ಗಣಕವಿಜ್ಞಾನದ ಅಭಿವೃದ್ಧಿಯಲ್ಲಿ ಮೈನ್‌ಫ್ರೇಮ್ ಗಣಕಗಳ ಕೊಡುಗೆ ಅತ್ಯಂತ ಪ್ರಮುಖವಾದದ್ದು. ಕಳೆದ ಶತಮಾನದ ಮಧ್ಯ ಭಾಗದಲ್ಲಿ ಮೊದಲಬಾರಿಗೆ ತಯಾರಾದ ಈ ಗಣಕಗಳು ತಮ್ಮ ವಿಶ್ವಾಸನೀಯತೆ ಹಾಗೂ ಅಪಾರ ಪ್ರಮಾಣದ ಸಂಸ್ಕರಣಾ ಶಕ್ತಿಯಿಂದಾಗಿ ಬಹುಬೇಗ ಜನಪ್ರಿಯವಾದವು.

ದಿನಕ್ಕೊಂದು ಹೊಸ ತಂತ್ರಜ್ಞಾನ ಹೊರಬರುವ ಗಣಕಲೋಕದಲ್ಲಿ ಈ ಹಿರಿಯಣ್ಣಗಳಿಗೆ ಮಾತ್ರ ಈವರೆಗೂ ಬೇಡಿಕೆ ಕಡಿಮೆಯಾದದ್ದೇ ಇಲ್ಲ. ಹತ್ತಾರು-ನೂರಾರು ಸಣ್ಣ ಗಣಕಗಳು ಮಾಡುವ ಕೆಲಸ ಗಳನ್ನೆಲ್ಲ ಒಂದೇ ಒಂದು ಮೈನ್‌ಫ್ರೇಮ್ ಗಣಕ ಮಾಡಲು ಶಕ್ತ ವಾಗಿರುತ್ತದೆ. ಅನೇಕ ಬಳಕೆದಾರರು ಒಂದೇ ಸಮಯದಲ್ಲಿ ಬಳಸುವ ಅನುಕೂಲತೆ ಹೊಂದಿರುವ ಈ ಬೃಹತ್ ಗಣಕಗಳ ಮೇಲೆಯೇ ನೂರಾರು ಅಂತಾರಾಷ್ಟ್ರೀಯ ಸಂಸ್ಥೆಗಳ ವ್ಯವಹಾರವೆಲ್ಲ ಅವಲಂಬಿತ ವಾಗಿರುತ್ತದೆ.

ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು – ಹೀಗೆ ಎಲ್ಲೆಲ್ಲಿ ಅಪಾರ ಪ್ರಮಾಣದ ಮಾಹಿತಿ ಸಂಗ್ರಹವಾಗುತ್ತದೋ ಅಲ್ಲೆಲ್ಲ ಮೈನ್‌ಫ್ರೇಮ್ ಗಣಕಗಳು ಬಳಕೆಯಾಗುತ್ತವೆ. ರಕ್ಷಣಾ ಕ್ಷೇತ್ರದಲ್ಲೂ ಇವುಗಳ ಬಳಕೆ ಕಂಡುಬರುತ್ತದೆ. ಹೀಗಾಗಿಯೇ ಮೈನ್‌ಫ್ರೇಮ್‌ಗಳಿಗಾಗಿ ತಂತ್ರಾಂಶಗಳನ್ನು ರಚಿಸಲು ಬಲ್ಲವರಿಗೆ ಸದಾಕಾಲವೂ ಬೇಡಿಕೆ ಇದ್ದೇ ಇರುತ್ತದೆ.

ಕೋಬಾಲ್ ಅಥವಾ ಕಾಮನ್ ಬಿಸಿನೆಸ್ ಓರಿಯೆಂಟೆಡ್ ಲ್ಯಾಂಗ್ವೇಜ್, ಮೈನ್‌ಫ್ರೇಮ್‌ಗಳಲ್ಲಿ ಬಳಕೆಯಗುವ ಪ್ರಮುಖ ಪ್ರೋಗ್ರಾಮಿಂಗ್ ಭಾಷೆ. ದೊಡ್ಡ ಪ್ರಮಾಣದ ಮಾಹಿತಿ ಸಂಸ್ಕರಣೆ ಅಗತ್ಯವಾಗಿರುವ ಕಡೆಗಳಲ್ಲೆಲ್ಲ ಕೋಬಾಲ್ ಭಾಷೆಯಲ್ಲಿ ರಚಿತವಾದ ಕ್ರಮವಿಧಿಗಳು ಬಳಕೆಯಲ್ಲಿವೆ. ಈ ಕ್ರಮವಿಧಿಗಳನ್ನು ಕೆಲಸಮಾಡುವ ಸ್ಥಿತಿಯಲ್ಲಿ ಕಾಪಾಡಿಕೊಂಡು ಬರುವುದು (ಮೇಂಟೆನೆನ್ಸ್) ಹಾಗೂ ಹೊಸ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸುವುದು (ಎನ್‌ಹಾನ್ಸ್ ಮೆಂಟ್) ಸತತವಾಗಿ ನಡೆಯುತ್ತಿರುವ ಕ್ರಿಯೆ; ಹೀಗಾಗಿ ಕೋಬಾಲ್ ಬಲ್ಲ ತಂತಜ್ಞರಿಗೆ ಕೆಲಸದ ಕೊರತೆ ಎಂದಿಗೂ ಕಾಡು ವುದೇ ಇಲ್ಲ!

