ಫೊರೆನ್ಸಿಕ್ಸ್ ಅಥವಾ ಅಪರಾಧಪತ್ತೆ ಶಾಸ್ತ್ರ – ಅಪರಾಧಗಳು ನಡೆದ ಸಂದರ್ಭದಲ್ಲಿ ಅಲ್ಲಿ ಲಭ್ಯವಿರಬಹುದಾದ ಕುರುಹುಗಳನ್ನು ಪತ್ತೆಮಾಡಿ, ಅಧ್ಯಯನ ನಡೆಸಿ ಅಪರಾಧಿಗಳನ್ನು ಪತ್ತೆಹಚ್ಚಲು ನೆರವು ನೀಡುವ ವಿಜ್ಞಾನದ ಒಂದು ಶಾಖೆ. ಸಮಾಜದ ದುಷ್ಟಶಕ್ತಿಗಳನ್ನು ಹಿಡಿತದಲ್ಲಿಟ್ಟು ಸಾಮಾಜಿಕ ಆರೋಗ್ಯ ಕಾಪಾಡುವಲ್ಲಿ ಫೊರೆನ್ಸಿಕ್ಸ್ ವಹಿಸುವ ಪಾತ್ರ ಬಲು ಮಹತ್ವದ್ದು.

ಆದರೆ ತಂತ್ರಜ್ಞಾನ ಬೆಳೆದಂತೆ ಅಪರಾಧಗಳ ಸ್ವರೂಪವೇ ಬದಲಾಗುತ್ತಿದೆ. ಗಣಕಗಳು ಹಾಗೂ ವಿಶ್ವವ್ಯಾಪಿ ಜಾಲದ ನೆರವಿ ನಿಂದ ನಡೆಯುತ್ತಿರುವ ಅದೆಷ್ಟೋ ಬಗೆಯ ಹೈಟೆಕ್ ಅಪರಾಧಗಳು ನಾಗರಿಕ ಸಮಾಜದ ನೆಮ್ಮದಿಯನ್ನೇ ಹಾಳುಮಾಡಲು ಹೊರಟಿವೆ.

ಇಂಥ ಅಪರಾಧಗಳನ್ನು ಪತ್ತೆಮಾಡುವ ಉದ್ದೇಶದಿಂದ ರೂಪ ಗೊಂಡಿರುವ ಹೊಸ ಕ್ಷೇತ್ರವೇ ಕಂಪ್ಯೂಟರ್ ಫೊರೆನ್ಸಿಕ್ಸ್. ಡಿಜಿಟಲ್ ಫೊರೆನ್ಸಿಕ್ಸ್ ಎಂದೂ ಪರಿಚಿತವಾಗಿರುವ ಈ ಕ್ಷೇತ್ರ ಗಣಕಗಳಲ್ಲಿ ಶೇಖರವಾಗಿರುವ ಮಾಹಿತಿಯ ಅಧ್ಯಯನ ನಡೆಸಿ ಸೈಬರ್ ಅಪರಾಧಗಳನ್ನು ಪತ್ತೆಮಾಡುವ ಉದ್ದೇಶ ಹೊಂದಿದೆ. ಕ್ರೆಡಿಟ್ ಕಾರ್ಡ್ ವಂಚನೆ, ಹ್ಯಾಕಿಂಗ್, ಡಿನಯಲ್ ಆಫ್ ಸರ್ವಿಸ್ ಮೊದಲಾದ ಅಪರಾಧಗಳು ಅಥವಾ ಗಣಕದ ನೆರವು ಪಡೆದು ಭಯೋತ್ಪಾದನೆಯಂತಹ ಕೃತ್ಯಗಳು ನಡೆದ ಸಂದರ್ಭದಲ್ಲಿ ಕಂಪ್ಯೂಟರ್ ಫೊರೆನ್ಸಿಕ್ಸ್ ವಹಿಸುವ ಪಾತ್ರ ಬಲು ಮಹತ್ವದ್ದು.

