ಅರೆವಾಹಕ (ಸೆಮಿಕಂಡಕ್ಟರ್) ಧಾತುಗಳಿಂದ ತಯಾರಿಸಲಾಗುವ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು (ಐಸಿ) – ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಸೆಮಿಕಂಡಕ್ಟರ್ ಚಿಪ್‌ಗಳು ಯಾವುದೇ ಎಲೆಕ್ಟ್ರಾನಿಕ್ ಉಪಕರಣದ ಅತಿಮುಖ್ಯ ಭಾಗಗಳಾಗಿರುತ್ತವೆ. ಗಣಕ, ಡಿಜಿಟಲ್ ಕ್ಯಾಮೆರಾ, ಮೊಬೈಲ್ ದೂರವಾಣಿ ಮೊದಲಾದ ಯಾವುದೇ ಅತ್ಯಾಧುನಿಕ ಉಪಕರಣ ನೆಟ್ಟಗೆ ಕೆಲಸಮಾಡುವುದು ಅದರಲ್ಲಿರುವ ಚಿಪ್‌ಗಳ ಮೇಲೆಯೇ ಅವಲಂಬಿತವಾಗಿರುತ್ತದೆ.

ಇಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ತೀವ್ರವಾಗಿ ಹೆಚ್ಚುತ್ತಿರುವುದರ ಜೊತೆಗೆ ನಮ್ಮ ಜೀವನಗಳಲ್ಲಿ ಅವುಗಳ ಮಹತ್ವವೂ ಹೆಚ್ಚುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಈಗ ಈ ಸಿಲಿಕಾನ್ ಚಿಪ್‌ಗಳನ್ನು ತಯಾರಿಸುವವರಿಗೆ ಬಿಡುವಿಲ್ಲದ ಕೆಲಸ.

ಹೀಗಾಗಿಯೇ ನಮ್ಮ ದೇಶದಲ್ಲೂ ಈಗ ಸೆಮಿಕಂಡಕ್ಟರ್ ಕೈಗಾರಿಕೆ ನಿಧಾನವಾಗಿ ಬೆಳೆಯುತ್ತಿದೆ. ಎಂಬತ್ತರ ದಶಕದ ಮಧ್ಯಭಾಗದಲ್ಲಿ ಸಣ್ಣದಾಗಿ ಶುರುವಾದ ಈ ಕೈಗಾರಿಕೆ ಇದೀಗ ಸುಮಾರು ಮೂರು ಬಿಲಿಯನ್ ಡಾಲರುಗಳಷ್ಟು ವಹಿವಾಟು ನಡೆಸುತ್ತಿದೆ. ಸೆಮಿಕಂಡಕ್ಟರ್ ಚಿಪ್‌ಗಳ ವಿನ್ಯಾಸ, ಅವುಗಳ ನಿರ್ಮಾಣ, ಹೀಗೆ ನಿರ್ಮಿತವಾದ ಚಿಪ್‌ನ ಕಾರ್ಯವೈಖರಿ ಕುರಿತಾದ ಕಟ್ಟುನಿಟ್ಟಿನ ಪರೀಕ್ಷೆ, ಅದು ಸರಿಯಾಗಿ ಕೆಲಸಮಾಡಲು ಬೇಕಾದ ತಂತ್ರಾಂಶದ (ಎಂಬೆಡೆಡ್ ಸಾಫ್ಟ್‌ವೇರ್) ರಚನೆ – ಹೀಗೆ ಸೆಮಿಕಂಡಕ್ಟರ್ ಕೈಗಾರಿಕೆಯಲ್ಲಿ ಅನೇಕ ಅವಕಾಶಗಳೂ ತೆರೆದುಕೊಳ್ಳುತ್ತಿವೆ. ವಾರ್ಷಿಕ ಶೇಕಡಾ ಮೂವತ್ತರ ದರದಲ್ಲಿ ಬೆಳೆಯುತ್ತಿರುವ ಈ ಕೈಗಾರಿಕೆ ಮುಂದಿನ ಹತ್ತು ವರ್ಷಗಳಲ್ಲಿ ವೇಳೆಗೆ ಸುಮಾರು ಮೂವತ್ತೈದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಂದಾಜು ಕೂಡ ಇದೆ.

