ರದಲ್ಲಿ.

ಶಾಲೆಯಿಂದ “ಡಿಸ್‌ಮಿಸ್‌”

ಒಂದು ದಿನ ರಾಜು ಕಾಕಿನಾಡದಲ್ಲಿ ಸಮುದ್ರದ ತೀರದಲ್ಲಿ ವಿಹರಿಸುತ್ತಿದ್ದ. ಅಲ್ಲಿಯೇ ಕೆಲವು ಆಂಗ್ಲರು ವಾಸಿಸುತ್ತಿದ್ದರು. ಅವರ ಮಕ್ಕಳು ಕೆಲವರು ಕಪಿಚೇಷ್ಟೆ ಮಾಡಲಾರಂಭಿಸಿದರು. ರಾಜು ಕುಳಿತಿದ್ದಾಗ ಒಬ್ಬ ಆಂಗ್ಲ ಹುಡುಗ ಅಹಂಕಾರದಿಂದ ರಾಜುವಿನ ತಲೆಯ ಮೇಲೆ ಹಾರಿದ. ರಾಜುವಿನ ಮೈ ಭಗ್ಗೆಂದು ಉರಿಯಿತು! ರಾಜಮಹೇಂದ್ರಿಯಲ್ಲಿ ಗೋದಾವರಿ ನದಿ ತೀರದಲ್ಲಿ ಅವನ ತಂದೆ ವೆಂಕಟರಾಮರಾಜು ಹೇಳಿಕೊಟ್ಟ ಪಾಠ ತಟಕ್ಕನೆ ನೆನಪಿಗೆ ಬಂತು. ಅವು ಅವನ ಪಾಲಿಗೆ ವೇದ ವಾಕ್ಯಗಳು!

ಕೂಡಲೇ ರಾಜು ಓಡಿಹೋಗುತ್ತಿದ್ದ ಆ ಹುಡುಗನನ್ನು ಅಟ್ಟಿಸಿಕೊಂಡು ಹೋದ. ಅವನ ಕುತ್ತಿಗೆ ಪಟ್ಟಿಯನ್ನು ಹಿಡಿದು ನಿಲ್ಲಿಸಿದ. ಅವನು ಬಿಡಿಸಿಕೊಳ್ಳಲು ಸೆಣಸಾಡುತ್ತಿದ್ದರೂ ಬಿಡದೆ ಚೆನ್ನಾಗಿ ನಾಲ್ಕು ಬಾರಿಸಿ ಚುರುಕು ಮುಟ್ಟಿಸಿದ. ನೆಲದ ಮೇಲೆ ಬೀಳಿಸಿ ಎದೆಯ ಮೇಲೆ ಕುಳಿತ. ಗೊಳೋ ಎಂದು ಕಿರುಚುತ್ತಾ ಮನೆಗೆ ಹೋದ ಆ ಆಂಗ್ಲ ಹುಡುಗ ಅವನ ಅಪ್ಪನಿಗೆ ಚಾಡಿ ಹೇಳಿದ. ಅವನ ಅಪ್ಪ ರಾಜುವಿನ ಶಾಲೆಗೆ ದೂರು ಕೊಟ್ಟ. ದೇಶೀಯನೊಬ್ಬ ಆಂಗ್ಲ ಹುಡುಗನನ್ನು ಅವಮಾನಿಸುವುದೆಂದರೇನು? ರಾಜುವನ್ನು ಶಾಲೆಯಿಂದ “ಡಿಸ್‌ಮಿಸ್‌” ಮಾಡಿಬಿಟ್ಟರು! ಅಲ್ಲಿಂದ ಹೊರಟ ರಾಜು ತುನಿ ಎಂಬ ಹಳ್ಳಿಗೆ ಬಂದ. ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಗೆ ಸೇರಿದ. ಮಿಕ್ಕ ಸಮುಯದಲ್ಲಿ ತುನಿಯ ಆಸುಪಾಸಿನ ಬೆಟ್ಟಗುಡ್ಡಗಳಲ್ಲಿ, ಕಾಡು ಮೇಡುಗಳಲ್ಲಿ ಸಂಚರಿಸುವುದು ಅವನ ಹವ್ಯಾಸ. ಅಲ್ಲಿ ವಾಸಿಸುತ್ತಿದ್ದ ಅಮಾಯಕ ವನವಾಸಿಗಳ ಧಾರುಣ ಜೀವನದ ಪರಿಚಯ ಮಾಡಿಕೊಂಡ. ಅನಂತರ ರಾಜಮಹೆಂದ್ರಿಯಲ್ಲಿ ಎ.ವಿ.ಎನ್‌. ಕಾಲೇಜಿನಲ್ಲಿ ಸೇರಿ ವಿದ್ಯಾಭ್ಯಾಸ ಮುಂದುವರಿಸಿದ. ಕೆಲಕಾಲ ವಿಶಾಖಪಟ್ಟಣದಲ್ಲಿಯೂ ತಂಗಿದ್ದ.

ವಿಶಾಖಪಟ್ಟಣ ಸ್ವಾತಂತ್ರ್ಯ ಹೋರಾಟದ ಒಂದು ಮುಖ್ಯ ಕೇಂದ್ರ. ರಾಷ್ಟ್ರದ ಅನೇಕ ಹಿರಿಯ ನಾಯಕರು ಅಲ್ಲಿಗೆ ಭೇಟಿ ನೀಡಿ ದೊಡ್ಡ ಸಭೆಗಳಲ್ಲಿ ಭಾಷಣ ಮಾಡಿ ಹೋಗುತ್ತಿದ್ದರು. ರಾಜುವೂ ತಪ್ಪದೆ ಸಭೆಗಳಿಗೆ ಹೋಗುತ್ತಿದ್ದ. ದೇಶದ ಭೀಕರ ಪರಿಸ್ಥಿತಿಯ ಚಿತ್ರ ಕಣ್ಣಿಗೆ ಕಟ್ಟುತ್ತಿದ್ದಂತೆ ಅವನಲ್ಲಿ ಪೌರುಷ, ಪರಾಕ್ರಮಗಳು ಉಕ್ಕುತ್ತಿದ್ದವು. ಮನಸ್ಸು ಅಶಾಂತಿಯಿಂದ ಕುದಿಯುತ್ತಿತ್ತು.

ರಾಜು ವಿದ್ಯಾಭ್ಯಾಸವನ್ನು ನಿಲ್ಲಿಸಿಬಿಟ್ಟ. ಆಗ ಸುಮಾರು ಹದಿನೇಳು ವರ್ಷ ವಯಸ್ಸು, ಮುಂದೆ ತಾನೇನು ಮಾಡಬೇಕು ಎಂಬ ಗೊಂದಲದಲ್ಲಿ ಬಿದ್ದ. ಇಡೀ ಭಾರತದ ದರ್ಶನ ಪಡೆಯಲು ನಿಶ್ಚಯಿಸಿ ಪ್ರಯಾಣ ಪ್ರಾರಂಭಿಸಿದ. ಆಗ ಬಂಗಾಳ, ಪಂಜಾಬುಗಳಲ್ಲಿ ಕ್ರಾಂತಿಕಾರಿ ಚಟುವಟಿಕೆ ಬಹಳ ತೀವ್ರವಾಗಿತ್ತು. ಪಂಜಾಬಿನ ಅನೇಕ ಕ್ರಾಂತಿಕಾರಿ ನಾಯಕರ ಗೆಳೆತನವಾಯಿತು. ಆಂಧ್ರದಲ್ಲಿ ಕ್ರಾಂತಿಕಾರಿ ಉದ್ಯಮದ ಪಂಜನ್ನು ಬೆಳಗಿಸಲು, ಸಶಸ್ತ್ರ ಹೋರಾಟದಿಂದ ಆಂಗ್ಲರನ್ನು ಎದುರಿಸಲು ಅವನಿಗೆ ಸ್ಫೂರ್ತಿ ದೊರೆಯಿತು.

ಸಾಧಕ ರಾಜು

ದೇಶ ಪರ್ಯಟನೆ ಮುಗಿಸಿ ಹಿಂದಿರುಗುವ ವೇಳೆಗೆ ಅವನಲ್ಲಿ ಬಹಳ ಬದಲಾವಣೆಯಾಗಿತ್ತು. ಧಾರ್ಮಿಕ ಪ್ರವೃತ್ತಿ ಹುಟ್ಟಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂಬ ಇಚ್ಛೆ ಪ್ರಬಲವಾಗಿತ್ತು. ತಾನು ಸನ್ಯಾಸಾಶ್ರಮ ಸ್ವೀಕರಿಸಿ ತನ್ನ ಜೀವನವನ್ನು ದೇಶಸೇವೆ, ಜನಸೇವೆಗಳಲ್ಲಿ ತೊಡಗಿಸಬೇಕೆಂದು ಪ್ರತಿಜ್ಞೆ ಮಾಡಿದ.

ದೇಶ ಪರ್ಯಟನೆಯಿಂದ ವಾಪಸು ಬಂದ ರಾಜು ಕೃಷ್ಣಾದೇವಿ ಪೇಟೆಯ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಬೀಡುಬಿಟ್ಟ. ಅಲ್ಲಿ ಅವನ ಕಠೋರ ಸಾಧನೆ ಆರಂಭವಾಯಿತು. ದೇವತಾರ್ಚನೆ, ಧ್ಯಾನ, ಯೋಗಾಸನ ಮುಂತಾದ ಕಾರ್ಯಕ್ರಮಗಳಲ್ಲಿ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದ. ವೇದಗಳು, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳ ಆಳವಾದ ಅಧ್ಯಯನದಲ್ಲಿ ತೊಡಗಿದ. ಹಿಂದೂ ಧರ್ಮದ ಸಕಲ ಶಾಸ್ತ್ರಗಳನ್ನೂ ಅರೆದು ಕುಡಿದು ಜೀರ್ಣಿಸಿಕೊಂಡ. ಜ್ಯೋತಿಷ್ಯ, ಆಯುರ್ವೇದ ಮುಂತಾದ ಶಾಸ್ತ್ರಗಳಲ್ಲಿ ಪಾರಂಗತನಾದ. ಶಾರೀರಿಕವಾಗಿ ಕುದುರೆ ಸವಾರಿ, ಬಾಣಪ್ರಯೋಗ ಮುಂತಾದವನ್ನು ಚೆನ್ನಾಗಿ ಅಭ್ಯಾಸ ಮಾಡಿದ.

"ಇಲ್ಲಿನ ಮಣ್ಣು, ಮರ, ನೀರು ಎಲ್ಲವೂ ನಮ್ಮದೆಂದು ತೋರಿಸಿಕೊಡೋಣ."