ಪ್ರಪಂಚದಲ್ಲಿ ಇಂತಹ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಕಂಪ್ಯೂಟರ್ ಫೊರೆನ್ಸಿಕ್ಸ್ ತಜ್ಞರಿಗೂ ಬೇಡಿಕೆ ಹೆಚ್ಚುತ್ತಿದೆ. ಸೈಬರ್ ಕಾಪ್ಸ್, ಸೈಬರ್ ಇನ್ವೆಸ್ಟಿಗೇಟರ್ಸ್, ಡಿಜಿಟಲ್ ಡಿಟೆಕ್ಟಿವ್ಸ್ ಎಂದೆಲ್ಲ ಕರೆಸಿಕೊಳ್ಳುವ ಈ ವ್ಯಕ್ತಿಗಳಿಗೆ ಸರ್ಕಾರಿ ಹಾಗೂ ಖಾಸಗಿ ರಕ್ಷಣಾ ಸಂಸ್ಥೆಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಇ-ಬಿಸಿನೆಸ್ ಕೇಂದ್ರಗಳು ಮುಂತಾದ ಕಡೆಗಳಲ್ಲಿ ಸಂಬಳದ ನೌಕರಿಯಷ್ಟೇ ಅಲ್ಲದೆ ಸ್ವಯಂ ಉದ್ಯೋಗ ಕೈಗೊಳ್ಳುವ ಅವಕಾಶ ಕೂಡ ಇದೆ.

ಕಂಪ್ಯೂಟರ್ ಇಂಜಿನಿಯರಿಂಗ್ ಜೊತೆಗೆ ಫೊರೆನ್ಸಿಕ್ಸ್ ಸೈನ್ಸ್ ಅಥವಾ ಕ್ರಿಮಿನಾಲಜಿಯಂತಹ ವಿಷಯಗಳ ಹಿನ್ನೆಲೆಯುಳ್ಳವರಿಗೆ ಕಂಪ್ಯೂಟರ್ ಫೊರೆನ್ಸಿಕ್ಸ್ ಹೇಳಿಮಾಡಿಸಿದ ಕ್ಷೇತ್ರ. ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಲು ಗಣಕ ವಿಜ್ಞಾನದಲ್ಲಿ ಉನ್ನತ ಮಟ್ಟದ ಪರಿಣತಿಯ ಜೊತೆಗೆ ಕಂಪ್ಯೂಟರ್ ಫೊರೆನ್ಸಿಕ್ಸ್‌ಗೆ ಸಂಬಂಧಪಟ್ಟ ತರಬೇತಿ ಕೂಡ ಅಗತ್ಯ.

ಸರ್ಟಿಫೈಡ್ ಇನ್ಫರ್ಮೇಷನ್ ಸಿಸ್ಟಂ ಸೆಕ್ಯೂರಿಟಿ ಪ್ರೊಫೆಷನಲ್ (ಸಿಐಎಸ್‌ಎಸ್‌ಪಿ), ಸರ್ಟಿಫೈಡ್ ಕಂಪ್ಯೂಟರ್ ಎಕ್ಸಾಮಿನರ್ (ಸಿಸಿಇ) ಮುಂತಾದ ಕೆಲವು ಪ್ರಮಾಣಪತ್ರಗಳು ಕೂಡ ವ್ಯಾಪಕ ಮಾನ್ಯತೆ ಹೊಂದಿವೆ. ಕೆಲವು ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಕಂಪ್ಯೂಟರ್ ಫೊರೆನ್ಸಿಕ್ಸ್ ವಿಷಯದ ಪದವಿಗಳೂ ಲಭ್ಯವಿವೆ.

ಸಿಐಎಸ್‌ಎಸ್‌ಪಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.cissps.com ತಾಣಕ್ಕೆ ಭೇಟಿಕೊಡಬಹುದು.

(ಜುಲೈ ೨೦೦೬)