ರಾಮಾಯಣ, ಮಹಾಭಾರತಗಳ ಕಥೆಗಳನ್ನು ನೀವೆಲ್ಲಾ ಕೇಳಿದ್ದೀರಿ. ಶ್ರೀರಾಮ, ಆಂಜನೇಯ, ಶ್ರೀಕೃಷ್ಣ, ಅರ್ಜುನ ಇವರ ವಿಚಾರವನ್ನು ಬಲ್ಲಿರಿ. ಶ್ರೀರಾಮನಿಗೆ ಆಂಜನೇಯ ಹೇಗೆ ಶ್ರೇಷ್ಠನಾದ ಮಿತ್ರನೋ ಹಾಗೆಯೇ ಸ್ವಾಮಿ ವಿವೇಕಾನಂದರಿಗೆ ಅಳಶಿಂಗ ಪೆರುಮಾಳ್ ಶ್ರೇಷ್ಠ ಶಿಷ್ಯನೂ ಆಪ್ತಸಖನೂ ಆಗಿದ್ದನು.

ಜನನ-ವಿದ್ಯಾಭ್ಯಾಸ

ಅಳಶಿಂಗರು ಹುಟ್ಟಿದುದು ೧೮೬೫ ರಲ್ಲಿ. ಕನ್ನಡ ರಾಜ್ಯದ ಮಲೆನಾಡಿನ ಚಿಕ್ಕಮಗಳೂರಿನಲ್ಲಿ, ತಂದೆ ನರಸಿಂಹಾ ಚಾರ್ಯರು ಆ ಊರಿನ ಪೌರಸಭೆಯಲ್ಲಿ ಕೆಲಸದಲ್ಲಿದ್ದರು. ಅವರ ಸ್ವಂತ ಊರು ಮಂಡ್ಯ. ಆಚಾರ್ಯರಿಗೆ ಬಹಳ ಕಾಲ ಮಕ್ಕಳು ಇರಲಿಲ್ಲ. ಬಾಬಾಬುಡನ್‌ಗಿರಿಯ ಶ್ರೀ ದತ್ತಾತ್ರೇಯ ಪೀಠದ ಸಾಧು ಒಬ್ಬರನ್ನು ಆಶ್ರಯಿಸಿ ಅವರು ಹೇಳಿದ ವ್ರತ ನಿಯಮಗಳನ್ನು ನಡೆಸಿದರು. ಆ ಸಾಧುಗಳ ಆಶೀರ್ವಾದದಿಂದ ಹುಟ್ಟಿದವರೇ ಅಳಶಿಂಗ ಪೆರುಮಾಳ್ ಎಂದು ಹೇಳುತ್ತಾರೆ. ಅಳಶಿಂಗರ ಅನಂತರ ನರಸಿಂಹಾಚಾರ್ಯರಿಗೆ ಇನ್ನೊಬ್ಬ ಮಗನೂ, ಮಗಳೂ ಆದರು.

ಅಳಶಿಂಗರ ಪ್ರಾಥಮಿಕ ವಿದ್ಯಾಭ್ಯಾಸ ಚಿಕ್ಕಮಗಳೂರಿ ನಲ್ಲಿಯೇ ನಡೆಯಿತು. ಅನಂತರ ಅವರ ತಂದೆ ಮದರಾಸಿಗೆ ವಲಸೆ ಹೋದರು. ಅಳಶಿಂಗರ ಮುಂದಿನ ವಿದ್ಯಾಭ್ಯಾಸವೆಲ್ಲಾ ಮದರಾಸಿನಲ್ಲಿಯೇ ನಡೆಯಿತು. ಬುದ್ಧಿವಂತರಾಗಿದ್ದ ಅಳಶಿಂಗರು ವಿದ್ಯಾರ್ಥಿ ವೇತನವನ್ನು ಪಡೆದುಕೊಂಡೇ ವ್ಯಾಸಂಗ ಮಾಡಿದರು. ಕೇವಲ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇನ್ನೂ ಓದ ಬೇಕೆಂಬ ಆಸೆಯಿಂದ ಮದರಾಸಿನ ಲಾ ಕಾಲೇಜನ್ನು ಸೇರಿದರು.

ಅಳಶಿಂಗರಿಗೆ ನ್ಯಾಯಶಾಸ್ತ್ರದ ವ್ಯಾಸಂಗವನ್ನು ಮುಂದು ವರಿಸಲು ಆಗಲಿಲ್ಲ. ಅವರ ತಂದೆ ಕೆಲಸದಿಂದ ನಿವೃತ್ತ ರಾಗಿದ್ದರು. ಅಳಶಿಂಗರಿಗೆ ಮದುವೆಯಾಗಿ ಪತ್ನಿ ಮನೆಗೆ ಬಂದಿದ್ದರು. ತಮ್ಮ ಕೃಷ್ಣಮಾಚಾರ್ ಇನ್ನೂ ಓದುತ್ತಿದ್ದರು. ಮನೆಯಲ್ಲಿ ದುಡಿಯುವವರು ಯಾರೂ ಇರಲಿಲ್ಲ. ಮಂಡ್ಯದ ಬಳಿ ಇದ್ದ ಹೊಲದಿಂದ ಬರುತ್ತಿದ್ದ ವರಮಾನ ತುಂಬಾ ಸ್ವಲ್ಪ. ಹೀಗಾಗಿ ಅಳಶಿಂಗರು ಓದು ನಿಲ್ಲಿಸಿ ಕೆಲಸಕ್ಕೆ ಸೇರಿಕೊಂಡರು.

ಒಳ್ಳೆಯ ಉಪಾಧ್ಯಾಯರು

ಅಳಶಿಂಗರು ಮೊದಲು ಕುಂಭಕೋಣಂನಲ್ಲಿ ಉಪಾಧ್ಯಾಯರಾದರು. ಅನಂತರ ಚಿದಂಬರಂನಲ್ಲಿ ಪಚ್ಚೆಯಪ್ಪ ಪ್ರೌಢಶಾಲೆಯಲ್ಲಿ ಕೆಲಸ ಸಿಕ್ಕಿತು. ಆಗ ಪಚ್ಚೆಯಪ್ಪ ವಿದ್ಯಾಸಂಸ್ಥೆ ಸೇರಿದ ಅಳಶಿಂಗರು ಕೊನೆಯವರೆಗೂ ಅಲ್ಲಿಯೇ ದುಡಿದರು. ಮದರಾಸಿನಲ್ಲಿ ಅವರ ತಂದೆ ನಿಧನರಾಗಲು ಅಳಶಿಂಗರು ಮದರಾಸಿನ ಪಚ್ಚೆಯಪ್ಪ ಪ್ರೌಢಶಾಲೆಗೆ ವರ್ಗ ಮಾಡಿಸಿ ಕೊಂಡರು. ಅಲ್ಲಿಗೆ ಬಂದ ಎರಡು ವರ್ಷಗಳಲ್ಲಿಯೇ ಅವರು ಆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಿತರಾದರು. ಆಗ ಅವರಿಗೆ ಇನ್ನೂ ೨೬ ವರ್ಷ ವಯಸ್ಸು.

ಉಪಾಧ್ಯಾಯ ವೃತ್ತಿಯಲ್ಲಿ ಅಳಶಿಂಗರಿಗೆ ತುಂಬಾ ಪ್ರೀತಿ. ಒಳ್ಳೆಯ ಉಪಾಧ್ಯಾಯರೆಂದು ಹೆಸರು ಪಡೆದಿದ್ದರು. ವಿದ್ಯಾರ್ಥಿ ಗಳ ಬುದ್ಧಿಶಕ್ತಿಯನ್ನು ಅರಿತು ಪಾಠ ಹೇಳುತ್ತಿದ್ದರು. ಅಷ್ಟು ಬುದ್ಧಿವಂತರಲ್ಲದವರಿಗೆ ವಿಶೇಷ ಗಮನ ಕೊಡುತ್ತಿದ್ದರು. ತುಂಟ ವಿದ್ಯಾರ್ಥಿಗಳನ್ನೂ ಸಾಧುವಾಗಿ ಪರಿವರ್ತಿಸುವ ಶಕ್ತಿ ಅವರಲ್ಲಿತ್ತು. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸನಾತನ ಧರ್ಮ ದಲ್ಲಿ ಆಸಕ್ತಿ ಮೂಡುವಂತೆ ಬೋಧಿಸುತ್ತಿದ್ದರು. ನಮ್ಮ ದೇಶದ ಮತ್ತು ಧರ್ಮದ ಬಗೆಗೆ ಅಭಿಮಾನ ಮೂಡುವಂತಹ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದರು.

ಪಾಶ್ಚಾತ್ಯರ ಕಣ್ಣು ತೆರೆಸಬೇಕು

ಆಗ ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದರು. ಆಗಿನ ವಿದ್ಯಾಭ್ಯಾಸವೂ ಅವರು ಹೇಳಿದ ರೀತಿಯಲ್ಲಿಯೇ ನಡೆಯ ಬೇಕಾಗಿದ್ದಿತು. ವಿದ್ಯಾರ್ಥಿಗಳಲ್ಲಿ ಭಾರತ, ಹಿಂದು ಧರ್ಮ, ಈ ದೇಶದ ಮಹಾಪುರುಷರು, ಇಲ್ಲಿನ ಶ್ರೇಷ್ಠ ಗ್ರಂಥಗಳು ಇವುಗಳ ಬಗೆಗೆ ಆಗಿನ ವಿದ್ಯಾಭ್ಯಾಸ ಆಸಕ್ತಿ ಹುಟ್ಟಿಸುತ್ತಿರಲಿಲ್ಲ.

ಹಿಂದುಧರ್ಮದ ಬಗೆಗೆ ಬ್ರಿಟಿಷರಿಗೆ ಒಳ್ಳೆಯ ಭಾವನೆ ಇರಲಿಲ್ಲ. ಸಹನೆಯೂ ಇರಲಿಲ್ಲ. ನಮ್ಮ ಧರ್ಮದ ಅರಿವೂ ಇರಲಿಲ್ಲ. ನಮ್ಮ ದೇಶದ ಧರ್ಮ ಗ್ರಂಥಗಳನ್ನಾಗಲಿ, ಚರಿತ್ರೆ ಯನ್ನಾಗಲಿ, ಕಾವ್ಯ, ಸಾಹಿತ್ಯ, ಲಲಿತಕಲೆ, ವಾಸ್ತುಶಿಲ್ಪಗಳನ್ನಾಗಲಿ ಅರಿತುಕೊಳ್ಳದೆ ಪಾಶ್ಚಾತ್ಯರು ನಮ್ಮ ಜನರನ್ನೂ ದೇಶವನ್ನೂ ಹೀನಾಯವಾಗಿ ಕಾಣುತ್ತಿದ್ದರು.

ಪಾಶ್ಚಾತ್ಯರ ಈ ತಪ್ಪುತಿಳಿವನ್ನು ತಿದ್ದಬೇಕೆಂದು ಪ್ರಯತ್ನಿ ಸುತ್ತಿದ್ದವರಲ್ಲಿ ಅಳಶಿಂಗರು ಪ್ರಮುಖರು. ಈ ಕೆಲಸವನ್ನು ಹೇಗೆ ಮಾಡುವುದು?

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ತಿಳಿವನ್ನು ನೀಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವುದು, ದೇಶಪ್ರೇಮಿಗಳನ್ನಾಗಿ ಮಾಡುವುದು ಒಂದು ಮುಖ್ಯ ಕಾರ್ಯಕ್ರಮವಾಗಿತ್ತು. ಹಾಗೆಯೇ ತರುಣ ಜನಾಂಗವನ್ನು ಎಚ್ಚರಿಸಿ ಅವರಲ್ಲಿ ದೇಶ, ಧರ್ಮಗಳ ಅಭಿಮಾನ ಮೂಡಿಸುವುದೂ ಅಳಶಿಂಗರ ಮುಖ್ಯ ಕಾರ್ಯವಾಗಿತ್ತು. ಬ್ರಿಟಿಷರ ಚರ್ಮ ಬೆಳ್ಳಗಿದ್ದ ಮಾತ್ರಕ್ಕೆ ಅವರೇನು ಶ್ರೇಷ್ಠರಲ್ಲ. ನಮ್ಮ ಚರ್ಮ ಕಪ್ಪಗಿದ್ದ ಮಾತ್ರಕ್ಕೆ ನಾವೇನು ನಿಕೃಷ್ಟರಲ್ಲ. ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಇವು ಅತ್ಯಂತ ಶ್ರೇಷ್ಠವಾದವು. ನಮ್ಮ ಜನರು ಅದನ್ನೆಲ್ಲಾ ಮರೆತಿದ್ದಾರೆ. ನಮ್ಮ ಹಿಂದಿನ ಮಹಾಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿಲ್ಲ. ಆದ್ದರಿಂದಲೇ ಕಷ್ಟಕ್ಕೆ ಸಿಕ್ಕಿದ್ದೇವೆ. ನಮ್ಮ ದೇಶ, ನಮ್ಮ ಜನ, ನಮ್ಮ ಧರ್ಮ ಇವುಗಳ ಬಗೆಗೆ ನಾವು ಅಭಿಮಾನಪಡಬೇಕು. ನಾವು ಯಾರಿಗೂ ಕಡಿಮೆಯಲ್ಲ ಎಂದು ಅಳಶಿಂಗರು ತರುಣ ಮಿತ್ರರಲ್ಲಿ ನುಡಿಯುತ್ತಿದ್ದರು. ನಮ್ಮ ಧರ್ಮ, ಸಂಸ್ಕೃತಿಗಳ ಪ್ರತಿನಿಧಿಯನ್ನು ಕಳುಹಿಸಬೇಕೆಂಬುದೂ ಅಳಶಿಂಗರ ಮಹದಾಶಯವಾಗಿತ್ತು. ಕ್ರಮೇಣ ಈ ಎರಡನೆಯ ಕೆಲಸವೇ ಅಳಶಿಂಗರ ಮುಖ್ಯ ಗುರಿಯಾಗಿ ಬಿಟ್ಟಿತು.

