ಈಗಂತೂ ಎಲ್ಲೆಲ್ಲಿ ನೋಡಿದರೂ ಸಾಫ್ಟ್‌ವೇರ್‌ಗಳದ್ದೇ ಭರಾಟೆ – ಬ್ಯಾಂಕುಗಳಲ್ಲಿ, ಅಂಚೆಕಚೇರಿಯಲ್ಲಿ, ಅಂಗಡಿಗಳಲ್ಲಿ, ಬಸ್ಸು ರೈಲು ವಿಮಾನ ನಿಲ್ದಾಣಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ನೂರೆಂಟು ಕೆಲಸ ಗಳಿಗಾಗಿ ಸಾವಿರಾರು ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ.

ಈ ತಂತ್ರಾಂಶಗಳ ಬಳಕೆಯಿಂದ ಅನೇಕ ಕೆಲಸಗಳನ್ನು ಸುಲಭವಾಗಿ ಮುಗಿಸುವುದು ಸಾಧ್ಯವಾಗಿದೆ, ನಿಜ. ಆದರೆ ಕೆಲವೊಮ್ಮೆ ಈ ತಂತ್ರಾಂಶಗಳ ಬಳಕೆಯಿಂದ ವಿಚಿತ್ರವಾದ ತೊಂದರೆಗಳೂ ಉಂಟಾಗುತ್ತವೆ:

– ೧೯೯೬ರ ಮೇ ತಿಂಗಳಲ್ಲಿ ಅಮೆರಿಕಾದ ಬ್ಯಾಂಕೊಂದರ ೮೨೩ ಗ್ರಾಹಕರು ತಮ್ಮ ಖಾತೆಗಳನ್ನು ಪರೀಕ್ಷಿಸಿಕೊಂಡರೆ ಅವರಿಗೆ ಹೃದಯಾಘಾತವಾಗುವುದೊಂದು ಬಾಕಿ! ಆ ಬ್ಯಾಂಕು ಉಪಯೋಗಿಸುತ್ತಿದ್ದ ತಂತ್ರಾಂಶದಲ್ಲಿದ್ದ ಸಣ್ಣದೊಂದು ತಪ್ಪಿನಿಂದಾಗಿ ಅವರಲ್ಲಿ ಪ್ರತಿಯೊಬ್ಬರ ಖಾತೆಗೂ ತೊಂಬತ್ತೆರಡು ಕೋಟಿ ಡಾಲರುಗಳ ಮೊತ್ತ ಸಂದಾಯ ವಾಗಿತ್ತು. ಈ ತಪ್ಪನ್ನು ಹೇಗೋ ಸರಿಮಾಡಿ ಹಣವನ್ನು ವಾಪಸ್ ಪಡೆಯುವಷ್ಟರಲ್ಲಿ ಆ ಬ್ಯಾಂಕಿಗೆ ಸಾಕುಸಾಕಾಗಿತ್ತು.

– ಏಪ್ರಿಲ್ ೧೯೯೯ರಲ್ಲಿ ಉಡಾವಣೆಯಾದ ಸುಮಾರು ಒಂದೂವರೆ ಬಿಲಿಯನ್ ಡಾಲರ್ ಮೌಲ್ಯದ ಸೇನಾ ಉಪಗ್ರಹವೊಂದು ಅದರಲ್ಲಿ ಬಳಕೆಯಾಗಿದ್ದ ತಂತ್ರಾಂಶದಲ್ಲಿದ್ದ ಸಣ್ಣ ತಪ್ಪಿನಿಂದಾಗಿ ಸರಿಯಾಗಿ ಕೆಲಸಮಾಡಲು ವಿಫಲವಾಯಿತು.

ತಂತ್ರಾಂಶಗಳಲ್ಲಿರುವ ಸಣ್ಣಪುಟ್ಟ ದೋಷಗಳಿಂದ ಇಂತಹ ತಪ್ಪುಗಳು ಸಂಭವಿಸುತ್ತವೆ. ಆದರೆ ಇಂತಹ ’ಸಣ್ಣಪುಟ್ಟ’ ತಪ್ಪುಗಳಿಂದ ಉಂಟಾಗುವ ಹಾನಿಯ ಪ್ರಮಾಣ ಮಾತ್ರ ಕಲ್ಪಿಸಿಕೊಳ್ಳಲೂ ಸಾಧ್ಯ ವಾಗದಷ್ಟು ಅಗಾಧವಾಗಿರುತ್ತದೆ.

ಹೀಗಾಗಿಯೇ ತಂತ್ರಾಂಶಗಳು ಸಿದ್ಧವಾದ ನಂತರ ಅವುಗಳನ್ನು ಸರಿಯಾಗಿ ಪರೀಕ್ಷಿಸಿ ಇಂತಹ ದೋಷಗಳನ್ನು ಕಂಡುಹಿಡಿಯುವವರಿಗೆ ಬೇಡಿಕೆ ಕಂಡುಬರುತ್ತಿದೆ. ಸಾಫ್ಟ್‌ವೇರ್ ಟೆಸ್ಟಿಂಗ್ (ಸರಳವಾಗಿ ’ಟೆಸ್ಟಿಂಗ್’) ಎಂಬ ಈ ’ತಪ್ಪು ಹುಡುಕುವ ಕೆಲಸ’ ಒಂದು ಒಳ್ಳೆಯ ಔದ್ಯೋಗಿಕ ಕ್ಷೇತ್ರವಾಗಿ ಬೆಳೆದಿದೆ.

