ಗಣಕೀಕೃತ ರೈಲ್ವೇ ಮುಂಗಡ ಟಿಕೆಟ್ ಕಾದಿರಿಸುವ ವ್ಯವಸ್ಥೆ ಇದೆಯಲ್ಲ, ಅದರ ಮೂಲಕ ನೀವು ದೇಶದ ಯಾವುದೇ ಮೂಲೆಯಿಂದ ಹೊರಡುವ ಯಾವುದೇ ರೈಲಿಗಾಗಿ ನಿಮ್ಮ ಊರಿನಿಂದಲೇ ಟಿಕೆಟ್‌ಗಳನ್ನು ಕಾದಿರಿಸಬಹುದು. ಇದೇ ರೀತಿ ಎಲ್‌ಐಸಿಯಲ್ಲೂ ಒಂದು ವ್ಯವಸ್ಥೆ ಇದೆ – ದೇಶದ ಯಾವುದೇ ಮೂಲೆಯಲ್ಲಿರುವ ಖಾತೆಯಿಂದ ಪಡೆದ ಪಾಲಿಸಿಯ ಪ್ರೀಮಿಯಂ ಅನ್ನು ಇನ್ನಾವುದೇ ಖಾತೆಯಲ್ಲಿ ಪಾವತಿಸಬಹುದು. ಬ್ಯಾಂಕುಗಳ ಎಟಿಎಂಗಳಲ್ಲೂ ಅಷ್ಟೆ, ನಿಮ್ಮ ಬಳಿ ಕಾರ್ಡ್ ಇದ್ದರೆ ಸಾಕು, ಯಾವುದೇ ಊರಿನಲ್ಲಿರುವ ಯಾವುದೇ ಎಟಿಎಂ ಯಂತ್ರದಿಂದಲೂ ಹಣ ಪಡೆಯುವುದು ಸಾಧ್ಯ.

ಇದನ್ನೆಲ್ಲ ಸಾಧ್ಯವಾಗಿಸಿರುವುದು ಗಣಕ ಜಾಲಗಳು (ನೆಟ್‌ವರ್ಕ್‌ಗಳು). ಜಾಲ ಅಥವಾ ನೆಟ್‌ವರ್ಕ್ ಎನ್ನುವುದು ಪರಸ್ಪರ ಸಂಪರ್ಕ ಹೊಂದಿರುವ ಗಣಕಗಳು ಮತ್ತು ಸಂಬಂಧಿಸಿದ ಬಾಹ್ಯ ಸಾಧನಗಳ ಜೋಡಣೆ. ಕೇವಲ ಒಂದು ಗಣಕದ ಸಹಾಯದಿಂದ ಅದೆಷ್ಟೋ ಕ್ಲಿಷ್ಟವಾದ ಕಾರ್ಯಗಳನ್ನು ಪೂರೈಸಿಕೊಳ್ಳುವುದು ಸಾಧ್ಯವಾಗುವುದಾದರೆ, ಒಂದಕ್ಕಿಂತ ಹೆಚ್ಚು ಗಣಕಗಳನ್ನು ಒಟ್ಟಿಗೆ ಉಪಯೋಗಿಸುವುದರಿಂದ ಇನ್ನೂ ಹೆಚ್ಚಿನ ಕಾರ್ಯಗಳನ್ನು ಕೈಗೊಳ್ಳು ವುದು ಸಾಧ್ಯ ಎಂಬ ಆಲೋಚನೆಯೇ ಗಣಕ ಜಾಲಗಳ ಹುಟ್ಟಿಗೆ ಕಾರಣವಾದ ಅಂಶ.

ದೈನಂದಿನ ಜೀವನದ ವಿವಿಧ ಕ್ಷೇತ್ರಗಳಲ್ಲಿ ಗಣಕೀಕರಣದ ಭರಾಟೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಸಣ್ಣಪುಟ್ಟ ಸಂಸ್ಥೆಗಳಲ್ಲೂ ಅನೇಕ ಬಗೆಯ ಗಣಕ ಜಾಲಗಳು ಕಾಣಸಿಗುತ್ತಿವೆ. ಹೀಗಾಗಿ ಗಣಕ ಜಾಲಗಳನ್ನು ನಿಭಾಯಿಸಲು ಬಲ್ಲವರಿಗೆ ಅನೇಕ ಅವಕಾಶಗಳೂ ಲಭ್ಯವಾಗುತ್ತಿವೆ.

ನೆಟ್‌ವರ್ಕಿಂಗ್ ಬಲ್ಲವರಿಗೆ ವಿವಿಧ ಸಂಸ್ಥೆಗಳಲ್ಲಿ ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್, ನೆಟ್‌ವರ್ಕ್ (ಸಿಸ್ಟಂಸ್) ಇಂಜಿನಿಯರ್, ನೆಟ್ ವರ್ಕ್ (ಸರ್ವಿಸ್) ಟೆಕ್ನೀಷಿಯನ್ ಮೊದಲಾದ ಉದ್ಯೋಗಗಳು ಲಭ್ಯವಿರುತ್ತವೆ.