ಕಸ್ಟಮರ್ ಇನ್‌ಫರ್ಮೇಷನ್ ಕಂಟ್ರೋಲ್ ಸಿಸ್ಟಮ್ ಅಥವಾ ಸಿಐಸಿಎಸ್, ಮೈನ್‌ಫ್ರೇಮ್ ಕ್ರಮವಿಧಿಗಳಿಗೆ ಬಳಕೆದಾರ ಸಂಪರ್ಕ ಸಾಧನಗಳನ್ನು (ಯೂಸರ್ ಇಂಟರ್‌ಫೇಸ್) ಒದಗಿಸಲು ಬಳಕೆ ಯಾಗುವ ವ್ಯವಸ್ಥೆ. ವಿಶ್ವದ ೫೦೦ ಅತ್ಯಂತ ಪ್ರಮುಖ (ಫಾರ್ಚ್ಯೂನ್ ೫೦೦) ಸಂಸ್ಥೆಗಳಲ್ಲಿ ಶೇಕಡಾ ೯೦ಕ್ಕೂ ಹೆಚ್ಚು ಸಂಸ್ಥೆಗಳು ಈ ವ್ಯವಸ್ಥೆ ಯನ್ನು ಬಳಸುತ್ತವಂತೆ. ಈ ವ್ಯವಸ್ಥೆಯ ಆಧಾರದ ಮೇಲೆ ಪ್ರತಿ ದಿನವೂ ಸುಮಾರು ಮೂವತ್ತು ಬಿಲಿಯನ್ ವ್ಯವಹಾರಗಳು (ಟ್ರಾನ್ಸಾ ಕ್ಷನ್) ನಡೆಯುತ್ತವೆ ಎಂದರೆ ಸಿಐಸಿಎಸ್ ಬಲ್ಲವರಿಗೆ ಅದೆಷ್ಟು ಬೇಡಿಕೆಯಿರಬಹುದು ಎಂದು ನೀವೇ ಅಂದಾಜಿಸಬಹುದು.

ಇದೇ ರೀತಿ ಡಿಬಿ/೨ – ಮೇನ್‌ಫ್ರೇಮ್‌ಗಳಲ್ಲಿ ಬಳಕೆಯಾಗುವ ದತ್ತ ಸಂಚಯ (ಡೇಟಾಬೇಸ್) ವ್ಯವಸ್ಥೆ, ಎಮ್‌ವಿಎಸ್ – ಮೇನ್‌ಫ್ರೇಮ್ ಗಳ ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ), ಜೆಸಿಎಲ್ (ಜಾಬ್ ಕಂಟ್ರೋಲ್ ಸಿಸ್ಟಂ) – ಮೇನ್‌ಫ್ರೇಮ್‌ಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನಿಯಂತ್ರಿಸುವ ವ್ಯವಸ್ಥೆ. ಮೇನ್‌ಫ್ರೇಮ್‌ಗಳ ಜೊತೆ ಕೆಲಸ ಮಾಡಲು ಇವುಗಳ ಜ್ಞಾನ ಕೂಡ ಆವಶ್ಯಕ.

ಮೇಲೆ ಹೇಳಿದ ಮೇನ್‌ಫ್ರೇಮ್ ತಂತ್ರಜ್ಞಾನಗಳು ಈಗಾಗಲೇ ಹಲವಾರು ದಶಕಗಳಿಂದ ಅಸ್ತಿತ್ವದಲ್ಲಿವೆ. ಹೀಗಾಗಿ ಇವುಗಳ ಮೇಲೆ ಪ್ರಭುತ್ವ ಸಾಧಿಸಿಕೊಂಡರೆ ಗಣಕಲೋಕದಲ್ಲೊಂದು ಸುದೀರ್ಘಕಾಲದ ಉದ್ಯೋಗ ಗಟ್ಟಿಯಾದಂತೆ.

ಮೈನ್‌ಫ್ರೇಮ್ ತಜ್ಞರಾಗಿ ಸಾಫ್ಟ್‌ವೇರ್ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಬೇಕೆಂದರೆ ತಾಂತ್ರಿಕ ಶಿಕ್ಷಣದ ಹಿನ್ನೆಲೆ ಇರಬೇಕಾಗುತ್ತದೆ. ಈಗ ಮೈನ್‌ಫ್ರೇಮ್ ತಂತ್ರಜ್ಞಾನದ ಕುರಿತು ತರಬೇತಿ ನೀಡುವ ಅನೇಕ ಸಂಸ್ಥೆಗಳೂ ಕಾರ್ಯನಿರ್ವಹಿಸುತ್ತಿವೆ; ಇಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆದವರಿಗೂ ಅನೇಕ ಅವಕಾಶಗಳು ಲಭ್ಯವಿವೆ. ಆದರೆ ತರಬೇತಿ ಪಡೆಯಲು ಯಾವುದೇ ಸಂಸ್ಥೆಯನ್ನು ಸೇರುವ ಮುನ್ನ ಅದರ ಹಿಂದಿನ ಪ್ರದರ್ಶನದ ಬಗ್ಗೆ ಚೆನ್ನಾಗಿ ತಿಳಿದುಕೊಂಡೇ ನಿರ್ಧಾರ ತೆಗೆದು ಕೊಳ್ಳುವುದು ಅವಶ್ಯಕ.

(ಮಾರ್ಚ್ ೨೦೦೬)