ದೈನಂದಿನ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಗಣಕೀಕರಣ ಜೋರಿನಿಂದ ನಡೆದಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಬ್ಯಾಂಕಿನಿಂದ ಹಿಡಿದು ಜೀವವಿಮಾ ಸಂಸ್ಥೆಯವರೆಗೆ, ಶೇರು ಮಾರುಕಟ್ಟೆಯಿಂದ ಸರಕಾರಿ ಕಚೇರಿಯವರೆಗೆ ಎಲ್ಲೆಲ್ಲೂ ಗಣಕಗಳು ಕಾಣಿಸಿಕೊಳ್ಳುವುದರೊಡನೆ ಅವುಗಳ ಮೇಲಿನ ನಮ್ಮ ಅವಲಂಬನೆ ಕೂಡ ತೀವ್ರವಾಗಿ ಹೆಚ್ಚುತ್ತಿದೆ. ಈ ಅವಲಂಬನೆಯ ಜೊತೆಗೆ ಗಣಕಗಳ ಹಾಗೂ ಅವುಗಳಲ್ಲಿ ಶೇಖರವಾಗಿರುವ ಮಾಹಿತಿಯ ಸುರಕ್ಷತೆಯ ಬಗೆಗೂ ಕಾಳಜಿ ಹೆಚ್ಚುತ್ತಿದೆ.

ಈ ಕಾಳಜಿಯ ಫಲವಾಗಿ ಹುಟ್ಟಿಕೊಂಡಿರುವುದೇ ಇನ್‌ಫರ್ಮೇಷನ್ ಸೆಕ್ಯೂರಿಟಿ ಎಂಬ ಹೊಸ ಕ್ಷೇತ್ರ. ಗಣಕಗಳಲ್ಲಿ ಶೇಖರವಾಗಿರುವ ಮಾಹಿತಿಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು, ವೈರಸ್‌ಗಳ ಹಾವಳಿಯಿಂದ ತಪ್ಪಿಸುವುದು, ಅನಧಿಕೃತ ವ್ಯಕ್ತಿಗಳ (ಹ್ಯಾಕರ್) ಕೈಗೆ ಈ ಮಾಹಿತಿ ಸಿಗದ ಹಾಗೆ ಇಟ್ಟುಕೊಳ್ಳುವುದು – ಇದೆಲ್ಲ ಇನ್‌ಫರ್ಮೇಷನ್ ಸೆಕ್ಯೂರಿಟಿಯ ಹಿಂದಿರುವ ಉದ್ದೇಶ.

ಗಣಕ ಜಾಲಗಳನ್ನು (ನೆಟ್‌ವರ್ಕ್) ಸುರಕ್ಷಿತವಾಗಿ ನೋಡಿಕೊಳ್ಳುವ ನೆಟ್‌ವರ್ಕ್ ಸೆಕ್ಯೂರಿಟಿ ಕ್ಷೇತ್ರ ಕೂಡ ಇದರದ್ದೇ ಒಂದು ಅಂಗ. ಗಣಕ ಸಂಬಂಧೀ ಅಪರಾಧಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಅವುಗಳನ್ನು ತಡೆಯುವ ಬಗೆಗೆ ಮುನ್ನೆಚ್ಚರಿಕೆ ವಹಿಸುವ ಕೆಲಸ ಕೂಡ ಇನ್‌ಫರ್ಮೇಷನ್ ಸೆಕ್ಯೂರಿಟಿಯ ಪರಿಮಿತಿಯಲ್ಲೇ ಬರುತ್ತದೆ.