ಸಾಫ್ಟ್‌ವೇರ್ ಟೆಸ್ಟಿಂಗ್ ಕೆಲಸ ಪ್ರಾರಂಭವಾಗುವುದು ತಂತ್ರಾಂಶ ರಚನೆ ಸಂಪೂರ್ಣವಾದ ನಂತರ. ಸಿದ್ಧವಾಗಿರುವ ತಂತ್ರಾಂಶ ಅಗತ್ಯಗಳಿಗೆ ಅನುಗುಣವಾಗಿದೆಯೋ ಇಲ್ಲವೋ, ಅದರಲ್ಲಿ ಏನಾದರೂ ತಪ್ಪುಗಳಿವೆಯಾ, ಬೇರೆಬೇರೆ ಪರಿಸ್ಥಿತಿಗಳಲ್ಲಿ ಅದು ಹೇಗೆ ಕೆಲಸ ಮಾಡುತ್ತದೆ, ಅದರ ಕಾರ್ಯಕ್ಷಮತೆ ಎಷ್ಟಿದೆ ಮುಂತಾದ ವಿಷಯ ಗಳನ್ನೆಲ್ಲ ಪರೀಕ್ಷಿಸಿ ಅಗತ್ಯವಾದ ಬದಲಾವಣೆಗಳನ್ನು ಸೂಚಿಸುವುದು ಟೆಸ್ಟರ್‌ಗಳ ಕೆಲಸ. ಯಾವುದೇ ತಂತ್ರಾಂಶ ಯಾವ ವ್ಯವಸ್ಥೆಯಲ್ಲಿ ಬಳಕೆಯಾಗುತ್ತದೆ, ಅದನ್ನು ಬಳಸುವವರ ಅಗತ್ಯಗಳೇನು ಹಾಗೂ ಆ ತಂತ್ರಾಂಶದ ಪ್ರಾಮುಖ್ಯತೆ ಎಷ್ಟು ಎನ್ನುವುದರ ಬಗ್ಗೆ ಅವರು ಎಲ್ಲ ವಿವರಗಳನ್ನೂ ತಿಳಿದುಕೊಂಡಿರಬೇಕಾಗುತ್ತದೆ. ಟೆಸ್ಟರ್‌ಗಳು ಯಾವುದೇ ತಂತ್ರಾಂಶವನ್ನು ಅಸಮರ್ಪಕವಾಗಿ ಪರೀಕ್ಷಿಸಿದ್ದರೆ ಆ ತಂತ್ರಾಂಶದ ಬಳಕೆಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಟೆಸ್ಟರ್‌ಗಳ ಕೆಲಸ ಬಹು ಜವಾಬ್ದಾರಿಯುತವೂ ಆಗಿರುತ್ತದೆ.

ಸಾಫ್ಟ್‌ವೇರ್ ಟೆಸ್ಟಿಂಗ್ ಅನ್ನು ಸಮರ್ಪಕವಾಗಿ ನಡೆಸಲು ಅನೇಕ ವಿಧದ ತಂತ್ರಾಂಶಗಳು (ಟೆಸ್ಟಿಂಗ್ ಟೂಲ್ಸ್) ಬಳಕೆಯಾಗುತ್ತವೆ – ವಿನ್‌ರನ್ನರ್, ಲೋಡ್‌ರನ್ನರ್, ಟೀಮ್ ಟೆಸ್ಟ್, ರ್ಯಾಷನಲ್ ರೋಬಾಟ್, ಸಿಲ್ಕ್‌ಟೆಸ್ಟ್, ಸಿಲ್ಕ್‌ಪರ್‌ಫಾರ್ಮರ್ ಇತ್ಯಾದಿ. ಟೆಸ್ಟಿಂಗ್‌ನ ಸಂಪೂರ್ಣ ಪ್ರಕ್ರಿಯೆಯನ್ನು ಸರಾಗವಾಗಿ ನಡೆಸಲು ಟೆಸ್ಟ್‌ಡೈರೆಕ್ಟರ್ ನಂತಹ ತಂತ್ರಾಂಶಗಳೂ ಬಳಕೆಯಾಗುತ್ತವೆ. ಸಾಫ್ಟ್‌ವೇರ್ ಟೆಸ್ಟಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಲು ಇಂತಹ ತಂತ್ರಾಂಶಗಳ ಬಳಕೆ ಯಲ್ಲಿ ಪರಿಣತಿ ಹೊಂದುವುದು ಅವಶ್ಯಕ.

ಇವುಗಳಲ್ಲಿ ತರಬೇತಿ ನೀಡಲೆಂದೇ ಅನೇಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಹಿಂದಿನ ಪ್ರದರ್ಶನ ಹಾಗೂ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವ ಸಾಮರ್ಥ್ಯದ ಆಧಾರದ ಮೇಲೆ ಎಲ್ಲಿ ತರಬೇತಿ ಪಡೆಯಬೇಕು ಎನ್ನುವುದನ್ನು ತೀರ್ಮಾನಿಸಬಹುದು.

ಯಾವುದೇ ಪದವೀಧರರು ಟೆಸ್ಟಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬಹುದು. ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯಗಳ ಹಿನ್ನೆಲೆ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ಇದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದ ಸ್ಪರ್ಧೆಯೂ ಇರುವುದರಿಂದ ನಿಮ್ಮ ಬೌದ್ಧಿಕ ಸಾಮರ್ಥ್ಯ ಕೂಡ ಪರೀಕ್ಷೆಗೆ ಒಳಗಾಗಲಿದೆ.

(ಮಾರ್ಚ್ ೨೦೦೬)