ನಮ್ಮ ಜೀವನದಲ್ಲಿ ಗಣಕಗಳ ಮೇಲಿನ ಅವಲಂಬನೆ ಹೆಚ್ಚುತ್ತ ಹೋದಂತೆ, ದೈನಂದಿನ ಬದುಕಿನ ಅನೇಕ ಕೆಲಸಗಳು ವಿಶ್ವವ್ಯಾಪಿ ಜಾಲದ ಮುಖೇನ ನಡೆಯುವುದು ಸಾಮಾನ್ಯವಾಗುತ್ತಿದೆ. ಹೀಗಾಗಿ ವಿಶ್ವವ್ಯಾಪಿ ಜಾಲ ಹಾಗೂ ಅಲ್ಲಿರುವ ಜಾಲತಾಣಗಳು ಹಲವಾರು ರೀತಿಗಳಲ್ಲಿ ತಮ್ಮ ಮಹತ್ವವನ್ನು ಹೆಚ್ಚಿಸಿಕೊಳ್ಳುತ್ತಿವೆ. ಇದರ ಜೊತೆಗೆ ಜಾಲತಾಣಗಳಲ್ಲಿ ಏನಿರಬೇಕು ಹಾಗೂ ಆ ಮಾಹಿತಿ  ಹೇಗಿರಬೇಕು ಎನ್ನುವುದರ ಕಡೆಗೆ ಸಂಸ್ಥೆಗಳು ನೀಡುತ್ತಿರುವ ಪ್ರಾಮುಖ್ಯತೆ ಕೂಡ ಹೆಚ್ಚುತ್ತಿದೆ.

ಇಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುವ ಸಂಸ್ಥೆಗಳು ತಮ್ಮಲ್ಲಿ ಲಭ್ಯವಿರುವ ಬೌದ್ಧಿಕ ಸಂಪತ್ತನ್ನು (ಇಂಟಲೆಕ್ಚುಯಲ್ ಪ್ರಾಪರ್ಟಿ) ಸರಿಯಾದ ರೀತಿಯಲ್ಲಿ ಸಂರಕ್ಷಿಸಿಡು ವತ್ತಲೂ ಹೆಚ್ಚಿನ ಗಮನ ಹರಿಸುತ್ತಿವೆ.

ಹೀಗೆ ಇಲೆಕ್ಟ್ರಾನಿಕ್ ರೂಪದಲ್ಲಿ ಲಭ್ಯವಿರುವ, ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿಡಲು ಸಹಾಯಮಾಡುವ ವ್ಯವಸ್ಥೆಯೇ ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ. ಪಠ್ಯ, ಧ್ವನಿ, ಚಲನಚಿತ್ರ, ಬಹುಮಾಧ್ಯಮ ಮೊದಲಾದ ಯಾವುದೇ ರೂಪದಲ್ಲಿರಬಹುದಾದ ಡಿಜಿಟಲ್ ಮಾಹಿತಿಯನ್ನು ಸುಲಭವಾಗಿ ಲಭ್ಯವಿರುವ ರೀತಿಯಲ್ಲಿ ಸಂಗ್ರಹಿಸಿಡುವುದು ಈ ವ್ಯವಸ್ಥೆಯ ಅಂಗವಾದ ತಂತ್ರಾಂಶಗಳ ಕೆಲಸ.

ಕಂಟೆಂಟ್ ಮ್ಯಾನೇಜ್‌ಮೆಂಟ್‌ನ ಮಹತ್ವ ಹೆಚ್ಚುತ್ತಿದ್ದಂತೆ ಈ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳೂ ಸೃಷ್ಟಿಯಾಗುತ್ತಿವೆ.

ಮಾಹಿತಿಯನ್ನು ಸಿದ್ಧಪಡಿಸುವ ಲೇಖಕರು, ಸಂಪಾದಕರು, ಗಣಕ ವ್ಯವಸ್ಥೆಯ ಮೇಲ್ವಿಚಾರಣೆ ನೋಡಿಕೊಳ್ಳುವ ಅಡ್ಮಿನಿಸ್ಟ್ರೇಟರ್‌ಗಳು – ಹೀಗೆ ಕಂಟೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಅನೇಕ ಬಗೆಯ ಅವಕಾಶಗಳು ಲಭ್ಯವಿವೆ. ಇಲೆಕ್ಟ್ರಾನಿಕ್ ರೂಪದಲ್ಲಿ ಲಭ್ಯವಿರುವ ಈ ಮಾಹಿತಿ ಎಷ್ಟರ ಮಟ್ಟಿಗೆ ಬಳಕೆಯಾಗುತ್ತಿದೆ, ಅದನ್ನು ಯಾರು ಉಪಯೋಗಿಸುತ್ತಿದ್ದಾರೆ, ಆ ಮಾಹಿತಿ ಬದಲಾಗುತ್ತಿದ್ದಂತೆ ಅದರ ಬೇರೆಬೇರೆ ಆವೃತ್ತಿಗಳು ಸರಿಯಾಗಿ ಶೇಖರವಾಗುತ್ತಿವೆಯೋ ಇಲ್ಲವೋ ಮುಂತಾದ ಅಂಶಗಳನ್ನು ನೋಡಿಕೊಳ್ಳಲು ಕೂಡ ಜನ ಬೇಕಾಗುತ್ತಾರೆ.

ಈ ಕ್ಷೇತ್ರಕ್ಕೆ ಕಾಲಿಡಲು ಗಣಕ ವಿಜ್ಞಾನದ ಹಿನ್ನೆಲೆಯ ಜೊತೆಗೆ ಕಂಟೆಂಟ್ ಮ್ಯಾನೇಜ್‌ಮೆಂಟ್ ಜ್ಞಾನ ಇರಬೇಕಾದದ್ದು ಅಗತ್ಯ. ಹೆಚ್ಚಿನ ಮಾಹಿತಿಗಾಗಿ ಅಂತರಜಾಲದಲ್ಲಿ ಹುಡುಕಾಟ ನಡೆಸಬಹುದು.

(ಅಕ್ಟೋಬರ್ ೨೦೦೬)