ರಾಜು ಈಗ ಹಿಂದಿನ ಕಪ್ಪು ಕೋಟು, ಷರಟು, ಪೈಜಾಮಧಾರಿ ಕ್ರಾಪು ಬಿಟ್ಟಿದ್ದ ರಾಜುವಲ್ಲ. ಕಾವಿಪಂಚೆ, ಕಾವಿ ಮೇಲುಹೊದಿಕೆ ಅವನ ವೇಷ. ಅವನ ಮುಖದಲ್ಲಿ ಅದೆಷ್ಟು ತೇಜಸ್ಸು! ಕೆನ್ನೆ, ಗಲ್ಲಗಳ ತುಂಬಾ ದಟ್ಟವಾಗಿ ಬೆಳೆದಿದ್ದ ಕಪ್ಪು ಗಡ್ಡ ಮೀಸೆಗಳು. ತಲೆತುಂಬಾ ಉದ್ದನೆಯ ಗುಂಗುರು ಕೂದಲು. ಹಣೆಯ ಮೇಲೆ ಉದ್ದನೆಯ ಕೆಂಪು ತಿಲಕ. ಮಧ್ಯಮ ಎತ್ತರದ ರಾಜು ಬಲಿಷ್ಠನಾಗಿದ್ದ. ನೋಡಿದವರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತಿದ್ದ ವ್ಯಕ್ತಿತ್ವ ಅವನದು.

ವನವಾಸಿಗಳ ಆಪದ್ಭಾಂಧವ

ಕೃಷ್ಣಾದೇವಿ ಪೇಟೆ ಇದ್ದಿದ್ದು ಮಾನ್ಯಂ ಎಂಬ ಗುಡ್ಡಗಾಡು ಪ್ರದೇಶಕ್ಕೆ ಬಲು ಸಮೀಪ. ಮನ್ಯಂ ವನ ಪ್ರದೇಶವನ್ನು ಪ್ರವೇಶಿಸಲು ಕೃಷ್ಣಾದೇವಿ ಪೇಟೆಯೇ ಹೆಬ್ಬಾಗಿಲು ಎನ್ನಬಹುದು. ಆದಕಾರಣ ವನವಾಸಿಗಳಾದ ಕೋಯರು, ಚೆಂಚುಗಳು ದಿನಬೆಳಗಾದರೆ ಅಲ್ಲಿಗೆ ಬರುತ್ತಿದ್ದುದು ಸಾಮಾನ್ಯ. ತೇಜಸ್ಸು ಚಿಮ್ಮುತ್ತಿದಂಥ ಸನ್ಯಾಸಿ ರಾಮರಾಜುವನ್ನು ಕಾಣಲು ಗುಂಪು ಗುಂಪಾಗಿ ಕೋಯ ಜನರು ಬಂದು ಹೋಗಲಾರಂಭಿಸಿದರು. ರಾಜುವಿಗೆ ಮೇಲೆ ಮೊದಲ ನೋಟದಲ್ಲೇ ಭಕ್ತಿ ಹುಟ್ಟಿತು ಅವರಿಗೆ. ರಾಜವೂ ಆಗಾಗ ಮನ್ಯಂ ಗುಡ್ಡಗಾಡುಗಳಲ್ಲಿ ಓಡಾಡಿ ಬರುತ್ತಿದ್ದ. ಮುಗ್ಧ ಕೋಯರನ್ನು ಕಂಡು ಮಾತನಾಡಿಸಿ ಬರುತ್ತಿದ್ದ. ಗುಡ್ಡಗಳಲ್ಲೇ ಒಂದು ಕಾಳಿಮಾತೆ ದೇವಸ್ಥಾನವಿತ್ತು. ಕಾಳಿ ಅವನ ಆರಾಧ್ಯ ದೇವತೆ. ಆ ದೇವಸ್ಥಾನದಲ್ಲಿ ಅವನು ಪೂಜೆ ಆರಂಭಿಸಿದ.

ಕೋಯ ಜನರಲ್ಲಿ ಬಹಳ ಕೆಟ್ಟ, ಅಮಾನುಷ ಪದ್ಧತಿಗಳು ಆಚರಣೆಯಲ್ಲಿದ್ದವು. ನರಬಲಿ ಕೊಡುವುದು, ಸಣ್ಣ ತಪ್ಪುಗಳಾದರೂ ತಪ್ಪಿತಸ್ಥನ ಮೇಲೆ ಬಾಣಗಳ ಮಳೆ ಸುರಿಸುವುದು ಮುಂತಾದ ಭಯಂಕರ ಪದ್ಧತಿಗಳು ತಲೆತಲಾಂತರಗಳಿಂದ ಬಂದು ಬಿಟ್ಟಿದ್ದವು. ಕೋಯರು ಸಾರಾಯಿಯ ಗುಲಾಮರಾಗಿದ್ದರು. ಅವರು ದುಡಿದು ಗಳಿಸಿದ್ದನ್ನೆಲ್ಲ ಸಾರಾಯಿಗಾಗಿ ಖರ್ಚು ಮಾಡುತ್ತಿದ್ದರು. ಪರಿಣಾಮವಾಗಿ ಮನೆಯಲ್ಲಿ ಹೆಂಡತಿ, ಮಕ್ಕಳು ಉಪವಾಸ ಇರಬೇಕಾಗುತ್ತಿತ್ತು. ರಾಜು ಸರಳವಾದ, ಮಧುರವಾದ ಮಾತುಗಳಿಂದ ಅವರ ಎಲ್ಲ ಕೆಟ್ಟ ಗುಣಗಳನ್ನು ಹೋಗಲಾಡಿಸಿದ.

ಸಾರಾಯಿ ಬಿಟ್ಟವರಲ್ಲಿ ಗಾಮು ಮಲ್ಲುದೊರೆ ಎಂಬವನೊಬ್ಬ. ಅವನಿಗೊಬ್ಬ ಅಣ್ಣ. ಹೆಸರು ಗಾಮು ಗಂಟಂದೊರ. ಮನ್ಯಂ ಪ್ರದೇಶದ ಒಂದು ಹಳ್ಳಿಯ ಪಟೇಲ ಗಂಟಂದೊರ. ತನ್ನ ತಮ್ಮನಲ್ಲಾದ ಮಾರ್ಪಾಡು ನೋಡಿ ಅಚ್ಚರಿಗೊಂಡ ಗಂಟಂದೊರ ರಾಜುವಿನ ದರ್ಶನಕ್ಕಾಗಿ ಬಂದ, ಪ್ರಭಾವಿತನಾದ. ಅಣ್ಣ-ತಮ್ಮಂದಿರಿಬ್ಬರೂ ರಾಜುವಿನ ಪರಮಶಿಷ್ಯರಾಗಿಬಿಟ್ಟರು.

ಈಗಂತೂ ರಾಜುವಿನ ಮಾತಿಗೆ ಮಾಂತ್ರಿಕ ಶಕ್ತಿ ಬಂದಂತಾಗಿತ್ತು. ಬರಬರುತ್ತಾ ಅವನು ಕೋಯರ ಪಾಲಿಗೆ ಸಾಕ್ಷಾತ್‌ಭದ್ರಾದ್ರಿ ಶ್ರೀರಾಮದೇವರೇ ಆಗಿಬಿಟ್ಟ.

ಒಂದೇ ದಾರಿ

ಆಗ ಮನ್ಯಂ ಪ್ರದೇಶಕ್ಕೆ ಬ್ಯಾಸ್ಟಿಯನ್‌ಎಂಬುವನು ತಹಸೀಲುದಾರ. ಮೊದಲೇ ದುರಭ್ಯಾಸಗಳು. ಕೋಯರನ್ನು ಪೀಡಿಸುವುದೆಂದರೆ ಅವನಿಗೆ ಜೇನು ಸವಿದಂತೆ!

ಅಂದಿನ ಆಂಗ್ಲರ ಸರ್ಕಾರ ನರಸೀಪಟ್ಟಣದಿಂದ ಮನ್ಯಂ ಗುಡ್ಡಗಳ ಇನ್ನೊಂದು ಬದಿಯಲ್ಲಿದ್ದ ಚಿಂತಪಲ್ಲಿಗೆ ರಸ್ತೆ ನಿರ್ಮಿಸಬೇಕೆಂದು ನಿಶ್ಚಯಿಸಿತು. ದಟ್ಟವಾದ ಆ ಕಾಡಿನಲ್ಲಿ ಆಕಾಶದೆತ್ತರದ ಮರಗಳನ್ನು ಕಡಿದು ಉರುಳಿಸಿ, ಗುಡ್ಡಗಳನ್ನು ಅಗೆದು, ಬಂಡೆಗಳನ್ನು ಒಡೆದು ದಾರಿ ನಿರ್ಮಿಸುವುದು ಬಹಳ ಕಠಿಣವಾದ ಕೆಲಸ.

ರಸ್ತೆ ನಿರ್ಮಾಣದ ಕೆಲಸಕ್ಕೆ ಕೂಲಿಗಳನ್ನು ಹುಡುಕಲು ಬ್ಯಾಸ್ಟಿಯನ್‌ಆರಂಭಿಸಿದ. ಆರು ಆಣೆ ದಿನಗೂಲಿ ಕೊಡುವುದಾಗಿ ಆಸೆ ತೋರಿಸಿದ. ಹೊಟ್ಟೆ-ಬಟ್ಟೆಗಿಲ್ಲದೆ, ಬಡತನದ ಬೇಗೆಯಲ್ಲಿ ನರಳುತ್ತಿದ್ದ ಕೋಯ ಗಂಡಸರು, ಹೆಂಗಸರು ನಾಮುಂದು, ತಾಮುಂದು ಎಂದು ಕೂಲಿ ಕೆಲಸ ಮಾಡಲು ಸಿದ್ಧರಾದರು. ರಾಜುವಿನ ಬಳಿಗೆ ಬಂದು ಅವನಿಗೆ ಹೇಳಿ ಕೆಲಸಕ್ಕೆ ಹೊರಟರು.

ಕೆಲಸ ಆರಂಭವಾಯಿತು. ಸಾವಿರಾರು ಕೋಯರು ಮೈಮುರಿದು, ಬೆವರು ಸುರಿಸಿ ದುಡಿಯಲಾರಂಭಿಸಿದರು. ಆದರೆ ದಿನಗೂಲಿ ಕೊಡಬೇಕಾಗಿ ಬಂದಾಗ ಬ್ಯಾಸ್ಟಿಯನ್‌ತಾನು ಮಾತು ಕೊಟ್ಟಿದ್ದಂತೆ ಆರು ಆಣೆಗೆ ಬದಲಾಗಿ ಕೇವಲ ಎರಡೇ ಆಣೆ ಕೊಟ್ಟ. ಅಮಾಯಕರಾದ ಕೋಯರು ಏನೂ ಅರಿಯದೆ ಅಷ್ಟನ್ನೇ ಸ್ವೀಕರಿಸಿದರು. ಬ್ಯಾಸ್ಟಿಯನ್‌ಕಿರಾತಕನಂತೆ ನಡೆದುಕೊಳ್ಳುತ್ತಿದ್ದ. ಅವನು ತನ್ನ ನೌಕರರ ಸಹಾಯದಿಂದ ಚರ್ಮದ ಚಾಟಿಗಳಿಂದ ಕೋಯ ಜನರನ್ನು ರಪರಪನೆ ಹೊಡೆಯುತ್ತಿದ್ದ. ಚರ್ಮ ಸೀಳಿದ ಕಡೆ ಮೆಣಸಿನಪುಡಿ ಮೆತ್ತುತ್ತಿದ್ದ!

