ಸಾಫ್ಟ್‌ವೇರ್ ಇಂಜಿನಿಯರುಗಳ ಕೆಲಸ ಏನು ಹೇಳಿ? ವಿವಿಧ ಅಗತ್ಯಗಳಿಗೆ ಬೇಕಾದ ತಂತ್ರಾಂಶಗಳನ್ನು ಸಿದ್ಧಪಡಿಸುವುದು, ಹಾಗೂ ಆ ತಂತ್ರಾಂಶ ಸರಿಯಾಗಿ ಕೆಲಸಮಾಡುವಂತೆ ನೋಡಿಕೊಳ್ಳುವುದು – ಇಷ್ಟೆತಾನೆ?

ಆದರೆ ಈಗ, ತಂತ್ರಾಂಶ ಬಳಕೆದಾರರ ಬೇಡಿಕೆಗಳು ಹೆಚ್ಚುತ್ತಿದ್ದಂತೆ ತಂತ್ರಾಂಶಗಳ ಸಂಕೀರ್ಣತೆ ಕೂಡ ಹೆಚ್ಚುತ್ತಿದೆ; ಗಣಕಗಳು, ಮೊಬೈಲ್ ದೂರವಾಣಿಗಳು ಮುಂತಾದ ವಿವಿಧ ಬಗೆಯ ಯಂತ್ರಾಂಶಗಳು, ಕಾರ್ಯಾಚರಣೆ ವ್ಯವಸ್ಥೆಗಳು (ಆಪರೇಟಿಂಗ್ ಸಿಸ್ಟಂ) ಹಾಗೂ ಇಂಟರ್‌ಫೇಸ್‌ಗಳ ಜೊತೆಗೆ ವ್ಯವಹರಿಸುವ ತಂತ್ರಾಂಶಗಳು ಸಿದ್ಧವಾಗುತ್ತಿವೆ.

ಈ ತಂತ್ರಾಂಶಗಳು ಇಷ್ಟೊಂದು ವಿಭಿನ್ನ ರೀತಿಯ ವ್ಯವಸ್ಥೆಗಳ ಜೊತೆಗೆ ವ್ಯವಹರಿಸಲು ಅನುವುಮಾಡಿಕೊಡುವುದು ಇನ್ನೂ ಒಂದು ತಂತ್ರಾಂಶ ಎನ್ನುವುದು ಕುತೂಹಲಕರ ಅಂಶ. ಈ ಬಗೆಯ ತಂತ್ರಾಂಶಗಳನ್ನು ’ಮಿಡ್ಲ್‌ವೇರ್’ ಎಂದು ಕರೆಯುತ್ತಾರೆ.

ಉದಾಹರಣೆಗೆ ನಿಮ್ಮ ಬ್ಯಾಂಕಿನ ಎಟಿಎಂ ಅನ್ನೇ ನೋಡಿ. ಅದರೊಳಗೆ ನಿಮ್ಮ ಕಾರ್ಡನ್ನು ತುರುಕಿ, ನಾಲ್ಕು ಅಂಕಿಗಳ ಒಂದು ರಹಸ್ಯ ಸಂಕೇತವನ್ನು ದಾಖಲಿಸಿದರೆ ಆಯಿತು. ನಿಮಗೆ ದುಡ್ಡು ಬೇಕೋ, ನಿಮ್ಮ ಖಾತೆಯಲ್ಲಿ ಎಷ್ಟು ದುಡ್ಡಿದೆ ಎನ್ನುವುದನ್ನು ನೋಡಬೇಕೋ – ಏನು ಬೇಕಿದ್ದರೂ ಸಾಧ್ಯ. ಆದರೆ ಇಲ್ಲಿ ನಿಮ್ಮ ಕಾರ್ಡು ಹಾಗೂ ಸಂಕೇತ ಸಂಖ್ಯೆ ಸರಿಯಾದದ್ದೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸುವುದರಿಂದ ಪ್ರಾರಂಭಿಸಿ ನಿಮ್ಮ ಖಾತೆಯಲ್ಲಿ ಹಣ ಇದೆ ಎನ್ನುವುದನ್ನು ಖಾತರಿಪಡಿಸಿಕೊಂಡು ನಿಮಗೆ ನೀಡುವುದರವರೆಗೆ ಹತ್ತು ಹನ್ನೆರಡು ವಿವಿಧ ತಂತ್ರಾಂಶಗಳು ಕಾರ್ಯನಿರತವಾಗಿರುತ್ತವೆ. ಆದರೆ ಇದನ್ನೆಲ್ಲ ಒಂದುಗೂಡಿಸುವ ಮಿಡ್ಲ್‌ವೇರ್, ನಿಮಗೆ ಇದೆಲ್ಲ ಒಂದೇ ಎಂಬ ಭಾವನೆ ಮೂಡಿಸುವಲ್ಲಿ ಸಫಲವಾಗುತ್ತದೆ.

