ಐಟಿ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಬೇಕಾದರೆ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿರಬೇಕು, ಪ್ರೋಗ್ರಾಮಿಂಗ್ ಜ್ಞಾನ ಇರಬೇಕು ಎನ್ನುವಂತಹ ಹಲವಾರು ಅಭಿಪ್ರಾಯಗಳು ಬಹಳ ಸಾಮಾನ್ಯವಾಗಿ ಕಂಡುಬರುತ್ತವೆ. ಬೇರೆ ಕ್ಷೇತ್ರಗಳಲ್ಲಿ ಕೆಲಸದ ಅನುಭವ ಇರುವವರು ಐಟಿ ಕ್ಷೇತ್ರಕ್ಕೆ ಬರುವುದು ಹೆಚ್ಚೂಕಡಿಮೆ ಅಸಾಧ್ಯ ಎಂಬ ಅಭಿಪ್ರಾಯ ಕೂಡ ವ್ಯಾಪಕವಾಗಿದೆ.

ಅದರೆ ಇತ್ತೀಚಿನ ದಿನಗಳಲ್ಲಿ ಈ ಅಭಿಪ್ರಾಯವನ್ನು ಬದಲಿಸುವಂತಹ ಘಟನೆಗಳು ಐಟಿ ಲೋಕದಲ್ಲಿ ನಡೆಯುತ್ತಿರುವುದು ಗಮನಾರ್ಹ ಸಂಗತಿ.

ಈ ಬದಲಾವಣೆಗೆ ಕಾರಣವೂ ಇಲ್ಲದಿಲ್ಲ. ಈಗ ಸಾಫ್ಟ್‌ವೇರ್ ಸಂಸ್ಥೆಗಳ ಕೆಲಸ ಏನು? ಬೇರೆಬೇರೆ ಕ್ಷೇತ್ರಗಳಲ್ಲಿ ಉಪಯೋಗಕ್ಕಾಗಿ ತಂತ್ರಾಂಶಗಳ ರಚನೆ. ಈ ತಂತ್ರಾಂಶ ಬರೆಯುವುದು ಸಾಫ್ಟ್‌ವೇರ್ ಇಂಜಿನಿಯರುಗಳ ಕೆಲಸ, ನಿಜ. ಆದರೆ ಬ್ಯಾಂಕಿಂಗ್, ಜೀವವಿಮೆ, ಟೆಲಿಕಾಂ, ಆಟೋಮೊಬೈಲ್ ಅಥವಾ ಪೆಟ್ರೋಕೆಮಿಕಲ್ ಕ್ಷೇತ್ರಕ್ಕೆ ಬೇಕಾದ ತಂತ್ರಾಂಶ ಬರೆಯಲು ಬರಿಯ ಪ್ರೋಗ್ರಾಮಿಂಗ್ ಜ್ಞಾನ ಮಾತ್ರ ಇದ್ದರೆ ಸಾಕಾಗುವುದಿಲ್ಲ, ಆ ಕ್ಷೇತ್ರದ ಒಳಹೊರಗುಗಳ ಬಗೆಗೂ ಸಾಕಷ್ಟು ಪರಿಣತಿ ಇರಬೇಕಾಗುತ್ತದೆ.

ಆಯಾ ಕ್ಷೇತ್ರದಲ್ಲಿ ಪರಿಣತಿ ಉಳ್ಳವರಿಗೆ ಬೇಡಿಕೆ ಹುಟ್ಟುವುದೇ ಇಲ್ಲಿ. ಈಗ ಸಾಫ್ಟ್‌ವೇರ್ ಸಂಸ್ಥೆಗಳಲ್ಲಿ ಪ್ರತಿ ೫೦-೧೦೦ ಸಾಫ್ಟ್‌ವೇರ್ ಇಂಜಿನಿಯರುಗಳಿಗೆ ಕನಿಷ್ಟ ಒಬ್ಬ ಕ್ಷೇತ್ರಪರಿಣತ (ಡೊಮೈನ್ ಎಕ್ಸ್‌ಪರ್ಟ್) ಇರುತ್ತಾರೆ. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ನೀಡುವುದು, ಹೊಸ ತಂತ್ರಾಂಶ ಸಿದ್ಧಪಡಿಸಲು ಬೇಡಿಕೆ ಬಂದಾಗ ಗ್ರಾಹಕರ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳು ವುದು, ಸಿದ್ಧವಾದ ತಂತ್ರಾಂಶವನ್ನು ಪರೀಕ್ಷಿಸುವಲ್ಲಿ ನೆರವು ನೀಡುವುದು – ಇವೆಲ್ಲ ಕ್ಷೇತ್ರಪರಿಣತರ ಕೆಲಸ. ಇದಕ್ಕಾಗಿ ಹಲವಾರು ಸಂದರ್ಭ ಗಳಲ್ಲಿ ಪ್ರಪಂಚದ ಬೇರಾವುದೋ ಮೂಲೆಯಲ್ಲಿರುವ ಗ್ರಾಹಕರನ್ನು ಮುಖತಃ ಭೇಟಿಮಾಡಬೇಕಾಗಿಯೂ ಬರಬಹುದು.

ಅವರ ಕ್ಷೇತ್ರದಲ್ಲಿ ಕನಿಷ್ಟ ಮೂರು ವರ್ಷವಾದರೂ ಅನುಭವ ಹೊಂದಿರುವವರು ಡೊಮೈನ್ ಎಕ್ಸ್‌ಪರ್ಟ್ ಅಥವಾ ’ಡೊಮೈನ್ ಕನ್ಸಲ್ಟೆಂಟ್’ ಎಂಬ ಹಣೆಪಟ್ಟಿಯೊಡನೆ ಸಾಫ್ಟ್‌ವೇರ್ ಕ್ಷೇತ್ರ ಪ್ರವೇಶಿಸಬಹುದು. ಎಂಬಿಎಯಂತಹ ಮ್ಯಾನೇಜ್‌ಮೆಂಟ್ ಪದವಿ ಹೊಂದಿರುವವರಿಗೆ ಆದ್ಯತೆ ಇರುತ್ತದೆ. ಕೆಲಸದ ವಾತಾವರಣದಲ್ಲಿ ಕಂಡುಬರುವ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾದದ್ದು ಕಡ್ಡಾಯ. ಗ್ರಾಹಕರ ಅಗತ್ಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಹಾಗೂ ಅವರ ಅಗತ್ಯಗಳನ್ನು ಮುಂಚಿತವಾಗಿಯೇ ಊಹಿಸಿ ಸೂಕ್ತ ಪರಿಹಾರಗಳನ್ನು ಸೂಚಿಸುವ ಸಾಮರ್ಥ್ಯ ಅಪೇಕ್ಷಣೀಯ.

ಹೀಗೆ ಐಟಿ ಕ್ಷೇತ್ರ ಪ್ರವೇಶಿಸಿದವರಿಗೆ ಸಾಫ್ಟ್‌ವೇರ್ ಹಿನ್ನೆಲೆಯಿಂದ ಬಂದವರಿಗಿಂತ ಹೆಚ್ಚಿನ ಸಂಬಳ ದೊರಕುವ ಸಾಧ್ಯತೆ ಹೆಚ್ಚು. ಮುಂದೆ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ಉನ್ನತ ಹುದ್ದೆಗಳಿಗೂ ಬಡ್ತಿಪಡೆಯುವುದು ಸಾಧ್ಯ.

(ಜೂನ್ ೨೦೦೬)