’ಈತನೇ ನನ್ನ ಗುರು’

ಅದೇ ಕಾಲಕ್ಕೆ ಅಂತಹ ಗುರಿಯನ್ನು ಹೊಂದಿದ್ದ ಮಹಾಪುರಷರೊಬ್ಬರು ಮದರಾಸ್ ನಗರಕ್ಕೆ ಆಗಮಿಸಿದರು. ಅವರೇ ಸ್ವಾಮಿ ವಿವೇಕಾನಂದರು. ರಾಮಕೃಷ್ಣ ಪರಮಹಂಸರ ಉಪದೇಶವನ್ನು ಪಡೆದು ದೇಶ ಮತ್ತು ಧರ್ಮದ ಸೇವೆ ಮಾಡಬೇಕೆಂಬ ಕನಸು ಕಾಣುತ್ತಾ ವಿವೇಕಾನಂದರು ಭರತ ಖಂಡವನ್ನೆಲ್ಲಾ ಸುತ್ತಿದರು. ಅವರು ಕನ್ಯಾಕುಮಾರಿಗೆ ಬಂದು ಸಮುದ್ರದಲ್ಲಿ ಈಜಿ ಹೋಗಿ ದೊಡ್ಡ ಕಲ್ಲುಬಂಡೆಯ ಮೇಲೆ ಕುಳಿತು ಧ್ಯಾನಾಸಕ್ತರಾದರು. ಅಲ್ಲಿ ಅವರಿಗೆ ತಮ್ಮ ಜೀವನದ ಧ್ಯೇಯ ಸ್ಪಷ್ಟವಾಗಿ ಕಂಡಿತು. ಆ ಧ್ಯೇಯ ಸಾಧಿಸಲು ಸ್ವಾರ್ಥ ತ್ಯಾಗ ಮತ್ತು ದೀನದರಿದ್ರರ ಸೇವೆ ಇವು ಅಗತ್ಯ ಎಂಬುದು ಅವರಿಗೆ ಅರ್ಥವಾಯಿತು. ಮಾನವ ಸೇವೆಯ ಮತ್ತು ಧರ್ಮ ಪ್ರಸಾರದ ಕನಸನ್ನು ಹೊತ್ತು ಮದರಾಸ್ ನಗರಕ್ಕೆ ಅವರು ಆಗಮಿಸಿದರು.

‘ಮನ್ಮಥನಾಥ ಭಟ್ಟಾಚಾರ್ಯರ ಮನೆಗೆ ಬಂಗಾಳೀ ಸಂನ್ಯಾಸಿಯೊಬ್ಬರು ಬಂದಿದ್ದಾರೆ. ಅನೇಕ ವಿಚಾರಗಳನ್ನು ಬಲ್ಲವರು. ಶಾಸ್ತ್ರಗಳನ್ನು ಓದಿದ್ದಾರೆ. ವೇದವೇದಾಂತಗಳ ಬಗೆಗೆ ನಿರರ್ಗಳವಾಗಿ ಇಂಗ್ಲಿಷಿನಲ್ಲಿ ಮಾತನಾಡುತ್ತಾರೆ’ ಎಂಬ ವಾರ್ತೆ ಮದರಾಸಿನಲ್ಲಿ ಬಹುಬೇಗ ಹರಡಿತು. ತರುಣ ಜನಾಂಗದ ನಾಯಕರಾಗಿದ್ದ ಅಳಶಿಂಗರು ತಮ್ಮ ಬಂಧುಮಿತ್ರರಾದ ಕೃಷ್ಣಮಾಚಾರ್, ರಂಗಾಚಾರ್ಯ, ಡಾ.ನಂಜುಂಡರಾವ್, ಬಿಳಿಗಿರಿ ಅಯ್ಯಂಗಾರ್, ಬಾಲಾಜಿರಾವ್ ಮತ್ತು ಸುಬ್ರಹ್ಮಣ್ಯ ಅಯ್ಯರ್‌ರವರೊಡನೆ ಭಟ್ಟಾಚಾರ್ಯರ ಮನೆಗೆ ಬಂದರು.

ನಮ್ಮ ದೇಶ, ನಮ್ಮ ಜನ, ನಮ್ಮ ಧರ್ಮ ಇವುಗಳ ಬಗೆಗೆ ನಾವು ಅಭಿಮಾನ ಪಡಬೇಕು.

ವಿವೇಕಾನಂದರ ಎತ್ತರವಾದ ನಿಲುವು, ಪ್ರಸನ್ನವಾದ ಮುಖಮಂಡಲ, ನಂದಾದೀಪಗಳಂತೆ ಬೆಳಗುತ್ತಿದ್ದ ದಿವ್ಯ ನೇತ್ರಗಳು, ಗಂಭೀರವಾದ ಮಾತು ಇವು ಅಳಶಿಂಗರನ್ನು ಬಲು ಬೇಗ ಆಕರ್ಷಿಸಿದವು. ಸ್ವಾಮಿಗಳು ಆಡುತ್ತಿದ್ದ ಒಂದೊಂದು ಮಾತೂ ಹೃದಯದಿಂದ ಹೊರಟು ಬರುತ್ತಿತ್ತು. ಅಳಶಿಂಗರು ಆ ವ್ಯಕ್ತಿಗೆ ಮಾರುಹೋದರು. ಮೊದಲ ದಿನದ ಪರಿಚಯವೇ ಗಾಢವಾಯಿತು. ದಿನೇ ದಿನೇ ಅದು ನಿಕಟವಾಯಿತು. ಅಳಶಿಂಗರು ಈತನೆ ತನ್ನ ಗುರು-ಗುರಿಯತ್ತ ತನ್ನನ್ನು ನಡೆಸಲು ಸಮರ್ಥನಾದ ಮಾರ್ಗದರ್ಶಿ-ಎಂದು ಕಂಡುಕೊಂಡರು.

ವಿಶ್ವಧರ್ಮ ಸಮ್ಮೇಳನ

ಈ ಗುರುಶಿಷ್ಯರ ಮೈತ್ರಿ ದಿನೇದಿನೇ ಬೆಳೆಯಿತು. ದೇಶದ ಅಂದಿನ ಪರಿಸ್ಥಿತಿ, ಸಾಮಾಜಿಕ ಜೀವನ, ದುಃಖದಾರಿದ್ರ್ಯ ಇವನ್ನೆಲ್ಲಾ ಕುರಿತು ಈ ಗುರುಶಿಷ್ಯರು ಕಳಕಳಿಯಿಂದ ಮಾತನಾಡುತ್ತಿದ್ದರು. ಇವನ್ನೆಲ್ಲಾ ಸರಿಪಡಿಸುವುದು ಹೇಗೆ ಎಂದು ಚರ್ಚಿಸುತ್ತಿದ್ದರು. ಈ ದೇಶದ ಜನರಲ್ಲಿ ಸ್ವಾಭಿಮಾನ ವನ್ನೂ ದೇಶಪ್ರೇಮವನ್ನೂ ಮೂಡಿಸುವುದು ಹೇಗೆಂದು ಚಿಂತಿಸುತ್ತಿದ್ದರು.

ಅದೇ ಸಮಯದಲ್ಲಿ ವಿದ್ಯಾವಂತರ ಗಮನ ಸೆಳೆಯುವ ಸುದ್ದಿಯೊಂದು ಪ್ರಚುರವಾಗಿತ್ತು – ಷಿಕಾಗೊದಲ್ಲಿ ವಿಶ್ವಧರ್ಮ ಸಮ್ಮೇಳನ ನಡೆಯುತ್ತದೆ ಎಂದು. ಆ ಸಮ್ಮೇಳನದಲ್ಲಿ ಪ್ರಪಂಚದ ಎಲ್ಲ ಮತಗಳ ಪಂಡಿತರೂ ಭಾಗವಹಿಸಲು ಒಪ್ಪಿದ್ದರು. ಆದರೆ ಸನಾತನ ಹಿಂದು ಧರ್ಮವನ್ನು ಪ್ರತಿನಿಧಿಸಿ ಅದರ ಪರವಾಗಿ ಭಾಗವಹಿಸುವವರು ಯಾರೂ ಇರಲಿಲ್ಲ.

ವಿವೇಕಾನಂದರು ಮದರಾಸಿಗೆ ಬರುವ ಮೊದಲೇ ಈ ವಿಚಾರದಲ್ಲಿ ಅಳಶಿಂಗರಿಗೆ ಆಸಕ್ತಿ ಹುಟ್ಟಿತ್ತು. ಅಳಶಿಂಗ ರಾದರೋ ಬಹಳ ಜನ ವಿದ್ಯಾವಂತರನ್ನು ಈ ವೇಳೆಗಾಗಲೇ ಭೇಟಿ ಮಾಡಿದ್ದರು. ಹಿಂದುಧರ್ಮ ಮತ್ತು ಸಂಸ್ಕೃತಿಯ ಬಗೆಗೆ ಪ್ರಚಾರಮಾಡಲು ಅಮೆರಿಕಕ್ಕೆ ಹೋಗುವಂತೆ ಹಲವಾರು ಜನ ವಿದ್ವಾಂಸರನ್ನು ಕೇಳಿಕೊಂಡಿದ್ದರು. ಆದರೆ ಆ ಪ್ರಯತ್ನ ಯಾವುದೂ ಪ್ರಯೋಜನವಾಗಲಿಲ್ಲ.

ತಾವೇ ಏಕೆ ಹೋಗಬಾರದು?

ವಿವೇಕಾನಂದರನ್ನು ಕಂಡನಂತರ ಅಳಶಿಂಗರಿಗೆ ಷಿಕಾಗೊಕ್ಕೆ ಹೋಗಲು ಅರ್ಹರಾದವರೆಂದರೆ ಈ ಸ್ವಾಮಿಗಳೊಬ್ಬರೇ ಎನ್ನಿಸಿತು. ಅವರೊಡನೆ ಹಲವು ವಿಷಯಗಳನ್ನು ಚರ್ಚಿಸುತ್ತಿದ್ದಂತೆ ಈ ಭಾವನೆ ದಿನದಿನಕ್ಕೆ ಬಲವಾಯಿತು.

ಒಂದು ದಿನ ದೇಶ, ಧರ್ಮ ಈ ವಿಚಾರವಾಗಿ ಚರ್ಚೆ ಸಾಗುತ್ತಿತ್ತು. ಅಳಶಿಂಗರು ನುಡಿದರು: “ನಮ್ಮ ದೇಶ, ಧರ್ಮಗಳ ವಿಚಾರವಾಗಿ ಪಾಶ್ಚಾತ್ಯರು ತಪ್ಪು ತಿಳಿವು ಹೊಂದಿದ್ದಾರೆ” ಎಂದರು.

“ಹೌದು, ನಿಮ್ಮ ಮಾತು ನಿಜ” ಎಂದರು ಸ್ವಾಮೀಜಿ.

“ನಮ್ಮನ್ನು ಮಾಂತ್ರಿಕರೆಂದೂ ಹಾವಾಡಿಗರೆಂದೂ ಅನಾಗರಿಕರೆಂದೂ ಭಾವಿಸಿದ್ದಾರೆ.”

“ನಿಜ, ನಮ್ಮ ಧರ್ಮ, ಚರಿತ್ರೆ, ಭವ್ಯ ಪರಂಪರೆ ಇವುಗಳ ಪರಿಚಯ ಇಲ್ಲದವರು ಹಾಗೆ ಭಾವಿಸಿರುವುದು ವಾಸ್ತವ.”

“ಈ ತಪ್ಪು ಭಾವನೆಯನ್ನು ಹೋಗಲಾಡಿಸಿ ನಮ್ಮ ದೇಶ, ಧರ್ಮದ ಬಗೆಗೆ ಸರಿಯಾದ ತಿಳಿವನ್ನು ಪ್ರಸಾರ ಮಾಡುವುದು ಈಗ ಅಗತ್ಯವಲ್ಲವೆ?”

“ಹೌದು, ಈಗ ಅದರ ಅಗತ್ಯ ಹೆಚ್ಚಾಗಿದೆ. ವಿದ್ಯಾವಂತ ರಾದ ತರುಣರು ಆ ಕೆಲಸ ಮಾಡಬೇಕಾಗಿದೆ.”

“ಅಮೆರಿಕದ ಷಿಕಾಗೊ ನಗರದಲ್ಲಿ ನಡೆಯಲಿರುವ ವಿಶ್ವ ಧರ್ಮ ಸಮ್ಮೇಳನಕ್ಕೆ ಎಲ್ಲ ಮತದ ಪ್ರತಿನಿಧಿಗಳೂ ಹೋಗು ತ್ತಾರೆ. ನಮ್ಮ ಧರ್ಮವನ್ನು ಪ್ರತಿಸನಿಧಿಸುವವರೂ ಅಲ್ಲಿಗೆ ಹೋಗಿ ಹಿಂದುಧರ್ಮ, ಸಂಸ್ಕೃತಿಗಳನ್ನು ಸರಿಯಾಗಿ ವಿವರಿಸುವುದು ಪ್ರಯೋಜನಕಾರಿ ಎಂದು ನನ್ನ ಭಾವನೆ.”

“ಹೌದು.”

“ಸ್ವಾಮೀಜಿ, ತಾವೇ ಏಕೆ ಷಿಕಾಗೋಗೆ ಹೋಗಬಾರದು?”

ವಿವೇಕಾನಂದರು, “ಹೌದು ಅಳಶಿಂಗ, ನಾನೇ ಏಕೆ ಹೋಗಬಾರದು ಎಂದು ನನಗೂ ಅನ್ನಿಸುತ್ತಿದೆ” ಎಂದರು.

ಗುರುದೇವನ ಆದೇಶ ಬಂದಿಲ್ಲ!