ಕೋಯರು ಕೆಲಸ ಮುಗಿಸಿ ಪ್ರತಿದಿನ ರಾಜುವಿನ ಬಳಿಗೆ ಬರುತ್ತಿದ್ದರು. ತಮ್ಮ ಗೋಳಿನ ಕಥೆಯನ್ನು ಹೇಳುತ್ತಾ ಅಳುತ್ತಾ ದುಃಖವನ್ನು ತೋಡಿಕೊಳ್ಳುತ್ತಿದ್ದರು. ರಾಜು ಎಲ್ಲವನ್ನು ಶಾಂತವಾಗಿ ಆಲಿಸುತ್ತಿದ್ದ. ದೀರ್ಘ ಚಿಂತನೆಯಲ್ಲಿ ತೊಡಗುತ್ತಿದ್ದ. ಅವನ ಹೃದಯದಲ್ಲಿ ಕೋಪ ಭುಗಿಲ್‌ಭುಗಿಲೆಂದು ಉರಿದೇಳುತ್ತಿತ್ತು. ಆದರೂ ಸರಿಯಾದ ಸಮಯ ಬರಲೆಂದು ಕಾಯುತ್ತಾ ತನ್ನನ್ನು ತಾನೇ ಹಿಡಿತದಲ್ಲಿಟ್ಟುಕೊಂಡಿದ್ದ.

ರಾಜು ಆ ವೇಳೆಗೆ ತನ್ನ ನಿವಾಸವನ್ನು ಬದಲಾಯಿಸಿದ್ದ. ಕೋಯ ಜನರು ಆತ್ಮೀಯ ಬಲವಂತಕ್ಕೆ ಒಳಗಾಗಿ ಅವನು ಅವರ ಪ್ರದೇಶವಾದ ಧಾರ್ ಗುಡ್ಡಗಳಲ್ಲಿ ಅವರೇ ನಿರ್ಮಿಸಿಕೊಟ್ಟ ಆಶ್ರಮದಲ್ಲಿ ವಾಸಿಸಲಾರಂಭಿಸಿದ್ದ. ಒಂದು ದಿನ ಗಾಮು ಗಂಟಂದೊರ ಮತ್ತು ಮಲ್ಲುದೊರೆ ಅವನ ಬಳಿಗೆ ಓಡಿಬಂದರು. ಯಾವುದೋ ಕಳ್ಳನೆವದಿಂದ ಬ್ಯಾಸ್ಟಿಯನ್‌ಗಂಟಂದೊರಯನ್ನು ಪಟೇಲರ ಕೆಲಸದಿಂದ ಕಿತ್ತುಹಾಕಿ, ಅವನ ಸ್ವಲ್ಪ ಜಮೀನನ್ನೂ ಕಸಿದುಕೊಂಡು ಬಿಟ್ಟಿದ್ದ. ಅವರು ರಾಜುವಿಗೆ ಇದೆಲ್ಲವನ್ನು ತಿಳಿಸಿದರು. ರಾಜು ಸ್ವಲ್ಪ ಕಾಲ ಕಣ್ಣುಮುಚ್ಚಿ ಚಿಂತಿಸಿ ಮೆಲುದನಿಯಲ್ಲಿ ಹೇಳಿದ: “ಗುಲಾಮ ದೇಶದ ಜನರ ಜೀವನವೇ ಹೀಗೆ. ಇದಕ್ಕೆ ಒಂದೇ ದಾರಿ. ದಬ್ಬಾಳಿಕೆಗಾರರಾದ ಆಂಗ್ಲರನ್ನು ಹೊಡೆದಟ್ಟಬೇಕು. ಸ್ವತಂತ್ರ ಭಾರತವನ್ನು ನಿರ್ಮಿಸಬೇಕು.” ಗಾಮು ಸೋದರರಿಗೆ ಇದು ಚೆನ್ನಾಗಿ ಮನಸ್ಸಿಗೆ ಹಿಡಿಸಿತು. ಸ್ವಾತಂತ್ರ್ಯಗಳಿಸುವುದಕ್ಕಾಗಿ ರಾಜು ಏನು ಹೇಳಿದರೂ ಅದನ್ನು ಮಾಡಲು ತಾವು ಸಿದ್ಧರೆಂದರು.

ಕಾದಿರಿಸಿದ ಕಾಡುಗಳನ್ನು ಕಡಿಯಿರಿ!”

ಆ ದಿನಗಳಲ್ಲಿ ಇಡೀ ಭಾರತದಲ್ಲಿ ಸ್ವಾತಂತ್ರ್ಯದ ಆಂದೋಲನದ ಬಿರುಸಿನಿಂದ ಸಾಗಿತ್ತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಅಸಹಕಾರ ಚಳವಳಿ ದಿಕ್ಕುದಿಕ್ಕಿನಲ್ಲಿ ವ್ಯಾಪಿಸಿತ್ತು. ಅದೇ ಸೂಕ್ತ ಕಾಲವೆಂದು ರಾಜು ಕೋಯರ ಮನಸ್ಸನ್ನು ಸಿದ್ಧಗೊಳಿಸಲಾರಂಭಿಸಿದ. ಅವರಲ್ಲಿ ದೇಶಭಕ್ತಿಯನ್ನು ಉಕ್ಕಿಸಿದ. ದೇಶಕ್ಕಾಗಿ ಮಡಿಯಲು ಕೂಡ ಹಿಂಜರಿಯದಂಥ ಗಂಡೆದೆಯ ಕೋಯ ತರುಣರ ಒಂದು ದಂಡು ಸಿದ್ಧವಾಯಿತು.

ಗಂಟಂದೊರ ಅದಕ್ಕೆ ಸೇನಾನಿ: ಉಪಸೇನಾನಿ ಅವನ ತಮ್ಮ ಮಲ್ಲುದೊರ. ರಾಜು ತನ್ನ ದಂಡಿಗೆ ಹೋರಾಟದ ಆದೇಶ ನೀಡಿದ; ರಣಕಹಳೆ ಮೊಳಗಿಸಿದ; “ಅಸಹಕಾರಿ ಚಳುವಳಿಯನ್ನು ಪ್ರಾರಂಭಿಸೋಣ. ಮೊದಲ ಹೆಜ್ಜೆಯಾಗಿ ಸರ್ಕಾರ ಕಾದಿರಿಸಿದ ಕಾಡುಗಳೊಳಕ್ಕೆ ನುಗ್ಗೋಣ. ಅಲ್ಲಿನ ಮರಮಟ್ಟಗಳನ್ನು ಕಡಿದುರುಳಿಸೋಣ. ಇಲ್ಲಿನ ಮಣ್ಣು, ಮರ, ನೀರು ಎಲ್ಲವೂ ನಮ್ಮದೆಂದು ತೋರಿಸಿಕೊಡೋಣ.” ಅದರಂತೆ ಕೋಯದಂಡು ಶಾಸನೋಲ್ಲಂಘನೆ ಮಾಡಿತು. ಪೊಲೀಸರೊಂದಿಗೆ ಘರ್ಷಣೆಯಾಯಿತು.

ಕೋಯರು ತಮ್ಮ ವ್ಯಾಜ್ಯಗಳನ್ನು ಇತ್ಯರ್ಥ ಮಾಡಲು ತಹಸೀಲದಾರನ ಬಳಿಗೆ ಹೋಗಕೂಡದೆಂದೂ ಸ್ವತಂತ್ರ ಪಂಚಾಯಿತಿಗಳನ್ನು ಸ್ಥಾಪಿಸಬೇಕೆಂದೂ ಸೂಚಿಸಿದ ಕೂಡಲೇ ಅದು ಜಾರಿಗೆ ಬಂದಿತು. ಸರ್ಕಾರಿ ಅಧಿಕಾರಿಗಳ ಜಮಾಬಂದಿಗಾಗಿ ಒಂದು ಕಾಸೂ ಕೊಡಬಾರದೆಂದು ಹೇಳಿದ. ಸರ್ಕಾರಿ ವಸೂಲಿಗಾರರು ಬರಿಗೈಯಲ್ಲಿ ಹೋಗಬೇಕಾಯಿತು.

ಬಂಧನ-ಬಿಡುಗಡೆ

ಮನ್ಯಂನ ಅಜ್ಞಾನಿ ಕೋಯರ ಈ ದಿಟ್ಟ ಚಟುವಟಿಕೆಗಳನ್ನು ನೋಡಿ ತಹಸೀಲುದಾರ ಬ್ಯಾಸ್ಟಿಯನ್‌ಗೆ ಕೋಪ ನೆತ್ತಿಗೇರಿತು. ಇದಕ್ಕೆ ಕಾರಣಪುರುಷ ಆ ಸನ್ಯಾಸಿ ಅಲ್ಲೂರಿ ಸೀತರಾಮರಾಜು ಎಂಬುದೂ ಗೊತ್ತಾಯಿತು. ಅವನು ದೊಡ್ಡ ಪೊಲೀಸು ಪಡೆಯೊಂದಿಗೆ ಹೋಗಿ ರಾಜುವನ್ನು ಬಂಧಿಸಿ ನರಸೀಪಟ್ಟಣಕ್ಕೆ ಕರೆದೊಯ್ದು ಸೆರೆಮನೆಯಲ್ಲಿಟ್ಟ. ಇಡೀ ಆಂಧ್ರದಲ್ಲಿ ಜನರ ಕುತೂಹಲ ಕೆರಳಿತು.

"ನನ್ನ ತಾಯಿ ಭಾರತೀದೇವಿ ಬಂಜೆಯಲ್ಲ."

ರಾಜುವಿನ ಬಂಧನದಿಂದ ಇಡೀ ಕೋಯ ಜನಾಂಗ ಆಕ್ರೋಶದಿಂದ ಪುಟಿದೆದ್ದಿತು. “ನಮ್ಮ ಸ್ವಾಮಿಯನ್ನು ಬಂಧಿಸಿರುವ ಪೊಲೀಸರಿಗೆ ಸರಿಯಾಗಿ ಬಿಸಿ ತಟ್ಟಿಸಬೇಕು” ಎಂದು ಪ್ರತಿಜ್ಞೆ ಕೈಗೊಂಡಿತು.

ಗಂಟಂದೊರಯ ನಾಯಕತ್ವದಲ್ಲಿ ದಂಡ ಹೊರಟಿತು. ಹೆಂಗಸರು, ಮಕ್ಕಳು, ಮುದುಕರು ಎಲ್ಲರೂ ತಂತಮ್ಮ ಗುಡಿಸಲುಗಳಿಂದ ಹೊರಬಂದು ಪ್ರವಾಹದಂತೆ ಹರಿದುಹೋಗುತ್ತಿದ್ದ ದಂಡಿನಲ್ಲಿ ಸೇರಿಕೊಂಡರು. ಅವರ ಕೈಗಳಲ್ಲಿ ಬಿಲ್ಲು-ಬಾಣ, ಗಂಡುಗೊಡಲಿ, ಭಾಲೆ ಮತ್ತು ಬಲವಾದ ಕೋಲುಗಳು ವಿಜೃಂಭಿಸುತ್ತಿದ್ದವು. ದಂಡು ನರಸೀಪಟ್ಟಣದ ಬಳಿಯ ಕಾಡುಪ್ರದೇಶದಲ್ಲಿ ಅಡಗಿ ಕುಳಿತಿತು. ಸೂಕ್ತ ಅವಕಾಶಕ್ಕಾಗಿ ಕಾಯುತ್ತಿತ್ತು. ಅಷ್ಟರಲ್ಲಿ, ರಾಜುವಿನ ಮೇಲೆ ಆಪಾದನೆ ಹೊರಿಸಲು ಪುರಾವೆಗಳು ಸಿಗದ ಪೊಲೀಸರು ಹಠಾತ್ತಾಗಿ ಅವನನ್ನು ಬಿಡುಗಡೆ ಮಾಡಿದರು.

