ಪ್ರಪಂಚದಲ್ಲಿ ಇಷ್ಟೆಲ್ಲ ಬೇರೆಬೇರೆ ತರಹದ ತಂತ್ರಾಂಶಗಳು ತಯಾರಾಗುತ್ತವಲ್ಲ, ಅದನ್ನೆಲ್ಲ ಉಪಯೋಗಿಸುವುದು ಹೇಗೆ ಎಂದು ಹೇಳಿಕೊಡುವವರು ಯಾರು ಅಂತೇನಾದರೂ ಯೋಚಿಸಿದ್ದೀರಾ?

ಯಾವುದೇ ಒಂದು ತಂತ್ರಾಂಶ ತಯಾರಾದಾಗ ಅದರ ಬಗ್ಗೆ ವಿವರಣೆ ನೀಡುವ ಕೈಪಿಡಿಗಳು, ಅದನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸುವುದು ಹೇಗೆ ಎಂದು ಹೇಳಿಕೊಡುವ ಪುಸ್ತಿಕೆ, ತಂತ್ರಾಂಶದ ಬಳಕೆಯ ಬಗ್ಗೆ ವಿವರಣೆ ನೀಡುವ ಮಾಹಿತಿ – ಹೀಗೆ ಅನೇಕ ಪ್ರಕಾರದ ’ಸಾಹಿತ್ಯ’ ತಯಾರಾಗುತ್ತದೆ. ಸುಲಲಿತವಾಗಿ ಕೆಲಸಮಾಡುವ ತಂತ್ರಾಂಶಗಳನ್ನು ರಚಿಸುವುದು ಎಷ್ಟು ಮುಖ್ಯವೋ ಆ ತಂತ್ರಾಂಶದ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುವುದು ಕೂಡ ಅಷ್ಟೇ ಮುಖ್ಯ.

ಈ ಮಾಹಿತಿಯನ್ನೆಲ್ಲ ಸಿದ್ಧಪಡಿಸುವುದು ಅಥವಾ ’ಬರೆಯುವುದು’ ಟೆಕ್ನಿಕಲ್ ರೈಟರ್‌ಗಳ ಕೆಲಸ. ತಂತ್ರಜ್ಞಾನ ಕ್ಷೇತ್ರದ ವಿವಿಧ ಮಜಲು ಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಸಿದ್ಧಪಡಿಸುವುದು ಇವರ ಜವಾಬ್ದಾರಿ. ಟೆಕ್ನಿಕಲ್ ರೈಟರ್‌ಗಳು ಬಳಕೆದಾರರ ಕೈಪಿಡಿಗಳ ಜೊತೆಗೆ ಬ್ರೋಷರ್‌ಗಳು, ಕ್ಯಾಟಲಾಗ್‌ಗಳು, ಜಾಲತಾಣಗಳು, ಪ್ರೆಸೆಂಟೇಷನ್‌ಗಳು, ವೆಬ್-ಆಧಾರಿತ ಪಠ್ಯ ಸಾಮಗ್ರಿ, ಆನ್‌ಲೈನ್ ಟ್ಯುಟೋರಿಯಲ್‌ಗಳು ಮುಂತಾದವುಗಳನ್ನೂ ಸಿದ್ಧಪಡಿಸುತ್ತಾರೆ.

ವಿಶ್ವವಿದ್ಯಾನಿಲಯದ ಪದವಿ ಹಾಗೂ ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಈ ಉದ್ಯೋಗ ಕೈಗೊಳ್ಳಲು ಬೇಕಾದ ಪ್ರಮುಖ ಅರ್ಹತೆಗಳು. ಜೊತೆಗೆ ಕಂಪ್ಯೂಟರ್ ಬಳಕೆ ಕೂಡ ಚೆನ್ನಾಗಿ ಗೊತ್ತಿರಬೇಕು ಹಾಗೂ ರೋಬೋಹೆಲ್ಪ್, ಫ್ರೇಮ್‌ಮೇಕರ್, ಪೇಜ್‌ಮೇಕರ್, ಎಂ ಎಸ್ ವರ್ಡ್, ಆಕ್ರೋಬ್ಯಾಟ್ ಮುಂತಾದ ತಂತ್ರಾಂಶಗಳಲ್ಲಿ ಪ್ರಾವೀಣ್ಯ ಕೂಡ ಇರಬೇಕು. ಗಣಕ ತಂತ್ರಜ್ಞಾನ ಗಳ ಬಗೆಗೆ ಉತ್ತಮ ಮಟ್ಟದ ಜ್ಞಾನ ಅಪೇಕ್ಷಣೀಯ. ವಿಶೇಷವಾಗಿ ಹೆಚ್‌ಟಿಎಂಎಲ್ ಪರಿಚಯ ಇದ್ದರೆ ಒಳ್ಳೆಯದು.