ವಿವೇಕಾನಂದರನ್ನು ಹಿಂದುಧರ್ಮದ ವಿವರಣೆಗೆ ಪಾಶ್ಚಾತ್ಯ ದೇಶಗಳಲ್ಲಿ ಸಂಚಾರ ಮಾಡಬೇಕೆಂದು ಬಹಳ ಜನ ಕೇಳಿ ಕೊಂಡಿದ್ದರು. ಆದರೆ ಅತ್ಯಂತ ಪ್ರೇಮದಿಂದ, ಆತ್ಮೀಯತೆ ಯಿಂದ ಕೇಳಿಕೊಂಡವರು ಅಳಶಿಂಗರು. ಸ್ವಾಮಿಗಳು ಅಮೆರಿಕಕ್ಕೆ ಹೋಗಲು ಒಪ್ಪಿಗೆ ಕೊಡಬೇಕೆಂದೂ ತಾವು ಅದಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸುವುದಾಗಿಯೂ ಅಳಶಿಂಗರು ಹೇಳಿದರು. ಪ್ರತಿನಿತ್ಯವೂ ಒತ್ತಾಯದ ಪ್ರಾರ್ಥನೆ ಮಾಡುತ್ತಾ ಬಂದರು. ಅಳಶಿಂಗರ ಸ್ನೇಹಿತರ ಗುಂಪು ದೊಡ್ಡದಾಗಿತ್ತು. ಆ ಸ್ನೇಹಿತರೂ ಸ್ವಾಮಿಗಳನ್ನು ಪದೇಪದೇ ಒತ್ತಾಯ ಪಡಿಸಿದರು. ಕೊನೆಗೊಮ್ಮೆ ಸ್ವಾಮಿಗಳ ಒಪ್ಪಿಗೆ ದೊರಕಿತು.

ಸ್ವಾಮಿಗಳ ಒಪ್ಪಿಗೆ ಬಂದುದು ಎಲ್ಲರಿಗೂ ಸಂತೋಷ ಉಂಟು ಮಾಡಿತು. ಅಳಶಿಂಗರೂ ಅವರ ಸ್ನೇಹಿತರೂ ಹಣ ಸಂಗ್ರಹಿಸಲು ತೊಡಗಿದರು. ದೇಶ ಮತ್ತು ಧರ್ಮಗಳ ಬಗೆಗೆ ತಮ್ಮಂತೆಯೇ ಯೋಚಿಸುತ್ತಿದ್ದವರನ್ನೆಲ್ಲಾ ಭೇಟಿ ಮಾಡಿದರು. ಅವರ ಯೋಜನೆಯನ್ನು ಕೇಳಿ ಜನ ಅಪಹಾಸ್ಯ ಮಾಡಿದವರು ಎಷ್ಟು ಮಂದಿಯೊ! ಆದರೆ ಅಳಶಿಂಗರು ಎದೆಗುಂದಲಿಲ್ಲ. ತಮ್ಮ ಧರ್ಮದ ಹಿರಿಮೆ ಏನೆಂದು ಗೊತ್ತಿಲ್ಲದ ಜನರ ಬಗೆಗೆ ಅಳಶಿಂಗರು ಮರುಗಿದರು.

ಕೇವಲ ಒಂದೆರೆಡು ವಾರಗಳಲ್ಲಿಯೇ ೫೦೦ ರೂಪಾಯಿ ಸಂಗ್ರಹವಾಯಿತು. ಹಣವನ್ನು ನೋಡಿ ವಿವೇಕಾನಂದರಿಗೆ ಭಯವಾಯಿತು.

“ನಾನು ಅಮೆರಿಕಕ್ಕೆ ಹೋಗಲು ನನಗಿನ್ನೂ ದೈವಪ್ರೇರಣೆ ಆಗಿಲ್ಲ” ಎಂದರು.

ಇದ್ದಕ್ಕಿದ್ದಂತೆ ಬಂದ ಈ ಮಾತು ಅಳಶಿಂಗರನ್ನೂ ಅವರ ಗೆಳೆಯರನ್ನೂ ದಿಗ್ಭ್ರಮೆಗೊಳಿಸಿತು. ಅವರು ಸ್ವಾಮಿಗಳ ಮುಖ ವನ್ನೇ ನೋಡುತ್ತಾ ಕುಳಿತುಬಿಟ್ಟರು.

“ನಿಮ್ಮ ಒತ್ತಾಯಕ್ಕೆ ಮಣಿದು ನಾನು ಒಪ್ಪಿಗೆ ಕೊಟ್ಟಿದ್ದೇನೆ. ಆದರೆ ನಾನಿನ್ನೂ ಸಂಪೂರ್ಣವಾಗಿ ನಿರ್ಧಾರಕ್ಕೆ ಬಂದಿಲ್ಲ” ಎಂದರು ಸ್ವಾಮೀಜಿ.

ಅಳಶಿಂಗರು, “ಸ್ವಾಮೀಜೀ” ಎನ್ನುವಷ್ಟರಲ್ಲಿಯೇ,

“ಆದ್ದರಿಂದ ಈಗ ನೀವು ಕೆಲಸ ನಿಲ್ಲಿಸಿ, ಹಣ ಸಂಗ್ರಹ ಕಾರ್ಯ ಮುಂದುವರಿಯುವುದು ಬೇಡ” ಎಂದು ಸ್ವಾಮಿಗಳು ನುಡಿದರು. “ನಾನು ಸ್ವಾರ್ಥದ, ಕೀರ್ತಿಯ ಆಸೆಯಿಂದ ನಿಮಗೆ ಒಪ್ಪಿಗೆ ಕೊಟ್ಟೇನೇನೋ ಎಂದು ನನಗೆ ಅನುಮಾನವಾಗಿದೆ. ಸ್ಪಷ್ಟವಾದ ಆದೇಶ ಗುರುದೇವರಿಂದ ಬರುವವರೆಗೂ ನಾನು ಅಮೆರಿಕಕ್ಕೆ ಹೊರಡಲಾರೆ.”

“ಸ್ವಾಮೀಜಿ, ಇನ್ನೂ ಅವಕಾಶವಿದೆ. ಯೋಚಿಸಿ, ಇದರಲ್ಲಿ ತಮ್ಮ ಸ್ವಾರ್ಥ ಏನಿದೆ? ದೇಶ-ಧರ್ಮಗಳ ಸೇವೆಯಲ್ಲವೆ ಇದು? ದಯವಿಟ್ಟು ಅನುಮತಿಯನ್ನು ಹಿಂತೆಗೆದುಕೊಳ್ಳಬೇಡಿ” ಎಂದು ಅಳಶಿಂಗರು ಕಳಕಳಿಯಿಂದ ಕೇಳಿಕೊಂಡರು.

“ಇಲ್ಲ. ನನ್ನ ಮನಸ್ಸು ಒಪ್ಪಿಗೆ ನೀಡುತ್ತಿಲ್ಲ. ಆದ್ದರಿಂದ ನೀವು ನನ್ನನ್ನು ಒತ್ತಾಯ ಮಾಡಬೇಡಿ. ಈಗ ಸಂಗ್ರಹಿಸಿರುವ ಹಣವನ್ನು ಬಡಬಗ್ಗರಿಗೆ ಹಂಚಿಬಿಡಿ” ಎಂದು ಸ್ವಾಮೀಜಿ ನಿರ್ಧಾರದಿಂದ ಹೇಳಿದರು.

ಅಳಶಿಂಗರಿಗೂ ಅವರ ಗೆಳೆಯರಿಗೂ ಈ ಮಾತಿನಿಂದ ತುಂಬಾ ನಿರಾಶೆಯಾಯಿತು.

ಆದರೆ ಅಳಶಿಂಗರು ಗುರುವಿನ ಆಜ್ಞೆಯನ್ನು ಪಾಲಿಸಲು ಸಿದ್ಧರಾದರು. ಸಂಗ್ರಹಿಸಿದ ಹಣವನ್ನೆಲ್ಲಾ ಬಡಬಗ್ಗರಿಗೆ ಹಂಚಿಬಿಟ್ಟರು. ಅನಂತರ ಸ್ವಾಮಿಗಳಿಗೆ ವರದಿ ಒಪ್ಪಿಸಿದರು: “ಸ್ವಾಮೀಜೀ ತಮ್ಮ ಅಪ್ಪಣೆಯಂತೆ ಹಣವನ್ನು ಹಂಚಿ ದುದಾಯಿತು.” ವಿವೇಕಾನಂದರು, “ಈಗ ನನ್ನ ಮನಸ್ಸಿಗೆ ಸಮಾಧಾನವಾಯಿತು” ಎಂದರು.

ಹೊಣೆ ಎಲ್ಲವೂ ನಿನ್ನದು

ಹೀಗೆಯೇ ಸ್ವಲ್ಪ ದಿನ ಕಳೆದವು. ಅಳಶಿಂಗರ ಮನಸ್ಸಿನಲ್ಲಿಯೂ ಅವರ ಗೆಳೆಯರ ಮನಸ್ಸಿನಲ್ಲಿಯೂ ಷಿಕಾಗೊ ಸಮ್ಮೇಳನ ಕುರಿತ ಯೋಚನೆಗಳೇ ಪ್ರಬಲವಾಗಿದ್ದವು. ಅವಕಾಶ ದೊರೆತಾಗಲೆಲ್ಲ ಅವರು ವಿವೇಕಾನಂದರಲ್ಲಿ ತಮ್ಮ ಬೇಡಿಕೆ ಯನ್ನು ಸಲ್ಲಿಸುತ್ತಲೇ ಇದ್ದರು.

ವಿವೇಕಾನಂದರಿಗೂ ಈ ವಿಚಾರ ಮನಸ್ಸಿನಲ್ಲಿಯೇ ಇತ್ತು. ‘ಈ ಯುವಕರು ಕೇವಲ ಒಂದೆರಡು ವಾರಗಳಲ್ಲಿ ಅರ್ಧ ಸಾವಿರ ರೂಪಾಯಿ ಸಂಗ್ರಹಿಸಿದ್ದರು. ಅದನ್ನು ಬಡಬಗ್ಗರಿಗೆ ಹಂಚಿಬಿಡಿ ಎಂದಾಗ ಯಾವ ಪ್ರತಿ ಮಾತೂ ಆಡದೆ ಹಂಚಿಬಿಟ್ಟರು. ಇಷ್ಟಾದರೂ ಇವರ ಉತ್ಸಾಹ, ಭರವಸೆ ಹಾಗೆಯೇ ಇದೆ. ಇದು ದೈವೇಚ್ಛೆಯೇ ಇರಬೇಕಲ್ಲವೇ?’ ಎಂದು ಸ್ವಾಮಿಗಳೂ ಯೋಚಿಸುತ್ತಿದ್ದರು.

ಅಳಶಿಂಗರ ಕೋರಿಕೆ ಈಡೇರುವ ದಿನ ಬಂದಿತು. ಒಂದು ದಿನ ಸಂಜೆ ಸ್ವಾಮಿಗಳೊಡನೆ ಮಾತನಾಡುತ್ತ ಅಳಶಿಂಗರು, “ಷಿಕಾಗೊಕ್ಕೆ ಹೋಗುವ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ಏಕೆ ಬದಲಿಸಬಾರದು? ತಾವು ಬಂಗಾಳದಲ್ಲಿ ಜನ್ಮತಾಳಿ, ಪರಮಹಂಸರಿಂದ ಜ್ಞಾನೋಪದೇಶ ಪಡೆದು, ದೇಶವನ್ನೆಲ್ಲಾ ಸಂಚರಿಸಿ ಇಲ್ಲಿಗೆ ಬಂದುದು, ದೈವಸಂಕಲ್ಪವೇ ಅಲ್ಲವೇ? ಆ ದೈವವೇ ನಮ್ಮ ಮನಸ್ಸಿನಲ್ಲಿ ಈ ಕೋರಿಕೆಯನ್ನು ಮೂಡಿಸಿದೆ ಅಲ್ಲವೇ? ತಾವು ಮೊದಲು ಒಪ್ಪಿಗೆ ಕೊಟ್ಟ ಕೂಡಲೆ ಸ್ವಲ್ಪ ದಿನಗಳಲ್ಲಿಯೇ ಹಣ ಸಂಗ್ರಹವಾದುದು ದೈವ ಸಹಾಯವೇ ಅಲ್ಲವೆ? ಆದ್ದರಿಂದ ತಾವು ಈಗ ಒಪ್ಪಿಗೆ ಕೊಡಿ. ಪುನಃ ನಾವು ಟೊಂಕ ಕಟ್ಟಿ ಕೆಲಸ ಮಾಡುತ್ತೇವೆ” ಎಂದು ಬೇಡಿಕೊಂಡರು.

ಸ್ವಾಮಿಗಳು, “ಅಳಶಿಂಗ, ಸ್ವಲ್ಪದಿನ ಕಾಯೋಣ. ಗುರು ದೇವರ ಅಣತಿ ಬರಬಹುದು” ಎಂದು ಮೃದುವಾಗಿ ನುಡಿದರು.

ಮಾರನೆಯ ಬೆಳಗ್ಗೆ ಮಹಾಶಿವರಾತ್ರಿಯ ಶುಭದಿನ. ಅಳಶಿಂಗರು ವಿವೇಕಾನಂದರನ್ನು ನೋಡಲು ಬಂದರು. ಸ್ವಾಮೀಜಿ ತುಂಬ ಹರ್ಷಗೊಂಡಿದ್ದರು. ಅಳಶಿಂಗರಿಗೆ ಹೇಳಿದರು: “ನಿನ್ನೆ ರಾತ್ರಿ ನನ್ನ ಗುರು ರಾಮಕೃಷ್ಣರು ಕನಸಿನಲ್ಲಿ ಕಾಣಿಸಿಕೊಂಡರು. ಪ್ರಿಯ ಅಳಶಿಂಗ, ನಿನ್ನ ಕೋರಿಕೆಯೇ ಗುರುದೇವರ ಆಜ್ಞೆಯಾಗಿದೆ. ನಾವೆಲ್ಲಾ ಭಗವಂತನ ಕೈಗೊಂಬೆಗಳು. ಆತನು ಆಡಿಸಿದಂತೆ ಆಡುತ್ತೇವೆ. ನಿನ್ನ ಇಚ್ಛೆಯಂತೆ ಅಮೆರಿಕಕ್ಕೆ ಹೋಗಲು ಸಿದ್ಧನಾಗಿದ್ದೇನೆ. ಅದರ ಹೊಣೆಯೆಲ್ಲವೂ ನಿನ್ನದು.”

ಅದೇ ದಿನ ಶಾರದಾದೇವಿಯವರಿಂದ ವಿವೇಕಾನಂದರಿಗೆ ಆಶೀರ್ವಾದ ಪತ್ರ ಬಂದಿತು.

