ಕಳೆದ ಕೆಲವರ್ಷಗಳಿಂದ ಈಚೆಗೆ, ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್‌ನ (ಬಿಪಿಒ) ಕಲ್ಪನೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಅಭಿವೃದ್ಧಿಹೊಂದಿದ ದೇಶಗಳು ತಮ್ಮಲ್ಲಿ ನಡೆಯಬೇಕಿರುವ ಹಲವಾರು ಕೆಲಸಗಳನ್ನು ಅಭಿವೃದ್ಧಿಶೀಲ ದೇಶಗಳಿಗೆ ಹೊರಗುತ್ತಿಗೆ ನೀಡಿ ತಮ್ಮ ಖರ್ಚನ್ನು ಕಡಿಮೆಮಾಡಿಕೊಳ್ಳುತ್ತಿವೆ; ಅಂತೆಯೇ ಅಭಿವೃದ್ಧಿಶೀಲ ದೇಶಗಳ ಯುವಜನತೆ ಈ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದೆ!

ಹೊರದೇಶಗಳಲ್ಲಿ ಹೆಚ್ಚುತ್ತಿರುವ ಬಿಪಿಒ ಪ್ರಭಾವದಿಂದಾಗಿ ಅತಿಹೆಚ್ಚು ಲಾಭ ಪಡೆದ ದೇಶ ನಮ್ಮದು. ಹೀಗಾಗಿಯೇ ಭಾರತಕ್ಕೆ ‘ಪ್ರಪಂಚದ ಬ್ಯಾಕ್-ಆಫೀಸ್’ ಎಂಬ ಹೆಸರು ಬಂದದ್ದು. ಆದರೆ ಈಗ ಈ ಕ್ಷೇತ್ರದಲ್ಲೂ ಸ್ಪರ್ಧೆ ತೀವ್ರವಾಗುತ್ತಿದೆ. ಚೀನಾ ಹಾಗೂ ಫಿಲಿಪೈನ್ಸ್‌ನಲ್ಲಿ ತಲೆಯೆತ್ತುತ್ತಿರುವ ಹೊಸಹೊಸ ಸಂಸ್ಥೆಗಳು ನಮ್ಮ ಬಿಪಿಒ ಉದ್ಯಮಕ್ಕೆ ತೀವ್ರ ಸ್ಪರ್ಧೆನೀಡಲು ಸಜ್ಜಾಗುತ್ತಿವೆ.

ಈ ಸಂದರ್ಭದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಮತ್ತೊಂದು ಕ್ಷೇತ್ರವೇ ನಾಲೆಡ್ಜ್ ಪ್ರಾಸೆಸ್ ಔಟ್‌ಸೋರ್ಸಿಂಗ್ ಅಥವಾ ಕೆಪಿಒ.

ವಿಶಾಲ ಅರ್ಥದಲ್ಲಿ ನೋಡಿದರೆ ಈ ಹೊಸ ಕ್ಷೇತ್ರವನ್ನು ಬಿಪಿಒನ ಮುಂದುವರೆದ ಆವೃತ್ತಿ ಎಂದು ಕರೆಯಬಹುದು. ಯಾಂತ್ರಿಕವಾಗಿ ಒಂದೇ ರೀತಿಯ ಕೆಲಸಮಾಡುವ ಬದಲು ನಮ್ಮಲ್ಲಿ ಅಗಾಧವಾಗಿ ಲಭ್ಯವಿರುವ ಬೌದ್ಧಿಕ ಸಂಪತ್ತನ್ನು ಬಳಸಿಕೊಂಡು ಬೇರೆಬೇರೆ ಕ್ಷೇತ್ರಗಳಲ್ಲಿ ವೈವಿಧ್ಯಮಯ ಸೇವೆಗಳನ್ನು ಒದಗಿಸಬಹುದು ಎಂಬ ಆಲೋಚನೆಯೇ ಕೆಪಿಒ ಕ್ಷೇತ್ರದ ಹುಟ್ಟಿಗೆ ಕಾರಣವಾದ ಅಂಶ. ಹೊರದೇಶಗಳಿಂದ ನಮಗೆ ಸಿಗುವುದು ಬರೀ ಗುಮಾಸ್ತರ ಕೆಲಸ ಅಥವಾ ವಿದೇಶಿ ಸಂಸ್ಥೆಗಳ ಗ್ರಾಹಕರೊಡನೆ ದೂರವಾಣಿಯಲ್ಲಿ ಮಾತನಾಡುವ “ಕಾಲ್‌ಸೆಂಟರ್ ಕೆಲಸ”ವಷ್ಟೇ ಅಲ್ಲ ಎನ್ನುವುದನ್ನು ಈ ಕ್ಷೇತ್ರ ತೋರಿಸಿಕೊಡಲಿದೆ.

ಕೆಪಿಒದಿಂದಾಗಿ ವಿಜ್ಞಾನ-ತಂತ್ರಜ್ಞಾನ, ವ್ಯಾಪಾರ-ವಾಣಿಜ್ಯ, ಜೀವವಿಮೆ, ಶಿಕ್ಷಣ-ತರಬೇತಿ, ವೈದ್ಯಕೀಯ ಹಾಗೂ ಔಷಧವಿಜ್ಞಾನ, ಬಯೋಟೆಕ್ನಾಲಜಿ, ಕಾನೂನುಸಲಹೆ, ಇಂಟೆಲೆಕ್ಚುಯಲ್ ಪ್ರಾಪರ್ಟಿ ಹಾಗೂ ಪೇಟೆಂಟ್ ಸಲಹೆಯಂತಹ ಅನೇಕ ಕ್ಷೇತ್ರಗಳಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ. ೨೦೧೦ರ ವೇಳೆಗೆ ಈ ಕ್ಷೇತ್ರ ನಮ್ಮ ದೇಶದಲ್ಲಿ ಕನಿಷ್ಟ ಹತ್ತು ಬಿಲಿಯನ್ ಡಾಲರುಗಳ ವಹಿವಾಟು ನಡೆಸುವ ನಿರೀಕ್ಷೆಯಿದೆ.

ಇಂತಹ ಯಾವುದೇ ಕ್ಷೇತ್ರದಲ್ಲಿ ಪ್ರಾವೀಣ್ಯ ಹೊಂದಿರುವವರಿಗೆ ಕೆಪಿಒ ಕ್ಷೇತ್ರದಲ್ಲಿ ಅವಕಾಶಗಳು ಲಭ್ಯವಾಗಲಿವೆ. ಗಣಕಗಳನ್ನು ಸರಾಗವಾಗಿ ಬಳಸುವ ಕೌಶಲ್ಯ ಹಾಗೂ ಉತ್ತಮ ಇಂಗ್ಲಿಷ್ ಜ್ಞಾನ ಕೂಡ ಅಗತ್ಯ. ಬಿಪಿಒ ಕ್ಷೇತ್ರದಲ್ಲಿರುವಂತೆ ವಿಚಿತ್ರ ಸಮಯಗಳಲ್ಲಿ ಕೆಲಸಮಾಡುವ ಅವಶ್ಯಕತೆಯೂ ಇಲ್ಲಿರುವುದಿಲ್ಲ.

ಇಲ್ಲಿ ಲಭ್ಯವಿರುವ ಅವಕಾಶಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಉದ್ಯೋಗಗಳಿಗೆ ಸಂಬಂಧಿಸಿದ ಯಾವುದೇ ವೆಬ್‌ಸೈಟ್ ಅನ್ನು ಗಮನಿಸಬಹುದು.

(ಏಪ್ರಿಲ್ ೨೦೦೬)