ಕಂಪ್ಯೂಟರ್ ಗೇಮ್ – ಸುಳ್ಳನ್ನು ನಿಜವಾಗಿಸುವ, ಕಲ್ಪನೆಗಳನ್ನು ವಾಸ್ತವದಂತೆ ಬಿಂಬಿಸುವ, ಚಿತ್ರವಿಚಿತ್ರ ಕನಸುಗಳನ್ನೆಲ್ಲ ಪರದೆಯ ಮೇಲೆ ನನಸಾಗಿಸುವ ಮಾಯಾಲೋಕ. ಎಲ್ಲ ತಾಪತ್ರಯಗಳನ್ನೂ ಮರೆತು ಇಂತಹ ಗೇಮ್‌ಗಳಲ್ಲಿ ಮಗ್ನರಾಗುವುದು ಎಂದರೆ ಚಿಕ್ಕ  ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ. ಮನ ಬಂದಂತೆಲ್ಲ ಕಾರು-ಬೈಕುಗಳನ್ನು ಚಲಾಯಿಸುತ್ತ, ವೈರಿಗಳನ್ನು ಸದೆಬಡಿಯುತ್ತ, ವಿಶ್ವವಿಖ್ಯಾತ ಕ್ರೀಡಾಪಟುಗಳೊಡನೆ ಫುಟ್‌ಬಾಲ್ ಆಡುತ್ತ ಕನಸಿನ ಲೋಕದಲ್ಲಿ ವಿಹರಿಸುತ್ತಿರಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?

ಬಹು ಸರಳ ವಿನ್ಯಾಸದ ಸಣ್ಣಪುಟ್ಟ ಆಟಗಳಿಂದ ಪ್ರಾರಂಭಿಸಿ ಇಂದಿನ ವರ್ಚುಯಲ್ ರಿಯಾಲಿಟಿ ಗೇಮ್‌ಗಳವರೆಗೆ ಕಂಪ್ಯೂಟರ್ ಆಟಗಳು ಕ್ರಮಿಸಿರುವ ಹಾದಿ ಬಹು ರೋಚಕವಾದದ್ದು. ಗಣಕಯಂತ್ರಗಳಿಗೆ ಸಂಬಂಧಿಸಿದಂತೆ ಹೊಸಹೊಸ ಆವಿಷ್ಕಾರಗಳು ನಡೆದಂತೆಲ್ಲ ಗೇಮ್ ಗಳ ಗುಣಮಟ್ಟವೂ ಹೆಚ್ಚುತ್ತ ಬಂದು ಈಗ ಕಂಪ್ಯೂಟರ್ ಗೇಮ್ ಉದ್ಯಮ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುವ ದೊಡ್ಡ ವ್ಯಾಪಾರಕ್ಷೇತ್ರವಾಗಿ ಬೆಳೆದುನಿಂತಿದೆ.

ಅಂತೆಯೇ ಈ ಕ್ಷೇತ್ರದಲ್ಲಿ ಆಕರ್ಷಕ ಉದ್ಯೋಗಾವಕಾಶಗಳು ಕೂಡ ರೂಪಗೊಳ್ಳುತ್ತಿವೆ. ಕಂಪ್ಯೂಟರ್ ಗೇಮ್‌ಗಳ ವಿನ್ಯಾಸವನ್ನು ರೂಪಿಸು ವುದರಿಂದ ಪ್ರಾರಂಭಿಸಿ ಅವುಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸು ವವರೆಗೆ ಅನೇಕ ಅವಕಾಶಗಳು ಈ ಕ್ಷೇತ್ರದಲ್ಲಿ ಲಭ್ಯವಿವೆ.

ಪ್ರತಿಯೊಂದು ಕಂಪ್ಯೂಟರ್ ಗೇಮ್ ರೂಪಗೊಳ್ಳಲು ಅನೇಕ ತಂತ್ರಜ್ಞರ ಅಗತ್ಯವಿರುತ್ತದೆ: ಗೇಮ್‌ಗಾಗಿ ಕಥೆ-ಚಿತ್ರಕತೆಗಳನ್ನು ರೂಪಿಸುವವರು, ಚಿತ್ರಗಳನ್ನು ರಚಿಸುವವರು, ಗಣಕ ಕ್ರಮವಿಧಿಗಳನ್ನು ಸಿದ್ಧಪಡಿಸುವವರು (ಪ್ರೋಗ್ರಾಮರ್‌ಗಳು), ಅನಿಮೇಷನ್ ತಜ್ಞರು, ಸೌಂಡ್ ಎಫೆಕ್ಟ್‌ಗಳನ್ನು ಒದಗಿಸುವವರು, ಗೇಮ್‌ನ ಬೇರೆಬೇರೆ ಅಂಗಗಳನ್ನು ಪರೀಕ್ಷಿಸುವ ಟೆಸ್ಟರ್‌ಗಳು – ಹೀಗೆ.