ಷಿಕಾಗೊಗೆ

ವಿವೇಕಾನಂದರ ಒಪ್ಪಿಗೆ ಬಂದೊಡನೆ ಅಳಶಿಂಗರು ಮತ್ತೆ ಹಣ ಸಂಗ್ರಹಕ್ಕೆ ಪ್ರಾರಂಭಿಸಿದರು. ಮದರಾಸಿನಿಂದ ಅಮೆರಿಕಕ್ಕೆ ಪ್ರಯಾಣಕ್ಕೆ ತಗಲುವ ಖರ್ಚು, ಬಟ್ಟೆಬರೆ, ಪುಸ್ತಕಗಳು, ತಿಂಡಿತೀರ್ಥ, ಅಮೆರಿಕದಲ್ಲಿ ಸ್ವಲ್ಪಕಾಲ ಇರಲು ತಗಲುವ ವೆಚ್ಚ ಎಲ್ಲಕ್ಕೂ ತುಂಬ ಹಣ ಬೇಕಾಗಿತ್ತು. ಅಮೆರಿಕಕ್ಕೆ ಹೊರಡ ಬೇಕಾದ ದಿನವೂ ಬಹಳ ಸಮೀಪದಲ್ಲಿಯೇ ಇತ್ತು.

ಅಳಶಿಂಗರು ತಮ್ಮ ಮಿತ್ರರ ಸಹಾಯ ಪಡೆದು ಹಣ ಶೇಖರಣೆಗೆ ಆರಂಭಿಸಿದರು. ಮದರಾಸ್ ನಗರದಲ್ಲಿ ಸಂಗ್ರಹ ವಾದ ಹಣ ಸಾಕಾಗಲಿಲ್ಲ. ಅಳಶಿಂಗರು ರಾಮನಾಡು, ಬೆಂಗಳೂರು, ಹೈದರಾಬಾದುಗಳವರೆಗೆ ಸಂಚಾರ ಮಾಡಿ ತಮ್ಮ ಮಿತ್ರರಿಂದ ಧನವನ್ನು ಶೇಖರಿಸಿ ತಂದರು. ಪ್ರಯಾಣದ ದಿನ ಹತ್ತಿರವಾಗುತ್ತಿತ್ತು. ಈ ಮಧ್ಯೆ ವಿವೇಕಾನಂದರು ಖೇತ್ರಿ ನಗರಕ್ಕೆ ಹೋಗಲೇಬೇಕಾದ ಪ್ರಸಂಗ ಒದಗಿತು. ಅಲ್ಲಿಯ ರಾಜನಿಗೆ ಗಂಡುಮಗು ಹುಟ್ಟಿದ್ದು ಆ ಮಗುವಿನ ನಾಮಕರಣದಲ್ಲಿ ವಿವೇಕಾನಂದರು ಭಾಗವಹಿಸಬೇಕಾಗಿತ್ತು. ಅವರು ಅಳಶಿಂಗರ ಸಲಹೆ ಕೇಳಿದರು. ಖೇತ್ರಿಗೆ ಹೋಗಿ ಮದರಾಸಿಗೆ ಬಂದು ಅಲ್ಲಿಂದ ಮುಂಬಯಿಗೆ ಪ್ರಯಾಣ ಮಾಡಲು ಸಾಕಷ್ಟು ಸಮಯ ಇರಲಿಲ್ಲ. ವಿವೇಕಾನಂದರು ಖೇತ್ರಿಗೆ ಹೋಗಿ ಅಲ್ಲಿಂದ ನೇರವಾಗಿ ಮುಂಬಯಿಗೆ ಬರಬೇಕೆಂದೂ ಅಳಶಿಂಗರು ಮದರಾಸಿನಿಂದ ಸ್ವಾಮಿಗಳ ಹಾಸಿಗೆ, ಬಟ್ಟೆಬರೆ, ಪೆಟ್ಟಿಗೆಗಳನ್ನು ತೆಗೆದುಕೊಂಡು ಮುಂಬಯಿಗೆ ಹೋಗಬೇಕೆಂದೂ ನಿರ್ಧಾರವಾಯಿತು. ಅದರಂತೆಯೇ ಸ್ವಾಮೀಜಿ ಖೇತ್ರಿಗೆ ಹೊರಟರು.

ಅಳಶಿಂಗರು ವಿವೇಕಾನಂದರ ಪಾಶ್ಚಾತ್ಯ ಪ್ರವಾಸಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡರು. ಆ ಬಳಿಕ ಮುಂಬಯಿಗೆ ಹೊರಟರು. ಪೆನಿನ್ಸುಲಾರ್ ಮತ್ತು ಓರಿಯಂಟ್ ಕಂಪೆನಿಯವರ ಕಚೇರಿಗೆ ಹೋಗಿ ಪ್ರಯಾಣದ ಟಿಕೆಟಿಗಾಗಿ ಹಣ ಕೊಟ್ಟು ಹಡಗಿನಲ್ಲಿ ಸ್ಥಳವನ್ನು ಕಾದಿರಿಸಿದರು. ಪ್ರಯಾಣದ ಎಲ್ಲ ಸಿದ್ಧತೆಗಳೂ ಮುಗಿಯಲು ಸ್ವಾಮಿಗಳ ಆಗಮನಕ್ಕಾಗಿ ಕಾಯುತ್ತ ಮುಂಬಯಿಯಲ್ಲಿ ಉಳಿದರು.

ಖೇತ್ರಿಯ ಸಮಾರಂಭವನ್ನು ಮುಗಿಸಿಕೊಂಡು ಸ್ವಾಮೀಜಿ ಮುಂಬಯಿಗೆ ಬಂದರು.

ಎಲ್ಲ ಸಿದ್ಧತೆಯನ್ನೂ ಮಾಡಿ ತಮಗಾಗಿ ಕಾದಿದ್ದ ಅಳಶಿಂಗರನ್ನು ಕಂಡು ಸ್ವಾಮಿಗಳಿಗೆ ತುಂಬಾ ಸಂತೋಷ ವಾಯಿತು. ಪ್ರಯಾಣದ ದಿನ ಬಂದಿತು. ೧೮೯೩ ರ ಮೇ ೩೧ ರಂದು ಸ್ವಾಮೀಜಿ ಹಡಗನ್ನು ಹತ್ತಿದರು. ಅಳಶಿಂಗರು ಸ್ವಾಮಿಗಳ ಸಾಮಾನುಗಳನ್ನು ಹಡಗಿಗೆ ಸಾಗಿಸಿ ಕ್ಯಾಬಿನ್ನಿನಲ್ಲಿ ಓರಣವಾಗಿ ಜೋಡಿಸಿದರು. ಟಿಕೆಟನ್ನು ಸ್ವಾಮಿಗಳ ಕೈಗೆ ಇತ್ತರು. ಖರ್ಚುವೆಚ್ಚಕ್ಕಾಗಿ ತಮ್ಮಲ್ಲಿ ಉಳಿದಿದ್ದ ೧೮೭ ಪೌಂಡು ಹಣವನ್ನು ಸ್ವಾಮಿಗಳ ಕೈಗೆ ಕೊಟ್ಟರು.

‘ತಾವು ಒಪ್ಪಿಗೆ ಕೊಡಿ, ನಾವು ಮತ್ತು ಟೊಂಕ ಕಟ್ಟಿ ಕೆಲಸ ಮಾಡುತ್ತೇವೆ.’

ಸ್ವಾಮಿಗಳ ಮನಸ್ಸು ತುಂಬಿಬಂದಿತ್ತು. ಅವರಿಗೆ ಸ್ವಲ್ಪ ಕಾಲ ಮಾತೇ ಹೊರಡಲಿಲ್ಲ. ಅತ್ಯಲ್ಪ ಕಾಲದಲ್ಲಿ ತಮ್ಮ ಪ್ರವಾಸಕ್ಕಾಗಿ ಅಳಶಿಂಗರು ಮಾಡಿದ ಅತ್ಯದ್ಭುತವಾದ ಪ್ರಯತ್ನವನ್ನು ನೆನೆದು ಸ್ವಾಮಿಗಳಿಗೆ ಹೃದಯ ತುಂಬಿಬಂದಿತು. ಅಳಶಿಂಗರನ್ನು ಆಶೀರ್ವದಿಸಿದರು. ಹರ್ಷ ಪುಳಕದಿಂದ, ಭಾವಗಳ ಉದ್ವೇಗದಿಂದ ಸ್ವಾಮಿಗಳ ಬಾಯಲ್ಲಿ ಮಾತೇ ಹೊರಡಲಿಲ್ಲ.

ಅಳಶಿಂಗರಿಗೂ ಹೃದಯ ತುಂಬಿ ಬಂದಿತ್ತು. ತಮ್ಮ ಕನಸು ನನಸಾಗುವುದಕ್ಕೆ ಭಗವಂತನೇ ಕಾರಣನೆಂದು ಅವರು ನಂಬಿದ್ದರು. ತಮ್ಮ ಗುರುವಿಗೆ ದಿಗ್ವಿಜಯವಾಗಲಿ, ಸನಾತನ ಧರ್ಮ ವಿಶ್ವಧರ್ಮವಾಗಲಿ ಎಂದು ಪ್ರಾರ್ಥಿಸುತ್ತಾ ಸ್ವಾಮಿಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ವಿವೇಕಾನಂದರು ಅಳಶಿಂಗರನ್ನು ಆತ್ಮೀಯತೆಯಿಂದ, ವಾತ್ಸಲ್ಯದಿಂದ ಅಪ್ಪಿಕೊಂಡರು.

ವಿವೇಕಾನಂದರನ್ನು ಬೀಳ್ಕೊಂಡ ಅಳಶಿಂಗರು ಭಾರವಾದ ಹೆಜ್ಜೆ ಹಾಕುತ್ತಾ ರೈಲು ನಿಲ್ದಾಣಕ್ಕೆ ಬಂದು ಮದರಾಸಿಗೆ ಹಿಂತಿರುಗಿದರು.

ಅಮೆರಿಕದಲ್ಲಿ ವಿವೇಕಾನಂದರು

ಸ್ವಾಮಿಗಳ ಹಡಗು ಮುಂಬಯಿಯಿಂದ ಹೊರಟು ವಾಂಕೂವರಿಗೆ ತಲುಪಿತು. ಜಪಾನಿನ ಅತ್ಯದ್ಭುತ ಪ್ರಗತಿಯನ್ನು ಕುರಿತು ಸ್ವಾಮೀಜಿ ಅಳಶಿಂಗರಿಗೆ ದೀರ್ಘವಾದ ಪತ್ರವೊಂದನ್ನು ಬರೆದರು. ಆ ದೇಶದ ಜನಗಳ ಸತತವಾದ ದುಡಿಮೆ, ಐಕಮತ್ಯ, ದೇಶಭಕ್ತಿ ಇವುಗಳನ್ನು ಕೊಂಡಾಡಿ ಭಾರತೀಯರು ಅವರ ಆದರ್ಶವನ್ನು ಅನುಸರಿಸಬೇಕೆಂದು ಬರೆದಿದ್ದರು.

ಸ್ವಾಮಿಗಳ ಹಡಗು ಉತ್ತರ ಪೆಸೆಫಿಕ್ ಸಾಗರದಲ್ಲಿ ಸಾಗುತ್ತಿದ್ದಾಗ ಸ್ವಾಮಿಗಳಿಗೆ ತುಂಬಾ ಕಷ್ಟವಾಯಿತು. ಅಲ್ಲಿ ತೀವ್ರವಾದ ಚಳಿಯಿಂದ ಅವರು ಬಾಧೆಪಟ್ಟರು. ಶೀತ ಪ್ರದೇಶಗಳ ವಾಯುಗುಣದ ಪರಿಚಯ ಅಳಶಿಂಗರಿಗೆ ಇರಲಿಲ್ಲ. ಅವರು ಸ್ವಾಮಿಗಳಿಗೆ ಅಗತ್ಯವಾಗಿದ್ದ ಬೆಚ್ಚಗಿನ ಬಟ್ಟೆಗಳನ್ನು ಹೊಲಿಸಿಕೊಟ್ಟಿರಲಿಲ್ಲ. ಅದಕ್ಕಾಗಿ ಅಳಶಿಂಗರು ತುಂಬಾ ಪಶ್ಚಾತ್ತಾಪ ಪಟ್ಟರು.

ವಿವೇಕಾನಂದರು ಷಿಕಾಗೊವನ್ನು ತಲುಪಿದರು. ಅಮೆರಿಕ ಶ್ರೀಮಂತ ದೇಶ. ಅದರಲ್ಲಿಯೂ ಷಿಕಾಗೊ ನಗರ ತುಂಬಾ ದುಬಾರಿಯಾದ ಸ್ಥಳ. ಸ್ವಾಮಿಗಳಿಗೆ ಅಳಶಿಂಗರು ಕೊಟ್ಟಿದ್ದುದು ೧೮೭ ಪೌಂಡು ಮಾತ್ರ. ಅದರಲ್ಲಿ ಸ್ವಲ್ಪ ಹಣ ಪ್ರಯಾಣ ಕಾಲದಲ್ಲಿ ಖರ್ಚಾಗಿತ್ತು. ಷಿಕಾಗೊ ನಗರದಲ್ಲಿ ಹಣ ನೀರಿನಂತೆ ಸೋರಿಹೋಗುತ್ತಿತ್ತು. ದಿನಕ್ಕೆ ಒಂದು ಪೌಂಡಾದರೂ ವೆಚ್ಚಕ್ಕೆ ಬೇಕಾಗುತ್ತಿತ್ತು.

ಅಳಶಿಂಗರಿಗಾಗಲೀ ಅವರ ಗೆಳೆಯರಿಗಾಗಲೀ ಅಮೆರಿಕದ ರೀತಿ-ರಿವಾಜು, ಅಲ್ಲಿನ ವಾಯುಗುಣ, ಜನಜೀವನ, ಖರ್ಚುವೆಚ್ಚದ ಅಂದಾಜು ಇವಾವುವೂ ಗೊತ್ತಿರಲಿಲ್ಲ. ಸ್ವಾಮಿಗಳು ಷಿಕಾಗೊದಲ್ಲಿದ್ದ ಹತ್ತು-ಹನ್ನೆರಡು ದಿನಗಳಲ್ಲಿ ಅರ್ಧದಷ್ಟು ಹಣವೆಲ್ಲ ಖರ್ಚಾಗಿತ್ತು. ಸರಳ ಸ್ವಭಾವದ ಸ್ವಾಮಿಗಳನ್ನು ಷಿಕಾಗೊ ನಗರದಲ್ಲಿ ವಂಚಿಸಿ ಮೋಸ ಮಾಡಿದವರೂ ಇದ್ದರು.