ಟೆಕ್ನಿಕಲ್ ರೈಟಿಂಗ್ ಕುರಿತು ತರಬೇತಿ ನೀಡುವ ಹಲವಾರು ಕೇಂದ್ರಗಳು ಬೆಂಗಳೂರಿನಲ್ಲಿವೆ. ಇಂತಹ ಕೇಂದ್ರಗಳಲ್ಲಿ ಕೆಲವಕ್ಕೆ ’ಸೊಸೈಟಿ ಫಾರ್ ಟೆಕ್ನಿಕಲ್ ಕಮ್ಯೂನಿಕೇಷನ್’ನ ಮಾನ್ಯತೆ ಕೂಡ ಇದೆ. ಟೆಕ್ನಿಕಲ್ ರೈಟಿಂಗ್ ಬಗೆಗೆ ನಿಮಗಿರುವ ಆಸಕ್ತಿ, ಕಂಪ್ಯೂಟರ್ ಬಳಕೆಯಲ್ಲಿ ನಿಮಗಿರುವ ಪ್ರಾವೀಣ್ಯ ಹಾಗೂ ತರಬೇತಿ ವೆಚ್ಚ ಭರಿಸುವ ನಿಮ್ಮ ಸಾಮರ್ಥ್ಯವನ್ನು ಆಧರಿಸಿ ನೀವು ತೆಗೆದುಕೊಳ್ಳುವ ಕೋರ್ಸ್ ಅನ್ನು ಆರಿಸಿಕೊಳ್ಳಬಹುದು. ಈ ಕ್ಷೇತ್ರದಲ್ಲಿ ಸೀಮಿತ ಪ್ರಮಾಣದ ಅವಕಾಶಗಳು ಮಾತ್ರ ಲಭ್ಯವಿರುವುದರಿಂದ ನಿಮ್ಮ ಪ್ರತಿಭೆಗೇ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ.

ಬರವಣಿಗೆ ಈ ಉದ್ಯೋಗದ ಒಂದು ಮುಖ್ಯ ಅಂಗವಾದರೂ ಕೂಡ ಇಲ್ಲಿ ನಿಮ್ಮ ಕಲ್ಪನೆಗೆ ಹೆಚ್ಚಿನ ಸ್ವಾತಂತ್ರ್ಯ ಇರುವುದಿಲ್ಲ. ಬೇರೆಬೇರೆ ತಂಡಗಳ ಜೊತೆಗೆ ಸುಲಲಿತವಾಗಿ ಸಂವಹನ ನಡೆಸುವ ಚಾತುರ್ಯ ಕೂಡ ಇರಬೇಕು. ಹೊಸಹೊಸ ತಂತ್ರಜ್ಞಾನಗಳ ಬಗ್ಗೆ ಬರೆಯುವಾಗ ಆ ತಂತ್ರಜ್ಞಾನವನ್ನು ಚೆನ್ನಾಗಿ ಅರಿತುಕೊಳ್ಳುವ ಸಾಮರ್ಥ್ಯವೂ ಇರಬೇಕಾಗುತ್ತದೆ. ಗಣಕ ತಂತ್ರಜ್ಞಾನ ಮಾತ್ರವಲ್ಲದೆ ಕೃಷಿ, ಆರೋಗ್ಯ, ಬಯೋಟೆಕ್ನಾಲಜಿ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲೂ ಟೆಕ್ನಿಕಲ್ ರೈಟರ್‌ಗಳಿಗೆ ಅವಕಾಶಗಳು ಲಭ್ಯವಿವೆ. ಪ್ರಾರಂಭಿಕ ಸಂಬಳಗಳು ಎಂಟರಿಂದ ಹದಿನೈದು ಸಾವಿರ ರೂಪಾಯಿಗಳವರೆಗೂ ಇರಬಹುದು.

ಹೆಚ್ಚಿನ ಮಾಹಿತಿಗಾಗಿ www.twin-india.org, www.techwr-l. com, www.stc.org ಮುಂತಾದ ತಾಣಗಳಿಗೆ ಭೇಟಿನೀಡಬಹುದು.

(ಏಪ್ರಿಲ್ ೨೦೦೬)