ದುರದೃಷ್ಟವಶಾತ್‌, ಬಿರುಸಿನಿಂದ ನಡೆಯುತ್ತಿದ್ದ ಅಸಹಕಾರ ಚಳವಳಿಯನ್ನು ಮಹಾತ್ಮಾಗಾಂಧೀಜಿಯವರು ನಿಲ್ಲಿಸಿಬಿಟ್ಟರು. ರಾಜುವಿಗೆ ಬಹಳ ನೋವಾಯಿತು. ಆದರೆ ಅವನು ಮಾತ್ರ ಹೋರಾಟ ನಿಲ್ಲಿಸಲು ಸಿದ್ಧನಾಗಲಿಲ್ಲ. ಮತ್ತಷ್ಟು ಕೆಚ್ಚಿನಿಂದ, ರೊಚ್ಚಿನಿಂದ ಹೋರಾಡಲು ನಿರ್ಧರಿಸಿದ. ಅವನ ಸಿದ್ಧತೆಗಳು ತೀವ್ರವಾದವು. ಧಾರ್ ಗುಡ್ಡಗಳ ಗುಪ್ತಕಣಿವೆಗಳಲ್ಲಿ ರಾಜುವಿನ ದಂಡಿಗೆ ಶಿಸ್ತುಬದ್ಧ ಶಿಕ್ಷಣ ಶುರುವಾಯಿತು. “ಗೆರಲ್ಲಾ ಯುದ್ಧ ತಂತ್ರವನ್ನು ಬಳಸಿಕೊಂಡು ಆಂಗ್ಲರಿಗೆ ಚೆಳ್ಳೆಹಣ್ಣು ತಿನ್ನಿಸಲು ನಿರ್ಧರಿಸಿದರು.

ಶತ್ರುಗಳಿಂದಲೇ ಆಯುಧ

ರಾಜುವಿನ ಸೈನ್ಯದಲ್ಲಿ ಇದ್ದಿದ್ದು ಕೇವಲ ಬಿಲ್ಲುಬಾಣ ಇಂತಹ ಆಯುಧಗಳು. ಕೋಯರು ಬಿಲ್ಗಾರಿಕೆಯಲ್ಲಿ ಅದೆಷ್ಟು ಗಟ್ಟಿಗರಾಗಿದ್ದರೂ ಪೊಲೀಸರ ಬೆಂಕಿ ಉಗುಳುವ ಬಂದೂಕು, ತುಪಾಕಿಗಳ ಮುಂದೆ ಪಾಪ, ಅವರೆಷ್ಟರವರು? ಈಗ ಅವರಿಗೆ ಬಂದೂಕುಗಳು ಬೇಕಿತ್ತು. ಆದರೆ ಎಲ್ಲಿಂದ ಸಂಗ್ರಹಿಸುವುದು? ಪೊಲೀಸು ಠಾಣೆಗಳ ಮೇಲೆ ದಾಳಿ ಮಾಡಿ ಶಸ್ತ್ರಗಳನ್ನು ಹೊತ್ತು ತರುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯೆ ಉಳಿದಿರಲಿಲ್ಲ. ಆ ಕೆಲಸಕ್ಕಾಗಿ ರಾಜುವಿನ ಸೈನ್ಯ ತಯಾರಾಯಿತು.

ಅಂದು ಆಗಸ್ಟ್‌೧೯೨೨ರ ೨೨ನೇ ದಿನಾಂಕ. ರಾಜುವಿನ ಸೈನ್ಯ ಚಿಂತದಲ್ಲಿ ಪೊಲೀಸು ಠಾಣೆಯನ್ನು ಮುತ್ತಿತ್ತು. ಕಾಷಾಯ ವಸ್ತ್ರಧಾರಿ ರಾಜುವೇ ಸ್ವತಃ ಬಿರುಗಾಳಿಯಂತೆ ಠಾಣೆಯೊಳಕ್ಕೆ ನುಗ್ಗಿದ. ಪೊಲೀಸರು ಬೆವತು ಶರಣಾಗತರಾದರು. ರಾಜು ಹಿಂದುರುಗುವಾಗ ಅವನಿಗೆ ೧೧ ಬಂದೂಕುಗಳು, ೧೩೯೦ ಸುತ್ತು ಗುಂಡುಗಳು, ೫ ಕತ್ತಿಗಳು, ೧೪ ಬಯೋನೆಟ್ಟುಗಳು ಸಿಕ್ಕಿದವು.

ಮರುದಿನ ಮುನ್ಸೂಚನೆ ಕಳುಹಿಸಿ, ಕೃಷ್ಣಾದೇವಿ ಪೇಟೆಯ ಠಾಣೆಯ ಮೇಲೆ ಎರಗಿದ ರಾಜು. ಅವನು ಅಲ್ಲಿಗೆ ಹೋಗುವ ಮೊದಲೇ, ಠಾಣೆಯನ್ನು ಇದ್ದಹಾಗೆಯೇ ಬಿಟ್ಟುಕೊಟ್ಟು ಪರಾರಿಯಾಗಿದ್ದರು. ಪೊಲೀಸರು! ಅಲ್ಲಿಯೂ ಶಸ್ತ್ರಾಸ್ತ್ರಗಳು ದೊರೆತವು.

ಎಚ್ಚರಿಕೆ!”

ಆಗಸ್ಟ್‌೨೫ರಂದು ರಾಜವೊಮ್ಮಂಗಿ ಎಂಬ ಊರಿನ ಪೊಲೀಸ್‌ಸಬ್‌ಇನ್ಸ್‌ಪೆಕ್ಟರನ ಹೆಸರಿಗೆ ಒಂದು ಪತ್ರ ಬಂತು. ಅದರ ಒಕ್ಕಣೆ ಹೀಗಿತ್ತು:

“ದಿನಾಂಕ ೨೪-೮-೧೯೨೨ರಂದು ಹಾಡುಹಗಲಿನ ಸಮಯದಲ್ಲಿ ನಿಮ್ಮ ಠಾಣೆಯ ಮೇಲೆ ದಾಳಿ ಮಾಡಲಿದ್ದೇನೆ. ಎಚ್ಚರಿಕೆ! ಶಸ್ತ್ರಗಳನ್ನು ನಮಗೆ ಒಪ್ಪಿಸುವಿರೋ ಇಲ್ಲ ಹೋರಾಡುವಿರೋ ನಿರ್ಧರಿಸಿ! – ಅಲ್ಲೂರಿ ಸೀತಾರಾಮರಾಜು”

ಪತ್ರ ಪಡೆದ ಸಬ್‌ಇನ್ಸ್‌ಪೆಕ್ಟರ್ ಗಡಗಡ ನಡುಗಲಾರಂಭಿಸಿದ. ಅದೇ ಠಾಣೆಯಲ್ಲಿ ವೀರಯ್ಯದೊರರಲ್ಲಿ ಎಂಬ ಕ್ರಾಂತಿಕಾರಿಯೊಬ್ಬ ಬಂಧಿತನಾಗಿದ್ದ. ೧೯೧೮ರಲ್ಲಿ ನಡೆದ “ಲಾಗುರಾಯಿ ವಿಪ್ಲವ” ಎಂಬ ಕ್ರಾಂತಿಕಾರಿ ಹೋರಾಟಗಾರನವನು.

ಹೇಳಿದ ಸಮಯಕ್ಕೆ ಸರಿಯಾಗಿ “ವಂದೇ ಮಾತರಂ…” ಎಂದು ಘೋಷಿಸುತ್ತಾ ರಾಜುವಿನ ಸೈನ್ಯ ಬಂದೇ ಬಿಟ್ಟಿತು. ರಾಜು ಪೊಲೀಸರಿಂದ ಎಲ್ಲ ಶಸ್ತ್ರಗಳನ್ನು ಪಡೆದು, ಕಚೇರಿಯ ದಾಖಲೆ ಪುಸ್ತಕದಲ್ಲಿ ತಾನು ಅವನ್ನು ತೆಗೆದುಕೊಂಡಂತೆ ನಮೂದಿಸಿ ವೀರಯ್ಯನನ್ನು ಬಂಧವಿಮುಕ್ತಗೊಳಿಸಿದ. ಅಂದಿನಿಂದ ರಾಜುವಿನ ವಿಪ್ಲವ ಸೇನೆಗೆ ಸೇರಿದ ವೀರಯ್ಯದೊರ ಅದರ ಬಹುಮುಖ್ಯ ನಾಯಕನಾದ.

ರಾಜುವಿನ ಪ್ರಭುತ್ವ

“ಮೂರು ದಿನಗಳಲ್ಲಿ ಮೂರು ಪೊಲೀಸ್‌ಠಾಣೆಗಳನ್ನು ಮಟ್ಟಹಾಕಿದ ಮನ್ಯಂ ವಿಪ್ಲವ” ಎಂದು ಪತ್ರಿಕೆಗಳ ಮುಖಪುಟಗಳಲ್ಲಿ ಸುದ್ದಿ ಮುದ್ರಿತವಾಯಿತು.

ಸರ್ಕಾರವೂ ಒಂದು ಪ್ರಕಟಣೆ ಹೊರಡಿಸಿ ಹೀಗೆಂದಿತು: “ರಾಜವೊಮ್ಮಂಗಿ ಠಾಣೆಯ ಮೇಲೆ ದಾಳಿ ನಡೆಯಿತು. ೮ ಬಂದೂಕುಗಳು, ೮೨೫ ಸುತ್ತು ಗುಂಡುಗಳೂ ಮಾಯವಾಗಿವೆ.” ಈ ಪ್ರಕಟಣೆಯಿಂದ ಕ್ರಾಂತಿಗೆ ಮತ್ತಷ್ಟು ಪ್ರಚಾರ. ಅಸಹಕಾರಿ ಚಳವಳಿ ನಿಲ್ಲಿಸಿದ್ದರಿಂದ ಇಡೀ ದೇಶದಲ್ಲಿ ತಣ್ಣಗಾಗಿದ್ದ ವಾತಾವರಣದಲ್ಲಿ ಈ ಸುದ್ದಿ ಬಿಸಿ ಹುಟ್ಟಿಸಿತು!

ರಾಜು ತನ್ನ ಹೋರಾಟವನ್ನು ಸುತ್ತಮುತ್ತಲ ಪ್ರದೇಶಕ್ಕೂ ಹಬ್ಬಿಸಲು ಯೋಜನೆ ತಯಾರಿಸಿದ. ಸೈನಿಕ ಸಂಖ್ಯೆ ಹೆಚ್ಚಿಸಿದ. ಪ್ರಚಾರ, ಜನರ ಸಂಘಟನೆಗಳಿಗಾಗಿ ವ್ಯಕ್ತಿಗಳನ್ನು ನೇಮಿಸಿದ. ಪ್ರಜೆಗಳಲ್ಲಿ ತನ್ನ ಚಳವಳಿ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಿದ. ಬುದ್ಧಿವಂತ ಕೋಯ ಗಂಡು ಹೆಣ್ಣುಗಳನ್ನು ಆರಿಸಿಕೊಂಡು ಒಳ್ಳೆಯ ಗೂಢಚರ ದಳವನ್ನು ಕಟ್ಟಿದ. ಉತ್ತಮ ಸುದ್ದಿವಾಹಕರನ್ನು ತರಬೇತುಗೊಳಿಸಿದ. ಮನ್ಯಂ ಗುಡ್ಡಗಳ ನಡುವೆ ಒಂದು ರೀತಿಯಲ್ಲಿ ಇವನದೇ ಪ್ರಭುತ್ವ ಅಸ್ತಿತ್ವಕ್ಕೆ ಬಂದಿತು.