ನಮ್ಮ ಸಿಲಿಕಾನ್ ಕಣಿವೆಯ ಕೆಲ ಸಂಸ್ಥೆಗಳು ಪ್ರಪಂಚದ ಅತಿದೊಡ್ಡ ಚಿಪ್ ತಯಾರಕರಿಗೆ ಬೇಕಾದ ವಿನ್ಯಾಸಗಳನ್ನು ಸಿದ್ಧಪಡಿಸಿಕೊಡುತ್ತಿವೆ. ಇನ್ನು ಕೆಲ ಸಂಸ್ಥೆಗಳು ವಿವಿಧ ಉದ್ದೇಶಗಳಿಗೆ ಬೇಕಾದ ಸೂಕ್ಷ್ಮಸಂಸ್ಕಾರಕಗಳನ್ನು ಆವಿಷ್ಕರಿಸುತ್ತಿವೆ. ಇಂತಹ ಚಿಪ್‌ಗಳನ್ನು ಬಳಸಿಕೊಂಡು ವಿಡಿಯೋ ಫೋನ್‌ನಂತಹ ಅತ್ಯುನ್ನತ ತಂತ್ರಜ್ಞಾನದ ಉಪಕರಣಗಳನ್ನು ನಿರ್ಮಿಸುವತ್ತಲೂ ಪ್ರಯತ್ನಗಳು ಸಾಗಿವೆ. ಈಚೆಗೆ ಬೆಂಗಳೂರು ಹೈದರಾಬಾದ್‌ಗಳ ನಡುವೆ ತೀವ್ರ ಸ್ವರೂಪದ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಸೆಮ್‌ಇಂಡಿಯಾ ಸಂಸ್ಥೆ ಪೂರ್ಣ ಪ್ರಮಾಣದ ಚಿಪ್ ಫ್ಯಾಬ್ರಿಕೇಷನ್ ಘಟಕವನ್ನೂ ಸ್ಥಾಪಿಸಲಿದೆ. ಸೆಮಿಕಂಡಕ್ಟರ್ ಚಿಪ್‌ಗಳ ಕಟ್ಟುನಿಟ್ಟಿನ ಪರೀಕ್ಷೆ (ಚಿಪ್ ಟೆಸ್ಟಿಂಗ್) ನಡೆಸುವ ಉದ್ದೇಶದಿಂದ ಬೆಂಗಳೂರಿನಲ್ಲೊಂದು ’ಸೆಮಿಕನ್ ಪಾರ್ಕ್’ ಕೂಡ ತಲೆಯೆತ್ತಿದೆ.

ಅತ್ಯಾಕರ್ಷಕ ಅವಕಾಶಗಳನ್ನು ಮುಂದಿಟ್ಟಿರುವ ಈ ಕ್ಷೇತ್ರಕ್ಕೆ ಕಾಲಿಡಬೇಕಾದರೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರ ಬೇಕಾದದ್ದು ಅವಶ್ಯಕ. ಇದರ ಜೊತೆಗೆ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅರಿವನ್ನು ಮೂಡಿಸಿಕೊಳ್ಳಲು ತರಬೇತಿ ನೀಡುವ ಅನೇಕ ಸಂಸ್ಥೆಗಳೂ ಕಾರ್ಯನಿರತವಾಗಿವೆ. ಅಂತಹ ಸಂಸ್ಥೆಗಳಿಂದಲೂ ಶಿಕ್ಷಣ ಪಡೆಯಬಹುದು. ಆದರೆ ಈ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮಹತ್ವ ಇರುವುದು ನಿಮ್ಮ ಅರ್ಹತೆ, ಸಾಮರ್ಥ್ಯ ಹಾಗೂ ಜ್ಞಾನಕ್ಕೆ ಎನ್ನುವುದನ್ನು ಮಾತ್ರ ಮರೆಯುವಂತಿಲ್ಲ.

(ಏಪ್ರಿಲ್ ೨೦೦೬)