ಪ್ರಪಂಚದಲ್ಲಿ ಗಣಕಗಳ ಬಳಕೆ ಹೆಚ್ಚುತ್ತಿರುವಂತೆಯೇ ಯಂತ್ರಾಂಶ-ತಂತ್ರಾಂಶಗಳನ್ನು ಬಳಸಲು ಸಹಾಯ ಬಯಸುವ ಗಣಕ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಕಂಪ್ಯೂಟರ್ ಆನ್ ಮಾಡುವುದು ಹೇಗೆ ಎನ್ನುವುದರಿಂದ ಪ್ರಾರಂಭಿಸಿ ಯಾವುದೋ ಒಂದು ತಂತ್ರಾಂಶವನ್ನು ಬಳಸುವಾಗ ಉಂಟಾಗುವ ತೊಂದರೆಗಳನ್ನು ಹೇಗೆ ಎದುರಿಸಬೇಕು ಎನ್ನುವವರೆಗೆ ಗಣಕ ಬಳಕೆದಾರರಿಗೆ ನೂರೆಂಟು ಬಗೆಯ ಪ್ರಶ್ನೆಗಳು ಎದುರಾಗುತ್ತವೆ. ಇಂತಹ ಪ್ರಶ್ನೆಗಳನ್ನೆಲ್ಲ ಉತ್ತರಿಸುವವರೇ ಟೆಕ್ನಿಕಲ್ ಸಪೋರ್ಟ್ ತಜ್ಞರು.

ಸಂಸ್ಥೆಯೊಂದರ ಗ್ರಾಹಕರು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯೊಡನೆ ದೂರವಾಣಿ, ಇ-ಮೇಲ್ ಅಥವಾ ಆನ್‌ಲೈನ್ ಚಾಟ್ ಮೂಲಕ ಆ ಸಂಸ್ಥೆಯ ಕಾಲ್ ಸೆಂಟರ್ ಅನ್ನು ಸಂಪರ್ಕಿಸುತ್ತಾರೆ. ಇಂತಹ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಒದಗಿಸುವುದೇ ಆ ಸಂಸ್ಥೆಗಾಗಿ ಕೆಲಸಮಾಡುವ ಟೆಕ್ನಿಕಲ್ ಸಪೋರ್ಟ್ ತಜ್ಞರ ಕೆಲಸ. ಇವರ ಹುದ್ದೆಗಳ ಹೆಸರು ಟೆಕ್ನಿಕಲ್ ಸಪೋರ್ಟ್ ಸ್ಪೆಷಲಿಸ್ಟ್, ಟೆಕ್ನಿಕಲ್ ಸಪೋರ್ಟ್ ಎಕ್ಸೆಕ್ಯುಟಿವ್, ಪ್ರಾಡಕ್ಟ್ ಸಪೋರ್ಟ್ ಸ್ಪೆಷಲಿಸ್ಟ್ – ಹೀಗೆ ಏನು ಬೇಕಿದ್ದರೂ ಇರಬಹುದು.

ಕಂಪ್ಯೂಟರ್ ಪ್ರಪಂಚವನ್ನಷ್ಟೇ ಸೀಮಿತವಾಗಿ ನೋಡಿದರೆ ತಂತ್ರಾಂಶ ಹಾಗೂ ಯಂತ್ರಾಂಶಗಳನ್ನು ತಯಾರಿಸುವ ಬಹುತೇಕ ಎಲ್ಲ ಸಂಸ್ಥೆಗಳೂ ಟೆಕ್ನಿಕಲ್ ಸಪೋರ್ಟ್ ತಜ್ಞರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ಇಂತಹ ಸಾವಿರಾರು ಉದ್ಯೋಗಗಳು ಬಿ.ಪಿ.ಒ ಕೃಪೆಯಿಂದಾಗಿ ಭಾರತಕ್ಕೆ ಬಂದಿವೆ ಎನ್ನುವುದು ಗಮನಾರ್ಹ ಸಂಗತಿ.

ಸಾಧಾರಣ ಮಟ್ಟದ ಕಂಪ್ಯೂಟರ್ ಜ್ಞಾನವುಳ್ಳ ಯಾರು ಬೇಕಿದ್ದರೂ ಟೆಕ್ನಿಕಲ್ ಸಪೋರ್ಟ್ ಕೆಲಸಗಳಿಗೆ ಸೇರಬಹುದು. ಹೆಚ್ಚಿನ ಉದ್ಯೋಗ ಗಳಿಗೆ ಉತ್ತಮಮಟ್ಟದ ಇಂಗ್ಲಿಷ್ ಜ್ಞಾನ ಅಗತ್ಯ; ದೇಶೀಯ ಹಾಗೂ ಕೆಲ ವಿದೇಶೀ ಭಾಷೆಗಳಲ್ಲೂ ಟೆಕ್ನಿಕಲ್ ಸಪೋರ್ಟ್ ಉದ್ಯೋಗಗಳು ದೊರಕುತ್ತವೆ.

ಈ ಕ್ಷೇತ್ರದಲ್ಲಿ ಪ್ರಾರಂಭಿಕ ಹುದ್ದೆಗಳಿಗೆ ಹೆಚ್ಚಿನ ವಿದ್ಯಾರ್ಹತೆಯ ಅವಶ್ಯಕತೆಯಿಲ್ಲವಾದರೂ ಮುಂದೆ ಸಾಗುತ್ತಿದ್ದಂತೆ ಸರ್ಟಿಫಿಕೇಷನ್ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಅನುಕೂಲಕರ.

ಇಂತಹ ಸರ್ಟಿಫಿಕೇಷನ್‌ಗಳನ್ನು ಒದಗಿಸುವ ಸಂಸ್ಥೆಗಳಲ್ಲಿ ಹೆಲ್ಪ್ ಡೆಸ್ಕ್ ಇನ್‌ಸ್ಟಿಟ್ಯೂಟ್ ಅಗ್ರಗಣ್ಯವಾದದ್ದು. ಈ ಸಂಸ್ಥೆ ನಡೆಸುವ ಕಸ್ಟಮರ್ ಸಪೋರ್ಟ್ ಸ್ಪೆಷಲಿಸ್ಟ್ (ಸಿ.ಎಸ್.ಎಸ್) ಸರ್ಟಿಫಿಕೇಷನ್ ಬಗೆಗೆ ಹೆಚ್ಚಿನ ಮಾಹಿತಿಗಾಗಿ www.thinkhdi.com ಜಾಲತಾಣಕ್ಕೆ ಭೇಟಿನೀಡಬಹುದು.

(ಜುಲೈ ೨೦೦೬)