ಹೊಡೆತಗಳ ಮೇಲೆ ಹೊಡೆತಗಳು

ಆಂಗ್ಲ ಸರ್ಕಾರ ರಾಜುವಿನ ಹುಟ್ಟಡಗಿಸಲು ನಿರ್ಧಾರ ಮಾಡಿತ್ತು. ನರಸೀಪಟ್ಟಣ, ಅಡ್ಡರೇಗಲ ಕೃಷ್ಣಾದೇವಿ ಪೇಟ ಮತ್ತು ಚಿಂತಪಲ್ಲಿಗಳಲ್ಲಿ ವಿಶೇಷ ಅಧಿಕಾರಿಗಳನ್ನು ನೇಮಿಸಿತು. ಹೇಗಾದರೂ ಮನ್ಯಂ ವಿಪ್ಲವವನ್ನು ಮುರಿದುಹಾಕುವಂತೆ ಅವರುಗಳಿಗೆ ಸೂಚನೆ ಇತ್ತು.

ಇಷ್ಟಾದರೂ ರಾಜುವಿನ ದಾಳಿಗಳು ನಡೆಯುತ್ತಲೇ ಇದ್ದವು; ಒಂದರಮೇಲೊಂದು ಪೆಟ್ಟುಗಳನ್ನು ಹಾಕುತ್ತಲೇ ಇದ್ದ. ೧೯೨೨ರ ಸೆಪ್ಟೆಂಬರ್ ೩ರಂದು ಒಂಗೇರಿ ಘಟ್ಟಗಳಲ್ಲಿ ರಾಜುವಿನ ಸೈನ್ಯ ಸರ್ಕಾರೀ ಸೈನ್ಯಕ್ಕೆ ಕೊಟ್ಟ ಪೆಟ್ಟು ಚೇತರಿಸಿಕೊಳ್ಳಲಾರದಂತಿತ್ತು. ಅದೇ ದಿನ ನಡೆದ ಇನ್ನೊಂದು ಹೋರಾಟದಲ್ಲಿ ಆಂಗ್ಲ ಸೈನ್ಯಾಧಿಕಾರಿ ಟ್ರೆಮನ್‌ಹಿಯರ್ ತೀವ್ರ ಪೆಟ್ಟು ತಿಂದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ.

ಇನ್ನೊಮ್ಮೆ ರಾಜುವಿನ ಸೈನ್ಯ ದಾಮನಪಲ್ಲಿ ಘಟ್ಟಗಳಲ್ಲಿ ತಂಗಿತ್ತು. ಸುದ್ದಿ ತಿಳಿದ ಆಂಗ್ಲ ಸೈನ್ಯ ಅಲ್ಲಿಗೆ ಬಂತು. ರಾಜುವಿನ ಸೈನಿಕರು ಅವಿತುಕೊಂಡರು. ಕೊನೆಗೆ ಆಂಗ್ಲ ಸೈನ್ಯ ಹಿಂದಿರುಗಲಾರಂಭಿಸಿತು. ಕೂಡಲೇ ರಾಜುವಿನ ಸೈನ್ಯ ಅದರ ಮೇಲೆರಗಿತು. ಆಂಗ್ಲ ಸೈನ್ಯ ಹಣ್ಣುಗಾಯಿ ನೀರುಗಾಯಿಯಾಯಿತು. ಅರೇಬಿಯಾದಲ್ಲಿ ಪ್ರಚಂಡ ಪರಾಕ್ರಮ ತೋರಿಸಿ ಖ್ಯಾತರಾಗಿದ್ದ ರಾಯ್‌ಟರ್ ಮತ್ತು ಕವರ್ಡ್‌ಎಂಬಿಬ್ಬರು “ರೆಜಿಮೆಂಟ್‌ಅಧಿಕಾರಿ”ಗಳ ಹೆಣಗಳುರುಳಿದವು. ಪೊಲೀಸರು ರಾಜು ಹೇಳಿದಷ್ಟು ಶುಲ್ಕ ಕೊಟ್ಟು ಆ ಹೆಣಗಳನ್ನು ಪಡೆದುಕೊಳ್ಳಬೇಕಾಯಿತು! ಜೊತೆಗೆ ನಾಲ್ವರು ಇತರ ಪೊಲೀಸರೂ ಸತ್ತರು. ಸಾಕಷ್ಟು ಬಂದೂಕುಗಳು, ಮದ್ದುಗುಂಡುಗಳು ದೊರೆತವು.

ಮತ್ತೆ ಸಜ್ಜಿತವಾಗಿ ಬಂದ ಆಂಗ್ಲ ಸೈನ್ಯ ಭಾರಿ ಭಾರಿ ಫಿರಂಗಿಗಳನ್ನು ತಳ್ಳಿಕೊಂಡು ಬಂತು. ಆದರೆ ಎಲ್ಲೆಲ್ಲಿಂದಲೋ ಮಿಂಚಿನಂತೆ ಬಂದು ಹೊಡೆತಗಳನ್ನು ಕೊಡುತ್ತಿದ್ದ ರಾಜುವಿನ ಸೈನಿಕರ ಚುರುಕು ಆಕ್ರಮಣಕ್ಕೆ ಅಂದು ಬಳಲಿಹೋಯಿತು. ಈ ಹೋರಾಟವನ್ನು ಕುರಿತು ಕಮೀಷನರ್ ಹೀಗೆ ವರದಿ ಬರೆದಿದ್ದಾನೆ: “ರಾಜುವಿನ ಬಳಿ ನಮಗಿಂತಲೂ ಉತ್ತಮ ಗೂಢಚರರಿದ್ದರು. ಅವರು ಬಳಸಿದ ಕಣ್ಣುಮುಚ್ಚಾಲೆ ತಂತ್ರ ಅವರಿಗೆ ಬಹಳ ಉಪಯೋಗಕಾರಿಯಾಗಿತ್ತು. ರಾಜುವಿನ ಯುದ್ಧತಂತ್ರ ನಮ್ಮ ತಂತ್ರಕ್ಕಿಂತಲೂ ಬಹಳ ಮೇಲುಮಟ್ಟದ್ದು.” ಕಲೆಕ್ಟರ್ ಬ್ರೇಕನ್ನನಿಗೆ ರಾತ್ರಿ ನಿದ್ರೆ ಹತ್ತುತ್ತಿರಲಿಲ್ಲ. ಹಗಲು ಊಟ, ತಿಂಡಿ ಸೇರುತ್ತಿರಲಿಲ್ಲ. ರಾಜುವಿನ ಚಿತ್ರವೇ ಸದಾ ಅವನನ್ನು ಕಾಡುತ್ತಿತ್ತು.

ಸೆಪ್ಟೆಂಬರ್ ೨೯ ಮತ್ತು ೩೦ ರಂದು ರಾಜು ತೂರಮಾಮಿಡಿ ಮತ್ತು ಲಕ್ಕವರಪುಪೇಟೆ ಎಂಬ ಊರುಗಳ ಮೇಲೆ ದಾಳಿ ಮಾಡಿದ.

ಅಕ್ಟೋಬರ್ ೧೨ರಂದು ರಾಜುವಿನ ಸೈನ್ಯ ರಂಪ ಚೋಡವರಂ ಮತ್ತು ಅಡ್ಡತೀಗಲ ಎಂಬ ಎರಡು ಪೊಲೀಸ್‌ಠಾಣೆಗಳ ಮೇಲೆ ಒಂದೇ ಕಾಲದಲ್ಲಿ ದಾಳಿ ಮಾಡಿತು. ಪೊಲೀಸರು ಹೆದರಿ ಓಡಿಬಿಟ್ಟರು. ರಂಪ ಚೋಡವರಂ ತಹಸೀಲುದಾರನನ್ನು ರಾಜು ತನ್ನ ಬಳಿಗೆ ಕರೆಸಿಕೊಂಡು ಹೇಳಿದ: “ನನಗೆ ಕೇವಲ ಐರೋಪ್ಯರನ್ನೇ ಕೊಲ್ಲಬೇಕಿನಿಸಿದರೂ ಹಾಗೆ ಮಾಡುವುದು ಕಷ್ಟ. ಕಾರಣ ಯಾವಾಗಲೂ ಭಾರತೀಯ ಸೈನಿಕರ ನಡುವೆಯೇ ಅವರು ಅವಿತುಕೊಂಡಿರುತ್ತಾರೆ. ಆಕಸ್ಮಿಕವಾಗಿಯಾದರು ಭಾರತೀಯ ಸೈನಿಕರು ಬಲಿಯಾಗುವುದು ನನಗಿಷ್ಟವಿಲ್ಲ.”!

ದಿಕ್ಕುಗೆಟ್ಟ ಇಂಗ್ಲಿಷರು

ರಾಜುವಿನ ಪ್ರಾಬಲ್ಯ ದಿನೇದಿನೇ ಹೆಚ್ಚುತ್ತಿತ್ತು. ಸರ್ಕಾರ ಕನಸಿನಲ್ಲು ಎಣಿಸದಷ್ಟು ಬೆಳೆಯಿತು.

ಪಂಜಾಬಿನ ಗದರ್ ಪಕ್ಷದ ಹಳೆಯ ಹುಲಿ ಪೃಥ್ವಿಸಿಂಹ ಆಜಾದ್‌ಎಂಬ ಮಹಾ ಕ್ರಾಂತಿಕಾರಿಯೊಬ್ಬನನ್ನು ಆಂಧ್ರದ ಜೈಲಿನಲ್ಲಿ ಬಂಧಿಸಲಾಗಿತ್ತು. ಮರಣದಂಡನೆ, ಕರಿನೀರು ಶಿಕ್ಷೆಗಳಿಗೆ ಈಡಾಗಿದ್ದವನವನು. ಅವನನ್ನು ಬಿಡಿಸಿಕೊಳ್ಳುವುದಾಗಿ ರಾಜು ಸರಕಾರಕ್ಕೆ ಸವಾಲೆಸೆದ. ಸರ್ಕಾರ ಹೆದರಿ ಕೂಡಲೇ ಅವನನ್ನು ಬೇರೆ ಜೈಲಿಗೆ ವರ್ಗಾಯಿಸಿತು.

