ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್ ಅಥವಾ ಬಿಪಿಒ ನಮ್ಮ ದೇಶದ ಜನರಿಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ. ಗ್ರಾಹಕಸೇವೆ, ಹಣಕಾಸು, ಆರೋಗ್ಯ, ಜೀವವಿಮೆ – ಹೀಗೆ ಬಿಪಿಒ ದೆಸೆಯಿಂದ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವ ಕ್ಷೇತ್ರಗಳ ಸಾಲಿಗೆ ಇದೀಗ ಶಿಕ್ಷಣ ಕ್ಷೇತ್ರ ಕೂಡ ಸೇರಿಕೊಂಡಿದೆ.

ಮಕ್ಕಳಿಗೆ ಅವರ ವಿದ್ಯಾಭ್ಯಾಸದಲ್ಲಿ ಸಹಾಯಮಾಡುವ – ಅಂದರೆ, ಮನೆಪಾಠ ಹೇಳಿಕೊಡುವ – ನುರಿತ ಶಿಕ್ಷಕರಿಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ (ಮುಖ್ಯವಾಗಿ ಅಮೆರಿಕಾದಲ್ಲಿ) ಬೇಡಿಕೆ ಹೆಚ್ಚುತ್ತಿದೆ. ಆದರೆ ಅಮೆರಿಕಾದಲ್ಲೇ ಇರುವ ಶಿಕ್ಷಕರಿಂದ ಈ ಸೇವೆ ಪಡೆಯಲು ತೆರಬೇಕಾದ ಶುಲ್ಕ ತೀರಾ ದುಬಾರಿ ಎಂಬ ಭಾವನೆ ಇದೆ.

ಇದು ನಿಜವೂ ಹೌದು. ’ಎಜುಕೇಷನ್ ಔಟ್‌ಸೋರ್ಸಿಂಗ್’ನ ಕಲ್ಪನೆ ಹುಟ್ಟಿಕೊಂಡಿರುವುದು ಇದೇ ಕಾರಣದಿಂದಾಗಿ. ಭಾರತದ ಯಾವುದೋ ಒಂದು ಮೂಲೆಯಿಂದ ಕೆಲಸಮಾಡುವ ಇಂತಹ ಸಂಸ್ಥೆಗಳು ಅಮೆರಿಕಾದಲ್ಲಿ ಮನೆಪಾಠ ಹೇಳಿಸಿಕೊಳ್ಳಲು ತೆರಬೇಕಾದ ಶುಲ್ಕದ ಐದಾರು ಪಟ್ಟು ಕಡಿಮೆ ದರದಲ್ಲಿ ತಮ್ಮ ಸೇವೆ ಒದಗಿಸುತ್ತಿವೆ; ಶೈಕ್ಷಣಿಕ ನೆರವಿನ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಜೊತೆಗೆ ಪ್ರತಿಭಾವಂತ ಶಿಕ್ಷಕರಿಗೆ ಒಳ್ಳೆಯ ಉದ್ಯೋಗದ ಅವಕಾಶವನ್ನೂ ಸೃಷ್ಟಿಸಿವೆ.

ಈ ಸಂಸ್ಥೆಗಳ ಕಾರ್ಯವಿಧಾನ ಹೀಗೆ: ಅಮೆರಿಕಾದಲ್ಲಿರುವ ವಿದ್ಯಾರ್ಥಿಗಳು ಮೊದಲಿಗೆ ಸಂಸ್ಥೆಯ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಆನ್‌ಲೈನ್ ಮನೆಪಾಠಕ್ಕೆ ಸೇರಿಕೊಳ್ಳುತ್ತಾರೆ. ಭಾರತದ ಯಾವುದೇ ನಗರದಲ್ಲಿರುವ ತಮ್ಮ ಶಿಕ್ಷಕರನ್ನು ಸಂಪರ್ಕಿಸಲು ಈ ವಿದ್ಯಾರ್ಥಿಗಳು ಅಂತರಜಾಲವನ್ನು ಬಳಸುತ್ತಾರೆ. ಅಧ್ಯಯನ, ಮನೆಗೆಲಸ ಹೀಗೆ ಯಾವುದೇ ಸಂದರ್ಭದಲ್ಲಿ ನೆರವು ಬೇಕಿದ್ದರೂ ಕೂಡ ಅವರು ತಮ್ಮ ಶಿಕ್ಷಕರನ್ನು ಸಂಪರ್ಕಿಸುವುದು ಸಾಧ್ಯ, ಗಂಟೆಗೆ ಹದಿನೆಂಟೋ ಇಪ್ಪತ್ತೋ ಡಾಲರುಗಳ ಶುಲ್ಕ ನೀಡಬೇಕು ಅಷ್ಟೆ. ಅಮೆರಿಕಾದ ಶಿಕ್ಷಕರಿಂದ ಇದೇ ಬಗೆಯ ನೆರವಿಗಾಗಿ ಪ್ರತಿ ಗಂಟೆಗೆ ನೂರರಿಂದ ನೂರಾ ಇಪ್ಪತ್ತೈದು ಡಾಲರ್‌ಗಳ ಶುಲ್ಕ ತೆರಬೇಕಾಗುತ್ತದೆ ಎಂಬುದು ಗಮನಾರ್ಹ!

ವಿಜ್ಞಾನ, ಗಣಿತಗಳ ಜೊತೆಗೆ ಶಿಕ್ಷಣದಲ್ಲೂ ಉನ್ನತ ಪದವಿಗಳನ್ನು ಹೊಂದಿರುವ ಪ್ರತಿಭಾವಂತರು ಇಂತಹ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಬಹುದು. ವಿದ್ಯಾರ್ಹತೆ ಹಾಗೂ ಅನುಭವವನ್ನು ಆಧರಿಸಿ ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳ ಪ್ರಾರಂಭಿಕ ವೇತನ ನಿಗದಿಪಡಿಸುವ ಪರಿಪಾಠ ಸದ್ಯಕ್ಕೆ ಚಾಲ್ತಿಯಲ್ಲಿದೆ.

ಬೆಂಗಳೂರಿನ ಸ್ಟಡಿಲಾಫ್ಟ್ (www.studyloft.com) ಹಾಗೂ ಕೊಚ್ಚಿನ್‌ನ ಗ್ರೋಯಿಂಗ್ ಸ್ಟಾರ್ಸ (www.growingstars.com) ಎಜುಕೇಷನ್ ಔಟ್‌ಸೋರ್ಸಿಂಗ್‌ನಲ್ಲಿ ಸಕ್ರಿಯವಾಗಿರುವ ಭಾರತೀಯ ಸಂಸ್ಥೆಗಳಲ್ಲಿ ಕೆಲವು. ಗ್ರೋಯಿಂಗ್ ಸ್ಟಾರ್ಸ್ ಸಂಸ್ಥೆ ಅಮೆರಿಕಾ ಮಾತ್ರವಲ್ಲದೆ ಆಸ್ಟ್ರೇಲಿಯಾದ ವಿದ್ಯಾರ್ಥಿಗಳಿಗೂ ಆನ್ಲೈನ್ ಮನೆಪಾಠದ ಸೌಲಭ್ಯ ಒದಗಿಸುತ್ತಿದೆ.

(ಜುಲೈ ೨೦೦೬)