ವ್ಯಾವಹಾರಿಕ ವಿಷಯಗಳಿಗೆ ಸಂಬಂಧಪಟ್ಟ ಚಾರಿತ್ರಿಕ ಮಾಹಿತಿಯನ್ನು ಸಂಗ್ರಹಿಸಿಡಲು ಡೇಟಾ ವೇರ್‌ಹೌಸ್‌ಗಳನ್ನು ಬಳಸುವ ವಿಷಯ ನಮಗೆ ಈಗಾಗಲೇ ಗೊತ್ತು. ಇಂತಹ ಡೇಟಾ ವೇರ್‌ಹೌಸ್‌ಗಳಿಂದ ಲಭ್ಯವಾಗುವ ಮಾಹಿತಿಯ ಅಧ್ಯಯನ ಹಾಗೂ ಆ ಅಧ್ಯಯನದ ಆಧಾರದ ಮೇಲೆ ವ್ಯಾವಹಾರಿಕ ನಿರ್ಧಾರಗಳನ್ನು ಕೈಗೊಳ್ಳುವ ಕೆಲಸ ಇಂದಿನ ದಿನಗಳಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ.

ಈ ಕೆಲಸದಲ್ಲಿ ನೆರವಾಗುವ ತಂತ್ರಜ್ಞಾನದ ಹೆಸರು ಡೇಟಾ ಮೈನಿಂಗ್. ಡೇಟಾ ವೇರ್‌ಹೌಸ್‌ನಂತಹ ದೊಡ್ಡ ದತ್ತಸಂಚಯ (ಡೇಟಾಬೇಸ್)ಗಳಿಂದ ನಮಗೆ ಬೇಕಾದ ಮಾಹಿತಿಯನ್ನು ಬೇಕಾದ ರೀತಿಯಲ್ಲಿ ಪಡೆದುಕೊಳ್ಳಲು ಡೇಟಾ ಮೈನಿಂಗ್ ತಂತ್ರಾಂಶಗಳು ಸಹಾಯ ಮಾಡುತ್ತವೆ, ದತ್ತಸಂಚಯಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತವೆ.

ಉದಾಹರಣೆಗೆ, ಯಾವುದೇ ಸಂಸ್ಥೆಯೊಂದರ ಗ್ರಾಹಕರ ಕೊಳ್ಳುವ ಅಭ್ಯಾಸ ಹೇಗಿದೆ ಎನ್ನುವುದನ್ನು ಅಧ್ಯಯನ ಮಾಡಿದರೆ ಮುಂದಿನ ದಿನಗಳಲ್ಲಿ ಯಾವ ಉತ್ಪನ್ನಗಳನ್ನು ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಬೇಕು ಎನ್ನುವ ವಿಷಯ ಆ ಸಂಸ್ಥೆಗೆ ಅರಿವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ವ್ಯಾಪಾರ-ವಹಿವಾಟಿಗೆ ಸಂಬಂಧಪಟ್ಟ ಮಾಹಿತಿ ಸಂಗ್ರಹಣೆ ಹಾಗೂ ಸಂಸ್ಕರಣೆಯ ಜೊತೆಗೆ ವಿಶ್ಲೇಷಣೆಯ ಮಹತ್ವ ಕೂಡ ಹೆಚ್ಚುತ್ತಿರುವುದರಿಂದ ಡೇಟಾ ಮೈನಿಂಗ್ ತಂತ್ರಜ್ಞರಿಗೆ ಈಗ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಬರುತ್ತಿದೆ.

ಈ ಕ್ಷೇತ್ರಕ್ಕೆ ಪ್ರವೇಶಿಸಲು ಗಣಕವಿಜ್ಞಾನದ ಹಿನ್ನೆಲೆ ಹೊಂದಿರಬೇಕಾಗುತ್ತದೆ. ನ್ಯೂರೋ ಏಜೆಂಟ್ ಸಂಸ್ಥೆಯ ಡೇಟಾಮೈಂಡ್, ಐಡಿಐಎಸ್‌ನ ಇನ್ಫರ್ಮೇಷನ್ ಡಿಸ್ಕವರಿ, ಎಸ್‌ಎಎಸ್‌ನ ಎಂಟರ್ ಪ್ರೈಸ್ ಮೈನರ್ ಮುಂತಾದ ತಂತ್ರಾಂಶಗಳ ಪರಿಚಯ  ಇರುವುದೂ ಒಳ್ಳೆಯದು.

ಐಐಟಿ, ಐಐಐಟಿ, ಭಾರತೀಯ ವಿಜ್ಞಾನ ಮಂದಿರ ಮುಂತಾದ ಸಂಸ್ಥೆಗಳಿಂದ ಪ್ರಾರಂಭಿಸಿ ಗಣಕ ವಿಜ್ಞಾನಕ್ಕೆ ಸಂಬಂಧಪಟ್ಟ ಬಹುತೇಕ ಎಲ್ಲ ಪ್ರಮುಖ ಸಂಸ್ಥೆಗಳಲ್ಲೂ ಡೇಟಾ ಮೈನಿಂಗ್ ಬಗ್ಗೆ ಕಲಿಯಲು ಅವಕಾಶವಿದೆ. ಸಾಫ್ಟ್‌ವೇರ್ ಸಂಸ್ಥೆಗಳಲ್ಲಷ್ಟೇ ಅಲ್ಲದೆ ವಾಣಿಜ್ಯ ಸಂಸ್ಥೆಗಳು, ಅಧ್ಯಯನ ಕೇಂದ್ರಗಳು ಮುಂತಾದೆಡೆಗಳಲ್ಲೆಲ್ಲ ಡೇಟಾ ಮೈನಿಂಗ್ ತಜ್ಞರು ಉದ್ಯೋಗ ಅರಸಬಹುದು.

ಡೇಟಾ ಮೈನಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.the-data-mine.com ವಿಳಾಸದಲ್ಲಿರುವ ಸಮುದಾಯ ತಾಣಕ್ಕೆ ಭೇಟಿನೀಡಬಹುದು.

(ಆಗಸ್ಟ್ ೨೦೦೬)