ಇಷ್ಟು ದಿವಸ ದಿಗ್ವಿಜಯ ಗಳಿಸುತ್ತಿದ್ದ ರಾಜು ಡಿಸೆಂಬರ್ ೬ರಂದು ಪೆದ್ದಗಡ್ಡೆಪಾಲೆಂ ಎಂಬಲ್ಲಿ ನಡೆದ ಹೋರಾಟದಲ್ಲಿ ಮೊದಲ ಬಾರಿಗೆ ಸೋಲು ಅನುಭವಿಸಬೇಕಾಗಿ ಬಂತು! ರಾಜುವಿಗೂ ಗಾಯವಾಯಿತು. ಕೆಲವು ಶಸ್ತ್ರಗಳು ಪೊಲೀಸರಿಗೆ ಸಿಕ್ಕಿದವು.

ಜನರ ಆರಾಧ್ಯದೈವ ರಾಜು

ಪೊಲೀಸರು ರಾಜುವನ್ನು ಹಿಡಿಯಲು ಭೂಮಿ ಆಕಾಶಗಳನ್ನು ಒಂದು ಮಾಡಲಾರಂಭಿಸಿದರು. ರಾಜು ಮತ್ತು ಅವನ ಹಿಂಬಾಲಕರನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಕೊಡುವುದಾಗಿ ಘೋಷಿಸಿದರು. ರಾಜುವಿನ ತಲೆಗೆ ೧೫೦೦ ರೂಪಾಯಿಗಳು, ಗಂಟಂದೊರ, ಮಲ್ಲುದೊರೆ ಮತ್ತು ವೀರಯ್ಯನ ತಲೆಗಳಿಗೆ ೧೦೦೦ ರೂಪಾಯಿಗಳು ಮತ್ತು ಇತರ ಕ್ರಾಂತಿಕಾರಿಗಳ ತಲೆಗಳಿಗೆ ತಲಾ ೫೦ ರೂಪಾಯಿಗಳು ನೀಡುವುದಾಗಿ ಡಂಗುರ ಸಾರಿದರು. ರಾಜುವಿಗೆ ಸಹಕಾರ ನೀಡಿದ ಅನೇಕ ಗ್ರಾಮಗಳ ಮುಖ್ಯಸ್ಥರನ್ನು ಹಿಡಿದು ೧೯೨೩ರ ಫೆಬ್ರವರಿ ೪ ರಂದು ವಿಚಾರಣೆ ನಡೆಸಿದ ಕಲೆಕ್ಟರ್ ಬ್ರೇಕನ್. ೧೬ರಂದು ನಾಲ್ವರು ಕ್ರಾಂತಿಕಾರಿಗಳು ಬಂಧಿತರಾದರು. ಕೆಲಸಮಯ ರಾಜುವಿನ ವಿಷಯವಾಗಿ ಯಾವುದೇ ಸಮಾಚಾರವಿರಲಿಲ್ಲ. ರಾಜು ತಣ್ಣಗಾಗಿಹೋದನೆಂದು ಪೊಲೀಸರು ನಿರ್ಧಾರಕ್ಕೆ ಬಂದರು.

ಮತ್ತೆ ರಾಜು!

ಅಷ್ಟರಲ್ಲೇ ೧೯೨೩ರ ಏಪ್ರಿಲ್‌೧೮ರಂದು ರಾಜು ತನ್ನ ದಂಡಿನ ಸಹಿತನಾಗಿ ಅನ್ನವರಂ ಎಂಬ ಊರಿನಲ್ಲಿ ಹಠಾತ್ತನೆ ಪ್ರತ್ಯಕ್ಷನಾದ! ಅಲ್ಲಿನ ಪೊಲೀಸ್‌ಸಬ್‌ಇನ್ಸ್‌ಪೆಕ್ಟರ್, ಪೋಸ್ಟ್‌ಮಾಸ್ಟರು ಮುಂತಾದ ಸರ್ಕಾರಿ ಅಧಿಕಾರಿಗಳೇ ಅವನನ್ನು ತಮ್ಮ ಮನೆಗಳಿಗೆ ಕರೆದೊಯ್ದು ಪಾದಪೂಜೆ ಮಾಡಿದರು. ರಾಜುವಿನ ದರ್ಶನಕ್ಕಾಗಿ ಸಾವಿರಾರು ಜನರು ಅಲ್ಲಿ ಸೇರಿದರು. ಪತ್ರಿಕಾ ಪ್ರತಿನಿಧಿಗಳು ರಾಜುವಿನ ಸಂದರ್ಶನ ತೆಗೆದುಕೊಂಡರು. ಜನರು ಕ್ರಾಂತಿಗೆ ಬೆನ್ನೆಲುಬುಗಳಾಗಬೇಕೆಂದು ರಾಜು ಕರೆನೀಡಿದ. ಅಲ್ಲಿ ಖ್ಯಾತ ಕಾಂಗ್ರೆಸ್‌ಕಾರ್ಯಕರ್ತ ಪೆರಿಚೆರ್ಲ್ ಸೂರ್ಯನಾರಾಯಣರಾಜು ಎಂಬವನು ಅಂದಿನಿಂದ ರಾಜುವಿನ ಸೈನ್ಯದ ಒಬ್ಬ ನಾಯಕನಾದ. “ಅಗ್ನಿರಾಜು” ಎಂದು ಎಲ್ಲರೂ ಅವನನ್ನು ಕರೆಯಲಾರಂಭಿಸಿದರು.

ಆಗಿನಿಂದ ರಾಜು ಎಲ್ಲಿಗೆ ಹೋದರೆ ಅಲ್ಲಿ ಅವನಿಗೆ ಅಭೂತಪೂರ್ವ ಸ್ವಾಗತ! ಪಾದಪೂಜೆಗಳು! ದೇವಸ್ಥಾನದಲ್ಲಿ ವಿಶೇಷ ಪೂಜೆಗಳು! ಜಯಜಯಕಾರಗಳು ಅವನ ಹೋರಾಟಕ್ಕಾಗಿ ದವಸ, ಧಾನ್ಯ, ಹಣ ಇತ್ಯಾದಿಗಳ ಸಹಾಯ! ಸರ್ಕಾರಕ್ಕೆ ಈ ಎಲ್ಲ ವರದಿಗಳು ಮುಟ್ಟಿದವು. ಅದು ಶಂಖವರಂ ಗ್ರಾಮಸ್ಥರ ಮೇಲೆ ೪೦೦೦ ರೂಪಾಯಿಗಳ ಸಾಮೂಹಿಕ ತೆರಿಗೆ ಹೇರಿತು!

ಜೂನ್‌೬ರಂದು ರಾಜು ಕೊಂಡರಮೇಡು ಮತ್ತು ಮಲ್ಕನಗರಿ ಎಂಬ ಊರುಗಳನ್ನು ಪ್ರವೇಶಿಸಿದ. ರಾಜು ಆ ಊರಿನ ತಹಸೀಲದಾರನನ್ನು ಕರೆಸಿಕೊಂಡು ಧೈರ್ಯವಾಗಿ ತನ್ನ ಮುಂದಿನ ಯೋಜನೆಗಳನ್ನು ತಿಳಿಸಿದ.

ಹೀಗೆ ರಾಜುವಿಗೆ ವಿಜಯದ ಮೇಲೆ ವಿಜಯ ಸಿಕ್ಕುತ್ತಿದ್ದಾಗಲೇ ದುರದೃಷ್ಟವಶದಿಂದ ಸೆಪ್ಟೆಂಬರ್ ೧೭ರಂದು ರಾಜುವಿನ ಬಲಗೈ ಬಂಟ ಗ್ರಾಮ ಮಲ್ಲುದೊರ ಪೊಲೀಸರಿಗೆ ಸಿಕ್ಕಿಬಿದ್ದ. ರಾಜುವಿನ ಕೆಟ್ಟ ಕಾಲ ಆರಂಭವಾಯಿತು.

ಭಯಂಕರ ಹೋರಾಟ

ಮದರಾಸಿನಲ್ಲಿದ್ದ ಗವರ್ನರ್ ವೆಲ್ಲಿಂಗ್‌ಡನ್‌ಸರ್ಕಾರಿ ಸೈನ್ಯವನ್ನು ಮತ್ತಷ್ಟು ಬಲಪಡಿಸಿದ. ದಕ್ಷನೆಂದು ಹೆಸರುಗಳಿಸಿದ್ದ ಪಶ್ಚಿಮ ಗೋದಾವರಿಯ ಜಿಲ್ಲಾ ಕಲೆಕ್ಟರ್ ರುಥರ‍್ಫರ್ಡ್‌‌ನನ್ನು ವಿಶೇಷ ಅಧಿಕಾರಿಯನ್ನಾಗಿ ಮನ್ಯಂ ಪ್ರದೇಶಕ್ಕೆ ನಿಯುಕ್ತಿಮಾಡಿದ್ದ. ದೌರ್ಜನ್ಯ, ಅಮಾನುಷತೆಗಳಿಗೆ ಜಗದ್ವಿಖ್ಯಾತವಾಗಿದ್ದ ವಿಶೇಷ ಮಲಬಾರ್ ಪೊಲೀಸ್‌ಪಡೆ ಮತ್ತು ಅಸ್ಸಾಂ ರೈಫಲ್‌ದಳಗಳು ರೈಲಿನಲ್ಲಿ ಪ್ರಯಾಣ ಮಾಡಿ ನರಸೀಪಟ್ಟಣದಲ್ಲಿ ಇಳಿದವು. ಮೇಜರ್ ಗುಡಾಲ್ ಎಂಬ ನಿಷ್ಣಾತ, ಧೂರ್ತ ಸೈನ್ಯಾಧಿಕಾರಿಯೇ ಇದಕ್ಕೆ ಮುಖ್ಯಸ್ಥ. ಜೊತೆಯಲ್ಲಿ ಭಾರಿಭಾರಿ ಫಿರಂಗಿಗಳು ಬಂದಿದ್ದವು.

