ಯಾವುದೇ ಒಂದು ಆಧುನಿಕ ಮನೆಯನ್ನು ಕಲ್ಪಿಸಿಕೊಳ್ಳಿ. ಮೊಬೈಲ್ ದೂರವಾಣಿ, ಮ್ಯೂಸಿಕ್ ಸಿಸ್ಟಂ, ವಿಸಿಡಿ ಪ್ಲೇಯರ್, ಹವಾನಿಯಂತ್ರಕ, ಅವುಗಳ ರಿಮೋಟ್ ಕಂಟ್ರೋಲ್ ಸಾಧನಗಳು, ಡಿಜಿಟಲ್ ಕ್ಯಾಮೆರಾ, ಗಣಕಯಂತ್ರದ ಮುದ್ರಕ, ದೂರವಾಣಿಯ ಕಾಲರ್ ಐಡಿ ಉಪಕರಣ, ಡಿಷ್‌ವಾಷರ್, ಮೈಕ್ರೋವೇವ್ ಓವನ್, ವಾಷಿಂಗ್ ಮಷೀನ್, ಕಾರು – ಹೀಗೆ ಇಂಥ ಮನೆಗಳಲ್ಲಿ ಎಲ್ಲ ವಿಧವಾದ ಸೌಲಭ್ಯಗಳೂ ಇರುತ್ತವೆ.

ಇವೆಲ್ಲ ಉಪಕರಣಗಳಲ್ಲೂ ಸಾಮಾನ್ಯವಾದ ಅಂಶವೇ ಸೂಕ್ಷ್ಮ ನಿಯಂತ್ರಕ ಅಥವಾ ಮೈಕ್ರೋಕಂಟ್ರೋಲರ್.

ವಿಶಾಲ ಅರ್ಥದಲ್ಲಿ ಹೇಳುವುದಾದರೆ ಸೂಕ್ಷ್ಮನಿಯಂತ್ರಕಗಳನ್ನು ’ಪುಟಾಣಿ ಗಣಕಯಂತ್ರ’ಗಳೆಂದು ಕರೆಯಬಹುದು. ಇವುಗಳನ್ನು ಸಾಮಾನ್ಯವಾಗಿ ಯಾವುದಾದರೂ ಉಪಕರಣದೊಳಗೆ ಅಳವಡಿಸ ಲಾಗುವುದರಿಂದ ಅವನ್ನು ’ಎಂಬೆಡೆಡ್ ಸಿಸ್ಟಂ’ (ಒಳಗೆ ಸೇರಿ ಕೊಂಡಿರುವ ವ್ಯವಸ್ಥೆ) ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಬಳಕೆಗೆ ಬಂದಿರುವ ಟಿಕೆಟ್ ಮುದ್ರಿಸುವ ಯಂತ್ರ ಇಂತಹ ಎಂಬೆಡೆಡ್ ಸಿಸ್ಟಂಗೊಂದು ಉತ್ತಮ ಉದಾಹರಣೆ.

ಎಂಬೆಡೆಡ್ ಸಿಸ್ಟಂಸ್ ಕ್ಷೇತ್ರದಲ್ಲಿ ಕೆಲಸಮಾಡಲು ಬೇಕಾದ ಅರ್ಹತೆ ಎಂದರೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಜ್ಞಾನ. ಜೊತೆಗೆ ೮೦೫೧ ಹಾಗೂ ಪಿಕ್ ಸರಣಿಯ ಮೈಕ್ರೋಕಂಟ್ರೋಲರ್‌ಗಳು ಹಾಗೂ ಎಂಬೆಡೆಡ್ ಸಿ ಪ್ರೋಗ್ರಾಮಿಂಗ್‌ನ ಪರಿಚಯ ಕೂಡ ಅಗತ್ಯ.

ಪುಟಾಣಿ ಗಣಕಗಳು, ಮೊಬೈಲ್ ಉಪಕರಣಗಳು ಹಾಗೂ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಕೂಡ ಎಂಬೆಡೆಡ್ ಸಿಸ್ಟಂಗಳ ಬಳಕೆ ಅತ್ಯಂತ ತೀವ್ರವಾಗಿ ಹೆಚ್ಚುತ್ತಿದೆ. ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್-   ನಂತಹ (ಆರ್‌ಎಫ್‌ಐಡಿ) ಅತ್ಯಾಧುನಿಕ ಕ್ಷೇತ್ರಗಳಲ್ಲಿ ಕೆಲಸಮಾಡುವ ಅವಕಾಶಗಳೂ ದೊರಕುವ ಸಾಧ್ಯತೆ ಇಲ್ಲದಿಲ್ಲ. ಇದಕ್ಕೆ ಅನುಗುಣವಾಗಿ ನಿಮ್ಮ ಜ್ಞಾನದ ಮಟ್ಟ ಹೆಚ್ಚಿರಬೇಕಷ್ಟೆ.

ಎಂಬೆಡೆಡ್ ಸಿಸ್ಟಂಸ್ ಕ್ಷೇತ್ರದಲ್ಲಿ ತರಬೇತಿ ನೀಡುವ ಅನೇಕ ಸಂಸ್ಥೆಗಳು ಕಾರ್ಯನಿರತವಾಗಿವೆ. ಕೆಲ ಸಂಸ್ಥೆಗಳು ತಮ್ಮಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕೆಲಸವನ್ನೂ ದೊರಕಿಸಿಕೊಡುವ ಆಶ್ವಾಸನೆ ನೀಡುತ್ತವೆ. ಇಂತಹ ತರಬೇತಿಗಳ ಶುಲ್ಕ ಐವತ್ತು ಸಾವಿರ ರೂಪಾಯಿಗಳವರೆಗೂ ಇರಬಹುದು. ಇಂತಹ ಯಾವುದೇ ಸಂಸ್ಥೆಗೆ ಸೇರುವ ಮುನ್ನ ಆ ಸಂಸ್ಥೆಯ ಹಿಂದಿನ ದಾಖಲೆಗಳನ್ನು ಸರಿಯಾಗಿ ಗಮನಿಸಬೇಕಾದದ್ದು ಅತ್ಯಗತ್ಯ.

ಎಂಬೆಡೆಡ್ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಸಣ್ಣ ಹಾಗೂ ಮಧ್ಯಮ ಗಾತ್ರದ ಖಾಸಗೀ ಕ್ಷೇತ್ರದ ಸಂಸ್ಥೆಗಳಲ್ಲಿ ಅವಕಾಶ ಹೆಚ್ಚು. ಇದೇ ಕಾರಣದಿಂದಾಗಿ ಪ್ರಾರಂಭಿಕ ಸಂಬಳಗಳು ಕೊಂಚ ಕಡಿಮೆಯಿರುತ್ತದೆ. ವಿದ್ಯಾರ್ಹತೆ ಹಾಗೂ ಅನುಭವಕ್ಕೆ ಅನುಗುಣವಾಗಿ ಸಂಬಳ ಕೂಡ ಹೆಚ್ಚುತ್ತದೆ, ಹಾಗೂ ಇನ್ನೂ ದೊಡ್ಡ ಸಂಸ್ಥೆಗಳಲ್ಲಿ ಕೆಲಸಮಾಡುವ ಅವಕಾಶ ಕೂಡ ಲಭಿಸುತ್ತದೆ.

(ಮೇ ೨೦೦೬)