ಐಟಿ ಕ್ಷೇತ್ರದಲ್ಲಿ ಕೆಲಸಮಾಡುವ ಯಾವುದೇ ಸಂಸ್ಥೆಯಲ್ಲಿ ಮಾಹಿತಿಯ ಸುರಕ್ಷತೆ ಅತ್ಯಂತ ಪ್ರಮುS ಅಂಶವಾಗಿರುವುದರಿಂದ ಇನ್‌ಫರ್ಮೇಷನ್ ಸೆಕ್ಯೂರಿಟಿ ತಜ್ಞರ ಮೇಲೆ ಅಪಾರ ಜವಾಬ್ದಾರಿ ಇರುತ್ತದೆ. ಸಂಸ್ಥೆಯ ಉದ್ಯೋಗಿಗಳಲ್ಲಿ ಮಾಹಿತಿ ಸುರಕ್ಷತೆಯ ಪ್ರಾಮುಖ್ಯತೆಯ ಬಗೆಗೆ ಅರಿವು ಮೂಡಿಸುವುದು, ಮಾಹಿತಿ ಸುರಕ್ಷತೆಗೆ ಅಗತ್ಯವಾದ ಯಂತ್ರಾಂಶ ಹಾಗೂ ತಂತ್ರಾಂಶಗಳನ್ನು ಅಳವಡಿಸಿ ಅವುಗಳ ಮೇಲ್ವಿಚಾರಣೆ ನೋಡಿಕೊಳ್ಳುವುದು, ಹ್ಯಾಕರ್ ಅಥವಾ ವೈರಸ್ ದಾಳಿ ನಡೆದಾಗ ತಕ್ಷಣವೇ ಸ್ಪಂದಿಸಿ ಹೆಚ್ಚಿನ ಹಾನಿ ತಪ್ಪಿಸುವುದು ಇದೆಲ್ಲ ಅವರ ಜವಾಬ್ದಾರಿಯಾಗಿರುತ್ತದೆ.

ಇನ್‌ಫರ್ಮೇಷನ್ ಹಾಗೂ ನೆಟ್‌ವರ್ಕ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಕೆಲಸಮಾಡಲು ಮಾಹಿತಿ ತಂತ್ರಜ್ಞಾನದಲ್ಲಿ ಉತ್ತಮ ಪರಿಣತಿ ಇರಬೇಕು. ಜೊತೆಗೆ ನಾವೆಲ್, ಸಿಸ್ಕೋ ಅಥವಾ ಮೈಕ್ರೋಸಾಫ್ಟ್ ನಂತಹ ಸಂಸ್ಥೆಗಳು ನೀಡುವ ವಿಶೇಷ ಪ್ರಮಾಣಪತ್ರಗಳಿದ್ದರಂತೂ ಇನ್ನೂ ಉತ್ತಮ. ವಿವಿಧ ಅಗತ್ಯಗಳಿಗೆ ತಕ್ಕಂತೆ ಕೆಲಸಮಾಡುವ ಮತ್ತು ಹೊಸ ತೊಂದರೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಸರಿಪಡಿಸುವ ಛಾತಿ ಇರಲೇಬೇಕು. ಐಟಿ ಲೋಕದಲ್ಲಿ ಪ್ರತಿದಿನವೂ ಹುಟ್ಟಿಕೊಳ್ಳುವ ಹೊಸಹೊಸ ತೊಂದರೆಗಳ ಬಗೆಗೆ ಸದಾಕಾಲವೂ ಒಂದು ಕಣ್ಣಿಟ್ಟಿರಬೇಕಾದದ್ದು ಇನ್ನೊಂದು ಅಗತ್ಯ.

ಐಟಿ ಸಂಸ್ಥೆಗಳಿಗೆ ಲಕ್ಷಾಂತರ ಡಾಲರುಗಳ ವರಮಾನ ತಪ್ಪಿಸುತ್ತಿರುವ ಹ್ಯಾಕರ್‌ಗಳ ಸಮಸ್ಯೆ ಹಾಗೂ ವಿಶ್ವದಾದ್ಯಂತ ದೊಡ್ಡ ದಾಂಧಲೆಯನ್ನೇ ಎಬ್ಬಿಸುತ್ತಿರುವ ವೈರಸ್‌ಗಳ ಹಾವಳಿ ಎದುರಿಸಿ ತಮ್ಮ ಸಂಸ್ಥೆಯ ಮಾಹಿತಿ ಸುರಕ್ಷತೆಯನ್ನು ಕಾಪಾಡುವುದು ದೊಡ್ಡ ಸವಾಲೇ ಸರಿ. ಆದರೆ ಈ ಕ್ಷೇತ್ರದಲ್ಲಿ ದೊರಕುವ ಸಂಬಳ ಈ ಸವಾಲಿಗೆ ತಕ್ಕಂತಿರುತ್ತದೆ ಎನ್ನುವುದಂತೂ ನಿಜ!

(ಮೇ ೨೦೦೬)