ಇವೆಲ್ಲ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಆಯಾ ಕ್ಷೇತ್ರದಲ್ಲಿ ಪರಿಣತಿಯ ಜೊತೆಗೆ ಕಂಪ್ಯೂಟರ್ ಗೇಮ್‌ಗಳ ಬಗ್ಗೆ ಆಸಕ್ತಿ ಹಾಗೂ ಅಪಾರ ಪ್ರಮಾಣದ ಕಲ್ಪನಾ ಶಕ್ತಿ ಇರಬೇಕಾಗುತ್ತದೆ. ಪತ್ರಿಕೆಗಳು ಹಾಗೂ ಅಂತರಜಾಲದ ಮೂಲಕ ಈ ಕ್ಷೇತ್ರದ ಆಗುಹೋಗುಗಳ ಕಡೆಗೆ ಒಂದು ಕಣ್ಣಿಟ್ಟಿರುವುದು ಕೂಡ ಅಗತ್ಯ.

ಕಂಪ್ಯೂಟರ್ ಗೇಮ್ ಡಿಸೈನ್ ಕ್ಷೇತ್ರದಲ್ಲಿ ಪರಿಣತಿ ಪಡೆದುಕೊಂಡವರು ಆಟಗಳ ವಿನ್ಯಾಸಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಅಂತೆಯೇ ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಪರಿಣತಿ ಪಡೆದುಕೊಂಡರೆ ಈ ಆಟಗಳಿಗೆ ಬೇಕಾದ ಕ್ರಮವಿಧಿಗಳನ್ನು ಸಿದ್ಧಪಡಿಸುವ ಕೆಲಸ ನಿಮ್ಮದಾಗುತ್ತದೆ. ಇನ್ನು ಕಂಪ್ಯೂಟರ್ ಗೇಮ್‌ಗಳ ಅತ್ಯಂತ ಪ್ರಮುಖ ಅಂಗವಾಗಿರುವ ದೃಶ್ಯಮಾಧ್ಯಮವನ್ನು ಸಿದ್ಧಪಡಿಸುವ ಕೆಲಸ ಅನಿಮೇಷನ್ ತಜ್ಞರಿಗೆ ಸೇರಿದ್ದು.

ಕೆಲವು ವಿದೇಶೀ ವಿಶ್ವವಿದ್ಯಾಲಯಗಳು ಕಂಪ್ಯೂಟರ್ ಗೇಮಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಪದವಿಗಳನ್ನೇ ನೀಡುತ್ತವೆ. ಈ ಕುರಿತು ತರಬೇತಿ ನೀಡುವ ಕೆಲವು ಸಂಸ್ಥೆಗಳು ನಮ್ಮ ದೇಶದಲ್ಲೂ ಪ್ರಾರಂಭವಾಗಿವೆ. ತರಬೇತಿಗಾಗಿ ಇಂತಹ ಕೇಂದ್ರಗಳನ್ನು ಆಶ್ರಯಿಸುವಂತಿದ್ದರೆ ಕಂಪ್ಯೂಟರ್ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಂದ ಮಾನ್ಯತೆ ಪಡೆದಿರುವ ತರಬೇತಿ ಕೇಂದ್ರಗಳನ್ನು ಆಯ್ದುಕೊಳ್ಳುವುದು ಉತ್ತಮ.

ಈ ಕ್ಷೇತ್ರದಲ್ಲಿ ಸ್ಪರ್ಧೆ ಬಹಳ ಹೆಚ್ಚು. ಸುದೀರ್ಘ ಅವಧಿಗಳವರೆಗೆ ಕೆಲಸ ಮಾಡಬೇಕಾದ ಅಗತ್ಯ ಕೂಡ ಇರುತ್ತದೆ. ಆದರೂ, ಆಟ ಆಡುವ, ಆಡಿಸುವ ಈ ಕೆಲಸ ಬಹು ಕುತೂಹಲಕರ ಎನ್ನುವುದಂತೂ ಸತ್ಯ!

(ಮಾರ್ಚ್ ೨೦೦೬)