ಅಂತರಜಾಲ ಹಾಗೂ ವಿಶ್ವವ್ಯಾಪಿ ಜಾಲ (ಇಂಟರ್‌ನೆಟ್ ಹಾಗೂ WWW) ಇಂದಿನ ಸಮಾಜದಲ್ಲಿ ಅದೆಷ್ಟು ಮಹತ್ವ ಪಡೆದುಕೊಂಡಿದೆ ಎಂದರೆ ಅವುಗಳನ್ನು ಬಳಸಿ ಮಾಡಲು ಸಾಧ್ಯವಿಲ್ಲದ ಕೆಲಸವೇ ಇಲ್ಲವೇನೋ ಎನ್ನಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಶಿಕ್ಷಣ, ವ್ಯಾಪಾರ, ಕಾನೂನು ಸಲಹೆ, ಬಿಲ್ ಪಾವತಿ, ಬ್ಯಾಂಕಿಂಗ್, ಲಾಟರಿ, ಟ್ಯಾಕ್ಸ್ ಹಾಗೂ ಜೀವವಿಮೆ ಪಾವತಿ – ಹೀಗೆ ನೂರಾರು, ಸಾವಿರಾರು ಕ್ಷೇತ್ರಗಳು ಗಣಕ ಜಾಲಗಳ ಮೇಲೆ ಅವಲಂಬಿತವಾಗಿವೆ. ಕಳೆದ ವರ್ಷದಲ್ಲಿ ಅಂತರಜಾಲ ಆಧರಿತ ವಹಿವಾಟಿನ ಒಟ್ಟು ಮೊತ್ತ ಸುಮಾರು ನಾಲ್ಕುನೂರು ಮಿಲಿಯನ್ ಡಾಲರುಗಳಷ್ಟಿತ್ತು ಎಂದು ಕೆಲವು ಅಂದಾಜುಗಳು ಹೇಳುತ್ತವೆ.

ಇಷ್ಟೆಲ್ಲ ಭಾರೀ ಮೊತ್ತದ ವಹಿವಾಟು ನಡೆಸುವಾಗ ಯಾವ ತಾಣಕ್ಕೆ ಎಷ್ಟು ಜನ ಭೇಟಿಕೊಟ್ಟರು, ಎಷ್ಟು ಹೊತ್ತು ಅಲ್ಲಿದ್ದರು, ಅಲ್ಲಿರುವ ಯಾವ ಮಾಹಿತಿಯನ್ನು ಪಡೆದುಕೊಂಡರು, ಅವರಲ್ಲಿ ಸುಮ್ಮನೆ ಬಂದು ಹೋದವರೆಷ್ಟು, ನಿಜವಾಗಿಯೂ ವಹಿವಾಟು ನಡೆಸಿದವರೆಷ್ಟು ಎಂಬ ವಿಷಯಗಳೆಲ್ಲ ಬಹಳ ಮಹತ್ವಪೂರ್ಣವಾಗುತ್ತವೆ. ಯಾವುದೇ ಆನ್‌ಲೈನ್ ವಹಿವಾಟಿನ ಮಾಲಿಕನಿಗೆ ತನ್ನ ಹೂಡಿಕೆಗೆ ಪ್ರತಿಯಾಗಿ ಎಷ್ಟರ ಮಟ್ಟಿನ ಲಾಭ ಬರುತ್ತಿದೆ ಎಂಬ ಮಾಹಿತಿಯ ಜೊತೆಗೆ ಈ ಉದ್ದಿಮೆಯಲ್ಲಿ ಇನ್ನೂ ಎಷ್ಟು ಬಂಡವಾಳವನ್ನು ತೊಡಗಿಸಬಹುದು ಎಂಬ ನಿರ್ಧಾರ ಕೈಗೊಳ್ಳುವಲ್ಲೂ ಈ ಅಂಕಿ ಅಂಶಗಳು ನೆರವಾಗುತ್ತವೆ. ಗಣಕ ತಂತ್ರಾಂಶಗಳ ನೆರವಿನಿಂದ ಇಂತಹ ಮಾಹಿತಿಯನ್ನು ಸಂಗ್ರಹಿಸುವ ಹಾಗೂ ಸೂಕ್ತ ವಿಶ್ಲೇಷಣೆಗೆ ಒಳಪಡಿಸುವ ಕ್ಷೇತ್ರವೇ ವೆಬ್ ಅನಲಿಟಿಕ್ಸ್.