ವಿಶ್ವಧರ್ಮ ಸಮ್ಮೇಳನ ನಡೆಯಲಿದ್ದುದು ೧೮೯೩ ರ ಸೆಪ್ಟೆಂಬರ್ ೧೧ ರಂದು. ಆಗಸ್ಟ್ ವೇಳೆಗೆ ಸ್ವಾಮಿಗಳಲಿದ್ದ ಹಣ ೭೦ ಪೌಂಡಿಗೆ ಇಳಿದಿತ್ತು. ಷಿಕಾಗೊ ನಗರಕ್ಕಿಂತ ಬಾಸ್ಟನ್ ನಗರ ಕಡಿಮೆ ಖರ್ಚಿನದೆಂದು ಯಾರೋ ಸಲಹೆ ಮಾಡಿದರು. ಸ್ವಾಮಿಗಳು ಬಾಸ್ಟನ್ನಿಗೆ ಬಂದರು.

ಎಂತಹ ಕೆಲಸ ಮಾಡಿದೆ!

ಹಣದ ತೊಂದರೆ ಹೆಚ್ಚಿತು. ಸ್ವಾಮಿಗಳಿಗೆ ಯೋಚನೆಯಾಯಿತು. ಇದರೊಡನೆ ನಿರಾಶೆಯ ಸುದ್ದಿ ಯೊಂದು ಬಂದಿತು. ವಿಶ್ವಧರ್ಮ ಸಮ್ಮೇಳನದ ಸಿದ್ಧತೆ ಮುಗಿದು ಹೋಗಿದ್ದುದರಿಂದ ಸ್ವಾಮಿಗಳಿಗೆ ಅದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕದಂತಾಯಿತು. ಅದರಲ್ಲಿ ಭಾಗವಹಿಸಬೇಕಾದರೆ ಭರತಖಂಡದ ಯಾವುದಾದರೂ ಸಂಸ್ಥೆಯ ಪ್ರತಿನಿಧಿಯೆಂದು ಪರಿಚಯಪತ್ರ ತರಬೇಕಾಗಿತ್ತು. ತನ್ನ ಪ್ರತಿನಿಧಿಯನ್ನು ಕಳಿಸಿಕೊಡುವುದಾಗಿ ಆ ಸಂಸ್ಥೆ ಸಮ್ಮೇಳನದ ವ್ಯವಸ್ಥಾಪಕ ರಿಗೆ ಮೊದಲೇ ತಿಳಿಸಬೇಕಾಗಿತ್ತು. ಅಳಶಿಂಗರಿಗೆ ಈ ವಿಚಾರಗಳಾವುವೂ ಗೊತ್ತಿರಲಿಲ್ಲ. ತಾವು ವಿವೇಕಾನಂದರನ್ನು ಅಮೆರಿಕಕ್ಕೆ ಕಳುಹಿಸಿಕೊಟ್ಟರೆ ಸಾಕು, ಜನ ಅವರನ್ನು ಸ್ವಾಗತಿಸುತ್ತಾರೆ ಎಂದು ನಂಬಿದ್ದರು ಅಳಶಿಂಗರು.

ಸ್ವಾಮಿಗಳು ತಮ್ಮ ಕಷ್ಟನಷ್ಟಗಳನ್ನೆಲ್ಲಾ ವಿವರಿಸಿ ಅಳಶಿಂಗರಿಗೆ ಕಾಗದ ಬರೆದರು: “ಈ ಕಾಗದವು ನಿನ್ನನ್ನು ತಲುಪುವವೇಳೆಗೆ ನನ್ನಲ್ಲಿರುವ ಹಣ ೬೦ ಪೌಂಡಿಗೆ ಇಳಿದಿರುತ್ತದೆ. ಷಿಕಾಗೊಕ್ಕೆ ಪುನಃ ಹೋಗುತ್ತೇನೋ ಇಲ್ಲವೋ ಹೇಳಲಾರೆ. ಎಷ್ಟೋ ಶ್ರಮದಿಂದ ಇಲ್ಲಿಗೆ ಬಂದನಂತರ ನನ್ನ ಕೆಲಸವನ್ನು ಸುಮ್ಮನೆ ಬಿಡಲಾರೆ. ನಿನ್ನಿಂದ ಸಾಧ್ಯವಾದಷ್ಟು ಹಣವನ್ನು ಕಳುಹಿಸು. ಇಲ್ಲಿ ಚಳಿ, ಹಸಿವು ಅಥವಾ ಕಾಯಿಲೆಯಿಂದ ನಾನು ಮೃತ ಪಟ್ಟರೂ ನೀನು ನನ್ನ ಕೆಲಸವನ್ನು ಮುಂದುವರಿಸು. ನನ್ನನ್ನು ಇಲ್ಲಿ ಪೋಷಣೆ ಮಾಡಲು ನಿನ್ನಿಂದ ಸಾಧ್ಯವಿಲ್ಲದಿದ್ದಲ್ಲಿ ಹಿಂದಕ್ಕೆ ಬರಲಾದರೂ ಸಾಕಷ್ಟು ಹಣವನ್ನು ಕಳುಹಿಸು.”

ಈ ಕಾಗದವನ್ನು ಓದಿ ಅಳಶಿಂಗರು ತುಂಬಾ ವ್ಯಥೆಪಟ್ಟರು. ಸ್ವಾಮೀಜಿ ದೂರದೇಶದಲ್ಲಿ ಹೊಟ್ಟೆ ಬಟ್ಟೆಗೆ ಸಾಲದೆ ಕಷ್ಟಪಡುತ್ತಿದ್ದಾರಲ್ಲಾ ಎಂದು ಮರುಗಿದರು. ಇನ್ನೂ ಸ್ವಲ್ಪ ಹಣ ಸಂಗ್ರಹಿಸಲು ಯೋಚಿಸಿದರು. ಒಂದೆರಡು ದಿನ ಕಳೆದಿರಬಹುದು ಅಳಶಿಂಗರಿಗೆ ಸ್ವಾಮಿಗಳಿಂದ ಒಂದು ಟೆಲಿಗ್ರಾಂ ಬಂದಿತು. “ಹಸಿವಿನಿಂದ ಕಷ್ಟಪಡುತ್ತಿದ್ದೇನೆ, ಹಣವೆಲ್ಲಾ ಖರ್ಚಾಗಿ ಹೋಗಿದೆ. ಹಿಂದಕ್ಕೆ ಬರುವುದಕ್ಕಾದರೂ ಹಣ ಕಳಿಸು” ಎಂದಿತ್ತು.

ಈ ತಂತಿ ವರ್ತಮಾನದಿಂದ ಅಳಶಿಂಗರು ತುಂಬಾ ನೊಂದುಕೊಂಡರು. ‘ಎಂತಹ ಕೆಲಸ ಮಾಡಿದೆ! ಯಾರು ಕಾಣದ, ಬಂಧು ಬಳಗವಾಗಲಿ, ಮಿತ್ರವೃಂದದವರಾಗಲಿ ಇಲ್ಲದ ದೂರದೇಶಕ್ಕೆ ಬಡ ಸಂನ್ಯಾಸಿಯೊಬ್ಬನನ್ನು ಹುರಿದುಂಬಿಸಿ ಕಳಿಸಿಬಿಟ್ಟೆನಲ್ಲಾ! ಆತನು ಹೊಟ್ಟೆಬಟ್ಟೆಗಿಲ್ಲದೆ ಕಂಗೆಡು ತ್ತಿದ್ದಾನಲ್ಲಾ!’ ಎಂದು ಮರುಗಿದರು. ಕೂಡಲೇ ತಮ್ಮ ಸ್ನೇಹಿತ ರಾಗಿದ್ದ ಕಲ್ಯಾಣರಾಮ ಅಯ್ಯರ್ ಬಳಿ ಹೋಗಿ ಒಂದು ಸಾವಿರ ರೂಪಾಯಿ ಸಾಲ ಮಾಡಿದರು. ಅದಕ್ಕೆ ತಮ್ಮ ಸಂಬಳದ ಹಣವನ್ನೂ ಕೂಡಿಸಿ ವಿವೇಕಾನಂದರಿಗೆ ತಂತಿ ಮನಿ ಆರ್ಡರ್ ಮಾಡಿದರು.

ವಿವೇಕಾನಂದ ವಿಜಯ

ಬಾಸ್ಟನ್ನಿನಲ್ಲಿ ಇದ್ದ ಸ್ವಾಮಿಗಳಿಗೆ ಅಳಶಿಂಗರಿಂದ ಹಣ ಬಂದಿತು. ಅದೇ ಸಮಯದಲ್ಲಿ ಅವರ ಅದೃಷ್ಟದ ಬಾಗಿಲೂ ತೆರೆಯಿತು. ಹಾರ್ವ್‌ರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ರೈಟ್ ಎಂಬುವರು ಸ್ವಾಮಿಗಳ ಪ್ರತಿಭೆಯಿಂದ ಮುಗ್ಧರಾಗಿದ್ದರು. ಅವರು ಸ್ವಾಮೀಜಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನವನ್ನೂ ತರಿಸಿಕೊಟ್ಟರು.

ವಿವೇಕಾನಂದರು ಈ ವಿಚಾರವಾಗಿ ಅಳಶಿಂಗರಿಗೆ ದೀರ್ಘವಾದ ಪತ್ರವನ್ನು ಬರೆದರು. ಹಣಕ್ಕಾಗಿ ಅಳಶಿಂಗರು ಪಟ್ಟಿರಬಹುದಾದ ಕಷ್ಟವನ್ನು ಸ್ಮರಿಸಿ ಪಶ್ಚಾತ್ತಾಪ ಪಟ್ಟು, “ನನ್ನ ತರುಣ ಮಿತ್ರನೇ, ದೀನದಲಿತರನ್ನೂ ಮೂಢರನ್ನೂ ಮೇಲಕ್ಕೆ ಎತ್ತಲು ಅಗತ್ಯವಾದ ಮರುಕ, ಅವರಿಗಾಗಿ ಪಡಬೇಕಾದ ಕಷ್ಟ ಇವೇ ನಾನು ನಿನಗೆ ಬಿಡುವ ಆಸ್ತಿ. ಯಾರಿಗಾಗಿ ಭಗವಂತನು ಅವತರಿಸುತ್ತಾನೋ ಯಾರನ್ನು ಪ್ರೀತಿಯಿಂದ ಕಾಣುತ್ತಾನೋ ಅವರ ಉದ್ಧಾರಕ್ಕಾಗಿ ನಿನ್ನ ಜೀವನವನ್ನು ಮುಡಿಪಾಗಿಡು.

ಹಸಿವು, ಚಳಿ, ಮಳೆ, ಸಾವು ಯಾವುದಕ್ಕೂ ಜಗ್ಗದೆ ಹೆಜ್ಜೆಯನ್ನು ಮುಂದಿಡು” ಎಂದು ತಿಳಿಸಿದ್ದರು.

ವಿಶ್ವಧರ್ಮ ಸಮ್ಮೇಳನಕ್ಕೆ ಸ್ವಾಮಿಗಳಿಗೆ ಆಹ್ವಾನ ದೊರಕಿದುದು ಅಳಶಿಂಗರಿಗೆ ತುಂಬಾ ಹರ್ಷವನ್ನುಂಟುಮಾಡಿತು. ಈ ವಾರ್ತೆಯನ್ನು ಅಳಶಿಂಗರು ತಮ್ಮ ಸ್ನೇಹಿತರಿಗೆಲ್ಲಾ ತಿಳಿಸಿದರು.

ವಿಶ್ವಧರ್ಮ ಸಮ್ಮೇಳನಕ್ಕೆ ಭಾರತದಿಂದ ಹೋಗಿದ್ದವರು ಹಲವಾರು ಜನರು. ಆದರೆ ಸನಾತನಧರ್ಮ ಮತ್ತು ಸಂಸ್ಕೃತಿ ಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಪಾಶ್ಚಾತ್ಯರಿಗೆ ಸರಳ ವಾಗಿ, ಸ್ಪಷ್ಟವಾಗಿ ವಿವರಿಸುವ ಶಕ್ತಿಯನ್ನು ಪಡೆದಿದ್ದವರು ವಿವೇಕಾನಂದರೊಬ್ಬರೇ. ಸೆಪ್ಟೆಂಬರ್ ೧೧ ರಂದು ಸ್ವಾಮಿಗಳ ಮೊದಲ ಭಾಷಣ. ಎಲ್ಲರ ಭಾಷಣಗಳೂ ಆದಮೇಲೆ ಕೊನೆಯಲ್ಲಿ ಸ್ವಾಮಿಗಳು ಎದ್ದರು.

ಜ್ಞಾನದೇವತೆಯಾದ ಶ್ರೀಶಾರದೆಗೆ ಮನಸ್ಸಿನಲ್ಲೆ ವಂದಿಸಿ, “ಅಮೆರಿಕದ ಸಹೋದರ ಸಹೋದರಿಯರೇ” ಎಂದು ಭಾಷಣವನ್ನು ಆರಂಭಿಸಿದರು. ಒಡನೆಯೇ ಆಕಾಶವೇ ಪ್ರತಿಧ್ವನಿಸುವಂತೆ ಜನ ಆನಂದದಿಂದ ಚಪ್ಪಾಳೆ ತಟ್ಟಿದರು. ಸ್ವಾಮಿಗಳು ಮಾತು ಮಂತ್ರವಾಗಿತ್ತು.

ಪ್ರಪಂಚದಲ್ಲಿರುವ ಜನಗಳೆಲ್ಲರೂ ಅಣ್ಣತಮ್ಮಂದಿರು, ಅಕ್ಕ ತಂಗಿಯರು ಅಲ್ಲವೇ? ಆಡುವ ಭಾಷೆ, ಹಾಕುವ ಉಡುಪು, ತಿನ್ನುವ ಆಹಾರ ಇವುಗಳಲ್ಲಿ ವ್ಯತ್ಯಾಸ ಇರಬಹುದು. ಆದರೆ ಎಲ್ಲ ಮಾನವರನ್ನು ರಕ್ಷಿಸುವ ಶಕ್ತಿ ಒಂದೇ ಅಲ್ಲವೆ? ಆದ್ದರಿಂದಲೇ ಸ್ವಾಮಿಗಳು ಎಲ್ಲರನ್ನೂ ಸೋದರ ಸೋದರಿಯರೇ ಎಂದು ಕರೆದರು. ಅಲ್ಲಿ ಸೇರಿದ್ದ ಜನಕ್ಕೆ ಇದು ಹೊಸ ಸಂದೇಶವಾಯಿತು.

