ಹಾಲಿನ ಡೈರಿ, ಉಪಕರಣಗಳನ್ನು ತಯಾರಿಸುವ ಕಾರ್ಖಾನೆ, ಸೂಪರ್‌ಮಾರ್ಕೆಟ್ – ಇಂತಹ ಯಾವುದೇ ಉದ್ದಿಮೆಯಾದರೂ ಅಲ್ಲಿ ಯಾವುದಾದರೊಂದು ಬಗೆಯ ಸಾಮಗ್ರಿಯನ್ನು ಹೊಂದಿಸಿಕೊಳ್ಳಬೇಕಾದ ಅಗತ್ಯ ಸದಾಕಾಲವೂ ಇದ್ದೇ ಇರುತ್ತದೆ. ಕಚ್ಚಾಸಾಮಗ್ರಿಗಳ ಕೊಳ್ಳುವಿಕೆ, ಯಾವಾಗ ಎಷ್ಟು ಪ್ರಮಾಣದ ಸಾಮಗ್ರಿ ಬೇಕಾಗುತ್ತದೆ ಎಂಬ ಅಂದಾಜು, ಸರಿಯಾದ ಸಮಯಕ್ಕೆ ಸರಿಯಾದ ಬೆಲೆಯಲ್ಲಿ ಸರಿಯಾದ ಪ್ರಮಾಣದ ಪೂರೈಕೆ – ಇವು ಎಲ್ಲ ಸಂಸ್ಥೆಗಳ ಆಡಳಿತ ವರ್ಗಕ್ಕೂ ತಲೆನೋವು ತಂದೊಡ್ಡುವ ಸಂಗತಿಗಳು.

ಈ ತಲೆನೋವಿಗೆ ಪರಿಹಾರ ನೀಡುವುದೇ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್. ವಿವಿಧ ಅಂಕಿ-ಅಂಶಗಳ ಆಧಾರದ ಮೇಲೆ ಯಾವುದೇ ಉದ್ದಿಮೆಗೆ ಬೇಕಾದ ಸಾಮಗ್ರಿಗಳ ಪ್ರಮಾಣದ ಅಂದಾಜು, ಪೂರೈಕೆದಾರರ ಆಯ್ಕೆ, ಪೂರೈಕೆಯಾದ ಸಾಮಗ್ರಿಗಳ ಸರಿಯಾದ ಬಳಕೆ, ಉತ್ಪಾದಿಸಿದ ವಸ್ತುಗಳ ಸರಬರಾಜು ಹಾಗೂ ಇವೆಲ್ಲವುದರ ಮೇಲ್ವಿಚಾರಣೆ ನಡೆಸುವ ಕಲೆ ಹಾಗೂ ವಿಜ್ಞಾನವೇ ಈ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್.

ಬೇರೆಲ್ಲ ಕ್ಷೇತ್ರಗಳಂತೆ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ನಲ್ಲೂ ಕೂಡ ಗಣಕಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಇದು ಇಲೆಕ್ಟ್ರಾನಿಕ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಅಥವಾ ಇಎಸ್‌ಸಿಎಂ ಎಂಬ ಹೊಸತೊಂದು ಆಯಾಮವನ್ನೇ ಸೃಷ್ಟಿಸಿದೆ.

ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್, ಮೆಟೀರಿಯಲ್ ಪ್ಲಾನಿಂಗ್ ಮುಂತಾದ ಕ್ಷೇತ್ರಗಳಲ್ಲಿ ಈಗಾಗಲೇ ಅನುಭವವುಳ್ಳವರಿಗೆ ಹಾಗೂ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ಇಆರ್‌ಪಿ) ಹಿನ್ನೆಲೆ ಉಳ್ಳವರಿಗೆ ಇದರಿಂದಾಗಿ ಅನೇಕ ಅವಕಾಶಗಳೂ ಸೃಷ್ಟಿಯಾಗುತ್ತಿವೆ. ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಪಟ್ಟ ಬಹುತೇಕ ಕೆಲಸಗಳನ್ನು ನಿಭಾಯಿಸಬಲ್ಲ ಒರ್ಯಾಕಲ್ ಎಸ್‌ಸಿಎಂ, ಸ್ಯಾಪ್ ಅಡ್ವಾನ್ಸ್ಡ್ ಪ್ಲಾನರ್ ಆಂಡ್ ಆಪ್ಟಿಮೈಜರ್ (ಎಪಿಒ) ಮೊದಲಾದ ತಂತ್ರಾಂಶಗಳೂ ಮಾರುಕಟ್ಟೆಗೆ ಬಂದಿವೆ. ಅನೇಕ ಬಿಪಿಒ ಸಂಸ್ಥೆಗಳು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ಆಗಿಂದಾಗ್ಗೆ ಹೊಸಹೊಸ ಉದ್ಯೋಗಗಳೂ ಸೃಷ್ಟಿಯಾಗುತ್ತಿರುತ್ತವೆ.

ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಪ್ಲೈ ಚೈನ್ ಕೌನ್ಸಿಲ್‌ನ ಜಾಲತಾಣ www.supply-chain.org ಅನ್ನು ಸಂದರ್ಶಿಸಬಹುದು. ಈ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸಲು ಬಯಸುವವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್, ಮುಂಬೈನ ಎನ್‌ಎಂಐಎಂಎಸ್ ಮೊದಲಾದ ಸಂಸ್ಥೆಗಳು ನಡೆಸುವ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಸೇರಬಹುದು.

(ಸೆಪ್ಟೆಂಬರ್ ೨೦೦೬)