ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಅಥವಾ ಇಆರ್‌ಪಿ, ಯಾವುದೇ ಸಂಸ್ಥೆಯ ಎಲ್ಲ ವಿಭಾಗಗಳ ಅಗತ್ಯಗಳಿಗೆ ಒದಗಿಬರುವ ತಂತ್ರಾಂಶಗಳ ಒಂದು ವಿಶಿಷ್ಟ ಕ್ಷೇತ್ರ. ಆ ಸಂಸ್ಥೆಗೆ ಸಂಬಂಧಪಟ್ಟ ಸಕಲ ಮಾಹಿತಿಯನ್ನೂ ಒಂದೇ ದತ್ತಸಂಚಯದಲ್ಲಿ ಶೇಖರಿಸಿಟ್ಟು ವಿವಿಧ ಕ್ರಮವಿಧಿಗಳ ನೆರವಿನಿಂದ ಆ ಮಾಹಿತಿಯ ಸೂಕ್ತ ಉಪಯೋಗ ಮಾಡಿಕೊಳ್ಳಲು ಇಆರ್‌ಪಿ ಸಹಾಯಮಾಡುತ್ತದೆ.

ಉದಾಹರಣೆಗೆ, ನೂರೆಂಟು ವಿಭಾಗಗಳಿರುವ ದೊಡ್ಡದೊಂದು ವ್ಯಾಪಾರಿ ಸಂಸ್ಥೆಯಿಂದ ಸಾಮಗ್ರಿ ಖರೀದಿಸಲು ನೀವೊಂದು ಆದೇಶ ನೀಡುತ್ತೀರಿ ಎಂದುಕೊಳ್ಳೋಣ. ನಿಮ್ಮ ಆದೇಶ ಒಂದು ವಿಭಾಗದಿಂದ ಇನ್ನೊಂದಕ್ಕೆ ಪ್ರಿಂಟ್‌ಔಟುಗಳು ಅಥವಾ ಇ-ಮೇಲ್ ಸಂದೇಶಗಳ ಮೂಲಕ ಸಂಚರಿಸಬೇಕಾದರೆ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಇದರ ಬದಲು ಆ ಸಂಸ್ಥೆಯಲ್ಲಿ ಇಆರ್‌ಪಿ ಇದ್ದರೆ ಮಾರಾಟ ವಿಭಾಗದವರು ದಾಖಲಿಸಿಕೊಂಡ ನಿಮ್ಮ ಆದೇಶವನ್ನು ಸಂಬಂಧಪಟ್ಟ ಮಿಕ್ಕೆಲ್ಲ ವಿಭಾಗಗಳವರೂ ತಕ್ಷಣವೇ ವೀಕ್ಷಿಸಬಹುದು; ಹೀಗೆ ನಿಮ್ಮ ಆದೇಶ ಪೂರ್ಣಗೊಳ್ಳುವ ಅವಧಿ ಕೂಡ ಬಹಳ ಕಡಿಮೆಯಾಗಿ ಬಿಡುತ್ತದೆ! ಅಷ್ಟೇ ಅಲ್ಲ, ಇಆರ್‌ಪಿ ವ್ಯವಸ್ಥೆಯನ್ನು ಅಳವಡಿಸಿ ಕೊಳ್ಳುವ ಮೂಲಕ ಆ ಸಂಸ್ಥೆ ಕೂಡ ತನ್ನ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಮೂಲಕ ಆ ಸಂಸ್ಥೆಗೆ ಹೆಚ್ಚಿನ ಆರ್ಥಿಕ ಲಾಭವೂ ದೊರಕುತ್ತದೆ.

ಉತ್ಪಾದನಾ ಘಟಕಗಳು, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಹಣಕಾಸು ಹಾಗೂ ಮಾನವ ಸಂಪನ್ಮೂಲ ವಿಭಾಗಗಳು – ಹೀಗೆ ಇಆರ್‌ಪಿಯ ಉಪಯೋಗ ಎಲ್ಲ ಕ್ಷೇತ್ರಗಳಲ್ಲೂ ಆಗುತ್ತದೆ. ಹೀಗಾಗಿ ಈ ಕ್ಷೇತ್ರದ ಹಿನ್ನೆಲೆಯುಳ್ಳವರಿಗೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅವಕಾಶಗಳು ಲಭ್ಯವಿರುತ್ತವೆ. ಇಆರ್‌ಪಿ ಜೊತೆಗೆ ಆಯಾ ಕ್ಷೇತ್ರದ (ಉತ್ಪಾದನೆ, ಹೆಚ್‌ಆರ್, ಫೈನಾನ್ಸ್, ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಇತ್ಯಾದಿ) ಉತ್ತಮ ಅನುಭವ ಕೂಡ ಅಪೇಕ್ಷಣೀಯ.

ಒರ್ಯಾಕಲ್ ಹಾಗೂ ಸ್ಯಾಪ್ ಸಂಸ್ಥೆಗಳು ಇಆರ್‌ಪಿ ತಂತ್ರಾಂಶಗಳ ಪ್ರಮುಖ ತಯಾರಕರು. ಇಆರ್‌ಪಿ ತಂತ್ರಾಂಶಗಳಲ್ಲಿ ತರಬೇತಿ ನೀಡುವ ಅನೇಕ ಖಾಸಗಿ ಸಂಸ್ಥೆಗಳಿವೆ. ಆದರೆ ಬಹುತೇಕ ಎಲ್ಲ ಇಆರ್‌ಪಿ ತರಬೇತಿಗಳೂ ಕೊಂಚ ದುಬಾರಿಯಾಗಿರುತ್ತವೆ. ಹೀಗಾಗಿ ಯಾವುದೇ ತರಬೇತಿಗೆ ಸೇರುವ ಮುನ್ನ ಆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು.

ಇಆರ್‌ಪಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಐಐಎಂ ಹಾಗೂ ಐಐಐಟಿಯ ತಜ್ಞರು ರೂಪಿಸಿರುವ ಜಾಲತಾಣಕ್ಕೆ (www. iiitb.ac.in/ss/erp-faq/stdyctr.htm) ಭೇಟಿನೀಡಬಹುದು.

(ಅಕ್ಟೋಬರ್ ೨೦೦೬)