ಒಂದರನಂತರ ಒಂದರಂತೆ ಎಡೆಬಿಡದೆ ಸಮ್ಮೇಳನದ ೧೭ ದಿನಗಳೂ ಸ್ವಾಮಿಗಳು ಉಪನ್ಯಾಸ ಮಾಡಿದರು. ಅಮೆರಿಕದ ಜನತೆಯ ಕಣ್ಮಣಿಯಾದರು. ಅನೇಕ ಕಡೆಗಳಿಂದ ಭಾಷಣ ಮಾಡಲು ಆಹ್ವಾನಗಳು ಬಂದವು. ಸ್ವಾಮಿಗಳು ಎಲ್ಲ ಕಡೆ ಗಳಿಗೂ ಹೋಗಿ ಭರತಖಂಡದ ಧರ್ಮ, ವೇದ ವೇದಾಂತ, ಶಾಸ್ತ್ರಗಳು, ಇತಿಹಾಸ, ಪುರಾಣ, ಸಂಸ್ಕೃತಿ, ನಾಗರಿಕತೆ ಇವನ್ನು ಕುರಿತು ಉಪನ್ಯಾಸ ಮಾಡಿದರು.

ಅಳಶಿಂಗರ ಸಂಭ್ರಮ

ಸ್ವಾಮಿಗಳು ತಮ್ಮ ದಿನದಿನದ ಚಟುವಟಿಕೆಗಳಲ್ಲಿ ಅಳಶಿಂಗರನ್ನು ಮರೆಯಲಿಲ್ಲ. ತಮ್ಮನ್ನು ಷಿಕಾಗೊಕ್ಕೆ ಕಳುಹಿಸಿದವರು ಅಳಶಿಂಗರೇ ಅಲ್ಲವೇ? ತಮ್ಮ ವಿಜಯದ ವಾರ್ತೆಯನ್ನು ಮೊದಲು ಅಳಶಿಂಗರಿಗೆ ತಿಳಿಸಿದರು. ಸ್ವಾಮಿಗಳ ದಿಗ್ವಿಜಯ ಈ ಶಿಷ್ಯನಿಗೆ ಅತ್ಯಾನಂದ ಉಂಟುಮಾಡಿತು. ಸಮ್ಮೇಳನದ ವರದಿಯನ್ನು ಅಳಶಿಂಗರು ಮನೆಯಿಂದ ಮನೆಗೆ ಹೋಗಿ ಹಿಗ್ಗಿನಿಂದ ಹಂಚಿದರು. ಸ್ವಾಮಿಗಳು ಕಳಿಸಿದ್ದ ಪತ್ರಿಕೆಗಳ ತುಣುಕುಗಳನ್ನು ತೋರಿಸಿದರು. ಸಮ್ಮೇಳನದ ವಿವರ ವರದಿಯನ್ನು ಮದರಾಸಿನ ಪತ್ರಿಕೆಗಳಲ್ಲಿ ಪ್ರಕಟಿಸುವ ವ್ಯವಸ್ಥೆ ಮಾಡಿದರು.

ಸ್ವಾಮಿಗಳ ದಿಗ್ವಿಜಯವನ್ನು ಸೂಕ್ತವಾಗಿ ಆಚರಿಸಲು ಅಳಶಿಂಗರು ಆಶಿಸಿದರು. ಈ ವಿಷಯವನ್ನು ಭರತಖಂಡ ದಲ್ಲಿದ್ದ ತಮ್ಮ ಸ್ನೇಹಿತರಿಗೆಲ್ಲಾ ತಿಳಿಸಿದರು. ಎಲ್ಲೆಡೆಯೂ ಅಭಿನಂದನಾ ಸಮಾರಂಭ ವನ್ನು ಆಚರಿಸಬೇಕೆಂದು ಸಲಹೆ ಕೊಟ್ಟರು.

ಮದರಾಸಿನಲ್ಲಿ ಶ್ರೇಷ್ಠ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಸುಬ್ರಹ್ಮಣ್ಯ ಅಯ್ಯರ್‌ರವರ ಅಧ್ಯಕ್ಷತೆಯಲ್ಲಿ ಬಹುದೊಡ್ಡ ಸಮಾರಂಭ ನಡೆಯಿತು. ಮೈಸೂರಿನ ಮಹಾರಾಜರು ಚಾಮರಾಜ ಒಡೆಯರ್, ರಾಮನಾಡಿನ ರಾಜರು ಭಾಸ್ಕರ ಸೇತುಪತಿ, ಖೇತ್ರಿಯ ರಾಜರು ಅಜಿತಸಿಂಹರೂ ತಮ್ಮ ಸಂತೋಷವನ್ನು ಸೂಚಿಸಿ ಅಭಿನಂದನೆಗಳನ್ನು ಕಳುಹಿಸಿದರು. ಬೆಂಗಳೂರಿನಲ್ಲಿ ದಿವಾನ್ ಶೇಷಾದ್ರಿ ಅಯ್ಯರ್‌ರವರ ಅಧ್ಯಕ್ಷತೆಯಲ್ಲಿ ದೊಡ್ಡ ಸಮಾರಂಭ ನಡೆದು ಸ್ವಾಮಿಗಳನ್ನು ಅಭಿನಂದಿಸಿದರು. ಕಲ್ಕತ್ತೆಯಲ್ಲಿಯೂ ಇತರ ಪ್ರಮುಖ ನಗರಗಳಲ್ಲಿಯೂ ವಿಶೇಷ ಸಮಾರಂಭಗಳು ಜರುಗಿದವು. ಪತ್ರಿಕೆಗಳು ಸ್ವಾಮಿಗಳ ವಿಜಯವನ್ನು ಪ್ರಶಂಸೆ ಮಾಡಿ ಲೇಖನಗಳನ್ನು ಬರೆದವು.

ಮುಂದೆ?

ಅಳಶಿಂಗರು ಸ್ವಾಮಿಗಳನ್ನು ಅಮೆರಿಕಕ್ಕೆ ಕಳುಹಿಸಿದ್ದು, ಸ್ವಾಮಿಗಳು ಅಲ್ಲಿ ಹಿಂದುಧರ್ಮದ ಪ್ರಚಾರ ಮಾಡಿದ್ದು, ಇವು ನಮ್ಮ ದೇಶದ ಚರಿತ್ರೆಯಲ್ಲಿ ಮುಖ್ಯವಾದ ಸಂಗತಿಗಳು.

ಅನಂತರ ಹಿಂದುದೇಶದಲ್ಲಿ ನಮ್ಮ ಜನಕ್ಕಾಗಿ ಮಾಡಬೇಕಾದ ಕೆಲಸ ಏನು ಎಂಬ ವಿಷಯದಲ್ಲಿ ಅಳಶಿಂಗ ಸ್ವಾಮಿಗಳಿಂದ ಮಾರ್ಗದರ್ಶನ ಪಡೆದರು. ಇದು ಸಹ ಪ್ರಮುಖವಾದ ವಿಚಾರವೇ. “ಪ್ರತಿಯೊಂದು ಜನಾಂಗವೂ ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕು. ಮದರಾಸಿನಲ್ಲಿ ಒಂದು ಭದ್ರವಾದ ಸ್ಥಳವನ್ನು ಹಿಡಿ. ಕೆಲವು ಜನ ಲೌಕಿಕ ಧರ್ಮ ಪ್ರಚಾರಕರೊಂದಿಗೆ ಕೆಲಸ ಆರಂಭಿಸು. ಯಾರು ಚೆನ್ನಾಗಿ ಸೇವೆ ಮಾಡಬಲ್ಲರೋ ಅವರೇ ನಾಯಕರಾಗಲು ಅರ್ಹರು. ನೀನು ಸಂಪೂರ್ಣ ನಿಸ್ವಾರ್ಥಿಯಾಗಿರು. ಸಹನೆ, ದೃಢತೆ, ಪಾವಿತ್ರ್ಯವನ್ನು ಕಾಪಾಡಿಕೋ” ಎಂದು ಸ್ವಾಮಿಗಳು ಅಳಶಿಂಗರಿಗೆ ಬರೆದಿದ್ದರು.

ಇನ್ನೊಂದು ಪತ್ರದಲ್ಲಿ “ಸ್ವಲ್ಪ ಹಣವನ್ನು ಸಂಗ್ರಹಿಸು. ಕೆಲವು ಮಾಯಾದೀಪ, ಭೂಪಟಗಳು, ಗೋಳ ಇವನ್ನು ಕೂಡಿಟ್ಟುಕೋ. ದೀನರು, ದರಿದ್ರರು, ಅಸ್ಪೃಶ್ಯರು ಮೊದಲಾದ ಸಮಾಜದ ಅತ್ಯಂತ ಕೆಳಗಿನವರನ್ನು ಕಲೆಹಾಕು. ಧರ್ಮದ ವಿಚಾರವಾಗಿ ಮಾತನಾಡು. ಅನಂತರ ಭೂಗೋಳ, ಖಗೋಳ, ವಿಜ್ಞಾನ ಮುಂತಾದ ವಿಷಯಗಳಲ್ಲಿ ಮಾಯಾ ದೀಪದ ಸಹಾಯದಿಂದ ಆ ಜನಕ್ಕೆ ಅರ್ಥವಾಗುವಂತೆ ಮಾತನಾಡು” ಎಂದು ಬೋಧಿಸಿದ್ದರು.

ಇಂತಹ ಕೆಲಸಗಳನ್ನು ಮಾಡಲು ಒಬ್ಬರಿಗಿಂತ ಹಲ ವರಿದ್ದರೆ ಒಳ್ಳೆಯದೆಂದು ಅಳಶಿಂಗರು ನಂಬಿದ್ದರು. ದೊಡ್ಡ ದೊಡ್ಡ ಕೆಲಸಗಳನ್ನು ಮಾಡಲು ಹೆಚ್ಚು ಹೆಚ್ಚು ಜನ ಶ್ರಮ ಪಡಬೇಕಲ್ಲವೇ? ಅಳಶಿಂಗರಿಗೆ ಅಂತಹ ಗೆಳೆಯರ ಬಳಗವೇ ಇತ್ತು. ಅವರು ಜನಸೇವೆ ಮಾಡುವ ಒಂದು ಸಂಸ್ಥೆಯನ್ನೇ ಸ್ಥಾಪಿಸಬೇಕೆಂದು ಯೋಚಿಸಿದರು. ಸ್ವಾಮಿಗಳು ಈ ವಿಷಯ ವನ್ನು ಕೇಳಿ ಸಂತೋಷಪಟ್ಟರು. ಅವರು ಅಳಶಿಂಗರಿಗೆ ಕಾಗದ ಬರೆದು, “ಸಣ್ಣ ಸಂಘವನ್ನು ಏರ್ಪಡಿಸು. ಕೆಲಸದ ಹೊಣೆಯನ್ನೆಲ್ಲಾ ನೀನು ವಹಿಸಿಕೋ. ಅದರ ನಾಯಕನಾಗಿ ಮೆರೆಯಬೇಡ. ಸೇವಕನಾಗಿ ಕೆಲಸ ಮಾಡು. ಹಣ ಸಂಗ್ರಹಿಸಿ ಮದರಾಸಿನಲ್ಲಿ ಒಂದು ದೇವಾಲಯವನ್ನು ನಿರ್ಮಿಸು. ಅದರಲ್ಲಿ ಒಂದು ವಾಚನಾಲಯ ವಿರಲಿ. ಸಾಧು ಸಂನ್ಯಾಸಿಗಳು ಉಳಿದುಕೊಳ್ಳಲು ಸ್ವಲ್ಪ ಜಾಗವಿರಲಿ. ಭಾಷಣ ಪ್ರಾರ್ಥನೆಗಳು ನಡೆಯಲು ಅವಕಾಶವಿರಲಿ” ಎಂದು ಸಲಹೆ ಮಾಡಿದರು. ಹೀಗೆ ಸಣ್ಣದಾಗಿ ರಾಮಕೃಷ್ಣ ಸಂಘ ಆರಂಭವಾಯಿತು. ಮುಂದೆ ಅದೇ ಆಲದ ಮರದಂತೆ ದೊಡ್ಡ ಸಂಸ್ಥೆಯಾಗಿ ಬೆಳೆಯಿತು.

ಹಿಂದುಧರ್ಮ ಮತ್ತು ವೇದಾಂತ ವಿಚಾರಗಳನ್ನು ತರುಣ ಜನಾಂಗದಲ್ಲಿ ಪ್ರಚಾರ ಮಾಡಲು ಒಂದು ಪತ್ರಿಕೆ ಅಗತ್ಯ ವಾಗಿತ್ತು. ಅಳಶಿಂಗರು ಈ ವಿಚಾರವಾಗಿ ಸ್ವಾಮಿಗಳಿಗೆ ಪತ್ರ ಬರೆದಿದ್ದರು. ಸ್ವಾಮಿಗಳೂ ಅಳಶಿಂಗರನ್ನು ಪ್ರೋತ್ಸಾಹಿಸಿದರು. ಅಳಶಿಂಗರು ’ಬ್ರಹ್ಮವಾದಿನ್’ ಎಂಬ ಆಂಗ್ಲ ಪತ್ರಿಕೆಯನ್ನು ಪ್ರಾರಂಭಿಸಿದರು. ಅವರೇ ಪತ್ರಿಕೆಯ ಸಂಪಾದಕ, ಮುದ್ರಕ ಮತ್ತು ಪ್ರಕಾಶಕರಾದರು.