ಅವರ ಕೆಲಸ ಗಣಕ ಜಾಲಗಳನ್ನು ರೂಪಿಸುವುದರಿಂದ ಪ್ರಾರಂಭಿಸಿ ಅವುಗಳನ್ನು ಕಾರ್ಯನಿರತಗೊಳಿಸಿ ಸುಲಲಿತವಾಗಿ ಕೆಲಸಮಾಡುವಂತೆ ನೋಡಿಕೊಳ್ಳುವವರೆಗೂ ಇರುತ್ತದೆ. ಗಣಕ ಜಾಲಗಳಲ್ಲಿ ಬಳಕೆ ಯಾಗುವ ರೌಟರ್‌ಗಳು, ಸ್ವಿಚ್‌ಗಳು ಮುಂತಾದ ಯಂತ್ರಾಂಶಗಳ ನಿರ್ವಹಣೆ, ಫೈರ್‌ವಾಲ್‌ಗಳ ಮೇಲ್ವಿಚಾರಣೆ, ವೈರಸ್ – ಸ್ಪೈವೇರ್ ಮೊದಲಾದ ತಾಪತ್ರಯಗಳಿಂದ ಜಾಲವನ್ನು ರಕ್ಷಿಸುವುದು, ಆಂತರಿಕ ಇಮೇಲ್ ವ್ಯವಸ್ಥೆಯನ್ನು ನಡೆಸುವುದು ಮುಂತಾದವುಗಳೆಲ್ಲ ಇವರ ಜವಾಬ್ದಾರಿಯಾಗಿರುತ್ತದೆ. ಕೆಲವೊಮ್ಮೆ ಜಾಲಗಳ ಕಾರ್ಯಾಚರಣೆಗೆ ಬೇಕಾದ ತಂತ್ರಾಂಶಗಳನ್ನು ರಚಿಸುವ ಜವಾಬ್ದಾರಿ ಕೂಡ ಇವರ ಮೇಲಿರಬಹುದು.

ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಅರಸಲು ಇರಬೇಕಾದ ಪ್ರಾಥಮಿಕ ಅರ್ಹತೆ ಯಾವುದೇ ಪದವಿ. ಟಿಸಿಪಿ/ಐಪಿ, ಈಥರ್‌ನೆಟ್, ಒಎಸ್‌ಐ ಮಾಡೆಲ್, ಫೈರ್‌ವಾಲ್ ಮುಂತಾದ ವಿಷಯಗಳ ಪರಿಚಯವಿರಬೇಕಾದದ್ದು ಕಡ್ಡಾಯ. ನೆಟ್‌ವರ್ಕ್ ತಂತ್ರಾಂಶಗಳ ಜೊತೆಗೆ ಯಂತ್ರಾಂಶಗಳ ಕುರಿತು ಕೂಡ ಅರಿವಿರಬೇಕಾಗುತ್ತದೆ.

ನೆಟ್‌ವರ್ಕಿಂಗ್ ತಂತ್ರಜ್ಞಾನಗಳ ಕುರಿತು ಹೆಚ್ಚಿನ ಕೋರ್ಸ್‌ಗಳನ್ನು ಯಾವುದೇ ತರಬೇತಿ ನಂಬಿಕಾರ್ಹ ಸಂಸ್ಥೆಯಿಂದ ಪಡೆಯಬಹುದು. ಆ ಸಂಸ್ಥೆಗಳು ತಮ್ಮದೇ ಆದ ಪ್ರಮಾಣಪತ್ರಗಳನ್ನು ನೀಡುವಂತಿದ್ದರೆ ಅದಕ್ಕೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಯಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿರಬೇಕಾದದ್ದು ಆವಶ್ಯಕ.

ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಕೂಡ ನೆಟ್‌ವರ್ಕಿಂಗ್ ಸಂಬಂಧೀ ಪರೀಕ್ಷೆಗಳನ್ನು ನಡೆಸಿ ಮಾನ್ಯತೆ ನೀಡುತ್ತವೆ. ಇವುಗಳಲ್ಲಿ ಅತ್ಯುತ್ತಮ ಆಯ್ಕೆ ಎಂದರೆ ಸಿಸ್ಕೋ ಸಂಸ್ಥೆ ನೀಡುವ ಸಿ.ಸಿ.ಎನ್.ಎ. ಅಥವಾ ಮೈಕ್ರೋಸಾಫ್ಟ್‌ನ ಎಂ.ಸಿ.ಎಸ್.ಇ ಮಾನ್ಯತೆಯನ್ನು ಪಡೆಯುವುದು. ಈ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಕೂಡ ಹಲವಾರು ಕಡೆ ತರಬೇತಿ ನೀಡಲಾಗುತ್ತದೆ. ಈ ಸರ್ಟಿಫಿಕೇಷನ್ ಗಳನ್ನು ಪಡೆಯಲು ಹಲವು ಸಾವಿರ ರೂಪಾಯಿಗಳು ಖರ್ಚಾದರೂ ಕೂಡ ಈ ಮಾನ್ಯತೆ ಹೊಂದಿರುವವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ.

ನೆಟ್‌ವರ್ಕಿಂಗ್ ಕೆಲಸಗಳಲ್ಲಿ ತೊಡಗಿಕೊಂಡಿರುವವರು ಆಗಿಂದಾಗ್ಗೆ ಸುದೀರ್ಘ ಅವಧಿಗಳ ಕಾಲ ’ಕಷ್ಟಪಟ್ಟು’ ಕೆಲಸಮಾಡಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಲಭ್ಯವಾಗಬಹುದಾದ ಸಂಬಳ ನಿಮ್ಮ ಅರ್ಹತೆ ಹಾಗೂ ಅನುಭವವನ್ನು ನೇರವಾಗಿ ಅವಲಂಬಿಸಿರುತ್ತದೆ.

(ಮಾರ್ಚ್ ೨೦೦೬)