ಅಂತರಜಾಲ ಆಧರಿತ ವಹಿವಾಟುಗಳಿಂದ ಜನರು ಏನನ್ನು ಬಯಸುತ್ತಾರೆ, ಈಗ ಲಭ್ಯವಿರುವ ಸೌಕರ್ಯಗಳು ಅವರ ಅಗತ್ಯಗಳನ್ನು ಎಷ್ಟರಮಟ್ಟಿಗೆ ಪೂರೈಸುತ್ತಿವೆ, ಇನ್ನೂ ಏನೆಲ್ಲ ಬದಲಾವಣೆಗಳನ್ನು ಅವರು ಬಯಸುತ್ತಾರೆ ಎಂಬುದನ್ನೆಲ್ಲ ಅರಿಯಲು ವೆಬ್ ಅನಲಿಟಿಕ್ಸ್ ಸಹಾಯಮಾಡುತ್ತದೆ. ಇಷ್ಟೆಲ್ಲ ಕೆಲಸಮಾಡಲು ಗೂಗಲ್ ಅನಲಿಟಿಕ್ಸ್, ವೆಬ್‌ಟ್ರೆಂಡ್ಸ್, ವೆಬ್‌ಸೈಡ್ ಸ್ಟೋರಿ, ಆಮ್ನಿಚ್ಯೂರ್ ಮೊದಲಾದ ತಂತ್ರಾಂಶಗಳು ಬಳಕೆಯಾಗುತ್ತವೆ.

ಅಂತರಜಾಲ ಆಧರಿತ ವ್ಯಾಪಾರ ವಹಿವಾಟುಗಳ ಭರಾಟೆ ಬಲು ಜೋರಾಗಿರುವ ಈ ದಿನಗಳಲ್ಲಿ ವೆಬ್ ಅನಲಿಟಿಕ್ಸ್ ಬಲ್ಲ ತಂತ್ರಜ್ಞರಿಗೂ ಬೇಡಿಕೆ ಹೆಚ್ಚುತ್ತಿದೆ. ವೆಬ್ ತಂತ್ರಜ್ಞಾನದ ಹಿನ್ನೆಲೆಯುಳ್ಳವರು ಮಾತ್ರವಲ್ಲದೆ ಮಾರ್ಕೆಟಿಂಗ್ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್ ನಿಪುಣರು ಕೂಡ ಈ ಕ್ಷೇತ್ರದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅನಲಿಟಿಕ್ಸ್ ಇಂಜಿನಿಯರ್, ವೆಬ್ ಅನಲಿಸ್ಟ್ ಮುಂತಾದ ವಿಶಿಷ್ಟ ಹುದ್ದೆಗಳಿಗೆ ಮಾತ್ರವಲ್ಲದೆ ವೆಬ್ ತಂತ್ರಜ್ಞಾನದಲ್ಲಿ ಕೆಲಸಮಾಡುವ ಇನ್ನೂ ಅನೇಕ ತಂತ್ರಜ್ಞರಿಗೂ ವೆಬ್ ಅನಲಿಟಿಕ್ಸ್ ಹಾಗೂ ಅದರಲ್ಲಿ ಬಳಕೆಯಾಗುವ ತಂತ್ರಾಂಶಗಳ ಪರಿಚಯ ಇರಬೇಕಾಗುತ್ತದೆ.

ವೆಬ್ ಅನಲಿಟಿಕ್ಸ್ ಕ್ಷೇತ್ರ ಕಳೆದ ದಶಕದ ಮಧ್ಯಭಾಗದಿಂದಲೇ ಸುದ್ದಿಮಾಡುತ್ತಿದ್ದರೂ ಕೂಡ ಇಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ ಮಾತ್ರ ಅಷ್ಟೊಂದು ಭಾರೀ ಪ್ರಮಾಣದಲ್ಲಿ ನಡೆದಿಲ್ಲ. ಹೀಗಾಗಿ ಈ ಕ್ಷೇತ್ರಕ್ಕೇ ಸೀಮಿತವಾದ ತರಬೇತಿ ನೀಡುವ ಸಂಸ್ಥೆಗಳೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಲಭ್ಯವಿರುವ ಕೆಲವೇ ತರಬೇತಿಗಳನ್ನು ಹೆಚ್ಚಾಗಿ ವೆಬ್ ಅನಲಿಟಿಕ್ಸ್ ತಂತ್ರಾಂಶಗಳನ್ನು ನಿರ್ಮಿಸುವ ಸಂಸ್ಥೆಗಳೇ ನೀಡುತ್ತವೆ. ವೆಬ್ ಅನಲಿಟಿಕ್ಸ್ ಅಸೋಸಿಯೇಷನ್ (WAA) ಹಾಗೂ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆನ್‌ಲೈನ್ ತರಬೇತಿ ಕಾರ್ಯಕ್ರಮವೊಂದು ನಡೆಯುತ್ತಿರುವುದು ಗಮನಾರ್ಹ ಸಂಗತಿ.

ಈ ತರಬೇತಿ ಕಾರ್ಯಕ್ರಮ ಹಾಗೂ ವೆಬ್ ಅನಲಿಟಿಕ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್ ಅನಲಿಟಿಕ್ಸ್ ಅಸೋಸಿಯೇಷನ್‌ನ ಜಾಲತಾಣ www.webanalyticsassociation.org ಅನ್ನು ಸಂದರ್ಶಿಸಬಹುದು.

(ಜೂನ್ ೨೦೦೬)