ಆಗಿನ ಕಾಲದ ಅನೇಕ ಜನ ದೊಡ್ಡ ವಿದ್ವಾಂಸರು ಆ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದರು. ಸಂಸ್ಕೃತದ ಅನೇಕ ಶ್ರೇಷ್ಠ ಗ್ರಂಥಗಳು ಇಂಗ್ಲಿಷಿಗೆ ಅನುವಾದವಾಗಿ ಆ ಪತ್ರಿಕೆಯಲ್ಲಿ ಪ್ರಕಟವಾದವು. ಆ ಪತ್ರಿಕೆ ತುಂಬಾ ಜನಪ್ರಿಯ ಪತ್ರಿಕೆಯಾಗಿ ಪಾಶ್ಚಾತ್ಯ ದೇಶಗಳಿಗೂ ಹೋಗುತ್ತಿತ್ತು. ೧೮೯೫ ರ ಮೇ ತಿಂಗಳಲ್ಲಿ ಆರಂಭವಾದ ಆ ಪತ್ರಿಕೆ ೧೯೦೯ ರ ಮೇ ವರೆಗೆ ಅಳಶಿಂಗರ ಸಂಪಾದಕತ್ವದಲ್ಲಿ ಪ್ರಕಟವಾಯಿತು. ಅವರ ಮರಣದ ಅನಂತರ ೧೯೧೨ರ ವರೆಗೂ ಪ್ರಕಟವಾಗಿ ಅನಂತರ ನಿಂತುಹೋಯಿತು.

ಬ್ರಹ್ಮವಾದಿನ್ ಪತ್ರಿಕೆಯಲ್ಲದೆ ಅಳಶಿಂಗರು ಪ್ರಬುದ್ಧ ಭಾರತ, ಬಾಲಭಾರತ ಮತ್ತು ಇಂಡಿಯಾ ಪತ್ರಿಕೆಗಳ ಪ್ರಕಟಣೆ ಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಮರಳಿ ಬಂದ ಮಹಾತ್ಮ

ಅಮೆರಿಕದ ಜಯಪ್ರದ ಪ್ರವಾಸ ಮುಗಿಸಿ ಸ್ವಾಮಿಗಳು ಭಾರತಕ್ಕೆ ಮರುಪ್ರಯಾಣ ಆರಂಭಿಸಿದರು. ಅಳಶಿಂಗರಿಗೆ ಕಾಗದ ಬರೆದು ೧೮೯೭ರ ಜನವರಿ ೧೫ರ ವೇಳೆಗೆ ಕೊಲಂಬೋ ತಲುಪುವುದಾಗಿ ತಿಳಿಸಿದ್ದರು.

ಸ್ವಾಮಿಗಳ ಆಗಮನ ವಾರ್ತೆಯನ್ನು ಅಳಶಿಂಗರು ಸ್ನೇಹಿತರಿಗೆಲ್ಲಾ ತಿಳಿಸಿದರು. ಕೊಲಂಬೋದಿಂದ ಮದರಾಸಿನವರೆಗೆ ಇದ್ದ ತಮ್ಮ ಪ್ರಮುಖ ಸ್ನೇಹಿತರಿಗೆಲ್ಲಾ ಕಾಗದ ಬರೆದು ಸ್ವಾಮಿಗಳ ಸ್ವಾಗತಕ್ಕೆ ವ್ಯವಸ್ಥೆ ಮಾಡಲು ಸೂಚಿಸಿದರು. ಮದರಾಸ್ ನಗರದಲ್ಲಂತೂ ವಿಶೇಷವಾದ ಚಟುವಟಿಕೆಯಿಂದ ಈ ಗೆಳೆಯರ ಗುಂಪು ಕೆಲಸ ಮಾಡಿತು. ಅನೇಕ ಸ್ಥಳಗಳಿಂದ ಅಳಶಿಂಗರಿಗೆ ಕಾಗದಗಳು ಬಂದವು. ಸ್ವಾಮಿಗಳನ್ನು ತಮ್ಮತಮ್ಮ ಊರುಗಳಿಗೂ ಕರೆತರಬೇಕೆಂದು ಅವರೆಲ್ಲಾ ಕೇಳಿಕೊಂಡಿದ್ದರು.

ವಿವೇಕಾನಂದರು ಕೈಚಾಚಿ ಆಳಶಿಂಗರನ್ನು ಅಪ್ಪಿಕೊಂಡರು.

ಅಳಶಿಂಗರು ಸ್ವಾಮಿಗಳನ್ನು ರಾಮೇಶ್ವರದಲ್ಲಿಯೇ ಎದುರುಗೊಂಡರು. ವಿವೇಕಾನಂದರು ಅಳಶಿಂಗರನ್ನು ನೋಡಿದ್ದೇ ತಡ, ಕೈ ಚಾಚಿ ಅವರನ್ನು ಅಪ್ಪಿಕೊಂಡರು. ಕಾಣದ ದೂರದ ನಾಡಿಗೆ ಹೋಗಿ ಭಾರತದ ಮತ್ತು ಹಿಂದುಧರ್ಮದ ಯಶಸ್ಸಿನ ಪತಾಕೆಯನ್ನು ಮುಗಿಲು ಮುಟ್ಟಿಸಿದ ಸ್ವಾಮೀಜಿಯವರನ್ನು ಕಂಡು ಅಳಶಿಂಗರಿಗೆ ಮಾತೇ ಹೊರಡಲಿಲ್ಲ. ಇಬ್ಬರ ಕಣ್ಣುಗಳಲ್ಲಿಯೂ ನೀರು.

ರಾಮೇಶ್ವರದಿಂದ ದಾರಿಯುದ್ದಕ್ಕೂ ಪ್ರತಿ ಊರಿನಲ್ಲಿ ಸ್ವಾಮೀಜಿಯವರಿಗೆ ಪ್ರೇಮದ, ಅಭಿಮಾನದ, ವೈಭವದ ಸ್ವಾಗತ. ಅಳಶಿಂಗರು ಮಾಡಿದ್ದ ವ್ಯವಸ್ಥೆಯನ್ನು ಕಂಡು ಸ್ವಾಮೀಜಿ ತುಂಬಾ ಸಂತೋಷ ಪಟ್ಟರು.

ಮದರಾಸಿನಲ್ಲಿ ಶ್ರೇಷ್ಠ ನ್ಯಾಯಾಲಯದ ನ್ಯಾಯಮೂರ್ತಿ ಯಾಗಿದ್ದ ಎಸ್. ಸುಬ್ರಹ್ಮಣ್ಯ ಅಯ್ಯರ್‌ರವರ ನೇತೃತ್ವದಲ್ಲಿ ಅಳಶಿಂಗರ ಅಪೇಕ್ಷೆಯಂತೆ ಹಿಂದೂ, ಮದರಾಸ್ ಟೈಮ್ಸ್ ಮುಂತಾದ ಪತ್ರಿಕೆಗಳು ವಿಶೇಷ ಲೇಖನಗಳನ್ನು ಬರೆದವು.

ಸ್ವಾಮಿಗಳ ರೈಲು ಮದರಾಸಿಗೆ ಬರುತ್ತಿದ್ದಂತೆಯೇ ಮುಗಿಲು ಮುಟ್ಟುವ ಜಯಘೋಷದಿಂದ ಜನ ಅವರನ್ನು ಸ್ವಾಗತಿಸಿದರು. ಸ್ವಾಮಿಗಳು ಕುಳಿತ ಸಾರೋಟನ್ನು ಯುವಕರೇ ಎಳೆದು ಊರಲ್ಲೆಲ್ಲಾ ಮೆರವಣಿಗೆ ಮಾಡಿದರು.

ಸ್ವಾಗತವು ಭವ್ಯವಾಗಿ ಇರಬೇಕೆಂಬುದು ಅಳಶಿಂಗರ ಆಶಯವಾಗಿತ್ತು. ಅದರಂತೆಯೇ ಮೆರವಣಿಗೆ ಸಾಗಿದ ದಾರಿ ಯುದ್ದಕ್ಕೂ ತೋರಣಗಳು, ಚಪ್ಪರಗಳು, ವಿವಿಧ ಬಣ್ಣದ ಕಮಾನುಗಳು ಅಲಂಕಾರದಿಂದ ರಂಜಿಸಿದ್ದವು. ಸ್ತ್ರೀ ಪುರುಷರು ದಕ್ಷಿಣ ದೇಶದ ಪದ್ಧತಿಯಂತೆ ತೆಂಗಿನಕಾಯಿಯನ್ನು ನಿವಾಳಿಸಿದರು, ಆರತಿಯನ್ನು ಬೆಳಗಿದರು.

ಸ್ವಾಮಿಗಳಿಗೆ ಮದರಾಸಿನ ಅನೇಕ ಸಂಘಸಂಸ್ಥೆಗಳು ಬಿನ್ನವತ್ತಳೆಯನ್ನು ಅರ್ಪಿಸಿದವು. ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಇಂಗ್ಲಿಷ್ ಭಾಷೆಗಳಲ್ಲಿ ಸ್ವಾಗತ ಪತ್ರಗಳು ಒಪ್ಪಿಸಲ್ಪಟ್ಟವು. ಮದರಾಸಿನಲ್ಲಿ ಇದ್ದಷ್ಟು ದಿನವೂ ಸ್ವಾಮಿಗಳಿಗೆ ಬಿಡುವೇ ಇರಲಿಲ್ಲ. ಅನೇಕ ಸಂಘಸಂಸ್ಥೆಗಳಲ್ಲಿ ಭಾಷಣಗಳನ್ನು ಮಾಡಿದರು. “ತರುಣರು ತಮ್ಮ ಜಡತೆಯನ್ನು ಕೊಡಹಿ ಕಾರ್ಯಶೀಲರಾಗಬೇಕು. ಆತ್ಮಾಭಿಮಾನವನ್ನು ಬೆಳೆಸಿಕೊಳ್ಳ ಬೇಕು. ನಮ್ಮ ಧರ್ಮ, ಸಂಸ್ಕೃತಿಗಳ ಬಗೆಗೆ ಹೆಮ್ಮೆ ತಾಳಿ ಭವಿಷ್ಯದಲ್ಲಿ ನಂಬಿಕೆ ಹೊಂದಿ ಕಾರ್ಯಶೀಲರಾಗಬೇಕು” ಎಂದು ಪದೇಪದೇ ತರುಣರಿಗೆ ಬೋಧಿಸಿದರು.

ಸ್ವಾಮಿಗಳೀಗೆ ಪ್ರವಾಸ, ಉಪನ್ಯಾಸ, ಚರ್ಚೆ, ಭಾಷಣಗಳಿಂದ ತುಂಬಾ ದಣಿವಾಗಿತ್ತು. ಅವರು ಮದರಾಸಿನಿಂದ ನೇರವಾಗಿ ಕಲ್ಕತ್ತೆಗೆ ಹೋಗುವ ನಿರ್ಧಾರ ಮಾಡಿದರು. ಸ್ವಾಮಿಗಳು ಮದರಾಸಿನಲ್ಲಿಯೇ ಸ್ವಲ್ಪ ದಿನಗಳಿದ್ದು ರಾಮಕೃಷ್ಣ ಸಂಘದ ಚಟುವಟಿಕೆಗಳಿಗೆ ನೆರವಾಗಬೇಕೆಂದು ಅಳಶಿಂಗರು ಕೇಳಿಕೊಂಡರು. ಅದಕ್ಕೆ ಸ್ವಾಮಿಗಳು, “ಪುನಃ ಬರುತ್ತೇನೆ ಮಗೂ. ಈಗ ಹಿಮಾಲಯದ ತಪ್ಪಲಲ್ಲಿ ಸ್ವಲ್ಪ ಕಾಲ ವಿಶ್ರಾಂತಿಯನ್ನು ಪಡೆಯುತ್ತೇನೆ. ಅನಂತರ ಪ್ರಚಂಡ ಬಿರುಗಾಳಿಯಂತೆ ದೇಶವನ್ನೆಲ್ಲಾ ಸುತ್ತಿ ಧರ್ಮಪ್ರಸಾರ ಮಾಡು ತ್ತೇನೆ” ಎಂದು ಭರವಸೆ ನೀಡಿದರು.

ಮದರಾಸಿನಿಂದ ಹಡಗು ಹತ್ತಿ ಕಲ್ಕತ್ತೆಗೆ ಹೊರಟ ಸ್ವಾಮಿ ಗಳೊಡನೆ ಅಳಶಿಂಗರೂ ಅವರ ಹಲವಾರು ಜನ ಸ್ನೇಹಿತರೂ ಹೊರಟರು. ಕಲ್ಕತ್ತೆಯಲ್ಲಿ ಅಳಶಿಂಗರು ರಾಮಕೃಷ್ಣ ಪರಮ ಹಂಸರ ಜಯಂತಿ ಉತ್ಸವದಲ್ಲಿ ಪಾಲ್ಗೊಂಡು ಅನಂತರ ಮದರಾಸಿಗೆ ಹಿಂತಿರುಗಿದರು.

ನನ್ನ ಪರಮ ಪ್ರಿಯ ಶಿಷ್ಯ

ಅಳಶಿಂಗರಲ್ಲಿ ವಿವೇಕಾನಂದರಿಗೆ ಅಗಾಧವಾದ ಪ್ರೀತಿ ವಿಶ್ವಾಸವಿತ್ತು. “ಎಂತಹ ಸ್ವಾರ್ಥರಹಿತನೂ ಕಾರ್ಯಶೀಲನೂ ಗುರುವಾಜ್ಞೆಯನ್ನು ಪಾಲಿಸುವುದರಲ್ಲಿ ನಿಷ್ಠನೂ ಪ್ರಾಮಾ ಣಿಕನೂ ವಿಧೇಯನೂ ಆದ ಶಿಷ್ಯನು ದೊರಕುವುದು ತುಂಬಾ ಅಪರೂಪ” ಎಂದು ಅಳಶಿಂಗರ ವಿಚಾರವಾಗಿ ಹೇಳುತ್ತಿದ್ದರು.

ಜೊಸೆಫೀನ್ ಮ್ಯಾಕ್ಲಿಯೋಡ್ ಎಂಬಾಕೆ ಅಳಶಿಂಗರ ಉಡುಪು, ಹಣೆಯಲ್ಲಿ ಧರಿಸುತ್ತಿದ್ದ ನಾಮಗಳು ಇವನ್ನೆಲ್ಲಾ ನೋಡಿ ಜಿಗುಪ್ಸೆ ವ್ಯಕ್ತಪಡಿಸಿದಳು. ಕೂಡಲೇ ವಿವೇಕಾನಂದರು ಆಕೆಯನ್ನು ತರಾಟೆಗೆ ತೆಗೆದುಕೊಂಡರು. “ಅವರನ್ನು ಯಾರೆಂದು ತಿಳಿದುಕೊಂಡಿರುವಿ? ನನ್ನ ಪರಮ ಪ್ರಿಯ ಶಿಷ್ಯ. ನನ್ನನ್ನು ಅಮೆರಿಕಕ್ಕೆ ಕಳುಹಿಸಲು ಹಗಲಿರುಳೂ ಶ್ರಮಿಸಿದ ನಿಷ್ಠಾವಂತ” ಎಂದು ಗಡುಸಾದ ಧ್ವನಿಯಲ್ಲಿ ನುಡಿದರು.