ಒಂದು ದಿನ ಫಿರಂಗಿಗಳ ಸಹಿತವಾಗಿ ಈ ಸೈನ್ಯ ರಾಜುವಿನ ಪ್ರದೇಶವನ್ನು ಮುತ್ತಿತು. ರಾಜುವಿನ ಸೈನ್ಯವೂ ಸಜ್ಜಾಯಿತು. ಕೆಲವೇ ಬಂದೂಕುಗಳು, ಬಿಲ್ಲುಬಾಣ, ಕತ್ತಿ, ಭಾಲೆಗಳೊಂದಿಗೆ ಕೋಯ ಸೈನಿಕರು ನಡುಕಟ್ಟಿದರು. ಕಷಾಯ ವಸ್ತ್ರಧಾರಿಯಾಗಿ ಹೊಳೆಯುತ್ತಿದ್ದ ಗಂಡುಗೊಡಲಿ, ಬಿಲ್ಲು-ಬಾಣಗಳು, ಬಂದೂಕುಗಳಿಂದ ಸಜ್ಜಿತನಾಗಿದ್ದ ತೇಜಃಪುಂಜ ಕ್ರಾಂತಿ ಸನ್ಯಾಸಿ ಅಲ್ಲೂರಿ ಸೀತಾರಾಮರಾಜುವೇ ಅದರ ನಾಯಕ! ಆಂಗ್ಲರ ಸೈನ್ಯ ಮತ್ತು ಕ್ರಾಂತಿ ಸೈನ್ಯದ ನಡುವೆ ಹೋರಾಟ ಪ್ರಾರಂಭವಾಯಿತು. ರಾಜು ತನ್ನ ಕುದುರೆಯ ಮೇಲೆ ಕುಳಿತು ಸೈನಿಕರಲ್ಲಿ ಸ್ಫೂರ್ತಿ ಚಿಮ್ಮಿಸುತ್ತಾ ಎಲ್ಲೆಲ್ಲೂ ತಾನೇತಾನಾಗಿ ಓಡಾಡಿದ. ಆಂಗ್ಲ ಸೈನ್ಯದ ದೈತ್ಯಾಕಾರದ ಫಿರಂಗಿಗಳು ಧಡಾಲ್‌ಎಂದು ಭಯಂಕರವಾಗಿ ಶಬ್ದ ಮಾಡುತ್ತಾ ಭಾರಿ ಭಾರಿ ಗುಂಡುಗಳ ಮಳೆಗೆರೆದವು. ಮನ್ಯಂ ಗುಡ್ಡಗಳು ಥರಥರಗುಟ್ಟಿದವು. ರಾಜುವಿನ ಸೈನಿಕರು ಹೆದರದೆ ತಮ್ಮ ಬಾಣಪ್ರಯೋಗದಲ್ಲಿ ತೊಡಗಿದರು. ಕೆಲವು ಫಿರಂಗಿಗಳನ್ನೇ ನಿಷ್ಟ್ರೀಯ ಮಾಡಿಬಿಟ್ಟರು. ಬೆಂಕಿ ಉಗುಳುವ ಫಿರಂಗಿಗಳೆಲ್ಲಿ? ಇವರ ಬಿಲ್ಲು – ಬಾಣಗಳೆಲ್ಲಿ? ಆದರೂ ರಾಜುವಿನ ಸೈನಿಕರಿಗೆ ರಾಜುವಿನಲ್ಲಿದ್ದ ಭಕ್ತಿ, ಶ್ರದ್ಧೆ, ಗೌರವಗಳು ಅಪಾರ ಶಕ್ತಿಯನ್ನು ನೀಡಿದ್ದವು. ಅವರು ಸಾಕಷ್ಟು ದೀರ್ಘಕಾಲ ಯುದ್ಧ ಮುಂದುವರಿಸಿದರು. ಶತ್ರು ಸೈನ್ಯಕ್ಕೆ ಅಪಾರ ನಷ್ಟವಾಯಿತು. ಕೊನೆಗೆ ಎಲ್ಲ ವೀರರೂ ಕೆಚ್ಚು, ಕಲಿತನಗಳಿಂದ ಹೋರಾಡುತ್ತಲೇ ಮಾತೃಭೂಮಿಯ ಬಿಡುಗಡೆಯ ಮಹಾ ಯಜ್ಞಕುಂಡದಲ್ಲಿ ತಮ್ಮ ಆಹುತಿ ನೀಡಿದರು! ಈ ಸುದ್ದಿ ಕೇಳಿ ರಾಜು ಅತೀವ ಯಾತನೆಗೆ ಒಳಗಾದ; ದುಃಖಸಾಗರದಲ್ಲಿ ಮುಳುಗಿದ.

ರಾಜು ದೀರ್ಘಕಾಲ ದೇವಿಯ ಪೂಜೆ ಮಾಡಿದ.

ರಾಕ್ಷಸೀ ವರ್ತನೆ

 

ಇತ್ತ ಆಂಗ್ಲ ಸೈನ್ಯದ ನಾಯಕರು ಮಲಬಾರ್ ಮತ್ತು ಅಸ್ಸಾಂ ಪೊಲೀಸು ಪಡೆಗಳಿಗೆ ಆಜ್ಞೆ ನೀಡಿ ಮನ್ಯಂ ಪ್ರದೇಶದ ಎಲ್ಲಾ ಹಳ್ಳಿಗಳಲ್ಲೂ ಅತ್ಯಾಚಾರ, ಬಲಾತ್ಕಾರ, ಹಿಂಸಾಕಾಂಡಗಳನ್ನು ಆರಂಭಿಸಿದರೆಂದರು.

ಇನ್ನೇನು ತಾನೆ ತಡೆ? ಆ ನರ ರಾಕ್ಷಸರ ಘೋರ ಕೃತ್ಯಗಳಿಗೆ ಕೊನೆ ಎಲ್ಲಿ, ಮೊದಲೆಲ್ಲ? ತಮ್ಮವರೇ ಆದ ಭಾರತೀಯ ಸೋದರ-ಸೋದರಿಯರ ಮೇಲೆ ಪುರಾಣ ಕಾಲದ ರಾಕ್ಷಸರನ್ನೂ ನಾಚಿಸುವಂತೆ ಎರಗಿದರು. ಮನ್ಯಂ ಪ್ರದೇಶಕ್ಕೆ ಯಾವುದೇ ಆಹಾರ ವಸ್ತುವೂ ಹೋಗದಂತೆ ತಡೆದುಬಿಟ್ಟರು. ಕೋಯ ಜನರೆಲ್ಲರೂ ದಾರುಣ ಹಸಿವಿಗೆ ಬಲಿಯಾಗಿ ಹಾಹಾಕಾರ ಮಾಡಲಾರಂಭಿಸಿದರು.

ಜೊತೆಗೆ ಅಗ್ನಿಕಾಂಡ! ಹೆಂಡ ಕುಡಿದ ಮಲಬಾರು ಪೊಲೀಸರು ಕೈಯಲ್ಲಿ ಪಂಜುಗಳನ್ನು ಹಿಡಿದು ಕಂಡ ಕಂಡ ಗುಡಿಸಲುಗಳಿಗೆ ಬೆಂಕಿ ಇಟ್ಟರು. ಕೋಯ ಸಂಸಾರಗಳು ಬೀದಿಗಳಿಗೆ ಬಂದವು. ಪೊಲೀಸರ ಲಾಠಿಗಳು ಆ ಜನಗಳ ಬೆನ್ನುಮೂಳೆ ಮುರಿದವು. ಮುದುಕರು, ಮಕ್ಕಳು ಬೆಂಕಿಗೆ ಬಲಿ! ಇಡೀ ಮನ್ಯಂ ಬೆಂಕಿಯಲ್ಲಿ ಬೆಂದು ಬೂದಿಯಾಯಿತು!

ಶತ್ರುಗಳ ಕೈಯಲ್ಲಿ

ಈಗ ರಾಜುವಿನ ದುಃಖ ನೂರ್ಮುಡಿಯಾಯಿತು. ಹೃದಯ ಮಮ್ಮಲ ಮರುಗಲಾರಂಭಿಸಿತು. ತನ್ನನ್ನು ಅಪದ್ಬಾಂಧವನೆಂದು, ಅಣ್ಣನೆಂದು, ಸಾಕ್ಷಾತ್ ಭದ್ರಾದ್ರಿ ರಾಮನೆಂದು ನಂಬಿ, ಭಜಿಸಿ ಪೂಜಿಸುತ್ತಿದ್ದ, ತನ್ನ ಪ್ರಾಣಕ್ಕೆ ಪ್ರಾಣರಾಗಿದ್ದ ಆ ಬಡ ಕೋಯ ಸೋದರ ಸೋದರಿಯರ ಆರ್ತನಾದ ಇವರ ಕರುಳನ್ನು ಹಿಂಡುತ್ತಿತ್ತು. ಹೇಗಾದರೂ ಈ ಧಾರುಣ ಹೋಮವನ್ನು ನಿಲ್ಲಿಸಬೇಕೆಂದು ಚಿಂತಿಸಲಾರಂಭಿಸಿದ.

ಅದೇ ವೇಳೆಗೆ ಕುಟಿಲ ಆಂಗ್ಲ ಸೈನ್ಯಾಧಿಕಾರಿಗಳು ಮೋಸದ ಬಲೆ ಬೀಸಲು ಸಿದ್ಧರಾದರು. ರಾಜುವಿಗೆ ಪರಿಚಯವಿದ್ದವನೊಬ್ಬನನ್ನು ಕರೆದು ರಾಜು ಸಂಧಿಗೆ ಬಂದರೆ ತಾವೂ ಸಂಧಿಗೆ ಸಿದ್ಧವೆಂದು ಅವನ ಮೂಲಕ ಸುದ್ದಿ ಕಳಿಸಿದರು!

ರಾಜುವಿನ ಸೈನ್ಯ ಛಿದ್ರಛಿದ್ರವಾಗಿತ್ತು; ಹೋರಾಡುವ ಸ್ಥಿತಿಯಲ್ಲಿರಲಿಲ್ಲ. ಹೇಗಾದರೂ, ತನ್ನ ಪ್ರಾಣ ಕೊಟ್ಟಾದರೂ ತನ್ನನ್ನು ನಂಬಿದವರನ್ನು ಅತ್ಯಾಚಾರದಿಂದ ಪಾರು ಮಾಡಬಯಸಿದ್ದ ರಾಜು ಸಂಧಿಗೆ ಸಿದ್ಧನಾದ. ಅಳಿದುಳಿದ ಕೋಯ ಜನರು ರಾಜು ಸಂಧಿಗೆ ಹೋಗಬಾರದೆಂದು ತಡೆದರೂ ಅವನು ಕೇಳಲಿಲ್ಲ.

ಅಂದು ೧೯೨೪ರ ಮೇ ತಿಂಗಳ ೬ನೇ ದಿನಾಂಕ. ನಸುಕಿನಲ್ಲಿ ಎದ್ದ ರಾಜು ಶುಚಿರ್ಭೂತನಾಗಿ ಕಾಳಿಕಾಲಯದಲ್ಲಿ ಪದ್ಮಾಸನ ಹಾಕಿ ಜಿಂಕೆಯ ಚರ್ಮದ ಮೇಲೆ ಕುಳಿತು ದೀರ್ಘಕಾಲ ದೇವಿಯ ಪೂಜೆ ಮಾಡಿದ. ತನ್ನ ಬಿಲ್ಲು-ಬಾಣ, ಬಂದೂಕುಗಳನ್ನು ಅಲ್ಲಿಯೇ ಬಿಟ್ಟು ಕೈಯಲ್ಲಿ ಒಂದು ಬೆತ್ತ ಹಿಡಿದು ಪಾದಚಾರಿಯಾಗಿ ಹೊರಟ. ತನ್ನ ನೆಚ್ಚಿನ ಮನ್ಯಂಗೆ ಕೊನೆಯ ನಮಸ್ಕಾರ ಸಲ್ಲಿಸಿ ಹೊರಟ! ಬೆಟ್ಟದಲ್ಲಿ ಹುಟ್ಟಿ ಹರಿಯುತ್ತಿದ್ದ ಒಂದು ತೊರೆಯ ಬದಿಯಲ್ಲಿಯೇ ಹೆಜ್ಜೆ ಹಾಕುತ್ತ ಕೊಯ್ಯುರು ಎಂಬ ಊರಿನ ಕಡೆಗೆ ಪ್ರಯಾಣ ಬೆಳೆಸಿದ. ಮಾರ್ಗದಲ್ಲೇ ಮಂಪಾ ಎಂಬುದೊಂದು ಗ್ರಾಮ. ಅಲ್ಲೊಂದು ಹುಣಿಸೆ ತೋಪಿನಲ್ಲಿ ಮೇಜರ್ ಗುಡಾಲ್‌ತನ್ನ ಸೈನ್ಯಸಮೇತ ಬೀಡುಬಿಟ್ಟಿದ್ದ.

