ಮಾನವನ ವಂಶವಾಹಿ, ಸೃಷ್ಟಿಯ ಅತ್ಯಂತ ಕ್ಲಿಷ್ಟಕರ ರಚನೆ ಗಳಲ್ಲೊಂದು. ಈ ವಂಶವಾಹಿಯ ರಚನೆ ಹೇಗಿರುತ್ತದೆ ಹಾಗೂ ಅವುಗಳ ರಚನೆಯ ಮೇಲೆ ಮಾನವ ಜೀವನ ಹೇಗೆ ಆಧರಿತ ವಾಗಿರುತ್ತದೆ ಎಂಬುದನ್ನೆಲ್ಲ ಅರಿತುಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಬೃಹತ್ ಯೋಜನೆಯೇ ಹ್ಯೂಮನ್ ಜಿನೋಮ್ ಪ್ರಾಜೆಕ್ಟ್. ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ಅತ್ಯಂತ ಕಠಿಣ ಅಧ್ಯಯನ ಗಳನ್ನು ನಡೆಸುವಲ್ಲಿ ಗಣಕಗಳು ಬಹಳ ಪರಿಣಾಮಕಾರಿಯಾಗಿ ನೆರವಾಗಬಲ್ಲವು ಎಂಬುದನ್ನು ಇಡೀ ಪ್ರಪಂಚಕ್ಕೇ ತೋರಿಸಿಕೊಟ್ಟ ಯೋಜನೆ ಇದು.

ಇಂತಹ ಹಲವಾರು ಪ್ರಯತ್ನಗಳ ಯಶಸ್ಸಿನ ಮೇಲೆ ಬೆಳೆದು ನಿಂತಿರುವ ಕ್ಷೇತ್ರವೇ ಬಯೋಇನ್ಫರ್‌ಮ್ಯಾಟಿಕ್ಸ್. ಜೀವಶಾಸ್ತ್ರೀಯ ಅಧ್ಯಯನಗಳಲ್ಲಿ ಗಣಕಗಳು, ತಂತ್ರಾಂಶಗಳು ಹಾಗೂ ದತ್ತ ಸಂಚಯಗಳ (ಡೇಟಾಬೇಸ್) ಪರಿಣಾಮಕಾರಿ ಬಳಕೆ ಮಾಡಿಕೊಳ್ಳು ವುದು ಈ ಕ್ಷೇತ್ರದ ಉದ್ದೇಶ.

ಈ ಕ್ಷೇತ್ರದಲ್ಲಿ ಚಟುವಟಿಕೆ ಹೆಚ್ಚುತ್ತಿರುವಂತೆಯೇ ಬಯೋಇನ್ಫರ್‌ಮ್ಯಾಟಿಕ್ಸ್ ಬಲ್ಲವರಿಗೂ ಬೇಡಿಕೆ ಸೃಷ್ಟಿಯಾಗ ತೊಡಗಿದೆ. ಶಿಕ್ಷಣ ಕೇಂದ್ರಗಳಲ್ಲಿ, ಅಧ್ಯಯನ ಸಂಸ್ಥೆಗಳಲ್ಲಿ ಅವರಿಗಾಗಿ ಅವಕಾಶಗಳು ತೆರೆದುಕೊಳ್ಳುತ್ತಿವೆ.

ಈ ಕ್ಷೇತ್ರದಲ್ಲಿ ಭವಿಷ್ಯ ಅರಸಲು ಸಿದ್ಧವಾಗುವವರು ಜೀವಶಾಸ್ತ್ರ ಹಾಗೂ ಬಯೋಟೆಕ್ನಾಲಜಿಗಳ ಜೊತೆಗೆ ಗಣಕವಿಜ್ಞಾನದಲ್ಲೂ ಪರಿಣತಿ ಹೊಂದಿರಬೇಕು. ಗಣಿತ ಹಾಗೂ ಸಂಖ್ಯಾಶಾಸ್ತ್ರದ ಜ್ಞಾನವೂ ಅಪೇಕ್ಷಣೀಯ.

ಗಣಕವಿಜ್ಞಾನದ ಮಟ್ಟಿಗೆ ಹೇಳುವುದಾದರೆ ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಪರಿಚಯದ ಜೊತೆಗೆ ವಿವಿಧ ಗಣಕ ಕಾರ್ಯಾಚರಣೆ ವ್ಯವಸ್ಥೆಗಳು (ಆಪರೇಟಿಂಗ್ ಸಿಸ್ಟಂ), ದತ್ತ ಸಂಚಯಗಳು (ಡೇಟಾಬೇಸ್) ಹಾಗೂ ಪ್ರೋಗ್ರಾಮಿಂಗ್ ಭಾಷೆಗಳ ಜ್ಞಾನ ಇರಬೇಕಾಗುತ್ತದೆ.

ಖರಗಪುರ ಹಾಗೂ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ಮದುರೈ ಕಾಮರಾಜ್ ವಿವಿ, ಪುಣೆ ವಿಶ್ವವಿದ್ಯಾನಿಲಯ ಮೊದಲಾದ ಸಂಸ್ಥೆಗಳಲ್ಲಿ ಬಯೋಇನ್ಫರ್‌ಮ್ಯಾಟಿಕ್ಸ್ ಅಧ್ಯಯನ ನಡೆಸುವುದು ಸಾಧ್ಯ. ರಾಜ್ಯ ಸರ್ಕಾರದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಇನ್‌ಸ್ಟಿಟ್ಯೂಟ್ ಆಫ್ ಬಯೋಇನ್ಫರ್‌ಮ್ಯಾಟಿಕ್ಸ್ ಆಂಡ್ ಅಪ್ಲೈಡ್ ಬಯೋಟೆಕ್ನಾಲಜಿ (www.ibab.ac.in) ಕೂಡ ಈ ಕ್ಷೇತ್ರದಲ್ಲಿ ತರಬೇತಿ ನೀಡುತ್ತಿದೆ.

ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿ-ಡ್ಯಾಕ್ ಆಶ್ರಯದಲ್ಲೂ ಅನೇಕ ಚಟುವಟಿಕೆಗಳು ನಡೆಯುತ್ತಿವೆ; ಹೆಚ್ಚಿನ ವಿವರಗಳಿಗಾಗಿ http://bioinfo-portal.cdac.in ತಾಣಕ್ಕೆ ಭೇಟಿನೀಡಬಹುದು.

(ಆಗಸ್ಟ್ ೨೦೦೬)