ವಿಶ್ವದೆಲ್ಲೆಡೆಯ ಸಾಫ್ಟ್‌ವೇರ್ ಉದ್ಯಮ ನಾಗಾಲೋಟದಲ್ಲಿ ಬೆಳೆಯುತ್ತಿದ್ದಂತೆ, ತಯಾರಾಗುವ ತಂತ್ರಾಂಶಗಳು ಹೆಚ್ಚುಹೆಚ್ಚು ಸಂಕೀರ್ಣವಾಗುತ್ತಿದ್ದಂತೆ ಮಿಡ್ಲ್‌ವೇರ್‌ಗೆ ದೊರಕುತ್ತಿರುವ ಮಹತ್ವ ಕೂಡ ಹೆಚ್ಚುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಕ್ಷೇತ್ರ ಸುಮಾರು ನಾಲ್ಕೈದು ನೂರು ಪಟ್ಟು ಬೆಳೆದಿರುವುದನ್ನು ಗಮನಿಸಿದರೆ ಮಿಡ್ಲ್ ವೇರ್‌ನ ಭವಿಷ್ಯ ಅದೆಷ್ಟು ರೋಚಕ ಎನ್ನುವುದು ಸ್ಪಷ್ಟವಾಗುತ್ತದೆ.

ಮಿಡ್ಲ್‌ವೇರ್ ಕ್ಷೇತ್ರದಲ್ಲಿ ಅವಕಾಶಗಳನ್ನು ಅರಸುವವರು ಗಣಕ ವಿಜ್ಞಾನದ ಹಿನ್ನೆಲೆ ಹಾಗೂ ಸಿ++, ಜಾವಾ ಮುಂತಾದ ಆಬ್ಜೆಕ್ಟ್ ಓರಿಯೆಂಟೆಡ್ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿರಬೇಕಾದದ್ದು ಅಗತ್ಯ. ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಪದವಿಗಳು ಇಲ್ಲವೇ ಇಲ್ಲ ಎಂದೇ ಹೇಳಬಹುದು. ಆದರೆ ಗಣಕವಿಜ್ಞಾನದಲ್ಲಿ ತರಬೇತಿ ನೀಡುವ ವಿವಿಧ ಸಂಸ್ಥೆಗಳು ಮಿಡ್ಲ್‌ವೇರ್‌ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅನೇಕ ಕೋರ್ಸ್‌ಗಳನ್ನು ನಡೆಸುತ್ತವೆ. ಮೈಕ್ರೋಸಾಫ್ಟ್, ಸನ್ ಮುಂತಾದ ಸಂಸ್ಥೆಗಳು ಸರ್ಟಿಫಿಕೇಷನ್ ಪರೀಕ್ಷೆಗಳನ್ನು ಕೂಡ ನಡೆಸುತ್ತವೆ. ಇಂತಹ ಸರ್ಟಿಫಿಕೇಷನ್‌ಗಳನ್ನು ಹೊಂದಿರುವವರಿಗೆ ಸಹಜವಾಗಿಯೇ ಹೆಚ್ಚಿನ ಅವಕಾಶಗಳು ದೊರಕುತ್ತವೆ.

(ಸೆಪ್ಟೆಂಬರ್ ೨೦೦೬)