ನಮ್ಮ ಆಪ್ತರ ದೂರವಾಣಿ ಸಂಖ್ಯೆಗಳೆಲ್ಲವಕ್ಕೂ ಒಂದೊಂದು ಧ್ವನಿಯನ್ನು ರೆಕಾರ್ಡ್ ಮಾಡಿಟ್ಟುಬಿಟ್ಟರೆ ಆಯಿತು, ಮತ್ತೆ ಅದೇ ಧ್ವನಿ ಹೊರಡಿಸಿದ ತಕ್ಷಣ ಆ ವ್ಯಕ್ತಿಯ ದೂರವಾಣಿ ಸಂಖ್ಯೆಗೆ ತನ್ನಷ್ಟಕ್ಕೆ ತಾನೇ ಕರೆ ಹೋಗುತ್ತದೆ! ಎಷ್ಟು ತಮಾಷೆಯ ವಿಷಯ ಅಲ್ಲವೆ?

ಇಂದು ಹೆಚ್ಚೂಕಡಿಮೆ ಎಲ್ಲ ಮೊಬೈಲ್ ದೂರವಾಣಿಗಳಲ್ಲೂ ಇರುವ ಈ ಸೌಲಭ್ಯವನ್ನು ಸಾಧ್ಯವಾಗಿಸಿರುವ ತಂತ್ರಜ್ಞಾನವೇ ಡಿಜಿಟಲ್ ಸಿಗ್ನಲ್ ಪ್ರಾಸೆಸಿಂಗ್, ಸರಳವಾಗಿ ’ಡಿಎಸ್‌ಪಿ’.

ಅತ್ಯಾಧುನಿಕ ದೂರದರ್ಶನ, ಸಿಡಿ/ಡಿವಿಡಿ/ಎಂಪಿ೩ ಪ್ಲೇಯರ್‌ಗಳು, ಎಂಪಿಇಜಿ ರೂಪಕ್ಕೆ ಚಲನಚಿತ್ರಗಳ ಕುಗ್ಗಿಸುವಿಕೆ (ಕಂಪ್ರೆಷನ್), ಧ್ವನಿ ಗುರುತಿಸುವಿಕೆ (ವಾಯ್ಸ್ ರೆಕಗ್ನಿಷನ್), ಅಂತರಜಾಲದ ಮೂಲಕ ಧ್ವನಿ ಸಂಕೇತಗಳ ರವಾನೆ (ವಿಒಐಪಿ) – ಹೀಗೆ ಅನೇಕ ಉಪಯೋಗಗಳಿಗಾಗಿ ಈ ತಂತ್ರಜ್ಞಾನ ಬಳಕೆಯಾಗುತ್ತದೆ.

ಅತ್ಯಂತ ಸಂಕೀರ್ಣವಾದ ವಿದ್ಯುನ್ಮಂಡಲಗಳನ್ನು (ಇಂಟಿಗ್ರೇಟೆಡ್ ಸರ್ಕ್ಯೂಟ್) ವಿನ್ಯಾಸಗೊಳಿಸುವುದರಿಂದ ಪ್ರಾರಂಭಿಸಿ ’ಸಿ’ ಹಾಗೂ ಅಸೆಂಬ್ಲಿ ಸ್ತರದ ಭಾಷೆಗಳಲ್ಲಿ ಪ್ರೋಗ್ರಾಮಿಂಗ್ ಮಾಡುವುದರವರೆಗೆ ಅನೇಕ ಬಗೆಯ ಅವಕಾಶಗಳು ಡಿಜಿಟಲ್ ಸಿಗ್ನಲ್ ಪ್ರಾಸೆಸಿಂಗ್ ಕ್ಷೇತ್ರದಲ್ಲಿ ಲಭ್ಯವಿರುತ್ತವೆ. ಗಣಿತದಲ್ಲಿ ಪರಿಣತಿ ಹಾಗೂ ಇಲೆಕ್ಟ್ರಾನಿಕ್ಸ್ ಕ್ಷೇತ್ರದ ಹಿನ್ನೆಲೆಯುಳ್ಳವರಿಗೆ ಈ ಕ್ಷೇತ್ರದಲ್ಲಿ ಆದ್ಯತೆ.

ಇಲ್ಲಿ ಉನ್ನತ ಮಟ್ಟದ ತಾಂತ್ರಿಕ ಕೌಶಲ ಅಗತ್ಯವಾದ್ದರಿಂದ ಸದ್ಯದಲ್ಲಿ ಲಭ್ಯವಿರುವ ಪರಿಣತರ ಸಂಖ್ಯೆ ಕೊಂಚ ಕಡಿಮೆಯೇ ಎಂದರೂ ತಪ್ಪಾಗಲಾರದು. ಹೀಗಾಗಿ ಡಿಎಸ್‌ಪಿ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿರುವವರಿಗೆ ಪ್ರಾರಂಭದಿಂದಲೇ ಒಳ್ಳೆಯ ಸಂಬಳ ಗ್ಯಾರಂಟಿ!

ಭಾರತೀಯ ವಿಜ್ಞಾನ ಮಂದಿರ, ವಿವಿಧ ಐಐಟಿಗಳು, ಎನ್‌ಐಟಿಗಳು ಹಾಗೂ ಇನ್ನಿತರ ಪ್ರಮುಖ ಅಧ್ಯಯನ ಕೇಂದ್ರಗಳಲ್ಲಿ ಡಿಎಸ್‌ಪಿಗೆ ಸಂಬಂಧಪಟ್ಟ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳು ಲಭ್ಯವಿವೆ. ಇದಲ್ಲದೆ ಡಿಜಿಟಲ್ ಸಿಗ್ನಲ್ ಪ್ರಾಸೆಸಿಂಗ್ ಕ್ಷೇತ್ರದಲ್ಲಿ ತರಬೇತಿ ನೀಡುವ ಸಂಸ್ಥೆಗಳೂ (ಮುಖ್ಯವಾಗಿ ಬೆಂಗಳೂರಿನಲ್ಲಿ) ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹಲವು ಡಿಎಸ್‌ಪಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಲವಾರು ವಿಶ್ವವಿಖ್ಯಾತ ಸಂಸ್ಥೆಗಳ ಸಹಯೋಗದಲ್ಲಿ ತಮ್ಮ ಸೇವೆಯನ್ನು ಒದಗಿಸುತ್ತಿರುವುದು ಗಮನಾರ್ಹ.

ಡಿಎಸ್‌ಪಿ ಬಗೆಗೆ ಹೆಚ್ಚಿನ ಮಾಹಿತಿಗಾಗಿ www.dspguru.com, www.dsprelated.comನಂತಹ ತಾಣಗಳಿಗೆ ಭೇಟಿಕೊಡಬಹುದು. ಇಲ್ಲವೇ ನಿಮಗೆ ಬೇಕಾದ ನಿರ್ದಿಷ್ಟ ಮಾಹಿತಿಗಾಗಿ ಹುಡುಕಾಟ ನಡೆಸಲು ಗೂಗಲ್‌ನಂತಹ ಸರ್ಚ್ ಇಂಜನ್‌ಗಳ ಮೊರೆಹೋಗುವುದು ಇನ್ನೂ ಒಳ್ಳೆಯದು!

(ಆಗಸ್ಟ್ ೨೦೦೬)