ಬೆಳಗಿನ ನಸುಬಿಸಿಲು ಹುಣಿಸೆ ಮರಗಳ ಮೇಲೆ ಚೆಲ್ಲಿತ್ತು. ಕಷಾಯ ವಸ್ತ್ರ ಧರಿಸಿ, ಕೈಯಲ್ಲಿ ಬೆತ್ತ ಹಿಡಿದು, ಕಣ್ಕೋರೈಸುವಂತೆ ಝಗಝಗಿಸುತ್ತಿದ್ದ ತೇಜಃಪುಂಜ ಸನ್ಯಾಸಿಯೊಬ್ಬ ದಿಟ್ಟ ಹೆಜ್ಜೆ ಇಡುತ್ತಾ ತಮ್ಮ ಕಡೆಗೆ ನಡೆದು ಬರುತ್ತಿರುವುದನ್ನು ನೋಡಿ ಕಾವಲು ಪೊಲೀಸರು ಬೆಚ್ಚಿಬಿದ್ದರು. ಅವರಲೊಬ್ಬ, “ಓ! ಅವನೇ ಅಲ್ಲೂರಿ ಸೀತಾರಾಮರಾಜು” ಎಂದು ಹೇಳಿದ. ಕೂಡಲೇ ಅವರೆಲ್ಲರೂ ತಮ್ಮಲ್ಲಿ ಇದ್ದಬಿದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಹೋಗಿ ರಾಜುವನ್ನು ಬಂಧಿಸಿ ಮೇಜರ್  ಗುಡಾಲನ ಮುಂದೆ ಕರೆತಂದರು. ಸಂಧಿಯ ಹೆಸರಿನಲ್ಲಿ ರಾಜುವನ್ನು ಕರೆಸಿದ ಮೇಜರ್ ಗುಡಾಲ್‌ರಾಜುವಿಗೆ ಬೇಡಿ ತೊಡಿಸಿಬಿಟ್ಟ. ರಾಜು ಅಬ್ಬರಿಸಿದ. “ದ್ರೋಹ! ಸಂಧಿಗಾಗಿ ಕರೆಸಿ ನಿರಾಯುಧನಾದ ನನ್ನನ್ನು ಬಂಧಿಸುತ್ತೀರಾ?”

“ಹೂಂ, ಇಲ್ಲದಿದ್ದರೆ ನೀನೆಲ್ಲಿ ಸಿಗುತ್ತಿದ್ದೆ ದರೋಡೆಕೋರ?” ಎಂದು ಗುಡಾಲ್‌.

“ಏನೆಂದೆ? ನಾನು ದರೋಡೆಕೋರನೆ? ಮೋಸ, ಕುಟಿಲ ರಾಜನೀತಿಗಳನ್ನು ಉಪಯೋಗಿಸಿ, ದೇಶ ದೇಶಗಳನ್ನು ಕೊಳ್ಳೆ ಹೊಡೆಯುತ್ತಿರುವ ನೀವು ದರೋಡೆಕೋರರೋ ಅಥವಾ ಸರ್ವಸಂಗ ಪರಿತ್ಯಾಗಿ ಸನ್ಯಾಸಿಯಾಗಿ, ನನ್ನ ಜನ್ಮಸಿದ್ಧ ಹಕ್ಕಾದ ಸ್ವರಾಜ್ಯಕ್ಕಾಗಿ, ನನ್ನ ಮಾತೃಭೂಮಿಯ ಬಿಡುಗಡೆಗಾಗಿ ಹೋರಾಡುತ್ತಿರುವ ಈ ಮಣ್ಣಿನ ಮಗನಾದ ನಾನು ದರೋಡೆಕೋರನೋ? ಮುಟ್ಟೀರಿ ನನ್ನನ್ನು ಜೋಕೆ!” ಎಂದು ರಾಜು ಗರ್ಜಿಸಿದಾಗ ಅಲ್ಲಿದ್ದವರೆಲ್ಲ ನಡುಗಿಬಿಟ್ಟರು.

ರಾಜುವಿನ ಬಾಯಿಂದ ತುಪಾಕಿಯ ಗುಂಡುಗಳಂತೆ ಹೊರಸಿಡಿಯುತ್ತಿದ್ದ ಮಾತುಗಳನ್ನೇ ತಡೆದುಕೊಳ್ಳಲಾರದ ಮೇಜರ್ ಗುಡಾಲ್ ಪಿಸ್ತೂಲನ್ನು ಬಾರ್ ಮಾಡಿ ಸಿದ್ಧವಾಗುವಂತೆ ಮಲಬಾರ್ ಪೊಲೀಸಿನ ಅಧಿಕಾರಿ ಕುಂಜುಮೆನನ್ ಎಂಬುವನಿಗೆ ಸೂಚಿಸಿದ. ಪಿಸ್ತೂಲು ಬಾರ್ ಆಯಿತು.

ಅವನು ಏನು ಮಾಡುವರೆಂಬುದು ರಾಜುವಿಗೆ ಅರ್ಥವಾಯಿತು. “ನಾನು ಸಂಧಿಗಾಗಿ ಬಂದಿದ್ದೇನೆ. ನ್ಯಾಯವಾಗಿ ನನ್ನನ್ನು ಕಲೆಕ್ಟರ್ ಬ್ರೇಕನ್ನನ ಬಳಿಗೆ ಕರೆದೊಯ್ಯಿರಿ” ಎಂದ ರಾಜು.

ನನ್ನ ತಾಯಿ ಭಾರತಿದೇವಿ ಬಂಜೆಯಲ್ಲ”

ಗುಡಾಲ್ ಮಾತನಾಡಲಿಲ್ಲ. ಸೈನಿಕರು ರಾಜುವನ್ನು ಒಂದು ಹುಣಿಸೆ ಮರಕ್ಕೆ ಕಟ್ಟಿಹಾಕಿದರು.

“ರಾಕ್ಷಸರೇ, ನನ್ನನ್ನು ಕೊಲ್ಲುವಿರೇನು? ಈಗ ನೀವು ಒಬ್ಬ ರಾಜುವನ್ನು ಕೊಲ್ಲಬಹುದು. ನನ್ನ ತಾಯಿ ಭಾರತಿದೇವಿ ಬಂಜೆಯಲ್ಲ. ಅವಳ ರತ್ನಗರ್ಭದಿಂದ ನನ್ನಂಥ ಕೋಟ್ಯಂತರ ರಾಜುಗಳು ಹುಟ್ಟುತ್ತಾರೆ. ಕತ್ತಿಗೆ ಕತ್ತಿಯಿಂದ ಉತ್ತರಿಸುತ್ತಾರೆ. ರಕ್ತಕ್ಕೆ ಪ್ರತಿಯಾಗಿ ರಕ್ತ, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣಗಳನ್ನು ಸೆಳೆಯುತ್ತಾರೆ. ನೀವು ಸೋತು ಗಂಟುಮೂಟೆ ಕಟ್ಟುತ್ತೀರಿ. ಒಂದು ದಿನ ನನ್ನ ಪ್ರೀತಿಯ ಪವಿತ್ರ ತಾಯಿನಾಡು ಸ್ವತಂತ್ರವಾಗಿಯೇ ಆಗುತ್ತದೆ…” ಎಂದು ರಾಜು ಹೇಳುತ್ತಿದ್ದಂತೆಯೇ ಗುಡಾಲ್ ಸಿಟ್ಟಿನಿಂದ ಕೂಗಿದ: “ಫೈರ್”!

“ಢಂ ಢಂ” ಎಂದು ಗುಂಡುಗಳನ್ನು ಉಗುಳಿತು ಕುಂಜುಮೆನನ್ನನ ಪಿಸ್ತೂಲು. ರಾಜು ಕೊನೆಯ ಸಲ ತನ್ನ ಮಾತೃಭೂಮಿಗೆ ವಂದಿಸಿದ: “ವಂದೇ ಮಾತರಂ”! ರಾಜುವಿನ ಪ್ರಾಣಪಕ್ಷಿ ಹಾರಿಹೋಯಿತು.!

ದೇಶಭಕ್ತರಲ್ಲಿ ಮಣಿಮುಕುಟ

ಅಲ್ಲೂರಿ ಸೀತಾರಾಮರಾಜುವಿನ ರಕ್ತಸಿಕ್ತ ಶವವನ್ನು ಕೂಡಲೇ ಮಂಪ ಗ್ರಾಮಕ್ಕೆ ೬ ಮೈಲು ದೂರದ ಕೃಷ್ಣಾದೇವಿ ಪೇಟೆಗೆ ಕೊಂಡೊಯ್ದು ಅನಂತರ ಸಿದ್ದಿಪಾಳೆಂನಲ್ಲಿದ್ದ ವಿಶೇಷಾಧಿಕಾರಿ ರುಥರ್‌ಫರ್ಡ್‌‌ನ ಮುಂದೆ ಹಾಜರು ಮಾಡಿದರು. ಕೃಷ್ಣಾದೇವಿ ಪೇಟೆಯ ಬಳಿಯೇ ೧೯೨೪ರ ಮೇ ೮ರಂದು ಅದಕ್ಕೆ ಅಂತ್ಯಸಂಸ್ಕಾರವಾಯಿತು. ಅಲ್ಲಿಯೇ ಒಂದು ಸಮಾಧಿ ನಿರ್ಮಾಣವಾಯಿತು.

“ರಾಮರಾಜು ಕುಮಾರನ ಧೈರ್ಯ, ಸಾಹಸಗಳು ಎಲ್ಲ ಕಾಲಕ್ಕೂ ಆದರ್ಶ” ಎಂದರು ಮಹಾತ್ಮಗಾಂಧೀಜಿ. “ರಾಜು ದೇಶಭಕ್ತರಲ್ಲಿ ಮಣಿಮುಕುಟ” ಎಂದರು ಪಂಡಿತ್‌ಜವಾಹರಲಾಲ್ ನೆಹರು. “ಶ್ರೀರಾಮರಾಜು ಇನ್ನಾವ ದೇಶದಲ್ಲಾದರೂ ಹುಟ್ಟಿದ್ದರೆ ಇಲ್ಲಿಗಿಂತಲೂ ಹೆಚ್ಚು ಗೌರವ ಪಡೆಯುತ್ತಿದ್ದ” ಎಂದರು ಬಾಬು ಸುಭಾಷ್‌ಚಂದ್ರ ಬೋಸ್‌.

ರಾಜುವಿನ ಬಲಿದಾನ, ಅವನ ಅಮಾಯಕ ವನವಾಸಿ ಸೋದರ-ಸೋದರಿಯರ ಅಪಾರ ತ್ಯಾಗ, ಪರಾಕ್ರಮಗಳು ವ್ಯರ್ಥವಾಗಲಿಲ್ಲ. ಅವರೆಲ್ಲರ ಆ ಪ್ರಬಲ ಹೊಡೆತಗಳ ಪರಿಣಾಮವಾಗಿ ಕೊನೆಗೊಮ್ಮೆ ಆಂಗ್ಲರು ಭಾರತದಿಂದ ತೊಲಗಲೇಬೇಕಾಗಿ ಬಂತು. ತಾಯಿ ಭಾರತಿ ಬಂಧವಿಮುಕ್ತೆಯಾದಳು.