ತಮ್ಮಲ್ಲಿ ಹಣ ತೀರಿಹೋಗಿ ತೀರಾ ಕಷ್ಟ ಬಂದಾಗ ಸ್ವಾಮಿಗಳು ಅಳಶಿಂಗರನ್ನು ಹಣಕ್ಕಾಗಿ ಕೇಳಿ ತಂತಿ ಕಳುಹಿಸಿದ್ದರಷ್ಟೆ. ಅಳಶಿಂಗರು ಹಣವನ್ನು ಕಳುಹಿಸಿದ ಅನಂತರ ಸ್ವಾಮಿಗಳಿಗೆ ಪಶ್ಚಾತ್ತಾಪ ಆಯಿತು. ಬಡ ಉಪಾಧ್ಯಾಯ, ದೊಡ್ಡ ಸಂಸಾರಿ, ಧಾರಾಳ ಬುದ್ಧಿಯವನು, ದಾಕ್ಷಿಣ್ಯ ಸ್ವಭಾವದವನೂ ಆದ ಅಳಶಿಂಗರನ್ನು ಹಣಕ್ಕಾಗಿ ಪೀಡಿಸಿದೆನಲ್ಲಾ ಎಂದು ವಿವೇಕಾನಂದರು ಮರುಗಿದರು. “ಕ್ಷಣಕಾಲದ ದೌರ್ಬಲ್ಯದಿಂದ ನಿನಗೆಷ್ಟು ತೊಂದರೆಯಾಯಿತು. ಅದಕ್ಕಾಗಿ ವಿಷಾದಿಸುತ್ತೇನೆ. ಆ ಸಮಯದಲ್ಲಿ ನನ್ನ ಜೇಬಿನಲ್ಲಿ ಕಾಸಿರಲಿಲ್ಲ. ಅನಂತರ ದೇವರು ನನಗೆ ಸ್ನೇಹಿತರನ್ನು ಕರುಣಿಸಿದನು” ಎಂದು ಪತ್ರ ಬರೆದರು.

ಅಳಶಿಂಗರು ತುಂಬಾ ಧಾರಾಳಿ. ಸಹಾಯಕ್ಕಾಗಿ ಜನ ಅವರನ್ನು ಸದಾ ಮುತ್ತುತ್ತಿದ್ದರು. ಸಹಾಯ ಪಡೆದವರು ಹಣವನ್ನು ಹಿಂತಿರುಗಿಸುವ ಯೋಚನೆಯನ್ನೇ ಮಾಡುತ್ತಿರಲಿಲ್ಲ.

ಅಳಶಿಂಗರ ಸಂಸಾರವೂ ದೊಡ್ಡದು. ಐದು ಜನ ಮಕ್ಕಳು, ಹೆಂಡತಿ, ವೃದ್ಧ ಮಾತೆ ಮತ್ತು ನೆಂಟರಿಷ್ಟರನ್ನು ಆವರು ಪೋಷಿಸಬೇಕಾಗಿತ್ತು. ಅಳಶಿಂಗರ ಪರಿಸ್ಥಿತಿಯನ್ನೆಲ್ಲಾ ಸ್ವಾಮಿ ಗಳು ಸೂಕ್ಷ್ಮವಾಗಿ ಗಮನಿಸಿದ್ದರು. ಹೇಗಾದರೂ ಅಳಶಿಂಗರನ್ನು ಈ ಸಂಸಾರದ ತೊಂದರೆಯಿಂದ ಬಿಡುಗಡೆ ಮಾಡಿಸಬೇಕೆಂದು ಸ್ವಾಮಿಗಳು ಅಪೇಕ್ಷಿಸಿದರು. “ನಿನ್ನನ್ನೂ ನಿನ್ನ ಸಂಸಾರವನ್ನೂ ಕಷ್ಟಗಳಿಂದ ಬಿಡುಗಡೆ ಮಾಡುತ್ತೇನೆ. ಪೂರ್ಣವಾಗಿ ದೇಶಸೇವಾ ಕಾರ್ಯದಲ್ಲಿಯೇ ಮಗ್ನನಾಗಿರುವಂತೆ ಮಾಡುತ್ತೇನೆ” ಎಂದು ಸ್ವಾಮಿಗಳು ಬರೆದಿದ್ದರು.

ಅಳಶಿಂಗರು ಸದಾ ಇತರರ ಕಷ್ಟವನ್ನೂ ದುಃಖವನ್ನೂ ಕುರಿತು ಯೋಚಿಸುತ್ತಿದ್ದರು. ಇತರರ ಕಲ್ಯಾಣಕ್ಕಾಗಿ, ಕ್ಷೇಮಕ್ಕಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಕಷ್ಟ, ತೊಂದರೆ ಇವನ್ನು ಕುರಿತು ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇದೂ ಸ್ವಾಮಿಗಳಿಗೆ ಗೊತ್ತಿತ್ತು. “ಅದೋ ಅಲ್ಲಿ ಮದರಾಸ್ ನಗರದ ರಸ್ತೆಯಲ್ಲಿ ಓಡಾಡುತ್ತಿರುವ ವಾಹನಗಳ ಸದ್ದುಗದ್ದಲದ ಪರಿವೆ ಇಲ್ಲದೆ, ತನ್ನ ಸ್ವಂತ ಕಷ್ಟಗಳ ಚಿಂತೆ ಇಲ್ಲದೆ, ಸದಾ ಇತರರ ಯೋಗಕ್ಷೇಮ, ಕಲ್ಯಾಣ, ಮಾನವ ಜನಾಂಗದ ಭವಿಷ್ಯ ಇವನ್ನು ಕುರಿತು ಯೋಚಿಸುತ್ತಿರುತ್ತಾನೆ ನಮ್ಮ ಅಳಶಿಂಗ ಎಂದು ಹೆಮ್ಮೆಯಿಂದ ಅಳಶಿಂಗರ ಬಗೆಗೆ ಹೇಳುತ್ತಿದ್ದರು.

ಅಳಶಿಂಗರದು ತ್ಯಾಗದ ಜೀವನ; ಮಾನವ ಸೇವೆಗೆ ಮುಡಿಪಾದ ಜೀವನ.

ಸೇವೆಯೆ ಉಸಿರು

ಜನಸೇವೆಯಲ್ಲಿ ಅಳಶಿಂಗರು ಜೀವನವನ್ನೇ ಕಳೆದರು. ಈ ಸೇವೆಯ ಆದರ್ಶವನ್ನು ಕೊನೆಯವರೆಗೂ ಅವರು ಪಾಲಿಸಿದರು.

ಅವರ ಮನೆಗೆ ಸದಾ ಜನ ಬರುತ್ತಿದ್ದರು. ತಮ್ಮ ಕಷ್ಟ, ಬಡತನ, ರೋಗರುಜಿನ, ಅನನುಕೂಲಗಳನ್ನು ಹೇಳಿ ಸಹಾಯ ಪಡೆಯುತ್ತಿದ್ದರು. ಅಳಶಿಂಗರು ಯಾರನ್ನೂ ಸಹಾಯವಿಲ್ಲದೆ ಹಿಂದಕ್ಕೆ ಕಳುಹಿಸುತ್ತಿರಲಿಲ್ಲ.

ಅಳಶಿಂಗರು ದೇಹಿ ಎಂದವರಿಗೆ ನಾಸ್ತಿ ಎಂದವರಲ್ಲ. ಫೀಸಿಗಾಗಿ, ಪುಸ್ತಕಗಳಿಗಾಗಿ, ಹಾಸ್ಟೆಲ್ ಸೀಟುಗಳಿಗಾಗಿ ವಿದ್ಯಾರ್ಥಿಗಳು ಬರುತ್ತಿದ್ದರು. ಮದುವೆ, ಮುಂಜಿ ಎಂದು ಬೇಡುವವರೂ ಬರುತ್ತಿದ್ದರು. ಅಳಶಿಂಗರು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ತಮ್ಮನ್ನು ತೊಂದರೆಗೆ ಸಿಕ್ಕಿಸಿದವರಲ್ಲಿಯೂ ಕೃತಘ್ನರಲ್ಲಿಯೂ ಕೂಡ ಅಳಶಿಂಗರು ದಯೆ ತೋರುತ್ತಿದ್ದರು. ಒಬ್ಬಾತ ಅಳಶಿಂಗರ ಭರವಸೆಯ ಮೇಲೆ ತುಂಬಾ ಸಾಲ ಪಡೆದ. ಸಾಲವನ್ನು ತೀರಿಸದೆ ತಲೆ ತಪ್ಪಿಸಿಕೊಂಡ. ಅಳಶಿಂಗರು ಆ ಸಾಲವನ್ನೆಲ್ಲಾ ತೀರಿಸಿದರು.

ಅನಂತರ ಎಷ್ಟೋ ವರ್ಷಗಳ ಮೇಲೆ ಅವನು ಬಂದಾಗ ಅವನನ್ನು ಆ ಸಾಲದ ವಿಚಾರವಾಗಿ ಕೇಳಲೇ ಇಲ್ಲ. ಮಂಡ್ಯದ ಬಳಿ ಇದ್ದ ಅವರ ಜಮೀನಿನ ಉತ್ಪನ್ನ ಎಂದೂ ಅವರಿಗೆ ಬಂದುದೇ ಇಲ್ಲ. ಅದನ್ನು ಯಾರಾರೋ ತೆಗೆದುಕೊಂಡು ಬಿಡುತ್ತಿದ್ದರು.

ಅಳಶಿಂಗರ ಹಣಕಾಸಿನ ಪರಿಸ್ಥಿತಿ ಗೊತ್ತಿದ್ದ ಅಮೆರಿಕದ ಮಿತ್ರರೊಬ್ಬರು ಅಳಶಿಂಗರಿಗೆ ಧನಸಹಾಯ ಮಾಡಲು ಇಚ್ಛೆಪಟ್ಟರು. ತಾವು ಒಂದು ಲಕ್ಷ ರೂಪಾಯಿ ಕೊಡುವು ದಾಗಿಯೂ ಅಳಶಿಂಗರು ಅದನ್ನು ತೆಗೆದುಕೊಳ್ಳುವಂತೆ ಒಪ್ಪಿಸ ಬೇಕೆಂದೂ ಅವರು ಸೋದರಿ ನಿವೇದಿತಾರನ್ನು ಕೇಳಿ ಕೊಂಡರು. ಆದರೆ ಅಳಶಿಂಗರು ಒಪ್ಪಲಿಲ್ಲ.

ಸಾವಿಗೂ ಚಿಂತಿಸದ ಚೇತನ

ಅಳಶಿಂಗರ ಕೊನೆಯ ದಿನಗಳು ಕೇವಲ ಕಷ್ಟದ ದಿನಗಳೇ ಆಗಿದ್ದವು. ಅವರ ಪತ್ನಿ ೧೯೦೫ ರಲ್ಲಿ ತೀರಿಕೊಂಡಿದ್ದರು. ತೊಂದರೆಗಳ ಮೇಲೆ ತೊಂದರೆಗಳು ಬರುತ್ತಿದ್ದವು. ಮಕ್ಕಳು ಇನ್ನೂ ಚಿಕ್ಕವರಾಗಿದ್ದರು. ಮನೆಯಲ್ಲಿ ಮುದಿ ತಾಯಿ ಎಲ್ಲವನ್ನೂ ನೋಡಿಕೊಳ್ಳಬೇಕಾಗಿದ್ದಿತು. ಅಳಶಿಂಗರ ಆರೋಗ್ಯವೂ ಆಗಾಗ ಕೆಡುತ್ತಿತ್ತು.

ಬಾಯಲ್ಲಿ ಹುಣ್ಣು ಆರಂಭವಾಗಿ ದವಡೆಯ ಕ್ಯಾನ್ಸರ್ ಆಯಿತು. ಅವರಿಗಾಗಿ ಅಮೆರಿಕದಿಂದ ಬಂದ ಔಷಧದ ಸೀಸೆ ಪೊಟ್ಟಣದಲ್ಲಿಯೇ ಒಡೆದುಹೋಗಿ ಔಷಧವೆಲ್ಲಾ ಹಾಳಾಗಿತ್ತು. ೧೯೦೯ ರ ಮೇ ೧೧ ರಂದು ಅಳಶಿಂಗರು ಭಗವಂತನ ಸನ್ನಿಧಿ ಸೇರಿದರು. ಆಗ ಅವರಿಗೆ ಕೇವಲ ೪೪ ವಯಸ್ಸು.

ಮೃತ್ಯುಶಯ್ಯೆಯಲ್ಲಿದ್ದಾಗಲೂ ಅಳಶಿಂಗರು ಬ್ರಹ್ಮವಾದಿನ್ ಪತ್ರಿಕೆ, ರಾಮಕೃಷ್ಣ ಸಂಘ, ರಾಷ್ಟ್ರದ ಉನ್ನತಿ ಇವುಗಳನ್ನು ಕುರಿತು ಯೋಚಿಸುತ್ತಿದ್ದರು. ಕೊನೆಯವರೆಗೂ ಶಾಂತರಾಗಿಯೂ ಸ್ಥಿರಮನಸ್ಕರಾಗಿಯೂ ಇದ್ದ ಅಳಶಿಂಗರು ಸಾವನ್ನು ಧೈರ್ಯವಾಗಿಯೂ ಸಹಜವಾಗಿಯೂ ಸ್ವಾಗತಿಸಿದರು.

ಸ್ವಾಮಿ ವಿವೇಕಾನಂದರನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯ ಮಾಡಿಸಿದ ಅಳಶಿಂಗರಂತಹ ಗುರುಭಕ್ತರೂ ದೇಶಭಕ್ತರೂ ತುಂಬಾ ವಿರಳ.